Tuesday, November 1, 2011

ಕನ್ನಡ ರಾಜ್ಯೋತ್ಸವವೂ, ನಮ್ಮ ಸುದ್ದಿವಾಹಿನಿಗಳ ಕನ್ನಡಾಭಿಮಾನವೂ...


ಇವತ್ತು ಕನ್ನಡ ರಾಜ್ಯೋತ್ಸವ. ಕನ್ನಡ ಮಾಧ್ಯಮಗಳಿಗೆ ನಾಡಪ್ರೇಮ ಉಕ್ಕಿ ಹರೀತಾ ಇದೆ. ತುಂಬಾ ಸಂತೋಷದ ವಿಷಯ. ಕನ್ನಡ ಪತ್ರಿಕೆಗಳ ಕನ್ನಡ ಪ್ರೀತಿಗೆ ಒಂದು ಅರ್ಥವಿದೆ. ಕನ್ನಡದ ವಿಷಯ ಬಂದಾಗ ಪತ್ರಿಕೆಗಳು ಸದಾ ಕಾಲಕ್ಕೂ ಧ್ವನಿ ಎತ್ತುತ್ತ ಬಂದಿವೆ. ಕನ್ನಡ ಭಾಷೆ-ಸಂಸ್ಕೃತಿಯ ಬೆಳವಣಿಗೆಯಲ್ಲಿ ಕನ್ನಡ ಪತ್ರಿಕೆಗಳ ಕೊಡುಗೆ ಮಹತ್ವದ್ದು. ಹೀಗಾಗಿ ಇವತ್ತು ಎಲ್ಲ ಕನ್ನಡ ಪತ್ರಿಕೆಗಳು ರಾಜ್ಯೋತ್ಸವದ ಅಂಗವಾಗಿ ರೂಪಿಸಿರುವ ಸಂಚಿಕೆಗಳು ಖುಷಿ ಕೊಡುತ್ತವೆ.

ಕನ್ನಡ ಸುದ್ದಿವಾಹಿನಿಗಳಿಗೂ ಇವತ್ತು ಕನ್ನಡಾಭಿಮಾನ ಹುಚ್ಚು ಹೊಳೆಯಂತೆ ಹರಿಯುತ್ತಿದೆ. ಇದೂ ಕೂಡ ಸಂತೋಷದ ವಿಷಯವೇ ಹೌದು. ಆದರೆ ಸುದ್ದಿವಾಹಿನಿಗಳ ವಿಷಯದಲ್ಲಿ ಕೆಲವೊಂದು ಆಕ್ಷೇಪಣೆಗಳು ನಮಗಿವೆ. ಆಕ್ಷೇಪಣೆಗಳಿರುವುದರಿಂದಲೇ ಸುದ್ದಿವಾಹಿನಿಗಳ ಕನ್ನಡಪ್ರೇಮ ಅತ್ಯಂತ ಕೃತಕವಾಗಿಯೂ ಕಾಣುತ್ತದೆ.

ಮೊದಲನೆಯದಾಗಿ ಕನ್ನಡ ಸುದ್ದಿವಾಹಿನಿಗಳಿಗೆ ಪರಭಾಷಾ ಚಿತ್ರಗಳ ಮೋಹ ಹದ್ದು ಮೀರಿ ಹೋಗಿದೆ. ನಿಜ, ಕರ್ನಾಟಕದಲ್ಲಿ ಪರಭಾಷಾ ಚಿತ್ರಗಳಿಗೆ ಮಾರುಕಟ್ಟೆ ಇದೆ ಎಂಬುದು ವಾಸ್ತವ. ಗಣನೀಯ ಸಂಖ್ಯೆಯಲ್ಲಿ ಕನ್ನಡಿಗರೂ ಪರಭಾಷಾ ಚಿತ್ರಗಳನ್ನು ನೋಡುತ್ತಾರೆ ಎಂಬುದೂ ನಿಜ. ಕಲೆಗೆ ಭಾಷೆಯ ಗಡಿ ರೇಖೆ ಇರುವುದಿಲ್ಲ ಎನ್ನುವದನ್ನೂ ಒಪ್ಪಿಕೊಳ್ಳೋಣ.

ಆದರೆ ಇವತ್ತು ಕರ್ನಾಟಕದ ಯಾವ ಮೂಲೆಯಲ್ಲಾದರೂ ಹೋಗಿ ನೋಡಿ. ಕನ್ನಡೇತರ ಟಿವಿ ಚಾನಲ್‌ಗಳು ಪ್ರಸಾರವಾಗುತ್ತವೆ. ಅವುಗಳಿಗೆ ಕೇಬಲ್ ಆಪರೇಟರ್‌ಗಳು ಯಾವ ಅಡೆತಡೆಯನ್ನೂ ಮಾಡಿಲ್ಲ. ಪರಭಾಷಾ ಚಿತ್ರಗಳ ಬಗ್ಗೆ ಗಂಟೆಗಟ್ಟಲೆ ಕಾರ್ಯಕ್ರಮಗಳು ಈ ಪರಭಾಷಾ ಚಾನಲ್‌ಗಳಲ್ಲೇ ಲಭ್ಯವಾಗಿರುವುದರಿಂದ ಕನ್ನಡ ಚಾನಲ್‌ಗಳಲ್ಲೂ ಅದೇ ಚರ್ವಿತ ಚರ್ವಣ ವರದಿಗಳು ಯಾಕೆ? ಪರಭಾಷಾ ಚಿತ್ರಗಳ ಬಗ್ಗೆ ಮಾಹಿತಿ ಬೇಕಿರುವವರು ಅದೇ ಭಾಷೆಯ ಚಾನಲ್‌ಗಳನ್ನು ನೋಡುತ್ತಾರೆ, ನೋಡಿಕೊಳ್ಳಲಿ. ಕನ್ನಡಿಗರ ಗಂಟಲಿಗೂ ಈ ಬಲವಂತದ ಅಡುಗೆಯನ್ನು ತುಂಬುವುದು ಯಾಕೆ?

ಇದು ಆರಂಭವಾಗಿದ್ದು ಟಿವಿ೯ ಮೂಲಕ. ಟಿವಿ೯ ಆಂಧ್ರಪ್ರದೇಶ ಮೂಲದ ಚಾನಲ್. ಹೀಗಾಗಿ ಟಿವಿ೯ ತೆಲುಗು ಪ್ರಸಾರ ಮಾಡುವ ಕಾರ್ಯಕ್ರಮಗಳ ದೃಶ್ಯಗಳನ್ನೇ ಬಳಸಿ ಟಿವಿ೯ ಕನ್ನಡ ಕೂಡ ತೆಲುಗು ಚಿತ್ರಗಳನ್ನು ವೈಭವೀಕರಿಸುವ ಕೆಲಸ ಆರಂಭಿಸಿತು. ತೆಲುಗು ಚಿತ್ರನಟ-ನಟಿಯರ ಜನ್ಮದಿನಗಳಂದು ಗಂಟೆಗಟ್ಟಲೆ ಕಾಲ ವಿಶೇಷ ಕಾರ್ಯಕ್ರಮಗಳು ಪ್ರಸಾರವಾಗತೊಡಗಿದವು. ತೆಲುಗು ಸಿನಿಮಾಗಳು ಬಿಡುಗಡೆಯಾಗುವ ಸಂದರ್ಭದಲ್ಲಂತೂ ಅತಿರೇಕದ ಪ್ರಚಾರ ನೀಡಲಾಯಿತು. ಇದೊಂದು ರೀತಿಯಲ್ಲಿ ತೆಲುಗು ಚಿತ್ರಗಳಿಗೆ ಕರ್ನಾಟಕದಲ್ಲಿ ಪ್ರಚಾರ ಕೊಡುವ, ಆ ಚಿತ್ರಗಳ ಮಾರುಕಟ್ಟೆ ಹೆಚ್ಚಿಸುವ ಪ್ರಯತ್ನದ ಹಾಗೇ ಕಾಣಿಸಿತು.

ಇದೇ ರೋಗ ಈಗ ಎಲ್ಲ ಚಾನಲ್‌ಗಳಿಗೂ ಅಂಟಿಕೊಂಡಿದೆ. ಸುವರ್ಣ ನ್ಯೂಸ್ ಮತ್ತು ಸಮಯ ಟಿವಿಯಲ್ಲೂ ಈಗ ಪರಭಾಷಾ ಸಿನಿಮಾಗಳ ಬಗ್ಗೆ ಹಲವಾರು ಕಾರ್ಯಕ್ರಮಗಳು ಪ್ರಸಾರವಾಗುತ್ತವೆ. ಇದು ಯಾಕೆ ಬೇಕು ಎಂಬ ಪ್ರಶ್ನೆಗೆ ಸಮರ್ಥನೀಯ ಉತ್ತರ ಚಾನಲ್ ನಡೆಸುವವರಲ್ಲಿ ಇದೆಯೋ ಇಲ್ಲವೋ ನಮಗಂತೂ ಗೊತ್ತಿಲ್ಲ.

ಎರಡನೆಯ ಆಕ್ಷೇಪಣೆ ಶೀರ್ಷಿಕೆಗಳಿಗೆ ಸಂಬಂಧಿಸಿದ್ದು. ನಮ್ಮ ಟಿವಿ ವಾಹಿನಿಗಳ ಕಾರ್ಯಕ್ರಮಗಳ ಶೀರ್ಷಿಕೆಗಳಂತೂ ಪೂರ್ಣ ಇಂಗ್ಲಿಷ್‌ಮಯವಾಗಿ ಹೋಗಿದೆ. ಒಂದೆರಡು ಶೀರ್ಷಿಕೆಗಳು ಇಂಗ್ಲಿಷ್‌ನಲ್ಲಿದ್ದರೆ ಅದನ್ನು ಒಪ್ಪಿಕೊಳ್ಳಬಹುದು. ಇಂಗ್ಲಿಷ್‌ನ ಸಾಕಷ್ಟು ಶಬ್ದಗಳು ಕನ್ನಡದೊಂದಿಗೆ ಬೆರೆತು ಹೋಗಿವೆ. ಅವುಗಳನ್ನು ಬಳಸುವುದು ತಪ್ಪಲ್ಲ. ಆದರೆ ಎಲ್ಲ ಶೀರ್ಷಿಕೆಗಳು ಇಂಗ್ಲಿಷಿನಲ್ಲೇ ಇರಬೇಕೆ? ಒಳ್ಳೆಯ ಕನ್ನಡ ಶೀರ್ಷಿಕೆಗಳನ್ನು ಇಡಲು ಸಾಧ್ಯವಿಲ್ಲವೇ?

ಕನ್ನಡ ಚಾನಲ್‌ಗಳನ್ನು ನಡೆಸುವ ಪತ್ರಕರ್ತರಿಗೆ ಕನ್ನಡ ಶೀರ್ಷಿಕೆಗಳನ್ನು ಇಡುವುದಕ್ಕೆ ಒಂದು ಬಗೆಯ ಕೀಳರಿಮೆ. ಇಂಗ್ಲಿಷ್ ಶೀರ್ಷಿಕೆ ಇಟ್ಟರೆ ಕಾರ್ಯಕ್ರಮಗಳು ಜನಪ್ರಿಯವಾಗುತ್ತವೆ ಎಂಬ ಮೂಢನಂಬಿಕೆ. ಕನ್ನಡದ ಶೀರ್ಷಿಕೆ ಇಟ್ಟು, ಆ ಶೀರ್ಷಿಕೆಯನ್ನೇ ಜನಪ್ರಿಯಗೊಳಿಸುವ ಧೈರ್ಯ, ಸಾಮರ್ಥ್ಯ ಇವರುಗಳಿಗೆ ಇದ್ದಂತೆ ಇಲ್ಲ. ಹೀಗಾಗಿ ಇಂಗ್ಲಿಷ್ ಚಾನಲ್‌ಗಳ ಹಾಗೆ ನ್ಯೂಸ್ ಅಟ್ ನೈನ್, ೯ ಪಿಎಂ ನ್ಯೂಸ್, ಬ್ರೇಕ್ ಫಾಸ್ಟ್ ನ್ಯೂಸ್, ಮಾರ್ನಿಂಗ್ ಕಾಫಿ, ಲೇಡೀಸ್ ಕ್ಲಬ್, ವಾರಂಟ್, ಚಾರ್ಜ್‌ಶೀಟ್, ಫಿಲ್ಮಿ ಫಂಡಾ ಇತ್ಯಾದಿ ಹೆಸರುಗಳನ್ನೇ ಇಡುತ್ತಾರೆ. ಕನ್ನಡದ ಹೆಸರುಗಳನ್ನು ಇಟ್ಟು ಅವುಗಳನ್ನೇ ಜನರ ನಾಲಿಗೆ ತುದಿಗೆ ತರುವುದಕ್ಕೂ ಒಂದು ಯೋಗ್ಯತೆ ಬೇಕಲ್ಲವೇ?

ಈ ಇಂಗ್ಲಿಷ್ ರೋಗವನ್ನು ಹರಡಲು ಶುರು ಮಾಡಿದ್ದು ಹಾಯ್ ಬೆಂಗಳೂರು ಪತ್ರಿಕೆ. ಹಲೋ, ಬಾಟಮ್ ಐಟಮ್, ಫೀಡ್ ಬ್ಯಾಕ್, ಸಾಫ್ಟ್ ಕಾರ್ನರ್, ಖಾಸ್‌ಬಾತ್ ಇತ್ಯಾದಿ ಶೀರ್ಷಿಕೆಗಳನ್ನು ಆರಂಭಿಸಿದ್ದು ರವಿ ಬೆಳಗೆರೆ. ನಂತರ ಇದು ಎಲ್ಲ ಕಡೆಗೂ ವಿಶೇಷವಾಗಿ ಕನ್ನಡ ಸುದ್ದಿವಾಹಿನಿಗಳಿಗೆ ಹಬ್ಬಿತು. ಕ್ರೈಮ್ ಡೈರಿ, ಕ್ರೈಮ್ ಸ್ಟೋರಿಗಳ ಅಬ್ಬರದ ನಂತರವಂತೂ ಇಂಗ್ಲಿಷ್ ಹೆಸರುಗಳಿದ್ದರೆ ಮಾತ್ರ ಕಾರ್ಯಕ್ರಮ ಓಡುತ್ತವೆ ಎಂಬ ದರಿದ್ರ ಮೌಢ್ಯಕ್ಕೆ ವಾಹಿನಿಗಳು ಅಂಟಿಕೊಂಡವು.

ಮೂರನೆಯದಾಗಿ ಕನ್ನಡ ಸುದ್ದಿವಾಹಿನಿಗಳು ಬಳಸುವ ಭಾಷೆ ಅತ್ಯಂತ ಚಿಂತಾಜನಕ ಸ್ಥಿತಿಯಲ್ಲಿದೆ. ನಿರೂಪಕರು, ವರದಿಗಾರರು ಬಳಸುವ ಕನ್ನಡವನ್ನು ಗಮನಿಸಿದರೆ ನಿಜಕ್ಕೂ ಆಘಾತವಾಗುತ್ತದೆ. ಒಂದು ವಾಕ್ಯದಲ್ಲಿ ಕನಿಷ್ಠ ನಾಲ್ಕೈದಾದರೂ ಇಂಗ್ಲಿಷ್ ಪದಗಳನ್ನು ಬಳಸಲೇಬೇಕೆಂಬ ಹಠಕ್ಕೆ ಬಿದ್ದಂತೆ ಇವರುಗಳು ಮಾತನಾಡುತ್ತಾರೆ. ಕನ್ನಡ ಭಾಷೆಯ ಕುರಿತ ಪ್ರಾಥಮಿಕ ಜ್ಞಾನವೂ ಇಲ್ಲದವರೆಲ್ಲ ನಿರೂಪಕರು, ವರದಿಗಾರರಾಗಿರುವುದು ಇದಕ್ಕೆ ಕಾರಣ. ತಮಾಶೆಯೆಂದರೆ ಬಹುತೇಕ ಟಿವಿ ವರದಿಗಾರರು, ನಿರೂಪಕರಿಗೆ ತಪ್ಪಿಲ್ಲದಂತೆ ಒಂದು ಪ್ಯಾರಾ ಕನ್ನಡದಲ್ಲಿ ಬರೆಯಲೂ ಸಹ ಬರುವುದಿಲ್ಲ. ಚಾನಲ್‌ಗಳಲ್ಲಿ ಕೆಲಸ ಮಾಡುವವರಿಗೆ ಮಾತನಾಡುವುದಷ್ಟೇ ಗೊತ್ತಿದ್ದರೆ ಸಾಕು, ಬರೆಯಲು ಬರಬೇಕಿಲ್ಲ ಎಂಬ ವಾತಾವರಣ ಇದೆ. ಕನಿಷ್ಠ ತಮ್ಮ ಚಾನಲ್ ಕೆಲಸಗಾರರಿಗೆ ಕನ್ನಡ ಪ್ರಾಧ್ಯಾಪಕರಿಂದ ತರಬೇತಿ ಕೊಡುವ ಕೆಲಸವನ್ನೂ ಸಂಸ್ಥೆಗಳು ನಡೆಸುವುದಿಲ್ಲ. ಹೀಗಾಗಿ ಟಿವಿ ಚಾನಲ್‌ಗಳು ಮಾತಾಡಿದ್ದೇ ಕನ್ನಡ ಎನ್ನುವಂತಾಗಿದೆ.

ಕನ್ನಡ ರಾಜ್ಯೋತ್ಸವದ ದಿನ ಮುಖಕ್ಕೆ ಚಿತ್ರವಿಚಿತ್ರವಾಗಿ ಹಳದಿ ಕೆಂಪು ಬಣ್ಣ ಮೆತ್ತಿಕೊಂಡು, ಚಾನಲ್ ಲೋಗೋ ಪಕ್ಕದಲ್ಲಿ ಕನ್ನಡ ಬಾವುಟವನ್ನು ಪಟಪಟಿಸುವಂತೆ ಮಾಡಿದರೆ ಸಾಲದು, ಕನ್ನಡದ ಹೆಸರಿನಲ್ಲಿ ಚಾನಲ್ ನಡೆಸುತ್ತಿರುವ ಕಾರಣಕ್ಕಾದರೂ ಕನ್ನಡದ ನಿಜ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೆಲಸವನ್ನು ಈ ವಾಹಿನಿಗಳು ಮಾಡುವಂತಾಗಲಿ. ಇದು ರಾಜ್ಯೋತ್ಸವ ಸಂದರ್ಭದಲ್ಲಿ ಈ ವಾಹಿನಿಗಳಿಗೆ ನಮ್ಮ ವಿನಮ್ರ ಮನವಿ.

ಅಂದಹಾಗೆ, ಎಲ್ಲ ಸಂಪಾದಕೀಯದ ಓದುಗರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು.

9 comments:

  1. ಕನ್ನಡವೆಂದರೆ ಅದೊಂದು ಪರಂಪರೆ,ಬದುಕಿನದಾರಿ.ಆದರೆ ಇಂದು ಕನ್ನಡಕ್ಕೆ ಇಂತಹ ದು:ಸ್ಥಿತಿ ಬಂದಿರುವುದು ಅನಕ್ಷರಸ್ಥ ಸಮುದಾಯದಿಂದಲ್ಲ, ಬದಲಾಗಿ ಉನ್ನತ ವಿದ್ಯಾಭ್ಯಾಸ ಮಾಡಿರುವವರಿಂದಲೇ,ಕನ್ನಡಪರ ಕಾಳಜಿ ಬರೀ ನವೆಂಬರ್ 1 ಕ್ಕೆ ಮಾತ್ರ ಸೀಮಿತವಾಗಬಾರದಲ್ಲವೇ? ಕುವೆಂಪುರವರ ಕವನದಸಾಲು 'ಎಲ್ಲಾದರು ಇರು ಎಂತಾದರು ಇರು ಎಂದೆದಿಗೂ ನೀ ಕನ್ನಡವಾಗಿರು ಕನ್ನಡವಾಗಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ'ಎನ್ನುವಂತಾದಗ ಮಾತ್ರ ಕನ್ನಡ ಬೆಳೆಯುತ್ತದೆ ಉಳಿಯುತ್ತದೆ.

    ReplyDelete
  2. ಅಂದ ಹಾಗೇ ಕಿರುತೆರೆಯ ಸುದ್ದಿ ವಾಹಿನಿಗಳಲ್ಲಿ ಕೆಲಸ ಮಾಡುತ್ತಿರುವ ನವೆಂಬರ್ ಒಂದರ ವೀರ ಕನ್ನಡಿಗರು,ಕನ್ನಡತಿಯರಿಗೆ ಈ ಬರಹವನ್ನು ಇರುವಹಾಗೇ ಅರ್ಥ ಮಾಡಿಕೊಳ್ಳುವಷ್ಟಾದರೂ ಕನ್ನಡ ಬರುತ್ತೋ? ಯಾವುದಕ್ಕೂ ಇರಲಿ, ಕಂಗ್ಲಿಷ್ನಲ್ಲೋ ಅಥವಾ ಪೂತರ್ಾ ಇಂಗ್ಲಿಷ್ನಲ್ಲಿಯೇ ತಜರ್ುಮೆ ಮಾಡಿ ಹಾಕಿಬಿಡಬೇಕಿತ್ತು. ಅಟ್ಲೀಸ್ಟ್ ಆಗಲಾದರೂ ಅವರಿಗೆ ಅಂಡರ್ಸ್ಟ್ಯಾಂಡ್ ಆಗ್ತಿತ್ತೇನೋ?

    ReplyDelete
  3. ಇಂದಿನಿಂದ ಕನ್ನಡ ಸುದ್ಧಿ ಛಾನಲ್ ಗಳನ್ನು ನೋಡುವಾಗ ಕಿವಿಗೆ ಹೂ ಮುಡಿದುಕೊಂಡು ನೋಡಲು ನಿಧ೵ರಿಸಿದ್ದೇನೆ. ಬೆಳಿಗ್ಗೆ 8 ಗಂಟೆಯಲ್ಲಿ ಒಂದು ಚಾನಲ್ ಚಿತ್ರದುಗ೵ದ ಹಳ್ಳೀಖೇಡ್ ನಲ್ಲಿ ಎಂದು ದುರಂತದ ಸುದ್ಧಿಯನ್ನ ಬಿತ್ತರಿಸುತಿತ್ತು ಹಳ್ಳಿಖೇಡ್ ಇರುವುದು ಗುಲ್ಬಗಾ೵ ಜಿಲ್ಲೆಯಲ್ಲಿ. ನಂತರ ಸುವರಣ ಛಾನಲ್ 3 ಗಂಟೆಯ ಸುದ್ಧಿಯಲ್ಲಿ ಮೇಕೆ ನಾಲ್ಕು ಮರಿ ಹಾಕಿರುವ ವಿಷಯವನ್ನು ಕುರಿ ನಾಲ್ಕು ಮರಿ ಹಾಕಿದೆ ಎಂದು ಮೇಕೆ ಹಾಗೂ ಅದರ ಮರಿಗಳನ್ನ ತೋರಿಸುತ್ತಾ ವರದಿಗಾರ ಹಾಗೂ ನ್ಯೂಸ್ ರೀಡರ್ 10 ನಿಮಿಷ ಸುದ್ದಿಯನ್ನ ಚಚ್ಚಿ ಬೀಸಾಡಿದರು.(ಕುರಿ ಎನ್ನುವ ಶಬ್ಧ ಕನಿಷ್ಠ 50 ಬಾರಿ ಬಳಕೆಯಾಯ್ತು) ಇವರಿಗೆ ಕುರಿ ಮತ್ತು ಮೇಕೆ ವೈತ್ಯಾಸ ಗೊತ್ತಿಲ್ಲ ಅಂದರೆ, ಏನು ಮಾಡೋಣ? ಮೇಕೆ 4 ರಿಂದ6 ಮರಿಗಳನ್ನು ಹಾಕುವುದು ಸಹಜ. ಕುರಿ ಎರಡು ಮರಿಹಾಕೋದು ಸಹ ಸಹಜ. ಬಾಲ್ಯದಲ್ಲಿ ಮಂಡ್ಯದ ನನ್ನ ಹಳ್ಳಿಯಲ್ಲಿ ಎಮ್ಮೆ ಕುರಿ ಎಲ್ಲವನ್ನು ಮೇಯಿಸಿ ಬಂದ ನನ್ನಂತಹವನಿಗೆ ಇವುಗಳನ್ನು ಗಮನಿಸಿದಾಗ ನಗಬಾರದ ಜಾಗದಲ್ಲಿ ನಗಬೇಕೆನಿಸುತ್ತಿದೆ.

    ReplyDelete
  4. what to write? people in karnataka understand only englishkannda not just kannada!

    ReplyDelete
  5. ಮೊನ್ನೆ ಟಿವಿ9 ವಾಹಿನಿಯ ತಿರುಪತಿ ತಿಮ್ಮಪ್ಪನ ಜಾತಿಯ ಕುರಿತಾದ ಚರ್ಚೆಯಲ್ಲಿ ಪ್ರಸಿದ್ಧ ನಿರೂಪಕಿ ರಾಧಿಕಾರವರು ತಾವೇ ತೆಲುಗಿನಲ್ಲಿ ಮಾತಾಡಿ ಕನ್ನಡ ನಿರೂಪಕರೆಲ್ಲಾ ಅಧೀನ ಮನಸ್ಥಿತಿಯವರೆಂದು ನಿರೂಪಿಸಿಯೇ ಬಿಟ್ಟರು.. ಬೇರೆ ಯಾವುದೇ ಭಾಷೆಯ ಸುದ್ದಿ ವಾಹಿನಿಗಳಿಂದ ಕನ್ನಡ ನಿರೂಪಣೆಯನ್ನು ನಿರೀಕ್ಷಿಸಲಾಗುತ್ತದೆಯೇ...?

    ReplyDelete
  6. ಉತ್ತಮವಾದ ಲೇಖನ.. ಈ ಎಲ್ಲಾ ಲೇಖನಗಳನ್ನು ಯಾವುದಾದರೂ ದಿನ ಪತ್ರಿಕೆಗಳಲ್ಲಿ ಪ್ರಕಟಿಸಿದರೆ ಅಂತರ್ಜಾಲ ಉಪಯೋಗಿಸದವರಿಗೂ ಅನುಕೂಲವಾಗುತ್ತದೆ..

    ReplyDelete
  7. ಈ ಬಾರಿ ರಾಜ್ಯೋತ್ಸವ ಪ್ರಶಸ್ತಿಗಳನ್ನು ಕೆಲವು ಅ(ನ)ರ್ಹ ವ್ಯಕ್ತಿಗಳಿಗೂ ನೀಡಿದ್ದಾರೆ. ಈ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಿದರೆ ಒಳ್ಳೆಯದು..

    ReplyDelete
  8. ಕನ್ನಡ ಸುದ್ದಿವಾಹಿನಿಗಳ ಸಮಯ ಸಾಧಕತನ ಮತ್ತು ವೀಕ್ಷಕರನ್ನು ಸೆಳೆಯುವತಂತ್ರದ ಬಗ್ಗೆ ಚೆನ್ನಾಗಿ ತಿಳಿಸಿದ್ದೀರಿ... ನಿಮ್ಮ ಈ ಅಂಕಣ ತಲುಪಬೇಕಾದವರಿಗೆ ತಲುಪಲಿ ಅನ್ನೋದು ನಮ್ಮ ಹಾರೈಕೆ.. ಹಾಗೆ ಸ್ವಲ್ಪ ದಕ್ಷಿಣಕನ್ನಡ ಎಂಬ ಸ್ವಯಂಘೋಷಿತ ಬುದ್ದಿವಂತರ ಜಿಲ್ಲೆಯ ಮಾದ್ಯಮದ ಹುಳುಕಿನ ಬಗ್ಗೆ ಸ್ವಲ್ಪ ಬರೆಯಿರಿ.. ಯಾಕಂದ್ರೆ ಇಲ್ಲಿನ ಮಾಧ್ಯಮಗಳಷ್ಟು ಕೆಟ್ಟುಹೋಗಿರುವ ಕ್ಷೇತ್ರ ಇನ್ನೊಂದಿಲ್ಲ... ಇಲ್ಲಿನ ಪತ್ರಕರ್ತರೆಲ್ಲಾ ಹಣ ಮಾಡಬೇಕು ಎನ್ನುವ ಒಂದೇ ಉದ್ದೇಶದಿಂದ ಬಂದವರು... ಇಲ್ಲಿನ ಮಾಧ್ಯಮ ಕ್ಷೇತ್ರ ವೇಶ್ಯಾವಾಟಿಕೆಯಂತೆ ಆಗಿದೆ...

    ReplyDelete
  9. ವಲ್ಲಭ ದೇಸಾಯಿ....
    ಕನ್ನಡದ ಇಂದಿನ ಪತ್ರಿಕೆಗಳಲ್ಲಿ,ಸುದ್ದಿವಾಹಿನಿಗಳಲ್ಲಿ ಶುದ್ಧ ಕನ್ನಡವನ್ನು ಓದಿ,ಕೇಳಿ ಅದೆಷ್ಟು ತಿಂಗಳುಗಳಾದವೋ...ಶಾಸಕರ ಹೆಸರನ್ನು ಸುರೇಶಮಾರಿಹಾಳ ಇದ್ದವರನ್ನು ಶಂಕರನನ್ನಾಗಿ ಮಾಡಿ ಬಿಡುವ ಜನರು,ಬೀದರ ಜಿಲ್ಲೆಯಲ್ಲಿ ಬರುವ ಹಳ್ಳಿಖೇಡ ಗ್ರಾಮವನ್ನು ಈ ವರದಿಗಾರರು ಅನಾಮತ್ತಾಗಿ ಒಯ್ದು ಚಿತ್ರದುರ್ಗದಲ್ಲಿ ಒಗೆದು ಕೈ ಝಾಡಿಸಿಕೊಂಡು ಬಿಡುತ್ತಾರೆ..ಇವರನ್ನು ಹಿಡಿದು ಕೇಳುವವರಾರು..? ಇಂಥ ಸಾಲು ಸಾಲು ಅನಾಹುತಗಳನ್ನು ನೋಡುವದು,ಕೇಳುವದು ಬೇಡವಾದರೆ ಸುಮ್ಮನೆ ಈ ವಾಹಿನಿಗಳನ್ನು ಬದಲಿಸಿಬಿಡುವದೊಂದೆ ನಮ್ಮ ನಿಮ್ಮ ಮುಂದಿರುವ ಆಯ್ಕೆ...

    ReplyDelete