Saturday, April 23, 2011

ಹಿಂದೂ ಪತ್ರಿಕೆಯಲ್ಲಿ ಸೋದರ ಕಲಹ ಮತ್ತು ಸಂಸ್ಥೆ ಬದಲಿಸಿದ ಬಲರಾಂ....


ಎನ್.ರಾಮ್
 ಚೆನ್ನೈನ ಪ್ರತಿಷ್ಠಿತ ಕಸ್ತೂರಿ ಕಟ್ಟಡದಲ್ಲಿನ ಬಿರುಕುಗಳು ದೊಡ್ಡದಾಗುತ್ತಿವೆ. ದಿ ಹಿಂದೂ ಪತ್ರಿಕೆ ಮುಖ್ಯ ಸಂಪಾದಕ ಎನ್. ರಾಮ್ ಮತ್ತವರ ಕಿರಿಯ ಸಹೋದರ ಎನ್. ರವಿ ಮಧ್ಯೆ ವಿರಸ ಬೀದಿಗೆ ಬಿದ್ದಿದೆ. ರಾಮ್ ನೇತೃತ್ವದ ಆಡಳಿತ ಮಂಡಳಿ ರವಿಯನ್ನು ಸಂಪಾದಕ ಹುದ್ದೆ ತೊರೆಯುವಂತೆ ನಿರ್ದೇಶಿಸಿದೆ. ಅವರ ಸ್ಥಾನದಲ್ಲಿ ಪತ್ರಿಕೆ ದೆಹಲಿ ಬ್ಯೂರೋ ಮುಖ್ಯಸ್ಥ ಹಾಗೂ ಸೂಕ್ಷ್ಮಮತಿ ಬರಹಗಾರ, ಚಿಂತಕ ಸಿದ್ಧಾರ್ಥ ವರದರಾಜನ್ ಅವರನ್ನು ನೇಮಿಸಲು ಉದ್ದೇಶಿಸಿದೆ. ಈಗ್ಗೆ ಕೆಲವು ದಿನಗಳ ಹಿಂದೆ ಸಂಪಾದಕೀಯ ಸಿದ್ಧಾರ್ಥ ವರದರಾಜನ್ ಕುರಿತು ಬರೆದಿದ್ದನ್ನು ಇಲ್ಲಿ ನೆನಪು ಮಾಡಿಕೊಳ್ಳಬಹುದು.

ಎಚ್.ಎಸ್.ಬಲರಾಂ
ಈ ಬೆಳವಣಿಗೆ ಮೂಲಕ ೧೩೨ ವರ್ಷಗಳ ಇತಿಹಾಸ ಇರುವ ದಿ ಹಿಂದೂ ಗ್ರೂಪ್ ಆಫ್ ಪಬ್ಲಿಕೇಶನ್ಸ್ ಒಂದು ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ. ಮೊಟ್ಟ ಮೊದಲ ಬಾರಿಗೆ ಕಸ್ತೂರಿ ಕುಟುಂಬ ಹೊರಗಿನ ವ್ಯಕ್ತಿಯೊಬ್ಬರನ್ನು ಸಂಪಾದಕ ಸ್ಥಾನಕ್ಕೆ ನೇಮಿಸಿದೆ. ಇದು ಸದ್ಯ ಕುಟುಂಬದಲ್ಲಿ ತೀವ್ರ ಚರ್ಚೆಯಾಗುತ್ತಿರುವ ಸಂಗತಿ. ಈ ಬೆಳವಣಿಗೆಯಿಂದ ಬೇಸತ್ತ ಎನ್. ರವಿ ಸಂಸ್ಥೆಯ ಎಲ್ಲಾ ನೌಕರರಿಗೆ ಒಂದು ಪತ್ರ ಬರೆದು ತಮ್ಮ ಬೇಸರವನ್ನು ದಾಖಲಿಸಿದ್ದಾರೆ. ಪತ್ರದ ಮೂಲಕ ದಿ ಹಿಂದೂ ಪತ್ರಿಕೆ ಇತ್ತೀಚಿನ ಕೆಲ ವಿಚಾರಗಳಲ್ಲಿ ತಳೆದ ಸಂಪಾದಕೀಯ ಧೋರಣೆ, ನಿಲುವುಗಳನ್ನು ಬಹಿರಂಗವಾಗಿಯೇ ಟೀಕಿಸಿದ್ದಾರೆ. ಜೊತೆಗೆ ಪತ್ರಿಕೆಯು ೨ಜಿ ಹಗರಣದಲ್ಲಿ ಸಿಲುಕಿರುವ ರಾಜಾನ ವಿರುದ್ಧ ಕಠಿಣ ನಿಲುವು ತಾಳದೆ, ಅವರನ್ನು ಬೆಂಬಲಿಸಿತು ಮತ್ತು ಈ ಧೋರಣೆಗಾಗಿ ಟೆಲಿಕಾಂ ಇಲಾಖೆಯಿಂದ ವಿಶೇಷ ಜಾಹೀರಾತನ್ನೂ ಪಡೆಯಿತು ಎಂದು ರವಿ ಟೀಕಿಸಿದ್ದಾರೆ. ಹೀಗೆ ಒಂದು ಬೃಹತ್ ಸಂಸ್ಥೆಯೊಳಗಿನ ಹುಳುಕುಗಳು ಹೊರಬಂದ ಉದಾಹರಣೆ ಇತ್ತೀಚಿನ ದಿನಗಳಲ್ಲಿ ಇರಲಿಲ್ಲ.

ಸಿದ್ಧಾರ್ಥ ವರದರಾಜನ್
ಇದೇ ಹೊತ್ತಿನಲ್ಲಿ ಇನ್ನೊಂದು ಬೆಳವಣಿಗೆಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕು. ಕರ್ನಾಟಕದಲ್ಲಿ ಬಹುಕಾಲ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡು, ಯಶಸ್ವಿ ನೇತಾರ ಎನಿಸಿಕೊಂಡ ಎಚ್.ಎಸ್ ಬಲರಾಮ್ ನಾಲ್ಕು ದಿನಗಳ ಹಿಂದೆ ಏಷಿಯಾನೆಟ್ ಸುದ್ದಿ ಸಂಸ್ಥೆಯ ನಿರ್ದೇಶಕರಾಗಿ ನೇಮಕವಾಗಿದ್ದಾರೆ. ಪತ್ರಿಕೋದ್ಯಮ ಮತ್ತು ಬಲರಾಮ್ ನಂಟು ನಾಲ್ಕು ದಶಕಗಳಷ್ಟು ಹಳೆಯದು.

ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ಕೆಲಸ ಆರಂಭಿಸಿದ ಅವರು ಟೈಮ್ಸ್ ಆಫ್ ಇಂಡಿಯಾ ಬೆಂಗಳೂರು ಆವೃತ್ತಿಯನ್ನು ಹದಿನೈದಕ್ಕೂ ಹೆಚ್ಚು ವರ್ಷಗಳ ಕಾಲ ಯಶಸ್ವಿಯಾಗಿ ಮುನ್ನಡೆಸಿದರು. ಅವರ ನೇತೃತ್ವದಲ್ಲಿ ಪತ್ರಿಕೆ ರಾಜ್ಯದಲ್ಲಿ ನಂ೧ ಇಂಗ್ಲಿಷ್ ಪತ್ರಿಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ಟೈಮ್ಸ್‌ನಲ್ಲಿ ಬಲರಾಂ ವಾರಕ್ಕೊಂದು ಕಾಲಂ ಮೂಲಕ ರಾಜಕೀಯ ಘಟನೆಗಳ ವಿಶ್ಲೇಷಣೆ ಮಾಡುತ್ತಿದ್ದರು. ಇತ್ತೀಚೆಗಷ್ಟೆ ತಮ್ಮ ಸ್ಥಾನವನ್ನು ವಿನಯ್ ಕಾಮತರಿಗೆ ಬಿಟ್ಟುಕೊಟ್ಟಿದ್ದದ್ದ ಅವರು ಹೊಸ ಸಂಸ್ಥೆಯ ಕಡೆ ಮುಖ ಮಾಡಿದ್ದಾರೆ. ಅವರಿಗೆ ಶುಭಾಶಯಗಳು.

2 comments:

  1. Barea jotisya ayeethu. Breaking news kodi. Edu 3 days old news.

    ReplyDelete
  2. Ee N.Ram emba S(B)uddhijeevi tamma kempu kannadakadindale lokada aaguhogugalannu aleyuvavaru... samanya Prakash Katatnantaha fanaticism avarallide.Hagende avara dainikadalli, Frontlinenalli bareyuva lekhakarella ide jaadinavaru .Sri Ram avara dristikonadindagi ivara dainikavannu voduvudu , particularly edit page , bariya himseyaguttide. English improove maaduvalli, suddige oalleya coverage koduvalli patrikeya astitvavannu allagaleyalaagadu. Aadare communist dristikonave parama satya sadaakalakkoo endu oppuvastu vachaka moorkhanalla endu ee Ram tilidare chenna.

    ReplyDelete