ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಮಾರ್ಕಂಡೇಯ ಖಟ್ಜು ಅವರ ವಿವಾದಾತ್ಮಕ ಹೇಳಿಕೆಗಳನ್ನು ಕುರಿತು ಪ್ರಜಾವಾಣಿಯ ಇಂದಿನ ಅನಾವರಣ ಅಂಕಣದಲ್ಲಿ ದಿನೇಶ್ ಅಮೀನ್ ಮಟ್ಟು ಬರೆದಿದ್ದಾರೆ. ದಿನೇಶ್ ಅವರು ಮೊದಲ ಬಾರಿಗೆ ಅತ್ಯಂತ ಡಿಪ್ಲಮ್ಯಾಟಿಕ್ ಆಗಿ ಇದನ್ನು ಬರೆದಿದ್ದಾರಾ ಅನ್ನುವ ಅನುಮಾನ ನಮಗೆ. ಅನುಮಾನ ಯಾಕೆ ಅನ್ನೋದನ್ನು ಹೇಳುವ ಪ್ರಯತ್ನ ಮಾಡುತ್ತೇವೆ.
ಮಾರ್ಕಂಡೇಯ ಖಟ್ಜು |
ನಿಜವಾದ ಮಾತೇ ಇದು? ದೇಶದ ಪತ್ರಕರ್ತರೆಲ್ಲ ಖಡ್ಜು ಮಾತಿನಿಂದ ಕೆರಳಿದ್ದಾರೆಯೇ? ಖಟ್ಜು ಅವರ ವಿರುದ್ಧ ಇಡೀ ಪತ್ರಕರ್ತ ಸಮೂಹವೇ ಕೋಪ ಮಾಡಿಕೊಂಡಿದೆಯೇ? ಖಟ್ಜು ಹೇಳಿರುವುದು ಅಕ್ಷರಶಃ ನಿಜ ಎಂದು ಹೇಳಬಲ್ಲ ಪತ್ರಕರ್ತರೇ ಇಲ್ಲವೇನು? ಬೇರೇನೂ ಬೇಡ. ಕರ್ನಾಟಕದ ಉದಾಹರಣೆ ತೆಗೆದುಕೊಳ್ಳೋಣ. ಖಟ್ಜು ಸಂದರ್ಶನ ಟಿವಿಯಲ್ಲಿ ಪ್ರಸಾರವಾಗಿ ಎಷ್ಟೋ ದಿನ ಕಳೆದ ನಂತರ ಪ್ರಜಾವಾಣಿಯಲ್ಲಿ ಒಂದು ತೀವ್ರ ಖಂಡನೆಯ ಸಂಪಾದಕೀಯ ಹೊರಬಂದಿತ್ತು. ಮತ್ತೆ ಒಂದೆರಡು ಪತ್ರಿಕೆಗಳಲ್ಲಿ ಸಣ್ಣಪುಟ್ಟ ಲೇಖನಗಳು ಪ್ರಕಟವಾದವು. ಅದನ್ನು ಹೊರತುಪಡಿಸಿದರೆ ಕರ್ನಾಟಕದ ಮೀಡಿಯಾ ಲೋಕ ತಣ್ಣಗೆ ಇದೆ. ಯಾರೂ ಪೆನ್ನನ್ನು ಖಡ್ಗ ಮಾಡಿಕೊಂಡಿದ್ದನ್ನು ನಾವು ಕಾಣೆವು. ಕಡೇ ಪಕ್ಷ ಪತ್ರಕರ್ತರಿಗೆ ಸಂಬಂಧಿಸಿದ ಸಂಘಟನೆಗಳೂ ಬಾಯಿಬಿಚ್ಚಿದ್ದನ್ನು ನಾವು ನೋಡಲಿಲ್ಲ. (ಮಾಹಿತಿ ಕೊರತೆಯಿಂದ ಬಾಯಿಬಿಟ್ಟಿಲ್ಲದೆಯೂ ಇರಬಹುದು!) ಖಟ್ಜು ಮಾತುಗಳಿಗೆ ಇಡೀ ಪತ್ರಿಕಾ ಸಮೂಹ ಸಿಟ್ಟಿಗೆದ್ದಿದೆ ಎಂದು ಅಮೀನ್‌ಮಟ್ಟು ಯಾಕೆ ಉತ್ಪ್ರೇಕ್ಷೆ ಮಾಡುತ್ತಿದ್ದಾರೆ?
ಹಾಗೆ ನೋಡಿದರೆ ದಿನೇಶ್ ಅವರು ಖಟ್ಜು ಆಡಿರುವ ಎಲ್ಲ ಮಾತುಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಿಲ್ಲ. ಖಟ್ಜು ಯಾವ ಆದರ್ಶಗಳನ್ನು ಪತ್ರಕರ್ತರಿಂದ ಬಯಸುತ್ತಿದ್ದಾರೋ ಆ ಆದರ್ಶಗಳನ್ನು ಹೊಂದಿರುವ ಅಪರೂಪದ ಪತ್ರಕರ್ತ ದಿನೇಶ್ ಅಮೀನ್ ಮಟ್ಟು. ಹೀಗಾಗಿ ಖಟ್ಜು ಅವರು ಮಾಧ್ಯಮಗಳ ಕುರಿತು ಆಡಿರುವ ಅನೇಕ ಮಾತುಗಳಿಗೆ ಅವರ ಪರೋಕ್ಷ ಸಮ್ಮತಿ ಇದೆ. ಖಟ್ಜು ಹೇಳುವ ರೀತಿ ಸರಿಯಿಲ್ಲವೆಂಬುದು ಅವರ ಆಪಾದನೆ. ಖಟ್ಜು ಆರೋಪಗಳೆಲ್ಲವೂ ಹಳೆಯವು ಎಂಬುದು ಅವರ ಟೀಕೆ. (ಹಳೇ ಆರೋಪಗಳು ಅಪ್ರಸ್ತುತ ಯಾಕಾಗಬೇಕು? ಅಷ್ಟಕ್ಕೂ ಈ ಸಂದರ್ಶನದಲ್ಲಿ ಕರಣ್ ಎತ್ತಿದ ಪ್ರಶ್ನೆಗಳಿಗೆ ಖಟ್ಜು ಉತ್ತರಿಸುತ್ತಾ ಹೋಗಿದ್ದಾರಷ್ಟೆ.) ಆಡುವ ಮಾತುಗಳಲ್ಲಿ ಎಷ್ಟೇ ಸತ್ಯ-ಪ್ರಾಮಾಣಿಕತೆಗಳಿರಲಿ, ಹೇಳುವ ರೀತಿ ಸರಿ ಇಲ್ಲದೇ ಇದ್ದರೆ ಮಾತು ಸೋತುಹೋಗುತ್ತದೆ. ಅತಿರೇಕಕ್ಕೆ ಹೋದರೆ ಬಾಯಿಬಡುಕತನವಾಗುತ್ತದೆ ಎಂದು ದಿನೇಶ್ ಹೇಳುತ್ತಾರೆ.
ನ್ಯಾಯಸ್ಥಾನದಲ್ಲಿ ಕುಳಿತುಕೊಂಡವರು ಪ್ರಾಮಾಣಿಕರಾಗಿದ್ದರೂ ಸಣ್ಣಪ್ರಮಾಣದ (ಕೆಲವೊಮ್ಮೆ ದೊಡ್ಡಪ್ರಮಾಣದ) ಬಾಯಿಬಡುಕುತನ ಪ್ರದರ್ಶನ ತೋರುತ್ತಿರುವುದು ದಿನೇಶ್ ಅವರಿಗೆ ಗೊತ್ತಿಲ್ಲದ ವಿದ್ಯಮಾನವೇನೂ ಅಲ್ಲ. ಕರ್ನಾಟಕದ ಉದಾಹರಣೆ ಕೊಡುವುದಾದರೆ ಲೋಕಾಯುಕ್ತ ನ್ಯಾಯಮೂರ್ತಿಗಳಾಗಿದ್ದ ನ್ಯಾ.ವೆಂಕಟಾಚಲ ಹಾಗು ನ್ಯಾ ಸಂತೋಷ್ ಹೆಗ್ಡೆ ಅವರಿಬ್ಬರೂ ಈ ಅಪವಾದದಿಂದ ಮುಕ್ತರಾಗಿರಲಿಲ್ಲ. ಆದರೆ ಮಾತು ಅತಿರೇಕವಾಯಿತು ಎನ್ನುವ ಕಾರಣಕ್ಕೂ ಮಾತಿನ ಹಿಂದಿನ ಆಶಯಗಳೆಲ್ಲವೂ ತಿರಸ್ಕಾರಕ್ಕೆ ಯೋಗ್ಯವಾಗುತ್ತವೆಯೇ?
ದಿನೇಶ್ ಅವರೂ ಸೇರಿದಂತೆ ಖಟ್ಜು ಅವರನ್ನು ವಿರೋಧಿಸುತ್ತಿರುವುದು ಅವರು ಸಂದರ್ಶನದಲ್ಲಿ ಆಡಿದ ಕೆಲವು ಸಡಿಲ ಮಾತುಗಳನ್ನು ಮಾತ್ರ. ಪತ್ರಕರ್ತರಿಗೆ ಅರ್ಥಶಾಸ್ತ್ರ, ರಾಜಕೀಯ ಶಾಸ್ತ್ರ, ಸಾಹಿತ್ಯ, ಫಿಲಾಸಫಿ ಇತ್ಯಾದಿಗಳಲ್ಲಿ ಪರಿಣತಿ ಇಲ್ಲ ಎಂಬ ಅವರ ಮಾತುಗಳನ್ನೇ ಅಸ್ತ್ರವನ್ನಾಗಿ ಬಳಸಿಕೊಂಡು ಪದೇ ಪದೇ ದಾಳಿ ನಡೆಸಲಾಗುತ್ತಿದೆ. ಇಲ್ಲಿ ಪತ್ರಕರ್ತರಿಗೆ ಎಂಬ ಶಬ್ದದ ಹಿಂದೆ ಕೆಲವು ಅಂತಲೋ, ಬಹುತೇಕ ಅಂತಲೋ ಒಂದು ಪದಬಳಕೆಯಾಗಿದ್ದರೆ ಈ ವಿಷಯದ ಚರ್ಚೆಯೇ ಅಸಾಧ್ಯವಾಗುತ್ತಿತ್ತು. ಖಟ್ಜು ಆತುರದಲ್ಲಿ ಅದನ್ನು ಮರೆತಿದ್ದಾರೆ. ಹೀಗಾಗಿ ಪೆನ್ನುಗಳು ಖಡ್ಗಗಳಾಗುತ್ತಿವೆ.
ಖಟ್ಜು ಹೇಳದೇ ಉಳಿದದ್ದನ್ನು ಹೇಳುವ ಆತುರದಲ್ಲಿ ದಿನೇಶ್ ಅವರು ಒಂದು ಸ್ಪಷ್ಟ ಲೋಪವನ್ನು ಉಳಿಸಿದ್ದಾರೆ. ಖಟ್ಜು ಮಾಧ್ಯಮ ಭ್ರಷ್ಟಾಚಾರ, ಕಾಸಿಗಾಗಿ ಸುದ್ದಿ ಕುರಿತು ಯಾಕೆ ಮಾತನಾಡಲಿಲ್ಲ ಎಂದು ಆಕ್ಷೇಪಣೆ ತೆಗೆದಿದ್ದಾರೆ. ಕರಣ್ ಜತೆಗಿನ ಸಂದರ್ಶನದಲ್ಲಿ ಖಟ್ಜು ಈ ವಿಷಯಯನ್ನು ಕಟುವಾಗಿಯೇ ಪ್ರಸ್ತಾಪಿಸಿದ್ದಾರೆ. ಹಿಂದೆಲ್ಲ ಚುನಾವಣಾ ಸಂದರ್ಭದಲ್ಲಿ ಪತ್ರಕರ್ತರೇ ೧೦,೦೦೦ ರೂ. ಪಡೆದು ಅಭ್ಯರ್ಥಿಗಳ ಪರವಾಗಿ ಬರೆಯುತ್ತಿದ್ದರು. ಇದನ್ನು ಗಮನಿಸಿದ ಮ್ಯಾನೇಜ್‌ಮೆಂಟುಗಳು ತಾವೇ ಲಾಭ ಮಾಡಿಕೊಳ್ಳಲು ಕಾಸಿಗಾಗಿ ಸುದ್ದಿ ದಂಧೆಯನ್ನು ಆರಂಭಿಸಿದವು ಎಂದು ಖಟ್ಜು ಹೇಳಿರುವುದನ್ನು ದಿನೇಶ್ ಪ್ರಮಾದವಶಾತ್ ಮರೆತಿದ್ದಾರೆ. ಒಂದೇ ಪತ್ರಿಕೆಯಯಲ್ಲಿ ಇಬ್ಬರು ಅಭ್ಯರ್ಥಿಗಳ ಪರವಾಗಿ ಕಾಸಿಗಾಗಿ ಸುದ್ದಿಗಳು ಪ್ರಕಟವಾದಾಗ ಆದ ಅವಾಂತರಗಳನ್ನೂ ಖಟ್ಜು ನೆನಪಿಸಿಕೊಂಡಿದ್ದಾರೆ.
ಬಹಳ ಮುಖ್ಯವಾಗಿ ಖಟ್ಜು ಅವರ ಸಿಟ್ಟು ಇರುವುದು ಎಲೆಕ್ಟ್ರಾನಿಕ್ ಮಾಧ್ಯಮಗಳ ಕುರಿತು. ಈ ಮಾಧ್ಯಮಗಳಲ್ಲಿ ನಡೆಯುತ್ತಿರುವ ಜ್ಯೋತಿಷಿಗಳ ವಿಜೃಂಭಣೆ, ಕ್ರಿಕೆಟ್-ಸಿನಿಮಾಗಳಿಗೆ ದಕ್ಕುವ ಪ್ರಾಶಸ್ತ್ಯ, ತೇಜೋವಧೆ, ಜನಗಳನ್ನು ಉದ್ದೇಶಪೂರ‍್ವಕವಾಗಿ ಒಡೆಯುವ ಚಟುವಟಿಕೆಗಳು ಇತ್ಯಾದಿಗಳ ಬಗ್ಗೆ ಖಟ್ಜು ಪ್ರಸ್ತಾಪಿಸಿದ್ದಾರೆ. ಅದಕ್ಕಾಗಿ ಪ್ರೆಸ್ ಕೌನ್ಸಿಲ್‌ನ ಅಡಿಯಲ್ಲೇ ಈ ಚಾನಲ್‌ಗಳನ್ನೂ ತರುವ ಪ್ರಸ್ತಾಪ ಮಾಡಿದ್ದಾರೆ. ಈ ಕುರಿತು ಪ್ರಧಾನಿಗೂ ಪತ್ರ ಬರೆದಿರುವುದಾಗಿ ಅವರು ಹೇಳಿದ್ದಾರೆ. ಪ್ರೆಸ್ ಕೌನ್ಸಿಲ್ ಅನ್ನು ಮೀಡಿಯಾ ಕೌನ್ಸಿಲ್ ಆಗಿ ಬದಲಾಯಿಸಬೇಕಿದೆ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ. ಈ ವಿಷಯವೇ ಗಂಭೀರವಾಗಿ ಚರ್ಚೆಯಾಗಬೇಕಿತ್ತಲ್ಲವೇ? ಇದಕ್ಕೆ ಹೊರತಾಗಿ ಪತ್ರಕರ್ತರ ಕೌಶಲ್ಯದ ವಿಷಯವೇ ಚರ್ಚೆಯ ವಿಷಯವಾಗಿದ್ದು ಏಕೆ?
ದಿನೇಶ್ ಅಮೀನ್ ಮಟ್ಟು |
ಅಷ್ಟಕ್ಕೂ ಖಟ್ಜು ಹೇಳಿದಂತೆ ಪರಿಪೂರ್ಣವಾದ ಸ್ವಾತಂತ್ರ್ಯ ಎಂಬುದು ಇರಬೇಕಾ? ಸಾರ್ವಜನಿಕ ಬದುಕಿನ ಪ್ರತಿಯೊಬ್ಬರೂ ಯಾರಿಗಾದರೂ ಉತ್ತರದಾಯಿ ಆಗಲೇಬೇಕಲ್ಲವೇ? ಮಾನನಷ್ಟ ಕಟ್ಲೆಗಳಂಥ ಬಹುತೇಕ ಸಂದರ್ಭದಲ್ಲಿ ನಿರುಪಯೋಗಿಯಾದ, ನ್ಯಾಯಕ್ಕಾಗಿ ವರ್ಷಗಟ್ಟಲೆ ಕಾಲ ಅಂಗಲಾಚಬೇಕಾದ ಮಾರ್ಗವನ್ನು ಹೊರತುಪಡಿಸಿದರೆ ಮಾಧ್ಯಮಗಳಿಂದ ನೊಂದವರಿಗೆ ನ್ಯಾಯ ದೊರೆಯುವುದಕ್ಕೆ ಮಾರ್ಗ ಬೇಡವೇ? ಮಾನನಷ್ಟ ಕಟ್ಲೆಯಂಥವು ವೈಯಕ್ತಿಕ ತೇಜೋವಧೆಯಂಥ ಪ್ರಕರಣಗಳಿಗೆ ಸಂಬಂಧಿಸಿದ್ದವು. ಇಡೀ ಸಮಾಜವನ್ನೇ ದಿಕ್ಕುಗೆಡಿಸುವ ಪತ್ರಿಕಾಸಂಸ್ಥೆಗಳನ್ನು ಯಾವ ಕಾನೂನಿನ ಅಡಿಯಲ್ಲಿ ತರುವುದು? ಸದಾ ಕತ್ತಿಯಂಥ ಪೆನ್ನನ್ನು ಹಿಡಿದುಕೊಂಡೇ ಓಡಾಡುವವರನ್ನು ಎದುರಿಸಿ ನಿಲ್ಲುವವರಾದರೂ ಯಾರು?
ಜನಲೋಕಪಾಲದ ಮೂಲಕ ನಿಯಂತ್ರಣಕ್ಕೆ ಮಾಧ್ಯಮಗಳನ್ನು ಒಪ್ಪಿಸಿದರೆ ಹೇಗೆ ಎಂಬ ಪ್ರಶ್ನೆಯೊಂದನ್ನು ದಿನೇಶ್ ಅಮೀನ್ ಮಟ್ಟು ತಮ್ಮ ಅಂಕಣದ ಕೊನೆಯಲ್ಲಿ ಪ್ರಸ್ತಾಪಿಸಿದ್ದಾರೆ. ಒಂದು ವೇಳೆ ಮಾಧ್ಯಮ ಭ್ರಷ್ಟಾಚಾರವನ್ನು ಜನಲೋಕಪಾಲಕ್ಕೆ ವಹಿಸಿದರೆ, ಭ್ರಷ್ಟ ಪತ್ರಕರ್ತರಿಗೆ ಶಿಕ್ಷೆಯಾಗಬಹುದು ಎಂದು ಒಪ್ಪಿಕೊಳ್ಳೋಣ. ಆದರೆ ಮಾಧ್ಯಮಗಳ ಇತರ ಸ್ವೇಚ್ಛಾಚಾರಕ್ಕೆ ಕಡಿವಾಣ ಹಾಕುವವರು ಯಾರು? ಧರ್ಮದ ಹೆಸರಲ್ಲಿ ದೇಶ ಒಡೆಯುವ ಪತ್ರಕರ್ತರನ್ನು ಏನು ಮಾಡುವುದು? ಮೌಢ್ಯವನ್ನು ಪ್ರಜ್ಞಾಪೂರ್ವಕವಾಗಿ ಹರಡಿ ಜನರನ್ನು ಪಾತಾಳಕ್ಕೆ ತಳ್ಳುವವರನ್ನೇನು ಮಾಡೋದು? ಖಟ್ಜು ಹೇಳಿದಂತೆ ಹಸಿವು, ದಾರಿದ್ರ್ಯ ದೇಶದ ತುಂಬೆಲ್ಲ ಹರಡಿರುವಾಗ ಕರೀನಾ ಕಪೂರ್, ಐಶ್ವರ್ಯ ರೈಗಳ ಸುತ್ತ ಸುತ್ತುತ್ತ ವಂಚನೆ ಎಸಗುತ್ತಿರುವ, ನಿಜ ಸಮಸ್ಯೆಗಳನ್ನು ಮರೆಮಾಚುತ್ತಿರುವ ಮಾಧ್ಯಮಗಳನ್ನು ಏನು ಮಾಡುವುದು?
ಪತ್ರಿಕಾ ನ್ಯಾಯಮಂಡಳಿ ಅಧ್ಯಕ್ಷರನ್ನು ಸರ್ಕಾರವೇ ಆಯ್ಕೆ ಮಾಡುವುದರಿಂದ, ಮಂಡಳಿಗೆ ಅಧಿಕಾರ ದೊರೆತರೆ ಸರ್ಕಾರ ಮೀಡಿಯಾ ವ್ಯವಹಾರದಲ್ಲಿ ಕೈಹಾಕಬಹುದು ಎಂಬುದು ದಿನೇಶ್ ಹಾಗು ಇದನ್ನು ವಿರೋಧಿಸುತ್ತಿರುವ ಎಲ್ಲರ ಕಾಳಜಿ. ಆದರೆ ಪ್ರಜಾತಂತ್ರದಲ್ಲಿ ನ್ಯಾಯಾಧೀಶರಿಂದ ಹಿಡಿದು ಪೊಲೀಸರವರೆಗೆ ಎಲ್ಲರನ್ನೂ ನೇಮಿಸುವುದು ಸರ್ಕಾರವೇ ಅಲ್ಲವೇ? ಸರ್ಕಾರ ನೇಮಿಸಿದ ಪೊಲೀಸರು ಎಂಬ ಕಾರಣಕ್ಕೆ ಪೊಲೀಸರ ಅಡಿಯಲ್ಲಿ ನಾವು ಬರುವುದಿಲ್ಲವೆಂದು ಸಾಮಾನ್ಯ ಪ್ರಜೆ ಹೇಳಲು ಸಾಧ್ಯವೇ? ಎಲ್ಲರೂ ಸರ್ಕಾರದ ನೀತಿ ನಿರೂಪಣೆಗಳಿಂದ ಹೊರಗಿರಲು ಬಯಸುವುದಾದರೆ ಪ್ರಜಾತಂತ್ರ ವ್ಯವಸ್ಥೆ ಉಳಿಯುವುದಾದರೂ ಹೇಗೆ?
ಆಧುನಿಕ ಸಮಾಜವಾಗಿ ಬದಲಾಗುವ ಸಂಕ್ರಮಣದ ಕಾಲಘಟ್ಟದಲ್ಲಿ ಭಾರತದಲ್ಲಿ ಈ ಸಂಕ್ರಮಣದ ಸ್ಥಿತಿಗೆ ಮಾಧ್ಯಮಗಳು ಸ್ಪಂದಿಸುತ್ತಿಲ್ಲ ಎಂದು ಖಟ್ಜು ಯೂರೋಪ್‌ನ ಉದಾಹರಣೆ ನೀಡಿ ಆಕ್ಷೇಪವೆತ್ತಿದ್ದಾರೆ. ಪತ್ರಕರ್ತರು ಜನಪರವಾಗಿಲ್ಲ ಎಂಬುದು ಅವರ ಮುಖ್ಯ ಹೇಳಿಕೆ. ಇದಲ್ಲವೇ ಮುಖ್ಯವಾಗಿ ಚರ್ಚಿಸಬೇಕಾದ ವಿಷಯ?
ಒಂದಂತೂ ನಿಜ, ನ್ಯಾಯಮಂಡಳಿ ಅಧ್ಯಕ್ಷರ ಹೇಳಿಕೆಗೆ ಈ ಪರಿಯಲ್ಲಿ ಮಾಧ್ಯಮಸಂಸ್ಥೆಗಳು ಮತ್ತು ಮಾಧ್ಯಮ ಸಂಸ್ಥೆಗಳ ಹಿಡಿತದಲ್ಲಿರುವ ಪತ್ರಕರ್ತ ಸಂಘಟನೆಗಳು ವೀರಾವೇಶದಲ್ಲಿ ಹಾರಾಡುತ್ತಿರುವುದನ್ನು ನೋಡಿದರೆ, ಒಂದೊಮ್ಮೆ ಸರ್ಕಾರ ಪ್ರೆಸ್ ಕೌನ್ಸಿಲ್‌ಗೆ ಹೆಚ್ಚುವರಿ ಅಧಿಕಾರ ದೊರೆತರೆ ಯಾವ ಪ್ರಮಾಣದಲ್ಲಿ ಗಂಟಲು ಹರಿದುಕೊಳ್ಳಬಹುದು ಎಂಬುದನ್ನು ಊಹಿಸಿಕೊಳ್ಳಬಹುದು. ಹೀಗಾಗಿ ಮಾಧ್ಯಮ ಸಂಸ್ಥೆಗಳು ನೆಮ್ಮದಿಯಾಗಿರಬಹುದು. ಅವುಗಳ ಸ್ವೇಚ್ಛೆಗೆ ಅಡ್ಡಿ ಬರುವವರನ್ನು ಅವುಗಳು ಎಂದಿಗೂ ಸಹಿಸಿಕೊಳ್ಳುವುದಿಲ್ಲ.
ದಿನೇಶ್ ಅಮೀನ್‌ಮಟ್ಟು ಹೇಳಬೇಕಾಗಿದ್ದನ್ನು ಪೂರ್ತಿ ಹೇಳಲು ಸಾಧ್ಯವಾಗಿಲ್ಲವೇನೋ? ಹೀಗಾಗಿ ಅವರು ಹೇಳದೇ ಉಳಿದ ಮಾತುಗಳನ್ನು ಹೇಳಲು ಇಲ್ಲಿ ಯತ್ನಿಸಿದ್ದೇವೆ. ಅಷ್ಟಾಗಿಯೂ ಈ ಮಟ್ಟಿಗಿನ ನಿರ್ಭೀತ ಬರವಣಿಗೆಗಾಗಿ ಅವರಿಗೊಂದು ಥ್ಯಾಂಕ್ಸ್.
ಕೊನೆಕುಟುಕು: ಡಿನೋಟಿಫಿಕೇಷನ್ ಹಗರಣದಲ್ಲಿ ಸಿಲುಕಿರುವ ಸಚಿವ ವಿ. ಸೋಮಣ್ಣ ಜತೆ ಹಮೀದ್ ಪಾಳ್ಯ ಸುವರ್ಣ ನ್ಯೂಸ್‌ನಲ್ಲಿ ಸಂದರ್ಶನ ನಡೆಸಿದರು. ಹಂಗಾದ್ರೆ ನೀವು ಯಾವುದೇ ಅಪರಾಧ ಎಸಗಿಲ್ಲ, ಅವ್ಯವಹಾರ ನಡೆಸಿಲ್ಲ, ನಿಮ್ಮ ವಿರುದ್ಧದ ಆರೋಪಗಳೆಲ್ಲ ಸುಳ್ಳು ಅಂತ ನೀವು ಹೇಳ್ತೀರಾ.... ಎಂದು ಹಮೀದ್ ಪದೇ ಪದೇ ಸೋಮಣ್ಣಗೆ ಕೇಳುತ್ತಿದ್ದರು. ಸೋಮಣ್ಣ ಹೇಳಬೇಕಾದ ಮಾತುಗಳನ್ನು ಹಮೀದ್ ಯಾಕೆ ಸಜ್ಜೆಸ್ಟ್ ಮಾಡ್ತಾ ಇದ್ರು? ಸೋಮಣ್ಣ ವಿರುದ್ಧ ದೂರು ದಾಖಲಾದ ನಂತರ ಇದು ರಾಜಕೀಯ ಪ್ರೇರಿತ ದೂರು ಎಂಬ ಅರ್ಥದ ವರದಿಯೊಂದು ಕನ್ನಡಪ್ರಭದಲ್ಲಿ ಪ್ರಕಟವಾಗಿತ್ತು. ಸುವರ್ಣದಲ್ಲಿ ಈಗ ಸೋಮಣ್ಣಗೆ ಕ್ಲೀನ್ ಚಿಟ್ ನೀಡುವ ಪ್ರಯತ್ನ ನಡೆದಿದೆ. ಹೀಗಿರುವಾಗ ಲೋಕಾಯುಕ್ತ ಕೋರ್ಟು ಯಾಕೆ ಬೇಕು ಅಲ್ಲವೇ?