Friday, June 17, 2011

ಸರ್ಕಾರದ ಸುಳ್ಳೇ ಅಮೇಧ್ಯಕ್ಕಿಂತ ಹೊಲಸೆದ್ದು ನಾರುತ್ತಿರುವಾಗ....

ಕರ್ನಾಟಕ ಸರ್ಕಾರದ ಗೌರವಾನ್ವಿತ ಸಚಿವರಾದ ಶ್ರೀ ಸುರೇಶ್ ಕುಮಾರ್‌ರವರೇ,
ನಮಸ್ಕಾರ.
ನೀವು ಸಜ್ಜನರು, ಸುಸಂಸ್ಕೃತರು, ಸಂಭಾವಿತರು. ಕರ್ನಾಟಕ ಸರ್ಕಾರದ ಇಡೀ ಸಂಪುಟದಲ್ಲಿ ನಿಮ್ಮಂಥವರ ಸಂಖ್ಯೆ ಕಡಿಮೆ.  ಈ ರಾಜ್ಯದ ಸಾಮಾನ್ಯ ನಾಗರಿಕರಾಗಿ ನಾವು ಬರೆಯುತ್ತಿರುವ ಈ ಪತ್ರವನ್ನು ನೀವು ಗಂಭೀರವಾಗಿ ಪರಿಗಣಿಸುತ್ತೀರೆಂಬ ನಂಬುಗೆ ಇದೆ.

ಇದು ಮನುಕುಲದ ಮಾನವೀಯತೆಗೆ ಸಂಬಂಧಿಸಿದ ವಿಷಯ, ನಾಗರಿಕ ಸಮಾಜದ ಸ್ವಾಸ್ಥ್ಯಕ್ಕೆ ಸಂಬಂಧಿಸಿದ ವಿಷಯ. ಇದು ನಾವೆಲ್ಲರೂ ಒಪ್ಪಿ ನಡೆಯುವ ಸಮಾನತೆಯ ಕನಸಿಗೆ ಅಡ್ಡಿಯಾಗುತ್ತಿರುವ ಅನಿಷ್ಠಗಳ ಕುರಿತಾದ ವಿಷಯ. ಇದು ನೀವು ನಿರ್ವಹಿಸುತ್ತಿರುವ ಖಾತೆಗೆ ಸಂಬಂಧಿಸಿದ ವಿಷಯ.

ನಿಮಗೆ ಬಿ.ಬಸವಲಿಂಗಪ್ಪನವರು ಗೊತ್ತು. ಅವರು ಸಚಿವರಾಗಿದ್ದಾಗ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ್ದು ಗೊತ್ತು. ಬಸವಲಿಂಗಪ್ಪನವರು ಮಂತ್ರಿಯಾಗುವವರೆಗೆ ಇಂಥ ಅಮಾನವೀಯ ಪದ್ಧತಿಯನ್ನು ನಿಷೇಧಿಸಬೇಕೆಂದು ಹಿಂದೆ ಇದ್ದ ಸರ್ಕಾರಗಳು ಯಾಕೆ ಯೋಚಿಸಲಿಲ್ಲ ಎಂಬುದರ ಚರ್ಚೆ ಬೇಡ. ನಂತರದ ದಿನಗಳಲ್ಲಾದರೂ ಮಲ ಹೊರುವ ಪದ್ಧತಿ ನಿಂತು ಹೋಯಿತಾ ಎಂದರೆ ಅದೂ ಇಲ್ಲ.

ನೀವು ನಗರಾಭಿವೃದ್ಧಿ ಮಂತ್ರಿಗಳಾದಿರಿ. ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಇಲ್ಲವೇ ಇಲ್ಲ, ಮಲ ಹೊರುವವರ‍್ಯಾರೂ ಇಲ್ಲ ಎಂದು ಹೇಳಿಕೆ ನೀಡಿದಿರಿ. (ನಿಮ್ಮ ಹೇಳಿಕೆ ಪ್ರಕಟವಾಗಿರುವ ಉದಯವಾಣಿಯ ಲಿಂಕ್ ಇಲ್ಲಿದೆ.) ಈ ಮಾಹಿತಿಯನ್ನು ನಿಮಗೆ ನಿಮ್ಮ ಅಧಿಕಾರಿಗಳು ಕೊಟ್ಟಿರಬಹುದು. ಆದರೆ ಇದನ್ನು ಹೇಳುವ ಮುನ್ನ ಅದರಲ್ಲಿ ಸತ್ಯ ಇದೆಯೇ ಎಂಬುದನ್ನು ನೀವು ಖಚಿತಪಡಿಸಿಕೊಳ್ಳಬಹುದಿತ್ತು.

ಕೇಂದ್ರ ಸರ್ಕಾರ ಮಲ ಹೊರುವ ಪದ್ಧತಿಯನ್ನು ನಿಷೇಧಿಸಿದ್ದು ೨೦೦೭ರಲ್ಲಿ.  ಆನಂತರವೂ ಸಾಕಷ್ಟು ಬೆಳವಣಿಗೆಗಳು ನಡೆದಿವೆ. ಸುಪ್ರೀಂ ಕೋರ್ಟ್ ಈ ಸಂಬಂಧ ಎಲ್ಲ ರಾಜ್ಯಗಳಿಗೂ ಕಠಿಣವಾದ ನಿರ್ದೇಶನಗಳನ್ನು ನೀಡಿದೆ.

ನಿಮ್ಮ ಅಧಿಕಾರಿಗಳು ಕೊಟ್ಟ ಗಿಳಿಪಾಠವನ್ನು ನಿಮ್ಮ ಸರ್ಕಾರ ನೀವು ಸುಪ್ರೀಂ ಕೋರ್ಟಿನಲ್ಲಿ ಮತ್ತು ಇತ್ತೀಚಿಗೆ ಹೈಕೋರ್ಟಿನಲ್ಲಿ ಪ್ರಮಾಣಪತ್ರಗಳನ್ನು ಸಲ್ಲಿಸಿ, ರಾಜ್ಯದಲ್ಲಿ ಮಲ ಹೊರುವ ಪದ್ಧತಿ ಇಲ್ಲ ಎಂದು ಹಸಿಹಸಿ ಸುಳ್ಳು ಹೇಳಿದೆ. (ಹೈಕೋರ್ಟ್‌ನಲ್ಲಿ ಪ್ರಮಾಣ ಪತ್ರ ಸಲ್ಲಿಸಿರುವ ಕುರಿತಾದ ವಾರ್ತಾಭಾರತಿ ಪತ್ರಿಕೆಯ ವರದಿಯ ಲಿಂಕ್ ಇಲ್ಲಿದೆ.)

ಸತ್ಯ ಇಲ್ಲಿದೆ ನೋಡಿ. ಅದು ಕಹಿಯಾಗಿದೆ ಮತ್ತು ಅರಗಿಸಿಕೊಳ್ಳಲು ಸಾಧ್ಯವಿಲ್ಲದಷ್ಟು ಕ್ರೂರವಾಗಿದೆ. ಇಲ್ಲಿ ಚಿತ್ರದಲ್ಲಿ ನೋಡುತ್ತಿರುವ ವ್ಯಕ್ತಿ ಕೆ.ಜಿ.ಎಫ್‌ನ ಪ್ರಸಾದ್. ಆತ ಮಲ ಹೊರುವ ಕಾಯಕವನ್ನೇ ಮಾಡುತ್ತಿದ್ದಾನೆ. ಈತ ತನ್ನ ಬಗ್ಗೆ, ತನ್ನಂತೆ ಮಲಹೊರುವವರ ಬಗ್ಗೆ ಸಾಮಾಜಿಕ ಹೋರಾಟಗಾರ, ಕ್ಷೇತ್ರ ಕಾರ್ಯಕರ್ತ ದಯಾನಂದ್ ಅವರೊಂದಿಗೆ ಮಾತನಾಡಿದ್ದಾನೆ. ಅದು ಕೆಂಡಸಂಪಿಗೆ ವೆಬ್ ಮ್ಯಾಗಜೀನ್‌ನಲ್ಲಿ ಪ್ರಕಟವಾಗಿದೆ. ಅವನ ಕಥಾನಕ ಘೋರವಾಗಿದೆ ಮತ್ತು ಸತ್ಯಗಳನ್ನು ಹಸಿಹಸಿಯಾಗಿ ಬಿಡಿಸಿಡುತ್ತಿದೆ.

ಅದರರ್ಥ ಸರ್ಕಾರ ಹೇಳಿದ ಸುಳ್ಳು ಅಮೇಧ್ಯದ ವಾಸನೆಗಿಂತ ಗಬ್ಬು ನಾರುತ್ತಿದೆ.

ಇದು ಒಂದು ಕೆ.ಜಿ.ಎಫ್‌ನ ಕಥೆಯಲ್ಲ. ಇದೇ ದಯಾನಂದ್, ಚಂದ್ರಶೇಖರ್ ಮತ್ತವರ ತಂಡ ಇಡೀ ರಾಜ್ಯ ಸುತ್ತಿ ಮಲ ಹೊರುವವರ ಕುರಿತು ಅಧ್ಯಯನ ನಡೆಸಿದೆ. ಚಿತ್ರಗಳನ್ನು ಸಂಗ್ರಹಿಸಿದೆ, ವಿಡಿಯೋಗಳನ್ನು ಮಾಡಿದೆ. ಸರ್ಕಾರದ ಅಫಿಡೆವಿಟ್ ಸುಳ್ಳು ಎಂದು ಸಾರಲು ಸಾಲುಸಾಲು ಸಾಕ್ಷಿಗಳಿವೆ.

ಪೋಲೀಸ್ ಪೇದೆಗಳೇ ಮಲಹೊರಲು ಒತ್ತಾಯಿಸುವ ಸ್ಥಿತಿಯಿರುವ ಚಾಮರಾಜನಗರ, ನಾಡಿಗೆ ಟನ್ನುಗಟ್ಟಲೆ ಚಿನ್ನ ಹೆಕ್ಕಿಕೊಟ್ಟು ಇವತ್ತಿಗೆ ಬೀದಿಗೆ ಬಿದ್ದು ಮಲ ಬಳಿಯುತ್ತಿರುವ ಕೆಜಿಎಫ್ ನ ಚಿನ್ನದ ಗಣಿ ಕಾರ್ಮಿಕರು, ೧೫ ಅಡಿ ಆಳದ ಕಕ್ಕಸು ಗುಂಡಿಯೊಳಗೆ ೨೦೦ ರೂಪಾಯಿ ಮಜೂರಿಗೆ ಮುಳುಗಿ ಏಳುವ ರಾಯಚೂರಿನ ದಲಿತರು, ಮಕ್ಕಳ ಸ್ಕೂಲಿನ ಫೀಸಿಗೆ ಸಾರ್ವಜನಿಕ ಶೌಚಾಲಯದ ಗುಂಡಿಗಿಳಿದು ಸ್ವಚ್ಛ ಮಾಡುವ ಗುಲ್ಬರ್ಗದ ಮುಸ್ಲಿಂ ಮಹಿಳೆಯರು, ಹೇಲೆತ್ತುವ ಕೆಲಸ ಮಾಡುವರೆಂಬ ಕಾರಣಕ್ಕೆ ಇವತ್ತಿಗೂ ಸಾಮಾಜಿಕ ಬಹಿಷ್ಕಾರದಲ್ಲಿ ನರಳುತ್ತಿರುವ ಉಡುಪಿಯ ಕೊರಗರು, ಪ್ರೀತಿಸಿದ ಕೆಳಜಾತಿ ಹುಡುಗಿಯನ್ನು ಒಪ್ಪದ ಪೋಷಕರನ್ನು ಧಿಕ್ಕರಿಸಿ ಮದುವೆ ಮಾಡಿಕೊಂಡು ಗುಂಡಿ ಬಳಿಯುವ ಕೆಲಸಕ್ಕಿಳಿದ ಕುಂದಾಪುರದ ಲಿಂಗಾಯತರ ಹುಡುಗ, ಶಿಕಾರಿಪುರದ ಯಡಿಯೂರಪ್ಪನವರ ಕಂಟ್ರಿ ಟಾಯ್ಲೆಟ್ ಇರುವ ಮನೆಯಲ್ಲೇ ಕಕ್ಕಸು ಬಳಿದಿದ್ದೇನೆ ಎಂದ ಶಿಕಾರಿಪುರದ ಪೆಂಚಾಲಯ್ಯ, ಗುಂಡಿಯೊಳಗೆ ಇಳಿದು ಅಲ್ಲಿನ ವಿಷಗಾಳಿ ಕುಡಿದು ಹತ್ತು ಪೈಸೆ ಪರಿಹಾರಕ್ಕೂ ಬೆಲೆಯಿಲ್ಲದೆ ಸತ್ತ ಮಂಗಳೂರಿನ ಪದುವಿನಮಿತ್ತುವಿನ ಸ್ಟಾಲಿನ್ ಮತ್ತು ಭೋಜ ಎಂಬ ಯುವಕರು. ಹೊಟ್ಟೆಯಲ್ಲಿ ಹುಟ್ಟಿದ ಮಗ ನನ್ನಂತೆ ಮಲ ಬಳಿಯುವನಾಗಬಾರದೆಂದು ಇಂಗ್ಲೀಶ್ ಮೀಡಿಯಂನಲ್ಲಿ ಪಿಯುಸಿವರೆಗೆ ಮಗನನ್ನು ಓದಿಸಿ ಕೊನೆಗೆ ಬದುಕಿನ ಹೊಡೆತಕ್ಕೆ ಸಿಕ್ಕು ತನ್ನ ಜೊತೆಗೇ ಮಗನನ್ನೂ ಹೇಲು ಬಳಿಯಲು ಕರೆದುಕೊಂಡು ಹೋಗುತ್ತಿರುವ ಮೈಸೂರಿನ ನಾರಾಯಣ ಹೀಗೆ ಹಲವರ ಕಥೆಗಳು ದಯಾನಂದ ಅವರ ಬಳಿ ಇದೆ. ಮತ್ತವರು ಈ ಎಲ್ಲ ಕಥೆಗಳನ್ನು ಒಂದೊಂದಾಗಿ ನಾಗರಿಕ ಸಮಾಜದ ಮುಂದೆ ಇಡಲು ಆರಂಭಿಸಿದ್ದಾರೆ. ಕೆ.ಜಿ.ಎಫ್‌ನ ಕಥೆ ಒಂದು ಸ್ಯಾಂಪಲ್ ಅಷ್ಟೆ. ರಾಜ್ಯದ ಯಾವ ಯಾವ ಪಟ್ಟಣ, ನಗರಗಳಲ್ಲಿ ಈ ಪದ್ಧತಿ ಜಾರಿಯಲ್ಲಿದೆ ಎಂಬುದನ್ನು ಅವರು ಬಿಚ್ಚಿಡಲಿದ್ದಾರೆ. ಈ ಎಲ್ಲವನ್ನು ಕೇಳುವ ಎದೆಗಾರಿಕೆ ಮತ್ತು ತಾಳ್ಮೆ ನಮ್ಮಲ್ಲಿ ಇರಬೇಕು ಅಷ್ಟೆ.

ಇನ್ನು ಇದನ್ನೆಲ್ಲ ಮುಚ್ಚಿಡಲಾಗದು. ನಮಗನ್ನಿಸುವ ಪ್ರಕಾರ ಮಾಧ್ಯಮಗಳೂ ಈ ಕುರಿತು ಬೆಳಕು ಚೆಲ್ಲುತ್ತವೆ. ನೀವು ಸತ್ಯವನ್ನು ಒಪ್ಪಿಕೊಳ್ಳಲೇಬೇಕು. ಆದ ತಪ್ಪನ್ನು ಸರಿಪಡಿಸಿಕೊಳ್ಳಲು ಈ ಅನಿಷ್ಠ, ಅಮಾನವೀಯ ಪದ್ಧತಿಯನ್ನು ಬೇರು ಸಮೇತ ಕಿತ್ತುಹಾಕಲು ಏನನ್ನಾದರೂ ಮಾಡಬೇಕು.

ಒಬ್ಬ ಮನುಷ್ಯನ ಮಲವನ್ನು ಇನ್ನೊಬ್ಬ ಹೊತ್ತು ಒಯ್ಯುವ ಸ್ಥಿತಿ ಯಾವುದೇ ದೇಶದಲ್ಲೂ, ಯಾವುದೇ ಕಾಲದಲ್ಲೂ ಇರಕೂಡದು. ಅದು ಅಮಾನವೀಯತೆಯ ಪರಮಾವಧಿ. ಮನುಷ್ಯ ಇಷ್ಟು ನಿರ್ಲಜ್ಜನಾದರೆ ಆತನ ಮನುಷ್ಯತ್ವಕ್ಕೆ ಯಾವ ಅರ್ಥವೂ ಉಳಿದಿರುವುದಿಲ್ಲ. ಸೂಕ್ಷ್ಮಜ್ಞರಾದ ತಾವು ಇದನ್ನು ಖಚಿತವಾಗಿ ಅರ್ಥಮಾಡಿಕೊಳ್ಳಬಲ್ಲಿರಿ ಎಂಬುದು ನಮ್ಮ ವಿಶ್ವಾಸ.

ಕೆಜಿಎಫ್‌ನಲ್ಲಿ ಮಲ ಎತ್ತುವವರು ಗಣಿ ಮುಚ್ಚಿದ ನಂತರ ಕೆಲಸವಿಲ್ಲದಂತಾದರೂ ಕಳ್ಳರಾಗಲಿಲ್ಲ, ದರೋಡೆಕೋರರಾಗಲಿಲ್ಲ. ಬೆಂಗಳೂರಿನಲ್ಲಿ ಕೆಲಸ ಮಾಡಲೆಂದು ಟಿಕೆಟ್ ಇಲ್ಲದೆ ಟ್ರೈನು ಹತ್ತಿ ಚೆಕ್ಕಿಂಗ್ ಮಾಡುವವರು ಬಂದಾಗ ರೈಲಿನಿಂದ ಜಿಗಿದು ಪ್ರಾಣ ಕಳೆದುಕೊಂಡ ಸ್ವಾಭಿಮಾನಿಗಳು ಇವರು. ಇವರ ಸರಾಸರಿ ಬದುಕು ಕೇವಲ ೪೦ ವರ್ಷ. ಮಲ ಹೊರುವ ಕಾಯಕದಿಂದ ತಂದುಕೊಂಡ ಖಾಯಿಲೆಗಳ ಪರಿಣಾಮ ಇದು.

ಎಂಥ ವಿಚಿತ್ರ ನೋಡಿ. ನಿಮ್ಮದೂ ಸೇರಿದಂತೆ ಆಗಿ ಹೋದ ಎಲ್ಲ ಸರ್ಕಾರಗಳಿಗೂ ಕೆಜಿಎಫ್‌ನಂಥ ಪಟ್ಟಣ, ನಗರಗಳಲ್ಲಿ ಇನ್ನೂ ಸಮರ್ಪಕವಾದ ಒಳಚರಂಡಿ ವ್ಯವಸ್ಥೆ ಮಾಡಲು ಸಾಧ್ಯವಾಗಿಲ್ಲ. ಇತ್ತ ಬೆಂಗಳೂರಿಗೆ ಸಾವಿರ ಸಾವಿರ ಕೋಟಿ ರೂಪಾಯಿಗಳನ್ನು ತಂದು ಸುರಿಯುತ್ತೀರಿ.

ಇಂಥ ನಗರಗಳ ಒಳಚರಂಡಿ ವ್ಯವಸ್ಥೆಗಾಗಿಯೇ ಇರುವ ಕೇಂದ್ರ ಸರ್ಕಾರದ ಯೋಜನೆಗಳ ಹಣ ಎಲ್ಲಿಗೆ ಹೋಯಿತು? ರಾಜ್ಯ ಸರ್ಕಾರದ ಇಲಾಖೆಯ ಅಧಿಕಾರಿಗಳು ಏನು ಮಾಡುತ್ತಿದ್ದಾರೆ? ಮಲ ಹೊರುವವರ ಪುನರ್ವಸತಿಗಾಗಿ ಎಷ್ಟು ಹಣ ಖರ್ಚು ಮಾಡಿದ್ದೀರಿ? ಮಲ ಹೊರುವವರ ನೆರವಿಗಾಗಿ ಬಿಡಿಗಾಸು ಸಹ ಖರ್ಚು ಮಾಡದ ನೀವು ಮಲ ಹೊರುವವರೇ ಇಲ್ಲ ಎಂದು ಹೇಳಲು ಸಾಧ್ಯವಾಗಿದ್ದಾದರೂ ಹೇಗೆ? ನಿಮ್ಮ ಅಧಿಕಾರಿಗಳು ಹೊಟ್ಟೆಗೆ ಏನನ್ನು ತಿನ್ನುತ್ತಾರೆ?

ಸುರೇಶ್ ಕುಮಾರ್‌ರವರೇ,
ನಿಜವಾಗಲೂ ನಿಮ್ಮ ಬಗ್ಗೆ ಗೌರವವಿದೆ. ನೀವು ಸಾರ್ವಜನಿಕ ಜೀವನದಲ್ಲಿ ಹೆಸರು ಕೆಡಿಸಿಕೊಂಡವರಲ್ಲ. ಅಕ್ರಮ, ಅನ್ಯಾಯ ಎಸಗಿದವರಲ್ಲ. ಆದರೆ ಇದಿಷ್ಟೇ ನೀವು ಕುಳಿತಿರುವ ಸ್ಥಾನಕ್ಕೆ ಜೀವ ತುಂಬಲು ಸಾಕಾಗುವುದಿಲ್ಲ. ಒಂದೇ ವಾರದಲ್ಲಿ ನೀವು ಇಡೀ ರಾಜ್ಯ ಸುತ್ತಬಹುದು. ಎಲ್ಲಿ ಏನಾನಾಗುತ್ತಿದೆ ಎಂಬುದನ್ನು ನಿಮ್ಮ ಕಣ್ಣಾರೆ ನೋಡಬಹುದು. ನಿಮಗೆ ಸುಳ್ಳು ಮಾಹಿತಿ ಕೊಟ್ಟ ಅಧಿಕಾರಿಗಳ ಬೇಜವಾಬ್ದಾರಿಯನ್ನೂ ಕಾಣಬಹುದು. ಇದೆಲ್ಲವನ್ನು ಮಾಡಲು ರಾಜಕೀಯ ಇಚ್ಛಾಶಕ್ತಿ ಬೇಕು, ಪ್ರಾಮಾಣಿಕವಾದ ಕಾಳಜಿ ಬೇಕು. ಅದು ನಿಮಗಿದೆ ಎಂದು ಭಾವಿಸಿದ್ದೇವೆ.

ದಯವಿಟ್ಟು ಏನಾದರೂ ಮಾಡಿ. ರಾಜ್ಯದಲ್ಲಿ ಮಲ ಹೊರುತ್ತಿರುವ ಸಾವಿರಾರು ಕುಟುಂಬಗಳ ನೆರವಿಗೆ ಬನ್ನಿ. ಮಾತೆತ್ತಿದರೆ ಖಜಾನೆಯ ಹಣವನ್ನು ಸತ್ಯನಾರಾಯಣ ಪೂಜೆಯ ಪ್ರಸಾದದಂತೆ ಸಿಕ್ಕವರಿಗೆ ಹಂಚುವ ಮುಖ್ಯಮಂತ್ರಿಗಳು, ಈ ಜನರಿಗೂ ಕೈ ಎತ್ತಿ ಕೊಡಲಿ, ಎಷ್ಟಾದರೂ ಅದು ಈ ನಿಷ್ಪಾಪಿ ಜನರದೇ ಹಣವಲ್ಲವೇ?

ನಿಜ, ನಿಮಗೆ ಕೆಲಸ ಮಾಡಲು ಸರಿಯಾದ ಸಮಯವೇ ಸಿಕ್ಕಿಲ್ಲ. ಒಂದೆಡೆ ರೆಡ್ಡಿ-ರೇಣುಕರ ಕಾಟದಿಂದ ಪಾರಾಗಲು ನಿಮ್ಮ ಮುಖ್ಯಮಂತ್ರಿಗಳಿಗೆ ಸಾಕುಸಾಕಾಗಿ ಹೋಯಿತು. ಮತ್ತೊಂದೆಡೆ ರಾಜ್ಯಪಾಲರ ವಿರುದ್ಧ ನಿಮ್ಮ ಸಮರ. ಇನ್ನು ವಿರೋಧ ಪಕ್ಷದವರ ಭ್ರಷ್ಟಾಚಾರದ ದಾಖಲೆಗಳನ್ನು ಹುಡುಕುವಷ್ಟರಲ್ಲಿ ನಿಮ್ಮ ಅಧಿಕಾರಿಗಳು ಹೈರಾಣಾಗಿ ಹೋಗಿದ್ದಾರೆ. ಸರ್ಕಾರ ಉಳಿಸಿಕೊಳ್ಳಲು ದಿಲ್ಲಿಗೆ ಹೋಗಿ ಬಂದು ಮಾಡುವಷ್ಟರಲ್ಲಿ ಮೂರು ವರ್ಷ ಮುಗಿದಾಗಿದೆ. ಇನ್ನೂ ಎರಡು ವರ್ಷಗಳಿವೆ. ಈ ಅವಧಿಯಲ್ಲಾದರೂ ರಾಜ್ಯದ ಮೂಲೆಮೂಲೆಯಲ್ಲಿ ಸಾವಿನಂಥ ಬದುಕನ್ನು ಬದುಕುತ್ತಿರುವ ಜನರ ಕಥೆಗಳನ್ನು ಕೇಳಿ, ಅವರ ನೆರವಿಗೆ ನಿಲ್ಲಿ ಎಂದು ಬೇಡಿಕೊಳ್ಳುತ್ತೇವೆ.

ಈ ಬಹಿರಂಗ ಪತ್ರವನ್ನು ನಿಮ್ಮ ಇ-ಮೇಲ್ ಐಡಿಗೆ ಕಳುಹಿಸುತ್ತಿದ್ದೇವೆ ಮತ್ತು ಈ ಲೇಖನದ ಲಿಂಕನ್ನು ನಿಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡುತ್ತಿದ್ದೇವೆ. ನಿಮ್ಮ ಉತ್ತರವನ್ನು ನಿರೀಕ್ಷಿಸುತ್ತೇವೆ.

ಆದರಗಳೊಂದಿಗೆ,
ಸಂಪಾದಕೀಯ

ಜಿಲ್ಲಾ ಪತ್ರಿಕೆಗಳ ಸಂಪಾದಕರ ಗಮನಕ್ಕೆ,
ಸಂಪಾದಕೀಯದ ಲೇಖನಗಳನ್ನು ರಾಜ್ಯದ ಹಲವಾರು ಜಿಲ್ಲಾ ಪತ್ರಿಕೆಗಳು ಪ್ರಕಟಿಸುತ್ತಿರುವುದನ್ನು ಗಮನಿಸುತ್ತ ಬಂದಿದ್ದೇವೆ. ಇದು ಸಂತೋಷದ ವಿಷಯ. ಜನಪರ ಕಾಳಜಿಯ ಲೇಖನಗಳು ಹೆಚ್ಚು ಜನರನ್ನು ತಲುಪುವಂತಾದರೆ ಅದು ಪರಿಣಾಮಕಾರಿಯಾಗುತ್ತದೆ. ಆದರೆ ಲೇಖನ ಬಳಸಿಕೊಳ್ಳುವಾಗ ಪೂರ್ಣ ಲೇಖನವನ್ನು ಬಳಸಿಕೊಳ್ಳಿ, ಲೇಖನದ ಪೂರ್ಣ ಆಶಯ ಧ್ವನಿಸದೇ ಹೋದರೆ ಅದನ್ನು ಪ್ರಕಟಿಸಿ ಪ್ರಯೋಜನವಿಲ್ಲ. ಲೇಖನ ಪ್ರಕಟವಾದರೆ ಅದರ ಸ್ಕಾನ್ ಮಾಡಿದ ಸಾಫ್ಟ್ ಕಾಪಿಯನ್ನು ನಮ್ಮ ಇ-ಮೇಲ್ ಐಡಿಗೆ ಕಳುಹಿಸಿಕೊಡಿ. ಹಾಗೆಯೇ ಲೇಖನದ ಕಡೆಯಲ್ಲಿ ಬ್ಗಾಗ್‌ನ ವಿಳಾಸ ನಮೂದಿಸಿದರೆ ಒಳ್ಳೆಯದು. ನಿಮ್ಮ ಸಹಕಾರಕ್ಕೆ ಧನ್ಯವಾದಗಳು.
ಇಲ್ಲಿ ಸಚಿವ ಸುರೇಶ್ ಕುಮಾರ್ ಅವರಿಗೆ ಬರೆದಿರುವ ಬಹಿರಂಗ ಪತ್ರವನ್ನು ನಿಮ್ಮ ಪತ್ರಿಕೆಯಲ್ಲಿ ಪ್ರಕಟಿಸಲು ವಿನಂತಿಸುತ್ತೇವೆ.
-ಸಂಪಾದಕೀಯ.

11 comments:

 1. Many many thanks to Dayanand and his team. They have done a wonderful job, what the state should have done. As a journalist I wish the story or a series of stories being done by Dayanand is one of the exemplary works of journalism of the present generation. They deserve all appreciation for holding mirror to society and show what the government cleverly ignored.

  ReplyDelete
 2. Varadi Chennagide. Sachiva Sureshkumar Gamana harisuvudu Sookta. Tappitasta Adhikarigala mele karma kaigolluvudu agatyavide. Dayanand and team also sampadakeeya Team hatsoff

  ReplyDelete
 3. ಸರಕಾರದ ಎಮ್ಮೆ ತೊಗಲಿಗೆ ಇಂತಹವುಗಳು ನಾಟುವುದಿಲ್ಲ, ನಿಮ್ಮದು ಮಠವಾಗಿದ್ದರೆ ಹೇಳಿ ನಾಳೆಯೇ ಸಮಸ್ಯೆ ಬಗೆಹರಿಯುತ್ತದೆ. ಬಡವರ ಕಷ್ಟ ಕುರುಡು ಸರಕಾರದ ಕಣ್ಣಿಗೆ ಕಾಣಿಸುವುದಿಲ್ಲ. ಮುಂದಿನ ಕ್ರಮವನ್ನು ಕಾದು ನೋಡೋಣ. ಸತ್ಯ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು.

  ಗುರು ಕುಂಟವಳ್ಳಿ...

  ReplyDelete
 4. ಮಾನವೀಯ ಕಾಳಜಿಯುಳ್ಳ ಇಂತಹ ಲೇಖನಗಳು ಸ್ವಾಗತಾರ್ಹ.

  ReplyDelete
 5. ಆತ್ಮೀಯ ಸಂಪಾದಕೀಯದ ಬಳಗಕ್ಕೆ,

  ಮಾಹಿತಿಗಾಗಿ ನಿಮಗೂ ಹಾಗು ದಯಾನಂದ್ ರವರಿಗೂ ವಂದನೆಗಳು,

  ಈ ಲೇಖನವನ್ನು ಕೇವಲ ಜಿಲ್ಲಾ ಪತ್ರಿಕೆಗಳು ಪ್ರಕಟಿಸಿದರೆ ಅಥವ ಶ್ರೀ ಸುರೇಶಕುಮಾರ್ ಅವರಿಗೆ ಕಳುಹಿಸಿದ ಮಾತ್ರಕ್ಕೆ ಮಲಹೋರುವವರ ಜೀವನ ಸರಿ ಹೋದೀತೆ ?

  ಬಹುಶಃ ಇಲ್ಲ.

  ಬೃಹತ್ ಬ್ರಹ್ಮಾಂಡದ ವಿರುದ್ದ ಸಂಪಾದಕೀಯದ ಬಳಗದ ಹೋರಾಟಕ್ಕೆ ಝೀ ಟಿವಿ ಮೊದಲು ಬಗ್ಗಿದಂತೆ ಕಂಡರೂ ಮತ್ತೆ ಶುರು ಹಚ್ಚಿಕೊಂಡಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯರಲ್ಲೊಬ್ಬರು ಕಾನೂನು ಹೋರಾಟ ಮಾಡುತ್ತೇವೆ ಎಂದಿದ್ದಾರೆ. ಇದರಂತೆಯೆ ಈ ಮಲ ಹೋರುವ ವಿಷಯದಲ್ಲೂ ಸಂಪಾದಕೀಯ ಬಳಗ ಏಕೆ ಸವ್ರೋಚ್ಚ ಹಾಗು ಉಚ್ಚ ನ್ಯಾಯಲಯಕ್ಕೆ ದೂರು ಕೊಡಬಾರದು.

  ReplyDelete
 6. This should be an eye opener for the Honorable Minster. Let's hope he does something or are we asking too much?

  ReplyDelete
 7. Dayanand and his team's effort is commendable. Hope the minister will respond and do the needful.

  ReplyDelete
 8. ಇಂತಹ ಲೇಖನ ಪ್ರಕಟಿಸಿ ಸರ್ಕಾರದ ಕಣ್ಣು ತೆರೆಯುತ್ತಿದ್ದಿರಿ. ಸರ್ಕಾರಕ್ಕೆ ಕಣ್ಣು ಇದ್ದರೆ ಕ್ರಮ ಕೈಗೊಳ್ಳುತ್ತದೆ.

  ReplyDelete
 9. .......ಲಜ್ಜೆಗೆಟ್ಟ ಸರ್ಕಾರಗಳು ಜೊತೆಗೆ ನಾಚಿಕೆಗೆಟ್ಟ ಅವರ ಹೇಳಿಕೆಗಳು

  ReplyDelete
 10. Really it is heart touching matter. thanks for pouring light on such a worst practice. atleast we hope now suresh kumar may have look over this. thanks to editor and writer for your true work.

  ReplyDelete