ಹೊಸ ಧರ್ಮವೊಂದು ಇದೀಗ ಅಸ್ತಿತ್ವ ಪಡೆದಿದೆ. ಸ್ವೀಡನ್ ದೇಶದ ಸರ್ಕಾರವು ಅದಕ್ಕೀಗ ಅಧಿಕೃತ ಮಾನ್ಯತೆಯನ್ನೂ ನೀಡಿದೆ. ೨೦೧೨ರ ಜನವರಿ ೫ ನೇ ತಾರೀಖಿನಂದು ಸ್ವೀಡನ್ ಸರ್ಕಾರವು ಆಧುನಿಕ ತಂತ್ರಜ್ಞಾನ ಕಾಲದಲ್ಲಿ ಆವಿರ್ಭವಿಸಿರುವ ಈ ಹೊಸ ಧರ್ಮವನ್ನು ಸಂವಿಧಾನಬದ್ಧಗೊಳಿಸಿದೆ. ಇದೀಗ ಈ ಹೊಸಧರ್ಮವನ್ನು ಪ್ರಚಾರಗೊಳಿಸುವ ದೃಷ್ಟಿಯಿಂದ ಒಂದು ಮಿಷನರಿ ಚರ್ಚ್ ಕೂಡಾ ಅಸ್ತಿತ್ವ ಪಡೆದಿದೆ. ಅಂದಹಾಗೆ ಈ ಹೊಸ ಧರ್ಮದ ಹೆಸರು ಕಾಪಿಮಿಸಂ ಅಥವಾ ಕಾಪಿಮಿ ಧರ್ಮ ಎಂದು.
ಈ ಕಾಪಿಮಿಸಂ ತತ್ವ ೨೦೧೦ರಲ್ಲೇ ಅಸ್ತಿತ್ವವನ್ನು ಪಡೆದಿತ್ತು. ಇದರ ಸಂಸ್ಥಾಪಕ ೧೯ ವರ್ಷದ ತತ್ವಶಾಸ್ತ್ರ ವಿದ್ಯಾರ್ಥಿ ಐಸಾಕ್ ಗೆರ್ಸನ್. ಈತ ಹಾಗೂ ಈ ಧರ್ಮದ ಇನ್ನಿತರ ಒಂದು ಸಾವಿರ ಸದಸ್ಯರು ಕಾಪಿಮಿ ಧರ್ಮವನ್ನು ಸಂವಿಧಾನಬದ್ಧಗೊಳಿಸಲು ಸತತವಾಗಿ ಪ್ರಯತ್ನಿಸಿದ್ದರೂ ಎರಡು ಸಲ ವಿಫಲವಾಗಿ ಅಂತಿಮವಾಗಿ ಈಗ ಯಶಸ್ವಿಯಾಗಿದ್ದಾರೆ. ಸ್ವೀಡನ್‌ನ ಸರ್ಕಾರಿ ಸಂಸ್ಥೆ ಕಮ್ಮಾರ್ ಕೊಲಿಜಿಯೆಟ್ ಈಗ ಕಾಪಿಮಿ ಎಂದು ಧರ್ಮ ಎಂದು ಮಾನ್ಯತೆ ನೀಡಿದೆ. ಈಗ ಈ ಧರ್ಮದ ಅಧಿಕೃತ ಸದಸ್ಯರು ಮೂರು ಸಾವಿರ.
ಧರ್ಮ ಎಂದಾಕ್ಷಣ ದೇವರು, ದಿಂಡಿರು, ಪ್ರಾರ್ಥನೆ, ಭಜನೆ ಮುಂತಾದವು ನಿಮ್ಮ ತಲೆಯಲ್ಲಿ ಬಂದಿದ್ದರೆ ಕ್ಷಮಿಸಿ. ಈ ಕಾಪಿಮಿ ಧರ್ಮವಾಗಲೀ ಅದರ ಮಿಷನರಿ ಚರ್ಚ್ ಆಗಲೀ ಇಂತಹ ಯಾವುದನ್ನೂ ಬೋಧಿಸುವುದಿಲ್ಲ, ಪ್ರತಿಪಾದಿಸುವುದೂ ಇಲ್ಲ. ಈ ಕಾಪಿಮಿ ಧರ್ಮದ ಸರಳ ತತ್ವಗಳು ಹೀಗಿವೆ.
* ಪ್ರತಿಯೊಬ್ಬರೂ ಜ್ಞಾನವಂತರಾಗಬೇಕು
* ಜ್ಞಾನಕ್ಕಾಗಿನ ಹುಡುಕಾಟ ಪವಿತ್ರವಾದದ್ದು
* ಒಬ್ಬರಿಂದ ಒಬ್ಬರಿಗೆ ಜ್ಞಾನದ ಪ್ರಸರಣ ಪವಿತ್ರ ಕಾರ್ಯ
* ಕಾಪಿ ಮಾಡುವ ಕ್ರಿಯೆ ಪವಿತ್ರವಾದದ್ದು
* ಮಾಹಿತಿ ಹಾಗೂ ಜ್ಞಾನದ ಸಂವಹನ ಪರಮ ಪವಿತ್ರವಾದದ್ದು.
ಈ ಹಿನ್ನೆಲೆಯಲ್ಲಿ ಕಾಪಿಮಿಸ್ಟ್ ಎಂದು ಕರೆಯಲ್ಪಡುವ ಈ ಮತಾನುಯಾಯಿಯು ಕೆಲವು ನಂಬಿಕೆಗಳನ್ನು ಹೊಂದಿರುತ್ತಾನೆ. ಅವೆಂದರೆ,
* ಯಾವುದೇ ಮಾಹಿತಿಯನ್ನು ಕಾಪಿ ಮಾಡುವುದು ನೈತಿಕವಾಗಿ ಸರಿಯಾದದ್ದು.
* ಯಾವುದೇ ಮಾಹಿತಿಯ ಪ್ರಸರಣವು ನೈತಿಕವಾಗಿ ಸರಿಯಾದ್ದು.
* ಕಾಪಿ ಮಾಡುವುದು ಅದನ್ನು ಹಂಚುವ (ಶೇರಿಂಗ್) ಕ್ರಿಯೆಗಳು ಉದಾತ್ತ ಕ್ರಿಯೆಗಳು.
* ಕಾಪಿಮಿಕ್ಸಿಂಗ್ ಎನ್ನುವುದು ಕಾಪಿ ಮಾಡುವುದರಲ್ಲೇ ಒಂದು ಪವಿತ್ರ ಕಾರ್ಯ. ಏಕೆಂದರೆ ಇದು ಮಾಹಿತಿಯ ಸಂಪತ್ತನ್ನು ವಿಸ್ತಾರಗೊಳಿಸುತ್ತದೆ.
* ಒಬ್ಬ ವ್ಯಕ್ತಿಯಿಂದ ಪಡೆದ ಮಾಹಿತಿಯನ್ನು ಕಾಪಿ ಮಾಡುವುದು ಅಥವಾ ರಿಮಿಕ್ಸ್ ಮಾಡುವುದನ್ನು ಅತ್ಯಂತ ಗೌರವಪೂರಕವಾದ ಕಾರ್ಯವೆಂದು ಪರಿಗಣಿಸಲಾಗುತ್ತದೆ. ಹೀಗೆ ಮಾಡುವುದು ಕಾಪಿಮಿ ನಂಬಿಕೆಗೆ ಸಹಮತವನ್ನು ವ್ಯಕ್ತಪಡಿಸುವುದೆಂದು ಪರಿಗಣಿಸಲಾಗುತ್ತದೆ.
* ಅಂತರ್ಜಾಲವು ಪವಿತ್ರಕ್ಷೇತ್ರ.
ಹಾಗೆಯೇ ಈ ಕಾಪಿಮಿ ಚರ್ಚ್‌ನ ಧಾರ್ಮಿಕ ಚಿನ್ಹೆ ಕಂಟ್ರೋಲ್ ಪ್ಲಸ್ ಸಿ ಮತ್ತು ಕಂಟ್ರೋಲ್ ಪ್ಲಸ್ ವಿ ((CTRL+C ಮತ್ತು CTRL+V) . ಒಂದು ಕಾಪಿ ಮಾಡುವುದನ್ನು ಸೂಚಿಸಿದರೆ ಮತ್ತೊಂದು ಪೇಸ್ಟ್ ಮಾಡುವುದು! ಚರ್ಚ್ ಆಫ್ ಕಾಪಿಮಿಸಂ ಪ್ರಕಾರ ಮಾಹಿತಿ ಪವಿತ್ರ, ಮಾಹಿತಿಯನ್ನು ಕಾಪಿ ಮಾಡುವುದು ಒಂದು ಪವಿತ್ರ ಸಂಸ್ಕಾರ, ಮಾಹಿತಿಯು ತನ್ನಷ್ಟಕ್ಕೆ ತನ್ನೊಳಗೆ ಒಂದು ಮೌಲ್ಯವನ್ನು ಹೊಂದಿರುತ್ತದೆ. ಕಾಪಿ ಮಾಡುವ ಮೌಲಕ ಆ ಮೌಲ್ಯವು ದ್ವಿಗುಣಗೊಳ್ಳುತ್ತದೆ. ಹೀಗಾಗಿ ಈ ಚರ್ಚ್‌ನ ಸಂಸ್ಥೆಗೆ ಮತ್ತು ಸದಸ್ಯರಿಗೆ ಕಾಪಿ ಮಾಡುವುದೇ ಕೇಂದ್ರವಾಗಿರುತ್ತದೆ ಎಂದು ಐಸಾಕ್ ಗೆರ್ಸನ್ ಹೇಳಿಕೆ ನೀಡಿದ್ದಾನೆ. ಈಗ ಸ್ವೀಡನ್‌ನಲ್ಲಿ ಕಾಪಿಮಿ ಚರ್ಚ್‌ನ ಪಾದ್ರಿಯಾದವನಿಗೆ ಇತರ ಚರ್ಚ್‌ಗಳ ರೀತಿಯಲ್ಲಿಯೇ ಗೌಪ್ಯವನ್ನು ಕಾಪಾಡಿಕೊಳ್ಳುವ ಎಲ್ಲಾ ಸಾಂವಿಧಾನಿಕ ಹಕ್ಕುಗಳೂ ಇವೆ.
ಇಡೀ ಜಗತ್ತಿನಲ್ಲಿ ತಂತ್ರಜ್ಞಾನದ ಮೂಲಕ ನಡೆಯುತ್ತಿರುವ ಪೈರಸಿ ಬಗ್ಗೆ ಹಿತಾಸಕ್ತ ಗುಂಪುಗಳು ಬೊಬ್ಬೆಹೊಡೆಯುತ್ತಿರುವ ಸಂದರ್ಭದಲ್ಲಿಯೇ ಹೀಗೊಂದು ಕಾಪಿಮಿ ಧರ್ಮವು ಅಧಿಕೃತವಾಗಿ ಅಸ್ತಿತ್ವ ಪಡೆದಿರುವುದು ಕುತೂಹಲಕಾರಿಯಾಗಿದೆ. ಅಮೆರಿಕವು ಇತ್ತೀಚೆಗೆ ಪೈರಸಿಯನ್ನು ತಡೆಗಟ್ಟಲು ಸೋಪಾ ಎನ್ನುವ ಕಾಯ್ದೆಯನ್ನು ಜಾರಿ ಮಾಡಿದೆ. ಹಲವಾರು ಸರ್ಕಾರಗಳು ಸಹ ಇಂತದೇ ಕಾನೂನುಗಳನ್ನು ತಂದು ಪೈರಸಿ ಮಾಡುವವರನ್ನು ಹತ್ತಿಕ್ಕುವ ಕಾರ್ಯ ರಭಸವಾಗಿ ನಡೆಯುತ್ತಿದೆ. ಅಂತರ್ಜಾಲವು ಕರುಣಿಸಿದ ಅವಕಾಶಗಳ ಕಾರಣದಿಂದಾಗಿ ಜಾಗತಿಕ ಮಟ್ಟದಲ್ಲಿ ಪೈರಸಿ ಎನ್ನುವುದು ತಡೆರಹಿತವಾಗಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ ದೊಡ್ಡ ದೊಡ್ಡ ಉದ್ದಿಮೆಗಳು ಈ ಪೈರಸಿಯಿಂದ ಘಾಸಿಗೊಂಡಿದ್ದರಲ್ಲದೇ ಸರ್ಕಾರಗಳ ಮೇಲೆ ಒತ್ತಡ ತಂದು ಪೈರಸಿ ವಿರೋಧಿ ಕಾಯ್ದೆಗಳನ್ನು ಜಾರಿಗೊಳಿಸಿದ್ದರು. ಈ ಬಗೆಯ ಪೈರಸಿಯಿಂದಾಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಹೊಂದುವ ಕೃತಿಸ್ವಾಮ್ಯಕ್ಕೆ (ಕಾಪಿರೈಟ್) ಧಕ್ಕೆಯಾಗುತ್ತದಲ್ಲದೆ ಯಾವುದೇ ಉತ್ಪನ್ನದ ತಯಾರಿಕರಿಗೆ ಅದರಿಂದ ಬರುವ ಲಾಭದ ಅವಕಾಶ ಕಡಿಮೆಯಾಗುತ್ತದೆ. ಹಾಗೆಯೇ ಇಂತಹ ಪೈರಸಿ ಯಾವುದೇ ಉತ್ಪನ್ನವನ್ನು ಕಂಡು ಹಿಡಿದವರ ಪ್ರತಿಭೆಯನ್ನು ಗೌಣಗೊಳಿಸುತ್ತದೆ ಎನ್ನುವುದು ಪೈರಸಿ ವಿರೋಧಿಗಳ ವಾದ.
ಈ ಮೇಲಿನ ವಾದದ ಬಗ್ಗೆ ಜಾಗತಿಕ ಮಟ್ಟದಲ್ಲಿ ಹಲವಾರು ಚರ್ಚೆಗಳು ನಡೆದಿವೆ. ಕಾಪಿರೈಟ್ ತತ್ವಕ್ಕೆ ವಿರುದ್ಧವಾಗಿ ಕಾಪಿಲೆಫ್ಟ್ ತತ್ವವೂ ಜಾರಿಯಲ್ಲಿದೆ. ಅಂತರ್ಜಾಲದಲ್ಲಿ ಏಕಸ್ವಾಮ್ಯವನ್ನು ವಿರೋಧಿಸುವ ನಿಟ್ಟಿನಲ್ಲಿ ಈ ಕಾಪಿಲೆಫ್ಟ್ ತತ್ವಾನುಯಾಯಿಗಳು ಕೆಲವಾರು ಉಚಿತ ಸಾಫ್ಟ್‌ವೇರ್‌ಗಳನ್ನು ಅಭಿವೃದ್ಧಿ ಪಡಿಸಿದ್ದಾರೆ. ಇದೊಂದು ಬಗೆಯ ಆಂದೋಲನವಾಗಿಯೇ ಇದೆ.
ಇಂತಹ ಜಾಗತಿಕ ಮಟ್ಟದ ಆಂದೋಲನಕ್ಕೆ ಈಗ ಹೊಸ ಸೇರ್ಪಡೆಯಾಗಿರುವುದು ಕಾಪಿಮಿ ಮತ. ಈ ಕಾಪಿಮಿ ಮತಾನುಯಾಯಿಗಳು ತಮ್ಮ ಮತದ ಸಮರ್ಥನೆಗೆ ಬೈಬಲ್‌ನಲ್ಲಿನ ಒಂದು ಪದಪುಂಜವನ್ನು ಬಳಸಿಕೊಳ್ಳುತ್ತಿದ್ದಾರೆ. ಅದು ಹೀಗಿದೆ.
ನಾನು ಏಸುವನ್ನು ಹೇಗೆ ಕಾಪಿ ಮಾಡುತ್ತೇನೋ ಹಾಗೆಯೇ ನನ್ನನ್ನು ಕಾಪಿ ಮಾಡಿ, ನನ್ನ ಸಹೋದರರೇ(Copy me, my brothers, just as I copy Christ himself — 1 Corinthians 11:1) ಜಗತ್ತಿನ ಯಾವುದೇ ಮಾಹಿತಿಯನ್ನು ಯಾರೂ ಸಹ ನಿರ್ಬಂಧಿಸುವುದು ಸರಿಯಲ್ಲ; ಎಲ್ಲಾ ಮಾಹಿತಿಯೂ ತಡೆರಹಿತವಾಗಿ, ಮುಕ್ತವಾಗಿ ಪ್ರಸಾರ ಹೊಂದಬೇಕು ಎನ್ನುವುದು ಕಾಪಿಮಿ ತತ್ವದ ಸಾರಾಂಶ. ಅದು ಯಾವುದೇ ಸ್ವರೂಪದಲ್ಲಿರಲಿ ಜ್ಞಾನದ ಖಾಸಗೀಕರಣವನ್ನು, ಏಕಸ್ವಾಮ್ಯವನ್ನು ಕಾಪಿಮಿ ವಿರೋಧಿಸುತ್ತದೆ. ಹೀಗಾಗಿಯೇ ಅದು ಸಂಗೀತ, ಸಿನಿಮಾ, ಟಿವಿ ಷೋ, ಸಾಫ್ಟ್‌ವೇರ್ ಇನ್ನಿತರೆ ಯಾವುದೇ ಮಾಧ್ಯಮದ ಪೈರಸಿಯನ್ನು ಕಾಪಿಮಿ ಪ್ರೇರೇಪಿಸುತ್ತದೆ. ನಾವು ಕಾಪಿರೈಟ್‌ನಲ್ಲಿ ನಂಬಿಕೆಯಿಟ್ಟವರಿಗೆ ಸವಾಲೊಡ್ಡಲಿದ್ದೇವೆ, ಇಂದು ಈ ಕಾಪಿರೈಟ್ ಬೆಂಬಲಿಗರು ರಾಜಕೀಯದಲ್ಲಿ ಬಹಳ ಪ್ರಭಾವವುಳ್ಳವರಾಗಿದ್ದಾರಲ್ಲದೇ, ಅವರು ಜನರ ಬದುಕು ಮತ್ತು ಸ್ವಾತಂತ್ರ್ಯಗಳನ್ನು ನಿರ್ಬಂಧಿಸುವ ಮೂಲಕವೇ ತಮ್ಮ ಅಧಿಕಾರವನ್ನು ಸ್ಥಾಪಿಸಿಕೊಂಡಿದ್ದಾರೆ. ಅವರೆಲ್ಲಾ ಜ್ಞಾನವನ್ನು ಸೀಮಿತಗೊಳಿಸಲು ಹೊರಟಿದ್ದಾರೆ. ಅಂತವರ ದ್ವೇಷ ಮತ್ತು ಆಕ್ರಮಣಗಳನ್ನು ನಾವು ಎದುರಿಸಬೇಕಾಗಿದೆ. ಕಾಪಿ, ಡೌನ್‌ಲೋಡ್, ಅಪ್‌ಲೋಡ್!, ಎಲ್ಲರಿಗೂ ಎಲ್ಲಾ ಜ್ಞಾನ ಲಭಿಸಲಿ! ಮಾಹಿತಿ ತಂತ್ರಜ್ಞಾನವಿರುವುದು ಕಾನೂನಿನಿಂದ ನಿರ್ಬಂಧಿಸಲು ಅಲ್ಲ ಎಂದು ಈಗ ಕಾಪಿಮಿಸ್ಟ್‌ಗಳು ಘಂಟಾಘೋಷವಾಗಿ ಸಾರುತ್ತಿದ್ದಾರೆ.
ಮನುಷ್ಯನ ಜ್ಞಾನದ ಮೇಲೆ ಹಕ್ಕು ಚಲಾಯಿಸಲು ಹೊರಟಿದ್ದಾಗಲೀ, ಕಾಪಿರೈಟ್‌ನಂತಹ ಪರಿಕಲ್ಪನೆಗಳು ಬಂದಿದ್ದೇ ಕೈಗಾರಿಕಾ ಕ್ರಾಂತಿಯ ನಂತರದಲ್ಲಿ. ಎಲ್ಲವನ್ನೂ ಲಾಭದ ದೃಷ್ಟಿಯಿಂದಲೇ ನೋಡಲು ಶುರುವಾದದ್ದೇ ಜ್ಞಾನವನ್ನೂ ಲಾಭಕ್ಕಾಗಿ ಬಳಸಿಕೊಳ್ಳಲಾಯಿತು. ಇಂದು ನಾವು ಯಾವುದೇ ಜ್ಞಾನವನ್ನು ತೆಗೆದುಕೊಂಡರೂ ಅದು ಒಬ್ಬ ವ್ಯಕ್ತಿಯಿಂದ ಬಂದಿರುವುದಾಗಿರುವುದಿಲ್ಲ. ಒಬ್ಬ ವ್ಯಕ್ತಿಯೂ ಪ್ರತಿಭೆಯೂ ಕೂಡಾ ಸಮಾಜದ ಕೊಡುಗೆಯೇ ಅಗಿದೆ. ಪ್ರಪಂಚದ ಎಲ್ಲಾ ಜ್ಞಾನವೂ ಸಾಮೂಹಿಕ ಸೃಷ್ಟಿಯೇ ಅಲ್ಲವೇ? ಯಾವುದೇ ಒಂದು ಸಾಧನೆಯಲ್ಲಿ ಒಬ್ಬ ವ್ಯಕ್ತಿಯ ವಿಶೇಷ ಪ್ರಯತ್ನಗಳು ಖಂಡಿತಾ ಇರುತ್ತದೆ. ಆದರೆ ಹಾಗಂತ ಆ ವ್ಯಕ್ತಿ ತನಗಿರುವ ಪ್ರತಿಭೆಯನ್ನೆಲ್ಲಾ ತನ್ನದೇ ಸ್ವತ್ತು ಎಂದು ಹೇಳುವುದು ಆತನಿಗಿರುವ ಸ್ವಾರ್ಥ ಭಾವನೆಯಿಂದ ಮಾತ್ರ. ಜಗತ್ತಿನ ಎಲ್ಲಾ ಮಾಹಿತಿ, ಜ್ಞಾನ ಪ್ರತಿಭೆಗಳೂ ಸಹ ಮನುಕುಲದ ಸಾಮೂಹಿಕ ಶ್ರಮದ ಉತ್ಪನ್ನಗಳು ಎಂದು ಪರಿಣಿಸಿದಾಗ ಕಾಪಿರೈಟ್ ಎನ್ನುವುದು ಕೆಲವೇ ಜನರ ಲಾಭಕ್ಕಾಗಿ ಹುಟ್ಟಿಕೊಂಡ ತತ್ವ ಎಂದು ತೋರುತ್ತದೆ. ಈ ನಿಟ್ಟಿನಲ್ಲಿ ವಾದಿಸುವ ಕಾಪಿಮಿ ಅತ್ಯಂತ ಕ್ರಾಂತಿಕಾರಿಯಾಗಿ ಕಾಣುತ್ತದೆ.
ಜಗತ್ತಿನ ಚರಿತ್ರೆಯಲ್ಲಿ ಯಾವುದೇ ಒಬ್ಬ ವ್ಯಕ್ತಿಯ ಅಥವಾ ಗುಂಪಿನ ಮೇಲೆ ದಿಗ್ಭಂಧನ, ದಮನಗಳು ಹೆಚ್ಚಿದಾಗ ಆ ಗುಂಪು ಧರ್ಮದ ಆಸರೆ ಪಡೆದಿರುವುದನ್ನು ಕಾಣುತ್ತೇವೆ. ಅಂತರ್ಜಾಲದಲ್ಲಿ ಪೈರಸಿಯನ್ನು ಪ್ರಚೋದಿಸುವವರ ಮೇಲೆ ಸರ್ಕಾರಗಳು ಈಗಾಗಲೇ ದಮನವನ್ನಾರಂಭಿಸಿದ್ದೇ ಅಲ್ಲದೆ ಅಂತವರನ್ನು ಜೈಲಿಗಟ್ಟುವ ಕ್ರಿಯೆಯೂ ಆರಂಭವಾಗಿತ್ತು. ಈ ಹಿನ್ನೆಲೆಯಲ್ಲಿ ಅಂತಹ ದಮನಗಳಿಂದ ತಪ್ಪಿಸಿಕೊಳ್ಳುವ ಸಲುವಾಗಿ, ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಈಗ ಸ್ವೀಡನ್‌ನ ಯುವಕರು ಈಗ ತಮ್ಮ ಕೃತ್ಯಗಳಿಗೆ ತತ್ವಶಾಸ್ತ್ರದ ಆಸರೆ ಪಡೆದು ಅದನ್ನೊಂದು ಪ್ರತ್ಯೇಕ ಧರ್ಮವಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ಕಾಪಿಮಿಸ್ಟರು ತಮ್ಮ ಧರ್ಮವು ಕಾನೂನು ಬಾಹಿರ ಕೃತ್ಯಗಳನ್ನು ಬೆಂಲಿಸುವುದಿಲ್ಲ ಎಂದೂ ಹೇಳಿದ್ದಾರೆ.
ಅಂತರ್ಜಾಲದ ದೆಸೆಯಿಂದ ಪೈರಸಿ ಎನ್ನುವುದು ಜಗತ್‌ವ್ಯಾಪಿಯಾಗಿರುವ ಹಿನ್ನೆಲೆಯಲ್ಲಿ ಈ ತತ್ವಕ್ಕೆ ಮುಂದಿನ ದಿನಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿ ಇತರೆ ದೇಶಗಳಲ್ಲಿಯೂ ಇಂತಹುದೇ ಧರ್ಮಗಳು ಸ್ಥಾಪನೆಯಾದರೂ ಅಚ್ಚರಿಯಿಲ್ಲ.
-ಶಿವಪುತ್ರ.ಪಿ.ಆರ್.