Friday, December 2, 2011

ಮಡೆಸ್ನಾನದ ಜತೆಗೆ ಪಂಕ್ತಿಭೇದವೂ ನಿಷೇಧವಾಗಬೇಕಲ್ಲವೇ?


ಮಡೆಸ್ನಾನದ ಬಗ್ಗೆ ಎದ್ದಿರುವ ವಿವಾದ ದೊಡ್ಡದಾಗಿ ಬೆಳೆಯುತ್ತಲೇ ಇದೆ. ಮಡೆಸ್ನಾನ ವಿರೋಧಿಸಿ ಪ್ರತಿಭಟನೆಗೆ ತೆರಳಿದ್ದ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಎಂಬ ಸಂಘಟನೆಯ ಶಿವರಾಮು ಮತ್ತು ಸಂಗಡಿಗರನ್ನು ಸುಬ್ರಹ್ಮಣ್ಯ ದೇವಸ್ಥಾನದ ಕೆಲವು ಗೂಂಡಾಗಳು ಹಿಡಿದು ಥಳಿಸಿದ್ದಾರೆ. ಈ ಅನಾಚಾರವನ್ನು ಖಂಡಿಸಿ ರಾಜ್ಯದ ಹಲವೆಡೆ ಪ್ರತಿಭಟನೆಗಳು ನಡೆದಿವೆ. ಮಡೆಸ್ನಾನವೆಂಬ ಅನಾಗರಿಕ ಆಚರಣೆಯನ್ನು ನಿಲ್ಲಿಸಬೇಕೆಂದು ಒತ್ತಾಯಿಸಿ ಡಿ.೫ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹಲವು ಸಂಘಟನೆಗಳು ಇಡೀ ದಿನದ ಪ್ರತಿಭಟನೆಯನ್ನು ನಡೆಸುತ್ತಿವೆ.

ಮಡೆಸ್ನಾನದ ಬಗ್ಗೆ ಸಂಪಾದಕೀಯದಲ್ಲೂ ಬರೆಯಿರಿ ಎಂದು ಹಲವು ಗೆಳೆಯರು ಹೇಳುತ್ತಿದ್ದಾರೆ. ಹಾಗೆ ನೋಡಿದರೆ ಜನವರಿ-ಫೆಬ್ರವರಿ ತಿಂಗಳಲ್ಲಿ ಇದೇ ಬ್ಲಾಗ್‌ನಲ್ಲಿ ಮಡೆಸ್ನಾನದ ಕುರಿತು ವಿಸ್ತ್ರತ ಚರ್ಚೆ ನಡೆದದ್ದನ್ನು ನೀವು ಗಮನಿಸಿರಬಹುದು. ಒಂದು ಪುಸ್ತಕಕ್ಕಾಗುವಷ್ಟು ಚರ್ಚೆ ಇಲ್ಲಿ ನಡೆದಿದೆ.

ಹೊಸದಾಗಿ ಈಗ ಶುರುವಾಗಿರುವ ಚರ್ಚೆಯಲ್ಲೂ ಹೊಸ ವಿಷಯಗಳೇನೂ ಇಲ್ಲ. ಮಡೆಸ್ನಾನ ಎನ್ನುವುದು ನಂಬಿಕೆಯನ್ನು ಆಧರಿಸಿ ನಡೆಯುವ ಸಂಪ್ರದಾಯ. ಅದನ್ನು ಆಚರಿಸುವವರಿಗೆ ಇಲ್ಲದ ಸಮಸ್ಯೆ ವಿರೋಧಿಸುವವರಿಗೆ ಯಾಕೆ ಎಂಬುದು ಹಲವರ ಪ್ರಶ್ನೆ. ಇದಕ್ಕಾಗಿ ಯಥಾಪ್ರಕಾರ ತರ್ಕದ ಸಮರ್ಥನೆಗಳು.

ಮಡೆಸ್ನಾನದ ವಿಷಯ ಜಾತಿಯನ್ನು ಮೀರಿದ್ದು. ಬ್ರಾಹ್ಮಣರು ತಿಂದ ಎಂಜಲೆಲೆಗಳ ಮೇಲೆ ಇತರ ಜಾತಿಗಳ ಜನರು ಹೊರಳಾಡುವುದು ನಡೆದುಕೊಂಡು ಬಂದಿರುವ ಕೊಳಕು ಸಂಪ್ರದಾಯ. ಹಾಗಂತ ಲಿಂಗಾಯತರು, ಒಕ್ಕಲಿಗರು ಅಥವಾ ಇನ್ಯಾವ ಜಾತಿಯವರು ಉಂಡ ಎಲೆಗಳ ಮೇಲೂ ಇತರ ಜಾತಿಗಳು ಹೊರಳಾಡುವಂತಾಗಬಾರದು. ಮಡೆಸ್ನಾನದಲ್ಲಿ ಭಾಗವಹಿಸುವವರು ಮಲೆಕುಡಿಯ ಎಂಬ ಜಾತಿಯವರೇ ಹೆಚ್ಚು ಎಂಬ ಮಾಹಿತಿ ಇದೆ. ಆದರೆ ಇತ್ತೀಚಿಗೆ ಎಲ್ಲ ಜಾತಿಯವರೂ ಈ ಹೀನ ಆಚರಣೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಅದರಲ್ಲಿ ಸ್ವತಃ ಬ್ರಾಹ್ಮಣರೂ ಇದ್ದಾರೆ ಎಂಬ ಮಾತುಗಳೂ ಇವೆ.

ತಾವು ಉಂಡೆದ್ದ ನಂತರ ತಮ್ಮ ಎಂಜಲೆಲೆಯ ಮೇಲೆ ಮನುಷ್ಯರು ಉರುಳಾಡುತ್ತಾರೆ ಎಂಬ ವಿಷಯ ಉಂಡವರಿಗೇ ಹೇವರಿಕೆ ಹುಟ್ಟಿಸಬೇಕು. ತಮ್ಮ ಎಂಜೆಲೆಲೆಯ ಮೇಲೆ ಕೆಳಜಾತಿಯವರು ಉರುಳಾಡಿದರೆ ಅದು ಯಾವ ಗೌರವವನ್ನೂ, ಹೆಮ್ಮೆಯನ್ನೂ ತರಲಾರದು ಎಂದು ಅವರಿಗೆ ಅನ್ನಿಸಬೇಕು. ತದನಂತರ ಉರುಳಾಡಿದವರಿಗೆ ಅದು ಅಸಹ್ಯ ಎನ್ನಿಸಬೇಕು. ಇಲ್ಲಿ ಉರುಳಾಡುತ್ತಿರುವವರಿಗೆ ಅದು ತಮಗೆ ಯಾವುದೋ ಸಮಸ್ಯೆಯನ್ನು ನಿವಾರಿಸುವ ಸಂಪ್ರದಾಯವಾಗಿ ಕಾಣಿಸಿರುವುದೇ ದುರಂತ.

ಎಂಜಲೆಲೆಗಳಿಗೆ ಔಷಧೀಯ ಗುಣವಿರುತ್ತದೆ, ಖಾಯಿಲೆ ಗುಣಪಡಿಸುತ್ತದೆ ಎಂಬ ಮೌಢ್ಯವೂ ಇಲ್ಲಿನ ಜನರಲ್ಲಿದೆ. ಹಾಗೆ ಎಂಜಲೆಲೆಗಳಿಗೆ ಔಷಧೀಯ ಗುಣಗಳಿದ್ದರೆ ಕಲ್ಯಾಣಮಂಟಪಗಳಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳ ನಂತರ ಉಂಡ ಎಲೆಗಳ ಮೇಲೆ ಜನರೇಕೆ ಉರುಳಾಡುವುದಿಲ್ಲ? ಅಷ್ಟೇಕೆ ತಮ್ಮದೇ ಮನೆಯಲ್ಲಿ ಒಬ್ಬರು ತಿಂದುಂಡ ಎಲೆಯ ಮೇಲೆ ಇನ್ನೊಬ್ಬರು ಉರುಳಾಡಬಹುದಲ್ಲವೇ?

ವಾದ-ವಿವಾದಗಳು ಏನೇ ಇರಲಿ, ಮಡೆಸ್ನಾನ ಹಿಂದೆ ದೇವಸ್ಥಾನಗಳ ಮುಂದೆ ನಡೆಯುತ್ತಿದ್ದ ಬೆತ್ತಲೆ ಸೇವೆಯಷ್ಟೆ ಅಸಹ್ಯ. ಬೆತ್ತಲೆ ಸೇವೆ ನಿಷೇಧವಾದ ಮೇಲೆ ಮಡೆಸ್ನಾನವೂ ನಿಷೇಧವಾಗಬೇಕು.

ಅದಕ್ಕೂ ಮುನ್ನ ದೇವಸ್ಥಾನಗಳಲ್ಲಿ ನಡೆಯುವ ಪಂಕ್ತಿಭೇದ ನಿಷೇಧವಾಗಬೇಕು. ಬ್ರಾಹ್ಮಣರಿಗೊಂದು ಪಂಕ್ತಿ, ಬ್ರಾಹ್ಮಣೇತರರಿಗೆ ಒಂದು ಪಂಕ್ತಿಯಲ್ಲಿ ಊಟ ಬಡಿಸುವ ಸಂಪ್ರದಾಯ ಕರ್ನಾಟಕದ ಹಲವಾರು ದೇವಸ್ಥಾನಗಳಲ್ಲಿವೆ. ಸರ್ಕಾರದ ಅಧೀನದಲ್ಲಿರುವ ಮುಜರಾಯಿ ಇಲಾಖೆ ವ್ಯಾಪ್ತಿಗೆ ಬರುವ ದೇವಸ್ಥಾನಗಳಲ್ಲೂ ಈ ನೀಚ ಸಂಪ್ರದಾಯ ಜಾರಿಯಲ್ಲಿದೆ. ಇದು ಅನಾಗರಿಕ ಮಾತ್ರವಲ್ಲ, ಸಂವಿಧಾನ ವಿರೋಧಿಯೂ ಹೌದು. ಇದನ್ನು ಸಾಂಪ್ರದಾಯಿಕ ಪಂಕ್ತಿ, ಸಾರ್ವಜನಿಕ ಪಂಕ್ತಿ ಎಂದು ಪೇಜಾವರ ಸ್ವಾಮೀಜಿಯವಂಥವರು ಸಮರ್ಥಿಸಿಕೊಳ್ಳುತ್ತಾರೆ. ಸಾರ್ವಜನಿಕ ಸ್ಥಳಗಳಲ್ಲಿ ಒಟ್ಟಿಗೆ ಕುಳಿತು ಊಟ ಮಾಡುವಷ್ಟು ಸಹಬಾಳ್ವೆ ನಮ್ಮಿಂದ ಸಾಧ್ಯವಾಗದಿದ್ದರೆ ಮನುಷ್ಯರಾಗಿದ್ದುಕೊಂಡು ಪ್ರಯೋಜನವೇನು?

ಮಡೆಸ್ನಾನ-ಪಂಕ್ತಿಭೇದದಂಥ ಸಂಪ್ರದಾಯಗಳು ಇವತ್ತಿನ ದಿನಮಾನದಲ್ಲಿ ಸಾಕಷ್ಟು ಬ್ರಾಹ್ಮಣರಿಗೇ ಮುಜುಗರ ಹುಟ್ಟಿಸುವ ಆಚರಣೆಗಳು. ಇದನ್ನು ಮಾನವಂತ ಬ್ರಾಹ್ಮಣರು ಒಪ್ಪುವುದೂ ಇಲ್ಲ. ಪಂಕ್ತಿಭೇದದ ಕಾರಣಕ್ಕೆ ದೇವಸ್ಥಾನಗಳಲ್ಲಿ ಊಟ ಮಾಡದೇ ಹೊರಬರುವ ಜೀವಪರ ಬ್ರಾಹ್ಮಣರೂ ಇದ್ದಾರೆ. ಹಾಗೆಯೇ ಪಂಕ್ತಿಭೇದದ ಕಾರಣಕ್ಕೆ ಪ್ರತಿಭಟನಾರ್ಥವಾಗಿ ಈ ದೇವಸ್ಥಾನಗಳಲ್ಲಿ ಊಟ ಮಾಡದ ಶೂದ್ರರೂ ಇದ್ದಾರೆ.

ಇದೆಲ್ಲವನ್ನೂ ಜಾತಿಯ ಚೌಕಟ್ಟಿನಿಂದ ಮೀರಿ ನೋಡಿದಾಗ ಮಾತ್ರ ನಮ್ಮೊಳಗಿನ ಮಾನವೀಯತೆ ಎದ್ದುನಿಲ್ಲಬಹುದು. ವರ್ಣಾಶ್ರಮದ ಕಾಲ ಆಗಿಹೋಗಿದೆ. ಇನ್ನೂ ಅದೇ ಅಸಹ್ಯದಲ್ಲಿ ಜೋತು ಬೀಳುವುದು ಬ್ರಾಹ್ಮಣರಿಗಾಗಲೀ, ಶೂದ್ರರಿಗಾಗಲೀ ಶ್ರೇಯಸ್ಕರವಲ್ಲ. ಅದು ಯಾವ ಜಾತಿ-ಜನಾಂಗವನ್ನೂ ಪುರೋಗಾಮಿಯಾಗಿ ಬೆಳೆಸುವುದಿಲ್ಲ.

ಮನುಷ್ಯ-ಮನುಷ್ಯರಲ್ಲಿ ಕಂದಕ ಮೂಡಿಸುವ ನೀಚ ಆಚರಣೆಗಳನ್ನು ಸರ್ಕಾರ-ಸಮಾಜ ಕಿತ್ತುಹಾಕದ ಹೊರತು ಇಂಥವುಗಳಿಂದ ಬಿಡುಗಡೆಯೂ ಇಲ್ಲ. ಮಡೆಸ್ನಾನದ ಪ್ರಸ್ತಾಪ ಆಗುತ್ತಿರುವ ಈ ಹೊತ್ತಿನಲ್ಲಿ ರಾಜ್ಯದ ಎಲ್ಲ ದೇವಸ್ಥಾನಗಳಿಂದ ಪಂಕ್ತಿಭೇದದ ಅನಿಷ್ಠವನ್ನೂ ಅಳಿಸುವ ಸಂಬಂಧ ಬ್ರಾಹ್ಮಣ-ಶೂದ್ರಾದಿ ಜಾತಿಗಳ ಜನರು ಚಿಂತಿಸಬೇಕಿದೆ. ಪಂಕ್ತಿಭೇದವೂ ಅಸ್ಪೃಶ್ಯತೆಯ ಪರೋಕ್ಷ ಆಚರಣೆಯಾದ್ದರಿಂದ ಅದಕ್ಕೆ ಸಂವಿಧಾನ ವಿರೋಧಿಯೂ ಆಗುತ್ತದೆ. ಹೀಗಾಗಿ ಅದನ್ನೂ ಕಿತ್ತುಹಾಕುವ ಕೆಲಸ ಶೀಘ್ರವೇ ಆಗಬೇಕಿದೆ.

18 comments:

  1. "ಮಡೆಸ್ನಾನ ಏಕೆ ಕೂಡದು" ಎಂಬ೦ಥ ಲೇಖನವನ್ನು ಈಗ "ದೊಡ್ಡವರು" ಬರೆಯಲಾರರು. ಅವರಿಗೆ ಆಗ ಅಂಥ ತರ್ಕಗಳನ್ನು ಕಲಿಸಿದ್ದ ಯೂರೋಪಿಗೆ ಆಗ ಭಾರತ ಮತ್ತು ಆಫ್ರಿಕಾದ ದೇಶಗಳು ಇಂಥ ದರಿದ್ರ ಆಚರಣೆಗಳನ್ನು ಸ್ಟಡಿ ಮಾಡುವ ಕೇಂದ್ರಗಳಾಗಿದ್ದವು. ಇವರುಗಳು ಅಲ್ಲಿಂದ ಕಲಿತು ಬಂದು ಇಲ್ಲಿ ಅವನ್ನಿಟ್ಟುಕೊಂಡು ಜೋಲಾಡುತ್ತಿದ್ದರು. ಈಗ ಯೂರೋಪು ಬದಲಾಗಿ ಇದೇ ದೇಶಗಳು ತಮ್ಮ ಮಾರ್ಕೇಟುಗಳು ಹೇಗಾಗಬಹುದೆಂದು ಯೋಚಿಸುತ್ತದೆ. ಆ ಕಾಲದಲ್ಲಿ ಯೂರೋಪಿನಿಂದ ಸಾಹಿತ್ಯ ಕಲಿತುಬಂದ ಇವರಂಥವರು ಈ ಆಚರಣೆಗಳನ್ನು ವಿರೋಧಿಸದೇ ತರ್ಕಗಳಲ್ಲಿ ಮಜ ಕಂಡರು. ಈಗಿನ ತಲೆಮಾರು ಯೂರೋಪು, ಅಮೇರಿಕಾಗಳಲ್ಲಿ ಮಾರ್ಕೇಟಿಂಗ್ ಕಲಿತು ಬಂದು ದೇಶದ ರೈತರು, ಸಣ್ಣ ಮಾರಾಟಗಾರರು, ಮತ್ತು ಸಾಮಾನ್ಯರನ್ನ ಈ ದೇಶಗಳಿಗೆ ಒತ್ತೆ ಇಡುತ್ತ ತಾನು ಬೆಳೆಯುತ್ತಿದೆ. ಈ ಹಳೆಯ ಯೂರೋ-ಸಾಹಿತಿಗಳಿಗೂ, ಹೊಸ ಡಾಲರ್-ಸಿ.ಇ.ಓ ಗಳಿಗೂ ಅಂಥ ವ್ಯತ್ಯಾಸ ಕಾಣುತ್ತಿಲ್ಲ. ಇಂಥ ವಿಷಯಗಳಲ್ಲಿ ನಮ್ಮ ದೇಶದ ಸಮಸ್ಯೆ ಎಂದರೆ, ನಮ್ಮ ಆಕ್ಟಿವಿಸ್ಟ್ ಗಳು ಇವತ್ತಿಗೂ ಈ ಸಾಹಿತಿ ಸಂತಾನಿಗಳ ಮನ್ನಣೆಯಿಲ್ಲದೇ ತಮ್ಮ ಚಿಂತನೆಗಳನ್ನು ಕಾರ್ಯರೂಪಕ್ಕಿಳಿಸಲು ಹೆಣಗುತ್ತಿರುವುದು. ಬಹುಷಃ ಈ ಎಲ್ಲರನ್ನೂ ತೇಜಸ್ವಿ ಒಂದೇ ಮಾತಿನಲ್ಲಿ ಎಂದೋ ಬದಿಸರಿಸಿದ್ದರು: " ಯೂನಿವರ್ಸಿಟಿ ಸಾಹಿತಿಗಳೆಂದು". ಈ ಜ್ವಲಂತ ರಗಳೆಗಳಿಗೆ ನಾವೂ ಇವರ ಮನ್ನಣೆಯನ್ನು ಬದಿಸರಿಸಿ ಹೋರಾಡಬೇಕಾದ್ದು ಮುಖ್ಯ. ಕನಿಷ್ಟ ನಮ್ಮ ಮಾನವತೆಯನ್ನಾದರೂ ಇತಿಹಾಸ ಆಗ ದಾಖಲಿಸಿಕೊಳ್ಳುತ್ತದೆ.

    ReplyDelete
  2. ಸಾಂಪ್ರದಾಯಿಕ ಪಂಕ್ತಿ, ಸಾರ್ವಜನಿಕ ಪಂಕ್ತಿ ಎಂಬುದು ಇರುವುದು ನಿಜ. ಅದು ಸಮರ್ಥನೆ ಅಲ್ಲ. ಬ್ರಾಹ್ಮಣ ಸಮುದಾಯದವರ ಕಾರ್ಯಕ್ರಮಗಳಲ್ಲೇ ಈ ಎರಡು ಭೋಜನ ಪಂಕ್ತಿ ಗಳು ಏಕ ಕಾಲದಲ್ಲಿ ನಡೆಯುತ್ತವೆ. ಅಂದರೆ ಬ್ರಾಹ್ಮಣ ರಲ್ಲೇ ಕೆಲವರು ಮಾತ್ರ ಮುಖ್ಯವಾಗಿ ಪುರೋಹಿತರು, ವಯೋ ವೃದ್ಧರು, ಮತ-ಪೀಠ ದಿಪತಿಗಳು, ಈ ಸಾಂಪ್ರದಾಯಿಕ ಪಂಕ್ತಿ ಯ ಭೋಜನ ಕ್ಕೆ ಭಾಜನ ರಾಗುತ್ತಾರೆ. ಉಳಿದವರು ಅಂದರೆ, ಉಳಿದ ಎಲ್ಲಾ ಬ್ರಾಹ್ಮಣ ಜನರು ಸಾರ್ವಜನಿಕ ಪಂಕ್ತಿ ಯಲ್ಲಿ ಉಪಸ್ಥಿತರಿರುತ್ತಾರೆ. ಈ ಸಾರ್ವಜನಿಕ ಪಂಕ್ತಿಯಲ್ಲಿ ನೀವು ಪ್ರಸ್ತಾಪಿಸಿದ ಉಳಿದ ಎಲ್ಲ ಜಾತಿಯವರು ,ಕೂಡ ಬ್ರಾಹ್ಮಣ ರ ಜೊತೆ ಊಟದಲ್ಲಿ ಪಾಲ್ಗೊಳ್ಳುತ್ತಾರೆ. ಇದು ಸಹಜವಾಗಿ ನಡೆದು ಬರುತ್ತಿರುವ ಕ್ರಮ. ಇದು ಕೇವಲ ನಮ್ಮ ಕೆಲವು ದೇವಸ್ಥಾನ ಗಳಲ್ಲಿ ಮಾತ್ರ ಅಲ್ಲ. ಪ್ರತಿ ಜಾತಿಯ , ಪ್ರತಿ ಮನೆ ಮನೆ ಯ ಶುಭ ಕಾರ್ಯ ಗಳಲ್ಲೂ ಹೀಗೆ ನಡೆಯುತ್ತದೆ. ಅಂದರೆ ಇದರ ಅರ್ಥ , ಇದು ಜಾತಿ ಆಧರಿಸಿದ ವಿಂಗಡಣೆ ಅಲ್ಲ. ಬದಲಾಗಿ ಆಯಾ ಜಾತಿ ಯ ಶಿಷ್ಟಾಚಾರ, ಸಂಪ್ರದಾಯ , ಧಾರ್ಮಿಕ ವಿಧಿ ವಿಧಾನಗಳನ್ನು ಆಧರಿಸಿದ ವಿಂಗಡಣೆ. ಇದನ್ನು ತಾವು ತಿಳಿದವರಲ್ಲಿ ಕೇಳಿ ಖಚಿತ ಪಡಿಸಿ ಕೊಳ್ಳ ಬಹುದು. ಈ ಸಾಂಪ್ರದಾಯಿಕ ಪಂಕ್ತಿ ಎನ್ನುವುದು ನಮ್ಮ ದೇಶದ ಎಲ್ಲ ಜಾತಿಯವರಲ್ಲೂ ಇದೆ. ಮುಖ್ಯವಾಗಿ ಲಿಂಗಾಯಿತರಲ್ಲಿ ಕೂಡ ಈ ಆಚರಣೆ ಚಾಲ್ತಿಯಲ್ಲಿದೆ. ಲಿಂಗಾಯಿತ ಜಾತಿಗೆ ಸೇರಿದ ಅಯ್ಯನವರು ಎಂದು ಹೇಳಲಾಗುವ, ಸಾಂಪ್ರದಾಯಿಕ ಪುರೋಹಿತರು, ಮಠ ದಿ ಪತಿಗಳು ಇವರನ್ನು ಕೂಡ ಅತಿ ಗೌರವದಿಂದ ಪ್ರತ್ಯೇಕ ಪಂಕ್ತಿ ಯಲ್ಲಿ ಭೋಜನ ಕ್ಕೆ ಕೂರಿಸುವುದಿಲ್ಲವೇ? ಅವರೊಡನೆ ಸಹ ಪಂಕ್ಕ್ತಿಗೆ ಸಾಮಾನ್ಯ ಲಿಂಗಾಯತರು ಕೂರುತ್ತಾರೆಯೇ? ಅಂತೆಯೇ ಇದು.
    -ಅನಿತಾ ರಂಗನಾಥ್

    ReplyDelete
  3. God treat everyone equally.
    Why temples and gurus are dividing us?

    ReplyDelete
  4. ಮಡೆಸ್ನಾನದ ಬಗ್ಗೆ ಬಂದ ಲೇಖನಗಳಲ್ಲಿ ಇದು ಅತ್ಯುತ್ತಮವಾದದ್ದು, ಅಭಿನಂದನೆಗಳು.

    ReplyDelete
  5. ಮಡೆಸ್ನಾನದ೦ತಹ ಅನಿಷ್ಟ ಪದ್ಧತಿಯನ್ನು ಆಚರಣೆಯಲ್ಲಿಟ್ಟು, ಅದನ್ನು ವಿರೋಧಿಸುತ್ತಿರುವವರ ಮೇಲೆ ತನ್ನ ನೌಕರರಿ೦ದಲೇ ಗೂ೦ಡಾಗಿರಿ ಮಾಡಿಸಿರುವ ಸುಬ್ರಹ್ಮಣ್ಯ ದೇಗುಲದ ಆಡಳಿತ ಮ೦ಡಳಿ ಏಕಿನ್ನೂ ಮೌನವಾಗಿದೆ? ಜನರಲ್ಲಿ ಜಾಗೃತಿ ಮೂಡಿ ಈ ಅನಿಷ್ಟ ಪದ್ಧತಿ ತೊಲಗುವವರೆಗೂ ಆ ದೇವಾಲಯಕ್ಕೆ ನಾವು ಪ್ರಮೇಶಿಸುವುದಿಲ್ಲವೆ೦ಬ ಸ೦ಕಲ್ಪ ಮಾಡಿ ಬಹಿಷ್ಕರಿಸಬೇಕು. ಆಗ ಈ ಪದ್ಧತಿ ತ೦ತಾನೇ ನಿಲ್ಲಬಹುದು. ವೈಯಕ್ತಿಕವಾಗಿ ಈ ಎ೦ಜಲೆಲೆಯ ಮೇಲೆ ಉರುಳಾಡುವ ಪದ್ಧತಿ ನನ್ನ ಅ೦ತಃಸ್ಸಾಕ್ಷಿಗೆ ವಿರುದ್ಧವಾಗಿರುವುದರಿ೦ದ ಈ ಪದ್ಧತಿ ನಿಲ್ಲುವವರೆಗೂ ನಾನ೦ತೂ ಆ ದೇಗುಲಕ್ಕೆ ಕಾಲಿಡುವುದಿಲ್ಲ. ಇದು ಸುಬ್ರಹ್ಮಣ್ಯ ದೇಗುಲಕ್ಕೆ ನನ್ನ ವೈಯಕ್ತಿಕ ಬಹಿಷ್ಕಾರ. ಪ್ರಜ್ಞಾವ೦ತರು ಅನ್ನಿಸಿಕೊ೦ಡವರೆಲ್ಲರೂ ಇದೇ ರೀತಿ ಬಹಿಷ್ಕರಿಸಲೆ೦ದು ನನ್ನಾಸೆ.

    ReplyDelete
  6. ಹೀನ ಆಚರಣೆಗಳಿಗೆ ನನ್ನ ವೈಯಕ್ತಿಕ ವಿರೋಧವಿದೆ. ಇದನ್ನೆಲ್ಲಾ ಸಮರ್ಥಿಸಿಕೊಳ್ಳುವದರಲ್ಲಿ ಅರ್ಥವಿಲ್ಲ. ಇಂತಹ ವೈಜ್ಞಾನಿಕಯುಗದಲ್ಲೂ ಇಂತಹ ಹೀನ ಆಚರಣೆಗಳು ಉಳಿದಿವೆಲಲ್ಲಾ!!

    ReplyDelete
  7. ತುರುವೇಕೆರೆ ಬೇಟೆರಾಯ ಸ್ವಾಮಿ ದೇವಸ್ತಾನದಲ್ಲಿ (ವಿಷ್ಣುವಿನ ದೇವಸ್ತಾನ ) ಶತಮಾನಗಳಿಂದ ಕೆಳವರ್ಗದವರ ಉಂಡೆಲೆ ಮೇಲೆ ಬ್ರಾಹ್ಮಣರ ಮಡೆಸ್ನಾನ ಆಚರಣೆ.....
    ಯಾಕೆ ಯಾರು ಇದುವರೆಗೆ ಇದನ್ನು ಪ್ರಸ್ತಾಪಿಸಿಲ್ಲ?

    ReplyDelete
  8. ಬ್ರಾಹ್ಮಣರಿಗೆ ದೇವಸ್ಥಾನಗಳಲ್ಲಿ ಪ್ರತ್ಯೇಕ ಪಂಕ್ತಿಭೇದ ಮಾತ್ರವಲ್ಲದೆ ಊಟಕ್ಕೆ ಬಡಿಸುವ ಪದಾರ್ಥಗಳಲ್ಲೂ ಭೇದ ಮಾಡಲಾಗುತ್ತದೆ. ಸಾಮಾನ್ಯರಿಗೆ ಒಂದು ನೀರು ಸಾಂಬಾರು, ಒಂದು ಪಲ್ಯ, ನೀರು ಮಜ್ಜಿಗೆ, ಉಪ್ಪಿನಕಾಯಿ ಅಷ್ಟೇ. ಬ್ರಾಹ್ಮಣರಿಗೆ ವಿವಿಧ ಬಗೆಯ ಪದಾರ್ಥಗಳನ್ನು ಬಡಿಸಲಾಗುತ್ತದೆ ಮಾತ್ರವಲ್ಲದೆ ಪಾಯಸ ಹಾಗೂ ಕೆಲವು ವಿಶೇಷ ಸಂದರ್ಭಗಳಲ್ಲಿ ಸಿಹಿಯನ್ನೂ ಬಡಿಸಲಾಗುತ್ತದೆ. ಇಂಥ ತಾರತಮ್ಯ ಎಷ್ಟರ ಮಟ್ಟಿಗೆ ಸಮಂಜಸ? ದೇವರ ಎದಿರು ಮೇಲು ಕೀಳು ಎಂಬ ಭೇದ ಏಕೆ? ಬ್ರಾಹ್ಮಣರು ಹೊಟೇಲುಗಳಲ್ಲಿ ಎಲ್ಲರ ಜೊತೆ ಊಟ ಮಾಡುವುದಿಲ್ಲವೇ? ಹೊಟೇಲುಗಳಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಮೇಜಿನ ವ್ಯವಸ್ಥೆ ಮಾಡುತ್ತಾರೆಯೇ? ಹೀಗಿರುವಾಗ ದೇವಸ್ಥಾನಗಳಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಭೋಜನ ವ್ಯವಸ್ಥೆ ಎಷ್ಟರ ಮಟ್ಟಿಗೆ ಸಮಂಜಸ? ಹಿಂದೂಗಳು ನಾವೆಲ್ಲರೂ ಒಂದು ಎಂಬ ಘೋಷಣೆ ಮೊಳಗಿಸುವವರು ಈ ಭೇದಭಾವದ ಬಗ್ಗೆ ಏಕೆ ದ್ವನಿ ಎತ್ತುವುದಿಲ್ಲ?

    ReplyDelete
  9. ಜಾತಿ ಆಧಾರಿತ ಮೀಸಲಾತಿಗೂ, ಪಂಕ್ತಿಭೇದಕ್ಕೂ ಹೆಚ್ಚು ವ್ಯತ್ಯಾಸವೇನಿಲ್ಲ ಅನ್ನಿಸುತ್ತದೆ. ಆಚರಣೆಯ ರೀತಿಗಳು, ಮಟ್ಟಗಳು ಬೇರೆ ಬೇರೆ ಅಷ್ಟೆ.!

    ReplyDelete
  10. The basic thing is : a person does such a thing only because he doesn't have other options(So he tries whichever path to get rid of problems he facing)). He just want to get solution. no matter of what he is doing.

    My opinion is that everybody(including me, other commentators and everyone) will understand the "SAMPRADAYA"s only when they undergo and experience the change.
    The ancients were scientifically more advanced than us.

    One day, in life everybody will get to know

    ReplyDelete
  11. ಈ ದೇಶದ ಅತ್ಯಂತ ದೊಡ್ಡ ಸವಾಲು,ಆಧುನಿಕ "ನವ ಬ್ರಾಹ್ಮಣರ" ಧಾರ್ಮಿಕ-ರಾಜಕೀಯ ಹಿತಾಸಕ್ತಿ ಪೋಷಣೆಯ ಹುನ್ನಾರ! ಇವರಲ್ಲಿ ದುಡ್ಡಿದೆ-ವಿದ್ಯೆಯಿದೆ-ವಾದಕ್ಕೆ ತಕ್ಕಷ್ಟು ಆಧುನಿಕ ಭಾಷೆಯಿದೆ.ಎಲ್ಲಕ್ಕಿಂತ ಹೆಚ್ಚಾಗಿ ಕೆಟ್ಟು ಕೆರ ಹಿಡಿದ ವಿಷಮಯ ಮೆದುಳಿದೆ!ಇವರ ಅಟ್ಟಹಾಸ ನೋಡಬೇಕಿದ್ದರೆ ಸಾಮಾಜಿಕ ತಾಣಗಳನ್ನೊಮ್ಮೆ ಜಾಲಾಡಬೇಕು.
    ಮಡೆಸ್ನಾನದ ಇಶ್ಶೂಆಗಲೇ ಒಂದು ರಾಜಕೀಯದ ರೂಪ ಪಡೆದಿರುವುದರ ಹಿಂದೆ ಈ ಹಿತಾಸಕ್ತಿಯ ನೆರಳು ನಿಚ್ಚಳವಾಗಿದೆ.

    ReplyDelete
  12. ಹಿಂದಿನ ಕಾಲದಲ್ಲಿ "ಭವತಿ ಭಿಕ್ಷಾಂ ದೇಹಿ" ಎನ್ನುತ್ತಾ ಹಸಿದು ಬರುವವನು ಬ್ರಾಹ್ಮಣ. ಹಸಿದು ಬಂದ ಬ್ರಾಹ್ಮಣನಿಗೆ ಊಟ ಹಾಕಿದರೆ ಪುಣ್ಯ ಹೆಚ್ಚು ಎಂಬ ನಂಬಿಕೆಯಿಂದ ಬ್ರಾಹ್ಮಣ ಊಟದ ಪಂಕ್ತಿ ಹುಟ್ಟಿರಬಹುದು ಎಂದು ಅನಿಸಿಕೆ. ಸದ್ಯ ಹಸಿದಿರುವ ಬ್ರಾಹ್ಮಣ ಸಿಗುವ ಲಕ್ಷಣಗಳು ಕಡಿಮೆ ಅಥವಾ ಹಸಿದ ಬ್ರಾಹ್ಮಣನಿಗೆ ಊಟ ಸಿಗುವ ಅವಕಾಶಗಳು ಕಡಿಮೆ. ಇಂಥದ್ದರಲ್ಲಿ ಪಂಕ್ತಿ ಬೇಧದ ಅವಶ್ಯಕತೆಯಿಲ್ಲ ಎಂದು ನನ್ನ ಅನಿಸಿಕೆ.ಬ್ರಾಹ್ಮಣರೇ ಇದನ್ನು ಬಹಿಷ್ಕರಿಸಿ ಸಾರ್ವಜನಿಕ ಪಂಕ್ತಿಯಲ್ಲಿ ಕೂರುವುದು ಉತ್ತಮ.

    ReplyDelete
  13. ಕನ್ನಡ ಪ್ರಭ ಮುಖಪುಟ ನೋಡಿದಿರ?
    ‘‘ಇಲ್ಲಿ ಕೆಳವರ್ಗದವರ ಉಂಡೆಲೆ ಮೇಲೆ ಬ್ರಾಹ್ಮಣರ ಮಡೆಸ್ನಾನ!’’ ಎಂಬ ತಲೆಬರಹದಲ್ಲಿ ಲೀಡ್ ಸುದ್ದಿಯೊಂದನ್ನು ಕನ್ನಡ ಪ್ರಭದ ಮುಖಪುಟದಲ್ಲಿ ಪ್ರಕಟಿಸಲಾಗಿದೆ. ತುರುವೇ ಕೆರೆ ಬೇಡೆರಾಯ ಸ್ವಾಮಿ ದೇವಾಲಯದಲ್ಲಿ ಶತಮಾನಗಳಿಂದ ಈ ಆಚರಣೆ!! ಹೆಡ್ಡಿಂಗ್‌ನ ಕೆಳಗಡೆ ಹೀಗೊಂದು ಕ್ಲಿಕ್ಕರ್. ಅಂದಹಾಗೆ ಇದನ್ನು ವರದಿ ಮಾಡಿದವರು ‘ಉಗಮ ಶ್ರೀನಿವಾಸ್’.
    ಇಡೀ ವರದಿ ಪರೋಕ್ಷವಾಗಿ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿರುವ ಮಡೆಸ್ನಾನವನ್ನು ಸಮರ್ಥಿಸಲೆಂದೇ ತಯಾರಾಗಿರುವುದು ಎನ್ನುವುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. ಆದರೂ ವರದಿಯ ಸತ್ಯಾಂಶದ ಕುರಿತಂತೆ ನನ್ನ ತುಮಕೂರಿನ ಗೆಳೆಯರಲ್ಲಿ ವಿಚಾರಿಸಿದೆ. ಅವರು ಹೇಳಿದ ಸತ್ಯವನ್ನು ಕೇಳಿ ದಂಗಾದೆ.
    ತುಮಕೂರಿನ ನನ್ನ ಗೆಳೆಯ ರಂಗರಾಜು ಇಡೀ ವರದಿ ಸುಳ್ಳು ಎಂದು ಒಂದೇ ವಾಕ್ಯದಲ್ಲಿ ಅಲ್ಲಗಳೆದರು. ಮತ್ತು ಅಲ್ಲಿ ನಿಜಕ್ಕೂ ನಡೆಯುತ್ತಿರುವುದು ಏನೂ ಎನ್ನುವುದನ್ನು ಅವರೇ ಕೆಳಗಿನಂತೆ ವಿವರಿಸಿದರು.
    ‘‘ನಮ್ಮಲ್ಲಿ ಕೆಳವರ್ಗದವರು ಉಂಡ ಎಲೆಯ ಮೇಲೆ ಬ್ರಾಹ್ಮಣರು ಉರುಳುವಂತಹ ಯಾವುದೇ ಪದ್ಧತಿಯಿಲ್ಲ. ಇದೊಂದು ಕಪೋಲಕಲ್ಪಿತ ವರದಿಯಾಗಿದೆ. ಬ್ಯಾಟರಾಯನ ದೇವಾಲಯಕ್ಕೆ ಎಲ್ಲ್ಲ ವರ್ಗದ ಭಕ್ತರಿದ್ದಾರೆ. ಪ್ರತಿ ವರ್ಷ ಮಾರ್ಚ್ 6ರಂದು ಮಘ ಮಾಸ ಅಶ್ಲೇಷ ನಕ್ಷತ್ರದಲ್ಲಿ ಇಲ್ಲಿ ಜಾತ್ರೆ ನಡೆಯಲಿದ್ದು, ರಥೋತ್ಸವದ ಹಿಂದಿನ ದಿನ ದೇವಾಲಯದ ಒಕ್ಕಲುತನ ಬ್ರಾಹ್ಮಣರು ಸೇರಿ ತಮ್ಮ ತಮ್ಮ ಲ್ಲಿಯೇ ಮಡೆಸ್ನಾನದಂತಹ ಸಂಪ್ರದಾಯ ವನ್ನು ಆಚರಿಸಿಕೊಂಡು ಬರುತ್ತಿದ್ದಾರೆ. ಮಡೆ ಸ್ನಾನಕ್ಕೆ ಬೇರೆ ವರ್ಗಗಳಿಗೆ ಅವಕಾಶ ವಿದ್ದರೂ ಸಂಪ್ರದಾಯವನ್ನು ಹಾಳುಗೆಡವಿ ವರ್ಗ ಸಂಘರ್ಷಕ್ಕೆ ಅವಕಾಶ ಕಲ್ಪಿಸಬಾರದು ಎಂಬ ಉದ್ದೇಶದಿಂದ ಇದುವರೆಗೂ ಹಿಂದುಳಿದ ವರ್ಗದ ಜನ ಮಡೆ ಸ್ನಾನದಂತಹ ಆಚರಣೆಯಿಂದ ದೂರವೇ ಉಳಿದಿದ್ದಾರೆ. ರಥೋತ್ಸವದ ದಿನ ತೇರು ಎಳೆದ ನಂತರ ಎಲ್ಲರೂ ಒಟ್ಟಿಗೆ ಊಟ ಮಾಡಲು ಅವಕಾಶವಿದೆ ಎಂದು ದೇವಾಲ ಯದ ಅರ್ಚಕ ಶ್ರೀನಿವಾಸ್ ಪ್ರಸಾದ್ ಸ್ಪಷ್ಟ ಪಡಿಸಿದ್ದಾರೆ. ಪತ್ರಿಕೆಯೊಂದರಲ್ಲಿ ಬಂದ ವರದಿಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ದೇವಾಲಯದ ಕಮಿಟಿಯಲ್ಲಿರುವ ಹಿಂದುಳಿದ ವರ್ಗದ ನಿರ್ದೇಶಕರೊಬ್ಬರು, ಬ್ರಾಹ್ಮಣರು ಮತ್ತು ಹಿಂದುಳಿದ ವರ್ಗಗಳ ನಡುವೆ ಇರುವ ಸೌಹಾದರ್ತೆಯನ್ನು ಹಾಳು ಮಾಡುವ ಉದ್ದೇಶದಿಂದ ಈ ಸುಳ್ಳು ಸುದ್ದಿಯನ್ನು ವರದಿ ಮಾಡಲಾಗಿದೆ. ಸುಮಾರು 400 ವರ್ಷಗಳ ಹಿಂದಿನಿಂದಲೂ ಈ ಸಂಪ್ರದಾಯವನ್ನು ಬಹಳ ಅಚ್ಚುಕಟ್ಟಾಗಿ ಸಮಾಜದ ಸ್ವಾಸ್ಥ ಹಾಳಾಗದಂತೆ ನಡೆಸಿಕೊಂಡು ಬರಲಾಗುತ್ತಿದೆ. ಕುಕ್ಕೆ ಸುಬ್ರಹ್ಮಣ್ಯ ದಲ್ಲಿ ನಡೆಯುವ ಮಡೆಸ್ನಾನಕ್ಕೂ, ತುರುವೇಕೆರೆಯ ಬ್ಯಾಟರಾಯನ ದೇವಾಲಯದಲ್ಲಿ ನಡೆಯುವ ಮಡೆಸ್ನಾನಕ್ಕೂ ಸಾಕಷ್ಟು ವ್ಯತ್ಯಾಸವಿದ್ದು, ಇದನ್ನು ವರದಿ ಪ್ರಕಟಿಸುವ ಮುನ್ನ ಯೋಚಿಸಬೇಕಿತ್ತು ಎಂದಿದ್ದಾರೆ.
    ರಥೋತ್ಸವದ ಹಿಂದಿನ ದಿನ ರಾತ್ರಿ ಬ್ರಾಹ್ಮಣ ಜಾತಿಯಲ್ಲಿಯೇ ಹುಟ್ಟಿದ ರೋಗಿಗಳು, ಮಕ್ಕಳಾಗದವರು ಸೇರಿದಂತೆ ಕುಟುಂಬದಲ್ಲಿ ಸಮಸ್ಯೆಯನ್ನು ಹೊಂದಿರುವಂತಹವರು ಬ್ರಾಹ್ಮಣರು ಊಟ ಮಾಡಿದ ಎಂಜಲೆಲೆಯನ್ನು ಎತ್ತಿಹಾಕಿ ನಂತರ ಉರುಳು ಸೇವೆ ನಡೆಸುತ್ತಾರೆ. ಈ ಸಂದರ್ಭದಲ್ಲಿ ಬ್ರಾಹ್ಮಣರನ್ನು ಹೊರತು ಪಡಿಸಿ ಇನ್ಯಾವುದೇ ಜಾತಿಗಳ ಜನರಿಗೆ ಅಲ್ಲಿ ಪ್ರವೇಶವನ್ನು ನಿಷೇಧಿಸಲಾಗಿರುತ್ತದೆ. ಆದರೆ ಇದನ್ನೇ ಕೆಳ ವರ್ಗದವರು ಉಂಡ ಎಲೆಯ ಮೇಲೆ ಬ್ರಾಹ್ಮಣ ಮಡೆಸ್ನಾನ ಎಂದು ಬರೆಯುವ ಮೂಲಕ ಜನರನ್ನು ತಪ್ಪುದಾರಿಗೆ ಎಳೆಯುವ ಪ್ರಯತ್ನವನ್ನು ಮಾಡಲಾಗಿದೆ.
    -ಬಿ.ಎಂ.ಬಶೀರ್

    ReplyDelete
  14. ವಿಕಾಸ್ ನಿಮ್ಮ ಅಭಿಪ್ರಾಯಕ್ಕೆ ನನ್ನ ಸಹಮತವಿದೆ, 100 %.

    ಖಂಡಿತ ಅವೆರಡು ಆಚರಣೆ/ರೀತಿಗಳ ಮಟ್ಟ ಬೇರೆ ಅಷ್ಟೇ.
    ಮೊದಲು ಮೀಸಲಾತಿ ನಿಷೇಧಿಸಲಿ. ಎಲ್ಲ ಮನುಷ್ಯ ಒಂದೇತರ ಹೇಳೋದು ಸತ್ಯವೇ ಹೌದಾದ್ರೆ ಎಲ್ಲವರ ತಲೆಯಲ್ಲಿಯ ಮಿದುಳೂ ಒಂದೇತರ.. ಮಿದುಳಿಗೇಕೆ ಮೀಸಲಾತಿ.. ??

    ಸೋ ಕಾಲ್ಡ್ ಬುದ್ದಿಜೀವಿಗಳು ಇಂತಹದ್ದನ್ನು ಏಕೆ ವಿಮರ್ಶಿಸುವುದಿಲ್ಲ ? ಉತ್ತರ ನಮಗೆಗೊತ್ತು ಬಿಡಿ..
    **
    ಅಲ್ಲ ಸಂಪಾದಕೀಯದವರೇ ತಮ್ಮ ನಿಲುವು,ಸಮಾಜ ಕಳಕಳಿ ಧೋರಣೆಗಳ ಮೇಲೆ ನನಗೆ ಗೌರವವಿದೆ.. ಅದೆಲ್ಲ ನಿಜ ಆದರೆ ಮೀಸಲಾತಿ ನಿಷೇಧ ಕುರಿತು ನೀವೆತೆ ಚಕಾರ ಎತ್ತುತ್ತಿಲ್ಲ ?? ಯಾಕೆ ಆ ವಿಷಯದಲ್ಲಿ ಮಾತ್ರ ಜಾತಿ ಬೇಕು? ಅಲ್ವ??

    ನನ್ನ ಈ ಪ್ರಶ್ನೆಗೆ ಸ್ಪಷ್ಟ ಉತ್ತರ ಬೇಕು.. ಬದಲಿಗೆ ಈ ಕಾಮೆಂಟ್ delete ಮಾಡೋದಲ್ಲ..

    ReplyDelete
  15. ಯಥಾರ್ಥ ಮಾನವತ್ವ ಜ್ಞಾನ ಇದ್ದರೆ ಇಂಥ ಮೌಢ್ಯಗಳು ಇರುವುದೇ ಇಲ್ಲ. ಆದರೆ ಅದು ಹಿಂದುಳಿದವರು ಅನ್ನಿಸಿಕೊಂಡವರಿಗೂ, ಮುಂದುವರೆದವರೆನಿಸಿಕೊಂಡವರಿಗೂ, ಮಧ್ಯಮದವರಿಗೂ, ಮೇಲು ಎನಿಸಿಕೊಂಡವರಿಗೂ, ಕೀಳು ಎನಿಸಿಕೊಂಡವರಿಗೂ,ಉಚ್ಚ ಅಥವಾ ನೀಚ ಎನಿಸಿಕೊಂಡವರಿಗೂ, ತಥಾಕಥಿತ ಬುದ್ಧಿಜೀವಿ(ಗಳೆನಿಸಿಕೊಳ್ಳುವ,ಗಳೆಂದುಕರೆದುಕೊಳ್ಳುವ,ಕರೆಸಿಕೊಳ್ಳುವ??)ಗಳಿಗೂ-ವಿಚಾರ(ವ್ಯಾಧಿ)ವಾದಿಗಳಿಗೂ ಬೇಕಿಲ್ಲ. ತಿದ್ದುವ, ಬುದ್ಧಿವಾದ ಹೇಳುವ ಮಾತು-ಕೃತಿ ಇವರಾರಿಗೂ ಬೇಡ. ನಮ್ಮದೇ ಸರಿ ಎನ್ನುವ ಉಡಾಫೆ ಧೋರಣೆ. ಪ್ರತಿಯೊಬ್ಬ ಮನುಷ್ಯನೂ ಸ್ವತಃ ತ್ರಿಕರಣ ಶುದ್ಧಿಯಾದಲ್ಲಿ ಸರ್ವ ಸಮಾನತೆ ತಾನಾಗೇ ಆಗುತ್ತದೆ. ಆದರೆ ಇದು ಯಾರಿಗೂ ಬೇಡವಾಗಿದೆ. "ಖಲಃ ಸರ್ಷಪಮಾತ್ರಾಣಿ ಪರಚ್ಛಿದ್ರಾಣಿ ಪಶ್ಯತಿ | ಆತ್ಮನಃ ಬಿಲ್ವಗಾತ್ರಾಣಿ ಪಶ್ಯನ್ನಪಿ ನ ಪಶ್ಯತಿ ||" ಅಂದರೆ...ದುಷ್ಟನು ಪರರ ಸಾಸುವೆ ಗಾತ್ರದ ದೋಷವಿದ್ದರೂ ಅದನ್ನು ಪ್ರಧಾನವಾಗಿ ನೋಡುತ್ತಾನೆ. (ಅದರ ಬಗ್ಗೆ ಟೀಕೆ-ಟಿಪ್ಪಣಿ ಮಾಡುತ್ತಾನೆ). ಆದರೆ ತನ್ನ ಬಿಲ್ವಗಾತ್ರದ(ದೊಡ್ಡದಾದ) ದೋಷವಿದ್ದರೂ ಕೂಡ ನೋಡುತ್ತಿದ್ದರೂ ನೋಡದವನಂತಿರುತ್ತಾನೆ. ಅದು ದೋಷವೇ ಅಲ್ಲ ಎಂಬಂತೆ ವರ್ತಿಸುತ್ತಾನೆ.
    ಹೀಗಿರಲು......... ಏನು ಮಾಡುವುದು?

    ReplyDelete
  16. ಲೋಕದ ಡೊಂಕ ನೀವೇಕೆ ತಿದ್ದುವಿರಿ
    ನಿಮ್ಮ ನಿಮ್ಮ ತನುವ ಸಂತೈಸಿಕೊಳ್ಳಿ
    ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ
    ನೆರೆಮನೆಯ ದುಃಖಕ್ಕೆ ಅಳುವವರ ಮೆಚ್ಚ
    ನಮ್ಮ ಕೂಡಲಸಂಗಮದೇವಾ.

    ReplyDelete
  17. Well said Raghu... Need an answer

    ReplyDelete
  18. Swami.. brahmarannu virodhisuvadarinda prachara siguttade & tanu dodda jaatyateetavadi anno bhavaneaalli tavella idda haage kanisuttade, illi doorada bengaloorali kootu intaha lekana baryavudar badalu, aa kshtragaligomme kaalittu alliya janarondige beretu, avara noovu galalli bagiyagi, anantara matanadi.........

    ReplyDelete