Monday, September 19, 2011

ಮಾಧ್ಯಮ ಭ್ರಷ್ಟಾಚಾರವನ್ನೇಕೆ ಸಮಾಜ ಅಷ್ಟು ಸುಲಭವಾಗಿ ಅರಗಿಸಿಕೊಳ್ಳುತ್ತಿದೆ?


ಪ್ರಜಾವಾಣಿಯಲ್ಲಿ ಗಣಿರೆಡ್ಡಿಗಳಿಂದ ಹಣ ಪಡೆದಿದ್ದರೆನ್ನಲಾದ ಖ್ಯಾತನಾಮ ಪತ್ರಕರ್ತರಿಬ್ಬರ ಹೆಸರು ಪ್ರಕಟಗೊಂಡಾಗ ಕನ್ನಡ ಪತ್ರಿಕೋದ್ಯಮದಲ್ಲಿ ದೊಡ್ಡ ಕೋಲಾಹಲವೇ ಉಂಟಾಗುತ್ತದೇನೋ ಎಂಬ ಭಾವನೆ ಮಾದ್ಯಮ ಲೋಕದಲ್ಲಿ ವ್ಯಕ್ತವಾಯಿತು. ಅದಕ್ಕೆ ಪೂರಕವಾಗಿ ಪತ್ರಕರ್ತರ ನಡುವೆ ಪರಸ್ಪರ ಎಸ್‌ಎಂಎಸ್‌ಗಳ ಪ್ರವಾಹವೇ ಹರಿದಾಡಿತು, ಗಂಭೀರ ಚರ್ಚೆಯೊಂದನ್ನು ಹುಟ್ಟು ಹಾಕಬೇಕಾದ ಸಂದರ್ಭವೊಂದು ಏನೊಂದು ಚರ್ಚೆಯಿಲ್ಲದೇ ತೆರೆಗೆ ಸರಿಸಲ್ಪಡುವಾಗಲೇ ಹರ್ಷಕುಮಾರ್ ಕುಗ್ವೆಯವರ ಲೇಖನ ಅದೇ ವಿಷಯದ ಚರ್ಚೆಗೆ ವೇದಿಕೆಯನ್ನೊದಗಿಸಿದೆ.

ಹರ್ಷ ಶಿವಮೊಗ್ಗ ಜಿಲ್ಲೆಯವರೆಂಬ ಕಾರಣಕ್ಕೆ ಕೆ ಎಚ್ ಬಿ ಕಾಲನಿಯ ನಿವೇಶನಗಳ ಪ್ರಸ್ತಾಪ ಮಾಡಿರುವುದು ಕಾಕತಾಳೀಯ ವಾಗಿರಬಹುದು. ಬಹಳಷ್ಟು ಕಮೆಂಟುಗಳು ಅದರ ಸುತ್ತಲೇ ಪ್ರಕಟವಾಗಿರುವುದರಿಂದ ಅದಕ್ಕೆ ಸೂಕ್ತ ಸಮಜಾಯಿಷಿ ನೀಡುವ ಜವಾಬ್ದಾರಿಯನ್ನು ಸಂಪಾದಕೀಯ ಸಹಾ ಹೊರಬೇಕಾಗುತ್ತದೆ. ಹರ್ಷ ಪ್ರಸ್ತಾಪಿಸಿರುವ ಕೆಎಚ್‌ಬಿ ನಿವೇಶನಗಳ ವಿಷಯದಲ್ಲಿ ಸೈಟು ಪಡೆದವರೆಲ್ಲಾ ಭ್ರಷ್ಟರೆಂದು ಭಾವಿಸುವ ಅಗತ್ಯವೇನೂ ಇಲ್ಲ. ಅಷ್ಟು ಮಾತ್ರ ಅಲ್ಲ. ಹರ್ಷ ಪ್ರಾಮಾಣಿಕರೆಂದು ಪ್ರಸ್ತಾಪಿಸುವ ಪತ್ರಕರ್ತರಷ್ಟೇ ಬದ್ಧತೆಯಿರುವ ಪತ್ರಕರ್ತರು ಬಹಳ ಜನ ಶಿವಮೊಗ್ಗದಲ್ಲಿ ಇದ್ದಾರೆ. ಅಂತಹವರು ಕೆಎಚ್ ಬಿ ನಿವೇಶನಗಳ ಹಂಚಿಕೆಯ ಸುತ್ತಲಿನ ವಾಸ್ತವವನ್ನು ಸಾರ್ವಜನಿಕರ ಮುಂದಿಡುವ ಬದ್ಧತೆಯನ್ನು ತೋರಬೇಕು. ಅದು ಉಳಿದ ಜಿಲ್ಲೆಗಳ ಪತ್ರಕರ್ತರಿಗೂ ಮಾದರಿಯಾಗಬಹುದು.

ಈ ರೋಗಗ್ರಸ್ಥ  ವ್ಯವಸ್ಥೆಯನ್ನು ಸುಧಾರಿಸಬೇಕೆಂದು ಬಯಸುವ ಪ್ರಯತ್ನದಲ್ಲಿ ಬೇರೆಲ್ಲರಿಗಿಂತ ವಿಶೇಷ ಹೊಣೆಗಾರಿಕೆ ನಮ್ಮದಾಗಿರುತ್ತದೆ ಎಂದು ಭಾವಿಸುವ ಎಲ್ಲ ಮಾನವಂತ ಪತ್ರಕರ್ತರೂ ಹರ್ಷಕುಮಾರ ಬರೆಹದ ಆಶಯವನ್ನು ಸರಿಯಾಗಿ ಗ್ರಹಿಸುತ್ತಾರೆ ಎಂಬ ಆಶಾಭಾವನೆ ನನ್ನದು. ಹರ್ಷ ನೀಡಿರುವ ಉದಾಹರಣೆಗಳ ಬಿಡಿ ಬಿಡಿ ಚರ್ಚೆಯಿಂದಾಗಲೀ, ಥಟ್ ಅಂತಾ ಹೇಳಿ? ಎಂಬ ಶೈಲಿಯ ಪ್ರಶ್ನೆಗಳಿಂದಾಗಲೀ, ವಕೀಲಿಕೆಯ ಧೋರಣೆಯಲ್ಲಿ ಸಾಕ್ಷಿ ಆಧಾರಗಳನ್ನು ಕೇಳುವುದರಿಂದಾಗಲೀ ಚರ್ಚೆ ಪರಿಪೂರ್ಣವಾಗಲಾರದು. ವಾದ-ಪ್ರತಿವಾದದ ಆಯಾಮಕ್ಕೆ ಹೊರತಾದ ಆತ್ಮಾಲೋಕನದ ದನಿಯ ಚರ್ಚೆ ಇಲ್ಲಿ ಬಹಳ ಮುಖ್ಯ.

 ದೇಶದ ಮಾಧ್ಯಮ ಜಗತ್ತು ಹಾಗೂ ಮಧ್ಯಮ ವರ್ಗ ಹಿಂದೆಂದಿಗಿಂತ ತೀವ್ರವಾಗಿ ಭ್ರಷ್ಟಾಚಾರದ ವಿಷಯಕ್ಕೆ ಸ್ಪಂದಿಸು ತ್ತಿರುವಾಗ ನನ್ನ ನಿಲುವೇನಾಗಿರಬೇಕು? ಏನಾಗಿದೆ? ಮತ್ತು ನನ್ನ ಕ್ಷೇತ್ರದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಬಗ್ಗೆ ಏನು ಹೇಳುತ್ತೇನೆ?  ನನ್ ನನಗೇ ಕೆಲವು ವಿಷಯಗಳು ಸ್ಪಷ್ಟವಾಗಬೇಕಿರುವ ಕಾರಣಕ್ಕಾಗಿಯಾದರೂ,  ನನ್ನನ್ನು ಒಂದು ಚೌಕಟ್ಟಿನಲ್ಲಿ ನಿಲ್ಲಿಸಿಕೊಳ್ಳುವ ಸಲುವಾಗಿ ಹಾಗೂ ದಾರಿ ತಪ್ಪಿದರೆ ನನ್ನ ಮಾತುಗಳನ್ನು ಮುಂದೆ ಯಾರಾದರೂ ನೆನಪಿಸಲಿ ಎನ್ನುವ ಕಾರಣಕ್ಕಾಗಿಯಾದರೂ ಈ ಕುರಿತು ಬರೆದುಕೊಳ್ಳಬೇಕಾಗಿದೆ.  ನಾನೇನೋ ಶೇಕಡಾ ನೂರು ಸಾಚಾ ಎಂಬ ಭಾವನೆ ನನಗಿಲ್ಲದಿದ್ದರೂ ಇಂತಹ ಸಂದರ್ಭ ನನ್ನೊಳಗೇ ಸೃಷ್ಟಿಸಿರುವ ಆತ್ಮಾವಲೋಕನಕ್ಕೆ ನಾನೂ ಒಳಗಾಗಲೇಬೇಕಿದೆ

ನನಗನಿಸಿದಂತೆ ಮೇಲಿನ ಉಲ್ಲೇಖದ ಪ್ರಕಾರ ಹರ್ಷ ಅವರಿಗೆ ಬೇರೆಯವರ ಬಗೆಗಿನ ಟೀಕೆಗಿಂತ ಪತ್ರಿಕಾ ವಲಯದಲ್ಲಿ ಆತ್ಮಾವಲೋಕನ ನಡೆಯಲಿ ಎಂಬುದೇ ಆಗಿದೆ. ಹಾಗಾಗಿ ಇದು ಕೇವಲ ಶಿವಮೊಗ್ಗ ಪತ್ರಕರ್ತ ಮಿತ್ರರ ಕುರಿತ ಟೀಕೆ-ಟಿಪ್ಪಣಿ ಮಾತ್ರ ಎಂದು ಭಾವಿಸಿ ಚರ್ಚೆಯನ್ನು ಸೀಮಿತಗೊಳಿಸುವುದು ಸರಿಯಲ್ಲ. ನಿವೇಶನ ಹಗರಣವೂ ಒಳಗೊಂಡಂತೆ ಹರ್ಷ ಪ್ರಸ್ತಾಪಿಸಿರುವ ಭ್ರಷ್ಟಚಾರದ ಹಲವು ನಿದರ್ಶನಗಳಿಗೆ ಶಿವಮೊಗ್ಗ ಅಥವಾ ಬೆಂಗಳೂರು ಎಂಬ ಹೆಸರು ಬದಲಿಸಿ ರಾಜ್ಯದ ಯಾವುದೇ ಜಿಲ್ಲೆಯ ಹೆಸರು ಮತ್ತು ಪತ್ರಿಕಾ ವಲಯದೊಂದಿಗೆ ಸಮೀಕರಿಸಬಹುದು. ವಾಸ್ತವ ಕಟುವಾಗಿರುತ್ತದೆ. ಅದನ್ನು ಸ್ವೀಕರಿಸುವ ಪ್ರಾಂಜಲ ಮನಸ್ಸು ಇರಬೇಕು.

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಎನ್ ಜೆ ಬಾಲಕೃಷ್ಣನ್ ಭೂ ಹಗರಣ ಬಯಲಾದಾಗ ಅಷ್ಟೊಂದು ಅಲ್ಲೋಲ-ಕಲ್ಲೋಲ ಏಕೆ ಉಂಟಾಯಿತು? ನ್ಯಾಯಾಂಗದ ಪಾವಿತ್ರ್ಯತೆ ಬಗ್ಗೆ ಜನರಿಗಿದ್ದ ನಂಬಿಕೆಯನ್ನು ಹುಸಿಗೊಳಿಸಿದರೆಂದೇ ಅಲ್ಲವೇ ಪ್ರಜ್ಞಾವಂತ ವಲಯ ತಲ್ಲಣಗೊಂಡದ್ದು? ಕಾರ್ಯಾಂಗ-ಶಾಸಕಾಂಗಗಳ ಭ್ರಷ್ಟತೆಯನ್ನು ಅರಗಿಸಿಕೊಂಡಷ್ಟು ಸುಲಭವಾಗಿ ನ್ಯಾಯಾಂಗದ ಭ್ರಷ್ಟಾಚಾರವನ್ನು ಅರಗಿಸಿಕೊಳ್ಳಲಾಗದು ಎಂಬ ಕಾರಣಕ್ಕಲ್ಲವೇ ಮಾಧ್ಯಮ ವಲಯ ವಿಶೇಷ ಆಸ್ಥೆವಹಿಸಿ ಗಂಭೀರ ಚರ್ಚೆಗಳನ್ನು ಹುಟ್ಟಹಾಕಿದ್ದು? ಒಬ್ಬ ನ್ಯಾಯಮೂರ್ತಿಯ ಭ್ರಷ್ಟಚಾರದ ವಿಷಯ ಇಡೀ ನ್ಯಾಯಾಂಗದ ಪಾವಿತ್ರ್ಯದ ಬಗೆಗೆ ಸಂಶಯಗಳನ್ನು ಹೇಗೆ ಹುಟ್ಟುಹಾಕಿತೋ, ಅದೇ ರೀತಿ ಸಂವಿಧಾನದ ನಾಲ್ಕನೇ ಅಂಗ ಎಂದು ಪರಿಗಣಿಸಲ್ಪಟ್ಟಿರುವ ಪತ್ರಿಕಾರಂಗವನ್ನು ಕನ್ನಡದ ಖ್ಯಾತನಾಮ ಪತ್ರಕರ್ತರಿಬ್ಬರು ಭ್ರಷ್ಟಗೊಳಿಸಿದ್ದರೆಂಬ ವಿಷಯ ಏಕೆ ಪತ್ರಿಕಾರಂಗದ ಪಾವಿತ್ರ್ಯದ ಬಗೆಗಿನ ಸಂಶಯಗಳಿಗೆ ದಾರಿ ಮಾಡಲಿಲ್ಲ? ಗಂಭೀರ ಚರ್ಚೆಗಳನ್ನು ಹುಟ್ಟು ಹಾಕಲಿಲ್ಲ? ಇಡೀ ದೇಶಕ್ಕೇ ದೇಶವೇ ಅಣ್ಣಾ ಹಜಾರೆಯ ಭ್ರಷ್ಟಾಚಾರ ವಿರೋಧಿ ದನಿಗೆ ದನಿಗೂಡಿಸುವ ಸಂದರ್ಭದಲ್ಲೇ ಈ ಖ್ಯಾತನಾಮ ಪತ್ರಕರ್ತರು ಧರಿಸಿರುವ ಮುಖವಾಡಗಳು ಮಾತ್ರ ಏಕೆ ರಕ್ಷಿಸಲ್ಪಟ್ಟವು? ಇದರಲ್ಲಿ ಓರ್ವ ಪತ್ರಕರ್ತನ ಪಟಾಲಮ್ಮು ದಿನಬೆಳಗಾದರೆ ಆ ಹಗರಣ-ಈ ಹಗರಣ ಎಂದು ಕಂಡ ಕಂಡವರ ಬಗ್ಗೆ ರೀಲು ಸುತ್ತಿ ಅಷ್ಟೇ ವೇಗದಲ್ಲಿ ಸ್ಪಷ್ಟೀಕರಣಗಳನ್ನು ಪ್ರಕಟಿಸುವ ನಿರ್ಲಜ್ಜತನವನ್ನು ಪ್ರದರ್ಶಿಸುತ್ತಲೇ ಬಂದಿದೆ, ಹೀಗೆ ಎಲ್ಲೆಂದರಲ್ಲಿ ಕೆಸರೆರಚಿದರೆ ತಮ್ಮ ಬಾಸ್ ಮೇಲೆ ಬಿದ್ದಿರುವ ಕೆಸರಿನ ಕಡೆ ಗಮನ ಹರಿಯದಂತೆ ಮಾಡಬಹುದು ಎಂಬುದು ಇವರ ಲೆಕ್ಕಾಚಾರ. ಆದರೆ ಈ ಸರ್ಕಸ್ ನಿರೀಕ್ಷಿತ ಫಲನೀಡಿದಂತೆ ಕಾಣುತ್ತಿಲ್ಲ. ಪಶ್ಚಾತ್ತಾಪ ಮನೋಭಾವದ ಲವಲೇಶವೂ ಪ್ರಕಟಿಸದ ಇಂಥ ಜನರ ಭಂಡತನ ನಿಜಕ್ಕೂ ಗಾಬರಿ ಹುಟ್ಟಿಸುವಂಥದ್ದು.

ಸಮಾಜದ ಎಲ್ಲಾ ವರ್ಗಗಳೂ ತಮ್ಮ ಪ್ರಶ್ನಾವಳಿಯ ಹಾಗೂ ಸ್ಪಷ್ಟೀಕರಣದ ವ್ಯಾಪ್ತಿಗೆ ಬರುತ್ತವೆಂಬ ಅಘೋಷಿತ ನಿಯಮ ಹೇರುತ್ತಿರುವ ಮಾಧ್ಯಮ ವಲಯ ತಮ್ಮನ್ನು ಮಾತ್ರ ಏಕೆ ಅದಕ್ಕೆ ಹೊರತಾಗಿಸಿಕೊಂಡಿದೆ. ಹಾಗೆ ನೋಡಿದರೆ ಸಂವಿಧಾನದಲ್ಲಿ ಪತ್ರಕರ್ತರಿಗೆ ವಿಶೇಷ ಪ್ರಾತಿನಿಧ್ಯವನ್ನೇನೂ ನೀಡಲಾಗಿಲ್ಲ. ಜನಸಾಮಾನ್ಯರಿಗಿರುವ ವಾಕ್  ಸ್ವಾತಂತ್ರ್ಯದ ಪರಿಮಿತಿಯಲ್ಲೇ ಪತ್ರಕರ್ತರೂ ಕಾರ್ಯನಿರ್ವಹಿಸಬೇಕಾಗುತ್ತದೆ. ಆದರೆ ಎಲ್ಲಾಕಡೆ ವಿಶೇಷ ಪ್ರಾತಿನಿಧ್ಯವನ್ನು ನಿರೀಕ್ಷಿಸುವುದು ಪತ್ರಕರ್ತರ ಜಾಯಮಾನವೇ ಆಗಿ ಹೋಗಿದೆ. ಇಂಥಹ ಪ್ರವೃತ್ತಿಯಿಂದಾಗಿಯೇ ಮಾದ್ಯಮ ವಲಯದ ಬಗ್ಗೆ ಜನರಲ್ಲಿ ಅತಿರಂಜಿತ ಕಲ್ಪನೆಗಳು, ಭ್ರಮೆಗಳು ಮನೆಮಾಡಿಕೊಂಡಿವೆ,

ಸದಾ ಅಭಿವ್ಯಕ್ತಿ ಸ್ವಾತಂತ್ರ್ಯದ ರಕ್ಷಣೆಯ ಬಗ್ಗೆ ಕಾಳಜಿ ವಹಿಸುವ ಮಾಧ್ಯಮದ ಮಂದಿ ಈ ಖ್ಯಾತನಾಮ ಪತ್ರಕರ್ತರ ವಿಷಯದಲ್ಲಿ ಮೌನ ವಹಿಸಿರುವುದೇಕೆ? ಎಲ್ಲಾ ಕಡೆ ಮುಕ್ತ ಚರ್ಚೆಯಾಗಲಿ ಎಂದು ಬಯಸುವ ನಾವು ಅನಾಮಧೇಯವಾಗಿ ನಮ್ಮ ಅಭಿಪ್ರಾಯಗಳನ್ನು ದಾಖಲಿಸಿಬೇಕಾದ ದುಸ್ಥಿತಿ ಏಕೆ ಬಂದಿದೆ? ಯಾರಿಗೂ ಪತ್ರಕರ್ತರ ಭ್ರಷ್ಟಾಚಾರದ ವಿಷಯ ಚರ್ಚೆಯಾಗುವುದು ಬೇಕಿಲ್ಲ. ಕುಂಬಳಕಾಯಿ ಕಳ್ಳ ಎಂದರೆ ಈಗ ಬಹುತೇಕ ಪತ್ರಕರ್ತರು ಈಗ ಹೆಗಲುಮುಟ್ಟಿ ನೋಡಿಕೊಳ್ಳುವುದಿಲ್ಲ. ಏಕೆಂದರೆ ಆ ಕುಂಬಳ ಕಾಯಿಯನ್ನು ಹೆಗಲ ಮೇಲಿಂದ ಕೆಳಗಿಳಿಸಿ ರುಚಿಯಾದ ಪಾಯಸವನ್ನು ಮಾಡಿ ಸವಿದಾಗಿದೆ. ಈ ಕುಂಬಳ ಕಾಯಿ ಸೈಟುಗಳ ರೂಪದಲ್ಲಿ ಮಾತ್ರವಲ್ಲ. ಸಂದರ್ಶನಗಳು, ಮುಖಾಮುಖಿಗಳು, ನ್ಯೂಸ್ ಕವರೇಜ್ ಗಳ ಹೆಸರಲ್ಲಿ  ರಾಜಕೀಯ ಅವಕಾಶಗಳು, ವರ್ಗಾವಣೆಗಳು, ಮಕ್ಕಳ ಬರ್ತ್ ಡೇ, ಮ್ಯಾರೇಜ್ ಆನಿವರ್ಸರಿ  ಗಿಫ್ಟುಗಳು, ಟೆಂಡರ್ ಲಾಬಿಗಳು, ಪ್ರಿಂಟಿಂಗ್ ಆರ್ಡರ್‌ಗಳು, ಮನೆಲೀಸುಗಳು, ಕಂಪ್ಯೂಟರ್‌ಗಳು ಹೀಗೆ ಹಲವು ತೆರನಾಗಿ ಸಂದಾಯವಾಗಿ ಬಿಟ್ಟಿದೆ.

ಇಂತಹ ಸಂದರ್ಭದಲ್ಲಿ ನಾವು ಮಾತ್ರ ಟಾರ್ಗೆಟ್ ಆಗಿದ್ದೇವೆ ಎಂದು ಶಿವಮೊಗ್ಗದ ಪತ್ರಕರ್ತ ಮಿತ್ರರು ಭಾವಿಸಬೇಕಾಗಿಲ್ಲ. ಕರ್ನಾಟಕದ ಚರಿತ್ರೆಯಲ್ಲಿ ಶಿವಮೊಗ್ಗ ಜಿಲ್ಲೆ ಹಲವು ಕಾರಣಗಳಿಗಾಗಿ ರಾಜಕೀಯವಾಗಿ, ಸಾಮಾಜಿಕವಾಗಿ ನಾಡಿನ ಜನತೆಯ ತಿಳಿವಳಿಕೆಯನ್ನು ವಿಸ್ತರಿಸುವಂಥ ಚಳವಳಿಗಳು, ಚಿಂತನೆಗಳಿಗೆ ಮೇಲ್ಪಂಕ್ತಿಯಾಗಿದೆ. ಹಾಗಾಗಿ ಶಿವಮೊಗ್ಗದ ಪತ್ರಕರ್ತ ಮಿತ್ರರು ರಾಜಕಾಣಿಗಳ ಶೈಲಿಯಲ್ಲಿ ಆಧಾರಗಳನ್ನು ಕೇಳುವ ಪರಿಪಾಠ ಕೈಬಿಡಬೇಕು. ನಾವು ಪತ್ರಕರ್ತರು ಕೇವಲ ಮೇಲ್ಪದರದ ಸಂಶಯಗಳನ್ನು ಆದರಿಸಿ  ತನಿಖಾ ವರದಿಗಳನ್ನು ಬರೆದು ಸತ್ಯಾಂಶ ಬಯಲಿಗೆಳೆಯಲು ಮುಂದಾಗುವುದಿಲ್ಲವೇ? ಈ ಸರಳ ಸತ್ಯ ನಮಗೆಲ್ಲರಿಗೂ ಗೊತ್ತಿದೆ.  ಪ್ರಸ್ತುತ ಕೆ ಎಚ್ ಬಿ ವಿಷಯದಲ್ಲಿ ಏನೇನಾಗಿದೆ ಎಂಬುದರ ವಿವರಗಳನ್ನು ಜನತೆಯ ಮುಂದಿಡುವ ಕೆಲಸಕ್ಕೆ ಅಲ್ಲಿನ ಪ್ರಜ್ಞಾವಂತ ಪತ್ರಕರ್ತರು ಮುಂದಾಗಬೇಕು. ಆ ಮೂಲಕ ನಾಡಿನ ಪತ್ರಿಕಾರಂಗದ ಹುಳುಕುಗಳ, ಓರೆಕೋರೆಗಳ ಆತ್ಮಾವಲೋಕನಕ್ಕೆ ಮುನ್ನುಡಿ ಬರೆಯಬೇಕು.

-ಓರ್ವ ಪತ್ರಕರ್ತ

6 comments:

 1. ಎಲ್ಲಾ ಸರಿ, ಆದರೆ "ಓರ್ವ ಪತ್ರಕರ್ತ" ಎಂದು ಲೇಖನ ಬರೆದು ತಮ್ಮ ನಿಜ ನಾಮಧೇಯ ವನ್ನು ಪ್ರಕಟಿಸಿಲ್ಲ. ತಮಗೆ ಅಷ್ಟೊಂದು ಭಯನಾ?

  ಸುಂದರ್

  ReplyDelete
 2. ಮಾನ್ಯರೆ, ನಿಮ್ ಇವೊತ್ತಿನ ಪ್ರಸ್ತಾವನೆ (ಈ ಲೇಖನವನ್ನು ನಾನು ಹೀಗೆ ಕರೆದಿದ್ದೇನೆ) ಮೆಚ್ಚುವಂಥಹುದ್ದೇ. ಯಾಕೆಂದರೆ ಆರ್ಬಿ ಮತ್ತು ವಿ ಭಟ್ ಈ ನಾಡಿನ ಅಪ್ರತಿಮ ಪತ್ರಕರ್ತರು ಅನ್ನೋದರಲ್ಲಿ ಯಾವುದೇ ಲವಲೇಶವೂ ಸಂಶಯವಿಲ್ಲ. ಹಾಗಂತ ಅವರೂ ಮನುಷ್ಯರೇ, ಹರಿ ಬ್ರಹ್ಮಾದಿಗಳು ತಪ್ಪು ಮಾಡುತ್ತಾರೆ ಅಂದಹಾಗೆ ಇವರೇನು ದೇವರು ಒತ್ತೊಟ್ಟಿಗಿರಲಿ ದೆವ್ವಗಳೂ ಅಲ್ಲ ರಾಕ್ಷಸರೂ ಅಲ್ಲ ಎಲ್ಲೋ ಒಂದು ಕಡೆ (ಇದು ಎಡಬಿಡಂಗಿ ದತ್ತಾ ಎಂಬ ಸ್ಪೂನ್ ರಾಜಕಾರಣಿಯ ಡೈಲಾಗ್) ಈ ಇಬ್ಬರು ಕನ್ನಡ ಪತ್ರಿಕೋದ್ಯಮಕ್ಕೆ ಒಂದು ಒಳ್ಳೆ ದಿಶೆ ತೋರಿದವರು ಅನ್ನುವ ಗೌರವ ಇದ್ದೇ ಇರುತ್ತೆ ಹೀಗಾಗಿ ಅವರ ಭ್ರಷ್ಟತೆಯನ್ನು ಬಹಿರಂಗವಾಗಿ ಖಂಡಿಸಲು ನನಗೂ ಆರಂಭದಲ್ಲಿ ಮುಜುಗರವಾಗಿತ್ತು. ಆದರೆ ಅನಂತರದಲ್ಲಿ ಇತರರಿಗೆ ಬದನೆಕಾಯಿ ತಿನ್ನಲಿಕ್ಕೆ ಹೇಳಿ ತಾವು ಮಾತ್ರ ಶಾಸ್ತ್ರ ಓದುತ್ತಿರುವ ಅಂಶ ಗಮನಕ್ಕೆ ಬಂದ ತಕ್ಷಣವೇ ನಾನು ಈ ಇಬ್ಬರನ್ನು ಸೇರಿದಂತೆ ಡೆಕ್ಕನ್ ಕ್ರಾನಿಕಲ್ ಬಳ್ಳಾರಿ ಮೂಲದ ಪತ್ರಕರ್ತ ಸಂಜಯ ಸರ್ ಇನ್ನಿತರರನ್ನು ಇದೇ ಅಂಕಣದಲ್ಲಿ ತರಾಟೆಗೆ ತೆಗೆದುಕೊಂಡಿದ್ದು ನಿಮಗೆ ನೆನಪಿರಬಹುದು ಅಲ್ಲವೇ.
  ಇರಲಿ ಇಲ್ಲಿ ವಿಷಯಾಂತರ ಮಾಡದೇ 108 ಮಾತಿಗೆ ಬದಲು "ನೇರಮಾತು" ನಲ್ಲಿ ಹೇಳೋದಾದರೆ ವಿ ಭಟ್ ಮತ್ತು ಆರ್ ಬಿಯವರೆ ಕನ್ನಡ ಪತ್ರಿಕಾ ಲೋಕಕ್ಕೆ ನಿಮ್ ಕೊಡುಗೆ ಅಪಾರವೇ ಆದರೆ ಪರಿಸ್ಥಿತಿ ಸಂದರ್ಭ ಸನ್ನಿವೇಶಕ್ಕೆ ನೀವು ಬಲಿಪಶುವಾಗಿರಲೂ ಬಹುದು ಹಾಗಂತ ಸುಮ್ಮನೆ ಇದ್ದವನ... ಊರೇ ಕಿತ್ತಲಿಲ್ಲ ಎಂದು ನಮ್ ತಾತ ಹೇಳುತ್ತಿದ್ದ ಪಡೆನುಡಿ ನೆನಪಾಗಿ ನಿಮ್ ಬಗ್ಗೆ ಕನಿಕರ ಉಂಟಾಗುತ್ತಿದೆ. ಅದು ಆಗಿನ ಕಾಲಕ್ಕೆ ಈಗಲ್ಲ ಅನ್ನೋದನ್ನ ಸವಿನಯವಾಗಿ ನೆನಪಿಸಿಕೊಡಲು ಬಯಸುತ್ತೇನೆ ಮತ್ತು ತಪ್ಪಾಯ್ತು ತಿದ್ಕೊತೀವಿ ಅಂತಾ ಒಂದು ಸಾಲು ಬರೆದು ಮನನ್ಸು ಮತ್ತು ಮಾರ್ಗ ಹಗುರ ಮಾಡಿಕೊಳ್ಳಬಾರದೇಕೆ ಉಳಿದವರಿಗೆ ಹೋಲಿಸಿದರೆ ನಿಮ್ಮದು ಅತ್ಯಂತ ಕ್ಷುಲ್ಲಕ ತಪ್ಪು. ಆದರೆ ಅದು ಕ್ಷಮಾರ್ಹ ಎಂಬುದನ್ನು ಮರೆಯದಿರಿ. ಇಂತಿ ನಿಮ್ಮ ಧನಾತ್ಮಕ ಪ್ರತಿಕ್ರಿಯೆ ಮತ್ತು ಕ್ರಿಯೆಯ ನಿರೀಕ್ಷೆಯಲ್ಲಿ ನಿಮ್ ಸಹವರ್ತಿ ವೈಜನಾಥ ಗುರುಮಠಕಲ್, ಹಿರೇಮಠ, ಯಾದಗಿರಿ +919880562999

  ReplyDelete
 3. illi yake v bhat matte r b bagge matra charche agtide... satish chapparike madtirodra bagge yake yaru enu post madtilla? samaya channelnalli nadeda anyayada bagge yake charche agtilla...

  ReplyDelete
 4. Slowly but steadily the noose is tightening around V Bhat and RB. Of all people the Lokayukta too was made to go.. then why these minnows are still sticking around?! I'm sure once Kharapudi Mahesh is caught he'll start singing like minaaa...! Nodthirona... enenu maadtharo!
  Honnur
  Mangalore

  ReplyDelete
 5. ಮಾಧ್ಯಮದ ಭ್ರಷ್ಟಾಚಾರವನ್ನು ಸಮಾಜದ ಮುಂದಿಡುವವರು ಮಾಧ್ಯಮಗಳೇ ಅಲ್ಲವೇ, ಅವರೇ ಸುಮ್ಮನಿದ್ದ ಮೇಲೆ ಜನರ ಪ್ರತಿಕ್ರಿಯೆ ಬರಲು ಹೇಗೆ ಸಾಧ್ಯ?

  ಇನ್ನು DH ಮತ್ತು ಪ್ರಜಾವಾಣಿ ವರದಿ ಪ್ರಕಟಿಸಿದ ಮೇಲೆ ಏನಾದರು ಪ್ರತಿಕ್ರಿಯೆ ಪ್ರಕಟಿಸಿದರೆ ಗೊತ್ತಿಲ್ಲ!. ಮತ್ತು ಈ ವರದಿಗಳು ಗೊತ್ತಾಗುವುದು DH ಮತ್ತು ಪ್ರಜಾವಾಣಿ ಓದುಗರಿಗೆ ಮಾತ್ರ ಅಲ್ಲವೆ.

  ಇತರ ಪತ್ರಿಕೆಗಳು ಯಾಕೆ ಇದರ ಬಗ್ಗೆ ಸುಮ್ಮನಿವೆ ಅಂದರೆ ಬಹುಶಃ ವ್ಯಂಗ್ಯ ಮಾತುಗಳು ಉದಾಹರಣೆಗೆ ಹಾಯ್ ಬೆಂಗಳೂರಿನಲ್ಲಿ ಬರುವ 'ಪಿಟ್ಟೂ' 'ವಿಷ್ ಪರ್ ಭಟ್ಟ' ಸೆವಿಂಟಿಫೈವ್ ಭಟ್ಟ' 'ಸೀಡ್ ಲೆಸ್ .. ' ಇತ್ಯಾದಿ, ಇದಕ್ಕೆ ಉತ್ರರವಾಗಿ ಕನ್ನಡಪ್ರಭದಲ್ಲಿ ಬೆಳಗೆರೆಯನ್ನು 'ಕೊಳಗೆರೆ' ಯಾಗಿಸಿ ಆತನ ವೈಯುಕ್ತಿಕ ವಿಷಯಗಳ ಚರ್ಚೆ ಮಾಡುವುದು. ನಿವೇದಿತಾ ಅಂಕಣದಲ್ಲಿ ಆತ ಕೆಟ್ಟ ಕೆಲಸ ನಡೆಸಿದನೆಂದು ಪರೋಕ್ಷವಾಗಿ ಹೀಯಾಳಿಸುವುದು..... ಇತ್ಯಾದಿ.

  ಶ್ರೀಯುತ ವೈಜನಾಥ ಗುರುಮಠಕಲ್ ರವರ ಮಾತುಗಳು ಸಹ ಗಮನಾರ್ಹ, ಅವರ ಸಲಹೆಯನ್ನು RB & VB .... ಗಳು ಗಮನಿಸುವರೇ?

  ReplyDelete
 6. ಮಾ ಸು ಮಂಜುನಾಥSeptember 21, 2011 at 8:36 PM

  ರಬೆ ಮತ್ತು ವಿಭ ರ ಬರಹಗಳನ್ನು ತುಂಬಾ ಇಷ್ಟಪಡುತ್ತಿದ್ದ ನಾನು ಇತ್ತಿಚೆಗೆ ಅವರ ವ್ಯಕ್ತಿತ್ವದ ಬಗ್ಗೆ ಅನುಮಾನವಾಗುತ್ತಿದೆ,ನನ್ನಂತೆ ಬಹಳಷ್ಟೂ ಓದುಗರಿಗೆ ಅನ್ನಿಸಿರಬಹುದು,ಮುಂದೊಂದು ದಿನ ಇವರ ಬರಹಗಳಿಗೆ ಮೌಲ್ಯ ಕಡಿಮೆ ಆಗುವುದರಲ್ಲಿ
  ಅನುಮಾನವಿಲ್ಲವೆನಿಸುತ್ತದೆ.ಇದು ಸಮಾಜದ ಮೇಲೆ ಪರಿಣಾಮ ಬೀರಿದೆ.

  ReplyDelete