Friday, August 5, 2011

ಭಗವದ್ಗೀತೆಯ ಆಧುನಿಕ ನಿರೂಪಣೆಗಳು ಹಾಗೂ ಸಮಸ್ಯೆಗಳು


ಶಾಲೆಗಳಲ್ಲಿ ಭಗವದ್ಗೀತೆಯನ್ನು ಪ್ರಚಾರ ಮಾಡುವ ಅಭಿಯಾನ ಸಂಬಂಧ ಈಗಾಗಲೇ ಪತ್ರಿಕೆಗಳಲ್ಲಿ ವಿಸ್ತ್ರತ ಚರ್ಚೆ ನಡೆದಿದೆ. ಈ ಚರ್ಚೆಗಳನ್ನು ಗಮನಿಸಿರುವ ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ನಿರ್ದೇಶಕರಾದ ಡಾ.ರಾಜಾರಾಮ ಹೆಗಡೆಯವರು ಈ ಪ್ರತಿಕ್ರಿಯೆ ಕಳುಹಿಸಿದ್ದಾರೆ. ಲೇಖನ ಹಲವು ಪ್ರಶ್ನೆಗಳಿಗೆ ಉತ್ತರಿಸುತ್ತಲೇ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದೆ. ಸಂಪಾದಕೀಯದ ಓದುಗರ ಚರ್ಚೆಗೆ ಈ ಲೇಖನವನ್ನು ಇಡುತ್ತಿದ್ದೇವೆ. ಪ್ರತಿಕ್ರಿಯೆಗಳಿಗೆ ಸ್ವಾಗತ. ಹೆಗಡೆಯವರು ಪ್ರತಿಪಾದಿಸುವ ಕೆಲವು ವಿಷಯಗಳ ಕುರಿತು ನಮಗೂ ಸ್ಪಷ್ಟ ಭಿನ್ನಾಭಿಪ್ರಾಯವಿದ್ದರೂ ಅವರು ವಿಚಾರ ಮಂಡನೆಗೆ ಬಳಸಿರುವ ಸಂಯಮದ ಭಾಷೆ ಇವತ್ತಿನ ಅಗತ್ಯ ಎಂದೇ ಭಾವಿಸಿದ್ದೇವೆ. ಒಂದು ಆರೋಗ್ಯಕರ ಚರ್ಚೆಯ ನಿರೀಕ್ಷೆ ನಮ್ಮದು
- ಸಂಪಾದಕೀಯ


ಇತ್ತೀಚೆಗೆ ಭಗವದ್ಗೀತೆಯ ಕುರಿತು ಅನೇಕ ಚರ್ಚೆಗಳೆದ್ದಿವೆ. ಶಾಲೆಗಳಲ್ಲಿ ಅದನ್ನು ಪ್ರಚಾರ ಮಾಡುವ  ಕೆಲಸವನ್ನು ಸಮರ್ಥಿಸಿ ಹಾಗೂ ವಿರೋಧಿಸಿ ಹೇಳಿಕೆಗಳು ಬರುತ್ತಿವೆ. ಈ ಎರಡೂ ಪಕ್ಷಗಳ ವಕ್ತಾರರೂ ಕೂಡ ಭಗವದ್ಗೀತೆಯು ಹಿಂದೂಗಳ ಧರ್ಮಗ್ರಂಥವೆಂಬ ಗ್ರಹಿಕೆಯನ್ನು  ಆಧರಿಸಿ ವಾದ ಮಾಡುತ್ತಿದ್ದಾರೆ ಎಂಬುದು ಸ್ಪಷ್ಟ. ವಿರೋಧಿಸುವವರ ವಾದವೆಂದರೆ ಸೆಕ್ಯುಲರ್ ರಾಷ್ಟ್ರವಾದ ಭಾರತದಲ್ಲಿ ಎಲ್ಲಾ ಧರ್ಮದವರೂ ಇರುವ ಸಾರ್ವಜನಿಕ ಸಂಸ್ಥೆಗಳಲ್ಲಿ ಹಿಂದೂಗಳಲ್ಲದವರೂ ಭಗವದ್ಗೀತೆಯನ್ನು ಕಲಿಯಬೇಕೆನ್ನುವುದು ಸಂವಿಧಾನ ವಿರೋಧೀ ಕೃತ್ಯವಾಗುತ್ತದೆ. ಹಾಗಾಗಿ ಸೆಕ್ಯುಲರ್ ತತ್ವದ ಪ್ರಕಾರ ಅದು ತಪ್ಪೊಂದೇ ಅಲ್ಲ, ಅದು ಕಾನೂನಿನ ದೃಷ್ಟಿಯಲ್ಲಿ ಅಪರಾಧ ಕೂಡಾ. ಈ ವಿರೋಧವನ್ನು ಖಂಡಿಸಿರುವ ಪರ ಪಕ್ಷದವರು ಭಗವದ್ಗೀತೆಯ ಶಿಕ್ಷಣವನ್ನು ವಿರೋಧಿಸುವವರು ದೇಶ ಬಿಟ್ಟು ತೊಲಗಲಿ ಎನ್ನುತ್ತಿದ್ದಾರೆ. ಅಂದರೆ ಅಂಥ ವಿರೋಧಿಗಳ ರಾಷ್ಟ್ರೀಯತೆಯನ್ನೇ ಪ್ರಶ್ನಿಸುತ್ತಿದ್ದಾರೆ.


ಒಂದೊಮ್ಮೆ ಎರಡೂ ಪಕ್ಷದವರೂ ಒಮ್ಮತಕ್ಕೆ ಬಂದು ಭಗವದ್ಗೀತೆಯನ್ನು ಕೇವಲ ಹಿಂದೂ ಮಕ್ಕಳಿಗೆ ಕಡ್ಡಾಯ ಮಾಡಬಹುದು ಎಂದರೆ ಸಮಸ್ಯೆ ಬಗೆಹರಿಯುತ್ತದೆಯೆ? ಭಗವದ್ಗೀತೆಯು ಹಿಂದೂ ಧರ್ಮಗ್ರಂಥವೆಂದು ನಂಬಿರುವ ವಿರೋಧ ಪಕ್ಷದವರ ಪ್ರಕಾರ ದಲಿತರಿಗೆ ಹಾಗೂ ಶೂದ್ರರಿಗೆ  ಅದೊಂದು ಅಪಾಯಕಾರಿ ಗ್ರಂಥವಾಗಿದೆ.  ಅದನ್ನು ಶಾಲೆಗಳಲ್ಲಿ ಕಡ್ಡಾಯಮಾಡುವ ಪ್ರಯತ್ನದ ಹಿಂದೆ ಬ್ರಾಹ್ಮಣ ಪುರೋಹಿತಶಾಹಿಯ ಹುನ್ನಾರವಿದೆ. ಈ ಕಾರ್ಯದಿಂದ ಅಲ್ಪಸಂಖ್ಯಾತರಿಗೊಂದೇ ಅಲ್ಲ, ದಲಿತ-ಶೂದ್ರರ ಹಿತಾಸಕ್ತಿಗೂ ಧಕ್ಕೆಯಿದೆ. ಈ ವಾದಕ್ಕೆ ಪರಪಕ್ಷದವರು ನೀಡುವ ಉತ್ತರವೆಂದರೆ ಇಂಥ ಹೇಳಿಕೆಗಳು ಬರುತ್ತಿರುವುದೇ ಹಿಂದೂ ಧರ್ಮದ ಅವನತಿಯ ದ್ಯೋತಕ. ಹಾಗಾಗಿ ಇಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಹಾಗೂ ಹಿಂದೂ ಧರ್ಮದ ಐಕ್ಯತೆಯನ್ನು ಸಾಧಿಸಲು ಹಿಂದೂ ಧರ್ಮಗ್ರಂಥಗಳನ್ನು ಕಡ್ಡಾಯವಾಗಿಯಾದರೂ ಹಿಂದೂಗಳಿಗೆ ತಿಳಿಸುವುದು ಅತ್ಯಗತ್ಯ.


ಈ ನಡುವೆ ಶಾಲಾ ಮಕ್ಕಳಿಗೆ ಭಗವದ್ಗೀತೆಯ ಕುರಿತು ಜಾಗೃತಿ ಮೂಡಿಸುವ ಅಭಿಯಾನವನ್ನು ಹುಟ್ಟುಹಾಕಿ  ತಮ್ಮ ಶ್ರಮ ಹಾಗೂ ಮಠದ ಹಣವನ್ನು ವೆಚ್ಚಮಾಡುತ್ತಿರುವ ಸ್ವರ್ಣವಲ್ಲೀ ಸ್ವಾಮಿಗಳು ತಮ್ಮ ಕೆಲಸವೇಕೆ ಮಹತ್ವಪೂರ್ಣವಾಗಿದೆ ಎಂಬುದನ್ನು ಬೇರೆಯೇ ರೀತಿಯಲ್ಲಿ ಭಾವಿಸಿದಂತಿದೆ. ಅವರು ತಿಳಿಸುವಂತೆ ಭಗವದ್ಗೀತೆಯು ಮಕ್ಕಳಿಗೆ ಆಧ್ಯಾತ್ಮ ಶಿಕ್ಷಣವನ್ನು ನೀಡುತ್ತದೆಯೇ ಹೊರತೂ ಯಾವುದೇ ಮತಪ್ರಚಾರವನ್ನು ಮಾಡುತ್ತಿಲ್ಲ. ಮಕ್ಕಳಲ್ಲಿ ಒಳ್ಳೆಯ ವಿಚಾರಗಳನ್ನು ಪ್ರಚೋದಿಸಿ, ಅವರಿಗೆ ಮನೋಸ್ಥೈರ್ಯವನ್ನು ಸತ್ಪ್ರೇರಣೆಯನ್ನು ನೀಡುವ ಶಕ್ತಿ ಭಗವದ್ಗೀತೆಗಿದೆ. ಒಂದೊಮ್ಮೆ ಅದು ಹಿಂದೂ ಸಂಸ್ಕೃತಿಯ ಉದ್ಧಾರಕ್ಕೆ ಸಹಕರಿಸುತ್ತದೆ ಎಂಬುದಾಗಿ ಅವರು ನಂಬಿಕೊಂಡಿದ್ದರೂ ಕೂಡ ಅವರು ಸಾಂಪ್ರದಾಯಿಕ ಅರ್ಥದಲ್ಲಿ ಹೇಳುತ್ತಿದ್ದಾರೆಯೇ ಹೊರತೂ ಆಧುನಿಕ ಪರಿಭಾಷೆಯಲ್ಲಿ ಮಾತನಾಡುತ್ತಿಲ್ಲ. ನಮಗೆ ತಿಳಿದುಬರುವುದೇನೆಂದರೆ ಅವರ ಕಾರ್ಯಕ್ರಮದಲ್ಲಿ  ಎಲ್ಲಾ ಹಿನ್ನೆಲೆಯ ಮಕ್ಕಳೂ ಭಾಗವಹಿಸಿದ್ದಾರೆ ಹಾಗೂ ಅವರಾಗಲೀ ಅವರ ಪಾಲಕರಾಗಲೀ ಈ ಕಾರ್ಯಕ್ರಮದ ಕುರಿತು  ವಿರೋಧವನ್ನು ವ್ಯಕ್ತಪಡಿಸಿಲ್ಲ.

ಭಗವದ್ಗೀತಾ ಅಭಿಯಾನವನ್ನು ಆರ್.ಎಸ್.ಎಸ್. ಹಾಗೂ ಬಿಜೆಪಿ ಕಾರ್ಯಕ್ರಮವನ್ನಾಗಿ ಗುರುತಿಸಿರುವುದರಿಂದ ಭಗವದ್ಗೀತೆಯ ಕುರಿತು ಈ ಚರ್ಚೆಗಳು ಹಾಗೂ ವಿರೋಧಗಳು ಸ್ಫೋಟವಾಗಿವೆ ಎಂಬುದು ಸ್ಪಷ್ಟ. ಏಕೆಂದರೆ ಇಂಥ ಅಭಿಯಾನಗಳಿಲ್ಲದೇ ಭಾರತದ ಸಾರ್ವಜನಿಕ ಕ್ಷೇತ್ರದಲ್ಲಿ ಭಗವದ್ಗೀತೆಯ ಈಗಾಗಲೇ ಸಾಕಷ್ಟು ಪ್ರಚಲಿತದಲ್ಲಿದೆ. ಹಿಂದೂಧರ್ಮದ ಧರ್ಮಗ್ರಂಥ ಯಾವುದು ಎಂಬ ಕುರಿತು ಹಿಂದೂಗಳಿಗೇ ಸ್ಪಷ್ಟತೆಯಿಲ್ಲದಿರುವಾಗ ಭಗವದ್ಗೀತೆಯನ್ನು ಅನ್ಯಧರ್ಮೀಯರು ಭಯದಿಂದ ನೋಡುತ್ತಾರೆ ಅಂತೇನೂ ಅನಿಸುವುದಿಲ್ಲ. ಮತ್ತೆ, ಹಿಂದೂ ಧರ್ಮವು ಇಸ್ಲಾಂ ಹಾಗೂ ಕ್ರಿಶ್ಚಿಯಾನಿಟಿಗಳಂತೆ ಒಂದು ರಿಲಿಜನ್ನು ಎಂಬುದಾಗಿ ಭಾವಿಸಿಕೊಂಡ ರಾಷ್ಟ್ರೀಯಯುಗದ ಚಿಂತಕರು ಅದನ್ನು ಧರ್ಮಗ್ರಂಥವೆಂಬುದಾಗಿ ನಂಬಿದರೂ ಕೂಡ ಭಗವದ್ಗೀತೆಯ ಸ್ವರೂಪ ಹಾಗೂ ವಿಷಯಗಳೂ ಬೈಬಲ್ ಹಾಗೂ ಖುರಾನ್ ಗಳಂತಿಲ್ಲ ಎಂಬುದು ಮೇಲ್ನೋಟಕ್ಕೇ ತಿಳಿಯುತ್ತದೆ. ಹಾಗಾಗಿ ಭಗವದ್ಗೀತೆಯು ಅನ್ಯಧರ್ಮೀಯರಲ್ಲಿ ವೈರತ್ವವನ್ನು ಹುಟ್ಟಿಸುವ ಗ್ರಂಥವಾಗಿ ಪರಿಣಮಿಸಿಲ್ಲ. ಹಿಂದೂಗಳೆನ್ನುವವರೂ ಕೂಡ ಧರ್ಮಗ್ರಂಥ ಎಂಬ ಪರಿಭಾಷೆಯನ್ನು ಸ್ಕ್ರಿಪ್ಚರ್ (Scripture) ಎಂಬ ಕಲ್ಪನೆಗಿಂತ ಬೇರೆಯದೇ ಆದ ರೀತಿಯಲ್ಲಿ ಬಳಸುತ್ತಾರೆ. ಅವರ ಪ್ರಕಾರ ಈ ಧರ್ಮಗ್ರಂಥಗಳು ಆಧ್ಯಾತ್ಮ/ಮೋಕ್ಷ ಸಾಧನೆಯನ್ನು ಮಾಡುವ ಹಾಗೂ ಮನಃಶಾಂತಿಯನ್ನು ಹೊಂದುವ ಮಾರ್ಗವನ್ನು ತಿಳಿಸುತ್ತವೆ. ಹಿಂದೂ ಚಿಂತಕರು ಬೈಬಲ್ ಹಾಗೂ ಖುರಾನನ್ನೂ ಕೂಡ ಇಂಥದ್ದೇ ಮತ್ತೆರಡು ಗ್ರಂಥಗಳೆಂಬುದಾಗಿ ಭಾವಿಸಿದ್ದಾರೆ. ಹಾಗಾಗಿಯೇ ಎಲ್ಲಾ ಧರ್ಮಗ್ರಂಥಗಳಲ್ಲೂ ಅನುಸರಿಸುವಂಥ ತತ್ವಗಳು ಇವೆ ಎನ್ನುತ್ತಾರೆ. ಹಾಗಾಗಿ ಧರ್ಮಗ್ರಂಥಗಳ ಓದುವಿಕೆಗೆ ಭಾರತದಲ್ಲಿ ಬೇರೆಯದೇ ಒಂದು ಮಹತ್ವವು ಪ್ರಾಪ್ತವಾಗಿ ಅದೊಂದು ಸಂಘರ್ಷಾತ್ಮಕ ವಿಷಯವಾಗಿಲ್ಲ.

ಈ ಮೇಲಿನ ಸಂಗತಿಯನ್ನು ಗಮನಿಸಿದರೆ ಭಗವದ್ಗೀತೆಯನ್ನು ಒಂದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬುದಾಗಿ ಪ್ರತಿಪಾದಿಸಿದಾಗ ಸೆಕ್ಯುಲರ್ ಚೌಕಟ್ಟಿನ ಹಂತದಲ್ಲಿ ಅದು ಸಮಸ್ಯೆಗಳನ್ನು  ಹುಟ್ಟುಹಾಕುತ್ತದೆಯೇ ವಿನಃ ಜನರಿಗೆ ಇಂದೂ ಅದೊಂದು ಸಮಸ್ಯೆಯಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ. ಸೆಕ್ಯುಲರ್ ತತ್ವದ ಪ್ರಕಾರ  ರಿಲಿಜಿಯಸ್ ಸ್ಕ್ರಿಪ್ಚರ್‌ಅನ್ನು ಒಪ್ಪಿಕೊಳ್ಳುವುದೆಂದರೆ ಒಂದು ರಿಲಿಜನ್ನಿನ ಸತ್ಯವನ್ನು ಒಪ್ಪಿಕೊಳ್ಳುವ ಹಾಗೂ ಅದೇ ವೇಳೆಗೆ ಅನ್ಯ ರಿಲಿಜನ್ನುಗಳ ಸತ್ಯವನ್ನು ನಿರಾಕರಿಸುವ ಕ್ರಿಯೆಯಾಗುವುದರಿಂದ ಅದು ಒಂದು ರಿಲಿಜನ್ನನ್ನು ನಿರಾಕರಿಸಿ ಮತ್ತೊಂದು ರಿಲಿಜನ್ನಿಗೆ ಮತಾಂತರದ ಕ್ರಿಯೆಗೆ ಸಮನಾಗುತ್ತದೆ. ಹಾಗಾಗಿ ಒಂದು ರಿಲಿಜಿಯಸ್ ಸ್ಕ್ರಿಪ್ಚರ್‌ಅನ್ನು ಸೆಕ್ಯುಲರ್ ಸರಕಾರಿ ಸಂಸ್ಥೆಗಳಲ್ಲಿ ಅನ್ಯಧರ್ಮೀಯರಿಗೆ ಕಡ್ಡಾಯಗೊಳಿಸಿದರೆ ಅದು ಸೆಕ್ಯುಲರ್ ನೀತಿಗೆ ವಿರುದ್ಧವಾಗುತ್ತದೆ. ಆದರೆ ಭಾರತೀಯ ಸಂಸ್ಕೃತಿಯಲ್ಲಿ ದೇಶೀ ರಿಲಿಜನ್ನುಗಳೇ ಇಲ್ಲ. ಹಾಗಾಗಿ ಇಲ್ಲಿ ರಿಲಿಜಿಯಸ್ ಸ್ಕ್ರಿಪ್ಚರ್ಗಳೂ ಇರಲಿಕ್ಕೆ ಸಾಧ್ಯವಿಲ್ಲ. ಹಾಗೂ ಈ ಮೇಲಿನ ಸೆಕ್ಯುಲರ್ ಸಮಸ್ಯೆಗಳೂ ಕೂಡ ಮುಸ್ಲಿಂ ಹಾಗೂ ಕ್ರಿಶ್ಚಿಯನ್ ಜನಸಾಮಾನ್ಯರಲ್ಲಿ ಬಾಹ್ಯ ಪ್ರಚೋದನೆಯಿಲ್ಲದೇ ಏಳುವುದಿಲ್ಲ. ಹಾಗಾಗಿ ಹಿಂದೂಯಿಸಂ ಎಂಬುದೊಂದು ರಿಲಿಜನ್ನು ಹಾಗೂ ಭಗವದ್ಗೀತೆಯ ಕಲಿಕೆಯು ಒಂದು ಸೆಕ್ಯುಲರ್ ಸಮಸ್ಯೆಯೆಂಬುದಾಗಿ ಭಾವಿಸಿಕೊಂಡ ಕಾರಣದಿಂದಲೇ ಕೆಲವೊಂದು ಇಲ್ಲದ ಸಮಸ್ಯೆಗಳು ಹುಟ್ಟಿಕೊಳ್ಳುತ್ತವೆ ಎನ್ನುವುದು ಸ್ಪಷ್ಟ.  ಹಾಗಾಗಿ ಅದನ್ನೊಂದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬುದಾಗಿ ಭಾವಿಸಿ ಪ್ರತಿಪಾದಿಸುವವರೇ ಭಗವದ್ಗೀತೆಯ ವ್ಯಾಪ್ತಿಯನ್ನು ಸಂಕುಚಿತಗೊಳಿಸುತ್ತಿದ್ದಾರೆ ಹಾಗೂ ಈ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂದೇ ಅನ್ನಬೇಕು: ಅದರಲ್ಲಿ ಹಿಂದುತ್ವವಾದಿಗಳು ಹಾಗೂ ಸೆಕ್ಯುಲರ್ವಾದಿಗಳಿಬ್ಬರೂ ಇದ್ದಾರೆ.

ಈ ಇಲ್ಲದ ಸಮಸ್ಯೆಗೆ ಇನ್ನೂ ಕೆಲವು ಸಲ್ಲದ ಸಮಸ್ಯೆಗಳನ್ನು ಈಚೆಗೆ ಪೇರಿಸಲಾಗಿದೆ. ಅದೆಂದರೆ ಭಗವದ್ಗೀತೆಯು ಜಾತಿ ಶೋಷಣೆಯನ್ನು ಬೋಧಿಸುತ್ತದೆ ಎಂಬ ವಿಚಾರ. ಭಗವದ್ಗೀತೆಗೆ ಈ  ಹೊಸ ಪಟ್ಟವನ್ನು ಕಟ್ಟಿ  ಬಹಳ ಕಾಲ ಸಂದಿಲ್ಲ. ರಾಷ್ಟ್ರೀಯತಾ ಹೋರಾಟದ ಯುಗದಲ್ಲಿ ಮನುಸ್ಮೃತಿಗೆ ಈ ಪಟ್ಟವನ್ನು ನೀಡಲಾಗಿತ್ತು ಹಾಗೂ ಭಗವದ್ಗೀತೆಯನ್ನು ಒಂದು ತಾತ್ವಿಕ-ಆಧ್ಯಾತ್ಮಿಕ ಗ್ರಂಥವೆಂಬುದಾಗಿಯೇ ತೆಗೆದುಕೊಳ್ಳಲಾಗಿತ್ತು. ಏಕೆಂದರೆ ಭಗವದ್ಗೀತೆಯು ವಯುಕ್ತಿಕ ಆಧ್ಯಾತ್ಮಿಕ ಸಾಧನೆಯ ಗ್ರಂಥವಾಗಿ ಭಾರತೀಯ ಸಂಪ್ರದಾಯಗಳಲ್ಲಿ ಯಾವುದೇ ಗುಂಪಿಗೆ ಸೀಮಿತವಾಗಿರಲಿಲ್ಲ. ಸಾಂಸಾರಿಕರು ಹಾಗೂ ವಿರಾಗಿಗಳಿಬ್ಬರಿಗೂ ಅದು ಅಷ್ಟೇ ಅರ್ಥಪೂರ್ಣವಾಗಿತ್ತು. ಹನ್ನೆರಡನೆಯ ಶತಮಾನದ ನಂತರ ಭಾರತದಲ್ಲಿ ಜನಪ್ರಿಯಗೊಂಡ ವೈಷ್ಣವ ಭಕ್ತಿಮಾರ್ಗವು ಈ ಗ್ರಂಥಕ್ಕೆ ಆದ್ಯ ಸ್ಥಾನವನ್ನು ನೀಡಿತ್ತು. (ಈ ಸಂಪ್ರದಾಯಗಳನ್ನು ಪುರೋಹಿತಶಾಹಿಯ ವಿರುದ್ಧ ಸಾಮಾಜಿಕ ಚಳುವಳಿಗಳೆಂಬುದಾಗಿಯೂ ಗುರುತಿಸಲಾಗಿದೆ.) ಇಪ್ಪತ್ತನೆಯ ಶತಮಾನದ ಪ್ರಾರಂಭದಲ್ಲಿ ಈ ಗ್ರಂಥವು ವೈರಾಗ್ಯ ದೃಷ್ಟಿಯನ್ನು ಬೋಧಿಸುತ್ತದೆ ಎಂಬ ಅಭಿಪ್ರಾಯವು ಗಟ್ಟಿಯಾಗಿದ್ದಂತೆ ತೋರುತ್ತದೆ. ಲೋಕಮಾನ್ಯ ಟಿಳಕರು ಭಾರತೀಯ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಭಗವದ್ಗೀತೆಯು ಅನಾಸಕ್ತಿಯೋಗವನ್ನು ಬೋಧಿಸುತ್ತಿಲ್ಲ, ಕರ್ಮಯೋಗವನ್ನು ಬೋಧಿಸುತ್ತದೆ ಎಂಬುದಾಗಿ ನಿರೂಪಿಸಿದರು. ಗಾಂಧಿಯವರು ತಮ್ಮ ಆಧ್ಯಾತ್ಮ ಸಾಧನೆಗೆ ಹಾಗೂ ಸತ್ಯಾಗ್ರಹಕ್ಕೆ ಈ ಗ್ರಂಥದಿಂದಲೇ ಸ್ಫೂರ್ತಿಯನ್ನು ಪಡೆದರು ಹಾಗೂ ಅವರ ರಾಜಕೀಯದಲ್ಲಿ ಭಗವದ್ಗೀತೆಯೂ ಚರಕದಂತೆ ಮಾನ್ಯತೆ ಪಡೆಯಿತೇ ವಿನಃ ಸೆಕ್ಯುಲರ್ ಸಮಸ್ಯೆಗಳನ್ನು ಸೃಷ್ಟಿಸಲಿಲ್ಲ.  ವಿವೇಕಾನಂದರಂಥ ಸುಧಾರಣಾವಾದಿಗಳಿಗೂ ಕೂಡ ಭಗವದ್ಗೀತೆಯು ಸನಾತನ ಹಿಂದೂ ಆಧ್ಯಾತ್ಮಿಕ ತತ್ವಗಳನ್ನು ತಿಳಿಸುವ ಗ್ರಂಥವಾಗಿಯೇ ಕಂಡಿತ್ತು. ಕುವೆಂಪು ಅವರೂ ಕೂಡ ಭಗವದ್ಗೀತೆಯನ್ನು  ಇದೇ ದೃಷ್ಟಿಯಿಂದಲೇ ಗೌರವಿಸಿದ್ದರು. ಭಗವದ್ಗೀತೆಯ ಕುರಿತು ಚರ್ಚೆಗಳು ಏನೇ ಇದ್ದರೂ, ಅದು ಜಾತಿಶೋಷಣೆಯನ್ನು ಪ್ರತಿಪಾದಿಸುವ ಗ್ರಂಥವೆಂಬ ವಿಚಾರದ ಕುರಿತು ಚರ್ಚೆಗಳು ಎದ್ದಿರಲಿಲ್ಲ.

ಭಗವದ್ಗೀತೆಯು ಜಾತಿ ಶೋಷಣೆಯನ್ನು ಪ್ರತಿಪಾದಿಸುತ್ತದೆ ಎಂಬ ವಾದವು ಬಹುಶಃ ಅದು ಸಂಸ್ಕೃತ ಗ್ರಂಥ ಹಾಗೂ ಹಿಂದೂ ಧರ್ಮಗ್ರಂಥ ಎಂಬ ಕಾರಣದಿಂದ ದಲಿತ ಹಾಗೂ ಪ್ರಗತಿಪರ ಚಿಂತಕರಲ್ಲಿ ಹುಟ್ಟಿದ ತಾರ್ಕಿಕ ನಿರ್ಣಯವಿರಬಹುದು. ಸಂಸ್ಕೃತವು ಬ್ರಾಹ್ಮಣ ಪುರೋಹಿತರ ಭಾಷೆ ಹಾಗೂ ಹಿಂದೂ ಧರ್ಮವು ಜಾತಿವ್ಯವಸ್ಥೆಯನ್ನು ಮಾನ್ಯಮಾಡುತ್ತದೆಯಾದ್ದರಿಂದ ಸಂಸ್ಕೃತ ಭಾಷೆಯಲ್ಲಿರುವ ಈ ಧರ್ಮಗ್ರಂಥವು ಜಾತಿಶೋಷಣೆಯನ್ನು ಬೋಧಿಸಲೇಬೇಕು. ಈ ವಾದಕ್ಕೆ ಮತ್ತೂ ಒಂದು ಮೂಲವಿದ್ದಂತೆ ತೋರುತ್ತದೆ. ಅದೆಂದರೆ ೬೦ರ ದಶಕದಲ್ಲಿ ಡಿ.ಡಿ. ಕೊಸಾಂಬಿಯವರು ಭಗವದ್ಗೀತೆಯ ಸಂದರ್ಭದಲ್ಲಿ ಭಕ್ತಿಯ ಫ್ಯೂಡಲ್ ಮೌಲ್ಯದ ಕುರಿತು ಇಟ್ಟ ವಿಚಾರಗಳು. ಈ ವಿಚಾರಗಳನ್ನು ಕೊಸಾಂಬಿಯವರು ಮತ್ತೂ ಬೆಳೆಸಲಿಲ್ಲ, ಆದರೆ ಭಾರತೀಯ ಎಡಪಂಥೀಯ ಚಿಂತಕರು ಇದನ್ನೊಂದು ವಿಶ್ಲೇಷಣಾ ಮಾದರಿಯನ್ನಾಗಿ ಸ್ವೀಕರಿಸಿ ಸರಳೀಕರಿಸುತ್ತ ಸಾಗಿದರು. ಭಾರತದಲ್ಲಿ ಜಾತಿವ್ಯವಸ್ಥೆಯು ಗಟ್ಟಿಗೊಂಡು ಶೋಷಣಾತ್ಮಕವಾಗಿ ಬೆಳೆದ ಯುಗವನ್ನು ಫ್ಯೂಡಲ್ ಯುಗವೆಂಬುದಾಗಿ ನಂಬಿದ ಎಡಪಂಥೀಯರಿಗೆ ಆ ಯುಗದ ಐಡಿಯಾಲಜಿಯಾದ ಭಕ್ತಿಯನ್ನು ಪ್ರತಿಪಾದಿಸುವ ಗ್ರಂಥವಾಗಿ ಭಗವದ್ಗೀತೆಯು ಕಂಡುಬಂದಿತು. ಇವೆಲ್ಲ ಭಾರತೀಯ ಸಮಾಜವನ್ನು ನಾವು ಗ್ರಹಿಸಲು ಬಳಸುತ್ತಿರುವ ವಿವಿಧ ಸರಳೀಕರಣಗಳು ಅಷ್ಟೆ. ಹಾಗಾಗಿ ಸಧ್ಯಕ್ಕೆ ಇವೆಲ್ಲ ಊಹಾತ್ಮಕ ಪ್ರತಿಪಾದನೆಗಳಾಗಿಯೇ ಉಳಿದಿವೆಯೇ ವಿನಃ ವೈಜ್ಞಾನಿಕ ನಿರ್ಣಯಗಳಾಗಿಲ್ಲ್ಲ.

ಇನ್ನು ದಿನೇಶ್ ಅಮೀನ್ಮಟ್ಟು ಅವರು ದಿನಾಂಕ ೧೮-೭-೨೦೧೧ರ ಪ್ರಜಾವಾಣಿಯಲ್ಲಿ ಈ ಮೇಲಿನ ಕಥೆಗಳಿಗೆ ಮತ್ತೊಂದು ಉಪಕಥೆಯನ್ನು ಸೇರಿಸಿದ್ದಾರೆ. ಅದು ಆರ್ಯ-ದ್ರಾವಿಡರದು. ಆರ್ಯ-ದ್ರಾವಿಡರದು ಆಧುನಿಕ ಕಥೆ. ಈ  ಆಧುನಿಕ ಕಥೆಯನ್ನು ಇತಿಹಾಸವೆಂಬುದಾಗಿ ಭಾವಿಸಿಕೊಂಡು ರಾಷ್ಟ್ರೀಯತಾ ಯುಗದ ಅನೇಕ ಮುಂದಾಳುಗಳು ತಮ್ಮ ಸಮಾಜಿಕ ಹೋರಾಟಕ್ಕೆ ಅದನ್ನು ಬಳಸಿಕೊಂಡಿದ್ದಾರೆ. ಒಂದು ಕಾಲದಲ್ಲಿ ಭಾರತೀಯ ಇತಿಹಾಸದ ಹೆಸರಿನಲ್ಲಿ ಕಲ್ಪಿತ ಜನಾಂಗಗಳನ್ನು ಹುಟ್ಟುಹಾಕಿ ನ್ಯಾಯದ ಹೆಸರಿನಲ್ಲಿ ಜಾತಿದ್ವೇಷ-ಪ್ರತೀಕಾರಗಳನ್ನು ಬಡಿದೆಬ್ಬಿಸಿದ ಈ ಕಥೆಯು ತಾನು ಪುರಾಣಗಳಂತೆ ನಿರಪಾಯಕಾರಿಯಲ್ಲ ಎಂಬುದನ್ನು ನಿರ್ದೇಶಿಸಿದೆ. ಆದರೆ ಇಂದು ಗಂಭೀರ ಇತಿಹಾಸಕಾರನೆಂದುಕೊಳ್ಳುವ ಯಾವ ವ್ಯಕ್ತಿಯೂ ಕೂಡ ಇದೊಂದು ಐತಿಹಾಸಿಕ ಸಂಗತಿ ಎಂಬುದಾಗಿ ನಂಬುವುದಿಲ್ಲ. ಇತಿಹಾಸಕಾರರು ಈಗಾಗಲೇ ಕಸದಬುಟ್ಟಿಗೆಸೆದಿರುವ ಈ ಚರ್ಚೆಯನ್ನು ದಿನೇಶ್ ಅಮೀನ್ಮಟ್ಟು ಅವರಿನ್ನೂ ಇತಿಹಾಸ ಎಂಬುದಾಗಿ ನಂಬಿಕೊಂಡಿರುವುದೇ ಆಶ್ಚರ್ಯ.

ಒಟ್ಟಾರೆಯಾಗಿ ನೋಡಿದಾಗ ಭಗವದ್ಗೀತೆಯ ಕುರಿತು ಪತ್ರಿಕೆಗಳಲ್ಲಿ ಬರುತ್ತಿರುವ ಇಂದಿನ ಚರ್ಚೆಗಳೆಲ್ಲವೂ ಹುಟ್ಟುವುದು ೧) ಅದು ರಿಲಿಜಿಯಸ್ ಸ್ಕ್ರಿಪ್ಚರ್ ಎಂಬ ಪೂರ್ವಗೃಹೀತದಿಂದ ಹಾಗೂ ೨) ಅದು ಜಾತಿ/ಜನಾಂಗ ಸಂಘರ್ಷದ ಇತಿಹಾಸವನ್ನು ದಾಖಲಿಸುತ್ತದೆ ಎಂಬ ನಂಬಿಕೆಯಿಂದ. ಇಂಥ ಚರ್ಚೆಗಳನ್ನು ಎತ್ತುತ್ತಿರುವ ಉದ್ದೇಶ ಒಳ್ಳೆಯದೇ ಅಂದುಕೊಂಡಿದ್ದಾರೆ; ಹಿಂದೂ ಸಂಸ್ಕೃತಿಯನ್ನು ಉಳಿಸಬೇಕು ಎಂಬುದಾಗಿ ಪರ ಪಕ್ಷದವರು ನಂಬಿಕೊಂಡರೆ   ಕೋಮು  ಸಾಮರಸ್ಯವನ್ನು ಕದಡುವ ಪ್ರಯತ್ನ ನಡೆಯುತ್ತಿದೆ, ಬ್ರಾಹ್ಮಣ ಪುರೋಹಿತಶಾಹಿ ಮತ್ತೆ ತಲೆಯೆತ್ತುತ್ತಿದೆ, ಅದನ್ನು ತಪ್ಪಿಸಬೇಕು ಎಂಬುದಾಗಿ ವಿರೋಧ ಪಕ್ಷಗಳು ನಂಬಿಕೊಂಡಿವೆ. ನಮ್ಮ ಇತಿಹಾಸ ಪುರಾಣಗಳನ್ನು ಹಿಡಿದುಕೊಂಡು ನಮ್ಮ ವರ್ತಮಾನದ ಪ್ರಸ್ತುತತೆಗೆ ಬೇಕಾದಂತೆ ಅದನ್ನು ನಿರೂಪಿಸಿಕೊಳ್ಳುವ ಸ್ವಾತಂತ್ರ್ಯವನ್ನು ನಮ್ಮ ಸಂಪ್ರದಾಯಗಳು ಯಾವಾಗಲೂ ತೆರೆದಿಟ್ಟಿವೆ. ಹಾಗೂ ಇದನ್ನೇ ಭಾರತೀಯರ ಒಂದು ದೊಡ್ಡ ದೋಷ ಹಾಗೂ ಅನಾಗರಿಕತೆಯ ಲಕ್ಷಣ ಎಂಬುದಾಗಿಯೂ ಪಾಶ್ಚಾತ್ಯರು ಪರಿಗಣಿಸಿದ್ದರು. ಹಾಗಾಗಿ ಈ ಮೇಲಿನ ನಿರೂಪಣೆ ನಡೆಸಿದವರೆಲ್ಲ ಆಧುನಿಕರ ದೃಷ್ಟಿಯಲ್ಲಿ ಅಪರಾಧಿಗಳಾಗಬಹುದೇ ಹೊರತೂ ಸಂಪ್ರದಾಯದ ದೃಷ್ಟಿಯಲ್ಲಿ ಅಪರಾಧಿಗಳಂತೂ ಆಗಲಾರದು.

ಸ್ವರ್ಣವಲ್ಲಿ ಶ್ರೀಗಳು ಅಮೀನ್ಮಟ್ಟು ಅವರ ಹೊಸ ನಿರೂಪಣೆಯನ್ನು ಮಕ್ಕಳಿಗೆ ತಿಳಿಸಬೇಕು ಎಂದು ಸಲಹೆ ನೀಡುವುದಕ್ಕೂ ಮೊದಲು  ಈ ಮೇಲಿನ ನಿರೂಪಣೆಗಳಿಗೂ ಸಾಂಪ್ರದಾಯಿಕ ನಿರೂಪಣೆಗಳಿಗೂ ಒಂದು ಮೂಲಭೂತ ವ್ಯತ್ಯಾಸವಿದೆ ಎಂಬುದನ್ನು ಗಮನಿಸಿದರೆ ಒಳ್ಳೆಯದು. ಈ ಹೊಸ ನಿರೂಪಣೆಗಳು ಜನಾಂಗ ದ್ವೇಷ ಹಾಗೂ ಸಂಘರ್ಷಗಳನ್ನು ಪ್ರಚೋದಿಸುವ ಶಕ್ತಿಯನ್ನು ಹೊಂದಿವೆ. ಹಾಗಾಗಿ ಬಹು ಸಂಸ್ಕೃತಿಗಳನ್ನು ಸಾಮರಸ್ಯದಿಂದ ಪಾಲಿಸಬೇಕೆನ್ನುವ ಉದ್ದೇಶವನ್ನೊಳಗೊಂಡ ನಮ್ಮ ಸೆಕ್ಯುಲರ್ ರಾಷ್ಟ್ರದ ಆಶಯಕ್ಕೆ    ಭಗವದ್ಗೀತಾ ಅಭಿಯಾನಕ್ಕಿಂತ ಇಂಥ ನಿರೂಪಣೆಗಳೇ  ಹೆಚ್ಚು ಧಕ್ಕೆ ತರುತ್ತವೆ ಎಂಬುದರಲ್ಲಿ ಸಂದೇಹವಿಲ್ಲ. ಇತಿಹಾಸದ ಹೆಸರಿನಲ್ಲಿ ಬಂದ ಈ ಹೊಸ ನಿರೂಪಣೆಗಳನ್ನು ಸೃಷ್ಟಿಸುವ ಮೂಲಕ ಭಗವದ್ಗೀತೆಗೆ ಹೊಸ ವಿಷದ ಹಲ್ಲುಗಳನ್ನು ಸೇರಿಸುತ್ತೇವೆಯೇ ಹೊರತೂ ನಮ್ಮ ಯಾವ ಸಾಮಾಜಿಕ ನ್ಯಾಯಕ್ಕೂ ಈ ನಿರೂಪಣೆ ಒದಗಿ ಬರುವುದಿಲ್ಲ. ಹಾಗಾಗಿ ಏನೋ ಅನಾಹುತವಾಗುತ್ತಿದೆ ಅದನ್ನು ತಪ್ಪಿಸಬೇಕೆಂದು ಇಂಥ ಹೊಸಹೊಸ ಇತಿಹಾಸಗಳನ್ನು ಕಟ್ಟಿ  ಅವುಗಳನ್ನು ನಮ್ಮ ಮಠಾಧಿಪತಿಗಳು ಪ್ರಚಾರಮಾಡುವಾಗ ಆಗುವ ಅನಾಹುತಕ್ಕಿಂತ  ಭಗವದ್ಗೀತೆಯ ಅಭಿಯಾನವನ್ನು ಈಗಿದ್ದ ಹಾಗೇ ನಡೆಯಲಿಕ್ಕೆ ಬಿಡುವುದೇ ನಮ್ಮ ಸಾಮಾಜಿಕ ಶಾಂತಿ-ನೆಮ್ಮದಿಯ ದೃಷ್ಟಿಯಿಂದ ಹೆಚ್ಚು ಕ್ಷೇಮಕರ. ಹೆಚ್ಚೆಂದರೆ ಬಹಳಷ್ಟು ಮಂದಿಗೆ ಅದು ಅರ್ಥವಾಗುವುದಿಲ್ಲ ಅಷ್ಟೆ. ಅನರ್ಥ ಹುಟ್ಟಿಸುವುದಕ್ಕಿಂತ ಅದೇ ಎಷ್ಟಕ್ಕೋ ಒಳ್ಳೆಯದು. ಭಗವದ್ಗೀತೆಯನ್ನು ನೂರು ವರ್ಷ ಕಡ್ಡಾಯಮಾಡಿದರೂ ಅದು ಭಾರತದಲ್ಲಿ ಒಂದು ರಿಲಿಜನ್ನನ್ನು ಹುಟ್ಟುಹಾಕಲು ಸಾಧ್ಯವಿಲ್ಲ ಎಂಬ ಅಂಶವನ್ನು ಪರ ಹಾಗೂ ವಿರೋಧದ ಗುಂಪುಗಳೆರಡೂ ಗಮನದಲ್ಲಿಟ್ಟುಕೊಂಡರೆ ಈಗಿರುವ ಸಮಸ್ಯೆಯನ್ನು ಬಗೆಹರಿಸುವ ದಾರಿ ಕಾಣಬಹುದು.

ಭಗವದ್ಗೀತೆಯ ಕುರಿತ ಯಾವ ಸಂಪ್ರದಾಯಸ್ಥರ ನಿರೂಪಣೆಗಳೂ ವರ್ತಮಾನದ ಸಮೂಹಗಳನ್ನು ರಿಲಿಜನ್, ಜನಾಂಗ, ಜಾತಿಗಳ ನೆಲೆಯಲ್ಲಿ ಎತ್ತಿಕಟ್ಟುವ ಕೆಲಸವನ್ನು ಮಾಡಿಲ್ಲ ಎಂಬುದನ್ನು ಗಮನಿಸೋಣ. ವಿಭಿನ್ನ ಸಂಪ್ರದಾಯಗಳು ಸತ್ಯವನ್ನು ಅರಿಯಲಿಕ್ಕಿರುವ ವಿಭಿನ್ನ ಮಾರ್ಗಗಳು ಎಂಬುದನ್ನು ಭಗವದ್ಗೀತೆಯೇ ಸಾರುತ್ತದೆ. ನಮ್ಮ ಈ ಆರ್ಯ-ದ್ರಾವಿಡ, ಬ್ರಾಹ್ಮಣ-ಶೂದ್ರ ಕಥೆಗಳೆಲ್ಲವನ್ನು ನಿರಾಧಾರವಾಗಿ ಅದರ ಮೇಲೆ ಹೇರುವುದಕ್ಕಿಂತ ಈ ಮೇಲಿನ ಐತಿಹಾಸಿಕ ಸಂಗತಿ ನಮ್ಮ ಗಮನವನ್ನು ಮೊದಲು ಸೆಳೆಯಬೇಕು.  ಭಗವದ್ಗೀತೆಯಲ್ಲಿ ನಮ್ಮ ಪೂರ್ವಿಕರು, ಸಂತರು, ದಾರ್ಶನಿಕರೆಲ್ಲ ಸಾವಿರಾರು ವರ್ಷ ಏನನ್ನು ಹುಡುಕಿದ್ದಾರೆ? ಅದೇಕೆ ಇಂದಿನವರೆಗೂ  ಯಾವ ಅಧಿಕಾರ, ಬಲಗಳ ಸಹಾಯವಿಲ್ಲದೇ ತನ್ನ ಮಹತ್ವವನ್ನು ಉಳಿಸಿಕೊಂಡು ಬಂದಿದೆ? ಎಂಬ  ಪ್ರಶ್ನೆ ನನಗಂತೂ ಕುತೂಹಲಕಾರಿಯಾಗಿ ಕಾಣಿಸುತ್ತದೆ. ಹಾಗಾಗಿ ಈ ಗ್ರಂಥದ ಕುರಿತು ಉಡಾಫೆಯಿಂದ ಪ್ರತಿಕ್ರಿಯಿಸಿದರೆ ನಮ್ಮ ಸಂಸ್ಕೃತಿಯನ್ನು ಅರ್ಥಮಾಡಿಕೊಳ್ಳುವ ಅವಕಾಶವನ್ನು ನಾವು ಕಳೆದುಕೊಳ್ಳುತ್ತೇವೆ. ಬದಲಾಗಿ ಅದನ್ನು ಅಧ್ಯಯನ ಮಾಡಿದ ವಿದ್ವಾಂಸರು ಹಾಗೂ ಸಾಧನೆ ಮಾಡಿದವರ ಜೊತೆಗೆ ಸಂವಾದ ಬೆಳೆಸೋಣ.

ಭಗವದ್ಗೀತೆಯಂಥ ಗ್ರಂಥಗಳ ಕುರಿತು ಇಂದು ಇರುವ ಮೇಲಿನ ಚರ್ಚೆಗಳು, ಹೋರಾಟಗಳು ಏನನ್ನು ದೃಷ್ಟಾಂತಪಡಿಸುತ್ತವೆ? ನಮ್ಮ ಸಂಸ್ಕತಿಯಲ್ಲಿ ಅದರ ಸ್ಥಾನಮಾನವೇನು ಹಾಗೂ ಅದರ ಜೊತೆಗೆ ವ್ಯಕ್ತಿಯೊಬ್ಬನು ಯಾವ ಸಂಬಂಧವನ್ನು ಏರ್ಪಡಿಸಿಕೊಳ್ಳಬೇಕೆಂಬುದೇ ನಮಗೆ ಮರೆತುಹೋಗಿದೆ. ಬದಲಾಗಿ ಅದನ್ನೊಂದು ಹಿಂದೂ ರಿಲಿಜಿಯಸ್ ಸ್ಕ್ರಿಪ್ಚರ್ ಎಂದೋ ಅಥವಾ ಆರ್ಯ-ಬ್ರಾಹ್ಮಣರ ಮ್ಯಾನಿಫೆಸ್ಟೋ ಅಥವಾ ಇತಿಹಾಸ ಎಂದೋ ಭಾವಿಸಿಕೊಳ್ಳುವುದು ಮಾತ್ರ ನಮಗೆ ಸಾಧ್ಯವಾಗಿದೆ. ಹಿಂದಿನ ಅನೇಕ ತಲೆಮಾರುಗಳ ಅನೇಕ ವ್ಯಕ್ತಿಗಳಿಗೆ ಅದೊಂದು ಜೀವನ ಕಲಿಕೆಯ ಆಕರವಾಗಿದ್ದುದಂತೂ ಹೌದು.  ಒಂದು ಸಂಗೀತ ಪುಸ್ತಕದಂತೆ ಆಧ್ಯಾತ್ಮವಿದ್ಯೆಯ ಪುಸ್ತಕವಾಗಿ ಅದು ಸಹಕರಿಸಬಲ್ಲದು ಎಂಬುದಾಗಿ ಸಂಪ್ರದಾಯಸ್ಥರು ಭಾವಿಸಿದ್ದಾರೆ.  ಸ್ವರ್ನವಲ್ಲಿ ಶ್ರೀಗಳು ಭಗವದ್ಗೀತೆಯ ಈ ಮೌಲ್ಯವನ್ನು ಗಮನದಲ್ಲಿಟ್ಟುಕೊಂಡು ವಿಧ್ಯಾರ್ಥಿಗಳಿಗೆ ಆ ಗ್ರಂಥದ ಕುರಿತು ಆಸಕ್ತಿ ಮೂಡಿಸುವ ಆದರ್ಶವನ್ನಿಟ್ಟುಕೊಂಡಿದ್ದಾರೆ ಎಂಬುದು ಅವರ ಪ್ರಚಾರ ಟಿಪ್ಪಣಿಗಳನ್ನು ನೋಡಿದರೆ ತಿಳಿಯುತ್ತದೆ. ರಾಜಕೀಯ ಧುರೀಣರು ಈ ಕಾರ್ಯಕ್ರಮವನ್ನು ಸಮರ್ಥಿಸಿಕೊಳ್ಳುವಾಗ ಅವರಿಗೆ ಬೇರೆಯದೇ ರಾಜಕೀಯ ಕಾರಣಗಳಿವೆ ಎಂಬುದು ಸ್ಪಷ್ಟ. ಆದರೆ ಪ್ರಜ್ಞಾವಂತರು ಈ ಇಬ್ಬರ ನಡುವಿನ ವ್ಯತ್ಯಾಸವನ್ನು ಕೂಡ ಗಮನಿಸಬೇಕು. ಇಂಥ ಸ್ವಾಮಿಗಳೆಲ್ಲ ಸತತ ಅಧ್ಯಯನಶೀಲರಾಗಿರುತ್ತಾರೆ.  ಅವರಿಗೂ  ನಮ್ಮಲ್ಲಿ ಅನೇಕರಂತೆ ಸಮಾಜದ ಕುರಿತು ಕಾಳಜಿಗಳಿವೆ ಹಾಗೂ ಸ್ವಂತ ನಿಲುವುಗಳಿವೆ.

ನಾವು ನಿಜವಾಗಿ ಜ್ಞಾನಾಸಕ್ತರೇ ಆಗಿದ್ದಲ್ಲಿ ಇಂಥ ಸಾಂಪ್ರದಾಯಿಕ ವಿದ್ವಾಂಸರ ಜೊತೆಗೆ ಹೇಗೆ ಸಂವಾದವನ್ನು ಏರ್ಪಡಿಸಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ ನಾವು ಯೋಚಿಸಬೇಕಾದ ಅಗತ್ಯವಿದೆ. ಹಾಗೂ ಸೆಕ್ಯುಲರ್ ಸಮಸ್ಯೆಯನ್ನು ಬಗೆಹರಿಸುವಲ್ಲಿ ನಮಗೆ ನಿಜವಾದ ಕಳಕಳಿ ಇದ್ದಿದ್ದೇ ಹೌದಾದರೆ ಸೆಕ್ಯುಲರಿಸಂನ ಸ್ವರೂಪವನ್ನು ಮೊದಲು ತಿಳಿದುಕೊಳ್ಳೋಣ

7 comments:

 1. Urdu Shalegala Thara Namma Deshadalli Govt Sponsered Govt Schools Hindugalike antha Yake Illa????

  Idakke Avara Samjayishe Yenu??

  situation hegide andre

  1. Hindugalige antha Shale Galu illa
  2. Addarinda Hidduagalige antha Dharama Bhodane Nadiyuva Haage illa Yake andre Bere Shalegalu So Called Secular annuva Groupige Bandu biduttave alli bere Religion Hudugaru Vodutta Irthare Nodi
  3. adre Islam Dharam Pracharakke Antha Urdu Shale galive alli aur Islam Dharma Prachara Madthare

  so Hindugalu thamma Dharamada Bagge Education Padiyuva Hagilla

  adre Muslimsge Antha Special Aage Dharama Prachara Maduva Avakasha Ide

  Wow What a Secular Country We Are living in Hats off to Sicular ppl and banana Democracy

  ReplyDelete
 2. ಪ್ರಿಯ ಸಂಪಾದಕೀಯ,

  ಡಾ. ರಾಜಾರಾಮ ಹೆಗಡೆಯವರ ಲೇಖನ ಪ್ರಕಟಿಸಿದ್ದಾಕ್ಕಾಗಿ ಧನ್ಯವಾದಗಳು, ಪ್ರಾರಂಭದಲ್ಲಿ ತಾವು ಬರೆದಂತೆ "ಹೆಗಡೆಯವರು ಪ್ರತಿಪಾದಿಸುವ ಕೆಲವು ವಿಷಯಗಳ ಕುರಿತು ನಮಗೂ ಸ್ಪಷ್ಟ ಭಿನ್ನಾಭಿಪ್ರಾಯವಿದ್ದರೂ" ತಮ್ಮ ಭಿನ್ನಾಭಿಪ್ರಾಯಗಳನ್ನು ಮುಂದಿಡಬೇಕಾಗಿ ಕೋರಿಕೆ. ತಮ್ಮಲ್ಲಿ ಹುಟ್ಟಿದ ಹೊಸ ಪ್ರಶ್ನೆಗಳನ್ನು ನಮ್ಮ ಜೊತೆ ಹಂಚಿಕೊಳ್ಳಿ. ಚರ್ಚಿಸೋಣ

  ಧನ್ಯವಾದಗಳೊಂದಿಗೆ
  sankushetty

  ReplyDelete
 3. Bhagvadgeetyo, Innyavade Sanmargavannu Toruva
  Dharmik Granthad Bodhane Tappalla. Aadare Adakke Tannade Dharmik Banna Balidu Heluvadu. Vishabija bittidante?
  -Manik Bhure

  ReplyDelete
 4. ಧನ್ಯವಾದಗಳು ತು೦ಬಾ ಸ್ಪಷ್ಟವಾಗಿ ವಿವರವಾಗಿ ಬರೆದಿದ್ದೀರಿ. ಇಷ್ಟೆಲಾ ಆಳವಾಗಿಯೋ ವಿವರವಾಗಿಯೋ ಗ೦ಭೀರವಾಗಿಯೋ ಅಲೋಚಿಸುವ ಮನಸ್ಸು, ಶಕ್ತಿ ಅಥವಾ ಪಾ೦ಡಿತ್ಯವೋ ಪುರುಸೊತ್ತೋ ಸೆಕ್ಯುಲರ್ ಸಮೂಹಕ್ಕಿಲ್ಲ. ಅವರ ಯೋಜನೆಯೇ ಬೇರೆ. ಸರಳೀಕರಣದಿ೦ದಾಗುವ ಲಾಭ ನಿಮ್ಮ ತರ್ಕದಿ೦ದ ಅವರಿಗೆ ದೊರಕುವುದಿಲ್ಲವಲ್ಲಾ!

  ReplyDelete
 5. ವಿ ಸೂ: ಚಿತ್ರದಲ್ಲಿರುವುದು ಇಕ್ಕೇರಿ ದೇವಾಲಯದ೦ತೆ ಕಾಣಿಸುತ್ತದೆ.

  ReplyDelete
 6. ಪ್ರಿಯ ರಘುನಂದನ್ ತಮ್ಮ ಪ್ರಶ್ನೆಗಳು ಮತ್ತು ಗ್ರಹಿಕೆಗಳೆರಡೂ ತಪ್ಪಾಗಿವೆ. ಮೊದಲೆಯನೆದಾಗಿ ಸರ್ಕಾರಿ ಉರ್ದು ಶಾಲೆಗಳು ಇತರ ಯಾವುದೇ ಸರ್ಕಾರಿ ಶಾಲೆಗಳಂಥ ಶಾಲೆಗಳು. ಇವನ್ನು ಮುಸ್ಲಿಮರಿಗಾಗಿ ಪ್ರತ್ಯೇಕವಾಗಿ ಸ್ಥಾಪಿಸಲಾಗಿಲ್ಲ. ಉರ್ದು ಭಾಷಿಕರಿಗಾಗಿ ಸ್ಥಾಪಿಸಲಾಗಿದೆ. ಉರ್ದು ಮಾತನಾಡುವವರಲ್ಲಿ, ಬಳಸುವವರಲ್ಲಿ ಮುಸ್ಲಿಮರು ಹೆಚ್ಚಿದ್ದಾರಷ್ಟೇ. ನಿಮ್ಮ ವಾದವನ್ನೇ ಪರಿಗಣಿಸುವುದಾದರೆ ಕನ್ನಡ ಶಾಲೆಗಳೆಲ್ಲವೂ ಹಿಂದೂಗಳ ಶಾಲೆಗಳಾಗಬೇಕಾಗುತ್ತದೆ. ಏಕೆಂದರೆ ಕನ್ನಡ ಮಾತನಾಡುವವರಲ್ಲಿ ಹೆಚ್ಚಿನವರು ಹಿಂದೂಗಳು. ಇದನ್ನು ಇತರ ಹಲವು ಭಾಷೆಗಳಿಗೂ ಅನ್ವಯಿಸಬಹುದು. ಇನ್ನು ಉರ್ದು ಶಾಲೆಗಳಲ್ಲಿ ಧರ್ಮ ಪ್ರಚಾರ ಮಾಡುತ್ತಾರೆ ಎಂದು ನಿಮಗನ್ನಿಸುತ್ತಿರುವುದಕ್ಕೆ ಮುಖ್ಯ ಕಾರಣ ನೀವು ಯಾವತ್ತೂ ಉರ್ದು ಶಾಲೆಗಳನ್ನು ನೋಡಿಲ್ಲ. ಉರ್ದು ಶಾಲೆಗಳು ಸರ್ಕಾರ ರೂಪಿಸಿದ ಪಠ್ಯ ಕ್ರಮದ ಅನ್ವಯ ಶಿಕ್ಷಣ ನೀಡುತ್ತವೆ. ಇಲ್ಲಿ ಉರ್ದು ಶಿಕ್ಷಣ ಮಾಧ್ಯಮ ಮಾತ್ರ.

  ಇನ್ನು ಧಾರ್ಮಿಕ ಶಿಕ್ಷಣದ ವಿಚಾರ. ಕ್ರಿಶ್ಚಿಯನ್ನರು ಇದಕ್ಕಾಗಿ ಚರ್ಚ್ ಗಳಲ್ಲಿ ಸಂಡೇ ಸ್ಕೂಲ್ ನಡೆಸುತ್ತಾರೆ. ಕೇವಲ ಧರ್ಮದ ಅಧ್ಯಯನ ಮಾಡಿ ಪುರೋಹಿತರಾಗುವವರಿಗೆ ಸೆಮಿನರಿಗಳಿವೆ. ಮುಸ್ಲಿಮರಲ್ಲೂ ಅಷ್ಟೇ. ಲೌಕಿಕರಿಗಷ್ಟೇ ಧರ್ಮಶಾಸ್ತ್ರ ಕಲಿಸಲು ಮದ್ರಸಾಗಳು ಕೆಲವು ಕೋರ್ಸ್ ಗಳನ್ನು ನಡೆಸುತ್ತವೆ. ಮಸೀದಿಗಳ ಅಧೀನದಲ್ಲಿರುವ ಸಣ್ಣ ಮದ್ರಸಾಗಳು ಮಕ್ಕಳಿಗೆ ಧಾರ್ಮಿಕ ಶಿಕ್ಷಣ ನೀಡುತ್ತವೆ. ಆದರೆ ಇವುಗಳಿಗೆ ಎಲ್ಲ ಮುಸ್ಲಿಮರು ಅಥವಾ ಎಲ್ಲಾ ಕ್ರಿಶ್ಚಿಯನ್ನರು ಹೋಗುತ್ತಾರೆ ಎನ್ನಲು ಸಾಧ್ಯವಿಲ್ಲ.

  ಹಿಂದೂಗಳಲ್ಲೂ ವೇದ ಪಾಠಶಾಲೆಗಳಿಲ್ಲವೇ? ಆಗಮವನ್ನು ಕಲಿಸುವ ಶಾಲೆಗಳು ಸರ್ಕಾರಿ ಅನುದಾನದಲ್ಲಿ ನಡೆಯುತ್ತಿರುವ ಉದಾಹರಣೆಗಳೂ ಇಲ್ಲ. ಇವೆಲ್ಲವೂ ಧಾರ್ಮಿಕ ವಿದ್ಯಾಭ್ಯಾಸಕ್ಕಾಗಿಯೇ ಇರುವ ವ್ಯವಸ್ಥೆಗಳು. ಉರ್ದು ಶಾಲೆಗಳನ್ನು ಅವುಗಳಿಗೆ ಹೋಲಿಸುವುದು ಸರಿಯಲ್ಲ. ಹಾಗೆ ನೋಡಿದರೆ ಉರ್ದುವಿನ ಮಹತ್ವದ ಲೇಖಕರಾದ ಕೃಷ್ಣಚಂದರ್, ಪ್ರೇಮ್ ಚಂದ್ ಮುಂತಾದವರಾರೂ ಅವರ ಹೆಸರುಗಳೇ ಹೇಳುವಂತೆ ಮುಸ್ಲಿಮರಲ್ಲ. ಅದು ಮುಸ್ಲಿಮರಿಗೆ ಸೀಮಿತವಾದ ಭಾಷೆಯೂ ಅಲ್ಲ.
  -ರಾಮಚಂದ್ರ ಶರ್ಮ, ಗುಲ್ಬರ್ಗ

  ReplyDelete
 7. -ರಾಮಚಂದ್ರ ಶರ್ಮ, ಗುಲ್ಬರ್ಗ ಅವರು ಹೇಳುವುದು ಸರಿ. ಅವರಮಾತಿನ೦ತೆ ತತಕ್ಷಣ ಆಸಕ್ತರಿಗಾಗಿ ಸ೦ಸ್ಕೃತ ಶಾಲೆಗಳನ್ನು ಆರ೦ಭಿಸಬೇಕು. ಅಲ್ಲವೇ ? ಹಿ೦ದೂಗಳಿಗಲ್ಲಪ್ಪ, ಸ೦ಸ್ಕೃತ ಭಾಷೆ ಓದುವವರಿಗೆ!

  ReplyDelete