Wednesday, May 25, 2011

ಗುಳೆ ಹೋದವರ ಹಿಂದೆ ಹೊರಟಿದೆ ಮನಸು...


ಹಾನಗಲ್‌ನ ಪ್ರಭಾಕರ್ ಸುದ್ದಿಯಾಗುತ್ತಿದ್ದಂತೆ, ಪತ್ರಕರ್ತ ಚಾಮರಾಜ ಸವಡಿ ಗುಳೆ ಹೋಗುವ ಅಸಹಾಯಕ ಜನರ ಕುರಿತು ತಾವು ಹಿಂದೆ ಬರೆದ ಲೇಖನವೊಂದನ್ನು ತಮ್ಮ ಬ್ಲಾಗ್‌ನಲ್ಲಿ ಪ್ರಕಟಿಸಿದ್ದಾರೆ. ಆ ಲೇಖನದ ಯಥಾವತ್ತು ಇಲ್ಲಿದೆ. ಇಂಥ ಹಲವು ಕಥೆಗಳು ಅವರ ಬ್ಲಾಗ್‌ನಲ್ಲಿವೆ. ಒಮ್ಮೆ ಚಾಮರಾಜ ಸವಡಿ ಎಂಬ ಅವರ ಬ್ಲಾಗ್‌ಗೆ ಭೇಟಿ ಕೊಡಿ.- ಸಂಪಾದಕೀಯ

(ಈ ಬರಹ ನವೆಂಬರ್ ೨೦೦೯ರಲ್ಲಿ ಬರೆದಿದ್ದು. ಇದನ್ನು ಮತ್ತೊಮ್ಮೆ ನಿಮ್ಮ ಮುಂದೆ ತರಲು ಸಂಪಾದಕೀಯ ಬ್ಲಾಗ್‌ನ  ಹಾನಗಲ್ ಪ್ರಭಾಕರನ ಪೂರ್ತಿ ವಿವರ, ಶಾಂತವ್ವಳ ನೋವಿನ ಕಥೆ... ಎಂಬ ಬರಹ ಕಾರಣ. ಹೀಗಾಗಿ, ಈ ಬರಹವನ್ನು ಸಂಪಾದಕೀಯ ಬ್ಲಾಗ್‌ಗೆ ಅರ್ಪಿಸುತ್ತಿದ್ದೇನೆ...)

ಹಲವು ವರ್ಷಗಳ ಹಿಂದಿನ ಘಟನೆ.

ಆಗ ನಾನು ಬೆಂಗಳೂರಿನ ಎಲ್ಲಾ ನಂಟನ್ನು ಕಡಿದುಕೊಂಡು, ಇನ್ನು ಮುಂದೆ ನಮ್ಮೂರಲ್ಲೇ ಏನಾದರೂ ಮಾಡಬೇಕೆಂದು ಕೊಪ್ಪಳಕ್ಕೆ ಬಂದು ಪೂರ್ಣಪ್ರಮಾಣದ ನಿರುದ್ಯೋಗಿಯಾಗಿದ್ದೆ. ನನ್ನ ಬಂಡವಾಳವೇನಿದ್ದರೂ ತಲೆಯಲ್ಲಿತ್ತೇ ಹೊರತು ಜೇಬಿನಲ್ಲಿರಲಿಲ್ಲ. ಸಹಜವಾಗಿ ಕೊಪ್ಪಳ ನನ್ನನ್ನು ತಿರಸ್ಕರಿಸಿತು. ಯಾರಾದರೂ ಸರಿ, ದುಡ್ಡಿಲ್ಲದಿದ್ದರೆ ಅವನು ತಿರಸ್ಕಾರಕ್ಕೇ ಯೋಗ್ಯ. ಜಗತ್ತಿಗೆ ಸುಲಭವಾಗಿ ಅರ್ಥವಾಗುವ ಭಾಷೆಗಳೆಂದರೆ ಎರಡೇ- ಒಂದು ಹಣ, ಇನ್ನೊಂದು ಬೆದರಿಕೆ. ನನ್ನ ಹತ್ತಿರ ಎರಡೂ ಇಲ್ಲದಿದ್ದರಿಂದ ಪತ್ರಿಕೆಯೊಂದನ್ನು ಪ್ರಾರಂಭಿಸಬೇಕೆನ್ನುವ ನನ್ನ ಆಸೆಗೆ ಯಾವ ಬೆಂಬಲವೂ ಸಿಗಲಿಲ್ಲ. ಯಾರಾದರೂ ಬಂಡವಾಳಶಾಹಿಗಳು ಮುಂದೆ ಬಂದರೆ, ಅಚ್ಚುಕಟ್ಟಾದ ದಿನಪತ್ರಿಕೆಯೊಂದನ್ನು ರೂಪಿಸಿಕೊಟ್ಟೇನೆಂದು ನಾನು ಹಂಬಲಿಸುತ್ತಿದ್ದೆ. ಆದರೆ ದುಡ್ಡು ಹಾಕುವ ಹಂಬಲ ಮಾತ್ರ ಕೊಪ್ಪಳದ ಯಾವ ಬಂಡವಾಳಗಾರನಲ್ಲೂ ಇರಲಿಲ್ಲ. ಅಂಥವರ ಪರಿಚಯ ಕೂಡಾ ನನಗಿರಲಿಲ್ಲ.

ಹಾಗಿದ್ದರೂ ನನ್ನಲ್ಲೊಂದು ಆತ್ಮವಿಶ್ವಾಸವಿತ್ತು. ಏನಾದರೂ ಮಾಡಿ ಕೊಪ್ಪಳದಲ್ಲಿ ಪತ್ರಿಕೆಯೊಂದನ್ನು ಹುಟ್ಟು ಹಾಕಬೇಕೆನ್ನುವ ತುಡಿತವಿತ್ತು. ಕಾಲ ಪಕ್ವವಾಗುವವರೆಗೆ ಏನಾದರೂ ಮಾಡಬೇಕಲ್ಲವೇ? ವಾಪಸ್ ಬೆಂಗಳೂರಿಗೆ ಹೋಗುವ ಮನಸ್ಸಿಲ್ಲದ್ದರಿಂದ ಕೊಪ್ಪಳದಲ್ಲೇ ಮಾಡುವಂಥ ಕೆಲಸವನ್ನು ಹಿಡಿಯಬೇಕಿತ್ತು. ಆಗ ಸಹಾಯಕ್ಕೆ ಬಂದಿದ್ದು ಟ್ಯೂಷನ್.

ಗ್ರಾಮೀಣ ಪ್ರದೇಶದಲ್ಲಿ ಕಾಣಸಿಗುವಂತೆ ಕೊಪ್ಪಳದಲ್ಲಿಯೂ ಆಗ ಇಂಗ್ಲಿಷ್ ಟ್ಯೂಶನ್ ಕ್ರಾಂತಿ. ಯಾವ ಓಣಿಗೆ ಹೊಕ್ಕರೂ ಅಲ್ಲೊಂದು ಟ್ಯುಟೇರಿಯಲ್ಲು, ಯಾವ ನಿರುದ್ಯೋಗಿಯನ್ನು ನೋಡಿದರೂ ಆತನದೊಂದು ಟ್ಯೂಶನ್ ಬ್ಯಾಚ್ ಇರುತ್ತಿತ್ತು. ಆದರೆ, ಪರಿಚಿತರು ತೀರಾ ಕಡಿಮೆ ಸಂಖ್ಯೆಯಲ್ಲಿದ್ದ ನನ್ನ ಪಾಲಿಗೆ ವಿದ್ಯಾರ್ಥಿಗಳು ಸಿಗುವುದು ಸಾಧ್ಯವೇ ಇರಲಿಲ್ಲ.

ಹೀಗಾಗಿ ನಾನು ಕೊಪ್ಪಳದಿಂದ ೨೨ ಕಿಮೀ ದೂರದ ಯಲಬುರ್ಗಾ ತಾಲ್ಲೂಕಿನ ಮಂಗಳೂರಿಗೆ ಟ್ಯೂಶನ್ ಹೇಳಲು ಹೋಗುವುದು ಅನಿವಾರ್ಯವಾಯಿತು. ಸುಮಾರು ಎಂಟು ತಿಂಗಳುಗಳ ಕಾಲ ನಾನು ಅಲ್ಲಿದ್ದೆ. ಟ್ಯೂಶನ್ ಹೇಳುತ್ತಲೇ ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ನನ್ನ ಬೆಂಗಳೂರಿನ ನೆನಪುಗಳ ಪೈಕಿ ಒಂದಷ್ಟನ್ನು ಬರೆದಿಟ್ಟುಕೊಂಡೆ. ಬೆಂಗಳೂರು ಅಷ್ಟೆಲ್ಲಾ ದಿನಗಳಲ್ಲಿ ನನಗೆ ಏನೆಲ್ಲವನ್ನೂ ಕಲಿಸಿತ್ತೋ, ಅಷ್ಟೇ ಪ್ರಮಾಣದ ಪಾಠವನ್ನು ಮಂಗಳೂರು ನನಗೆ ಎಂಟೇ ತಿಂಗಳುಗಳ ಕ್ಲುಪ್ತ ಅವಧಿಯಲ್ಲಿ ಕಲಿಸಿತ್ತು.

ಆಗಾಗ ಇಂಥ ಅಜ್ಞಾತವಾಸಗಳಿಗೆ ಹೊರಟು ಹೋಗುವುದು ಒಂದರ್ಥದಲ್ಲಿ ಒಳ್ಳೆಯದೇ ಎಂದು ಈಗಲೂ ನಾನು ನಂಬುತ್ತೇನೆ. ಎಲ್ಲಾ ರೀತಿಯ ಒಂಟಿತನ ನಮ್ಮೊಳಗಿನ ಅಸಲಿ ವ್ಯಕ್ತಿತ್ವವನ್ನು ಹೊರ ಹಾಕುತ್ತದೆ. ಯಾರು ಒಳ್ಳೆಯವರು? ಕೆಟ್ಟವರು ಯಾರು? ನಮ್ಮೊಳಗಿನ ನಿಜವಾದ ಶಕ್ತಿ ಏನು? ದೌರ್ಬಲ್ಯಗಳು ಯಾವುವು? ನಮ್ಮ ವಲಯದ ಸಮಯಸಾಧಕರು ಯಾರು? ಅವರ ಕಾರ್ಯತಂತ್ರಗಳೆಂಥವು? ಮುಂದಿನ ದಿನಗಳಲ್ಲಿ ನಾನು ಯಾರನ್ನು ನಂಬಬಹುದು? ಯಾರನ್ನು ಕೈ ಬಿಡಬೇಕು? ಯಾರನ್ನು ಪೂರ್ತಿಯಾಗಿ ದೂರವಿಡಬೇಕು? ಎಂಬ ವಿಷಯಗಳು ಅಜ್ಞಾತವಾಸದ ಅವಧಿಯಲ್ಲಿ ಚೆನ್ನಾಗಿ ಗೊತ್ತಾಗುತ್ತವೆ.

ಮಂಗಳೂರಿನ ಎಂಟು ತಿಂಗಳುಗಳ ಆವಧಿ ನನ್ನ ಅಂಥ ಅಜ್ಞಾತವಾಸಗಳ ಪೈಕಿ ಒಂದು.

ಆ ಸಂದರ್ಭದಲ್ಲಿ ನನ್ನ ಗೆಳೆಯರೆನಿಸಿಕೊಂಡವರಿಂದ, ಬಂಧುಗಳಿಂದ, ಹಿತೈಷಿಗಳಿಂದ ನಾನು ದೂರವಿದ್ದೆ. ಬೆಂಗಳೂರು ಬಿಟ್ಟು ಸಣ್ಣ ಹಳ್ಳಿಯಾದ ಮಂಗಳೂರಿಗೆ ಟ್ಯೂಶನ್ ಹೇಳಲು ಬಂದು ನಿಂತ ನನ್ನ ಬಗ್ಗೆ ಆಶಾದಾಯಕವಾಗಿ ಯೋಚಿಸುವ ವ್ಯಕ್ತಿಗಳ ಸಂಖ್ಯೆ ಆಗ ತುಂಬಾ ಕಡಿಮೆಯಿತ್ತು.

ನನಗೂ ಬೇಕಾಗಿದ್ದೂ ಅದೇ.

ನನ್ನ ನಿಜವಾದ ಮಿತ್ರರು ಯಾರು? ಹಿತೈಷಿಗಳು ಎಂಥವರು? ಭವಿಷ್ಯದ ದಿನಗಳಲ್ಲಿ ನಾನು ಯಾರನ್ನು ನಂಬಬಹುದು? ಎಂಬುದನ್ನು ಅರಿಯಲು ಅಜ್ಞಾತವಾಸ ನನಗೆ ತುಂಬಾ ಸಹಾಯ ಮಾಡಿತು. ಹಾಗೆ ನೋಡಿದರೆ ಪ್ರತಿಯೊಂದು ಅಜ್ಞಾತವಾಸವೂ ನನಗೆ ಒಳ್ಳೆಯ ಪಾಠ ಕಲಿಸಿದೆ. ಹೊಸ ಹೊಸ ಗೆಳೆಯರನ್ನು ತಂದು ಕೊಟ್ಟಿದೆ. ಯಾವ ರಿಸ್ಕುಗಳನ್ನು ತೆಗೆದುಕೊಳ್ಳಬಹುದು? ಅವನ್ನು ಎಷ್ಟರ ಮಟ್ಟಿಗೆ ತೆಗೆದುಕೊಳ್ಳಬಹುದು? ಎಂಬುದನ್ನು ತೀರ್ಮಾನಿಸಲು ಸಹಾಯ ಮಾಡಿದೆ. ಆದ್ದರಿಂದ ನಾನು ಇಂಥ ಅಜ್ಞಾತವಾಸಗಳನ್ನು ಇಷ್ಟಪಡುತ್ತೇನೆ. ಆ ಅವಧಿ ಎಷ್ಟೇ ವೇದನಾಪೂರ್ಣವಾಗಿದ್ದರೂ ಕೂಡ ಅದನ್ನು ಆನುಭವಿಸಲು ಸಿದ್ಧನಾಗುತ್ತೇನೆ.

ಯಲಬುರ್ಗಾ ತಾಲ್ಲೂಕಿನ ಮಂಗಳೂರು ನನಗೆ ಗೆಳೆಯರನ್ನಷ್ಟೇ ಅಲ್ಲ, ಅನುಭವಗಳನ್ನು ಕೂಡಾ ದೊರಕಿಸಿಕೊಟ್ಟಿತು. ಆ ದಿನಗಳನ್ನು ನೆನಪಿಸಿಕೊಂಡರೆ ಇವತ್ತಿಗೂ ನಾನು ಮೌನವಾಗುತ್ತೇನೆ. ನನ್ನ ಅಹಂಕಾರ ತಾನಾಗಿ ಕಡಿಮೆಯಾಗುತ್ತದೆ. ಇದೆಲ್ಲಾ ನಶ್ವರ ಎಂಬ ವಿವೇಕ ಸುಲಭವಾಗಿ ಮೂಡುತ್ತದೆ. ಏಕೆಂದರೆ, ಮಂಗಳೂರಿನಲ್ಲಿ ನಾನು ನಿಜವಾದ ಬಡತನವನ್ನು ನೋಡಿದೆ. ಪ್ರತಿಯೊಂದು ವರ್ಷವೂ ಗುಳೆ ಹೋಗುವ ಕುಟುಂಬಗಳನ್ನು ಅಲ್ಲಿ ಕಂಡೆ. ಸರಕಾರಗಳು ಏನೇ ಘೋಷಿಸಲಿ, ಜನಪ್ರತಿನಿಧಿಗಳು ಎಷ್ಟೇ ಬಡಾಯಿ ಕೊಚ್ಚಿಕೊಳ್ಳಲಿ, ಅಧಿಕಾರಿಗಳು ಅದೆಷ್ಟೇ ಅಂಕಿ ಅಂಶಗಳನ್ನು ನೀಡಿ ನಂಬಿಸಲು ಪ್ರಯತ್ನಿಸಲಿ. ಒಂದು ಮಾತಂತೂ ಸತ್ಯ-

ನಮ್ಮ ಹಳ್ಳಿಗಳಲ್ಲಿ ತೀವ್ರವಾದ ಬಡತನವಿದೆ. ಒಂದೇ ಒಂದು ಬೆಳೆ ವಿಫಲವಾದರೂ ಸಾಕು - ಸಾವಿರಾರು ಕುಟುಂಬಗಳು ಗುಳೆ ಹೋಗಬೇಕಾಗುತ್ತದೆ.

ಅಂಥ ಒಂದಷ್ಟು ಕುಟುಂಬಗಳನ್ನು, ಅವು ಗುಳೆ ಹೋದ ದುರಂತವನ್ನು ನಾನು ಮಂಗಳೂರಿನಲ್ಲಿ ಕಣ್ಣಾರೆ ಕಂಡೆ. ಇದೆಲ್ಲಾ ನನ್ನ ಗಮನಕ್ಕೆ ಬಂದಿದ್ದು ಕೂಡ ತೀರಾ ಆಕಸ್ಮಿಕವಾಗಿ.

ಕಾಲೇಜು ಉಪನ್ಯಾಸಕರಾಗಿದ್ದ ಗೆಳೆಯ ರಾಜಶೇಖರ ಪಾಟೀಲ ಅವರ ರೂಮಿನಲ್ಲಿ ಇರುತ್ತಿದ್ದ ನಾನು ಟ್ಯೂಶನ್ ಕೂಡಾ ಅಲ್ಲಿಯೇ ನಡೆಸುತ್ತಿದ್ದೆ. ಒಬ್ಬ ಪಿಯುಸಿ ಹುಡುಗ ಆಗಾಗ ಟ್ಯೂಶನ್ ತಪ್ಪಿಸುವುದು ಒಮ್ಮೆ ನನ್ನ ಗಮನಕ್ಕೆ ಬಂದಿತು. ಅವನನ್ನು ಕರೆಸಿ ಕಾರಣ ವಿಚಾರಿಸಿದೆ. ಅವನಿಂದ ಸಮರ್ಪಕ ಉತ್ತರ ಬರಲಿಲ್ಲ. ಬೈದೆ. ಅವನು ದೂಸರಾ ಮಾತನಾಡದೇ ಬೈಸಿಕೊಂಡ. ಅವನು ಆಚೆ ಹೋದ ನಂತರ, ಗೆಳೆಯ ರಾಜಶೇಖರ ಪಾಟೀಲ ಜೊತೆ ಆ ಹುಡುಗ ಕ್ಲಾಸ್ ತಪ್ಪಿಸುವ ಬಗ್ಗೆ ಮಾತಾಡಿದೆ. ಅವನ ಮನೆಯ ಆರ್ಥಿಕ ಸ್ಥಿತಿ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ನಾನು ಟ್ಯೂಶನ್ ಫೀ ತೆಗೆದುಕೊಳ್ಳುತ್ತಿರಲಿಲ್ಲ. ಆದರೂ ಈ ಹುಡುಗ ಚೆನ್ನಾಗಿ ಓದುವುದನ್ನು ಬಿಟ್ಟು ಇದೇನು ನಡೆಸಿದ್ದಾನೆ ನೋಡಿ ಎಂದು ದೂರಿದೆ.

ಒಂದು ಕ್ಷಣ ರಾಜಶೇಖರ ಪಾಟೀಲ್ ಮಾತಾಡಲಿಲ್ಲ. ನಂತರ ಉತ್ತರರೂಪವಾಗಿ ತಮ್ಮದೊಂದು ಅನುಭವ ಹೇಳಿದರು.

ಆ ಹುಡುಗ ಹತ್ತನೆಯ ತರಗತಿಯಲ್ಲಿ ಓದುತ್ತಿದ್ದಾಗ ನಡೆದ ಘಟನೆಯಿದು.

ಇಡೀ ತರಗತಿಯಲ್ಲಿ ಇವನೊಬ್ಬ ಮಾತ್ರ ಸರಿಯಾದ ಸಮಯಕ್ಕೆ ಫೀ ಕಟ್ಟುತ್ತಿರಲಿಲ್ಲ. ಸರಿಯಾಗಿ ತರಗತಿಗಳಿಗೂ ಬರುತ್ತಿರಲಿಲ್ಲ. ಕಾರಣ ಕೇಳಿದರೆ ಬಡತನದ ಬಗ್ಗೆ ಹೇಳುತ್ತಿದ್ದ. ಫೀಗಾಗಿ ಒತ್ತಾಯಿಸಿದರೆ ತರಗತಿಗಳಿಗೇ ಬರುತ್ತಿರಲಿಲ್ಲ ಹೀಗಾಗಿ ಅವನ ಬಗ್ಗೆ ಸಹೃದಯಿಗಳಿಗೆ ಅನುಕಂಪವಿದ್ದರೆ, ಇತರರಿಗೆ ತಿರಸ್ಕಾರವಿತ್ತು. ಕೊನೆಗೊಂದು ದಿನ ಎಸ್.ಎಸ್.ಎಲ್.ಸಿ. ಮುಗಿಯುವ ದಿನ ಬಂದಿತು. ಅವತ್ತು ಹತ್ತನೆಯ ತರಗತಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಂದರ್ಭ. ದಿನವಿಡೀ ಹಾಜರಿದ್ದ ಈ ಹುಡುಗ ಗ್ರೂಪ್‌ಫೋಟೋ ಸಮಯಕ್ಕೆ ಸರಿಯಾಗಿ ನಾಪತ್ತೆಯಾದ. ಎಲ್ಲಿ ಹುಡುಕಿದರೂ ಸಿಗಲಿಲ್ಲ. ಮನೆಗೇನಾದರೂ ಹೋಗಿದ್ದಾನೋ ನೋಡ್ರೋ ಎಂದು ಶಿಕ್ಷಕರು ಹುಡುಗರನ್ನು ಕಳಿಸಿಕೊಟ್ಟರು. ಅಲ್ಲಿಂದಲೂ ಇಲ್ಲ ಎಂಬ ಉತ್ತರ ಬಂದಿತು. ಎಲ್ಲಿಗೆ ಹೋದ? ಎಂದು ಎಲ್ಲರೂ ಕೋಪ ಹಾಗೂ ಬೇಸರದಿಂದ ಮಾತನಾಡುತ್ತಿರುವಾಗ ಈ ಹುಡುಗ ತೇಕುತ್ತಾ ಓಡಿ ಬಂದ. ಮುಖ ಬಾಡಿತ್ತು. ಎಲ್ಲರೂ ತನ್ನ ದಾರಿಯನ್ನೇ ಕಾಯುತ್ತಿದ್ದಾರೆ ಎಂಬುದು ಗೊತ್ತಾದಾಗಲಂತೂ ಅವನು ಅಪರಾಧಿ ಭಾವನೆಯಿಂದ ಕುಗ್ಗಿ ಹೋದ.

ರಾಜಶೇಖರ್ ಪಾಟೀಲ್ ಮೊದಲೇ ಮುಂಗೋಪಿ. ಲೇ, ಎಲ್ಲೋಗಿದ್ದೀ? ಎಲ್ಲರೂ ನಿನ್ನ ದಾರಿ ಕಾಯಬೇಕೇನೋ? ಎಂದು ತರಾಟೆಗೆ ತೆಗೆದುಕೊಂಡರು. ಹುಡುಗನಿಗೆ ಏನು ಹೇಳಬೇಕೆಂಬುದೇ ತೋಚಲಿಲ್ಲ. ಸುಮ್ಮನೇ ನಿಂತ. ಇನ್ನಷ್ಟು ದಬಾಯಿಸಿದಾಗ ಸಣ್ಣ ಧ್ವನಿಯಲ್ಲಿ ಹೇಳಿದ. ಬಸ್ ಸ್ಟ್ಯಾಂಡಿಗೆ ಹೋಗಿದ್ದೀನ್ರಿ ಸಾರ್. ನಮ್ಮವ್ವ ಮತ್ತು ತಮ್ಮ ಗುಳೆ ಹೊಂಟಿದ್ರೀ. ಅವ್ರು ಮತ್ತ ಯಾವಾಗ ಬರ್ತಾರೋ ಗೊತ್ತಿಲ್ಲ.... ಅದಕ್ಕ ಲೇಟಾತ್ರೀ....

ರಾಜಶೇಖರ್ ಮಂಕಾದರು. ಹುಡುಗ ಹೇಳಿದ ಕಾರಣ ಅವರ ಸಿಟ್ಟನ್ನು ತಣಿಸಿ ಅಪರಾಧಿ ಭಾವನೆಯನ್ನು ಮೂಡಿಸಿತ್ತು. ಮುಂದೆ ಯಾವತ್ತೂ ಅವರು ಆ ಹುಡುಗನನ್ನು ಬೈಯಲು ಹೋಗಲಿಲ್ಲ.

ಮೇಲಿನ ಘಟನೆಯನ್ನು ವಿವರಿಸಿದ ರಾಜಶೇಖರ, ಅವನ ಮನೆ ಪರಿಸ್ಥಿತಿ ಸರಿ ಇಲ್ರೀ... ಅದಕ್ಕ ಅವ ಆಗಾಗ ಕೂಲಿ ಮಾಡಾಕ ಹೋಗಬೇಕಾಗುತ್ತ. ಇಲ್ಲಾ ಅಂದರೆ ಮನಿ ನಡ್ಯಾಂಗಿಲ್ಲ. ಬಹುಶ: ಟ್ಯೂಶನ್ ತಪ್ಪಿಸಿದ್ದು ಇದೇ ಕಾರಣಕ್ಕೆ ಇರಬೇಕು ಎಂದು ಹೇಳಿದಾಗ ನನ್ನ ಮನಸ್ಸಿನಲ್ಲೂ ಅಪರಾಧಿ ಭಾವನೆ.

ಮುಂದೆ ನಾನು ಮಂಗಳೂರಿನಲ್ಲಿ ಬಡತನದ ಅನೇಕ ಮುಖಗಳನ್ನು ನೋಡಿದೆ. ಪ್ರತಿಭೆಗಳನ್ನು ಅದು ಎಳೆಯ ವಯಸ್ಸಿನಲ್ಲಿಯೇ ಹೇಗೆ ಹೊಸಕಿ ಹಾಕಿ ಬಿಡುತ್ತದೆ ಎಂಬುದನ್ನು ನೋಡಿದೆ. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಅವಿವೇಕತನದ ಹೇಳಿಕೆಗಳು, ನಿಜವಾದ ಬರ, ನಿಜವಾದ ಬಡತನ, ನಮ್ಮ ಹಳ್ಳಿಗಳ ದುಃಸ್ಥಿತಿ, ಅದಕ್ಕೆ ಕಾರಣಗಳು, ಸಾಧ್ಯವಿರಬಹುದಾದ ಪರಿಹಾರಗಳು ಎಲ್ಲವೂ ನನಗೆ ಕಂಡು ಬಂದಿದ್ದು ಮಂಗಳೂರಿನ ಆಜ್ಞಾತವಾಸದಲ್ಲಿ!

ಮುಂದೆ ಕೊಪ್ಪಳಕ್ಕೆ ಬಂದೆ. ವಿಜಯ ಕರ್ನಾಟಕ ದಿನಪತ್ರಿಕೆಯ ಜಿಲ್ಲಾ ವರದಿಗಾರನ ಕೆಲಸ ಸಿಕ್ಕಿತು. ಬದುಕು ಮತ್ತೆ ಒಂದು ಸುತ್ತು ಬಂದಿತು. ಆದರೆ ಮಂಗಳೂರಿನ ಕಟು ಅನುಭವಗಳನ್ನು ನಾನು ಮರೆಯಲಿಲ್ಲ. ಗ್ರಾಮೀಣ ಬದುಕಿನ ಸಾವಿರಾರು ಅಂಶಗಳು ನನ್ನನ್ನು ಮತ್ತೆ ಮತ್ತೆ ಕೆಣಕುತ್ತಿದ್ದವು. ಅವುಗಳ ಬಗ್ಗೆ ಅನೇಕ ವರದಿಗಳನ್ನು ಮಾಡಿದೆ. ಬೇರೆ ಬೇರೆ ಪತ್ರಿಕೆಗಳಿಗೆ ಲೇಖನ ಬರೆದೆ. ಸ್ವಲ್ಪ ಬುದ್ಧಿವಂತಿಕೆ ಹಾಗೂ ಸಾಕಷ್ಟು ಪರಿಶ್ರಮ ಇದ್ದರೆ ಹಳ್ಳಿಯ ಬದುಕು ಹೇಗೆ ಬದಲಾಗಬಹುದು ಎಂಬ ಬಗ್ಗೆ ಅನೇಕ ಲೇಖನಗಳು ಬಂದವು.

ಅದು ಬಿಡಿ. ಇವತ್ತಿಗೂ ಬೇಸಿಗೆ ದಿನಗಳಲ್ಲಿ ಊರ ಕಡೆ ಹೋಗಿ ನೋಡಿದರೆ, ಎಲ್ಲ ದಿಕ್ಕಿನಲ್ಲಿ ಗುಳೇ ಹೋಗುವ ಜನರ ಗುಂಪುಗಳೇ ಕಾಣುತ್ತವೆ. ಇನ್ನಾರು ತಿಂಗಳು ಇವರಾರಿಗೂ ಹಬ್ಬವಿಲ್ಲ. ಜಾತ್ರೆಯಿಲ್ಲ. ಊರಿನ ಸುದ್ದಿಯಿಲ್ಲ. ಮತ್ತೊಂದು ಮುಂಗಾರು ಬಂದು, ಮುಗಿಲ ತುಂಬ ಮೋಡಗಳು ತುಂಬಿಕೊಂಡು ಮಳೆಯು ರಭಸವಾಗಿ ಅಪ್ಪಳಿಸಿ ಕಾಯ್ದ ನೆಲವನ್ನು ತಣಿಸುವವರೆಗೆ ಇವರು ವಾಪಸ್ ಬರುವುದಿಲ್ಲ. ದೂರದ ಅಪರಿಚಿತ ಊರುಗಳಲ್ಲಿ ರಸ್ತೆ ಹಾಕುತ್ತಾ, ಕಟ್ಟಡ ಕಟ್ಟುತ್ತಾ, ಅರ್ಧ ಕಟ್ಟಿದ ಕಟ್ಟಡಗಳ ಮೂಲೆಯಲ್ಲಿ ಮೂರು ಕಲ್ಲಿನ ಒಲೆ ಹೂಡಿ, ರೊಟ್ಟಿ ಬೇಯಿಸಿಕೊಂಡು ದಿನಗಳನ್ನು ತಳ್ಳುತ್ತಾರೆ. ಮುಂಚೆ ಅಂದುಕೊಳ್ಳುತ್ತಿದ್ದ, ಬರ ಬರದಿರಲಿ ದೇವರೇ ಎಂಬ ಪ್ರಾರ್ಥನೆಯ ಜೊತೆಗೆ, ಪ್ರವಾಹವೂ ಬಾರದಿರಲಿ ದೇವರೇ ಎಂದು ಬೇಡಿಕೊಳ್ಳುತ್ತಾರೆ. ಊರಲ್ಲಿ ಇದ್ದಿದ್ದರೆ ಇವತ್ತು ಜಾತ್ರೆ ನೋಡಬಹುದಿತ್ತು. ಉಗಾದಿ ಆಚರಿಸಬಹುದಿತ್ತು ಎಂದು ಕನಸು ಕಾಣುತ್ತಾರೆ. ಹಾಗೆ ಕನಸು ಕಾಣುತ್ತಲೇ ಯಾರೋ ಅಪರಿಚಿತನ ಕನಸಿನ ಮನೆ ಕಟ್ಟುತ್ತಾರೆ. ಮುಂದಿನ ಆರು ತಿಂಗಳವರೆಗೆ ಇದೇ ಅವರ ಬದುಕು!

ಗುಳೆ ಹೋದವರನ್ನು ಯಾರು ನೆನಪಿಟ್ಟುಕೊಳ್ಳುತ್ತಾರೆ? ಎಂದಿನಂತೆ ಊರಿನಲ್ಲಿ ಹಬ್ಬ ಬರುತ್ತದೆ, ಜಾತ್ರೆ ಬರುತ್ತದೆ. ಎಂದಿನಂತೆ ನಾಟಕ ಬಯಲಾಟಗಳು, ಸಭೆ-ಸಮಾರಂಭಗಳು ಬರುತ್ತವೆ. ಬೇರೆ ಊರಿನಲ್ಲಿದ್ದು ನೌಕರಿ ಮಾಡುವ ಜನರೆಲ್ಲಾ ಅವತ್ತು ಊರಿಗೆ ಬರುತ್ತಾರೆ. ಅವರ ಸಂಬಂಧಿಕರು ಬರುತ್ತಾರೆ. ಅಂಗಡಿ ಮುಂಗಟ್ಟುಗಳೆಲ್ಲ ಬರುತ್ತವೆ. ಆದರೆ ಗುಳೆ ಹೋದವರು ಮಾತ್ರ ಬರುವುದಿಲ್ಲ. ಯಾವ ಊರಿನ ಜಾತ್ರೆ ನೋಡಿದರೂ ನನಗೆ ಗುಳೆ ಹೋದ ಬಡವರ ನೆನಪೇ. ದೂರದ ಅಪರಿಚಿತ ಊರುಗಳಲ್ಲಿ ಅವರು ದುಡಿಯುತ್ತಿರುವ ಚಿತ್ರಗಳೇ ಕಣ್ಣ ಮುಂದೆ,

ಚಾಮರಾಜ ಸವಡಿ
ಆಗೆಲ್ಲ ನನಗೆ, ದೇಶ ಪ್ರಗತಿಯತ್ತ ಧಾವಿಸುತ್ತಿದೆ ಎಂದು ಸರಕಾರ ನೀಡುವ ಸುಳ್ಳು ಜಾಹೀರಾತುಗಳು ನೆನಪಾಗುತ್ತವೆ. ಮಾಹಿತಿ ಹಾಗೂ ಸಂಪರ್ಕ ಕ್ರಾಂತಿ ಸಾಧ್ಯವಾಗಿರುವ ಈ ದಿನಗಳಲ್ಲಿ ಕೂಡಾ ಹಳ್ಳಿಯ ಜನರಿಗೆ ಹಳ್ಳಿಯಲ್ಲೇ ಕೆಲಸ ದೊರೆಯುವಂತೆ ಮಾಡಲು ಏಕೆ ಸಾಧ್ಯವಾಗುತ್ತಿಲ್ಲ? ಎಂಬ ಪ್ರಶ್ನೆ ಎದ್ದು ನಿಲ್ಲುತ್ತದೆ.

ಆದರೆ ಉತ್ತರ ಮಾತ್ರ ಸಿಗುವುದಿಲ್ಲ. ಮನಸ್ಸು ಗುಳೆ ಹೋದವರ ಹಿಂದೆಯೇ ಗುಳೆ ಹೊರಡುತ್ತದೆ. ನರಳುತ್ತದೆ. ನಿಟ್ಟುಸಿರಿಡುತ್ತದೆ.

ಏಕೆಂದರೆ, ನಾನೂ ಕೂಡ ಅವರ ಹಾಗೇ ಗುಳೆ ಬಂದವ! ಇವತ್ತಿಗೂ ವಾಪಸ್ ಊರಿಗೆ ಹೋಗುವ ಕನಸು ಕಾಣುತ್ತಿರುವವ.

(ಅವತ್ತು ಟ್ಯೂಷನ್ ತಪ್ಪಿಸುತ್ತಿದ್ದ ಹುಡುಗ ಈಗ ಹೈಸ್ಕೂಲ್ ಟೀಚರಾಗಿದ್ದಾನೆ. ನೇಮಕಾತಿ ಪತ್ರ ಬಂದಾಗ ಎಲ್ಲೆಲ್ಲೋ ಹುಡುಕಿ ನನ್ನ ನಂಬರ್ ಪತ್ತೆ ಮಾಡಿ ಫೋನ್ ಮಾಡಿ ಸಂತಸ ಹಂಚಿಕೊಂಡಿದ್ದ. ಅವನ ಫೋನ್ ಬಂದ ಆ ದಿನಗಳಲ್ದಾಗಲೇ ನಾನು ಮತ್ತೆ ನಿರುದ್ಯೋಗಿಯಾಗಿದ್ದೆ. ನಾಲ್ವರ ಕುಟುಂಬದ ಜವಾಬ್ದಾರಿಯಿಂದ ಮಾನಸಿಕವಾಗಿ ಕುಗ್ಗಿಹೋಗಿದ್ದೆ. ಆದರೆ, ಅವನ ಫೋನ್ ನನ್ನನ್ನು ಮತ್ತೆ ಬಡಿದೆಬ್ಬಿಸಿತು. ನಾವು ಹಚ್ಚಿದ ದೀಪಗಳು ಎಲ್ಲೋ ಬೆಳಗುತ್ತಿವೆ ಎಂಬ ಖುಷಿ ಹೊಸ ಉತ್ಸಾಹ ತುಂಬಿತ್ತು. ಸಂಪಾದಕೀಯದ ಬರಹ ಮತ್ತೆ ಈ ನೆನಪನ್ನು ಉಕ್ಕಿಸಿದೆ. ಜೊತೆಗೆ ಖುಷಿಯನ್ನೂ... ಥ್ಯಾಂಕ್ಸ್ ಸಂಪಾದಕೀಯವೇ....)

- ಚಾಮರಾಜ ಸವಡಿ

14 comments:

 1. ಬ್ಯೂಟಿಫುಲ್ ಸರ್. ಎಲ್ಲರೂ ಗುಳೆ ಹೊರಟವರೇ. ಕೆಲವರಿಗೆ ಅದರ ಅರಿವು ಆಗುತ್ತದೆ, ಮತ್ತೆ ಕೆಲವರು ಅದನ್ನೇ growth ಅಂದು ಕೊಳ್ಳುತ್ತಾರೆ. ಅಸ್ಟೇ.

  ReplyDelete
 2. Savadi is good feature writer.
  I think his biggest mistake is quitting PV.

  Ramesh

  ReplyDelete
 3. Its nature law that human being goes places to places in search of food and shelter. If an educated or salaried person goes to other places for work there is no harm but if an agriculture goes as a migrant labourer there is conflict and struggle in life.

  An agriculturist goes in search of better pay and food, what is wrong in that? What can the govt do? Can a govt bring rain? or change the climate? And why the writer moved from his hometown to other place? Why he not opened tutorial in koppal itself? Thats because there is stiff competition in Koppal and he cant earn much. In the same way a migrant farmer will go in search of better pay and in the hope of good life.

  There is not much beyond that! As govt or you cant bring rain, let them earn handsomely and lead life anyway its better than working 8 hours a week and getting 45 thousand UGC salary!!

  ReplyDelete
 4. Ultra super !! Touching !!! Kelavaru hora deshagalalli :( !!

  ReplyDelete
 5. Ya. i too feel bad...whenever i go to any mall or any other infrasturture....papa ella odiro makkallu yuvakaru illi bandu..helper cleaner anta kelasa maadta iddare..ellaru kanndigare..., yaaru olle kelasgallalli irolla.. Innu construction workers kooda aste... in fact naanu kooda gule bandavange bengaluruige...

  ReplyDelete
 6. @ಕಿರಣ್ ಮತ್ತು ನವೀನ್:
  ದಯವಿಟ್ಟು ಗುಳೆ ಹೋಗುವುದರ ನಿಜ ಅರ್ಥ ತಿಳಿದುಕೊಳ್ಳಿ.. ಇದು ನನ್ನಂತೆ, ನಿಮ್ಮಂತೆ ಊರು ಬಿಟ್ಟು ಬೆಂಗಳೂರಿಗೆ ಬಂದು ಹತ್ತಾರು ವರ್ಷ ಒಳ್ಳೆಯ ಸಂಬಳ ಗಳಿಸಿಕೊಂಡು ಮನೆ ಮಾಡಿ ಸಂಸಾರ ಹೂಡುವಂಥದಲ್ಲ. ಮೂರು/ಆರು ತಿಂಗಳಿಗೊಮ್ಮೆ ಕೆಲಸ ಹುಡುಕಿಕೊಂಡು ಊರೂರು ಅಲೆಯುವ ಪಾಡು. ಯಾವ ಊರಲ್ಲೂ ನೆಲೆ ನಿಲ್ಲಲಾಗದ ಗೋಳು. ಮಕ್ಕಳಿಗೆ ವಿದ್ಯಾಭ್ಯಾಸ ಕನಸಿನ ಮಾತು. ಬಿಟ್ಟು ಬಂದ ತಮ್ಮ ಊರಲ್ಲಿ ಮಳೆ ಬಂದ ಸುದ್ದಿಗಾಗಿ ಕಾದುಕೊಂಡು ಊರಿಗೆ ಮರಳಿ ಹೋಗಲು ಹಣ ಹೊಂಚುವ/ಹೊಂಚಲಾಗದ ವೇದನೆ. ವಯಸ್ಸಾದ ತಂದೆ-ತಾಯಂದಿರನ್ನು ಊರಲ್ಲೇ ಬಿಟ್ಟು ಬಂದು ಅವರು ಇನ್ನಿಲ್ಲವೆಂಬ ಸುದ್ದಿಯೂ ತಿಲಿಯದಂಥ, ತಿಳಿದರೂ ಸಕಾಲಕ್ಕೆ ತಲುಪಲಾಗದಂಥ ಪರಿಸ್ಥಿತಿ.
  ಸರಕಾರ ಮಳೆ ತರಿಸಲಾರದು ನಿಜ.. ಆದರೆ ಗ್ರಾಮೀಣ ಪರಿಸರದಲ್ಲಿ ಉದ್ಯೋಗ ಸೃಷ್ಥಿಯನ್ನೂ ಮಾಡಲಾಗದಿದ್ದರೆ ಅದೂ ಒಂದು ಸರಕಾರವಾ?

  ReplyDelete
 7. @ Naveen- oops! you are practical to the core. of course there is nothing wrong in it. but the way you perceive that "GULE" is different from the perception of a sensitive, emotional person. Money, better life, struggle free life is not every thing. life is beyond that. some times roots go deeper than your reach of sky.

  ReplyDelete
 8. @Anonymous May be I missed that "erception of a sensitive, emotional person" because I am also leaving far from native place in other state with different culture!!

  ReplyDelete
 9. ಗುಳೆ ಹೊರಟವರೇ ಎಲ್ಲರೂ. ಒಬ್ಬೊಬ್ಬರು ಒಂದೊಂದು ಹಂತ ದಲ್ಲಿ ಇರುತ್ತಾರೆ ಅಸ್ಟೇ. ಬೆಂಗಳೂರಿನ ಸಾವಿರಾರು ಜನರು ಹೀಗೆ ಗುಳೆ ಬಂದವರೇ. Infact ,sampadakiya should have changed its title,to "ಗುಳೆ ಬಂದವರ ಬದುಕು". how they live? what are their nostalgia? ಇವರ ಮಧ್ಯೆ ಮತ್ತೊಂದು ಥರದ ಜನರೂ ಇರುತ್ತಾರೆ. ನಗರ ಜೀವನವೇ ಅವರಿಗೆ ಆಕರ್ಷಣೀಯ. ಅದಕ್ಕೆ ಹಾತೊರೆದು , ತಮ್ಮ ಮೂಲವನ್ನು ಮರೆತು ಬರುವವರು ಇದ್ದಾರೆ. ಮೈ , ಕೈ ಕೆಸರು ಮಾಡಿ ಕೊಳ್ಳದ, ಶ್ರಮ ಬಯಸದ ಆರಾಮು ಜೀವನ, super mall , IT - BT ಕಟ್ಟಡ ಗಳ ಮುಂದೆ ಸೆಕ್ಯೂರಿಟಿ guard ಕೆಲಸಮಾಡಿದರೂ ಪರವಾಗಿಲ್ಲ, ಹಳ್ಳಿಯ ಜೀವನ, ಮಳೆ, ಬೇಸಾಯ, ಕ್ಕಿಂತ ನಗರ ಜೀವನವೇ ಬೇಕು ಎಂದು ಬರುವ ಜನರು ಎಷ್ಟಿದ್ದಾರೆ? ಇಲ್ಲಿನ ಸೂಪರ್ ಮಾಲ್, ಸಿನಿಮಾ theatre ಗಳು ಅವರ ಆಕರ್ಷಣೆ. ಇಲ್ಲಿನ ಬಣ್ಣ ಬಣ್ಣದ, ಬೆಳಕಲ್ಲಿ ಜಗ ಜಗಿಸುವ, ಸೂಪರ್ ಮಾಲ್ ಗಳು, ವಾರಕ್ಕೊಂದು ಸಿನಿಮಾ ಇಷ್ಟಿದ್ದರೆ ಸಾಕು. they live happily ,though they are unproductive.

  ReplyDelete
 10. Chamaraj nice write-up. People who have migrated from one place to another being in a government job and pay scales of private firms will not understand what migration means to poor agriculture labourers. Anyway, congrats once again. Keep writing

  ReplyDelete
 11. ನಮ್ಮಕಡೆಗೆ ಈ ರೀತಿ ಗುಳೆ ಹೊರಟವರು ಕಾಫಿ ಹಣ್ಣು ಕುಯ್ಯಲು ಬರುತ್ತಾರೆ.

  ReplyDelete
 12. ನಿಜ ಗುಳೆ ಹೋಗುವವರು ಕೊಪ್ಪಳ ಜಿಲ್ಲೆಯ ಎಲ್ಲ ಭಾಗಗಳಲ್ಲೂ ಇದ್ದಾರೆ. ಅದರಲ್ಲೂ ಮಳೆಯ ಮೇಲೆ ಆಧಾರವಾದ ಕೊಪ್ಪಳ, ಯಲಬುರ್ಗಾ, ಕುಷ್ಟಗಿ ತಾಲೂಕಿನ ಹಳ್ಳಿಗಳಲ್ಲಿ ಪ್ರತಿ ವರುಷ ಗುಳೆಗೆ ದೂರದ ಪ್ರದೇಶಗಳಿಗೆ ಹೋಗುತ್ತಾರೆ. ನಾನು ಇದೇ ಜಿಲ್ಲೆಯ ವರದಿಗಾರನಾಗಿರುವುದರಿಂದ ಕಳೆದ ವರುಷ ಇದೇ ತಿಂಗಳ ಕೊಪ್ಪಳ ತಾಲೂಕಿನ ಕುಣಿಕೇರಿ ತಾಂಡದಲ್ಲಿ ರಾತ್ರೋ ರಾತ್ರಿ ಗಂಟು ಮೂಟೆ ಕಟ್ಟಿಕೊಂಡು ಲಾರಿಗಳಲ್ಲಿ ಹೋಗುತ್ತಿದ್ದರು. ನಾನು ಇದನ್ನು ಮೊದಲ ಬಾರಿ ನೋಡಿದಾಗ "ಗುಳೆ ಹೋಗೋದು ಒಂದು ಸಂಪ್ರದಾಯದಂತೆ ಹೋಗ್ತಿದಾರೆ ಅಂತನಿಸಿತು. ಅವರಲ್ಲಿ ಯಾವುದೇ ದುಃಖ, ನೋವುಗಳಿರಲಿಲ್ಲ. ಪ್ರತಿ ವರುಷ ಇಡೀ ಗ್ರಾಮಕ್ಕೆ ಗ್ರಾಮವೇ ಗುಳೆ ಹೋಗುತ್ತಿದ್ದಾರೆ. ಇದು ಯಾವ ಮಟ್ಟಿಗೆ ಅವರಿಗೆ ಎಷ್ಟು ಮಾಮೂಲಿಯಾಗಿ ಹೋಗಿದೆಯಂದ್ರೆ.... ಅದೇ ಚಾಮರಾಜ ಸರ್ ಅವ್ರ "ಬಸ್ ಸ್ಟ್ಯಾಂಡಿಗೆ ಹೋಗಿದ್ದೀನ್ರಿ ಸಾರ್. ನಮ್ಮವ್ವ ಮತ್ತು ತಮ್ಮ ಗುಳೆ ಹೊಂಟಿದ್ರೀ. ಅವ್ರು ಮತ್ತ ಯಾವಾಗ ಬರ್ತಾರೋ ಗೊತ್ತಿಲ್ಲ.... ಅದಕ್ಕ ಲೇಟಾತ್ರೀ.... ಅಂತ ಹೇಳಿದ ಹುಡುಗನ ರೀತಿ ಕಾಮನ್ ಆಗಿ ಇಲ್ಲಿಯ ಮಕ್ಕಳು ಹೇಳ್ತಾರೆ.
  ಆದ್ರೆ ಒಂದು ವಿಷಯ. ತಂದೆ ತಾಯಿ ಗುಳೆಗೆ ಹೋಗೋದಲ್ದದೆ ತಮ್ಮ ಚಿಕ್ಕ ಚಿಕ್ಕ ಮಕ್ಕಳನ್ನು ಸಹ ಕರೆದುಕೊಂಡು ಹೋಗ್ತಾರೆ. ಇದರಿಂದ ಅವರ ವಿದ್ಯಾಭ್ಯಾಸ ಅರೆಬರೆಯಾಗುತ್ತೆ. ಸರ್ಕಾರ ಅದೇನ್ ಸರ್ಕಸ್ ಮಾಡಿದ್ರೂ ಇವರು ಗುಳೆ ಹೋಗೋದು ತಪ್ಪಿಲ್ಲ.
  ಇನ್ನು ಇಂಟರೆಸ್ಟಿಂಗ್ ವಿಷಯವೆಂದ್ರೆ ಗುಳೆಗೆ ಹೋಗುವವರಿಗೆ ಪ್ರತಿ ವರುಷ ಮಂಡ್ಯ, ತುಮಕೂರು, ಮೈಸೂರು ಭಾಗಗಳಿಂದಲೇ ಲಾರಿಗಳು ಇವರನ್ನು ಕರೆದುಕೊಂಡು ಹೋಗುತ್ತವೆಂದ್ರೆ ಲೆಕ್ಕ ಹಾಕಿ ಇದು ಎಷ್ಟು ಕಾಮನ್ ಆಗಿ ಹೋಗಿದೆಯೆಂದು.
  ಇದಕ್ಕೆ ಕೇವಲ ಮಳೆಯೊಂದೇ ಕಾರಣವಲ್ಲ. ಇದ್ದ ಸೂರು ಭೂಮಿಯನ್ನು ಇಲ್ಲಿಯ ಕೈಗಾರಿಕೆಗಳು ಕಸಿದುಕೊಂಡಿವೆ. ಇದರಿಂದ ಕಷ್ಟಪಟ್ಟು ಇಲ್ಲೇ ಬೆಳೀತೀನಿ ಅಂದಿದ್ದ ರೈತರು ಅನಿವಾರ್ಯವಾಗಿ ಗುಳೆ ಹೋಗುತ್ತಿದ್ದಾರೆ. ಇನ್ನೊಂದು ವಿಷಯವಂದ್ರೆ ಇಲ್ಲಿಯ ಕೈಗಾರಿಕೆಗಳು ಸ್ಥಳೀಯರಿಗೆ ಸರಿಯಾಗಿ ಕೆಲಸನೂ ಕೊಡ್ತಿಲ್ಲ. ಈ ಮೂಲಕ ತಮ್ಮ ಹೊಲಸು ಚಾಳಿಯನ್ನು ಪ್ರದರ್ಶಿಸುತ್ತಿವೆ. ಇನ್ನು ನಾಲ್ಕೈದು ವರುಷವಾದ್ರೂ ನನಗೂ ಗುಳೆ ಹೋಗೋದು ಪ್ರತಿ ವರುಷಕ್ಕೆ ಸಿಗುವ ಒಂದು ವರದಿ ಎಂಬಂತಾಗಿದೆ. ಇದರ ಬಗ್ಗೆ ಸರ್ಕಾರ ಅದ್ಯಾವ ರೀತಿ ಪರಿಹಾರ ಹುಡುಕುತ್ತೋ ಗೊತ್ತಿಲ್ಲ... ಉತ್ತ್ರರ ಕರ್ನಾಟಕದಲ್ಲಿ ತಮ್ಮ ಊರಲ್ಲಿ ತಮ್ಮ ಭೂಮಿಯಲ್ಲಿ ಉಳಿಮೆ ಮಾಡಲು, ಅಟ್ ಲೀಸ್ಟ್ ಕೆಲಸ ಮಾಡದಂತಹ ಸ್ಥಿತಿಯಿದೆಯೆಲ್ಲ ಎಂಬುದು ದುರ್ದೈವದ ಸಂಗತಿ.

  ReplyDelete
 13. ಗುಳೆ ಹೊರಡುವ ಮನಸ್ಸುಗಳ ನೋವು ಎಂತಹದು ಅನ್ನೊದು ತಿಳಿಯಿತು , ಅದಕ್ಕೆ ನೀಮ್ಮ ಬದುಕು ಕೂಡ ಹೋರತಾಗಿಲ್ಲ ಅನ್ನೊದು ಸಹ ಸತ್ಯ . ನೆನಪಿನ ಬುತ್ತಿಯಿಂದ ಹೊರಬಂದ ಈ ಲೇಖನ , ಉತ್ತರ ಕರ್ನಾಟಕದ ನಿಜ ಬದುಕುನ್ನ ನನ್ನ ಅನುಮಾನವನ್ನ ಬಗೆಹರಿಸಿದೆ .ಕಡಲ ತೀರದಲ್ಲಿ ಹುಟ್ಟಿ , ನಾಡೆ ಕಾಡು ಕಾಡೆ ನಾಡು ಅನ್ನುವಂತ ಮಲೆನಾಡಿನಲ್ಲಿ ಬೆಳೆದವನು ನಾನು . ರಸ್ತೆ ಪಕ್ಕದಲ್ಲಿ ಆರಡಿ ಆಳದ ಗುಂಡಿ ತೆಗೆದು , ತಂತಿ ಹುಗಿಯುವವರ ಕಂಡು ನಾನು ಯೋಚಿಸುತ್ತಿದ್ದಿದ್ದು ಒಂದೆ . ಇವೆರಲ್ಲಾ ಉತ್ತರ ಕರ್ನಾಟಕದವರು ,ಯಾಕಿಲ್ಲಿ ಬಂದು ಇಷ್ಟು ಕಷ್ಟಪಷ್ಟು ದುಡಿಯುತ್ತಾರೆ ಅಂತಾ .ಅವೆರಲ್ಲಾ ಶ್ರಮ ಜೀವಿಗಳು ಎಂದಷ್ಟೆ ನಾನು ತಿಳಿದಿದ್ದೆ .ಆದರೆ ಈಗ ಗೊತ್ತಾಯಿತು , ಅವೆರಲ್ಲಾ ಗುಳೆ ಬಂದವರೆ ಇರಬೇಕು .ಬೆಟ್ಟದ ಮೇಲೊಂದು ಮೆನಯ ಮಾಡಿ , ನೆಮ್ಮದಿಯ ಸೂರಿನೊಳಗಿನಿಂದ ,ಹುಚ್ಚೆಬ್ಬಿಸುವ ಮಳೆಯ ಕಂಡು ಸಂಭ್ರಮಿಸುವ ನಮಗೆಲ್ಲಾ ,ಅರ್ಥವಾಗುವುದೆ ಕಷ್ಟ ಅಲೆಮಾರಿಗಳ ಅಳಲು ,ಅಲ್ಲವೆ ಸರ್ ?

  ReplyDelete