Monday, July 11, 2011

ಮಲದ ಗುಂಡಿಯಲ್ಲಿ ಇನ್ನಿಬ್ಬರು ಸತ್ತರು, ನಮ್ಮ ಮನುಷ್ಯತ್ವ ಯಾವಾಗಲೋ ಸತ್ತಿದೆ...

ತಾಯಂದಿರ ದುಃಖ
ಕೆಲವರ ಬದುಕೂ ಸುದ್ದಿಯಾಗುವುದಿಲ್ಲ, ಸಾವೂ ಸುದ್ದಿಯಾಗುವುದಿಲ್ಲ. ಜಗತ್ತು ಹಾಗೇ ಮುಂದುವರೆಯುತ್ತದೆ. ಸಾವು ಹೇಗೆ ಬೇಕಾದರೂ ಬರಬಹುದು. ಆದರೆ ಮಲದ ಗುಂಡಿಯಲ್ಲಿ ಉಸಿರುಗಟ್ಟಿ ಹುಳಗಳಂತೆ ಸಾಯುವ ಪಾಡು ಯಾರಿಗೂ ಬರಬಾರದು. ಶನಿವಾರ ಸಂಜೆ ೪-೩೦ರ ಸುಮಾರಿಗೆ ಹಾಸನ ಜಿಲ್ಲೆ ಆಲೂರು ತಾಲ್ಲೂಕು ಕೆಂಚಮ್ಮನಹೊಸಕೋಟೆ ಬಳಿಯ ಕಾಫಿ ಎಸ್ಟೇಟ್‌ನ ಮಲದ ಗುಂಡಿಯಲ್ಲಿ ಇಬ್ಬರು ಯುವಕರು ನೀಗಿ ಹೋದರು. ಯಥಾಪ್ರಕಾರ ನಮ್ಮ ಮಾಧ್ಯಮಗಳಿಗೆ ಇದು ಬ್ರೆಕಿಂಗ್ ನ್ಯೂಸ್ ಅಲ್ಲ. ಜೀವ ಅಮೂಲ್ಯ. ಆದರೆ ಎಲ್ಲರದೂ ಅಲ್ಲ. ಇಂಥವರ ಸಾವು ಸಹ ಸುದ್ದಿಯಾಗುವುದಿಲ್ಲ.

ಆ ಭಾಗದ ಜನರಿಗೆ ಇಂಥ ಸಾವುಗಳು ಹೊಸದೇನೂ ಅಲ್ಲ. ಇತ್ತೀಚಿನ ವರ್ಷಗಳಲ್ಲಿ ಚನ್ನರಾಯಪಟ್ಟಣ, ಅರಸೀಕೆರೆ, ಕೆ.ಆರ್.ನಗರ ತಾಲ್ಲೂಕುಗಳಲ್ಲಿ ಹೀಗೇ ಮಲದ ಗುಂಡಿಯಲ್ಲಿ ವಿಷಕಾರಿ ಅನಿಲ ಕುಡಿದು ಹಲವರು ಸತ್ತು ಹೋದರು. ಯಾರೂ ಸುದ್ದಿಯಾಗಲಿಲ್ಲ. ಶನಿವಾರ ಸತ್ತವರೂ ಅಷ್ಟೆ. ಅವರ ಸಾವು ನಮ್ಮ ಸಮಾಜವನ್ನು ಅಲುಗಾಡಿಸಲೇ ಇಲ್ಲ. ಅವರೇನೋ ಸತ್ತರು ನಿಜ, ಆದರೆ ನಮ್ಮೊಳಗಿನ ಮನುಷ್ಯತ್ವ ಸತ್ತು ಯಾವ ಕಾಲವಾಯಿತು?

ಸತ್ತ ಇಬ್ಬರೂ ಸಕಲೇಶಪುರದವರು. ಒಬ್ಬ ಮಹದೇವ, ಮತ್ತೊಬ್ಬ ಅರ್ಜುನ. ದಿನಗೂಲಿ ಗುತ್ತಿಗೆ ಆಧಾರದಲ್ಲಿ ಸಕಲೇಶಪುರ ಪುರಸಭೆಯಲ್ಲಿ ಕೆಲಸ ಮಾಡುತ್ತಿದ್ದವರು. ಈ ಇಬ್ಬರೂ ಮತ್ತು ಮಂಜ, ಮುರುಗ ಎಂಬ ಇನ್ನಿಬ್ಬರು ಯಕಶ್ಚಿತ್ ಮೂರೂವರೆ ಸಾವಿರ ರೂಪಾಯಿಗಳ ಒಂದು ಕೆಲಸ ಒಪ್ಪಿಕೊಂಡಿದ್ದರು. ಈ ನಾಲ್ವರೂ ಸೋದರ ಸಂಬಂಧಿಗಳೇ. ಕೆಂಚಮ್ಮನ ಹೊಸಕೋಟೆ ಬಳಿಯ ಪೂರ್ಣರಾಮ ಎಸ್ಟೇಟ್‌ನಲ್ಲಿ ಮಲದ ಪಿಟ್ ತುಂಬಿಕೊಂಡಿತ್ತು. ಅದನ್ನು ಖಾಲಿ ಮಾಡಿಕೊಡಲು ನಾಲ್ವರು ಹೊರಟಿದ್ದರು. ಶನಿವಾರ ಮಧ್ಯಾಹ್ನ ೧೨-೩೦ರ ಸುಮಾರಿಗೆ ಅವರು ಅಲ್ಲಿಗೆ ತಲುಪಿಕೊಂಡಿದ್ದರು.

ಕಾಫಿ ಎಸ್ಟೇಟ್‌ಗಳಲ್ಲಿ ಲೈನ್ ಮನೆಗಳೆಂದು ಕರೆಯಲಾಗುವ ವಸತಿ ವ್ಯವಸ್ಥೆಯೊಂದು ಇರುತ್ತದೆ. ಐದೋ, ಹತ್ತೋ ಪುಟ್ಟಪುಟ್ಟ ಕೊಠಡಿಗಳ ಸಾಲು ಮನೆಗಳನ್ನು ನಿರ್ಮಿಸಲಾಗಿರುತ್ತದೆ. ಈ ಮನೆಗಳಲ್ಲಿ ತೋಟ ಕಾರ್ಮಿಕರು ಸಂಸಾರ ಸಮೇತ ವಾಸ ಮಾಡುತ್ತಾರೆ. ಇಂಥ ಲೈನ್ ಮನೆಗಳಿಗಾಗಿ ಒಂದು ಪಿಟ್ ನಿರ್ಮಿಸಲಾಗಿತ್ತು. ಈ ತೋಟದ ಲೈನ್ ಮನೆಗಳಲ್ಲಿ ಕೆಲವು ತಿಂಗಳುಗಳಿಂದ ಯಾರೂ ವಾಸವಾಗಿರಲಿಲ್ಲ. ಎಸ್ಟೇಟ್ ಮಾಲೀಕರು ಹೊಸದಾಗಿ ಒಂದಷ್ಟು ತೋಟ ಕೂಲಿಗಳನ್ನು ಕರೆಸಿಕೊಂಡಿದ್ದರು. ಆದರೆ ಈ ಮನೆಗಳ ಟಾಯ್ಲೆಟ್‌ಗಳು ಕಟ್ಟಿಕೊಂಡಿದ್ದವು. ಗುಂಡಿ ತುಂಬಿರಬಹುದು ಎಂದು ಭಾವಿಸಿದ ಎಸ್ಟೇಟ್ ಮಾಲೀಕರು ಸಕಲೇಶಪುರದಿಂದ ಮಹದೇವ ಮತ್ತು ತಂಡವನ್ನು ಕರೆಸಿಕೊಂಡಿದ್ದರು.

ಪಿಟ್‌ನ ಮೇಲೆ ಸುಮಾರು ಎರಡೂವರೆ ಅಡಿಗಳಷ್ಟು ಮಣ್ಣು ತುಂಬಿಕೊಂಡಿತ್ತು. ಮಹದೇವ ಮತ್ತು ಸಂಗಡಿಗರು ಆ ಮಣ್ಣನ್ನು ತೆಗೆದು ಪಿಟ್‌ನ ಕಲ್ಲನ್ನು ಸರಿಸುವಷ್ಟರಲ್ಲಿ ಹೈರಾಣಾಗಿ ಹೋಗಿದ್ದರು. ಪಿಟ್ ಕ್ಲೀನ್ ಮಾಡುವವರು ಕಡ್ಡಾಯವಾಗಿ ಕುಡಿದಿರುತ್ತಾರೆ. ಕುಡಿಯದ ಹೊರತು ಅವರು ಅಸಾಧ್ಯ ವಾಸನೆಯನ್ನು ಸಹಿಸಿಕೊಳ್ಳಲಾರರು. ವರ್ಷಾನುವರ್ಷಗಳ ಕೊಳೆತ ಮಲದ ದುರ್ವಾಸನೆಗೇ ಯಾರಾದರೂ ಮೂರ್ಛೆ ಹೋಗಿಬಿಡುತ್ತಾರೆ. ಹೀಗಾಗಿ ಕುಡಿದೇ ಕೆಲಸ ಮಾಡುವುದು ನಡೆದು ಬಂದ ಸಂಪ್ರದಾಯ.

ಪಿಟ್ ತೆರೆದಾಗ ಅವರು ಗಮನಿಸಿದ್ದೇನೆಂದರೆ ಅದು ಎಸ್ಟೇಟ್ ಮಾಲೀಕರು ಭಾವಿಸಿದಂತೆ ಭರ್ತಿಯಾಗಿರಲಿಲ್ಲ. ಕೇವಲ ಮೂರು ಅಡಿಯಷ್ಟು ಮಾತ್ರ ಮಲ ಶೇಖರಣೆಯಾಗಿತ್ತು. ಬಹುಶಃ ಲೈನ್ ಮನೆಗಳಿಂದ ಮಲ ಹೊರಹೋಗಲು ಅಳವಡಿಸಿದ್ದ ಪೈಪ್‌ಗಳು ಬ್ಲಾಕ್ ಆಗಿರಬೇಕು. ಹೀಗಾಗಿ ಗುಂಡಿ ತುಂಬಿರಬಹುದು ಎಂದು ಎಸ್ಟೇಟ್ ಮಾಲೀಕರು ಅಂದುಕೊಂಡಿರಬಹುದು. ಹೇಗೂ ಬಂದಾಗಿದೆ, ಇರುವಷ್ಟು ಮಲವನ್ನು ಖಾಲಿ ಮಾಡಲು ಮಹದೇವ ಮತ್ತು ತಂಡ ಹೊರಟಿದೆ.

ಚಪ್ಪಡಿ ಕಲ್ಲು ಸರಿಸಿ ಪಿಟ್‌ನ ಮೇಲ್ಭಾಗದ ದ್ವಾರವನ್ನು ತೆರೆದ ನಂತರ ಕನಿಷ್ಠ ಒಂದು ದಿನವಾದರೂ ಹಾಗೇ ಬಿಡಬೇಕಿತ್ತು. ಯಾಕೆಂದರೆ ಶೇಖರಣೆಯಾದ ಮಲದಿಂದ ವಿಷಕಾರಿ ಅನಿಲಗಳು ಉತ್ಪತ್ತಿಯಾಗಿ ಅದು ಗುಂಡಿಯಲ್ಲಿ ಆವರಿಸಿಕೊಂಡಿರುತ್ತದೆ. ಪೂರ್ಣ ತುಂಬಿದ ಗುಂಡಿಗಳಾದರೆ ಈ ಅಪಾಯ ಕಡಿಮೆ, ಆದರೆ ಅರ್ಧಂಬರ್ಧ ತುಂಬಿದ ಗುಂಡಿಗಳು ಅಪಾಯಕಾರಿ.

ಹಿಂದೆ ಈ ಕೆಲಸ ಮಾಡುತ್ತಿದ್ದವರು ಒಂದು ದೀಪವನ್ನು ಗುಂಡಿಯಲ್ಲಿ ಇಳೆಬಿಟ್ಟು, ಪರೀಕ್ಷಿಸುತ್ತಿದ್ದರು. ಹೀಗೆ ದೀಪವನ್ನು ಕೆಳಗೆ ಬಿಟ್ಟಾಗ ಗುಂಡಿಯಲ್ಲಿ ತುಂಬಿದ ಮೀಥೇನ್ ಮತ್ತಿತರ ಅನಿಲಗಳು ಭಗ್ಗನೆ ಉರಿಯುತ್ತಿದ್ದವು. ಹೀಗೆ ಬೆಂಕಿ ಕಾಣಿಸಿಕೊಂಡರೆ ಗುಂಡಿಯಲ್ಲಿ ಇಳಿಯಲು ಅದು ಸಕಾಲವಲ್ಲ ಎಂಬುದು ಅವರಿಗೆ ಗೊತ್ತಾಗುತ್ತಿತ್ತು. ಒಂದು ವೇಳೆ ಇಳೆ ಬಿಟ್ಟ ದೀಪವು ಆರಿಹೋದರೂ ಗುಂಡಿಯಲ್ಲಿ ಇಳಿಯುವಂತಿರಲಿಲ್ಲ. ಯಾಕೆಂದರೆ ಒಳಗೆ ಆಮ್ಲಜನಕವೇ ಇಲ್ಲ ಎಂಬುದು ಅವರಿಗೆ ಗೊತ್ತಾಗುತ್ತಿತ್ತು. (ಬಾವಿಗಳನ್ನು ಶುದ್ಧ ಮಾಡುವಾಗಲೂ ಕೆಲವೆಡೇ ಇದೇ ಕ್ರಮ ಅನುಸರಿಸಲಾಗುತ್ತದೆ.)

ಮಹದೇವ
ಕುಡಿದಿದ್ದ ಮಹದೇವ ಮತ್ತು ತಂಡ ಅದೇನು ಯೋಚನೆ ಮಾಡಿತೋ? ಹೇಗೂ ಇರುವುದು ಮೂರು ಅಡಿಯಷ್ಟು ಕೊಳಕು. ಬೇಗ ಬೇಗ ತೆಗೆದು ನಿಗದಿತ ಸ್ಥಳದಲ್ಲಿ ಖಾಲಿ ಮಾಡಿ, ಕಾಸು ಪಡೆದು ಹೋಗಿಬಿಡೋಣ ಎಂದುಕೊಂಡರೇನೋ? ಏಣಿಯೊಂದನ್ನು ಗುಂಡಿಯೊಳಗೆ ನಿಲ್ಲಿಸಲಾಗಿದೆ. ಮೊದಲು ಮಹದೇವ ಗುಂಡಿಯಲ್ಲಿ ಇಳಿದಿದ್ದಾನೆ. ಇಳಿದ ತಕ್ಷಣವೇ ಭಯಾನಕ ಅನಿಲ ಅವನನ್ನು ನುಂಗಿಹಾಕಿದೆ. ಅವನು ಅಲ್ಲೇ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿದ್ದಾನೆ. ಅವನು ಬದುಕಿಸಲು ಮೇಲೆ ನಿಂತಿದ್ದ ಅರ್ಜುನನೂ ಇಳಿದಿದ್ದಾನೆ. ಅವನೂ ಸಹ ವಿಷಕಾರಿ ಅನಿಲವನ್ನು ಸೇವಿಸಿ ಮಲದ ಮೇಲೆ ಅಂಗಾತ ಮಲಗಿ ಸತ್ತು ಬಿದ್ದಿದ್ದಾನೆ. ಮೇಲೆ ಇದ್ದ ಮಂಜ ಮತ್ತು ಮುರುಗರಿಗೆ ಅನಾಹುತದ ಅರಿವಾಗಿದೆ. ತಾವೂ ಇಳಿದರೆ ತಮ್ಮ ಸಾವೂ ಖಚಿತ ಎಂಬುದು ಅವರಿಗೆ ಸ್ಪಷ್ಟವಾಗಿ ಗೊತ್ತಾಗಿದೆ. ಬಾಯಿ ಬಡಿದುಕೊಳ್ಳುವ ಬದಲಾಗಿ ಅವರಿಗೆ ಮಾಡಲು ಇನ್ನೇನೂ ಉಳಿದಿರಲಿಲ್ಲ.

ಮಹದೇವನಿಗೆ ಇನ್ನೂ ಇಪ್ಪತ್ತೈದು ವರ್ಷ. ಮೂವರು ಮಕ್ಕಳಿದ್ದಾರೆ. ಇಬ್ಬರು ಗಂಡು, ಒಬ್ಬ ಹೆಣ್ಣುಮಗಳು. ಅರ್ಜುನನಿಗೆ ಇನ್ನೂ ಮದುವೆಯಾಗಿಲ್ಲ. ಬೆಳೆದು ನಿಂತ ತಂಗಿಯಿದ್ದಾರೆ. ಇಬ್ಬರ ದುರಂತವೆಂದರೆ ಇಬ್ಬರಿಗೂ ತಂದೆಯಿಲ್ಲ. ಅವರಿಬ್ಬರೂ ಅಣ್ಣತಮ್ಮಂದಿರು. ಒಬ್ಬ ಅಪಘಾತಕ್ಕೆ ಸಿಕ್ಕಿ ಸತ್ತಿದ್ದರೆ, ಮತ್ತೊಬ್ಬ ಇದ್ದಕ್ಕಿದ್ದಂತೆ ರಸ್ತೆಯಲ್ಲೇ ಕುಸಿದು ಬಿದ್ದು ಸತ್ತು ಹೋಗಿದ್ದರು. ತಂದೆಯಿಲ್ಲದ ತಬ್ಬಲಿ ಮಕ್ಕಳಿಬ್ಬರೂ ಇಡೀ ಸಂಸಾರದ ನೊಗ ಹೊತ್ತು ದುಡಿಯುತ್ತಿದ್ದರು. ಈಗ ಇಬ್ಬರೂ ಸತ್ತಿದ್ದಾರೆ, ಇಬ್ಬರ ಕುಟುಂಬವೂ ಬೀದಿಗೆ ಬಂದಿದೆ.

ಈ ದುರ್ಘಟನೆಯ ನಂತರ ಎಲ್ಲ ಮಾಮೂಲಿ ಪ್ರಹಸನಗಳು ನಡೆದಿವೆ. ಸ್ಥಳೀಯ ನಾಯಕರು ಸೇರಿದ್ದಾರೆ. ಇಬ್ಬರ ಕುಟುಂಬಕ್ಕೂ ಎಸ್ಟೇಟ್ ಮಾಲೀಕರಿಂದ ಒಂದಷ್ಟು ಪರಿಹಾರ ಕೊಡಿಸುವ ರಾಜಿಪಂಚಾಯ್ತಿ ನಡೆದಿದೆ. ಇದರ ಫಲಶ್ರುತಿಯಾಗಿ ಪಿಟ್ ಕ್ಲೀನ್ ಮಾಡಲು ಬಂದವರು ಕಾಲು ಜಾರಿ ಬಿದ್ದು ಸತ್ತರೆಂಬ ಹೊಂದಾಣಿಕೆಯ ತೀರ್ಮಾನದ ಸುದ್ದಿಗೆ ಎಲ್ಲರೂ ಬದ್ಧರಾಗಿದ್ದಾರೆ. ಎರಡೂ ಕುಟುಂಬಗಳ ಹಿತದೃಷ್ಟಿಯಿಂದ ಮೃತರ ಸಂಬಂಧಿಗಳಿಗೆ ಈ ಒಪ್ಪಂದ ಅಗತ್ಯವಾಗಿತ್ತೇನೋ?

ಭಾನುವಾರ ಮಧ್ಯಾಹ್ನದ ಹೊತ್ತಿಗೆ ಪೋಸ್ಟ್‌ಮಾರ್ಟಂ ನಡೆದು, ನಂತರ ಸಂಬಂಧಿಕರು, ಗೆಳೆಯರ ರೋಧನದ ನಡುವೆ ಇಬ್ಬರ ಅಂತ್ಯಕ್ರಿಯೆಯೂ ನಡೆದಿದೆ. ದಿನಗಟ್ಟಲೆ ಅಳುತ್ತಾ ಕೂರಲು ಅವರ ಬಳಿ ಸಮಯವೂ ಇಲ್ಲ. ಅವತ್ತಿನ ಕೂಳನ್ನು ಅವತ್ತೇ ದುಡಿದು ತಿನ್ನುವವರಿಗೆ ಸತ್ತವರಿಗಾಗಿ ಅಳುವ ಸಮಯವಾದರೂ ಎಲ್ಲಿರುತ್ತದೆ?

ಸರ್ಕಾರ ಎಷ್ಟೇ ಸುಳ್ಳು ಅಫಿಡೆವಿಟ್‌ಗಳನ್ನು ಕೊಟ್ಟರೂ ಮಲ ಹೊರುವ ವ್ಯವಸ್ಥೆ ಇಡೀ ರಾಜ್ಯದಲ್ಲಿ ನಡೆಯುತ್ತಲೇ ಇದೆ. ಅಂತಾರಾಷ್ಟ್ರೀಯ ನಗರಿ ಬೆಂಗಳೂರಿನ ಹೊರವಲಯದಲ್ಲೇ ಇನ್ನೂ ಪಿಟ್ ವ್ಯವಸ್ಥೆ ಇದೆ. ಪಿಟ್ ವ್ಯವಸ್ಥೆ ಇದ್ದ ಮೇಲೆ ಗುಂಡಿಗಿಳಿದು, ಮಲ ಹೊತ್ತು ಶುದ್ಧ ಮಾಡುವವರೂ ಇರಲೇಬೇಕಲ್ಲವೇ? ಬೆಂಗಳೂರಿನ ಕಥೆಯೇ ಹೀಗಿರುವಾಗ ಒಳಚರಂಡಿ ವ್ಯವಸ್ಥೆಯೇ ಇಲ್ಲದ ಸಣ್ಣಪುಟ್ಟ ನಗರಗಳು, ಪಟ್ಟಣಗಳಲ್ಲಿ ಮಲ ಹೊರುವ ಪದ್ಧತಿ ಇಲ್ಲವೆಂದು ನಂಬುವುದು ಹೇಗೆ?

ಸಕಲೇಶಪುರ-ಆಲೂರಿನಂಥ ಮಲೆನಾಡಿನ ಪ್ರದೇಶದಲ್ಲಿ ಪರಿಸ್ಥಿತಿ ಗಂಭೀರ. ಯಾಕೆಂದರೆ ಇಲ್ಲಿ ಪಿಟ್‌ಗಳು ಬೇಗಬೇಗ ತುಂಬುತ್ತವೆ. ಮಳೆ ನೀರು ಗುಂಡಿಯಲ್ಲಿ ಶೇಖರಣೆಯಾಗುವುದರಿಂದ ಪಿಟ್‌ಗಳನ್ನು ಆಗಾಗ ಶುದ್ಧಗೊಳಿಸಲೇಬೇಕು, ಅದು ಅನಿವಾರ್ಯ. ಗುಂಡಿಗಳಿರುವುದರಿಂದ, ಅದನ್ನು ಆಗಾಗ ಖಾಲಿ ಮಾಡಬೇಕಿರುವುದರಿಂದ ಮಹದೇವ, ಅರ್ಜುನರಂಥವರು ಹಣದ ಆಸೆಗೆ ಇಂಥ ಕೆಲಸಗಳನ್ನು ಒಪ್ಪಿಕೊಳ್ಳುತ್ತಾರೆ.

ಸಕಲೇಶಪುರದಲ್ಲಿ ಇಂಥ ಕೆಲಸಗಳನ್ನು ಮಾಡುವವರು ಪೌರಕಾರ್ಮಿಕರು ಮತ್ತು ಅವರ ಸಂಬಂಧಿಗಳು. ಅವರದ್ದೇ ಒಂದು ಸಂಘಟನೆಯಿದೆ. ಈ ಸಂಘಟನೆಯ ಮುಖ್ಯಸ್ಥರಲ್ಲಿ ಒಬ್ಬರಾದ ಕೃಷ್ಣ ಹೇಳುವ ಪ್ರಕಾರ ಮಲದ ಗುಂಡಿಯ ಕೆಲಸ ಮಾಡದಂತೆ ಅವರೆಲ್ಲರೂ ಬಹಳ ಹಿಂದೆಯೇ ನಿರ್ಧರಿಸಿದ್ದಾರೆ. ಆದರೆ ಹಣದ ಆಸೆಗೆ ಕೆಲವರು ಕದ್ದುಮುಚ್ಚಿ ಈ ಕೆಲಸ ಮಾಡುತ್ತಾರೆ. ಹಾಗೆ ಮಾಡಿದ್ದು ಬೆಳಕಿಗೆ ಬಂದಾಗಲೆಲ್ಲ ಅವರಿಂದ ದಂಡವನ್ನೂ ಕಟ್ಟಿಸಿಕೊಳ್ಳಲಾಗಿದೆ. ಬಹುಶಃ ದಂಡ ಕಟ್ಟುವುದೂ ಮಹದೇವ ಅಂಥವರಿಗೆ ಅಭ್ಯಾಸವಾಗಿರಬಹುದು.

ಅರ್ಜುನ
ಸರ್ಕಾರದ ಚಿತ್ರವಿಚಿತ್ರ ನಿಯಮಾವಳಿಗಳಿಂದಾಗಿ ಪುರಸಭೆಗೆ ಖಾಯಂ ನೇಮಕಾತಿ ಪಡೆದಿದ್ದ ಒಟ್ಟು ಹನ್ನೊಂದು ಮಂದಿಯ ನೌಕರಿಯನ್ನು ವಾಪಾಸು ಕಿತ್ತುಕೊಳ್ಳಲಾಗಿದೆ. ಹೀಗಾಗಿ ಅವರೆಲ್ಲರೂ ಈಗಲೂ ದಿನಗೂಲಿ ಆಧಾರದಲ್ಲೇ ಕೆಲಸ ಮಾಡುತ್ತಾರೆ. ಬದುಕಿನ ಅನಿವಾರ್ಯತೆಗಳಿಗಾಗಿ ಹೆಚ್ಚು ಹಣದ ಆಸೆಗೆ ಇಂಥ ಕೆಲಸಗಳನ್ನು ಒಪ್ಪಿಕೊಳ್ಳುವವರು ಒಂದೇ ಗುಂಡಿಯಲ್ಲಿ ಬಿದ್ದು ಪ್ರಾಣ ಕಳೆದುಕೊಳ್ಳುತ್ತಾರೆ, ಅಥವಾ ಬರಬಾರದ ಖಾಯಿಲೆಗಳಿಗೆ ಗುರಿಯಾಗುತ್ತಾರೆ.

ವ್ಯಂಗ್ಯವೆಂದರೆ ಇತ್ತೀಚಿಗೆ ಹದಿನೈದು ದಿನಗಳ ಹಿಂದೆಯಷ್ಟೇ ಮಲದ ಪಿಟ್‌ಗಳನ್ನು ಖಾಲಿ ಮಾಡುವ ಸಕ್ಕಿಂಗ್ ಮೆಷಿನ್ ಹೊಂದಿದ ವಾಹನವೊಂದು ಸಕಲೇಶಪುರ ಪುರಸಭೆಗೆ ಬಂದಿದೆ. ಅದರ ಉದ್ಘಾಟನೆ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಮಾಮೂಲಿನಂತೆ ಮಲ ಹೊರುವ ಪದ್ಧತಿ ಅನಿಷ್ಟ., ಅದನ್ನು ಓಡಿಸಬೇಕು. ವಾಹನ ಬಂದಿರುವುದರಿಂದ ಸಮಸ್ಯೆ ಬಗೆಹರಿದಿದೆ ಎಂಬ ಧಾಟಿಯಲ್ಲಿ ಮಾತನಾಡಿದ್ದರು. ವಾಹನ ಬಂದ ಹದಿನೈದು ದಿನಗಳಿಗೇ ಇವರಿಬ್ಬರು ತೀರಿಕೊಂಡಿದ್ದಾರೆ.

ಇಂಥವರ ಸಾವಿಗಾಗಿ ಮರುಗುವವರು ಕಡಿಮೆ. ಸತ್ಯಶೋಧನಾ ಸಮಿತಿಗಳು ಮಲೆನಾಡಿನ ಈ ಹಳ್ಳಿಗಳನ್ನು ತಲುಪುವ ಸಾಧ್ಯತೆಗಳು ಕಡಿಮೆ. ಮಾನವ ಹಕ್ಕು ಹೋರಾಟಗಾರರು ಸಾಧಾರಣವಾಗಿ ಬೆಂಗಳೂರು-ಮೈಸೂರುಗಳಂಥ ನಗರಗಳಲ್ಲೇ ವಾಸವಾಗಿರುವುದರಿಂದ, ಅವರಿಗೆ ಈ ಹುಡುಗರ ಸಾವಿನ ಆಕ್ರಂದನವೂ ಕೇಳಿಸುವುದಿಲ್ಲ. ವರ್ಷದ ಆರು ತಿಂಗಳು ಮಳೆಯಲ್ಲೇ ಇರುವ ಮಲೆನಾಡಿನ ಹಳ್ಳಿಗಳಲ್ಲಿ ಮನುಷ್ಯರು ವಾಸವಾಗಿದ್ದಾರೆಂದು ನಮ್ಮ ಬೆಂಗಳೂರು ಸಮಾಜ ನಂಬಿದೆ ಎಂದು ಹೇಳುವಂತೆಯೂ ಇಲ್ಲ. ಮನುಷ್ಯರೇ ಇಲ್ಲದ ಮೇಲೆ ಮಾನವ ಹಕ್ಕುಗಳ ಪ್ರಶ್ನೆಯಾದರೂ ಎಲ್ಲಿಂದ ಉದ್ಭವಿಸುತ್ತದೆ?

ಸತ್ತವರ ಪೈಕಿ ಅರ್ಜುನ ಎಳೆಯವನು, ಮುಗ್ಧ. ಸಕಲೇಶಪುರದಲ್ಲಿ ರಸ್ತೆಗಳಲ್ಲಿ ಹಿರಿಯರು, ಗಣ್ಯರು ಎದುರಿಗೆ ಸಿಕ್ಕರೆ ದುನಿಯಾ ಸಿನಿಮಾದಲ್ಲಿ ವಿಜಯ್ ಮಾಡುತ್ತಿದ್ದಂತೆ ಭರ್ಜರಿಯಾಗಿ ಸೆಲ್ಯೂಟ್ ಹೊಡೆದು ನಮಸ್ತೆ ಸಾರ್ ಎನ್ನುತ್ತಿದ್ದ. ಅವನೀಗ ಬದುಕಿಗೇ ಒಂದು ದೊಡ್ಡ ಸಲಾಮ್ ಹೊಡೆದು ಹೋಗಿದ್ದಾನೆ.

ಯಾರ‍್ಯಾರೋ ಹೇಗೆ ಹೇಗೋ ಸಾಯುತ್ತಾರೆ. ಆದರೆ ಸಮಾಜದ ಕೊಳಕು ತೆಗೆಯುವ ಕಾಯಕ ಮಾಡುವ ಈ ಜನರು ಅದೇ ಕೊಳಕಿನ ಮೇಲೆ ಅಂಗಾತ ಬಿದ್ದು ಸಾಯುವುದನ್ನು ನೆನಪಿಸಿಕೊಂಡರೆ ಸಂಕಟವಾಗುತ್ತದೆ.

ಇಂಥ ಸಾವುಗಳಿಗೂ ನಮ್ಮ ಸಮಾಜ, ನಾವು, ನಮ್ಮ ಮಾಧ್ಯಮಗಳು ಮೌನವಾಗಿ ಪ್ರತಿಕ್ರಿಯಿಸುವಷ್ಟು ನಿರ್ಭಾವುಕ ಸ್ಥಿತಿಗೆ ತಲುಪಿರುವುದು ಆಧುನಿಕ ಜಗತ್ತಿನ ಬದಲಾದ ಭಾಷೆಯನ್ನು ಬಿಂಬಿಸುತ್ತದೆ. ಕೊಳಕೆನ್ನುವುದು ಗುಂಡಿಯಲ್ಲಿ ಮಾತ್ರವಿದೆಯೋ, ನಮ್ಮ ಎದೆಗಳಲ್ಲೇ ವರ್ಷಾನುವರ್ಷಗಳಿಂದ ಶೇಖರಣೆಗೊಂಡು, ಕೊಳೆತು ನಾರುತ್ತಿದೆಯೋ?

3 comments:

  1. ಮಲ ಹೊರುವವರ ಬದುಕು ಬವಣೆಗಳು ಮಾಧ್ಯಮಗಳ ಟಿ. ಆರ್. ಪಿ. ರೇಟನ್ನು ಹೆಚ್ಚಿಸುವುದಿಲ್ಲ. ಹೀಗಾಗಿ ಮಾಧ್ಯಮಗಳಿಗೆ ಇಂಥ ವಿಷಯಗಳು ಬೇಡ. ಮಾಧ್ಯಮಗಳು ಜಾಹೀರಾತು ಲಾಬಿಗೆ ಬಲಿಯಾಗಿರುವುದೇ ಇದಕ್ಕೆ ಕಾರಣ. ಮಾಧ್ಯಮಗಳು ಎಂಥ ಅಸಹಾಯಕ ಸ್ಥಿತಿಗೆ ತಲುಪಿವೆ ಎಂದರೆ ದೇಶದ ಬಗ್ಗೆ, ಮಾನವೀಯತೆಯ ಬಗ್ಗೆ, ವೈಜ್ಞಾನಿಕ ಮನೋಧರ್ಮದ ಬಗ್ಗೆ, ಸಾಮಾಜಿಕ ಅನಿಷ್ಟಗಳ ಬಗ್ಗೆ ಜಾಗೃತಿ ಮೂಡಿಸಿ ಮೌಲ್ಯಗಳನ್ನು ಎತ್ತಿ ಹಿಡಿಯುವ ಕಾಲ ಎಂದೋ ಕಳೆದು ಹೋಗಿರುವಂತೆ ಕಾಣುತ್ತದೆ. ಮಾಧ್ಯಮಗಳು ಜನರ ಬೆಂಬಲದ ಮೂಲಕ ಬೆಳೆಯದೆ ಜಾಹೀರಾತು ಲಾಬಿಯ ಬೆಂಬಲದಿಂದ ಬೆಳೆಯುತ್ತಿರುವುದು ಇಂಥ ಅನಿಷ್ಟಗಳಿಗೆ ಕಾರಣ.

    ReplyDelete
  2. first time i cried, after reading an article

    ReplyDelete