Tuesday, August 2, 2011

ಪ್ರಾಣಿ ಬಲಿ: ಕಿರಣ್ ಗಾಜನೂರು ಬರೆದ ಟಿಪ್ಪಣಿಗಳು


ಪ್ರಾಣಿ ಬಲಿ ಕುರಿತ ಚರ್ಚೆಯನ್ನು ಡಾ. ಕಿರಣ್  ಎಂ. ಗಾಜನೂರು ಮುಂದುವರೆಸಿದ್ದಾರೆ. ನಮ್ಮ ಆಚರಣೆ ಮತ್ತು ಅವುಗಳ ವಿವರಣೆಯಲ್ಲಿರುವ ದ್ವಂದ್ವಗಳ ಕುರಿತು ಕಿರಣ್ ಲೇಖನ ಬೆಳಕು ಚೆಲ್ಲುವ ಯತ್ನ ನಡೆಸುತ್ತದೆ. ಚರ್ಚೆ ಮುಂದುವರೆಯುತ್ತದೆ. 
-ಸಂಪಾದಕೀಯ

ಸಂಪಾದಕೀಯ ತಾಣದಲ್ಲಿ ಪ್ರಾಣಿಬಲಿ ಕುರಿತು ನಡೆಯುತ್ತಿರುವ ಚರ್ಚೆ ಒಂದು ಅರ್ಥದಲ್ಲಿ (ನಮ್ಮ ಸಮಾಜವನ್ನು ನಾವು ಭೌದ್ಧಿಕವಾಗಿ ಅರ್ಥಮಾಡಿಕೊಂಡಿರುವ ದೃಷ್ಟಿಯಿಂದ) ಬಹಳ ಪ್ರಮುಖವಾದುದು ಇದರ ಕುರಿತಂತೆ ಹಲವಾರು ಜನ ಪ್ರತಿಕ್ರಿಯಿಸಿದ್ದಾರೆ. ಆ ವಾದಗಳನ್ನು ಗುರುತಿಸುವ ಮೂದಲು ನಮಗೆ ಆ ರೀತಿಯ ಗ್ರಹಿಕೆಗಳು ಹೇಗೆ ಬಂದವು ಎಂದು ನೋಡುವುದು ಅಂತ್ಯಂತ ಪ್ರಮುಖ ಮತ್ತು ಅಗತ್ಯ

ನಾವು ಆಳಲ್ಪಡುತ್ತಿರುವ  ನಮ್ಮ ಪ್ರಾತಿನಿಧಿಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಆಧಾರವಾಗಿರುವ ಉದಾರವಾದಿ ಮೌಲ್ಯಗಳೆಂದರೆ: ವ್ಯಕ್ತಿ ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವ. ಈ ಮೌಲ್ಯಗಳು ನಮಗೆ ಬಳುವಳಿಯಾಗಿ ಬಂದಿದ್ದು ಪಶ್ಚಿಮದಿಂದ. ನೂರಾರು ವರ್ಷಗಳ  ಕಾಲ ಯುರೋಪಿನಲ್ಲಿ ಅಸಮಾನತೆ ಮತ್ತು ಶೋಷಣೆಯ ವಿರುದ್ಧ ನಡೆದ ಹೋರಾಟದ ಫಲವಾಗಿ ಹುಟ್ಟಿಕೊಂಡ ಈ ಮೌಲ್ಯಗಳು ಕ್ರಮೇಣ ವಸಾಹತುಶಾಹಿಯ ಕಾಲದಲ್ಲಿ ಜಾಗತಿಕ ಮೌಲ್ಯಗಳೆಂದು ಗುರುತಿಸಲ್ಪಟ್ಟವು.

ಪಶ್ಚಿಮದ, ಪ್ರಮುಖವಾಗಿ ಯುರೋಪಿನ, ಜನರು ತಮ್ಮ ಸಂಸ್ಕೃತಿಯ ಚೌಕಟ್ಟಿನಲ್ಲಿ ಕಂಡುಕೊಂಡಂತಹ ರಾಜಕೀಯ, ಸಾಂಸ್ಕೃತಿಕ ಮೌಲ್ಯಗಳು ಜಗತ್ತಿನಾದ್ಯಂತ ಅನ್ವಯವಾಗುವ ಸಾರ್ವತ್ರಿಕ ಮೌಲ್ಯಗಳಾಗಿ ಹೇಗೆ ಪರಿವರ್ತನೆಗೊಂಡವು ಎನ್ನುವುದರ ಬಗ್ಗೆ ಸಾಕ? ಜಿಜ್ಞಾಸೆ ನಡೆದಿದೆ ಹಾಗು ನಡೆಯುತ್ತಲೂ ಇದೆ (ಓದಿ: ಎಡ್ವರ್ಡ ಸಯೀದ್, ಬಾಲಗಂಗಾಧರ, ಮತ್ತು ಆಧುನಿಕೋತ್ತರ ಚಿಂತಕರು). ವಸಾಹತು ದೇಶಗಳಲ್ಲಿ ಈ ಪ್ರಭಾವ ಬೇರೆಲ್ಲಿಗಿಂತಲೂ ಹೆಚ್ಚಾಗಿ ಕಂಡುಬರುತ್ತದೆ. ಭಾರತದ ಮೇಲೂ ಈ ಪ್ರಭಾವ ಬಹಳ ದಟ್ಟವಾಗಿದೆ ಎನ್ನುವುದನ್ನು ಇಲ್ಲಿ ಸ್ಪಷ್ಟಪಡಿಸಬೇಕಾದ ಅಗತ್ಯವಿಲ್ಲ. ಯುರೋಪಿನ ಸಂಸ್ಕೃತಿಯ ಧೃಷ್ಟಿಕೋನದ ಹಿನ್ನೆಲೆಯಲ್ಲಿ ನೋಡಿದಾಗ ಇತರ ಸಂಸ್ಕೃತಿಗಳ ಮೌಲ್ಯಗಳು ಉದಾರವಾದಿ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಪ್ರತಿರೋಧವಾಗಿ ಕಂಡು ಬಂದಿದ್ದು ಆಶ್ಚರ್ಯಕರವಾದ ಬೆಳವಣಿಗೆಯೇನೂ ಅಲ್ಲ. ಭಾರತದ ಸಾಂಪ್ರದಾಯಿಕ ಸಾಮಾಜಿಕ ವ್ಯವಸ್ಥೆ ಇಂತಹ ಮೌಲ್ಯಗಳಿಗೆ ವ್ಯತಿರಿಕ್ತವಾಗಿರುವುದರಿಂದ ಆಧುನಿಕ ಉದಾರವಾದಿ ಪ್ರಜಾಪ್ರಭುತ್ವಕ್ಕೆ ನಮ್ಮ ಸಮಾಜವನ್ನು ಸಜ್ಜುಗೊಳಿಸಲು ಸಾಮಾಜಿಕ ಸುಧಾರಣೆ ಅನಿವಾರ್ಯವೆನ್ನುವ ತೀರ್ಮಾನಕ್ಕೆ ನಮ್ಮ ಸಾಮಾಜಿಕ, ರಾಜಕೀಯ ಚಿಂತಕರು ಬಂದಿದ್ದು ಈ ಕಾರಣದಿಂದಲೆ.

ಭಾರತೀಯ ಚಿಂತಕರುಗಳಲ್ಲಿ ನಮ್ಮ ಸಮಾಜ ಮತ್ತು ಸಂಸ್ಕೃತಿಗಳಲ್ಲಿ ಬದಲಾವಣೆ ಆಗಬೇಕು ಎನ್ನುವುದರಲ್ಲಿ ಒಮ್ಮತದ ಅಭಿಪ್ರಾಯವಿದ್ದರೂ ಸಹ ಹಾಗೆ ಮಾಡಬೇಕಾದ ಬದಲಾವಣೆಗಳ ಉದ್ದೇಶ ಮತ್ತು ಸ್ವರೂಪದ ಬಗ್ಗೆ ವಿಭಿನ್ನ, ಪರಸ್ಪರ ವಿರೋಧಿ ನಿಲುವುಗಳನ್ನು ನಾವು ಗುರುತಿಸಬಹುದು (ರಾಜಾರಾಮ ಮೋಹನ್ ರಾಯ್‌ರವರಿಂದ ಹಿಡಿದು ಡಾ.ಬಾಬಾಸಾಹೇಬ್ ಅಂಬೇಡ್ಕರ್, ಮಹಾತ್ಮ ಗಾಂಧೀಜಿಯವರೆಗೆ ಅಂತಹ ಚಿಂತಕರ ಪಟ್ಟಿ ಮಾಡುತ್ತಾ ಹೋದರೆ ಅವರುಗಳಲ್ಲಿದ್ದ ಭಿನ್ನಾಬಿಪ್ರಾಯಗಳ ಅಗಾಧತೆ ಮತ್ತು ಸಂಕೀರ್ಣತೆಯ ಅರಿವು ನಮಗಾಗುತ್ತದೆ).

ತಮ್ಮ ತಾಣದಲ್ಲಿನ ನಡೆಯುತ್ತಿರುವ ಚರ್ಚೆಯು ಮೇಲಿನ ಬೌದ್ಧಿಕ ಚರ್ಚೆಯ ಹಿನ್ನೆಲೆಯಲ್ಲಿಯೇ ಸಾಗುತ್ತಿದೆ. ಅಂದರೆ ಇಲ್ಲಿ ವಾದಿಸುತ್ತಿರುವ ೨ ಗುಂಪಿನವರು ಭಾರತದ ಸಮಾಜದ ಕುರಿತಾದ ಪಶ್ಚಿಮದ ವಿವರಣೆಯನ್ನು  ಒಪ್ಪಿಕೊಂಡವರೇ ಅದ್ದರಿಂದ ಸಮಸ್ಯಯ ತಿರ್ವತೆಯ ಕುರಿತ (ಪ್ರಾಣಿಬಲಿ ವಿರೋಧ ಒಂದು ಜೀವ ಪರ ಕಾಳಜಿ) ಅವರ ಅಭಿಪ್ರಾಯಗಳು ಒಂದೇ ಆಗಿವೆ ಆದರೆ ಅದನ್ನು ಅರ್ಥಮಾಡಿಕೊಂಡು ಪರಿಹರಿಸಲು ಪ್ರಯತ್ನಿಸುತ್ತಿರುವ ಸೈಂಧಾಂತಿಕ ನೆಲೆಗಳು ಬೇರೆಯಾಗಿವೆ ಇದು ಇವರ ಸಮಸ್ಯೆ ಮಾತ್ರವಲ್ಲ ನಮ್ಮ ಸಾಮಾಜಿಕ ಸಮಸ್ಗಯೆಳ ಕುರಿತು ಮಾತನಾಡುವ ಬಹುಪಾಲು  ಸಮಾಜಶಾಸ್ತ್ರಜ್ಞಾರ ಸಮಸ್ಯೆ ಆಗಿದೆ.

ಏಕೆ ಒಂದೇ ವಿಷಯದ ಕುರಿತಾಗಿ ಚಿಂತಿಸುತ್ತಿರುವ ನಾವು ಭಿನ್ನ ಅಭಿಪ್ರಾಯ ಹೊಂದಿದ್ದೇವೆ? ಪ್ರಾಣಿಹತ್ಯೆ ಎಂಬುದು ಒಂದು ಜೀವ ವಿರೋಧಿ ಚಟುವಟಿಕೆ ಅನ್ನುವುದರ ಕುರಿತು ನಮ್ಮಲ್ಲಿ ಬಹುಜನರಿಗೆ ಸಮ್ಮತವಿದೆ. ಆದರೆ ಆ ಸಮಸ್ಯಯನ್ನು ಸೈದ್ಧಾಂತೀಕರಣಗೊಳಿಸಿ ಅದಕ್ಕೆ ಪರಿಹಾರ ಸೂಚಿಸುವಲ್ಲಿ ನಾವು ಚರ್ಚೆಗೆ ಬಿದ್ಧಿದ್ದೇವೆ. ಏಕೆ ಈ ವೈರುಧ್ಯ ಎಂದು ಗುರುತಿಸಲು ಪ್ರಯತ್ನಿಸಿದರೆ ಇತ್ತೀಚಿನ ಸಂಶೋಧನೆಗಳು ಹೊಸ ವಿಚಾರವನ್ನು ವಿವರಿಸುತ್ತವೆ. ಅದು ಯಾವುದೆಂದರೆ ಭಾರತೀಯ ಸಮಾಜ ಸಂಸ್ಕೃತಿಗಳನ್ನು ಅಧ್ಯಯನ ಮಾಡುತ್ತಿರುವ, ಅರ್ಥ್ಯೆಸುತ್ತಿರುವ ಆಧುನಿಕ ಬುದ್ದಿಜೀವಿಗಳು (ಭಾರತೀಯ ಮತ್ತು ಪಾಶ್ಚಾತ್ಯ) ಭಾರತೀಯ ಸಮಾಜ ಹಾಗು ಸಂಸ್ಕೃತಿಯನ್ನು ಯುರೋಪಿನ ಸಾಂಸ್ಕೃತಿಕ ಚೌಕಟ್ಟಿನಲ್ಲಿಯೆ ಅಧ್ಯಯನ ಮಾಡಿದ್ದಾರೆ.  ಭಾರತದ ಸಮಾಜ ವಿಜ್ಞಾನಗಳಲ್ಲಿ ಅಡಕವಾಗಿರುವ ಪರಿಕಲ್ಪನೆಗಳು ಮತ್ತು ವರ್ಗೀಕರಣ ಪದಗುಚ್ಚಗಳು (ಕೆಟೆಗರಿಸ್) ಕ್ರಿಶ್ಚಿಯನ್ ಥಿಯಾಲಜಿಯ ಮೂಲದಿಂದ ಬಂದವುಗಳಾದ್ದರಿಂದ ನಮ್ಮ ಸಮಾಜ ಮತ್ತು ಸಾಮಾಜಿಕ ಸಮಸ್ಯೆಗಳ ನಿಜರೂಪವನ್ನು ಗುರುತಿಸಲು ವಿಫಲವಾಗಿವೆ.

ಪಾಶ್ಚಾತ್ಯರು ಪ್ರಜ್ಞಾಪೂರ್ವಕವಾಗಿ ಇದನ್ನು ಮಾಡಿದ್ದಾರೆ ಅಂತಲ್ಲ ಬದಲಾಗಿ ಯುರೋಪಿನವರು ಬಂದ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಭಾರತೀಯ ಸಮಾಜದ ಸ್ವರೂಪವನ್ನು ಹಾಗೆ ಗುರುತಿಸದೆ ಅನ್ಯ ಮಾರ್ಗವೇ ಅವರಿಗಿರಲಿಲ್ಲ. ಒಂದು ರೀತಿಯಲ್ಲಿ ಇದು ಎರಡು ಭಾಗಗಳ ((East and west)  ನಡುವಿನ ಸಾಂಸ್ಕೃತಿಕ ಹಿನ್ನೆಲೆ ಅಲ್ಲಿರುವ ಜ್ಞಾನದ ಸ್ವರೂಪವನ್ನು ನಿರ್ಧರಿಸುವ ಪ್ರಶ್ನೆಯಾಗಿ ಕಾಡುತ್ತದೆ. ಇಲ್ಲಿನ ಸಮಸ್ಯೆ ಎಂದರೆ ಪಾಶ್ಚ್ಯಾತ್ಯರ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ನಿರೂಪಿತವಾದ ಭಾರತದ ಸಮಾಜದ ಕುರಿತಾದ ಈ ವಿವರಣೆ ಒಂದು ವೈಜ್ಞಾನಿಕ ನಿರೂಪಣೆ ಎಂದೇ ಸಮಾಜ ವಿಜ್ಞಾನದ ವಲಯದಲ್ಲಿ ಇಂದಿಗೂ ನಂಬಲಾಗಿದೆ. ಜೊತೆಗೆ ಈ ವಾದವೇ ಸಮಾಜ ವಿಜ್ಞಾನಗಳ ಎಲ್ಲಾ ಸಿದ್ಧಾಂತಗಳಿಗೆ ಮೆಟಾ ಥಿಯರಿಯಾಗಿ ಕೆಲಸಮಾಡಿದೆ.

ಆದ್ದರಿಂದ ಇಂದು ನಾವು ಪ್ರಮುಖವಾಗಿ ಕೇಳಬೇಕಾದ ಪ್ರಶ್ನೆ ಎಂದರೆ ಭಾರತೀಯ ಸಮಾಜದ ಸಮಗ್ರ ಗ್ರಹಿಕೆಯು ಪಾಶ್ಚ್ಯಾತ್ಯರ ಸ್ವ ಸಂಸ್ಕೃತಿಯ ಅನುಭವದ ನೆಲೆಯಲ್ಲಿ ರೂಪುಗೊಂಡಿದ್ದು, ಈ ಗ್ರಹಿಕೆಗಳನ್ನು ವಿವರಿಸುವ ಪರಿಕಲ್ಪನೆಗಳು ಅನೇಕ ಸಂಧಿಗ್ಧತೆಗಳಿಂದ ಕೂಡಿವೆ. ಈ ಸಂಧಿಗ್ದ ಪರಿಕಲ್ಪನೆಗಳ ಬಳಕೆ ಎಷ್ಟರ ಮಟ್ಟಿಗೆ ನಮ್ಮ ಸಾಮಾಜಿಕ ಆಗು-ಹೋಗುಗಳನ್ನು ಅಥವಾ ಭವಿಷ್ಯವನ್ನು ರೂಪಿಸಲು ಅಥವಾ ನಿರ್ವಚಿಸಲು ಸಾಧ್ಯ? ಎಂಬುದಾಗಿದೆ.

ಪ್ರಾಣಿಬಲಿ ಸರಿ ತಪ್ಪು ಎಂಬ ನಿರ್ಧಾರ ಮಾಡುವುದಕ್ಕಿಂತ ಪೂರ್ವದಲ್ಲಿ ಭಾರತ ಸಮಾಜದಲ್ಲಿ ಇಂತಹ ಆಚರಣೆಗಳ ಮಹತ್ವವೇನು ಎಂಬುದನ್ನು ಗುರುತಿಸಬೇಕು( ಇದುವರೆಗಿನ ಭಾರತದ ಆಚರಣೆಯ ಕುರಿತ ಪಾಶ್ಚಾತ್ಯ ವಿವರಣೆಗಳಿಗಿಂತ ಹೊರತಾದ ಸಂಶೋಧನೆಯಿಂದ) ನಂತರ ಅದರ ಸಾಧಕ ಭಾದಕಗಳ ಚರ್ಚೆಯಾಗಬೇಕು. ಆಗ ಯಾವುದಾದರೂ ಒಂದು ಪರಿಹಾರ ಸಾಧ್ಯವೇ ಹೊರತು ಈಗ ಲಭ್ಯವಿರುವ ಭಾರತ ಸಮಾಜದ ಕುರಿತ ಪಾಶ್ಚಾತ್ಯ ವಿವರಣೆಗಳ ಆಧಾರದ ಮೇಲೆ ಅಲ್ಲ. ಒಂದು ವೇಳೆ ಹೀಗೆಯೇ ಮುಂದುವರೆದರೆ ವೈಯಕ್ತಿಕವಾಗಿ ಮಾಂಸಹಾರಿಯಾದ ನಾನು ಸಾರ್ವಜನಿಕವಾಗಿ ಮಾಂಸಹಾರವನ್ನು ವಿರೋಧಿಸುವ ಅನೈತಿಕ ನಡವಳಿಗೆ ಹೋಗಬೇಕಾಗುತ್ತದೆ. ಏಕೆಂದರೆ ನನ್ನ ಮತ್ತು ನನ್ನ ಸಮುದಾಯದ ಆಚರಣೆ ನನಗೆ ಒಂದು ರೀತಿಯ (ಪ್ರಾಣಿ ಬಲಿ) ಜ್ಞಾನ ನೀಡಿದ್ದರೇ ನನ್ನ ಶಿಕ್ಷಣ ಅದಕ್ಕೆ ವಿರುದ್ಧವಾದ ಒಂದು ಅಭಿಪ್ರಾಯವನ್ನು ನೀಡುತ್ತಿದೆ. ಇದರ ಅರ್ಥ ನಮ್ಮ ಆಚರಣೆ ಮತ್ತು ಅವುಗಳ ಕುರಿತಾದ ವಿವರಣೆಯ ನಡುವೆ ಏಕತೆಯಿಲ್ಲದಿರುವುದು ಸ್ಪಷ್ಟವಾಗುತ್ತದೆ.

ಮೊದಲು ನಮ್ಮ ಅನುಭವಕ್ಕೆ ಬರುವ ಈ ವಿಷಯಗಳ ಕುರಿತ ದ್ವಂದ್ವ ನಿವಾರಣೆಯಾಗಬೇಕು. ಇಲ್ಲವಾದರೆ ಅರುಣ್ ಹೇಳಿದಂತೆ ಇದು ಒಂದು ಸಮುದಾಯದ ಆಹಾರದ ಹಕ್ಕು ಎಂಬಂತೆ ವಿವರಿಸಬೇಕಾಗುತ್ತದೆ. ಇಲ್ಲವಾದರೆ ರೂಪ ಹೇಳಿದಂತೆ ಇದು ಒಂದು ಜೀವವಿರೋಧಿ ಕೃತ್ಯ ಎಂಬುದನ್ನು ಒಪ್ಪಬೇಕಾಗುತ್ತದೆ. ವಿಪರ್ಯಾಸ ಅಂದರೆ ಎರಡರಲ್ಲಿ ಯಾವುದನ್ನು ಒಪ್ಪಿದರೂ ಸಮಸ್ಯೆ ಪರಿಹಾರವಾಗದೇ ಅಲ್ಲೇ ಉಳಿದಿರುತ್ತದೆ.. . . .

(ಪ್ರಸ್ತುತ ಲೇಖನಕ್ಕೆ  ಉದಾರವಾದಿ ಪ್ರಜಾಪ್ರಭುತ್ವದಲ್ಲಿ ಪ್ರಾತಿನಿಧ್ಯ ಹಾಗು ಕನಕಗೋಪುರ ವಿವಾದ, ಲೇಖನದ ಕೆಲವು ವಾದಗಳನ್ನು ಬಳಸಲಾಗಿದೆ. ಲೇಖಕ ಪ್ರೊ. ಜೆ ಎಸ್. ಸದಾನಂದ, ಕುವೆಂಪುವಿಶ್ವವಿದ್ಯಾನಿಲಯ)


-Dr.Kiran.MGajanur,
R.T.A.In Political Science, Directorate of Distance Education
Kuvempu university

11 comments:

  1. The article is good. But as I find, most of western countries adopt non vegetarian system in contrast to what has been mentioned here. However, the writer has not mentioned about the practice prevailing in India (our society and culture) in pre-historic period.
    How it is continuing or got changed over a period of time? Please any body clarify it. - Vittal Rao

    ReplyDelete
  2. ಜಾತಿ ಎನ್ನುವುದೂ ವಸಾಹತುಶಾಹಿಗಳ ಸೃಷ್ಟಿ ಎಂಬ ಅಂಶ ಯಾಕೆ ಈ ಲೇಖನದಲ್ಲಿ ಇಲ್ಲ.

    ReplyDelete
  3. ಕಿರಣ್ ಅವರ ಚರ್ಚೆ ಜಾಗತಿಕವಾಗುವ ಹಂಬಲದ ಕೂಸಿನಂತಿದೆ. ಆದರೂ ಅವರವಲ್ಲದ, ಆದರೆ ಕೆಲವು ಯೋಚಿಸಬಲ್ಲ ಸಂಗತಿಗಳ ಬಗ್ಗೆ ಗಮನಸೆಳೆದಿದ್ದಾರೆ. ಕಿರಣ್ ಹೇಳುವಂತೆ ಪಶ್ಚಿಮದ ಚಿಂತನೆಯ ಎಳೆಗಳು ನಮ್ಮ ಆಲೋಚನೆಯ ಆಳದಲ್ಲಿ ಬೆರೆತಿದೆ ಎನ್ನುವುದು ಸರಿಯೆ. ಇದನ್ನು ಕೆ.ವಿ.ಎನ್ `ಇನ್ನು ಕನ್ನಡಿಗಳು ಸಾಕು’ ಎನ್ನುತ್ತಾ, ರಹಮತ್ ತರೀಕೆರೆ ಅವರು `ಸಮುದಾಯಗಳು ಕಟ್ಟಿಕೊಳ್ಳುತ್ತಿರುವ ಪ್ರತಿಸಂಸ್ಕೃತಿ’ ಬಗ್ಗೆ ಬರೆಯುತ್ತಾ ಬಹು ಹಿಂದೆಯೇ ಪಶ್ಚಿಮದ ಸಂಸ್ಕೃತಿ ಚಿಂತನೆಯನ್ನು ಮೀರಲಾಗಿದೆ. ಇವಾವನ್ನೂ ಕಿರಣ್ ಓದಿದಂತಿಲ್ಲ. ಹಾಗಾಗಿ ಪಶ್ಚಿಮದ ಥಿಯರಿಗಳ ನೆನಪಿನಿಂದ ಕಿರಣ್ ಉರುಹೊಡೆದು ಪ್ರಶ್ನೆಗಳಿಗೆ ಉತ್ತರ ಬರೆವ ಉಮೇದಿನ ವಿದ್ಯಾರ್ಥಿಯಂತೆ ಇಲ್ಲಿ ಬರೆದಿದ್ದಾರೆ. ಹಾಗಾಗಿ ಇಲ್ಲಿ ಸ್ಪಷ್ಟತೆ ಇಲ್ಲ. ಪಶ್ಚಿಮದ ಕಣ್ಣುಗಳ ಮೂಲಕವೇ, ಪಶ್ಚಿಮದ ಆಲೋಚನೆಯನ್ನು ಮೀರುತ್ತಿದ್ದೇವೆಂದು ಹೇಳುವ ಸಂಸ್ಕೃತಿ ಚಿಂತಕರಾದ ಬಾಲಗಂಗಾಧರ, ಜೆ. ಸದಾನಂದ ಅವರ ಪ್ರಭಾವದಲ್ಲಿ ಕಿರಣ್ ಹೇಳಿದಂತಿದೆ. ಕಾರಣ ಇಲ್ಲಿನ ಚರ್ಚೆಗಳು ಎರಡು ದಶಕಗಳ ಹಿಂದೆಯೇ ಚರ್ಚೆಯಾದಂತಹವುಗಳು. ಕನ್ನಡದ್ದೇ ಆದ ದೇಸಿ ಆಲೋಚನಾ ಮಾದರಿಗಳನ್ನು ಕೆ.ವಿ.ನಾರಾಯಣ, ಪ್ರೊ.ರಹಮತ್ ತರೀಕೆರೆ ಮುಂತಾದವರ ಬರಹಗಳನ್ನು ಓದುವ ಮೂಲಕ ಕಿರಣ್ ತನ್ನ ಆಲೋಚನೆಯನ್ನು ಹರಿತ ಮಾಡಿಕೊಳ್ಳುವುದು ಒಳಿತು.
    -ಚಂದ್ರು, ಕನ್ನಡವಿಶ್ವವಿದ್ಯಾಲಯ, ಹಂಪಿ.

    ReplyDelete
  4. ’ಎರಡರಲ್ಲಿ ಯಾವುದನ್ನೂ ಒಪ್ಪಿದರೂ ಸಮಸ್ಯೆ ಪರಿಹಾರವಾಗದೇ ಉಳಿಯುತ್ತೆ’ ಬಹುಶ: ಡಾ.ಕಿರಣ್ ಅವರೂ ಗೊಂದಲದಲ್ಲಿದ್ದಂತೆ ತೋರುತ್ತದೆ. ಸ್ವಾಮಿ, ತಾತ್ವಿಕ, ಸೈದ್ಧಾಂತಿಕ ಎಂದೆಲ್ಲ ಬೌದ್ಧಿಕ ಕಸರತ್ತು ಮಾಡಿ ಹೇಳೋದನ್ನು ಬಿಟ್ಟು ನೇರವಾಗಿ ಹೇಳಬಹುದಲ್ಲವೆ? ಸಾಮಾನ್ಯ ಜನತೆಗೆ ಇವೆಲ್ಲ ಅರ್ಥವಾಗಲಾರದ್ದು. ಪಾಂಡಿತ್ಯ ಪ್ರದರ್ಶನಕ್ಕಿಂತ ಜನಸಾಮಾನ್ಯರ ಮಟ್ಟಕ್ಕೆ ಹೇಳಿ. ವಿಶ್ವವಿದ್ಯಾಲಯಗಳೆಲ್ಲ ಪಾಂಡಿತ್ಯದ ಗೊಂಬೆಗಳನ್ನು ತಯಾರುಮಾಡಿದ್ದೇ ಈ ಎಲ್ಲ ತರ್ಕಗಳಿಗೂ ಕಾರಣ. ಜನಸಾಮಾನ್ಯರ ಮಧ್ಯೆ ಹೋದರೆ ಎಲ್ಲವೂ ಸರಳೀಕರಣಗೊಳ್ಳುತ್ತವೆ. ಕಬ್ಬಿಣದ ಕಡಲೆಯ ಮಾತಿಗಿಂತ ಸುಲಿದ ಬಾಳೆಯ ಹಣ್ಣಿನ ರೀತಿಯಲ್ಲಿ ವಿಷಯ ಮಂಡನೆ ಮಾಡಲು ಇವರಿಗೇಕೇ ಸಂಕೋಚವೋ ಅರ್ಥವಾಗುತ್ತಿಲ್ಲ.-ಅಪೂರ್ವ

    ReplyDelete
  5. ಗೆಳೆಯ ಚಂದ್ರು ಅವರೇ ನಿಮ್ಮ ಮಾತು ಒಪ್ಪಬಹುದು ನಾನು ಇ ವಿಷಯದಲ್ಲಿ ಇನ್ನು ಕಲಿಯುತ್ತಿರುವವನು ಅಲ್ಲದೆ ನೀವು ಹೇಳಿದ ತರಿಕೆರೆ, ಕೆ.ವಿ ನಾರಾಯಣ ಇವರ್ ಕುರಿತು ಕುತೂಹಲ ಉಳ್ಳವನೇ ಕಂಡಿತ ಅವರನ್ನು ಓದಲೇಬೇಕು ಅಲ್ಲದೆ ಸಾಹಿತ್ಯದ ಕುರಿತ ಸಂಶೋದನೆಗಳು ಅದರಲ್ಲೂ ಕನ್ನಡ ಜನಪದ ಲೋಕದ ಕುರಿತ ಸಂಶೋದನೆಗಳು ಇ ನಿಟ್ಟಿನ ಪ್ರಯತ್ನಮಾದಿವೆ ಎಂಬ ಮಾತನ್ನು ಹಲವರು ಹೇಳಿದ್ದರೆ (ಪಶ್ಚಿಮ ಜನ್ಯ ಚಿಂತನೆಗೆ ಪರ್ಯಾಯವಾದ ದೇಸಿ ಚಿಂತನೆಗಳ ಮೂಲಕ ) ಆದರೆ ನಮ್ಮ ಸಮಾಜ ವಿಜ್ಞಾನಗಳ ಕುರಿತ ಸಂಶೋದನೆ ಇ ವಿಷಯದಲ್ಲಿ ಇನ್ನು ಮುಂದುವರೆಯಬೇಕಿದೆ ಉದಾಹರಣೆಗೆ ಒಂದು ಗಮನಿಸಿ ನಮ್ಮ ನಡುವೆ ನಮ್ಮ ಸಮಾಜದ ಕುರಿತು ಇರುವ ಬಹುಪಾಲು ಬೌದ್ದಿಕ
    ಚರ್ಚೆಗಳು ಒಂದು ಪಾಶ್ಚಾತ್ಯ ನೋಟವನ್ನು ಆಧುನಿಕತೆಯ ಹೆಸರಿನಲ್ಲಿ ತಿರಸ್ಕರಿಸುತ್ತವೆ/ಒಪ್ಪಿಕೊಳ್ಳುತವೆ, ಇಲ್ಲವಾದರೆ ಅದೇ ಅಧುನಿಕ ವಾದಸರಣಿಯನ್ನು ಬಳಸಿ ಭಾರತದ ಸನತನತೆಯನ್ನು ವಿರೋಧಿಸುತ್ತವೆ/ಬೆಂಬಲಿಸುತ್ತವೆ ದಲಿತ vs ಬ್ರಾಹ್ಮಣ್ಯ ಚಿಂತನೆಯಲ್ಲಿ ಇದನ್ನು ನೀವು ಬಹಳ ಪ್ರಮುಖವಾಗಿ ಗುರುತಿಸಬಹುದು. ಈಗ ನಮ್ಮ ಹುಡುಕಾಟ ಇವೆರಡಕ್ಕೂ ಪರ್ಯಾಯವಾದ ಮರ್ಗವಗಬೇಕು ಮತ್ತು ಅದು ನಮ್ಮ ಸಮಾಜವನ್ನು ಪ್ರತಿನಿಧಿಸಬೇಕು ಎಂಬ ಕುರಿತಾಗಿದೆ. ಇ ನಿಟ್ಟಿನಲ್ಲಿ ಯಾವುದೇ ಪ್ರಯತ್ನಗಳಗಿದ್ದರು ಅದು ಖಂಡಿತ ಸ್ವಾಗತಾರ್ಹ ತಮ್ಮ ಮಾಹಿತಿಗೆ ಧನ್ಯವಾದಗಳು


    -Dr.Kiran.MGajanur,
    R.T.A.In Political Science, Directorate of Distance Education
    Kuvempu university

    ReplyDelete
  6. ಕಿರಣ ಅವರೆ,

    ಬಾಲಗಂಗಾಧರ ಮತ್ತು ಜೆ. ಸದಾನಂದ ಅವರು ಹೊಸ ಚಿಂತನೆಗಳ ಕುರಿತು ತಿಳಿಸುತ್ತಿದ್ದಾರೆ ಎನಿಸುತ್ತಿದೆ. ಆದರೆ ನಿಮ್ಮ ಲೇಖನದಲ್ಲಿ ಅದು ಸ್ಪಷ್ಟವಾಗಿ ಮೂಡಿಬಂದಿಲ್ಲ. ಅವರ ಚಿಂತನೆಗಳ ಕುರಿತು ಇನ್ನಷ್ಟು ಮಾಹಿತಿಯನ್ನು ನೀಡಿ.

    ಸಂಯುಕ್ತ, ಹೊಸದುರ್ಗ

    ReplyDelete
  7. samyuktha e kondi prayatnisi


    http://cslcku.wordpress.com/2011/08/03/ಸಂಪ್ರದಾಯಗಳ-ಸುತ್ತ/

    ReplyDelete
  8. Pranibali Andare Hattey. adu pranidu athava yaaraddu aagirabahudu. adu tappallave. endu naanu helidare vedanta saaku maadi annabahudu. adakke istakke summanaguttene.
    -Manik Bhure (9845429001)
    (bhumandal.blogspot.com.)

    ReplyDelete
  9. ಪ್ರಾಣಿ ಬಲಿ ಮತ್ತು ಮಾಂಸಾಹಾರ ಸೇವನೆ ಒಂದೇ ಎಂಬ ಅರ್ಥದಲ್ಲಿ ಬಹಳಷ್ಟು ಮಂದಿ ವಾದಿಸುತ್ತಿರುವುದು ಸಮಂಜಸವಲ್ಲ. ಒಂದು ಆಹಾರ ಪದ್ದತಿಯನ್ನು ದೇವರ ಹೆಸರಿನಲ್ಲಿ ಸಾವಿರಾರು ಪ್ರಾಣಿಗಳನ್ನು ನಂಗೆ ಒಳ್ಳೆಯದಾಗುತ್ತದೆ ಎಂಬ ನಂಬಿಕೆಯಿಂದ ಸಾಯಿಸುವುದಕ್ಕೆ ಹೋಲಿಸುವುದು ಸರಿಯಲ್ಲ.
    Ashok.k.r

    ReplyDelete
  10. ಧನ್ಯವಾದ ಕಿರಣ್.
    http://cslcku.wordpress.com/2011/08/03/ಸಂಪ್ರದಾಯಗಳ-ಸುತ್ತ/, ನಲ್ಲಿ ತುಂಬಾ ಉತ್ತಮ ಚರ್ಚೆಗಳು ಮೂಡಿಬಂದಿವೆ. ನಿಮ್ಮ ಟಿಪ್ಪಣೆಯನ್ನು ಅರ್ಥಮಾಡಿಕೊಳ್ಳಲು ನೆರವಾಗುವಂತಹ ಲೇಖನಗಳು ಅಲ್ಲಿವೆ. ಆಸಕ್ತರು ಆ ಬ್ಲಾಗಿನ ಚರ್ಚೆಗಳನ್ನು ಒಮ್ಮೆ ನೋಡಬಹುದು.

    ಸಂಯುಕ್ತ, ಹೊಸದುರ್ಗ

    ReplyDelete
  11. ಪ್ರಾಣಿಬಲಿ ಮತ್ತು ಮಾಂಸಹಾರ ಇವೆರಡನ್ನು ಒಟ್ಟಿಗೆ ಸೇರಿಸಿ ಗೊಜಲು ಮಾಡಿದ್ದೀರ. ಮಾಂಸಹಾರ ನಮ್ಮ ದೇಹಕ್ಕೆ ಸಂಬಂಧಿಸಿದ್ದು. ಒಗ್ಗಿದ್ದು ಮಾತ್ರ ದೇಹ ಜೀರ್ಣಿಸಿಕೊಳ್ಳುತ್ತೆ ! ಅದು ಧರ್ಮವನ್ನು ಕೇಳುವುದಿಲ್ಲ.
    ಪ್ರಾಣಿಬಲಿ ಪ್ರತಿಶತ ತಪ್ಪು. ದೇವರ ದೈವದ ಹೆಸರಲ್ಲಿ ಕುರಿ ಕೋಳಿ ಬಲಿ ಕೊಡುವುದು ನಾನು ಕೂಡಾ ಬಾಲ್ಯದಿಂದ ನೋಡುತ್ತಲೇ ಬಂದಿದ್ದೇನೆ. ಅದು ಜನರಲ್ಲಿ ಒಂದು ರೀತಿಯ ಭಯ ಹುಟ್ಟಿಸುವುದಕ್ಕೆ ಹುಟ್ಟಿಕೊಂಡ ಆಚರಣೆಗಳು. ಅದನ್ನೆ ನಮ್ಮ ಸಂಸ್ಕೃತಿ ಅಂತಹ ತಿಳಿದಿರುವುದೇ ನಮ್ಮ ದೌರ್ಭಾಗ್ಯ . ಮಾಂಸಹಾರ ತಿನ್ನಲಿಕ್ಕೆ ಹಿರಿಯರು ಮಾಡಿಕೊಂದಿರುವ ನೆಪ ಮಾತ್ರ.

    ReplyDelete