Thursday, August 4, 2011

ಚಿಂತಾಮಣಿಯ ನರಮೇಧ: ಮಾಧ್ಯಮಗಳ ಹೊಣೆಗಾರಿಕೆಯ ಪ್ರಶ್ನೆಗಳು...


ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಚ್ಚವಾರ್ಲಪಲ್ಲಿ ಮತ್ತು ಯರ್ರಕೋಟಾದಲ್ಲಿ ಮಂಗಳವಾರ ಕಳ್ಳರು, ಮೋಸಗಾರರು ಎಂದು ಹೇಳಲಾದ ಹತ್ತು ಮಂದಿ ಹತರಾಗಿದ್ದಾರೆ. ಊರಿನ ಜನ ರೊಚ್ಚಿಗೆದ್ದು ಕೊಚ್ಚಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ನೆಲದ ಕಾನೂನಿನಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂಬ ವಿಶ್ವಾಸ ಕಳೆದುಕೊಂಡೋ, ಅಥವಾ ಅನೇಕ ಬಾರಿ ಮೋಸ, ದಗಾ, ಕಳ್ಳತನಕ್ಕೆ ಒಳಗಾಗಿ ಬೇಸತ್ತೋ ಆ ಊರಿನ ಜನ ರೊಚ್ಚು ತೀರಿಸಿಕೊಂಡಿದ್ದಾರೆ.

ನ್ಯಾಯಾಲಯದಲ್ಲಿ ನಂಬಿಕೆ ಕಳೆದುಕೊಳ್ಳುವಂತೆ ಮಾಡಿದ ಪ್ರಸ್ತುತ ವ್ಯವಸ್ಥೆ ಜತೆ ಜತೆಗೆ ನ್ಯಾಯಾಲಯದ ಹೊರಗೆ ವಿಚಾರಣೆಗೆ ಮುಂದಾಗುವ ಮಾಧ್ಯಮವೂ ಮೇಲಿಂದ ಮೇಲೆ ಹೆಚ್ಚುತ್ತಿರುವ ಇಂಥ ಘಟನೆಗಳಿಗೆ ಪ್ರೇರಣೆಯಾಗುತ್ತಿದೆ ಎಂದರೆ ಯಾವ ಮಾಧ್ಯಮ ಮಿತ್ರರು ಅನ್ಯಥಾ ಭಾವಿಸಬಾರದು. ಕೆಲ ಮಾಧ್ಯಮಗಳ ಬೇಜವಾಬ್ದಾರಿ ವರ್ತನೆ ಅಲ್ಲಿನ ಜನರಿಗೆ ತಮ್ಮ ರಾಕ್ಷಸೀ ಕೃತ್ಯಕ್ಕೆ ಸ್ಫೂರ್ತಿ ನೀಡಿದ್ದರೆ ಆಶ್ಚರ್ಯವಿಲ್ಲ.

ನಿಜ, ಈ ಘಟನೆಯನ್ನು ಮಾಧ್ಯಮಗಳು ನೇರ ದೃಶ್ಯಾವಳಿಯಲ್ಲಿ ವರದಿ ಮಾಡಿಲ್ಲ. ಆದರೆ, ಪೊಲೀಸು ಹಾಗು ನ್ಯಾಯಾಲಯಗಳಂಥ ಸಂಸ್ಥೆಗಳ ಮೇಲೆ ನಂಬಿಕೆ ಕಳೆದುಕೊಂಡ ಜನರ ಈ ತರಹದ ಪ್ರತಿಕ್ರಿಯೆಗಳ ಬೆಂಕಿಗೆ ತುಪ್ಪ ಸುರಿಯುತ್ತ ಬಂದಿರುವುದು ನಮ್ಮ ಮಾಧ್ಯಮಗಳೇ ಎಂಬುದು ಸುಳ್ಳಲ್ಲ. ಮಾಧ್ಯಮಗಳ ಈ ಸ್ವರೂಪದ ಪ್ರಚೋದನೆಗಳು ಇಂಥ ಘಟನೆಗಳಿಗೆ ಪರೋಕ್ಷ ಬೆಂಬಲವನ್ನು ಕೊಡುತ್ತಲೇ ಬಂದಿವೆ.

ಹೀಗೆ ಹತ್ತು ಜನರನ್ನು ಕೊಚ್ಚಿ ಕೊಂದ ದಿನವೇ, ಅದೇ ಕೋಲಾರದ ಇನ್ನೊಂದು ಹಳ್ಳಿಯಲ್ಲಿ ರೈತ ಮಹಿಳೆಯ ಸರ ಕದಿಯಲು ಹೋಗಿ ಸಿಕ್ಕಿಬಿದ್ದವನ ಪಾಡನ್ನು ಸುದ್ದಿವಾಹಿನಿಗಳು ಬಿತ್ತರಿಸುತ್ತಿದ್ದವು. ಅವನನ್ನು ಕಂಬಕ್ಕೆ ಕಟ್ಟಿ ಹಾಕಿ ಹೀನಾಯವಾಗಿ ಹಿಂಸಿಸುತ್ತಿದ್ದ ಹಸಿ ಹಸಿ ದೃಶ್ಯಗಳನ್ನು ಈ ನಾಡಿನ ಜನರಿಗೆ ಉಣಬಡಿಸಲಾಯಿತು.

ಇಂತಹ ದೃಶ್ಯಗಳು ಹೊಸತೇನಲ್ಲ. ರಾಷ್ಟ್ರೀಯ ವಾಹಿನಿಗಳಲ್ಲಿ ಇಂತಹ ದೃಶ್ಯಗಳು ಆಗಾಗ ಕಾಣ ಸಿಗುತ್ತವೆ. ಹಿಂಸೆಯ ವೈಭವೀಕರಣ ಟಿಆರ್‌ಪಿ ಹೆಚ್ಚಿಸಲು ಸಹಾಯಕ ಎಂದು ಮನಗಂಡಿರುವ ವಾಹಿನಿಗಳು ಅಂತಹದೇ ದೃಶ್ಯಗಳಿಗಾಗಿ ಹಾತೊರೆಯುವುದು ಸರ್ವೇ ಸಾಮಾನ್ಯ. ಕೆಲ ವಾಹಿನಿಗಳ ವರದಿಗಾರರಂತೂ ಹಿಂಸೆಯ ದೃಶ್ಯಗಳಿಗಾಗಿ ಸುದ್ದಿ ಮೂಲಗಳನ್ನು ಬುಕ್ ಮಾಡುತ್ತಾರೆ. ನಾವು ಬರುವ ತನಕ ನೀವು ಹಿಡಿದಿರುವವನನ್ನು ಪೊಲೀಸ್‌ಗೆ ಕೊಡಬಾರದು ಎಂಬ ಷರತ್ತಿನೊಂದಿಗೆ ಘಟನೆಯ ಸ್ಥಳಕ್ಕೆ ವರದಿಗಾರರು ಧಾವಿಸುತ್ತಾರೆ.

ಒಂದು ಪಕ್ಷ ಈಗಾಗಲೇ ಪ್ರತಿಸ್ಪರ್ಧಿ ಚಾನೆಲ್ ಸಿಬ್ಬಂದಿಗೆ ಹೊಡೆಯುವ ದೃಶ್ಯಗಳು ಸಿಕ್ಕಿದ್ದು, ತನ್ನ ಕೆಮರಾಕ್ಕೆ ಸಿಗಲಿಲ್ಲ ಎಂದರೆ, ವರದಿಗಾರರು ತಮ್ಮ ಕೆಮರಾಕ್ಕಾಗಿ ಮತ್ತೊಂದು ಸುತ್ತಿನ ಹಿಂಸೆಗಾಗಿ ಆಗ್ರಹಿಸುತ್ತಾರೆ. ಹಾಗೂ ಒಮ್ಮೆ ರೋಚಕ ದೃಶ್ಯಗಳು ಮಿಸ್ ಆದರೆ ವರದಿಗಾರರು ಸುದ್ದಿ ತಿಳಿಸಿ ಘಟನಾ ಸ್ಥಳಕ್ಕೆ ಕರೆಸಿದವರನ್ನು ಹೀಗಳೆಯುವುದಂತೂ ನಿಶ್ಚಿತ.

ನೋಡುಗ ವರ್ಗ ಹಿಂಸೆಯನ್ನು ವೈಭವೀಕರಿಸುವ ದೃಶ್ಯಗಳನ್ನು ವೀಕ್ಷಿಸಲು ಬಯಸಲು ಕಾರಣ ಎರಡು. ಸಹಜವಾಗಿ ಹಿಂಸೆ ಆಕರ್ಷಣೀಯ. ಅದೇ ಕಾರಣಕ್ಕೆ ಸಿನಿಮಾಗಳಲ್ಲಿ ಫೈಟಿಂಗ್ ದೃಶ್ಯಗಳಿರುತ್ತವೆ. ಅಷ್ಟ್ಯಾಕೆ, ಮನೆ ಪಕ್ಕದಲ್ಲಿ ಮಾರಾಮಾರಿ ನಡೆಯುತ್ತಿದ್ದರೆ ಜನ ನಿಂತು ನೋಡಲು ಬಯಸುತ್ತಾರೆ. ಎರಡನೇ ಕಾರಣ - ಸಂವಿಧಾನಾತ್ಮಕ ಮಾರ್ಗದಲ್ಲಿ ನ್ಯಾಯ ಪಡೆಯಲು ತೊಡಕಾದಾಗ ಅಥವಾ ತಡವಾದಾಗ ಮನುಷ್ಯ ಸಹಜವಾಗಿ ರೊಚ್ಚಿಗೇಳುತ್ತಾನೆ. ಹಾಗಾದಾಗ ಯಾರಾದರೂ ವೈಯಕ್ತಿಕ ನೆಲೆಯಲ್ಲಿ ತಪ್ಪಿತಸ್ಥನಿಗೆ ಶಿಕ್ಷೆ ನೀಡಲು ಮುಂದಾದರೆ  ಮನುಷ್ಯನ ಒಳಗೇ ಇರುವ ಕ್ರೌರ‍್ಯದ ವ್ಯಕ್ತಿತ್ವಕ್ಕೆ ಅದು ಆಕರ್ಷಣೀಯವಾಗುತ್ತದೆ.

ಅಂತೆಯೇ ಇದೇ ದೃಶ್ಯಗಳು ಪದೇ ಪದೇ ಟಿವಿ ವಾಹಿನಿಗಳಲ್ಲಿ ಬಿತ್ತರಗೊಳ್ಳುತ್ತಿದ್ದರೆ ಇತರರಿಗೆ ಪ್ರೇರಣೆಯಾದರೆ ಅಚ್ಚರಿಯೇನಿಲ್ಲ. ಕೋಲಾರದ ಎರಡು ಹಳ್ಳಿಗಳಲ್ಲಿ ನಡೆದಿರುವುದು ಇದೇ. ಮಾಧ್ಯಮ ಸಂಸ್ಥೆಗಳು ಇನ್ನಾದರೂ ಜವಾಬ್ದಾರಿಯಿಂದ ನಡೆದುಕೊಳ್ಳಲಿ.

ಕೊನೆ ಮಾತು: ವಿಚಿತ್ರ ನೋಡಿ, ಇದೇ ಕೋಲಾರ ಜಿಲ್ಲೆಯ ಕಂಬಾಲಪಲ್ಲಿಯಲ್ಲಿ ಸಾಲು ಸಾಲು ದಲಿತರ ಮನೆಗಳು ಬೆಂಕಿಗೆ ಆಹುತಿಯಾದವು, ಸಾಲು ಸಾಲು ಹೆಣಗಳು ಮಲಗಿದವು. ಇದುವರೆಗೆ ಯಾರಿಗೂ ಶಿಕ್ಷೆಯಾಗಲಿಲ್ಲ. ಆದರೆ, ಕಳ್ಳರು ಎಂದು ಹೇಳಲಾದ ಹತ್ತು ಮಂದಿಗೆ ಇನ್‌ಸ್ಟಂಟ್ ಆದ ಘೋರ ಶಿಕ್ಷೆಯನ್ನು ನೀಡಿದ್ದು ಅಲ್ಲಿಯ ಜನ.

1 comment:

  1. ನೀವು ಹೇಳಿರೋದೆಲ್ಲಾ ಸರಿಯಾಗಿಯೇ ಇದೆ. ಒಬ್ಬ ವರದಿಗಾರನಾಗಿ ನಾನು ಇಂತಹ ಸಂದರ್ಭಗಳನ್ನ ಎದುರಿಸಿದ್ದೇನೆ. ಮಹಿಳೆಯರನ್ನ ಚುಡಾಯಿಸೋನೊಬ್ಬನಿಗೆ ಹೊಡಿತೀವಿ ಬನ್ನಿ ಅಂತ ಒಬ್ಬ ಕರೆದಾಗ ನಾನು ಬರಲ್ಲ ಅಂದೆ. ಆದ್ರೆ ನಮ್ಮ ಪ್ರತಿಸ್ಪರ್ಧಿ ವರದಿಗಾರನೊಬ್ಬ ಆತ ಬರುವ ವಿಷಯವನ್ನೂ ಗುಟ್ಟಾಗಿಟ್ಟು ಒಬ್ಬನಿಗೆ ಹಿಗ್ಗಾಮುಗ್ಗಾ ಹೊಡೆಸಿ ಅದನ್ನ ಎಕ್ಸ್ ಕ್ಲೂಸಿವ್ ರಿಪೋರ್ಟ್‌ ಅಂತ ಕಳಿಸಿಕೊಟ್ಟ. ಆವತ್ತು ಡೆಸ್ಕ್ ನಿಂದ ಬೈಯಿಸಿಕೊಂಡ ನಂಗೆ ಈ ಕೆಲಸದ ಬಗ್ಗೆಯೇ ಅಸಹ್ಯ ಮೂಡಿತು. ವರದಿಗಾರನಾಗಿ ನಡೆಯೋ ವಿಷಯವನ್ನ ವರದಿ ಮಾಡೋದು ಬಿಟ್ಟು ಸುದ್ದಿಯನ್ನ ಸೃಷ್ಟಿಸುವುದು, ಹಿಂಸೆಗೆ ಪ್ರಚೋದಿಸೋನೇ ಒಳ್ಳೆ ವರದಿಗಾರ ಅನ್ನೋ ಮಟ್ಟಿಗೆ ಚಾನೆಲ್ ಗಳು ತಲುಪಿ ಬಿಟ್ಟಿವೆ. ನ್ಯಾಷನಲ್ ಮೀಡಿಯಾದಲ್ಲಿ ಹಂಗೆಲ್ಲಾ ಹೊಡೆಯೋದನ್ನ 'ಧರ್ಮದೇಟು' 'ಕಾಮುಕನಿಗೆ ಬಿತ್ತು ಸಖತ್ ಗೂಸಾ' ಅಂತೆಲ್ಲಾ ತೋರಿಸಲ್ಲ. ಅದನ್ನ ಖಂಡಿಸುವ ಧ್ವನಿಯಾದ್ರೂ ಅಲ್ಲಿರತ್ತೆ. ಆದ್ರೆ ಇಲ್ಲಿ? ಬಹುಶ: ಚಾನೆಲ್ ಚುಕ್ಕಾಣಿ ಹಿಡಿಯೋರು ವಿವೇಕವಂತರಾಗೋವರೆಗೂ ಹಿಂಸೆ ಟಿ.ಆರ್.ಪಿ. ವಿಷ್ಯುವಲ್ ಆಗಿಯೇ ಮುಂದುವರೆಯುತ್ತದೆ. ಇದರೆದುರು ನನ್ನಂತಹವರು ಅಸಹಾಯಕರು.

    ReplyDelete