Saturday, July 30, 2011

ಪ್ರಾಣಿ ಬಲಿ: ಹಿಂಸೆಯ ವೈಭವೀಕರಣದ ದ್ವಂದ್ವ ಯಾಕೆ? ಡಾ.ಸತೀಶ್ ಪಾಟೀಲ್ ಪ್ರಶ್ನೆ


ಪ್ರಾಣಿ ಬಲಿ ಕುರಿತು ಡಾ. ಅರುಣ್ ಜೋಳದಕೂಡ್ಲಿಗಿ ಹಾಗೂ ರೂಪಾ ಹಾಸನ್ ಅವರು ಮಂಡಿಸಿರುವ ಚರ್ಚೆಗೆ ಕೊಟ್ಟೂರಿನ ಡಾ. ಸತೀಶ್ ಪಾಟೀಲ್ ಪ್ರತಿಕ್ರಿಯಿಸಿದ್ದಾರೆ. ಸದ್ಯ ಸಹಾಯಕ ಪ್ರಾಧ್ಯಾಪಕರಾಗಿರುವ ಸತೀಶ್ ಪಾಟೀಲ್ ಹಿಂದೆ ಮಾಧ್ಯಮ ಕ್ಷೇತ್ರದಲ್ಲೂ ಕೆಲಸ ನಿರ್ವಹಿಸಿದವರು. ಚರ್ಚೆ ಮುಂದುವರೆಯುತ್ತದೆ.-ಸಂಪಾದಕೀಯ


೩-೪ ವರ್ಷಗಳ ಹಿಂದೆ ಈಟಿವಿ ನ್ಯೂಸ್ ನಲ್ಲಿ ಬುಲೆಟಿನ್ ಪ್ರಡ್ಯೂಸರ್ ಆಗಿ ನಾನು ಕೆಲಸ ಮಾಡುತ್ತಿದ್ದೆ. ಒಮ್ಮೆ ಗುಲ್ಬರ್ಗ ಜಿಲ್ಲೆಯ ಹಳ್ಳಿಯೊಂದರಲ್ಲಿ ಸ್ತ್ರೀ ದೇವತೆಯ ಜಾತ್ರೆ ನಡೆದ ಸುದ್ದಿ ಬಂತು. ಆ ಜಾತ್ರೆಯಲ್ಲಿ ನೂರಾರು ಕುರಿ ಹಾಗೂ ಕೋಣಗಳನ್ನು ಬಲಿ ನೀಡಲಾಗಿತ್ತು. ಪ್ರಾಣಿ ಬಲಿ ನೀಡುವಾಗ ಸುತ್ತಲಿನ ಕೆಲವರು ಕೂಗುತ್ತಿದ್ದರೆ, ಇನ್ನು ಕೆಲವರು ಕೈ ಮುಗಿದು ನಿಂತಿದ್ದು ಕಾಣುತ್ತಿತ್ತು. ಆ ಪರಿಸರದಲ್ಲಿ ರಕ್ತದೋಕುಳಿ ಹರಿದಾಡಿತ್ತು..  ಮೌಢ್ಯತೆಯ ಪರಾಕಾಷ್ಠತೆಯಾಗಿರುವ ಈ ಭೀಕರ ಘಟನೆ   ಡೆಸ್ಕ್ ನಲ್ಲಿ ಚರ್ಚೆಗೆ ಕಾರಣವಾಯಿತು. ಜಾತ್ರೆಯಲ್ಲಿ ನಡೆದ ಭೀಕರ ಸನ್ನಿವೇಶ ವಿರೋಧಿಸಿ ಹೆಡ್ ಲೈನ್ ರೆಡಿ ಮಾಡಲು ನನಗೆ ಸೂಚಿಸಲಾಯಿತು. ಆದರೆ, ಅದಕ್ಕೆ ನಾನು ವಿರೋಧ ವ್ಯಕ್ತಪಡಿಸಿದೆ. ನನ್ನ ವಿರೋಧದ ನಡುವೆಯೂ ಆ ಘಟನೆ ಹೆಡ್ ಲೈನ್ ಆಗಿ ಈಟಿವಿ ನ್ಯೂಸ್ ನಲ್ಲಿ ಪ್ರಸಾರವಾಯಿತು.  

ಜಾತ್ರೆಯಲ್ಲಿ ನಡೆಯುವ ಪ್ರಾಣಿ ಬಲಿ ವಿರೋಧಿಸಿ ಸಾಮಾನ್ಯವಾಗಿ ಎಲ್ಲ ನ್ಯೂಸ್ ಚಾನೆಲ್ಗಳಲ್ಲೂ ಸುದ್ದಿ ಪ್ರಸಾರವಾಗುತ್ತವೆ. ಪತ್ರಿಕೆಗಳು ಸಾಕಷ್ಟು ಬಾರಿ ಇಂತಹ ಸುದ್ದಿ ನೀಡಿವೆ. ಅಂದು ನ್ಯೂಸ್ ಮುಗಿದ ಬಳಿಕ ನನ್ನ ವಿರೋಧಕ್ಕೆ  ಡೆಸ್ಕ್ ನಲ್ಲಿ ಕಾರಣ ಕೇಳಲಾಯಿತು. ಇಂತಹ ಆಚರಣೆಗಳ ಬಗ್ಗೆ ಮಾಧ್ಯಮಗಳು ವರ್ತಿಸುವ ರೀತಿಗೆ ನಾನು ತೀವ್ರವಾಗಿ ಆಕ್ಷೇಪ ವ್ಯಕ್ತಪಡಿಸಿದೆ. ಏಕೆಂದರೆ ಒಂದೆಡೆ ಪ್ರಾಣಿ ಬಲಿ ವಿರೋಧಿಸಿ ನ್ಯೂಸ್ ಮಾಡುವ ಮಾಧ್ಯಗಳು ಇನ್ನೊಂದೆಡೆ ಸವಿರುಚಿ, ಅಡುಗೆ ಮನೆ ಮುಂತಾದ ಕಾರ್ಯಕ್ರಮಗಳಲ್ಲಿ ಚಿಕನ್ ಬಿರಿಯಾನಿ, ಮಟನ್ ಫ್ರೈ ಮಾಡುವ ಬಗ್ಗೆ ಕಾರ್ಯಕ್ರಮ ಪ್ರಸಾರ ಮಾಡುತ್ತವೆ. ಕಾರ್ಯಕ್ರಮ ಮಾಡುವವರು ಕೂಡ ಪ್ರಾಣಿಯನ್ನು ಕೊಂದು ಈ ಕಾರ್ಯಕ್ರಮ ನಡೆಸುತ್ತಿದ್ದೇವೆ ಎನ್ನುವ ಪ್ರಜ್ಞೆಯಿಲ್ಲದೆ ಸಂಭ್ರಮದಿಂದ ವರ್ತಿಸುತ್ತಿರುತ್ತಾರೆ. ಪತ್ರಿಕೆಗಳಲ್ಲೂ ಇದೇ ಪರಿಸ್ಥಿತಿ ಇದೆ. ಪತ್ರಿಕೆಗಳ ಮುಖಪುಟದಲ್ಲಿ ಪ್ರಾಣಿ ಬಲಿ ವಿರೋಧಿಸಿದರೆ, ಪುರವಣಿಗಳಲ್ಲಿ ಚಿಕನ್, ಮಟನ್ ಮಾಡುವ ವಿಧಾನದ ಬಗ್ಗೆ ಪುಟಗಟ್ಟಲೆ ವಿವರ ಇರುತ್ತದೆ.  
 
ಸಿಟಿಯಲ್ಲಿ ಬದುಕುವ ನಾಗರಿಕರು ಎನಿಸಿಕೊಂಡವರು ಹಳ್ಳಿಗಳಲ್ಲಿ ಬದುಕುವ ಜನರನ್ನು ಹಾಗೂ ಅವರ ಆಚರಣೆಗಳನ್ನು ಅನಾಗರಿಕ, ಭೀಕರ ಎಂದು ಬಿಂಬಿಸುವ ಪ್ರಯತ್ನವಿದು.. ರೂಪ ಹಾಸನ್ ಕೂಡ ಇಂತಹುದೇ ಅಭಿಪ್ರಾಯ ಹೊಂದಿದ್ದಾರೆ. ಖಾಸಗಿಯಾಗಿ ನಡೆಯುವ ಪ್ರಾಣಿ ಬಲಿಯನ್ನು ಒಪ್ಪುವ ಅವರು, ಸಾಮೂಹಿಕ ಹಾಗೂ ಸಾರ್ವಜನಿಕ ಪ್ರಾಣಿಬಲಿಯಲ್ಲಿ ಹಿಂಸೆಯ ವೈಭವೀಕರಣವಾಗುತ್ತದೆ ಎಂದು ಪ್ರತಿಪಾದಿಸುತ್ತಾರೆ. ರೂಪ ಹಾಸನರ ಇಂತಹ ಸಮರ್ಥನೆಗೆ ಮಾಧ್ಯಮಗಳು ಕೂಡ ಹೊಣೆ ಹೋರಬೇಕು. ಏಕೆಂದರೆ ಜಾತ್ರೆಗಳಲ್ಲಿ ನಡೆಯುವ ಪ್ರಾಣಿಬಲಿ ಆಚರಣೆ ಅಲ್ಲಿದ್ದವರಿಗೆ ಭಕ್ತಿಯ ಸಂಗತಿಯಾಗಿರುತ್ತದೆ. ಆದರೆ, ಅದು ಡೆಸ್ಕ್‌ಗೆ ಬರುತ್ತಿದ್ದ ಹಾಗೆ ನಾಗರಿಕರ ಮನಸ್ಥಿತಿಗೆ ಸಿಲುಕಿ ಭೀಕರವಾಗಿ ಗೋಚರಿಸುತ್ತದೆ. ಡೆಸ್ಕ್‌ನಲ್ಲಿ ಕೂತಿರುವ ರೂಪ ಹಾಸನ್ ಅವರಂತಹ ನಾಗರಿಕರು, ತಮ್ಮದಲ್ಲದ ಬದುಕನ್ನು ಒಪ್ಪಲು ಸಿದ್ದರಿಲ್ಲ.  ಹೀಗಾಗಿಯೇ  ಜಾತ್ರೆಯ ಸಂದರ್ಭದಲ್ಲಿ ಭಕ್ತಿಯಿಂದ ಕೂಡಿದ ಪ್ರಾಣಿ ಬಲಿ ಆಚರಣೆ ಡೆಸ್ಕ್‌ನಲ್ಲಿ ಭೀಕರ ರೂಪ ಪಡೆದು ಮತ್ತೆ ಜನಸಾಮಾನ್ಯರಿಗೆ ಮೌಢ್ಯತೆಯ ಸುದ್ಧಿಯಾಗಿ ಪ್ರಸಾರವಾಗುತ್ತದೆ.  

ಕೆಲ ವಾರಗಳ ಹಿಂದೆ ಜನಶ್ರೀ ಚಾನೆಲ್ನಲ್ಲಿ ಪುನಿತ್ ರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಭೇಟಿ ನೀಡುವ ನಾನ್ ವೆಜ್ ಹೋಟೆಲ್ ಬಗ್ಗೆ ನ್ಯೂಸ್ ಮಾಡಲಾಯಿತು. ಆ ಹೋಟೆಲ್ ನಲ್ಲಿ ಮಾಡುವ ಮಟನ್ ಹಾಗೂ ಮುದ್ದೆಯ ರುಚಿಯ ಬಗ್ಗೆ ಅಲ್ಲಿನ ಗ್ರಾಹಕರಿಂದ ಮಾಹಿತಿ ಪಡೆಯಲಾಯಿತು.  ಇಡೀ ಸುದ್ದಿಯುದ್ದಕ್ಕೂ ಅದೊಂದು ಅತ್ಯುತ್ತಮ ಹೋಟೆಲ್ ಎನ್ನುವಂತೆ ಬಿಂಬಿಸಲಾಯಿತು. ಇಲ್ಲಿ ಕೂಡ ಪ್ರತಿ ದಿನ ಸಾಮೂಹಿಕವಾಗಿ ಕುರಿ ಹಾಗೂ ಕೋಳಿಗಳನ್ನು ಬಲಿಕೊಡಲಾಗುತ್ತದೆ ಎಂಬುದನ್ನು ಮರೆಯಬಾರದು. ಖಾಸಗಿಯಾಗಿ ನಡೆಯುವ ಪ್ರಾಣಿ ಬಲಿ ನಮ್ಮ ಕಣ್ಣಿಗೆ ಕಾಣುವುದಿಲ್ಲ ಎಂದಾಕ್ಷಣ ಅದು ಹಿಂಸೆಯ ವೈಭವೀಕರಣವಲ್ಲವೆ...

ಪ್ರಾಣಿಬಲಿ ನೀಡಬೇಕೆ ಅಥವಾ ಬೇಡವೇ ಎನ್ನುವುದಕ್ಕಿಂತ ಮುಖ್ಯವಾಗಿ ನಾವು ಯೋಚಿಸಬೇಕಿರುವುದು ತಮ್ಮ   ವಾದಗಳನ್ನು ಮಂಡಿಸುತ್ತಿರುವವರ ಉದ್ದೇಶಗಳೇನು ಎನ್ನುವುದನ್ನು ಅರಿಯಬೇಕಿದೆ. ಏಕೆಂದರೆ ಪ್ರಾಣಿಬಲಿಯನ್ನು ಸಮರ್ಥಿಸುತ್ತಿರುವ ಅರುಣ್ ಜೋಳದ ಕೂಡ್ಲಿಗಿಯವರು ಆ ಮೂಲಕ ಜನಸಮುದಾಯದ ಆಚರಣೆ ಹಾಗೂ ಅವರ ಸಾಂಸ್ಕೃತಿಕ ಅನನ್ಯತೆಯ ಬಗ್ಗೆ ಮಾತನಾಡುತ್ತಿದ್ದಾರೆ. ಪ್ರಾಣಿಬಲಿಯನ್ನು ಸರಳೀಕರಿಸದೆ ಅದರ ಹಿಂದಿರುವ ಸಮುದಾಯದ ಬದುಕುವ ಚೈತನ್ಯದ ಕುರಿತು ಆಲೋಚಿಸುತ್ತಿದ್ದಾರೆ. ಆದರೆ ರೂಪಾ ಹಾಸನ್ ಅವರ ವಾದದ ಹಿಂದೆ ಇರುವ ಉದ್ದೇಶವೇ ಬೇರೆ.. ತಾವು ಬದುಕುತ್ತಿರುವ ರೀತಿ ನೀತಿಗೆ ಸಾರ್ವಜನಿಕ ಪ್ರಾಣಿಬಲಿ ಎಂಬುದು ಅಸಹ್ಯ ಹಾಗೂ ಭೀಕರವಾಗಿ ಕಾಣುತ್ತಿರುವುದರಿಂದ ಅದನ್ನು ವಿರೋಧಿಸುತ್ತಿದ್ದಾರೆ. ಅದಕ್ಕವರು ಸಂವಿಧಾನದ ಸಮರ್ಥನೆಯನ್ನು ನೀಡುತ್ತಿದ್ದಾರೆ. ಆ ಮೂಲಕ ಹಳ್ಳಿಯ ಜನತೆ ಹಾಗೂ ಸಾಮಾನ್ಯ ಜನರು ತಮ್ಮ ಮೌಢ್ಯತೆಯನ್ನು ತೊರೆದು ಭಾರತದ ಸಂವಿಧಾನವನ್ನು ಒಪ್ಪಿಕೊಂಡು  ನಾಗರಿಕರಾಬೇಕೆಂದು ಒತ್ತಾಯಿಸುತ್ತಿದ್ದಾರೆ.. ಸಾಮಾನ್ಯರು ತಮ್ಮ ಮೌಢ್ಯತೆಯನ್ನು ತೊರೆದು ಇನ್ನಷ್ಟು ಸತ್ಪ್ರಜೆಗಳಾಗಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ.. ಆದರೆ ನಾಗರಿಕರಾಗಬೇಕಾದಾಗ ಅವರು ಯಾವುದನ್ನು ಹಾಗೂ ಯಾರನ್ನು ಅನುಸರಿಸಬೇಕೆಂಬುದು ಪ್ರಶ್ನೆ..  ಈ ಪ್ರಶ್ನೆಯನ್ನು ಅರ್ಥಪೂರ್ಣವಾಗಿ ಕೇಳಿಕೊಂಡರೆ ನಮ್ಮ ಸಂವಿಧಾನದಲ್ಲಿ ಇನ್ನಷ್ಟು ತಿದ್ದುಪಡಿಗಳಾಗಬಹುದು..

- ಡಾ. ಸತೀಶ್ ಪಾಟೀಲ್, 
ಸಹಾಯಕ ಪ್ರಾಧ್ಯಾಪಕರು,
ಕೊಟ್ಟೂರು.
ಬಳ್ಳಾರಿ ಜಿಲ್ಲೆ

10 comments:

  1. ಸತೀಶ್ ಅವರ ವಾದವೂ ಅರುಣ್ ಅವರ ವಾದದ ಮುಂದುವರಿಕೆಯ ಭಾಗವೇ ಆಗಿದೆ. ಜನಸಾಮಾನ್ಯರ ಭಕ್ತಿಯ ಪ್ರಾಣಿ ಬಲಿಯನ್ನು ಸತೀಶ್ ಸಮರ್ಥಿಸಿಕೊಳ್ಳುತ್ತಾರೆ. ಹೊಟೆಲ್ ಗಳಲ್ಲಿ, ಮಾಧ್ಯಮಗಳಲ್ಲಿ, ಪತ್ರಿಕೆಗಳಲ್ಲಿನ ಮಾಂಸದೂಟದೊಡನೆ ಅದನ್ನು ಸಮೀಕರಿಸುತ್ತಾರೆ. ಇದೂ ಸಹ ತಪ್ಪು ದಾರಿಗೆಳೆಯುವ ಪ್ರಯತ್ನವೇ. ಕಾನೂನು, ಸಂವಿಧಾನದ ಮೂಲಕ ಪ್ರಾಣಿಬಲಿಯನ್ನು ಗಮನಿಸುವುದು ಬೇಡ. ಕನಿಷ್ಟಪಕ್ಷ ಮಾನವೀಯ ಗುಣಗಳಿಂದಾದರೂ ಗಮನಿಸಬಹುದಲ್ಲವೇ? ’ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು’ ಎಂದ ಬಸವಣ್ಣನವರ ವಚನ ಅಹಿಂಸೆಯನ್ನು ಸೂಚಿಸುತ್ತದೆ. ಯಾವುದೇ ಶರಣರು, ಮಹಾತ್ಮರು ಅಹಿಂಸೆಯನ್ನೇ ತಿಳಿಸಿದ್ದಾರೆ. ದಯವಿರಬೇಕು ಸಕಲ ಪ್ರಾಣಿಗಳಲ್ಲಿ ಎಂಬ ಹೇಳಿಕೆಗೆ ತದ್ವಿರುದ್ಧವಾಗಿ ಇಲ್ಲಿ ವಾದಗಳನ್ನು ಮಂಡಿಸಲಾಗುತ್ತಿದೆ. ಒಟ್ಟಾರೆ ಪ್ರಾಣಿಗಳನ್ನು ಕೊಲ್ಲುವುದೇ ತಪ್ಪು. ಅದು ಜಾತ್ರೆಯಾಗಿರಲಿ, ಅತ್ಯಾಧುನಿಕ ಹೊಟೆಲ್ ಆಗಿರಲಿ, ಏನೇ ಆಗಿರಲಿ. ಕೊಲ್ಲುವುದಕ್ಕೆ ಭಕ್ತಿಯ ಲೇಪನ ಅಂಟಿಸುವುದು ನನಗೇನೋ ಕೊಲೆ ಮಾಡಲು ಬಳಸುವ ಚಾಕುವಿಗೆ ಬೆಣ್ಣೆಯನ್ನು ಅಂಟಿಸಿದಂತೆ ಅನಿಸುತ್ತಿದೆ.-ಅಪೂರ್ವ

    ReplyDelete
  2. ನಾಲ್ಕು ದಿನದ ಕೆಳಗೆ ಈ ವಿಷಯಕ್ಕೆ ಸಂಬಂದಪಟ್ಟಂತೆ ನಾನು ಬರೆದ ಕಾಮೆಂಟ್ ಇಲ್ಲಿ ಮತ್ತೆ ಪ್ರಸ್ತುತ ಎಂದನಿಸುತ್ತದೆ.

    "ಆಹಾರಕ್ಕಾಗಿಯೇ ಇರಲಿ, ದೇವರ ಹೆಸರಿನಲ್ಲಿ ಆಹಾರಕ್ಕಾಗಿಯೇ ಇರಲಿ ಪ್ರಾಣಿಬಲಿ (ಈಗ ನಡೆಯುತ್ತಿರುವಂತೆ) ಅನಾಗರೀಕವೇ!!! ಪ್ರಾಣಿ ಮಾಂಸ ಅನಿವಾರ್ಯವಾದರೆ ಮಾತ್ರ ಅದನ್ನು ಆಹಾರದ ಹಕ್ಕು ಎಂದು ಕರೆಯಬಹುದೇನೋ. ಆದರೆ ವ್ಯವಸಾಯ,ಹೈನುಗಾರಿಕೆ ಕಲಿತ ಮಾನವನಿಗೆ ಪ್ರಾಣಿಮಾಂಸ ಅನಿವಾರ್ಯವೇನಲ್ಲ.ಬಾಯಿಚಪಲ.(ವ್ಯವಸಾಯ ವೃತ್ತಿ ಮುಂಚಿನ ಮಾನವರಿಗೆ ಪ್ರಾಣಿಮಾಂಸ ಅನಿವಾರ್ಯವಾಗಿತ್ತೇನೋ). ಪ್ರಾಣಿಮಾಂಸ ತಿನ್ನದೇ ನಾವೆಲ್ಲಾ(ಹಾಗೂ ನಮ್ಮಂತ ಲಕ್ಷಾಂತರ ಜನ)ಬದುಕುತ್ತಿಲ್ಲವೇ?
    ಆದರೆ ಪ್ರಾಣಿವಧೆ ತಪ್ಪಿಸಲು ಸಾದ್ಯವಿಲ್ಲವೆಂಬುದು ಅಪ್ರಿಯ ಸತ್ಯ. ದೇವರ ಮುಂದೆ ಕಡಿಯದ ಪ್ರಾಣಿಗಳು ಮುಂದೊಂದು ದಿನ ಮತ್ತೆಲ್ಲೋ ಕಡಿಯಲ್ಪಟ್ಟು ಬಾಯಿಚಪಲ ತೀರಿಸಲು ತಟ್ಟೆ (ಆಮೇಲೆ ಹೊಟ್ಟೆ!!) ಸೇರುತ್ತವೆ!! ಪ್ರಾಣಿಗಳನ್ನು (ಅವು ಆಹಾರ ತಿನ್ನುತ್ತಾ ಸಂತೋಷದಿಂದಿರುವಾಗ) ಅವುಗಳಿಗೆ ಗೊತ್ತೇ ಆಗದಂತೆ ಆದುನಿಕ ಪದ್ದತಿಯಲ್ಲಿ (ಆ ಕೂಡಲೆ ಸಾಯುವಂತೆ ಅವಕ್ಕೆ ಗೊತ್ತಾಗದಂತೆ ಇಂಜಕ್ಷನ್ ಕೊಡುವುದರಿಂದ) ಕೊಲ್ಲುವುದು ಒಳ್ಳೆಯದು.

    ನಾವೆಷ್ಟೇ ನಮ್ಮನ್ನು ನಾವು ನಾಗರೀಕರೆಂದು ಬೆನ್ನು ತಟ್ಟಿಕೊಂಡರೂ ನಮ್ಮ ನಾಲಿಗೆ ಚಪಲಕ್ಕೆ ನಮ್ಮಿಂದ (ಕ್ರೂರವಾಗಿ) ಸಾಯುವ ಪ್ರಾಣಿಗಳ ಪಾಲಿಗೆ ನಾವೆಂದೆಂದೂ ಅನಾಗರೀಕರೆ!!!!"

    ReplyDelete
  3. ಇಲ್ಲಿ ಪ್ರಾಣಿ ಸಾಮೂಹಿಕವಾಗಿ ಬಲಿಯಾಗುತ್ತದೋ...ಖಾಸಗಿಯಾಗಿ ಬಲಿಯಾಗುತ್ತದೋ ಎಂಬುದು ಮುಖ್ಯವಲ್ಲ....ಧಾಮಿ೯ಕ ಅಚರಣೆ ಇರಲಿ ಅಥವಾ ಆಹಾರಕೋಸ್ಕರವಾಗಲೀ ಪ್ರಾಣಿ ಬಲಿ ಕೊಡೋದು ಹಿಂಸೆಯೆ.
    ಇನ್ನೂ ಮಾಧ್ಯಮಗಳಿಗೆ ತಮ್ಮಲ್ಲೇ ಗೊಂದಲವಿದೆ...ಕೆಲವೊಂದು ಧಾಮಿ೯ಕ ಮೂಡ ಆಚರಣೆಗಳನ್ನು ಬಯಲಿಗೆಳೆಯುವ ಮಾಧ್ಯಮಗಳು....ಟೆಲಿಶಾಪ್, ಕಪಟ ಜ್ಯೋತಿಷ್ಯ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವಂತೆ 'ಪ್ರಾಣಿ ಹಿಂಸೆ ಬಗ್ಗೆ ದ್ವಂದ್ವ ವಿಚಾರವಿದೆ.ಸದ್ಯ ಮಾಧ್ಯಮಗಳ ಈ ರೀತಿಯ ನಿಲುವುಗಳಿಂದ ವೀಕ್ಷಕನನ್ನು, ಓದುಗನನ್ನು ರಕ್ಷಿಸಬೇಕಿದೆ..............
    ಯಶೋಧರ.ವಿ.ಬಂಗೇರ

    ReplyDelete
  4. mamsahara avaravara aaharada aayke. aadare pranibali kanunina drushtiyinda aparadha. neevu bekiddara kanunige tiddupadi tarabeku. rupa hasana avaru kanunu baddavagiye barediddare
    rajendra

    ReplyDelete
  5. ಪಾಟೀಲರ ವಾದ ಸಮರ್ಥವಾಗಿದೆ ಎಂದೇ ಹೇಳ್ಬಹುದು....

    ReplyDelete
  6. bali yemba shabda idakkella kaarana "bali"yemba shabda kathoravaada bhaavaneyanna soochisuttade so bali yembudannu tegeduhaaki nodi naavu tarakaariyannu koyyuvaaga yaake bali yemba padavanna balsodilla? illi naavu balasuva shabdagale eegondalakke kaarana tarakaarigalige jeeva irrodilva?kandita irutte!aadre adanna kattarisuvaaga adu shbda maadade irabahudu atwa oddadade irabahudu atwa vikaaravaagi cheerade irabahudu aadre adakke jeeve ide jeeva ide andamele himse aage aagutte! alve? innu haalu veg or noveg?idakke yaaru sariyaada uttara koduttare?aahaara andamele veg non veg idde ide yellaarannu vegitarians annaagi maadoke saadhya ideya? illa andamele praani bali maadabaaradu annodakke arthaane illa alve?

    ReplyDelete
  7. ಮಾಂಸಾಹಾರ ಮತ್ತು ಪ್ರಾಣಿ ಬಲಿ ಎರಡು ಬೇರೆ ವಿಷಯಗಳು.. ಅನ್ಸುತ್ತೆ....

    ನೈಸರ್ಗಿಕ ವಾಗಿ ಬಂದ ಆಹಾರ ಸರಪಣಿ ಪದ್ದತಿಯನ್ಣಾ.. ವಿಶ್ಲೇಷಣೆಗೆ ತರುವುಡಂಕಿಂತ

    ಮೂಡನಂಬಿಕೆ , ಕಂಡಾಚಾರ , ಮೌದ್ಯ ಗಳ ಬಗ್ಗೆ.... ಅರಿವು ಮೂಡಿಸಬೇಕಾಗಿದೆ...

    ಧಾರ್ಮಿಕ ಆಚರಣೆ..ಹಿನ್ನೆಲೆಯನ್ನು.. ಕೂಡ ತಿಳಿದು ಕೊಳ್ಳಬೇಕಾಗಿದೆ...

    ReplyDelete
  8. ನಮ್ಮ ಹೋಸ್ಟೆಲ್ ಪಕ್ಕದ ಮನೆಯೊಂದರಲ್ಲಿ ನಡೆಯುವ ಭೂತ ಕೋಲದಲ್ಲಿ ಹರಕೆ ಕೋಳಿಗಳ ಬಲಿ ತುಂಬಾ ಕ್ರೂರವಾದ ರೀತಿಯಲ್ಲಿ ಇರುತ್ತದೆ.ಜೀವಂತ ಕೋಳಿಯ ಕಚ್ಚಿ ಎಳೆದು ರಕ್ತ ಕುಡಿಯುವವನ ಕೈಗೆ ಸಿಗದಂತೆ ಓಡುವ ಆ ಬಲಿ ಜೀವಗಳು,ಅವುಗಳ ಚೀರಾಟ..ಪೇಟೆ ಮನೆಯಲ್ಲೇ ನಡೆಯುವ ಈ ಮಾರಣ ಹೋಮವ ಕಂಡು ಕೈ ಮುಗಿಯುವ ಮಂದಿಯಲ್ಲಿ ಉಳ್ಳವರು ಹಾಗೂ ಬಲ್ಲವರೇ ಹೆಚ್ಚು!

    ReplyDelete
  9. ಚರ್ಚೆ ತುಂಬಾ ಚೆನ್ನಾಗಿ ನಡೆಯುತ್ತಿವೆ. ಒಂದು ನಿಟ್ಟಿನಲ್ಲಿ ಅರುಣ್‌ ಹಾಗೂ ಸತೀಶ್‌ ಅವರ ಚಿಂತನೆಗೆ ಪರ್ಯಾಯ ಚಿಂತನೆ ಎಂದರೆ ಅದು ಒಳ್ಳೆಯದೇ. ಆದರೆ ಇಲ್ಲಿ ಆಗುತ್ತಿರುವುದು ಬೇರೆಯ ಬಗೆಯ ದಾಸ್ಯದ ಚಿಂತನೆ. ವೈಧಿಕ ಪರಂಪರೆಯ ಹೇರಿಕೆ ಮನಸ್ಸಿನ ಭಿತ್ತಿಯಲ್ಲಿ ಹೇಗೆ ವಿಷ ವೃಕ್ಷವನ್ನು ಬೆಳೆಸುತ್ತದೆ ಎನ್ನುವುದಕ್ಕೆ ಸಾಂಕೇತಿಕವಾಗುವಂತಿದೆ. ಕೆಲ ವರ್ಷಗಳ ಹಿಂದೆ ಸಂಸ್ಕೃತಿಯ ಆಯಾಮಗಳ ಬಗ್ಗೆ ತೀರ ಗಂಭೀರವಾದ ಚರ್ಚೆಗಳು ನಡೆದಿದ್ದನ್ನು ಒಮ್ಮೆ ಅವಲೋಕಿಸಲೇ ಬೇಕು. ಸಂಸ್ಕೃತಿ ಎಂಬುದನ್ನು ಪ್ರಧಾನ- ಅಧಿನ, ಅಕ್ಷರಸ್ಥ- ಅನಕ್ಷರಸ್ಥ, ಪ್ರಧಾನ- ಪ್ರತಿ ಹೀಗೆ ನಾನಾ ಸ್ಥರಗಳಲ್ಲಿ ಚರ್ಚೆಗಳು ನಡೆದವು. ಆ ನಟ್ಟಿನಲ್ಲಿ ಬರಗೂರು ರಾಮಚಂದ್ರಪ್ಪ- ರಹಮತ್‌ ತರಿಕೇರಿಯವರನ್ನು ಸೇರಿದಂತೆ ನಾಡಿನ ದೊಡ್ಡ ದೊಡ್ಡ ಚಿಂತಕರು ಆ ನಟ್ಟಿನಲ್ಲಿ ಗಂಭೀರ ಚರ್ಚೆಯನ್ನು ನಡೆಸಿದ್ದಗ್ಯೂ, ರಹಮತ್‌ ಅವರ ಪ್ರತಿ ಸಂಸ್ಕೃತಿ ಪರಿಕಲ್ಪನೆ ವೈಯಕ್ತಿಕವಾಗಿ ನಾನೂ ಮೆಚ್ಚಿದ್ದು.

    ಕಾರಣ ಹೇಳಬೇಕೆಂದರೆ, ಹೇಗೆ ಸತ್ಯನಾರಾಯಣ ಪೂಜೆ ಒಂದು ಜನಾಂಗದ ಸಂಸ್ಕೃತಿಯಾಗಿ ನೆಲಗೊಂಡಿರುತ್ತದೆಯೋ, ಹಾಗಯೇ ಯಾವುದೇ ಕ್ಷುದ್ರ ದೇವತೆಗಳ ಪೂಜೆ ಕೂಡ ಸಂಸ್ಕೃತಿ ಆಗಿರುತ್ತದೆ, ಅದನ್ನು ಅಧೀನ ಎಂದಾಗಲೀ ಅಸಂಸ್ಕೃತಿ ಎಂದಾಗಲಿ ಹೇಳಲಾಗದೆ ಒಪ್ಪಿತ ಸಂಸ್ಕೃತಿಗೆ ಪರ್ಯಾಯ ನೆಲೆಯಲ್ಲಿ ಗುರುತಿಸಬೇಕಾಗುತ್ತದೆ. ಏನೇ ಹಬ್ಬ- ಜಾತ್ರೆ, ಪೂಜೆ- ಪುನಸ್ಕಾರಗಳು ನಮ್ಮ ನಮ್ಮ ಆಹಾರ ಸಂಸ್ಕೃತಿ ಆಧಾರದ ಮೇಲೆ ನರ್ಧಾರಿತವಾಗುತ್ತದೆ. ಬಿರಿಯಾನಿ ಬಯಸುವ ನಾವು ಮಾಂಸವನ್ನು ಹೇಗೆ ತರಲಾದೀತು ಹಿಂಸೆ ಇಲ್ಲದೆ ಎಂದು ಒಂದು ಕ್ಷಣ ಯೋಚಿಸಿದರೆ ಆ ಅರಿವು ಬರಬಹುದು. ಇಲ್ಲಿ ಅಪೂರ್ವ ಎಂಬುವರು ’ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು’ ಎಂದು ಅಹಿಂಸಾವಾದವನ್ನು ಪ್ರತಿಪಾದಿಸುವ ಮೂಲಕ ಬಸವಣ್ಣರ ವಚನವನ್ನೇ ತಪ್ಪಾಗಿ ವಿಶ್ಲೇಷಿಸಿದ್ದಾರೆ. ಇಲ್ಲಿ ಆ ಕುರಿಯ ಮುಗ್ಧತೆಯನ್ನು ಅವರು ಹೇಳಿದ್ದಾರೆ. ಇನ್ನೇನು ಕೆಲವೇ ಕ್ಷಣಗಳಲ್ಲಿ ತನ್ನ ಮರಣ ಎಂಬ ಅರಿವಿಲ್ಲದಿದ್ದರೂ ಬದುಕಿನ ಉತ್ಸಾಹ ಅದರಲ್ಲಿ ತುಂಬಿ ತುಳುಕುತ್ತಿದೆ. ತನ್ನ ಜೀವನುತ್ಸಹಕ್ಕೆ ಶಕ್ತಿ ತುಂಬಿಕೊಳ್ಳಲು ತಳಿರು ತಿನ್ನಲು ನಾಲಿಗೆ ಚಾಚುತ್ತದೆ. ಪಾಪ ಅದಕ್ಕೇನು ಗೊತ್ತು ಇನ್ನೇನು ಸ್ವಲ್ಪ ಹೊತ್ತಿಗೆ ಮತ್ತೊಬ್ಬರ ಹೊಟ್ಟೆ ಪಾಡಿಗೆ ಆಹಾರವಾಗುತ್ತೇನೆ ಎಂಬ ಸತ್ಯ. ಇದನ್ನು ಉದ್ದೇಶಿಸಿ ಬಸವಣ್ಣ ಹೇಳಿದ್ದಾರೆ ವಿನಃ ಅಹಿಂಸೆ ಎಂದಲ್ಲ.

    ಎಲ್ಲದಕ್ಕಿಂತ ಹೆಚ್ಚಾಗಿ ಮಾರಿ- ಆಚರಣೆ ಕೂಡ ತಲತಲಾಂತರದಿಂದ ರೂಢಿಯಲ್ಲಿರುವ ಪದ್ಧತಿ. ಈ ಪದ್ಧತಿ ಜಾರಿಗೊಳಿಸುವ ಮೂಲದ ಹಿಂದೆ ಕೂಡ ಇದೇ ಪುರೋಹಿತಶಾಹಿ ಮನಸ್ಸುಗಳು ಕೆಲಸಮಾಡಿವೆ ಎನ್ನುವದು ಬೇರೆ ಮಾತು. ಅದು ಕೂಡ ಒಂದು ದೊಡ್ಡ ಚರ್ಚೆಯಾಗುತ್ತದೆ ಎನ್ನುವುದಕ್ಕೆ ಎರಡು ಮಾತಿಲ್ಲ. ಅತ್ಯಂತ ದುಬಾರಿದಾಯಕವಾಗಬುಹುದಾದ ಇಂತಹ ಹಬ್ಬಗಳನ್ನು- ಉತ್ಸವಗಳನ್ನು ಉಳಿಸುವ ಮೂಲಕ ಶೂದ್ರವರ್ಗವನ್ನು ಸಾಲಗಾರರನ್ನಾಗಿ ಮಾಡುವ ಹುನ್ನಾರ ಇತ್ತು. ಇಂತಹ ಆಚರಣೆಗಳು ಈಗ ಅವೈಜ್ಞಾನಿಕ ಎನಿಸುವುದು ಸಹಜ. ಆದರೆ ಇದರ ಜೊತೆಗೆ ಸತ್ಯನಾರಾಯಣ ವ್ರತ ಕೂಡ ಅವೈಜ್ಞಾನಿಕ ಎಂಬುದನ್ನು ಒಪ್ಪಿಕೊಳ್ಳಬೇಕು. ಈಗ ಸದ್ಯ ಆಚರಿಸುವ ಶ್ರಾವಣ ಮಾಸದ ಮಂಗಳಗೌರಿ, ವರಹಮಹಾಲಕ್ಷ್ಮಿ.. ಇತ್ಯಾದಿ ಇತ್ಯಾದಿಗಳೆಲ್ಲ ಕೂಡ ಇದರಿಂದ ಹೊರತಾಗಿರುವುದಿಲ್ಲ. ಆಚರಣೆಯಲ್ಲಿ ಒಂದು ಶ್ರೇಷ್ಠ ಮತ್ತೊಂದು ಕನಿಷ್ಠ ಆಗಿರಲು ಸಾಧ್ಯವಿಲ್ಲ. ಆದ್ದರಿಂದ ಅರುಣ್‌- ಸತೀಶ್‌ ಅವರ ಚಿಂತನೆ ವೈಚಾರಿಕವಾಗಿದೆ. ಇಂತಹ ಚಿಂತನೆಗಳೇ ನಮ್ಮ ಸಮಾಜದ ಅಭಿವೃದ್ಧಿಗೆ ಪೂರಕ ಎನ್ನುವ ವಾದ ನನ್ನದು. ತಮ್ಮದೇನೀದೆ?

    ReplyDelete
  10. anonymous ಅವರು ತಿಳಿಸಿರುವಂತೆ ಬಸವಣ್ಣನವರ ವಚನವನ್ನು ನಾನು ತಪ್ಪಾಗಿ ಅರ್ಥೈಸಿಕೊಂಡಿದ್ದೇನೆ ಎಂದು ತಿಳಿಸಿದ್ದಾರೆ. ಬಹುಶ: ಅವರು ವಚನವನ್ನು ಪೂರ್ಣವಾಗಿ ಓದಿಲ್ಲವೆನಿಸುತ್ತಿದೆ. ’ಹಬ್ಬಕ್ಕೆ ತಂದ ಹರಕೆಯ ಕುರಿ ತೋರಣಕ್ಕೆ ತಂದ ತಳಿರ ಮೇಯಿತ್ತು. ಕೊಂದಹರೆಂಬುದನರಿಯದೆ ಬೆಂದ ಒಡಲ ಹೊರೆವುತ್ತಲ್ಲದೆ. ಅಂದಂದೆ ಹುಟ್ಟಿತ್ತು. ಅಂದಂದೆ ಹೊಂದಿತ್ತು. ಕೊಂದವರುಳಿವರೆ ಕೂಡಲ ಸಂಗಮದೇವಾ’ ಇದು ಪೂರ್ಣ ವಚನ. ಇದರಲ್ಲಿ ಕುರಿಯ ಜೀವನುತ್ಸಾಹವನ್ನು ತಿಳಿಸಲೆಂದೇ ಬಸವಣ್ಣನವರು ತಿಳಿಸಿರುವರೋ ಅಥವಾ ಅಹಿಂಸೆಯನ್ನು ತಿಳಿಸಲು ವಚನ ರಚಿಸಿರುವರೋ ತಿಳಿಸಬೇಕಾಗಿ ವಿನಂತಿ. ವಚನದ ಕೊನೆ ’ಕೊಂದವರುಳಿವರೆ’ ಎಂಬ ಶಬ್ದ ಯಾವ ಜೀವನೋತ್ಸಾಹಕ್ಕೆ ಸಂಕೇತ ಎಂಬುದನ್ನೂ ಅರ್ಥೈಸಬೇಕಾಗಿ ಕೋರಿಕೆ. ನನ್ನ ಉದ್ದೇಶ ಅದು ವ್ರತವೇ ಆಗಿರಲಿ, ಮಹಾಲಕ್ಷ್ಮಿ ಪೂಜೆಯೇ ಆಗಿರಲಿ, ಬಲಿಯೇ ಆಗಿರಲಿ ಅರ್ಥವಿಲ್ಲದ ಆಚರಣೆ, ಹಿಂಸೆ ಸರಿಯಲ್ಲ ಎಂಬುದು. ವಚನಕಾರರ ಉದ್ದೇಶವೂ ಅದೇ ಆಗಿತ್ತು ಎಂಬುದು ನನ್ನ ಅನಿಸಿಕೆಗೆ ಆಧಾರವಾಗಿದೆ. ಆಚರಣೆಯಲ್ಲಿ ಶ್ರೇಷ್ಠ ಕನಿಷ್ಠ ಎಂಬುದಿಲ್ಲ ನಿಜ. ಆದರೆ ಪ್ರಾಣಿ ಹಿಂಸೆಯಲ್ಲಿ ಶ್ರೇಷ್ಠತೆಯನ್ನು ಹುಡುಕುವುದೂ ಸರಿಯಲ್ಲ.ಕೊಲ್ಲುವುದು ತಪ್ಪೆಂದು ಹೇಳುವುದು ವೈದಿಕ ಸಂಸ್ಕೃತಿ ಹೇಗಾಗುತ್ತದೆ? ಹಾಗಾದರೆ ವಚನಕಾರರೆಲ್ಲ ವೈದಿಕ ಸಂಸ್ಕೃತಿಯವರೆ? ಹಿಂಸೆಯನ್ನೇ ಸಮಾಜದ ಅಭಿವೃದ್ಧಿಗೆ ಪೂರಕವೆನ್ನುವುದಾದರೆ ಅದು ಅವರ ಚಿಂತನೆಗೆ ಬಿಟ್ಟ ವಿಷಯ.-ಅಪೂರ್ವ

    ReplyDelete