Tuesday, September 6, 2011

ಸುಳ್ಳು ಅಫಿಡೆವಿಟ್ಟು ಕೊಟ್ಟ ಸೈಟುಗಳ್ಳ ಪತ್ರಕರ್ತರನ್ನು ಜೈಲಿಗೆ ಕಳುಹಿಸುವರು ಯಾರು?


ಡಿನೋಟಿಫಿಕೇಷನ್, ಜಿ ಕೆಟಗರಿ ಸೈಟು ಹಂಚಿಕೆ ಇತ್ಯಾದಿ ವಿಷಯಗಳಲ್ಲಿ ರಾಜಕಾರಣಿಗಳು ಸಿಕ್ಕಿಬಿದ್ದು ಜೈಲು ಪಾಲಾಗುತ್ತಲೇ, ಇತರ ಜನಪ್ರತಿನಿಧಿಗಳು ಗ್ರಾಂ ಲೆಕ್ಕದಲ್ಲಿ ತಿನ್ನಬೇಕಾದ ಅನ್ನಕ್ಕೆ ಬೆದರಿ ನಮಗ್ಯಾಕೆ ಬೇಕು ಈ ಉಸಾಬರಿ ಎಂದು ಏದುಸಿರು ಬಿಡುತ್ತಿದ್ದಾರೆ. ರಾಜಕಾರಣಿಗಳು ಜೈಲು ಪಾಲಾಗುವುದನ್ನು ಪತ್ರಿಕೆಗಳು, ಚಾನಲ್‌ಗಳು ರಸವತ್ತಾಗಿ ಬರೆಯುತ್ತಿವೆ, ಪ್ರಸಾರ ಮಾಡುತ್ತಿವೆ. ಅದು ಆಗಲಿ, ತುಂಬ ಸಂತೋಷ.

ಆದರೆ ಪದೇ ಪದೇ ಮಾಧ್ಯಮದ ನೈತಿಕತೆಯ ಕುರಿತು ಪ್ರಶ್ನೆಗಳು ಏಳುತ್ತಲೇ ಇವೆ. ಭ್ರಷ್ಟಾಚಾರದ ವಿರುದ್ಧ ರಣಘೋಷ ನಡೆಸುತ್ತಿರುವ ಪತ್ರಕರ್ತರು ಕೂಡ ನ್ಯಾಯಬದ್ಧವಾಗಿ ತಮ್ಮ ವೃತ್ತಿ ನಡೆಸಬೇಕು, ಅವ್ಯವಹಾರಗಳಲ್ಲಿ ಭಾಗಿಯಾಗಿರಬಾರದು ಎಂಬುದು ಜನರ ಬಯಕೆ. ಟಿವಿ ಚಾನಲ್‌ಗಳಲ್ಲಿ ಈಗೀಗ ಗಂಟೆಗಟ್ಟಲೆ ಉಪದೇಶ ಸ್ವರೂಪದ ಭಾಷಣ ಹೊಡೆಯುತ್ತಿರುವ ಪತ್ರಕರ್ತರನ್ನು ನೋಡಿ ಇವರ ಬಂಡವಾಳ ಬಲ್ಲವರು ಕ್ಯಾಕರಿಸಿ ಉಗಿಯುವಂತಾಗಿದೆ.

ಜಿ ಕೆಟಗರಿ ಸೈಟುಗಳ ವಿಷಯಕ್ಕೆ ಬನ್ನಿ. ಬಿಡಿಎ, ಹೌಸಿಂಗ್ ಬೋರ್ಡುಗಳಲ್ಲಿ ಸಾಕಷ್ಟು ಮಂದಿ ಪತ್ರಕರ್ತರು ಮುಖ್ಯಮಂತ್ರಿಗಳ ವಿವೇಚನಾ ಕೋಟಾದಡಿ ಸೈಟು ಹೊಡೆದುಕೊಂಡಿದ್ದಾರೆ. ಜಿ ಕೆಟಗರಿ ಎಂದರೆ ಅತಿಗಣ್ಯರಿಗೆ ಸೈಟು ಕೊಡುವ ವ್ಯವಸ್ಥೆ. ಇವತ್ತು ಮೀಡಿಯಾ ಬೆಳೆದಿರುವ ಭರಾಟೆ ನೋಡಿದರೆ ಪತ್ರಕರ್ತರು ಅತಿಗಣ್ಯರು ಎಂಬ ಭ್ರಮೆ ಹುಟ್ಟಿಕೊಂಡಿರುವುದು ಒಂದರ್ಥದಲ್ಲಿ ನಿಜ. ಹೋಗ್ಲಿ ಬಿಡಿ, ಸೈಟು ಪಡೆದುಕೊಳ್ಳಲಿ ಎಂದೇ ಇಟ್ಟುಕೊಳ್ಳೋಣ. ಈ ಸೈಟುಗಳೆಲ್ಲ ಕನಿಷ್ಠ ಒಂದು ಕೋಟಿ ರೂಪಾಯಿಗೂ ಹೆಚ್ಚು ಬೆಲೆ ಬಾಳುತ್ತವೆ.

ಈ ತರಹದ ಕೆಟಗರಿ ಸೈಟು ಪಡೆದುಕೊಳ್ಳಬೇಕಾದವರು ತಮಗೆ ಸೈಟು ಕೊಡುವ ಸಂಸ್ಥೆಗೆ ಒಂದು ಪ್ರಮಾಣ ಪತ್ರ ಸಲ್ಲಿಸಬೇಕಾಗುತ್ತದೆ. ಸೈಟು ಬೇಕಾಗಿರುವ ನಗರದಲ್ಲಿ ತಮಗಾಗಲಿ, ತಮ್ಮ ಕುಟುಂಬದವರಿಗಾಗಲಿ ಯಾವುದೇ ನಿವೇಶನವಾಗಲಿ, ಮನೆಯಾಗಲಿ ಇಲ್ಲ ಎಂದು ಪ್ರಮಾಣಪತ್ರ ಕೊಟ್ಟರೆ ಮಾತ್ರ ಸೈಟು ಕೊಡಲಾಗುತ್ತದೆ.

ಒಂದು ಖಚಿತವಾದ ಸುದ್ದಿ ಏನೆಂದರೆ ಶೇ.೯೦ರಷ್ಟು ಮಂದಿ ಸುಳ್ಳು ಅಫಿಡೆವಿಟ್ ಸಲ್ಲಿಸಿಯೇ ಸೈಟುಗಳನ್ನು ಹೊಡೆದುಕೊಂಡಿದ್ದಾರೆ. ಈ ಪೈಕಿ ಕೆಲವರ ಮೇಲೆ ನಾಗಲಕ್ಷ್ಮಿಬಾಯಿ ಎಂಬ ಮತ್ತೊಬ್ಬ ಪತ್ರಕರ್ತೆ ಕೇಸು ಜಡಿದು ಸೈಟು ಹಂಚಿಕೆಯೂ ರದ್ದಾಗಿ ಹೋಗಿದೆ. ಮತ್ತೆ ಕೆಲವರು ಬಚಾವಾಗಿ ಹೋಗಿದ್ದಾರೆ. ಬಹಳಷ್ಟು ಮಂದಿ ತಮಗೆ ಕೊಟ್ಟ ಸೈಟನ್ನು ಮಾರಿ ನುಂಗಿ ನೀರು ಕುಡಿದಿದ್ದಾಗಿದೆ.

ಕೆಲವು ಪತ್ರಕರ್ತರು ಕೇವಲ ಬಿಡಿಎನಿಂದಲೇ ಎರಡೆರಡು ಸೈಟು ಹೊಡೆದುಕೊಂಡಿದ್ದಾರೆ. ಕೆಲವರು ತಮ್ಮ ಹೆಸರಲ್ಲೊಂದು, ಪತ್ನಿ ಹೆಸರಲ್ಲೊಂದು ಸೈಟು ಗಿಟ್ಟಿಸಿಕೊಂಡಿದ್ದಾರೆ. ಒಬ್ಬ ಮಹಾಶಯನಂತೂ ಪತ್ನಿ ಹೆಸರಲ್ಲಿ ಸೈಟು ಇದ್ದ ಕಾರಣಕ್ಕೆ ತನ್ನ ಸೈಟು ಎಲ್ಲಿ ರದ್ದಾಗುತ್ತೋ ಎಂಬ ಕಾರಣಕ್ಕೆ ಪತ್ನಿಗೇ ಡೈವೋರ್ಸ್ ಕೊಟ್ಟು, ಅವಳ ಜತೆಯೇ ಸಂಸಾರ ಮಾಡುತ್ತಿದ್ದಾನೆ. ಮುಖ್ಯಮಂತ್ರಿಯ ಹಿಂದೆ ನಾಯಿನರಿಯಂತೆ ಅಲೆದಾಡಿ, ಪಾದಕ್ಕೆರಗಿ ಕೆಲವರು ಸೈಟು ಪಡೆದಿದ್ದಾರೆ.

ಮಾಜಿ ಮುಖ್ಯಮಂತ್ರಿಯೊಬ್ಬರ ಕೃಪಾಪೋಷಿತ ಪತ್ರಿಕೆಯೊಂದರ ಸ್ಥಾನೀಯ ಸಂಪಾದಕನೋರ್ವ ಹೌಸಿಂಗ್ ಬೋರ್ಡ್‌ನಿಂದ ಎರಡನೇ ಬಾರಿ ಸೈಟು ಮಂಜೂರು ಮಾಡಿಸಿಕೊಂಡಿದ್ದಷ್ಟೇ ಅಲ್ಲದೆ, ಅದಕ್ಕೆ ಕಟ್ಟಬೇಕಾದ ೩೮ ಲಕ್ಷ ರೂ ಹಣವನ್ನು ನೀವೇ ಕೊಡಿ ಎಂದು ಅದೇ ಮಾಜಿ ಮುಖ್ಯಮಂತ್ರಿಗೆ ಅವರು ಮುಖ್ಯಮಂತ್ರಿಯಾಗಿದ್ದಾಗ ಅಧಿಕೃತವಾಗಿ ಬೇಡಿಕೊಂಡಿದ್ದೂ ಇದೆ.

ಕೆಲವು ಪತ್ರಿಕೆಗಳಲ್ಲಿ ಈ ಸೈಟುಗಳ್ಳರಿಗೆ ಶಾಶ್ವತ ಬಹಿಷ್ಕಾರವಿದೆ. ಅದೇ ಪ್ರಕಾರ ಜಿ ಕೆಟಗರಿ ಸೈಟು ಪಡೆಯುವುದಿದ್ದರೆ ನಿನ್ನ ಹೆಸರಲ್ಲಿ ತೆಗೆದುಕೊಳ್ಳಬೇಡ, ಬೇರೆಯವರ ಹೆಸರಲ್ಲಿ ತೆಗೆದುಕೋ ಎಂದು ಪತ್ರಕರ್ತರಿಗೆ ಅಡ್ಡದಾರಿ ಹೇಳಿಕೊಡುವ ಸಂಪಾದಕರೂ ಇದ್ದಾರೆ.

ಜಿ ಕೆಟಗರಿಯ ಅಡಿಯಲ್ಲಿ ಬರಲು ಯಾವುದಾದರೂ ಸಾಧನೆ ಮಾಡಿರಬೇಕು, ರಾಜ್ಯೋತ್ಸವ ಪ್ರಶಸ್ತಿ ಪಡೆದಿರಬೇಕು ಎಂಬ ನಿಯಮವಿತ್ತು. ಹೀಗಾಗಿಯೇ ಪತ್ರಕರ್ತರು ರಾಜ್ಯೋತ್ಸವ ಪ್ರಶಸ್ತಿಗಳಿಗೆ ಹೊಲಸಿನ ಮೇಲೆ ನೊಣ ಮುತ್ತುವಂತೆ ಮುತ್ತಿಕೊಂಡರು. ಪತ್ರಕರ್ತರಾಗಿ ಐದು ವರ್ಷ ಕೆಲಸ ಮಾಡಿದ ಬಾಲಕರಿಗೂ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಎಂಬುದು ತಳ್ಳುಗಾಡಿಯಲ್ಲಿ ಮಾರುವ ತರಕಾರಿಯಂತಾಗಿ ಹೋಯಿತು.

ಜಿ ಕೆಟಗರಿ ಸೈಟು ಕೊಡೋದು ಅತಿಗಣ್ಯರಿಗೆ ಮತ್ತು ಸೈಟು ಕೊಳ್ಳಲು ಶಕ್ತಿ ಇಲ್ಲದ ನಿವೇಶನರಹಿತರಿಗೆ. ಆದರೆ ಸೈಟು ಹೊಡೆದುಕೊಂಡಿರುವವರ ಪೈಕಿ ಬಹುತೇಕರು ಯಾವ ಕೋನದಲ್ಲಿ ನೋಡಿದರೂ ಅತಿಗಣ್ಯರೇನಲ್ಲ. ಕೆಲವರಂತೂ ಸ್ಪಷ್ಟವಾಗಿ ಹೇಳುವುದಾದರೆ ಪತ್ರಿಕಾ ವೃತ್ತಿಯನ್ನೇ ಸರಿಯಾಗಿ ನಿರ್ವಹಿಸಲು ಬಾರದ ಅಡ್ನಾಡಿಗಳು.

ಈಗ ಪ್ರಾಮಾಣಿಕರಾಗಿರುವ ಪತ್ರಕರ್ತರು ಅಥವಾ ಪ್ರಾಮಾಣಿಕರಾಗಿರುವ ರಾಜಕಾರಣಿಗಳು ಈ ನ್ಯಾಯಬಾಹಿರವಾಗಿ, ಸುಳ್ಳು ಅಫಿಡೆವಿಟ್ ಕೊಟ್ಟ ಪತ್ರಕರ್ತರನ್ನು ಜೈಲಿಗೆ ಕಳುಹಿಸುವ ಕೆಲಸ ಮಾಡುವರಾ? ಯಾರಾದರೂ ಈ ಸಂಬಂಧ ನ್ಯಾಯಾಲಯಗಳಲ್ಲಿ ದಾವೆ ಹೂಡಿ ಈ ಪತ್ರಕರ್ತರ ಮುಖವಾಡದ ದಗಲ್ಬಾಜಿಗಳನ್ನೂ ಪರಪ್ಪನ ಅಗ್ರಹಾರಕ್ಕೆ ಕಳಿಸುವರೇ? ರಾಜಕಾರಣಿಗಳು ಮಾಡಿದ್ದು ಭ್ರಷ್ಟಾಚಾರವಾದರೆ ಪತ್ರಕರ್ತರು ಮಾಡಿದ್ದೇಕೆ ಭ್ರಷ್ಟಾಚಾರವಲ್ಲ?

ಪರಪ್ಪನ ಅಗ್ರಹಾರದಲ್ಲಿ ಗ್ರಾಮುಗಟ್ಟಲೆ ಅನ್ನ ಮತ್ತು ಮುದ್ದೆ ಬೇಕಾದಷ್ಟು ತಯಾರಾಗುತ್ತದೆ.

14 comments:

 1. Dislike as you have not mentioned any names. Hate this hypocrisy.

  ReplyDelete
 2. ಸಂಪಾದಕೀಯದವರ ಮಾತು ನಿಜ. ರಾಜಕಾರಣಿಗಳಷ್ಟೇ ಭ್ರಷ್ಟರಲ್ಲ, ಅವರೊಂದಿಗೆ ಕೈ ಜೋಡಿಸಿ, ವಂದಿಮಾಗಧರಂತೆ ಬರೆಯುವ ಪತ್ರಕರ್ತರೂ ಭ್ರಷ್ಟರೇ. ಪತ್ರಕರ್ತರ ಕುರಿತೂ ತನಿಖೆಗಳು ನಡೆಯಲಿ ಆಗ ನೋಡಿ, ಪತ್ರಕರ್ತರ ಕನಸಿನ ಸೌಧಗಳೆಲ್ಲ ಕುಸಿದು, ಮಾಧ್ಯಮಗಳಲ್ಲಿ ಕೆಲಸ ಮಾಡುವವರೇ ಇಲ್ಲದಂತಾಗುತ್ತದೆ. ಕೇವಲ ಲಾಭ, ಎಲ್ಲರನ್ನೂ ಹೆದರಿಸಿಕೊಳ್ಳಬಲ್ಲೆವೆಂಬ ಅಹಂನಿಂದಾಗಿಯೇ ಬಹಳಷ್ಟು ಅರೆಬರೆ ಪತ್ರಕರ್ತರು ಮಾಧ್ಯಮಗಳಲ್ಲಿ ತೂರಿಕೊಂಡಿದ್ದಾರೆ. ಇವರ ನಿಜವಾದ ಬಣ್ಣ ಬಯಲಾಗುವುದು ತನಿಖೆಯ ನಂತರವೇ. ಆಗ ಎಲ್ಲರೂ ರಾಜೀನಾಮೆ ಬಿಸಾಕಿ ಓಡಿಹೋಗುತ್ತಾರೆ. ಪ್ರಾಮಾಣಿಕರು ಮಾತ್ರ ಉಳಿಯುತ್ತಾರೆ. ಸಂಪಾದಕೀಯಕ್ಕೆ ಹ್ಯಾಟ್ಸಾಫ್

  ReplyDelete
 3. ಸಂಪಾದಕರೇ ನೀವು ಲೇಖನದ ಜೊತೆಗೆ ಅಂತಹ ಅಡ್ನಾಡಿ ಪತ್ರಕರ್ತರ ಹೆಸರನ್ನು ಸೇರಿಸಿದ್ದರೆ ಲೇಖನ ಪೂರ್ಣವಾಗುತ್ತಿತ್ತು. ಕನಿಷ್ಠ ನಾಗಲಕ್ಷ್ಮಿಬಾಯಿ ಕೇಸು ಯಾರ ಮೇಲೆ ಕೇಸು ಹಾಕಿದ್ದರು ಎನ್ನುವ ವಿವರವನ್ನಾದರೂ ಕೊಡಬೇಕಿತ್ತು.

  ReplyDelete
 4. ಈ ತರ ಅರ್ದಂಬರ್ದ ಸುದ್ದಿ ಬದಲು, ಯಾವ ಯಾವ ಪರ್ತಕರ್ತ (ಪತ್ರಕರ್ತ) ಅಂತಾ ಅವರ ನಾಮದೇಯವನ್ನು ಕೊಟ್ಟಿದ್ದರೆ ತುಂಬಾ ಚೆನ್ನಾಗಿರುತ್ತಿತ್ತು.. ದಯವಿಟ್ಟು ತಪ್ಪದೆ ಅವರ ಹೆಸರುಗಳನ್ನು ಬರೆದರೆ ಓದಿ ನಾವು ನಮ್ಮ ಅಲ್ಪ ಜ್ನಾನ ವನ್ನು ಬೆಳೆಸಿಕೊಳ್ಳುತ್ತೇವೆ..

  ReplyDelete
 5. beda bidi e site reporter galu jaili ge hodre allu site padedaru achchari padabekilla.
  k.v.doddappa

  ReplyDelete
 6. ಈ ಸಂಗತಿ ಓದುಗರಿಗೆ ಗೊತ್ತಿಲ್ಲದ್ದಲ್ಲ. ಎಲ್ಲರಿಗೂ ಗೊತ್ತಿರುವ ಸಂಗತಿಯನ್ನೇ ಪುನರ್‌ಉತ್ಪಾದಿಸಿದರೆ ಹೇಗೆ? ಇದರಿಂದ ನೀವು ಹೊಸದೇನನ್ನು ಹೇಳಿದಂತಾಯಿತು? ಅಂಥ ಕರ್ಮಕಾಂಡದಲ್ಲಿ ತೊಡಗಿರುವ ಪತ್ರಕರ್ತರ ಹೆಸರುಗಳನ್ನು ನೀವಾದರೂ ಬಹಿರಂಗಗೊಳಿಸಿ. ನೀವೇ ಬಹಿರಂಗಗೊಳಿಸುವುದಿಲ್ಲ ಎಂದಾರೆ ಯಾವ ಪತ್ರಿಕೆಯಿಂದ ನಾವು ಇದನ್ನು ನಿರೀಕ್ಷಿಸಲಾದೀತು?

  ReplyDelete
 7. ಪ್ರಿಯ ಜಿ.ಎಸ್.ಶ್ರೀನಾಥ ಮತ್ತು ಅರುಣ್ ಕಾಸರಗುಪ್ಪೆ
  ನೀವು ಹೇಳೋದು ನಿಜ. ಈ ಪ್ರಕರಣಗಳ ಒಂದೊಂದೇ ದಾಖಲೆಗಳು ಲಭ್ಯವಾಗ್ತಾ ಇರೋದರಿಂದಲೇ ಈ ಲೇಖನವನ್ನು ಮುನ್ನುಡಿಯ ರೂಪದಲ್ಲಿ ಬರೆದಿದ್ದೇವೆ. ಸದ್ಯಕ್ಕೆ ನಮ್ಮ ಬಳಿ ಕೆಲವರ ವಂಚನೆಯ ದಾಖಲೆಗಳು ಮಾತ್ರ ಇವೆ. ಉಳಿದವುಗಳ ನಿರೀಕ್ಷೆಯಲ್ಲಿದ್ದೇವೆ. ಈ ಕೆಲಸದಲ್ಲಿ ಸಾಕಷ್ಟು ಮಂದಿ ಕೈ ಜೋಡಿಸುವ ಭರವಸೆ ನೀಡಿದ್ದಾರೆ. ಸ್ವಲ್ಪ ದಿನ ಕಾಯೋಣ.

  ReplyDelete
 8. ಕರ್ನಾಟಕದ ಒಟ್ಟು ಜನಜೀವನವೆ ಇಂದು ಭ್ರಷ್ಟವಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಆಪರೇಶನ್ ಕಮಲ ಎಂಬ ಲಜ್ಜೆಗೆಟ್ಟ ಕಾರ್ಯದ ಮೂಲಕ ಶಾಸಕರನ್ನು ಕೊಂಡುಕೊಂಡು ರಾಜೀನಾಮೆ ಕೊಡಿಸಿ ಪುನಃ ಚುನಾವಣೆ ಹೇರಿದಾಗ ಪ್ರಜೆಗಳಿಗೆ ಇಂಥ ಭ್ರಷ್ಟ ಕಾರ್ಯಕ್ಕೆ ನಾವು ಸೊಪ್ಪು ಹಾಕುವುದಿಲ್ಲ ಎಂಬ ನಿರ್ಧಾರ ತಳೆಯಲು ಅವಕಾಶಗಳಿದ್ದರೂ ಅಂತ ಭ್ರಷ್ಟ ವ್ಯವಸ್ಥೆಯನ್ನು ಪೋಷಿಸುತ್ತಿರುವ ಕನ್ನಡಿಗರ ಮನಸ್ಥಿತಿ ವಿಷಾದನೀಯ. ಇಂಥ ನೈತಿಕ ಅಧಃಪತನದ ಸಂದರ್ಭದಲ್ಲಿ ಯಾವುದೇ ಟಿವಿ ವಾಹಿನಿಗಳೂ ಇಂಥ ಭ್ರಷ್ಟತೆಯನ್ನು ಚುನಾವಣೆಗಳಲ್ಲಿ ಗೆಲ್ಲಿಸಲೇಬಾರದು ಎಂಬ ಅಭಿಯಾನವನ್ನು ನಡೆಸಿದ್ದು ಕಾಣಲಿಲ್ಲ. ಇದು ಕನ್ನಡ ಟಿವಿ ವಾಹಿನಿಗಳ ನೈತಿಕ ಅಧಃಪತನವನ್ನು ತೋರಿಸುತ್ತದೆ. ಇಂಥ ಮಾಧ್ಯಮಗಳು ಇರುವಾಗ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಯೋಗ್ಯತೆ ಯಾವ ಟಿವಿ ವಾಹಿನಿಗಾದರೂ ಇದೆಯೇ?-ಆನಂದ ಪ್ರಸಾದ್

  ReplyDelete
 9. ಎಲ್ಲಾ ಭ್ರಷ್ಟ ಪತ್ರಕರ್ತರ ಜಾತಕಗಳು ದಾಖಲೆಗಳ ಸಮೇತ ಸಂಪಾದಕೀಯದಲ್ಲಾದರು ಶೀಘ್ರ ಪ್ರಕಟವಾಗಲಿ....ತುಂಬಾನೇ ನಿರೀಕ್ಷೆಯಲ್ಲಿ

  ReplyDelete
 10. This comment has been removed by the author.

  ReplyDelete
 11. please Publish on your site, shimoga journalists KHB Site alotment Scam. Senior Journlist, 90 Years old Kamarde Lingappa lonely Fighting this Scam. Also Gave a complaint to Loykauktha.

  ReplyDelete
 12. good, gani dhulina patrakartara mahitiyu prakata gollali

  ReplyDelete
 13. BDA- Bangalore development authority annual reports has carried the names of the 'G' category site beneficials. please go through BDA web site year wise.

  ReplyDelete
 14. site jatege, denotificationnalli, vargavaneyalli, rajakaranigala mane, guest housege hogorabaggeyu mahiti irali

  ReplyDelete