Saturday, February 11, 2012

ಪಬ್ಲಿಕ್ ಟಿವಿಯ ಮೂಲಕ ರಂಗಣ್ಣ ಆಕ್ಟಿವಿಸಂ ಮಾಡಲಿದ್ದಾರೆಯೇ?


ಕನ್ನಡ ಮಾಧ್ಯಮ ರಂಗದಲ್ಲಿ ಈ ವರ್ಷ ನಿರೀಕ್ಷಿಸಲಾಗುತ್ತಿರುವ ಎರಡು ಮಹತ್ವದ ಬೆಳವಣಿಗೆಗಳಲ್ಲಿ ಒಂದರ ಮುಹೂರ್ತ ನಾಳೆಗೆ ನಿಗದಿಯಾಗಿದೆ. ವಿಜಯ ಸಂಕೇಶ್ವರರ ಬಹುನಿರೀಕ್ಷಿತ ವಿಜಯವಾಣಿ ಪತ್ರಿಕೆಯ ಆರಂಭ ಇನ್ನೇನು ಸದ್ಯದಲ್ಲೇ ಆಗಲಿದೆ. ಅದಕ್ಕೂ ಮುನ್ನ ನಾಳೆ (ಫೆಬ್ರವರಿ ೧೨) ಪತ್ರಕರ್ತ ಎಚ್.ಆರ್.ರಂಗನಾಥ್ ಅವರ ಪಬ್ಲಿಕ್ ಟಿವಿ ಆರಂಭಗೊಳ್ಳುತ್ತಿದೆ. ಕನ್ನಡ ಮಾಧ್ಯಮ ರಂಗಕ್ಕೆ  ಇವೆರಡೂ ಹೊಸ ಸೇರ್ಪಡೆಗಳು. ಈ ಎರಡರ ಕುರಿತೂ ಮಾಧ್ಯಮ ರಂಗದಲ್ಲಿ ವಿಪರೀತ ನಿರೀಕ್ಷೆಗಳಿವೆ.

ಎಚ್.ಆರ್.ರಂಗನಾಥ್ ಪಬ್ಲಿಕ್ ಟಿವಿಯ ಪ್ರಧಾನ ಸಂಪಾದಕ ಮಾತ್ರವಲ್ಲ, ಪಬ್ಲಿಕ್ ಟಿವಿಯನ್ನು ಆರಂಭಿಸುತ್ತಿರುವ ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಹಾಗು ಅಧ್ಯಕ್ಷರೂ ಹೌದು. ಅರುಣ್ ಕುಮಾರ್ ಕಾರ್ಯ ನಿರ್ವಾಹಕ ಅಧಿಕಾರಿಯಾಗಿ, ದಿವಾಕರ್ ಉಪಾಧ್ಯಕ್ಷರಾಗಿ ಈ ಸಂಸ್ಥೆಯ ಹೊಣೆ ಹೊತ್ತಿದ್ದಾರೆ.

ಟಿವಿ ಚಾನಲ್‌ಗಳನ್ನು ಆರಂಭಿಸುವವರು ದೊಡ್ಡ ಪ್ರಮಾಣದ ಉದ್ಯಮಿಗಳೇ ಆಗಿರಬೇಕು ಎಂಬ ಮಾತಿದೆ. ಯಾಕೆಂದರೆ ಟಿವಿ ಚಾನಲ್ ಗಳದ್ದು ಬಕಾಸುರನ ಹೊಟ್ಟೆ. ಎಷ್ಟು ಹಣ ಸುರಿದರೂ ಅದು ತಿನ್ನುತ್ತದೆ. ಈ ಮಿಥ್ ಒಡೆಯುವ ಯತ್ನದಲ್ಲಿ ರಂಗನಾಥ್ ಇದ್ದಾರೆ. ಮೊದಲ ಬಾರಿಗೆ ಪತ್ರಕರ್ತನಾಗಿಯೇ ಈ ಸಾಹಸಕ್ಕೆ ಕೈಹಾಕಿದ್ದಾರೆ. ಚಾನಲ್‌ಗಳಿಗೆ ಹೂಡಲಾಗುವ ಬಂಡವಾಳ ಬೇಕಾಬಿಟ್ಟಿ ಸೋರಿಕೆಯಾಗುವುದೇ ಹೆಚ್ಚು. ಈ ದುಂದುವೆಚ್ಚವನ್ನು ತಡೆಗಟ್ಟಿದರೆ ದೊಡ್ಡ ಪ್ರಮಾಣದ ಬಂಡವಾಳ ಬೇಕಾಗಿಲ್ಲ ಎಂಬುದು ರಂಗನಾಥ್ ನಂಬುಗೆ. ಚಾನಲ್ ಕಟ್ಟುವ ಕೆಲಸದ ಜತೆಗೆ ರಂಗನಾಥ್ ಅದಕ್ಕೆ ಬೇಕಾದ ಬಂಡವಾಳವನ್ನೂ ಸಂಗ್ರಹಿಸಿ ಅಖಾಡಕ್ಕೆ ಇಳಿದಿದ್ದಾರೆ. ಇದು ಒಂದು ಬಗೆಯ ಸಾಹಸ. ಎಷ್ಟು ಪ್ರಮಾಣದಲ್ಲಿ ಯಶಸ್ಸು ಅವರಿಗೊಲಿಯುತ್ತದೆ ಎಂಬುದನ್ನು ಕಾದು ನೋಡಬೇಕು.

ಎಚ್.ಆರ್.ರಂಗನಾಥ್ ಕನ್ನಡಪ್ರಭದ ಸಂಪಾದಕರಾಗಿದ್ದಾಗ ರಾಜಕೀಯ ವಿಶ್ಲೇಷಕರಾಗಿ ನ್ಯೂಸ್ ಚಾನಲ್‌ಗಳ ಪ್ಯಾನೆಲ್‌ನಲ್ಲಿ ಬಂದು ಕೂರುತ್ತಿದ್ದರು. ಟಿವಿ ಮೀಡಿಯಾಗೆ ಹೇಳಿ ಮಾಡಿಸಿದ ವ್ಯಕ್ತಿ ಎಂದು ಸಾಕಷ್ಟು ಮಂದಿಗೆ ಅನ್ನಿಸಿದ್ದು ಸುಳ್ಳಲ್ಲ. ರಂಗನಾಥ್ ಕಡೆಗೊಮ್ಮೆ ಸುವರ್ಣ ನ್ಯೂಸ್ ಮುಖ್ಯಸ್ಥರಾಗಿ ಬಂದರು. ಒಂದಷ್ಟು ಜನಪ್ರಿಯತೆಯನ್ನೂ ಪಡೆದರು. ಸುವರ್ಣದಲ್ಲಿ ಅವರು ಹೆಚ್ಚು ಕಾಲ ಇರಲು ಸಾಧ್ಯವಾಗಲಿಲ್ಲ. ಹೊರಬಂದ ನಂತರ ಅವರ ತಲೆಹೊಕ್ಕಿದ್ದು ಪಬ್ಲಿಕ್ ಟಿವಿಯ ಕನಸು.

ಈಗಾಗಲೇ ಆರು ನ್ಯೂಸ್ ಚಾನಲ್ ಗಳು ಕನ್ನಡದಲ್ಲಿವೆ. ಟಿವಿ೯, ಉದಯ ನ್ಯೂಸ್, ಸುವರ್ಣ ನ್ಯೂಸ್, ಸಮಯ ನ್ಯೂಸ್, ಜನಶ್ರೀ ನ್ಯೂಸ್ ಹಾಗು ಕಸ್ತೂರಿ ನ್ಯೂಸ್‌ಗಳು ಚಾಲ್ತಿಯಲ್ಲಿವೆ. ಇವುಗಳ ನಡುವೆ ಏಳನೇ ಚಾನಲ್ ಆಗಿ ಪಬ್ಲಿಕ್ ಟಿವಿ ಬರುತ್ತಿದೆ. ಈ ಎಲ್ಲ ಚಾನಲ್‌ಗಳಿಗಿಂತ ಭಿನ್ನವಾಗಿ ಪಬ್ಲಿಕ್ ಟಿವಿ ಏನನ್ನಾದರೂ ಮಾಡಲು ಸಾಧ್ಯವೇ? ಟಿಆರ್‌ಪಿ ಕದನದಲ್ಲಿ ಪಬ್ಲಿಕ್ ಟಿವಿ ಗೆಲ್ಲಬಹುದೇ? ಕಾದು ನೋಡಬೇಕು.

ಹಿಂದೆ ಸುವರ್ಣ ನ್ಯೂಸ್ ನಲ್ಲಿದ್ದಾಗ ಪಬ್ಲಿಕ್ ವಾಯ್ಸ್ ಎಂಬ ಕಾರ್ಯಕ್ರಮವೊಂದನ್ನು ಎಚ್.ಆರ್.ರಂಗನಾಥ್ ನಡೆಸುತ್ತಿದ್ದರು. ವರ್ತಮಾನದ ಬೆಳವಣಿಗೆಗಳ ಕುರಿತು ಸಾರ್ವಜನಿಕರ ಜತೆ ಸಂವಾದಿಸುವ ಕಾರ್ಯಕ್ರಮ ಅದು. ಅದಕ್ಕೆ ಒಳ್ಳೆಯ ಪ್ರತಿಕ್ರಿಯೆಯೂ ಲಭ್ಯವಾಗಿತ್ತು. ರಂಗನಾಥ್ ಸಾರ್ವಜನಿಕರೊಂದಿಗೆ ಸಂವಾದವನ್ನೂ ಕೌನ್ಸಿಲಿಂಗ್ ಧಾಟಿಯಲ್ಲಿ ನಡೆಸಿ ರಾಜಕಾರಣ, ಪ್ರಚಲಿತ ವಿದ್ಯಮಾನಗಳು ಹಾಗು ಸಾಮಾಜಿಕ ಸಮಸ್ಯೆಗಳನ್ನು ವೀಕ್ಷಕರಿಗೆ ಅರ್ಥ ಮಾಡಿಸಲು ಯತ್ನಿಸುತ್ತಿದ್ದರು.

ಈಗ ರಂಗನಾಥ್ ಪಬ್ಲಿಕ್ ಟಿವಿಯ ಜತೆ ಬಂದಿದ್ದಾರೆ. ಆರಂಭದ ಜಾಹೀರಾತುಗಳನ್ನು ಗಮನಿಸಿದರೆ ತಮ್ಮ ಚಾನಲನ್ನು ಸಾರ್ವಜನಿಕರ ಟಿವಿಯನ್ನಾಗಿಸುವ ಉಮ್ಮೇದು ಅವರಿಗಿದ್ದಂತಿದೆ. ಇತರ ಚಾನಲ್‌ಗಳು ರಾಜಕಾರಣಿಗಳ ಚಾನಲ್‌ಗಳಾಗಿರುವುದನ್ನು ಅವರ ಜಾಹೀರಾತುಗಳು ಪರೋಕ್ಷವಾಗಿ ಲೇವಡಿ ಮಾಡುತ್ತವೆ. ತಮ್ಮ ಚಾನಲ್ ಯಾರ ಆಸ್ತಿಯೂ ಅಲ್ಲ, ಜನರದ್ದು ಎಂದು ಹೇಳುವ ಹಿನ್ನೆಲೆಯಲ್ಲಿ ತಮ್ಮದು ಸ್ವತಂತ್ರ ಕಾರ್ಯನಿರ್ವಹಣೆಯ ಚಾನಲ್ ಎಂದು ಹೇಳುವ ಉದ್ದೇಶವೂ ಇದ್ದಂತಿದೆ.

ಎಲ್ಲ ಸರಿ, ಆದರೆ ಈ ಆಕ್ಟಿವಿಸಂ ವರ್ಕ್ ಔಟ್ ಆಗುತ್ತದೆಯೇ ಎಂಬುದು ಮುಖ್ಯ ಪ್ರಶ್ನೆ. ಚಾನಲ್ ಸೊಗಸಾಗಿ ತರುವುದೊಂದೇ ಅದರ ಯಶಸ್ಸಿಗೆ ಮಾರ್ಗವಾಗುವುದಿಲ್ಲ. ಟಿವಿ ಚಾನಲ್‌ಗಳು ಕೇಬಲ್ ಆಪರೇಟರ್‌ಗಳನ್ನು ಒಲಿಸಿಕೊಳ್ಳಬೇಕು. ಅವರಿಗೆ ಕಾಲಕಾಲಕ್ಕೆ ದಕ್ಷಿಣೆ ನೀಡಬೇಕು. ಕೆಲವು ಕೇಬಲ್ ನೆಟ್ ವರ್ಕ್‌ಗಳು ನೇರವಾಗಿ ಎದುರಾಳಿ ಚಾನಲ್‌ಗಳ ಮಾಲೀಕರ ನಿಯಂತ್ರಣದಲ್ಲೇ ಇವೆ. ಹೀಗಾಗಿ ಪ್ರೈಮ್ ಬ್ಯಾಂಡ್ ನಲ್ಲಿ ಚಾನಲ್ ಪ್ರಸಾರವಾಗುವಂತೆ ನೋಡಿಕೊಳ್ಳುವುದು ಸುಲಭದ ವಿಷಯವಲ್ಲ. ಕನೆಕ್ಟಿವಿಟಿ ಇಲ್ಲದಿದ್ದರೆ ಚಾನಲ್ ಸಿಬ್ಬಂದಿ ಎಷ್ಟೇ ಹೆಣಗಾಡಿದರೂ ಟಿಆರ್‌ಪಿ ಗಿಟ್ಟುವುದಿಲ್ಲ. ಆರಂಭದಲ್ಲಿ ಸುವರ್ಣ ನ್ಯೂಸ್ ಈ ಸಮಸ್ಯೆಗೆ ಬಳಲಿ ಹೋಗಿತ್ತು, ಈಗ ಸಮಯ ಟಿವಿ ಇನ್ನೂ ಕನೆಕ್ಟಿವಿಟಿಯ ಸಮಸ್ಯೆಯಿಂದ ಹೊರಗೆ ಬಂದಿಲ್ಲ.

ಎಲ್ಲ ಸರಿ ಮಾಡಿಕೊಂಡು ಚಾನಲ್ ಆರಂಭಿಸಿದರೂ, ಮಾಡಿದ ಕಾರ್ಯಕ್ರಮಗಳು ಜನರಿಗೆ ಇಷ್ಟವಾಗಬೇಕು. ಜನರ ಇಷ್ಟಗಳೆಲ್ಲವೂ ಒಳ್ಳೆಯ ಅಭಿರುಚಿಯದ್ದೇ ಆಗಿರಬೇಕಿಲ್ಲ. ಸ್ಪರ್ಧೆ ಮಾಡುವ ಚಾನಲ್‌ಗಳು ನಡೆಸುವ ಚೀಪ್ ಗಿಮಿಕ್‌ಗಳನ್ನು ಅನಿವಾರ್ಯವಾಗಿ ಅನುಸರಿಸುವ ಸಂದರ್ಭಗಳೂ ಬರಬಹುದು. ಇಲ್ಲಿ ಆದರ್ಶ, ಸಾಮಾಜಿಕ ಕಳಕಳಿ ಇಂಥವಕ್ಕೆ ಅರ್ಥಗಳು ಉಳಿದಿಲ್ಲ.

ಪಬ್ಲಿಕ್ ಟಿವಿಯ ಹೆಸರಲ್ಲಿ ಬರುತ್ತಿರುವ ರಂಗಣ್ಣ ಎದುರಿಸಬೇಕಾದ ಸಮಸ್ಯೆಗಳು ಇವು. ಅವರಿಗೆ ಯಶಸ್ಸಾಗಲಿ. ನಿಜಕ್ಕೂ ಅದು ಜನರ ಟಿವಿಯಾಗಲಿ.

15 comments:

  1. ರಂಗಣ್ಣನಿಗೆ ಶುಭವಾಗಲಿ....

    ReplyDelete
  2. Dear Sampadakeeya team members..I was expecting some fair observation on Public Tv. Y u didn't mention about proposed astrology prog? that promo itself is very bad...makkalagilla, samsara tapatraya!!!! I think Ranganna is not going on a different path!!!! just following the trusted gimmicks

    ReplyDelete
  3. ಶುಭಕಾಮನೆಗಳು,
    ರ೦ಗನಾಥ್, ಸುವರ್ಣದಲ್ಲಿದ್ದಾಗ ಅದರ ಖದರೇ ಬೇರೆ ಇತ್ತು! ಈಗದನ್ನು ಎದಿರಿಟ್ಟು ಕೂತು ಬಿಡವ ಅಭ್ಯಾಸ ಆದದ್ದೇ ರ೦ಗನಾಥ್ ಚಿಮುಕಿಸಿದ ಶಬ್ಧ ಭಸ್ಮದಿ೦ದ!! ಹಾಗಾಗಿ ಧೈರ್ಯ, ಪಬ್ಲಿಕ್ ಟಿವಿ ಕ್ಲಿಕ್ ಆಗೇ ಆಗುತ್ತೆ. ಆದರೆ ರ೦ಗಣ್ಣ ನೂರೆ೦ಟು ಕೋಟಿ ಅಕ್ರಮವಾಗಿ ಗಳಿಸಿಟ್ಟಿದ್ದಾರೆ೦ದು ಕೆಲವರು ಹೇಳುತ್ತಿರುವುದು ಸತ್ಯವೇ? ....ಅವರ ಸದಾಚಾರ ಬೋಧಿಸುವ ಧಾಟಿ, ಗತ್ತು ನನಗೆ ತು೦ಬಾ ಇಷ್ಟ.‘

    ReplyDelete
  4. ಹೆಚ್. ಆರ್. ರಂಗನಾಥ್ ಅವರು ಮಾಧ್ಯಮ ಮೌಲ್ಯಗಳನ್ನು ಎತ್ತಿ ಹಿಡಿಯಲು ಉಳಿದ ರಾಜಕೀಯ ಹಿನ್ನೆಲೆಯ ಅಥವಾ ಬಂಡವಾಳಗಾರರ ಮಾಲಿಕತ್ವದ ವಾಹಿನಿಗಳಿಗಿಂತ ಮುಂದೆ ಹೆಜ್ಜೆ ಇಡಬೇಕಾಗಿದೆ. ಇಲ್ಲದಿದ್ದರೆ ಇನ್ನೊಂದು ಸುದ್ದಿ ವಾಹಿನಿಯ ಅಗತ್ಯ ಕನ್ನಡಕ್ಕೆ ಇಲ್ಲ. ಜನರ ಧ್ವನಿಯನ್ನು ಎತ್ತಿ ಹಿಡಿಯುವ ಕೆಲಸ ಪಬ್ಲಿಕ್ ಟಿವಿ ಮಾಡಿದರೆ ಅದನ್ನು ಎತ್ತಿ ಹಿಡಿಯುವ ಕೆಲಸವನ್ನು ಜನರೇ ಮಾಡಬೇಕು. ಇಂದು ಗ್ರಾಮಾಂತರ ಪ್ರದೇಶಗಳಲ್ಲಿ ಡಿ.ಟಿ. ಎಚ್. ಮೂಲಕವೇ ವಾಹಿನಿಗಳು ತಲುಪುತ್ತಿರುವುದರಿಂದಾಗಿ ಡಿ.ಟಿ. ಎಚ್. ಪ್ಲಾಟ್ ಫಾರಂ ನಲ್ಲಿ ಪಬ್ಲಿಕ್ ಟಿವಿ ಬರುವಂತೆ ಮಾಡಿದರೆ ಕೇಬಲ್ ಆಪರೆಟರ್ ಒಂದನ್ನೇ ನೆಚ್ಚುವುದನ್ನು ಕಡಿಮೆ ಮಾಡಬಹುದು. ಗ್ರಾಮಾಂತರ ಪ್ರದೇಶದಲ್ಲಿ ಶೇಕಡಾ ೬೦ ಜನ ಇರುವುದರಿಂದಾಗಿ ಇದನ್ನು ಕಡೆಗಣಿಸಲಾಗದು. ಸ್ಪರ್ಧೆಯಲ್ಲಿ ನಿಂತು ಅಸ್ತಿತ್ವ ಉಳಿಸಿಕೊಂಡು ಜನಪರ ನಿಲುವನ್ನು ಎತ್ತಿ ಹಿಡಿಯಲು ಕೆಲವು ಗಿಮಿಕ್ಕುಗಳನ್ನು ಮಾಡಿದರೂ ತಪ್ಪಲ್ಲ ಆದರೆ ಜನಪರ ಕಾಳಜಿ ಯಾವಾಗಲೂ ಇರಬೇಕು. ಪರ್ತಕರ್ತರೊಬ್ಬರ ಈ ಸಾಹಸಕ್ಕೆ ಜಯವಾಗಲೆಂದು ಹಾರೈಕೆ. ದೇಶ ಹಾಗೂ ರಾಜ್ಯದ ಹಿತ ದೃಷ್ಟಿಯಿಂದ ಇಂಥ ಪ್ರಯತ್ನವೊಂದು ಆಗಲೇಬೇಕಾಗಿತ್ತು. ಈ ಪ್ರಯತ್ನಕ್ಕೆ ಮುಂದೆ ಬಂದ ರಂಗನಾಥ್ ಅವರಿಗೆ ಜನರ ಪರವಾಗಿ ಧನ್ಯವಾದಗಳು.- ಆನಂದ ಪ್ರಸಾದ್

    ReplyDelete
  5. ಚಿನ್ನಾಗನಹಳ್ಳಿ ಹರೀಶFebruary 11, 2012 at 8:45 PM

    ಸುದ್ದಿಗಳನ್ನು ಅತಿರಂಜಿತವಾಗಿ ಪ್ರದರ್ಶಿಸಿ ಜನರ ದಿಕ್ಕು ತಪ್ಪಿಸುತ್ತಿರುವ ಚಾನಲ್ಗಳಿಗೆ ಹೊರತಾಗಿ ಕೇವಲ ವಿಷಯಗಳನ್ನು ಜನರಿಗೆ ಸರಿಯಾಗಿ ಮುಟ್ಟಿಸುವ ಸಮಾಜಮುಖಿ ಚ್ಯಾನಲ್ ಆಗಿ ಪಬ್ಲಿಕ್ ಟಿ.ವಿ ಮೂಡಿ ಬರಲಿ ಎಂದು ಆಶಿಸುತ್ತೇನೆ. ರಂಗನಾಥ್ ರವರಿಗೆ ಶುಭವಾಗಲಿ.

    ReplyDelete
  6. ಕೆ.ಆರ್.ರವಿಕಿರಣ್, ದೊಡ್ಡಬಳ್ಳಾಪುರFebruary 11, 2012 at 11:39 PM

    ರಂಗನಾಥ್ ಸರ್್ಗೆ ಯಶಸ್ಸು ಸಿಕ್ಕೇ ಸಿಗುತ್ತೆ. ಅವ್ರು ಗೆಲ್ತಾರಾ..? ಸೋಲ್ತಾರಾ..? ಅನ್ನೋದು ಪ್ರಶ್ನೆನೇ ಅಲ್ಲ!!

    ReplyDelete
  7. wish 'public tv'all the success.

    ReplyDelete
  8. ನಿಜವಾಗಿ ಸಾಮಾನ್ಯರಿಗೆ ಏನೂ ಅರ್ಥವಾಗುವುದಿಲ್ಲ. ಏನೇ ಸಾಹಸ ಮಾಡಬೇಕಾದರೂ ಹಣವೇ ಪ್ರಧಾನವಾಗಿ ಕೊನೆಗೊಮ್ಮೆ ಎಲ್ಲವೂ ಹಣವಂತರ ಅಥವಾ ರಾಜಕಾರಣಿಗಳ ಕೃಪೆಯಲ್ಲಿಯೇ ನಡೆಯುವಂತಾಗುತ್ತದೆ. ಆದರೆ ರಂಗನಾಥ್ ಅವರು ಇವೆಲ್ಲವನ್ನೂ ಮೀರಿ ನಡೆಯುವಂತಾದರೆ ನಮ್ಮ ದೇಶದ ಭಾಗ್ಯ ವಾದೀತು. ಕೊನೆಗೊಮ್ಮೆ ಅವರು ರಾಜಕಾರಣ ಪ್ರವೇಶಿಸುವಂತಾಗಬಾರದು, ಅಷ್ಟೆ.

    ReplyDelete
  9. ಶ್ರೀಕಾಂತ್February 13, 2012 at 1:43 PM

    ರಂಗಣ್ಣ ಅವರಿಗೆ ಖಂಡಿತ ಯಶಸ್ಸು ಸಿಗುತ್ತೆ, ಇಂದು ಸುವರ್ಣ ನ್ಯೂಸ್ ಇಷ್ಟು ಜನಪ್ರಿಯವಾಗಲು ರಂಗಣ್ಣನವರೇ ಪ್ರಮುಖ ಕಾರಣ, ಅವರ ಹೊಸ ಚಾನಲ್ ಎಷ್ಟು ಭಯ ಹುಟ್ಟಿಸಿದೆ ಅನ್ನೋದಿಕ್ಕೆ ಸುವರ್ಣದಲ್ಲಿ ರಂಗಣ್ಣ ಪ್ರಾರಂಭಿಸಿದ್ದ ಕಾರ್ಯಕ್ರಮಗಳು ಮತ್ತೆ ಪ್ರಸಾರ ಆಗುತ್ತಿರುವುದೇ ಸಾಕ್ಷಿ, ಅವರೊಬ್ಬ ಛಲಗಾರ, ಅವರಿಗೆ ಈ ಸಮಸ್ಯೆಗಳನ್ನು ಎದುರಿಸುವ ಶಕ್ತಿ ಇದೆ ಕರ್ನಾಟಕದ ಜನತೆ ಅವರೊಟ್ಟಿಗೆ ಇರುತ್ತಾರೆ, ಒಟ್ಟಿನಲ್ಲಿ ಟಿವಿ೯ ಸುವರ್ಣದವರ ಅರೆಬರೆ ಕನ್ನಡ non-sense ಕಾರ್ಯಕ್ರಮಗಳಿಂದ ಜನರಿಗಂತೂ ಮುಕ್ತಿ ಖಂಡಿತ :-) ರಂಗಣ್ಣನವರಿಗೆ ನಮ್ಮ ಶುಭಾಷಯಗಳು :-)

    ReplyDelete
  10. ಈ ಚಾನಲ್ ಕೊಡಗಿಗೂ ಕೂಡ ಬರಲಿ

    ReplyDelete
  11. ಪಬ್ಲಿಕ್ ಟಿವಿಯ ಪಬ್ಲಿಕ್ ಕನ್ನಡ ಬಲ್ಲವರು ಮಾತ್ರ ಅಲ್ಲವೇ.?

    ಎಲೆಕ್ಟ್ರೋನಿಕ ಮಾದ್ಯಮ ಕ್ಷೇತ್ರದಲ್ಲಿ ಸಾಕಷ್ಟು ಮೈಲಿಗಲ್ಲನ್ನು ಸಾದಿಸಿರುವ ಕನ್ನಡದ ಸುದ್ದಿ ವಾಹಿನಿಗಳ ಗುಂಪಿಗೆ ಮತ್ತೊಂದು ಹೊಸ ಸುದ್ದಿ ವಾಹಿನಿ ಪಬ್ಲಿಕ್ ಟಿವಿ ಎಂಬ ಹೆಸರಿನ ಮೂಲಕ ಇದೇ ೧೨ ರಂದು ಸೇರಿಕೊಂಡಿದೆ. ಇದು ಯಾರ ಆಸ್ತಿಯೂ ಅಲ್ಲ, ಇದು ನಿಮ್ಮ ಟಿವಿ ಎಂಬ ಶೀರ್ಷಿಕೆಯೊಂದಿಗೆ ಹೊರ ಬಂದಿದೆ. ತಮ್ಮ ವಿಭಿನ್ನ ಶೈಲಿಯ ಮೂಲಕ ಪತ್ರಿಕೋದ್ಯಮದಲ್ಲಿ ಸಾಕಷ್ಟು ಹೆಸರು ಮಾಡಿರುವ ಶ್ರೀ ರಂಗನಾಥ್ ಅವರು ಈ ಸುದ್ದಿ ವಾಹಿನಿಯ ಮುಖ್ಯಸ್ಥರಾಗಿದ್ದು, ಅವರ ಹಿನ್ನೆಲೆಯನ್ನು ಅರಿತ ಜನತೆಗೆ ಸ್ವಾಬಾವಿಕವಾಗಿ ದೊಡ್ಡ ಮಟ್ಟದ ನಿರೀಕ್ಷೆ ಈ ಸುದ್ದಿ ವಾಹಿನಿಯಿಂದ ಇದೆ ಎಂದರೆ ತಪ್ಪಾಗಲ್ಲ.

    ಪಬ್ಲಿಕ್ ಯಾರು ಎಂಬ ಬಗ್ಗೆ ಸ್ಪಷ್ಟತೆ ಇದೆಯೇ.?
    ಹೆಸರಿನಲ್ಲೇ ಇರುವ ಹಾಗೆ, ಈ ಸುದ್ದಿ ವಾಹಿನಿಯ ಮುಖ್ಯ ಅಂಶ ಪಬ್ಲಿಕ್. ಹೀಗಾಗಿ ಸುದ್ದಿ ವಾಹಿನಿಗೆ ತಾವು ಹೇಳಲು ಹೊರಟಿರುವ ಪಬ್ಲಿಕ್ ಯಾರು ಎಂಬ ಬಗ್ಗೆ ಸ್ಪಷ್ಟತೆ ಇರಬೇಕಾದ್ದು ಉತ್ತಮ. ಆದರೆ, ತಮ್ಮ ಕೆಲವು ದಿನದ ಪರೀಕ್ಷಾರ್ಥ ಪ್ರಸಾರದಲ್ಲಿ ಅವರು ತೋರಿಸುತ್ತಿದ್ದ ಜಾಹೀರಾತನ್ನು ಮತ್ತು ಶುರು ನಂತರದ ಪ್ರಸಾರ ಕಾರ್ಯಕ್ರಮಗಳನ್ನು ನೋಡಿದರೆ, ಅವರಲ್ಲಿ ಕರ್ನಾಟಕದ ಪಬ್ಲಿಕ್ ಯಾರು ಎಂಬ ಬಗ್ಗೆ ಸ್ಪಷ್ಟತೆ ಇದೆಯೋ ಇಲ್ಲವೋ ಎಂಬ ಅನುಮಾನ ಮೂಡುತ್ತದೆ. ಪರೀಕ್ಷಾರ್ಥ ಪ್ರಸಾರದಲ್ಲಿ ಪಬ್ಲಿಕ್ ಟಿವಿಯ ಜಾಹೀರಾತು ಹಿಂದಿಯಲ್ಲಿ ಬರ್ತಾ ಇತ್ತು. ಇನ್ನು ಇದು ನಿಮ್ಮ ಟಿವಿ ಎಂದು ಹೇಳುತ್ತಲೇ ಪ್ರಾರಂಭದಲ್ಲೇ ಹಿಂದಿ ಚಿತ್ರಗಳಿಗೆ ಪ್ರಚಾರ ಕೊಟ್ಟು ಕರ್ನಾಟಕದ ಪಬ್ಲಿಕನ್ನು ಹಿಂದಿಗೆ ಅಡ ಇಟ್ಟಿದ್ದು ಕಂಡಿದ್ದೇವೆ. ಪಬ್ಲಿಕ್ ಟಿವಿಯ ಪಬ್ಲಿಕ್ ಕರ್ನಾಟಕದಲ್ಲಿರುವ ಹಿಂದಿ ಬಲ್ಲ ಜನರೇ.? ಈ ಎಲ್ಲ ಅಂಶಗಳು ಪಬ್ಲಿಕ್ ಟಿವಿ ಪ್ರತಿನಿಧಿಸಲು ಹೊರಟಿರುವ ಪಬ್ಲಿಕ್ ಯಾರು ಎಂಬ ಪ್ರಶ್ನೆ ಹುಟ್ಟು ಹಾಕುತ್ತೆ.

    ಯಾವ ಜನರಿಂದ ಯಾವ ಜನರಿಗೋಸ್ಕರ.?:

    ಜನರಿಂದ ಜನರಿಗೋಸ್ಕರ ಎಂಬುದು ಪಬ್ಲಿಕ್ ಟಿವಿಯ ಘೋಷವಾಕ್ಯ. ಪಬ್ಲಿಕ್ ಟಿವಿಯ ಕಾರ್ಯಕ್ರಮ ಕರ್ನಾಟಕದಾದ್ಯಂತ ಪ್ರಸಾರವಾಗುತ್ತದೆ. ಕರ್ನಾಟಕದಾದ್ಯಂತ ವಾಸಿಸುವ ಬಹುತೇಕ ಜನರ ನುಡಿ ಕನ್ನಡ. ಪಬ್ಲಿಕ್ ಟಿವಿ ಕನ್ನಡ ಸಮ್ಮೇಳನ ಜನ ಕಾರ್ಯಕ್ರಮ ನೀಡಬೇಕಿರುವುದು ಆ ಜನರಿಗೋಸ್ಕರವೇ. ಪಬ್ಲಿಕ್ ಟಿವಿ ಉನ್ನತ ಸ್ಥಾನಕ್ಕೆ ಬಡ್ತಿ ಪಡೆಯಲು ಸಾದ್ಯವಾಗುವುದೂ ಅದೇ ಜನರಿಂದ. ಜನರಿಗೆ ಪರಬಾಷೆ ಮನರಂಜನೆಯ ಸುದ್ದಿಗಳು ಊಟದಲ್ಲಿರುವ ಉಪ್ಪಿನಕಾಯಿಯಂತಿರಬೇಕೇ ಹೊರತು ಊಟವೇ ಅದೇ ಆಗಬಾರದು. ಇನ್ನು ಆ ಉಪ್ಪಿನಕಾಯಿ ಆಯಾ ಭಾಷೆಯ ಸುದ್ದಿ ವಾಹಿನಿಗಳಲ್ಲಿ ಇವರಿಗಿಂತ ರುಚಿಯಾಗಿ ಬಡಿಸುತ್ತಾರೆ. ಕನ್ನಡದ ಜನರಿಗೆ ಉಪ್ಪಿನಕಾಯಿಯೇ ಅವಶ್ಯಕವಾಗಿದ್ದರೆ ಅವರು ನೇರವಾಗಿ ಅದೇ ಭಾಷೆಯ ಸಾಕಷ್ಟು ಸುದ್ದಿವಾಹಿನಿಗಳನ್ನು ನೋಡುವ ಅವಕಾಶವಿರುತ್ತದೆ. ಆದರೆ ಊಟವನ್ನು ಬಯಸುವ ಬಹುಪಾಲು ಪಬ್ಲಿಕ್ಕಿಗೆ ಇರುವುದು ಕನ್ನಡದ ಸುದ್ದಿ ವಾಹಿನಿಗಳೇ. 2011 ರ ಕೊನೆಯಲ್ಲಿ ಬಂದ ಐ.ಆರ್.ಎಸ್ ಸರ್ವೆ ವರದಿ ಪ್ರಕಾರ ರಾಜ್ಯದಲ್ಲಿನ ಪತ್ರಿಕೆ ಓದುಗಾರರಲ್ಲಿ ಕನ್ನಡ ಪತ್ರಿಕೆ ಓದುಗಾರರ ಪಾಲು 88.9%. ಅಂದರೆ ಇವರೆಲ್ಲರೂ ಕನ್ನಡದವರೇ. ಇನ್ನು ಉಳಿದ 11.1% ರಲ್ಲಿ ಪರಬಾಷೆ ಪತ್ರಿಕೆ ಓದುವ ಕನ್ನಡ ಬಲ್ಲ ಜನರು ಸಾಕಷ್ಟಿದ್ದಾರೆ. ಹೀಗೆ ಕನ್ನಡವೇ ಬಹುಪಾಲು ಜನರ ಜೀವನಕ್ರಮದ ನುಡಿಯಾಗಿರುವಾಗ, ಪರಭಾಷೆ ಮನರಂಜನೆ ವೈಭವೀಕರಣ, ಇಂಗ್ಲೀಷ್ ಹಿಂದಿ ಮಿಶ್ರಿತ ಶಿರ್ಷಿಕೆ(ಟ್ಯಾಗ್ ಲೈನ)ಗಳನ್ನು ಬಳಸುವುದು ಜನರಿಂದ ಜನರಿಗೋಸ್ಕರ ಎಂಬ ತತ್ವಕ್ಕೆ ವಿರುದ್ದವಾದುದಲ್ಲವೇ.

    ReplyDelete
  12. ಹೊಸ ಬಣ್ಣ ಹಚ್ಚಿದ ಹಳೇ ಕಾರು:
    ನಾವು ಇತರರಿಗಿಂತ ಬಿನ್ನ ಎಂದು ಹೇಳಿಕೊಳ್ಳುವ ಪಬ್ಲಿಕ್ ಟಿವಿಯ ವಿಭಿನ್ನತೆ, ಹಳೇ 2000 ಮಾಡೆಲ್ ಅಂಬಾಸಿಡರ್ ಕಾರಿಗೆ ಹೊಸ ಬಣ್ಣ ಹಚ್ಚಿದಂತಿದೆ. ಇತರ ಚಾನಲ್ಲಿನಲ್ಲಿರುವ ಅನಗತ್ಯ ಇಂಗ್ಲೀಷ್ ಬಳಕೆಯ ಚಟ ಇವರಿಗೂ ಹಿಡಿದಿದೆ. ಕಾರ್ಯಕ್ರಮಗಳ ಹೆಸರುಗಳಿಗೆ ಕನ್ನಡದ ಹೆಸರು ಬಳಸದೇ/ಹುಟ್ಟುಹಾಕದೇ ಇತರ ಚಾನಲ್ಲಿನ ಹಳಸಲು ಶೈಲಿಯನ್ನೇ ಬಳಸಿದ್ದಾರೆ. ಇಂಗ್ಲೀಷಬಳಸುವುದೇ ಕೂಲ್ ಎಂಬ ಬ್ರಮೆ ಇದ್ದಂಗಿದೆ. ಕಾರ್ಯಕ್ರಮದ ಹೆಸರನ್ನು ಆಕರ್ಷಕವನ್ನಾಗಿ ಮಾಡಲು ಇಂಗ್ಲೀಷ್ ಅಥವಾ ಹಿಂದಿ ಲೇಪನ ಇರಲೇಬೇಕು ಎಂದು ನಂಬಿದಂತಿದೆ. ದಮಾಕಾ, ಬಿಗ್ ಬುಲೆಟಿನ್, ಪಬ್ಲಿಕ್ ಅಪ್ಡೇಟ್,ಗುಡ್ ನೈಟ್ ನ್ಯೂಸ್ ಎಂಬಂತ ಪದಗಳಿಗೆ ಆಕರ್ಷಕವಾದ ಕನ್ನಡ ಪದ ಹುಟ್ಟುಹಾಕಲು ಸಾದ್ಯವಿಲ್ಲದ ಪರಿಸ್ಥಿತಿಗೆ ಇವರೂ ಸೇರಿಕೊಂಡಿದ್ದಾರೆ. ಇನ್ನು ಪಬ್ಲಿಕ್ ಟಿವಿ ಕಚೇರಿಯ ಕೋಣೆಗಳು ಇಂಗ್ಲೀಷಮಯವಾಗಿವೆ. ಸಿನಿ ಅಡ್ಡಾ ಎಂಬ ಕಾರ್ಯಕ್ರಮದ ಮೂಲಕ ಪರಬಾಷೆ ವೈಬವೀಕರಣವೂ ನಡೆದೇ ಇದೆ. ದಿನಬೆಳಗಾದರೆ ನಡೆಯುವ ಬಾಲಿವುಡನಲ್ಲಿನ ಗುಸು ಗುಸು ಪಿಸು ಪಿಸುಗಳನ್ನು ವಿಶೇಷ ಕಾರ್ಯಕ್ರಮವನ್ನಾಗಿ ಮಾಡುವುದೇ ತಮ್ಮ ಮಾರುಕಟ್ಟೆ ನಿರ್ಮಾಣದ (ಟಿ.ಆರ್.ಪಿ) ಒಂದಂಕಿ ಸೂತ್ರ ಎಂದು ತಿಳಿದ ಹಾಗಿದೆ ನಮ್ಮ ಸುದ್ದಿ ವಾಹಿನಿಗಳು. ಕನ್ನಡ, ಕನ್ನಡಿಗ, ಕರ್ನಾಟಕದ ನೂರೆಂಟು ಸಮಸ್ಯೆಗಳು ಒಂದು ಸಮರ್ಥ ವೇದಿಕೆಗಾಗಿ ಕಾಯುತ್ತಿರುವಾಗ, ಸಮಾಜ ಸುದಾರಣೆಯಲ್ಲಿ ದೊಡ್ಡ ಪಾತ್ರ ವಹಿಸುವ ಮಾದ್ಯಮದವರು ಹೀಗೆ ಬೇಜವಾಬ್ದಾರಿಯಿಂದ ಚಿಲ್ಲರೆ ವ್ಯಾಪಾರಿಗಳಾಗುತ್ತಿರುವುದು ಎಷ್ಟರ ಮಟ್ಟಿಗೆ ಸರಿ.? ಇದರಿಂದ ಪರಬಾಷೆ ಮನರಂಜನೆಗೆ ಇಲ್ಲದ ಮಾರುಕಟ್ಟೆಯನ್ನು ನಮ್ಮ ಸುದ್ದಿ ವಾಹಿನಿಗಳೇ ಮುಂದೆ ನಿಂತು ಸೃಷ್ಟಿ ಮಾಡಿ ಕೊಟ್ಟಂತಾಗುವುದಿಲ್ಲವೇ.!


    ಸಮಾಜ ಮುಖಿಯಾಗಲಿ ಪಬ್ಲಿಕ್ ಟಿವಿ:
    ಸಮಾಜ ಮುಖಿ ಚಿಂತನೆಯನ್ನು ಕೈಬಿಟ್ಟು ಟಿ.ಆರ್.ಪಿ ಗೆ ಜೋತು ಬಿದ್ದಿರುವ ಈಗೀರುವ ಸುದ್ದಿ ವಾಹಿನಿಗಳಲ್ಲಿನ ಸಾಮಾಜಿಕ ಚಿಂತನೆಯ ಕೊರತೆಯೋ ಅಥವಾ ಕನ್ನಡ ಕೇಂದ್ರಿತ ವ್ಯವಸ್ಥೆ ನಿರ್ಮಾಣದ ಬಗೆಗೆ ಅವರಿಗಿರುವ ಅಸಡ್ಡೆಯೋ ಒಟ್ಟಾರೆ ಪಬ್ಲಿಕ್ ಟಿವಿ ಮತ್ತು ರಂಗನಾಥ ಅವರ ಮೇಲೆ ಸಾರ್ವಜನಿಕರ ನಿರೀಕ್ಷೆ ಸ್ವಲ್ಪ ಜಾಸ್ತಿನೇ ಇದೆ ಎನ್ನಬಹುದು. ಹೀಗಾಗಿ, ಪಬ್ಲಿಕ್ ಟಿವಿ ಹತ್ತರಲ್ಲಿ ಹನ್ನೊಂದು ಎಂಬಂತಾಗದೇ ಕರ್ನಾಟಕದ ಪಬ್ಲಿಕ್ಕಿನ ದ್ವನಿಯಾಗಿ ಕಾರ್ಯನಿರ್ವಹಿಸಲಿ. ಹಿಂದಿ ಮನರಂಜನೆಯನ್ನು ಅನಗತ್ಯವಾಗಿ ತಮ್ಮ ಕಾರ್ಯಕ್ರಮಗಳಲ್ಲಿ ತುರುಕದೇ, ಕನ್ನಡಿಗರ ಮನರಂಜನೆ ಕನ್ನಡದಲ್ಲಿ ಎಂಬ ನಿಲುವು ಹೊಂದಲಿ. ಹಿಂದಿ ಮನರಂಜನೆ ಮೇಲು ಕನ್ನಡ ಮನರಂಜನೆ ಏನಿದ್ದರೂ ಅದರ ನಂತರ ಸ್ಥಾನಕ್ಕೆ ಬರುವಂಥವು ಎಂಬ ಕುರುಡು ನಂಬಿಕೆಯಿಂದ ದೂರವಾಗಲಿ. ಇಂಗ್ಲೀಶ್ ಮತ್ತು ಇತರ ಬಾಶೆಗಳ ಮನರಂಜನೆಯನ್ನು ಕನ್ನಡಿಗರಿಗೆ ಕನ್ನಡದಲ್ಲೇ ದೊರಕಿಸಿಕೊಡುವತ್ತ ಚಿತ್ತ ಹರಿಸಲಿ. ದಿನನಿತ್ಯದ ಪ್ರಸಾರದಲ್ಲಿ ಅನಗತ್ಯ ಇಂಗ್ಲೀಷ್ ಮತ್ತು ಹಿಂದಿ ಬಳಕೆಗೆ ಕಡಿವಾಣ ಬೀಳಲಿ, ಅವುಗಳಿಗೆ ಪೂರಕವಾದ ಕನ್ನಡ ಪದಗಳನ್ನು ಬಳಸಲಿ. ಒಕ್ಕೂಟ ವ್ಯವಸ್ಥೆಯನ್ನು ಎತ್ತಿ ಹಿಡಿಯುವತ್ತ ಮತ್ತು ಕರ್ನಾಟಕದಲ್ಲಿ ಕನ್ನಡದಲ್ಲಿ ಸೇವೆ ನೀಡಲು ನಿರಾಕರಿಸುವ ಭಾಷಾನೀತಿ ವ್ಯವಸ್ಥೆಯನ್ನು ಸರಿಪಡಿಸುವತ್ತ ಜವಾಬ್ದಾರಿ ಪ್ರದರ್ಶಿಸಲಿ. ಜನರಿಂದ ಜನರಿಗೋಸ್ಕರ ಎಂಬ ಘೋಶವಾಕ್ಯವನ್ನು ಹೊಂದಿರುವ ಈ ಸುದ್ದಿ ವಾಹಿನಿ, ಕರ್ನಾಟಕದ ಜನರ ಕಷ್ಟಗಳಿಗೆ ಸ್ಪಂದಿಸುವ, ನಷ್ಟಗಳಿಗೆ ಪಾಲುದಾರನಾಗುವ, ಇಷ್ಟಗಳಿಗೆ ಸಹಕರಿಸುವ ವೇದಿಕೆಯಾಗಲಿ. ಒಟ್ಟಾರೆ, ಶ್ರೀ ರಂಗನಾಥ ಅವರು, ಜನರು ಪಬ್ಲಿಕ್ ಟಿವಿ ಮೇಲೆ ಇಟ್ಟಿರುವ ನಂಬಿಕೆಯನ್ನು ಹುಸಿ ಮಾಡದೇ ಕರ್ನಾಟಕದ ಪಬ್ಲಿಕ್ ಕನ್ನಡಿಗರು, ಅವರ ನುಡಿ ಕನ್ನಡ, ಹೀಗಾಗಿ ಚಾನಲ್ಲಿನಲ್ಲಿ ಕನ್ನಡ ಮನರಂಜನೆಗೆ ಆದ್ಯತೆ ಮತ್ತು ಪ್ರಸಾರ ಕನ್ನಡದಲ್ಲೇ ಇರಬೇಕು ಎಂಬುದನ್ನು ಅರಿತು ಕಾರ್ಯ ನಿರ್ವಹಿಸಲಿ ಎಂಬುದು ನಮ್ಮ ಆಶಯ. ಪಬ್ಲಿಕ್ ಟಿವಿಯ ತಂಡಕ್ಕೆ ಶುಭ ಹಾರೈಕೆಗಳು...

    ReplyDelete
  13. ಶುಭಕಾಮನೆಗಳು,
    ರ೦ಗನಾಥ್

    ReplyDelete