Sunday, September 11, 2011

ದೂರ್ವಾಸಪುರದಲ್ಲಿ ಸಂಸ್ಕಾರವಾಗದ ಹೆಣಗಳು, ಕೊಳೆತ ದುರ್ವಾಸನೆ!


ಯಾಕೋ ಅನಂತಮೂರ್ತಿಯವರ ಸಂಸ್ಕಾರ ಕಾದಂಬರಿ ಮೇಲಿಂದ ಮೇಲೆ ನೆನಪಾಗುತ್ತಿದೆ...

ಅಲ್ಲಿ ದೂರ್ವಾಸಪುರದಲ್ಲಿ ನಾರಣಪ್ಪನ ಹೆಣ ಕೊಳೆಯುತ್ತಿದೆ. ಸಂಸ್ಕಾರ ಯಾರು ಮಾಡಬೇಕು, ಯಾರು ಮಾಡಬಾರದು ಎಂಬ ಧರ್ಮ ಜಿಜ್ಞಾಸೆ. ಪ್ರಾಣೇಶಾಚಾರ್ಯರು ಮನುಸ್ಮೃತಿಯಾದಿಯಾಗಿ ಎಲ್ಲ ಧರ್ಮಗ್ರಂಥಗಳಲ್ಲಿ ಮುಳುಗೆದ್ದರೂ ಜಿಜ್ಞಾಸೆ ಪರಿಹಾರವಾಗಿಲ್ಲ. ನೆಚ್ಚಿನ ದೈವವೂ ಕೈಕೊಟ್ಟಿದೆ. ಪ್ರಾಣೇಶಾಚಾರ್ಯರೇ ಸೂಳೆ ಚಂದ್ರಿಯೊಂದಿಗೆ ಸೇರಿ, ಅವಳ ಬೆತ್ತಲೆ ತೊಡೆಯ ಮೇಲೆ ಮಲಗೆದ್ದು ಬಂದು ಮೈಲಿಗೆಯಾಗಿ ಗಾಬರಿಗೊಂಡಿದ್ದಾರೆ.

ದೂರ್ವಾಸಪುರದಲ್ಲಿ ಹೆಣ ಕೊಳೆಯುತ್ತಿದೆ. ಎಲ್ಲಿ ನೋಡಿದರೂ ಹದ್ದು, ಹದ್ದು, ಹದ್ದು. ಆಕಾಶದ ನೀಲಿಯ ತುಂಬ ತೇಲಾಡುವ, ಓಲಾಡುವ, ವೃತ್ತವೃತ್ತ ಸುತ್ತಿ ಕೆಳಗೆ ಬರುವ ಹದ್ದುಗಳು. ಮನೆಮನೆಗಳಲ್ಲೂ ಇಲಿಗಳು ರಿವ್ರನೆ ಮಕಾಡೆ ತಿರುಗಿ ಸತ್ತುಹೋಗುತ್ತಿವೆ. ಸತ್ತ ಇಲಿಗಳನ್ನು ಹದ್ದುಗಳು ಹೆಕ್ಕಿ ಎಳೆದೊಯ್ಯುತ್ತಿವೆ.

ಸಂಸ್ಕಾರವಾಗದ ಹೆಣ ಇಟ್ಟುಕೊಂಡು ಗಂಡಸರು ಊಟ ಮಾಡುವಂತಿಲ್ಲ. ದೇವರಿಗೆ ನೇವೇದ್ಯವಿಲ್ಲ. ಪ್ರಾಣೇಶಾಚಾರ್ಯರ ಪ್ರವಚನವಿಲ್ಲ. ಸತ್ತ ಇಲಿಗಳು, ಹದ್ದುಗಳ ಆರ್ಭಟದ ನಡುವೆ ದೂರ್ವಾಸಪುರ ಸ್ಮಶಾನವಾಗಿ ಹೋಗಿದೆ. ಹೆಣದ ಮೇಲೆ ಹೆಣ ಬೀಳುತ್ತಿದೆ. ಸಂಸ್ಕಾರ ಮಾಡುವವರಿಲ್ಲ, ಯಾರು, ಹೇಗೆ ಮಾಡಬೇಕೆಂಬುದಕ್ಕೆ ಧರ್ಮಜಿಜ್ಞಾಸೆ ಮುಂದುವರೆದಿದೆ. ಆದರೆ ಈ ಜಿಜ್ಞಾಸೆಯಲ್ಲಿ ತೊಡಗಿದ್ದ ಆಚಾರ್ಯರೇ ಸೂಳೆ ಚಂದ್ರಿಯ ಕಿಬ್ಬೊಟ್ಟೆಗೆ ಅಂಟಿದ ತಮ್ಮ ಕೆನ್ನೆಯನ್ನು ಸವರಿಕೊಳ್ಳುತ್ತ ಎದ್ದಿದ್ದಾರೆ...

ಹೆಣ ಕೊಳೆಯುತ್ತಿದೆ......

****

ಕನ್ನಡ ಮಾಧ್ಯಮ ಲೋಕದಲ್ಲಿ ಮಂಕೋ ಮಂಕು. ಯಾರಲ್ಲೂ ಉತ್ಸಾಹ ಕಾಣುತ್ತಿಲ್ಲ. ಒಂಥರಾ ಸಾವಿನ ಮನೆಯ ಹಾಗೆ. ಬರೆಹಕ್ಕೆ, ಮಾತಿಗೆ ಸೂತಕ. ಏನೋ ಕೊಳೆತು ನಾರುತ್ತಿದೆ. ಇಲ್ಲಿ ಕೊಳೆತದ್ದಕ್ಕೆ ಸಂಸ್ಕಾರವಾಗುವುದು ಕಡಿಮೆ. ಹಾಗಾಗಿ ಗಬ್ಬುನಾತ ಕುಡಿದೇ ಬದುಕಬೇಕು. ಯುದ್ಧಕ್ಕೆ ಬಂದು ನಿಂತಂತೆ ರಿವ್ವನೆ ತಿರುಗುವ ಹದ್ದುಗಳು, ಆತ್ಮಹತ್ಯೆ ಮಾಡಿಕೊಳ್ಳುವಂತೆ ಮೇಲೆ ಎರಗಿ ಎರಗಿ, ಲಗಾಟಿ ಹಾಕಿ ಬಿದ್ದು ಸಾಯುವ ಇಲಿಗಳು.

ಜನಾರ್ದನ ರೆಡ್ಡಿ ಜೈಲು ಸೇರಿದ್ದಾರೆ. ಸಿಬಿಐ ಹೆಣೆದಿರುವ ಕುಣಿಕೆಯಿಂದ ಆತ ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಇತ್ತ ಲೋಕಾಯುಕ್ತರ ವರದಿಯಲ್ಲಿ ಮಾಧ್ಯಮ ಮಂದಿ, ಸಂಸ್ಥೆಗಳಿಗೂ ರೆಡ್ಡಿಯ ಹಣ ಸಂದಾಯವಾಗಿರುವ ಸುದ್ದಿ ಇನ್ನೂ ಜೀವಂತವಾಗೇ ಇದೆ. ಯಾರೂ ಮಾತನಾಡಲೊಲ್ಲರು. ಯಾರು ಮಾತನಾಡಬೇಕು ಎಂಬುದೇ ಯಾರಿಗೂ ಗೊತ್ತಿಲ್ಲ. ಕರ್ಮಜಿಜ್ಞಾಸೆ!

ಇಂಡಿಯಾ ಎಗೆನೆಸ್ಟ್ ಕರಪ್ಞನ್, ಹಮಾರಾ ನೇತಾ ಚೋರ್ ಹೈ, ಮೈ ಅಣ್ಣಾ ಹೂಂ ಎಂದೆಲ್ಲಾ ಬರೆದ ಪ್ಲಕಾರ್ಡುಗಳು ಟವಿ ಚಾನಲ್‌ಗಳ ಕಚೇರಿಗಳ ಸ್ಟೋರ್ ರೂಮು ಸೇರಿದೆ. ಮುಂದೆ ಅಣ್ಣಾ ಮತ್ತೆ ಉಪವಾಸಕ್ಕೆ ಕೂತಾಗ ಅವೆಲ್ಲ ಉಪಯೋಗಕ್ಕೆ ಬರಬಹುದು.

ಸ್ಟುಡಿಯೋದಲ್ಲಿ ನೇರ ಪ್ರಸಾರದ ಕಾರ್ಯಕ್ರಮದಲ್ಲಿ ನಿರೂಪಕ ಒಂದೇ ಸಮನೆ ಭ್ರಷ್ಟಾಚಾರಿಗಳ ವಿರುದ್ಧ ಭಾಷಣ ಕೊಚ್ಚುತ್ತಿದ್ದಾನೆ. ಅವನ ಜತೆ ಕುಳಿತ ಸಬ್ಜೆಕ್ಟ್ ಎಕ್ಸ್ ಪರ್ಟ್‌ ಒಬ್ಬ ಇಂಥ ಇಸವಿ, ಇಂಥ ತಿಂಗಳು, ಇಂಥ ದಿನದ ಇಷ್ಟನೇ ಗಳಿಗೆಯಲ್ಲಿ ಹೀಗೆ ಆಗಿತ್ತು ನೋಡಿ ಎಂದು ಅದೇನೋ ವಿಚಿತ್ರವಾಗಿ ಹೇಳುತ್ತಿದ್ದಾನೆ.

ಸ್ಟೋರ್ ರೂಮುಗಳಲ್ಲಿ ಇಲಿಗಳ ಕಾಟ ಹೆಚ್ಚು. ಸತ್ತರೆ ಸುಡುಗಾಡು ವಾಸನೆ, ಮೇಲೆ ಆಕಾಶದಲ್ಲಿ ಹದ್ದುಗಳು.

ಏನೋ ಇಲ್ಲೂ ಸತ್ತಿದೆ, ಕೊಳೆಯುತ್ತಿದೆ, ಸಂಸ್ಕಾರವಾಗುತ್ತಿಲ್ಲ.

****

ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಪುತ್ರ ಕಟ್ಟಾ ಜಗದೀಶನನ್ನು ನ್ಯಾಯಾಲಯಕ್ಕೆ ಮಾಮೂಲಿನಂತೆ ಹಾಜರುಪಡಿಸಲು ಪೊಲೀಸರು ಕರೆ ತಂದಿದ್ದಾರೆ. ಛಾಯಾಗ್ರಾಹಕರು ಕಾದಿದ್ದಾರೆ. ಫೋಟೋ ಬೇಕಾ, ತಗೋ, ಎಷ್ಟು ಬೇಕೋ ತಗೋ ಎಂದು ಜಗದೀಶ ಹತಾಶೆಯಿಂದ ಸಿಡುಕುತ್ತಾನೆ.

ಕಟ್ಟಾ ಅಪ್ಪ-ಮಕ್ಕಳ ದರ್ಬಾರು ನಡೆಯುತ್ತಿದ್ದಾಗ ಇದೇ ಛಾಯಾಗ್ರಾಹಕರಲ್ಲಿ ಹಲವರು ಅವರ ಮನೆ ಬಾಗಿಲು ಕಾದು ಎಂಥದ್ದೋ ಪುಟ್ಟ ಪುಟ್ಟ ಕವರ್‌ಗಳನ್ನು ಪಡೆದುಕೊಂಡು ಹೋಗುತ್ತಿದ್ದರು. ಜಗದೀಶನಿಗೆ ಅದೆಲ್ಲಾ ನೆನಪಾಗುತ್ತದೆ.

ಜಗದೀಶನ ಸಿಡುಕಿಗೆ ಮಿಡುಕಿ ಬಿದ್ದ ಕೆಲವರು ತಲೆ ತಗ್ಗಿಸಿ ಹೊರಡುತ್ತಾರೆ.

ಏನೋ ಸತ್ತು ಕೊಳೆಯುತ್ತಿದೆ ತಲೆಯಲ್ಲಿ, ವಾಸನೆ ಸಹಿಸಲಾಗದು. ಸಂಸ್ಕಾರ ಹೇಗೆ ಮಾಡಬೇಕೆಂಬ ಧರ್ಮ ಜಿಜ್ಞಾಸೆಯಲ್ಲಿರುವವರು ಏನೂ ಬಾಯಿಬಿಡುತ್ತಿಲ್ಲ. ಚಂದ್ರಿಯ ಮೈಬೆವರು ಇನ್ನೂ ಅಂಟಿಕೊಂಡಿದೆ ಅವರಿಗೆ.

****

ಪ್ರೆಸ್‌ಕ್ಲಬ್‌ನಲ್ಲಿ ಹರಟೆ. ಬದುಕಿಗಾಗಿ ಪತ್ರಿಕಾ ವೃತ್ತಿ ಆರಿಸಿಕೊಂಡು ಬಂದವರು, ಆದರ್ಶಕ್ಕಾಗಿ, ಇನ್ಯಾವುದೋ ಆಕರ್ಷಣೆಗಾಗಿ ಇಲ್ಲಿಗೆ ಬಂದವರು ಮೈಮುರಿದು ಕಾಫಿ ಹೀರುತ್ತಿದ್ದಾರೆ. ದರಿದ್ರ ಕಣ್ರೀ, ಎಲ್ಲ ಕಡೆ ಬಾಯಿಗೆ ಬಂದಂತೆ ಜನ ಮಾತಾಡುತ್ತಾರೆ. ಯಾವನೋ ಲೂಟಿ ಹೊಡೆಯುತ್ತಾನೆ. ನಮ್ಮೆಲ್ಲರಿಗೂ ಕೆಟ್ಟ ಹೆಸರು. ಮೊನ್ನೆ ಅವನು ಮೂರು ಕಾಸಿನ ಪೊಲಿಟಿಷಿಯನ್ ಏನಂದ ಗೊತ್ತಾ? ಆಯ್ತು ಬಿಡ್ರೀ, ಈಗ ನಿಮ್ಮ ಕಥೆಗಳೂ ಆಚೆಗೆ ಬರ‍್ತಾ ಇವೆ. ಹೇಳೋದು ಮಾತ್ರ ವೇದಾಂತ, ನೀವು ಮಾಡೋದೂ ಅದನ್ನೆ. ನಿಮಗೂ-ನಮಗೂ ಏನು ವ್ಯತ್ಯಾಸ ಅಂತ ಕೇಳಿದ. ಕಪಾಳಕ್ಕೆ ಬಾರಿಸಬೇಕು ಅನ್ನಿಸ್ತು....

ಈ ಕ್ಲಬ್ಬಿಗೊಂದು ಮರ್ಯಾದೆ ಅಂತ ಇತ್ತು. ಈಗ ನೋಡ್ರಿ ಜನಾರ್ದನ ರೆಡ್ಡಿ ಯಾವುದೋ ಹವಾಲಾ ಮೂಲಕ ಐದು ಲಕ್ಷ ಕೊಟ್ಟಿದ್ದಾನೆ ಕ್ಲಬ್ಬಿಗೆ. ತಗೊಳ್ಳೋ ಹಣಕ್ಕೆ ಒಂದು ಲೆಕ್ಕಾಚಾರ ಬೇಡ್ವಾ? ಹೋಗಲಿ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್‌ನಲ್ಲಿ ಸುದ್ದಿ ಬಂದ ಮೇಲಾದ್ರೂ ಒಂದು ಸ್ಪಷ್ಟೀಕರಣ ಕೊಡಬಾರದಾ ಈ ಕ್ಲಬ್ಬಿನವರು... ಯಾಕ್ ಯಾಕ್ ಈ ಫೀಲ್ಡಿಗೆ ಬಂದ್ವೋ ಅನ್ಸುತ್ತೆ....

ಹರಟೆ ಮುಂದುವರೆಯುತ್ತದೆ. ಕಾಫಿ ತಣ್ಣಗಾಗುತ್ತದೆ. ಕಬ್ಬನ್ ಪಾರ್ಕಿನ ಸುಂದರ ಪರಿಸರದ ಆ ಭಾಗದಲ್ಲೂ ಎಂಥದ್ದೋ ಕೊಳಕು ವಾಸನೆ ಮುತ್ತಿಕೊಳ್ಳುತ್ತದೆ. ಎಲ್ಲೋ ಏನೋ ಸತ್ತು ಕೊಳೆಯುತ್ತಿದೆ... ಪ್ರಾಣೇಶಾಚಾರ್ಯರು ಇನ್ನೂ ಬಂದ ಹಾಗೆ ಕಾಣುತ್ತಿಲ್ಲ.

****

ಅವರು ಒಬ್ಬ ಹಿರಿಯ ಪತ್ರಕರ್ತರು. ಜೀವನಪೂರ್ತಿ ಕಳಂಕವಿಲ್ಲದೆ ಬದುಕಿದವರು. ವೃತ್ತಿಯಲ್ಲಿ ಎಂದೂ ಯಾರಿಗೂ ಕೈ ಚಾಚಿದವರಲ್ಲ.  ಪ್ರೆಸ್ ಕ್ಲಬ್ ಅವರನ್ನು ಸನ್ಮಾನಿಸಿದೆ. ಏಳೆಂಟು ಸಾವಿರ ರೂ. ಬೆಲೆಬಾಳುವ ಬೆಳ್ಳಿಯ ತಟ್ಟೆಯನ್ನು ನೀಡಿ ಗೌರವಿಸಲಾಗಿದೆ. ಮನೆಯಲ್ಲಿ ಅದಕ್ಕೆ ಪ್ರಶಸ್ತವಾದ ಜಾಗವಿತ್ತು. ಬಂದವರು ಹೋದವರು ಎಲ್ಲರಿಗೂ ಕಣ್ಣಿಗೆ ಬೀಳುವಂಥ ಜಾಗದಲ್ಲಿ ಅದನ್ನು ಹೆಮ್ಮೆಯಿಂದ ಇಟ್ಟುಕೊಂಡಿದ್ದರು.

ಜನಾರ್ದನ ರೆಡ್ಡಿಯ ಕಡೆಯಿಂದ ಬಂದ ಹಣದಿಂದಲೇ ಈ ಬೆಳ್ಳಿ ತಟ್ಟೆಗಳನ್ನು ಕೊಳ್ಳಲಾಗಿತ್ತು ಎನ್ನುವುದು ಗೊತ್ತಾಗುತ್ತಿದ್ದಂತೆ, ಆ ಹಿರಿಯರು ತಟ್ಟೆಯನ್ನು ಒಳಗೆ ಎಸೆದು, ಈ ಸುಡುಗಾಡು ತಟ್ಟೆ ನನ್ನ ಕಣ್ಣಿಗೆ ಕಾಣುವಂತೆ ಇಡಬೇಡ ಎಂದು ಪತ್ನಿಗೆ ಹೇಳುತ್ತಾರೆ.

ಏನೋ ಕೊಳೆಯುತ್ತಿದೆ, ವಾಸನೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಹಿರಿಯರು ಸುಮ್ಮನೆ ಒಮ್ಮೆ ನಿಟ್ಟುಸಿರು ತೆಗೆದುಕೊಂಡು ಮಿಡುಕುತ್ತಾರೆ.

****

ಅಲ್ಲಿ ದೂರ್ವಾಸಪುರದಲ್ಲಿ ಮೂರು ದಿನಗಳಾದರೂ ನಾರಣಪ್ಪನ ಹೆಣವನ್ನು ಸಂಸ್ಕಾರ ಮಾಡದೇ ಹೋದ್ದರಿಂದ ನೊಂದ ಆತನ ಸೂಳೆ ಚಂದ್ರಿ ಬೇರೆ ನಿರ್ವಾಹವಿಲ್ಲದೆ ಯಾರನ್ನೋ ಕರೆಸಿ ದುಡ್ಡು ಕೊಟ್ಟು ಸಂಸ್ಕಾರ ಮಾಡಿಸಿಬಿಡುತ್ತಾಳೆ. ಆದರೆ ದೂರ್ವಾಸಪುರದವರಿಗೆ ಇದು ಗೊತ್ತಿಲ್ಲ.

ಅವರ ಮನಸ್ಸಿನಲ್ಲಿನ್ನೂ ನಾರಣಪ್ಪನ ಹೆಣ ಕೊಳೆಯುತ್ತಲೇ ಇದೆ. ಕೊಳೆತು ನಾರುತ್ತಲೇ ಇದೆ. ಒಬ್ಬರಾದ ಮೇಲೊಬ್ಬರಂತೆ ದೂರ್ವಾಸಪುರದ ಜನರೆಲ್ಲ ಸಾಯತೊಡಗುತ್ತಾರೆ. ಇಲಿಗಳು ಮಾಮೂಲಿನಂತೆ ಎಗರಿ ಬಿದ್ದು ಸಾಯುತ್ತಿವೆ. ಹದ್ದುಗಳು ಮನೆ ಮೇಲೆ ಬಂದು ಕುಳಿತಿವೆ. ವಾಸನೆ, ವಾಸನೆ, ಅನಿಷ್ಟ ವಾಸನೆ. ಎಲ್ಲದಕ್ಕೂ ಸಂಸ್ಕಾರವಾಗದ ನಾರಣಪ್ಪನ ಹೆಣವೇ ಕಾರಣ ಇವರಿಗೆ.

ಧರ್ಮಸೂಕ್ಷ್ಮ ಹೇಳಬೇಕಾದ ಪ್ರಾಣೇಶಾಚಾರ್ಯರೇ ಮೈಲಿಗೆಯಾಗಿದ್ದಾರೆ. ಸೂಳೆ ಚಂದ್ರಿಯೊಂದಿಗೆ ಕೂಡಿದ್ದಾರೆ. ಸತ್ತ ಪತ್ನಿ ಭಾಗೀರಥಿಯನ್ನು ಸುಟ್ಟು ಬಂದ ಸೂತಕ ಕಳೆದಿಲ್ಲ, ಆಗಲೇ ಅವರ ತಲೆಯಲ್ಲಿ ಮಾಲೇರ ಪದ್ಮಾವತಿಯ ರೂಪ ಲಾವಣ್ಯ ಕುಣಿಯುತ್ತಿದೆ.

ಪ್ರಾಣೇಶಾಚಾರ್ಯರ ಮೈ ಚರ್ಮದ ಅಣುಅಣುವಿನಿಂದ ಈಗ ಕೊಳತ ಶವದ ವಾಸನೆ ಹೊಡೆಯುತ್ತಿದೆ. ಕೊಳೆತದ್ದಕ್ಕೆ ಸಂಸ್ಕಾರವಾಗುತ್ತಾ? ಧರ್ಮಸೂಕ್ಷ್ಮ ಬಗೆಹರಿಯುತ್ತಾ? ಗೊತ್ತಿಲ್ಲ.

22 comments:

 1. kolethu hoda media lokadalli naaruva suddigalu. suddi sale madalu ennillada sahasa. court thirpigu modale thirpu niduva media mandi. adarallu electronic mediadallina reportergalu thave sarvaswa endu tilidukondanthide.

  ReplyDelete
 2. ವಾವ್ ಏನ್ ಬರ್ದಿದಿರಾ ಗುರು.....ಸೂಪರ್!!!!!!!

  ಇಲ್ಲಿ ಸತ್ತ ಹೆಣಗಳಿಗೆ ಸಂಸ್ಕಾರ ಮಾಡುವವರು ಸಿಗುವುದಿಲ್ಲ..ಬದಲಾಗಿ ಹೆಣಗಳೇ ಆಳುವ ಪೈಶಾಚಿಕ ಲೋಕವೊಂದು ಸೃಷ್ಟಿಯಾಗಿರುವುದು ಸುಳ್ಳಲ್ಲ.............

  ReplyDelete
 3. ಅವಿನಾಶ ಕನ್ನಮ್ಮನವರSeptember 11, 2011 at 5:26 PM

  ಮೇಲಿನ ಲೇಖನ ಯಾರಯಾರಿಗೋ ಎಲ್ಲೆಲೋ ಹೇಗೆಹೇಗೋ ಚುಚ್ಚುತ್ತೋ ಆ ದೇವರೇ ಬಲ್ಲ!!

  ReplyDelete
 4. ದೂರ್ವಾಸಪುರದಲ್ಲಿ ಕೊಳೆತ ನಾರಣಪ್ಪನ ಶವ ಹೂಳಲು ಚಂದ್ರಿಯಾದರು ಮುಂದೆ ಬಂದಳು.ಇಲ್ಲಿ ಮಾಧ್ಯಮಪುರದಲ್ಲಿ ಕೊಳೆತು ನಾರುತ್ತಿರುವ ಶವ ಇನ್ನೂ ಅನಾಥ!
  ದೇಹದಿಂದ ಕೊಳೆತ ಶವದ ವಾಸನೆ ಹೊಮ್ಮುತ್ತಿದ್ದರು ನಮ್ಮ "ಪ್ರಾಣೇಶಾಚಾರ್ಯರು' ಗಮ್ಮನೆ ಹೊಮ್ಮುವ ಸೆಂಟು ಸಿಂಪಡಿಸಿಕೊಂಡು ಸಚ್ಹಾರಿತ್ರ್ಯವನ್ತರಂತೆ
  ಬೋಧನೆ ಮಾಡುತ್ತಿದ್ದಾರೆ!
  ಹೆಣ ಹೂಳುವ ವಿಷಯದಲ್ಲಿ ಸೂಳೆ ಚಂದ್ರಿಯ ಬದ್ಧತೆಯಾದರೂ ನಮ್ಮಮಧ್ಯಮ ಲೋಕಕ್ಕೆ ಆದರ್ಶವಾಗಲಿ! ತಲೆಯ ಮೇಲೆ ಹದ್ದುಗಳು ಹಾರುವ ಮುನ್ನವಾದರೂ...

  ReplyDelete
 5. ಅದ್ಭುತ ಲೇಖನ, One of the bests of sampadakiya.

  ReplyDelete
 6. ಸಂಸ್ಕಾರ ಕಾದಂಬರಿಯನ್ನು ರೂಪಕವನ್ನಾಗಿಸಿಕೊಂಡು ಬರೆದಿರುವ ಲೇಖನ ತುಂಬಾ ಚೆನ್ನಾಗಿ ಮೂಡಿಬಂದಿದೆ. ಕೊಳೆತ ಶವದ ವಾಸನೆ ಕೆಲವು ಪತ್ರಕರ್ತರ ಮೈಯಿಂದ ಘಮ್ಮನೆ ಹೊರಹೊಮ್ಮುತ್ತಿದೆ. ಇನ್ನೂ ಸಂಸ್ಕಾರವೇ ಆಗಿಲ್ಲ. ಅಲ್ಲಿವರೆಗೆ ಹೊಟ್ಟೆಗೇನು ಗತಿ? ಸಂಸ್ಕಾರ ಮಾಡುತ್ತಾರೋ ಇಲ್ಲ ಇವರೇ ಕೊಳೆತ ಹೆಣಗಳಾಗುತ್ತಾರೋ ಸಂಪಾದಕೀಯದಲ್ಲಿ ಕಾಯುತ್ತ ಕೂರಬೇಕಾಗಿದೆ.

  ReplyDelete
 7. OMG... really a good try. naaTuvantide matra alla, Odi naachuvantide :(

  ReplyDelete
 8. Super..Hope atleast some "beloved" editorz may start introspecting now

  ReplyDelete
 9. ತುಂಬಾ ಚೆನ್ನಾದ ಲೇಖನ, ಇದಕ್ಕಿಂತ ಹೆಚ್ಚು ಉಗಿಯಲು ಆಗುವುದಿಲ್ಲ, ಇದನ್ನು ಆರ‍್.ಬಿ., ವಿ.ಭಟ್ ಓದಿ ತಮ್ಮ ತಪ್ಪನ್ನು ಒಪ್ಪಿಕೊಂಡರೆ ಒಳ್ಳೆಯದು, ಒಪ್ಪಿಕೊಂಡು ಈ ಮಾಧ್ಯಮ ರಂಗವನ್ನೇ ಬಿಟ್ಟು ತೊಲಗಲಿ..

  ReplyDelete
 10. ಮಾದ್ಯಮದ ಕೆಲ ದೂರ್ವಾಸಮುನಿಗಳ ಬೆತ್ತಲು ಮಾಡಲು, ಇಷ್ಟು ಚೆಂದದ ವರದಿ ದಾಖಲಿಸಲು 'ಸಂಸ್ಕಾರ' ಬಳಕೆಮಾಡಿಕೊಂಡಿರುವುದು ಸೂಕ್ತವಾಗಿದೆ. ಭಂಡರಿಗೆ ಇಷ್ಟು ಉಗಿದರೆ ಸಾಕಗಲ್ಲ. ಮಾನ ಮರ್ಯಾದೆಯಿಲ್ಲದ ಇಂಥಹ ಸಮಾಜಘಾತುಕ ಪ್ರಾಣಿಗಳನ್ನು ಪರಪ್ಪನ ಅಗ್ರಹಾರದಲ್ಲಿ ಸಾಮಾನ್ಯ ಖೈದಿಯಂತಿಡುವಂತಾಗ ಬೇಕು. ಮಾದ್ಯಮದ ಹೆಸರಲ್ಲಿ ಹಾದರ ನೆಡೆಸುವವರ ನೈತಿಕತೆ ಚನ್ನಾಗಿ ಬಿಡಿಸಿಟ್ಟಿದ್ದೀರಿ.

  ReplyDelete
 11. ಎಷ್ಟು ದಿನಾಂತ ಕೊಳೆತ ಈ ಗಬ್ಬು ನಾತ ಸಹಿಸಿಕೊಳ್ಳೋದು ಸಂಸ್ಕಾರಕ್ಕೂ ಪ್ರಾಯೋಜಕರು ಬೇಕೇನೊ?

  ReplyDelete
 12. ವಾಹ್!! ಇದಕ್ಕಿಂತ ಮಿಗಿಲಾಗಿ ಏನನ್ನೂ ಹೇಳಲಾಗದು...ಅದ್ಭುತ ಲೇಖನ. ಕೆಲೊವೊಮ್ಮೆ ಚೆಂದದ ಸಂಗೀತ, ನೃತ್ಯ, ಭಾಷಣ, ಬರಹ ಓದಿದಾಗ ಇನ್ನೇನೂ ಬರೆಯಲು ಉಳಿದೆ ಇಲ್ಲ ಎಂಬಂತೆ ಬರೆಯುವುದು ಅಷ್ಟು ಸುಲಭದ ಮಾತಲ್ಲ, ಲೇಖಕನಿಗೆ ಹಾಗೆ ಅನಿಸಲಿಕ್ಕಿಲ್ಲ. ಆದರೆ ಓದುಗನಿಗೆ ಇದಕ್ಕಿಂತ ಚೆಂದ ಬರಿಯಲಿಕ್ಕೆ ಸಾಧ್ಯವಿಲ್ಲ ಎಂಬಂತೆ ಬರೆಯಲಾಗಿದೆ ಈ ಲೇಖನ. ಇದಕ್ಕಿಂತ ಕೀಳಾಗಿ ಹೇಳುವುದು ಅಸಾಧ್ಯ, ಮತ್ತು ಯಾವುದೇ ಆತ್ಮಸಾಕ್ಷಿ ಉಳ್ಳ ಮನುಷ್ಯನಿಗೆ ಇದು ಚಾಟಿ ಬೀಸಿದ ಹಾಗಿದೆ. ಸತ್ತ ಹೆಣಕ್ಕಿಂತ ಕೀಳಾಗಿ ಗಬ್ಬು ನಾರುತ್ತಿರುವ ಮಂದಿ ಈಗಲಾದರೂ ಎಚ್ಹೆತ್ತುಕೊಳ್ಳಲಿ ಎಂಬುದು ನಮ್ಮ ಬಯಕೆ, ಹಾಗಾಗದೆ ದುರ್ವಾಸನೆಯಲ್ಲೇ ಮುಳಗೆದ್ದು ಹೋಗುತ್ತೆವೆಂದರೆ ಅದು ಅವರವರ ಭಾವ, ಭಕುತಿ. ಚಂದ್ರಿಗಿಂತಲೂ ಕಡೆಯದಾಗಿ ಹೋಯಿತಲ್ಲ ನಮ್ಮ ಪತ್ರಿಕೋದ್ಯಮ!!

  ReplyDelete
 13. pls some body send this to V Bhatt, RB, and sanjay sir...plssss

  ReplyDelete
 14. ಸರ್, ಕೊಳೆತ ಹೆಣಗಳ ವಾಸನೆ ನನಗೆ ಆಗಲೆ ಅನುಭವಕ್ಕೆ ಬಂದಿತ್ತು. ನಾನು ಕೆಲಸ ಅರಸಿ ಕೆಲವು ಮಾಧ್ಯಮಗಳಿಗೆ ಎಡತಾಕಿದಾಗ ಈ ದುರ್ನಾತ ಮೂಗಿಗೆ ರಾಚಿತ್ತು. ಆದರೆ ಹೆಣಗಳು ಕೊಳೆತು ನಾರುತ್ತಿದ್ದರು ಯಾರು ಉತ್ತರ ಕ್ರಿಯೆ ಮಾಡದೆ ಮೂಗು ಮುಚ್ಚಿಕೊಂಡು ಕುಳಿತು ಕೊಂಡರೆ ಎಲ್ಲರ ಸಹವಾಸ ಚಂದ್ರಿಯ ಸೆರಗಲ್ಲಾ ಎಂಬ ಅನುಮಾನ ಕಾಡುತ್ತದಲ್ಲವೇ? ಧರ್ಮಸೂಕ್ಷ್ಮ ಹೇಳಬೇಕಾದವರಾದರು ಯಾರು ಎಂಬ ಪ್ರಶ್ನೆಗೆ ಸಂಪಾದಕೀಯವೇ ಉತ್ತರ ಹೇಳಿ, ಕೊಳೆತು ನಾರುತ್ತಿರುವ ದೇಹಗಳಿಗೆ ಮುಕ್ತಿ ಕೊಡಿಸಲಿ.

  ReplyDelete
 15. ತುಂಬ ಗಟ್ಟಿಯಾದ ಬರಹ.ಆದರೆ ಪತ್ರಿಕೋದ್ಯಮದ ಕೊಳಕುತನಕ್ಕೆ ಇದು ಯಾವ ರೀತಿಯಿಂದಲೂ ಚಾಟಿಯೇಟು ಕೊಡಲಾರದು.ಹಣ ತಿಂದ ಪತ್ರಕರ್ತರು ಇಂಥ ಬರಹಕ್ಕೆಲ್ಲ ನಡುಗುವ,ಸೋತುಹೋಗುವ ಸೂಕ್ಷ್ಮ ಮನಸ್ಸಿನವರೇ? At least, ಇಂಥದೊಂದು two track ಸ್ಟೋರಿಯನ್ನು ಅರ್ಥಮಾಡಿಕೊಂಡು
  ಮುಖ ಮುಚ್ಚಿಕೊಳ್ಳುವಷ್ಟು ಚಾರಿತ್ರ್ಯ ಉಳ್ಳವರೆಂದು ಯಾರಿಗಾದರೂ ಅನಿಸುತ್ತಿದೆಯೇ?
  They just wait for another victim;to squeeze,to devour!

  ReplyDelete
 16. ಬಹಳ ದಿವಸಗಳ ನಂತರ ಒಂದು ಕ್ಲಾಸ್ ಬರಹವನ್ನು ಓದುವ ಭಾಗ್ಯ ಒದಗಿಸಿದ್ದಕ್ಕೆ ಧನ್ಯವಾದಗಳು.
  ಪ್ರಕಾಶ್ ಶೆಟ್ಟಿ

  ReplyDelete
 17. ಒಳ್ಳೆಯ ಬರಹ. ’ಸಂಸ್ಕಾರ’ ರೂಪಕ ಚೆನ್ನಾಗಿದೆ.
  ಜೋಷಿಯವರೆ, ನಿಮ್ಮ ಅನಿಸಿಕೆ ನಿಜ. ಮೂರೂ ಬಿಟ್ಟವರು ಊರಿಗೆ ದೊಡ್ಡವರು!

  ReplyDelete
 18. 'ಸಂಪಾದಕೀಯ'ದ ನವೀನತೆಗೆ ಈ ಅಂಕಣ ಸಾಕ್ಷಿಯಾಗಿದೆ. ಭ್ರಷ್ಟ ಪತ್ರಕರ್ತರ ಮುಖವಾಡವನ್ನು ಬಯಲಿಗೆಳೆಯುತ್ತಿದ್ದಾರೆ. Bangaloreನ BDA ನಿವೇಶನ ಹಗರಣ, SHIMOGA KHB ಸೈಟ್ ಹಗರಣಗಳು ಪತ್ರಕರ್ತರ ಭ್ರಷ್ಟಾಚಾರಕ್ಕೆ ಹಿಡಿದ ಕೈಗನ್ನಡಿಯಾಗಿವೆ. ಪತ್ರಿಕೋದ್ಯಮದ ಲೋಕಾಯುಕ್ತ ಎಂದೇ ಹೆಸರು ಪಡೆದಿರುವ ಸಂಪಾದಕೀಯ, ಪತ್ರಕರ್ತರ ಭ್ರಷ್ಟಾಚಾರವನ್ನು ಬಯಲಿಗೆಳೆಯಬೇಕು. ಹಗರಣಗಳನ್ನು ಬೆಳಕಿಗೆ ತರಬೇಕು. ನಾವೆಲ್ಲ ಸಾಚಾಗಳು ಎಂದು ಹೇಳಿಕೊಳ್ಳುವ ಗೋಮುಖ ವ್ಯಾಘ್ರ ಪತ್ರಕರ್ತರ ಭ್ರಷ್ಟ ರೂಪವನ್ನು ಬಯಲಿಗೆಳೆಯಬೇಕು. ನಿಷ್ಠಾವಂತ ಪತ್ರಕರ್ತರು ನಿಮ್ಮೊಂದಿಗಿದ್ದಾರೆ. ಸತ್ಯ, ನ್ಯಾಯಕ್ಕೆ ಜಯ ಎಂಬುವುದನ್ನು ಸಾಬೀತುಪಡಿಸಿ.

  ReplyDelete
 19. ಮಾ ಸು ಮಂಜುನಾಥSeptember 14, 2011 at 8:54 AM

  ಪರಿಣಾಮಕಾರಿ ಬರಹ,ಹಾದಿ ತಪ್ಪಿದ ಜನಕ್ಕೆ ಚುರುಕು ಮುಟ್ಟಿಸುವಂತಿದೆ.

  ReplyDelete
 20. TUMBAA...ARTHAPOORNA KAAVYA. BAHUTEKA ELLARU ASAHYA AGIBITTIRODARINDA..ECHHARISABEKAADAVARU PARASPARA KESARERECHATAKKI ILIDUBITTIDDARE. VAASANEGE VAANTI BANDIDE MITRA..

  ReplyDelete