Thursday, April 28, 2011

ಮೌಢ್ಯವನ್ನು ಗೆಲ್ಲಲು ಸತ್ಯದ ಮಾರ್ಗವೇ ಅನಿವಾರ್ಯವಲ್ಲವೇ?

ಎಲ್ಲರೂ ನಿಮ್ಮಂತೆಯೇ ಯೋಚಿಸಿದರೆ ಪ್ರಪಂಚ ಹೇಗಿರಬಹುದು ಹೇಳಿ ಗುರುಗಳೇ? ಬುದ್ಧ, ಭಗವಾನ್ ಅಲ್ಲ ಅನಿಸಿಬಿಟ್ಟರೆ, ಜನರು ನಂಬಿಕೆಗಳನ್ನು (ಮೂಢವೋ, ಅಲ್ಲವೋ) ಬಿಟ್ಟರೆ, ನಿಮ್ಮಂತೆಯೇ ಯೋಚಿಸಿದರೆ how boring? ಅಲ್ವಾ? ನಮ್ಮ ಬದುಕು ಬಹಳ ಹಸನಾಗಿದೆ ಸ್ವಾಮೀ.. ದಿನದ್ದೋ, ತಿಂಗಳಿದ್ದೋ ಖರ್ಚಿಗೆ ಹಣ ಸಿಗುತ್ತದೆ ಬದುಕು ಆರಾಮಾಗಿದೆ. ಎಷ್ಟೋ ಜನ ಬದುಕು ಬೇಡದೆ ಹೋದವರುಂಟು.. ಬಾಬಾರ ಒಂದು ನಗು, ಒಂದು ನೋಟ ಅಂಥಹ ಎಷ್ಟೋ ಜನರಿಗೆ ಮತ್ತೆ ಬದುಕಲು ಕಾರಣ ನೀಡಿದ್ದುಂಟು. ಮತ್ತೆ ಎದ್ದು ಸಾಧಿಸಿದವರುಂಟು. ಬಡ ಬಗ್ಗರಿಗೆ ಉಚಿತ ಕ್ಯಾನ್ಸರ್, ಹೃದ್ರೋಗ ಆಸ್ಪತ್ರೆಗಳಲ್ಲಿ ಶುಶ್ರೂಷೆ ಸಿಕ್ಕಿದೆ.

ಬುದ್ಧ ತಾನು ದೇವರಲ್ಲ ಎಂದು ಹೇಳಿರಬಹುದು. ನಿಮಗೆ ಸ್ವಂತ ವಿಚಾರವಿದೆ, ಅದಕ್ಕೆ ಆ ಕೋನದಿಂದ ಬುದ್ಧನನ್ನು ನೋಡುತ್ತೀರಿ, ಬುದ್ಧನನ್ನು ಭಗವಾನ್ ಅಲ್ಲ ಎನ್ನುತ್ತೀರಿ. ಆದರೆ, ಬುದ್ಧನಿಂದಾಗಿ ಬದುಕಿದವರಿಗೆ ಅವನು ಯಾವತ್ತೂ ಭಗವಾನ್. ಹೋಗಲಿ ಬಿಡಿ, ಕಷ್ಟದಲ್ಲಿದ್ದ ಯಾರನ್ನೋ ನೀವೇ ಕಾಪಾಡಿದರೆ ದೇವರಂತೆ ಬಂದು ಕಾಪಾಡಿದ ಅನ್ನಲ್ಲವೇ? ಹಾಗೆಯೇ ಬುದ್ಧ, ಬಸವಣ್ಣ, ಅಮ್ಮ ಎಲ್ಲ ದೇವರಾಗಿರಬಹುದಲ್ಲವೇ? ಬುದ್ಧನನ್ನು, ಬಸವಣ್ಣನನ್ನು ಬಾಬಾರನ್ನು, ಮತ್ತಿತರರನ್ನು ತರ್ಕಿಸುವುದು ಎಷ್ಟು ಸರಿ? ಅಧ್ಯಾತ್ಮ ಗುರುಗಳು ಹೀಗೆ ಇರಬೇಕು ಎನ್ನುವುದು ಎಷ್ಟು ಸರಿ? ಹಾಗೆ ನೋಡಿದರೆ ಎಲ್ಲವೂ ಮಾರಾಟದ ಸರಕೆ ಅಲ್ಲವೇ? ಕೊಡು ಕೊಳ್ಳುವಿಕೆ ಇದ್ದದ್ದೇ ಅಲ್ಲವೇ? ಹಣದ ವಿನಿಮಯ ಇದ್ದರೆ ಮಾತ್ರ ಮಾರಾಟವೇ? ನೀವು ತಾರ್ಕಿಕವಾಗಿ ಯೋಚಿಸಿ, ಯಾವುದನ್ನು ಮೌಢ್ಯ ಎನ್ನುತ್ತೀರೋ psychologically ಅದು ಮೌಢ್ಯ ಅನಿಸಲ್ಲ. ನೀವು ಹೇಳುವ ಮೌಢ್ಯವನ್ನು ಗೆಲ್ಲುವುದು ಎಲ್ಲರಿಂದ ಸಾಧ್ಯವೂ ಇಲ್ಲ.
                                                                                         -ರವೀಂದ್ರ ಪ್ರಭು

(ಊರ್ಧ್ವಮುಖಿ ಎಂಬ ಬ್ಲಾಗ್‌ನ ರವೀಂದ್ರ ಪ್ರಭು, ಸಾಯಿಬಾಬಾ ಸಾವನ್ನು ಗೆಲ್ಲಲಿಲ್ಲ, ನಮ್ಮಿಂದ ಮೌಢ್ಯವನ್ನು ಗೆಲ್ಲಲಾಗಲಿಲ್ಲ ಎಂಬ ಲೇಖನಕ್ಕೆ ನೀಡಿರುವ ಪ್ರತಿಕ್ರಿಯೆ ಇದು. ರವೀಂದ್ರ ಬಾಬು ಛಾಯಾಗ್ರಹಣದಲ್ಲಿ ಆಸಕ್ತಿ ಉಳ್ಳವರು. ಅವರ ಬ್ಲಾಗ್‌ನಲ್ಲಿ ಅವರು ಚಿತ್ರಿಸಿದ ಸುಂದರವಾದ ಚಿತ್ರಗಳಿವೆ. ಅವರ ಮೇಲಿನ ಪ್ರತಿಕ್ರಿಯೆಗೆ ಉತ್ತರಿಸಬೇಕಿನಿಸಿದೆ, ಉತ್ತರಿಸಲು ಪ್ರಯತ್ನಿಸಿದ್ದೇವೆ.)

ಪ್ರಿಯ ರವೀಂದ್ರ ಪ್ರಭು,
ನೀವು ಏನನ್ನು ಹೇಳಹೊರಟಿದ್ದೀರೋ ಅದೆಲ್ಲವೂ ಅರ್ಥವಾಗುತ್ತವೆ. ಮೌಢ್ಯವನ್ನು ಗೆಲ್ಲುವುದು ಎಲ್ಲರಿಂದ ಸಾಧ್ಯವಿಲ್ಲ ಎಂಬುದು ನಿಮ್ಮ ಅಭಿಪ್ರಾಯ. ಎಲ್ಲರೂ ಮೌಢ್ಯವನ್ನು ಗೆಲ್ಲುವಂತಾಗಬೇಕು ಎಂಬುದು ನಮ್ಮ ಅಪೇಕ್ಷೆ.

ಜನರು ನಂಬಿಕೆಗಳನ್ನು ಬಿಟ್ಟುಬಿಡಬೇಕು ಎಂಬುದು ನಮ್ಮ ಅಭಿಪ್ರಾಯವಲ್ಲ. ನಂಬಿಕೆಗಳು ಇಲ್ಲದೆ ಬದುಕೇ ಇಲ್ಲ. ಯಾವುದು ನಂಬಿಕೆಗೆ ಅರ್ಹವೋ ಅದನ್ನಷ್ಟೆ ನಂಬಬೇಕು ಎಂಬುದಷ್ಟೇ ನಮ್ಮ ಕಾಳಜಿ.

ನೀವು ಬುದ್ಧನ ವಿಷಯ ಪ್ರಸ್ತಾಪಿಸಿದ್ದೀರಿ. ಬುದ್ಧನದು ಸತ್ಯದ ಮಾರ್ಗ. ಬುದ್ಧನ ಈ ಸತ್ಯಮಾರ್ಗವನ್ನು ಒಪ್ಪಿದ್ದ, ತಾನೂ ಅಳವಡಿಸಿಕೊಂಡಿದ್ದ ಸ್ವಾಮಿ ವಿವೇಕಾನಂದರು ಒಂದೆಡೆ ಹೀಗೆ ಹೇಳುತ್ತಾರೆ:

ಸತ್ಯದ ಹಾದಿಯಲ್ಲಿ ಅತ್ಯಂತ ಅಡಚಣೆಯಾಗುವುವು ಪವಾಡಗಳು ಎಂದು ನಾನು ತಿಳಿದಿರುವೆ. ಬುದ್ಧನ ಶಿಷ್ಯ ಬುದ್ಧನಿಗೆ ಒಬ್ಬಾತ ಪವಾಡವನ್ನು ಮಾಡಿದ ಬಗ್ಗೆ ಹೇಳಿದಾಗ, ಬುದ್ಧ ಒಂದು ಭಿಕ್ಷಾಪಾತ್ರೆಯನ್ನು ಅದನ್ನು ಮುಟ್ಟದಂತೆ ಪವಾಡದ ರೀತಿ ತೆಗೆದುಕೊಂಡು ಆತನಿಗೆ ತೋರಿಸಿದರು. ನಂತರ ಅದನ್ನು ತನ್ನ ಕಾಲಿನಿಂದ ತುಳಿದು ಚೂರು ಚೂರು ಮಾಡಿ, ಪವಾಡದಲ್ಲಿ ನಂಬಿಕೆ ಇಡಬೇಡಿ. ಬದಲಿಗೆ ನಿತ್ಯಸತ್ಯವಾದ ನಿಯಮಗಳನ್ನು ಕುರಿತು ಆಲೋಚಿಸಿ ಎಂದು ಅವರಿಗೆ ಹೇಳಿದ. ತಮ್ಮನ್ನು ಸುರಕ್ಷಿತವಾಗಿ ಕರೆದೊಯ್ಯುವ ತಮ್ಮ ಹೃದಯದಲ್ಲೇ ಸುಪ್ತವಾಗಿರುವ ಅಂತಃಶಕ್ತಿಯ ಬಗ್ಗೆ ಅವರಿಗೆ ತಿಳಿಯ ಹೇಳಿದ. ಪವಾಡಗಳು ಅತ್ಯಂತ ಅಡಚಣೆಗಳು. ನಾವು ಅದನ್ನು ನಾಶಪಡಿಸಬೇಕು.
                ಸ್ವಾಮಿ ವಿವೇಕಾನಂದರ ಕೃತಿಶ್ರೇಣಿ, ಸಂಪುಟ-೧. ಪುಟ ೩೨೮(ಇಂಗ್ಲಿಷ್)

ಬುದ್ಧ ಸುಳ್ಳೇಸುಳ್ಳು ಪವಾಡಗಳನ್ನು ಎಷ್ಟು ದ್ವೇಷಿಸುತ್ತಿದ್ದ ಎನ್ನುವುದಕ್ಕೆ ವಿವೇಕಾನಂದರ ಮಾತುಗಳು ಉದಾಹರಣೆ. ಎಚ್‌ಎನ್, ಕೋವೋರ್‌ರಂಥವರು ಆಧುನಿಕ ಕಾಲದಲ್ಲಿ ಮಾಡಿದ್ದನ್ನು ಬುದ್ಧ ಆ ಕಾಲದಲ್ಲೇ ಮಾಡಿದ್ದ, ಮತ್ತು ಹಾಗೆ ಮಾಡುವುದರ ಮೂಲಕ ವೈಜ್ಞಾನಿಕ ಮನೋಭಾವ ನಮ್ಮದಾಗಬೇಕು ಎಂದು ಪರಿಣಾಮಕಾರಿಯಾಗಿ ನಿರೂಪಿಸಿದ್ದ.

ಇಂಥ ಬುದ್ಧನಿಗೆ ನಾವು ಪವಾಡಗಳನ್ನು ಆರೋಪಿಸಿದರೆ, ದೈವವನ್ನಾಗಿಸಿದರೆ ಅದು ಬುದ್ಧನಿಗೆ ನಾವು ಮಾಡುವ ಅಪಚಾರವಲ್ಲವೇ? ಅಪಮಾನವಲ್ಲವೇ? ಇಂಥ ಅಪಚಾರಗಳನ್ನು ನಾವು ಕೇವಲ ಬುದ್ಧನಿಗೆ ಮಾಡಿಲ್ಲ, ಎಲ್ಲ ಮಹಾನುಭಾವರಿಗೂ ಮಾಡಿದ್ದೇವೆ.

ದುರ್ಬಲ ಮನಸ್ಸುಗಳಷ್ಟೇ ತಮ್ಮ ಹೊರಗೆ ದೇವರನ್ನು, ದೇವಮಾನವರನ್ನು ಹುಡುಕಲು ಯತ್ನಿಸುತ್ತವೆ. ಹಾಗಂತ ಶುಷ್ಕ ವಿಚಾರವಾದವನ್ನು ಇಲ್ಲಿ ಹೇಳಲು ಹೊರಟಿಲ್ಲ. ವೈಚಾರಿಕತೆ ಮತ್ತು ಅಧ್ಯಾತ್ಮ ಎರಡೂ ಭಿನ್ನ ಧ್ರುವಗಳು, ಎಂದೂ ಒಂದೆಡೆ ಸೇರುವುದಿಲ್ಲ ಎಂದು ಹಲವರು ಭಾವಿಸಿದ್ದಾರೆ. ಎರಡನ್ನೂ ಒಟ್ಟಾಗಿ ಗ್ರಹಿಸುವುದು ನಮಗೆ ಸಾಧ್ಯವಾಗಬೇಕು. ಬುದ್ಧನಿಗೆ ಅದು ಸಾಧ್ಯವಾಗಿತ್ತು, ವಿವೇಕಾನಂದರಿಗೆ ಅದು ಸಾಧ್ಯವಾಗಿತ್ತು, ಕುವೆಂಪು ಅವರಿಗೂ ಸಾಧ್ಯವಾಗಿತ್ತು. ಅಧ್ಯಾತ್ಮ ಹಾಗು ವಿಜ್ಞಾನ ಒಟ್ಟಾಗಿ ಸೇರುವ, ಪರಸ್ಪರ ಪೂರಕವಾಗಿ ನಿಲ್ಲುವುದಕ್ಕೆ ಒಂದು ಸುಂದರ ಉದಾಹರಣೆ ಕುವೆಂಪು ಅವರ ಕಾನೂರು ಹೆಗ್ಗಡತಿ. ಬಸವಣ್ಣನ ಸಾಮಾಜಿಕ ನೆಲೆಗಟ್ಟಿನ ಅಧ್ಯಾತ್ಮವೂ ಇಂಥ ನೆಲೆಯಿಂದಲೇ ಮೂಡಿದ್ದು.

ಸಾಯಿಬಾಬಾರ ನೋಟಕ್ಕೆ, ನಗೆಗೆ ಯಾರಿಗಾದರೂ ಸಾಂತ್ವನ ಸಿಗುತ್ತಿದ್ದರೆ ಸಂತೋಷ. ಸಾಯಿಬಾಬಾರ ನೋಟ, ನಗೆ ಮಾತ್ರವೇಕೆ? ಒಂದು ಹಕ್ಕಿಯ ಮಧುರ ಕೂಗು, ಒಂದು ಮೋಹಕ ಹೂವಿನ ಪಕಳೆಗಳು, ಆಕಾಶದಲ್ಲಿ ಇದ್ದಕ್ಕಿದ್ದಂತೆ ಎದ್ದ ಒಂದು ಕಾಮನಬಿಲ್ಲು, ಮಳೆಬಿದ್ದ ನೆಲದಿಂದ ಎದ್ದ ಘಮ್ಮನೆ ಪರಿಮಳ, ಒಂದು ಎಳೇ ಮಗುವಿನ ತುಟಿಯಲ್ಲಿ ಅರಳಿದ ತಿಳಿನಗು ಎಲ್ಲವೂ ನಮಗೆ ಬದುಕುವ ಸ್ಫೂರ್ತಿಯನ್ನು ನೀಡುತ್ತವೆ. ಇಂಥೆಲ್ಲ ಸ್ಫೂರ್ತಿದಾಯಕ ಜೀವತಂತುಗಳು ನಮ್ಮ ಸುತ್ತಮುತ್ತಲೇ ಇರುವಾಗ ಬದುಕು ಬೋರಿಂಗ್ ಯಾಕಾಗಬೇಕು ರವೀಂದ್ರ ಅವರೇ? ಬದುಕು ಇಂಟರೆಸ್ಟಿಂಗ್ ಆಗಿರಲು ಸುಳ್ಳು ದೇವರನ್ನು ಸೃಷ್ಟಿಸಿಕೊಳ್ಳಲೇಬೇಕಾ? ಭ್ರಮೆಗಳಲ್ಲೇ ಬದುಕಬೇಕಾ? ಸ್ವಲ್ಪ ಯೋಚನೆ ಮಾಡಿ.

ಅಧ್ಯಾತ್ಮ ಗುರು ಹೀಗೇ ಇರಬೇಕೆಂದು ಹೇಳುವುದು ಎಷ್ಟು ಸರಿ ಎನ್ನುವುದು ನಿಮ್ಮ ಪ್ರಶ್ನೆ. ಅಧ್ಯಾತ್ಮ ಗುರುಗಳು ಹೇಗಾದರೂ ಇರಲಿ, ಕಪಟ-ಸುಳ್ಳುಗಳಿಂದ ಮುಕ್ತರಾಗಿರಬೇಕು, ಇಲ್ಲವಾದಲ್ಲಿ ಅಧ್ಯಾತ್ಮಕ್ಕೆ ಅರ್ಥವೇ ಉಳಿಯುವುದಿಲ್ಲ. ಕಳಬೇಡ, ಕೊಲಬೇಡ, ಹುಸಿಯ ನುಡಿಯಲುಬೇಡ, ಇದಿರ ಹಳಿಯಲುಬೇಡ, ತನ್ನ ಬಣ್ಣಿಸಬೇಡ, ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ ಎಂದು ಅಧ್ಯಾತ್ಮವನ್ನು ಅತ್ಯಂತ ಸರಳವಾಗಿ, ನೇರವಾಗಿ ಹೇಳಿದರು ಬಸವಣ್ಣ. ಇದೇ ನಿಜವಾದ ಅಧ್ಯಾತ್ಮ ಮಾರ್ಗ.

ಹಾಗೆ ನೋಡಿದರೆ, ಎಲ್ಲವೂ ಮಾರಾಟದ ಸರಕೇ ಅಲ್ಲವೇ? ಎನ್ನುತ್ತೀರಿ ನೀವು. ಅಧ್ಯಾತ್ಮ ಮಾರಾಟದ ಸರಕು ಅಲ್ಲವೇ ಅಲ್ಲ. ಮಾರಾಟದ ಸರಕಾಗಿದ್ದರೆ ಬುದ್ಧ ರಾಜ್ಯವನ್ನು ತೊರೆದು ಹೊರಗೆ ಬರುತ್ತಿರಲಿಲ್ಲ. ಬಸವಣ್ಣ ಅಧಿಕಾರವನ್ನು ಕಳೆದುಕೊಳ್ಳಬೇಕಾಗಿರಲಿಲ್ಲ. ರಾಮಕೃಷ್ಣ ಪರಮಹಂಸರು, ವಿವೇಕಾನಂದರು ಅಧ್ಯಾತ್ಮದ ಹೆಸರಿನಲ್ಲಿ ಕೋಟಿಗಟ್ಟಲೆ ಹಣ ಸಂಗ್ರಹಿಸಿಡಲಿಲ್ಲ. ನಂಬಿಕೆ, ಪ್ರೀತಿ, ಆತ್ಮವಿಶ್ವಾಸ, ಸಂಬಂಧಗಳು ಯಾವುದೂ ಮಾರಾಟದ ಸರಕಲ್ಲ, ಆಗಲೂ ಬಾರದು. ಅಧ್ಯಾತ್ಮವೂ ಹಾಗೆಯೇ.

ಬದುಕಲ್ಲಿ ಆಸಕ್ತಿಯನ್ನೇ ಕಳೆದುಕೊಂಡವರ ಕುರಿತು ನೀವು ಹೇಳುತ್ತೀರಿ. ಅವರ ಕಣ್ಣುಗಳಲ್ಲಿ ಆತ್ಮವಿಶ್ವಾಸವನ್ನು ತರಬೇಕಾಗಿರುವುದು ನಮ್ಮ ಸಮಾಜ ವ್ಯವಸ್ಥೆ ಮತ್ತು ಸರ್ಕಾರಗಳು; ಸುಳ್ಳುಬಾಬಾಗಳಲ್ಲ. ಹಾಗೆಯೇ ವಿವೇಕಾನಂದರು ಹೇಳುವಂತೆ ತಮ್ಮೊಳಗೇ ಇರುವ ಅಂತಃಶಕ್ತಿಯನ್ನು ನಾವು ಜಾಗೃತಗೊಳಿಸಿಕೊಳ್ಳಬೇಕಾಗುತ್ತದೆ. ಜಂಜಡಗಳಲ್ಲಿ ಸಿಕ್ಕ ಮನಸ್ಸು ಹೊರಗಿನ ಅತಿಮಾನವ ಶಕ್ತಿಗಾಗಿ ಆಶ್ರಯಿಸುತ್ತದೆ. ಈ ಮನಸ್ಸುಗಳ ದೌರ್ಬಲ್ಯಗಳನ್ನು ಬಳಸಿಕೊಳ್ಳುವವರು ಸುಳ್ಳುಪವಾಡಗಳನ್ನು ಮಾಡುತ್ತಾರೆ, ಹಣ ಗಳಿಸುತ್ತಾರೆ.

ಪವಾಡ ನಡೆಯಬೇಕಿರುವುದು ದುರ್ಬಲ ಮನಸ್ಸುಗಳಲ್ಲಿ. ಆ ಪವಾಡವೇನೆಂದರೆ, ಆ ದುರ್ಬಲ ಮನಸ್ಸುಗಳು ಸಬಲವಾಗುವುದು. ತಮ್ಮಲ್ಲಿ ತಾವು ವಿಶ್ವಾಸವಿಡುವುದು. ಆ ವಿಶ್ವಾಸದ ಬಲದಲ್ಲಿ ನೆಮ್ಮದಿ-ಸಂತೋಷದಿಂದ ಬದುಕುವಂತಾಗುವುದು. ಸುಳ್ಳಿನ ತಳಪಾಯದ ಮೇಲೆ ಕಟ್ಟಿದ ಸೌಧ ಬಹುಕಾಲ ಇರಲಾರದು. ಬುದ್ಧನ ಸತ್ಯ ಮಾರ್ಗವೇ ನಿಜವಾದ ಬದುಕಿನ ತಳಪಾಯ. ಅದರ ಮೇಲೇ ನಮ್ಮ ಬದುಕು ಕಟ್ಟಿಕೊಳ್ಳುವಂತಾಗಬೇಕು. ಅಲ್ಲವೇ?

ನಿಮ್ಮ ಬ್ಲಾಗ್‌ಗೆ ಊರ್ಧ್ವಮುಖಿ ಎಂಬ ಸುಂದರ ಹೆಸರನ್ನು ಇಟ್ಟಿದ್ದೀರಿ. ನಾವು ಸತ್ಯದ ಮಾರ್ಗದಲ್ಲಿ ಊರ್ಧ್ವಮುಖಿಗಳಾಗಬೇಕೇ ಹೊರತು ಸುಳ್ಳಿನ ಮಾರ್ಗದಲ್ಲಿ ಅಧೋಮುಖಿಗಳಾಗಬಾರದು ಅಲ್ಲವೇ?

ಪ್ರೀತಿಯಿಂದ,

ಸಂಪಾದಕೀಯ

10 comments:

  1. ಪ್ರಿಯ ಸಂಪಾದಕೀಯ,

    ನಾನು ನಿಮ್ಮ ಅಭಿಪ್ರಾಯವನ್ನು ಗೌರವಿಸುತ್ತೇನೆ ಮತ್ತು ಈ ನಿಟ್ಟಿನಲ್ಲಿ ನೀವು ಹೇಳಬಯಸುವ ವಿಚಾರವನ್ನು ಅಭಿನಂದಿಸುತ್ತೇನೆ. ಆದರೆ ಕೆಲವು ಪ್ರಶ್ನೆಗಳು, ಜನರ ಮೂಢ ನಂಬಿಕೆಗಳಿಗೆ ಕೊನೆ ಎಂತು? ನೀವು ಹೇಳಬಯಸುವ ಸಂದೇಶ ಆ ಜನರಿಗೆ ತಲುಪುವುದೇ ಇಲ್ಲವಲ್ಲ? ಮಾಧ್ಯಮಗಳು ಜನರಲ್ಲಿ ಮೌಢ್ಯದ ಪರಮಾವಧಿಯನ್ನು ಬಿತ್ತುವಲ್ಲಿ ತಾ ಮುಂದು ನೀ ಮುಂದು ಎಂಬಂತೆ, ನಂಬಿಕೆ ಇಲ್ಲದವರು ನಂಬುವಂತೆ havoch ಸೃಷ್ಟಿಸುತ್ತಿರುವುದು ತಪ್ಪಲ್ಲವೆ? ಬಾಬಾರವರ ಮರಣ ದೇಶಕ್ಕೆ ಅಲ್ಲ ಜಗತ್ತಿಗೆ ತುಂಬಲಾರದ ನಷ್ಟ ಎಂಬಂತೆ ಚಿತ್ರಿಸುತ್ತಿರುವವರು ಯಾರು? ಸಚಿನ್ ತೆಂಡೂಲ್ಕರ್ ಒಬ್ಬ ಭಕ್ತನಾಗಿ ಅಂತಿಮ ದರ್ಶನಕ್ಕೆ ಹೋಗಿದ್ದೆ ದೊಡ್ಡ ಬ್ರೆಕಿಂಗ್ ನ್ಯೂಸ್ ಮಾಡುವ ಅವಶ್ಯಕತೆ ಇತ್ತ? ಸಚಿನ್ ಒಬ್ಬ ಕ್ರಿಕೆಟಿಗ ಅದನ್ನು ಬಿಟ್ಟರೆ ಅವನು ಒಬ್ಬ ಸಾಮಾನ್ಯ ವ್ಯಕ್ತಿಯಂತೆ ನಂಬಿಕೆ, ಭಕ್ತಿ, ಗುರು, ಖಾಸಗಿ ಬದುಕು ಹೊಂದಿರುವ ಮನುಷ್ಯನಂತೆ ಆತನು ಒಬ್ಬ ಅಂತ ನಾವೇಕೆ ಯೋಚಿಸುವುದಿಲ್ಲ?? ಅವರವರ ವೈಯಕ್ತಿಕ ನಂಬಿಕೆಗಳನ್ನು ದೊಡ್ಡ ಆದರ್ಶಗಳನ್ನಾಗಿ ಚಿತ್ರಿಸುವುದು ಎಷ್ಟು ಸರಿ? ಇಲ್ಲಿ ಸಹಜ ಪ್ರಶ್ನೆ ಉದ್ಭವಿಸುವುದೆನೆಂದರೆ, ಒಬ್ಬ ಅಸಾಮಾನ್ಯ ಕ್ರಿಕೆಟಿಗ, ಬಾಬರವರ್ ಭಕ್ತನಾದ್ದರಿಂದ, ಅವರು ಪವಾಡ ಪುರುಷರೇ ಅಗಬೇಕಾಗಿಲ್ಲ್ವಲ್ಲ? ಸಚಿನ್ ಅಥವಾ ಇನ್ನ್ಯಾರೋ ಸಾಮಾನ್ಯ ವ್ಯಕ್ತಿಗೆ ಹಾಗೆ ಅನುಭವ ಆಗಿದ್ದಿದ್ದರೆ ಅದು ವೈಯಕ್ತಿಕ ನೆಲೆಗಟ್ಟಿನ ಆಧಾರದ ಮೇಲೆಯೇ ಹೊರತು generalised ನಂಬಿಕೆ ಆಗಬೇಕೆನ್ದೆನಿಲ್ಲವಲ್ಲ ? ಜನರ ಮೌಢ್ಯದ ರೂವಾರಿಗಳು ಯಾರು? ನಂಬಿಕೆ ಇಲ್ಲದವರು ನಂಬುವಂತೆ ದಿನಕ್ಕೊಂದು ಕಥೆ, ಪವಾಡಗಳನ್ನು, ಪುಟಗಟ್ಟಲೆ ಪ್ರಕಟಿಸಿ, ತಾಸುಗಟ್ಟಲೆ ಟಿವಿ ಪರದೆಯ ಮೇಲೆ ಭಾಷಣಗಳನ್ನು ಹೊಡೆದರೆ ಜನರು ಹಾದಿ ತಪ್ಪುವುದಿಲ್ಲವೇ? ನಿಮ್ಮ ಪ್ರಯತ್ನ ನಮ್ಮನ್ನು ತಲುಪಿವೆ, ಆದರೆ ನಿಜವಾಗಿ ಅರಿವು ಮೂಡಿಸಬೇಕಾದ ಜನರು ಇದರಿಂದ ವಂಚಿತರಾಗಿಯೇ ಉಳಿಯುವದಿಲ್ಲವೇ??

    ReplyDelete
  2. ಅವಿನಾಶ ಕನ್ನಮ್ಮನವರ್April 28, 2011 at 10:33 PM

    +1 to ashu,,

    ReplyDelete
  3. ಪ್ರೀತಿಯ ಸಂಪಾದಕೀಯ, ನನ್ನ ಪ್ರತಿಕ್ರಿಯೆಗೆ ಒಳ್ಳೆಯ ಉತ್ತರ ನೀಡಿದ್ದೀರಿ. ನಿಮ್ಮ ಅಮೂಲ್ಯ ಸಮಯ ನೀಡಿದ್ದಕ್ಕೆ ತುಂಬಾ ಧನ್ಯವಾದ. ಬಾಬಾರ ಸಮರ್ಥಕ ನಾನಲ್ಲ ಎಂದು ಸಮಜಾಯಿಷಿ ನೀಡುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ. ಅವರ ಸಾಮಾಜಿಕ ಕಾರ್ಯಗಳ ಬಗ್ಗೆ ನಿಮ್ಮ ಲೇಖನದಲ್ಲಿ ಸ್ವಲ್ಪ ಹೆಚ್ಚಿನ ಜಾಗ ಸಿಗಬಹುದಿತ್ತೇನೋ ಹಾಗೂ ಬಾಬಾ ಬಗ್ಗೆ ಅಷ್ಟೊಂದು ಅಸಹನೆ ಬೇಡವಿತ್ತೇನೋ ಎಂಬ ಅರ್ಥದಲ್ಲಿ ಹೇಳಿದ್ದೆ.
    ಒಂದು ಹಕ್ಕಿಯ ಮಧುರ ಕೂಗು, ಒಂದು ಮೋಹಕ ಹೂವಿನ ಪಕಳೆ.. ಇತ್ಯಾದಿಗಳಲ್ಲಿ ನಮಗೆ ಬದುಕುವ ಸ್ಫೂರ್ತಿಯನ್ನು ಹುಡುಕಲು ಯಾರಾದರೂ ಪ್ರೇರಣೆಯಾಗಬೇಕಲ್ಲವೇ.. ನಿಮಗೆ ವಿವೇಕಾನಂದ, ಬುದ್ಧ ಹೇಗೆ ಪ್ರೇರಣೆಯೋ, ಇತರರಿಗೆ ಬಾಬಾ ಆಗಿರಬಹುದಲ್ಲವೇ. ನೀವು ವಿವೇಕಾನಂದರ ಮೃಷ್ಟಾನ್ನ ಭೋಜನ ಮಾಡಿದ್ದಿರಿ. ಬಾಬಾರದ್ದು ಹಳಸಿದ ಅನ್ನ ಎನ್ನಬೇಡಿ, ಎಷ್ಟೋ ಜನರ ಹೊಟ್ಟೆ ತುಂಬಿದೆ ಅದು. ಅದನ್ನು ಅವರ ಗೌರವಿಸೋಣ. ನಿಮಗೆ ಎಲ್ಲರಿಗೂ ಮೃಷ್ಟಾನ್ನ ಬಡಿಸುವ ತವಕ. ಅದಕ್ಕೆ ಕಾಲ ಕೂಡಿ ಬರಬೇಕು ಅಷ್ಟೇ. "ದುರ್ಬಲ ಮನಸ್ಸುಗಳಷ್ಟೇ ತಮ್ಮ ಹೊರಗೆ ದೇವರನ್ನು, ದೇವಮಾನವರನ್ನು ಹುಡುಕಲು ಯತ್ನಿಸುತ್ತವೆ" ಎನ್ನುತ್ತೀರಿ- ಸತ್ಯವಾದ ಮಾತು. ಅಂಥವರಿಗೆ ವಿವೇಕಾನಂದ ಅಷ್ಟು ಬೇಗ ಅರ್ಥ ಆಗಲ್ಲ. ಬಾಬಾ ಅರ್ಥವಾಗಿರಬಹುದು.. ತಪ್ಪಿಲ್ಲವಲ್ಲ. ಇಲ್ಲಿ ಸತ್ಯ ಸುಳ್ಳು, ಸರಿ ತಪ್ಪು ಹೇಳುವುದು ಕಷ್ಟ. ನೀವು ದೇವರನ್ನು ನೋಡುವ ವಿಧಾನಕ್ಕೂ, ಬಾಬಾರ ಭಕ್ತ ನೋಡುವ ವಿಧಾನಕ್ಕೂ ವ್ಯತ್ಯಾಸವಿದೆ. ಪ್ರತಿ ದಿನವೂ ಎಲ್ಲರೂ ಬೌದ್ದಿಕವಾಗಿ ಬೆಳೆಯುತ್ತಾರೆ. ಅದರ ವೇಗ ಬೇರೆಯಿರಬಹುದು. ಈಗ ನಿಮಗೆ ವಿವೇಕಾನಂದ ಬುದ್ಧ final destination ಎಂದು ಕಾಣುತ್ತಿದೆ. ಒಂದು ದಿನ ನೀವು ಅವರನ್ನು ಮೀರಿ ಬೆಳೆಯಬಹುದು. ಹಾಗೆಯೇ ಬಾಬ ಭಕ್ತರೂ. ಬಾಬಾ ಅರ್ಥ ಆದ ಮೇಲೆ ಅವರ destination ಬದಲಾಗುತ್ತದೆ. ಮನಸ್ಸಿನ ದೌರ್ಬಲ್ಯ ಇವತ್ತು ನಾಳೆ ತೆಗೆಯಲು ಆಗಲ್ಲ. ನಾವಿಬ್ಬರೂ ಹೇಳಹೊರಟಿರುವುದೂ ಒಂದೇ. ನೀವು ಬದಲಾವಣೆ ತರುವ ಬಗ್ಗೆ ಮಾತಾಡುತ್ತೀರಿ. ನಾನು ಬದಲಾವಣೆ ಅದಾಗಿಯೇ ಬರುತ್ತದೆ ಎನ್ನುತ್ತೇನೆ.
    ಟೀಕೆ ಟಿಪ್ಪಣಿ ಸರಿಯೇ. ಕೆಟ್ಟದನ್ನು ನಿಂದಿಸುವ ಭರದಲ್ಲಿ ಒಳ್ಳೆಯದನ್ನು ಮರೆಯದಿರೋಣ ಅಂತ. ಎಲ್ಲರನ್ನೂ ಪ್ರೀತಿಯಿಂದ ನೋಡೋಣ ಅಲ್ಲವೇ..
    ಮತ್ತೊಮ್ಮೆ ಧನ್ಯವಾದ,
    ರವೀಂದ್ರ ಪ್ರಭು.

    ReplyDelete
  4. ಮಾ.ಸು.ಮಂಜುನಾಥApril 28, 2011 at 11:01 PM

    ಪ್ರಿಯರೆ,
    ಇಷ್ಟಕ್ಕೂ ಆಧ್ಯಾತ್ಮಕ್ಕೂ ಬಾಬಾಗೂ ಎತ್ತಣಿಂದೆತ್ತ ಸಂಬಂಧ,ಆ ದೃಷ್ಟಿಯಿಂದ ಬಾಬಾರನ್ನ ನೋಡಲೂ ಸಾಧ್ಯವಿಲ್ಲ.ಸಂಪಾದಕೀಯದ ಈ ಬರಹ ನಿಜಕ್ಕೂ ಇಷ್ಟವಾಯಿತು,ಆಧ್ಯಾತ್ಮ ತುಂಬಾ ಸರಳ ಆದರೆ ಸರಳತೆಯೇ ಕಷ್ಟವಾದುದಾಗಿದೆ.spiritual not to follow but lead ಅನ್ನೋದು ಅರ್ಥಮಾಡಿಕೊಳ್ಳಬೇಕಾದ ವಿಷ್ಯ.

    ReplyDelete
  5. Krishna Nayak HichkadApril 29, 2011 at 10:38 AM

    ಜನರ ಮ್ಔಢ್ಯತೆಯ ದುರ್ಲಾಭ ಪಡೆದು ಶ್ರಮ ರಹಿತ ಐಷಾರಾಮಿ ಬದುಕನ್ನು ರೂಪಿಸಿ ಕೊಂಡ ಒಂದು ವರ್ಗ ಈ ಜಗತ್ತಿನಲ್ಲಿರುವದನ್ನು ಇತಿಹಾಸಪುಟಗಳನ್ನು ತಿರುವಿದಾಗ, ಪರಂಪರೆಯನ್ನು ಅವಲೋಕಿಸಿದಾಗ ಕಾಣಬಹುದಾಗಿದೆ. ಅಂಥಹವರು ಮ್ಔಢ್ಯತೆ ಯನ್ನು ಸದಾ ಜಾಗ್ರತವಾಗಿ ಇಡಲು ಬಯಸುತ್ತಾರೆ. ಯಾಕೆಂದರೆ ಜನಜಾಗ್ರತಿಯಾದಲ್ಲಿ ಅವರ ಅಸ್ಥಿತ್ವಕ್ಕೆ ದಕ್ಕೆಯಾಗುತ್ತದೆ. ಮನುಷ್ಯನೊಳಗಿನ ಗುಲಾಮಿತನದ ಮನಸ್ಸು ಮಠ ಪೀಠಗಳನ್ನು, ಸ್ವಾಮಿ, ಬಾಬಾ ರವರನ್ನು ಪೋಷಿಸುತ್ತಿವೆ. ಇಂತಹವರ ಆಧೀನದಲ್ಲಿ ಸಾವಿರ ಲಕ್ಟ ಕೋಟಿ ಸಂಪತ್ತು ಹೇಗೆ ಎಲ್ಲಿಂದ ಬಂತು ಎನ್ನುವುದನ್ನು ಯಾರು ಚಿಂತಿಸುವುದಿಲ್ಲ್ಲ. ಪ್ರಸ್ತುತವಾಗಿ ಅವರು ನಿರ್ವಹಿಸುತ್ತಿರುವ ಕಾರ್ಯಗಳನ್ನು ಮಾತ್ರ ಗಣನೆಗೆ ತೆಗೆದದು ಕೊಂಡು ಮೆಚ್ಚಿಗೆ ವ್ಯಕ್ತಪಡಿಸಲಾಗುತ್ತಿದೆ.

    ಸಂಪಾದಕಕೀಯದಂತಹ ವಿಚಾರಗಳು ಜನತಯಲ್ಲಿ ಅರಿವು ಮೂಡಿಸುವಲ್ಲಿ ಸಹಕಾರಿಯಾಗಲಿ.

    ReplyDelete
  6. agreed. each indvidual has his own perceptions. even sachin had. so if he went to see baba no big deal. see these babas and godmen are man made. we create hype and the voices whih question the deeds gradually die sown. this is irony.

    ReplyDelete
  7. ನನ್ನ ಕಾಮೆಂಟು ಯಾಕೆ ಪ್ರಕಟಿಸಿಲ್ಲ? ಭಯವೇ?

    ನನ್ನ ಪ್ರತಿಕ್ರಿಯೆ ಇಲ್ಲಿದೆ ನೋಡಿ :
    http://nilume.wordpress.com/2011/04/29/%E0%B2%B8%E0%B2%82%E0%B2%AA%E0%B2%BE%E0%B2%A6%E0%B2%95%E0%B3%80%E0%B2%AF-%E0%B2%85%E0%B2%A8%E0%B3%8D%E0%B2%A8%E0%B3%8B-%E0%B2%AE%E0%B3%8A%E0%B2%9F%E0%B3%8D%E0%B2%9F%E0%B3%86%E0%B2%AF-%E0%B2%AE/

    ReplyDelete
  8. ಸ್ನೇಹಿತರೇ,

    ಸಂಪಾದಕೀಯದ ಸಂಪಾದಕರಿಗೆ ಅಭಿನಂದನೆಗಳು. ನಿಮ್ಮ ಲೇಖನಗಳು ಜನಮಾನಸವನ್ನು ಚಿಂತಿಸಲು ಪ್ರೇರಣೆ ನೀಡುವಂಥ ವಿಷಯಗಳಿಂದ ಕೂಡಿದ್ದು ಪ್ರಸ್ತುತ ದಿನಮಾನದಲ್ಲಿ ಅಗತ್ಯವಾದದ್ದು. ನನಗೆ ತುಂಬಾ ಇಷ್ಟವಾಗುತ್ತವೆ ಇಲ್ಲಿನ ವಿಚಾರಗಳು ಹಾಗೂ ಚರ್ಚೆಗಳು.

    http://prajavaniepaper.com/svww_showarticle.php?art=20110429a_006100002

    ಪ್ರೊ.ಎಚ್.ಎಸ್.ಶಿವಪ್ರಕಾಶ್ ಅವರ ಈ ಲೇಖನ ಓದಿ. ಬಹುಶಃ ಮೇಲಿನ ಎಲ್ಲ ಚರ್ಚೆಗೆ, ತಿಳಿವಿಗೆ ಹೊಸ ಹೊಳಹು ಬರಬಹುದು.

    ವಂದನೆಗಳು
    ರೇಣುಕಾ ನಿಡಗುಂದಿ

    ReplyDelete
  9. ನಾನು ಸಾಯಿ ಬಾಬಾ ರವರ ಅಭಿಮಾನಿ ಅಲ್ಲ, ಆದ್ರೆ ನನ್ನ ಗುರು ವಿಷ್ಣುವರ್ದನ್ ರವರು ಸಾಯಿಬಾಬಾ ಅಲ್ಲದೆ ಮತ್ತಶ್ಟು ಬಾಬಾಗಳ ಅಭಿಮಾನಿ ಆಗಿದ್ದರು, ಹಾಗಾಗಿಯೆ ಅವರಿ ಪ್ಯಾಂಟ್ ಶರ್ಟ್ ಬಿಟ್ಟು ತಲೆಗೆ ಬಾಬಾನ ಬಟ್ಟೆ ಕಟ್ಟತೊಡಗಿದ್ದರು, ನನಗಂತೂ.. ಇದು ನುಂಗಲಾಗದ ತುತ್ತಾತಿತ್ತು, ಯಾಕೆಂದರೆ ನಾನು ವಿ. ವನ್ನು ಸಿಂಹ ವಾಗಿ ಇಸ್ಟಪಟ್ಟಿದ್ದೆನೆ ಹೊರತು ದೇವರಾಗಿ ಅಲ್ಲ, ಹಾಗೆಯೆ ನನ್ನ ಮತ್ತೋಬ್ಬ ಪೆವರಿಟ್ ಸಚಿನ್ ಕೂಡಾ ಬಾಬಾ ಭಕ್ತ ಆಗಿರುವುದೊ.. ಕಾಕಾತಾಳಿಯ ವೇನೊ, ಅದೆಲ್ಲ ವಿಶಯ ಇರಲಿ ಒಬ್ಬ ವ್ಯಕ್ತಿ ಮಾನವನು ಅಥವಾ ದೆವರೋ ಅನ್ನುವುದಕ್ಕಿಂತ ಅವನು ಒಳ್ಳೆಯದು ಮಾಡಿದ್ದಾನೊ ಕೆಟ್ಟದ್ದು ಮಾಡಿದ್ದಾನೊ ಎನ್ನುವುದು ಬಹಳ ಮುಖ್ಯ, ನಿಮ್ಮ ಒನ್ದು ವರ್ತನೆಯನ್ನು ನಾನು ಅಬ್ಸವ್ರ್ ಮಾಡಿದ್ದೆನೆ ಅದೆನೆಂದರೆ ನೀವು ಮಾಡಿದ್ದನ್ನೆ ಬೇರೆ ಯಾರದದು ಮಾಡಿದ್ದರೆ ಅದನ್ನು ಹೈಲೆಟ್ ಮಾಡಿ ತೊರಿಸುತ್ತೀರ..(ವಿವರ ನಾಳೇ) , ಹಾಗು ಇಲ್ಲಿಗೆ ವಿವೇಕಾನಂದ , ಬುದ್ದರ ಪ್ರಸವ ತರುವ ಅವಸ್ಯಕತೆ ಇರಲಿಅಲ್ಲ, ಒಬ್ಬ ವ್ಯಕ್ತಿ ಶ್ರೇಶ್ಟನೇ ಆಗಿದ್ದರೆ.., ಅಗಿದ್ದರೆ ಅವನಿಂದ ಸಹಾಯ ಪದೆದ ಜನರು ಅವನನ್ನು ಪೂಜಿಸಿಕೊಳ್ಳಲಿ ತಪ್ಪೆಣು, ನರೇಂದ್ರ ಶಮ್ರ ನ ಬಗ್ಗೆ ನೀವು ಬರೆದಿದ್ದು ನುರು ಪರ್ಸೆಂತ್ ಸರಿಯಾಗಿದೆ. ಕೊನೆಗೆ ವಿಶ್ಣು ಬಗ್ಗೆ ..., ಕೊನೆಯ ದಿನಗಳಲ್ಲಿ ಮುಸ್ಲಿಮರಂತೆ ಗಡ್ಡ, ಸಿಖ್ಖರಂತೆ ತಲೆಗೆ ಬಟ್ಟೆ, ವ್ಯಾಮೋಹಿಯಂತೆ ಚಿನ್ನದ ಸರಗಳು, ಉಂಗುರಗಳು, ಹಿಂದು ಪ್ರವಾದಿಯಂಥಹ ವೇಷಬೂಷಣ..., ಲೇಟೆಸ್ಟ್ ಅಮೇರಿಕನ ಕ್ರಿಶ್ಚಿಯನ್ ನಂತೆ ನವೀನ ಶೈಲಿಯ ಕಪ್ಪು ಕನ್ನಡಕ ಹಾಕುತ್ತಿದ್ದ.., ಬುದ್ದನ ಮುಖಕಳೆ ಹೊಂದಿದ್ದ ವಿಷ್ಣುವರ್ದನ್ ಸಿನಿಮಾ ಹೀರೋನೆ..., ಅಥವಾ ಮುಸ್ಲಿಮ್ ಪ್ರವಾದಿಯೇ..., ಅಥವಾ ಸಿಂಹವೇ .., ಅವರನ್ನು ಬೇಟಿ ಮಾಡಿ ಇವೆಲ್ಲವನ್ನು ಬಿಟ್ಟು ಲಕ್ಶಣವಾಗಿ ಸೂಟ್ ಹಾಕಿಕೊಳ್ಳಿ ಪ್ಲೀಸ್... ಎಂದು ಗೋಗೆರೆದು ಬೇಡಿಕೊಳ್ಲಬೆಕು ಅಂದುಕೊಂಡಿದ್ದೆ.., ಅಶ್ಟರಲ್ಲಿ ನನ್ನನ್ನು ಒಂಟಿಯಾಗಿ ಬಿಟ್ಟು ಹೊರಟು ಹೋದರು. www.maruthivishnuvardhan.blogspot.com

    ReplyDelete
  10. ರೇಣುಕಾ ಅವರೆ, ನೀವು ಕೊಟ್ಟ ಪ್ರಜಾವಾಣಿ ಲೇಖನ ಚೆನ್ನಾಗಿದೆ. ಯೋಚನೆಗೆ ಹಚ್ಚುವಂಥಾದ್ದು.

    ReplyDelete