Wednesday, August 17, 2011

ಅಮೂರ್ತ ಗುರಿಯತ್ತ ಅಣ್ಣಾ ಹಜಾರೆ ಹೋರಾಟ ಮತ್ತು ನಮ್ಮ ಹತಾಶೆಗಳು...


ಹತಾಶೆ ಭಾರತೀಯರ ಮೂಲಗುಣ. ದೊಡ್ಡದೊಡ್ಡ ಭ್ರಮೆಗಳಲ್ಲಿ ಮುಳುಗುವುದು ನಮಗೆ ಮಾಮೂಲು. ಭ್ರಮೆಗಳು ನೀರಮೇಲಿನ ಗುಳ್ಳೆಗಳಂತೆ ಒಡೆದುಹೋದಾಗ ಸುಸ್ತುಬೀಳುವವರು ನಾವು. ನಮಗೆ ಕನಸು ಕಟ್ಟುವುದು ಗೊತ್ತು. ಇಂಥ ಕನಸುಗಳೂ ಸಹ ಅಮೂರ್ತವಾಗೇ ಇರುತ್ತವೆ. ಗೊತ್ತು ಗುರಿಯಿಲ್ಲದ ದಾರಿಯಲ್ಲಿ ಎಷ್ಟು ಕಾಲ ನಡೆಯುವುದು?

ಭ್ರಷ್ಟಾಚಾರದ ವಿರುದ್ಧ ಕೇಳಿಬರುತ್ತಿರುವ ಘೋಷಣೆಗಳೂ ಸಹ ಅಮೂರ್ತ ಗುರಿಯನ್ನಿಟ್ಟುಕೊಂಡು ಹೊರಟಂತೆ ಕಾಣುತ್ತಿವೆ.  ಶತ್ರುವಿನ ಸ್ಥಾನದಲ್ಲಿ ನಿಂತಿರುವುದು ರಾಜಕಾರಣಿಗಳು ಮಾತ್ರ. ಹೌದಾ? ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ನಮ್ಮ ಶತ್ರುಗಳು ರಾಜಕಾರಣಿಗಳು ಮಾತ್ರನಾ? ಭ್ರಷ್ಟಾಚಾರಿಗಳು ಮಾತ್ರ ಭ್ರಷ್ಟಾಚಾರ ವಿರೋಧಿಗಳ ನಡುವೆ ಹಾಗೆ ಗೆರೆ ಹೊಡೆದು ವಿಭಾಗಿಸಿ ಗುರುತಿಸಲು ಸಾಧ್ಯವೇ?

ಜನಲೋಕಪಾಲ್ ಜಾರಿಗಾಗಿ ಅಣ್ಣಾ ಹಜಾರೆ ಮತ್ತು ತಂಡ ಸತ್ಯಾಗ್ರಹಕ್ಕೆ ಕುಳಿತಿದೆ. ಆದರೆ ಅದು ಜಾರಿಯಾಗುವ ಯಾವ ಸಾಧ್ಯತೆಯೂ ಗೋಚರಿಸುತ್ತಿಲ್ಲ. ಜನಲೋಕಪಾಲ್ ಬೇಕು ಎಂದು ಚಳವಳಿಗೆ ಇಳಿದಿರುವವರ ಪೈಕಿ ಶೇ.೯೯ರಷ್ಟಕ್ಕೂ ಹೆಚ್ಚು ಮಂದಿ ಅದನ್ನೊಮ್ಮೆ ಓದಿಕೊಂಡೇ ಇಲ್ಲ. ಅಣ್ಣಾ ಹಜಾರೆಯವರ ಜನಲೋಕಪಾಲ್ ಹಾಗು ಸರ್ಕಾರ ತರಲು ಹೊರಟಿರುವ ಲೋಕಪಾಲ್ ನಡುವೆ ಇರುವ ವ್ಯತ್ಯಾಸಗಳೂ ಅವರಿಗೆ ಗೊತ್ತಿಲ್ಲ.

ಕಾಂಗ್ರೆಸ್, ಬಿಜೆಪಿ, ಎಡಪಕ್ಷಗಳು ಸೇರಿದಂತೆ ಎಲ್ಲ ರಾಜಕೀಯ ಪಕ್ಷಗಳ ಮುಖಂಡರು ಇವತ್ತು ಲೋಕಸಭೆಯಲ್ಲಿ ಮಾತನಾಡಿದ್ದನ್ನು ಗಮನಿಸಿದರೆ ಜನಲೋಕಪಾಲ ಜಾರಿಯಾಗುವ ಯಾವ ಸಾಧ್ಯತೆಯೂ ಕಾಣುತ್ತಿಲ್ಲ. ಮಸೂದೆ ಸಿದ್ಧಪಡಿಸುವುದು ನಮ್ಮ ಕೆಲಸ, ಸಂಸತ್ತಿನ ಹೊರಗೆ ಕುಳಿತ ವ್ಯಕ್ತಿಯದಲ್ಲ ಎಂಬುದು ಸಂಸತ್ ಸದಸ್ಯರ ಪಟ್ಟು. ನಾವು ಸಿದ್ಧಪಡಿಸಿರುವ ಕರಡನ್ನೇ ನೀವು ಒಪ್ಪಿ ಎಂಬುದು ಅಣ್ಣಾ ತಂಡದ ಆಗ್ರಹ.

ಉಪವಾಸ ಸತ್ಯಾಗ್ರಹದ ಮೂಲಕ ಕೇಂದ್ರ ಸರ್ಕಾರವನ್ನು ಮಣಿಸಬಹುದು ಎಂಬುದು ಅಣ್ಣಾ ತಂಡದ ಎಣಿಕೆ. ಅವರನ್ನು ಜೈಲಿಗೆ ಕಳಿಸಿ, ಬಲಪ್ರಯೋಗ ಮಾಡಿ, ಕಾನೂನು-ಕಟ್ಲೆ ಮುಂದಿಟ್ಟುಕೊಂಡು ಎದ್ದೇಳಿಸಬಹುದು ಎಂಬುದು ಕೇಂದ್ರ ಸರ್ಕಾರದ ಲೆಕ್ಕಾಚಾರ. ಹಾವು ಸಾಯೋದಿಲ್ಲ, ಕೋಲು ಮುರಿಯೋದಿಲ್ಲ.

ಅಣ್ಣಾ ಚಳವಳಿಗೆ ಧುಮುಕಿರುವವರನ್ನು ಗಮನಿಸಿ ನೋಡಿ. ತರೇಹವಾರಿ ಜನಗಳು ಕಾಣಿಸ್ತಾ ಇದ್ದಾರೆ. ಒಂದು ವರ್ಗ ನಿಜವಾದ, ಪ್ರಾಮಾಣಿಕ ಕಳಕಳಿಯಿಂದ ಬಂದಿರುವವರು. ಭ್ರಷ್ಟಾಚಾರದಿಂದ ರೋಸಿದ ಜನರು ಇವರು. ಜನಲೋಕಪಾಲ್ ಬಂದರೆ ಯಾವುದೋ ಅಗೋಚರ ಯಕ್ಷಿಣಿಯ ಹಾಗೆ ಭ್ರಷ್ಟಾಚಾರ ಎಂಬುದು ದಿಢೀರನೆ ಮಾಯವಾಗುತ್ತೆ ಎಂಬುದು ಇವರ ನಂಬುಗೆ.

ಮತ್ತೊಂದು ವರ್ಗ ನಮ್ಮ ಸಂಸದೀಯ ಪ್ರಜಾಸತ್ತೆಯನ್ನೇ ನಂಬದವರು. ಈ ದೇಶ ಸರಿ ಹೋಗಬೇಕು ಅಂದ್ರೆ ಮಿಲಿಟರಿ ಆಡಳಿತ ಬರಬೇಕು ಕಣ್ರೀ ಎಂದು ಮಾತನಾಡುವ ಬೇಜವಾಬ್ದಾರಿ, ಅಪಾಯಕಾರಿ, ಅಪ್ರಬುದ್ಧ ಮನಸ್ಸುಗಳು.

ಇನ್ನೊಂದು ವರ್ಗ ನೇರಾನೇರ ಭ್ರಷ್ಟರೇ. ಸಮಾಜದ ಎದುರು ತಾವು ಆದರ್ಶವಾದಿಗಳೆಂದು ಫೋಸು ಕೊಡಲು ಬಯಸುವವರು. ತಮ್ಮ ಕಳಂಕಗಳನ್ನು ಈ ಮೂಲಕವಾದರೂ ತೊಳೆದುಕೊಳ್ಳಲು ಬಯಸುವವರು. ಪಾಪ ಮಾಡಿ ದೇವರ ಹುಂಡಿಗೆ ಹಣ ಹಾಕುವ ಶೈಲಿಯ ಜನರು ಇವರು.

ಮಗದೊಂದು ವರ್ಗ ಅಪ್ಪಟ ರಾಜಕೀಯ ಕಾರಣಗಳಿಗಾಗಿ ಬಂದಿರುವವರು. ಜನ ಲೋಕಪಾಲ್ ಆಗಲಿ ಇನ್ನೊಂದಾಗಲಿ ಅವರಿಗೆ ಮುಖ್ಯವಲ್ಲ. ಚಳವಳಿ ಸಹಜವಾಗಿಯೇ ಕೇಂದ್ರ ಸರ್ಕಾರದ ವಿರುದ್ಧ ಇರುವುದರಿಂದ ಜನರ ಆಕ್ರೋಶವನ್ನು ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವವರು.

ಮತ್ತೂ ಒಂದು ವರ್ಗವಿದೆ. ಅದು ಪ್ರಚಾರಪ್ರಿಯರ ವರ್ಗ. ಅವರಿಗೆ ಟಿವಿಗಳಲ್ಲಿ ಕಾಣಿಸಿಕೊಳ್ಳಬೇಕು, ಪತ್ರಿಕೆಗಳಲ್ಲಿ ತಮ್ಮ ಹೆಸರು ಬರಬೇಕು. ಒಂದು ವೇಳೆ ಹೆಸರು ಬರುತ್ತದೆ ಎಂದರೆ ಇದೇ ಜನರು ಜನಲೋಕಪಾಲದ ವಿರುದ್ಧವೇ ಮಾತನಾಡಬಲ್ಲರು.

ನಾಳೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರೂ ಭ್ರಷ್ಟಾಚಾರದ ವಿರುದ್ಧ, ಜನಲೋಕಪಾಲದ ಪರವಾಗಿ ಪ್ರತಿಭಟನೆ ನಡೆಸಲಿದ್ದಾರೆ. ಯಡಿಯೂರಪ್ಪ ಮತ್ತು ಸಂತೋಷ್ ಹೆಗ್ಡೆ ಇಬ್ಬರೂ ಭ್ರಷ್ಟಾಚಾರದ ವಿರುದ್ಧ ಒಟ್ಟಿಗೆ ನಿಂತು ಘೋಷಣೆ ಕೂಗುವಂತಾಗುವುದೇ ಕ್ರೂರ ವ್ಯಂಗ್ಯ. ಇನ್ನೂ ಯಾರ‍್ಯಾರು ಅಣ್ಣಾ ಬೆನ್ನಿಗೆ ನಿಲ್ಲುತ್ತಾರೋ ಗೊತ್ತಿಲ್ಲ.

ಸರಿಯಾಗಿ ಗಮನಿಸಿದರೆ ದಿಲ್ಲಿಯ ಜಂತರ್ ಮಂತರ್‌ನಲ್ಲಿ, ಇಂಡಿಯಾ ಗೇಟ್‌ನಲ್ಲಿ, ತಿಹಾರ್ ಜೈಲಿನ ಮುಂದೆ ಮೇಲೆ ಉಲ್ಲೇಖಿಸಿದ ಎಲ್ಲ ವೆರೈಟಿಯ ಜನರೂ ಕಾಣಿಸುತ್ತಾರೆ. ಕೆಲವರ ಕೈಯಲ್ಲಿ ರಾಷ್ಟ್ರಧ್ವಜ, ಕೆಲವರ ಕೈಯಲ್ಲಿ ಕೇಸರಿ ಧ್ವಜ, ಮತ್ತೆ ಕೆಲವರ ಕೈಯಲ್ಲಿ ಇನ್ನ್ಯಾವುದೋ ವೆರೈಟಿಯ ಧ್ವಜಗಳು. ಒಬ್ಬ ಬಾಬಾ ರಾಮದೇವ ಅದ್ಯಾವುದೋ ಕಾರು ಹತ್ತಿ ನಿಂತು ಮದುಮಗನಂತೆ ಫೋಜು ಕೊಟ್ಟು ಕೈ ಬೀಸುತ್ತಾರೆ. ಚಳವಳಿಯ ನಾಯಕರ‍್ಯಾರಾದರೂ ಬಂದು, ಇದು ಪೊಲಿಟಿಕಲ್ ರ‍್ಯಾಲಿ ಅಲ್ಲ, ಸುಮ್ಮನೆ ಇಳಿದು ಕುಳಿತುಕೊಳ್ಳಿ ಎಂದು ಗದರಿಸಿ ಹೇಳುವುದಿಲ್ಲ. ಚಳವಳಿ ಹಾದಿ ತಪ್ಪಿರುವ ಲಕ್ಷಣ ಇದು. ನಾಳೆ ರ‍್ಯಾಲಿ ನಡೆಸುವಾಗ ಯಾರೋ ಒಬ್ಬ ಅಥವಾ ಒಂದು ಗುಂಪು ಕಲ್ಲು ಬೀಸಲು ನಿಂತಿತೆಂದರೆ ಅದನ್ನು ನಿಯಂತ್ರಿಸುವವರು ಯಾರು?

ಬೆಂಗಳೂರಿನ ಫ್ರೀಡಂ ಪಾರ್ಕ್‌ಗೆ ಹೋಗಿ ಬನ್ನಿ. ಅಲ್ಲಿ ಚಳವಳಿಯನ್ನು ನಿಯಂತ್ರಿಸುವ ಬಹುತೇಕರಿಗೆ ಕನ್ನಡವೇ ಗೊತ್ತಿಲ್ಲ. ಎಲ್ಲಿಂದ ಬಂದ ಜನರು ಇವರು? ಇವರೆಲ್ಲ ಹೇಗೆ ಉದ್ಭವವಾದರು? ಚಳವಳಿಗೆ ಬರುವವರ ಪೈಕಿ ಯಾರು ಪ್ರಾಮಾಣಿಕರು, ಯಾರು ಭ್ರಷ್ಟರೆಂದು ಇವರು ಹೇಗೆ ನಿರ್ಧರಿಸುತ್ತಾರೆ? ಈ ಹಿಂದೆ ಭ್ರಷ್ಟಾಚಾರದಂಥ ಇನ್ನೂ ನೂರಾರು ಸಮಸ್ಯೆಗಳಿಗೆ ಸಂಬಂಧಿಸಿದಂತೆ ನಡೆದ ಸಾವಿರಾರು ಚಳವಳಿಗಳಲ್ಲಿ ಇವರ‍್ಯಾರೂ ಕಾಣಿಸಿಯೇ ಇರಲಿಲ್ಲವಲ್ಲ, ಯಾಕೆ?

ಕರ್ನಾಟಕದಲ್ಲಿ ಹಿಂದೆಲ್ಲ ಚಳವಳಿಗಳು ಘಟಿಸಿವೆ. ರೈತ ಚಳವಳಿ ಇಲ್ಲಿ ಸರ್ಕಾರವನ್ನೇ ಉರುಳಿಸುವಷ್ಟು ಶಕ್ತಿಶಾಲಿಯಾಗಿತ್ತು. ಚಳವಳಿಗಾರರಿಗೆ ಒಂದು ನೈತಿಕ ಸಂಹಿತೆ ಇತ್ತು. ಅವರು ಸರಳ ವಿವಾಹವಾಗುತ್ತಿದ್ದರು. ಅದ್ದೂರಿ ಮದುವೆಗಳಿಗೆ ಹೋಗುತ್ತಿರಲಿಲ್ಲ.  ಇವತ್ತು ಭ್ರಷ್ಟಾಚಾರ ವಿರೋಧಿ ಹೋರಾಟಗಾರರಿಗೆ ಇಂಥದ್ದೊಂದು ನೀತಿಸಂಹಿತೆ ಬೇಡವೇ? ನಮ್ಮೆಲ್ಲರ ಎದೆಯೊಳಗೇ ಒಂದು ಚಳವಳಿಯ ಕಿಚ್ಚು ಹೊತ್ತಬೇಕಲ್ಲವೇ? ನಮ್ಮೊಳಗಿನ ಲಾಲಸೆ, ಕೊಳ್ಳುಬಾಕತನ, ಜಾತೀಯತೆ, ಧರ್ಮಾಂಧತೆಯ ವಿರುದ್ಧ ನಾವು ಹೋರಾಡಬೇಕಲ್ಲವೇ? ಇಂಥ ಕೆಲಸವನ್ನು ನಮ್ಮದೇ ನೆಲದಲ್ಲಿ ನಡೆದ ರೈತ-ದಲಿತ ಚಳವಳಿಗಳು ಮಾಡಿದ್ದವಲ್ಲವೇ? ಗಾಂಧೀಜಿಯವರ ಆಂದೋಲನವೂ ನಿರಂತರವಾಗಿ ಆತ್ಮಶೋಧನೆ ಮತ್ತು ಆತ್ಮಶುದ್ಧಿಯನ್ನೇ ಕೇಂದ್ರೀಕರಿಸಿತ್ತಲ್ಲವೇ?

ಅಣ್ಣಾ ಹಜಾರೆ ನಮ್ಮ ನಡುವೆಯಿಂದ ಎದ್ದ ಸೂಪರ್ ಹೀರೋ ಹಾಗೆ ಕಾಣುತ್ತಿದ್ದಾರೆ. ಹಜಾರೆ ನಮ್ಮ ಒಳಗಿನ ಫ್ಯಾಂಟಸಿಗಳಿಗೆ ಮೂರ್ತ ರೂಪ ಕೊಡುತ್ತಿರುವ ಪಾತ್ರವಷ್ಟೆ. ಈ ಫ್ಯಾಂಟಸಿಗಳು ಯಾಕೆ ಹುಟ್ಟುತ್ತವೆಂದರೆ ನಾವು ಸಹಜವಾಗಿ, ಸರಳವಾಗಿ ಬದುಕಲು ಕಲಿಯದವರು. ಸದಾ ಅತೀಂದ್ರಿಯ, ಅತಿಮಾನುಷ ಶಕ್ತಿಗಳ ಕಡೆಗೆ ಕೈ ಚಾಚಿ ನಿಂತವರು ನಾವು. ಅಣ್ಣಾ ಸಹಾ ನಮಗೆ ಈಗ ಅತಿಮಾನುಷರಂತೆ ಕಾಣುತ್ತಿರುವುದರ ಹಿನ್ನೆಲೆಯಲ್ಲಿರುವುದು ಅಸಹಾಯಕತೆ, ಬೇಜವಾಬ್ದಾರಿ, ಕೀಳರಿಮೆ, ಸ್ವಾರ್ಥ ಮುಂತಾದ ದೌರ್ಬಲ್ಯಗಳೇ ಅಲ್ಲವೇ? ನಾವು ಯಾವತ್ತು ಸಮಷ್ಠಿ ಪ್ರಜ್ಞೆಯಿಂದ ವ್ಯವಹರಿಸಿದ್ದೇವೆ? ಯಾಕೆ ನಮ್ಮ ನಾಡಿನ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡು ಸತ್ತರೆ ಅದು ನಮ್ಮನ್ನು ಭಾದಿಸುವುದಿಲ್ಲ? ಮಲದ ಗುಂಡಿಯನ್ನು ಶುದ್ಧಗೊಳಿಸಲು ಹೋಗಿ ನಮ್ಮದೇ ಅಣ್ಣತಮ್ಮಂದಿರಂಥ ಯುವಕರು ಸತ್ತರೂ ನಮ್ಮನ್ನೇಕೆ ಅದು ಕದಲಿಸುವುದಿಲ್ಲ? ನಮ್ಮ ಸುತ್ತಲಿರುವ ಜನರ ಸಮಸ್ಯೆಗಳಿಗೆ ಕುರುಡಾಗೇ ಇರುವ ನಾವು ನಮ್ಮ ಅಸ್ತಿತ್ವದ ಸಮಸ್ಯೆ ಬಂದಾಗ ಯಾಕೆ ವಿಚಲಿತರಾಗುತ್ತೇವೆ?

ಹಳ್ಳಿಗಳಲ್ಲಿ ಬದುಕುವ ಜನರು ನಗರಗಳ ಮಧ್ಯಮ ವರ್ಗದ ನಾಗರಿಕರಿಗಿಂತ ಪ್ರಾಮಾಣಿಕರಾಗೇ ಇದ್ದಾರೆ. ಹಾಸಿಗೆ ಇದ್ದಷ್ಟು ಕಾಲು ಚಾಚಿ ಅವರಿಗೆ ಅಭ್ಯಾಸ. ಹಾಸಿಗೆಯಿಂದ ಹೊರಗೆ ಕಾಲು ಇಟ್ಟವರು ಕೊಳ್ಳುಬಾಕ ಸಂಸ್ಕೃತಿಗೆ ಬಲಿಯಾಗಿರುವ ನಗರವಾಸಿಗಳು ಮಾತ್ರ. ಸೂಪರ್ ಹೀರೋಗಳನ್ನು ಸೃಷ್ಟಿಸಿಕೊಳ್ಳುವುದರ ಜತೆಗೆ ಸೂಪರ್ ವಿಲನ್‌ಗಳನ್ನೂ ನಾವು ಸೃಷ್ಟಿಸಿಕೊಳ್ಳುತ್ತೇವೆ. ನಮ್ಮ ಬದುಕಿನ ಎಲ್ಲ ವೈಫಲ್ಯಗಳಿಗೂ ಈ ಸೂಪರ್ ವಿಲನ್‌ಗಳೇ ಕಾರಣ ಎಂದು ನಾವೆಲ್ಲರೂ ಭಾವಿಸಿದ್ದೇವೆ. ಸದ್ಯಕ್ಕೆ ಸೂಪರ್ ವಿಲನ್‌ಗಳ ಜಾಗದಲ್ಲಿ ರಾಜಕಾರಣಿಗಳಿದ್ದಾರೆ. ನಾವು ಪುಂಖಾನುಪುಂಖ ಬೈಯುತ್ತಿದ್ದೇವೆ.

ಇದೆಲ್ಲದರ ನಡುವೆ ಅಣ್ಣಾ ಹಜಾರೆಯವರನ್ನು ಹುತಾತ್ಮರನ್ನಾಗಿಸುವ ಯತ್ನಗಳೇನಾದರೂ ನಡೆಯುತ್ತಿವೆಯೇ ಎಂಬ ಆತಂಕ ಕಾಡುತ್ತಿದೆ. ಅಣ್ಣಾ ಸಹ ಮುಗ್ಧರಾಗಿ ಇಂಥ ಹುಚ್ಚು ಸಾಹಸಕ್ಕೆ ಮುಂದಾಗುತ್ತಿದ್ದಾರೋ ಎಂಬ ಭೀತಿಯೂ ಕಾಡುತ್ತಿದೆ.

ಅಣ್ಣಾಗೆ ಸಂಸತ್ತಿನ ಮೇಲೆ ನಂಬಿಕೆ ಇದೆ, ಆದರೆ ಒಳಗೆ ಕುಳಿತಿರುವ ಸದಸ್ಯರ ಮೇಲಲ್ಲ. ಇದು ಅವರದೇ ಹೇಳಿಕೆ. ಹೀಗಿರುವಾಗ ಅಣ್ಣಾ ಮತ್ತು ತಂಡ ಸದ್ಯ ಕೈಗೊಳ್ಳಬಹುದಾದ ವಿವೇಕದ ತೀರ್ಮಾನವೇನೆಂದರೆ ಅವರ ನಂಬುಗೆ ಕಳೆದುಕೊಂಡಿರುವ ಸಂಸತ್ ಸದಸ್ಯರು ಕುಳಿತುಕೊಳ್ಳುವ ಜಾಗದಲ್ಲಿ ಅವರೇ ಬಂದು ಕೂರುವುದು. ಇದು ಸಾಧ್ಯವಾಗುವುದು ಜನತಾಂತ್ರಿಕ ವ್ಯವಸ್ಥೆಯ ಅತ್ಯುನ್ನತ ಕ್ರಮವಾಗಿರುವ ಚುನಾವಣೆಗಳ ಮೂಲಕ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನೀವು ರಾಜಕಾರಣಿಗಳನ್ನು ದೂಷಿಸಿ, ಸರಿದಾರಿಗೆ ತರಲು ಯತ್ನಿಸಿ ವಿಫಲರಾಗುವುದಾದರೆ, ನೀವೇ ಆ ನಾಯಕತ್ವ ವಹಿಸಿಕೊಳ್ಳಲೂ ತಯಾರಿರಬೇಕಾಗುತ್ತದೆ. ಅಣ್ಣಾ ಈಗಾಗಲೇ ಯುವಜನತೆಗೆ ನಾಯಕತ್ವ ನೀಡಿದ್ದಾರೆ. ನಾಯಕತ್ವದ ಹೊಣೆಗಾರಿಕೆಯನ್ನು ನಿಭಾಯಿಸುವುದು ಸುಲಭದ ವಿಷಯವಲ್ಲ. ಅಣ್ಣಾ ಮತ್ತು ತಂಡ ತಮಗಿರುವ ಜನಬೆಂಬಲವನ್ನು ಅಧಿಕೃತವಾಗಿ ದೃಢಪಡಿಸಿಕೊಳ್ಳಬೇಕಿರುವುದು ಚುನಾವಣೆಗಳ ಮೂಲಕವೇ. ಸಂಸತ್ತಿನ ಹೊರಗೆ ನಿಂತು ತಾವು ಸಿದ್ಧಪಡಿಸಿದ ಮಸೂದೆಯನ್ನೇ ಪಾಸು ಮಾಡಿ ಎಂದು ಪ್ರಾಯೋಗಿಕವಲ್ಲದ ಬೇಡಿಕೆ ಮಂಡಿಸುವುದಕ್ಕಿಂತ ಸಂಸತ್ತಿನ ಒಳಗೆ ಪ್ರವೇಶಿಸಿ ಕಾಯಿದೆ ರೂಪಿಸುವ ಅಧಿಕೃತ ಹಕ್ಕು ಪಡೆದು ಅದನ್ನು ಮಾಡುವುದು ಒಳ್ಳೆಯದು.

ಇದೆಲ್ಲವನ್ನು ಹೇಳುತ್ತಿರುವಾಗ ದೇಶದ ಉದ್ದಗಲದಲ್ಲಿ ನಡೆಯುತ್ತಿರುವ ಭಾವಾವೇಶದ ಹೋರಾಟಗಳನ್ನು ಗಮನಿಸಿ ನೋಡಿ. ಜನಲೋಕಪಾಲ ಜಾರಿಯಾಗಲಾರದ ಸಂಕೀರ್ಣ ರಾಜಕೀಯ ವ್ಯವಸ್ಥೆಯಿರುವ ಈ ಹೊತ್ತಿನಲ್ಲಿ, ಇಡೀ ಚಳವಳಿಯ ಫಲಿತವು ದೇಶದ ಯುವಸಮುದಾಯವನ್ನು ಇನ್ನಷ್ಟು ಹತಾಶೆಗೆ ತಳ್ಳುತ್ತದಾ ಎಂಬ ನಿಜವಾದ ಆತಂಕ ನಮ್ಮದು.


ಸಂಬಂಧಿತ ಲೇಖನಗಳು:


ವಿ ದ ಕಾಮನ್ ಪೀಪಲ್ ಆಫ್ ಇಂಡಿಯಾ... ಎದ್ದು ನಿಂತಿದ್ದೇವೆ..


18 comments:

 1. ತುಂಬಾ ಅದ್ಭುತ ಲೇಖನ.ಚೆನ್ನಾಗಿ ವಿಮರ್ಶೆ ಮಾಡಿದ್ದೀರಿ...
  ಪ್ರತಿಭಟನೆ ಮಾಡುವ ಜನರಲ್ಲಿ ನೀವು ಹೇಳಿದಂತೆ ವರ್ಗಗಳು ಇರುವುದು ನೂರಕ್ಕೆ ನೂರರಷ್ಟು ಸತ್ಯ...
  ಕಾದು ನೋಡೋಣ ಮುಂದೇನಾಗುತ್ತದೆ ಎಂದು...

  ReplyDelete
 2. ಅಲ್ಲಾ ಸ್ವಾಮಿ ಇಡೀ ದೇಶವೇ ಇವತ್ತು ಭ್ರಷ್ಟಾಚಾರದಲ್ಲಿ ಮುಳುಗಿ ತೇಲುತ್ತಿರುವ ಸಂದರ್ಭವಿದು. ಇದು ನಿರ್ಮೂಲನೆಯಾಗಬೇಕಾದರೆ ಇಡೀ ದೇಶದ ಜನತೆಯೇ ಧಂಗೆದ್ದರೂ ಸಾಧ್ಯವಿಲ್ಲದ ಮಾತು. ಯಾಕೆಂದರೆ ಇವತ್ತು ಪ್ರಜಾಪ್ರಭುತ್ವ ವ್ಯವಸ್ಥೆ ಈ ಸ್ಥಿತಿಗೆ ತಲುಪಿ ನಿಗರಿ ನಿಂತುಬಿಟ್ಟಿದೆ. ಇಂತಹ ವ್ಯವಸ್ಥೆ ಬದಲಾಗಬೇಕಾದರೆ ಪ್ರತಿ ಮನುಷ್ಯನೂ ಭ್ರಷ್ಟಾಚಾರದ ವಿರುದ್ಧ ಸೆಟೆದು ನಿಲ್ಲಬೇಕಾಗುತ್ತದೆ. ಅಂತಹ ಸಮಯ ಬಂದರೆ ಮಾತ್ರ ಈ ವ್ಯವಸ್ಥೆಯನ್ನು ಬದಲಾಯಿಸಲು ಸಾಧ್ಯ. ಅದು ಬಿಟ್ಟು ಈ ಅಣ್ಣಾ ಹಜಾರೆ ಅವರೇ ಅಲ್ಲ ಮಹಾತ್ಮಗಾಂಧೀಜಿ ಮತ್ತೆ ಹುಟ್ಟಿ ಬಂದು ಒಂದು ತಿಂಗಳುಗಳ ಕಾಲ ಒಂದು ವರ್ಷ ಉಪವಾಸ ಸತ್ಯಾಗ್ರಹ ಮಾಡಿದರೂ ಬದಲಾಗದು. ನಮ್ಮನಿಮ್ಮ ಅಣ್ಣಾ ಹಜಾರೆ ಅವರೇ ತೆಗೆದುಕೊಳ್ಳಿ ವಾಟರ್ ಸೆಡ್ ಪ್ರಾಜೆಕ್ಟ್ನಲ್ಲಿ 2 ಲಕ್ಷ 49 ಸಾವಿರ ಹಣದ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ಇವರೂ ಸಹ ಸಚಾ ಅಲ್ಲವಲ್ಲ... ಇದನ್ನು ಹೇಳುತ್ತಾ ಹೋದರೆ ದಿನಗಳು ಕಳೆದರೂ ಬರೆಯುವುದು ಮಾತ್ರ ನಿಲ್ಲದು. ಯಾಕೆಂದರೆ ಇಂದಿನ ವ್ಯವಸ್ಥೆಯಲ್ಲಿ ಪ್ರತಿಯೊಂದು ವ್ಯವಸ್ಥೆಯಲ್ಲೂ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇದನ್ನು ಸದೆಬಡಿಯಲು ಸಾಮಾನ್ಯ ಜನತೆ ಕೈಯಲ್ಲಿ ಕಲ್ಲು, ಮಚ್ಚು, ದೊಣ್ಣೆ ಹಿಡಿದು ಹೋರಾಡಬೇಕೇನೋ.... ಆದರೆ ಅಣ್ಣಾ ಹಜಾರೆ ಅವರು ಒಂದು ಹೊಸ ತಿರುವು ಕೊಟ್ಟಿರುವುದಂತೂ ನಿಜ. ಮತ್ತೆ ಅದು ಒ್ಳೆಯದು ಹೌದು... ಆದರೆ ಇನ್ನೂ ಸ್ಪಲ್ಪ ಅಂದರೆ ಎರಡು ಮೂರು ವರ್ಷಗಳು ಕಳೆದಿದ್ದರೆ ಇರಾನ್, ಇಂಗ್ಲೆಂಡ್, ಲಿಬಿಯಾ ದೇಶಗಳ ಪ್ರಜೆಗಳು ಭ್ರಷ್ಟಾಚಾರದ ವಿರುದ್ಧ ದಂಗೆ ಎದ್ದು ಸಿಕ್ಕಸಿಕ್ಕಲೆಲ್ಲಾ ಕಲ್ಲೆಸೆದು ಅಲ್ಲೋಲಾ ಕಲ್ಲೋಲಾ ಸೃಷ್ಟಿಸಿ ಪ್ರಜಾತಂತ್ರದ ದುರಾವಸ್ಥೆಗೆ ಇತಿಶ್ರೀ ಆಡಿದ ಹಾಗೆ ಆಗುತ್ತಿತ್ತೇನೋ.....

  ReplyDelete
 3. ಈ ಲೇಖನ ಬರೆದವರ ಹೆಸರು ವಿಳಾಸ ಪ್ರಕಟಿಸಿ. ಅನಾಮಧೇಯವಾಗಿ ಬರೆದರೆ ಬೇಕಾದಷ್ಟು ಬೇಜವಾಬ್ದಾರಿಯಿ೦ದ ಬರೆಯಬಹುದು.

  ReplyDelete
 4. ನಿಮ್ಮ ಲೇಖನದಲ್ಲಿ ಚಳವಳಿಯ ಬಗ್ಗೆ ನಿಜವಾದ ಕಳಕಳಿ ಇದ್ದರೂ ಗೊಂದಲದ ಗೂಡೆನಿಸುತ್ತಿದೆ. ಜೊತೆಯಲ್ಲಿಯೇ ನೀವೇ ಹತಾಶೆಗೊಳಗಾಗಿದ್ದೀರೇನೋ ಎನಿಸುತ್ತಿದೆ. ಕೊನೆಯಲ್ಲಿ ಯಾವುದೇ ಸ್ಪಷ್ಟ ನಿಲುವಿಲ್ಲ. ನಿಜ ಅಣ್ಣಾ ಸಂಸತ್ ಪ್ರವೇಶಿಸಿ ಮಸೂದೆ ಮಂಡನೆಗೆ ಯತ್ನಿಸಬೇಕೆಂದು ಸೂಚಿಸಿದ್ದೀರಿ. ಇಷ್ಟೊಂದು ಜನಪ್ರಿಯತೆ ಗಳಿಸಿರುವ ಅಣ್ಣಾ ಚುನಾವಣೆಗೆ ನಿಂತರೆ ಖಂಡಿತ ಸೋಲುತ್ತಾರೆ. ಯಾಕೆಂದರೆ ಅಣ್ಣಾ ಹತ್ತಿರ ಹಣವಿಲ್ಲ ಜನರಿದ್ದಾರಷ್ಟೆ. ರಾಜಕಾರಣಿಗಳ ಬಳಿ ಜನರಿಲ್ಲ ಹಣವಿದೆ. ಹಣವನ್ನು ಕೊಟ್ಟರೆ ಜನ ಬಂದೇ ಬರುತ್ತಾರೆಂಬ ಆತ್ಮವಿಶ್ವಾಸ ರಾಜಕಾರಣಿಗಳದ್ದು. ಹಾಗೆಯೇ ಆಗಿದೆಯೂ ಕೂಡ. ಮಸೂದೆ ಜಾರಿಯಾದ ತಕ್ಷಣ ಮ್ಯಾಜಿಕ್ ನಡೆಯುವುದಿಲ್ಲ ನಿಜ. ಆದರೆ ಹೋರಾಟಕ್ಕೊಂದು ಗೆಲುವು, ಯುವಕರಲ್ಲಿ ಆತ್ಮವಿಶ್ವಾಸವನ್ನಾದರೂ ತರುವುದಲ್ಲವೇ. ನನಗೇಕೋ ನಿಮ್ಮ ಲೇಖನ ಹೋರಾಡುವವರಲ್ಲಿಯೂ ಹತಾಶೆ, ನಿರಾಶೆ, ವ್ಯವಸ್ಥೆಯ ವಿರುದ್ಧ ದನಿ ಎತ್ತದಂತೆ ಪರೋಕ್ಷವಾಗಿ ಕೆಲಸ ಮಾಡುವಂತಿದೆ ಎನಿಸುತ್ತಿದೆ. - ಅಪೂರ್ವ

  ReplyDelete
 5. ಹಿಂದೂ ಪತ್ರಿಕೆಯಲ್ಲಿ ಹೇಮಾ ರಾಘವನ್, ಅಣ್ಣಾ ಹಜಾರೆಯವರಿಗೆ ಬರೆದ ಬಹಿರಂಗ ಪತ್ರ.

  Dear Shri Anna Hazareji,

  I am a septuagenarian like you. Like you, I fight for principles and fight, following the Gandhian way of satyagraha. But you may not include me as a member of ‘civil society' as we differ in the means to be adopted to secure the ideal ends.

  Gandhiji never resorted to coercion to have his way. He never used fasting to blunt his opponent to accept his views and ideals. He never abused the British whose rule he fought against (except for one odd remark about a ‘gutter inspector'). But you call the Prime Minister a ‘liar' because he has accepted the Cabinet decision not to include the Prime Minister within the purview of the Lokpal.

  Dr. Singh is a team leader and does not impose his views on his Cabinet. This is functioning in the true spirit of democracy where the collective wisdom of the majority is respected as against one's own personal views. Did Gandhiji ever tell the British: “Come on, jail me,” when he went on fast. No, because he did not want to deny the British government its right to action. Aren't you whipping up mob hysteria and anger just because the government has not accepted six out of your 40 clauses? Do you mean to say that there can be only your thinking and there shall be no alternative? Your silence about the mining scam in Karnataka is baffling. But you choose to vent your righteous ire on the Prime Minister and his government!

  You say you are not against democracy but against the government. The government, elected by the people can be thrown out at the next hustings. This is democracy. If you are in favour of democracy, why are you against a democratically-elected government that is given a mandate of just five years to govern?

  You did a yeoman service, pushing the government to table the Lokpal Bill in this monsoon session. But you cannot say that ‘it should be my team's version and nothing else.' You want to bring all three main pillars of democracy — the legislative, the executive and the judiciary — under the jurisdiction of the Lokpal to function as an effective single pillar for deciding on crime and punishment. The dance of democracy unleashed by you and your team has every danger of destroying our democracy.

  ReplyDelete
 6. ನಿಮ್ಮ ಲೇಖನದಲ್ಲಿ ನಿರಾಶೆಯ ಧ್ವನಿ ಕಾಣಿಸುತ್ತಿದೆ. ಆಶಾವಾದಿಗಳಾಗಿರೋಣ, ನಿರಾಶೆ ಬೇಡ. ಸದ್ಯದ ಚುನಾವಣಾ ವ್ಯವಸ್ಥೆ, ವೋಟು ಹಾಕುವ ಭಾರತೀಯರ ಮನೋಭಾವ, ಜಾತೀಯತೆ ಹಾಗೂ ಮತದಾರರ ನಿಲುವುಗಳನ್ನು ನೋಡಿದರೆ ಪ್ರಾಮಾಣಿಕ ಜನರು ಗೆಲ್ಲುವ ವಾತಾವರಣ ಇಲ್ಲ. ಹೀಗಾಗಿ ಅಣ್ಣಾ ಅವರ ಹೋರಾಟ ಅನಿವಾರ್ಯ, ತಪ್ಪು ಎನ್ನಲಾಗದು. ಅಣ್ಣಾ ಅವರು ಸಂಸತ್ತಿನ ಮೇಲೆ ತಮ್ಮ ನಿಲುವುಗಳನ್ನು ಹೇರುತ್ತಿದ್ದಾರೆ ಎಂಬ ಪ್ರಚಾರವೂ ನಡೆಯುತ್ತಿದೆ. ಆದರೆ ಇಂದಿನ ಭಾರತದ ಸ್ಥಿತಿ ನೋಡಿದರೆ ಸಂಸತ್ತಿನ ಮೇಲೆ ನಿಲುವುಗಳನ್ನು ಹೇರಿದರೂ ತಪ್ಪಲ್ಲ ಎಂದು ಕಾಣುತ್ತದೆ. ಅಣ್ಣಾ ಅವರು ಹೇರುತ್ತಿರುವುದು ದೇಶದ ಒಳಿತಿಗಾಗಿಯೇ ಹೊರತು ಅವರ ಸ್ವಾರ್ಥಕ್ಕಾಗಿ ಅಲ್ಲ ತಾನೆ? ಸರ್ಕಾರ ಜನಾಭಿಪ್ರಾಯವನ್ನು ಕಡೆಗಣಿಸುತ್ತಿದೆ. ಪ್ರಧಾನ ಮಂತ್ರಿ, ಸಂಸತ್ಸದಸ್ಯರ ನಡವಳಿಕೆಗಳು ಹಾಗೂ ಸುಪ್ರೀಂ ಕೋರ್ಟಿನ ನ್ಯಾಯಾಧೀಶರನ್ನೂ ಲೋಕಪಾಲ ವ್ಯಾಪ್ತಿಗೆ ಸೇರಿಸಿದರೆ ಏನೂ ತೊಂದರೆ ಆಗದು, ಇದು ಅಗತ್ಯವಾಗಿ ಆಗಬೇಕಾದ ಕೆಲಸ. ತಮ್ಮ ನಡವಳಿಕೆಗಳನ್ನು ಗಮನಿಸಿ ತಪ್ಪು ಮಾಡಿದರೆ ಶಿಕ್ಷಿಸುವವರು ಇದ್ದಾರೆ ಎಂದಾದಾಗ ಮನುಷ್ಯ ತಪ್ಪು ಮಾಡಲು ಆಲೋಚನೆ ಮಾಡುತ್ತಾನೆ. ಪೋಲಿಸ್ ವ್ಯವಸ್ಥೆ ಇರುವುದು ಇದೇ ಕಾರಣಕ್ಕಾಗಿ ತಾನೆ. ಪೋಲಿಸ್ ವ್ಯವಸ್ಥೆ ಬೇಡ, ಇದು ಜನರ ಮೂಲಭೂತ ಹಕ್ಕಿನ ಉಲ್ಲಂಘನೆ, ಜನಸಾಮಾನ್ಯರ ಕೆಲಸಗಳಿಗೆ ಅಡ್ಡಿ ಮಾಡುತ್ತದೆ ಎಂಬ ಪರಿಸ್ಥಿತಿ ಇದ್ದರೆ ಏನಾಗಬಹುದು ಯೋಚಿಸಿ. ಅಂಥ ಸ್ಥಿತಿ ಇದ್ದರೆ ಕೊಲೆ, ದರೋಡೆ, ಸುಲಿಗೆ, ವಂಚನೆ ಮೇರೆ ಮೀರಿ ಅರಾಜಕತೆ ಉಂಟಾಗುವುದಿಲ್ಲವೇ. ಇದೇ ರೀತಿ ಸಂಸದರು, ಪ್ರಧಾನ ಮಂತ್ರಿ, ಸುಪ್ರೀಂ ಕೋರ್ಟಿನ ನ್ಯಾಯಾಧೀಶ ಅಥವಾ ಎಷ್ಟೇ ದೊಡ್ಡ ವ್ಯಕ್ತಿ ಇರಲಿ ಕಾನೂನು ಎಲ್ಲರಿಗೂ ಅನ್ವಯ ಆಗಬೇಕು. ತಪ್ಪು ಮಾಡಿದ ದೊಡ್ಡ ವ್ಯಕ್ತಿಗಳಿಗೂ ಶಿಕ್ಷೆ ಆದರೆ ಆ ಸ್ಥಾನಗಳಲ್ಲಿ ಇರುವವರು ತಪ್ಪು ಮಾಡಲು ಹಿಂಜರಿಯುತ್ತಾರೆ.-ಆನಂದ ಪ್ರಸಾದ್

  ReplyDelete
 7. chunavaneya mula uddesh iderabeku ..... navellaru bhrastatheyinda duravirabeku... annara horata dikku thapputhide ennuvudakkintha .. ondu hosa horatakke nandiyayithu ... modalu navella brasta brast muktharagalu prayathnisona

  ReplyDelete
 8. ಚುನಾವಣೆ ನಿಂತು ಗೆದ್ದು ಒಂದು ಪಕ್ಷ ಇಡೀ ದೇಶದಲ್ಲಿ ಜಯ ಸಾಧಿಸಿ ಅಲ್ಲಿ ಇವರು ಕೂತು ಜನ ಲೊಕ್‌ಪಲ್ ಮಸೂದೆ ಮಂಡಿಸ ಬೇಕು ಅನ್ನೋದು ನಿಮ್ಮ ಅರ್ಥ ಅಲ್ಲವೇ??

  ಇದಕ್ಕೆ ಎಸ್ಟು ವರ್ಷ ಇದಿಯುತ್ತೆ? ಅಲ್ಲೀವರೆಗೂ ಅಣ್ಣ ಬದುಕಿರೋ ಸಂಬವ ಉಂಟೆ? ಇದೆಲ್ಲ ಸಾಧು ಅಲ್ಲ... ಇಂದೇನು Right of Information Act ದೇಶಕ್ಕೆ ಒಳ್ಳೇದಲ್ಲ ಅದರಿಂದ ದೇಶದ ಸಾರ್ವಭೂಮಕ್ಕೆ ಧಕ್ಕೆ ಆಗುತ್ತೆ ಅಂತ ಇದೆ ರಾಜಕಾರಣಿಗಳು ಹೇಳಿಲ್ವೆ? ಬೇಡ ಅಂತ ದರ್ಪ ತೋರಿಸಿಲ್ವೇ? ಈಗ ಅದರಿಂದ ತಾನೇ 2G & Yeddi scam ಹೊರಗೆ ಬಂದಿದ್ದು?

  ಒಪ್ಪಿಕೊಳ್ಳೋಣ ನಾವೆಳ್ಲು ಬ್ರಷ್ಟರೆ ಆಗಾಂಟ ನಾವು ಸರಿಯಾದ ವ್ಯವಸ್ತೆ ನೇ ಬೇಡ ಅಂದ್ರೆ ಹೆಂಗೆ? ಒಂದು ಕತಿನ ಕಾನೂನು ಎಲ್ಲರೂ ಒಳ್ಳೇ ಮಾಗ್ರ್‌ದಲ್ಲಿ ನದಿಯೋಕೆ FORCE ಮಾಡಿದ್ದೆ ಆದ್ರೆ ಅದು ಬರಲಿ ಅಲ್ಲವೇ??

  ಸ್ವಲ್ಪ ಯೋಚಿಸಿ ಅದು ಬಿಟ್ಟು ಇದೆಲ್ಲ ಆಗೋಲ್ಲ ಎಲ್ಲರೂ ಬ್ರಷ್ಟರೆ ಅಂತ ಬಡ್ಕೋಟಾ ಇದ್ದಾರೆ ಏನು ಸ್ವಾಮ್ಯ್ ಪ್ರಯೋಜನ??

  ReplyDelete
 9. ಜನಪ್ರಿಯ ವ್ಯಕ್ತಿಗಳನ್ನು ತೆಗಳುವ ಖಾಯಿಲೆ ಹೊಸದಲ್ಲ ಬಿಡಿ..
  ಭ್ರಷ್ಟಾಚಾರ ಎನ್ನುವುದು ರಾಜಕಾರಣಿಗಳಿಗೆ ಮಾತ್ರ ಸೀಮಿತವಲ್ಲ.. ಆದರೆ ಭ್ರಷ್ಟಾಚಾರಕ್ಕೆ ಮೂಲ ಅಧಿಕಾರ. ಅಧಿಕಾರದ‌ ಮೂಲ ರಾಜಕಾರಣಿಗಳು.
  "ಜನಲೋಕಪಾಲ್ ಬೇಕು ಎಂದು ಚಳವಳಿಗೆ ಇಳಿದಿರುವವರ ಪೈಕಿ ಶೇ.೯೯ರಷ್ಟಕ್ಕೂ ಹೆಚ್ಚು ಮಂದಿ ಅದನ್ನೊಮ್ಮೆ ಓದಿಕೊಂಡೇ ಇಲ್ಲ." ಇರಬಹುದು ಸ್ವಾಮಿ.. ಅವರೆಲ್ಲಾ ನಂಬಿರುವುದು ಅಣ್ಣಾ ಅವರನ್ನು. ಅವರಿಗೆ ಗೊತ್ತು ಅಣ್ಣಾ ಎಲ್ಲರ ಒಳ್ಳೆಯದಕ್ಕಾಗಿ ಇದನ್ನೆಲ್ಲಾ ಮಾದುತ್ತಿದ್ದಾರೆಂದು. ಇಲ್ಲಿ ನಂಬಿಕೆ ಮುಖ್ಯ.

  "ಜನಲೋಕಪಾಲ್ ಬಂದರೆ ಯಾವುದೋ ಅಗೋಚರ ಯಕ್ಷಿಣಿಯ ಹಾಗೆ ಭ್ರಷ್ಟಾಚಾರ ಎಂಬುದು ದಿಢೀರನೆ ಮಾಯವಾಗುತ್ತೆ ಎಂಬುದು ಇವರ ನಂಬುಗೆ." ಬಾಲಿಶವಾದ ಹೇಳಿಕೆ. ಇರಲಿ.. ಹಾಗಿದ್ದರೂ ತಪ್ಪೇನು..? ಸುಮ್ಮನೆ ಕೈಕಟ್ಟಿ ಕೂರುವುದಕ್ಕಿಂತ ಪ್ರಯತ್ನಿಸುವುದು ಒಳ್ಳೆಯದಲ್ಲವೇ..?

  "ಚಳವಳಿಗೆ ಬರುವವರ ಪೈಕಿ ಯಾರು ಪ್ರಾಮಾಣಿಕರು, ಯಾರು ಭ್ರಷ್ಟರೆಂದು ಇವರು ಹೇಗೆ ನಿರ್ಧರಿಸುತ್ತಾರೆ?" ಇದನ್ನೇನು ಭ್ರಷ್ಟರನ್ನು ಗುರುತಿಸಿ ಥಳಿಸುವ ಕಾರ್ಯಕ್ರಮವೇ..?

  ReplyDelete
 10. 100 ರೂಪಾಯಿ ತಿನ್ನುವವನು ಸಾವಿರ ರೂಪಾಯಿ ತಿನ್ನುವವನನ್ನು ನೋಡಿ ಸಮಾಧಾನ ಮಾಡಿಕೊಳ್ಳುತ್ತಾನೆ. 10 ಕೋಟಿ ತಿನ್ನುವವನು 100 ಕೋಟಿ ತಿನ್ನುವವನನ್ನು ನೋಡಿ ಸಮಾಧಾನ ಮಾಡಿಕೊಳ್ಳುತ್ತಾನೆ. ಯಡಿಯೂರಪ್ಪನವರು 2ಜಿ ಹಗರಣವನ್ನು ನೋಡಿ ತಾನು ಮಾಡಿದ್ದು ದೊಡ್ಡದಲ್ಲವೆಂದು ಸಮಾಧಾನ ಮಾಡಿಕೊಳ್ಳುತ್ತಾರೆ. ಹೀಗಾಗಿ 100 ಕೋಟಿ ತಿನ್ನುವವ ಒಬ್ಬನಿದ್ದರೆ 10 ಕೋಟಿ ತಿನ್ನಲು 100 ಜನರು ತಮಗೆ ತಾವೇ ಲೈಸೆನ್ಸ್ ಕೊಟ್ಟಿಕೊಳ್ಳುತ್ತಾರೆ. ಹೀಗಾಗಿ ಭ್ರಷ್ಟಾಚಾರದ ಮಿತಿ ಹೆಚ್ಚಾಗದಂತೆ ನೋಡಿಕೊಳ್ಳಲು ಜನಲೋಕಪಾಲದಂಥ ಕಾನೂನುಗಳು, ಅಣ್ಣಾ ಹಜಾರೆಯರಂತಹ ಹೋರಾಟಗಳು ಅನಿವಾರ್ಯವಾಗುತ್ತವೆ. ದಿನದಿಂದ ದಿನಕ್ಕೆ ಭ್ರಷ್ಟಾಚಾರದ ಗರಿಷ್ಠ ಮಿತಿಯನ್ನು ಕಡಿಮೆಗೊಳಿಸಲು ಇಂತಹ ಹೋರಾಟಗಳು ಅನಿವಾರ್ಯ. ಎಲ್ಲಕ್ಕೂ ಒಂದು ಮಿತಿ ಇದೆ. ಅದು ಭ್ರಷ್ಟಾಚಾರಕ್ಕೂ ಅನ್ವಯಿಸುತ್ತದೆ.

  ReplyDelete
 11. ಏಯ ಥೂ... ಏನ್ರೀ ಸಂಪಾದಕೀಯ... ಏನ್ ಆಗಿದೆ ನಿಮಗೆ?
  "ಜನಲೋಕಪಾಲ್ ಬೇಕು ಎಂದು ಚಳವಳಿಗೆ ಇಳಿದಿರುವವರ ಪೈಕಿ ಶೇ.೯೯ರಷ್ಟಕ್ಕೂ ಹೆಚ್ಚು ಮಂದಿ ಅದನ್ನೊಮ್ಮೆ ಓದಿಕೊಂಡೇ ಇಲ್ಲ." ನೀವು ಹೇಳಿದ್ದು ನಿಜ. ಆದರೆ ನೀವು ಓದಿಕೊಂಡಿದಿರ ತಾನೇ? ಹಾಗಾದ್ರೆ ಹೇಳಿ ನಮಗೆ ಆ ಮಸೂದೆ ಬೇಕೋ ಬೇಡವೋ ಅಂತ?

  ನೀವೇ ಹೇಳಿರುವವರ ಹಾಗೆ ಒಂದು ವರ್ಗ, ಮತ್ತೊಂದು ವರ್ಗ, ಇನ್ನೊಂದು ವರ್ಗ, ಮಗದೊಂದು ವರ್ಗ ಮತ್ತೂ ಒಂದು ವರ್ಗವಿದೆ. ಅದು ಪ್ರಚಾರಪ್ರಿಯರ ವರ್ಗ. ಅದು ನೀವು ಅಂತ ನನಗೆ ಈಗ ಅನಿಸುತ್ತಿದೆ. ಯಾಕಂದ್ರೆ ಮಲ ಹೊರುವವರ ಬಗ್ಗೆ ಅಷ್ಟೆಲ್ಲ ಮಾಹಿತಿ ನಿಡಿದ್ರಿ. ಜೀ

  ಟಿವಿಯಲ್ಲಿ ಬರೋ "ಬ್ರಹತ್ ಬ್ರಹ್ಮ್ಹಂದ " ದ ಬಗ್ಗೆ ಒಂದು ಚಳುವಳಿಯನ್ನೇ ಶುರು ಮಾಡಿದ್ರಿ. ನಾವು ನಿಮಗೆ ಸಾಥ ನೀಡಿದ್ವಿ. ಹಾನಗಲ್ ಹುಡುಗನಿಗೆ ಸೈಕಲ್ ಕೊಡ್ಸಿದ್ರಿ. ನಮ್ಮ ಮನಸ್ಸನ್ನ ಗೆದ್ದು ಬಿಟ್ರೀ. ಇವೆಲ್ಲ ನೀವು ಶುರು ಮಾಡಿದ ಸಾಮಾಜಿಕ ಕೆಲಸಗಳು. ಅದಕ್ಕೆ ನಮ್ಮ ಬೆಂಬಲ ಇತ್ತು. ಇವತ್ತು

  ಅಣ್ಣಾಜಿ ಶುರು ಮಾಡಿದ ಈ ಚಳುವಳಿಗೆ ನಿಮ್ಮ ಬೆಂಬಲ ಇಲ್ಲ. ಯಾಕೆ? ನೀವು ಇದನ್ನ ಶುರು ಮಾಡಿಲ್ಲ ಅಂತಾನೋ? ಅಥವಾ ನಿಮಗೆ ಅವರಷ್ಟು ಪ್ರಚಾರ ಸಿಗಲಿಲ್ಲ ಅಂತಾನೋ?

  ನೀವೇ ಹೇಳಿದ ಹಾಗೆ "ದೊಡ್ಡದೊಡ್ಡ ಭ್ರಮೆಗಳಲ್ಲಿ ಮುಳುಗುವುದು ನಮಗೆ ಮಾಮೂಲು. ಭ್ರಮೆಗಳು ನೀರಮೇಲಿನ ಗುಳ್ಳೆಗಳಂತೆ ಒಡೆದುಹೋದಾಗ ಸುಸ್ತುಬೀಳುವವರು ನಾವು ". ಈಗ ಅದು ನಿಮ್ಮ ವಿಷಯದಲ್ಲಿ ನಿಜ ಅನಿಸುತ್ತಿದೆ.

  "ಕಾಂಗ್ರೆಸ್ ನಡಿಗೆ ಜನರ ಕಡೆಗೆ" ಆಗಬಹುದು. ಅದೇ "ಜನರ ನಡಿಗೆ ಸರಕಾರದ ಕಡೆಗೆ" ಆದ್ರೆ ಅದು ಅಸಂವಿಧಾನಿಕ ಅಲ್ವಾ?

  :-) ನಿಜವಾಗಲು ನೀವು ಪ್ರಚಾರ ಪ್ರೀಯರೇ ಅನಿಸುತ್ತಿದೆ..

  ReplyDelete
 12. ನಗಬೇಕೋ.. ಅಳಬೆಕೋ.. ಗೋಟ್ಟ್‌ತಾಗ್ತಾ ಇಲ್ಲ .. ಈ ಲೇಖನದ ನೋಡಿ.. very immeature and with out any studies..

  This is not the way to picture /or report this ongoing agitation...

  The best part soojimallige mentioning about 2.5 lakh .. lolz.., and the anonymas who is copy pasting here , and not telling his views !

  ReplyDelete
 13. ಸಂಪಾದಕೀಯದ ಲೇಖನಗಳನ್ನು ಓದುತಿದ್ದ ನನಗೆ ಇದರ ಬಗ್ಗೆ ಗೌರವ ಇತ್ತು. ಈ ಲೇಖನ ಓದಿದಾಗ ಸಂಪಾದಕೀಯದ ಬಗ್ಗೆ ಅಸಹ್ಯ ಮೂಡುತ್ತಿದೆ. ಕ್ಷಮಿಸಿ!

  ReplyDelete
 14. ರೀ ಸಂಪಾದಕೀಯ .... ಪುಣ್ಯಕ್ಕೆ ನೀವು ಯಾವದಾದರೂ ದೊಡ್ಡ ಪತ್ರಿಕೆಗೆ ಸಂಪಾದಕರಾಗಿಲ್ಲ ಎಂದು ಊಹಿಸಿದ್ದೇನೆ ..... ಅಕಸ್ಮಾತ್ ಆಗಿದ್ದರೆ ಆ ಪತ್ರಿಕೆಯ ಒದುಗರನ್ನು ದಾರಿ ತಪ್ಪಿಸುವದು ಗ್ಯಾರಂಟಿ .... ನಿಮ್ಮಂಥ Resigned & Cynical ಜನ .... ಯಾವಾಗಲೂ ಹೀಗೆ .... ತಾವೂ ಏನೂ ಮಾಡಲ್ಲ ... ಮಾಡವ್ರನ್ನ ಕಂಡು ... ಕಾಲೆಳೆಯೋದ್ನ ಬಿಡಲ್ಲ .... ಸ್ವಾಮಿ ಫ್ರೀಡಮ್ ಪಾರ್ಕ್ ನಲ್ಲಿ ... ಇಂಥ ಮಳೆಯಲ್ಲಿಯೂ, ಛಳಿ ಲೆಕ್ಕಿಸದೇ, ನೂರಾರು ಕೆಲಸಗಳಿದ್ರೂ ಸಹ ಬಂದು ತಮ್ಮ ಸಮೋರ್ಟ್ ಕೊಡ್ತಾ ಇರೋ ಬೆಂಗಳೂರಿಗ ಎಲ್ಲಿ .... ಮನೆಯಲ್ಲಿ, ಆಫೀಸಿನಲ್ಲಿ .... ಬಿಸಿ ಕಾಫೀ ಹೀರುತ್ತ ಟೀವೀ ಮತ್ತು ಇಂಟರ್ ನೆಟ್ ನಲ್ಲಿ ಬರುತ್ತಿರುವ ಸುದ್ದಿ ನೋಡುತ್ತ ... ನಿಮ್ಮ ನೆಗೆಟಿವಿಟಿ ಹೇರುತ್ತಿರುವ ಇಂಥ ಲೇಖನ ಪೋಸ್ಟ್ ಮಾಡುತ್ತಿರುವ ನೀವೆಲ್ಲಿ ?

  ReplyDelete
 15. ನಮ್ಮ ಟೀವಿ ಮಾಧ್ಯಮಗಳ ವರದಿಗಾರರು ಕೂಗಾಡುವ ದೃಶ್ಯ ನೋಡುವುದೇ ಕಿರಿಕಿರಿ. ಅಬ್ಬರಿಸಿ ಅರಚುವುದನ್ನೇ ಅರ್ಹತೆ ಎಂದುಕೊಂಡಿದ್ದಾರೆ ಇವರು.
  ಇದ್ದುದರಲ್ಲೇ ಇಂಗ್ಲಿಷ್/ ಹಿಂದಿ ಟೀವಿಗಳ ವರದಿಗಾರರು ಒಂದಷ್ಟು ವಾಸಿ. ನಿರ್ಭಾವುಕರಾಗಿ ಚಳವಳಿಯನ್ನು ಕಣ್ಣಿಗೆ ಕಟ್ಟುವಂತೆ ತೋರಿಸುತ್ತಿದ್ದಾರೆ. ನಮ್ಮ ಕನ್ನಡ ಚಾನೆಲ್ನಗಳ ವರದಿಗಾರರು ತಾವು 'ವದರುಗಾರರರು' ಎಂದು ಭಾವಿಸಿದಂತಿದೆ.
  ಗಗನದೀಪ್ ಎಸ್.ಕೆ.

  ReplyDelete
 16. ಜನ ಭ್ರಷ್ಟಾಚಾರದ ವಿರುದ್ದ ದೃಢವಾದ ಕಾನೂನಿನ ಬಗೆಗೆ ಚಿಂತಿಸುವುದಕ್ಕಿಂತ ಹೆಚ್ಚು ಅಣ್ಣಾ ಅವರ ಉಪವಾಸ ಮುಖ್ಯ ಎಂದು ಕೊಂಡಿದ್ದಾರೆ. ಅಣ್ಣಾ ಉಪವಾಸ ಮಾಡಲಿ, ಬಿಡಲಿ ಕಾನೂನು ಜಾರಿಯಾಗುವಂತೆ ನೋಡಬೇಕು. ಇದಕ್ಕಾಗಿ ಜನ ಈಗಿರುವ ಸಂಸತ್ ಸದಸ್ಯರನ್ನು ಮನವರಿಕೆ ಮಾಡಿಸಿ ಕಾನೂನು ಸಂವಿಧಾನ ಬದ್ದವಾಗಿ ಸಂಸತ್ ನಲ್ಲಿ ಜ್ಯಾರಿಯಾಗುವಂತೆ ಮಾಡಬೇಕು. ಅಣ್ಣಾ ಅವರಿಗಿಂತ ಮುಖ್ಯ ನಮಗೆ ಕಾನೂನು ಮುಖ್ಯ. ಅದೂ ಬಲಿಷ್ಟ ಕಾನೂನು. ವಿಜಯ ಕುಮಾರ್

  ReplyDelete
 17. this shows how cynical one could be. nothing positive could happen with this sort of mind set. please dont spread poison here.

  ReplyDelete
 18. ಜನಲೋಕಪಾಲ್ ಬಂದರೆ ಯಾವುದೋ ಅಗೋಚರ ಯಕ್ಷಿಣಿಯ ಹಾಗೆ ಭ್ರಷ್ಟಾಚಾರ ಎಂಬುದು ದಿಢೀರನೆ ಮಾಯವಾಗುತ್ತೆ ಎಂಬುದು ಇವರ ನಂಬುಗೆ....

  ಸ್ವಾತಂತ್ರ್ಯವೂ ದಿಢೀರಂತ ಯಕ್ಷಿಣಿಯ ಹಾಗೆ ಸಿಕ್ಕಿದ್ದಲ್ಲ... ಅದರ ಹಿಂದೆ ಬಹುಕಾಲಿಕ ಬೃಹತ್ ಹೋರಾಟ ಇತ್ತು ಅನ್ನುವುದನ್ನು ಮರೆಯದಿರಿ... ನಿರಾಶಾವಾದಿತನವನ್ನು ಬಿತ್ತುವ ನಿಮ್ಮಂತರಿದ್ದಿದ್ದರೆ ಸ್ವಾತಂತ್ರ್ಯವೂ ಮರೀಚಿಕೆಯಾಗುತ್ತಿತ್ತು... ..

  ReplyDelete