Friday, January 14, 2011

ಅದಿರು ಮಾಯ: ಸುದ್ದಿ ಮಂಗಮಾಯ!

ಬೆಲೆಕೆರೆ ಬಂದರಿಲ್ಲಿ ನಾಪತ್ತೆಯಾದ ನೂರಾರು ಕೋಟಿ ರೂ. ಮೌಲ್ಯದ ಕಬ್ಬಿಣದ ಅದಿರಿನ ಸುತ್ತಲಿನ ಸುದ್ದಿಗಳೆಲ್ಲ ನಿಮಗೆ ಗೊತ್ತು. ಮಾಯವಾದ ಗಣಿ ಮಣ್ಣಿನ ಬಗ್ಗೆ ಲೋಕಾಯುಕ್ತರು ಗಮನ ಸೆಳೆದಿದ್ದಾರೆ. ರಾಜ್ಯ ಉಚ್ಛ ನ್ಯಾಯಾಲಯವೂ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು ೫೦ ಕೋಟಿ ರೂ.ಮೌಲ್ಯದ ಅದಿರು ನಾಪತ್ತೆಯಾದ ಕಥೆ ನಿಮಗೆ ಗೊತ್ತೆ?

ನಾವು ಹೇಳ ಹೊರಟಿರುವುದು ೨೦೦೮ರಲ್ಲಿ ನಡೆದ ಘಟನೆಯೊಂದರ ಬಗ್ಗೆ.

೨೦೦೮ರಲ್ಲಿ ಆಗಸ್ಟ್ ೯ರಿಂದ ೧೨ರವರೆಗೆ ಬಳ್ಳಾರಿ ಜಿಲ್ಲೆಯ ಟಾಸ್ಕ್‌ಫೋರ್ಸ್ ಅಕ್ರಮ ಗಣಿಗಾರಿಕೆಯ ಮೇಲೆ ದಾಳಿ ನಡೆಸಿ ವಶಪಡಿಸಿಕೊಂಡ ಕಬ್ಬಿಣದ ಅದಿರಿನ ಕಥೆ.

ಆಕ್ರಮ ಗಣಿಗಾರಿಕೆಯ ಪ್ರಶ್ನೆ ದೊಡ್ಡದಾಗಿ ಸುದ್ದಿಯಾದಾಗ ರಚನೆಗೊಂಡಿದ್ದು ಈ ಟಾಸ್ಕ್‌ಫೋರ್ಸ್. ಡಿ.ಸಿ., ಎಸ್ಪಿ, ಅರಣ್ಯ ಇಲಾಖೆ, ಗಣಿ ಇಲಾಖೆ ಇರುವ ಜಿಲ್ಲಾ ಉನ್ನತ ಮಟ್ಟದ ಅಧಿಕಾರಿಗಳ ಈ ಸಮಿತಿ ದಾಳಿ ನಡೆಸಿದ್ದು, ಹೊಸಪೇಟೆ, ಸಂಡೂರು ಭಾಗದಲ್ಲಿ ರೈತರು ತಮ್ಮ ಹೊಲದಲ್ಲಿ ಡಿಗ್ಗಿಂಗ್ ನಡೆಸಿ, ಹೊರ ತೆಗೆದಿದ್ದ ಕಬ್ಬಿಣದ ಅದಿರು ಮೇಲೆ.

ಈ ಟಾಸ್ಕ್‌ಫೋರ್ಸ್ ೩.೪೩ ಟನ್ (ಮೂರು ಲಕ್ಷ ನಲವತ್ತುಮೂರು ಸಾವಿರ ಮೆಟ್ರಿಕ್ ಟನ್)  ಅದಿರು ವಶಪಡಿಸಿಕೊಂಡಿತು. ಈ ಅದಿರನ್ನು ಜಫ್ತಿ ಮಾಡಿದ ಮೂರ‍್ನಾಲ್ಕು ದಿನದಲ್ಲಿ ಟೆಂಡರ್ ಕರೆದು ಹರಾಜು ಪ್ರಕ್ರಿಯೆ ನಡೆಸಲಾಯಿತು. ೨೦೦೮ ಆಗಸ್ಟ್ ೧೩ರಂದು ಪತ್ರಿಕೆಗಳಲ್ಲಿ ಹರಾಜು ಬಗ್ಗೆ ಜಾಹಿರಾತು ನೀಡಲಾಗಿತ್ತು.

ಕಬ್ಬಿಣದ ಅದಿರು ಮೌಲ್ಯವನ್ನು ೫೧ಕೋಟಿ ಎಂದು ಅಂದಾಜಿಸಿಸಲಾಗಿತ್ತು. (ಪ್ರತಿ ಟನ್‌ಗೆ ೧೫೦೦ ರೂ. ಲೆಕ್ಕದಲ್ಲಿ) ಇದಕ್ಕೂ ಮುಂಚೆ ಸರ್ಕಾರಿ ಸ್ವಾಮ್ಯದ ಎಂ.ಎಂ.ಟಿ.ಸಿ. ಕಬ್ಬಿಣದ ಅದಿರು ಟನ್ ಒಂದಕ್ಕೆ ೨೨೨೦ ರೂ. ನಿಗದಿ ಪಡಿಸಿತ್ತು. ಅದನ್ನು ನಿರ್ಲಕ್ಷಿಸಲಾಯಿತು. ಆಗಸ್ಟ್ ೧೬ರಂದು ನಡೆದ ಹರಾಜಿನಲ್ಲಿ  ಚೆನ್ನೈ ಮೂಲದ ಮೆ. ಚಿತ್ರಕೂಟ ಸ್ಟೀಲ್ಸ್ ಅಂಡ್ ಪವರ್ ಪ್ರೈ.ಲಿ. ಭಾಗವಹಿಸಿ ಈ ಅದಿರು ಪಡೆದುಕೊಂಡಿತು.

ಆಶ್ಚರ್ಯಕರ ರೀತಿಯಲ್ಲಿ ಈ ಹರಾಜಿನಲ್ಲಿ ಟನ್ ಒಂದಕ್ಕೆ ೫೫೦ ರೂ. ರೀತಿ ದರ ನಿಗದಿಯಾಯಿತು. ಇದರ ಮೊತ್ತ ೧೮ಕೋಟಿ ರೂ. ಮಾತ್ರ.

ಜಿಲ್ಲಾಡಳಿತದ ಈ ಕ್ರಮವನ್ನು ಪ್ರಶ್ನಿಸಿ, ಕೆಲವರು ರಾಜ್ಯ ಉಚ್ಛ ನ್ಯಾಯಾಲಯದ ಮೊರೆ ಹೋದರು. ತಡೆಯಾಜ್ಞೆ ಸಿಕ್ಕಿತು. ನಂತರ ತೆರವೂ ಆಯಿತು.ಕಂತು ಕಟ್ಟುವಲ್ಲಿ ಸಮಯ ಪಾಲಿಸಲಿಲ್ಲ ಎಂಬ ಕಾರಣಕ್ಕೆ ಮರು ಟೆಂಡರ್‌ಗೆ ಜಿಲ್ಲಾಧಿಕಾರಿಗಳು ೨೦೦೯ ಮಾರ್ಚ್ ೧೮ರಂದು ಈ ಸಂಬಂಧ ಮತ್ತೊಂದು ಆದೇಶ ಹೊರಡಿಸಿದರು.

ಮುಗಿಯಿತಲ್ಲ.. ಮತ್ತೇನು ಸುದ್ದಿ ಅಂತಹ ಕೇಳುತ್ತೀರಾ? ಅಸಲಿ ಕಥೆ ಇಲ್ಲಿಂದ ಆರಂಭವಾಗುತ್ತದೆ. ಚೆನ್ನೈ ಮೂಲದ ಕಂಪನಿ ಅದಿರು ತೆಗೆದುಕೊಳ್ಳಲು ಬಂದರೆ ಅದಿರು ಮಂಗಮಾಯ. ಸಂಗ್ರಹವಾಗಿದ್ದ ಕಬ್ಬಿಣದ ಅದಿರು ನೂರು ಕೋಟಿ ರೂ. ಬೆಲೆ ಬಾಳುವಂಥದ್ದು. ಎಲ್ಲಿ ಹೊಯಿತು ಈ ಅದಿರು? ಈ ಬಗ್ಗೆ ತನಿಖೆಯೂ ನಡೆಯಿತು. ಸಿಗಲೇ ಇಲ್ಲ ಅದಿರು.

ನೂರು ಕೋಟಿ ರೂ. ಬೆಲೆ ಬಾಳುವ ಕಬ್ಬಿಣದ ಅದಿರು ಮಂಗಮಾಯವಾದರೆ ಯಾವ ಪತ್ರಿಕೆ, ಟಿ.ವಿ. ಮಾಧ್ಯಮಗಳಲ್ಲಿ ಈ ಸುದ್ದಿ ಬರಲೇ ಇಲ್ಲವಲ್ಲ? ಇವತ್ತಿಗೂ ಅದೇ ಸ್ಥಿತಿ ಇದೆ. ಬೆಲೆಕೆರೆಯ ಕಬ್ಬಿಣದ ಅದಿರು ಕಳ್ಳತನಕ್ಕೆ ಅಷ್ಟೊಂದು ರೇಟಿಂಗ್? ನಾವು ತೆಗೆದಿದ್ದನ್ನು ಸರ್ಕಾರ ವಶಪಡಿಸಿಕೊಂಡಿದ್ದು ಮಾಯವಾದರೆ ಅದಕ್ಕೆ ರೇಟಿಂಗ್ ಇಲ್ಲವೇ ಅನ್ನುತ್ತಾರೆ ಹೊಸಪೇಟೆ, ಸಂಡೂರು ಭಾಗದ ರೈತರು.

ಹತ್ತಾರು ದಿನಪತ್ರಿಕೆಗಳಿವೆ, ಹತ್ತಾರು ಚಾನೆಲ್‌ಗಳಿವೆ. ಯಾಕೆ ಈ ಅದಿರು ಮಾಯದ ಸುದ್ದಿ ಕಾಣಿಸಿಕೊಳ್ಳಲೇ ಇಲ್ಲ. ಬಳ್ಳಾರಿ ಜಿಲ್ಲಾ ವರದಿಗಾರರು, ಚೀಫ್ ರಿಪೋರ್ಟರ್‌ಗಳು, ಇನ್‌ಪುಟ್ ಸಂಪಾದಕರು, ಜಿಲ್ಲಾ ಕೋ ಆರ್ಡಿನೇಟರುಗಳು, ಬ್ಯೂರೋ ಮುಖ್ಯಸ್ಥರು, ಇತ್ಯಾದಿ ಇತ್ಯಾದಿಗಳೇನು ಮಾಡುತ್ತಿದ್ದಾರೆ?

ಈಗಲೂ ಈ ಸುದ್ದಿ ಹಸಿ ಹಸಿಯಾಗೇ ಇದೆ. ಸರ್ಕಾರದ ವಶದಲ್ಲಿದ್ದ ರಾಶಿಗಟ್ಟಲೆ ಅದಿರು ಮಾಯವಾಗುವುದು ಎಂದರೆ ಏನು? ಅದನ್ನು ಕದ್ದವರು ಯಾರು ಎಂದು ಜಿಲ್ಲಾಡಳಿತಕ್ಕೆ ಗೊತ್ತಿಲ್ಲದೇ ಇರುತ್ತದೆಯೇ? ಈ ಕುರಿತು ನಡೆದ ತನಿಖೆಯ ಫಲಶ್ರುತಿ ಏನು? ಆರೋಪಿಗಳನ್ನು ಹಿಡಿಯಲಾಗಿದೆಯೇ? ಹರಾಜು ಪಡೆದ ಕಂಪೆನಿ ಏನು ಮಾಡಿತು?

ಘನತೆವೆತ್ತ ಮಾಧ್ಯಮ ಸಂಸ್ಥೆಗಳ ಸೀನಿಯರ್ ಪತ್ರಕರ್ತರಿಗೆ ಒಂದು ಪ್ರಶ್ನೆ.

ಸ್ವಲ್ಪ ಫಾಲೋ ಅಪ್ ಮಾಡ್ತೀರಾ ಸರ್?

2 comments:

  1. che ballari patrakartaru gani dholinadi malagirabeku ?

    ReplyDelete
  2. Bari Bellary patrakartaru aste alla throughtout karnataka.

    ReplyDelete