Friday, February 25, 2011

ಬಜೆಟ್ ಕವರೇಜ್, ಕನ್ನಡಪ್ರಭವೇ ನಂ.೧


ಬಜೆಟ್ ಅಂದ್ರೆ ಪತ್ರಕರ್ತರ ಪಾಲಿಗೆ ಹಬ್ಬ. ಅದೊಂದು ಈವೆಂಟ್. ಸವಾಲನ್ನು ಒಡ್ಡುವ ಖುಷಿಯ ಅಸೈನ್‌ಮೆಂಟು. ಹೆಚ್ಚು ಕಡಿಮೆ ನೂರು ಪುಟದ ಪುಸ್ತಕವನ್ನು ಓದಿ, ಅದರಲ್ಲಿ ಎಷ್ಟನ್ನು ಹೇಗೆ ಓದುಗರ ಮುಂದಿಡಬೇಕು ಎಂಬುದು ಅಕ್ಷರಶಃ ಸವಾಲಿನ ಕೆಲಸವೇ. ಪತ್ರಕರ್ತರು ಅಂದೆವಲ್ಲ, ಎಲ್ಲ ಪತ್ರಕರ್ತರಿಗೂ ಹೀಗೇ ಆಗಬೇಕು ಎಂಬುದೇನಿಲ್ಲ. ಕೆಲವರಿಗೆ ಅದು ಬೋರೋ ಬೋರು. ಇಲ್ಲಿ ಅದೇ ರಾಗ ಅದೇ ಹಾಡು ಬಿಡ್ರೀ ಅನ್ನೋ ಸಿನಿಕರಿಗೇನು ಕೊರತೆಯಿಲ್ಲ.

ಆದರೆ ಕೆಲವು ಪತ್ರಕರ್ತರು ಬಜೆಟ್ ಬರುವುದನ್ನೇ ಕಾಯುತ್ತಾರೆ. ಹಾಗೆ ಕಾಯುವವರಿಗೆ ಅಲ್ಪಸ್ವಲ್ಪ ಎಕನಾಮಿಕ್ಸು ಗೊತ್ತಿರುತ್ತದೆ, ಜನರ ನಾಡಿಮಿಡಿತವೂ ಗೊತ್ತಿರುತ್ತದೆ. ಯಾವುದಕ್ಕೆ ಎಷ್ಟು ಹಣ ಹಂಚಿದ್ದಾರೆ, ಎಲ್ಲಿಂದ ಎಷ್ಟು ಹಣ ತರುತ್ತಾರೆ, ಎಷ್ಟು ಸಾಲ ಇದೆ, ಎಷ್ಟು ತೀರಿದೆ, ಇನ್ನೆಷ್ಟು ತರುತ್ತಾರೆ, ಇಲ್ಲಿ ಘೋಷಿಸಿರುವ ಕಾರ್ಯಕ್ರಮಗಳಿಗೆ ಹಣ ನಿಜಕ್ಕೂ ಒದಗುತ್ತಾ? ಇತ್ಯಾದಿ ಇತ್ಯಾದಿಗಳನ್ನು ಅವರು ಒಂದೇ ಅಬ್ಸರ್‌ವೇಷನ್‌ನಲ್ಲಿ ಹೇಳಬಲ್ಲರು.

ಅದೆಲ್ಲ ಹಾಗಿರಲಿ, ಆ ಕುರಿತು ಇನ್ನೊಮ್ಮೆ ಚರ್ಚೆ ಮಾಡೋಣ. ಇವತ್ತಿನ ಪತ್ರಿಕೆಗಳನ್ನು ನೋಡಿದ್ರಾ? ಬಜೆಟ್ ಕವರೇಜ್ ಯಾವ ಯಾವ ಪತ್ರಿಕೆಯಲ್ಲಿ ಹೇಗನ್ನಿಸಿತು. ದಯವಿಟ್ಟು ಬರೆದು ತಿಳಿಸಿ.

ನಮಗೆ ಅನ್ನಿಸಿದ ಪ್ರಕಾರ, ಬಜೆಟ್ ಕವರೇಜ್‌ನಲ್ಲಿ ಮೊದಲ ಸ್ಥಾನ ದಕ್ಕಬೇಕಾಗಿರುವುದು ಕನ್ನಡಪ್ರಭಕ್ಕೆ. ಪುಟಪುಟವನ್ನೂ ಕನ್ನಡಪ್ರಭದ ಸಿಬ್ಬಂದಿ ಉತ್ಸಾಹ ಮತ್ತು ಶ್ರದ್ಧೆಯಿಂದ ಕಟ್ಟಿದ್ದಾರೆ. ಒನ್ಸ್ ಎಗೇನ್ ಇಲ್ಲಿ ವಿಶ್ವೇಶ್ವರ ಭಟ್ಟರ ಕೈಚಳಕ ಎದ್ದು ಕಾಣುತ್ತದೆ. ಯಡಿಯೂರೈತಪ್ಪ ಎಂಬ ಶೀರ್ಷಿಕೆ ತುಂಬಾ ಚೆನ್ನಾಗಿದೆ ಎಂದೇನು ಅನಿಸಲಿಲ್ಲವಾದರೂ, ಒಟ್ಟು ಬಜೆಟ್‌ನ ಎಲ್ಲ ಅಂಶಗಳನ್ನು ವಿವರಿಸುವ ಸುದ್ದಿಗಳು, ಆ ಕುರಿತು ತಜ್ಞರ, ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ ಪರಿಣಿತರ ಅಭಿಪ್ರಾಯಗಳು ಸೊಗಸಾಗಿ ಮೂಡಿಬಂದಿದೆ.

ಕನ್ನಡಪ್ರಭಕ್ಕೆ ಪೈಪೋಟಿ ನೀಡುತ್ತಿರುವುದು ಇವತ್ತಿನ ಉದಯವಾಣಿ. ರವಿ ಹೆಗಡೆ ಉದಯವಾಣಿ ಸೇರಿದ ದಿನದಿಂದಲೇ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ ಎಂಬ ಸುದ್ದಿಯೇನೋ ಇತ್ತು. ಇವತ್ತಿನ ಪತ್ರಿಕೆ ಅದನ್ನು ಸಾರಿ ಹೇಳುತ್ತಿದೆ. ಮುಖಪುಟದ ಅಗ್ರಲೇಖನ ಬಜೆಟ್‌ನ ಒಳಹೊರಗನ್ನು ಅರ್ಥ ಮಾಡಿಸುವಲ್ಲಿ ಸಫಲವಾಗಿದೆ.

ವಿಜಯ ಕರ್ನಾಟಕ ಮುಖಪುಟದ ಕಾನ್ಸೆಪ್ಟ್ ಹೊಸತನದಿಂದ ಕೂಡಿದೆ. ಒಳಗೆ  ನಾಲ್ಕು ವಿಶೇಷ ಪುಟಗಳೇನೋ ಇವೆ. ಆದರೆ ಇನ್ನಷ್ಟು ಕವರೇಜ್ ಬೇಕಿತ್ತು ಅನಿಸುತ್ತದೆ. ಮುಖಪುಟದ ಹೆಡ್ಡಿಂಗು ಆಕರ್ಷಕವಾಗಿದೆ. ಎಲ್ಲಕ್ಕಿಂತ ಹೆಚ್ಚಾಗಿ ಸಂಪಾದಕ ಇ.ರಾಘವನ್ ಮುಖಪುಟದಲ್ಲೇ ಬರೆದಿರುವ ಪುಟ್ಟ ಟಿಪ್ಪಣಿ ಗಮನಸೆಳೆಯುತ್ತದೆ. ಕೃಷಿ ಮತ್ತು ಸಾಮಾನ್ಯ ಬಜೆಟ್ ವರ್ಣನೆಗೆ ಅವರು ಬಳಸಿರುವ ಡಬಲ್ ಬ್ಯಾರಲ್ ಗನ್‌ನ ಉಪಮೆಯೂ ಚೆನ್ನಾಗಿದೆ.

ಪ್ರಜಾವಾಣಿ ಸಂಪಾದಕೀಯ ಬಜೆಟ್ ಕುರಿತು ಸಮರ್ಥ ಒಳನೋಟ ನೀಡುತ್ತಿದೆ. ಆದರೆ ಉಳಿದ ಪುಟಗಳು ಸಪ್ಪೆ. ಹೇಳುವುದನ್ನೇ ಆಕರ್ಷಕ ವಿನ್ಯಾಸದಲ್ಲಿ ಹೇಳಿದರೆ ಹೆಚ್ಚು ಜನರಿಗೆ ಇಷ್ಟವಾಗಬಹುದಿತ್ತೇನೋ.

ಹೊಸದಿಗಂತದ ಪುಟಪುಟಗಳ ವಿನ್ಯಾಸ ಸೂಪರ್. ಆದರೆ ಈ ಮಾತನ್ನು ವಿನ್ಯಾಸಕ್ಕೆ ಸೀಮಿತವಾಗಿ ಹೇಳಬೇಕಾಗುತ್ತದೆ. ಯಾಕೆಂದರೆ ಇದು ಯಡಿಯೂರಪ್ಪನವರ ಜಾಹೀರಾತು ಪುರವಣಿಯ ಹಾಗೆ ರೂಪಿತವಾಗಿದೆ. ಏಕಮುಖಿಯಾದ ವಿಶ್ಲೇಷಣೆಗಳಿಂದ ಓದುಗರಿಗೆ ಯಾವ ಉಪಯೋಗವೂ ಇಲ್ಲ ಎಂದು ಬೇರೆ ಹೇಳಬೇಕಾಗಿಲ್ಲ.

ಇನ್ನು ನ್ಯೂಸ್ ಚಾನಲ್‌ಗಳ ಪೈಕಿ ಹೆಚ್ಚು ಆಕರ್ಷಿಸಿದ್ದು ಸುವರ್ಣ ನ್ಯೂಸ್. ಎಚ್.ಆರ್.ರಂಗನಾಥ್ ಅವರ ಪ್ರೌಢಿಮೆ ವರ್ಕ್ ಔಟ್ ಆಯಿತು. ಇತ್ತ ಟಿವಿ೯ನಲ್ಲಿ ಲಕ್ಷ್ಮಣ್ ಹೂಗಾರ್ ಮತ್ತು ಶಿವಪ್ರಸಾದ್ ನಡೆಸಿಕೊಟ್ಟ ಕಾರ್ಯಕ್ರಮಗಳೂ ಚೆನ್ನಾಗಿದ್ದವು. ಸಮಯ ಟಿವಿಯವರಿಗೆ ಇದು ಮೊದಲ ಬಜೆಟ್. ಆದರೂ ಓದುಗರನ್ನು ಸೆಳೆಯಲು ಅದು ಯಶಸ್ವಿಯಾಯಿತು. ಜನಶ್ರೀಯಲ್ಲಿ ರಮಾಕಾಂತ್ ಬಜೆಟ್ ಕುರಿತ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು. ಜನಶ್ರೀ ಹೊಸ ಚಾನಲ್, ಸುಧಾರಿಸಿಕೊಳ್ಳಲು ಸ್ವಲ್ಪ ಸಮಯ ಬೇಕಾದೀತು.

ಇದು ನಮಗನ್ನಿಸಿದ್ದು, ನಿಮಗನ್ನಿಸಿದ್ದನ್ನು ದಯವಿಟ್ಟು ಹೇಳಿ.

19 comments:

  1. ಇತ್ತೀಚೆಗಿನ ಮಾಧ್ಯಮಗಳಲ್ಲಾದ ಮಹತ್ತರ ಬದಲಾವಣೆಗಳಿಂದಾಗಿ ಈ ತೆರನಾದ ಸುದಾರಣೆಗಳು ಕಂಡು ಬರುತ್ತಿಒರುವುದು ಆಶಾದಾಯಕ ಬೆಳವಣಿಗೆ.
    ಬಜೆಟ್ ಕವರೇಜ್ ಕುರಿತು ಸೂಕ್ಷ್ಮವಾಗಿ ಎಲ್ಲವನ್ನೂ ಪರಿಗಣಿಸಿರುವುದು ಸಂಪಾದಕೀಯಕ್ಕೆ ಮತ್ತೊಂದು ಫ್ಲಸ್ ಪಾಯಿಂಟ್.

    ReplyDelete
  2. ಹೌದು ಕನ್ನಡ ಪ್ರಭ ವಿಶ್ವೇಶರ ಭಟ್ಟರ ಪ್ರೌಡಿಮೆ ಬಗ್ಗೆ ಎರಡು ಮಾತಿಲ್ಲ !!
    ಅವರು ತಮ್ಮ ಬ್ಲಾಗ್ ನಲ್ಲಿ ಸಭಿಕರಿಗೆ ನೀವು ನಿಮ್ಮ ಅಬಿಪ್ರಾಯ ಹೇಳಿ ಜನರ ನಾಡಿ ಮಿಡಿತವನ್ನು ಚೆನ್ನಾಗಿ ಅರಿತರು
    ಅದಕ್ಕೆ ಏನೋ ಇವತ್ತು ಅದರ ಲೇಖನ ಚೆನ್ನಾಗಿತ್ತು

    ನಡಿಯಲಿ ನಡಿಯಲಿ ಹೊಸ ಹೊಸ ಪ್ರಕ್ರಿಯೆ ನಡಿಯಲಿ ಆದರು ಮೇಲ್ದರ್ಜೆಗೆ ಹೇರಲಿ ಕೀಳು ಮಟ್ಟಕ್ಕೆ ಬೇಡ!!

    ReplyDelete
  3. ಬಜೆಟ್ಟಿನ ಹೂರಣವನ್ನು ಬಯಲಿಗಿಡುವಲ್ಲಿ ಕನ್ನಡದ ಪತ್ರಿಕೆಗಳು ಸಾಕಷ್ಟು ಶ್ರಮ ಹಾಕಿವೆ. ಗ್ರಾಫಿಕ್ಕು, ಶಬ್ದಾಡಂಬರಗಳನ್ನು ಪಕ್ಕಕ್ಕಿಟ್ಟು ವರದಿಗಳನ್ನಷ್ಟೇ ನೋಡಿದರೆ, ಬೇರೆಯದೇ ಚಿತ್ರ ಗೋಚರಿಸುತ್ತದೆ.
    ನಿಜಕ್ಕೂ ಬಜೆಟ್ಟಿನ ಹೂರಣವನ್ನು ಅಚ್ಚುಕಟ್ಟಾಗಿ ಹೊರಗಿಟ್ಟಿರುವುದು ವಿಜಯ ಕರ್ನಾಟಕವೇ.
    ನಾನೇನೂ ಪತ್ರಕರ್ತನಲ್ಲ. ಒಬ್ಬ ಸಾಮಾನ್ಯ ಓದುಗ. ಇಂದಿನ ಮಟ್ಟಿಗೆ ಬಹುತೇಕ ಪತ್ರಿಕೆಗಳ ಕವರೇಜ್ ಸಾಕಷ್ಟು ನಿರಾಶೆಯನ್ನೇ ತಂದಿದೆ. ಶಬ್ದಾಡಂಬರ, ಗ್ರಾಫಿಕ್ಕುಗಳು ವರದಿಗೆ ಸಮಗ್ರತೆಯನ್ನು ಕೊಡಲಾರವು. ಘಟನೆಯೊಂದನ್ನು ಟಿವಿಗಳಲ್ಲಿ ಬ್ರೇಕಿಂಗ್ ನ್ಯೂಸ್ ಹಾಕುವುದಕ್ಕೂ, ಅದನ್ನೇ ಪತ್ರಿಕೆಯೊಂದರಲ್ಲಿ ಪ್ರಸ್ತುತ ಪಡಿಸುವುದಕ್ಕೂ ಇರುವ ವ್ಯತ್ಯಾಸವನ್ನು ನಮ್ಮ ಪತ್ರಿಕೆಗಳು ತಿಳಿಯಬೇಕಿದೆ. ಆಧುನಿಕ ಪತ್ರಿಕೆಯೆಂದರೆ, ಮಾಹಿತಿ ರಾಶಿಯನ್ನು ರಾಚುವಂತೆ ಹಾಕುವುದಲ್ಲ.
    ಈ ಬಜೆಟ್ಟು ಏನು ಎಂತು ಎಂಬುದನ್ನು ಅನುಭವಿ ರಾಘವನ್ ಅವರ 200 ಶಬ್ದಗಳ ಲೇಖನ ಸಮರ್ಥವಾಗಿ ಸೆರೆ ಹಿಡಿದಿದೆ. ಅನುಕರಣೀಯ. ಅವರಿಗೆ ಅಭಿನಂದನೆ ಸಲ್ಲಿಸಲೇಬೇಕು.
    ಈ ಮೂರೂ ಪತ್ರಿಕೆಗಳು ಸಾಕಷ್ಟು ಶ್ರಮ ಹಾಕಿದ್ದು ಕಂಡರೂ, ಒಂಚೂರು ಮುಂಚೂಣಿಯಲ್ಲಿರುವುದು ವಿಜಯ ಕರ್ನಾಟಕವೇ. ನಂತರದ ಸ್ಥಾನಗಳಲ್ಲಿ ಉದಯವಾಣಿ ಹಾಗೂ ಕನ್ನಡಪ್ರಭ. ಕನ್ನಡಪ್ರಭದಲ್ಲಿ ಕೊಂಚ ಗೊಂದಲ ಇದ್ದಂತೆ ತೋರುತ್ತದೆ. ಬೆಂಗಳೂರಿಗೆ ಭಾರೀ ನಿರಾಸೆ, ನೀಲನಕ್ಷೆಯ ಕೊರತೆ ಎಂದು ಪತ್ರಿಕೆಯ ಮಾಲೀಕ ರಾಜೀವ್ ಚಂದ್ರಶೇಖರ್ ಹೇಳಿದರೆ, ಅದೇ ಪುಟದಲ್ಲಿಯೇ ಬೆಂಗಳೂರಿಗೆ 4,770 ಕೋಟಿ ಎಂದು ದೊಡ್ಡ ಹೆಡ್ಡಿಂಗು ಹಾಕಿದೆ.
    ಅತಿ ಮಹತ್ವದ ಅಂಶವಾದ ವ್ಯಾಟ್ ತೆರಿಗೆ ಹೆಚ್ಚಳಕ್ಕೆ ಪತ್ರಿಕೆಗಳು ಹೆಚ್ಚಿನ ಆದ್ಯತೆಯನ್ನೇ ನೀಡಿಲ್ಲ. (ಅದರಿಂದಾಗಿ, ಜನ ಜೀವನ ಮತ್ತಷ್ಟು ದುಬಾರಿಯಾಗಲಿದೆ.) ಈ ಅಂಶ ಗುರುತಿಸುವಲ್ಲಿ ವಿಕ ಹಾಗೂ ಉವಾ ತಕ್ಕ ಮಟ್ಟಿಗೆ ಯಶಸ್ವಿಯಾಗಿವೆ. ಈ ಸುಳಿವು ಮುಖ್ಯ. ಪ್ರಪ್ರಥಮ, ಐತಿಹಾಸಿಕ ಎಂದೆಲ್ಲ ಬೊಬ್ಬಿರಿದು, ಬಣ್ಣ ಬಣ್ಣದಲ್ಲಿ ಅಕ್ಷರಗಳನ್ನು ಬರೆಯುವುದು, ಪದಗಳನ್ನು ತಿರುಚುವುದರಿಂದ ಮನರಂಜನೆಯಾದೀತೇ ವಿನಾ, ಮನೋವಿಕಾಸವಾದೀತು ಎಂದರೆ ನಂಬುವುದು ಕಷ್ಟ.
    ಪತ್ರಿಕೆಗಳಲ್ಲಿನ ವರದಿಯ ಗುಣಮಟ್ಟ, ವರದಿಯ ಸಂಖ್ಯೆಯ ಮೇಲೆ ನಿರ್ಧಾರಿತವಾಗುವುದಿಲ್ಲ. ಅಬ್ಬರದ ಶಬ್ದಗಳು, ಶ್ಲೇಷಾಲಂಕಾರ, ಪದಚಮತ್ಕಾರ, ಗ್ರಾಫಿಕ್ಕುಗಳು, ಚಿತ್ರಗಳಷ್ಟೇ ಭಾರೀ ಕವರೇಜು ಅಲ್ಲ. ಸತ್ವಯುತ ವರದಿಗೆ ಅವು ಪೂರಕ. ಇಲ್ಲವಾದರೆ...
    ಕ್ಷಮಿಸಿ, ಇದೊಂದು ಸಾಮಾನ್ಯ ಓದುಗನ ಅನಿಸಿಕೆ.

    ReplyDelete
  4. Nanaganisida haage Kannada Prabhadalli modalinindalu budget coverage heegeye irthittu. Ranganath iddaginindalu. Helikolluvantha badalavane kanislilla. Sampadakeeya omme haleya pathrikegalannu thiruvi haakidare olithu :)

    ReplyDelete
  5. ohdhu nimma anisike sari, kannada prabha bahutheka yella, sudiyanau tharuva prayathna madidhe, hagu, yalla putta dalu, janara srishikeyanu, hakidhe,

    ReplyDelete
  6. ನನಗನ್ನಿಸಿದ ಹಾಗೆ , ಕನ್ನಡ ಪ್ರಭ ಬಜೆಟ್ ಕುರಿತು ಒಳ್ಳೆಯ ಕವರೇಜ್ ನೀಡಿದೆ. ಇನ್ನು ದೃಶ್ಯ ಮಾಧ್ಯಮಕ್ಕೆ ಬಂದರೆ ಸಮಯ ವಾಹಿನಿಯಲ್ಲಿ ಒಳ್ಳೆಯ ಚರ್ಚೆ ನಡೆದಿತ್ತು. ಎಲ್ಲಾ ವಿಚಾರಗಳ ಕುರಿತಾಗಿ ಮಾತನಾಡಿದ್ದಾರೆ. ಅದು ಕೇವಲ ರಾಜಕಾರಣಿಗಳನ್ನೇ ಕೂರಿಸಿ ಅಲ್ಲ , ಅದಿ ವಿಶೇಷ.

    - ಮಹೇಶ್

    ReplyDelete
  7. yako yeno neevu bhatrannu hogoloke shuru maddi bittiddeeri ansutte..!! haleya kannadaprabha budget yeshtu chennagi barthittu andre navella adanna samrakshisi iduttiddevu..!! aksharagalodane aatave patrikeyallavalla ?
    nijavaglu ee bari kannadaprabha sotide..(avara hale sanchikeyondige!!)

    ReplyDelete
  8. ಸತ್ಯಾ ಎಸ್February 26, 2011 at 12:16 AM

    ಬಜೆಟ್ ಅನ್ನುವುದು ಬರಿಯ ಖರ್ಚು - ಆದಾಯದ ಲೆಕ್ಕಾಚಾರವಲ್ಲ. ಇಷ್ಟೆಲ್ಲಾ ಯೋಜನೆಗಳನ್ನು ರೂಪಿಸಿ, ಇಷ್ಟೆಲ್ಲಾ ಖರ್ಚು ಮಾಡಿದ ಮೇಲೆ ಜನರ ಬದುಕು ಎಷ್ಟು ಹಸನಾಗುತ್ತದೆ ಎಂದು ತೋರಿಸಬೇಕು ಬಜೆಟ್. ಈ ಅಂಶವನ್ನು ಪ್ರಜಾವಾಣಿಯ ಸಂಪಾದಕೀಯ ಹಾಗೂ ಪಿ ಮಹಮದ್ ಅವರ ಚಿನಕುರುಳಿ ಎರಡೂ ತುಂಬಾ ಚೆನ್ನಾಗಿ ತೋರಿಸಿವೆ. ಪ್ರಜಾವಾಣಿಯಲ್ಲಿ ಬಹಳ, ಬಹಳ ಕಾಲದ ನಂತರ ನಿಖರ ವಾಕ್ಯಗಳನ್ನು ಒಳಗೊಂಡ ಒಂದು ಸಂಪಾದಕೀಯವನ್ನು ಇಂದು ಓದಿದೆ.
    ಸುದ್ದಿ ಮಾಧ್ಯಮಗಳ ಮಹಾಪೂರದಿಂದಾಗಿ ಇಂದು ಬಜೆಟ್ ಬಗ್ಗೆ ಓದುವವರು ಹಾಗೂ ಕೇಳುವವರು ಹೆಚ್ಚಾಗಿದ್ದರೆ. ಹಿಂದಿಗಿಂತಲೂ ಹೆಚ್ಚು ಜನರು ಅರ್ಥ ಮಾಡಿಕೊಳ್ಳುತ್ತಾರೆ. ಈ ಅಂಶ ಬಜೆಟ್ ವರದಿಗಾರಿಕೆಯನ್ನು ರೂಪಿಸಬೇಕು ಎಂದು ನನ್ನ ಅಭಿಪ್ರಾಯ. ಬಜೆಟ್ ಮತ್ತು ಚುನಾವಣಿ- ನೀವು ಹೇಳಿದಂತೆ- ಪತ್ರಕರ್ತರಿಗೆ ಖುಷಿ ತರುವ ಮತ್ತು ಸವಾಲು ಒಡ್ಡುವ ಅಸೈನ್ಮೆಂಟ್ಗಳು. ಅವರ ವೃತ್ತಿ ಪರ ಕೌಶಾಲ್ಯಗಳನ್ನು ಒರೆಗೆ ಹಚ್ಚುವ ಸಮಯ. ಮಾಧ್ಯಮದ ಒಳಗೆ ಇಷ್ಟೆಲ್ಲಾ ಓಡಾಟಗಳು ನಡೆದಿರುವಾಗ, ಇಂದಿನ ಪತ್ರಿಕೆಗಳಲ್ಲಿ ನಾನು ಹುಡುಕಿದ್ದು ಹೊಸ ಬಗೆಯಲ್ಲಿ ಬಜೆಟ್ ವರದಿ ಮಂಡನೆಯನ್ನು.

    ReplyDelete
  9. @Anonymous!!! ಯಾಕೋ ಏನೋ ನೀವೇ ಹಳೆಯ ಪತ್ರಿಕೆಯನ್ನು ಸರಿಯಾಗಿ ಓದಿಲ್ಲ ಅನ್ಸತ್ತೆ . ಹೇಗೂ ಸಂರಕ್ಷಿಸಿ ಇಟ್ಟಿದ್ದಿರಲ್ಲ ಒಮ್ಮೆ ತಿರುವಿ ಹಾಕಿದರೆ ಒಳಿತು.. ಭಟ್ಟರ ಬಗ್ಗೆ, ಅವರ ಹೊಸತನದ ಬಗ್ಗೆ, ಕನ್ನಡಿಗರೆಲ್ಲರಿಗೂ ಗೊತ್ತು. (ನಿಮ್ಮಂತ ಕೆಲವರನ್ನು ಹೊರತುಪಡಿಸಿ).

    ReplyDelete
  10. ಬಜೆಟ್‌ನ ಮುಖಪುಟ ವಿಜಯ ಕರ್ನಾಟಕದಲ್ಲೇ ಚೆನ್ನಾಗಿದೆ. ಸಮಗ್ರ ವರದಿ ಉದಯವಾಣಿಗೆ ನಮ್ಮ ಮತ. ರೈಲ್ವೆ ಬಜೆಟ್‌ನಲ್ಲಿ ಉದಯವಾಣಿ ಮುಖಪುಟ ಸೂಪರ್ರು. ಸಮಗ್ರ ಕನ್ನಡ ಪ್ರಭ. ರಾಜ್ಯ ಬಜೆಟ್‌ ಕುರಿತು ವಿಜಯ ಕರ್ನಾಟಕದ ದೃಷ್ಟಿಕೋನ ಚೆನ್ನಾಗಿತ್ತು. ಸಂಪಾದಕೀಯ ಕೂಡ ಭಟ್ಟರ ಭಟ್ಟಂಗಿ ಬಾಂಡ್ಲೆ ಮಾಮ ಪರಿವಾರದ ಬ್ಲಾಗು ಅನ್ನಿಸುತ್ತಿದೆ ಇತ್ತೀಚಿನ ಪೋಸ್ಟ್‌ಗಳಿಂದ...

    ReplyDelete
  11. ಭಟ್ಟರು ಅವರ ಬ್ಲಾಗ್ ನಲ್ಲಿ ನಿಮಗೊಂದು ಥ್ಯಾಂಕ್ಸ್ ಹೇಳಿದ್ದಕ್ಕೆ ನೀವು ಇಲ್ಲಿ ಋಣ ತೀರಿಸಿದಂತಿದೆ!!

    ReplyDelete
  12. Shwetha.V avare, Bhattara hosathana, kriyasheelathe bagge nannadu eradu mathilla :) adare e baariya budget coverage Kannada Prabhadalli Bhattarindaagi chennagi mudi banthu anno vaada mathra nanu oppalaare. e modalu Kannada Prabha thanna haleya sanchikegalalli heegeye coverage needittu. Edaralli bhattara paalide antha nanage anisalilla. Kannada Prabha thanna haleya cheluvannu e baariya budget coveragenalli ulisikondide endaste helabahudu. Enantheera?
    - Surabhi S

    ReplyDelete
  13. yaru ene helidru.. budget coverage hagu designnalli UDAYAVANI PAPEREE NO.1. YAKENDRE EDITOR RAVI HEGDE AVRA CHAKA CHAKKYATEGE SANDA JAYA ANTA NANNA BHAVANE

    ReplyDelete
  14. ಯಡಿಯೂರಪ್ಪ ಮಂಡಿಸಿದ ಬಜೆಟ್ ಬಗ್ಗೆ ದಿನಪತ್ರಿಕೆಗಳೆಲ್ಲಾ ತುತ್ತೂರಿ ಊದುತ್ತಿದ್ದಾಗ ವಿಜಯ ನೆಕ್ಸ್ಟ್ http://www.vijayanextepaper.com/ಸೋಷಿಯಲ್ ಆಡಿಟಿಂಗ್ ನಡೆಸಿ,ಯೋಜನೆಗಳ ಹಣೆಬರಹವನ್ನು ಓದುಗರ ಮುಂದಿಟ್ಟಿದೆ. ದೊಡ್ಡ ಪ್ರಮಾಣದಲ್ಲಿ ಈ ಕೆಲಸ ನಡೆದಿದ್ದರೆ ಬಜೆಟ್ ಬಗ್ಗೆ ಇರುವ ಕಲ್ಪನೆಗಳೆಲ್ಲಾ ಹಳ್ಳಾ ಹತ್ತುತ್ತಿತ್ತು.

    ReplyDelete
  15. ಸಂಪಾದಕೀಯ ಬ್ಲಾಗ್ ಬಹುಶ: ಪೂರ್ವಾಗ್ರಹಪೀಡಿತವಾಗಿ ತೋರುತ್ತಿದೆ. ಕನ್ನಡಪ್ರಭದ ಬಗ್ಗೆ ಬರೆದಿರುವ ಬರಹಗಳನ್ನು ಓದಿದರೇ ಗೊತ್ತಾಗುತ್ತದೆ. ಇದು ಕನ್ನಡಪ್ರಭದ ತುತ್ತೂರಿ ಎಂದು. ಉಳಿದ ಪತ್ರಿಕೆಗಳ ಬಗ್ಗೆ ಯಾಕಿಷ್ಟು ಅಸಡ್ಡೆಯೋ! ಗಿಮಿಕ್ ಮಾಡಿ, ಹೆಡ್ ಲೈನ್ ಬದಲಾಯಿಸಿ, ಕಲರ್ ಫುಲ್ ಮಾಡಿದಾಕ್ಷಣ ಯಾವ ಪತ್ರಿಕೆಯೂ ನಂ.೧ ಸ್ಥಾನ ಪಡೆಯದು. ಅದನ್ನು ಓದುಗರೇ ನಿರ್ಧರಿಸ್ತಾರಿ ಬಿಡಿ.

    ReplyDelete
  16. ನಾವೂ ನಿಮ್ಮಂತೆ ಎಲ್ಲ ಪತ್ರಿಕೆ ಒಟ್ಟು ಮಾಡಿ ನೋಡಿದೆವು . ಲೇಔಟ್ ಮತ್ತು ತಜ್ಞರ ಅಭಿಪ್ರಾಯಗಳನ್ನು ವಿವರವಾದ budget ಮುಖ್ಯಾಂಶಗಳನ್ನು ನೀಡುವಲ್ಲಿ ಹೊಸದಿಗಂತ ಮುಂದಿದೆ.ಆದ್ರೆ ಸಂಪಾದಕೀಯಕ್ಕೆ ಅದೇಕೋ ಚೆನ್ನಾಗಿ ಬರುತ್ತಿರುವ ದಿಗಂತದ ಬಗ್ಗೆ ಪೂರ್ವಾಗ್ರಹ ಇದ್ದಂತಿದೆ.ಲೇಔಟ್ ಮಾತ್ರ ಸೂಪರ್ ಅಂತ ಹೇಳಿ ಸರ್ಕಾರದ ಜಾಹೀರಥಿನಂತಿದೆ ಅನ್ನುವ ನೀವು ಪೂರ್ತಿ ನೋಡಿಲ್ಲ ಅಂತ nanna bhaavane

    ReplyDelete
  17. ಎಲ್ರೂ Anonymous Anonymousಆಗಿ ಯಾಕೆ ಬರೀತೀರಾ? ನಿಮ್ಮ ಹೆಸರಲ್ಲಿ ಬರೀರಿ. ಇಲ್ಲ ಅಂದ್ರೆ ಯಾವ್ದೋ ಒಂದು ಹೆಸ್ರು ಕೊಡಿ. ಯಾರು ಯಾರಿಗೆ ರಿಪ್ಲೈ ಕೊಡ್ತಾಯಿದ್ದಾರೆ ಅಂತಾನೇ ಗೊತ್ತಾಗಲ್ಲ. @ಸಂಪಾದಕೀಯ... ಆ Anonymous option ತೆಗೀರಿ.

    ReplyDelete
  18. ಮನು ಅವರೇ , ನಿಮ್ಮ ಸಲಹೆ ಸರಿ ಇದೆ.ಆದ್ರೆ , ನೀವೇ ಹೇಳಿದಂತೆ ಹೆಸರು ಸುಳ್ಲಾಗಿದ್ರೂ ಒಂದು ಹೆಸರು ಬೇಕು ಅನ್ನೋದು ಸರಿ ಅಲ್ಲ .ಹಾಕೋದಾದ್ರೆ ನಿಜವಾದ ಹೆಸರು ಹಾಕಬೇಕು.
    ಇನ್ನೂ ಒಂದು ಅಂಶ.ಸಂಪಾದಕೀಯವೇ ಅನಾಮಧೇಯ ಪೋಸ್ಟು ಗಳನ್ನು ಹಾಕಬಾರದು ಅಂತ ನಿರ್ಧರಿಸಿ ನಂತರ ಅದರ ಪರಿಣಾಮ ಅರಿತು ತನ್ನ ನಿರ್ಧಾರ ಬದಲಿಸಿದೆ.ಮೇಲಾಗಿ ಪತ್ರಿಕೋದ್ಯಮದ ಬಗ್ಗೆ ತೀರಾ ಖಾಸಾ ಸುದ್ದಿಇರೋರೆ ಪ್ರತಿಕ್ರಿಯೆ ನೀಡ್ತಾರೆ. ವಿಷ್ಯ ಮುಖ್ಯವೇ ಹೊರತು ಪ್ರತಿಕ್ರಿಯಿಸಿದ್ದು ಯಾರು ಅನ್ನೋದು ಅಷ್ಟು ಮುಖ್ಯ ಅಲ್ಲ , ಏನಂತೀರಿ ?
    ಇಷ್ಟಾಗಿ ಮನು ನಿಮ್ಮ ನಿಜ ನಾಮಧೆಯವೇ ? ಅಥವಾ ... ?

    ReplyDelete
  19. naanu kannadaprabhadalli modalu nodudu panchamukhi-cartoon padmanabharaddu...! idu super sahitya ondide....yaavude kannada vyangya chitrakaararu ivarannu meeri nillalu saadyave illa.

    ReplyDelete