Saturday, October 29, 2011

ಮಾಧ್ಯಮ ನಿಸ್ಪೃಹತೆ: ರವಿಕೃಷ್ಣಾರೆಡ್ಡಿ ಬರೆದ ಪತ್ರಕ್ಕೆ ಒಂದು ಉತ್ತರ


ಕೆಲವು ದಿನಗಳ ಹಿಂದೆ ವರ್ತಮಾನದಲ್ಲಿ ರವಿಕೃಷ್ಣಾರೆಡ್ಡಿಯವರು ಮಾಧ್ಯಮ ಮಿತ್ರರಿಗೆ ಮತ್ತು ಕನ್ನಡ ಪತ್ರಕರ್ತರಿಗೊಂದು ಪತ್ರ ಎಂಬ ಲೇಖನ ಬರೆದಿದ್ದರು. ಪತ್ರಕರ್ತರಿಗೆ ಹಲವು ಪ್ರಶ್ನೆಗಳನ್ನು ಅವರು ಒಡ್ಡಿದ್ದರು, ಯಾರಾದರೂ ಉತ್ತರಿಸಬಹುದೆಂಬ ನಿರೀಕ್ಷೆಯಲ್ಲಿ. ಯಾರೂ ಉತ್ತರಿಸಿದಂತೆ ಕಾಣುತ್ತಿಲ್ಲ. ಹೀಗಾಗಿ ಆ ಜವಾಬ್ದಾರಿಯನ್ನು ನಾವೇ ಹೊತ್ತು ಈ ಮಾರುತ್ತರವನ್ನು ಬರೆದಿದ್ದೇವೆ. ರವಿಕೃಷ್ಣಾರೆಡ್ಡಿಯವರು ಎತ್ತಿರುವ ಪ್ರಶ್ನೆಗಳು ಗಂಭೀರವಾದವೂ, ಚರ್ಚಾಯೋಗ್ಯವೂ, ಈ ಕ್ಷಣದ ಅಗತ್ಯವೂ ಆಗಿರುವುದರಿಂದ ಅವೆಲ್ಲ ಚರ್ಚೆಯೇ ಆಗದೇ ಉಳಿಯಬಾರದು ಎಂಬುದು ನಮ್ಮ ಕಾಳಜಿ. ಎಂದಿನಂತೆ ನಮ್ಮ ಓದುಗರ ಪ್ರತಿಕ್ರಿಯೆಗಳನ್ನು ನಿರೀಕ್ಷಿಸುತ್ತೇವೆ. 

ಪ್ರಿಯ ರವಿಕೃಷ್ಣಾ ರೆಡ್ಡಿಯವರೇ,

ನಮಸ್ಕಾರ,

ಮುರುಗೇಶ್ ನಿರಾಣಿ
ನೀವು ಎತ್ತಿರುವ ಪ್ರಶ್ನೆಗಳು ಸಕಾಲಿಕವಾಗಿವೆ, ಸರಳವಾಗಿವೆ. ನಿಮ್ಮ ಪತ್ರದ ಮೊದಲ ಭಾಗದಲ್ಲಿ ಎತ್ತಿರುವ ಪ್ರಶ್ನೆ ಇವತ್ತಿನ ಮಾಧ್ಯಮ ಸಂಸ್ಥೆಗಳನ್ನು ಆಳುತ್ತಿರುವವರು ಯಾರು ಎಂಬುದನ್ನು ಸೂಚಿಸುತ್ತದೆ. ನಿಮ್ಮ ಲೇಖನದಲ್ಲಿ ಉಲ್ಲೇಖಿಸಿದ ಆಲಂ ಪಾಷ ವಿರುದ್ಧ ಸಮಯ ಟಿವಿಯಲ್ಲಿ ಮಾತ್ರವೇಕೆ ಸುದ್ದಿ ಬರುತ್ತೆ ಎಂದು ನೀವು ಕೇಳುತ್ತೀರಿ. ಮುರುಗೇಶ್ ನಿರಾಣಿಯವರ ಪಾಲುದಾರಿಕೆ ಇರುವ  ಸಮಯ ಟಿವಿಯಲ್ಲದೆ ಬೇರೆಲ್ಲಿ ಬರಲು ಸಾಧ್ಯ ಎಂಬುದು ಸ್ಪಷ್ಟ ಉತ್ತರ. ಮಾಧ್ಯಮ ಸಂಸ್ಥೆಗಳು ಈಗೀಗ ಹಲವರ ಕೈಗಳ ದಾಳವಾಗಿವೆ. ಇಲ್ಲೂ ಅದೇ ಆಗಿದೆ.

ನೀವು ಕಸ್ತೂರಿ ಟಿವಿಯ ಸುದ್ದಿಗಳನ್ನು ನೋಡಿರಬಹುದು. ಅಲ್ಲೂ ಹಾಗೇನೇ. ಅಲ್ಲಿ ಕುಮಾರಸ್ವಾಮಿ ವಿರುದ್ಧ ಯಾರ‍್ಯಾರು ಇದ್ದಾರೋ ಅವರೆಲ್ಲರೂ ಟಾರ್ಗೆಟ್ ಆಗುತ್ತಾರೆ. ಕುಮಾರಸ್ವಾಮಿ ಒಂದು ಪತ್ರಿಕಾಗೋಷ್ಠಿ ನಡೆಸಿದರೆ ಗಂಟೆಗಟ್ಟಲೆ ಆ ಗೋಷ್ಠಿಯನ್ನು ಅದು ಪ್ರಸಾರ ಮಾಡುತ್ತದೆ. ತೀರಾ ಜೆಡಿಎಸ್ ಕಾರ್ಯಕರ್ತರೇ ಈ ಭಟ್ಟಂಗಿ ಚಾನಲ್‌ನ ನ್ಯೂಸ್‌ಗಳನ್ನು ನೋಡುತ್ತಾರೋ ಇಲ್ಲವೋ ಅದು ಅನುಮಾನ.

ಇತ್ತೀಚಿಗೆ ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭಗಳಲ್ಲಿ ಯಡಿಯೂರಪ್ಪ ವಿರುದ್ಧ ನಡೆಯುತ್ತಿರುವ ವ್ಯವಸ್ಥಿತ ದಾಳಿಯ ಹಿಂದೆ ಯಾರಿದ್ದಾರೆ ಎಂಬುದನ್ನು ಸುಲಭವಾಗಿ ಊಹಿಸಬಹುದು. ಯಡಿಯೂರಪ್ಪ ಆರೋಪಿಯಾಗಿ ಜೈಲಿಗೆ ಹೋಗಿದ್ದಾರೆ, ಇದು ಅವಮಾನಕರ ಎಂಬುದು ನಿಜ.  ಆದರೆ ಇಡೀ ಪುಟದಲ್ಲಿ ಯಡಿಯೂರಪ್ಪ ಸರಳುಗಳ ಹಿಂದೆ ಕುಳಿತಿರುವ ಚಿತ್ರ ಪ್ರಕಟಿಸುವ ಅಗತ್ಯವಿತ್ತಾ?  ಈ ಎರಡು ಮೀಡಿಯಾ ಸಂಸ್ಥೆಗಳು ಯಡಿಯೂರಪ್ಪ ಅವರನ್ನು ಗಲ್ಲಿಗೆ ಹಾಕುವ ಆತುರದಲ್ಲಿ ಇದ್ದಂತೆ ಬಹಳ ಸ್ಪಷ್ಟವಾಗಿ ತೋರುತ್ತದೆ. ಯಾಕೆ ಹೀಗೆ? ಇದಕ್ಕೇನು ಕಾರಣ?  ಒಂದು ವೇಳೆ ಯಡಿಯೂರಪ್ಪ ಬದಲಾಗಿ ಅನಂತಕುಮಾರ್ ಹುಡ್ಕೋ ಹಗರಣದ ವಿಷಯದಲ್ಲೋ, ಇನ್ನೊಂದರಲ್ಲೋ ಜೈಲಿಗೆ ಹೋಗಿದ್ದರೆ ಇದೇ ರೀತಿ ಅಪಮಾನಕಾರಿಯಾದ ವರದಿಗಳನ್ನು ಈ ಮಾಧ್ಮಮ ಸಂಸ್ಥೆಗಳು ಪ್ರಕಟಿಸುತ್ತಿದ್ದವೇ?

ಇದಕ್ಕೆ ತದ್ವಿರುದ್ಧವಾದ ಇನ್ನೊಂದು ಕಥೆ ಇದೆ, ನೋಡಿ. ಹೊಸದಿಗಂತ ಅಂತ ಒಂದು ಪತ್ರಿಕೆ ಇದೆ, ನಿಮಗೆ ಗೊತ್ತಿರಬಹುದು. ಯಡಿಯೂರಪ್ಪ ಜೈಲಿಗೆ ಹೋಗಿದ್ದು ಅವರಿಗೆ ಸುದ್ದಿನೇ ಅಲ್ಲ. ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು ಜೈಲಿಗೆ ಹೋದಾಗ ಆ ಪತ್ರಿಕೆಯಲ್ಲಿ ಯಾವುದೋ ಅಪಘಾತದ ವರದಿಯೇ ಪ್ರಮುಖ ಸುದ್ದಿಯಾಗುತ್ತದೆ. ಕೋಮಾವಸ್ಥೆಯಲ್ಲಿದ್ದ ದಿಗಂತಕ್ಕೆ ಆಮ್ಲಜನಕ ಕೊಟ್ಟು ಉಸಿರಾಡುವಂತೆ ಮಾಡಿದ್ದು ಯಡಿಯೂರಪ್ಪ. ಇದೇ ಯಡಿಯೂರಪ್ಪ ಜೈಲಿಗೆ ಹೋದಾಗ ಋಣಪ್ರಜ್ಞೆ ಕೆಲಸ ಮಾಡದಿದ್ದರೆ ಹೇಗೆ?

ಇವತ್ತು ಮಾಧ್ಯಮಸಂಸ್ಥೆಗಳನ್ನು ನಿಯಂತ್ರಿಸುತ್ತಿರುವವರು ರಾಜಕಾರಣಿಗಳು. ಹಿಂದೆಲ್ಲ ರಾಜಕಾರಣಿಗಳು ಬರೇ ರಾಜಕಾರಣಿಗಳಾಗಿದ್ದರು. ಈಗ ಅವರು ಪಾರ್ಟ್‌ಟೈಮ್ ಉದ್ಯಮಿಗಳು, ಪಾರ್ಟ್‌ಟೈಮ್ ರಾಜಕಾರಣಿಗಳು. ಮಾಧ್ಯಮ ಸಂಸ್ಥೆಗಳನ್ನು ಹಿಡಿತಕ್ಕೆ ತಂದುಕೊಂಡು ತಮ್ಮ ರಾಜಕಾರಣ ಮತ್ತು ಉದ್ಯಮ ಎರಡನ್ನೂ ರಕ್ಷಣೆ ಮಾಡಿಕೊಳ್ಳೋದು ಅವರ ಉದ್ದೇಶ. ಆಲಂಪಾಷ ವಿಷಯದಲ್ಲಿ ನಡೆದಿರುವುದು ಅದೇ.

ರಾಜೀವ್ ಚಂದ್ರಶೇಖರ್
ಇನ್ನು ಈ ವಿದ್ಯಮಾನವನ್ನು ಬೇರೆ ಮಾಧ್ಯಮಗಳೇಕೆ ವರದಿ ಮಾಡಲಿಲ್ಲವೆಂಬ ನಿಮ್ಮ ಪ್ರಶ್ನೆಗೆ ಉತ್ತರವೂ ಇಲ್ಲೇ ಇದೆ. ಎಲ್ಲರದೂ ಒಂದಲ್ಲ ಒಂದು ಹುಳುಕು. ಒಬ್ಬರ ಹುಳುಕನ್ನು ಮತ್ತೊಬ್ಬರು ಜಾಹೀರು ಮಾಡಿದರೆ ಆ ಒಬ್ಬರು ಸುಮ್ಮನಿರಲು ಹೇಗೆ ಸಾಧ್ಯ? ಅವರು ಇವರದನ್ನು ಬಯಲು ಮಾಡುತ್ತಾರೆ, ಅಲ್ಲವೇ? ಎಲ್ಲೋ ಪ್ರಜಾವಾಣಿಯಂಥ ಪತ್ರಿಕೆ ಆಗಲೋ ಈಗಲೋ ಸಣ್ಣ ಪ್ರಮಾಣದ ಧ್ವನಿಯನ್ನು ಪ್ರತ್ಯಕ್ಷವಾಗೋ ಪರೋಕ್ಷವಾಗೋ ಎತ್ತುವುದನ್ನು ಬಿಟ್ಟರೆ ನೀವು ಬೇರೆ ಸಂಸ್ಥೆಗಳಿಂದ ಇಂಥ ಒಳಬಂಡಾಯವನ್ನು ಹೇಗೆ ಕಾಣಲು ಸಾಧ್ಯ?

ಇನ್ನು ನಿಮ್ಮ ಪತ್ರದ ಎರಡನೇ ಭಾಗಕ್ಕೆ ಬರುವುದಾದರೆ ಅಲ್ಲೂ ನಿಮಗೆ ನಿರಾಶಾದಾಯಕ ಉತ್ತರಗಳೇ ಲಭಿಸುತ್ತವೆ. ಸಹ ಪತ್ರಕರ್ತನಿಗೆ ಅನ್ಯಾಯವಾದಾಗ ಯಾಕೆ ಯಾರೂ ಧ್ವನಿ ಎತ್ತುವುದಿಲ್ಲ ಎನ್ನುತ್ತೀರಿ ನೀವು. ಯಾರು ಧ್ವನಿ ಎತ್ತಬೇಕು? ಧ್ವನಿ ಎತ್ತಬಹುದಾದ ಸಂಸ್ಥೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ. ಅದನ್ನು ಹಲವರು ಕಾರ್ಯಮರೆತ ಪತ್ರಕರ್ತರ ಸಂಘ ಎಂದು ಗೇಲಿ ಮಾಡುವುದೂ ಉಂಟು. ಮುಖ್ಯವಾಹಿನಿಯ ಪತ್ರಕರ್ತರ ಪೈಕಿ ಬಹುತೇಕರು ಇಲ್ಲಿ ಸದಸ್ಯರೇ ಆಗಿಲ್ಲ ಎಂದರೆ ನೀವು ನಂಬಲೇಬೇಕು. ಹೆಸರೇ ಇಲ್ಲದ ಅಥವಾ ಇಲ್ಲವೇ ಇಲ್ಲದ ಪತ್ರಿಕೆಗಳವರೇ ಇಲ್ಲಿ ಹೆಚ್ಚು ಸಂಖ್ಯೆಯಲ್ಲಿ ಸದಸ್ಯರು. ಜಿಲ್ಲಾ ಮಟ್ಟದಲ್ಲಿ ಈ ಸಂಘಟನೆ ಅಲ್ಪಸ್ವಲ್ಪ ಕ್ರಿಯಾಶೀಲವಾಗಿದೆ, ಆದರೆ ರಾಜ್ಯಮಟ್ಟದಲ್ಲಿ ಕ್ರಿಯಾಶೀಲವಾಗಿದ್ದನ್ನು ಕಂಡವರು ಇಲ್ಲ. ಎಲ್ಲೋ ಯಾರೋ ಪತ್ರಕರ್ತನ ಕೊಲೆಯಾದರೆ ಒಂದು ಸಾಂಕೇತಿಕ ಪ್ರತಿಭಟನೆ, ವಿಧಾನಸೌಧಕ್ಕೆ ಪ್ರವೇಶಪತ್ರ ಕೊಡಲಿಲ್ಲವೆಂದರೆ ಒಂದು ಪ್ರತಿಭಟನೆ, ಬಸ್ ಪಾಸ್ ಕೊಡಿ ಎಂದು ಒಂದು ಪ್ರತಿಭಟನೆ... ಇಂಥವುಗಳನ್ನು ಬಿಟ್ಟು ಯೂನಿಯನ್ ಬೇರೆ ಏನನ್ನೂ ಮಾಡಿದ್ದನ್ನು ಯಾರೂ ಕಂಡಿಲ್ಲ.

ನೀವು ಮಾನಸ ಪುದುವೆಟ್ಟು ಕೆಲಸ ಕಳೆದುಕೊಂಡ ವೃತ್ತಾಂತ ಬರೆದಿದ್ದೀರಿ. ಗಂಡ ಬರೆದ ಸುದ್ದಿಗೆ ಹೆಂಡತಿಯ ತಲೆದಂಡವಾಗುವುದು ಎಷ್ಟು ಕ್ರೂರ ಮತ್ತು ಅಮಾನವೀಯ ಎಂದು ಈ ಯೂನಿಯನ್‌ನ ಪದಾಧಿಕಾರಿಗಳಿಗೆ, ಅದರಲ್ಲೂ ಗಂಗಾಧರ ಮೊದಲಿಯಾರ್‌ರಂಥ ಹಿರಿಯರಿಗೆ ಅನಿಸುವುದೇ ಇಲ್ಲ. ಪ್ರತಿಭಟನೆ ಬೇಡ, ಯಾಕೆ ಹೀಗೆ ಮಾಡಿದ್ರಿ ಎಂದು ಸಮಯದ ಮ್ಯಾನೇಜ್‌ಮೆಂಟನ್ನು ಕೇಳಲಾರದಷ್ಟು ಇವರ ಬಾಯಿ ಸತ್ತಿದೆ. ಯೂನಿಯನ್ ಇರೋದು ಮತ್ತೆ ಯಾವ ಪುರುಷಾರ್ಥಕ್ಕೆ ಅಂತ ನೀವು ಕೇಳಬಹುದು. ಕೆಜಿ ರಸ್ತೆಯಲ್ಲಿದ್ದ ಅಮೂಲ್ಯ ಆಸ್ತಿಯನ್ನು ಉಳಿಸಿಕೊಳ್ಳಲು ಯೂನಿಯನ್‌ನವರಿಗೆ ಸಾಧ್ಯವಾಗಲಿಲ್ಲ. ಪ್ರತಿಯೊಂದಕ್ಕೂ ಕೋರ್ಟಿಗೇರುವ, ಸಣ್ಣಪುಟ್ಟದಕ್ಕೂ ಜಗಳ ಮಾಡಿಕೊಂಡು ಕೂರುವ ಯೂನಿಯನ್‌ನವರಿಗೆ ಮಾನಸ ಅವರ ಸಮಸ್ಯೆ ಬಗೆಹರಿಸುವ ಸಮಯವಾದರೂ ಎಲ್ಲಿದೆ ಹೇಳಿ?

ಸೋಮಶೇಖರ ಪಡುಕೆರೆ
ಮಾನಸ ವಿಷಯ ಪ್ರಸ್ತಾಪಿಸುವ ಸಂದರ್ಭದಲ್ಲೇ ನಿಮಗೆ ಸೋಮಶೇಖರ ಪಡುಕೆರೆ ಎಂಬ ಪತ್ರಕರ್ತರ ವಿಷಯ ಹೇಳಬೇಕು. ಕ್ರೀಡಾ ವರದಿಗಾರಿಕೆಯಲ್ಲಿ ಪಳಗಿದ್ದವರು ಸೋಮಶೇಖರ್. ಕನ್ನಡಪ್ರಭದಲ್ಲಿ ಸರಿಸುಮಾರು ದಶಕದ ಅನುಭವವಿದೆ. ಸಹಪತ್ರಕರ್ತರ ನಡುವೆ ಒಳ್ಳೆಯ ಹೆಸರು ಪಡೆದವರು. ಇತ್ತೀಚಿಗೆ ಏಕಾಏಕಿ ಅವರಿಂದ ರಾಜೀನಾಮೆ ಪಡೆಯಲಾಯಿತು. ಕಾರಣಕ್ಕಾಗಿ ಹುಡುಕುವ ಅಗತ್ಯವೂ ಇಲ್ಲ. ಹೀಗೆ ಪತ್ರಕರ್ತರನ್ನು ಬಲಿ ತೆಗೆದುಕೊಳ್ಳುವ ಪ್ರಕ್ರಿಯೆ ಸದಾ ಚಾಲ್ತಿಯಲ್ಲಿ ಇರುತ್ತದೆ. ನಿನ್ನೆ ಮಾನಸ, ಇವತ್ತು ಸೋಮಶೇಖರ್, ನಾಳೆ ಇನ್ಯಾರೋ?  ಹೀಗೆ ಮಾಧ್ಯಮಗಳಿಂದ ದೂರವಾಗಿ ಬೇರೆ ಕ್ಷೇತ್ರಗಳಿಗೆ ವಲಸೆ ಹೋದವರ ಸಂಖ್ಯೆ ದಿನೇದಿನೇ ಹೆಚ್ಚುತ್ತಲೇ ಇದೆ. ಹೋಗುವವರು ಹೋಗುತ್ತಲೇ ಇದ್ದಾರೆ, ಕೇಳುವವರು ಯಾರೂ ಇಲ್ಲ. ತೀರಾ ಹೀಗೆ ಮಾಧ್ಯಮ ಬಿಟ್ಟು ಹೋದವರನ್ನೂ ಗೇಲಿ ಮಾಡುವ ಬಾಣಗಳನ್ನು ಹೊಡೆಯುವ ಕ್ರೂರ ಮನಸ್ಸು ಘನತೆವೆತ್ತ ಪತ್ರಕರ್ತರಿಗೇ ಇರುವಾಗ ಬೇರೇನು ಹೇಳೋದು? ಸೋಮಶೇಖರ್‌ರಂಥವರಿಗೆ ಬಕೆಟ್ ಹಿಡಿದು ನಿಂತು ಅಭ್ಯಾಸವಿಲ್ಲ. ಬಕೆಟ್ ಹಿಡಿಯದವರನ್ನು ಮ್ಯಾನೇಜ್‌ಮೆಂಟುಗಳು ಸುಲಭವಾಗಿ ಒಪ್ಪಿಕೊಳ್ಳುವುದಿಲ್ಲ.

ರೆಡ್ಡಿಯವರೇ, ಎಲ್ಲ ಪತ್ರಕರ್ತರೂ ಈಗ ಕಾಂಟ್ರಾಕ್ಟ್ ಕೂಲಿಯಾಳುಗಳು. ಬಾಡಿಗೆ ಮನೆಗಳಿಗೆ ಕರಾರು ಒಪ್ಪಂದ ಮಾಡಿಕೊಳ್ಳುವಂತೆ ೧೧ ತಿಂಗಳ ಕಾಂಟ್ರಾಕ್ಟು ಕೂಲಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಒಂದು ವೇಳೆ ಕೆಲಸ ಖಾಯಂ ಆದರೂ ಸಂಭ್ರಮಿಸಬೇಕಾದ ಅಗತ್ಯವಿಲ್ಲ. ಸಂಸ್ಥೆಯಿಂದ ಹೊರಗೆ ಎಸೆಯಲು ಮ್ಯಾನೇಜ್‌ಮೆಂಟುಗಳಿಗೆ ಏನೇನೂ ಕಷ್ಟವಿಲ್ಲ. ಒಳಗೇ ಸಣ್ಣಪ್ರಮಾಣದಲ್ಲಿ ಕಿರುಕುಳ ಶುರು ಮಾಡಿದರೆ ತಾವೇ ತಾವಾಗಿ ಪತ್ರಕರ್ತರು ಹೊರಹೋಗುತ್ತಾರೆ. ಹಠ ಹಿಡಿದು ಕುಳಿತವರಿಗೆ ಡಿಸ್‌ಮಿಸ್ ಮಾಡುವ ಬೆದರಿಕೆ ಒಡ್ಡಿ ರಾಜೀನಾಮೆ ಪಡೆಯಲಾಗುತ್ತದೆ. ಒನ್ಸ್ ಎಗೇನ್, ಇಂಥ ಪತ್ರಕರ್ತರ ಸಹಾಯಕ್ಕೆ ಯಾವ ಯೂನಿಯನ್ ಕೂಡ ಬರೋದಿಲ್ಲ.

ನೀವು ಬೆಂಗಳೂರು ವರದಿಗಾರರ ಕೂಟದ ಹೆಸರು ಕೇಳಿರಬಹುದು. ಸಖತ್ತು ಬಲಶಾಲಿ ಸಂಘಟನೆ ಅದು. ಎಷ್ಟು ಬಲಶಾಲಿ ಎಂದರೆ ತನ್ನ ಸದಸ್ಯರೆಲ್ಲರಿಗೂ ಕೆಎಚ್‌ಬಿ ಸೈಟು ಕೊಡಿಸುವಷ್ಟು ಬಲಶಾಲಿ. ಆದರೆ ಪತ್ರಕರ್ತರಿಗೆ ಅನ್ಯಾಯವಾದಾಗ ಈ ಸಂಘಟನೆಯೂ ಧ್ವನಿ ಎತ್ತಿದ್ದನ್ನು ಯಾರೂ ಕಂಡಿಲ್ಲ. ಇದು ಕೇವಲ ವರದಿಗಾರರ ಕೂಟ. ಇಲ್ಲಿ ವರದಿಗಾರರಿಗೆ ಮಾತ್ರ ಸದಸ್ಯತ್ವ, ಉಪಸಂಪಾದಕರಿಗೂ ಸದಸ್ಯತ್ವ ಕೊಡಲಾಗುವುದಿಲ್ಲ.  ಒಂದುವೇಳೆ ವರದಿಗಾರನಿಗೆ ಡೆಸ್ಕ್‌ಗೆ ವರ್ಗಾವಣೆಯಾದರೆ ಆತನ ಸದಸ್ಯತ್ವವೇ ಅನರ್ಹಗೊಳ್ಳುತ್ತದಂತೆ. ಹೀಗೆ ತನ್ನ ಸದಸ್ಯರೊಂದಿಗೇ ಅಮಾನವೀಯವಾಗಿ ನಡೆದುಕೊಳ್ಳಬಹುದಾದ ಬೈಲಾ ಇರುವ ಸಂಘಟನೆ, ಸದಸ್ಯರ ಸಮಸ್ಯೆಗಳನ್ನು ಅಡ್ರೆಸ್ ಮಾಡಲು ಸಾಧ್ಯವಾ? ಇದು ಪ್ರಶ್ನೆ. ಇನ್ನು ಬೆಂಗಳೂರು ಪ್ರೆಸ್ ಕ್ಲಬ್ ತಾನಿರುವುದೇ ಪತ್ರಕರ್ತರ ಮನರಂಜನೆಗೆ, ಹೀಗಾಗಿ ಬೇರೆ ಉಸಾಬರಿ ನಮಗೆ ಬೇಕಿಲ್ಲ ಎಂದು ಮಾತಿಗೇ ಮೊದಲೇ ಹೇಳುವುದರಿಂದ ಅದರಿಂದಲೂ ನ್ಯಾಯ ದೊರಕೀತೆಂಬ ನಂಬಿಕೆ ಇಲ್ಲ.

ಪತ್ರಿಕಾರಂಗದಲ್ಲಿ ಯಾಕೆ ಅನರ್ಹರು, ಅಸಮರ್ಥರು, ಭ್ರಷ್ಟರು ಮುನ್ನೆಲೆಗೆ ಬರುತ್ತಿದ್ದಾರೆ ಎಂಬ ನಿಮ್ಮ ಪ್ರಶ್ನೆಗೆ ಉತ್ತರಿಸಲು ಇಷ್ಟು ಹೇಳಬೇಕಾಯಿತು.  ಒಂದು ವಾಸ್ತವ ಏನೆಂದರೆ ಪತ್ರಕರ್ತರು ಈಗೀಗ ಕೂಲಿಯಾಳುಗಳ, ಜೀತದಾಳುಗಳ ಸ್ವರೂಪದಲ್ಲಿ ಬಳಕೆಯಾಗುತ್ತಿದ್ದಾರೆ. ಮೀಡಿಯ ಅನ್ನೋದು ಬಿಜಿನೆಸ್ಸಾಗಿ ಬಹಳ ಕಾಲವೇ ಆಯಿತು. ಆದರೆ ಈಗ ಅದು ಧನದಾಹಿ ರಾಜಕಾರಣದ ಒಂದು ಭಾಗ. ಹೀಗಾಗಿ ಸತ್ಯವಷ್ಟೆ ಸುದ್ದಿಯಾಗಬೇಕು ಎಂದೇನೂ ಇಲ್ಲ. ಈ ಕಟುಸತ್ಯ ಗೊತ್ತಿರುವ ಯಾವ ಪತ್ರಕರ್ತನೂ ಸ್ವಂತ ಬುದ್ಧಿಯಿಂದ ಸುದ್ದಿ ಮಾಡಲಾರ, ನಿಷ್ಠುರವಾದಿಯಾಗಿ ಇಲ್ಲಿ ಉಳಿದುಕೊಳ್ಳಲಾರ.

ಕ್ಷಮಿಸಿ, ನಿಮಗೆ ಉತ್ತರ ಬರೆಯುವ ಭರದಲ್ಲಿ ಈ ಪತ್ರ ಇನ್ನೊಂದಿಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದಂತೆ ಅನಿಸುತ್ತಿದೆ.

ವಂದನೆಗಳೊಂದಿಗೆ

-ಸಂಪಾದಕೀಯ ಬಳಗ

15 comments:

  1. u r exactly right sir. kiri kiri madidre avre bittu hogutthare..........
    baket hidiyuvarigste illi jaga.............. nisturvadigalu journalism bittu bere kade hogabekaste......... u vl b happy in the place other than journalism .........u cn lead a peaceful life................

    ReplyDelete
  2. ಗೆಳೆಯರೇ, ಹಂಗರಹಳ್ಳಿ ಜೀತ ಪ್ರಕರಣವನ್ನು ಬಯಲಿಗೆಳೆದದ್ದು ಪತ್ರಿಕೆಗಳೇ. ಅಲ್ಲಿ ಜೀತದಾಳುಗಳ ಕಾಲಿಗೆ ಸರಪಳಿ ಕಟ್ಟುತ್ತಿದ್ದರಂತೆ. ಆದರೆ ಅದಕ್ಕಿಂತಲೂ ಭೀಕರ ಸ್ಥಿತಿಯಲ್ಲಿ ಪತ್ರಕರ್ತರು ಬದುಕಿದ್ದಾರೆ, ಮತ್ತು ಬದುಕುತ್ತಿದ್ದಾರೆ. ಗುತ್ತಿಗೆ ಆಧಾರದಲ್ಲಿ ಪತ್ರಕರ್ತರನ್ನು ತೆಗೆದು ಕೊಳ್ಳೋದು, ಅಪೋಯ್ನ್ಟ್ಮೆಂಟ್ ಲೆಟರ್ ಕೊಡದೆ ಇರೋದು ಇಂದು ಪತ್ರಿಕೋದ್ಯಮದಲ್ಲಿ ಸಾಮಾನ್ಯ. ಈ ಕುರಿತಂತೆ ಪತ್ರಕರ್ತರು ತಲೆಕೆಡಿಸಿಕೊಳ್ಳೋದು ಕಡಿಮೆ. ಆದರೆ ಅದಕ್ಕಿಂತಲೂ ಅಮಾನವೀಯವಾದುದನ್ನು ನಾನು ಕೇಳಿದ್ದೇನೆ. ಆಗ ವಿಜಯಕರ್ನಾಟಕ ಪತ್ರಿಕೆಯಲ್ಲಿ ಸಂಕೇಶ್ವರರ ಕಾಲ. ನನ್ನೊಬ್ಬ ಗೆಳೆಯ ಒಂದು ಪತ್ರಿಕೆ ಬಿಟ್ಟು ಆ ಪತ್ರಿಕೆಗೆ ಕೆಲಸಕ್ಕೆ ಸೇರಿದ. ಸೇರಿದ ಒಂದೇ ವಾರದಲ್ಲಿ ಅವರ ಮುಂದೆ 2 ಖಾಲಿ ಸ್ಟಾಂಪ್ ಪೇಪರ್ನಲ್ಲಿ ಸಹಿ ಹಾಕಲು ಹೇಳಿದರಂತೆ. ಇವನಿಗೆ ಆಘಾತ. ಯಾಕೆ? ಎಂದು ಕೇಳಿದನಂತೆ. ಅದು ಇಲ್ಲಿಯ ನಿಯಮ ಎಂದರಂತೆ. ನೋಡಿದರೆ ಅಲ್ಲಿ ಕೆಲಸಕ್ಕೆ ಸೇರಿದ ಹೆಚ್ಚಿನವರು 2 ಖಾಲಿ ಸ್ಟಾಂಪ್ ಪೇಪರಿಗೆ ಸಹಿ ಹಾಕಿದ್ದಾರೆ. ಗೆಳೆಯ ಸಹಿ ಹಾಕಲು ಒಪ್ಪದ ಕಾರಣ ಕೆಲಸ ಬಿಡಬೇಕಾಯಿತು. ಖಾಲಿ ಸ್ಟಾಂಪ್ ಪೇಪರಿಗೆ ಸಹಿ ಹಾಕೋದು ಎಂದರೆ ಕಾಲಿಗೆ ಚೈನ್ ಕಟ್ಟಿಕೊಂದಂತೆಯೇ ಅಲ್ಲವೇ? ಅದೆಷ್ಟೋ ಪತ್ರಿಕಾ ಕಛೇರಿಗಳು ಇಂತಹ ಹಂಗರಹಳ್ಳಿ ಜೀತದಾಳುಗಳನ್ನು ಹೊಂದಿದೆಯೋ ಬಲ್ಲವರಾರು? ವಿಜಯಕರ್ನಾಟಕದಲ್ಲಿ ಆ ನಿಯಮ ಈಗ ಇದೆಯೋ ಗೊತ್ತಿಲ್ಲ. ಯಾಕೆಂದರೆ ಈಗ ಆಡಳಿತ ಬದಲಾಗಿದೆಯಲ್ಲ. ಪತ್ರಕರ್ತರ ಮಿತಿಗಳನ್ನು ಹೇಳೂದಕ್ಕಾಗಿ ಈ ಉದಾಹರಣೆ ನೆನಪಾಯಿತು.

    ReplyDelete
  3. Patrika rangavu ega patrikodyamavagi marpatide. . .adaru nimma mathali nijamshavide.
    -Belvai Prabhakar

    ReplyDelete
  4. Patrike yavaga ondu patrika'udyama' aito awagle tanna pavitrate kaledukondide...
    -Vinay Kaswe

    ReplyDelete
  5. ಏನು ಮಾಡೋದು ಹೇಳಿ? ಕರ್ನಾಟಕದ almost ವೃತ್ತ ಪತ್ರಿಕೆಗಳು,ವಾಹಿನಿಗಳು ಒಂದೋ ರಾಜಕಾರಣಿಗಳ ಕೈಯಲ್ಲಿವೆ ಅಥವಾ ಅವರ ಮರ್ಜಿಯಲ್ಲಿವೆ ಅಥವಾ ಅವರ ಮುಲಾಜಿಗೆ ಒಳಪಟ್ಟಿವೆ.ಇಂಥಾದ್ದರಲ್ಲಿ ಯಾವ ಪತ್ರಕರ್ತನೂ ಧೈರ್ಯವಾಗಿ ತನ್ನ ಮಾಲೀಕನ
    ಧೂರ್ತ ಕೆಲಸಗಳನ್ನು ಬಯಲಿಗೆಳೆಯಲಾರ.ಹಾಗೊಂದು ವೇಳೆ ಬರೆದರೂ ಅದಕ್ಕೆ ಅದರ ಸಂಪಾದಕ ಅಂಕಿತ ಹಾಕಲಾರ.ಇದೊಂಥರಾ ವಿಷವರ್ತುಲ.
    ಈ ಚಕ್ರವ್ಯೂಹ ಭೇದಿಸುವ ಪತ್ರಕರ್ತನಿಗೆ ವ್ಯೂಹದಿಂದ ಹೊರಬರುವ ವಿದ್ಯೆಯೇ ಬೇಕಾಗಿಲ್ಲ.ಆತನಿಗೆ automatic ಆಗಿ 'ಹೊರಗೆ' ಕಳಿಸಲಾಗುತ್ತದೆ..
    ಒಂದೇ ಒಂದು ಒಳ್ಳೆಯ ಭ್ರಮೆ ನನ್ನಲ್ಲಿದೆ:ಯಾವುದೋ ಒಂದು ಪತ್ರಿಕೆ ತನ್ನ ಎದುರಾಳಿ ರಾಜಕಾರಣಿಯ ಭ್ರಷ್ಟಾಚಾರ ಹೊರಗೆಳೆದರೆ,ಇನ್ಯಾವದೋ ರಾಜಕಾರಣಿಯ
    ಮುಲಾಜಿಗೆ ಬಿದ್ದಿರುವ ಇನ್ಯಾವುದೋ ವಾಹಿನಿ ಮೊದಲ ದಾಳಿ ಮಾಡಿದ ರಾಜಕಾರಣಿಯ ಕೆಟ್ಟ ಕೆಲಸವನ್ನು ಬಯಲು ಮಾಡುತ್ತದೆ.ಹೀಗಾದರೂ ಇವರೆಲ್ಲ ನಗ್ನರಾಗಿ
    ಬಯಲಲ್ಲಿ ನಿಲ್ಲಲಿ!
    -Raghavendra Joshi

    ReplyDelete
  6. ಸ್ವಾಮಿ ಯಾವತ್ತು ಪತ್ರಿಕಾರಂಗ ಎನ್ನುವುದು ಉದ್ಯಮವಾಯಿತೋ ಅಂದೇ ಪತ್ರಿಕಾರಂಗದ ಪಾವಿತ್ರ್ಯತೆ ಅವತ್ತೇ ಮುಗಿದಿದೇ, ಈಗೇನಿದ್ದರೂ ಕಾಲಾಯ ತಸ್ಮ್ಯನಮ;
    -Sunagar Manjunatha

    ReplyDelete
  7. moulyabharita , vaastavateya lekhana......
    inthaha anekaneka bettale satya nammellara munde ide. adare adu dina kaledante kone putakke saridu, mundondu dina patrikeyindale/chitranadindale hora hoguttade/ maretu hoguttade alva????
    -Shreyanka S Ranade

    ReplyDelete
  8. sullanu baredu janaranu maralu maduva patrakartara kelasa devaru mechudilla uttama janaranu terorest yendu prahara madi bavisya halu maduva manemuruka kelasave patrakarta.
    -Mb Bellur

    ReplyDelete
  9. ya,its true sir
    -Pradeep Guddappa

    ReplyDelete
  10. Sampadkeeya Karnataka ivar bettale anisikege namaskara..!!
    -Somanna Jadar

    ReplyDelete
  11. This is tragedy of modern world... everything is commercialized! news sells, news paper sell and editors do business!

    ReplyDelete
  12. Also, i feel PRAJAVANI is little baised towards BJP / RSS.
    Offlate, i have noticed that KANNADAPRABHA is publishing series of articles against AIRTEL in their front page. I am an AIRTEL user and i a very happy customer; so are my friends and family. But what has triggered KP to write an article against airtel. Is there any cold war b/n Rajeev chandrashekar and Sunil Mittal ??

    Can sampadakeeya unearth the mission behind this ??

    ReplyDelete
  13. ಸಂಪಾದಕರೇ...
    ಶಿವಮೊಗ್ಗ ಪರ್ತಕರ್ತರ ನಿವೇಶನ ಹಗರಣದ ಬಗ್ಗೆ ನೀವು ಪರಿಪೂರ್ಣ ಮಾಹಿತಿ ನೀಡಲಿಲ್ಲ.
    'ಹಿಟ್ ಅಂಡ್ ರನ್' ರೀತಿ ನಡೆದುಕೊಂಡಿರಿ.
    ಹಗರಣದ ಬಗ್ಗೆ ನೀವೇ ಮೊದಲು ಮಾಹಿತಿ ನೀಡಿದಿರಿ. ಆ ನಂತರ ಯಾವುದೇ ಮಾಹಿತಿಯನ್ನು ಪ್ರಕಟಿಸಲಿಲ್ಲ.
    ಸಂಪಾದಕೀಯದ ಬಗ್ಗೆ ನಮ್ಮಲ್ಲಿ ಬಹಳ ಗೌರವವಿದೆ. ಈ ಹಗರಣದ ಬಗ್ಗೆ ವಸ್ತುನಿಷ್ಠ ವರದಿಯನ್ನು ಬಿತ್ತರಿಸಿ. ಶಿವಮೊಗ್ಗದ ಕೆಲ ಪರ್ತಕರ್ತರ ಅಸಲಿ ಮುಖವಾಡವನ್ನು ಬಯಲಿಗೆಳೆಯಿರಿ.

    ReplyDelete
  14. ghana ghora satya.. bucket hidiyodu annodu hale maathu.. eega hande mattu syntex tanker hidibeku.. buket and mug praamanikate olage seribittide.

    ReplyDelete