Wednesday, October 19, 2011

ಶಾಲಿವಾಹನನೂ, ಬಬ್ರುವಾಹನನೂ ಒಂದಾದ ಪುರಾಣ ಪುಣ್ಯ ಕಥೆ...


ಬೇಜಾರು ಕಣ್ರೀ. ಮೀಡಿಯಾ ಬಗ್ಗೆ, ರಾಜಕಾರಣ ಬಗ್ಗೆ ಬರೆದೂ ಬರೆದೂ ಬೇಜಾರು. ಅದಕ್ಕೆ ಸುಮ್ಮನೆ ಒಂದು ಮಕ್ಕಳ ಕಥೆ ಬರೆದಿದ್ದೇವೆ. ಓದಿ ಖುಷಿಯಾದರೆ ಗುಡ್ ಅನ್ನೋ ಬಟನ್ ಒತ್ತಿ ಹೋಗಿ. ಚೆನ್ನಾಗಿಲ್ಲ ಅಂದ್ರೆ ಬ್ಯಾಡ್ ಅನ್ನಿ. ಬೇಜಾರು ಮಾಡಿಕೊಳ್ಳಲ್ಲ...

ಒಂದೂರಿನಲ್ಲಿ ಒಬ್ಬ ಪಾಳೇಗಾರ ಇದ್ದ. ಅವನ ಹೆಸರು ಶಾಲಿವಾಹನ ಅಂತ ಇಟ್ಟುಕೊಳ್ಳಿ. ಪಾಳೇಗಾರನಿಗೆ ಪಕ್ಕದ ಊರಿನ ಮತ್ತೊಬ್ಬ ಪಾಳೇಗಾರ ಕ್ಲೋಸ್ ಫ್ರೆಂಡು. ಅವನ ಹೆಸರು ಬಬ್ರುವಾಹನ.  ಇಬ್ಬರೂ ಆಗಾಗ ಭೇಟಿ ಮಾಡ್ಕೊಂಡು ಹರಟೆ ಹೊಡಿಯೋರು, ನಾಟಕ ನೋಡೋರು, ಒಟ್ಟಿಗೆ ಕೂತ್ಗಂಡು ಊಟ ಮಾಡೋರು. ಇಬ್ಬರೂ ಸೇರ‍್ಕಂಡು ಖಂಡಾಪಟ್ಟೆ ಆಸ್ತಿನೂ ಮಾಡ್ತಾ ಇದ್ರು.

ಶಾಲಿವಾಹನನಿಗೆ ಒಬ್ಬ ಸೇನಾಧಿಪತಿ ಇದ್ದ. ಯಾವಾಗಲೂ ಸೊಂಟದಲ್ಲಿ ಬಾಕು ಇಟ್ಟುಕೊಂಡೇ ತಿರುಗಾಡುತ್ತಿದ್ದ. ಸಿಕ್ಕಸಿಕ್ಕವರನ್ನೆಲ್ಲ ತಿವಿಯೋದೇ ಅವನ ಕೆಲಸ. ಅವನ ಹೆಸರು ಗರುಡವಾಹನ ಅಂತ. ಏನಾಯ್ತಪ್ಪ ಅಂದ್ರೆ ಈ ಗರುಡವಾಹನನಿಗೂ ಬಬ್ರುವಾಹನನಿಗೂ ಆಗಿ ಬರಲೇ ಇಲ್ಲ. ಇಬ್ಬರೂ ಪಟಾಪಟಾಂತ ಪರಸ್ಪರ ಕಪಾಳಕ್ಕೆ ಹೊಡೆದುಕೊಳ್ತಾ ಇದ್ರು. ಜಗಳ ಮಾಡಕ್ಕೆ ಇಂಥದ್ದು ಅಂತ ಒಂದು ಕಾರಣನೂ ಬೇಕಾಗಿರಲಿಲ್ಲ. ಸುಮ್ ಸುಮ್‌ನೆ ಜಗಳ ಆಡೋರು. ಹಿಂಗೆಲ್ಲಾ ಆಗ್ತಾ ಇರುವಾಗ ಶಾಲಿವಾಹನ ಮಾತ್ರ ಸುಮ್ನೆ ಮೀಸೆ ಮರೆಯಲ್ಲೇ ನಗ್ತಾ ಇರ‍್ತಿದ್ದ. ಜಗಳ ಬಿಡಿಸೋಕ್ಕೂ ಹೋಗ್ತಾ ಇರ‍್ಲಿಲ್ಲ.

ಒಂದು ದಿವ್ಸ ಏನಾಯ್ತು ಅಂದ್ರೆ, ಶಾಲಿವಾಹನ ಏನೇನೋ ಸಮಸ್ಯೆ ಮಾಡಿಕೊಂಡು ಅವನ ಪಾಳೇಪಟ್ಟಿನ ಜನರೆಲ್ಲ ತಿರುಗಿಬಿದ್ರು. ಶಾಲಿವಾಹನ ಊರು ಬಿಡಬೇಕಾಗಿ ಬಂತು. ಜತೆಗೆ ಸೇನಾಧಿಪತಿ ಗರುಡವಾಹನನೂ ಅವನ ಸಕಲ ಕಾಲಾಳುಗಳೂ ಊರು ಬಿಟ್ಟರು. ಸಿಕ್ಕಿದ್ದೇ ಛಾನ್ಸು ಅಂತ ಬಬ್ರುವಾಹನ ಒಂದೇ ಸಮನೆ ದಾಳಿ ಶುರು ಮಾಡಿದ. ಸ್ನೇಹಿತ ಅಂತಾನೂ ಮುಖಮೂತಿ ನೋಡದೆ ಶಾಲಿವಾಹನನಿಗೂ, ಗರುಡವಾಹನನಿಗೂ ಚಚ್ಚತೊಡಗಿದೆ. ಪಾಪ, ಯುದ್ಧ ಮಾಡಣ ಅಂದ್ರೆ ಪಾಳೇಪಟ್ಟೆ ಇಲ್ಲ ಶಾಲಿವಾಹನನಿಗೆ.

ಆಮೇಲೆ ಶಾಲಿವಾಹನ ಏನೇನೋ ಮಾಡಿ, ಏನೋ ಒಂದು ಪಾಳೇಪಟ್ಟು ರೆಡಿ ಮಾಡ್ಕಂಡ. ಹಿಂದಿನ ಪಾಳೇಪಟ್ಟಿನಷ್ಟು ದೊಡ್ಡದಲ್ಲದಿದ್ದರೂ ಏನೋ ಒಂದು ಲೆವೆಲ್ಲಿಗೆ ಪರವಾಗಿಲ್ಲ ಅನ್ನಿಸುವಂಥ ಪಾಳೇಪಟ್ಟು ಅದು. ಒಂದು ಸಲ ಕೈಗೆ ಅಧಿಕಾರ ಸಿಕ್ಕಿದ್ದೇ ತಡ ಶಾಲಿವಾಹನನೂ, ಗರುಡವಾಹನನೂ ಒಟ್ಟಾಗಿ ಸೇರಿ ಬಬ್ರುವಾಹನನ ಮೇಲೆ ಯುದ್ಧ ಅನೌನ್ಸ್ ಮಾಡಿದ್ರು. ಭೀಕರ ಕಾಳಗ ಶುರುವಾಗಿ ಹೋಯ್ತು. ಯಾವ ಪರಿ ಜಗಳ ಆಡುದ್ರು ಅಂದ್ರೆ ಜನ ಎಲ್ಲ ಕ್ಯಾಕರಿಸಿ ಉಗಿದು, ಆಡ್ಕೊಂಡು ನಗೋ ಹಂಗೆ ಆಯ್ತು.

ಹಿಂಗೇ ಕಾಲ ಹೋಗ್ತಾ ಇರಬೇಕಾದ್ರೆ, ಬಬ್ರುವಾಹನ ಪಟ್ಟಕ್ಕೆ ಬಂದ ೧೬ನೇ ವರ್ಷದ ಆಚರಣೆ ಬಂತು. ಇಂಥ ಸಂದರ್ಭದಲ್ಲಿ ಬಬ್ರುವಾಹನನಿಗೆ ತನ್ನ ಗೆಳೆಯ ಶಾಲಿವಾಹನನ ಮೇಲೆ ಸಿಕ್ಕಾಪಟ್ಟೆ ಲವ್ ಬಂದು ಬಿಟ್ಟಿತು. ಸೀದಾ ಬಂದು ಶಾಲಿವಾಹನನನ್ನು ತಬ್ಬಿಕೊಂಡು ನೋಡು ಗೆಳೆಯಾ, ನಾನು ಈ ಲೆವೆಲ್ಲಿಗೆ ನನ್ನ ಪಾಳೇಪಟ್ಟು ಬೆಳೆಸೋದಿಕ್ಕೆ ನೀನೂ ಒಂದು ಕಾರಣ. ತುಂಬಾ ಥ್ಯಾಂಕ್ಸು ಕಣೋ ಅಂದ. ಅದೆಲ್ಲ ಸರಿ, ನೀನು ಅನ್ಯಾಯವಾಗಿ ನನ್ನ ಮೇಲೆ ಯುದ್ಧ ಮಾಡಿ ಮಾನಸಿಕವಾಗಿ ಘಾಸಿಗೊಳಿಸಿಬಿಟ್ಟಲ್ಲ ಯಾಕೆ ಅಂತ ಶಾಲಿವಾಹನ ಕೇಳಿದ. ಏನ್ ಬಿಡೋ ಮರಾಯ. ಒಂದು ವರ್ಷದ ಜಗಳ ಇದು, ಈ ಪುಟಗೋಸಿ ಜಗಳಕ್ಕೆ ನಮ್ಮ ೧೬ ವರ್ಷದ ಸ್ನೇಹ ಬಲಿಯಾಗಬೇಕಾ ಅಂತೇನೋ ಎಮೋಷನಲ್ ಆಗಿ ಮಾತನಾಡತೊಡಗಿದ ಬಬ್ರುವಾಹನ.

ಏನಪ್ಪಾ ಅಂದ್ರೆ, ಈ ಶಾಲಿವಾಹನನೂ, ಬಬ್ರುವಾಹನನೂ ಒಟ್ಟಿಗೆ ಗೆಳೆಯರಾಗಿದ್ದಾಗ ಯಾರ‍್ಯಾರದೋ ಸಹವಾಸ ಮಾಡಿ ಅನೈತಿಕ ಮಾರ್ಗದಿಂದ ಪಾಳೇಪಟ್ಟು ಬೆಳೆಸಿಕೊಂಡಿದ್ದರು. ಅದೆಲ್ಲವೂ ಮಹಾರಾಜರಿಗೆ ಗೊತ್ತಾಗಿ ಹೋಗಿತ್ತು. ಇಬ್ಬರ ಮೇಲೂ ಮಹಾರಾಜರು ಕಣ್ಣಿಟ್ಟುಬಿಟ್ಟಿದ್ದರು. ಮಹಾರಾಜರೇನೂ ಏಟು ಕೊಟ್ಟರೆ ಇಬ್ಬರಿಗೂ ಕೊಡುತ್ತಾರೆ. ಹೀಗಾಗಿ ಇಬ್ಬರಿಗೂ ಭಯ ಶುರುವಾಗಿ ಹೋಗಿತ್ತು.

ಹೀಗಾಗಿ ಬಬ್ರುವಾಹನ ಸ್ನೇಹದ ಪ್ರಸ್ತಾಪ ತಂದ ಕೂಡಲೇ ಶಾಲಿವಾಹನನೂ ಒಪ್ಪಿಕೊಂಡು, ಹಾಳಾಗ್ ಹೋಗ್ಲಿ ಬಿಡು. ನನ್ ತಂಟೆಗೆ ನೀನು ಬರಬೇಡ, ನಿನ್ ತಂಟೆಗೆ ನಾನು ಬರಲ್ಲ. ನಮ್ಮ ಗರುಡವಾಹನನ ಕಡೆ ಕಣ್ಣೆತ್ತಿನೂ ನೋಡಬೇಡ. ಒಟ್ಟಿಗೆ ಯಾವಾಗ್ಲಾದ್ರೂ ಸೇರಣ, ದ್ರಾಕ್ಷಾರಸ ಕುಡಿಯೋಣ ಅಂದು ಕೈಕುಲುಕೇಬಿಟ್ಟ.

ಆಮೇಲೆ ಅವರೆಲ್ಲ ಒಟ್ಟಿಗೆ ಸುಖವಾಗಿ ಬಾಳಿದರು.

(ಈ ಕಥೆ ಸಂಪೂರ್ಣ ಕಾಲ್ಪನಿಕ. ಕಥೆಯಲ್ಲಿನ ಪಾತ್ರಗಳು ನಿಜಜೀವನದ ಪಾತ್ರಗಳಿಗೆ ಹೋಲುತ್ತಿದ್ದರೆ ಅದೊಂದು ಪವಾಡ)

Tuesday, October 11, 2011

ಐಆರ್‌ಎಸ್ ಸರ್ವೆ ಕರ್ನಾಟಕ: ವಿಜಯ ಕರ್ನಾಟಕ ಈಗಲೂ ನಂ.೧


ಐಆರ್‌ಎಸ್ ಸರ್ವೆ ಬೆಂಗಳೂರು ಫಲಿತಾಂಶವನ್ನು ಕಳೆದ ಪೋಸ್ಟ್‌ನಲ್ಲಿ ಗಮನಿಸಿದ್ದಿರಿ. ಒಟ್ಟಾರೆ ಕರ್ನಾಟಕದ ಫಲಿತಾಂಶದ ವಿವರಗಳು ಇಲ್ಲಿವೆ. ಯಥಾಪ್ರಕಾರ ವಿಜಯ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ವಿಜಯ ಕರ್ನಾಟಕದ ಅಂದಾಜು ಓದುಗರ ಸಂಖ್ಯೆ ೩೪.೩೮ ಲಕ್ಷ. ಕಳೆದ ತ್ರೈಮಾಸಿಕದಲ್ಲಿ ಈ ಸಂಖ್ಯೆ ೩೪.೭ರಷ್ಟಿತ್ತು. ಒಟ್ಟಾರೆಯಾಗಿ ಕಳೆದ ವರ್ಷವೊಂದರಲ್ಲಿ ವಿಜಯ ಕರ್ನಾಟಕ ಓದುಗರ ಸಂಖ್ಯೆ ಶೇ. ೫.೨ರಷ್ಟು ಏರಿದೆ.

ಎರಡನೇ ಸ್ಥಾನದಲ್ಲಿ ಇರುವ ಪ್ರಜಾವಾಣಿ ಕರ್ನಾಟಕದಾದ್ಯಂತ ಪ್ರಸಾರದಲ್ಲಿ ಗಣನೀಯ ಏರಿಕೆಯನ್ನು ದಾಖಲಿಸಿದೆ. ಆದರೆ ಕಳೆದ ತ್ರೈಮಾಸಿಕದಲ್ಲಿ ಶೇ.೧ರಷ್ಟು ಓದುಗರನ್ನು ಕಳೆದುಕೊಂಡಿದೆ ಕಳೆದ ಪ್ರಜಾವಾಣಿ ಅಂದಾಜು ಓದುಗರ ಸಂಖ್ಯೆ ೩೩.೬೯ ಲಕ್ಷ. ಹಿಂದಿನ ತ್ರೈಮಾಸಿಕದಲ್ಲಿ ಇದು ೩೪.೦೩ ಲಕ್ಷವಾಗಿತ್ತು.

ಮೂರನೇ ಸ್ಥಾನದಲ್ಲಿರುವ ಕನ್ನಡಪ್ರಭದ ಕಳೆದ ತ್ರೈಮಾಸಿಕದಲ್ಲಿ ಅಲ್ಪ ಏರಿಕೆಯನ್ನು ಕಂಡಿದೆ. ಓದುಗರ ಅಂದಾಜು ಸಂಖ್ಯೆ ಈಗ ೧೩.೫೪ ಲಕ್ಷ. ಹಿಂದಿನ ತ್ರೈಮಾಸಿಕದಲ್ಲಿ ಇದು ೧೩.೩೪ ಲಕ್ಷವಾಗಿತ್ತು. ಕಳೆದ ವರ್ಷದಲ್ಲಿ ಕನ್ನಡಪ್ರಭದ ಓದುಗರ ಸಂಖ್ಯೆ ಹೆಚ್ಚಳವಾಗಿದ್ದು, ೮.೬೨ ಲಕ್ಷ ಓದುಗರಿದ್ದ ಪತ್ರಿಕೆ ಸಾಕಷ್ಟು ಏರಿಕೆ ಕಂಡಿದೆ.

ನಾಲ್ಕನೇ ಸ್ಥಾನದಲ್ಲಿರುವ ಸಂಯುಕ್ತ ಕರ್ನಾಟಕದ ಓದುಗರ ಸಂಖ್ಯೆ ಈಗ ೧೧.೭೬ ಲಕ್ಷ. ಕಳೆದ ತ್ರೈಮಾಸಿಕದಲ್ಲಿ ಈ ಸಂಖ್ಯೆ ೧೩.೦೬ ಲಕ್ಷವಾಗಿತ್ತು. ಅಂದರೆ ಪತ್ರಿಕೆ ಗಣನೀಯ ಸಂಖ್ಯೆಯಲ್ಲಿ ತನ್ನ ಓದುಗರನ್ನು ಕಳೆದುಕೊಂಡಿದೆ. ಆದರೂ ಕಳೆದ ವರ್ಷ ಶೇ. ೧೯.೫ರಷ್ಟು ಬೆಳವಣಿಗೆ ಸಾಧಿಸಲು ಪತ್ರಿಕೆ ಯಶಸ್ವಿಯಾಗಿದೆ.

ಉದಯವಾಣಿ ಪತ್ರಿಕೆ ಕಳೆದ ತ್ರೈಮಾಸಿಕದಲ್ಲಿ ಕಳೆದುಕೊಂಡದ್ದನ್ನು ಈ ತ್ರೈಮಾಸಿಕದಲ್ಲಿ ಗಳಿಸಿಕೊಳ್ಳಲು ಯಶಸ್ವಿಯಾಗಿದೆ. ಶೇ.೧೦.೩ರಷ್ಟು ಓದುಗರ ಸಂಖ್ಯೆ ಹೆಚ್ಚಿದ ಪರಿಣಾಮ ಈಗ ಅದರ ಪ್ರಸಾರ ಸಂಖ್ಯೆ ೯.೮೫ ಲಕ್ಷವಾಗಿದೆ. ಒಟ್ಟಾರೆಯಾಗಿ ಕಳೆದ ವರ್ಷ ಶೇ. ೨೪ರಷ್ಟು ಬೆಳವಣಿಗೆ ಸಾಧಿಸಲು ಪತ್ರಿಕೆ ಯಶಸ್ವಿಯಾಗಿದೆ.

ಟೈಮ್ಸ್ ಆಫ್ ಇಂಡಿಯಾ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕೆಗಳು ನಂತರದ ಸ್ಥಾನಗಳಲ್ಲಿದ್ದು, ಸಂಜೆವಾಣಿ, ಬೆಂಗಳೂರು ಮಿರರ್ ಮತ್ತು ತರುಣ್ ಭಾರತ್ ಪತ್ರಿಕೆಗಳು ಕಡೆಯ ಮೂರು ಸ್ಥಾನಗಳಲ್ಲಿವೆ.

ಐಆರ್‌ಎಸ್ ಸರ್ವೆ ಬೆಂಗಳೂರು: ಕನ್ನಡ ಪತ್ರಿಕೆಗಳಲ್ಲಿ ತಳಮಳ ಶುರು....

೨೦೧೧ರ ಸಾಲಿನ ಎರಡನೇ ತ್ರೈಮಾಸಿಕದ ಐಆರ್‌ಎಸ್ ಸಮೀಕ್ಷೆಯ ಫಲಿತಾಂಶಗಳು ಕನ್ನಡ ಪತ್ರಿಕೆಗಳಿಗೆ ತಳಮಳ ತರುವ ಅಂಶಗಳನ್ನು ಒಳಗೊಂಡಿದೆ. ಬೆಂಗಳೂರು ನಗರದಮಟ್ಟಿನ ಫಲಿತಾಂಶಗಳು ಹೀಗಿವೆ. ವಿಜಯ ಕರ್ನಾಟಕ ಎಂದಿನಂತೆ ತನ್ನ ನಂ.೧ ಸ್ಥಾನ ಉಳಿಸಿಕೊಂಡಿದೆ. ಆದರೆ ಈ ತ್ರೈಮಾಸಿಕದಲ್ಲಿ ಯಾವುದೇ ಪ್ರಗತಿ ಸಾಧಿಸಲು ಪತ್ರಿಕೆಗೆ ಸಾಧ್ಯವಾಗಿಲ್ಲ. ಕಳೆದ ತ್ರೈಮಾಸಿಕಕ್ಕೆ ಹೋಲಿಸಿದರೆ ಈ ಬಾರಿ ಎರಡು ಸಾವಿರ ಓದುಗರನ್ನು ವಿಜಯ ಕರ್ನಾಟಕ ಕಳೆದುಕೊಂಡಿದೆ. ಕಳೆದ ತ್ರೈಮಾಸಿಕದಲ್ಲಿ ವಿಜಯ ಕರ್ನಾಟಕ ಓದುಗರ ಸಂಖ್ಯೆ ೭.೧೯ ಲಕ್ಷವಾಗಿದ್ದರೆ ಈ ತ್ರೈಮಾಸಿಕದಲ್ಲಿ ಅಲ್ಪ ಹಿನ್ನಡೆ ಅನುಭವಿಸಿ ೭.೧೭ ಲಕ್ಷಕ್ಕೆ ಇಳಿದಿದೆ. ಆದರೆ ವಿಜಯ ಕರ್ನಾಟಕ ಕಳೆದ ಒಂದು ವರ್ಷದಲ್ಲಿ ಒಟ್ಟಾರೆ ಶೇ.೬.೯ರಷ್ಟು ಬೆಳವಣಿಗೆ ಕಂಡಿರುವುದು ಆ ಪತ್ರಿಕೆಯ ವ್ಯವಸ್ಥಾಪಕ ಮಂಡಳಿಗೆ ಆಶಾದಾಯಕವಾಗಿ ಕಾಣಬಹುದು. ಕಳೆದ ವರ್ಷದ ತ್ರೈಮಾಸಿಕ ವರದಿಯಲ್ಲಿ ವಿಜಯ ಕರ್ನಾಟಕದ ಓದುಗರ ಸಂಖ್ಯೆ ೬.೭೧ ಲಕ್ಷ ಮಾತ್ರ ಇತ್ತು. ಅದೀಗ ೭.೧೭ ಲಕ್ಷಕ್ಕೆ ತಲುಪಿದೆ.

ಎರಡನೇ ಸ್ಥಾನವನ್ನು ಪ್ರಜಾವಾಣಿ ಕಾಪಾಡಿಕೊಂಡಿದೆ. ಈ ತ್ರೈಮಾಸಿಕ ಪ್ರಜಾವಾಣಿಗೆ ಅಷ್ಟೇನು ಲಾಭದಾಯಕವಾಗಿಲ್ಲ. ಅದರ ಅಂದಾಜು ಓದುಗರ ಸಂಖ್ಯೆ ೧೧,೦೦೦ದಷ್ಟು ಕುಸಿದಿದೆ. ಈ ತ್ರೈಮಾಸಿಕ ವರದಿಯ ಪ್ರಕಾರ ಪ್ರಜಾವಾಣಿ ಓದುಗರ ಸಂಖ್ಯೆ ಈಗ ೬.೫೯ ಲಕ್ಷ. ಆದರೆ ಒಟ್ಟಾರೆ ವರ್ಷವನ್ನು ಗಣನೆಗೆ ತೆಗೆದುಕೊಂಡರೆ ಪ್ರಜಾವಾಣಿ ಶೇ.೮ರಷ್ಟು ಪ್ರಗತಿ ಸಾಧಿಸಿದೆ. ಕಳೆದ ವರ್ಷ ಈ ಹೊತ್ತಿಗೆ ಪ್ರಜಾವಾಣಿ ಓದುಗರ ಸಂಖ್ಯೆ ೬.೧ ಲಕ್ಷವಿತ್ತು, ಅದೀಗ ೬.೫೯ ಲಕ್ಷಕ್ಕೆ ಏರಿದೆ.

ಮೂರನೇ ಸ್ಥಾನದಲ್ಲಿರುವ ಟೈಮ್ಸ್ ಆಫ್ ಇಂಡಿಯಾ ಈ ತ್ರೈಮಾಸಿಕದಲ್ಲಿ ಶೇ.೬.೫ರಷ್ಟು ಓದುಗರನ್ನು ಹೆಚ್ಚುವರಿಯಾಗಿ ಪಡೆದಿದೆ. ಕಳೆದ ವರ್ಷ ಟಿಓಐಗೆ ಹರ್ಷವನ್ನೇ ತಂದಿದೆ. ಶೇ.೩೩.೧ರಷ್ಟು ಬೆಳವಣಿಗೆ ಸಾಧಿಸಿರುವುದು ವಿಶೇಷ. ಈಗ ಟಿಓಐ ಓದುಗರ ಸಂಖ್ಯೆ  ೪.೪೨ ಲಕ್ಷ. ಕಳೆದ ವರ್ಷ ಈ ಹೊತ್ತಿಗೆ ಇದು ಕೇವಲ ೩.೩ ಲಕ್ಷವಾಗಿತ್ತು.

ನಾಲ್ಕನೇ ಸ್ಥಾನದಲ್ಲಿರುವ ಡೆಕ್ಕನ್ ಹೆರಾಲ್ಡ್ ತನ್ನ ಓದುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಮಾತ್ರ ಯಶಸ್ವಿಯಾಗಿದೆ. ಈ ತ್ರೈಮಾಸಿಕ ವರದಿ ಪ್ರಕಾರ ಡೆಕ್ಕನ್ ಹೆರಾಲ್ಡ್ ಓದುಗರ ಸಂಖ್ಯೆ ೨.೦೧ ಲಕ್ಷ. ಡೆಕ್ಕನ್ ಹೆರಾಲ್ಡ್ ಸಹ ಕಳೆ ಒಂದು ವರ್ಷದಲ್ಲಿ ಗಣನೀಯ ಪ್ರಗತಿ ಸಾಧಿಸಿದ್ದು ಶೇ. ೨೨.೬ರಷ್ಟು ಹೆಚ್ಚುವರಿ ಓದುಗರನ್ನು ಗಳಿಸಿಕೊಂಡಿದೆ.

ಐದನೇ ಸ್ಥಾನದಲ್ಲಿರುವ ಬೆಂಗಳೂರು ಮಿರರ್ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ೨೦೧೦ರ ಎರಡನೇ ತ್ರೈಮಾಸಿಕ ವರದಿಯ ಪ್ರಕಾರ ಕೇವಲ ೬೨,೦೦೦ ಓದುಗರನ್ನು ಪಡೆದಿದ್ದ ಮಿರರ್ ಈಗ ೧.೫೬ ಲಕ್ಷ ಓದುಗರನ್ನು ಗಳಿಸಿಕೊಂಡಿದೆ. ಅಂದರೆ ಕಳೆದ ವರ್ಷವೊಂದರಲ್ಲಿ ಮಿರರ್ ಶೇ.೧೫೦ರಷ್ಟು ಬೆಳವಣಿಗೆ ಕಂಡಿದೆ.

ಆರನೇ ಸ್ಥಾನದಲ್ಲಿರುವ ಕನ್ನಡಪ್ರಭಕ್ಕೆ ಬೆಂಗಳೂರು ಪ್ರಸಾರದ ನಿಟ್ಟಿನಲ್ಲಿ ಹೇಳುವುದಾದರೆ ಕಳೆದ ವರ್ಷ ಅತ್ಯಂತ ಕೆಟ್ಟ ವರ್ಷ. ಈ ತ್ರೈಮಾಸಿಕವೂ ಅದರ ಪಾಲಿಗೆ ಯಾವ ಖುಷಿಯನ್ನೂ ತಂದಿಲ್ಲ. ಈ ಬಾರಿ ಸುಮಾರು ೧೪,೦೦೦ ಓದುಗರನ್ನು ಅದು ಕಳೆದುಕೊಂಡಿದೆ. ಒಟ್ಟಾರೆಯಾಗಿ ಈ ವರ್ಷ ಕನ್ನಡಪ್ರಭ ೩೨,೦೦೦ ಓದುಗರನ್ನು ಕಳೆದುಕೊಂಡಿದೆ. ೨೦೧೧ರ ಎರಡನೇ ತ್ರೈಮಾಸಿಕ ವರದಿ ಪ್ರಕಾರ ಕನ್ನಡಪ್ರಭ ಓದುಗರ ಸಂಖ್ಯೆ ಕೇವಲ ೧.೨೫ ಲಕ್ಷಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ಹೊತ್ತಿಗೆ ಈ ಸಂಖ್ಯೆ ೧.೫೭ ಲಕ್ಷವಾಗಿತ್ತು.

ಉದಯವಾಣಿ ಪತ್ರಿಕೆ ಮಾತ್ರ ಕಳೆದ ತ್ರೈಮಾಸಿಕದಲ್ಲಿ ಅಲ್ಪಪ್ರಮಾಣದಲ್ಲಿ ಹೆಚ್ಚುವರಿ ಓದುಗರನ್ನು ಪಡೆಯಲು ಯಶಸ್ವಿಯಾಗಿ ಏಳನೇ ಸ್ಥಾನದಲ್ಲಿದೆ. ಕಳೆದ ತ್ರೈಮಾಸಿಕದಲ್ಲಿ ೧.೧೨ ಲಕ್ಷದಷ್ಟು ಓದುಗರ ಸಂಖ್ಯೆ ಹೊಂದಿದ್ದ ಉದಯವಾಣಿ ಈಗ ೧.೧೮ ಲಕ್ಷ ಓದುಗರನ್ನು ಪಡೆದಿದೆ. ಉದಯವಾಣಿ ಕಳೆದ ವರ್ಷ ಪಡೆದಿದ್ದ ಓದುಗರ ಸಂಖ್ಯೆ ೯೭,೦೦೦ ಮಾತ್ರ. ಅದು ೧.೧೮ ಲಕ್ಷಕ್ಕೆ ಏರಿರುವುದು ಆಶಾದಾಯಕ ಬೆಳವಣಿಗೆ.

ಇನ್ನು ಎಂಟು, ಒಂಭತ್ತು ಮತ್ತು ಹತ್ತನೇ ಸ್ಥಾನಗಳನ್ನು ಡೈಲಿ ತಂತಿ, ಡೆಕ್ಕನ್ ಕ್ರಾನಿಕಲ್ ಮತ್ತು ಡಿಎನ್ ಎ ಪತ್ರಿಕೆಗಳು ಕ್ರಮವಾಗಿ ಪಡೆದಿವೆ.

Saturday, October 8, 2011

ಅಮೆರಿಕಾದಲ್ಲಿ ಸಿಡಿದ ಬಂಡಾಯ- ಒಂದು ಆಶಾಭಾವನೆ!

ಚಳವಳಿಗಳಿಲ್ಲದ, ಪ್ರತಿಭಟನೆಯಿಲ್ಲದ, ಪರ್ಯಾಯ ಚಿಂತನೆಗಳಿಲ್ಲದ ಸಮಾಜ-ದೇಶ ಯಾವತ್ತೂ ಅಪಾಯಕಾರಿಯೇ. ಇಂಥ ಸಮಾಜ-ದೇಶಗಳು ಏಕಕಾಲಕ್ಕೆ ದುರಹಂಕಾರಿಯೂ, ನೈಜ ಪ್ರಜಾಪ್ರಭುತ್ವ ವಿರೋಧಿಯೂ, ಮನುಷ್ಯತ್ವ ವಿರೋಧಿಯೂ ಆಗಿರುತ್ತದೆ. ಅಮೆರಿಕದಲ್ಲಿ ಆರಂಭವಾಗಿರುವ ಜನಾಂದೋಲನ ಈ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ್ದು. ಈ ಬಗ್ಗೆ ಬೆಳಕು ಚೆಲ್ಲುವ ಲೇಖನವನ್ನು ಹರ್ಷಕುಮಾರ್ ಕುಗ್ವೆ ಬರೆದಿದ್ದಾರೆ. ಇದು ನಿಮಗಿಷ್ಟವಾದೀತು -ಸಂಪಾದಕೀಯ


ಹಲವಾರು ದಿನಗಳಿಂದ ನನಗೆ ಒಂದು ಬಯಕೆಯಿತ್ತು.  ಅಮೆರಿಕವೇ ಅಮೆರಿಕದ ವಿರುದ್ದ ಬಂಡೆದ್ದು ನಿಲ್ಲಬೇಕು ಎನ್ನುವ ಬಯಕೆ ಅದು. ಕಳೆದ ಸೆಪ್ಟೆಂಬರ್ ೧೭ರಿಂದ ಅಮೆರಿಕದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ನೋಡಿ ಕೊಂಚ ಥ್ರಿಲ್ ಆಗುತ್ತಿದೆ. ಜಗತ್ತಿನೆಲ್ಲೆಡೆ ನಡೆಯುತ್ತಿರುವ ಜನಾಂದೋಲನಗಳ ಸಾಲಿನಲ್ಲಿ ಈಗ ಅಮೆರಿಕದ ಜನರೂ ಹೊಸ ಹೆಜ್ಜೆ ಇಟ್ಟಿರುವುದು ನೋಡಿ ಖುಷಿಯಾಗಿದೆ. ಈ ಬಂಡಾಯ ಎಲ್ಲಿಯವರೆಗೆ ನಡೆಯುತ್ತದೆ, ಏನು ಸಾಧಿಸುತ್ತದೆ, ಯಾವುದೂ ಖಾತ್ರಿಯಿಲ್ಲ. ಆದರೆ ಜಗತ್ತಿನ ಪ್ರತಿಯೊಬ್ಬ ಪ್ರಜಾಪ್ರಭುತ್ವವಾದಿಯೂ ಮುಕ್ತ ಮನಸ್ಸಿನಿಂದ ಬೆಂಬಲಿಸಬೇಕಾದ ಚಳವಳಿ ಇದು ಎಂದು ಮಾತ್ರ ಹೇಳಬಹುದು. ಇದಕ್ಕೆ ಕಾರಣಗಳನ್ನು ಸ್ವಲ್ಪ ವಿವರವಾಗಿ ಗಮನಿಸುವ ಮುನ್ನ ಇಲ್ಲಿ ಏನೇನಾಗುತ್ತಿದೆ ಎಂದು ನೋಡೋಣ. 

ನಿಜಕ್ಕೂ ಅಚ್ಚರಿಯ ಹಾಗೂ ಬೇಸರದ ಸಂಗತಿಯಿಂದರೆ ಅಲ್ಲಿ ನಡೆಯುತ್ತಿರುವ ಇಂತಹ ಒಂದು ಅದ್ಭುತ ಬೆಳವಣಿಗೆಗೆ ನಮ್ಮ ಮಾಧ್ಯಮಗಳ ಪ್ರತಿಕ್ರಿಯೆ ಏನೂ ಇಲ್ಲವೆನ್ನುವಷ್ಟರ ಮಟ್ಟಿಗೆ ಸೊನ್ನೆಯಾಗಿರುವುದು. ಇದು ಮಾಧ್ಯಮಗಳ ಜಾಣಮೌನವಾ? ಇದು ಇಲ್ಲಿನ ಮಾಧ್ಯಮಗಳ ಪರಿಸ್ಥಿತಿ ಮಾತ್ರವಲ್ಲ. ಅಮೆರಿಕದ ಮುಖ್ಯವಾಹಿನಿ ಮಾಧ್ಯಮಗಳೂ ಬೇಕೆಂದೇ ಈ ಚಳವಳಿಯ ಕುರಿತು ಉಪೇಕ್ಷೆಯನ್ನೂ ಹಾಗೂ ಅಪಪ್ರಚಾರವನ್ನೂ ನಡೆಸುತ್ತಿವೆ. ಈಜಿಪ್ಟಿನ, ಲಿಬಿಯಾದ, ಆಥವಾ ನಮ್ಮದೇ ಅಣ್ಣಾ ಚಳವಳಿಗಳನ್ನು ಮುಖಪುಟದಲ್ಲಿ ವಾರಗಟ್ಟಲೆ ವರದಿ ಮಾಡಿದ ಪತ್ರಿಕೆಗಳಿಗೆ, ಟೀವಿ ಚಾನಲ್‌ಗಳಿಗೆ ಈಗ ಕನಿಷ್ಟ ಒಂದು ವರದಿಯನ್ನೂ ಮಾಡದಿರುವಂತದ್ದು ಏನಾಗಿದೆ?!


ಈಗ ಅಮೆರಿಕದಲ್ಲಿ ಆರಂಭಗೊಂಡಿರುವ ಚಳವಳಿ 'ವಾಲ್ ಸ್ಟ್ರೀಟ್ ವಶಪಡಿಸಿಕೊಳ್ಳಿ’ಚಳವಳಿ. ಮೊದಲಿಗೆ ಹತ್ತಾರು ಸಂಖ್ಯೆಯಲ್ಲಿ ಚಳವಳಿಗಾರರು ಆರಂಭಿಸಿದ ಈ ಚಳವಳಿಯಲ್ಲಿ ದಿನಕಳೆದಂತೆ ಸಾವಿರ ಸಾವಿರ ಸಂಖ್ಯೆಯಲ್ಲಿ ಜನರು ಅದರಲ್ಲೂ ಮುಖ್ಯವಾಗಿ ಹೊಸಪೀಳಿಗೆಯ ವಿದ್ಯಾರ್ಥಿಗಳು, ಯುವಕರು, ಕಾರ್ಮಿಕರು ಸೇರಿಕೊಳ್ಳುತ್ತಿದ್ದಾರೆ. ಮಾತ್ರವಲ್ಲ 'ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ’ ಚಳವಳಿಯನ್ನು ಇದುವರೆಗೆ ವಾಷಿಂಗ್ಟನ್ ಡಿಸಿ, ಬೋಸ್ಟನ್, ಚಿಕಾಗೋ, ಫಿಲಡೆಲ್ಫಿಯಾ, ಹೂಸ್ಟನ್, ಪೋರ್ಟ್‌ಲೆಂಟ್, ಓರೆಗಾಂವ್, ಸಿಯಾಟಲ್, ಹೂಸ್ಟನ್, ಟೆಕ್ಸಾಸ್, ಮುಂತಾದ ಹತ್ತಾರು ಕಡೆಗಳಲ್ಲಿ ಅದೇ ಮಾದರಿಯ ಚಳವಳಿಗಳೂ ಆರಂಭಗೊಳ್ಳುತ್ತಿವೆ. ಮೊದಮೊದಲು ಇದನ್ನು ಬರೀ ಪಡ್ಡೆ ಹುಡುಗರ ಬಂಡಾಯ ಎಂದು ಉಪೇಕ್ಷೆ ಮಾಡಿದ್ದವರಿಗೆ ಈಗ ಆಘಾತವಾಗಿದೆ. ಅಮೆರಿಕದ ಹಲವಾರು ದೊಡ್ಡ ಕಾರ್ಮಿಕ ಸಂಘಟನೆಗಳೂ ನೆನ್ನೆಯಷ್ಟೇ ತಮ್ಮ ಬಹಿರಂಗ ಬೆಂಬಲವನ್ನು ಘೋಷಿಸಿವೆ. ವಾಲ್‌ಸ್ಟ್ರೀಟ್ ಬಳಿ ಇರುವ ಝುಕ್ಕೊಟ್ಟಿ ಪಾರ್ಕ್‌ನಲ್ಲಿ ನೂರಾರು ಕಾರ್ಯಕರ್ತರು ಕಾರ್ಡ್‌ಬೋರ್ಡ್ ಜೋಪಡಿ ಕಟ್ಟಿಕೊಂಡು ಕಳೆದ ಹದಿನೈದು ಇಪ್ಪತ್ತು ದಿನಗಳಂದ ಜಾಂಡಾ ಹೂಡಿದ್ದರೆ ಇವರಿಗೆ ಬೆಂಬಲವಾಗಿ ಅಮೆರಿಕದಾದ್ಯಂತ ಸಾವಿರಾರು ಜನರು ಕೇರಾಫ್ ’ಆಕ್ಯುಪೈ ವಾಲ್‌ಸ್ಟ್ರೀಟ್’ ವಿಳಾಸಕ್ಕೆ ತಮ್ಮ ಕೈಲಾಗುವಂತಾದ್ದನ್ನೆಲ್ಲಾ ಸಹಾಯ ಮಾಡುತ್ತಿದ್ದಾರೆ. ಊಟ, ಬಟ್ಟೆ, ಬರೆ, ಮೊಬೈಲ್ ಫೋನ್‌ಗಳಿಗೆ ಬೇಕಾದ ಬ್ಯಾಟರಿಗಳು, ಬ್ಯಾಕಪ್ ಸರಕುಗಳು, ಬಾರಿಸಲು ಡ್ರಮ್‌ಗಳು, ಪೀಪಿಗಳು, ಹೀಗೆ ಏನೇನು ಸಾಧ್ಯವೋ ಎಲ್ಲಾ ಅಂಚೆಯ ಮೂಲಕ ಹರಿದು ಬರುತ್ತವೆ. ಒಟ್ಟಾರೆಯಾಗಿ ನಿಧಾನಕ್ಕೆ ಈ ಬಂಡಾಯ ಒಂದು ಬೃಹತ್ ಜನಾಂದೋಲನವಾಗಿ ಚಳವಳಿಯಾಗುವ ಲಕ್ಷಣಗಳು ಕಾಣಿಸುತ್ತಿದ್ದು, ಕಳೆದ ಒಂದು ದಶಕದಲ್ಲಿ ಅಮೆರಿಕದಲ್ಲಿ ವ್ಯವಸ್ಥೆಯ ವಿರುದ್ಧ ಜನಸಾಮಾನ್ಯರಲ್ಲಿ ಮಡುಗಟ್ಟಿರುವ ಆಕ್ರೋಶವನ್ನು ಗಮನಿಸಿದರೆ ಈ ಸೂಚನೆ ತೋರುತ್ತದೆ. 


ನೀವೆಲ್ಲಾ ೧೯೮೪ರಲ್ಲಿ ಚೀನಾ ಸರ್ಕಾರದ ಸರ್ವಾಧಿಕಾರದ ವಿರುದ್ಧ ನಡೆಸಿದ್ದ ದಂಗೆಯ ಕುರಿತು ಕೇಳಿರಬಹುದು. ಇಂದು ಅಮೆರಿಕದಲ್ಲಿ ನಡೆಯುತ್ತಿರುವ ಈ ಚಳವಳಿಯನ್ನು ಗಮನಿಸಿದರೆ ಬಹುತೇಕ ಅದೇ ಮಾದರಿಯಲ್ಲಿ ನಡೆಯುತ್ತಿರುವಂತೆ  ಕಾಣಿಸುತ್ತಿದೆ. ಆದರೆ ಇಲ್ಲಿ ನಡೆಯುತ್ತಿರುವುದು ಭಾರತದಲ್ಲಿ ಅಣ್ಣಾ ಹಜಾರೆ ಕೇವಲ ಕಾಂಗ್ರೆಸ್ ವಿರುದ್ಧ ನಡೆಸಿದಂತೆ ಬರೀ ಒಬಾಮಾ ಸರ್ಕಾರದ ನೀತಿಗಳ ವಿರುದ್ಧ ಮಾತ್ರವಲ್ಲ. ಇಡೀ ಜಗತ್ತಿನ ಹಣಕಾಸು ಮಾರುಕಟ್ಟೆಯನ್ನು ತನ್ನ ಬೆರಳ ತುದಿಯಲ್ಲಿ ಕುಣಿಸುತ್ತಿರುವ ’ವಾಲ್‌ಸ್ಟ್ರೀಟ್’ನ ಹಣಕಾಸು ಸರ್ವಾಧಿಕಾರದ ವಿರುದ್ಧ ನಡೆಯುತ್ತಿರುವ ಚಳವಳಿ ಇದು.

ಈಗ ನಡೆಯುತ್ತಿರುವ ಚಳವಳಿಯ ರೂಪುರೇಷೆಯನ್ನು ಮೊದಲು ನೀಡಿದ್ದು ಕೆನಡಾದಲ್ಲಿರುವ 'ಅಡ್‌ಬಸ್ಟರ್’ ಎಂಬ ಗುಂಪು. ಈ ಗುಂಪಿನ ಸಲಹೆ ಮೇರೆಗೆ ಹೋರಾಟದ ರೂಪುರೇಷೆಯನ್ನು ಸಿದ್ಧಗೊಂಡು ಸೆಪ್ಟೆಂಬರ್ ೧೭ರಂದು ಚಳವಳಿ ಆರಂಭವಾಯಿತು. ಈ ಚಳವಳಿಯವರು ತಮ್ಮ ಹೋರಾಟವನ್ನು ಘೋಷಿಸಿಕೊಂಡಿರುವುದು ಹೀಗೆ-  "ಈಜಿಪ್ಟ್, ಗ್ರೀಸ್, ಸ್ಪೇನ್ ಹಾಗೂ ಐಸ್‌ಲ್ಯಾಂಡ್‌ಗಳಲ್ಲಿನ ನಮ್ಮ ಸಹೋದರಂತೆಯೇ ನಾವು ಕ್ರಾಂತಿಕಾರಿ ಅರಬ್ ಬಂಡಾಯವನ್ನು ಅಮೆರಿಕದಲ್ಲಿ ಪ್ರಜಾಪ್ರಭುತ್ವವನ್ನು ಪುನರ್‌ಸ್ಥಾಪಿಸಲು ಬಳಸುತ್ತಿದ್ದೇವೆ. ಇದರಲ್ಲಿ ಭಾಗವಹಿಸುವ ಪ್ರತಿಯಿಬ್ಬರ ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ನಾವು ಅಹಿಂಸಾ ಮಾರ್ಗವನ್ನು ಬಳಸುತ್ತಿದ್ದೇವೆ. ...'ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ’ ಒಂದು ನಾಯಕರಹಿತ ಚಳವಳಿ. ಇದರಲ್ಲಿ ಬೇರೆ ಬೇರೆ ವರ್ಣ, ಲಿಂಗ, ರಾಜಕೀಯ ದೃಷ್ಟಿಕೋನಗಳ ಜನರು ಭಾಗವಹಿಸುತ್ತಿದ್ದಾರೆ. ನಮ್ಮೆಲ್ಲರಲ್ಲಿರುವ ಸಮಾನ ಅಂಶವೆಂದರೆ ೧% ಜನರ ದುರಾಸೆ ಹಾಗೂ ಭ್ರಷ್ಟಾಚಾರವನ್ನು ೯೯%ಜನರಾದ ನಾವು ಇನ್ನು ಮುಂದೆ ಸಹಿಸಲು ಸಾಧ್ಯವೇ ಇಲ್ಲ"


ಇಲ್ಲಿ ಮೊಳಗುತ್ತಿರುವ ಘೋಷಣೆಗಳನ್ನೂ ನೋಡಿ-  "ನಾವು ಬಹಳ ಮಂದಿ, ಅವರು ಕೆಲವೇ ಮಂದಿ. ನಾವು ಎದ್ದು ನಿಂತರೆ ಅವರೇನು ಮಾಡ್ತಾರೆ?", "ಅವರು ಎಷ್ಟು ಅಂತ ಶ್ರೀಮಂತರಾಗುತ್ತಲೇ ಹೋಗುತ್ತಾರೆ? ಮೊದಲು ವಿದ್ಯಾರ್ಥಿಗಳ ಎಲ್ಲಾ ಸಾಲ ಮನ್ನಾ ಮಾಡಿ",  "ಅವರು ಹೇಳ್ತಾರೆ ಕಟ್ ಬ್ಯಾಕ್, ನಾವು ಹೇಳ್ತೀವಿ- ಫೈಟ್ ಬ್ಯಾಕ್ ಸಾಲಪಾವತಿಗೆ ಒಂದೇ ದಾರಿ- ಯುದ್ಧ ನಿಲ್ಲಿಸಿ, ಶ್ರೀಮಂತರ ಮೇಲೆ  ತೆರಿಗೆ ಹೆಚ್ಚಿಸಿ". ಹೀಗೆ ಇಂತಹ ಹಲವಾರು ಘೋಷಣೆಗಳನ್ನು ಹಾಕುತ್ತಾ ಹುಮ್ಮಸ್ಸಿನಿಂದ ಪಾಲ್ಗೊಳ್ಳುತ್ತಿರುವ ಕಾರ್ಯಕರ್ತರ ಚಳುವಳಿ ಇಂದಿನ ಸಂದರ್ಭದಲ್ಲಿ ಜಾಗತಿಕ ಮಟ್ಟದ ಪ್ರಾಮುಖ್ಯತೆ ಇದೆ.

ಈ ಚಳವಳಿಯ ಹಲವಾರು ಬೇಡಿಕೆಗಳಲ್ಲಿ ಪ್ರಮುಖವಾದವೆಂದರೆ, 
* ಜನರ ಎಲ್ಲಾ ಬಗೆಯ ಸಾಲಗಳನ್ನು ಮನ್ನಾ ಮಾಡಬೇಕು.
* ಸಾಮಾಜಿಕ ಭದ್ರತಾ ಕ್ರಮಗಳನ್ನು ರದ್ದುಗೊಳಿಸದೇ ಹೆಚ್ಚಿಸಬೇಕು.
* ಸರ್ಕಾರದ ಆದಾಯ ಹೆಚ್ಚಿಸಲಿಕ್ಕಾಗಿ ಶೇಕಡಾ ೧೦ಷ್ಟು ಶ್ರೀಂಮಂತರ ಮೇಲೆ ತೆರಿಗೆ ಹೆಚ್ಚಿಸಬೇಕು
* ದೊಡ್ಡ ಕಾರ್ಪೊರೇಟ್ ಸಂಸ್ಥೇಗಳು ಜನತೆಯ ಭಾಗ ಅಲ್ಲ ಎಂದು ಸಂವಿಧಾನದಲ್ಲಿ ತಿದ್ದುಪಡಿ ತರುವುದು.
* ಸರ್ವರಿಗೂ ಹೆಲ್ತ್ ಕೇರ್ ವ್ಯವಸ್ಥೆ ಜಾರಿಗೊಳಿಸುವುದು.
* ಉಚಿತ ಕಾಲೇಜು ಶಿಕ್ಷಣ ನೀಡಬೇಕು.
* ಉದ್ಯೋಗ ಭದ್ರತೆ ಹಾಗೂ ಉತ್ತಮ ವೇತನ ಖಾರಿಗೊಳಿಸಬೇಕು.
* ಮೂಲಸೌಕರ್ಯಗಳಿಗಾಗಿ (ನೀರು, ಒಳಚರಂಡಿ, ರೈಲ್ವೆ, ರಸ್ತೆ, ಸೇತುವೆ, ವಿದ್ಯುತ್) ಒಂದು ಲಕ್ಷಕೋಟಿ ಡಾಲರ್
ನೀಡಬೇಕು.
* ಪರಿಸರ ಸಂರಕ್ಷಣೆಗಾಗಿ ಒಂಟು ಲಕ್ಷ ಕೋಟಿ ಡಾಲರ್ ನೀಡಬೇಕು.
* ತೈಲ ಇಂದನಾಧಾರಿತ ವಿದ್ಯುತ್ ಮೇಲಿನ ಅವಲಂಬನೆ ಕೊನೆಗೊಳಿಸಿ ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು.
* ಲಿಂಗ ಹಾಗೂ ಜನಾಂಗೀಯ ಭೇಧಗಳನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಸಮಾನಹಕ್ಕು ತಿದ್ದು ಪಡಿ ತರಬೇಕು, ಇತ್ಯಾದಿ.

ಈ ಚಳವಳಿ ತನ್ನ ಕೇಂದ್ರವನ್ನು ವಾಲ್‌ಸ್ಟ್ರೀಟನ್ನೇ ಕೇಂದ್ರಮಾಡಿಕೊಂಡಿರುವುದಕ್ಕೆ ಕಾರಣವಿದೆ. ಇಂದು ಅಮೆರಿಕದ ಇಡೀ ಹಣಕಾಸು ವ್ಯವಹಾರ ನಡೆಯುವುದು ವಾಲ್‌ಸ್ಟ್ರೀಟ್‌ನಲ್ಲಿ. ಜಗತ್ತಿನ ಅತಿದೊಡ್ಡ ಶೇರು ಮಾರುಕಟ್ಟೆಯಾದ ನ್ಯೂಯಾರ್ಕ್ ಸ್ಟಾಕ್ ಎಕ್ಸ್‌ಚೇಂಜ್ ಹಾಗೂ ನಾಸ್ಡಾಕ್ ಎಲ್ಲಾ ಇರುವುದು ಇಲ್ಲೇ. ’ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳಿ’ ಚಳವಳಿಯ ಲೋಗೋ ನೋಡಿ. ಗೂಳಿಯ ಮೇಲೆ ನೃತ್ಯಗೈಯುತ್ತಿರುವ ಯುವತಿಯ ಚಿತ್ರ!  


ತಮ್ಮ ಚಳವಳಿಗೆ ಮುಖ್ಯವಾಹಿನಿ ಮಾಧ್ಯವಮಗಳು ಬೆಂಬಲ ನೀಡಲಾರವು ಎಂಬ ಸಂಶಯವಿಟ್ಟುಕೊಂಡೇ ಚಳವಳಿಗಾರರು ಸಾಧ್ಯವಿರುವ ಎಲ್ಲಾ ಪರ್ಯಾಯ ಮಾಧ್ಯಮಗಳನ್ನೂ ಬಳಸಿಕೊಳ್ಳುತ್ತಿದ್ದಾರೆ. ’ಆಕ್ಯುಪೈ ವಾಲ್‌ಸ್ಟ್ರೀಟ್ ಜರ್ನಲ್ ಎಂಬ ಪತ್ರಿಕೆಯನ್ನೂ’ ಹೊರತರುತ್ತಿದ್ದಾರೆ. ಅದರ ಮೊದಲ ಸಂಚಿಕೆಯ ಮುಖಪುಟದಲ್ಲೇ ಕ್ರಾಂತಿ ಈಗ ತಾಯ್ನಾಡಿನಲ್ಲೇ ಭುಗಿಲೆದ್ದಿದೆ ಎಂಬ ಒಕ್ಕಣೆಯಿತ್ತು. ಇದರೊಂದಿಗೆ ಫೇಸ್‌ಬುಕ್,  ಟ್ವಿಟರ್‌ಗಳು, ಯೂಟ್ಯೂಬ್, ವೆಬ್‌ಸೈಟ್ ಹೀಗೆ ಎಲ್ಲವೂ ನಿರಂತರವಾಗಿ ಜನಸಾಮಾನ್ಯರಿಗೆ ಸುದ್ದಿವಾಹಿನಿಗಳಾಗಿ, ಚರ್ಚಾ ವೇದಿಕೆಗಳಾಗಿ ಕೆಲಸ ಮಾಡುತ್ತಿದೆ. ಜನರು ವ್ಯಾಪಕವಾಗಿ ಬಳಸುವ ವಿಕಿಪಿಡಿಯಾ ಕೂಡಾ ಚಳವಳಿಯ ಬೆಳವಣಿಗೆಯನ್ನು ದಾಖಲಿಸುತ್ತಿದೆ. ಅರಬ್ ಹಾಗೂ ಭಾರತದಲ್ಲೇ ಸಾಕಷ್ಟು ಕೆಲಸ ಮಾಡಿರುವ ಇವುಗಳೆಲ್ಲಾ ಅಮೆರಿಕದಲ್ಲಿ ಮಾಡದಿರುತ್ತವೆಯೆ?

ಸೆಪ್ಟೆಂಬರ್ ೧೭ರಿಂದ ಆರಂಭವಾದ ಈ ಚಳವಳಿಯ ಮೊದಲ ದಿನ ಸುಮಾರು ಒಂದು ಸಾವಿರ ಕಾರ್ಯಕರ್ತರು ಬೀವಿಗಳಲ್ಲಿ ಜಮಾಯಿಸಿ ಝುಕ್ಕೊಟ್ಟಿ ಪಾರ್ಕ್‌ನಲ್ಲಿ ಕಾರ್ಡ್‌ಬೋರ್ಡ್‌ಗಳ ಸಹಾಯದಿಂದ ಜೋಪಡಿ ಹಾಕಿಕೊಂಡು ತಂಗಿದ್ದರು, (ನ್ಯೂಯಾರ್ಕ್ ಪೋಲೀಸ್ ಇಲಾಖೆ ಟೆಂಟ್‌ಬಳಕೆಯನ್ನು ನಿಷೇಧಿಸಿದ ಕಾರಣ).  ಆ ವಾರ ಪೋಲೀಸರು ನಾಲ್ಕು ಜನರನ್ನು ಬಂಧಿಸಿದ್ದರು. ಸೆ.೨೪ರಂದು ಕನಿಷ್ಟ ೮೦ ಜನರನ್ನು ಬಂಧಿಸಲಾಗಿತ್ತು. ಅಂದು ನಡೆದ ಜಟಾಪಟಿಯಲ್ಲಿ ಮೂವರು ಮಹಿಳೆಯರ ಮೇಲೆ ಪೋಲೀಸರು ಬಲೆಯನ್ನು ಬೀಸಿ ’ಪೆಪ್ಪರ್’ (ಮೆಣಸು ಕಾಳಿನ ದ್ರವ) ಸಿಂಪಡಿಸಿ ಹಲ್ಲೆ ನಡೆಸಿದ್ದರು. ಇದನ್ನು ಕೂಡಲೇ ಯೂಟ್ಯೂಬ್‌ನಲ್ಲಿ ಬಹಿರಂಗಪಡಿಸಿದ ಪ್ರತಿಭಟನಾಕಾರರು ಆ ಪೋಲೀಸ್ ಅಧಿಕಾರಿಯ ಸಂಪೂರ್ಣ ವಿವರ, ಫೋನ್ ನಂಬರ್‌ಗಳನ್ನೂ ಪ್ರಕಟಿದ್ದರು. ಯಾವುದೇ ಪೊಲೀಸ್ ಅಧಿಕಾರಿ ಕೆಟ್ಟದಾಗಿ ವರ್ತಿಸಿದ ಮರುಕ್ಷಣವೇ ಆತನ ಎಲ್ಲಾ ವರ್ತನೆಯನ್ನೂ ವಿಡಿಯೋ ಸಮೇತ ಜಗತ್ತಿನ ವೀಕ್ಷಣೆಗೆ ಬಿಡಲಾಗುತ್ತಿದೆ!


ಅಕ್ಟೋಬರ್ ೧ರಂದು ಬ್ರೂಕ್‌ಲಿನ್ ಸೇತುವೆ ಮೇಲೆ ಪ್ರತಿಭಟಿಸಿದ ಸುಮಾರು ೭೦೦ ಜನರನ್ನು ಪೋಲೀಸರು ಬಂಧಿಸಿದ್ದರು. ಇಲ್ಲಿ ಹೀಗೆ ಬಂಧಿಸುವಾಗ ಪೋಲೀಸರು ’ಕೆಟ್ಲಿಂಗ್’ ಎಂಬ ತಂತ್ರವನ್ನು ಪ್ರಯೋಗಿಸುತ್ತಿದ್ದಾರೆ. ನಮ್ಮ ದೇಶದಲ್ಲಿ ನಡೆಸುವಂತೆ ಹಠಾತ್ ಲಾಠಿ ಚಾರ್ಜು, ಹಲ್ಲೆಗಳನ್ನು ಅಮೆರಿಕದಲ್ಲಿ ನಡೆಸಲು ಸಾಧ್ಯವಾಗುವುದಿಲ್ಲ. ಮಾನವ ಹಕ್ಕು, ಪ್ರಜಾತಂತ್ರಗಳ ಕುರಿತ ಮುಂದುವರಿದ ದೇಶಗಳ ಜನರ ಜನರ ಪ್ರಜ್ಞಾಮಟ್ಟ ಹೆಚ್ಚಿರುವುದರಿಂದ ಪೋಲೀಸ್ ಅಧಿಕಾರಿಗಳು ಮನಬಂದಂತೆ ವರ್ತಿಸಲು ಬರುವುದಿಲ್ಲ. ಹೀಗಾಗಿ ಪ್ರತಿಭಟನಾಕಾರರನ್ನು ಆದಷ್ಟು ಚದುರಿಸಿ, ದಿಕ್ಕು ತಪ್ಪಿಸಿ ಗುಂಪು ಗುಂಪಾಗಿ ಬಂದಿಸುವ ತಂತ್ರ ಹೂಡುವ ಕೆಟ್ಲಿಂಗ್ ಕೂಡಾ ಬಹಳಷ್ಟು ಸಲ ಟೀಕೆಗೊಳಗಾಗಿದೆ. 


ಅಕ್ಟೋಬರ್ ೫ ರಂದು ನ್ಯೂಯಾರ್ಕ್ ನಗರದ ಹತ್ತಾರು ಶಾಲಾಕಾಲೇಜುಗಳ ಸಾವಿರಾರು ವಿದ್ಯಾರ್ಥಿಗಳು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆಯಲ್ಲಿ ಸೇರಿಕೊಂಡರು. ಅಂದು ನಡೆದ ಮೆರವಣಿಗೆಯಲ್ಲು ಸುಮಾರು ೧೫,೦೦೦ ಜನರು ಪಾಲ್ಗೊಂಡಿದ್ದರು. ಹೀಗೆ ದಿನೇ ದಿನೇ ಆಂದೋಲನದಲ್ಲಿ ಹೆಚ್ಚೆಚ್ಚು ಜನರು ಭಾಗವಹಿಸುತ್ತಲೇ ಇದ್ದಾರೆ.

೧೯೯೯ರಲ್ಲಿ ಸಿಯಾಟಲ್‌ನಲ್ಲಿ ನಡೆದ ಡಬ್ಲ್ಯೂಟಿಓ ಸಮ್ಮೇಳನದ ವಿರುದ್ಧ ಹಾಗೂ ನಂತರ ಇರಾಕ್ ಯುದ್ಧದ ವಿರುದ್ಧ ಬೃಹತ್ ಚಳವಳಿ ನಡೆದಿದ್ದವು ಅವುಗಳಲ್ಲಿ ಲಕ್ಷಾಂತರ ಜನರು ಸೇರಿದ್ದರಾದರೂ ಅವು ನಿರ್ದಿಷ್ಟ ದಿನಗಳಂದು ನಡೆದ ಪ್ರದರ್ಶನಗಳು. ಆದರೆ ಈಗ ನಡೆಯುತ್ತಿರುವುದು ಬೇರೆಯದೇ ಸ್ವರೂಪದ್ದು. 


ಹಾಗಾದರೆ ಇಡೀ ಜಗತ್ತಿಗೇ ಬುದ್ಧಿ ಹೇಳುವ ಅಮೆರಿಕದಂಥ ಅಮೆರಿಕದಲ್ಲಿ ಇಂತಹ ಒಂದು ಬಂಡಾಯ ಹುಟ್ಟಿಕೊಂಡಿರುವುದು ಯಾಕೆ? ಈಗ ಹುಟ್ಟಿರುವ ಚಳವಳಿಯ ವ್ಯಾಪ್ತಿಯೇನು? ಇದರ ಶಕ್ತಿ ಏನು? ದೌರ್ಬಲ್ಯಗಳೇನು? ಈ ಕುರಿತು ಕೊಂಚ ತಲೆಕೆಡಿಸಿಕೊಳ್ಳುವ ಅಗತ್ಯ ಭಾರತೀಯರಿಗೂ ಇದೆ. ಯಾಕೆ ಇದರ ಅಗತ್ಯ ನಮಗಿದೆ ಎಂದರೆ ಎರಡನೆಯ ವಿಶ್ವ ಮಹಾಯುದ್ಧದ ನಂತರದಲ್ಲಿ ಅದರಲ್ಲೂ ಸೋವಿಯತ್ ಒಕ್ಕೂಟ ಕುಸಿದ ಮೇಲೆ ಇಡೀ ಜಗತ್ತನ್ನು ತನ್ನ ಅಂಕೆಯಲ್ಲಿಟ್ಟುಕೊಂಡಿರುವುದು ಅಮೆರಿಕ. ನೂರಾರು ದೇಶಗಳಲ್ಲಿ ಬುಡಮೇಲು ಕೃತ್ಯಗಳನ್ನು, ಸಾವಿರಾರು ಪ್ರಾಕ್ಸಿ ಯುದ್ಧಗಳನ್ನು ನಡೆಸುತ್ತಾ ಇಡೀ ಜಗತ್ತಿನ ಬಹುಪಾಲು ದೇಶಗಳನ್ನು ತನ್ನ ಪದತಲದಲ್ಲಿ ಬೀಳುವಂತೆ ಮಾಡಿಕೊಂಡು ಕೇಕೆ ಹಾಕುತ್ತಿರುವುದು ಅಮೆರಿಕ. ಒಂದು ಕಡೆ ಮುಕ್ತ ಆರ್ಥಿಕತೆಯ ನೀತಿಗಳನ್ನು ಎಲ್ಲರ ಮೇಲೆ ಹೇರುತ್ತಲೇ ತಾನು ಮಾತ್ರ ರಕ್ಷಣಾತ್ಮಕ ನೀತಿಗಳನ್ನು ಪಾಲಿಸಿಕೊಂಡು ಇಬ್ಬಗೆಯ ನೀತಿಯನ್ನು ಪಾಲಿಸುತ್ತಿರುವುದು ಇದೇ ಅಮೆರಿಕ. ಜಗತ್ತಿನ ತೈಲಸಂಪನ್ಮೂಲಗಳ ಮೇಲಿನ ಹಿಡಿತಕ್ಕಾಗಿ ಲಕ್ಷಾಂತರ ಜನರ ಮಾರಣಹೋಮ ನಡೆಸಿರುವುದೂ ಇದೇ ಅಮೆರಿಕ. ಇಂದು ಇಡೀ ಜಗತ್ತನ್ನು ಕಾಡುತ್ತಿರುವ ಇಸ್ಲಾಂ ಭಯೋತ್ಪಾದನೆಗೆ ಬೀಜ ನೆಟ್ಟು, ನೀರು ಗೊಬ್ಬರ ಹಾಕಿ ಈಗ ಮತ್ತೆ ಭಯೋತ್ಪಾದನೆಯ ವಿರುದ್ಧದ ಹೋರಾಟದ ಹೆಸರಿನಲ್ಲಿ ತನ್ನ ಅಜೆಂಡಾಗಳನ್ನು ಜಗತ್ತಿನ ಮೇಲೆ ಹೇರುತ್ತಿರುವುದೂ ಇದೇ ಅಮೆರಿಕ. ಇಂದು ಜಗತ್ತಿನ ಪ್ರತಿಯೊಬ್ಬ ಮನುಷ್ಯನೂ ಕೂಡ ಅಮೆರಿಕ ತನ್ನ ಹಿತಾಸಕ್ತಿಗಾಗಿ ಹಾಕಿಕೊಟ್ಟ ಅಜೆಂಡಾಗಳನ್ನು ಒಂದಲ್ಲಾ ಒಂದು ರೀತಿಯಲ್ಲಿ ಪಾಲಿಸುತ್ತಲೇ ಇದ್ದಾನೆ ಎಂದರೆ ಅತಿಶಯೋಕ್ತಿಯಲ್ಲ. ಆದರೆ ಇದೆಲ್ಲಾ ಜಾಗತೀಕರಣ ಮುಸುಕಿನಲ್ಲಿ ನಡೆಯುತ್ತಿರುವುದರಿಂದ ಅದನ್ನೆಲ್ಲಾ ನಮ್ಮದೇ ಎಂಬಂತೆ ನಾವು ಒಪ್ಪಿಕೊಂಡು ಹೋಗುತ್ತಿದ್ದೇವಷ್ಟೆ.

ಇಂತಿಪ್ಪ ಅಮೆರಿಕದ ಪ್ರಭುತ್ವದ ವಿರುದ್ಧ ಅಮೆರಿಕದ ಪ್ರಜೆಗಳೇ ದಂಗೆಯೇಳುವ ಸ್ಥಿತಿ ಉಂಟಾಗಿದೆ ಎಂದರೆ ನಾವು ಖಂಡಿತಾ ಇದನ್ನು ಕೊಂಚ ಹತ್ತಿರದಿಂದ ಗಮನಿಸುವ ಅಗತ್ಯವಿದೆ. ಇದಕ್ಕಾಗಿ ಈ ಚಳವಳಿಗೆ ಕಾರಣವಾಗಿರುವ ಅಮೆರಿಕ ಆರ್ಥಿಕತೆಯನ್ನು ಸಂಕ್ಷಿಪ್ತವಾಗಿಯಾದರೂ ಅರಿಯಬೇಕಾಗುತ್ತದೆ.

ಕಳೆದ ಆಗಸ್ಟ್ ತಿಂಗಳಲ್ಲಿ ಅಮೆರಿಕ ಅಮೆರಿಕ ಸರ್ಕಾರದ ಋಣಾರ್ಹತೆ ಮಟ್ಟವನ್ನು ಅಲ್ಲಿನ ಪ್ರಮುಖ ಮೌಲ್ಯಮಾಪನಾ ಸಂಸ್ಥೆಗಳಲ್ಲೊಂದಾದ ಎಸ್ & ಪಿ  ಎಎಎ ಯಿಂದ ಎಎ+ಗೆ ಇಳಿಸಿತ್ತು. ತಾನು ಸುಸ್ತಿದಾರನಾಗುವ ಹಂತಕ್ಕೆ ಹೋಗುವುದನ್ನು ತಪ್ಪಿಸಲು ಒಬಾಮಾ ಸರ್ಕಾರವು ಸಾಲ ಒಪ್ಪಂದ ಕಾಯ್ದೆಯನ್ನು ಜಾರಿ ಮಾಡಿತು. ಮುಂದಿನ ಹತ್ತು ವರ್ಷಗಳಲ್ಲಿ ಅಮೆರಿಕವು ಸರ್ಕಾರದ ವೆಚ್ಚಗಳನ್ನು ೨ ರಿಂದ ೨.೪ ಲಕ್ಷ ಕೋಟಿ ಡಾಲರುಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. ಇನ್ನೂ ಸ್ವಲ್ಪ ಹಿಂದಕ್ಕೆ ಹೋಗೋಣ. ೨೦೦೮ರ ಸೆಪ್ಟೆಂಬರ್ ತಿಂಗಳಲ್ಲಿ ಅಮೆರಿಕದ ಸಬ್‌ಪ್ರೈಂ ಗೃಹಸಾಲ ಬಿಕ್ಕಟ್ಟು ಸ್ಪೋಟಗೊಂಡಿತ್ತು. ಅಮೆರಿಕಾದ ಎಲ್ಲಾ ಹಣಕಾಸು ಉದ್ದಿಮೆಗಳೂ ಸಹ ಒಂದಲ್ಲಾ ಒಂದು ರೀತಿಯಲ್ಲಿ ಈ ಸಬ್‌ಪ್ರೈಮ್ ಗೃಹಸಾಲ ಮಾರುಕಟ್ಟೆಯೊಳಗೆ ಕಾಲಿಟ್ಟಿದ್ದವು. ವಾಣಿಜ್ಯ ಬ್ಯಾಂಕುಗಳು ಅಗ್ಗದ ಬಡ್ಡಿ ದರದಲ್ಲಿ ನೀಡತೊಡಗಿದ್ದ ಗೃಹಸಾಲ ಉದ್ದಿಮೆಗೆ ಕಾಲಿಟ್ಟ ಹಣಕಾಸು ಸಂಸ್ಥೆಗಳು ಬೃಹತ್ ಮಟ್ಟದಲ್ಲಿ ರಿಯಲ್ ಎಸ್ಟೇಟ್ ದಂಧೆ ನಡೆಸತೊಡಗಿದ್ದೇ ಬೃಹತ್ ಪ್ರಮಾಣದ ಬಂಡವಾಳ ಸಂಚಯವಾಗತೊಡಗಿತ್ತು. ಆದರೆ ಯಾವಾಗ ಇದ್ದಕ್ಕಿದ್ದಂತೆ ಹೆಚ್ಚೆಚ್ಚು ಜನರು ಗೃಹಸಾಲದ ಕಂತುಕಟ್ಟಲಾರದೆ ಜನರು ಡಿಫಾಲ್ಟರ್ ಆಗತೊಡಗಿದ್ದರೋ ಆಗ ಈ ಉದ್ದಿಮೆಯನ್ನವಲಂಭಿಸಿ ಬಹುದೂರ ಹೋಗಿಬಿಟ್ಟದ್ದ ಆರ್ಥಿಕತೆಯೆಲ್ಲವೂ ಕುಸಿಯತೊಡಗಿತ್ತು. ಎಂತಹ ಪರಿಸ್ಥಿತಿ ಸೃಷ್ಟಿಯಾಗಿತ್ತೆಂದರೆ ೨೦೦೭ರ ಡಿಸೆಂಬರ್‌ನಲ್ಲಿ ಅಮೆರಿಕಾದಲ್ಲಿ ಬ್ಯಾಂಕುಗಳಿಗೆ ಬಾಕಿ ಬರಬೇಕಿದ್ದ ಈ ಸಬ್‌ಫ್ರೈಮ್ ಗೃಹಸಾಲದ ಒಟ್ಟು ಮೊತ್ತ ೭೦ ಲಕ್ಷ ಕೋಟಿ ರೂಗಳು! ಅದೇ ವರ್ಷ ೧೩ ಲಕ್ಷ ಮನೆಗಳು ಜಪ್ತಿಯಾದವು. ಹೀಗೆ ಜಪ್ತಿಯಾಗಿ  ಬೀದಿಗೆ ಬಿದ್ದವರ ಸಂಖ್ಯೆ ೪೫ ಲಕ್ಷ ದಾಟಿತ್ತು!. ಮನೆಗಳ ಬೆಲೆಗಳು ಶೇ. ೪೦ ರಷ್ಟು ಕುಸಿದಿದ್ದರೂ ಕೊಳ್ಳುವವರೇ ಗತಿ ಇರಲಿಲ್ಲ. ೧.೮೬ ಕೋಟಿ ಮನೆಗಳು ಹೀಗೆ ಧೂಳು ಹಿಡಿದು ಕೂತಿದ್ದವು. ಆದರೆ ಆ ಮನೆಗಳಲ್ಲಿರಬೇಕಾದವರು ಬೀದಿ ಮೂಲೆಗಳಲ್ಲಿ, ತಮ್ಮ ಕಾರುಗಳೊಳಗೆ, ರೈಲು ಬೋಗಿಗಳಲ್ಲಿ, ಪಾರ್ಕ್‌ಗಳಲ್ಲಿ ರಾತ್ರಿ ಕಳೆಯುವ ಪರಿಸ್ತಿತಿ ಬಂದೊದಗಿತ್ತು! 


ಮತ್ತೊಂದೆಡೆ ಲೀಮಾನ್ ಬ್ರದರ‍್ಸ್‌ನಂತಹ ಹೂಡಿಕೆ ಬ್ಯಾಂಕುಗಳು ದಿವಾಳಿಯಾದವು. ಕೆಲವು ಬ್ಯಾಂಕುಗಳನ್ನು ಸರ್ಕಾರ ರಾಷ್ಟ್ರೀಕರಣ ಮಾಡಿ ಉಳಿಸಿಕೊಂಡಿತು. ಅಮೆರಿಕ ಸರ್ಕಾರ ಕೂಡಲೇ ಸುಮಾರು ೭೦೦ ಶತಕೋಟಿ ಡಾಲರುಗಳ ಬೇಲೌಟ್ ನೀಡಿತ್ತು. ಹಣಕಾಸು ಸಂಸ್ಥೆಗಳಿಗೆ ತತ್ಕಾಲಿಕ ಸಾಲ ನೀಡುವ ಕಮರ್ಷಿಯಲ್ ಪೇಪರ್ ಕೂಡಾ ಕುಸಿದು ಬಿದ್ದಿದ್ದೇ ಇದಕ್ಕೆ ಕಾರಣವಾಗಿತ್ತು. ಆರ್ಥಿಕತೆಯ ಈ ಬಿಕ್ಕಟ್ಟಿನಿಂದಾಗಿ ಅಂದು ಅಮೆರಿಕದಲ್ಲೇ ಕೆಲಸ ಕಳೆದುಕೊಂಡವರು ೧೨ ಲಕ್ಷಕ್ಕಿಂತ ಹೆಚ್ಚು ಮಂದಿ. ಈ ಬಿಕ್ಕಟ್ಟು ಅಂದು ಇತರ ದೇಶಗಳಿಗೂ ಹರಡಿ ಎಲ್ಲೆಡೆ ಇದೇ ಬೆಳವಣಿಗೆಗಳಾದವು.

೧೯೩೦ರಲ್ಲಾದಂತೆಯೇ ಮತ್ತೊಂದು ಆರ್ಥಿಕ ಮಹಾಕುಸಿತದ ಮುನ್ಸೂಚನೆ ದೊರೆತು ಜಗತ್ತು ತಲ್ಲಣಗೊಂಡಿತ್ತು. ಇದು ಅಮೆರಿಕದಲ್ಲಿ ಡಬಲ್ ಡಿಪ್ ಡಿಪ್ರೆಷನ್ ಸ್ಥಿತಿ. ಅಂದರೆ ಈಗಾಗಲೇ ಒಂದು ಬಿಕ್ಕಟ್ಟಿನಿಂದ ಪೂರ್ತಿ ಚೇತರಿಸಿಕೊಳ್ಳುವಷ್ಟರಲ್ಲೇ ಮತ್ತೊಂದು ಆರ್ಥಿಕ ಕುಸಿತದ ಭಯ!

೨೦೦೮ರ ಈ ಕುಸಿತವಾದಾಗ ಅಮೆರಿಕ ಸರ್ಕಾರ ಹಾಗೂ ಅನೇಕ ಆರ್ಥಿಕ ಪಂಡಿತರು ಗೃಹಸಾಲ ಮಾರುಕಟ್ಟೆಯನ್ನು ದೂರಿದರಾಗಲೀ ಈ ಸಮಸ್ಯೆಯ ಕಾರಣವನ್ನು ಗುರಿತಿಸಿ ಅದಕ್ಕೆ ಪರಿಹಾರ ಕಂಡು ಹಿಡಿಯುವ ಪ್ರಯತ್ನ ಮಾಡಲಿಲ್ಲ.

ಇಷ್ಟಕ್ಕೆಲ್ಲ ಇದ್ದ ಮೂಲ ಕಾರಣವನ್ನು ಹೆಚ್ಚಿನ ವಿವರಗಳನ್ನೂ ಅಂಕಿ ಅಂಶಗಳನ್ನು ನೀಡುವ ಗೊಡವೆಗೆ ಹೋಗದೇ ಅತ್ಯಂತ ಸರಳವಾಗಿ ಹೀಗೆ ಹೇಳಬಹುದು - ಅದು ಅಮೆರಿಕ ಕೇಂದ್ರಿತ ಜಾಗತಿಕ ಮಾರುಕಟ್ಟೆ ವ್ಯವಸ್ಥೆ ನೈಜವಾದ ಆರ್ಥಿಕತೆಯಿಂದ (ಅಂದರೆ ಉತ್ಪಾದನೆಯನ್ನು, ಉದ್ಯೋಗವನ್ನು ಆಧರಿಸಿದ ಆರ್ಥಿಕತೆ) ವಿಮುಖಗೊಂಡು ಹಣಕಾಸು ಬಂಡವಾಳವನ್ನು ಅಗಾಧವಾಗಿ ಸಂಚಯಿಸಿಕೊಳ್ಳುತ್ತಾ ಹೋದದ್ದು. ಕೊನೆಗೆ ಇಡೀ ಆರ್ಥಿಕತೆಯೇ ಸಾಲದ ವ್ಯಸನಕ್ಕೊಳಗಾಗಿ ಈಗ ದಿವಾಳಿ ಹಂತಕ್ಕೆ ತಲುಪಿದ್ದು. ಉತ್ಪಾದನೆ ಆಧಾರಿತ ಕೈಗಾರಿಕೆ ಮತ್ತು ಸೇವಾಕ್ಷೇತ್ರಗಳು ಒಂದು ಹಂತದಲ್ಲಿ ಸ್ಥಗಿತಗೊಂಡು ಸಾಲಾಧಾರಿತ ಸಟ್ಟಾ ವ್ಯಾಪಾರ (speculative Buisiness ದ ಪ್ರಾಬಲ್ಯ ತೀವ್ರಗೊಂಡಿದ್ದು. ಇದು ಬೇರೇನೂ ಆಗಿರದೇ ಹಣಕಾಸು ಮಾರುಕಟ್ಟೆಯೊಳಗಿನ ಜೂಜು ಮಾತ್ರವಾಗಿದ್ದದ್ದು. ಅಮೆರಿಕದಲ್ಲಿ ಎಲ್ಲಾ ಕ್ಷೇತ್ರಗಳನ್ನೂ ಗಣನೆಗೆ ತೆಗೆದುಕೊಂಡರೆ ೧೯೫೪ರಲ್ಲಿ ಒಟ್ಟು ಜಿಡಿಪಿಗೆ ಹೋಲಿಸಿ ನೋಡಿದಾಗ ಅಲ್ಲಿನ ಸಾಲ ಶೇಕಡಾ ೧೫೩ರಷ್ಟಿದ್ದರೆ ೨೦೦೭ರಲ್ಲಿ ಶೇಕಡಾ ೩೭೩ರಷ್ಟಿತ್ತೆಂದರೆ ಸಾಲದ ಪಾತ್ರವನ್ನು ಊಹಿಸಬಹುದು. ಮಾತ್ರವಲ್ಲ ಅತ್ತ ನೈಜ ಆರ್ಥಿಕತೆ ಯಾವ ಬೆಳವಣಿಗೆಯನ್ನೂ ಕಾಣದೇ ಬಡತನ, ನಿರುದ್ಯೋಗಗಳು ಕ್ರಮೇಣ ಹೆಚ್ಚತೊಡಗಿದ್ದರೆ ಆರ್ಥಿಕತೆಯನ್ನು ಹೀಗೆ ಬರೀ ಪೇಪರ್ ಮೇಲಿನ (ಕಂಪ್ಯೂಟರ್ ಎಂದು ಓದಿಕೊಳ್ಳಿ) ಹಣದ ಮೇಲೆಯೇ ನಿಲ್ಲಿಸಿದ ಪರಿಣಾಮವಾಗಿ ಕಾರ್ಪೊರೇಷನ್‌ಗಳು ವಿಪರೀತ ಲಾಭ ಮಾಡತೊಡಗಿದವು. ಮಧ್ಯಮ ವರ್ಗದವರ ಆದಾಯದಲ್ಲಿ ಅಂತಹ ಏರಿಕೆ ಇಲ್ಲದಿದ್ದರೂ ಈ ಹಣಕಾಸು ಸಂಸ್ಥೆಗಳು ಸಾವಿರ ಸಾವಿರ ಪಟ್ಟು ಲಾಭ ಮಾಡಿಕೊಂಡವು. ಅಮೇರಿಕಾದಲ್ಲಿ ೨೦೦೧ರಲ್ಲಿ ಹಣಕಾಸು ವ್ಯವಸ್ಥೆಯ ತುತ್ತತುದಿಯಲ್ಲಿದ್ದ ಶೇ೧ರಷ್ಟು ಹಣಕಾಸು ಬಂಡವಾಳವು ಕೆಳಹಂತದ ಶೇ. ೮೦ರಷ್ಟು ಜನರ ಒಟ್ಟು ಆದಾಯದ ನಾಲ್ಕು ಪಟ್ಟು ಇತ್ತು. ೨೦೦೬ರಲ್ಲಿ ಅಮೆರಿಕಾದ ೬೦ ಅತ್ಯಂತ ಶ್ರೀಮಂತರ ಬಳಿ ೬೩೦ ಬಿಲಿಯ ಡಾಲರುಗಳಷ್ಟು ಮೊತ್ತದ ಸಂಪತ್ತು ಶೇಖರಣೆಗೊಂಡಿತ್ತು!. ಆರ್ಥಿಕತೆ ಎಂದರೇ ಹಣಕಾಸು ಆರ್ಥಿಕತೆ ಎಂದು ಆದ ಪರಿಣಾಮವಾಗಿ ಇಡೀ ವ್ಯವಸ್ಥೆಯನ್ನು ನಿಯಂತ್ರಿಸುವವರೇ ಈ ಕಾರ್ಪೊರೇಟರ್‌ಗಳಾದರು. ಹೀಗೆ ಪ್ರಜಾಪ್ರಭುತ್ವ ವ್ಯವಸ್ಥೆಗಳು ಕಾರ್ಪೊರೇಟ್ ಪ್ರಭುತ್ವಗಳಾಗಿ ಪರಿವರ್ತನೆಯಾಗಿದ್ದವು. 


ಆದರೆ ಒಳಗೆ ಯಾವ ಹೂರಣವೂ ಇಲ್ಲದೇ ಹೀಗೆ ಬಲೂನಿನಂತೆ ಊದಿಕೊಳ್ಳುತ್ತಲೇ ಹೋದ ಆರ್ಥಿಕತೆ ಭಾರೀ ಸದ್ದಿನೊಂದಿಗೆ ಒಡೆದು ಜಗತ್ತಿನ ಆರ್ಥಿಕ ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡುವ ಸೂಚನೆ ೨೦೦೮ರಲ್ಲಿ ಸಿಕ್ಕಿತ್ತು. ಆದರೆ ತಾವು ಆರ್ಥಿಕತೆಯಲ್ಲಿ ಸೃಷ್ಟಿಸಿದ್ದ ನಿಜವಾದ ಸಮಸ್ಯೆಯನ್ನು ಸರಿಪಡಿಸಲು ಬಂಡವಾಳದ ನೇತಾರರು ತಯಾರಿಲ್ಲ.

೧೯೩೦ರ ದಶಕದಲ್ಲೇ ರಲ್ಲೇ ಪ್ರಸಿದ್ಧ ಅರ್ಥಶಾಸ್ತ್ರಜ್ಞ  ಕೀನ್ಸ್ ಹೀಗೆ ಆರ್ಥಿಕತೆಯನ್ನು ಹಣಕಾಸಿನ ನೀರುಗುಳ್ಳೆಯ ಮಟ್ಟಕ್ಕೆ ಸೀಮಿತಗೊಳಿಸುವುದರ ಅಪಾಯವನ್ನು ವಿವರಿಸಿದ್ದರು. ಕೀನ್ಸ್ ಕೂಡಾ ಬಂಡವಾಳಶಹಿ ಪರವಾದ ಅರ್ಥಜ್ಞನೇ ಆಗಿದ್ದರೂ ಅವರು ಪ್ರತಿಪಾದಿಸಿದ್ದು ವಿವೇಕಶೀಲವಾದಂತಹ ಬಂಡವಾಳವಾದವನ್ನು. ಬದಲಾಗಿ ಇಂದಿರುವ ದುರಾಸೆಯ ಬಂಡವಾಳವಾದವನ್ನು ಖಂಡಿತಾ ಆಗಿರಲಿಲ್ಲ. ೧೯೮೦ರ ದಶಕದಲ್ಲೇ ಅಮೆರಿಕ ಕೇಂದ್ರಿತ ಜಾಗತಿಕ ಹಣಕಾಸು ವ್ಯವಸ್ಥೆಯ ಜಾಡು ಹಿಡಿದ ಪೌಲ್ ಸ್ವೀಜಿಯಂತಹ ಎಡಪಂಥೀಯ ಅರ್ಥಶಾಸ್ತ್ರಜ್ಞರೂ ಸಹ ಸನಿಹದಲ್ಲೇ ಬಂದೆರಗಲಿರುವ ಅಪಾಯವನ್ನು ತಿಳಿಸಿದ್ದರು. ಇದು ಇಡೀ ಜಗತ್ತನ್ನು ಮತ್ತೊಂದು ಆರ್ಥಿಕ ಕುಸಿತಕ್ಕೆ ಕೊಂಡೊಯ್ಯಲಿದೆ ಎಂದೂ ಅಂಕಿ ಅಂಶಗಳ ಸಮೇತ ತಿಳಿಸಿದ್ದರು. ಅವರು ಹೇಳಿದ್ದೆಲ್ಲಾ ಈಗ ಸಾಕ್ಷಾತ್ಕಾರವಾಗುತ್ತಿದೆ.  


ಜಾಗತೀಕರಣ ಎಂದರೆ ಅಮೇರಿಕೀಕರಣ ಎಂದು ಬಣ್ಣಿಸುವ ನಮ್ಮ ಡಾ. ಯು. ಆರ್. ಅನಂತಮೂರ್ತಿಯಂತಹವರ ಅಭಿಪ್ರಾಯ ಮುಖ್ಯವಾಗುವುದು ಈ ಕಾರಣದಿಂದಲೇ. 


ಇಂತಹ ಒಂದು ಸಂದರ್ಭದಲ್ಲಿ ಹುಟ್ಟಿಕೊಂಡಿರುವ ಅಮೆರಿಕದ ಈ ಚಳವಳಿ ’ವಾಲ್‌ಸ್ಟ್ರೀಟ್ ವಶಪಡಿಸಿಕೊಳ್ಳುವ ಕರೆನೀಡಿ ಹೊರಟಿರುವುದು ಇಡೀ ಜಗತ್ತಿನ ಪ್ರಜಾಪ್ರಭುತ್ವವಾದಿಗಳ ದೃಷ್ಟಿಯಿಂದ ಅತ್ಯಂತ ಸ್ವಾಗತಿಸಬೇಕಾದ ಬೆಳವಣಿಗೆ. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿರುವ ಜಗತ್ತಿನ ಜನಸಾಮಾನ್ಯರ ಸಾಕ್ಷಿಪ್ರಜ್ಞೆ ಎಂದೇ ಕರೆಯಬಹುದಾದ ನೋಮ್ ಚಾಮ್‌ಸ್ಕಿ ಕೂಡಾ ಈ ಚಳವಳಿಯನ್ನು ಸ್ವಾಗತಿಸಿದ್ದಾರೆ. ಆಶಾಭಾವನೆ ವ್ಯಕ್ತಪಡಿಸಿದ್ದಾರೆ. 


ಈ ಚಳವಳಿ ತನ್ನನ್ನು ತಾನು ’ನಾಯಕರಹಿತ’ ಎಂದು ಬಣ್ಣಿಸಿಕೊಂಡಿದೆ. ಆದರೆ ಇದರಲ್ಲಿ ಒಳಿತೂ ಉಂಟು, ಕೆಡುಕೂ ಉಂಟು. ಒಬ್ಬ ನಾಯಕ ಇಲ್ಲದೇ ಪ್ರತಿಯೊಂದು ನಿರ್ಧಾರವನ್ನೂ ಸಾಮೂಹಿಕವಾಗಿ ತೆಗೆದುಕೊಳ್ಳುತ್ತಿರುವ ಕಾರಣ ಸರ್ಕಾರಕ್ಕೆ ಈ ಚಳವಳಿಯನ್ನು ಹತ್ತಿಕ್ಕಲು ಸುಲಭಸಾಧ್ಯವಾಗಲಾರದು. ಮತ್ತು ಒಬ್ಬನ ಅಭಿಪ್ರಾಯವನ್ನು ಇಡೀ ಚಳವಳಿಯ ಮೇಲೆ ಹೇರಲು ಸಾಧ್ಯವಾಗಲಾರದು. ಆದರೆ ಇಡೀ ಜಗತ್ತಿನ ಚಳವಳಿಗಳನ್ನು ನೋಡಿದರೆ ಅಲ್ಲಿ ಒಬ್ಬ ನಾಯಕನಿರುತ್ತಾನೆ ಎಂದರೆ ಆತನ ಬೆನ್ನಿಗೆ ಒಂದು ಸಿದ್ದಾಂತವೂ ಇರುತ್ತದೆ. ಆ ಸಿದ್ದಾಂತ ಎಷ್ಟು ಮಾನವೀಯವಾಗಿರುತ್ತದೆಯೋ ಅಷ್ಟು ಗಟ್ಟಿತನ ಆ ಚಳವಳಿಗಿರುತ್ತದೆ. ಮಾತ್ರವಲ್ಲ ಈಗಿನ ಚಳವಳಿ ಪ್ರಮುಖವಾಗಿ ಅಲ್ಲಿನ ಮಧ್ಯಮ ವರ್ಗದ ಕೈಯಲ್ಲಿರುವುದರಿಂದ ಅದು ಎಷ್ಟರ ಮಟ್ಟಿಗೆ ಯಶಸ್ಸು ಸಾಧಿಸುತ್ತದೆ ಎನ್ನುವುದೂ ಸಂಶಯಕ್ಕೆಡೆಮಾಡುತ್ತದೆ. ಮಾತ್ರವಲ್ಲ. ಇಲ್ಲಿ ಹಲವಾರು ಸಿದ್ದಾಂತಗಳ ಕಾಕ್‌ಟೇಲ್. ಇಲ್ಲಿ ಕೂಡಾ ನೀತಿ ನಿರೂಪಣೆಗಳ ಮೇಲೆ, ಕಾರ್ಯಕರ್ತರ ಮೇಲೆ ತಂತಮ್ಮ ಸಿದ್ದಾಂತಗಳನ್ನು ಹೇರುವ ಪ್ರಯತ್ನಗಳು ನಡೆಯುತ್ತಿವೆ. ಇಂತಹ ಪರಿಸ್ಥಿತಿ ಗೊಂದಲ ಮೂಡಿಸುವ ಸಾಧ್ಯತೆಯೂ ಇರುತ್ತದೆ. 


ಅಮೆರಿಕಕ್ಕೆ ಚಳವಳಿಗಳನ್ನು ಎಲ್ಲಾ ರೀತಿಯಲ್ಲೂ ಬಗ್ಗು ಬಡಿಯುವ ವಿಧಾನಗಳೂ ಗೊತ್ತಿವೆ. ಸೈನಿಕವಾಗಿಯೂ, ರಾಜಕೀಯವಾಗಿಯೂ ನೂರಾರು ಚಳವಳಿಗಳನ್ನು ಹುಟ್ಟು ಹಾಕಿದ ಹಾಗೂ ಬಗ್ಗುಬಡಿದ ಚರಿತ್ರೆಯೇ ಅಮೆರಿಕಕ್ಕೆ ಇದೆ. ಈಗ ಭುಗಿಲೆದ್ದ ಚಳವಳಿಯನ್ನು ಅಗತ್ಯ ಬಂದರೆ ಅತ್ಯಂತ ತೀವ್ರವಾಗಿ ಸರ್ಕಾರ ಹತ್ತಿಕ್ಕಬಹುದು. ಈಗ ಅಮೆರಿಕದಲ್ಲಿ ಮತ್ತೊಂದು ತಿಯನನ್‌ಮನ್ ಚೌಕ ಮರುಕಳಿಸಬಹುದು. ಆದರೆ ಇಂದಿನ ಅಮೆರಿಕದ ಟೆಕ್ ಸ್ಯಾವಿ ಪೀಳಿಗೆಯ ಮುಂದೆ ಅಂತದ್ದೊಂದನ್ನು ನಡೆಸುವುದೇನೂ ಸುಲಭಸಾಧ್ಯವಲ್ಲ ಬಿಡಿ. ಎಚ್ಚೆತ್ತ ಜನಶಕ್ತಿಯ ಮುಂದೆ ಎಲ್ಲಾ ಬಗೆಯ ಸರ್ವಾಧಿಕಾರಗಳೂ ಮಂಡಿಯೂರಿರುವುದೂ ಇತಿಹಾಸವೇ ಎಲ್ಲವೇ?  


ಇದೇ ಸಂದರ್ಭ ಅಮೆರಿಕನ್ನರಿಗೆ ಮತ್ತೊಂದು ಅವಕಾಶವನ್ನೂ ಸೃಷ್ಟಿಸಿದೆ. ಅದೇನೆಂದರೆ ಅವರು ನಿವಾದ ಅರ್ಥದಲ್ಲಿ ಮನುಷ್ಯರಾಗುವ ಅವಕಾಶ!. ವಾಸ್ತವದಲ್ಲಿ ಇಂದು ಅಮೆರಿಕದ ಶ್ರೀಮಂತಿಕೆ ನಿಂತಿರುವುದೇ ತೃತೀಯ ಜಗತ್ತಿನ ಸಂಪತ್ತಿನ ಲೂಟಿಯನ್ನಾಧರಿಸಿ ಹಾಗೂ ಬಡದೇಶಗಳ ಜನರ ಅಗ್ಗದ ಶ್ರಮವನ್ನು ದೋಚಿದ್ದರ ಪರಿಣಾಮವಾಗಿ. ಯಾವ ಸರ್ಕಾರಗಳು ಬಂಡವಾಳಿಗರ ಲಾಭಕ್ಕಾಗಿ ಸರಕು ಸಂಸ್ಕೃತಿಯನ್ನು, ಕೊಳ್ಳುಬಾಕ ಸಂಸ್ಕೃತಿಯನ್ನು ಪ್ರೇರೇಪಿಸಿ ತಾವು ಸಾಲದ ಬಲೆಯಲ್ಲಿ ಬೀಳುವ ಜೊತೆಗೆ ಜನರನ್ನೂ ಸಾಲದ ವ್ಯಸನಕ್ಕೆ ಗುರಿಮಾಡಿದ್ದರೋ ಆ ಎಲ್ಲಾ ಸರ್ಕಾರಗಳನ್ನೂ ಅಮೆರಿಕನ್ನರು ಚುನಾವಣೆಯಿಂದ ಚುನಾವಣೆಗೆ ಗೆಲ್ಲಿಸಿಕೊಂಡೇ ಬಂದಿದ್ದಾರೆ. ತಮ್ಮ ಸರ್ಕಾರಗಳ ಇಂತಹ ನೀತಿಗಳನ್ನು ಹಾಗೂ ತಮ್ಮ ಅನುಭೋಗೀ ಸಂಸ್ಕೃತಿಯ ಕುರಿತ ದೊಡ್ಡ ಮಟ್ಟದಲ್ಲಿ ಚಿಂತನೆ ನಡೆಸುವ ಅವಕಾಶವನ್ನಾದರೂ ಈಗಿನ ಚಳವಳಿ ಸೃಷ್ಟಿಸಿದರೆ ಅದೇ ಚಳವಳಿಯ ಅತಿದೊಡ್ಡ ಯಶಸ್ಸಾಗಲಿದೆ. 



-ಹರ್ಷ ಕುಮಾರ್ ಕುಗ್ವೆ

Tuesday, October 4, 2011

ಇವರು ಸಮೂಹ ಸನ್ನಿಗೊಳಗಾದರೆ ಪತ್ರಿಕೋದ್ಯಮ ಇರುತ್ತದೆಯೇ?


ಪತ್ರಿಕೆಗಳನ್ನು ವಿತರಿಸುವ ಹುಡುಗರು ಇಲ್ಲದಿದ್ದರೆ ಎಂಬ ಕಾಲ್ಪನಿಕ ಪ್ರಶ್ನೆಯೊಂದನ್ನಿಟ್ಟುಕೊಂಡು ಛಾಯಾಕನ್ನಡಿ ಬ್ಲಾಗ್ ನ ಶಿವು ಕೆ. ಲೇಖನವೊಂದನ್ನು ಬರೆದಿದ್ದಾರೆ. ಇವತ್ತಿನ ಪತ್ರಿಕೋದ್ಯಮದಲ್ಲಿ ಪತ್ರಿಕೆ ಹಂಚುವ ಹುಡುಗರ ಅನಿವಾರ್ಯತೆ ಮತ್ತು ಅವರ ಕೊಡುಗೆಯನ್ನು ಈ ಲೇಖನ ವಿವರಿಸುತ್ತದೆ. -ಸಂ

ಕೇಂದ್ರ ಸರ್ಕಾರವನ್ನು ನಡುಗಿಸಿ, ವಿಶ್ವದ ಗಮನವನ್ನೇ ಸೆಳೆದ ಅಣ್ಣಾ ಅಜಾರೆ ಭ್ರಷ್ಟಾಚಾರ ವಿರುದ್ದದ ಉಪವಾಸ ಸತ್ಯಗ್ರಹ ನಮಗೆಲ್ಲಾ ಗೊತ್ತೇ ಇದೆ. ಪ್ರತಿಯೊಬ್ಬ ನಾಗರೀಕನಲ್ಲೂ ಭ್ರಷ್ಟಾಚಾರವನ್ನು ಹೋಗಲಾಡಿಸಲು ಹೋಆಟ ಮಾಡಬೇಕೆನ್ನುವ ಸಂಚಲನವನ್ನೇ ಉಂಟು ಮಾಡಿದ ಆರೋಗ್ಯಕರ ಸಮೂಹ ಸನ್ನಿ ಎನ್ನಬಹುದು.  ಇಂಥ ಅಓಗ್ಯಕರ ಸಮೂಹ ಸನ್ನಿ ನಮಗೆ ಬೇಕಿತ್ತು.

ಇಂಥದ್ದೇ ಒಂದು ಸಮೂಹ ಸನ್ನಿ ನಮ್ಮ ಪೇಪರ್ ಹಾಕುವ ಹುಡುಗರಲ್ಲಿ ನೆಗಟೀವ್ ಆಗಿ ಆಗಿಬಿಟ್ಟರೆ  ಏನಾಗಬಹುದು? ಅಂತ ಒಮ್ಮೆ ಪ್ರಶ್ನಿಸಿಕೊಂಡೆ. ನಿಜಕ್ಕೂ ಒಂದು ಕ್ಷಣ ಹೃದಯ ಬಡಿತ ನಿಂತಂತೆ ಆಗಿ ಆತಂಕ ದಿಗಿಲುಗಳು ಒಟ್ಟಿಗೆ ಮೈಮನಸ್ಸುಗಳನ್ನು ಆವರಿಸಿಕೊಂಡವು.  ಇದೇನಿದು ಪೇಪರ್ ಹಾಕುವ ಹುಡುಗರ ಮನಸ್ಸು ಬದಲಾದರೇ ಹೃದಯಬಡಿತ ನಿಲ್ಲುವಂತದ್ದು, ದಿಗಿಲು, ಆತಂಕ ಪಡುವಂತದ್ದು ಏನಾಗಿಬಿಡುತ್ತದೆ ಅಂತ ನಿಮ್ಮಲ್ಲಿ ಪ್ರಶ್ನೆ ಮೂಡಬಹುದು.  ವಿವರಿಸಿಬಿಡುತ್ತೇನೆ ಬಿಡಿ..

ಎಲ್ಲೋ ಪುಟ್ಟ ಗುಡಿಸಲಿನಲ್ಲಿ ಮಲಗಿದ್ದ ಒಬ್ಬ ಹದಿನೆಂಟು ವರ್ಷದ ಪೇಪರ್ ಹಾಕುವ ಹುಡುಗನಿಗೆ ಒಂದು ಅಲೋಚನೆ ಬರುತ್ತದೆ.  ಅದನ್ನು ತನ್ನ ಇತರ ಪೇಪರ್ ಹಾಕುವ ಹುಡುಗರಿಗೆ ಹೇಳುತ್ತಾನೆ. ಅದು ಒಬ್ಬರಿಂದ ಒಬ್ಬರಿಗೆ ಎಸ್ ಎಂ ಎಸ್  ತರ ಸಾಗಿ ಹತ್ತು..ನೂರು...ಸಾವಿರ...ಕೊನೆಗೆ ಭಾರತದಾದ್ಯಂತ ಮುಂಜಾನೆ ದಿನಪತ್ರಿಕೆ ಹಂಚುವ ಎಲ್ಲಾ ಹುಡುಗರ ಮನಸ್ಸಿನಲ್ಲಿಯೂ ಆದೇ ಅಲೋಚನೆ ಗಟ್ಟಿಯಾಗಿಬಿಡುತ್ತದೆ.  ನಿಮಗೆ ಗೊತ್ತಿರಲಿ, ನಮ್ಮ ಭಾರತದಾದ್ಯಂತ ಪೇಪರ್ ಹಾಕುವ ಹುಡುಗರೆಲ್ಲರ ವಯಸ್ಸು ಹದಿನೈದರಿಂದ ಇಪ್ಪತ್ತೈದು. ಈ ಪೇಪರ್ ಹಾಕುವ ಕೆಲಸವನ್ನು ಹಣವಂತರ ಮಕ್ಕಳು ಮಾಡುವುದಿಲ್ಲ. ಶೋಕಿಗೆ ಅಥವ ವ್ಯಾಯಾಮಕ್ಕೆ ಆಗುತ್ತೆ ಅಂದುಕೊಂಡು ಬರುವವರು ಹೆಚ್ಚೆಂದರೆ ಒಂದು ವಾರ-ಹದಿನೈದು ದಿನವಷ್ಟೆ. ಅಷ್ಟರಲ್ಲಿ ಬೇಸರವಾಗಿ ಮನೆಯಲ್ಲಿ ಸುಖನಿದ್ರೆ ಮಾಡುತ್ತಾರೆ. ಇನ್ನೂ ಮೇಲ್ಮದ್ಯಮ, ಮದ್ಯಮ ವರ್ಗದ ಹುಡುಗರು ಇತ್ತ ಸುಳಿಯುವುದಿಲ್ಲ. ಸುಳಿದರೂ ಅವರ ಕತೆ ಶ್ರೀಮಂತ ಹುಡುಗರ ಕತೆಯೇ!  ಇಲ್ಲಿ ಅವರ ತಂದೆ ತಾಯಿಗಳಿಗೆ ಗೌರವ ಅಂತಸ್ಥು, ಪಕ್ಕದ ಮನೆಯವರು, ಸಂಬಂಧಿಕರು ಏನಂದುಕೊಳ್ಳುತ್ತಾರೋ ಎನ್ನುವ ಕಾರಣಕ್ಕೆ ಅವರ ಮಕ್ಕಳನ್ನು ಈ ಕೆಲಸಕ್ಕೆ ಕಳಿಸುವುದಿಲ್ಲ. ಇನ್ನೂ ಕೆಳ ಮದ್ಯಮವರ್ಗದವರು ಸ್ವಲ್ಲ ಜನ ಬರುತ್ತಾರಾದರೂ ಅವರು ತಾತ್ಕಾಲಿಕ ಅಷ್ಟೆ. ಇಂಥ ಕೆಲಸಕ್ಕೆ ಬಡತನದಲ್ಲಿರುವವರು, ಸ್ಲಮ್‌ನಲ್ಲಿರುವ ಹುಡುಗರು, ಮನೆಯಲ್ಲಿ ಕಷ್ಟವಿರುವವರು. ಇವರೇ ಮುಂಜಾನೆ ದಿನಪತ್ರಿಕೆ ಸಂತೆಯ ಜೀವಾಳ. ಈ ಹುಡುಗರ ಮನಸ್ಥಿತಿಯನ್ನು ಎಂಥದ್ದು ಅಂದರೆ ಇವರೊಮ್ಮೆ ಮನಸ್ಸು ಮಾಡಿದರೆ ಕಿತ್ತು ಹೋದ ಕಚಡ ಮಾಸ್ ಸಿನಿಮವನ್ನು ಸೂಪರ್ ಹಿಟ್ ಮಾಡಿಬಿಡಬಲ್ಲರು. ತುಂಬಾ ಚೆನ್ನಾಗಿರುವ ಮಾಸ್ ಚಿತ್ರವನ್ನು ಪ್ಲಾಪ್ ಮಾಡಿ ಡಬ್ಬದೊಳಗೆ ಹಾಕಿಬಿಡುವಂತೆ ಮಾಡುವವರು.  ಪಾದರಸಕ್ಕಿಂತ ವೇಗವಾಗಿ ಸದಾ ಚಂಚಲತೆಯನ್ನು ಹೊಂದಿರುವ, ಇವರು ಇದರಿಂದೇನು ಲಾಭವಿಲ್ಲ,  ಇಷ್ಟು ವರ್ಷ ನಮ್ಮ ಮುಂಜಾನೆ ಸಕ್ಕರೆ ನಿದ್ರೆಗಳನ್ನು ಹಾಳುಮಾಡಿಕೊಂಡು ಪೇಪರ್ ಹಾಕುವ ಕೆಲಸಕ್ಕೆ ನಿಂತೆವಲ್ಲ, ಇದನ್ನು ಮನೆ ಮನೆಗೆ ಹಾಕಿ ಯಾರನ್ನು ಉದ್ದಾರ ಮಾಡಬೇಕಾಗಿದೆ?  ನಾಳೆಯಿಂದ ಯಾರು ಪೇಪರ್ ಹಾಕುವ ಕೆಲಸಕ್ಕೆ ಹೋಗುವುದು ಬೇಡ ಅಂತ ತೀರ್ಮಾನಿಸಿ ಅಣ್ಣಾ ಅಜಾರೆಯಷ್ಟೇ ದೊಡ್ಡ ಸಂಚಲನ ಉಂಟು ಮಾಡಿದ ಸಮೂಹ ಸನ್ನಿಗೊಳಗಾಗಿಬಿಟ್ಟರೆ ಮುಂದೇನಾಗಬಹುದು..

ಮೊದಲು ಕೆಲಸ ಕಳೆದುಕೊಳ್ಳುವುದು ನಮ್ಮಂಥ ನೂರಾರು ಸಾವಿರಾರು ವೆಂಡರುಗಳು. ಒಬ್ಬ ವೆಂಡರ್ ಹೆಚ್ಚೆಂದರೆ ೨೦೦ ದಿನಪತ್ರಿಕೆಯನ್ನು ಮುಂಜಾನೆ ಮನೆಮನೆಗಳಿಗೆ ವಿತರಿಸಬಹುದು ಅದಕ್ಕಿಂತ ಹೆಚ್ಚು ಸಾಧ್ಯವೇ ಇಲ್ಲ.  ಹಾಗೆ ಆದಲ್ಲಿ ಒಬ್ಬ ವೆಂಡರ್ ಆದಾಯ ನೂರರಲ್ಲಿ ೯೦% ಮಾಯವಾಗಿ  ೧೦% ಗಿಳಿಯುತ್ತದೆ.

ನಂಬರ್ ಒನ್ ಎಂದು ಮೀಸೆ ತಿರುಗಿಸುವ ಟೈಮ್ಸ್ ಆಫ್ ಇಂಡಿಯ ಸರ್ಕುಲೇಷನ್ ಐದು ಲಕ್ಷ ನಲವತ್ತು ಸಾವಿರದಿಂದ ಐವತ್ತನಾಲ್ಕು ಸಾವಿರಕ್ಕೆ ಇಳಿಯುತ್ತದೆ.

ಡೆಕ್ಕನ್ ಹೆರಾಲ್ಡ್ ಒಂದು ಲಕ್ಷದಿಂದ ಹತ್ತು ಸಾವಿರಕ್ಕೆ, ಹಿಂದೂ ದಿನಪತ್ರಿಕೆ ಅರವತ್ತು ಸಾವಿರದಿಂದ ಆರುಸಾವಿರಕ್ಕೆ, ಇಂಡಿಯನ್ ಎಕ್ಸ್ ಪ್ರೆಸ್ ನಲವತ್ತು ಸಾವಿರದಿಂದ ನಾಲ್ಕು ಸಾವಿರಕ್ಕೆ, ಡೆಕ್ಕನ್ ಕ್ರಾನಿಕಲ್ ಇಪ್ಪತ್ತು ಸಾವಿರದಿಂದ ಎರಡು ಸಾವಿರಕ್ಕೆ, ಡಿ ಎನ್ ಎ ಪತ್ರಿಕೆ ಹದಿನೆಂಟು ಸಾವಿರದಿಂದ ಸಾವಿರದ ಎಂಟು ನೂರಕ್ಕೆ ಇಳಿಯುತ್ತದೆ. ಮತ್ತೆ ಕನ್ನಡ ದಿನಪತ್ರಿಕೆಗಳಲ್ಲಿ ಎರಡು ಲಕ್ಷವಿರುವ ವಿಜಯ ಕರ್ನಾಟಕ ಇಪ್ಪತ್ತು ಸಾವಿರಕ್ಕೆ ಒಂದುಲಕ್ಷ ನಲವತ್ತು ಸಾವಿರವಿರುವ ಪ್ರಜಾವಾಣಿ ಹದಿನಾಲ್ಕು ಲಕ್ಷಕ್ಕೆ, ಅರವತ್ತು ಸಾವಿರವಿರುವ ಕನ್ನಡಪ್ರಭ ಆರುಸಾವಿರಕ್ಕೆ, ಮುವತ್ತು ಸಾವಿರವಿರುವ ಉದಯವಾಣಿ ಮೂರು ಸಾವಿರಕ್ಕೆ, ಹದಿನೆಂಟು ಸಾವಿರವಿರುವ ಸಂಯುಕ್ತ ಕರ್ನಾಟಕ ಸಾವಿರದ ಎಂಟುನೂರಕ್ಕೆ, ಇದು ಬಿಟ್ಟು ಹೊಸದಿಗಂತ, ವ್ಯಾಪಾರಿ ದಿನಪತ್ರಿಕೆಗಳಾದ ಎಕನಾಮಿಕ್ಸ್ ಟೈಮ್ಸ್, ಬುಸಿನೆಸ್ ಲೈನ್, ಬುಸಿನೆಸ್ ಸ್ಟಾಂಡರ್ಡ್, ಇತ್ಯಾದಿಗಳು ನೂರು ಇನ್ನೂರು ಲೆಕ್ಕಕ್ಕೆ ಇಳಿದುಬಿಡುತ್ತವೆ. ಇದು ಬೃಹತ್ ಬೆಂಗಳೂರಿನ ಲೆಕ್ಕಚಾರ. ಇತರೆ ನಗರಗಳು, ಇತರೆ ರಾಜ್ಯಗಳು, ಪೂರ್ತಿ ಭಾರತದ ಮುಂಜಾನೆ ದಿನಪತ್ರಿಕೆ ವಿತರಣೆ ಲೆಕ್ಕಾಚಾರ ಕೇವಲ ೧೦% ಗೆ ಇಳಿದುಬಿಡುತ್ತದೆ.

ನೂರು ರೂಪಾಯಿಯನ್ನು ನೋಡುತ್ತಿದ್ದ ನನ್ನಂತ ವೆಂಡರ್ ಹತ್ತು ರೂಪಾಯಿಗೆ ಎಷ್ಟು ದಿನ ಇಂಥ ವ್ಯಾಪಾರ ಮಾಡಿಯಾನು? ವಿಧಿಯಿಲ್ಲದೇ ಅವನು ಬೇರೆ ಉದ್ಯೋಗ, ಅಥವ  ವ್ಯಾಪರವನ್ನೋ ಹುಡುಕಿಕೊಳ್ಳುತ್ತಾನೆ.  ಅಲ್ಲಿಗೆ ಮೇಲೆ ವಿವರಿಸಿದ ಹತ್ತು ಪರಸೆಂಟ್ ಕೂಡ ಇಲ್ಲವಾಗುತ್ತದೆ.

ಯಾರು ಇದ್ದರೆಷ್ಟು ಬಿಟ್ಟರೆಷ್ಟು ಅಂದುಕೊಂಡ ಪತ್ರಿಕಾ ಕಛೇರಿಗಳು ತಾವೆ ವಿತರಣೆ ಮಾಡುತ್ತೇವೆ ಅಂತ ಮುಂದೆ ನಿಂತರೆ ಅವರಿಗೆ ಮನೆಮನೆಗೆ ತಲುಪಿಸಲು ಅವರ ವರದಿಗಾರರನ್ನು ಬಿಡುತ್ತಾರಾ, ಎಸಿ ರೂಮಿನಲ್ಲಿ ಕುಳಿತ ಡೆಸ್ಕ್ ಆಪರೇಟರುಗಳಿಗೆ ಸೈಕಲ್ ಕೊಟ್ಟು ಮನೆಮನೆಗೆ ಕಳಿಸುತ್ತಾರಾ? ಈಗಿನ ವರದಿಗಾರರು ಮತ್ತು ಡೆಸ್ಕ್ ಆಪರೇಟರುಗಳು ಆಕಾಶದಿಂದ ಇಳಿದುಬಂದ ರಾಜಕುಮಾರರಂತೆ ವರ್ತಿಸುವ ಇಂದಿನ ಕಾಲದಲ್ಲಿ ಅವರನ್ನು ಮನೆಮನೆಗೆ ಪೇಪರ್ ಹಂಚುವ ಕೆಲಸಕ್ಕೆ ಹಚ್ಚಿಬಿಟ್ಟರೆ ಅವರ ಅಹಂಗೆ ಕುಂದು ಬಂದಂತಾಗಿ ಅವರು ಖಂಡಿತ ಕೆಲಸ ಬಿಡುತ್ತಾರೆ. ಇದೆಲ್ಲವನ್ನು ಬಿಟ್ಟು ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಿಗೆ ಸೈಕಲ್ಲು, ಮೋಟರ್ ಸೈಕಲ್ ಕೊಟ್ಟು ಮನೆಮನೆಗೆ ಪೇಪರ್ ಹಾಕಲು ಕಳಿಸಿದರೂ ಇವರ ಅರ್ಹತೆಯೂ ವೆಂಡರಿನಷ್ಟೆ. ಮತ್ತೆ ಈಗಾಗಲೇ ಐದು ಆರಂಕಿ ಪಗಾರದ ರುಚಿಯನ್ನು ನೋಡಿರುವ ಇವರೆಲ್ಲಾ ಐನೂರು ಸಾವಿರಕ್ಕೆ ಕೆಲಸ ಮಾಡುತ್ತಾರಾ? ಅಲ್ಲಿಗೆ ಇದು ಕಾರ್ಯಸಾಧುವಲ್ಲವೆಂದಾಯಿತು.

ಈ ಪತ್ರಿಕೆ ಕಛೇರಿಯವರು ಮೊಂಡುಬಿದ್ದು ವೆಂಡರುಗಳು ಬೇಡ, ಪೇಪರ್ ಹಾಕುವ ಹುಡುಗರೂ ಬೇಡ ಅಂತ ಅಜೆಂಡ ಹೊರಡಿಸಿ, ಈ ದಿನಪತ್ರಿಕೆ ವಿತರಣೆ ಕೆಲಸಕ್ಕೆ ಹೊಸದಾಗಿ ನೂರಾರು ಜನರನ್ನು ನೇಮಿಸಿಕೊಂಡರೂ ಪ್ರತಿಯೊಬ್ಬನೂ ಹೆಚ್ಚೆಂದರೆ ಇನ್ನೂರು ಪೇಪರುಗಳನ್ನು ಮನೆಮನೆಗೆ ತಲುಪಿಸಬಹುದು....ಅಲ್ಲಿಗೆ ಅವನ ಕತೆಯೂ ವೆಂಡರ್‌ಗಿಂತ ವ್ಯತ್ಯಾಸವೇನು ಇಲ್ಲ. ಮತ್ತೆ ಅವನ ಕೆಲಸಕ್ಕೆ ವೆಂಡರಿಗೆ ಸಿಗುವ ೧೦% ಅಧಾಯವನ್ನೆ ಸಂಬಳವಾಗಿ ಕೊಟ್ಟರೆ ಅವನಿಗೆ ಅದು ಸಾಲದಾಗಿ ಒಂದೇ ತಿಂಗಳಿಗೆ ಕೆಲಸ ಬಿಟ್ಟು ಓಡುತ್ತಾನೆ. ಅಥವ ಅವರ ಸಂಬಳವನ್ನು ೧೦% ಗೆ ೯೦% ಸೇರಿಸಿ ಕೊಟ್ಟರೆ ಪತ್ರಿಕೆ ಕಂಪನಿಗಳು ಒಂದೇ ತಿಂಗಳಿಗೆ ಬಾಗಿಲು ಮುಚ್ಚಿಕೊಂಡು ಒಳಗೆ ಮಲಗಬೇಕಾಗುತ್ತದೆ.

ಶಿವು ಕೆ.
ಮತ್ತೇನು ಮಾಡಬಹುದು ಅಂತ ಬೇಎ ದಿಕ್ಕಿನಲ್ಲಿ ಅಲೋಚಿಸಿದಾಗ ಹೀಗೆ ಹೊಸದಾಗಿ ನೇಮಕ ಮಾಡಿಕೊಂಡ ನೂರಾರು ಜನರನ್ನೇ ಮನೆಮನೆಗಳಿಗೆ ವಿತರಿಸುವ ಬದಲು ನೂರು ಇನ್ನೂರು ಪತ್ರಿಕೆಗಳನ್ನು ನೇರವಾಗಿ ಎಲ್ಲಾ ಏರಿಯಗಳಲ್ಲಿರುವ ದೊಡ್ಡ-ಪುಟ್ಟ ಅಂಗಡಿಗಳಿಗೆ ಕೊಟ್ಟರೆ ಅವರು ಭರ್ಜರಿ ವ್ಯಾಪರ ಮಾಡಬಹುದು ಅಂದುಕೊಂಡರೆ ಅದು ಸುಳ್ಳೇ ಸುಳ್ಳು. ನಿಮಗೆ ಮತ್ತೊಂದು ವಿಚಾರ ಗೊತ್ತಿರಲಿ, ಬೆಂಗಳೂರಿನಲ್ಲಿ ಪ್ರಿಂಟ್ ಆಗುವ ಎಲ್ಲಾ ದಿನಪತ್ರಿಕೆಗಳ ಕೇವಲ ೧% ಮಾತ್ರ ಅಂಗಡಿಗಳಲ್ಲಿ ಸೇಲ್ ಆಗುತ್ತವೆ. ಎಷ್ಟೇ ಶ್ರಮವಹಿಸಿ ಚಾಣಕ್ಷತೆ ಮೆರೆದರೂ ಇದು ೫% ದಾಟುವುದಿಲ್ಲ. ಏಕೆ ದಾಟುವುದಿಲ್ಲವೆನ್ನುವುದಕ್ಕೆ ಕಾರಣಗಳನ್ನು ಕೊಡುತ್ತೇನೆ.  ಬೆಂಗಳೂರಿನ ಒಂದು ಏರಿಯದಲ್ಲಿ ನೂರು ಮೀಟರ್ ರಸ್ತೆಯ ಆ ಬದಿ ಈ ಬದಿ ಎರಡು ಅಂಗಡಿಗಳಿದ್ದರೂ ಆ ನೂರು ಮೀಟರ್ ಸುತ್ತಳತೆಯಲ್ಲಿರುವ ಒಂದು ಸಾವಿರ ಮನೆಗಳಲ್ಲಿ ಕೇವಲ ನಲವತ್ತು-ಐವತ್ತು ಮನೆಯವರು ಮಾತ್ರ ಮನೆಯಿಂದ ಹೊರಗೆ ವಾಕಿಂಗ್ ಅಂತ ಬಂದು ಪೇಪರ್ ಕೊಳ್ಳುತ್ತಾರೆ. ಅಲ್ಲಿಗೆ ೫೦ ಪೇಪರ್ ಮಾತ್ರ ಖರ್ಚಾಯಿತು.  ಉಳಿದ ಮನೆಯವರಿಗೆ ಪೇಪರ್ ಓದುವ ಆಸಕ್ತಿಯಿಲ್ಲ ಇಲ್ಲವಾ ಅಂದುಕೊಂಡರೆ ಅವರಲ್ಲಿ ಕಡಿಮೆಯೆಂದರೂ ಇನ್ನೂ ಏಳುನೂರು ಮನೆಗಳವರಿಗೆ ಪೇಪರ್ ಬೇಕಿದೆ. ಆದ್ರೆ  ನಮ್ಮ ಬೆಂಗಳೂರು ಇವರಿಗೆಲ್ಲಾ ಅದೆಂತ ಅರಾಮದಾಯಕ ಜೀವನವನ್ನು ಒದಗಿಸಿಕೊಟ್ಟಿದೆಯೆಂದರೆ ಅವರು ಕುಳಿತಲ್ಲೆ ಮಲಗಿದಲ್ಲೇ ಬೇಕಾದರೆ ವೆಂಡರುಗಳ ಜೊತೆ ಪೇಪರ್ ಹುಡುಗರ ಜೊತೆ ಫೋನಿನಲ್ಲೇ ಅರ್ಧಗಂಟೆ ಮಾತಾಡುತ್ತಾರೆ ಹೊರತು, ಮನೆಯಿಂದ ಹೊರಬಂದು ಮೆಟ್ಟಿಲಿಳಿದು ಪೇಪರ್ ಅಂಗಡಿಯಲ್ಲಿ ಪೇಪರ್ ಕೊಳ್ಳುವುದಿಲ್ಲ. ಇದೆಲ್ಲಾ ನಮ್ಮ ಬೆಂಗಳೂರು ಇವರಿಗೆ ಕರುಣಿಸಿರುವ ಮಾರ್ವಾಡಿ ಬದುಕಿನ ಗಿಪ್ಟ್. ಇದೇ ಲೆಕ್ಕಾಚಾರದಲ್ಲಿ ಈಗ ನೂರು ಮೀಟರ್ ಅಂತರದಲ್ಲಿರುವ ಸಾವಿರ ಮನೆಗಳಲ್ಲಿ ವೆಂಡರುಗಳು-ಪೇಪರ್ ಹುಡುಗರ ಮೂಲಕ ಏಳುನೂರಕ್ಕೂ ಹೆಚ್ಚು ಮನೆಗಳಿಗೆ,  ನೂರು ಮನೆಗಳಿರುವ ಅಪಾರ್ಟ್‌ಮೆಂಟಿನಲ್ಲಿ ೯೫ ಮನೆಗಳ ಬಾಗಿಲಿಗೆ, ಮೆಟ್ಟಿಲ ಮೇಲೆ, ಬಾಲ್ಕನಿಗಳ ಮೇಲೆ, ಪೇಪರುಗಳು ಸುರಕ್ಷಿತವಾಗಿ ತಲುಪುತ್ತಿವೆ ಎನ್ನುವ ವಿಚಾರ ನಿಮ್ಮ ಮನಸ್ಸಿನಲ್ಲಿರಲಿ. ನಾನಿಲ್ಲಿ ವಿವರಿಸಿದ ವಿಚಾರಗಳು ಬೆಂಗಳೂರಿಗೆ ಸೀಮಿತವಾದರೂ ಇತರೆ ನಗರಗಳು ಹಾಗೂ ನಮ್ಮ ಭಾರತದಾದ್ಯಂತ ಒಂದರಡು % ಹೆಚ್ಚು ಕಡಿಮೆಯಾದರೂ ದೊಡ್ಡ ಬದಲಾವಣೆಯೇನಿಲ್ಲ.

ಮತ್ತೊಂದು ವಿಚಾಅವಿದೆ. ಅದು ಜಾಹೀರಾತಿಗೆ ಸಂಬಂಧಿಸಿದ್ದು.  ನೀವ್ಯಾರು ಬೇಕಾಗಿಲ್ಲ. ನೀವಿಲ್ಲದಿದ್ದಲ್ಲಿ ನಮ್ಮ ಪತ್ರಿಕೆ ನಿಂತುಹೋಗುವುದಿಲ್ಲ ನಮಗೆ ಜಾಹಿರಾತಿನ ಅದಾಯವಿದೆ. ಅದರಿಂದ ನಾವು ಪತ್ರಿಕೆಯನ್ನು ನಡೆಸುತ್ತೇವೆ ಬೇಕಾದರೆ  ಪತ್ರಿಕೆಯನ್ನು ಉಚಿತವಾಗಿ ಹಂಚುತ್ತೇವೆ ಅಂತ ಶೂರ ಧೀರ ಏಕಾಂಗಿ ವೀರರಂತೆ ಮುನ್ನುಗ್ಗಿದರೂ ಹಾಗೆ ಉಚಿತವಾಗಿ ಮನೆಮನೆಗೆ ತಲುಪಿಸಲು ನೂರಾರು ಸಾವಿರಾರು ಕೆಲಸಗಾರರು ಬೇಕಾಗುತ್ತದೆ.  ಮತ್ತೆ ಅವರೆಲ್ಲಾ ವೆಂಡರುಗಳು ಮತ್ತು ಪೇಪರ್ ಬಾಯ್‌ಗಳಾಗುವುದಕ್ಕೆ ಆಗುವುದಿಲ್ಲ. ಈ ರೀತಿ ಉಚಿತವಾಗಿ ಹಂಚಿದರೂ ಈಗಿನ ಜಾಹಿರಾತು ತುಂಬಿದ ಪೇಪರುಗಳನ್ನು ಮತ್ತೆ ಹತ್ತು % ಮಾತ್ರ ಹಂಚಲು ಸಾಧ್ಯ. ಇನ್ನೂ ನಾಲ್ಕರಷ್ಟು ಹೆಚ್ಚು ಕೆಲಸಗಾರರನ್ನು ನೇಮಿಸಿ ಮನೆಮನೆಗೆ ಹಂಚುತ್ತೇವೆ. ಅಂತ ಶುರುಮಾಡಿದರೇ ಅದು ಖಂಡಿತ ಚೆನ್ನಾಗಿ ನಡೆಯುತ್ತದೆ.  ಆಹಾ! ಎಲ್ಲಾ ಪತ್ರಿಕೆಗಳು ಉಚಿತವಾಗಿ ಸಿಗುತ್ತಿವೆಯಲ್ಲಾ ಅಂತ ಗ್ರಾಹಕರು ಪುಲ್ ಖುಷ್!  ಆದ್ರೆ ಉಚಿತವಾಗಿ ಹಂಚುವವನು ಉಪ್ಪುಕಾರ ತಿನ್ನುವ, ನವರಸಗಳ ಮನುಷ್ಯರೇ ತಾನೆ!  ಒಂದು ತಿಂಗಳು ತುಂಬಾ ಖುಷಿಯಾಗಿ ತಾವು ಪಡೆಯುವ ಸಂಬಳಕ್ಕೆ ತಕ್ಕಂತೆ ಉಚಿತವಾಗಿ ಮನೆಮನೆಗೆ ಪೇಪರ್ ತಲುಪಿಸುತ್ತಾರೆ.  ಮುಂದಿನ ತಿಂಗಳಿಗೆ ಅವರ ತಲೆ ತಿರುಗುತ್ತದೆ. ಮನೆಮನೆಗೆ ಉಚಿತವಾಗಿ ಏಕೆ ಕೊಡಬೇಕು. ಅದರ ಬದಲು ತೂಕಕ್ಕೆ ಹಾಕಿದರೆ ಸಕ್ಕತ್ ಹಣಬರುತ್ತದಲ್ಲಾ....ಸರಿಯಾಗಿ ಹಾಕಬೇಕು ಎನ್ನುವುದಕ್ಕೆ ಮನೆಯವರೇನು ಹಣಕೊಡುವುದಿಲ್ಲವಲ್ಲ. ಒಂದೆರಡು ದಿನ ತಪ್ಪಿಸಿದರಾಯಿತು..ಅಂದುಕೊಂಡು ಒಂದೆರಡು ದಿನ ತಪ್ಪಿಸಿ ತೂಕಕ್ಕೆ ಹಾಕುತ್ತಾರೆ. ಈ ಸುಲಭದ ಹಣ ಯಾವಾಗ ಕೈತುಂಬ ಸಿಗಲು ಪ್ರಾರಂಭವಾಗುತ್ತದೋ...ಅಲ್ಲಿಗೆ ಅದು ಒಂದು ವಾರ, ತಿಂಗಳು.ಹುಚ್ಚುಮುಂಡೆ ಮದುವೆಯಲ್ಲಿ ಉಂಡವನೇ ಜಾಣ ಅಂತ ಈ ಕೆಲಸಗಾರರೆಲ್ಲಾ ಚೆನ್ನಾಗಿ ಹಣ ಮಾಡುತ್ತಾರೆ....ಹೀಗೆ ಮುಂದುವರಿದು  ಪತ್ರಿಕೋದ್ಯಮದ ಮಾರುಕಟ್ಟೆ ವ್ಯವಸ್ಥೆಯೇ ಅಡ್ಡದಾರಿ ಹಿಡಿಯುತ್ತದೆ.  ಜಾಹಿರಾತು ನೀಡುವವರಿಗೆ ಸತ್ಯ ಗೊತ್ತಾಗಿ ಅವರು ಪತ್ರಿಕೆಗೆ ಕೊಡುವ ಜಾಹಿರಾತು ನಿಲ್ಲಿಸಿದರೆ ಅದನ್ನೇ ನಂಬಿಕೊಂಡು ಪತ್ರಿಕೆ ನಡೆಸುವ ಶೂರ ಧೀರರೆಲ್ಲಾ ಟುಸ್ ಪಟಾಕಿಗಳಾಗಿ ತಲೆಮೇಲೆ ಟವಲ್ ಹಾಕಿಕೊಂಡು ಮಕಾಡೆ ಮಲಗಬೇಕಾಗುತ್ತದೆ.

ಈಗ ಹೇಳಿ ಮುಂಜಾನೆ ದಿನಪತ್ರಿಕೆಯ ನಿಜವಾದ ಹೀರೋಗಳು ಯಾರು? ಭಾರತಕ್ಕೆ ನಂಬರ್ ಒನ್ ಎಂದು ಮೀಸೆ ತಿರುವುವ ಟೈಮ್ಸ್  ಅಫ್ ಇಂಡಿಯಾನ, ಡೆಕ್ಕನ್, ಪ್ರಜಾವಾಣಿ, ಕನ್ನಡಪ್ರಭ, ಉದಯವಾಣಿಯ....ಇತ್ಯಾದಿ ಹತ್ತಾರು ಪತ್ರಿಕೆಗಳ ಮಾಲೀಕರಾ,  ತಾವು ಅದ್ಬುತ ಕಾಲಂ ಲೇಖಕರು ಎಂದು ಬೀಗುವ ಸಂಪಾದಕರು, ಹೊರಪ್ರಪಂಚದಲ್ಲಿರುವವರೆಲ್ಲಾ ದಡ್ಡರು, ನಾವು ಬರೆದಿದ್ದೇ ವೇದವಾಕ್ಯ ಎಂದುಕೊಂಡು ಬೈಲೈನ್ ಹಾಕಿಕೊಳ್ಳುವ ವರದಿಗಾರರು ಮತ್ತು ಡೆಸ್ಕ್ ಅಪರೇಟರುಗಳಾ? ವಾರಕ್ಕೊಂದು ಕಾಲಂ ಬರೆಯುವ ಪ್ರಖ್ಯಾತ ಲೇಖಕರಾ?  ಪುಟಗಟ್ಟಲೇ ಜಾಹಿರಾತು ಹಾಕಿಸಿ ಜನರನ್ನು ಟೆಂಪ್ಟ್ ಮಾಡುತ್ತಿರುವ ಜಾಹಿರಾತು ಕಂಪನಿಗಳಾ? ಇರುವುದರಲ್ಲೇ ಸ್ವಲ್ಪ ವಾಸಿ ಎನ್ನುವಂತೆ ವೆಂಡರುಗಳನ್ನು ಪುಸಲಾಯಿಸುತ್ತಾ, ಕಛೇರಿಯಲ್ಲಿ ಸರ್ಕುಲೇಷನ್ ಹೆಚ್ಚು ಮಾಡಬೇಕು ಅಂತ ಮಾಡುವ ತಾಕೀತನ್ನು ಸಹಿಸಿಕೊಳ್ಳುವ ಮಾರುಕಟ್ಟೆ ವಿಭಾಗದ ಪ್ರತಿನಿಧಿಗಳಾ?

ಜನರ ಮಾನಸಿಕ ಸ್ಥಿತಿಗತಿಗಳನ್ನು ಬದಲಾಯಿಸುವ ನಾವೇ ಹೀರೋಗಳು ಅಂತ ಭ್ರಮೆಯಲ್ಲಿರುವವರು. ಈ ಭ್ರಮೆಯಲ್ಲಿರುವುದಕ್ಕೆ ಅವರಿಗೆ ವರ್ಷಕ್ಕೊಮ್ಮೆಯಾದರೂ ಅವರಿಗೆ ವೆಂಡರ್ಸ್ ಡೇ ನೆನಪಾಗುವುದಿಲ್ಲ. ವೆಂಡರುಗಳ ಕಷ್ಟಗಳು ಮನಸ್ಸಿಗೆ ಬರುವುದಿಲ್ಲ. ಇದುವರೆಗೂ ಒಬ್ಬಸಂಪಾದಕ, ಸಹಸಂಪಾದಕನಾಗಲಿ, ವರದಿಗಾರನಾಗಲಿ, ಪ್ರಖ್ಯಾತ ಲೇಖನರಾಗಲಿ, ವಾರಕ್ಕೊಂದು ಕಾಲಂ ಬರೆಯುವ ಡೆಸ್ಕ್ ಆಪರೇಟರುಗಳಾಗಲಿ ಒಬ್ಬ ವೆಂಡರನ್ನು ಸಂದರ್ಶಿಸಿಲ್ಲ. ಪೇಪರ್ ಹುಡುಗನ ಸ್ಥಿತಿ ಗತಿ ತಿಳಿದಿಲ್ಲ.

ನಂಬರ್ ಒನ್ ಪತ್ರಿಕೆಯಲ್ಲಿ ಮಾನವ ಸಂಪನ್ಮೂಲ ವಿಭಾಗದಲ್ಲಿ ಕೆಲಸ ಮಾಡುವವರ ಮನೆಗೆ ಪೇಪರ್ ಹಾಕುತ್ತೇನೆ. ಆರಾಮ ಸೋಪ ಮೇಲೆ ಕುಳಿತು ಟೀಪಾಯ್ ಮೇಲೆ ಕಾಲುಚಾಚಿ ಎದುರಿನ ಗೋಡೆಯಲ್ಲಿನ ನಲವತ್ತು ಇಂಚಿನ ಟಿವಿಯನ್ನು ನೋಡುವ ಅವರಿಗೆ ನಾಲ್ಕು ಅಡಿ ಅಗಲ ಎಂಟು ಅಡಿ ಉದ್ದ ಮಲಗಿದರೆ ಕಾಲು ಚಾಚಲು ಆಗದ ನಮ್ಮ ಪೇಪರ್ ಹುಡುಗನ ಪುಟ್ಟ ಗುಡಿಸಲು ಗೊತ್ತಿಲ್ಲ. ಜಾಹಿರಾತು ಹಣಕ್ಕಾಗಿ ಗಂಡು ಹೆಣ್ಣಿನ ಅರೆಬೆತ್ತಲೆ ಫೋಟೊಗಳನ್ನು ಹಾಕುವ ನಮ್ಮ ಸಂಪಾದಕರಿಗೆ ಅರಕಲು ಕುಪ್ಪಸ, ಸೀರೆ ಹಾಕಿಕೊಂಡ ನಮ್ಮ ಸಾವಿರಾರು ಪೇಪರ್ ಹುಡುಗರ ತಾಯಂದಿರ ಸ್ಥಿತಿಯ ಕಲ್ಪನೆಯಿಲ್ಲ.

ಈಗ ಮತ್ತೆ ಮೊದಲೆರಡು ಪ್ಯಾರಗಳನ್ನು ನೆನಪಿಸಿಕೊಳ್ಳೋಣ. ನಮ್ಮ ಭಾರತದಾದ್ಯಂತ ಇರುವ ಇಂಥ ನೂರಾರು ಸಾವಿರಾರು, ಲಕ್ಷಾಂತರ ಪುಟ್ಟ ಪುಟ್ಟ ಮನೆ, ಗುಡಿಸಲು,...ಮುಂತಾದವುಗಳಲ್ಲಿರುವ ನಮ್ಮ ಪೇಪರ್ ಹಾಕುವ ಹುಡುಗರೆಲ್ಲಾ ನಾಳೆಯಿಂದ ಪೇಪರ್ ಹಾಕಬಾರದೆಂದು ತೀರ್ಮಾನಿಸಿ ಸಮೂಹ ಸನ್ನಿಗೆ ಒಳಗಾಗಿಬಿಟ್ಟರೆ........ನಮ್ಮ ಭಾರತದಲ್ಲಿ ಮುಂಜಾನೆ ದಿನಪತ್ರಿಕೆ ಉದ್ಯಮ ಮಕಾಡೆ ಮಲಗುತ್ತದೆ. ಈಗ ನಿಮ್ಮ ಎದೆ ಬಡಿತವೂ ಒಂದು ಕ್ಷಣ ನಿಂತಂತೆ ಅಯ್ತಲ್ಲವೇ....ಜನರನ್ನು ಮೆಚ್ಚಿಸುವ ಸಲುವಾಗಿ ಉಪ್ಪು ಖಾರ, ಮಸಾಲೆಗಳನ್ನು ತಮ್ಮ ಲೇಖನಗಳಲ್ಲಿ ತುರುಕುವ, ನಮ್ಮ ಪತ್ರಿಕೆಗಳ ಸಂಪಾದಕರು, ವರದಿಗಾರರು ಈ ಮುಂಜಾನೆ ಹೀರೋಗಳು ಕೈಕೊಟ್ಟರೆ.....ಆ ಮಸಾಲಯುಕ್ತ ಬಿಸಿಬಿಸಿ ಪತ್ರಿಕೆಗಳನ್ನು ತಮ್ಮ ತಮ್ಮ ಮನೆಗಳ ಟೆರಸ್ ಮೇಲೆ ಹರಡಿ ಅದರ ಮೇಲೆ ಹಪ್ಪಳ ಸಂಡಿಗೆಗಳನ್ನು ಒಣಗಿಸುತ್ತಾ, ಅದನ್ನು ಕದ್ದು ತಿನ್ನಲು ಬರುವ ಕಾಗೆ ಕೋತಿಗಳನ್ನು ಓಡಿಸುತ್ತಾ ಕೂರಬೇಕಾಗುತ್ತದೆ. ಏನಂತೀರಿ?

ಇದುವರೆಗೂ ದಿನಪತ್ರಿಕೆ ವೆಂಡರುಗಳು ಮತ್ತು ಪೇಪರ್ ಹುಡುಗರು ಗ್ರೇಟ್, ಸೆಲೆಬ್ರಿಟಿಗಳು, ಹೀರೋಗಳು, ಅವರಿಲ್ಲದಿದ್ದರೇ ಬೆಳಗಾಗುವುದಿಲ್ಲ ಅಂತ ಹೇಳಲಿಕ್ಕೆ ನಾನು ಈ ಲೇಖನವನ್ನು ಖಂಡಿತ ಬರೆಯಲಿಲ್ಲ. ಸದ್ಯ ನಮ್ಮ ಸ್ಥಿತಿಗತಿಯನ್ನು ನೇರವಾಗಿ ವಿವರಿಸುತ್ತಿದ್ದೇನೆ ಅಷ್ಟೆ. ಹಾಗಾಂತ ಎಲ್ಲಾ ದಿನಪತ್ರಿಕೆ ಸಂಪಾದಕರು, ರಿಪೋರ್ಟರುಗಳು, ಡೆಸ್ಕ್ ಆಪರೇಟರುಗಳು ಮಾರುಕಟ್ಟೆ ಪ್ರತಿನಿಧಿಗಳು ಕೆಟ್ಟವರಲ್ಲ. ಒಳ್ಳೆಯ ಸಂಪಾದಕರು, ರೆಪೋರ್ಟರುಗಳು, ಪ್ರತಿನಿಧಿಗಳು ಇದ್ದಾರೆ. ಅವರಿಂದಲೇ ವೆಂಡರುಗಳ ಮತ್ತು ಪೇಪರ್ ಹುಡುಗರಿಗೆ ಬೆಳಗಿನ ಕೆಲಸ ಸಿಗುತ್ತಿದೆ. ಅದಕ್ಕಾಗಿ ಈ ಲೇಖನದಿಂದಾಗಿ ಬೇರೆ ಗ್ರಾಹಕರು, ಮತ್ತು ಪತ್ರಿಕೋದ್ಯಮದವರು ತಪ್ಪು ತಿಳಿಯಬಾರದಾಗಿ ವಿನಂತಿ.

-ಶಿವು.ಕೆ

Wednesday, September 28, 2011

ಸಮಯ ಟಿವಿಯವರಿಗೆ ಲಕ್ಷ್ಮಿಯರೆಲ್ಲ ಪತಿಗಳ ಪಾಲಿನ ವಿನಾಶಿಗಳು, ಅಕಟಕಟಾ!


ಚಾನಲ್‌ಗಳಿಗೂ, ಜ್ಯೋತಿಷಿಗಳಿಗೂ ಯಾವ ಜನ್ಮಜನ್ಮಾಂತರದ ಸಂಬಂಧವೋ ಗೊತ್ತಿಲ್ಲ. ಮೊನ್ನೆಮೊನ್ನೆ ತಾನೇ ಟಿವಿ೯ನವರು ದರ್ಶನ್ ಮತ್ತು ಆತನ ಹೆಂಡತಿಯ ಜ್ಯೋತಿಷ್ಯವನ್ನು ಹಿಡಿದುಕೊಂಡು ಯಾರೋ ತಲೆಮಾಸಿದ ಜ್ಯೋತಿಷಿಗಳನ್ನು ಕೂರಿಸಿಕೊಂಡು ಚರ್ಚೆ ನಡೆಸುತ್ತಿದ್ದರು. ಅವನ್ಯಾರೋ ಮುಠ್ಠಾಳ ಕಂಠಭರ್ತಿ ಕುಡಿದು ಹೆಂಡತಿಯನ್ನು ಹೊಡೆದರೆ ಅದಕ್ಕೆ ಜ್ಯೋತಿಷ್ಯ ಏನು ಮಾಡುತ್ತೋ ಭಗವಂತನೇ ಬಲ್ಲ.

ನಿನ್ನೆ ಸಮಯ ಟಿವಿಯಲ್ಲಿ ಮತ್ತೊಂದು ಪ್ರಹಸನ. ಸಾಯಿಬಾಬಾ ಸತ್ತ ಕೆಲ ದಿನಗಳಲ್ಲೇ ಬಾಬಾರ ಆತ್ಮವನ್ನು ಸಮಯ ಟಿವಿಯ ಸ್ಟುಡಿಯೋಗೆ ಕರೆಸಿ ಮಾತನಾಡಿಸಿ ಐತಿಹಾಸಿಕ ದಾಖಲೆ ಸೃಷ್ಟಿಸಿದ್ದನ್ನು ನೀವು ಬಲ್ಲಿರಿ. ಈಗ ವಿಚಿತ್ರವಾದ ಇನ್ನೊಂದು ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದ್ದಾರೆ. ಅದರ ಕಥೆಯೂ ಮಜಬೂತಾಗಿದೆ.

ಲಕ್ಷ್ಮಿಪತಿಯರಿಗೆ ಕಂಟಕ ಎನ್ನುವುದು ಕಾರ್ಯಕ್ರಮದ ಥೀಮು. ಕಾರ್ಯಕ್ರಮ ನಡೆಸಿದವರ ಪ್ರಕಾರ ಯಾರ ಹೆಸರು ಲಕ್ಷ್ಮಿ ಅಂತ ಇದೆಯೋ ಅವರ ಪತಿಯರಿಗೆಲ್ಲ ಕಂಟಕವಂತೆ. ಇದಕ್ಕೆ ಅವರು ಉದಾಹರಣೆಯಾಗಿ ಕೊಟ್ಟಿದ್ದು ಜನಾರ್ದನ ರೆಡ್ಡಿ, ವೀರಪ್ಪನ್, ಗ್ಯಾರಹಳ್ಳಿ ತಮ್ಮಯ್ಯ. ಸ್ಟುಡಿಯೋದಲ್ಲಿದ್ದ ಜ್ಯೋತಿಷಿಗಳಿಬ್ಬರು ಲಕ್ಷ್ಮಿ ಅನ್ನೋ ಹೆಸರೇ ಸರಿಯಲ್ಲ ಅನ್ನೋ ಹಂಗೆ ಮಾತಾಡಿದರು. ಒಬ್ಬನಂತೂ ಸರಸ್ವತಿ ಅಂತನೂ ಹೆಸರು ಇಟ್ಟುಕೊಳ್ಳಬಾರದು ಎಂದು ಆದೇಶ ಕೊಟ್ಟರು.

ಜನಾರ್ದನ ರೆಡ್ಡಿಯ ಪತ್ನಿಯ ಹೆಸರು ಅರುಣಾ ಲಕ್ಷ್ಮಿ. ಹೀಗಾಗಿ ರೆಡ್ಡಿಗೆ ಕಂಟಕವಂತೆ. ನಾಡಿನ ಭೂಮಿಯನ್ನು ಅಗೆದು ದೋಚಿ, ಮಾಡಬಾರದ್ದನ್ನೆಲ್ಲ ಮಾಡಿ ರೆಡ್ಡಿ ಜೈಲುಪಾಲಾದರೆ ಅದಕ್ಕೆ ಅರುಣಾ ಲಕ್ಷ್ಮಿ ಏನು ಮಾಡಿಯಾಳು? ಯಾರಾದರೂ ಕಾಮನ್‌ಸೆನ್ಸ್ ಇರುವವರು ಹೇಳುವ ಮಾತೇ ಇದು?

ಇನ್ನು ವೀರಪ್ಪನ್‌ಗೂ ಮುತ್ತುಲಕ್ಷ್ಮಿಯ ಹೆಸರಿಗೂ ಏನು ಸಂಬಂಧ? ಮುತ್ತುಲಕ್ಷ್ಮಿಯನ್ನು ಮದುವೆಯಾಗುವುದಕ್ಕೂ ಮುನ್ನವೇ ವೀರಪ್ಪನ್ ಕಾಡುಗಳ್ಳನಾಗಿದ್ದ, ಪೊಲೀಸು, ಅರಣ್ಯ ಅಧಿಕಾರಿಗಳನ್ನು ಕೊಂದಿದ್ದ. ಅವನ ಪಾಪಕ್ಕೆ ಅವನು ಪೊಲೀಸರ ಗುಂಡಿಗೆ ಸಿಕ್ಕು ಸತ್ತ. ಇದರಲ್ಲಿ ಮುತ್ತುಲಕ್ಷ್ಮಿಯ ಪಾತ್ರವೇನು ಬಂತು? ಮುತ್ತುಲಕ್ಷ್ಮಿಯಲ್ಲದೆ ಬೇರೆ ಇನ್ಯಾರೋ ಆಶಾ, ರೇಖಾ, ವಾಣಿಯನ್ನು ಆತ ಮದುವೆಯಾಗಿದ್ದರೆ ಪೊಲೀಸರು ಮಾಫಿ ಮಾಡುತ್ತಿದ್ದರಾ?

ಮೂರನೇ ಉದಾಹರಣೆ ಗ್ಯಾರಹಳ್ಳಿ ತಮ್ಮಯ್ಯನದು. ಆತನ ಹೆಂಡತಿಯ ಹೆಸರು ವರಮಹಾಲಕ್ಷ್ಮಿ. ಗ್ಯಾರಹಳ್ಳಿ ತಮ್ಮಯ್ಯ ಹಿಂದೆ ಮತ್ತೊಬ್ಬ ರೌಡಿ ಹಾ.ರಾ.ನಾಗರಾಜನನ್ನು ಕೊಂದುಹಾಕಿದ್ದ. ನಾಗರಾಜನ ಮಕ್ಕಳು ದ್ವೇಷ ಇಟ್ಟುಕೊಂಡು ತಮ್ಮಯ್ಯನನ್ನು ಮುಗಿಸಿದರು. ಇವರಿಬ್ಬರ ದ್ವೇಷಕ್ಕೆ ವರಮಹಾಲಕ್ಷ್ಮಿಯ ಹೆಸರು ಏಕೆ ಹೊಣೆ ಹೊರಬೇಕು? ನಾಗರಾಜನೂ ಸತ್ತನಲ್ಲ, ಆತನ ಹೆಂಡತಿಯ ಹೆಸರು ಲಕ್ಷ್ಮಿ ಅಲ್ಲವಲ್ಲ? ಅವನೇಕೆ ಸತ್ತ?

ಜೈಲಿನಲ್ಲಿ ಮುದ್ದೆ ಮುರಿದುಕೊಂಡು ಬಿದ್ದಿರುವವರ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಲೇ ಇದೆ. ಕಟ್ಟಾ ಮತ್ತವರ ಮಗ ಗ್ರಾಂಗಟ್ಟಲೆ ಅನ್ನ ತಿನ್ನುತ್ತಿದ್ದಾರೆ. ರಾಜಾ, ಕನ್ನಿಮೋಳಿ, ಅಮರಸಿಂಗ್, ಸುಧೀಂದ್ರ ಕುಲಕರ್ಣಿ, ಸತ್ಯಂ ರಾಜು ಇತ್ಯಾದಿಗಳು ಜೈಲು ಸೇರಿವೆ. ಅಕ್ಟೋಬರ್ ಮೂರರ ನಂತರ ಇನ್ನೂ ಸಾಕಷ್ಟು ಮಂದಿ ವಿವಿಐಪಿಗಳು ಜೈಲು ಪಾಲಾಗುವ ಸಾಧ್ಯತೆಗಳಿವೆ. ಇವರೆಲ್ಲರ ಪತ್ನಿಯರ ಹೆಸರೂ ಲಕ್ಷ್ಮಿ ಎಂತಲೇ ಇವೆಯೇ?

ಅದೆಲ್ಲ ಹಾಗಿರಲಿ, ಅನಿಷ್ಟಕ್ಕೆಲ್ಲ ಹೆಣ್ಣುಮಕ್ಕಳನ್ನೇ ದೂರುವುದು ಯಾಕೆ? ಈಗಲೂ ಹೆಣ್ಣುಮಕ್ಕಳ ಕಾಲ್ಗುಣ, ಕೈಗುಣ ಇತ್ಯಾದಿ ಕಪೋಲಕಲ್ಪಿತ ನಂಬಿಕೆಗಳನ್ನೆಲ್ಲ ಹೇರಿ ಅವರನ್ನು ಶೋಷಿಸಲಾಗುತ್ತಿದೆ. ಈಗ ಅವರ ಹೆಸರೂ ಅವರ ಪಾಲಿನ ಶತ್ರುವಾದರೆ ಹೇಗೆ?

ಲಕ್ಷ್ಮಿ ಎನ್ನುವುದು ಅತ್ಯಂತ ಪಾಪ್ಯುಲರ್ ಆದ ಹೆಸರು. ಈ ಹೆಸರಿರುವ ಲಕ್ಷಾಂತರ ಹೆಣ್ಣುಮಕ್ಕಳು ನಾಡಿನಲ್ಲಿದ್ದಾರೆ. ಇವರೆಲ್ಲರಿಗೂ ಸಮಯ ಟಿವಿ ಕೊಡುವ ಸಂದೇಶವಾದರೂ ಏನು? ನಿಮ್ಮ ಹೆಸರು ಬದಲಾಯಿಸಿಕೊಳ್ಳಿ ಅಂತಾನಾ? ಈ ಹೆಣ್ಣುಮಕ್ಕಳ ಗಂಡಂದಿರಿಗೆ ಕೊಡುವ ಸಂದೇಶ ಏನು? ಡೈವೋರ್ಸ್ ಮಾಡಿಬಿಡಿ ಎಂದೇ?

ಕೇವಲ ಅಗ್ಗದ ಜನಪ್ರಿಯತೆಗಾಗಿ ಸಮಯ ಟಿವಿಯವರು ಇಂಥದ್ದನ್ನೆಲ್ಲ ಮಾಡುತ್ತಿದ್ದಾರೆ ಎನ್ನುವುದಾದರೆ ಪ್ರಜ್ಞಾವಂತ ವೀಕ್ಷಕರಿಗೆ ಅದು ಕನಿಷ್ಠ ಕನಿಕರವನ್ನೂ ಮೂಡಿಸುವುದಿಲ್ಲ, ಬದಲಾಗಿ ಅಸಹ್ಯ ಮೂಡಿಸುತ್ತದೆ.

ಸಮಯದ ಮುಖ್ಯಸ್ಥರಾದ ಜಿ.ಎನ್.ಮೋಹನ್ ಮತ್ತು ಅವರ ತಂಡ ಇತ್ತೀಚಿಗೆ ಹೊಸಹೊಸ ಪ್ರಯೋಗಗಳನ್ನು ನಡೆಸಿ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಇದರ ನಡುವೆ ಇಂಥ ಕಾರ್ಯಕ್ರಮಗಳು ಬಂದರೆ ಹೇಗೆ? ಇದನ್ನು ಅವರು ಅರ್ಥ ಮಾಡಿಕೊಳ್ಳುವುದು ಒಳ್ಳೆಯದು. ಇಲ್ಲದಿದ್ದರೆ ಇಷ್ಟು ವರ್ಷದ ತಮ್ಮ ಸಾಂಸ್ಕೃತಿಕ ಹಿನ್ನೆಲೆಗೆ ತಾವೇ ಮಸಿ ಬಳಿದುಕೊಳ್ಳುವಂತಾಗುತ್ತದೆ. ಹಾಗಾಗದಿರಲಿ ಎಂಬುದು ನಮ್ಮ ಪ್ರಾಮಾಣಿಕ ಆಶಯ.

2ಜಿ ಹಗರಣ: ದಿನೇಶ್ ಕುಕ್ಕುಜಡ್ಕ ಬರೆದ ಕಾರ್ಟೂನ್


Tuesday, September 27, 2011

ಸಾಹಿತ್ಯ ಓದದ ಪತ್ರಕರ್ತ ಜ್ಞಾನಪೀಠದ ಜಡ್ಜ್ ಮೆಂಟ್ ಕೊಟ್ಟ ವೈಚಿತ್ರ್ಯ!


ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಪ್ರಕಟವಾದ ನಂತರ ಭೈರಪ್ಪನವರ ಅಭಿಮಾನಿಗಳಲ್ಲಿ ಒಮ್ಮೆಲೆ ನಿರಾಶೆ, ಅಸಹನೆ, ಕೋಪ ಭಾವನೆಗಳು ಮೂಡಿದವು. ಇಂಧದೇ ಭಾವನೆಗಳಿಗೆ ಕೆಲವರು ಬರಹ ರೂಪ ಕೊಟ್ಟು ಕೆಂಡಕಾರಿದರು. ಪಾಟೀಲ ಪುಟ್ಟಪ್ಪನವರು ಮಾನಸಿಕ ಸಮತೋಲನ ಕಳೆದುಕೊಂಡವರಂತೆ ಮಾತನಾಡಿದರು. ಇದೇ ಧಾಟಿಯಲ್ಲಿ ಅಂಕಣ ಬರೆದವರು ಸ್ಟಾರ್ ಆಫ್ ಮೈಸೂರು ಪತ್ರಿಕೆ ಸ್ಥಾಪಕ ಸಂಪಾದಕ ಕೆ.ಬಿ.ಗಣಪತಿ. ಇದು ಚುರುಮುರಿ ಬ್ಲಾಗ್‌ನಲ್ಲೂ ಪ್ರಕಟಗೊಂಡಿದೆ. ಸೀಮಿತವಾದ ಅಧ್ಯಯನದ ಆಧಾರದ ಮೇಲೆಯೇ ಗಂಭೀರವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುವಲ್ಲಿ ಪತ್ರಕರ್ತರು ನಿಷ್ಣಾತರು ಎನ್ನುವ ಆರೋಪಕ್ಕೆ ಗಣಪತಿ ಬರಹ ಪಕ್ಕಾ ಉದಾಹರಣೆ.

ಬರಹದ ಆರಂಭದಲ್ಲಿಯೇ ಮಹಾತ್ಮಗಾಂಧಿಗೆ ನೊಬೆಲ್ ಪ್ರಶಸ್ತಿ ಬಾರದಿರುವುದನ್ನು ಉಲ್ಲೇಖಿಸಿ ಬೇಸರ ವ್ಯಕ್ತಪಡಿಸುತ್ತಾರೆ. ಕೊನೆ ಸಾಲುಗಳಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗದ ಭೈರಪ್ಪನವರನ್ನು ಮಹಾತ್ಮ ಗಾಂಧಿಗೆ ಹೋಲಿಸಿ ತಮ್ಮ ಭೋಳೆತನವನ್ನು ಪ್ರದರ್ಶನಕ್ಕಿಡುತ್ತಾರೆ. ಪಾಟೀಲ ಪುಟ್ಟಪ್ಪನವರ ಮಾತನ್ನು ಸಂಪೂರ್ಣವಾಗಿ ಒಪ್ಪುವ ಗಣಪತಿ, ಮೊದಲೇ ತಮ್ಮ ಓದಿನ ಮಿತಿಯನ್ನು ಸ್ಪಷ್ಟಪಡಿಸುತ್ತಾರೆ. ನಾನೇನು ಕನ್ನಡ ಪ್ರಧ್ಯಾಪಕನಲ್ಲ ಅಥವಾ ಕನ್ನಡ ಸಾಹಿತ್ಯ ಜಗತ್ತನ್ನು ಆಳವಾಗಿ ಅಧ್ಯಯನ ಮಾಡಿದವನೂ ಅಲ್ಲ. ಹಾಗಂತ ನಾನೇನು ದಡ್ಡನಲ್ಲ, ಕನ್ನಡದ ಪ್ರಮುಖ ಪುಸ್ತಕಗಳ ಬಗ್ಗೆ ಪ್ರಕಟವಾಗುವ ವಿಮರ್ಶೆಗಳನ್ನು, ಪ್ರತಿಕ್ರಿಯೆಗಳನ್ನು ಆಗಾಗ ಓದಿದ್ದೇನೆ ಮತ್ತು ಕೆಲವು ಕೃತಿಗಳನ್ನು ಓದಿದ್ದೇನೆ, ಇದು ಅವರ ಹೇಳಿಕೆ.

ಈ ಮಾತಿನಲ್ಲಿ ಅವರು ಕಂಬಾರರ ಅಥವಾ ಭೈರಪ್ಪನವರ ಯಾವುದೇ ಕೃತಿಯನ್ನು ಓದಿರುವುದಾಗಿ ಹೇಳುವುದಿಲ್ಲ. ವಿಮರ್ಶೆ ಅಥವಾ ಪ್ರತಿಕ್ರಿಯೆಗಳನ್ನು ಓದಿರಬಹುದು. ವಿಶಿಷ್ಟ ಅಂದರೆ ತಾವು ಓದಿರುವ ವಿಮರ್ಶೆ, ಪ್ರತಿಕ್ರಿಯೆಗಳ ಆಧಾರದ ಮೇಲೆಯೇ ಸುದೀರ್ಘ ಅಭಿಪ್ರಾಯ ಮಂಡಿಸುವ ದಾರ್ಷ್ಟ್ಯ ಅವರದು. ಗಣಪತಿಯವರ ಪ್ರಕಾರ ಭೈರಪ್ಪನವರಿಗೆ ಕಂಬಾರರಿಗಿಂತ ಮೊದಲು ಜ್ಞಾನಪೀಠ ದೊರಕಬೇಕಿತ್ತು. ಪ್ರಶಸ್ತಿ ಆಯ್ಕೆ ಸಮಿತಿ ಮೊದಮೊದಲು ಯಾವುದೇ ಪಂಥದ ಪ್ರಾಬಲ್ಯವಿಲ್ಲದೆ ಕೆಲಸ ನಿರ್ವಹಿಸಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಆಯ್ಕೆ ಸಮಿತಿ ಎಡಪಂಥೀಯ ಆಲೋಚನೆ ಕಡೆಗೆ ವಾಲಿರುವ ಕಾರಣ ಭೈರಪ್ಪನವರಿಗೆ ಪ್ರಶಸ್ತಿ ಲಭಿಸಲಿಲ್ಲವಂತೆ.

ಇನ್ನೂ ಮುಂದೆ ಹೋಗಿ, ಮುಂದೊಂದು ದಿನ ಆಯ್ಕೆ ಸಮಿತಿ ಭೈರಪ್ಪನವರನ್ನು ಆಯ್ಕೆ ಮಾಡದಿರುವುದಕ್ಕೆ ಪಶ್ಚಾತ್ತಾಪ ಪಡಬಹುದು ಎಂದೂ ಗಣಪತಿ ಎಚ್ಚರಿಸಿದ್ದಾರೆ. ನೊಬೆಲ್ ಸಮಿತಿ ಗಾಂಧಿಯನ್ನು ಪ್ರಶಸ್ತಿಗೆ ಆಯ್ಕೆ ಮಾಡದ್ದಕ್ಕೆ ಪರಿತಪಿಸುವಂತೆ, ಜ್ಞಾನಪೀಠ ಆಯ್ಕೆ ಸಮಿತಿಯೂ ಪರಿತಪಿಸಬೇಕಾಬಹುದು ಎನ್ನುತ್ತಾರೆ ಅವರು. ಭೈರಪ್ಪನವರು ಈ ಮಟ್ಟಿನ ಹೊಗಳಿಕೆಗೆ ಎಷ್ಟು ಅರ್ಹರು ಎನ್ನುವುದು ಬೇರೆ ಪ್ರಶ್ನೆ. ಆದರೆ, ಅವರ ಸಾಹಿತ್ಯ ಓದದೆ, ಅದರ ಒಳ ಹುನ್ನಾರಗಳನ್ನು ಗ್ರಹಿಸದೆ, ಹೀಗೆ ಏಕಾಏಕಿ ಗಾಂಧಿಗೆ ಹೋಲಿಸುವುದು ಸುಮ್ಮನೆ ಮಾತೆ? ಬಹುಶಃ ಅರ್ಧಂಬರ್ಧ ತಿಳಿದುಕೊಂಡ ಪತ್ರಕರ್ತ ಮಾತ್ರ ಹೀಗೆ ಮಾಡಬಲ್ಲ. ಇಂತಹ ಅನೇಕರು ನಮ್ಮ ಮಧ್ಯೆ ಇದ್ದಾರೆ.

ಕೆ.ಬಿ.ಗಣಪತಿಯವರ ವಿತಂಡವಾದ ಮಾತು ಬಾಲಿಷ ಚಿಂತನೆಗಳಿಗೆ ಈ ಕೆಳಗಿನ ಸಾಲುಗಳು ಉದಾಹರಣೆಯಾಗಬಹುದು. ಈ ಸಾಲುಗಳನ್ನು ಸೂಕ್ಷ್ಮವಾಗಿ ಗಮನಿಸಿ:


It is believed that S.L. Bhyrappa is branded as one with rightist orientation or as being a pro-Hindu in his writings. If this is so, one can also brand U.R. Anantha Murthy, Girish Karnad and Kambar as those with leftist orientation and as being anti-Hindu. 
Does it mean that being a rightist and pro-Hindu is a disqualification to deserve a Jananpith award while being a leftist and anti-Hindu is a qualification to deserve it?


ಮಾನ್ಯ ಕೆ.ಬಿ.ಗಣಪತಿಯವರ ಪ್ರಕಾರ ಗಿರೀಶ್ ಕಾರ್ನಾಡರು ಮತ್ತು ಯು.ಆರ್.ಅನಂತಮೂರ್ತಿಯವರು ಎಡಪಂಥೀಯ ವಿಚಾರಧಾರೆಯುಳ್ಳವರು ಮಾತ್ರವಲ್ಲ, ಅವರು ಹಿಂದೂ ವಿರೋಧಿಗಳು! ಇಂಥ ತೀರ್ಮಾನಕ್ಕೆ ಗಣಪತಿ ಹೇಗೆ ಬಂದರು? ಇದನ್ನು ಅವರು ಗೊತ್ತುಮಾಡಿಕೊಂಡಿದ್ದು ಯಾವ ಶಾಲೆಯಲ್ಲಿ ಓದುವಾಗ? ಅಥವಾ ಸೆಕ್ಯುಲರಿಸ್ಟರೆಲ್ಲ ಹಿಂದೂ ವಿರೋಧಿಗಳೇ ಆಗಿರುತ್ತಾರೆ ಎಂಬ ಗಟ್ಟಿಯಾದ ನಿಲುವು ಗಣಪತಿಯವರದಿರಬಹುದೇ? ಇದಕ್ಕೆ ಆಧಾರಗಳಾದರೂ ಏನು? ಕನಿಷ್ಠ ಪಕ್ಷ ಗಣಪತಿಯವರು ಕಾರ್ನಾಡರ ಒಂದು ನಾಟಕ ಅಥವಾ ಅನಂತಮೂರ್ತಿಯವರ ಒಂದು ಕಾದಂಬರಿಯನ್ನಾದರೂ ಓದಿರಬಹುದೇ? ಓದಿಲ್ಲದಿದ್ದರೆ ಯಾಕೆ ಇಂಥ ಅಸಹ್ಯಗಳನ್ನೆಲ್ಲ ಬರೆಯುತ್ತಾರೆ?

Thursday, September 22, 2011

ಬ್ಲಾಕ್‌ಮೇಲ್ ಪತ್ರಕರ್ತರ ವಿರುದ್ಧ ಮುಧೋಳ ಬಂದ್!


ಏನು ಆಗಬಾರದಿತ್ತೋ ಅದೆಲ್ಲವೂ ಆಗುತ್ತಿದೆ. ಮುಧೋಳದಲ್ಲಿ ಬ್ಲಾಕ್‌ಮೇಲ್ ಪತ್ರಕರ್ತರ ಕಾಟ ತಡೆಯಲಾರದೆ ಅಲ್ಲಿನ ಜನರು ಬಂದ್ ಆಚರಿಸಿದ್ದಾರೆ. ಈ ಸುದ್ದಿ ಪ್ರಜಾವಾಣಿಯಲ್ಲಿ ಪ್ರಕಟವಾಗಿದೆ. ಪತ್ರಿಕೆಗಳಲ್ಲಿ ಪ್ರಕಟವಾದ ವಿವಾದಾತ್ಮಕ ಸುದ್ದಿಗಳ (ಅದರಲ್ಲೂ ವಿಶೇಷವಾಗಿ ಕೋಮುಭಾವನೆ ಪ್ರಚೋದಿಸುವ ಬರೆಹಗಳು) ಬಗ್ಗೆ ಗಲಾಟೆ, ಬಂದ್ ನಡೆಯುವುದು ಸಾಮಾನ್ಯ. ಆದರೆ ಪೀತ ಪತ್ರಕರ್ತರ ವಿರುದ್ಧ ಜನರು ಊರನ್ನೇ ಬಂದ್ ಮಾಡಿದ ಘಟನೆ ಇತಿಹಾಸದಲ್ಲಿ ಮೊದಲಿರಬೇಕು. ಮುಧೋಳ ಜನರನ್ನು ಕಾಡುತ್ತಿರುವವರು ದಿನಪತ್ರಿಕೆಯವರಲ್ಲ, ಸ್ಥಳೀಯ ವಾರಪತ್ರಿಕೆಗಳು ಎಂಬುದು ಗಮನಾರ್ಹ ಅಂಶ. ಕೆಲ ಪತ್ರಕರ್ತರೂ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಇತ್ತೀಚೆಗೆ ಬ್ಲಾಕ್‌ಮೇಲ್ ಜರ್ನಲಿಸಂ ದಿನಪತ್ರಿಕೆ, ಟಿವಿ ಚಾನಲ್‌ಗಳಿಗೂ ಕಾಲಿಟ್ಟಿರುವುದನ್ನು ಮರೆಯುವಂತಿಲ್ಲ. ಮಾಧ್ಯಮ ಸಮೂಹ ಎಚ್ಚೆತ್ತುಕೊಳ್ಳಲು ಇದು ಸಕಾಲ. ಅಂದಹಾಗೆ ಪ್ರಜಾವಾಣಿ ವರದಿಯ ಕೆಲವು ಅಂಶಗಳು ಈ ಕೆಳಕಂಡಂತಿವೆ.

ಮುಧೋಳ: ಬ್ಲ್ಯಾಕ್‌ಮೇಲ್ ಪತ್ರಿಕೋದ್ಯಮ ಹಾಗೂ ನಕಲಿ ಪತ್ರಕರ್ತರ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂಥವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಾರ್ವಜನಿಕರು ಮಂಗಳವಾರ ನಡೆಸಿದ ಮುಧೋಳ ಬಂದ್ ಸಂಪೂರ್ಣ ಯಶಸ್ವಿಯಾಯಿತು. 
ಪತ್ರಿಕಾರಂಗ ಸಂವಿಧಾನದ ನಾಲ್ಕನೆಯ ಅಂಗವಾಗಿದ್ದು, ಸಮಾಜದಲ್ಲಿ ಪತ್ರಿಕೆಗಳಿಗೆ ಹಾಗೂ ಪತ್ರಕರ್ತರಿಗೆ ಗೌರವದ ಸ್ಥಾನವಿದೆ. ಆದರೆ ಕೆಲವು ನಕಲಿ ಪತ್ರಕರ್ತರಿಂದಾಗಿ ಇಡೀ ಪತ್ರಿಕೋದ್ಯಮಕ್ಕೆ ಕಳಂಕ ಬರುವಂತಾಗಿದೆ. ಪೀತ ಪತ್ರಿಕೋದ್ಯಮಿಗಳು ಮತ್ತು ಪತ್ರಕರ್ತರನ್ನು ನಿಯಂತ್ರಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. 
ಪ್ರತಿಭಟನೆ ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ನಂತರ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಕಿಸಾನ ಘಟಕದ ಅಧ್ಯಕ್ಷ ನಂದಕುಮಾರ ಪಾಟೀಲ, ಪತ್ರಿಕೆಗಳ ವಿರುದ್ಧ ತಮ್ಮ ಆಕ್ರೋಶವಿಲ್ಲ. ಕೆಲವು ವಾರ ಪತ್ರಿಕೆಗಳು ಪೀತ ಪತ್ರಿಕೋದ್ಯಮಕ್ಕೆ ಪ್ರಚೋದಿಸುತ್ತಿವೆ. ಅದರಿಂದಾಗಿ ಬ್ಲ್ಯಾಕ್‌ಮೇಲ್ ಪತ್ರಕರ್ತರ ಹಾವಳಿ ಹೆಚ್ಚಾಗಿ, ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ ಎಂದರು. 
ಪತ್ರಕರ್ತ ಬಾಬುರೆಡ್ಡಿ ತುಂಗಳ ಮಾತನಾಡಿ, ಪತ್ರಕರ್ತರು ಜವಾಬ್ದಾರಿ ಅರಿತು ಕೆಲಸ ಮಾಡಬೇಕು. ಮಾಹಿತಿ ಹಕ್ಕಿನ ದುರುಪಯೋಗ ಆಗುತ್ತಿದೆ. ನೋಂದಣಿ ಇಲ್ಲದ ಪತ್ರಿಕೆಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಬೇಕು ಎಂದು ಆಗ್ರಹಿಸಿದರು. 
ಜಿಪಂ ಮಾಜಿ ಅಧ್ಯಕ್ಷ ಶಿವಕುಮಾರ ಮಲಘಾಣ, ಪ್ರಮುಖರಾದ ನಂದಕುಮಾರ ಪಾಟೀಲ, ಸತೀಶ ಬಂಡಿವಡ್ಡರ, ರಾಚಪ್ಪ ಕರೇಹೊನ್ನ, ಎಸ್.ಆರ್.ನಿರಾಣಿ, ಪುರಸಭೆ ಅಧ್ಯಕ್ಷ ರಾಜು ಪಾಲೋಜಿ, ಪುರಸಭೆ ಸದಸ್ಯರಾದ ಸದಾಶಿವ ಬಾಗೋಡಿ, ಮಾರುತಿ ಪವಾರ, ಪಾಂಡು ಭೋವಿ, ಕಿಶೋರ ಮಸೂರಕರ, ಗಿರಿಮಲ್ಲಪ್ಪ ತೇಲಿ, ಇಬ್ರಾಹಿಂ ಸಾರವಾನ, ಸೋಮಶೇಖರ ಕರೇಹೊನ್ನ, ಮಹಮ್ಮದಸಾಬ ಕೌಜಲಗಿ ಹಾಗೂ ವಿವಿಧ ಸಮಾಜದ ಹಾಗೂ ಸಂಘಟನೆಗಳ ಮುಖಂಡರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. 
ನಗರದಲ್ಲಿ ಕೆಲಹೊತ್ತು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿದ್ದ ವರ್ತಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ವಾಹನಗಳ ಸಂಚಾರ ಸ್ಥಗಿತಗೊಂಡಿದ್ದರು.