Saturday, May 28, 2011

ಡಬ್ಬಿಂಗ್ ಸಿನಿಮಾಗಳು ಬೇಕು ಎನ್ನುವ ವಾದ ನಮ್ಮದು; ನಿಮ್ಮದು?


ಡಬ್ಬಿಂಗ್ ಸಿನಿಮಾಗಳು ಬೇಕೇ ಬೇಡವೇ ಎಂಬ ವಾದವಿವಾದ ಮತ್ತೆ ನಡೆಯುತ್ತಿದೆ. ಬೇಕೆ ಬೇಡವೇ ಎನ್ನುವುದನ್ನು ಕನ್ನಡ ಚಿತ್ರರಂಗದ ಪಂಡಿತರಷ್ಟೇ ನಿರ್ಧರಿಸಬೇಕೆ? ಅಥವಾ ಸಿನಿಮಾಗಳನ್ನು ನೋಡುವ ಪ್ರೇಕ್ಷಕರೂ ಈ ಚರ್ಚೆಯಲ್ಲಿ ಯಾಕಿರಬಾರದು ಎಂಬ ಮೂಲಭೂತ ಪ್ರಶ್ನೆ ನಮ್ಮದು. ಆದರೆ ಕನ್ನಡ ಪ್ರೇಕ್ಷಕರನ್ನು ಟೇಕನ್ ಫಾರ್ ಗ್ರಾಂಟೆಡ್ ಎನ್ನುವಂತೆಯೇ ನೋಡಿಕೊಂಡು ಬಂದಿರುವ ಸಿನಿಮಾ ಮಂದಿ ಈ ಚರ್ಚೆಯನ್ನು ಸಾರ್ವಜನಿಕಗೊಳಿಸಲು ಹಿಂದೂ ಮನಸ್ಸು ಮಾಡಿವರಲ್ಲ, ಇಂದೂ ಕೂಡ.

ಡಾ.ರಾಜಕುಮಾರ್ ಅವರು ಡಬ್ಬಿಂಗ್ ಸಿನಿಮಾಗಳನ್ನು ವಿರೋಧಿಸಿದ ಬೀದಿಗಳಿದ ಸಂದರ್ಭ ಬೇರೆಯದೇ ಆಗಿತ್ತು. ಆಗ ಕನ್ನಡ ಚಲನಚಿತ್ರರಂಗ ಇನ್ನೂ ತನ್ನ ಕಾಲ ಮೇಲೆ ತಾನು ನಿಂತುಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಕನ್ನಡ ಚಿತ್ರರಂಗ ಆಗಿನ್ನೂ ಬೆಳೆಯುತ್ತಿದ್ದ ಪುಟ್ಟ ಉದ್ಯಮವಾಗಿತ್ತು. ಆದರೆ ಈಗ ಹಾಗಿಲ್ಲ. ಯಾವುದಕ್ಕೂ ಯಾರನ್ನೂ ಅವಲಂಬಿಸುವ ಸ್ಥಿತಿ ಇಲ್ಲ. ಸ್ಟುಡಿಯೋಗಳನ್ನು ಹುಡುಕಿಕೊಂಡು ಚೆನ್ನೈಗೋ, ಮುಂಬೈಗೋ ಹೋಗುವ ಸ್ಥಿತಿಯೂ ಇಲ್ಲ. ಕನ್ನಡ ಚಿತ್ರಗಳಿಗೂ ವ್ಯಾಪಕವಾದ ಮಾರುಕಟ್ಟೆ ಇದೆ. ಒಳ್ಳೆಯ ಕನ್ನಡ ಸಿನಿಮಾಗಳನ್ನು ನೋಡುವ ಜನರು ಎಲ್ಲೆಡೆ ಇದ್ದಾರೆ. ಕಾಲದ ಅಗತ್ಯಕ್ಕೆ ರೂಪಿಸಿಕೊಂಡ ನಿಯಮಗಳು ಸಾರ್ವಕಾಲಿಕ ಆಗಬೇಕಿಲ್ಲ. ಈಗ ಕಾಲ ಬದಲಾಗಿದೆ. ನಿಲುವುಗಳ ಕುರಿತು ಪುನರ್‌ವಿಮರ್ಶೆ ಯಾಕಾಗಬಾರದು?

ಡಬ್ಬಿಂಗ್ ವಿರೋಧಿಸುವವರು ಬಹಳ ಮುಖ್ಯವಾಗಿ ಎತ್ತುವ ಪ್ರಶ್ನೆ ಏನೆಂದರೆ ಡಬ್ಬಿಂಗ್ ಸಿನಿಮಾಗಳು ಬಂದರೆ ಕನ್ನಡ ಚಲನಚಿತ್ರ ರಂಗದಲ್ಲಿ ಕಲಾವಿದರು, ತಂತ್ರಜ್ಞರು ಬೀದಿಪಾಲಾಗುತ್ತಾರೆ, ಅವರ ಅನ್ನಕ್ಕೆ ಕುತ್ತು ಬರುತ್ತದೆ ಎಂಬುದು. ಎರಡನೆಯದಾಗಿ ಅವರು ಕನ್ನಡ ಸಂಸ್ಕೃತಿ, ಭಾಷೆಯ ಕುರಿತಾದ ಪ್ರಶ್ನೆಗಳನ್ನು ಎತ್ತುತ್ತಾರೆ.

ಡಬ್ಬಿಂಗ್ ಸಿನಿಮಾಗಳನ್ನು ಕರ್ನಾಟಕದಲ್ಲಿ ನಿಷೇಧಿಸಿರುವ ಕ್ರಮವೇ ಕಾನೂನು ಬಾಹಿರ ಮತ್ತು ಅಪ್ರಜಾಸತ್ತಾತ್ಮಕ. ಹಾಗೆ ಸುಖಾಸುಮ್ಮನೆ ಏನನ್ನಾದರೂ ನಿಷೇಧಿಸುವ ಕ್ರಮವನ್ನು ದೇಶದ ಸಂವಿಧಾನ ಒಪ್ಪುವುದಿಲ್ಲ, ಯಾವ ನ್ಯಾಯಾಲಯಗಳೂ ಒಪ್ಪುವುದಿಲ್ಲ. ಜನರು ಏನನ್ನು ನೋಡಬಾರದು, ನೋಡಬೇಕು ಎಂದು ನಿರ್ದೇಶಿಸಲು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗಾಗಲೀ, ಇನ್ನೊಂದು ಸಂಸ್ಥೆಗಾಗಲೀ ಯಾರೂ ಅನುಮತಿಯನ್ನು ಕೊಟ್ಟಿಲ್ಲ. ಕಾನೂನಿನ ದೃಷ್ಟಿಯಿಂದ ಡಬ್ಬಿಂಗ್ ನಿಷೇಧದ ಕ್ರಿಯೆಗೆ ಯಾವ ಮಾನ್ಯತೆಯೂ ಇಲ್ಲ.

ಡಬ್ಬಿಂಗ್ ಸಿನಿಮಾಗಳಿಂದ ಕನ್ನಡ ಸಿನಿಮಾರಂಗದ ತಂತ್ರಜ್ಞರು, ಕಲಾವಿದರು ಕೆಲಸ ಕಳೆದುಕೊಂಡು ಬೀದಿಪಾಲಾಗುತ್ತಾರೆ ಎಂಬ ವಾದಕ್ಕೆ ಯಾವ ಅರ್ಥವೂ ಇಲ್ಲ, ಪುರಾವೆಯೂ ಇಲ್ಲ. ಇದು ಒಂದು ರೀತಿಯ ಹೇಡಿತನದ, ಪಲಾಯನಾವಾದಿ, ಅಂಜುಗುಳಿ ವಾದ. ಡಬ್ಬಿಂಗ್ ಸಿನಿಮಾ ಬರಲಿ ಅಂದರೆ ಕನ್ನಡ ಸಿನಿಮಾಗಳು ನಿಲ್ಲಲಿ ಎಂದು ಅರ್ಥೈಸಿಕೊಳ್ಳಬೇಕಾಗಿಲ್ಲ. ಹಾಗೆ ನೋಡಿದರೆ, ಡಬ್ಬಿಂಗ್ ಸಿನಿಮಾಗಳು ಪೂರ್ತಿಯಾಗಿ ಕನ್ನಡ ಪ್ರೇಕ್ಷಕರನ್ನು ಆವರಿಸಿಕೊಳ್ಳುವ ಸಾಧ್ಯತೆಯೇ ಇಲ್ಲ. ಕನ್ನಡ ಪ್ರೇಕ್ಷಕರು ನೇಟಿವಿಟಿಯನ್ನು ಬಯಸುತ್ತಾರೆ. ಶಿವಣ್ಣ, ದರ್ಶನ್, ಸುದೀಪ್ ಇತ್ಯಾದಿಗಳಾದಿಯಾಗಿ ಲೂಸ್ ಮಾದನವರೆಗೆ ಎಲ್ಲ ನಟರ ಜತೆಗೆ ಅವರಿಗೊಂದು ಭಾವನಾತ್ಮಕ ಸಂಬಂಧವಿದೆ. ಹೀಗಾಗಿ ಒಳ್ಳೆಯ ಕನ್ನಡ ಸಿನಿಮಾಗಳನ್ನು ಕೊಟ್ಟರೆ ನೋಡೇನೋಡುತ್ತಾರೆ. ತಮ್ಮನ್ನು ಸೆಳೆಯದ ಚಿತ್ರಗಳು ಡಬ್ಬಿಂಗ್ ಆಗಲಿ, ರೀಮೇಕ್ ಆಗಲೀ, ಸ್ವಮೇಕ್ ಆಗಲಿ ಪ್ರೇಕ್ಷಕರು ಅವುಗಳನ್ನು ಸಾರಾಸಗಟಾಗಿ ತಿರಸ್ಕರಿಸುತ್ತಾರೆ. ಅದರರ್ಥ ತಮಿಳಿನಲ್ಲಿ, ತೆಲುಗಿನಲ್ಲಿ ಮೆಗಾಹಿಟ್ ಆದ ಸಿನಿಮಾಗಳೆಲ್ಲವೂ ಕನ್ನಡದಲ್ಲಿ ಡಬ್ ಆದಾಗ ಅದೇ ಪ್ರಮಾಣದಲ್ಲಿ ಹಿಟ್ ಆಗುತ್ತದೆ ಎಂದು ಕುರುಡಾಗಿ ನಂಬಿಕೊಳ್ಳಬೇಕಾಗಿಲ್ಲ. ಯೋಗರಾಜ ಭಟ್, ದುನಿಯಾ ಸೂರಿ, ಗುರುಪ್ರಸಾದ್ ಹಾಗು ಈ ಸಾಲಿಗೆ ಸೇರುವ ಒಂದು ಡಜನ್‌ಗೂ ಹೆಚ್ಚು ನಿರ್ದೇಶಕರು ನಮ್ಮ ಪ್ರೇಕ್ಷಕರನ್ನು ಸೆಳೆಯಬಲ್ಲ ಸಿನಿಮಾಗಳನ್ನು ಮಾಡಿ ಗೆದ್ದಿದ್ದಾರೆ. ಮುಂದೆಯೂ ಇಂಥ ಸಿನಿಮಾಗಳನ್ನು ಕೊಡುವ ಆತ್ಮವಿಶ್ವಾಸವೂ ಅವರಿಗಿದೆ. ಹೀಗಿರುವಾಗ ಕಲಾವಿದರು, ತಂತ್ರಜ್ಞರು ಬೀದಿಪಾಲಾಗುತ್ತಾರೆ ಎಂದು ಕಣ್ಣೀರು ಹಾಕುತ್ತ ಕುಳಿತುಕೊಳ್ಳುವುದರಲ್ಲಿ ಯಾವ ಅರ್ಥವಿದೆ?

ಡಬ್ಬಿಂಗ್ ವಿರೋಧಿಗಳು ತಮ್ಮ ವಾದ ಸಮರ್ಥನೆಗಾಗಿ ಭಾಷೆ, ಸಂಸ್ಕೃತಿಯ ಹೆಸರನ್ನು ಗುರಾಣಿಯಾಗಿ ಬಳಸುತ್ತ ಬಂದಿದ್ದಾರೆ. ಇದು ದೊಡ್ಡ ಆತ್ಮವಂಚನೆ. ಹಾಗೆ ನೋಡಿದರೆ ಡಬ್ಬಿಂಗ್ ಸಿನಿಮಾಗಳು ಕನ್ನಡ ಭಾಷೆಯನ್ನು ಬೆಳೆಸುತ್ತವೆ ಎಂದೇ ಸ್ಪಷ್ಟವಾಗಿ ಹೇಳುವ ಸಮಯ ಬಂದಿದೆ. ರಜನಿಕಾಂತ್, ಚಿರಂಜೀವಿ, ಅಭಿಷೇಕ್ ಬಚ್ಚನ್‌ರ ಸಿನಿಮಾಗಳನ್ನು ತಮಿಳು, ತೆಲುಗು, ಹಿಂದಿ ಭಾಷೆಗಳಲ್ಲಿ ನೋಡುವ ಬದಲು ಕನ್ನಡ ಭಾಷೆಯಲ್ಲಿ ನೋಡಿದರೆ, ಭಾಷೆ ಬೆಳವಣಿಗೆಯಾಗುವುದಿಲ್ಲವೇ? ಗುಣಮಟ್ಟದ ಕಾರಣಕ್ಕಾಗಿ ಕನ್ನಡಿಗರೇ ಇಂದು ತಮ್ಮದಲ್ಲದ ಭಾಷೆಗಳಾದ ತಮಿಳು, ತೆಲುಗು ಹಿಂದಿ ಸಿನಿಮಾಗಳನ್ನು ನೋಡುತ್ತಿದ್ದಾರೆ. ಇಂಥವರು ಇದೇ ಸಿನಿಮಾಗಳನ್ನು ಕನ್ನಡ ಭಾಷೆಯಲ್ಲಿ ನೋಡಲು ಬಯಸಿದರೆ ತಪ್ಪೇನಿದೆ?

ಇನ್ನು ಸಂಸ್ಕೃತಿಯ ವಿಷಯ ಎತ್ತುವ ನೈತಿಕತೆ ನಮ್ಮ ಸಿನಿಮಾ ರಂಗಕ್ಕೆ ಇಲ್ಲವೇ ಇಲ್ಲ. ಹಾಗೇನಾದರೂ ಇದ್ದಲ್ಲಿ ಅವರು ಸಾಲುಮೇರೆ ರೀಮೇಕ್ ಸಿನಿಮಾಗಳನ್ನು ಮಾಡುತ್ತಿರಲಿಲ್ಲ. ಮೂರು ತಮಿಳು-ತೆಲುಗು ಸಿನಿಮಾಗಳ ಡಿವಿಡಿಗಳನ್ನು ನಿರ್ದೇಶಕರ ಕೈಗೆ ಕೊಟ್ಟು ಒಂದು ಕನ್ನಡ ಸಿನಿಮಾ ಮಾಡಿಕೊಡಿ ಎಂದು ನಮ್ಮ ನಿರ್ಮಾಪಕರು ಹೇಳುತ್ತಿರಲಿಲ್ಲ. ರೀಮೇಕ್‌ನ ಹೆಸರಲ್ಲಿ ತಮಿಳುನಾಡಿನ ಮೀಸೆ, ನಾಮಗಳಿಂದ ಹಿಡಿದು ಎಲ್ಲವನ್ನೂ ತಂದು ಕನ್ನಡ ಪ್ರೇಕ್ಷಕರಿಗೆ ಕೊಟ್ಟ ಜನರಲ್ಲವೇ ಇವರು? ಸಿನಿಮಾ ಶೂಟಿಂಗ್ ನಡೆಯುವಾಗಲೇ ಮೂಲ ಸಿನಿಮಾದ ಡಿವಿಡಿ ಪ್ಲೇ ಮಾಡಿಕೊಂಡು, ಪ್ರತಿ ಶಾಟ್‌ಗಳನ್ನು ಶೂಟ್ ಮಾಡಿದ ಪ್ರಭೃತಿಗಳು ಇವರೇ ಅಲ್ಲವೇ? ಇವರು ಸಂಸ್ಕೃತಿಯ ವಿಷಯವನ್ನೇಕೆ ಮಾತನಾಡುತ್ತಾರೆ?

ತಮಿಳಿಗರು ರಾಮಾಯಣವನ್ನೂ, ಮಹಾಭಾರತವನ್ನೂ ತಮಿಳಿನಲ್ಲೇ ನೋಡಿದರು. ಜುರಾಸಿಕ್ ಪಾರ್ಕ್, ಟೈಟಾನಿಕ್, ೨೦೧೨ನಂಥ ಸಿನಿಮಾಗಳನ್ನು ಸಹ ತಮಿಳಿನಲ್ಲೇ ನೋಡಿದರು. ಕನ್ನಡಿಗರಿಗೆ, ಅದರಲ್ಲೂ ಕನ್ನಡ ಹೊರತು ಬೇರೆ ಯಾವ ಭಾಷೆಯೂ ಬಾರದ ಹಳ್ಳಿಗಾಡಿನ ಅಪ್ಪಟ ಕನ್ನಡಿಗರಿಗೆ ಈ ಸಿನಿಮಾಗಳನ್ನು ತಮ್ಮದೇ ಭಾಷೆಯಲ್ಲಿ ನೋಡುವ ಅವಕಾಶವನ್ನು ನಾವೇ ತಪ್ಪಿಸಿದೆವಲ್ಲವೆ? ಹೋಗಲಿ, ಜುರಾಸಿಕ್ ಪಾರ್ಕ್ ಸಿನಿಮಾವನ್ನು ರೀಮೇಕ್ ಮಾಡುವ ಶಕ್ತಿ ನಮ್ಮ ನಿರ್ಮಾಪಕರಿಗೆ ಇದೆಯೇ? ಇಲ್ಲವಾದರಲ್ಲಿ ಅದರ ಡಬ್ಬಿಂಗ್ ಸಿನಿಮಾ ನೋಡುವ ವೀಕ್ಷಕರ ಹಕ್ಕನ್ನು ಕಿತ್ತುಕೊಂಡಿದ್ದು ಎಷ್ಟು ಸರಿ?

ತಮಿಳಿನ ಬಹುತೇಕ ಸಿನಿಮಾಗಳು ತೆಲುಗಿಗೆ, ತೆಲುಗಿನ ಬಹುತೇಕ ಸಿನಿಮಾಗಳು ತಮಿಳಿಗೆ ಡಬ್ ಆಗುತ್ತಲೇ ಇವೆ. ಹಾಗಂತ ತಮಿಳು ಇಂಡಸ್ಟ್ರಿಯೂ ಬಿದ್ದು ಹೋಗಿಲ್ಲ, ತೆಲುಗು ಇಂಡಸ್ಟ್ರಿಯೂ ಮಲಗಿಕೊಂಡಿಲ್ಲ. ಇವರಿಗೆ ಯಾರಿಗೂ ಇರದ ಭಯ ಕನ್ನಡ ಚಿತ್ರರಂಗಕ್ಕೆ ಏಕೆ?

ಒಂದು ಸಿನಿಮಾಗೆ ತಮಿಳು, ತೆಲುಗಿನವರು ನೂರಾರು ಕೋಟಿ ರೂ. ತೊಡಗಿಸುತ್ತಾರೆ. ನಮ್ಮ ಇಂಡಸ್ಟ್ರಿ ಅಷ್ಟು ಬೆಳೆದಿಲ್ಲ ಎಂದು ಪದೇ ಪದೇ ನಮ್ಮವರು ತಮ್ಮ ನಿಲುವುಗಳನ್ನು ಸಮರ್ಥಿಸಿಕೊಳ್ಳುತ್ತಾರೆ. ಯಾಕೆ ಈ ಕೊರಗು? ಕಡಿಮೆ ಬಜೆಟ್‌ನ ಸಿನಿಮಾಗಳು ಹಿಟ್ ಆಗೋದೇ ಇಲ್ಲವೇ? ಸಿನಿಮಾಗಳನ್ನು ಹೊರತುಪಡಿಸಿದ ಪರ‍್ಯಾಯ ಮಾಧ್ಯಮಗಳು ಸಿನಿಮಾಗಳ ಹೊಡೆತವನ್ನು ಎದುರಿಸಿಯೂ ಉಳಿದುಕೊಂಡಿಲ್ಲವೇ? ಹವ್ಯಾಸಿ ರಂಗಭೂಮಿ, ಕಂಪನಿ ರಂಗಭೂಮಿ, ಬಯಲಾಟ, ಯಕ್ಷಗಾನ ಎಲ್ಲವೂ ಉಳಿದುಕೊಂಡಿಲ್ಲವೇ? ಅವರುಗಳೂ ಸಹ ಸಿನಿಮಾದವರ ಹಾಗೆ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಲು ನಮ್ಮಲ್ಲಿ ಹಣವಿಲ್ಲ. ಹೀಗಾಗಿ ಸಿನಿಮಾಗಳನ್ನೇ ಬ್ಯಾನ್ ಮಾಡಿ ಎಂದು ಎಂದಾದರೂ ಕೇಳಿದ್ದಾರೆಯೇ?

ಕನ್ನಡ ಚಿತ್ರರಂಗ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಕಿರುತೆರೆಯೂ ಸಹ ದೊಡ್ಡದಾಗಿ ಬೆಳೆದಿದೆ. ಹಲವಾರು ಚಾನಲ್‌ಗಳಿಂದಾಗಿ ಕಲಾವಿದರಿಗೆ, ತಂತ್ರಜ್ಞರಿಗೆ ವಿಪುಲವಾದ ಅವಕಾಶಗಳು ಸೃಷ್ಟಿಯಾಗಿವೆ. ಇವುಗಳಲ್ಲದೆ ನಮ್ಮ ತಂತ್ರಜ್ಞರು, ನಟರು ಇತರ ಭಾಷೆಯ ಉದ್ಯಮಗಳಲ್ಲೂ ತೊಡಗಿ ಯಶಸ್ವಿಯಾಗಿದ್ದಾರೆ. ಹೀಗಿರುವಾಗ ನಮ್ಮ ಇಂಡಸ್ಟ್ರಿಯೇ ನಾಶವಾಗುತ್ತದೆ, ನಮ್ಮ ಜನರೆಲ್ಲ ಬೀದಿಗೆ ಬೀಳುತ್ತಾರೆ ಎಂದು ಹೇಳುವುದೇ ನಗೆಪಾಟಲಿನ ವಿಷಯ.

ಜಾಗತೀಕರಣದ ಕಾಲವಿದು. ಗುಲ್ಬರ್ಗದ ಹಳ್ಳಿಯೊಂದರಿಂದ ಗಾರೆ ಕೆಲಸಕ್ಕಾಗಿ ಬೆಂಗಳೂರಿಗೆ ಬರುವ ಬಡ ಕೂಲಿಕಾರ್ಮಿಕ ತಮಿಳುನಾಡಿನ, ಉತ್ತರಪ್ರದೇಶದ ಕೂಲಿ ಕಾರ್ಮಿಕರಿಂದ ಪೈಪೋಟಿ ಎದುರಿಸುತ್ತಾನೆ. ನಮ್ಮ ಹಳ್ಳಿಯ ರೈತರು ಇನ್ನ್ಯಾವುದೋ ದೇಶದ ರೈತರ ಜತೆ ತಮಗೆ ಗೊತ್ತಿಲ್ಲದಂತೆಯೇ ಪೈಪೋಟಿ ನಡೆಸಿ ತನ್ನ ಬದುಕನ್ನು ಕಾಪಾಡಿಕೊಳ್ಳಲು ಹೆಣಗುತ್ತಿದ್ದಾರೆ. ಇದೇ ಮಾತನ್ನು ಎಲ್ಲ ಉದ್ಯಮಗಳಿಗೂ, ಅವುಗಳಲ್ಲಿ ಕೆಲಸ ಮಾಡುವ ನೌಕರರಿಗೂ ಅನ್ವಯಿಸಿ ಹೇಳಬಹುದು. ಆದರೆ ಬಣ್ಣದ ಲೋಕದ ಮಂದಿ ಮಾತ್ರ ವಿನಾಯಿತಿಗಳನ್ನು ಬಯಸುತ್ತಾರೆ. ಅದೂ ಕೂಡ ತಾವು ಬಣ್ಣದ ಲೋಕದವರು ಎಂಬ ಒಂದೇ ಕಾರಣಕ್ಕೆ!

ಡಬ್ಬಿಂಗ್ ಸಂಸ್ಕೃತಿಯನ್ನೇ ಇವರು ಸಾರಾಸಗಟಾಗಿ ವಿರೋಧಿಸುವುದಾದರೆ ಕನ್ನಡ ಸಿನಿಮಾಗಳೆಲ್ಲ ತೆಲುಗಿಗೆ ಡಬ್ ಆಗುವುದು ಯಾವ ಕಾರಣಕ್ಕೆ? ಹೀಗೆ ಡಬ್ ಮಾಡಿ ಆಂಧ್ರಪ್ರದೇಶದಲ್ಲಿ ಸಿನಿಮಾ ಬಿಡುಗಡೆ ಮಾಡುವವರು ಅಥವಾ ಡಬ್ಬಿಂಗ್ ಹಕ್ಕನ್ನು ಮಾರುವವರು ಇದೇ ಇಂಡಸ್ಟ್ರಿಯವರಲ್ಲವೇ? ಹಣ ಬರುವುದಾದರೆ ಡಬ್ಬಿಂಗ್ ಬೇಕು, ಇಲ್ಲವಾದರೆ ಬೇಡ. ಇದು ಯಾವ ನೈತಿಕತೆ?

ಕನ್ನಡ ಚಿತ್ರರಂಗದವರು ಈ ಫ್ಯೂಡಲ್ ಮನೋಭಾವವನ್ನು ಬಿಟ್ಟು, ಆರೋಗ್ಯಕರ ಸ್ಪರ್ಧೆಗೆ ಒಡ್ಡಿಕೊಳ್ಳುವುದಾದರೂ ಯಾವಾಗ?

ಡಬ್ಬಿಂಗ್ ಸಿನಿಮಾ ಮೇಲಿನ ನಿಷೇಧ ಸರಿಯಲ್ಲ ಮತ್ತು ಡಬ್ಬಿಂಗ್ ಸಿನಿಮಾಗಳು ಮತ್ತೆ ಬರುವಂತಾಗಲಿ ಎಂದು ನಮಗಂತೂ ಅನಿಸಿದೆ. ನಿಮಗೆ? ದಯವಿಟ್ಟು ಓಟ್ ಮಾಡಿ.




42 comments:

  1. ಡಬ್ಬಿಂಗ್ ಸಿನಿಮಾಗಳು ಬೇಕು.
    ಆದರೆ, ಈ ನೆಲದ ಕಲಾವಿದರು ಮತ್ತು ಕಾರ್ಮಿಕರುಗಳಿಗೆ ಅವಕಾಶ ಸಿಗುವಂತಾಗಬೇಕು.

    ReplyDelete
  2. ಖಂಡಿತಾ ಹೀಗೊಂದು ಚರ್ಚೆಯ ಅನಿವಾರ್ಯತೆ ನಮ್ಮ ಮುಂದಿದೆ. ನನ್ನ ಬಹುತೇಕ ಅಭಿಪ್ರಾಯವನ್ನು ಈ ಬರಹ ಪ್ರತಿನಿಧಿಸುತ್ತದೆ. ಉಳಿದದ್ದು ಕೆಲವು ವಿಷಯಗಳಷ್ಟೆ..ಒಂದು ಯಾವುದೇ ಸಿನಿಮಾ ಇರಲಿ, ಅದು ನಿಲ್ಲುವುದು ಆಯಾ ಪ್ರೇಕ್ಷಕರ ಅಭಿರುಚಿಯ ಆಧಾರದ ಮೇಲೆ. ಒಬ್ಬ ಇರಾನಿ ಭಾಷೆಯ ಸಿನಿಮಾ ನೋಡುವವನಿಗೆ ಇರಾನಿ ಗೊತ್ತಿರಬೇಕು ಅಂತೇನಿಲ್ಲ. ಅದು ಅವನ ಆಯ್ಕೆ. ಸಾಮಾನ್ಯವಾಗಿ "ಎಜುಕೇಟೆಡ್" ಆದ ಪ್ರೇಕ್ಷಕರು ಬೇರೆ ಭಾಷೆಯ ಸಿನಿಮಾ ನೋಡುತ್ತಾರೆ. ಜಗತ್ತಿನ ಸಿನಿಮಾ ರಂಗದಲ್ಲಿನ ಬದಲಾವಣೆಗೆ ಮಿಡಿಯುತ್ತಾರೆ. ಅಂತವರು ಕನ್ನಡದ ಕಮರ್ಶಿಯಲ್ ಫಾರ್ಮುಲಾದ ಆಧಾರ ಮೇಲೆ ರೂಪುಗೊಂಡ ಸಿನಿಮಾವನ್ನು ಕಣ್ಣೆತ್ತಿಯೂ ನೋಡುವುದಿಲ್ಲ. ಅದರಲ್ಲಿ ಪುನೀತ್ ಇರಲಿ, ದರ್ಶನ್ ಇರಲಿ ಅಥವಾ ಇನ್ಯಾರೆ ಇದ್ದರು ಅದು ಅವಿನಿಗೆ ಮುಖ್ಯವಾಗುವುದಿಲ್ಲ. ಯಾಕೆಂದರೆ ಆಗಲೆ ಅವನಿಗೆ ಸಿನಿಮಾ ಎಂಬುದು ಕೇವಲ ಮನೋರಂಜನೆಯ ವಸ್ತು ಮಾತ್ರ ಆಗಿ ಉಳಿದಿರೋದಿಲ್ಲ.
    ಕನ್ನಡ ಪ್ರೇಕ್ಷಕರು ಈ ವಿಚಾರದಲ್ಲಿ ನತದೃಷ್ಟರು. ಜಗತ್ತಿನ ಶ್ರೇಷ್ಠ ಸಿನಿಮಾಗಳನ್ನು ಕೇವಲ ಭಾಷೆಯ ಕಾರಣಕ್ಕೆ ದೂರಿವಿಡುವ ಅವರ ಪರಿಸ್ಥಿಗೆ ಯಾರು ಕಾರಣ ಅಂತ ಹುಡುಕಿದರೆ ಮತ್ತೆ ಇದೇ "ಡಬ್ಬಂಗ್" ವಿರೋಧಿ ಕುಲಬಾಂಧವರು ಎದುರಾಗುತ್ತಾರೆ.
    ಬಹುಷಃ ಡಬ್ಬಂಗ್ ಸಿನಿಮಾಗಳು ಕನ್ನಡದಲ್ಲಿ ಬಂದಿದ್ದೇ ಆದರೆ, ಒಂದು ದಶಕದಲ್ಲಿ ಕನ್ನಡ ಪ್ರೇಕ್ಷಕ ಹೊಸ ಆಲೋಚನೆಯ ಸಿನಿಮಾಗಳ ನಿರೀಕ್ಷೆಯಲ್ಲಿರುತ್ತಾನೆ. ಹಾಗಾದರೆ ಈಗ ಇರುವ ಫೇಮಸ್ ಸಿನಿಮಾ ಮಂದಿಯಲ್ಲಿ ಬಹುತೇಕರು ಮನೆಯ ಹಾದಿ ಹಿಡಿಯಬೇಕಾಗುತ್ತೆ. ಈ ಭಯ ಕಾಡುವ ಕಾರಣಕ್ಕೇನೆ ಅವರಿಗೆ ಡಬ್ಬಂಗ್ ಅಂದಾಕ್ಷಣ ಕನ್ನಡ ಭಾಷೆ, ಸಂಸ್ಕೃತಿಗಳು ನೆನಪಾಗುತ್ತವೆ.
    ಡಬ್ಬಂಗ್ ಅಳವಡಿಸಿಕೊಂಡ ಯಾವ ಭಾಷೆಯ ಸಿನಿಮಾ ಕ್ಷೇತ್ರ ಹಾಳಾಗಿ ಹೋದ ಇತಿಹಾಸ ಇಲ್ಲದಿರುವಾಗ ಕನ್ನಡ ಚಿತ್ರರಂಗದವರಿಗೆ ಯಾಕೆ ಭಯ? ಅಷ್ಟಕ್ಕೂ ಅದೇ ಹಳೆ ಫಾರ್ಮುಲಾ ಇನ್ನೆಷ್ಟು ದಿನ ಬಾಳಿಕೆ ಬರುತ್ತೆ ಅಂತ ಅವರು ಅಂದುಕೊಂಡಿದ್ದಾರೋ? ಗಾಂಧಿನಗರವೇ ಹೇಳಬೇಕು.
    ಡಬ್ಬಂಗ್ ಸಿನಿಮಾಗಳು ಬರುತ್ತಿದ್ದಂತೆ ಕನ್ನಡ ಚಿತ್ರರಂಗ ಬೆಳೆಯುತ್ತೆ. ಅದರಲ್ಲಿ ಯಾವ ಭ್ರಮೆಗಳೂ ಬೇಡ.
    -ಪ್ರಶಾಂತ್.

    ReplyDelete
  3. ಡಬ್ಬಿಂಗ್ ಚಿತ್ರಗಳು ಬರುವುದರಿಂದ ಕನ್ನಡ ಕಂಠ ದಾನ ಕಲಾವಿದರಿಗೆ ಅವಕಾಶವೇ ಸಿಕ್ಕಿದಂತಾಗುತ್ತದೆ ಅಲ್ಲವೇ ? ಇದರಿಂದ ಇನ್ನು ಉದ್ಯೋಗವಾಕಾಶ ಗಳನ್ನೂ ಸೃಷ್ಟಿಸಿದಂತೆ ಆಗುತ್ತದೆ. ಒಳ್ಳೆಯದೇ ತಾನೇ. ಇತರ ತಂತ್ರಜ್ಞರು , ಕಾರ್ಮಿಕರಿಗೆ ಹೇಗೂ ಎಂದಿನಂತೆ ತಯಾರಾಗುವ ಕನ್ನಡ ಚಿತ್ರಗಳಲ್ಲಿ ಅವಕಾಶ ಇದ್ದೆ ಇರುತ್ತದೆ. ಸಮಸ್ಯೆ ಯಾರಿಗೆ? ಬಹುಷ್ಯ ಸಂಪೂರ್ಣ remake , ಅಥವಾ ನಾಲ್ಕಾರು ತಮಿಳು, ತೆಲುಗು ಚಿತ್ರಗಳ mixing remake ಮಾಡುವ ಕಸುಬಿನವರಿಗೆ ಇದರಿಂದ ನಿಜವಾದ ಸಮಸ್ಯೆ ತಲೆದೋರುತ್ತದೆ ಅಷ್ಟೇ ! ಆಗ ಇಂಥಹವರು ಸಿಕ್ಕಿ ಬೀಳುತ್ತಾರೆ. (ಇಂತಹ ವರೆಲ್ಲರೂ ಈಗ ನಿರ್ದೇಶಕರೇ! ಆಗಿದ್ದಾರೆ.!! ) ಆಗ ಅವರು ಅನಿವಾರ್ಯವಾಗಿ ಕನ್ನಡ ದ ಕಥೆಗಳನ್ನು, ಕನ್ನಡ ಕಥೆ ಗಾರರನ್ನು ಹುಡುಕಿ ಕೊಂಡು ಹೋಗಬೇಕಾಗುತ್ತದೆ, ಸಾಹಿತ್ಯ, ಕಥೆಯ ಸಾರ, ಸಂಸ್ಕೃತಿ ಯ ಛಾಪು, ಎಲ್ಲವನ್ನು ಅರಿಯಬೇಕಾಗುತ್ತದೆ, ಕಲಿಯಬೇಕಾಗುತ್ತದೆ. ಪುಸ್ತಕ ಓದಬೇಕಾಗುತ್ತದೆ, ಪಾತ್ರ ಗಳಲ್ಲಿ ತಲ್ಲೀನ ವಾಗಬೇಕಾಗುತ್ತದೆ, ಇಸ್ಟೇ ಅಲ್ಲದೆ ಸ್ಕ್ರಿಪ್ಟ್ ವರ್ಕ್ ಮಾಡಬೇಕಾಗುತ್ತದೆ. ಮುಖ್ಯವಾಗಿ ಕೆಲಸ ಮಾಡಬೇಕಾಗುತ್ತದೆ.!! ಎಷ್ಟೆಲ್ಲಾ ಕೆಲಸಗಳು. ನಮ್ಮ ಇಂದಿನ ನಿರ್ದೇಶಕರು (ಕೆಲವರನ್ನು ಹೊರತು ಪಡಿಸಿ) ಗಳು ಇದಕ್ಕೆ ತಯಾರಿದ್ಡಾರ? ಇವರಿಗೆ "ರೆಡಿ ಟು ಎಟ್ product " ಬೇಕು. ಸುಮ್ಮನೆ ತಂತ್ರಜ್ಞರು, ಕಲಾವಿದರಿಗೆ ಕೆಲಸ ಹೋಗುತ್ತದೆ ಎಂಬ ಆರೋಪ ಮಾಡುತ್ತಾರೆ. ಇಂತಹ ಕೆಲವು ಮಂದಿ ಚಿತ್ರ ರಂಗ ದ ಆಯಕಟ್ಟಿನ ಜಾಗ ಗಳಲ್ಲಿ ಕುಳಿತು, ಎಲ್ಲವನ್ನು, ಎಲ್ಲರನ್ನೂ ಆಳುತ್ತಿದ್ದಾರೆ.ತಮ್ಮ ಬೇಳೆ ಬೇಯಿಸಿ ಕೊಳ್ಳುತ್ತಿದ್ದಾರೆ. ಇವರಲ್ಲಿ ದುಡ್ಡನ್ನು instant ಆಗಿ multiply ಮಾಡಿಕೊಳ್ಳಲು ನಿರ್ಮಾಪಕ ವೃತ್ತಿಗೆ ಇಳಿದಿರುವ ಸೊ ಕಾಲ್ಡ್ ನಿರ್ಮಾಪಕರುಗಳೂ ಇದ್ದಾರೆ. ಇವರು ಈ ದುಡ್ಡನ್ನು ಎಲ್ಲಿಂದ ತರುತ್ತಾರೆ ಎಂದು ಹೇಳಬೇಕಾಗಿಲ್ಲ ತಾನೇ?

    ReplyDelete
  4. ನಿಜ . ಡಬ್ಬಿಂಗ್ ಸಿನಿಮಾ ಗಳು ಬಂದರೆ, ರಿಮೇಕ್ ಸಿನಿಮಾ ಮಾಡುವವರಿಗೆ, mixing , ಅಥವಾ " inspired " ಹೆಸರಿನಲ್ಲಿ ಮಾಡುವ ಕಳ್ಳ ರಿಮೇಕ್ ಮಾಡುವವರಿಗೆ ಸರಕು ಇಲ್ಲದಂತಾಗುತ್ತದೆ. ಆಗ ನಿಜವಾಗಿ ಕೆಲಸ ಇಲ್ಲದವರಾಗುವುದು ಇಂತಹ ನಿರ್ದೇಶಕರು, ನಿರ್ಮಾಪಕರು. ಇದನ್ನು ಹೇಳಲಾರದೆ ಅವರು , ಅದನ್ನು ಅವರು ಕನ್ನಡ ಸಂಸ್ಕೃತಿ, ಭಾಷೆ, ಕಾರ್ಮಿಕರ ಕೆಲಸ, ಇತ್ಯಾದಿ ಗಳ ಮೇಲೆ ಹೇರುತಿದ್ದಾರೆ.

    ReplyDelete
  5. ಅವಿನಾಶ ಕನ್ನಮ್ಮನವರMay 28, 2011 at 5:18 PM

    ಗಾ೦ಧಿನಗರದ ಮ೦ದಿಗೆ "ಅವತಾರ್" ನ೦ತಹ ಆ೦ಗ್ಲ ಸಿನೆಮಾ ಮಾಡಲು ಸಾಧ್ಯವೆ ಇಲ್ಲಾ,, ಆ ಚಿತ್ರ ಡಬ್ಬಿ೦ಗ ಆಗಿದ್ದರೆ ಚಿತ್ರ ವೈಭವವನ್ನು ಕನ್ನಡಿಗರು ನಮ್ಮ ಭಾಷೆಯಲಿಯೇ ಸವಿಯಬಹುದಿತ್ತು,, ನೋಡುಗರ ಹಕ್ಕನ್ನು ಎಕೆ ಕಸಿಯ ಬೇಕು??

    ReplyDelete
  6. ಇತ್ತೀಚೆಗೆ ತಲೆಕೆಟ್ಟವರಿಗೆ ಮಾತ್ರ ಅರ್ಥವಾಗುವ "ತೂತು ಮಾರ್ಕಿನ" ಚಿತ್ರವೊಂದನ್ನು ಕನ್ನಡ ಸಿನಿಮಾ ವೀಕ್ಷಕರ ಮೇಲೆ ಛೂ ಬಿಡಲಾಗಿತ್ತು. ವ್ಯವಸ್ಥೆಯ ಭ್ರಷ್ಟತೆ ನಿವಾರಣೆಗೆ ಬಿದ್ದು ಬಿದ್ದು ನಗುವಂತಹ ಹಾಸ್ಯಾಸ್ಪದ ಪರಿಹಾರಗಳನ್ನು ಈ ಚಿತ್ರದಲ್ಲಿ ಸೂಚಿಸಲಾಗಿತ್ತು. ಓಪೆನಿಂಗ್ ಚೆನ್ನಾಗಿಯೇ ಆದ ಆ ಚಿತ್ರ ಎರಡನೇ ವಾರ ತಲುಪುವ ಹೊತ್ತಿಗೆ ಚಿತ್ರಮಂದಿರದಲ್ಲಿ ಟಿಕೆಟ್ ಹರಿಯುವವನು ಚಿತ್ರ ನೋಡುವ ಜನರಿಲ್ಲದೆ ಕಾಗೆ ಓಡಿಸಿಕೊಂಡು ಕುಳಿತಿದ್ದ. ಪ್ರತಿಷ್ಠೆಯ ಹಂಗಿಗೆ ಬಿದ್ದು ಬಲವಂತವಾಗಿ 100 ದಿನ ತಳ್ಳಲ್ಪಟ್ಟ ಈ ಚಿತ್ರಕ್ಕೆ ಹಿಂದಿ ಮತ್ತು ಮಲಯಾಳದ ನಾಯಕಿಯರು, ತೆಲುಗಿನ ಹಾಸ್ಯನಟ, ತಮಿಳಿನ ಖಳನಾಯಕರನ್ನು ಚಿತ್ರದ ನಿರ್ಮಾಪಕ ಮತ್ತು ನಟ/ನಿರ್ದೇಶಕ ಬಳಸಿದ್ದರು. ತಮ್ಮ ಈ ಹಾಸ್ಯಾಸ್ಪದ ಚಿತ್ರವನ್ನು ಈ ಅಲ್ಲಣ್ಣ ಮಲ್ಲಣ್ಣ ಜೋಡಿ ತೆಲುಗು ತಮಿಳು ಮತ್ತು ಮಲಯಾಳಂಗೆ ಡಬ್ ಮಾಡಿ ಅಲ್ಲಿನ ಪ್ರೇಕ್ಷಕರ ಮೇಲೆ ತಮ್ಮ ಚಿತ್ರವನ್ನು ಛೂ ಬಿಟ್ಟಿದೆ. ಇಲ್ಲಿ ವಿಶೇಷವೇನೆಂದರೆ ಡಬ್ಬಿಂಗ್ ವಿರೋಧಕ್ಕೆ ಮೊದಲ ಕೂಗು ಹಾಕುವ ಕನ್ನಡ ಚಿತ್ರರಂಗದ ದನಿಗಳೂ ಇವರದ್ದೇ. ಬೇರೆ ಭಾಷೆಯವರು ಇವರ ಚಿತ್ರರಂಗಕ್ಕೆ ಡಬ್ಬಿಂಗ್ ಮಾಡಬಾರದಂತೆ, ಆದರೆ ಇವರು ಮಾತ್ರ ಕಂಡ ಕಂಡ ಭಾಷೆಗೆಲ್ಲ ಕನ್ನಡ ಚಿತ್ರವನ್ನು ಡಬ್ ಮಾಡಬಹುದಂತೆ.. ಅದರಿಂದ ಬೇರೆ ಭಾಷೆಯವರ ಚಿತ್ರರಂಗ ಹಾಳಾಗುವುದಿಲ್ಲವೇ ಎಂಬುದು ನಮ್ಮ ಪ್ರಶ್ನೆ. ಇದ್ಯಾವ ದೊಣ್ಣೆನಾಯಕನ ನ್ಯಾಯ ಸ್ವಾಮಿ. ಟಿ.ಕೆ. ದಯಾನಂದ

    ReplyDelete
  7. ಡಬ್ಬಿಂಗ್ ಮಾಡುವುದರಿಂದ ಕನ್ನಡ ಚಿತ್ರರಂಗಕ್ಕೆ ಯಾವುದೆ ಹಾನಿ ಇಲ್ಲ.. ಇದು ಕನ್ನಡವನ್ನು ಇನ್ನಷ್ಟು ಅಭಿವ್ರುದ್ದಿಯೆಡೆಗೆ ಕೊಂಡೊಯುತ್ತದೆ. ಸಿನೆಮಾ ರಂಗದವರು ಯಾರು ಇದನ್ನೆಲ್ಲ ವಿರೊಧಿಸೋಕೆ. ಬಹುಶಃ ಅವರಿಗೆ ಕೆಲಸ ಕಳೆದುಕೊಳ್ಳುವ ಭಯ ಇರಬೇಕು !!

    ReplyDelete
  8. ತುಂಬಾ ಅರ್ಥಪೂರ್ಣವಾದ ವಾದ, ಕಂಡಿತ ಇದರ ಬಗ್ಗೆ ಚರ್ಚೆಯಾಗಬೇಕು. ಡಬ್ಬಿಂಗ್ ಮಾಡುವುದರಿಂದ ಕನ್ನಡ ಸಂಸ್ಕ್ರುತಿಗೆ ಯಾವುದೆ ಹಾನಿ ಇಲ್ಲ. ನಮ್ಮ ಮಕ್ಕಳಿಗೆ ಕನ್ನಡದಲ್ಲೆ ಗ್ಲೊಬಲೈಷನ್ ಅರಿವನ್ನು ಮೂಡಿಸಬಹುದು

    ReplyDelete
  9. ಡಬ್ಬಿಂಗ್ ಸಿನಿಮಾ ಬರುವವದರಿಂದ ಕೆಲವೇ ಬೆರಳೆಣಿಕೇಯಷ್ಟು ಕಲಾವಿದರಿಗೆ ತೊಂದರೆಯಾಗಬಹುದು.ಹಾಗಂತ ಇತರ ಕನ್ನಡಿಗರ ಹಕ್ಕನ್ನು ಕಸಿಯುವ ಹಾಗಿಲ್ಲ.




    .ಅವತಾರ್,ಟೈಟಾನಿಕನಂಥ ಸಿನಿಮಾಗಳು ಎಲ್ಲರು ನೋಡುವಂತಾಗಬೇಕು.

    ReplyDelete
  10. ಡಬ್ಬಿಂಗ್ ಎಂದೆಂದೂ ಬೇಡ

    ReplyDelete
  11. ಬೇರೆ ಭಾಷೆಯ ಚಿತ್ರಗಳು ಕನ್ನಡನಾಡಿನಲ್ಲಿ ಯಾವುದೇ ತಡೆಯಿಲ್ಲದೇ ಓಡತಾ ಇರೋದು ನೋವಿನ ಸಂಗತಿ.
    ಡಬ್ಬಿಂಗ ಬಂದರೆ ಬೇರೆ ಭಾಷೆಯ ಚಿತ್ರಗಳನ್ನು ಕನ್ನಡದಲ್ಲಿ ನೋಡಬಹುದು, ಅಷ್ಟರಮಟ್ಟಿಗೆ ಕನ್ನಡಕ್ಕೆ ಒಳ್ಳೆಯದಾಗಬಹುದು.
    ಆದರೆ ಡಬ್ಬಿಂಗ್ ಬೆಂಬಲಿಸುವಾಗ ತುಸು ಎಚ್ಚರಿಕೆಯೆವಹಿಸಿದರೆ ಒಳಿತು.
    ೧) ಡಬ್ಬಿಂಗ್ ಅತೀಯಾದರೇ, ಇತ್ತಿಚೀನ ದಿನಗಳಲ್ಲಿ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡ ಕನ್ನಡ ಚಿತ್ರಸಂಗೀತ ಮತ್ತೇ ತೆರೆಮರೆಗೆ ಸರಿಯಬಹುದು
    ೨) ನಮ್ಮದೇ ಕಲಾವಿದರ ಬೆಳವಣಿಗೆಗೆ ನಮ್ಮದೇ ನೆಲದಲ್ಲಿ ಬೇರೆ ಭಾಷೆಯ ನಟ-ನಟಿಯರು ಮುಳುವಾಗಬಹುದು
    ೩) ಮೊದಲೇ ರಿಮೇಕ ಚಿತ್ರಗಳಿಂದಾಗಿ ಚಿತ್ರರಂಗದಲ್ಲಿ "ಕನ್ನಡತನ" ಮರೆಯಾಗಿರುವಾಗ ಡಬ್ಬಿಂಗನಿಂದ ಇದಕ್ಕೆ ಬೆಂಕಿಗೆ ತುಪ್ಪ ಸುರಿದ ಹಾಗೆ ಆಗಬಹುದು

    ಈಗ ಮುಖ್ಯವಾಗಿ ಆಗಬೇಕಾಗಿರುವುದು ರಿಮೇಕ್ ಎಂಬ ಕದ್ದ ಸರಕನ್ನು ದೂರ ಸರಿಸಿ ಕನ್ನಡದ್ದೇ "ಮುಂಗಾರು ಮಳೆ" ಗಳು ಸುರಿಯಬೇಕು.
    ಚಿತ್ರರಂಗದವರು ರಿಮೇಕನಿಂದ ದೂರ ಸರಿದರೆ, ಡಬ್ಬಿಂಗ್ ಬೆಂಬಲಿಸುವ ಅನಿವಾರ್ಯತೆಯು ಕಡಿಮೆಯಾಗಬಹುದು.

    ReplyDelete
  12. ಪ್ರೇಕ್ಷಕನಿಗೆ ನೀನು ಇದನ್ನೇ ನೋಡು ಅಥವಾ ಅದನ್ನು ನೋಡುವವರು ಕನ್ನಡ ವಿರೋದಿಗಳು ಅನ್ನೋದು ಸರಿಯಲ್ಲ, ಜಗತ್ತಿನ ಎಲ್ಲ ಒಳ್ಳೆಯ ಮನರಂಜನೆಯನ್ನು ತನ್ನ ನುಡಿಯಲ್ಲಿ ನೋಡುವ ಹಕ್ಕು ಅವನಿಗಿದೆ. ಡಬ್ಬಿಂಗ್ ನಿಷೇದದಿಂದ ಈ ಹಕ್ಕನ್ನು ಕಸಿದುಕೊಳ್ಳಲಾಗುತ್ತಿದೆ. ಡಬ್ಬಿಂಗ್ ಬರಲಿ. ಒಳ್ಳೆಯ ಮನರಂಜನೆ ಅನ್ನೋದು ಕೆಲವ್ರಿಗೆ ಮಾತ್ರ ಸೀಮಿತ ಆಗದೇ ರಾಜ್ಯದ ಎಲ್ಲರಿಗೂ ಅವರು ಆಡುವ ನುಡಿಯಲ್ಲೇ ಅದು ಸಿಗುವಂತಾಗಲಿ.

    ReplyDelete
  13. ಕನ್ನಡಕ್ಕೆ ಡಬ್ಬಿಂಗ್ ಬೇಕು.ಬೇರೆ ಭಾಷೆಯ ಉತ್ತಮ ಚಿತ್ರಗಳನ್ನು ಆ ಭಾಷೆ ಬಾರದವರೂ ಕೂಡ ಅರ್ಥಮಾಡಿಕೊಂಡು ನೋಡಿ ಅನಂದಿಸಬೇಕು. ಮನೋರಂಜನೆ ಕೇವಲ ಒಂದು ವರ್ಗದ ಸ್ವತ್ತಲ್ಲ.
    ಡಬ್ಬಿಂಗ್ ಬೇಡ ಅನ್ನೋರಿಗೆ ಇನ್ನೊಂದು ಪರಿಹಾರ ಇದೆ. ಕನ್ನಡದಲ್ಲಿ ಸಬ್ ಟೈಟ್ಲ್(subtitle) ಕೊಡೋದು. ನಾನೀಗ ಮಲೇಶಿಯಾ ದಲ್ಲಿದ್ದೇನೆ. ಇಲ್ಲಿ ಚಿತ್ರರಂಗ ಅಷ್ಟೇನೂ ಮುಂದುವರೆದಿಲ್ಲ. ಆದರೆ ಇಲ್ಲಿ ಹಿಂದಿ,ತಮಿಳ್,ಹಾಲಿವುಡ್ ಮಾತು ಇತರ ಭಾಷೆಯ ಚಿತ್ರಗಳು ಪ್ರದರ್ಶನ ಗೊಳ್ಳುತ್ತವೆ. ಆದರೆ ಇಲ್ಲಿಯ ಪ್ರಾದೇಶಿಕ ಭಾಷೆ ಮಲಯ್(Malay)ಬಿಟ್ಟು ಬೇರೆ ಯಾವುದೇ ಭಾಷೆಯ ಚಿತ್ರವಾದರೂ ಮಲಯ್ ದಲ್ಲಿ ಸಬ್ ಟೈಟ್ಲ್ ಕೊಡ್ತಾರೆ. ಹಾಗಾಗಿ ಬೇರೆ ಭಾಷೆ ಬಂದಿಲ್ಲವಾದರೂ ಇಲ್ಲಿಯವರು ಮೂವಿನ ಸವಿತಾರೆ. ಟಿವಿ ಕಾರ್ಯಕ್ರಮಗಳೂ ಅಷ್ಟೇ ಮಲಯ್ ಸಬ್ ಟೈಟ್ಲ್ ಇರತ್ತೆ.
    ಕನ್ನಡದಲ್ಲೂ ಅಷ್ಟೇ , ಬೇರೆ ಭಾಷೆ ಚಿತ್ರವಾದರೂ ಕನ್ನಡದಲ್ಲೇ ಸಬ್ ಟೈಟ್ ಲ್ ಕೊಟ್ಟರೆ ಅದನ್ನು ಓದಿ ಇತರರು ಚಿತ್ರವನ್ನು ಅರ್ಥ ಮಾಡಿಕೊಳ್ಳಬಹುದು. ಈ ಬಗ್ಗೆ ಡಬ್ಬಿಂಗ್ ವಿರೋಧಿಗಳು ಗಮನಹರಿಸಿದರೆ ಒಳ್ಳೆಯದು.

    ReplyDelete
  14. Dude... Have you seen how funny it looks to see the ads in Hindi/English dubbed into Kannada? This is not actually the original Kannada. If we start dubbing movies, then God should save the sweetness of Kannada. Dubbing leads to the losing of originality of any language. It looks artificial. We should keep future generation from using adulterated Kannada language. What do you say?

    ReplyDelete
  15. ವಿನಯ್,

    ಭಾಷೆಯ ಸೊಗಡು ಹಾಳಾಗುತ್ತೆ ಅನ್ನೋದಾದರೆ, ಜನರಿಗೇ ಅದು ಬೇಡವಾದರೆ, ಜನರೇ ಮಾರುಕಟ್ಟೆಯಲ್ಲಿ ಡಬ್ಬಿಂಗ್ ಸಿನಿಮಾ ತಿರಸ್ಕಾರ ಮಾಡ್ತಾರೆ. ಸೋಲುಸ್ತಾರೆ. ಡಬ್ಬಿಂಗ್ ಬಿಡಲ್ಲಾ ಅನ್ನೋಕೆ ಇದೇನು ಪಾಳೇಗಾರಿಕೆಯ ಕಾಲವಲ್ಲ. ಸಿನಿಮಾದಿಂದ ಭಾಷೆಯನ್ನು ಉಳುಸ್ತೀವಿ ಅನ್ನೋದು ಸೋಗಲಾಡಿತ ಅಷ್ಟೇ.

    ಆನಂದ್

    ReplyDelete
  16. ಸತೀಶ್ ನಾಯಕ್,

    ನೀವಂತೀರಾ... ಸಬ್ ಟೈಟಲ್ ಇರೋ ಸಿನಿಮಾ ಪರ್ವಾಗಿಲ್ಲಾ ಅಂತಾ. ಮತ್ತೆ ಕೆಲವರು "ತಡವಾಗಿ ಮಾತು ಕೇಳೋ ಥರದ, ತುಟಿ ಚಲನೆ ಹೊಂದದ" ಡಬ್ಬಿಂಗ್ ಪರವಾಗಿಲ್ಲಾ ಅಂತಾ! ನಮಗ್ಯಾವ ಕರ್ಮಾರೀ ಇದು? ಪೂರ್ತಿಯಾಗಿ ಸರಿಯಾಗಿ ಕನ್ನಡಕ್ಕೆ ಒಳ್ಳೇ ಗುಣಮಟ್ಟದಲ್ಲಿ ಡಬ್ಬಿಂಗ್ ಆದ ಚಿತ್ರ ಯಾಕೆ ಬೇಡ ಅಂತಾ ಹೇಳಿ. ನಾವು ಅಂತಹ ಚಿತ್ರಗಳನ್ನು ನೋಡೋ ಹಕ್ಕನ್ನು ಯಾರಾದರೂ ಅದು ಹೇಗೆ ತಪ್ಪು ಅನ್ನಲು ಸಾಧ್ಯಾ? ಡಬ್ಬಿಂಗ್ ಪರರನ್ನು "ಭಾಷೆಯನ್ನ, ಸಂಸ್ಕೃತಿಯನ್ನು ಕೊಲ್ಲುವ ಹುನ್ನಾರವುಳ್ಳ, ಲಾಭಬಡುಕರ ‘ಜಾಣ’ರು" ಅನ್ನೋದಾಗಲೀ, "ತಾಯಿಬೇರಿಗೆ ಬೀಳುವ ಕೊಡಲಿ ಏಟು" ಅನ್ನೋದಾಗಲೀ ಮಾಡೋರು "ಗ್ರಾಹಕರ ಹಕ್ಕನ್ನು ಕಿತ್ತುಕೊಳ್ಳೋ ಅಧಿಕಾರ ಯಾರಿಗೂ ಇಲ್ಲ" ಅನ್ನೋದನ್ನು ಮೊದಲು ಅರಿಯಬೇಕಾಗಿದೆ.


    ಆನಂದ್

    ReplyDelete
  17. @ ವಿನಯ್,
    ನೀವು ಹೇಳೋದು ನಿಜ. ಡಬ್ ಆಗುವ ಜಾಹೀರಾತುಗಳಲ್ಲಿ ಕನ್ನಡದ ಸೊಗಡು ಇಲ್ಲ. ಅತ್ಯಂತ ಕೆಟ್ಟ ಅನುವಾದ, ಧ್ವನಿ ಮತ್ತು ಅನುಕರಣೆ. ನೋಡಲು ವಾಕರಿಕೆಯಾಗುತ್ತದೆ. ಇದು ಜಾಹೀರಾತು ನಿರ್ಮಿಸುವವರ ಕ್ರಿಯೇಟಿವಿಟಿಯ ಕೊರತೆ.
    ಇದೇ ರೀತಿ ಡಬ್ಬಿಂಗ್ ಸಿನಿಮಾಗಳೂ ಬಂದರೆ ಆನಂದ್ ಅವರು ಹೇಳಿದಂತೆ ಜನ ತಿರಸ್ಕರಿಸುತ್ತಾರೆ. ಮೂಲ ಕನ್ನಡ ಸಿನಿಮಾಗಳನ್ನೇ ನೋಡುತ್ತಾರೆ.
    ಡಬ್ಬಿಂಗ್ ಬೇಡ ಎನ್ನುವುದಕ್ಕೆ ನೀವು ಹೇಳುತ್ತಿರುವುದು ಸಮರ್ಥನೆಯಾಗುವುದಿಲ್ಲ. ಇಡೀ ಜಗತ್ತಿನಲ್ಲಿ ಇಲ್ಲದ ನಿಯಮವನ್ನು ನಾವೇಕೆ ಇಟ್ಟುಕೊಳ್ಳಬೇಕು? ನಾವು ಯಾವ ಕಾಲದಲ್ಲಿ ಇದ್ದೇವೆ? ಡಬ್ಬಿಂಗ್ ಬಂದರೆ ಕನಿಷ್ಠ ಮುಕ್ಕಾಲು ಪಾಲು ಥಿಯೇಟರುಗಳಲ್ಲಿ ಕನ್ನಡ ಸಿನಿಮಾಗಳೇ ಇರುತ್ತವಲ್ಲವೆ? ಇದು ಕನ್ನಡ ಭಾಷೆಯ ದೃಷ್ಟಿಯಲ್ಲಿ ಸಕಾರಾತ್ಮಕ ಅಂಶವಲ್ಲವೆ?

    ReplyDelete
  18. ಸಂಪಾದಕೀಯ ಇಂಥದೊಂದು ಪ್ರಶ್ನೆಯನ್ನು ಎತ್ತಿ ಒಳ್ಳೆಯ ಕೆಲಸವನ್ನು ಮಾಡಿದೆ ಅನ್ನಿಸಿದೆ. ಖಂಡಿತ ನನಗೆ ಡಬ್ಬಿಂಗ್ ಸಿನಿಮ ಬೇಕು. ಜಗತ್ತಿನ ಅತ್ಯುತ್ತಮ ಭಾಷೆಯ ಚಿತ್ರಗಳನ್ನೆಲ್ಲಾ ನಮ್ಮ ಕನ್ನಡ ಭಾಷೆಯಲ್ಲೇ ನೋಡಿದರೆ ಎಷ್ಟು ಚೆನ್ನ ಅಲ್ಲವೇ...ಇರಾನಿನ children of heavan, the mirror, cinema paradiso, Life is beautiful....avatar, ಹೀಗೆ ನೂರಾರು ಸಿನಿಮಗಳನ್ನು ಆಂಗ್ಲ ಭಾಷೆಯ ಸಬ್ ಟೈಟಲ್ಲಿನಲ್ಲಿ ನೋಡಿ ಖುಷಿಪಟ್ಟಿದ್ದೇನೆ. ಇದರಿಂದ ಆಂಗ್ಲ ಭಾಷೆ ಬೆಳೆಯಿತು. ಇದನ್ನೇ ಕನ್ನಡದಲ್ಲಿ ಮಾಡಿದ್ದರೆ ನಾವು ಮತ್ತಷ್ಟು ಖುಷಿಯಿಂದ ಅತ್ಯುತ್ತಮ ಸಿನಿಮಾಗಳನ್ನು ನಮ್ಮ ಭಾಷೆಯಲ್ಲಿ ನೋಡಿ ಆನಂದಿಸಬಹುದು. ಡಬ್ಬಿಂಗ್ ಬೇಡ ಎಂದು ಹೇಳಿ ಪ್ರೇಕ್ಷಕರನ್ನು ಕಡೆಗಾಣಿಸಲು ಇವರಿಗೆ ಯಾವ ಹಕ್ಕು ಇಲ್ಲ. ಈ ನಿಯಮ ರದ್ದಾಗಿ ಕನ್ನಡದಲ್ಲಿ ಜಗತ್ತಿನ ಅತ್ಯುತ್ತಮ ಚಿತ್ರಗಳನ್ನು ನೋಡುವ ಅವಕಾಶ ನಮ್ಮದಾಗಲಿ..

    ReplyDelete
  19. ಡಬ್ಬಿಂಗ್ ಬೇಕೇ ಬೇಕು....ಡಬ್ಬಿಂಗ್ ಬೇಕೂ ಬೇಡವೋ ಎಂದು ನಿರ್ಧಾರ ಮಾಡಬೇಕಾಗಿರುವುದು ಪ್ರೇಕ್ಷಕರು...ಡಬ್ಬಿಂಗ್ ಬೇಕೇ ಬೇಕು...

    ReplyDelete
  20. please stop dubbing,it is like coping in exam.it will spoil whole kannada movie system in karnataks.
    then all kannada movie stars,actress, ECT are on the street & there is no work for film industry in Bangalore.Please stop dubbing

    ReplyDelete
  21. ಅರುಣ್ ಪ್ರಸಾದ್ ...
    (ಕನ್ನಡ ಸಿನಿಮಾ ಸಹಾಯಕ ನಿರ್ದೇಶಕ )

    ನನ್ನ ಪ್ರಕಾರ ..
    ಕನ್ನಡಕ್ಕೆ ಡಬ್ಬಿಂಗ್ ಸಿನಿಮಾ ಬರಲ್ಲಿ ಬೀಡಿ ....
    ನಮ್ಮಗೂ ಒಂದು ಛಲ ಬರುತ್ತೇ, ನಮ್ಮಲ್ಲಿ ಏನಾದರು ಹೋಸತನವನ್ನು ಹೂಡುಕುವ ಪ್ರಯತ್ನ ನಡೇಯುತ್ತೆ, ಕನ್ನಡ ಚಿತ್ರರಂಗದಲ್ಲಿ ಏಂದೀಗೂ ಕನ್ನಡಿಗನ್ನೇ 'ರಾಜ' ರಾಜಕುಮಾರ. ಅದನ್ನು ಯಾರಿಂದಲ್ಲು ಕಸಿದು ಕೋಳ್ಳಲ್ಲು ಆಗೋದ್ದಿಲ್ಲ, ಆದಕ್ಕೇ ನಮ್ಮ ಕನ್ನಡ ಪ್ರೇಕ್ಷಕರು ಏಂದೀಗೂ ಆವಕಾಶ ಕೋಟ್ಟಿಲ್ಲ,

    ಏಲ್ಲಿಯವರೆಗೂ ನಮ್ಮ ಕನ್ನಡ ಪ್ರೇಕ್ಷಕರು ಕನ್ನಡ ಸಿನಿಮಾವನ್ನು ಬೆಂಬಲ್ಲಿಸುತ್ತಾರೋ ಅಲ್ಲಿಯವರೇಗೂ ಕನ್ನಡಕ್ಕೇ ಯಾವುದೇ ಡಬ್ಬಿಂಗ್ ಸಿನಿಮಾ ಬಂದರು ಕನ್ನಡ ಸಿನಿಮಾಗೇ ಹಾಗು ಸಿನಿಮಾರಂಗಕ್ಕೆ ಯಾವುದೇ ಹಾನಿ ಇಲ್ಲ,

    ReplyDelete
  22. dubbing beku guru!! ee KFI nalli iro old fashioned producers ge yenu gotu technology yestu fast agi munde hoide antha..

    ReplyDelete
  23. ಕೆಲವು ಕಿಡಿಗೇಡಿ ನಿರ್ದೇಶಕರು ಹಾಗು ಚಿತ್ರರಂಗದಲ್ಲಿನ ಜನ ತಾವು ಮಾಡುವ ಹೊಲಸು ಕಿತ್ತೋಗಿರೋ ಚಿತ್ರಗಳನ್ನೇ ಜನ ನೋಡಲೆಂದು ಅಪೇಕ್ಷಿಸುತ್ತಾರೆ. ಇವರಿಗೆ ಇವತ್ತಿನ ಮಾರುಕಟ್ಟೆಯಲ್ಲಿ ಆಟವಾಡೋ ಯಾವ ಸಾಮರ್ಥ್ಯವು ಇಲ್ಲ.
    ಡಬ್ಬಿಂಗ್ ವಿರುದ್ಧವಾಗಿ ಹಾರಾಟ ಮಾಡ್ತಾ ಇರೋ ಕನ್ನಡ ಚಿತ್ರರಂಗದಲಿನ ಹೆಸರಾಂತ(?) ನಿರ್ದೇಶಕರೊಬ್ಬರು Social Networking sites ನಲ್ಲಿ ಡಬ್ಬಿಂಗ್ ನಮ್ಮ ಸಂಸ್ಕೃತಿಯನ್ನ ಹಾಲು ಮಾಡುತ್ತೆ, ಲೊಟ್ಟೆ, ಲೋಸಕು ಅಂತ ಬೊಬ್ಬೆ ಹೊಡೀತಿದ್ದಾರೆ. ಅಲ್ಲ ಸ್ವಾಮೀ ಈ ಮಹಾನ್ ನಿರ್ದೇಶಕರ ಚಿತ್ರ ಇತ್ತೀಚಿಗಷ್ಟೇ ಬಿಡುಗಡೆ ಆಯಿತು. ಪ್ರಶಸ್ತಿ ಬಂತು ಸರಿ ಒಪ್ಪೋಣ. ಆದ್ರೆ ಚಿತ್ರಮಂದಿರದಲಿ ಬರಿ ನೊಣ, ಸೊಳ್ಳೆಗಳು ಕಾರುಬಾರು ಮಾದಿತ್ತಿವೆ. ನಾನು ಸಹ ಈ ಚಿತ್ರವನ್ನ ನೋಡಿದೆ. ಬೆರಳೆಣಿಕೆಯಷ್ಟು ಜನರು ಸಹ ಇರಲಿಲ್ಲ. ಇವರು ಮಾಡೋ ಚಿತ್ರಗಳನ್ನ ಜನ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಒಟ್ಟಾರೆ ಜನಕ್ಕೆ ಬೇಕಾದಂತ ಚಿತ್ರಗಳನ್ನ ಇವರಿಗೆ ಕೊಡಲು ಯೋಗ್ಯತೆ ಇಲ್ಲ. ಬೇರೆ ಭಾಷೆಗಳಲ್ಲಿ ಜನ ಮೆಚ್ಚುಗೆ ಪಡೆದಿರುವ ಉತ್ತಮ ಚಿತ್ರಗಳನ್ನ ಕನ್ನಡಕ್ಕೆ ಡಬ್ ಮಾಡ್ತೀವಿ ಅಂದ್ರೆ ಅದಕ್ಕೂ ಸಹಿಸಲ್ಲಾ. ಎಂತ "Saddist" ಗಳು ಅಲ್ಲವೇ ಇವ್ರು.
    ಯಾರ್ ಏನೇ ಹೇಳಲಿ. ಪರಭಾಷೆ ಚಿತ್ರಗಳು ಕನ್ನಡಕ್ಕೆ ಡಬ್ಬ್ ಆಗಬೇಕು. ಕನ್ನಡಿಗರಿಗೆ ಉತ್ತಮ ಮನರಂಜನೆ ಸಿಗಬೇಕು. ಡಬ್ಬಿಂಗ್ ಚಿತ್ರಗಳು ಬಂದರೆ ಭಾಷೆಯ ಬೆಳವಣಿಗೆ ಕೂಡ ಸಾಧ್ಯ.

    ReplyDelete
  24. ಎಂತ ವಿಪರ್ಯಾಸ ಅಂದ್ರೆ, ಕನ್ನಡ ಪರ, ಸಂಸ್ಕೃತಿ, ಬಾಶೆ, ಕಲಾವಿದ ಹೀಗೆ ಅನೇಕ "ತೂಕದ" ಮಾತುಗಳನ್ನು ಆಡುವ ನಮ್ ಚಿತ್ರರಂಗ ಮತ್ತು ಅದರಿಂದ ಅನ್ನ ಹುಟ್ಟಿಸಿಕೊಳ್ಳುತ್ತಿರುವವರು,, ಅನ್ನದಾತನಾದ ಪ್ರೇಕ್ಶಕನನ್ನೇ "ಹಗುರಾಗಿ" ಸ್ವೀಕರಿಸಿದ್ದಾರೆ. ಚಿತ್ರಮಂದಿರಕ್ಕೆ ಹೋಗಿ ದುಡ್ಡು ಕೊಟ್ಟು ಇವರನ್ನು ಪ್ರೋತ್ಸಾಹಿಸಲು ಪ್ರೇಕ್ಶಕ ಬೇಕು ಆದರೆ ಚಿತ್ರರಂಗದ ನಿರ್ಣಯಗಳನ್ನು ಕೈಗೊಳ್ಳುವಾಗ ಅವನನ್ನು ಕ್ಯಾರೆ ಅನ್ನಲ್ಲ. ಇದು ಯಾವ ಸೀಮೆ ನ್ಯಾಯ.
    ಸರಿ ಸುಮಾರು ೨-೩ ವರುಶಗಳಿಂದ ಡಬ್ಬಿಂಗ್ ಮಾತು ಮತ್ತೆ ಕೇಳಿ ಬರ್ತಾ ಇವೆ. ಹೀಗಿದ್ದರೂ ಮಂಡಳಿ ಯಾವತ್ತಾದರೂ ಪ್ರೇಕ್ಷಕರನ್ನು, ಚಿತ್ರರಂಗದ ಹಿರಿಯರನ್ನು ಡಬ್ಬಿಂಗ್ ಪರ ಮತ್ತು ವಿರೋದಿಗಳನ್ನು ಎಲ್ಲರನ್ನೂ ಕರೆಸಿ ಕೂರಿಸಿ, ಅದರ ಸಾದಕ ಬಾದಕಗಳ ಬಗ್ಗೆ ಚರ್ಚಿಸುವ ಕೆಲಸ ಮಾಡಿದೇಯಾ.? ಊಹೂಂ,,
    ಇದರಿಂದ ಸ್ಪಷ್ಟವಾಗಿ ಗೊತಾಗೋದು ಏನಂದ್ರೆ ಇದು ಹೇಡಿತನ, ಜಾರಿಕೊಳ್ಳುವ ಯತ್ನ ಮತ್ತು ಪಲಾಯನವಾದ.
    ಚರ್ಚೆ ಮಾಡಲಿ ಯಾರ ವಾದದಲ್ಲಿ ಹುರುಳಿದೆ,, ಯಾವುದು ಕನ್ನಡ ಪರ ಎಂಬುದು ಸಾರ್ವಜನಿಕವಾಗೇ ನಿರ್ಣಯವಾಗಲಿ.

    ReplyDelete
  25. ವಿನಯ್,
    ಇಲ್ಲೊಂದು ಗಮನಿಸಬೆಕಾದ ವಿಷಯ, ಕನ್ನಡಿಗರು ಬೇರೆ ಭಾಷೆಯನ್ನು ಸಾರ ಸಗಟಾಗಿ ಮತನಾಡಲು/ಕಲಿಯಲು ಈ ಡಬ್ಬಿಂಗ್ ನಿರ್ಭಂದವೆ ಮುಖ್ಯ ಕಾರಣ, ಈ ಎಲ್ಲಾ ಚಿತ್ರಗಳು ಕನ್ನಡದಲ್ಲೆ ಸಂಭಾಷನೆ ಇದ್ದಿದ್ದರೆ ನಮಗಿಂತ ಪರಿಸ್ಥಿತಿ ಬರುತ್ತಿರಲಿಲ್ಲ.
    ಗಿರೀಶ್

    ReplyDelete
  26. ಡಬ್ಬಿಂಗ್ ಬೇಕು ಬೇಡ ಅನ್ನೊದನ್ನ ಪ್ರೇಕ್ಷಕ ನಿರ್ಧಾರ ಮಾಡ್ಬೇಕಿತ್ತು ಆದ್ರೆ ನೀವು ಹೇಳಿರೋ ಹಾಗೆ ಕನ್ನಡ ಚಿತ್ರರಂಗದವರು ಕನ್ನಡ ಪ್ರೇಕ್ಷಕರನ್ನು ಟೇಕನ್ ಫಾರ್ ಗ್ರಾಂಟೆಡ್ ಎನ್ನುವಂತೆಯೇ ನೋಡಿಕೊಂಡು ಬಂದಿದ್ದಾರೆ. ಏನೋ ದರ್ಮಕ್ಕೆ ಸಿನೆಮಾ ಮಾಡ್ತಿದ್ದಾರೆ ಅನ್ನೊ ತರ ಮಾತಾಡ್ತಾರೆ. ಇಶ್ಟಿದ್ದು, ಡಬ್ಬಿಂಗ್ ವಿರೋದಿಸೋರು ಬೇರೆ ಬಾಶೆ ಸಿನೆಮಾ ನೋಡಲ್ಲ ಅಂತೇನಿಲ್ಲ, ಅವರು ಬೇಕಾದ ಸಿನೆಮಾ ನೋಡ್ತಾರೆ. ಅದೆ ಒಬ್ಬ ಸಾಮಾನ್ಯ ಕನ್ನಡಿಗ ತನಗೆ ಇಶ್ಟ ಇಲ್ಲದಿರೋ ಸಿನೆಮಾನ ತನ್ನ ಬಾಶೆಲಿ ನೋಡೊಕ್ಕೆ ಬಿಡ್ತಿಲ್ಲ.

    ReplyDelete
  27. ಪ್ರಸ್ತುತ ಡಬ್ಬಿಂಗ್ ವಿವಾದವು ಕನ್ನಡಕ್ಕೆ ಮಾರಕವೋ ಪೂರಕವೋ ಎಂದು ಚರ್ಚಿಸುವ ಮೊದಲು ಕನ್ನಡ ಚಿತ್ರರಂಗದಿಂದ ಸಂಸ್ಕೃತಿಗೆ ಕೊಡುಗೆ ಇದೆಯೋ ಇಲ್ಲವೋ ಎಂದು ನೋಡಬೇಕಾಗುತ್ತದೆ. ಯಾವ ಕೋನದಿಂದ ಅಳೆದೂ ಸುರಿದು ನೋಡಿದರೂ ಸಂಸ್ಕೃತಿಯನ್ನು ಪ್ರತಿನಿಧಿಸುವ ಮಾತಿರಲಿ ಅವುಗಳ ಗಂಧಗಾಳಿಯೂ ತಿಳಿಯದಂತಹ ಚಿತ್ರಗಳು ಬರುವುದು ಹೆಚ್ಚು. ಚಿತ್ರರಂಗದ ಪ್ರಕಾರ ’ಮಚ್ಚು-ಲಾಂಗು’, ’ಹೆಣ್ಣಿನ ಹೊಕ್ಕಳು ಮೇಲೆ ಹಣ್ಣಿನಿಂದ ಹೊಡೆಯುವುದು’, ನಾಯಕಿ ನೀರೊಳಗೆ ಬಿದ್ದನಂತರ ಮೇಲೆದ್ದು ಎಲ್ಲೆಲ್ಲಿಂದಲೋ ಮೀನು ತೆಗೆಯುವುದು, ಡಬ್ಬಲ್ ತ್ರಿಬ್ಬಲ್ ಮೀನಿಂಗ್ ಉಳ್ಳ ಸಂಭಾಷಣೆಗಳು ಇತ್ಯಾದಿ. ಇತ್ಯಾದಿ....ಗಳೆಲ್ಲಾ ನಮ್ಮ ಸಂಸ್ಕೃತಿಯ ಪ್ರತೀಕವೇ!!!!! ಹಾಗೆಂದು ಒಳ್ಳೆಯ ಚಿತ್ರಗಳು ಇಲ್ಲವೆಂದಲ್ಲ, ವರ್ಷದಲ್ಲಿ ಬಿಡುಗಡೆಯಾಗುವ ೧೦೦ - ೧೫೦ ಚಿತ್ರಗಳಲ್ಲಿ ೩ ಅಥವಾ ನಾಲ್ಕು ಅಷ್ಟೆ!!!! ಅವುಗಳಲ್ಲಿ ಸಣ್ಣ ಸಣ್ಣ ಬ್ಯಾನರ್ರಿನ ಚಿತ್ರಗಳು ಜನರನ್ನು ತಲುಪುವುದೇ ಇಲ್ಲ (ಉದಾಃ ಒಲವೇ ಮಂದಾರ).
    ನಿಜಕ್ಕೂ ಒಂದು ಕಾಲವಿತ್ತು ನಮ್ಮ ಚಿತ್ರರಂಗ ಸಣ್ಣದಾಗಿತ್ತು, ವರ್ಷಕ್ಕೆ ಎರಡೋ ನಾಲ್ಕೋ ಚಿತ್ರಗಳು ಅದೂ ಮದ್ರಾಸಿನಲ್ಲಿ ತಯಾರಾಗುತ್ತಿದ್ದವು. ಅವುಗಳ ಗುಣಮಟ್ಟದ ಬಗ್ಗೆ ಎರಡು ಮಾತಿರಲಿಲ್ಲ. ಅಂದಿನ ಚಿತ್ರಗಳ ಬಹುತೇಕ ಸನ್ನಿವೇಶಗಳು, ಹಾಡುಗಳು, ಸಂಭಾಷಣೆಗಳು ಸಂಗೀತ ಎಲ್ಲವೂ ಆ ಚಿತ್ರದ ಕಥೆಗೆ ಪೂರಕವಾಗಿ ಮನೆ ಮಂದಿ ಆನಂದಿಸುವಂತಹ ಚಿತ್ರಗಳಾಗುತ್ತಿದ್ದವು. ಅಂದು ಡಬ್ ಮಾಡುತ್ತಿದ್ದಲ್ಲಿ ನಮ್ಮಲ್ಲಿನ ತಂತ್ರಜ್ಞರಿಗೆ ಕೆಲಸವಿಲ್ಲದಎ ಅತಂತ್ರರಾಗುತ್ತಿದ್ದರು, ಅದು ಅಂದು ಎಲ್ಲರೂ ಒಪ್ಪುವಮಾತಾಗಿತ್ತು. ಇಂದಿನ ಚಿತ್ರಗಳ ಗುಣಮಟ್ಟದ ಬಗ್ಗೆ ಮಾತನಾಡದಿರುವುದೇ ಲೇಸು!! ಇಂತಹ ಸಂಧರ್ಭದಲ್ಲಿ ಬೇರೇ ಭಾಷೆಯಲ್ಲಿ ತಯಾರಾಗುವ ಚಿತ್ರಗಳನ್ನು ಕನ್ನಡದಲ್ಲಿ ಡಬ್ ಮಾಡಿದರೆ ಆಗುವ ಅನಾಹುತವೇನು? ಇಂದು ಇಲ್ಲಿ ಕೆಲಸಮಾಡುವ ನಮ್ಮ ಕನ್ನಡ ತಂತ್ರಜ್ಞರನ್ನು ಕಡೆಗಣಿಸಿ ಪ್ರತೀ ಚಿತ್ರಕ್ಕೂ ಲೈಟ್ ಬಾಯ್ ಗಳಿಂದ ಹಿಡಿದು ’ಆಕ್ಷನ್ -ಕಟ್’ ಹೇಳುವ ನಿರ್ದೇಶಕನವರೆಗೆ ಪರಭಾಷೆಯವರಿಗೇ ಮಣೆ ಹಾಕುವುದಿಲ್ಲವೇ? ಕನ್ನಡವೇ ಗೊತ್ತಿಲ್ಲದ ಸಂಭಾಷಣೆಕಾರರಿಂದ ಸಂಭಾಷಣೆ ಬರೆಸಿ ಚಿತ್ರ ನಿರ್ಮಿಸುವ ಕನ್ನಡಿಗ ನಿರ್ಮಾಪಕರಿಲ್ಲವೇ? ಕನ್ನಡದಲ್ಲಿ ನಾಯಕಿ ನಟಿಯರಿಲ್ಲವೆಂದು (ನಿಜ ಅರ್ಥದಲ್ಲಿ ಸರಿಯಾದ ಬಿಚ್ಚಮ್ಮ ನಟಿಯರಿಲ್ಲವೆಂದು) ಮೂಗು ಮೂತಿ ನೆಟ್ಟಗಿರದ ಅದೆಷ್ಟು ಪರಭಾಷಾ ನಟೀಮಣಿಯರಿಗೆ ಕೇಳಿದಷ್ಟು ಕಾಸು ಕೊಟ್ಟು ಮನೆ ಮಠ ಕಳೆದುಕೊಂಡು ’ಕೃತಾರ್ಥರಾದ’ ಅದೆಷ್ಟು ನಿರ್ಮಾಪಕ ನಿರ್ದೇಶಕರಿಲ್ಲ? ಪ್ರತಿಭೆಗಳನ್ನು ಸರಿಯಾಗಿ ಬಳಸಿಕೊಳ್ಳದೆ, ಅವಕಾಶ ನೀಡದೆ ಸತಾಯಿಸಿ, ಅವರು ಪಕ್ಕದ ಚಿತ್ರರಂಗದಲ್ಲಿ ಮಿಂಚತೊಡಗಿದಾಗ ’ಇವರು ನಮ್ಮವರು, ನಾನೇ ಅವರಿಗೆ ಅವಕಾಶ ಕೊಟ್ಟು ಮೇಲೆ ತಂದೆ’ ಎಂಬಿತ್ಯಾದಿ ಹೇಳಿಕೆಗಳನ್ನು ತೋರಿಕೆಗೆ ಕೊಟ್ಟು, ನಂತರ ಮನದಲ್ಲೇ ಮಂಡಿಗೆ ತಿನ್ನುವ ಭೂಪರೂ ನಮ್ಮ ಚಿತ್ರರಂಗದಲ್ಲಿದ್ದಾರೆ.
    ಅದು ಹೋಗಲಿ ಬಿಡಿ. ದುಡ್ಡು ಮಾಡಬೇಕೆಂಬ ಏಕಮಾತ್ರ ಹಂಬಲದಿಂದ ಪರಭಾಷೆಯ ಚಿತ್ರಗಳನ್ನು ’ರೀಮೇಕ್’ ಮಾಡುವುವುದರಿಂದ ನಮ್ಮ ಸಂಸ್ಕೃತಿ ಅದು ಹೇಗೆ ಉದ್ಧಾರವಾಗುತ್ತದೋ? ಆ ದೇವರೇ ಬಲ್ಲ. ಮೂಲ ಚಿತ್ರದಲ್ಲಿದ್ದ ಅದೆಷ್ಟೋ ಅಸಂಬದ್ಧ ದೃಷ್ಯಗಳು, ಅಭಾಸಭರಿತ ಸಂಭಾಷಣೆಗಳು ಅದೇ ರೀತಿ ತರ್ಜುಮೆಗೊಂಡಿರುತ್ತವೆ. ಜೊತೆಗೆ ರೀಮೇಕ್ ಮಾಡುವವರು ಆ ಚಿತ್ರ ಯಾವಕಾರಣಗಳಿಂದಾಗಿ ಗೆದ್ದಿದೆ ಎಂಬ ವಿಶ್ಲೇಷಣೆ ಮಾಡುವುದೇ ಇಲ್ಲ. ಅದಕ್ಕಿಂತಲೂ ಮುಂಚೆಯೇ ಆ ಚಿತ್ರವನ್ನು ಅದೇ ಭಾಷೆಯಲ್ಲಿಯೇ ನಮ್ಮ ಕನ್ನಡ ಪ್ರೇಕ್ಷಕ ನೋಡಿರುತ್ತಾನೆ. ಅದರದೇ ರೀಮೇಕ್ ಬಂದಾಗ ಸಹಜವಾಗಿ ಥಿಯೇಟರೆಡೆಗೆ ಯಾಕಾದರೂ ಹೋಗುತ್ತಾನೆ? ಕನ್ನಡಚಿತ್ರಗಳನ್ನು ನೋಡಲು ಥಿಯೇಟರಿಗೆ ಜನ ಬರುತ್ತಿಲ್ಲ, ಪ್ರದರ್ಶನಶುಲ್ಕ ಹೆಚ್ಚಾಯ್ತು, ಪೈರಸಿ ಸಿ.ಡಿ. ಹಾವಳಿ ಎಂಬಿತ್ಯಾದಿ ಅಸಂಬದ್ಧ ಹೇಳಿಕೆಗಳು ಬೇರೆ. ಅಸಲಿಗೆ ಇಂದು ಮಾರುಕಟ್ಟೆಯಲ್ಲಿ ಸಿಗುವ ಪೈರಸಿ ಸಿ.ಡಿ ಗಳಲ್ಲಿ ಮೂರೋ ನಾಲ್ಕೋ ಹೊಸ ಕನ್ನಡ ಚಿತ್ರಗಳ ಸಿ.ಡಿ ದೊರಕಿಯಾವು, ಅದೂ ವರ್ಷ- ಎರಡು ವರ್ಷದ ಹಿಂದೆ ಬಿಡುಗಡೆಯಾದ ಸಿನಿಮಾಗಳವು. ಅದೇ ನಿನ್ನೆಯೋ ಮೊನ್ನೆಯೋ ಬಿಡುಗಡೆಯಾದ ಹಿಂದಿ ತಮಿಳು ತೆಲುಗು ಚಿತ್ರಗಳ ಸಿ.ಡಿ ಯಾವುದು ಬೇಕು ಎಷ್ಟು ಬೇಕು ಸಿಗುತ್ತವೆ. ನಮ್ಮ ಸಿನಿಮಾ ಮಂದಿ ಅಗ್ಗದ ಪ್ರಚಾರಕ್ಕೊಸ್ಕರ ಮಧ್ಯೆ ಮಧ್ಯೆ ಬೀದಿ ಬದಿಯ ಸಿ.ಡಿ ಗಾಡಿಗಳ ಮೇಲೆ ದಾಳಿ ಮಾಡಿದಾಗಲೂ ಸಹ ಪರಭಾಷೆಯ ಸಿ.ಡಿಗಳಷ್ಟೇ ದೊರಕಿದ್ದು!!! ಏಕೆಂದರೆ ಜನಗಳಿಗೂ ಗೊತ್ತು ನಮ್ಮ ಸಿನಿಮಾಗಳ ಗುಣಮಟ್ಟ ಏನೂಂತ!! ಅಂದ ಮಾತ್ರಕ್ಕೆ ಪರಭಾಷೆಯ ಚಿತ್ರಗಳು ಸಕ್ಕತ್ತಾಗಿವೆ ಎಂದಲ್ಲ. ಅವರ ಚಿತ್ರಗಳಿಗೆ ಕೊಡುವ ಪ್ರಚಾರದ ವೈಖರಿ, ಅದಕ್ಕೆ ಬಳಸುವ ಪ್ರೋಮೋ ಗಳು ಆ ಚಿತ್ರದ ಬಗ್ಗೆ ಕುತೂಹಲ ಕಾಯ್ದುಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಅಲ್ಲದೆ ಅವರ ಚಿತ್ರಗಳಲ್ಲಿ ಅವರು ಬಳಸುವ ತಂತ್ರಜ್ಞಾನ ಆ ಸಿನಿಮಾಗಳನ್ನು ನೋಡಲು ಭಾಷೆ ತಿಳಿಯದವರಿಗೂ ಪ್ರೇರೇಪಿಸುತ್ತದೆ. ಹೊಸ ಹೊಸ ತಂತ್ರಜ್ಞಾನಗಳಾದ ಡಿ.ಟಿ.ಎಸ್, ಡಿಜಿಟಲ್ ಎಫೆಕ್ಟ್, ಗ್ರಾಫಿಕ್ಸ್ ಮುಂತಾದವುಗಳನ್ನು ಪರಿಣಾಮಕಾರಿಯಾಗಿ ಮತ್ತು ಚಿತ್ರಕ್ಕೆ ಪೂರಕವಾಗಿ ಬಳಸಿರುತ್ತಾರೆ. ವಿಚಿತ್ರವೆಂದರೆ ’ಐ.ಟಿ ಸಿಟಿ’ ಬಿರುದಾಂಕಿತ ಬೆಂಗಳೂರಿನ ತಂತ್ರಜ್ಞರೇ ಅವೆಲ್ಲವನ್ನೂ ಚನ್ನೈ ಅಥವಾ ಹೈದರಾಬಾದ್ ನಲ್ಲಿ ಮಾಡಿರುತ್ತಾರೆ. ಇಂತಹ ಮುಂದುವರಿದ ಯುಗದಲ್ಲಿ ನಮ್ಮ ಕನ್ನಡ ಚಿತ್ರಗಳ ಗ್ರಾಫಿಕ್ಸ್ ಇನ್ನೂ ಹಾವು ಹಾಡಿಸುವುದಕ್ಕೋ, ಕಲ್ಲು ಬಸವನ ಕತ್ತು ಕುಣಿಸಲಿಕ್ಕೋ ಆನೆಗೆ ಕನ್ನಡಕ ಹಾಕಿಸುವದಕ್ಕಷ್ಟೇ ಸಿಮಿತವಾಗಿರುವುದು ದುರಂತವಲ್ಲದೆ ಮತ್ತೇನೂ ಅಲ್ಲ. ( ಈ ಮಾತು ಉಪೇಂದ್ರರ ’ ಸೂಪರ್’ಚಿತ್ರಕ್ಕೆ ಅನ್ವಯಿಸುದಿಲ್ಲ) ಜೊತೆಗೆ ಕನ್ನಡಿಗ ಪ್ರೇಕ್ಷಕನ ಕೆಟ್ಟ ಗ್ರಹಚಾರವಲ್ಲದೆ ಮತ್ತೇನು ಅಲ್ಲ. ಇವರ ಕೈ ಯಲ್ಲಿ ಅಂತಹ ಚಿತ್ರಗಳನ್ನು ತೆಗೆಯಲು ಆಗದಿದ್ದಲ್ಲಿ "ಡಬ್ಬಿಂಗ್" ಮಾಡುವುದರಲ್ಲಿ ತಪ್ಪೇನು? ಅದರಿಂದಾಗಿ ಸ್ಪರ್ಧಾತ್ಮಕತೆ ಹೆಚ್ಚುವುದಲ್ಲದೆ ಕನ್ನಡಿಗರೆ ಒಳ್ಳೆಯ ಚಿತ್ರಗಳು ಹೆಚ್ಚಾಗುತ್ತವೆ.

    ReplyDelete
  28. ಡಬ್ಬಿಂಗ್ ಬೇಡ!

    ReplyDelete
  29. kannadakke dabbing beke beku...

    ReplyDelete
  30. ಇಲ್ಲಿ ಕೆಲವರು ಅವತಾರ್, ಟೈಟಾನಿಕ್ ನಂತಹ ಚಿತ್ರಗಳನ್ನು ಉದಾಹರಿಸಿ, ಇದನ್ನು ಕನ್ನಡದಲ್ಲೇ ನೋಡುವ ಅವಕಾಶ ಕನ್ನಡ ಪ್ರೇಕ್ಷನಿಗೆ ಸಿಗುತ್ತದೆ ಎಂದು ವಾದ ಮಂಡಿಸಿದ್ದಾರೆ. ಲೇಖನ ಬ್ರೈನ್ ವಾಷ್ ಮಾಡುವಂತಿದೆ. ಇಂಗ್ಲಿಷ್ ಚಿತ್ರಗಳು ಕನ್ನಡಕ್ಕೆ ಡಬ್ ಆದರೆ ಸರಿ. ಆದರೆ ಇತರೆ ಭಾರತೀಯ ಚಿತ್ರಗಳೂ ಡಬ್ ಆದರೆ ಹೇಗೆ? ಅದರಲ್ಲೂ ತಮಿಳು, ತೆಲುಗು, ಹಿಂದಿ ಚಿತ್ರಗಳು ಡಬ್ ಆದರೆ ಕನ್ನಡ ಚಿತ್ರಗಳು ನೆಲಕಚ್ಚುವುದು ನಿಜವೇ. ಬಹುಷಃ ಇಲ್ಲಿ ಕೆಲವರಿಗೆ ತಿಳಿದಿಲ್ಲ ಎನ್ನಿಸುತ್ತದೆ. 1960 ರ ದಶಕದಲ್ಲಿ ಡಾ. ರಾಜ್ ಕುಮಾರ್ ಅವರ ನಾಯಕತ್ವದಲ್ಲಿ ಕನಾ೯ಟಕದಲ್ಲಾಗುತ್ತಿದ್ದ ಡಬ್ಬಿಂಗ್ ನ್ನು ನಿಲ್ಲಿಸಿದ್ದು ಕನ್ನಡಕ್ಕಾದ ಲಾಭ ಎಂದು ತಿಳಿದಿಲ್ಲವೆ. ಅಂದಿನಿಂದ ಇಂದಿನವರೆಗೆ ಲಕ್ಷಾಂತರ ಕನ್ನಡಿಗ ಕಲಾವಿದರು, ತಂತ್ರಜ್ಞರು ತಲೆಎತ್ತುವಂತಾಯಿತು. ಕನ್ನಡ ನಿಮಾ೯ಪಕರು ಬೆಳೆದರು. ಬರಿ ಕನ್ನಡ ಭಾಷೆಯಲ್ಲಿ ಇತರ ನಾಡಿನ ಸಿನಿಮಾಗಳನ್ನು ನೋಡಿ, ಕನ್ನಡೇತರ ಚಿತ್ರ ನಿಮಾ೯ಪಕರ ಹೊಟ್ಟೆ ತುಂಬಿಸುವ ಕೆಲಸಕ್ಕೆ ಈ ಬ್ಲಾಗ್ ಮಣೆ ಹಾಕಿಕೊಡುವುದು ಬೇಡ.

    ಕನ್ನಡ ಕಲಾವಿದರು ಎಂದರೆ ಕೇವಲ ಡಬ್ಬಿಂಗ್ ಕಲಾವಿದರಲ್ಲ. ನಟರಿದ್ದಾರೆ, ನಿದೇ೯ಶಕರಿದ್ದಾರೆ. ಅವರೆಲ್ಲರೂ ಮಣ್ಣು ತಿನ್ನಲಿ ಎಂಬುದು ಬಹುಷಃ ನಿಮ್ಮ ಉದ್ದೇಶ ಇದ್ದೀತೆ? ಉತ್ತರಿಸಿ. ಕನ್ನಡದ ಹಿರಿಯ ನಟರು ಕನಾ೯ಟಕದಲ್ಲಿ ರಚಿಸಿರುವ ಈ ವಿಶೇಷ ಕಾನೂನನ್ನು ಬದಲಿಸಿ ಕನ್ನಡಕ್ಕೆ, ಕನಾ೯ಟಕಕ್ಕೆ, ಕನ್ನಡಿಗರಿಗೆ ದಯವಿಟ್ಟು ದ್ರೋಹ ಮಾಡಿ, ದ್ರೋಹಿಗಳಾಗಬೇಡಿ...

    ReplyDelete
  31. Dubbing ಸಿನಿಮಾ ನೋಡಕೆ ಇಷ್ಟ ಇಲ್ಲದಇರೋರು ನೋಡಬೇಡಿ.. Dubbing ಆಗಿರೋ ಸಿನಿಮಾ ನೋಡೋ ಜನ ಇದಾರೆ.. ಅವರು ನೋಡ್ತಾರೆ .. ನಿಮಗೆ ಏನು ಕಷ್ಟ ?

    ReplyDelete
  32. ಮೊದಲನೆಯದಾಗಿ ಸಿನಿಮಾ ಅನ್ನುವುದು ಕೂಡ ಒಂದು ಕಲೆ , ಸಿನಿಮಾ ನೋಡುವದು ಒಂದು ಮನರಂಜನೆ , ಒಂದು ಹವ್ವ್ಯಾಸ ಎನ್ನುವ ಮೈಂಡ್ ಸೆಟ್ ಜನರಲ್ಲಿ ತರಬೇಕಾಗಿದೆ.. ಯಾಕೆ ಅಂದ್ರೆ ಬೇರೆ ರಾಜ್ಯಗಳ ಜನ್ರು.. ಇದೆ ರೀತಿ ಇರೋದು ಅದಕ್ಕೆನೇ ಅಲ್ಲಿ ಸಿನಿಮಾ ಉದ್ಯಮ ಚೆನ್ನಾಗಿದೆ... ಟೈಟ್ಯಾನಿಕ್, ಜುರಸಿಕ್ ಪಾರ್ಕ್ ಅಂತ ಚಿತ್ರಗಳು.. ಕನ್ನಡದಲ್ಲಿ ಬಂದ್ರೆ ಈ ಮೈಂಡ್ ಸೆಟ್ ತರೋಕ್ಕೆ ಸಹಾಯವಾಗಬಹುದು... ಇದರಿಂದ ಚಿತ್ರರಂಗಕ್ಕೆ ಮೊದಲು ಸ್ವಲ್ಪ ಕಷ್ಟಗಳು ಬರಬಹ್ದು, ಆದ್ರೆ , ಲಾಂಗ್ ರನ್ನ್ನಲಿ.. ಇದು ಫಲ ನಿಡ್ದುತ್ತೆ...

    ಆದ್ರೆ - ಬೇರೆ ಚಿತ್ರದ ಕಥೆ ನಾ ಕನ್ನಡದಲ್ಲಿ ರೀಮೇಕ್ ಮಾಡೋದು , ಸರಿಯಲ್ಲ ಅನ್ಸುತ್ತೆ.. ಅದು ಯಾವ ಮಟ್ಟದಲ್ಲಿ ಇದೆ ಅಂದ್ರೆ , ಹೀರೊ ಆ ಪಿಕ್ಚರ್ ನಲ್ಲಿ
    ಯಾವ ಕೈಇಂದ ಮೂಗು ತುರಿಸುತ್ತನೊ , ರೀಮೇಕ್ ಪಿಕ್ಚರ್ಲ್ಲೂ ಅದನ್ನೇ ಮಾಡಿಸ್ತಾರೆ ( ಕ್ಸ್‌ಮಿಸಿ, ಸ್ವಲ್ಪ ಕಟು ಟೀಕೆ)

    ReplyDelete
  33. ಮಹನೀಯರೇ, ಕನ್ನಡದ "ಜಾಕಿ" ಸೇರಿದಂತೆ ಹಲವಾರು ಚಿತ್ರಗಳು ಬೇರೆ ಭಾಷೆಗೆ ಡಬ್ ಆದಾಗ ನಾವು ಕನ್ನಡಿಗರು ಕನ್ನಡ ಚಿತ್ರವೊಂದು ಡಬ್ ಆದದ್ದಕ್ಕೆ ಸಂತಸ ಪಟ್ಟೆವು. ಕನ್ನಡ ಚಿತ್ರರಂಗದ ಮಂದಿಯೂ ಬೀಗಿದರು. ಆದರೆ ಬೇರೆ ಭಾಷೆಯ ಚಿತ್ರವೊಂದು ಕನ್ನಡಕ್ಕೆ ಡಬ್ ಆದರೆ ಅದೇ ಕಣ್ಣುಗಳು ಕೆಂಪಾಗುವುದು ಏಕೆ? ಇತರ ಭಾಷೆಯ ಯಶಸ್ವಿ ಚಿತ್ರಗಳನ್ನು ಡಬ್ ಮಾಡಿದರೆ ತಪ್ಪೇನೂ ಆಗುವುದಿಲ್ಲ. ನೀವು ಡಬ್ ಮಾಡದಿದ್ದರೆ ಜನ ಆ ಭಾಷೆಯ ಚಿತ್ರವನ್ನೇ ನೋಡುತ್ತಾರೆ. ಅಲ್ಲಿಯವರೆ ಲಾಭ ಗಳಿಸುತ್ತಾರೆ. ಅದರ ಬದಲು ಕನ್ನಡದ ನಿರ್ಮಾಪಕನೊಬ್ಬ ಲಾಭ ಗಳಿಸಲಿ ಬಿಡಿ. ಡಬ್ಬಿಂಗ್ ಚಿತ್ರಗಳು ಬಂದ ಮಾತ್ರಕ್ಕೆ ಪ್ರೇಕ್ಷಕ ಕನ್ನಡದ ಸ್ವಂತ ಚಿತ್ರಗಳನ್ನು ನೋಡುವುದಿಲ್ಲ ಎಂದು ಭಾವಿಸುವುದು ತಪ್ಪು. ನಾಲ್ಕು ತೆಲುಗು, ಮೂರು ತಮಿಳು ಚಿತ್ರಗಳ ಕಥೆಯನ್ನು ಕಲಸು ಮೇಲೋಗರ ಮಾಡಿ ಸ್ವಂತ ಕಥೆ ಎಂದು ಬಿಂಬಿಸುವ ಹಲವು ಕನ್ನಡ ಚಿತ್ರಗಳನ್ನು ನಾವು ಕಾಣಬಹುದು. ಇವುಗಳು ನಮ್ಮ ಸಂಸ್ಕೃತಿಗೆ ಮಾರಕ ಅಲ್ಲವೇ!!??

    ReplyDelete
  34. sorry to say, that director B suresh has double standards on Dubbing movies. He says, "because of dubbing, Tamil film industry has been forced to make movies on the scripts based on local culture and nativity." and at the same time he says, "NO" for dubbing, in kannada film industry. Does not he want that kannada film industry also should move in that direction of searching nativity? what does he mean, "only award winning directors should make movies on nativity?"
    -Vandana Ithal

    ReplyDelete
  35. ಡಬ್ಬಿಂಗ್ ಸಿನೆಮ ಇರಲಿ; ಡಬ್ಬ ಸಿನೆಮ ಖಂಡಿತ ಬೇಡ

    ReplyDelete
  36. ಕನ್ನಡ ಪ್ರೇಕ್ಷಕರಿಗೆ ತಿಳುವಳಿಕೆ ಇಲ್ವ?
    http://arunaraaga.blogspot.com/2011/06/blog-post.html

    ReplyDelete
  37. ನಾನು ಒಬ್ಬ ಅಪ್ಪಟ ಕನ್ನಡ ಅಭಿಮಾನಿ. ಆದರೆ ಈ ದಿನಗಳ ಕನ್ನಡದ ಚಲನ ಚಿತ್ರ ನೋಡಲು ಒಂತರಾ ಹೇಸಿಗೆ. ತಲೆ ಬುಡ ಇಲ್ಲದ ಕಥೆ, ಕೇಳಲು ಅಸಹ್ಯವಾದ ಹಾಡುಗಳು. ಸ್ವಂತತನ ಇಲ್ಲದ ಚಿತ್ರಗಳು ಕನ್ನಡಕ್ಕೆ ಯಾಕ್ರೀ? ನಾನಂತು ಕನ್ನಡ ಚಿತ್ರ ನೋಡೋದನ್ನೇ ನಿಲ್ಲಿಸಿಬಿಟ್ಟಿದೇನೆ. ಒಳ್ಳೆಯ ಕನ್ನಡ ಚಿತ್ರಗಳು ಮರುಭೂಮಿಯಲ್ಲಿ ಸಿಗುವ ಒಂದು ಹನಿ ನಿರಿದಂಗೆ! ಬಹಳ ಕಾಯಬೇಕ್ರಿ! ಒಂದುವೇಳೆ ಸ್ವಂತ ಕಥೆ ಇಲ್ಲ ಅಂದ್ರೆ, ಸ್ವಲ್ಪ ದಿನ ಕನ್ನಡ ಚಿತ್ರರಂಗ ರಜೆ ತೊಗೋರೀ. ಆದರೆ ದಯವಿಟ್ಟು ಕನ್ನಡಿಗರು ಹೆಮ್ಮೆ ಪಡುವಂತ ಚಿತ್ರ ತೇಗಿರೀ. HERE, I REQUEST KFI. IF YOU DON'T HAVE GOOD *ORIGINAL* STORIES, FOR GOD'S SAKE, PLEASE DO STOP MAKING MOVIES. TAKE A BREAK, KFI.

    ReplyDelete
  38. ನಾವು ಜಾಹೀರಾತುಗಳಲ್ಲಿ ಗಮನಿಸಿರುವಂತೆ ಹಿಂದಿಯಿಂದ ಡಬ್ ಮಾಡಿದ ಸಂಭಾಷಣೆಗಳು ನಮ್ಮ ಕನ್ನಡದ ಭಾಷೆಯ ಮಾಧುರ್ಯವನ್ನು ಅಳಿಸಿ ಹಾಕಿದ ಹಾಗೆ ಡಬ್ ಮಾಡಿದ ಸಿನಿಮಾಕ್ಕೂ ಅದೇ ಗತಿ ಬರುತ್ತದೆ.
    ಈಗೀಗ ಬಹಳಷ್ಟು ಸಿನಿಮಾಗಳು ನೋಡಲು ಲಾಯಖ್ಖಿಲ್ಲದಿದ್ದರೂ ನಮ್ಮಲ್ಲಿ ಯೋಗರಾಜ ಭಟ್, ಉಪೇಂದ್ರ, ಯಸ್ ನಾರಾಯಣ, ಫಣಿ ರಾಮಚಂದ್ರ, ಬಾಬುರಂಥ ನಿರ್ದೇಶಕರು (ಓಡುವ ಕುದುರೆಗಳು ) ಇನ್ನೂ ಇದ್ದಾರೆ. ಅವರ ಬಾಲವನ್ನೇ ತಿರುವಿ ಕನ್ನಡದ ತೇರನ್ನು ಮುಂದೆ ನಡೆಸೋಣ. ನಮ್ಮ ಈಗಿನ ನಟ ನಟಿಯಯರ ಕಿವಿ ಹಿಂಡಿ ರಾಜಕುಮಾರ, ಬಾಲಕೃಷ್ಣ, ಅಶ್ವಥ್ , ಭಾರತಿಯವರ ಸ್ಪಷ್ಟ ಸುಮಧುರ ಕನ್ನಡ ಸಂಭಾಷಣೆಗಳನ್ನು ಹೇಳಿಸೋಣ. ನಮ್ಮ ಮನೆ ಅಡುಗೆ ಸರಿಯಾಗಿ ಆಗುತ್ತಿಲ್ಲವಾದರೆ ಅದಕ್ಕೆ ಸರಿಯಾಗಿ ಉಪ್ಪು ಕಾರ ಮಸಾಲೆ ಹಾಕಿ ರುಚಿಯಾಗಿ ಮಾಡಿಕೊಂಡು ಉಣ್ಣೋಣ. ಪರಭಾಷೆಯ ಪಿಜ್ಜಾ ಹಾಗೂ ಬರ್ಗರ್ ಗಳನ್ನು ಪಾರ್ಸಲ್ ತರಿಸಿ ತಿನ್ನುವದು ಬೇಡ. ದಯವಿಟ್ಟು ಡಬ್ಬಿಂಗ್ ಚಿತ್ರಗಳ ತಂಗಳನ್ನವನ್ನು ನಮ್ಮ ಮಕ್ಕಳಿಗೆ ಉಣ್ಣಿಸುವದು ಬೇಡ

    ReplyDelete
  39. ಕನ್ನಡದಲ್ಲಿ ಡಬ್ಬಿಂಗ್ ಇಲ್ಲದ್ದರಿಂದ ನನಗೆ ಒಂದು ಉಪಯೋಗವಂತೂ ಆಗಿದೆ. ನನಗೆ ಒಳ್ಳೆಯ ಚಿತ್ರಗಳು ಅದಾವುದೇ ಭಾಷೆಯಲ್ಲಿರಲಿ ಸಿಕ್ಕರೆ ನೋಡದೇ ಬಿಡುವುದಿಲ್ಲ. ಕನ್ನಡವಂತೂ ನನ್ನ ಮಾತೃಭಾಷೆ. ಮೊದಲಿಂದಲೂ ಅದರ ಬಗ್ಗೆ ಕಲಿತದ್ದು, ಕಲಿಯುತ್ತಿರುವುದು ಬೇಕಾದಷ್ಟಾಯಿತು. ಆದರೆ ನನಗೆ ಬೇರೆ ಭಾಷೆಗಳನ್ನು ಕಲಿಯುವ, ಅರ್ಥ ಮಾಡಿಕೊಳ್ಳುವ ಅವಕಾಶ ಸಿಕ್ಕಿದ್ದು ಮಾತ್ರ ಪರಭಾಷೆಯ ಚಿತ್ರಗಳನ್ನು ನೋಡಲು ಶುರು ಮಾಡಿದ ಮೇಲೆಯೆ. ಜೊತೆಗೆ ಆಯಾ ಪ್ರದೇಶಗಳ ಸಂಸ್ಕೃತಿಯನ್ನು ಅದರ ಭಾಷೆಯ ಸಿನೆಮಾಗಳ ಜೊತೆ ಅರಿಯುವಾಗ ಸಿಗುವ ತೃಪ್ತಿ ಡಬ್ ಮಾಡಿದ ಸಿನೆಮಾಗಳಿಂದ ದೊರೆಯಲು ಸಾಧ್ಯ ಇಲ್ಲ ಎನ್ನುವುದು ನನಗೆ ಮನವರಿಕೆಯಾಗಿದೆ.
    ಮೂಲಭಾಷೆಯ ಚಿತ್ರ ನೋಡುವುದರಿಂದ ರೀಮೇಕ್ ಚಿತ್ರಗಳನ್ನು ನೋಡುವ ಅವಶ್ಯಕತೆಯೂ ಇಲ್ಲವಾಗಿದೆ. ಉದಾಹರಣೆಗೆ ಸಿಂಗಮ್ ಮತ್ತು ನಾಡೋಡಿಗಳ್ ಚಿತ್ರಗಳನ್ನು ನೋಡಿದ್ದ ನಾನು ಕೆಂಪೇಗೌಡ ಮತ್ತು ಹುಡುಗರು ಚಿತ್ರಗಳನ್ನು ನೋಡಲಿಲ್ಲ, ಅದಕ್ಕೆ ಕಾರಣ ಬೇರೆ ಭಾಷೆಯ ಚಿತ್ರಗಳನ್ನು ರಿಮೇಕ್ ಮಾಡುವಾಗ ಮೂಲಚಿತ್ರದ ಆಶಯಕ್ಕೆ ವಿರುಧ್ಧವಾಗಿ ಅದನ್ನು ೫೦ ಪ್ರತಿಶತಕ್ಕೂ ಹೆಚ್ಚು ಭಾಗ ಹಾಳುಮಾಡಿಯೇ ಕನ್ನಡಕ್ಕೆ ತಂದಿರುತ್ತಾರೆ ಎಂಬ ಮನೋಭಾವ ನನ್ನಲ್ಲಿ ಆಳವಾಗಿ ಬೇರುಬಿಟ್ಟಿದೆ. ಡಬ್ಬಿಂಗ್’ಗೆ ಅವಕಾಶ ಕೊಟ್ಟರೆ ರಿಮೇಕ್ ಮತ್ತು ರೀಮಿಕ್ಸ್ (ಕಲಸುಮೇಲೋಗರ) ಗಳನ್ನೇ ನಂಬಿಕೊಂಡಿರುವ ಬಹುಸಂಖ್ಯಾತ ಕನ್ನಡ ನಿರ್ದೇಶಕರುಗಳು ತಮಗೆ ಕೆಲಸವೇ ಇಲ್ಲವಾಗುತ್ತದೆ ಎಂಬ ಹೆದರಿಕೆಯಿಂದ ಡಬ್ಬಿಂಗ್ ವಿರೋಧಿಸುತ್ತಿರಬಹುದು. ಆದರೆ ಅವರ ಹೆದರಿಕೆಯನ್ನು ಜನರ ಮೇಲೆ ಹೇರುವುದು ಸರ್ವಥಾ ಸರಿಯಲ್ಲ.

    ReplyDelete
  40. Nuthan : Dabbing allow madidare ,kannadada kelavu aprabudha director and producersgalu galige kelasavilladanthugutte thn avara ketta chitragalannu vidhiellade noduvudu thappisabahudu,,kannadaddalli olle chitragalu baralu ondu competative platform siguttade..Please allow dubbing.

    ReplyDelete
  41. ಸ್ನೆಹಿತರೆ ಬೇರೆ ಭಾಷೆಯ ಹಿರೊಗಳು ಇಲ್ಲಿ ಮನ್ನಣೆ ಪಡೆಯೊಲ್ಲ, ಅವರು ಎಷ್ಟೆ ದೊಡ್ಡವರಾದರು ಅವರಿಗೆ ಕನ್ನಡದಲ್ಲಿ ಮಾತನಾಡಲು ಬರದಿದ್ದರೆ ಕನ್ನಡಿಗರು ಕಂಡಿತ ಅಂತವರನ್ನು ಬೆಳೆಸುವುದಿಲ್ಲ. ರಜನಿ ಸಾರ್ ಅಷ್ಟರಮಟ್ಟಿಗೆ ಕನ್ನಡಿಗರಿಗೆ ಹತ್ತಿರವಾಗಿರುವುದು ಅವರು ಕನ್ನಡ ಮಾತನಾಡುವುದರಿಂದ. ಒಂದು ವೇಳೆ ಬೇರೆ ಭಾಷೆ ನಾಯಕ ಬೆಳೆಯಬೆಕಾದರೆ ಅವರು ಕನ್ನಡದಲ್ಲಿ ವ್ಯವಹರಿಸಲೆಬೇಕು. ಇದರಿಂದ ನಮಗೆ ಅಲ್ಲವೆ ಲಾಭ!!!

    ReplyDelete