Thursday, July 7, 2011

ಸಿಎಂಗೆ ಮಕ್ಕಳು ಬರೆದ ಪತ್ರ ಮತ್ತು ಚಂಪಾ ಹೊಡೆದ ಅನೈತಿಕ ಚಪ್ಪಾಳೆ!

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಭ್ರಷ್ಟ ಮತ್ತು ಅನೈತಿಕ ರಾಜಕಾರಣ ಶಾಲಾ ಮಕ್ಕಳಿಗೂ ಗೊತ್ತಾಗಿ ಹೋಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಬುಧವಾರ ಕನ್ನಡಪ್ರಭ ಪ್ರಕಟಿಸಿದ ಮಕ್ಕಳಿಂದ ಸಿಎಂ ಅಂಕಲ್‌ಗೆ ಪಾಠ ಪ್ರಸ್ತಾವಿಸಿ ಹೇಳಿದರು....

ಇದು ಕನ್ನಡಪ್ರಭದಲ್ಲಿ ಇಂದು ಪ್ರಕಟವಾಗಿರುವ ವರದಿಯೊಂದರ ಮೊದಲ ಸಾಲು. ಅಲ್ಲಿಗೆ ಮಕ್ಕಳಿಂದ ಸಿಎಂಗೆ ಪಾಠ ಹೇಳಿಸುವ ಅಭಿಯಾನದ ಉದ್ದೇಶ ಈಡೇರಿತಾ? ಗೊತ್ತಿಲ್ಲ.

ಶಾಲಾ ಮಕ್ಕಳಿಂದ ರಾಜ್ಯದ ಮುಖ್ಯಮಂತ್ರಿಗೆ ಪತ್ರ ಬರೆಸುವ ಕಾನ್ಸೆಪ್ಟ್ ನಿಜಕ್ಕೂ ಒಳ್ಳೆಯದೇ. ಇದು ಹೊಚ್ಚ ಹೊಸ ಪ್ರಯೋಗ; ಮೆಚ್ಚಬೇಕಾದ್ದೇ. ಶಾಲಾ ಮಕ್ಕಳಿಗೆ ಮುಖ್ಯಮಂತ್ರಿಗಳ ಬಳಿ ಹೇಳಿಕೊಳ್ಳುವಂಥ ನೂರೆಂಟು ವಿಷಯಗಳಿರಬಹುದು, ಕೇಳಲು ಸಾವಿರಾರು ಪ್ರಶ್ನೆಗಳಿರಬಹುದು. ಅವುಗಳನ್ನು ಹೊರತೆಗೆಯುವ ಯತ್ನ ನಿಜಕ್ಕೂ ಒಳ್ಳೆಯದೇ ಹೌದು.

ಆದರೆ ಮಕ್ಕಳಿಂದ ಪತ್ರ ಬರೆಸುವಾಗಲೇ ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯ, ಆಣೆ-ಪ್ರಮಾಣದ ಬಗ್ಗೆ ನೀವು ಸಿಎಂಗೆ ಕೇಳುವುದೇನು ಎಂದು ಪ್ರಸ್ತಾಪಿಸಲಾಗಿತ್ತು. ಅಲ್ಲಿಗೆ ಮಕ್ಕಳಿಂದ ಏನನ್ನು ಬರೆಸಲು ಕನ್ನಡಪ್ರಭದವರು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗಿತ್ತು. ನಿನ್ನೆ ಮತ್ತು ಇಂದು ಪ್ರಕಟಗೊಂಡಿರುವ ಮಕ್ಕಳ ಪತ್ರಗಳಲ್ಲಿ ಮುಖ್ಯಮಂತ್ರಿಗೆ ಬುದ್ಧಿಹೇಳುವ, ಮಾರ್ಗದರ್ಶನ ಮಾಡುವ, ಕಾಲೆಳೆಯುವ ಧಾಟಿಯ ಮಾತುಗಳೇ ಕಂಡುಬಂದಿರುವುದಕ್ಕೆ ಇದೂ ಕಾರಣವಾಗಿರಬಹುದು. ಪೋಷಕರೇ ಮಕ್ಕಳ ಹೆಸರಲ್ಲಿ ಬರೆದು ಕಳುಹಿಸಿರಬಹುದಾದ ಸಾಧ್ಯತೆಗಳೂ ಇರುವುದರಿಂದ ಈ ಪತ್ರಗಳಿಗೆ ಅಸಹಜವಾದ ಪ್ರಬುದ್ಧತೆಯ ರಂಗೂ ಮೆತ್ತಿಕೊಂಡಿರಬಹುದು. ಮಕ್ಕಳ ನಿಷ್ಕಲ್ಮಶ ಮನಸ್ಸು, ಮುಗ್ಧ ತಿಳಿವಳಿಕೆಗಳು, ಪ್ರಾಮಾಣಿಕ ಸಂದೇಹಗಳು, ಬಾಲ್ಯ ಸಹಜವಾದ ಆದರ್ಶದ ಕನಸುಗಳು ಈ ಪತ್ರಗಳಲ್ಲಿ ಕಾಣಿಸಿಕೊಳ್ಳದಿರಲು ಇದೂ ಕಾರಣವಾಗಿರಬಹುದು.

ಇವತ್ತು ಈ ಪತ್ರಾಭಿಯಾನದ ಬಗ್ಗೆ ಸಾಹಿತಿ ಚಂದ್ರಶೇಖರ ಪಾಟೀಲರ ಪ್ರತಿಕ್ರಿಯೆಯನ್ನೂ ಪ್ರಕಟಿಸಲಾಗಿದೆ. ಅವರ ಮಾತುಗಳು ಇವು: ಫೆಂಟಾಸ್ಟಿಕ್! ನಾನಂತೂ ಪತ್ರಿಕೆಯಲ್ಲಿ ಬಂದಿದ್ದನ್ನು ಕಟ್ ಮಾಡಿ ಇಟ್ಟಿದ್ದೇನೆ. ಇದುವರೆಗೂ ಯಾವ ಪತ್ರಿಕೆಯಲ್ಲೂ ಇಂಥ ಪ್ರಯೋಗ ಆಗಿರಲಿಲ್ಲ. ಇದು ನಿಜವಾದ ಪ್ರಜಾಪ್ರಭುತ್ವ. ಅದರಲ್ಲೂ ಕೋಣನಕುಂಟೆ ವಿದ್ಯಾರ್ಥಿ ಕವನವಂತೂ ಅದ್ಭುತ. ಬರೀ ಮುದುಕರ ಹಿರಿಯ ಮಾತು, ಟೀಕೆ ಕೇಳಿ ಬೇಸರವಾಗಿದ್ದವರಿಗೆ ಇದು ಹೊಸತು ನೀಡಿದಂತಾಗಿದೆ. ಮಕ್ಕಳಲ್ಲಿರುವ ರಾಜಕೀಯ ಪ್ರಬುದ್ಧತೆ ತಿಳಿದಂತಾಗಿದೆ.

ಚಂಪಾ ಅವರ ಉಳಿದೆಲ್ಲ ಮಾತುಗಳನ್ನೂ ಒಪ್ಪಿಕೊಳ್ಳೋಣ. ಆದರೆ ಅವರು ಕೋಣನಕುಂಟೆ ವಿದ್ಯಾರ್ಥಿ ಕವನವಂತೂ ಅದ್ಭುತ ಎಂದು ಬರೆದಿರುವುದು ನೋಡಿ ಆಶ್ಚರ್ಯವೆನಿಸಿತು. ನಿನ್ನೆ ಕನ್ನಡಪ್ರಭ ಮುಖಪುಟದಲ್ಲಿ ಪ್ರಕಟಗೊಂಡ ಮಕ್ಕಳ ಪ್ರತಿಕ್ರಿಯೆಗಳ ಪೈಕಿ ಅತ್ಯಂತ ಕೀಳು ಅಭಿರುಚಿಯ ಪತ್ರ-ಪದ್ಯ ಕೋಣನಕುಂಟೆ ಕಿಟ್ಟು ಎಂಬ ವಿದ್ಯಾರ್ಥಿಯ ಹೆಸರಲ್ಲಿ ಪ್ರಕಟವಾಗಿರುವುದು. ಅದನ್ನೇ ಚಂಪಾ ಮೆಚ್ಚಿದ್ದು ಯಾಕೆ?

ಅಂಕಲ್ ಅಂಕಲ್ ಸಿಎಂ ಅಂಕಲ್, ಕುಮಾರ ಹೇಳೋದೆಲ್ಲ ಬಂಡಲ್ ಎಂದು ಶುರುವಾಗುವ, ಚಂಪಾ ಉಲ್ಲೇಖಿಸಿರುವ ಪದ್ಯದ ಎರಡು ಸಾಲುಗಳನ್ನು ಗಮನಿಸಿ:
ದೂರ ಸರಿಸಿ ಶೋಭಳ ಸೊಂಟ
ಅಶೋಕ ನಿಮ್ಮ ನೆಚ್ಚಿನ ಬಂಟ...

ಉಳಿದ ಪತ್ರಗಳನ್ನು ಬರೆದ ವಿದ್ಯಾರ್ಥಿಗಳ ಹೆಸರನ್ನು ಕಾಣಿಸುವ ಜತೆಗೆ ಅವರು ಯಾವ ತರಗತಿಯಲ್ಲಿ ಓದುತ್ತಿದ್ದಾರೆ ಎಂಬುದನ್ನು ಪ್ರಕಟಿಸಲಾಗಿದೆ. ಆದರೆ ಕಿಟ್ಟು, ಕೋಣನಕುಂಟೆ ಹೆಸರಿನ ಜತೆ ಎಷ್ಟನೇ ತರಗತಿ ಎಂಬ ಉಲ್ಲೇಖ ಇಲ್ಲ. ಈತ ಎಷ್ಟನೇ ತರಗತಿಯಲ್ಲಾದರೂ ಓದುತ್ತಿರಲಿ, ಈ ಸೊಂಟದ ಸಾಲನ್ನು ಸೈರಿಸಿಕೊಳ್ಳಲಾಗದು. ಇದು ಮಕ್ಕಳ ಅಭಿರುಚಿಯಾಗಿರಲು ಸಾಧ್ಯವಿಲ್ಲ. ಹೀಗೆ ಬರೆಯಲು ಕವಿತೆಯಲ್ಲಿ ಉಲ್ಲೇಖಿಸಿದ ವ್ಯಕ್ತಿಗಳು ಸಾರ್ವಜನಿಕ ಪ್ರಣಯವನ್ನೇನು ನಡೆಸುತ್ತಿಲ್ಲ.

ಮಕ್ಕಳು ಇಂಥ ಸಾಲನ್ನು ಕಲ್ಪಿಸಿಕೊಂಡು ಬರೆಯುವಷ್ಟರ ಮಟ್ಟಿಗೆ ನಮ್ಮ ರಾಜಕೀಯ ವ್ಯವಸ್ಥೆ, ಸಮಾಜ ಕೆಟ್ಟಿದೆಯೇ ಅಥವಾ ಮಕ್ಕಳೇ  ಕೆಟ್ಟಿದ್ದಾರೆಯೇ?

ಯಡಿಯೂರಪ್ಪ ಮತ್ತು ಶೋಭಾ ಅವರ ನಡುವೆ ಅವರೇ ಹೇಳಿಕೊಂಡಂತೆ ತಂದೆ-ಮಕ್ಕಳ ಸಂಬಂಧವಿದೆಯೋ ಅಥವಾ ಇನ್ನೇನಿದೆಯೋ ಅದು ಅವರ ಖಾಸಗಿ ವಿಷಯ. ಅದನ್ನು ಶಾಲಾಮಕ್ಕಳೂ ಎತ್ತಾಡಬೇಕೆ? ಸಾರ್ವಜನಿಕ ಬದುಕಿನಲ್ಲಿರುವ ವ್ಯಕ್ತಿಗಳ ಖಾಸಗಿ ಬದುಕಿನ ಬಗ್ಗೆ ಜನರಲ್ಲಿ ಆಸಕ್ತಿ ಹೆಚ್ಚು ಎಂಬುದೇನೋ ನಿಜ. ಆದರೆ ಅದು ದಿನಪತ್ರಿಕೆಯಂಥ ಮಾಧ್ಯಮದಲ್ಲಿ ವಿಕಾರರೂಪದಲ್ಲಿ ಪ್ರಕಟಗೊಳ್ಳುವುದು ಅನಪೇಕ್ಷಿತ.

ಇತ್ತೀಚಿಗೆ ಫೇಸ್‌ಬುಕ್‌ನಂಥ ಸಾಮಾಜಿಕ ತಾಣಗಳಲ್ಲಿ ತಂತ್ರಜ್ಞಾನದ ಲಾಭ ಪಡೆದು ಮನಮೋಹನ ಸಿಂಗ್, ಸೋನಿಯಾ ತಬ್ಬಿಕೊಂಡಿರುವಂಥ ಚಿತ್ರಗಳೂ ಸೇರಿದಂತೆ ಇದೇ ಸ್ವರೂಪದ ಕೊಳಕು ಅಭಿರುಚಿಯ ಚಿತ್ರಗಳನ್ನು ಸೃಷ್ಟಿಸಿ ಅಪ್‌ಲೋಡ್ ಮಾಡಲಾಗುತ್ತಿದೆ. ನಾವು ಇಂಥದ್ದನ್ನು ಮಾಡುವ ಮೂಲಕ ನಮ್ಮ ಮನಸ್ಸಿನ ವಿಕೃತಿಗಳನ್ನಷ್ಟೇ ಪ್ರದರ್ಶಿಸುತ್ತಿರುತ್ತೇವೆ ಎಂಬ ಸಾಮಾನ್ಯ ಜ್ಞಾನವೂ ಇಂಥವರಿಗೆ ಇರುವುದಿಲ್ಲ.

ಒಂದೊಮ್ಮೆ ಇದು ಯಾರೋ ಸೃಷ್ಟಿಸಿದ ಪದ್ಯವಾಗಿರದೆ ವಿದ್ಯಾರ್ಥಿಯೇ ಬರೆದ ಪದ್ಯವಾಗಿದ್ದರೂ  ‘ದೂರ ಸರಿಸಿ ಶೋಭಳ ಸೊಂಟ ತರಹದ ಸಾಲುಗಳನ್ನು ಪ್ರಕಟಿಸುವುದು ಎಷ್ಟು ಸರಿ? ಅದನ್ನು ಚಂದ್ರಶೇಖರ ಪಾಟೀಲರಂಥವರು ಮೆಚ್ಚಿ, ಅದ್ಭುತ ಎಂದು ಕೊಂಡಾಡುವುದು ಎಷ್ಟು ಸರಿ?

ನಿನ್ನೆ ಪ್ರಕಟಗೊಂಡ ಮತ್ತೊಂದು ಪತ್ರ ಗಾಬರಿ ಹುಟ್ಟಿಸುವಂತಿದೆ. ಅದನ್ನು ಬರೆದಾಕೆ ಮೈಸೂರಿನ ಬೋಗಾದಿಯ ಪ್ರಗತಿ ವಿದ್ಯಾಕೇಂದ್ರದ ಆರನೇ ತರಗತಿ ವಿದ್ಯಾರ್ಥಿನಿ ಶ್ರೀರಕ್ಷಾ ಎಂ.ವಿ. ಪತ್ರ ಹೀಗಿದೆ: ಮುಂದಿನ ಜನ್ಮದಲ್ಲಿ ನಾನೇ ಕರ್ನಾಟಕದ ಸಿಎಂ ಆಗೋಣ ಅಂತಿದೀನಿ ಅಂಕಲ್. ನಮಗೂ ಸ್ವಲ್ಪ ಉಳಿಸಿ, ಈಗ್ಲೆ ಎಲ್ಲಾ ನೀವೇ ಮುಗಿಸ್ಬಿಡಬೇಡಿ.

ಈಕೆ ಏನನ್ನು ಹೇಳಲು ಯತ್ನಿಸುತ್ತಿದ್ದಾಳೆ. ನೀವೇ ಎಲ್ಲಾ ಮುಗಿಸಬೇಡಿ, ನಮಗೂ ಸ್ವಲ್ಪ ಉಳಿಸಿ ಎಂದರೆ ಏನರ್ಥ? ಮಕ್ಕಳ ಮನಸ್ಸು ಇಷ್ಟು ಕಲುಷಿತವಾಗಿದೆಯೇ? ನಿಜವಾಗಿಯೂ ಕರ್ನಾಟಕದ ಮಕ್ಕಳು ಹೀಗೆ ಯೋಚಿಸುತ್ತಿದ್ದರೆ ಈ ರಾಜ್ಯದ ಮುಂದಿನ ಭವಿಷ್ಯ ಹೇಗಿರಬಹುದು?

ನೋಡ್ತಾ ಇರಿ, ಏನೇನ್ ಮಾಡ್ತೀವಿ ಎಂಬುದು ಹೊಸದಾಗಿ ಪುನರ್ ರೂಪುಗೊಂಡ ಕನ್ನಡಪ್ರಭದ ಘೋಷವಾಕ್ಯ. ಅದಕ್ಕೆ ತಕ್ಕಂತೆ ಸಾಕಷ್ಟು ಪ್ರಯೋಗಗಳೂ ನಡೆಯುತ್ತಿವೆ. ನಿಂತು ನೀರಾದಂತಿದ್ದ ಕನ್ನಡ ಪತ್ರಿಕಾ ರಂಗದಲ್ಲಿ ಸೃಜನಶೀಲ ಪ್ರಯೋಗಗಳು ನಡೆಯಬೇಕು, ಅದು ಸ್ವಾಗತಾರ್ಹ. ಆದರೆ ಇಂಥ ಪ್ರಯೋಗಕರ್ತರಿಗೆ ಸಾಮಾಜಿಕ ಸೂಕ್ಷ್ಮತೆಗಳ ಅರಿವಿರಬೇಕು. ಪ್ರಯೋಗಗಳಲ್ಲಿ ಮಾನವೀಯ ಸ್ಪರ್ಶ ಇರಬೇಕು. ಹಾಗಾದಾಗ ಮಾತ್ರ ಅವುಗಳು ಸಾರ್ಥಕವಾಗುತ್ತವೆ.

ವಿಶ್ವೇಶ್ವರ ಭಟ್ಟರು ಮಕ್ಕಳಿಂದ ಪತ್ರ ಬರೆಸುವ ಮೂಲಕ ಒಳ್ಳೆಯ ಕೆಲಸವನ್ನೇನೋ ಮಾಡಿದರು. ಆದರೆ ಅವರಿಗೆ ಮಕ್ಕಳಿಂದ ಒಳ್ಳೆಯದನ್ನು ಬರೆಸಲು ಸಾಧ್ಯವಾಗಲಿಲ್ಲ.

ಏನಂತೀರಾ?

14 comments:

  1. ಪ್ರಿಯ ಸಂಪಾದಕೀಯ,
    ಇದು ಒಂದರ್ಥದಲ್ಲಿ ಪತ್ರಿಕೆಯು ತಾನು ಏನು ಹೇಳಬಯಸಿತ್ತೋ ಅದನ್ನು ಮಕ್ಕಳ ಬಾಯಿಯಲ್ಲಿ ಹೇಳಿಸಿದ ಹಾಗಿದೆ. ನೀವು ಕೋಟ್ ಮಾಡಿದ ಸಾಲುಗಳನ್ನು ನೋಡಿದರೆ ಮಕ್ಕಳಿಂದ ಅಂಥ ಸಾಲುಗಳನ್ನು ಯೋಚಿಸಲು ಸಾಧ್ಯವಿಲ್ಲ.(ಬೇಕಾದರೆ ಬೇರೆಯವರು ಹೇಳಿದ್ದನ್ನು ಮಕ್ಕಳ ತಮ್ಮದು ಎಂಬಂತೆ ಬರೆದಿರಬಹುದು. ಆದರೆ ಆಯ್ಕೆಯ ಸಂದರ್ಭದಲ್ಲಿ ಆ ಪತ್ರಿಕೆ ಇಂಥ ಪತ್ರಗಳನ್ನು ಗುರುತಿಸಿ ಕ.ಬು ಗೆ ಸೇರಿಸಬಹುದಿತ್ತು)
    ಇನ್ನು ಚಂಪಾ ಅವರು ಕೆಲವು ಸಲ ಯಾಕೆ ಹೀಗೆ ಪ್ರತಿಕ್ರಿಯಿಸುತ್ತಾರೋ ತಿಳಿಯದು. ಲಂಕೇಶ್ ಬಗ್ಗೆಯೂ ಬಹಳ ಹಗುರವಾಗಿ ಮಾತಾಡಿ ಅವರಿಂದ ತಿರುಗೇಟು ಪಡೆಯುತ್ತಿದ್ದರು. ಬೈಯ್ಯುವುದು ಮತ್ತು ಕಟಕಿಯಾಡುವುದನ್ನು ಸಾಹಿತ್ಯ ಸೇವೆ ಎಂದು ಭಾವಿಸಿದ್ದಾರೋ ಎಂಬಂತೆ ಭಾಸವಾಗುತ್ತದೆ.
    ಒಟ್ಟಾರೆಯಾಗಿ ಇಂಥ ಪ್ರಯೋಗಗಳು ಉತ್ತಮವಾಗಿದ್ದರೂ ಚಿನ್ನದ ಸೂಜಿ ಎಂದು ಕಣ್ಣಿಗೆ ಚುಚ್ಚಿಕೊಳ್ಳಲು ಆಗುವುದಿಲ್ಲ.

    ಸಾತ್ವಿಕ್ ಎನ್ ವಿ

    ReplyDelete
  2. all sick minded people can write those things and sick minded people can publish those...Shame on them

    ReplyDelete
  3. ಆದರೆ ಮಕ್ಕಳಿಂದ ಪತ್ರ ಬರೆಸುವಾಗಲೇ ಆಪರೇಷನ್ ಕಮಲ, ರೆಸಾರ್ಟ್ ರಾಜಕೀಯ, ಆಣೆ-ಪ್ರಮಾಣದ ಬಗ್ಗೆ ನೀವು ಸಿಎಂಗೆ ಕೇಳುವುದೇನು ಎಂದು ಪ್ರಸ್ತಾಪಿಸಲಾಗಿತ್ತು. ಅಲ್ಲಿಗೆ ಮಕ್ಕಳಿಂದ ಏನನ್ನು ಬರೆಸಲು ಕನ್ನಡಪ್ರಭದವರು ಹೊರಟಿದ್ದಾರೆ ಎಂಬುದು ಸ್ಪಷ್ಟವಾಗಿತ್ತು.
    ***
    ಹೌದು.ಕೇಳುವ ಪ್ರಶ್ನೆಯಲ್ಲೇ ಉತ್ತರವನ್ನೂ ಬಯಸಿದಂತಿದೆ.ಆ ಮೂಲಕ ಮಕ್ಕಳೇನು ಬರೆಯಬೇಕು ಎಂಬುದನ್ನು ಮೊದಲೇ ಹೇಳಿ ಕೊಟ್ಟಂತಿದೆ.
    ಇದೆಲ್ಲ ಬಿಟ್ಟು ಸುಮ್ಮನೇ "ಮಕ್ಕಳೇ,ನಿಮಗೇನು ತೋಚುತ್ತೋ ಅದನ್ನು ಬರೀರಿ.." ಅಂತ ವಿನಂತಿಸಿದ್ದರೂ ಸಾಕಿತ್ತು.ಇಷ್ಟಕ್ಕೂ ಹೊಸ ಪ್ರಯೋಗ ಮಾಡುವಷ್ಟು ಬುದ್ಧಿ ಇರುವವರಿಗೆ ಮಕ್ಕಳ ಪತ್ರವನ್ನೂ ಆರಿಸುವಾಗಲೂ ಅಷ್ಟೇ ಬದ್ಧತೆ ಇರಬೇಕಿತ್ತು.ಸದರಿ ಲೇಖನದಲ್ಲಿ ಕೆಲವೊಂದು points ಚೆನ್ನಾಗಿವೆ.

    ReplyDelete
  4. ವಿಶ್ವೇಶ್ವರ ಭಟ್ಟರು ಒಂದು ಸ್ಪಷ್ಟ ಅಜೆಂಡ ಇಟ್ಟುಕೊಂಡು ಯಾಡಿಯೂರಪ್ಪನವರ ಮೇಲೆ ಸಮರ ಸಾರಿದಂತಿದೆ. ಯಾಡಿಯೂರಪ್ಪನವರ ಸಾಚಾತನದ ಬಗ್ಗೆ ನಾನು ಅಭಿಪ್ರಾಯ ನೀಡುತ್ತಿಲ್ಲ. ಆದರೆ ಕನ್ನಡ ಪತ್ರಿಕೋದ್ಯಮದಲ್ಲಿ ಕೆಲವು ಅಪೂರ್ವ ಪ್ರಯೋಗ ಮಾಡಿರುವ ಭಟ್ಟರಿಂದ ಇಂತಹ ಕೀಳಭಿರುಚಿಯ ಗಿಮಿಕ್ ನಿರೀಕ್ಷಿಸಿರಲಿಲ್ಲ

    ReplyDelete
  5. i think thes comments are unfair. and in everylikelihood the lettes written by children/students only. afterall in every sphere the situation is worst. how u expect the young generation to be "parishuddha"

    ReplyDelete
  6. such a disgusting lines!, I never thought the standard of the letters would be so outstanding! The responsibility of a paper is to create awareness and not to destroy the ethics. If the children are trained in such an astonishing path, God save our state!

    ReplyDelete
  7. ಸಿಎಂಗೆ ಮಕ್ಕಳು ಬರೆದ ಪತ್ರ ಮತ್ತು ಚಂಪಾ ಹೊಡೆದ ಅನೈತಿಕ ಚಪ್ಪಾಳೆ!
    +1

    ReplyDelete
  8. 'ಪೋಲಿ ಕಿಟ್ಟು'ಬರೆದ ಆ ಸಾಲುಗಳನ್ನು ಕನ್ನಡಪ್ರಭ ಪ್ರಕಟಿಸಬಾರದಿತ್ತು..ಇನ್ನು ನೀವು ಹೇಳಿದಂತೆ ಫೇಸ್ ಬುಕ್ ನಲ್ಲಿ ಸೋನಿಯಾ ಹಾಗು ಪ್ರಧಾನಿ ಚಿತ್ರವನ್ನು Edit ಮಾಡಿ ಹಾಕುವವರು ವಿಕೃತ ಮನಸ್ಸಿನವರು ನಿಜ.ಆದರೆ ಅದನ್ನು ತಮ್ಮ profile ನಲ್ಲಿ ಶೇರ್ ಮಾಡಿ ಆನಂದ ಪಡುವವರು ಕೂಡ ವಿಕೃತ ಮನಸ್ಸಿನ ರೋಗಿಗಳು...

    ReplyDelete
  9. ಈಗಿನ ಮಕ್ಕಳೆeನೂ ಕಡಿಮೆ ಇಲ್ಲ. ತುಂಬಾ ಮುಂದು (?) ಆದರೂ ಹೆಚ್ಚಿನ ಪತ್ರ ಅವರ ಪೋಷಕರೋ ಅಥವಾ ಶಿಕ್ಷಕರು ಬರೆದ ಹಾಗಿದೆ.

    ReplyDelete
  10. Really disgusting. Never expected this from VB.
    This only shows to what level VB & group can stoop .
    I have a suggestion for VB. instead of 'nodta iri enen madtivi..' they should change the tag line to 'en bekadru maadtivi (for readership)'
    I dont see any difference b/w this newspaper and those mindless kannada news channels

    ReplyDelete
  11. He he he guys, dint i tell you .. this is all VB effect !! Do you think kids wrote them C'Mon - its impossible.. Devare VB avarige swalpa - Kannige Cataract Pore bandide.. sari Maadppa.... Before he makes kannadaprabha into Masalasa Prabha ! i can pity Champa - if he has mentioned his quotes referring to the poem...

    Ok i will stop my Sarcasm here ( its unnecessary )


    Dear VB - I Know you will see this - You are a multi-talented , creative gentle man.. but these gimmics does not suit you or your work.. - You wont help anyone with these kind of reports - just that you can increase the sales of Kanndaprabha for now but eventually taking it to a new lows..some day...

    End of the day , its common readers who will give verdict.. its not always by buddijivis.... that you complemented the article with Champa's comments

    Please get back to your original Trend and style

    Cordially
    Kiran

    ReplyDelete
  12. Dear VishB...
    Ella shalegalannu muchutiruvaga A (shale illada makkalu) makkala neravige baruvanthe huridumbisuvudu, Kurudu sarakarda kannateresuvudu bittu nimma kurudutanavanneke ellera munde bayalumade....
    Namma pakkada maneya 5ne taragatiya huduganige ABCD/abcd kalisake 'i'm Ravi. How do you do?' anta helikodutiddare. adu kevalu 10km from Electronic city....
    TANTARAGNANA JAYATHU NAMAHAAAA....

    ReplyDelete
  13. ಈಗಿನ ಮಕ್ಕಳು ಮಕ್ಕಳೇ ಅಲ್ಲ ಅದೇ ದೊಡ್ಡ ಟೆನ್ಶನ್ ಆಗಿ ಬಿಟ್ಟಿದೆ. ಇನ್ನು ಮಕ್ಕಳಿಗೆ
    ಈ ಥರದ ವೇದಿಕೆ ಸಿಕ್ಕಿದ್ರೆ ಜೈ !

    ReplyDelete
  14. ಪ್ರಿಯ ಸಂಪಾದಕೀಯ,
    ಇದು ಒಂದರ್ಥದಲ್ಲಿ ಪತ್ರಿಕೆಯು ತಾನು ಏನು ಹೇಳಬಯಸಿತ್ತೋ ಅದನ್ನು ಮಕ್ಕಳ ಬಾಯಿಯಲ್ಲಿ ಹೇಳಿಸಿದ ಹಾಗಿde

    ReplyDelete