Sunday, August 21, 2011

ಜನಲೋಕಪಾಲ ಬೇಕು, ಆದರೆ ಈ ದಾರಿಯಿಂದ ಅಲ್ಲ....


ಅಣ್ಣಾ ಹಜಾರೆ ಪ್ರಾಮಾಣಿಕರು, ಭ್ರಷ್ಟಾಚಾರದ ವಿರುದ್ಧದ ಹೋರಾಟದ ಕುರಿತ ಅವರ ಬದ್ಧತೆ ಪ್ರಶ್ನಾತೀತ. ಕಾಂಗ್ರೆಸ್ ನಾಯಕರು ಮತ್ತು ಯುಪಿಎ ಸರ್ಕಾರ ಏನೇ ಹೇಳಲಿ, ಟೀಂ ಅಣ್ಣಾ ಮೇಲೆ ಏನೇ ಗೂಬೆ ಕೂರಿಸಲಿ ಅದು ಅಣ್ಣಾ ಹಜಾರೆಯವರ ನ್ಯಾಯನಿಷ್ಠೆಗೆ ಧಕ್ಕೆಯುಂಟು ಮಾಡಲಾರದು. ಆದರೆ ಈ ಸಂದರ್ಭದಲ್ಲಿ ನಾವೆಲ್ಲರೂ ಕೇಳಿಕೊಳ್ಳಲೇಬೇಕಾದ ಬಹುಮುಖ್ಯ ಪ್ರಶ್ನೆಯೊಂದಿದೆ. ಪ್ರಾಮಾಣಿಕತೆ, ಬದ್ಧತೆ ಹಾಗೂ ನ್ಯಾಯನಿಷ್ಠೆಗಳು ಮಾತ್ರ ಒಂದು ಚಳವಳಿಯನ್ನು ಯಶಸ್ವಿಗೊಳಿಸುತ್ತವಾ?


ಈ ಕುರಿತು ನನ್ನ ಅಭಿಪ್ರಾಯ ಹಂಚಿಕೊಳ್ಳುವ ಮುನ್ನ ಹೇಳಿಬಿಡುತ್ತೇನೆ. ಜನಲೋಕಪಾಲ ಜಾರಿಗಾಗಿ ಬೆಂಗಳೂರಿನಲ್ಲಿ ಚಳವಳಿ ಆರಂಭಗೊಂಡ ಸಂದರ್ಭದಲ್ಲಿ ನಡೆದ ರ‍್ಯಾಲಿಯಲ್ಲಿ, ನಂತರ ಫ್ರೀಡಂ ಪಾರ್ಕಿನಲ್ಲಿ ನಡೆದ ಧರಣಿಯಲ್ಲಿ ನಾನು ಪಾಲ್ಗೊಂಡಿದ್ದೆ. ಸಮಾಜದ ವಿವಿದ ಜನವರ್ಗಗಳು ಸ್ಟ್ರೈಕು, ಧರಣಿ ಅಂತೆಲ್ಲಾ ನಡೆಸುವಾಗ ಮುಖ ಸಿಂಡರಿಸಿಕೊಂಡು ಹೋಗುತ್ತಿದ್ದ ಐಟಿ ಗಯ್‌ಗಳು ಅಲ್ಲಿ ಅಂದು ಹೋರಾಟದ ಹುಮ್ಮಸ್ಸಿನಲ್ಲಿ ಕುಳಿತದ್ದು ಕಂಡು ಬಹಳ ಖುಷಿಗೊಂಡಿದ್ದೆ. ನಂತರ ಇತ್ತೀಚೆಗೆ ಅಣ್ಣಾ, ಕಿರಣ್ ಬೇಡಿ, ಕೇಜ್ರಿವಾಲ್ ತಂಡ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆಸಿದ ಸಭೆಯಲ್ಲಿ ಪಾಲ್ಗೊಂಡಿದ್ದೆ. ಕೇಜ್ರಿವಾಲ್ ಅವರು ತಮ್ಮ ಕರಡಿನ ಪರವಾಗಿ ಮಂಡಿಸಿದ ಪ್ರತಿಯೊಂದಕ್ಕೂ ಅಲ್ಲಿದ್ದ ಎಲ್ಲರಂತೆ ನಾನೂ ಬೆಂಬಲ ಸೂಚಿಸಿದ್ದೆ. ಸರ್ಕಾರಿ ಲೋಕಪಾಲ ಮಸೂದೆಯನ್ನು ಎಲ್ಲರಂತೆ ನಾನೂ ಖಂಡಿಸಿದೆ. ಅರವಿಂದ ಕೇಜ್ರಿವಾಲ್ ಕರಡು ರಚಿಸಿ ಪ್ರಶಾಂತ್ ಭೂಷಣ್ ಹಾಗೂ ಶಾಂತಿ ಭೂಷಣ್ ತಿದ್ದುಪಡಿ ಮಾಡಿರುವ ಜನಲೋಕಪಾಲ ಕರಡನ್ನು ಪೂರ್ತಿ ಓದಿ ಅರ್ಥಮಾಡಿಕೊಂಡ ಮೇಲೆ ನನಗೆ ಪ್ರಾಮಾಣಿಕವಾಗಿ ಅನ್ನಿಸಿರುವುದೇನೆಂದರೆ ಅದು ಜಾರಿಯಾಗಬೇಕು ಎನ್ನುವುದು. ಅದು ಭ್ರಷ್ಟಾಚಾರವನ್ನು ಪೂರ್ತಿ ನಿರ್ಮೂಲಿಸುವುದಿಲ್ಲ ಎನ್ನುವುದು ನಿಜವಾದರೂ ಭ್ರಷ್ಟರಿಗೆ ಮೂಗುದಾಣವನ್ನಂತೂ ಹಾಕುವುದರಲ್ಲಿ ಸಂಶಯವಿಲ್ಲ.  ಈ ದೇಶದಲ್ಲಿ ತಾಂಡವವಾಡುತ್ತಿರುವ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಕಂಡು ಸಹಜವಾದ ಸಿಟ್ಟು ಆಕ್ರೋಶ ಎಲ್ಲರಿಗಿರುವಂತೆ ನನಗೂ ಇರುವುದು ವಿಶೇಷವೇನಲ್ಲ. ಅದಕ್ಕಾಗಿ ಏನಾದರೂ ಪರಿಹಾರ ಬೇಕೆಂದು ಪರಿತಪಿಸುತ್ತಿರುವ ಕೋಟ್ಯಾಂತರ ಜನರಲ್ಲಿ ನಾನೂ ಒಬ್ಬ. ಭ್ರಷ್ಟಾಚಾರದ ಕಾರ್ಗತ್ತಲಿನಲ್ಲಿ ಜನಲೋಕಪಾಲವು ಒಂದು ಸಣ್ಣ ಬೆಳಕಿಂಡಿ ಎನ್ನುವುದು ನನ್ನ ಅಭಿಪ್ರಾಯ.


ಇದಿಷ್ಟು ನನ್ನ ಆಂಟಿಸಿಪೇಟರಿ ಬೇಲ್.


ಈಗ ವಿಷಯಕ್ಕೆ ಬರೋಣ. ಬರೀ ಪ್ರಾಮಾಣಿಕತೆ, ಬದ್ಧತೆಗಳು ಯಾವ ಹೋರಾಟವನ್ನೂ ಯಶಸ್ವಿಗೊಳಿಸಲು ಸಾಧ್ಯವಿಲ್ಲ. ಚಳವಳಿಯ ಯಶಸ್ಸಿಗೆ ಅತ್ಯವಶ್ಯಕವಾಗಿ ಬೇಕಾದದ್ದು ವ್ಯವಸ್ಥಿತ ಸಂಘಟನೆ ಹಾಗೂ ದೂರದೃಷ್ಟಿ. ಅಣ್ಣಾ ಹಜಾರೆಯವರು ಬಂಧಿತರಾದ ನಂತರದಲ್ಲಿ ಇಡೀ ಚಳವಳಿ ಒಂದು ನೆಗೆತವನ್ನು  ಸಾಧಿಸಿರುವ ಹೊತ್ತಿನಲ್ಲಿ ಕೊಂಚ ಹಿಂತಿರುಗಿ ನೋಡಿದರೆ ಸ್ಪಷ್ಟವಾಗಿ ತೋರುವುದೆಂದರೆ ಈ ಚಳವಳಿಗೆ ವ್ಯವಸ್ಥಿತ ಸಂಘಟನೆಯಾಗಲೀ ದೂರದೃಷ್ಟಿಯಾಗಲೀ ಇಲ್ಲ ಎನ್ನುವುದು. ಈ ಸಂಘಟನೆ ಎಷ್ಟೊಂದು ಜಾಳುಜಾಳಾಗಿದೆ ಎಂದರೆ ಅಣ್ಣಾ ಹಜಾರೆಗೆ ಬಿಡಿ ಸ್ವತಃ ಕೇಜ್ರೀವಾಲ್, ಕಿರಣ್ ಬೇಡಿಯವರಿಗೇ ಅದರ ಮೇಲೆ ಹಿಡಿತ ಇಲ್ಲ. ಬೆಂಗಳೂರಿನಲ್ಲಿ ಚಳವಳಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವವರು ಲೋಕಸತ್ತಾ ಪಾರ್ಟಿ ಹಾಗೂ ರವಿಶಂಕರ್ ಗುರೂಜಿ ಶಿಷ್ಯರು. ಇವರಿಬ್ಬರಿಗೂ ಪ್ರತ್ಯೇಕ ಅಜೆಂಡಾಗಳಿವೆ. ಬಿಜೆಪಿ ಹಾಗೂ ಅಬ್ಬರಿಸಿ ಬೊಬ್ಬಿಡುವ ವಿದೂಷಕರ ಪರಿಷತ್ತಿನವರು ಹೋರಾಟವನ್ನು ಬೆಂಬಲಿಸಿ ಪ್ರತಿಭಟನೆ ಮಾಡಿದ್ದಾರೆ. ಆದರೆ ಅಣ್ಣಾ ಅವರ ಜನಲೋಕಪಾಲದ ಬಗೆಗೆ ಅವರಿಗೆ ಸಂಪೂರ್ಣ ಭಿನ್ನಾಭಿಪ್ರಾಯವಿದೆ. ಅಂದರೆ ಅವರಿಗೆ ಈ ದೇಶದಲ್ಲಿ ಭ್ರಷ್ಟಾಚಾರ ನಿಯಮತ್ರಣವಾಗುವುದು ಬೇಕಾಗೇ ಇಲ್ಲ. ಅವರ ಹಿಡನ್ ಅಜೆಂಡಾ ಏನಿದ್ದರೂ ಕಾಂಗ್ರೆಸ್ ಬೀಳಿಸುವುದು. ಮೊನ್ನೆ ಸಂತೋಷ್ ಹೆಗಡೆ ವರದಿ ನೀಡಿದ್ದ ದಿನವೇ ಎಬಿವಿಪಿ ಕೇಂದ್ರದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿತ್ತು. ಯಡಿಯೂರಪ್ಪನವರ ಭ್ರಷ್ಟಾಚಾರವನ್ನು ಕನಿಷ್ಠ ಖಂಡಿಸುವ ಪ್ರಾಮಾಣಿಕತೆಯನ್ನು ಎಬಿವಿಪಿ ತೋರಲಿಲ್ಲ ಎನ್ನುವುದೇ ಅದರ ಇಬ್ಬಂದಿತನವನ್ನು ತೋರಿಸುತ್ತದೆ. ಇದೆಲ್ಲಾ ಟೀಂ ಅಣ್ಣಾಗೆ ತಿಳಿದಿಲ್ಲವೇ? ತಿಳಿದೂ ಇಂತಹವರನ್ನು ದೂರ ಇಟ್ಟು ಚಳವಳಿಯ ಪರಿಶುದ್ಧತೆಯನ್ನು ಕಾಪಾಡಿಕೊಳ್ಳದಿದ್ದರೆ ಅಂತಿಮವಾಗಿ ದುರ್ಬಲಗೊಳ್ಳುವುದು ಇಡೀ ಚಳವಳಿಯೇ ಅಲ್ಲವೇ? ಬೆಂಗಳೂರಿನಲ್ಲಿ ಭಾಷಣ ಮಾಡಿದ ಅಣ್ಣಾ ರಾಜ್ಯಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಂದೇ ಒಂದು ಮಾತಾಡಿದ್ದರೂ ಸಮಾಧಾನವಾಗುತ್ತಿತ್ತು. ಆದರೆ ಅವರಿಗ್ಯಾಕೆ ಜಾಣಕುರುಡು ಎಂದು ತಿಳಿಯಲಿಲ್ಲ.


ನಿಜ. ಇಂದು ಇಡೀ ದೇಶದಲ್ಲಿ ಒಂದು ಗಣನೀಯ ಮಟ್ಟದ ಜನರನ್ನು ಕದಲಿಸುವ ಶಕ್ತಿ ಇದ್ದರೆ ಅದು ಅಣ್ಣಾ ಹಜಾರೆಗೆ ಮಾತ್ರ. ಅದು ಮಾಧ್ಯಮಗಳ ಹೈಪ್ ಇರಲಿ ಮತ್ತೇನೇ ಇರಲಿ. ಇಂದು ಸಹಸ್ರಾರು ಯುವಕರು, ವಿದ್ಯಾರ್ಥಿಗಳು, ನಾಗರಿಕರಿಗೆ ಅಣ್ಣಾ ಒಂದು ಆಶಯ. ಹೀಗಾಗಿಯೇ ಅಣ್ಣಾ ಅವರ ಮೇಲೆ ಇರುವ ಹೊಣೆಗಾರಿಕೆಯೂ ಹೆಚ್ಚಿನದ್ದು. ತಮ್ಮ ಪ್ರತಿಯೊಂದು ಹೆಜ್ಜೆಯನ್ನೂ ದೇಶದ ಹಿತದಿಂದ ಹುಷಾರಾಗಿ ಇಡಬೇಕಾದ ಜವಾಬ್ದಾರಿ ಅವರದ್ದಾಗಿದೆ. ಆದರೆ ಇಲ್ಲಿ ಅಂತಹ ತಾಳ್ಮೆಯ, ಹುಷಾರಿತನದಲ್ಲಿ ಅವರು ಹೀಗುತ್ತಿಲ್ಲ. ಬರೀ ಭಾವೋನ್ಮಾದದಲ್ಲೇ ಚಳವಳಿಯನ್ನು ಕೊಂಡೊಯ್ಯುತ್ತಿರುವುದು ನಿಚ್ಚಳವಾಗಿದೆ. ಈ ಚಳವಳಿ ಮಧ್ಯಮವರ್ಗದ ಜೊತೆ ಸಮಾಜದ ಬಹುದೊಡ್ಡ ವರ್ಗವಾದ ರೈತಾಪಿ, ಕಾರ್ಮಿಕರು, ಆದಿವಾಸಿಗಳನ್ನು ಒಳಗೊಳ್ಳಲು ಏನು ಮಾಡುತ್ತಿದೆ?. ಕೇಜ್ರಿವಾಲ್‌ರ ಸಂಘಟನೆಗೆ ಅದರ ಅಗತ್ಯವೇ ಕಾಣುತ್ತಿಲ್ಲ.


ಈಗ ಈ ಚಳವಳಿಯ ತಾಂತ್ರಿಕ ಅಂಶವನ್ನು ನೋಡೋಣ. ಜನಲೋಕಪಾಲವು ಜಾರಿಯಾಗಬೇಕು ನಿಜ. ಟೀಂ ಅಣ್ಣಾ ಹೇಳುವ ಒಂದು ಬಲವಾದ ಲೋಕಪಾಲ್ ಕಾಯ್ದೆಯನ್ನು ಜಾರಿಗೆ ತರಲು ಯಾವೊಂದು ರಾಜಕೀಯ ಪಕ್ಷಕ್ಕೂ ಇಚ್ಛೆಯಿಲ್ಲ. ಹಾಗಾಗಿ ಅವರು ಒಪ್ಪಿಗೆ ಕೊಡುವುದಿಲ್ಲ. ಆದರೆ ಅಂತಹ ಕಾಯ್ದೆ ಜಾರಿಯಾಗಬೇಕಾದರೆ ಸಂವಿಧಾನಬದ್ಧವಾಗಿ ಸಂಸತ್ತಿನ ಮೂಲಕವೇ ಜಾರಿಯಾಗಬೇಕು. ಹೀಗಿರುವಾಗ ಇಲ್ಲಿ ಎರಡೇ ದಾರಿ. ಒಂದೋ ಅಣ್ಣಾ ಚಳವಳಿ ಎಲ್ಲಾ ಕ್ಯಾಬಿನೆಟ್ ಸದಸ್ಯರ ಮನವೊಲಿಸಿ ಅದು ಮಂಡನೆಯಾಗುವಂತೆ ನೋಡಿಕೊಳ್ಳುವುದು. ನಂತರ ಸಂಸತ್ ಸದಸ್ಯರ (ಸರಳ ಬಹಮತಕ್ಕೆ ಬೇಕಾದಷ್ಟು) ಮನವೊಲಿಸುವುದು. ಇದು ಸಾಧ್ಯವಾಗದ ಕಾಲಕ್ಕೆ ಟೀಂ ಅಣ್ಣಾ ಒಂದು ರಾಜಕೀಯ ಪಕ್ಷ ರಚಿಸಿ ಸಂಸತ್ತಿನೊಳಗೆ ಪ್ರವೇಶಿಸಿ ಇದಕ್ಕಾಗಿ ಹೋರಾಟ ನಡೆಸುವುದು. ಈ ಎರಡು ದಾರಿಗಳನ್ನು ಬಿಟ್ಟು ಬೇರೆ ದಾರಿ ಎಲ್ಲಿದೆ? ಇದರ ಕುರಿತು ಸುಪ್ರೀಂ ಕೋರ್ಟೂ ಕೂಡಾ ಬೆಂಬಲ ಸೂಚಿಸುವ ಸಾಧ್ಯತೆ ಕಡಿಮೆ. ಯಾಕಂದರೆ ನ್ಯಾಯಾಂಗ ಕೂಡಾ ಲೋಕಪಾಲದ ಅವಧಿಯಲ್ಲಿ ಇರಬೇಕು ಎನ್ನುವ ಬೇಡಿಕೆಯನ್ನು ಇಂದು ಬಹುಮಟ್ಟಿಗೆ ಭ್ರಷ್ಟಗೊಂಡಿರುವ ನ್ಯಾಯಾಧೀಶರೇ ಬೆಂಬಲಿಸಲಾರರು.


ಹೀಗಿರುವಾಗ ಈ ಚಳವಳಿಯ ಗುರಿಯಾದರೂ ಏನು? ಅಂಧಕ ಕೈಯ ಅಂಧಕ ಹಿಡಿದಂತೆ ಹಜಾರೆಯ ಕೈಯನ್ನು ನಾವುಗಳು ಹಿಡಿಯುತ್ತಿದ್ದೇವೆ ಅನ್ನಿಸುವುದಿಲ್ಲವೇ. ಮಾತ್ರವಲ್ಲಾ ಅಣ್ಣಾ ನಿಮ್ಮ ಹಿಂದೆ ನಾವಿದ್ದೇವೆ. ನೀವು ಪ್ರಾಣ ತ್ಯಾಗಮಾಡಿದರೂ ಅಡ್ಡಿ ಇಲ್ಲ ಎನ್ನುವ ಧೋರಣೆ ತೋರುತ್ತಿರುವ ನಮಗೆ ಯಾವ ಮಟ್ಟಿಗಿನ ಸಿದ್ಧತೆ ಇದೆ?. ಹೆಚ್ಚೆಂದರೆ ಫೇಸ್‌ಬುಕ್ ಟ್ವಿಟ್ಟರ್‌ಗಳಲ್ಲಿ ನಮ್ಮ ಆಕ್ರೋಶ ತೋರಿಸಬಹುದಷ್ಟೇ?.


ಚಳವಳಿ ಯಾವ ದಿಕ್ಕಿನಲ್ಲಿ ಹೋಗಬೇಕು ಎನ್ನುವ ಕುರಿತು ಯಾವ ಸ್ಪಷ್ಟತೆಯೂ ಇಲ್ಲದೇ ಹೀಗೆ ಭಾವೋನ್ಮಾದದಿಂದ ಮುನ್ನುಗ್ಗುವುದು ಈ ದೇಶಕ್ಕೆ ಒಳ್ಳೆಯದು ಮಾಡುತ್ತದೆಯಾ?


ಇಲ್ಲಿ ನಡೆಯುತ್ತಿರುವ ಚಳವಳಿಯ ಉದ್ದೇಶ ಕೇವಲ ಒಂದು ಕಾಯ್ದೆಯನ್ನು ಜಾರಿ ಮಾಡುವುದು. ಆದರೆ ಅದು ಪಡೆದುಕೊಳ್ಳುತ್ತಿರುವ ಪ್ರಚಾರವ್ಯಾಪ್ತಿ ಮಾತ್ರ ಇಡೀ ವ್ಯವಸ್ಥೆಯನ್ನು ಬುಡಮೇಲು ಮಾಡುವುದು. ಅಣ್ಣಾ ಇನ್ನೂ  ಹೆಚ್ಚೆಚ್ಚು ದಿನ ಉಪವಾಸ ಮಾಡಿದಂತೆ ಇಡೀ ದೇಶದಲ್ಲಿ (ಮಾಧ್ಯಮ ತಲುಪುವ ದೇಶ) ಇನ್ನಷ್ಟು ಆತಂಕ ಹೆಚ್ಚುತ್ತದೆ. ಆದರೆ ಆಳುವ ಪಕ್ಷ ಹಾಗೂ ವಿರೋಧ ಪಕ್ಷಗಳ ಬಗ್ಗುವುದು ಕಡಿಮೆ.


ಇಂತಹ ಭಾವೋನ್ಮಾದದ ಹಾಗೂ ಆತಂಕಪೂರಿತ ವಾತಾವರಣದಲ್ಲಿ ಏನಾಗಬಹುದು ಎಂಬ ಆಲೋಚನೆ ನಮ್ಮಿಲ್ಲಿದೆಯೇ? ಇಲ್ಲಿ ಚಳವಳಿಯಲ್ಲಿ ಅಪ್ರಾಮಾಣಿಕವಾಗಿ ಭಾಗವಹಿಸುತ್ತಿರುವ ಸಂವಿಧಾನ ವಿರೋಧಿ ಶಕ್ತಿಗಳು ದೇಶದಾದ್ಯಂತ ಒಂದು ಪ್ರಕ್ಷೋಭೆ ಸೃಷ್ಟಿಸಲು ಅದನ್ನು ಬಳಸಿಕೊಳ್ಳ ಬಹುದು. ಸರ್ಕಾರ ಹೋರಾಟವನ್ನು ಬಗ್ಗುಬಡಿಯಲು ಇನ್ನಷ್ಟು ಆಕ್ರಮಣಕಾರಿಯಾಗಬಹುದು. ಲಾಠಿಚಾರ್ಜು, ಗೋಲಿಬಾರ್‌ಗಳು ಟೀವಿಗಳಲ್ಲಿ ಮತ್ತಷ್ಟು ರಂಜಕವಾಗಿ ಪ್ರಸಾರವಾಗಬಹುದು. ಟಿಆರ್‌ಪಿ ರೇಟ್ ಹೆಚ್ಚಬಹುದು. ಆದರೆ ಜನಲೋಕಪಾಲ ಜಾರಿಯಾಗುವುದಿಲ್ಲ!


ಇಲ್ಲವಾದರೆ ಅಣ್ಣಾ ಹಜಾರೆ ಮತ್ತು ತಂಡ ಇಡೀ ಸಂಸದೀಯ ಪ್ರಜಾಪ್ರಭುತ್ವವನ್ನು ಬದಲಾಯಿಸಿ ಇನ್ನೂ ಉತ್ತಮ ವ್ಯವಸ್ಥೆ ಜಾರಿಗೊಳಿಸುವ ಪರ್ಯಾಯ ಸೂಚಿಸಲಿ. ಒಪ್ಪುವುದು ಬಿಡುವುದು ಜನರಿಗೆ ಬಿಟ್ಟದ್ದು. ಆದರೆ ಈಗ ಮಾಡುತ್ತಿರುವಂತೆ ಈ ಚಳವಳಿ ಎಲ್ಲಿಗೆ ತಲುಪುತ್ತದೆ ಎಂಬ ಕನಿಷ್ಠ ದೂರದೃಷ್ಟಿಯಿಲ್ಲದೇ ವಿಚ್ಛಿದ್ರಕಾರಿಗಳಿಗೆ ದೇಶದಲ್ಲಿ ಅರಾಜಕತೆ ಸೃಷ್ಟಿಸಲು ಅವಕಾಶ ನೀಡುವುದು ಬೇಡ. ಇತ್ತೀಚೆಗೆ ಮಧ್ಯಪ್ರಾಚ್ಯದಲ್ಲಿ ಈಜಿಪ್ಟ್‌ನಲ್ಲಿ, ಟುನಿಷಿಯಾದಲ್ಲಿ ಹೀಗೇ ಸ್ವಪ್ರೇರಿತ ದಂಗೆಗಳಾದವು. ಅಧಿಕಾರ ಹಸ್ತಾಂತರವಾಯಿತು. ಆದರೆ ಇಂದು ಈ ದೇಶಗಳಲ್ಲಿ ಅಧಿಕಾರ ವಹಿಸಿಕೊಂಡಿರುವ ಈ ಹಿಂದಿನ ಕ್ರಾಂತಿಕಾರಿಗಳು ಹೊಸ ವ್ಯವಸ್ಥೆಯನ್ನು ತಾವೇ ನಡೆಸಬೇಕಾಗಿ ಬಂದಿರುವಾಗ ಎಂಥಾ ಗಂಭೀರ ಪಡಿಪಾಟಲುಗಳನ್ನು ಎದುರಿಸುತ್ತಿದ್ದಾರೆ ನೋಡಿ. ಇದೇ ಪರಿಸ್ಥತಿ ಕಳೆದೆರಡು ಮೂರು ವರ್ಷಗಳಲ್ಲಿ ಪಕ್ಕದ ನೇಪಾಳದಲ್ಲೂ ಏರ್ಪಟ್ಟಿದೆ.


ಒಂದು ವಿಷಯವನ್ನು ಮರೆಯದಿರೋಣ. ಚಳವಳಿಯ ಸಂಘಟನೆ, ದಾರಿ ಸರಿಯಿರದಿದ್ದರೆ ಅದು ಸಫಲಗೊಳ್ಳುವ ಸಾಧ್ಯತೆಯೂ ಕಡಿಮೆ. ಒಂದೊಮ್ಮೆ ಈ ಚಳವಳಿ ಕೆಟ್ಟ ರೀತಿಯಲ್ಲಿ ಪರ್ಯಾವಸಾನವಾದರೆ, ವಿಫಲವಾದರೆ ಏನಾಗುತ್ತದೆ? ಏನೂ ಆಗಲ್ಲ. ಮುಂದಿನ ೫೦ ವರ್ಷ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಒಬ್ಬನೇ ಒಬ್ಬ ಈ ದೇಶದಲ್ಲಿರುವುದಿಲ್ಲ. ಅಂತಹ ಹತಾಶೆ, ನಿರಾಸೆ ಎಲ್ಲೆಡೆ ಆವರಿಸಿಕೊಳ್ಳುತ್ತೆ. ಟೀಂ ಅಣ್ಣಾ ಈ ವಿಷಯವನ್ನು ಪರಿಗಣಿಸಿದೆಯಾ? ಇಲ್ಲವೇ ಇಲ್ಲ. ಇದ್ದಿದ್ದರೆ ಅಣ್ಣಾ ಈಗ ಮಾಡುತ್ತಿರುವಂತೆ ಮಾಡುವ ಬದಲು ಮೊದಲು ದೇಶದಾದ್ಯಂತ ಉತ್ತಮ ಸಂಘಟನೆಗೆ ಮುಂದಾಗುತ್ತಿದ್ದರು. ಈಗ ವ್ಯಕ್ತವಾಗುತ್ತಿರುವ ಬೆಂಬಲದ ಮಹಾಪೂರವನ್ನು ಸಾಂಘಿಕ ಶಕ್ತಿಯಾಗಿ ಮಾರ್ಪಡಿಸುತ್ತಿದ್ದರು. ನಿಜವಾದ ದೇಶನಾಯಕವಾಗುತ್ತಿದ್ದರು. ಬೇಕಾದರೆ ಇನ್ನೂ ನಾಲ್ಕು ವರ್ಷ ತಯಾರಿ ನಡೆಸಿ ನಿಜವಾದ ಬದಲಾವಣೆಯ ಹರಿಕಾರನಾಗುತ್ತಿದ್ದರು. ಆದರೆ ಇಲ್ಲಿ ಅಂತಹ ಯಾವ ಲಕ್ಷಣಗಳೂ ಇಲ್ಲ. ಹೀಗಾಗಿ ಈ ಹಿಂದೆ ಉತ್ಸಹಾದಿಂದಲೇ ಅಣ್ಣಾ ಚಳವಳಿಯನ್ನು ಒಂದು ಆಶಯವಾಗಿ ನೋಡಿದ ನನ್ನಂತವರಿಗೆ ನಿರಾಸೆಯಾಗುತ್ತಿದೆ.


ಇವೆಲ್ಲವನ್ನೂ ಹೊರತು ಪಡಿಸಿದ ಮತ್ತೊಂದು ಮುಖ್ಯವಾದ ವಿಷಯವಿದೆ. ಇಂದು ಅಣ್ಣಾ ಚಳವಳಿಯಲ್ಲಿ ಭಾಗವಹಿಸುತ್ತಿರುವವರು ಒಂದು ಭ್ರಮೆಯಲ್ಲಿರುವುದಂತೂ ಸತ್ಯ. ಅದು ಅಣ್ಣಾ ಗೆದ್ದರೆ ಭ್ರಷ್ಟಾಚಾರ ಸಂಪೂರ್ಣ ನಿಯಂತ್ರಣವಾಗಿಬಿಡುತ್ತದೆ ಎಂಬ ಫೂಲ್ಸ್ ಪ್ಯಾರಡೈಸ್ ಅದು. ನಾವು ಅರ್ಥ ಮಾಡಿಕೊಳ್ಳಬೇಕಿರುವುದಿಷ್ಟೆ. ಈ ದೇಶದಲ್ಲಿ ನೂರು ಜನಲೋಕಪಾಲಗಳು ಬಂದರೂ ಭ್ರಷ್ಟಾಚಾರ ನಿರ್ಮೂಲನೆಯಾಗುವುದಿಲ್ಲ. ಎಲ್ಲಿಯವರೆಗೆ? ಭ್ರಷ್ಟಾಚಾರಕ್ಕೆ ಮೂಲವಾಗಿರುವ ಒಂದು ಆರ್ಥಿಕ ಸಾಮಾಜಿಕ ವ್ಯವಸ್ಥೆ ಇರುವವರೆಗೆ.


ಅಷ್ಟಕ್ಕೂ ಭಾರತದಲ್ಲಿ ಭ್ರಷ್ಟಾಚಾರ ವ್ಯಾಪಕಗೊಂಡಿದ್ದು ಯಾವಾಗ? ಮತ್ತು ಹೇಗೆ? ಸಂಶಯವೇ ಇಲ್ಲ. ಯಾವಾಗ ನವ ಉದಾರವಾದಿ ನೀತಿಗಳು ಇಲ್ಲಿ ಜಾರಿಯಾದವೋ, ಯಾವಾಗ ಬಹುರಾಷ್ಟ್ರೀಯ ಕಂಪನಿಗಳ ಬಂಡವಾಳ ನಿದೇಶಿ ನೇರ ಹೂಡಿಕೆ ಹಾಗೂ ವಿದೇಶಿ ಸಾಂಸ್ಥಿಕ ಹೂಡಿಕೆಗಳ ಹೆಸರಲ್ಲಿ ದಂಡಿದಂಡಿಯಾಗಿ ನುಗ್ಗತೊಡಗಿತೋ, ಯಾವಾಗ ಖಾಸಗೀಕರಣ ಈ ದೇಶದ ಸಾರ್ವಜನಿಕ ಕ್ಷೇತ್ರವನ್ನು ನುಂಗಿ ಹಾಕತೊಡಗಿತ್ತೋ, ಯಾವಾಗ ಸರ್ಕಾರ ನಡೆಸುವವರಿಗೆ ಕೈಗಾರಿಕೆಗಳನ್ನು ನಡೆಸುವ ಕೆಲಸ ತಪ್ಪಿ ಬರೀ ಎಂಒಯುಗಳಿಗೆ ಸಹಿ ಹಾಕುವ, ಹೂಡಿಕೆ ಅಪಹೂಡಿಕೆಗಲನ್ನು ಮ್ಯಾನೇಜ್ ಮಾಡುವ ಕೆಲಸ ಮಾತ್ರ ಉಳಿಯಿತೋ, ಭ್ರಷ್ಟಾಚಾರಕ್ಕೆ ಇನ್ನಿಲ್ಲದ ಅವಕಾಶ ದೊರೆತು ಯಾವಾಗ ದೊಡ್ಡ ಖಾಸಗಿ ಕಾರ್ಪೋರೇಷನ್ ಗಳು, ಕಂಪನಿಗಳು ದೊಡ್ಡ ಮೊತ್ತದ ಆಮಿಷಗಳನ್ನು ಒಡ್ಡತೊಡಗಿದರೋ ಆಗಲೇ ತಾನೆ ಭ್ರಷ್ಟಾಚಾರ ಎನ್ನುವುದು ಸರ್ವಾಂರ್ಯಾಮಿಯೂ, ಸರ್ವಶಕ್ತವೂ, ಸರ್ವವ್ಯಾಪಿಯೂ ಆದದ್ದು? ಈ ದೇಶದ ಆರ್ಥಿಕ ನೀತಿಗಳಲ್ಲೇ ಭ್ರಷ್ಟಚಾರದ ಮೂಲವಡಗಿರುವ ಅದರ ಕುರಿತು ಏನೂ ಮಾತನಾಡದ ಜನಲೋಕಪಾಲವಾಗಲೀ ಲೋಕಪಾಲವಾಗಲೀ ಭ್ರಷ್ಟಾಚಾರವನ್ನು ಹೇಗೆ ನಿಯಂತ್ರಿಸುತ್ತದೆ ಹೇಳಿ? ಹೆಚ್ಚೆಂದರೆ ಈಗ ನಾವು ಕರ್ನಾಟಕದಲ್ಲಿ ಹೇಗೆ 'ಲೋಕಾಯುಕ್ತ ಬಲೆಗೆ ಬಿದ್ದ ಹೆಗ್ಗಣ'ಗಳನ್ನು ದಿನನಿತ್ಯ ನೋಡುತ್ತಿದ್ದೇವೆಯೋ ಹಾಗೆ ದೇಶಾದ್ಯಂತ ಹೆಗ್ಗಣಗಳ ಪಟ್ಟಿ ಬೆಳೆಯುತ್ತಾ ಹೋಗಬಹುದು. ಇಂದು ರಾಜಕಾರಣಿಗಳು ಭಾಗಿಯಾಗಿರುವ ಯಾವುದೇ ಹಗರಣಗಳನ್ನು ನೋಡಿ, ಅಲ್ಲಿ ಭ್ರಷ್ಟರು ರಾಜಕಾರಣಿಗಳು ಮಾತ್ರವಲ್ಲ. ಅವರಿಗೆ ಲಕ್ಷಾಂತರ ಕೋಟಿ ರೂಪಾಯಿಗಳನ್ನು ನೀಡುವ ಕಾರ್ಪೋರೇಷನ್ ಗಳೂ ಇವೆ. ಆದರೆ ಜನಲೋಕಪಾಲ ಅವುಗಳ ಬಗ್ಗೆ ಎಲ್ಲೂ ಮಾತನಾಡುವುದಿಲ್ಲವಲ್ಲ? ಭ್ರಷ್ಟಾಚಾರ ಒಂದು ಬೃಹತ್ ಆಲದ ಮರವಿದ್ದಂತೆ. ಜನಲೋಕಪಾಲದ ಶಕ್ತಿ ಇರುವುದು ಒಂದು ಕೊಂಬೆಯನ್ನು ಅಲ್ಲಾಡಿಸುವುದಕ್ಕಾಗಿ ಮಾತ್ರ. ಅದರಿಂದಾಗಿ ಅಕ್ಕ ಪಕ್ಕದ ಇನ್ನಷ್ಟು ಕೊಂಬೆಗಳು ಅಲ್ಲಾಡಬಹುದೇ ವಿನಃ ಮರದ ಬುಡು ಅಲ್ಲಾಡುವುದಿಲ್ಲ. ಇನ್ನು ಆ ಮರವನ್ನು ಉರುಳಿಸುವ ಮಾತು ಬಹಳ ದೂರದ್ದು.                                       

ಹರ್ಷಕುಮಾರ್ ಕುಗ್ವೆ

15 comments:

 1. what hidden agenda ravishankar gurooji has? when support is coming from all around for some movement like this why the movement itself is questioned?

  I totally agree with you that ABVP is BJP's voice. But you also should know it has young people who want to see change in india.

  You are saying that all politicians dont agree for janlokpaal bill and what ever we do is of no use. So you are making them suprimo here. We the people are so have a say. If they dont agree how long do we have to sit quite?

  You are recommending anna to join politics and get MPs there. With all the good track record the movement has been criticised by people like you.

  Truth is we lost our hopes on all political parties. Please try to understand and stop criticizing.

  ReplyDelete
 2. ನಿಮ್ಮ ಚಿಂತನೆ ಸರಿಯಾಗಿದೆ ಮತ್ತು ಇವತ್ತು ಅಣ್ಣಾ ಅವರನ್ನು ನಿಷ್ಕಪಟತೆಯಿಂದ/ ಅತ್ಯಂತ ಅಪಾಯಕಾರಿ ಅಜೆಂಡಾದೊಂದಿಗೆ ಬೆಂಬಲಿಸುತ್ತಿರುವ ಇಬ್ಬರೂ ನೀವು ಪ್ರಸ್ತಾಪಿಸಿರುವ ಈ ಗಂಭೀರ ವಿಷಯಗಳನ್ನು ಅರ್ಥಮಾಡಿಕೊಳ್ಳಬೇಕಿದೆ. ಇಲ್ಲವಾದರೆ, ಅಪಾಯ ಕಟ್ಟಿಟ್ಟಬುತ್ತಿ.
  ನಾನು ಕೂಡ ಅಣ್ಣಾ ಪರ ಮೊದಲ ಹಂತದಲ್ಲಿ ಶಿವಮೊಗ್ಗದಲ್ಲಿ ಹಿರಿಯ ಸಮಾಜವಾದಿಗಳು ಮತ್ತು ಪ್ರಗತಿಪರರ ಜೊತೆ ದಿನವಿಡೀ ಧರಣಿ ನಡೆಸಿದ್ದೆ. ಅಂದು ನಾವು ಕಡಿದಾಳ್ ಶಾಮಣ್ಣ, ಕೆ.ಎಸ್. ಪುಟ್ಟಣ್ಣಯ್ಯ, ಪುಟ್ಟಯ್ಯ, ಹಾಲಪ್ಪ, ಶ್ರೀಪಾಲ್, ಅಣತಿ, ದಿವಾಕರ ಹೆಗಡೆ ಮುಂತಾದ ಕೇವಲ 15- 20 ಮಂದಿ ಮಾತ್ರ ಮೊದಲ ದಿನ ಇದ್ದೆವು. ಅಂದು ನಮಗೆ ಒಂದು ಮಹತ್ವದ ಕಾರಣಕ್ಕಾಗಿ ಧರಣಿ ಕುಳಿತ ಸಾರ್ಥಕತೆ ಇತ್ತು.
  ಆದರೆ, ಕ್ರಮೇಣ ಈ ಚಳವಳಿ ಪಡೆದುಕೊಂಡ ತಿರುವುಗಳು, ಅಣ್ಣಾ ಮತ್ತು ಅವರ ಟೀಂ ನ ಕೆಲವು ನಡೆಗಳನ್ನು ಗಮನಿಸಿ ಇದೀಗ ಇದೊಂದು ಸ್ಪಷ್ಟತೆ ಮತ್ತು ನಿಖರತೆ ಇಲ್ಲದ ಅಂದಾದುಂದಿ ಜಾತ್ರೆಯಂತೆ ಅನಿಸುತ್ತಿದೆ. ಬೇರೆಲ್ಲಾ ಬೇಡ, ಕರ್ನಾಟಕದ ಮಟ್ಟಿಗೇ ಹೇಳುವುದಾದರೆ, ಇಂದು ಫ್ರೀಡಂ ಪಾರ್ಕಿನಲ್ಲಿ ಠಳಾಯಿಸುತ್ತಿರುವ ಮಂದಿ, ಕರ್ನಾಟಕದಲ್ಲಿ ಕಳೆದು ಮೂರ್ನಾಲ್ಕು ವರ್ಷದಿಂದ ನಡೆಯುತ್ತಿರುವ ಹಗಲು-ದರೋಡೆ ಬಗ್ಗೆ ಒಂದೇ ಒಂದು ಬಾರಿ ರಸ್ತೆಗಿಳಿಯುವುದಿರಲಿ, ಕನಿಷ್ಠ ಹೇಳಿಕೆಯನ್ನೂ ನೀಡದಿರುವುದರ ಅರ್ಥವೇನು?
  ಹಾಗಿದ್ದರೆ, ಇವರ 'ಹೋರಾಟ' ಎಷ್ಟು ಯಾರ ವಿರುದ್ಧ? ಎಷ್ಟು ಪ್ರಾಮಾಣಿಕ?
  ನಮಗಂತೂ ಈ ಹೋರಾಟದ ಬಗ್ಗೆ ಈಗಾಗಲೇ ಭ್ರಮನಿರಸನವಾಗಿದೆ...
  - ಶಶಿ ಸಂಪಳ್ಳಿ, ಶಿವಮೊಗ್ಗ

  ReplyDelete
 3. ಸಮುದಾಯವಾಗಿ ನಮ್ಮೊಳಗೆ ಹೆಪ್ಪುಗಟ್ಟಿರುವ ಅಸಹನೆಯ ಪ್ರತೀಕವಿದು ಎನಿಸುತ್ತಿದೆ. ನಮ್ಮ ಪ್ರಜಾಪ್ರಭುತ್ವವಿನ್ನೂ ಅರವತ್ತು ಚಿಲ್ಲರೆ ವರ್ಷಗಳ ವಯೋಮಾನದ್ದು. ಪ್ರಜಾಪ್ರಭುತ್ವದ ಅತಿದೊಡ್ಡ, ಆದರ್ಶಪ್ರಾಯ ಎನ್ನಬಹುದಾದ ಗುಣವೆಂದರೆ ಸರ್ವ ಪ್ರಜೆಗಳ ಸಹಭಾಗಿತ್ವ. ಇದು ಕಾಲಕ್ಕೆ ತಕ್ಕಂತೆ ಕ್ರಮೇಣ ಮಾಗಬೇಕಾದದ್ದು. ರಾತ್ರಿ ಬೆಳಗಾಗುವುದರಲ್ಲಿ ಸಮಗ್ರ ಬದಲಾವಣೆಯಾಗುತ್ತದೆ ಎಂದಾದರೆ ಅದು ಮಿಲಿಟರಿ ಅಧಿಪತ್ಯವಿರುವ ರಾಷ್ಟ್ರಗಳಲ್ಲಿ ಸಾಧ್ಯವೇ ವಿನಾ ನಮ್ಮಂಥ ಪ್ರಜಾಪ್ರಭುತ್ವದಲ್ಲಿ ಅಲ್ಲ. ಹಾಗೊಂದು ವೇಳೆ ರಾತ್ರಿ ಬೆಳಗಾಗುವುದರಲ್ಲಿ ಬದಲಾವಣೆಯಾಗುತ್ತದೆಯಾದರೆ ಅದು ಆರೋಗ್ಯವಂಥ ವ್ಯವಸ್ಥೆಯೂ ಅಲ್ಲ. ವ್ಯವಸ್ಥೆಯ ಕುರಿತು ಸದಾ ಎಚ್ಚರಿಕೆಯಲ್ಲಿದ್ದು ಅದರಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಾ ಅದನ್ನು ಸಹನೀಯವಾಗಿಸುತ್ತಾ, ನಾವೂ ಪ್ರಬುದ್ಧಗೊಳ್ಳುತ್ತ ಸಾಗಬೇಕಾದ ಹಾದಿ ಪ್ರಜಾಪ್ರಭುತ್ವ. ಕ್ಯಾಂಡಲ್‌ ಕೈಯಲ್ಲಿ ಹಿಡಿದುಕೊಂಡು ಜಾಥ ನಡೆಸುವ ವ್ಯಕ್ತಿಗಳಲ್ಲಿ ಎಷ್ಟು ಮಂದಿ ಮತಗಟ್ಟೆಗೆ ಹೋಗಿ ಮತ ಚಲಾಯಿಸಿದ್ದಾರೆ, ಎಷ್ಟರ ಮಟ್ಟಿಗೆ ಸಾಮುದಾಯಿಕ ರಾಜಕೀಯ ಪ್ರಜ್ಞೆ ಬೆಳೆಸಿಕೊಂಡಿದ್ದಾರೆ ಎಂದು ಕೇಳಿ ನೋಡಿ. ಭ್ರಷ್ಟಾಚಾರ ನಿರ್ಮೂಲನೆಯೆಂಬುದು ನಮ್ಮ ವೈಯಕ್ತಿಕ ನೆಲೆಯಲ್ಲಿ ಪ್ರಾರಂಭವಾಗಬೇಕೇ ವಿನಾ ಯಾವುದೋ ಸಂಸ್ಥೆಯಿಂದಲ್ಲ. ಭ್ರಷ್ಟಾಚಾರಕ್ಕೆ ಮೂಲ ಕಾರಣವೇ ರಾಜಕಾರಣಿಗಳು ಎಂದು ಉದ್ದುದ್ದ ಭಾಷಣ ಬಿಗಿಯುವುದು ರಾಜಕೀಯ ಅಪ್ರಬುದ್ಧತೆಯಷ್ಟೇ. ಈಗ ನಡೆಯುತ್ತಿರುವ ಭ್ರಷ್ಟಾಚಾರದ ವಿರುದ್ಧದ ಹೋರಾಟ ಎಲ್ಲೋ ಒಂದೆಡೆ ಪ್ರತಿನಿಧಿತ್ವ ರಾಜಕಾರಣದ ವಿರುದ್ಧದ ಆಮೂಲಕ ಪ್ರಜಾತಂತ್ರ ವಿರುದ್ಧದ ನಮ್ಮ ಮಧ್ಯಮ ವರ್ಗದ ಮಂದಿಯ ಆಕ್ರೋಶವನ್ನು ಧ್ವನಿಸುತ್ತಿದೆಯೇ ಎಂಬ ಅನುಮಾನ ನನಗೆ. - ಅರುಣ್‌ ಕಾಸರಗುಪ್ಪೆ

  ReplyDelete
 4. Ok first of All - I like you Anticipatory bail !! :) good one to proclaim your stand.. Enu Tappu Maadade nivu anticipatory bail bagge yochistuddiri.. Few Points from which can be pointers.

  1) Yes, I agree this moment needs a proper control at every point else it will fail eventually.

  2)Please lets not bring state,language, cast, politics, topics in to this. If ever you wanted to understand..whats happening with karnataka... as SL Byarappa told.. Bari Karnataka Mukhaymantri na yaake... ? UP, MH alli yaaklilla.. and More santosh Hegade is Kanndiga himself.. Freedom Park na stagenalli .. local social service athava NGO leadegalu illa anta.. e tara maatadodu tappu...

  3) Why is not Media - specially Kannada media acting as RTI for all the scams happend in Karnatataka _ for example did any media tried to know what happend to Flood Relief fund collected by government ?

  4) If ppl dont know what exactly is Jan Lok pal.. why is that media is not publishing both versions of Bill.. , whats stopping them..

  5)3 4 varshagalinda chaluvali ge illidilla ? andre.. en artha.. Eegadru ilididdaralla ...

  6) If something is going wrong at freedom park.. the please communicate it to organisers to correct..it.. if they listen are not.. you have good intentions.. dont put an Anticipatory bail :)

  ReplyDelete
 5. ಈ ಹೋರಾಟ ದಿಕ್ಕು ತಪ್ಪುತ್ತಿರುವ ಸೂಚನೆಗಳು ಹೇರಳವಾಗಿ ದೊರಕುತ್ತಿವೆ. ಯಾವುದೇ ಒಂದು ಚಳುವಳಿಗೆ ಅದರ ಮೂಲ ಆಶಯ ಆದರ್ಶಗಳು ಮುಖಂಡನಾಗಿರಬೇಕೆ ಹೊರತು ಒಬ್ಬ ವ್ಯಕ್ತಿಯಷ್ಟೇ ಆರಾಧನೆಯ ವಸ್ತುವಾಗಬಾರದು.
  http://hingyake.blogspot.com/2011/08/blog-post_21.html

  ReplyDelete
 6. "ಸುಪ್ರೀಂ ಕೋರ್ಟೂ ಕೂಡಾ ಬೆಂಬಲ ಸೂಚಿಸುವ ಸಾಧ್ಯತೆ ಕಡಿಮೆ. ಯಾಕಂದರೆ ನ್ಯಾಯಾಂಗ ಕೂಡಾ ಲೋಕಪಾಲದ ಸುಪರ್ದಿಯಲ್ಲಿ ಇರಬೇಕು ಎನ್ನುವ ಬೇಡಿಕೆಯನ್ನು ಇಂದು ಬಹುಮಟ್ಟಿಗೆ ಭ್ರಷ್ಟಗೊಂಡಿರುವ ನ್ಯಾಯಾಧೀಶರೇ ಬೆಂಬಲಿಸಲಾರರ"
  ನಿಮ್ಮ ಮೇಲಿನ ಉಹೆ ಅಷ್ಟು ಸಮಂಜಸವದುದಲ್ಲ ನ್ಯಾಯಾಂಗ ಒಂದು ಅಭಿಪ್ರಾಯಕ್ಕೆ ಖಂಡಿತ ಬರುತ್ತದೆ ಅದೆಂದರೆ ಸಂವಿದನಿಕವಾಗಿ ಕಾನೂನು ರಚಿಸುವ ಹಕ್ಕು ಸಂಸತ್ತಿಗೆ ಇದೆ ನಾಗರೀಕ ಸಮುದಾಯ ಸಂಸತ್ತಿನಲ್ಲಿ ರಚಿಸುವ ಕಾನೂನಿನ ಕುರಿತು ಸಲಹೆ ನೀಡಲಿ ಎಂಬುದು, ಅಲ್ಲದೆ ಅಣ್ಣ ಅವರ ಹೋರಾಟ ಸಂವಿದಾನಿಕವು ಅಲ್ಲ ಅದನ್ನು ಬಹಳಷ್ಟು ಜನ ಪ್ರತಿಭಟನೆ(Nonviolent protest) ಎಂದು ಕರೆಯುತ್ತಿದ್ದಾರೆ ಆದರೆ ಅದು ಪ್ರತಿಭಟನೆಯ ರೋಪದಲ್ಲಿಲ್ಲ ಬದಲಾಗಿ ಬೇಡಿಕೆಯ (demand )ರೋಪದಲ್ಲಿದೆ ಜನಲೋಕಪಾಲ್ ಜಾರಿಗೆ ಬರದಿದ್ದರೆ ಸಾಯುತ್ತೇನೆ ಎನ್ನುವುದು ಪ್ರತಿಭಟನೆ ಎನ್ನಲು ಸದ್ಯವೇ ?

  ReplyDelete
 7. ಹರ್ಷ ಅವರೇ, ನಿಮ್ಮ ಲೇಖನದಲ್ಲಿ ಕೆಲವು ಗೊಂದಲಗಳು ಕಾಣುತ್ತಿವೆ. ಏನೋ ಹೇಳೋಕೆ ಹೊರತು ಏನೋ ಹೇಳಿದಿರ ಅಂತ ಅನಿಸುತ್ತಿದೆ. ಮೊದಲು ಸಂಘಟನೆ ಮಾಡ್ಬೇಕು ಆಮೇಲೆ ಚಳುವಳಿ ಮಾಡ್ಬೇಕು ಅಂತೆಲ್ಲ ಹೇಳಿದ್ದಿರ. ಒಂದು ಪ್ರಶ್ನೆ. ಸಂಘಟನೆ ಮಾಡುವ ಉದ್ದೇಶ ಏನು? ಜನರಲ್ಲಿ ತಿಳುವಳಿಕೆ ಕೊಟ್ಟು , ಅವರಲ್ಲಿ ಒಗ್ಗಟ್ಟನ್ನು ಬೆಳಿಸೋದು ಅಲ್ವಾ? ಈಗ ಏನ್ ಆಗಿದೆ?
  ನೀವು ಹೇಳುವ ಹಾಗೆ ತುಂಬಾ ಜನರಿಗೆ ಜನಲೋಕಪಾಲ್ ದಿಂದ ಭ್ರಷ್ಟಾಚಾರ ಸಂಪೂರ್ಣ ನಿಯಂತ್ರಣವಾಗುತ್ತೆ ಅನ್ನೋ ಭಾವನೆ ಯಲ್ಲಿದ್ದರೆ. ಆದರೆ ಜನಲೋಕಪಾಲ್ ಅರ್ಥ ಮಾಡಿಕೊಂಡ ಕೆಲವ್ರದ್ರು ಇನ್ನೊಬ್ಬರಿಗೆ ಅರ್ಥ ಮಾಡೋ ಪ್ರಯತ್ನ ಮಾಡಿದರ? ಕೊನೆ ಪಕ್ಷ ನೀವೇ ತೊಗೊಳಿ. ಅಣ್ಣ ಬಗ್ಗೆ ಏನ್ ಏನೋ ಬರಿತಿದಿರ ಆದ್ರೆ ಅದನ್ನ ಅರ್ಥ ಮಾಡಿಸೋ ಪ್ರಯತ್ನ ಮಾಡಿದಿರಾ? ಹಾಗಿದ್ದಮೇಲೆ ಸಂಘಟನೆ ಹೇಗೆ ಬೆಳಿಯುತ್ತೆ? ಬಿಟ್ಟಾಕಿ..
  ಇನ್ನು next .. ಕೊನೆ ಪ್ಯಾರದಲ್ಲಿ ನೀವು ಹೇಳ್ತಿರ.. ಇವತ್ತು ಲೋಕಾಯುಕ್ತ ಏನ್ ಮಾಡ್ತಿದೆ ಬರಿ ಹೆಗ್ಗಣಗಳ ಪಟ್ಟಿ ಬೆಳಿತ ಹೋಗ್ತಿದೆ ಅಷ್ಟೇ ಅಂತ... ಅಲ್ಲ ಸರ್.. ಲೋಕಾಯುಕ್ತಕ್ಕೆ ಇರೋ ಅಧಿಕಾರ ಅಷ್ಟೇ ಅಂತ ನಿಮಗೆ ಗೊತ್ತಿಲ್ವಾ? ಅವರು ಏನ್ ಇದ್ರೂ ಸರಕಾರಕ್ಕೆ ವರದಿ ಸಲ್ಲಿಸಬಹುದೇ ವಿನಃ ಅದಕ್ಕಿಂತ ಹೆಚ್ಚಿಗೆ ಅವರೇನು ಮಾದೊಕಾಗದು ಅಂತ? ಸರಕಾರ ಅವರ ಮೇಲೆ action ತೊಗೋಬೇಕು ಅಂತ ಹೇಳುತ್ತೆ ನಮ್ಮ ಇವತ್ತಿನ ಕಾನೂನು. ಕಳೆದ ಎರಡು ವರುಷಗಳಿಂದ ಜಪ್ತಿ ಮಾಡಿದ ದಾಖಲೆಗಳು, ಅಕ್ರಮ ಹಣ ಎಲ್ಲ ಹಾಗೆ ಲೋಕಾಯುಕ್ತ ಸಂಸ್ತೆಯಲ್ಲಿ ಕೊಳಿತಿದೆ. ಇದಕ್ಕೆಲ್ಲ ಕಾರಣ ಲೋಕಾಯುಕ್ತರು ಅಲ್ಲ. ಬದಲಿಗೆ ನಮ್ಮ ಸರಕಾರ ಆ ಅಕ್ರಮ ಹಣದ ಮೇಲೆ ನಿರ್ಣಯ ತೊಗೊಳ್ಳದೆ ಇರೋದು ಮತ್ತು ನಮ್ಮ ದುರ್ಬಲ ಕಾನೂನು.

  ನಿಮ್ಮ ಬೆಲ್ ನಲ್ಲಿ ನೀವು ಜನಲೋಕಪಾಲ್ ಪೂರ್ತಿ ಆಗಿ ಓದಿದೀನಿ ಅಂತ ಹೇಳಿದಿರ ಅಲ್ವಾ.. ಸೊ ಹಾಗಾದ್ರೆ ಜನಲೋಕಪಾಲ್ ಬಂದ್ರೆ ಈಗಿರುವ ಲೋಕಾಯುಕ್ತಕ್ಕೆ ಇನ್ನು ಹೆಚ್ಚಿನ ಶಕ್ತಿ ಸಿಗುತ್ತೆ. ಆಗ ಲೋಕಾಯುಕ್ತರು ತಾವು ಮಾಡಿದ ಕಾರ್ಯವನ್ನು ಸರಕಾರದ ಬದಲಿಗೆ ಕೋರ್ಟ್ ಗೆ ರಿಪೋರ್ಟ್ ಮಾಡಿಕೊಳ್ಳುತ್ತಾರೆ. ಆಗ ಕೋರ್ಟ್ ಸೂಕ್ತ ನಿರ್ಧಾರ ತೊಗೊಳ್ಳುತ್ತೆ. ಅಲ್ವರ???

  ReplyDelete
 8. http://timesofindia.indiatimes.com/india/Bukhari-calls-stir-anti-Islam-tells-Muslims-to-stay-away/articleshow/9690525.cms

  ಇದರ ಬಗ್ಗೆ ಯಾರದ್ರು ಹೇಳ್ತಾರ? media ಮಾತಾಡುತ್ತ ಈಗ????
  ಇಷ್ಟು ದಿನ ಕಾಣದೆ ಇದ್ದ self claimed RTI activist ಅರುಣಾ ರೋಯ್, ಮತ್ತೊಂದು ಲೋಕಪಾಲ್ ಮಸೂದೆ ತಂದದ್ದು, ಇವತ್ತು ಭುಕಾರಿ ಮುಸ್ಲಿಮರಿಗೆ ಈ ಕರೆ ಕೊಟ್ಟಿದ್ದು ಸರಕಾರ ಅಣ್ಣಾನ ಹತ್ತಿಕ್ಕಲು ಮಾಡುತ್ತಿರುವ ಸಂಚು ಅಂತ ಅನಿಸಲ್ವ?

  ReplyDelete
 9. Yes you also know that Civil society people can't CONVINCE POLITICIAN NOR FIGHT IN ELECTION.
  This never ever possible.

  So, what is the solution.
  It will reach high end automatically some VIOLENCE HAPPENS ACROSS THE COUNTRY, PEOPLE START DOING BANDH across the India... pressure motivate to CONGRESS SUPPORT PARTY(DMK, Trunamoola Congress, NCP) automatically they will say they are going to WITHDRAW SUPPORT..

  Finally I feel either Govt collapse or Govt pass JANLOKPAL BILL..

  This is what happens.. no body stop this...

  Jai Hind.

  ReplyDelete
 10. ನೀವು ಹೆಳಿದ ಮಾತು ನಿಜಕ್ಕು ಸತ್ಯ...
  ಆದರೆ ನಮ್ಮನ್ನು ನಾವು ಒ೦ದು ಬಾರಿ ಆತ್ಮಾವಲೊಕನ ಮಾಡಿಕೊಳ್ಳಬೆಕಾಗುತ್ತದೆ..
  ಸರ್ಕಾರ ಬ್ರಸ್ಟ, ಕೆಲವು ಸರಕಾರಿ ನೌಕರರು ಬ್ರಸ್ಟರು ನಿಜ!!
  ಆದರೆ ನಾವು ಎಸ್ಟರ ಮಟ್ಟಿಗೆ ಒಳ್ಳೆಯವರು???
  ಇಗಿನ ಸಮಾಜಕ್ಕೆ ಸಮಯ ಮುಕ್ಯ ಹಣ ಮುಕ್ಯ ಅಲ್ಲ!!

  ReplyDelete
 11. ನನಗೆ ಅನ್ನಿಸುವ ಪ್ರಕಾರ ಕೇಂದ್ರ ಸರ್ಕಾರ ತಮ್ಮದೇ ತಂತ್ರಗಳಿಂದ ಅಣ್ಣಗೂ ಮನವೊಲಿಸಿ ಒಂದು ಮಸೂದೆಯನ್ನು ಮಂಡಿಸುತ್ತದೆ.ಅಣ್ಣಾಗೆ ಬೆಂಬಲ ನೀಡುವ ಮೂಲಕ ನಾವು ಇನ್ನೂ ಸ್ವಲ್ಪ ಹೆಚ್ಚಿನ ಒತ್ತಡವನ್ನು ಕೇಂದ್ರದ ಮೇಲೆ ತರಬಹುದು.ಹಾಗೆಂದು ಭ್ರಷ್ಟಾಚಾರಿಗಳನ್ನು ತಲೆಯ ಮೇಲಿಟ್ಟು ಮೆರೆಸುವ ಬಿಜೆಪಿ ಹಾಗು ಅದರ ಸಂಘಟನೆಗಳ ಗಿಮಿಕ್ ಗಳನ್ನು ನಂಬಲು ಈ ದೇಶದ ಜನ ಮೂರ್ಖರಲ್ಲ.ಜನ ಲೋಕಪಾಲ ಚಳುವಳಿ ಒಂದು ದೃಷ್ಟಿಯಲ್ಲಿ ಮುಂದಿನ ದಿನಗಳಲ್ಲಿ ಯುಪಿಎ ಸರ್ಕಾರದ ಅಳಿವು ಉಳಿವನ್ನು ನಿರ್ಧರಿಸಬಲ್ಲದ್ದಾದ್ದರಿಂದ ಯುಪಿಎ ಒಂದು ಉತ್ತಮ ನಿರ್ಧಾರಕ್ಕೆ ಬರಬಹುದೆಂದು ನಮ್ಮ ನಿರೀಕ್ಷೆ

  ReplyDelete
 12. We have been talking about corruption and have not done anything about it, we just needed a spark to voice against it and Anna has given that spark, I condemn your thoughts for politicizing the awareness of people. I have spoken to few people at Freedom Park & they all have sentiments towards political parties they have been voting for long time, despite they came there to support the movement because they feel politicians are looting crores & crores of money & why we should be the victims of inflation? Why should I pay taxes if someone else is looting that? And they clearly understand this Bill is not a One Point solution for the problem, instead it gives them great support to fight corrupt people.It is a simple thing to understand corruption leads to bad governance & common people have to suffer because of that.Before coming into a broader conclusion you have to understand these simple problems. But please don't try to curb this awareness of people because this is certainly a BIG STEP AHEAD. And I have seen few other articles here which seems to discourage the people who are questioning corruption. Please don't do that.

  Vinay

  ReplyDelete
 13. ಇಂದು ನಡೆಯುತ್ತಿರುವ ಲಕ್ಷ ಕೋಟಿಗಳ ಹಗರಣಗಳನ್ನು ನೋಡಿ ಒಂದು ಲಕ್ಷ, ಎರಡು ಲಕ್ಷಗಳ ಅಥವಾ 100 ಕೋಟಿ ಹಗರಣ ಮಾಡುವವರು ತಾನೇನು ದೊಡ್ಡ ತಪ್ಪು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಾರೆ ಮತ್ತು ಅಂತಹ ಭ್ರಷ್ಟಾಚಾರ ಮಾಡಲು ತಮಗೆ ತಾವೇ ಲೈಸೆನ್ಸ್ ಕೊಟ್ಟಿಕೊಳ್ಳುತ್ತಾರೆ. ಇದು ಮನುಷ್ಯನ ಸಹಜ ಸ್ವಭಾವ.
  ಇಂತಹ ಲಕ್ಷ ಕೊಟಿ ಹಗರಣಗಳನ್ನು ಮಿತಿಗೊಳಿಸಲು ನಡೆಯುತ್ತಿರುವ ಈ ಪ್ರಯತ್ನ ಯಶಸ್ವಿಯಾಗುತ್ತದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಇಲ್ಲಿರುವ ಬಹಳಷ್ಟು ಕಾಮೆಂಟುಗಳನ್ನು ಓದಿದಾಗ ಅನಿಸುತ್ತಿರುವದೇನೆಂದರೆ ಒಂದು ರೀತಿಯ ಸ್ವಮಂಥವ ಆರಂಭವಾಗಿದೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆ ಯಶಸ್ವಿಯಾಗಿ ನಡೆಯಲು ಇಂತಹ ಸ್ವಮಂಥನಗಳು ಕಾಲ ಕಾಲಕ್ಕೆ ನಡೆಯುತ್ತಿರಲೇಬೇಕು.

  ReplyDelete
 14. @ ಸಂಪಾದಕೀಯ,
  I had posted few comments yesterday, but cud not find here. May b bcos of the technical problems. Hence posting it again. Please notify me if these contain any obscene or offense contents.

  @Harsha Kugve
  I m posting few comments to w.r.t ur article here.

  {ಬೆಂಗಳೂರಿನಲ್ಲಿ ಚಳವಳಿಯ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವವರು ಲೋಕಸತ್ತಾ ಪಾರ್ಟಿ ಹಾಗೂ ರವಿಶಂಕರ್ ಗುರೂಜಿ ಶಿಷ್ಯರು. ಇವರಿಬ್ಬರಿಗೂ ಪ್ರತ್ಯೇಕ ಅಜೆಂಡಾಗಳಿವೆ. }
  ----------------------------------------------
  ಆ ಅಜೆಂಡಾ ಏನು ಎಂಬುದನ್ನು ದಯವಿಟ್ಟು ವಿವರಿಸಿ. ಇಲ್ಲಿ ಅಸ್ಪಷ್ಟತೆ ಗೋಚರಿಸುತ್ತದೆ.

  {ಇದೆಲ್ಲಾ ಟೀಂ ಅಣ್ಣಾಗೆ ತಿಳಿದಿಲ್ಲವೇ? ತಿಳಿದೂ ಇಂತಹವರನ್ನು ದೂರ ಇಟ್ಟು ಚಳವಳಿಯ ಪರಿಶುದ್ಧತೆಯನ್ನು ಕಾಪಾಡಿಕೊಳ್ಳದಿದ್ದರೆ ಅಂತಿಮವಾಗಿ ದುರ್ಬಲಗೊಳ್ಳುವುದು ಇಡೀ ಚಳವಳಿಯೇ ಅಲ್ಲವೇ?}
  -----------------------------
  ಈ ಬಗ್ಗೆ ಅಣ್ಣಾ ಅವರು ಮೊದಲೇ ಹೇಳಿದ್ದರು. ಪ್ರತಿಭಟನಾಕಾರರು ಸಾಂಸ್ತಿಕವಾಗಿ ಗುರುತಿಸಿಕೊಳ್ಳದೆ ವೈಯಕ್ತಿಕವಾಗಿ ಗುರುತಿಸಿಕೊಂಡು ಅವರಿಗೆ ಬೆಂಬಲ ಸೂಚಿಸಬಹುದೆಂದು. ಇದನ್ನೇ ಸಂತೋಷ್ ಹೆಗಡೆಯವರೂ ಹೇಳಿದ್ರು. ಆದರೆ ಅನೇಕ ಸಂಘ ಸಂಸ್ಥೆಗಳು ಅಣ್ಣಾರ ಬೆಂಬಲ ಸೂಚಿಸಿದ್ದರಿಂದ ಅಣ್ಣಾರ ನಿಲುವೇನೂ ಬದಲಾಗಲಿಲ್ಲ.ಬದಲಿಗೆ ಕೆಲವು ಬುದ್ಧಿಜೀವಿಗಳಿಗೆ ಕಿರಿಕಿರಿಯಾಯ್ತು ಅಷ್ಟೇ.

  {ಬೆಂಗಳೂರಿನಲ್ಲಿ ಭಾಷಣ ಮಾಡಿದ ಅಣ್ಣಾ ರಾಜ್ಯಸರ್ಕಾರದ ಭ್ರಷ್ಟಾಚಾರದ ಬಗ್ಗೆ ಒಂದೇ ಒಂದು ಮಾತಾಡಿದ್ದರೂ ಸಮಾಧಾನವಾಗುತ್ತಿತ್ತು. ಆದರೆ ಅವರಿಗ್ಯಾಕೆ ಜಾಣಕುರುಡು ಎಂದು ತಿಳಿಯಲಿಲ್ಲ.}
  ----------------------------------------------
  ಸ್ವಾಮೀ ಅಣ್ಣಾ ಪ್ರತ್ಯೇಕವಾಗಿ ಯಾವುದೇ ರಾಜ್ಯ ಸರ್ಕಾರದ ವಿರುದ್ಧ ಮಾತನಾಡುವ ಅಗತ್ಯ ಇಲ್ಲ. ಯಾಕೆ ಅಂದ್ರೆ ಅವರು ಮೊದ್ಲೇ ಹೇಳಿದಾರೆ ಎಲ್ಲ ಪಕ್ಷದವರೂ ಬ್ರಷ್ಟಾಚಾರದಲ್ಲಿ ತೊಡಗಿವೆ ಅಂತ. ನೀವ್ಯಾಕೆ ಅದನ್ನು ಜಾಣಕುರುಡುತನ ಎಂದು ತೆಳ್ಕೊತೀರ? ಇದು ನಿಮ್ಮ ಪೂರ್ವಗ್ರಹ ಪೀಡಿತ ಮನಸ್ತಿತಿಯನ್ನು ತೋರಿಸುತ್ತೆ.

  {ಈ ಚಳವಳಿ ಮಧ್ಯಮವರ್ಗದ ಜೊತೆ ಸಮಾಜದ ಬಹುದೊಡ್ಡ ವರ್ಗವಾದ ರೈತಾಪಿ, ಕಾರ್ಮಿಕರು, ಆದಿವಾಸಿಗಳನ್ನು ಒಳಗೊಳ್ಳಲು ಏನು ಮಾಡುತ್ತಿದೆ?. ಕೇಜ್ರಿವಾಲ್‌ರ ಸಂಘಟನೆಗೆ ಅದರ ಅಗತ್ಯವೇ ಕಾಣುತ್ತಿಲ್ಲ.}
  ------------------------------------------------
  ನಿಜ . ಈ ಚಳುವಳಿ ರೈತಾಪಿ,ಆದಿವಾಸಿ ವರ್ಗಗಳನ್ನು ಒಳಗೊಳುತ್ತಿಲ್ಲ.ಕಾರಣ ಈ ವರ್ಗದವರು ಸಂಕೀರ್ಣ ವಸ್ತುವಿಷಯ ಹಾಗೂ ತೊಡಕುಗಳನ್ನು ಅರ್ಥ ಮಾಡಿಕೊಳ್ಳಲಾರರು.

  {ಹೀಗಿರುವಾಗ ಇಲ್ಲಿ ಎರಡೇ ದಾರಿ. ಒಂದೋ ಅಣ್ಣಾ ಚಳವಳಿ ಎಲ್ಲಾ ಕ್ಯಾಬಿನೆಟ್ ಸದಸ್ಯರ ಮನವೊಲಿಸಿ ಅದು ಮಂಡನೆಯಾಗುವಂತೆ ನೋಡಿಕೊಳ್ಳುವುದು. ನಂತರ ಸಂಸತ್ ಸದಸ್ಯರ (ಸರಳ ಬಹಮತಕ್ಕೆ ಬೇಕಾದಷ್ಟು) ಮನವೊಲಿಸುವುದು. ಇದು ಸಾಧ್ಯವಾಗದ ಕಾಲಕ್ಕೆ ಟೀಂ ಅಣ್ಣಾ ಒಂದು ರಾಜಕೀಯ ಪಕ್ಷ ರಚಿಸಿ ಸಂಸತ್ತಿನೊಳಗೆ ಪ್ರವೇಶಿಸಿ ಇದಕ್ಕಾಗಿ ಹೋರಾಟ ನಡೆಸುವುದು. ಈ ಎರಡು ದಾರಿಗಳನ್ನು ಬಿಟ್ಟು ಬೇರೆ ದಾರಿ ಎಲ್ಲಿದೆ?}
  ---------------------------------------------
  ಈ ಎರಡು ದಾರಿಗಳು ಎಷ್ಟು impractical ಎಂಬುದರ ಅರಿವು ನಿಮಗಿದೆಯೇ? ಅಮರಣಾಂತ ಉಪಾವಾಸಕ್ಕೆ ಕೂತಾಗಲೇ ಮಣಿಯದವರು ಸುಮ್ಮನೆ ಮಣಿದಾರೆ?ಇನ್ನು ರಾಜಕೀಯ ಪಕ್ಷ ರಚಿಸಿ ಸಂಸತ್ತಿನೊಳಗೆ ಪ್ರವೇಶಿಸಿ ಹೋರಾಟ ನಡೆಸುವದು ಈಗ ನಡೆಸಿದ ಮಾರ್ಗಕ್ಕಿಂತಲೂ ಸಂಕೀರ್ಣವೇ ಅಲ್ಲವೇ?ಅದಕ್ಕೆ ಅದೆಸ್ಟು ಕಾಲಾವಕಾಶ ಬೇಕು?ಒಂದು ವೇಳೆ ಸಂಸತ್ತು ಪ್ರವೇಶಿಸಿದರೂ ಆಗಲೂ ಸಂಸತ್ತಿನಲ್ಲಿ ಬಹುಮತ ಸಿಗುವದೆಂಬ guarantee ಏನು?

  ReplyDelete
 15. ಕರ್ನಾಟಕದ ಭ್ರಷ್ಟಾಚಾರದ ವಿರುದ್ದ ಜನ ಯಾಕೆ ಹೊರಡುತ್ತಿಲ್ಲ ಅನ್ನುವ ನಿಮ್ಮ ಮಾತು ಬಾಲಿಶ ಅನಿಸುತ್ತದೆ. ಜನಕ್ಕೆ ತಮ್ಮ ಸಿಟ್ಟನ್ನು ತೋರಿಸಲು ಒಂದು ವೇದಿಕೆ ಬೇಕು. ಜನರನ್ನು ಒಟ್ಟುಗೂಡಿಸಲು ಒಬ್ಬ ನಾಯಕ ಬೇಕು. ಕರ್ನಾಟಕ ಸರಕಾರದ ಬಗ್ಗೆ ಜನರಿಗೆ ಬೇಸರವಿದ್ದರೂ ಅದನ್ನ ಹೊರ ಹಾಕಲು ಸರಿಯಾದ ವೇದಿಕೆ ಇರಲಿಲ್ಲ. ಅಂದ ಮಾತ್ರಕ್ಕೆ ಜನ ಕರ್ನಾಟಕ ಸರಕಾರದ ಬಗ್ಗೆ ಸಂತಸದಿಂದಿದ್ದರೆ ಎಂದಲ್ಲ. ಫ್ರೀಡಂ ಪಾರ್ಕನಲ್ಲಿ ಜನ ಕೇಂದ್ರ ಸರಕಾರದ ಬಗ್ಗೆ ಮಾತ್ರ ಆಕ್ರೋಶ ವ್ಯಕ್ತ ಪಡಿಸುತ್ತಿಲ್ಲ, ಜನ ಭ್ರಷ್ಟಾಚಾರದ ವಿರುದ್ದ ರೊಚ್ಚಿಗೆದ್ದಿದ್ದಾರೆ. ಅದನ್ನ ಪ್ರೋತ್ಸಾಹಿಸಬೇಕು ನಾವು

  ReplyDelete