Tuesday, September 20, 2011

ಪಾಟೀಲರ ನಿರ್ಗಮನದೊಂದಿಗೆ ಎದ್ದಿರುವ ಗಂಭೀರ ಪ್ರಶ್ನೆಗಳು...


ಶಿವರಾಜ ಪಾಟೀಲರು ಲೋಕಾಯುಕ್ತ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ನಿರ್ಗಮಿಸಿದ್ದಾರೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಎಚ್.ಡಿ.ಕುಮಾರಸ್ವಾಮಿ ಕೋರ್ಟು ಕಟಕಟೆ ಹತ್ತಿಳಿಯುತ್ತಿದ್ದಾರೆ, ಜೈಲು ಅವರ ಸನಿಹದಲ್ಲೇ ನಿಚ್ಚಳವಾಗಿ ಕಾಣಿಸುತ್ತಿದೆ. ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಮತ್ತವನ ಪುತ್ರ ಜೈಲಿನಲ್ಲೇ ಕೊಳೆಯುತ್ತಿದ್ದಾರೆ. ಕೆಪಿಎಸ್‌ಸಿ ಮಾಜಿ ಅಧ್ಯಕ್ಷ ಡಾ. ಎಚ್.ಎನ್.ಕೃಷ್ಣ ಸಹ ಬಂಧನಕ್ಕೆ ಒಳಗಾಗುವುದು ಬಹುತೇಕ ಖಚಿತವಾಗಿದೆ. ಗಣಿ ಲೂಟಿಕೋರ ಜನಾರ್ದನ ರೆಡ್ಡಿ ಸಿಬಿಐ ಕೈಗೆ ಸಿಕ್ಕು ಜೈಲು ಪಾಲಾಗಿದ್ದಾನೆ. ಅವನ್ಯಾರೋ ದರ್ಶನ್ ಎಂಬ ನಟ ಹೆಂಡತಿಯನ್ನೇ ಹೊಡೆದು, ಸಿಗರೇಟಿನಿಂದ ಸುಟ್ಟು ಜೈಲು ಅಸ್ತಮಾದಿಂದ ನರಳುತ್ತಿದ್ದಾನೆ. ಗಣಿಕಪ್ಪ ಪಡೆದ ಏಳುನೂರಕ್ಕೂ ಹೆಚ್ಚು ಅಧಿಕಾರಿಗಳ ಮೇಲೆ ಕೇಸು ಹೂಡುವ ಸಮಯವೂ ಹತ್ತಿರವಾಗಿದೆ. ಜೈಲು ಸೇರುವವರ ಪಟ್ಟಿ ಇನ್ನೂ ದೊಡ್ಡದಿದೆ. ಕೇಸುಗಳು ದಂಡಿಯಾಗಿ ಬೀಳುತ್ತಲೇ ಇವೆ. ಗಣಿಕಪ್ಪ ಪಡೆದವರ ಪಟ್ಟಿಯಲ್ಲಿ ಪತ್ರಕರ್ತರ ಹೆಸರು ಕಾಣಿಸಿಕೊಂಡ ಪರಿಣಾಮ ಜನರು ಮಾಧ್ಯಮಗಳನ್ನೂ ಅಪನಂಬಿಕೆಯಿಂದ ನೋಡುವಂತಾಗಿದೆ.

ಜನ ಯಾರನ್ನು ನಂಬಬೇಕು?

ನ್ಯಾಯಾಧೀಶರು, ಮಾಜಿ ಮುಖ್ಯಮಂತ್ರಿಗಳು, ಮಾಜಿ ಮಂತ್ರಿಗಳು, ಅಧಿಕಾರಿಗಳು, ಉದ್ದಿಮೆದಾರರು, ಮಾಧ್ಯಮದವರು ಎಲ್ಲರ ಮುಖವಾಡಗಳೂ ಕಳಚಿ ಬೀಳುತ್ತಿವೆ. ಇದು ಅತ್ಯಂತ ಅಪಾಯಕಾರಿಯಾದ ಸೂಕ್ಷ್ಮ ಸಂದರ್ಭ. ಹೀಗೆ ವ್ಯವಸ್ಥೆಯ ಎಲ್ಲ ಭಾಗಗಳೂ ಮಲಿನವಾದಾಗ ಜನರು ಹತಾಶೆಗೆ ಒಳಗಾಗುವ ಸಾಧ್ಯತೆಗಳು ಹೆಚ್ಚು. ನಾವೆಲ್ಲರೂ ಸಿನಿಕರಾಗುವುದಕ್ಕೆ, ನಿರಾಶಾವಾದಿಗಳಾಗುವುದಕ್ಕೆ ಇದೆಲ್ಲವೂ ದಾರಿಮಾಡಿಕೊಡುತ್ತದೆ.

ಕಟು ವ್ಯಂಗ್ಯವೆಂದರೆ ಭ್ರಷ್ಟಚಾರದ ವಿರುದ್ಧ ಕತ್ತಿ ಝಳಪಿಸುತ್ತಿರುವವರೂ ಬಹುತೇಕ ಪ್ರಕರಣಗಳಲ್ಲಿ ಭ್ರಷ್ಟರೇ ಆಗಿದ್ದಾರೆ. ಇಲ್ಲಿ ಪ್ರಾಮಾಣಿಕರ ಪಾತ್ರ ಏನೇನೂ ಇಲ್ಲವೆನ್ನಿಸುವಷ್ಟು ನಿರ್ವಾತ ಕಾಡುತ್ತಿದೆ. ಯಡಿಯೂರಪ್ಪನವರ ಹಗರಣಗಳನ್ನು ಹೊರಗೆ ತಂದಿದ್ದು ಕುಮಾರಸ್ವಾಮಿ. ಹಾಗೆಯೇ ಕುಮಾರಸ್ವಾಮಿ ಹಗರಣಗಳನ್ನು ಹೊರತಂದಿದ್ದು ಯಡಿಯೂರಪ್ಪ. ಗಣಿರೆಡ್ಡಿಗಳ ವಿರುದ್ಧ ತಿರುಗಿಬಿದ್ದವರೂ ಅದೇ ಗಣಿದಂಧೆಕೋರರು. ಎಲ್ಲೋ ಒಂದೆರಡು ಅಪವಾದಗಳನ್ನು ಹೊರತುಪಡಿಸಿದರೆ ಭ್ರಷ್ಟಾಚಾರದ ವಿರುದ್ಧ ಹೋರಾಟವೂ ಭ್ರಷ್ಟಾಚಾರಿಗಳ ಅಸ್ತ್ರವಾಗೇ ಪರಿಣಮಿಸುತ್ತಿದೆ. ಒಂದೇ ಒಂದು ಆಶಾವಾದವೆಂದರೆ ಇಂಥ ಒಬ್ಬನ ಕಣ್ಣನ್ನು ಇನ್ನೊಬ್ಬನು ಕೀಳುವ ಮೂಲಕ ಭ್ರಷ್ಟರು ಪರಸ್ಪರರನ್ನು ಬೆತ್ತಲಾಗಿಸುತ್ತಿದ್ದಾರೆ. ಪ್ರಾಮಾಣಿಕರು ಇಲ್ಲಿ ಪ್ರೇಕ್ಷಕರು ಮಾತ್ರ. ಇದು ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ದೂರಗಾಮಿ ಪರಿಣಾಮಗಳನ್ನು ಬಿರುತ್ತದೆ ಎಂಬ ನಂಬಿಕೆ ಮಾತ್ರ ಹುಟ್ಟುತ್ತಿಲ್ಲ.

****

ನ್ಯಾಯಮೂರ್ತಿ ಶಿವರಾಜ ಪಾಟೀಲ ಲೋಕಾಯುಕ್ತ ಸ್ಥಾನದಿಂದ ನಿರ್ಗಮಿಸುವುದರೊಂದಿಗೆ ನಮ್ಮೆದುರಿನ ಆತಂಕಗಳು ಇನ್ನಷ್ಟು ಬೆಳೆದು ನಿಂತಿದೆ. ಮುಂದೆ ಲೋಕಾಯುಕ್ತರಾಗುವವರು ಯಾರು? ಅವರನ್ನು ಎಲ್ಲಿಂದ ಹುಡುಕಿ ತರಲಾಗುತ್ತದೆ?

ಎ.ಟಿ.ರಾಮಸ್ವಾಮಿಯವರ ವರದಿಯನ್ನು ನೀವು ಗಮನಿಸಿರಬಹುದು. ಇಡೀ ಜುಡಿಷಿಯಲ್ ಕಾಲೋನಿಯೇ ಕಾನೂನು ಬಾಹಿರವಾಗಿ ನಿರ್ಮಾಣಗೊಂಡಿದೆ ಎಂಬುದನ್ನು ಅವರು ದಾಖಲಿಸಿದ್ದರು. ಈ ಬಡಾವಣೆಯಲ್ಲಿ ಸೈಟು ಪಡೆಯಲು ನ್ಯಾಯಮೂರ್ತಿ ಸಂತೋಷ್ ಹೆಗಡೆಯವರೂ ಸೇರಿದಂತೆ ಸಾಕಷ್ಟು ನ್ಯಾಯಾಧೀಶರು ನಿರಾಕರಿಸಿದರು. ಕೆಲವರು ಪಡೆದರು.

ಇದಕ್ಕಿಂತ ಗಂಭೀರವಾದ ಪ್ರಶ್ನೆ ಏನೆಂದರೆ ಸ್ವಂತ ಮನೆ-ನಿವೇಶನ ಹೊಂದಿದ ನ್ಯಾಯಾಧೀಶರಿಗೂ ಈ ಬಡಾವಣೆಯಲ್ಲಿ ಅವಕಾಶ ಕಲ್ಪಿಸಲಾಯಿತು. ಇದಕ್ಕೆ ಹೌಸಿಂಗ್ ಸೊಸೈಟಿಗಳ ಬೈಲಾಗಳು ಅವಕಾಶ ನೀಡುವುದಿಲ್ಲ. ಶಿವರಾಜ ಪಾಟೀಲರು ಇಲ್ಲಿ ೯೬೦೦ ಚದರ ಅಡಿಯಷ್ಟು ಜಾಗ ಪಡೆಯುವಾಗ ಅವರ ಬಳಿ ಒಂದು ಮನೆಯಿತ್ತು. ಬೆಂಗಳೂರಿನಲ್ಲಿ ಇವತ್ತು ೨೦ ೩೦ ಅಡಿ ಅಳತೆಯ ಸೈಟಿನ ಬೆಲೆ ೨೦ ಲಕ್ಷ ದಾಟಿದೆ. ಇಂಥ ೧೬ ಸೈಟುಗಳನ್ನು ಈ ೯೬೦೦ ಚದರ ಅಡಿ ಜಾಗದಲ್ಲಿ ಹಂಚಬಹುದು! ಬಡವರಿಗೆ ಸೂರು ಕೊಡಬೇಕಾದ್ದು ಸರ್ಕಾರದ ಕರ್ತವ್ಯ. ನ್ಯಾಯಾಧೀಶರುಗಳ ಬಡವರ ಪಟ್ಟಿಯಲ್ಲಿ ಬರುತ್ತಾರಾ? ಬಹುಶಃ ಇತರ ನ್ಯಾಯಾಧೀಶರಿಗೂ ಇಂಥದ್ದೇ ಕೊಡುಗೆಗಳು ದೊರಕಿರಬಹುದು.

ಶಿವರಾಜ ಪಾಟೀಲರು ಇದಾದ ನಂತರ ತಮ್ಮ ಪತ್ನಿಯ ಹೆಸರಲ್ಲಿ ಮತ್ತೊಂದು ಹೌಸಿಂಗ್ ಸೊಸೈಟಿಯಿಂದ ಸೈಟು ಪಡೆದರು.  ಅದು ಸಹ ೪೦೧೨ ಚದರ ಅಡಿಗಳ ಬೃಹತ್ ಸೈಟು. ವಿವಾದಕ್ಕೆ ಸಿಲುಕಿಕೊಂಡಾದ ಅದನ್ನು ವಾಪಾಸು ಮಾಡಿದರು. ಆದರೆ ಕಾಲ ಮಿಂಚಿ ಹೋಗಿತ್ತು. ಆರೋಪಗಳ ಏಟು ತಡೆಯಲಾಗದೆ ಈಗ ರಾಜೀನಾಮೆ ಕೊಟ್ಟು ಹೋಗಿದ್ದಾರೆ.

ಈಗ ಶಿವರಾಜ ಪಾಟೀಲರ ನಿರ್ಗಮನ ಮತ್ತಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ನ್ಯಾಯ ಎಲ್ಲರಿಗೂ ಒಂದೇ ಅಲ್ಲವೇ? ಹೌಸಿಂಗ್ ಸೊಸೈಟಿಗಳ ಬೈಲಾ ಉಲ್ಲಂಘಿಸಿ ಸೈಟು ಪಡೆದ ಇತರ ಜಡ್ಜುಗಳ ಮೇಲೂ ಇದೇ ನ್ಯಾಯದ ವ್ಯಾಖ್ಯಾನವೇ ಅನ್ವಯವಾಗುವುದಿಲ್ಲವೆ? ಹಾಗಿದ್ದರೆ ೮೦ಕ್ಕೂ ಹೆಚ್ಚು ನ್ಯಾಯಾಧೀಶರ ಮೇಲೆ ತನಿಖೆಯಾಗುತ್ತದೆಯೇ? ಅಥವಾ ಈ ನ್ಯಾಯಾಧೀಶರ ಪೈಕಿ ಯಾರಾದರೂ ಆಯಕಟ್ಟಿನ ಸ್ಥಾನದಲ್ಲಿದ್ದಾಗ, ವಿಶೇಷ ಕಾರಣಗಳಿಗೆ ಸುದ್ದಿಯಾದಾಗ ಅವರ ಮೇಲೆ ಎರಚಲು ಈ ಹಳೆಯ ಕೊಳಚೆ ರಾಡಿಯನ್ನು ಬಳಸಿಕೊಳ್ಳಲಾಗುತ್ತದೆಯೇ? ಹೀಗೆ ಸೆಲೆಕ್ಟಿವ್ ಆಗಿ ಹಣಿಯುವುದರ ಬದಲು ಇದರ ಮೂಲವನ್ನೇ ಹುಡುಕಿ ಗಲೀಜು ತೆಗೆದು ಶುದ್ಧಿ ಮಾಡುವ ಕಾಯಕ ಯಾಕೆ ಮಾಡಬಾರದು? ಇದೆಲ್ಲ ಯಾರ ಹೊಣೆ?

****

ನೈತಿಕತೆಯ ವ್ಯಾಖ್ಯಾನ ಕಾಲಕಾಲಕ್ಕೆ ಬದಲಾಗುತ್ತಿದೆ. ನೈತಿಕ ಪ್ರಶ್ನೆಗಳು ಈಗ ಯಾರಿಗೂ ಮುಖ್ಯವೆನ್ನಿಸದಷ್ಟು ಅದನ್ನು ಹಿಂದೆ ಬಿಟ್ಟು ಮುಂದೆ ಸಾಗುತ್ತಿದ್ದೇವೆ. ಸಾಮಾಜಿಕ ಜೀವನದಲ್ಲಿ ನಿಸ್ಪೃಹತೆಯಿಂದ, ಪ್ರಾಮಾಣಿಕತೆಯಿಂದ ಬದುಕಿದ ನೂರಾರು ಆದರ್ಶಜೀವಿಗಳನ್ನು ನಾವು ಕಂಡಿದ್ದೇವೆ. ಈಗಲೂ ಅಂಥ ಜೀವಗಳು ಇದ್ದೇ ಇವೆ. ಆದರೆ ಇರುವವರು ಈಗ ಮುನ್ನೆಲೆಯಲ್ಲಿ ಇಲ್ಲ. ಅವರು ಯಾರಿಗೂ ಬೇಕಾಗೂ ಇಲ್ಲ.

ಈಗ ಕಾನೂನು-ಕಟ್ಲೆಯ ಪರಿಭಾಷೆಗಳೇ ಎಲ್ಲ ಸಂದರ್ಭಗಳನ್ನು ನಿರ್ವಚಿಸುತ್ತಿವೆ. ರಾಜಕೀಯ ಪಕ್ಷಗಳ ಮುಖಂಡರು ತಮ್ಮ ತಮ್ಮ ಪಾರ್ಟಿಗಳನ್ನು ಟಿವಿ ಸ್ಟುಡಿಯೋಗಳಲ್ಲಿ ಕುಳಿತು ಸಮರ್ಥಿಸಿಕೊಳ್ಳುವಂತೆ ಸಾರ್ವಜನಿಕ ಬದುಕಿನ ಎಲ್ಲ ಜನ-ಸಂಸ್ಥೆಗಳೂ ನೈತಿಕ ಪ್ರಶ್ನೆಗಳನ್ನು ಬಿಟ್ಟುಕೊಟ್ಟು ಕೋರ್ಟು ವಾದದಂಥ ಟೆಕ್ನಿಕಾಲಿಟಿಯೊಳಗೆ ಕಳೆದುಹೋಗುತ್ತಿವೆ. ಇಂಥ ವಿತಂಡವಾದಗಳು ನಮ್ಮೆದುರಿನ ಕೊಚ್ಚೆ-ಕೊಳಕನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂಬ ಆತಂಕ ನಮ್ಮನ್ನು ಕಾಡದೇ ಇರುವುದರ ಪರಿಣಾಮವಾಗಿ ಹೊಸ ಬಗೆಯ ಸಾಮಾಜಿಕ ವ್ಯವಸ್ಥೆಯೊಂದನ್ನು ನಾವು ಸೃಷ್ಟಿಸುತ್ತಿದ್ದೇವೆ. ಇಂಥ ನೈತಿಕ ಚೌಕಟ್ಟಿಲ್ಲದ ವ್ಯವಸ್ಥೆಯೊಳಗೆ ನಾವು ಹೆಚ್ಚು ಕಾಲ ನೆಮ್ಮದಿಯಿಂದ ಇರಲಾರೆವು ಎಂಬ ಸತ್ಯ ಮನವರಿಕೆ ಆಗಲೇಬೇಕಿದೆ.

ಒಬ್ಬ ರಾಜಕಾರಣಿ ಮತ್ತೊಬ್ಬ ಅಧಿಕಾರಿ ಜೈಲು ಪಾಲಾಗುವುದನ್ನು ಕಂಡು ನಾವು ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದೇವೆ. ನಿಜಕ್ಕೂ ಆತಂಕಪಡುವ ಸಂದರ್ಭ ಇದು ಎಂದು ನಮಗನ್ನಿಸುತ್ತಲೇ ಇಲ್ಲ. ಭ್ರಷ್ಟ ವ್ಯವಸ್ಥೆಯ ಒಂದು ಹುಲ್ಲುಕಡ್ಡಿಯನ್ನು ಅಲ್ಲಾಡಿಸಿದರೆ ಇಡೀ ವ್ಯವಸ್ಥೆ ನಾಶವಾಗುವುದಿಲ್ಲ.

ಭ್ರಷ್ಟಾಚಾರದ ಕುರಿತಾದ ನಮ್ಮ ತಿಳಿವಳಿಕೆಗಳೂ ಪ್ರಬುದ್ಧವಾಗಿಲ್ಲ. ಭ್ರಷ್ಟಾಚಾರವನ್ನು ಇಷ್ಟು ದೊಡ್ಡ ಪ್ರಮಾಣದಲ್ಲಿ ಬೆಳೆಸುತ್ತಿರುವ ಆಧುನಿಕ ಪರಿಪಾಠಗಳು, ಕೊಳ್ಳುಬಾಕ ಸಂಸ್ಕೃತಿ, ಲೋಭದ ಬೆನ್ನತ್ತಿ ಹೊರಟ ಅನೈಸರ್ಗಿಕ ಸ್ಪರ್ಧೆ ನಮ್ಮನ್ನು ಕಾಡಿಸುವ, ನಾಚಿಸುವ ಬದಲಿಗೆ ಬೆರಗಿನ ಸಂಭ್ರಮವನ್ನು ನೀಡುತ್ತಿವೆ. ನಾವು ನಮ್ಮ ಸುಖವನ್ನು ಮಾಲ್‌ಗಳ, ರೆಸಾರ್ಟುಗಳ, ಐಷಾರಾಮಿ ವಿಲ್ಲಾಗಳ, ಎಂಜಿ ರೋಡಿನ ಆಕರ್ಷಣೆಗಳಲ್ಲಿ ಕಂಡುಕೊಳ್ಳುತ್ತಿದ್ದೇವೆ. ಭ್ರಷ್ಟಾಚಾರದ ವಿರುದ್ಧ ಮಾತನಾಡುತ್ತಲೇ ನೈತಿಕ ಭ್ರಷ್ಟಾಚಾರದಲ್ಲಿ ನಮ್ಮನ್ನು ನಾವು ಕಳೆದುಕೊಂಡಿದ್ದೇವೆ.

ಬಸವಣ್ಣನ ನಾಡು ನಮ್ಮದು. ಸಾಮಾಜಿಕ ನ್ಯಾಯದ ಸೂತ್ರಗಳನ್ನು ೧೨ನೇ ಶತಮಾನದಲ್ಲೇ ಜಗತ್ತಿಗೆ ಕೊಟ್ಟವರು ಬಸವಾದಿ ಶರಣರು. ಇವತ್ತು ನಮ್ಮ ಸಾಮಾಜಿಕ ವ್ಯವಸ್ಥೆ ಇನ್ನಷ್ಟು ಛಿದ್ರಗೊಂಡಿರುವುದಲ್ಲದೇ ಹೊಸಬಗೆಯ ಅಪಾಯಕಾರಿ ವರ್ಗಗಳನ್ನು ಸೃಷ್ಟಿಸಿದೆ. ಬಡವರು ದಟ್ಟದರಿದ್ರರಾಗುವ, ಶ್ರೀಮಂತರು ಅತಿಶ್ರೀಮಂತರಾಗುವ ಈ ಹೊತ್ತಿನಲ್ಲಿ ನಾಡನ್ನು ಸರಿಯಾದ ದಾರಿಯಲ್ಲಿ ಮುಂದಕ್ಕೆ ಕರೆದೊಯ್ಯುವ ಆತ್ಮಶುದ್ಧಿಯುಳ್ಳ ನಾಯಕರು ಮುಂದೆಬರಬೇಕಿದೆ. ಭ್ರಷ್ಟಾಚಾರದ ವಿರುದ್ಧ ಹೋರಾಡಲು ಭ್ರಷ್ಟಾಚಾರಿಗಳನ್ನೇ ಮುಂದೆ ಬಿಡುವುದರ ಬದಲು ಪ್ರಾಮಾಣಿಕರು ಈ ಕಾರ್ಯವನ್ನು ಕೈಗೊಳ್ಳಬೇಕಿದೆ.

ಇದಾಗದಿದ್ದರೆ ನಮ್ಮ ಮುಂದಿನ ಹಾದಿ ಇನ್ನಷ್ಟು ಭೀಕರವಾಗಲಿದೆ.

ಕೊನೆಮಾತು: ಕನ್ನಡನಾಡು ಇಷ್ಟೆಲ್ಲ ಬಿಕ್ಕಟ್ಟುಗಳನ್ನು ಎದುರಿಸುವ ಸಂದರ್ಭದಲ್ಲೇ ಕನ್ನಡದ ಶ್ರೇಷ್ಠ ಕವಿ-ನಾಟಕಕಾರರಲ್ಲಿ ಒಬ್ಬರಾದ ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದೆ. ಈ ಜಂಜಾಟದಲ್ಲೇ ರಿಲೀಫ್ ಕೊಟ್ಟ ಕಂಬಾರರಿಗೆ ಅಭಿನಂದನೆಗಳು, ಕೃತಜ್ಞತೆಗಳು. ಕನ್ನಡಕ್ಕೆ ಮತ್ತೊಂದು ಜ್ಞಾನಪೀಠ ಕಂಬಾರರ ಮೂಲಕ ದೊರಕಿರುವುದು ಬಿಕ್ಕಟ್ಟಿನ ಸಂದರ್ಭದಲ್ಲಿ ನಾಡಿನ ಸಾಂಸ್ಕೃತಿಕ ಚೇತನಗಳು ಕ್ರಿಯಾಶೀಲವಾಗಲು ಕಾರಣವಾಗಲಿ, ಸ್ಫೂರ್ತಿ ಒದಗಿಸಲಿ.

11 comments:

 1. ಸ್ವಂತ ಮನೆ-ನಿವೇಶನ ಹೊಂದಿದ ಅದೆಷ್ಟೋ ಪತ್ರಕರ್ತ ಮಹಾಶಯರು ಕೆಹೆಚ್ ಬಿ, ಬಿಡಿಎ, ನಗರಾಭಿವೃದ್ದಿ ಪ್ರಾಧಿಕಾರಿಗಳ ನಿವೇಶನಗಳನ್ನು ತಮ್ಮ ಹೆಸರಿನಲ್ಲಿ, ಪತ್ನಿ, ಮಕ್ಕಳು, ಸಂಬಂಧಿಕರು ಜೊತೆಗೆ ಬೇನಾಮಿ ಹೆಸರಿನಲ್ಲಿ ಪಡೆದಿದ್ದಾರೆ. ಕಾನೂನು ಎಲ್ಲರಿಗೂ ಒಂದೇ ಎನ್ನುವುದಾದರೇ, ಕೆಲ ಪತ್ರಕರ್ತರು ಕಾನೂನು ಬಾಹಿರವಾಗಿ ಪಡೆದಿರುವ ನಿವೇಶನಗಳ ಬಗ್ಗೆ ತನಿಖೆಯಾಗಬೇಕು. ಜೊತೆಗೆ ಇತ್ತೀಚೆಗಷ್ಟೆ ಸಂಪಾದಕೀಯ ಬೆಳಕಿಗೆ ತಂದ ಶಿವಮೊಗ್ಗ ಪತ್ರಕರ್ತರ ಕೆಹೆಚ್ ಬಿ ನಿವೇಶನ ಹಗರಣದ ಬಗ್ಗೆಯೂ ಉನ್ನತ ಮಟ್ಟದ ತನಿಖೆಯಾಗಲಿ. ಇನ್ನೊಬ್ಬರ ನೈತಿಕತೆ, ಪ್ರಾಮಾಣಿಕತೆ ಪ್ರಶ್ನಿಸುವ ಪತ್ರಕರ್ತರು ಕೂಡ ಈ ಬಗ್ಗೆ ಆತ್ಮಾವಾಲೋಕನ ಮಾಡಿಕೊಳ್ಳಬೇಕಾಗಿದೆ.

  ReplyDelete
 2. ಭ್ರಷ್ಟರಲ್ಲದವರು ಪ್ರಸಿದ್ದವಾಗಿರುವ ಒಂದು ಖಾತೆ ಇದೆ. ಅದು ಯಾವುದು ಎಂದರೆ ಏನೂ ಮಾಡದೇ ಇರುವುದು. ನಮ್ಮ ನಿಮ್ಮಂತವರು, ಭ್ರಷ್ಟರು ಹೌದೋ ಅಲ್ಲವೋ ಆದರೆ ಏನೂ ಮಾಡದಿರುವುದು ಹೌದು, ಇಲ್ಲಿ ಬರೆಯುವುದನ್ನು ಬಿಟ್ಟು! ಈ ಭ್ರಷ್ಟರಲ್ಲೇ ಕಡಿಮೆ ಭ್ರಷ್ಟರಿಂದ ಕೆಲಸ ಮಾಡಿಸಿಕೊಳ್ಳದಿದ್ದರೆ ಭ್ರಷ್ಟರಲ್ಲದವರನ್ನು ಈ ಕಾಲದಲ್ಲಿ ಎಲ್ಲಿಂದ ತರೋದು ಸ್ವಾಮೀ? ನಮ್ಮಲ್ಲಿ ಒಂದು ಜಾತಿಯ ಭ್ರಷ್ಟತನ ಪ್ರಾಮಾಣಿಕತೆ ಎನಿಸಿಕೊಡುಬಿಟ್ಟಿದೆ! ಆ ಜಾತಿಯ ಪ್ರಾಮಾಣಿಕರು ಪಾಟೀಲರು ಇರಬಹುದೇ. "ಅದು ಏನು ಬಿಡಿ ಎಲ್ಲರೂ ಮಾಡುತ್ತಾರೆ" ಸ್ವಭಾವ. ಹಾಗೇ ತೀರ್ಮಾನ ಘೋಷಿಸದೇ ಪಾಟೀಲರ ವರಸೆಯನ್ನು ಕೇಳುವ ವ್ಯವಧಾನವೂ ನಮಗೆ ಬೇಕು.

  ReplyDelete
 3. All are equal under law, then the law applies to all. All such allotments should be tabled and published, where are those people who raised the issue of justice Shivaraj Patil, now sleeping. Wake up for the welfare of the public.
  -Shambhu Bhat Saaketha Thotadamoole

  ReplyDelete
 4. Like any other he might have got the site and at that point of time these laws were no issues. Know they ahve been blown out of propotion to achieve hidden ajenda of some highly courrupt politicians.
  -Krishnamurthy Td

  ReplyDelete
 5. ನಿಧಾನವೇ ಪ್ರಧಾನ. ಕಾನೂನಿನ ಮಹತ್ವಗಳು ಭ್ರಷ್ಟರ ಅದಃಪತನದಿಂದಾಗಿ ಬೇರುಬಿಡುತ್ತಿರುವುದು ಆಶಾದಾಯಕ ಬೆಳವಣಿಗೆ. ಕಾನೂನಿನ ಮುಂದೆ ಸರ್ವರೂ ಸಮಾನರೆಂಬುದು ಹೀಗೇ ಸಾಬೀತಾಗುತ್ತಾ ಸಾಗಲಿ. ಕ್ರಮೇಣ ಕಡು ಭ್ರಷ್ಟರ ಸಂಖ್ಯೆ ಕ್ಷೀಣಿಸಬಹುದು. ಉಪ್ಪು ತಿಂದೋರು ನೀರು ಕುಡಿಯಲೇ ಬೇಕಲ್ಲವೇ..? ತಾವಿಲ್ಲಿ ದಾಖಲಿಸಿರುವ ಘಟನಾವಳಿಗಳ ಸರಣಿ ರಂಗೋಲಿ ಕೆಳಗೆ ನುಸುಳುವವರಿಗೆ ಬಲಿಯ ಭೀತಿ ಮೂಡಿಸಲಿ. ನ್ಯಾಯ, ನೀತಿ ರಾರಾಜಿಸುವಂತಾಗಲಿ.

  ReplyDelete
 6. aadastu bega patrakartara mukhavaada haakiruva brastara viruddavuu tanike aaguvudara jotege jailige hogi baruvantaagali. kannada patrikodyama rakshaneyaagali.

  ReplyDelete
 7. ಒಂದು ಉತ್ತಮವಾದ ಲೇಖನ, ಬರೆದವರಿಗೆ ಅಭಿನಂದನೆಗಳು.

  ...........೮೦ಕ್ಕೂ ಹೆಚ್ಚು ನ್ಯಾಯಾಧೀಶರ ಮೇಲೆ ತನಿಖೆಯಾಗುತ್ತದೆಯೇ? ಅಥವಾ ಈ ನ್ಯಾಯಾಧೀಶರ ಪೈಕಿ ಯಾರಾದರೂ ಆಯಕಟ್ಟಿನ ಸ್ಥಾನದಲ್ಲಿದ್ದಾಗ, ವಿಶೇಷ ಕಾರಣಗಳಿಗೆ ಸುದ್ದಿಯಾದಾಗ ಅವರ ಮೇಲೆ ಎರಚಲು ಈ ಹಳೆಯ ಕೊಳಚೆ ರಾಡಿಯನ್ನು ಬಳಸಿಕೊಳ್ಳಲಾಗುತ್ತದೆಯೇ? ....... ಎನ್ನುವ ಮಾತು ನಿಜಕ್ಕೂ ಖೇದಕರ.

  ಬಹುಶಃ ಈ ಜುಡಿಷಿಯಲ್ ಕಾಲೋನಿಯ ಕಥೆ ನ್ಯಾಯಾಲಯದಲ್ಲಿದೆ ಅನ್ನಿಸುತ್ತಿದೆ.

  ಹಾಗೆಯೇ 80+ ನ್ಯಾಯಾಧೀಷರ ಹೆಸರನ್ನೂ ಸಾಧ್ಯವಾದರೆ ಈಗಲೆ ಪ್ರಕಟಿಸಿ. ಅವರಗಳು ಆಯಾಕಟ್ಟಿನ ಜಾಗಕ್ಕೆ ಬರುವವರೆಗೂ ಸುಮ್ಮನಿರುವುದೇಕೆ?

  ReplyDelete
 8. ಸರಿಯಾಗಿ ವಿಚಾರಮಾಡಿ ನೋಡಿದರೆ ಶಿವರಾಜ್ ಪಾಟೀಲ್ ರವರ ಪ್ರಕರಣ ಏನೇನು ಅಲ್ಲ. ಒಬ್ಬ ಪ್ರಾಮಾಣಿಕ ವ್ಯಕ್ತಿಗೆ ಕಳಂಕ ಹಚ್ಚುವ ಪ್ರಯತ್ನ ನಡೆದಿದೆ. ಕೇವಲ ೧೨ ಕೋಟಿ ಆಸ್ತಿ ಅಂತ ಘೋಷಿಸಿಕೊಂಡ ಶರದ್ ಪವಾರ್ ಎಷ್ಟೆಲ್ಲ ಸಂಪಾದನೆ ಮಾಡಿದ್ದಾರೆ ಅಂತ ಅವರ ಆಡಳಿತವಾದಿಯ ಹಗರಣಗಳಲ್ಲಿ ಗೊತ್ತಾಗುತ್ತೆ. ಇಂದಲ್ಲ ನಾಳೆ ಆ ಸತ್ಯ ಸಹ ಹೊರಬರುತ್ತೆ. ಅಭಿವೃದ್ದಿ ಅಂತ ಮಾತನಾಡುತಿದ್ದ ಯಡ್ಡಿ ಸ್ವಕುಟುಂಬ ಅಭಿವೃದ್ದಿ ಮಾಡಿದ್ದು ಗೊತ್ತಾಗಲಿಲ್ವೆ ಹಾಗೆನೇ, ಇನ್ನು ಸಾವಿರಾರು ಅಧಿಕಾರಿಗಳು, ನೂರಾರು ರಾಜಕಾರಣಿಗಳು ಈ ಸಾಲಿನಲ್ಲಿದ್ದಾರೆ. ಭ್ರಷ್ಟ ಪತ್ರಕರ್ತರ ಬಗ್ಗೆ ಮಾತನಾಡಿದಿರಿ, ಆ ಬಗ್ಗೆ ಯಾರಾದರು ಬಾಯಿಬಿಡ್ತಾಯಿದ್ದಾರ? ಹೇಳೋದು ಮಾತ್ರ ವೇದಾಂತ!.
  ಕೇಂದ್ರ ಯೋಜನಾ ಆಯೋಗ ಸುಪ್ರಿಂಕೋರ್ಟ್ಗೆ ಅಫಿಡವಿಟ್ ಕೊಟ್ಟಿದ್ದಾರೆ ರೂ ೨೬ ಕ್ಕಿಂತ ಹೆಚ್ಚು ಖರ್ಚು ಮಾಡುವ ಗ್ರಾಮೀಣ ಜನರು ಮತ್ತು ರೂ ೩೨ಕ್ಕಿಂತ ಹೆಚ್ಚು ಖರ್ಚು ಮಾಡುವ ನಗರವಾಸಿ ಜನರು ಬಡವರಲ್ಲ ಹಾಗು ಅವರು ಬಡತನ ರೇಖೆಗಿಂತ ಕೆಳಗಿರುವವರು ಪಡೆಯುವ ಯೋಜನೆಗಳನ್ನು ಈ ಜನರು ಪಡೆಯುವ ಹಾಗಿಲ್ಲ ಅಂತ. ಇಂದಿನ ದುಬಾರಿ ಕಾಲದಲ್ಲಿ ಇದು ಯಾವ ಓಬಿರಾಯನ ಕಾಲದ ಲೆಕ್ಕಚಾರನೋ ನಾ ಕಾಣೆ. ಇಂತಹ ವಿಷಯಗಳ ಬಗ್ಗೆ ಚರ್ಚೆ ನಡೆಯಲ್ಲ ಮತ್ತೆ ಬ್ಲಾಗ್ ಬರೆಯಲ್ಲ. ಕೋಟಿ ಕೋಟಿ ಬಾಚ್ತ ಬಿದ್ದಿರೋ ಜನರ ಮದ್ಯೆ ಪ್ರಾಮಣಿಕರಗೆಲ್ಲಿದೆ ಬೆಲೆ? ಇಂತಹ ವಿಷಯ ಮಾತ್ರ ಬಹು ಚರ್ಚಿತ ವಾಗುತ್ತೆ
  ನೀರಾ ರಾಡಿಯ ಪ್ರಕರಣದಲ್ಲಿ ಉಲ್ಲೇಕವಾದ ಪತ್ರಕರ್ತರಿಗೆ ಪದ್ಮಶ್ರಿ ಪ್ರಶಸ್ತಿ ಕೊಟ್ಟು ಗೌರವಿಸಿ ಅಂತವರ ಬಾಯಲ್ಲಿ ಭ್ರಷ್ಟಚಾರದ ಬಗ್ಗೆ ವಾದ ವಿವಾದ. ಇದು ನಮ್ಮ ದೇಶದ ಕರ್ಮವೇ ಸರಿ ಒಂದು ವರ್ಗದ ಜನ ಹಾಗು ಒಂದು ಸಿದ್ದಾಂತವನ್ನು ಒಪ್ಪಿಕೊಂಡ ಜನ ಏನು ಮಾಡಿದರು ಸೈ ಇದು ಮಾಧ್ಯಮದ ದ್ವಂದ್ವ ನಿಲುವುಗಳು, ನಿಮ್ಮನ್ನೂ ಒಳಗೊಂಡು....
  --
  ಪ್ರಕಾಶ್ ಚಲವಾದಿ.
  ಹರಪನಹಳ್ಳಿ

  ReplyDelete
 9. ಪತ್ರಕರ್ತ ಸ್ನೇಹಿತರೇ,
  ಒಂದು ಚಿಂತನ ಶೀಲ ಬರಹ ಕೊಟ್ಟಿದ್ದಕ್ಕಾಗಿ ತಮಗೆ ಧನ್ಯವಾದಗಳು. ಭ್ರಷ್ಟರ ಶಿಕ್ಷೆಗಾಗಿ ಜನಲೋಕಪಾಲ್ ಜಾರಿಗೆ ತಮ್ಮ ಬೆಂಬಲ ದೊರಕದಿದ್ದಕ್ಕೆ ಬೇಸರ ವಾಗುತ್ತಿದೆ. ಎಡಪಕ್ಷಗಳು, ಕಾಂಗ್ರೆಸ್, ಬುದ್ದಿಜೀವಿಗಳು, ವಿಚಾರವಾದಿಗಳು ಮತ್ತು ಕೆಲ ಪ್ರಗತಿಪರರಂತೆ ತಾವು ಅಣ್ಣಾ ಹೋರಾಟವನ್ನು ಟೀಕಿಸಿದಿರಿ. ನಿಮ್ಮ ನಿಲುವು ಯಾರ ಕಡೆ ಇದೆ ಎಂದು ನೀವು ಹಾಕುವ ಬ್ಲಾಗ್ ಗಳು ಮತ್ತು ಫೇಸ್ ಬುಕ್ಕಿನ ಪೋಸ್ಟ್ಗಳು ಸಾರಿ ಸಾರಿ ಹೇಳುತ್ತವೆ
  ಒಂದು ಪ್ರಬಲ ಮಸೂದೆಗಾಗಿ ಒತ್ತಡ ಹೇರಿದ್ದನ್ನು ತಪ್ಪು ಎಂದಿರಿ. ಇಷ್ಟು ವರ್ಷಗಳು ಮಾಡಲಿಕ್ಕಾಗದಿದ್ದನ್ನು ಒಂದೇ ಏಟಿಗೆ ಮಾಡಬೇಕು ಎಂದು ಕುತ್ತಿಗೆ ಹಿಡಿದು ಕುಂತ ಅಣ್ಣ್ಣ ಬಳಗ ಇಂದು ಜನ ಸಾಮನ್ಯರಿಗೆ ಆಶಾವಾದಿಯಂತೆ ಕಾಣಿಸಿರುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ.
  ಜಸ್ಟೀಸ್ ಶಿವರಾಜ್ ಪಾಟೀಲ್ ರ ಪ್ರಕರಣದ ಬೆಳಕು ಚೆಲ್ಲಿದ ತಾವು ಹೆಚ್.ಡಿ.ಬಾಲಕೃಷ್ಣ ಗೌಡರ ವಿಷಯದಲ್ಲಿ ಬೆಳಕು ಚೆಲ್ಲಿದ್ದರೆ ಚೆನ್ನಾಗಿತ್ತು. ಒಬ್ಬ ಕೆ.ಎ.ಎಸ್ ಅಧಿಕಾರಿ ತನ್ನ ಅಧಿಕಾರವದಿಯಲ್ಲಿ ೭೦ಕೋಟಿ ಸಂಪಾದನೆ ಮಾಡಿದ್ದಾರೆ ಎಂದರೆ ಈ ದೇಶದಲ್ಲಿ ಅಧಿಕಾರ ಅಂದರೆ ಅಕ್ಷಯ ಪಾತ್ರೆ ಎಂದು ಈ ಭ್ರಷ್ಟಚಾರ ಪ್ರಕರಣ ಗಳು ಸಾರಿ ಸಾರಿ ಹೇಳುತ್ತಿವೆ.
  ತಮ್ಮ ನಿಲುವು ಕೇವಲ ಒಂದು ಪಕ್ಶದ ವಿರುದ್ದವೋ ಅಥವ ಒಂದು ಸಮಾಜದ ವಿರುದ್ದವೋ ಅಥವ ಒಂದು ಸಿದ್ದಾಂತದ ವಿರುದ್ದವೋ ಎನ್ನುವುದನ್ನು ಸಾಬೀತು ಮಾಡಬೇಡಿ. ನಿಶ್ಪಕ್ಷವಾದ ವರದಿಗಳು ನಮಗೆ ಬೇಕು. ಮಾಧ್ಯಮ ಕುರಿತ ವಿಷಯಗಳ ಕಡೆ ತಮ್ಮ ಗಮನ ಹೆಚ್ಚಿದ್ದರೆ ನಮ್ಮಂತ ಕುತುಹಲಿಗಳಿಗೆ ಮೃಷ್ಟಾನ್ನ ಭೋಜನ ನೀಡಿದಂತಾಗುತ್ತದೆ. ರಾಜಕೀಯ ವರದಿಗಳಿಗೆ ಸ್ವಲ್ಪ ಕಡಿವಾಣ ಹಾಕಿದರೆ ಒಳ್ಳೆಯದು ಎನ್ನುವುದು ನನ್ನ ಅಭಿಪ್ರಾಯ.

  ವಂದನೆಗಳೊಂದಿಗೆ

  ಇಂತಿ

  ಮಾರಣ್ಣ ವಡ್ಡರ್
  ಚಿತ್ರದುರ್ಗ

  ReplyDelete
 10. ಶಿವರಾಜ್ ಪಾಟೀಲರ ನಿರ್ಧಾರ ಅತ್ಯಂತ ಸಮಯೋಚಿತವಾದದ್ದು ಮತ್ತು ಅವರ ಮೇಲಿನ ನಂಬಿಕೆ ವಿಶ್ವಾಸ ಹೆಚ್ಚಲು ರಾಜೀನಾಮೆ ಅವಕಾಶ ಮಾಡಿಕೊಟ್ಟಿದೆ. ತಪ್ಪು ಎಂದು ಅರಿವಾದೊಡನೆ ನಿವೇಶನ ವಾಪಾಸ್ ಮಾಡಿದ್ದಾರೆ, ಇಂತಹ ಸೂಕ್ಷ್ಮ ವಿಷಯಗಳ ಕುರಿತು ಸೂಕ್ತವಾಗಿ ಪರಿಶೀಲನೆ ಮಾಡದೇ ಶಿವರಾಜ ಪಾಟೀಲರನ್ನು ಲೋಕಾಯುಕ್ತ ಹುದ್ದೆಗೆ ತಂದು ಕೂರಿಸುವ ಮೂಲಕ ಸರ್ಕಾರ ಲೋಕಾಯುಕ್ತ ಹುದ್ದೆಗೆ ಮತ್ತು ಪಾಟೀಲರಿಗೆ ಅಪಮಾನ ಮಾಡಿದೆ. 80+ ನ್ಯಾಯಾಧೀಶರ ಪಟ್ಟಿ ಅಕ್ರಮ ಭೂಕಬಳಿಕೆ ಒತ್ತುವರಿ ಜಂಟಿ ಸದನ ಸಮಿತಿ ಅಧ್ಯಕ್ಷರಾಗಿದ್ದ ಎ ಟಿ ರಾಮಸ್ವಾಮಿ ಸಲ್ಲಿಸಿದ ವರದಿಯಲ್ಲಿದೆ ಅದಿನ್ನು ಸದನದಲ್ಲಿ ಮಂಡನೆ ಆಗಬೇಕಿದೆ ನಂತರವಷ್ಟೇ ವಿವರಗಳು ಲಭ್ಯ ಆಗಬಹುದು.

  ReplyDelete
 11. read this blog article for ATR Report
  http://reporterjay.blogspot.com/2009/12/blog-post_20.html

  ReplyDelete