Thursday, March 31, 2011

ತಸ್ಲೀಮಾ ನಸ್ರೀನ್, ಜೆಪಿ, ಚೇತನಾ ತೀರ್ಥಹಳ್ಳಿ ಮತ್ತು ಒಂದು ವಿವಾದ


ತಸ್ಲೀಮಾ ನಸ್ರೀನ್

 ಕನ್ನಡಪ್ರಭದಲ್ಲಿ ತಸ್ಲೀಮಾ ನಸ್ರೀನ್ ಅವರ ಅನುವಾದಿತ ಲೇಖನವೊಂದು ಪ್ರಕಟಗೊಂಡಿದ್ದು, ಆನಂತರ ರಾಜ್ಯದ ವಿವಿಧ ಭಾಗಗಳಲ್ಲಿ ಗಲಭೆ ನಡೆದಿದ್ದು, ಗಲಭೆಯಲ್ಲಿ ಇಬ್ಬರು ಬಲಿಯಾಗಿದ್ದು, ಮೂಲ ಲೇಖನವನ್ನು ತಿರುಚಲಾಗಿದೆ ಎಂದು ಸ್ವತಃ ತಸ್ಲೀಮಾ ನಸ್ರೀನ್ ಸ್ಪಷ್ಟನೆ ನೀಡಿದ್ದು ನಿಮಗೆ ನೆನಪಿರಬಹುದು. ಕನ್ನಡಪ್ರಭ ಸಾಪ್ತಾಹಿಕದಲ್ಲಿ ಸಿಂಧು ಎಂಬ ಹೆಸರಿನಲ್ಲಿ ಪ್ರಕಟಗೊಂಡ ಈ ಲೇಖನವನ್ನು ಬರೆದಿದ್ದು ಚೇತನಾ ತೀರ್ಥಹಳ್ಳಿಯವರು ಎಂಬ ವದಂತಿಯನ್ನು ಹಬ್ಬಿಸಲಾಗಿತ್ತು. ಇದರಿಂದಾಗಿ ಚೇತನಾ ಸಾಕಷ್ಟು ನೊಂದಿದ್ದರು. ಈಗ ಲೇಖನ ಬರೆದದ್ದು ಯಾರು ಎಂಬುದು ಬಹಿರಂಗವಾಗಿದೆ. ಆ ದಿನಗಳಲ್ಲಿ ತಾವು ಅನುಭವಿಸಿದ ನೋವನ್ನು ಚೇತನಾ ಇದೀಗ ತಮ್ಮ ಬ್ಲಾಗ್‌ನಲ್ಲಿ ಬರೆದಿದ್ದಾರೆ. ಅವರ ಅನುಮತಿ ಪಡೆದು ಈ ಬರಹವನ್ನು ಸಂಪಾದಕೀಯದಲ್ಲಿ ಪ್ರಕಟಿಸಬೇಕು ಎನ್ನುವಷ್ಟರಲ್ಲಿ ಅವರೇ ಈ ಲೇಖನವನ್ನು ಪ್ರಕಟಣೆಗಾಗಿ ಮೇಲ್ ಮಾಡಿದ್ದಾರೆ.  ಚೇತನಾ ಅವರ ಈ ಲೇಖನ ಅವರ ವಿರುದ್ಧ ಪಿತೂರಿ ನಡೆಸಿದವರ ಕಣ್ತೆರೆಸಲಿ ಎಂಬುದು ನಮ್ಮ ಆಶಯ. ಚೇತನಾ ಅವರಿಗೆ ನಮ್ಮ ನೈತಿಕ ಬೆಂಬಲವಿರುತ್ತದೆ  -ಸಂ



ವೈಯಕ್ತಿಕ ವಿಶ್ವಾಸಕ್ಕಿಂತ ಅಗ್ಗದ ಸಾಕ್ಷಿಯೇ ದೊಡ್ಡದಾಗುತ್ತದಾ?


ವರ್ಷದ ಹಿಂದಿನ ಮಾತು. ತಸ್ಲಿಮಾ ಮಾತುಗಳನ್ನ ಮಹಾಶಯರೊಬ್ಬರು ಹುಡುಗಿ ಹೆಸರಲ್ಲಿ ಅನುವಾದಿಸಿ ಕ.ಪ್ರ.ದಲ್ಲಿ ಪ್ರಕಟಿಸಿದ್ದರು. ಪರಿಣಾಮ- ಬೆಂಕಿ ಬಿದ್ದಿತ್ತು. ಎರಡು ಜೀವ ಹೋಗಿತ್ತು. ನಾನು ಆಗ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಕಪ್ಪು ಚುಕ್ಕೆ ಅದು. ಜೊತೆಗೆ ವೈಯಕ್ತಿಕ ನಷ್ಟವೂ. ನನ್ನ ಕೆಲವು ಗೆಳೆಯರು, ಮನಸು- ಹೃದಯಗಳೊಂದೂ ಇಲ್ಲದೆ ಬುದ್ಧಿಯಲ್ಲಷ್ಟೆ ಜೀವಿದುವವರು- ಇಂಥವರೆಲ್ಲ ಅದು ನಾನು ಎಂದು ತೀರ್ಮಾನಿಸಿಬಿಟ್ಟಿದ್ದರು. ಕೆಲವರ ಚುಚ್ಚು ಮಾತು, ಮೆಸೇಜುಗಳು, ಕಮೆಂಟುಗಳು ಮತ್ತಷ್ಟು ಜನರ ಹಾದಿ ತಪ್ಪಿಸಿ ನನ್ನೆದುರು ನಿಲ್ಲಿಸಿದ್ದವು. ಈ ಮಧ್ಯೆ ಒಂದೆರಡು ಬೆದರಿಕೆ ಕರೆಗಳೂ ಬಂದು, ನಾನು ಸಂಪಾದಕರ ಬಳಿ ಓಡಿ ರಕ್ಷಣೆ ಕೊಡಿಸುವಂತೆಯೂ ಕೇಳಬೇಕಾಗಿ ಬಂತು.
ಅದೆಲ್ಲ ಈಗ ನಡೆದ ಹಾಗಿದೆ. ಅಂದಿನ ಕ.ಪ್ರ.ಸಂಪಾದಕರು ಮಹಾವಲಸೆಯಿಂದ ಚೇತರಿಸಿಕೊಂಡು ಪತ್ರಿಕೆ ಕಟ್ಟುತ್ತಿದ್ದ ಅವಧಿಯದು. ಮ್ಯಾಗಜಿನ್‌ನ ಸಂಪೂರ್ಣ ಜವಾಬ್ದಾರಿ ಪುರವಣಿ ಸಂಪಾದಕರ ಮೇಲೆಯೆ ಇತ್ತು. ಅಂದಿನ ಸಂಪಾದಕರು ನಂಬಿ ಕೆಟ್ಟರು. ನಂಬಿದ್ದೇ ನನ್ನ ತಪ್ಪು, ಅದು ನನ್ನ ಬೇಜವಾಬ್ದಾರಿತನ ಅಂತ ಆಮೇಲೆ ಬಹಳ ಬಾರಿ ಬಹಳ ಕಡೆ ಅವಲತ್ತುಕೊಂಡಿದ್ದು ಕೇಳಿದ್ದೇನೆ. ಪುರವಣಿ ಸಂಪಾದಕರು ತಮ್ಮ ಗೆಳೆಯ ಕಳಿಸಿಕೊಟ್ಟ ಲೇಖನವನ್ನು ವಿವೇಚನೆ ಇಲ್ಲದೆ ಪ್ರಕಟಿಸಿಬಿಟ್ಟರು. ಆ ಗೆಳೆಯನಾದರೂ ಮತ್ತೊಂದು ಪತ್ರಿಕೆಯ ಕೆಲಸಗಾರನಾಗಿದ್ದ, ಜವಾಬ್ದಾರಿ ಹುದ್ದೆಯಲ್ಲಿದ್ದ, ಹೊರ ಜಗತ್ತಿಗೆ ಬುದ್ಧಿವಂತನಂತೆ ಪೋಸ್ ಕೊಡುವವನಾಗಿದ್ದ. ಆ ಅವಿವೇಕದ ಲೇಖನವನ್ನು ಒಂದು ಹುಡುಗಿಯ ಹೆಸರಲ್ಲಿ ಪ್ರಕಟಿಸಲಾಯ್ತು. ಕೆಲವರು ಅದು ಪುರವಣಿ ಸಂಪಾದಕರೇ ಎಂದೂ, ಕೆಲವರು ಅವರ ಗೆಳತಿ ಇರಬಹುದೆಂದೂ ಊಹಿಸಿಕೊಂಡರು. ಪುರುಸೊತ್ತಿನಲ್ಲಿದ್ದು, ನನ್ನ ಮೇಲೆ ಏನಾದರೊಂದು ಆಕ್ಷೇಪ ಇಟ್ಟುಕೊಂಡಿದ್ದ ಕೆಲವರ ಬಾಯಿಗೆ ನಾನು ಬಿದ್ದೆ.  ಮತ್ತವೇ ಕೋಮುವಾದಿ, ಬಲಪಂಥೀಯ, ಕೇಸರಿ ಮದ್ಯದಂತಹ ಕಿತ್ತೋದ ಡೈಲಾಗುಗಳು, ಕುಹಕಗಳು.
ಚೇತನಾ ತೀರ್ಥಹಳ್ಳಿ
ಅಷ್ಟೆಲ್ಲ ಬೇಸರಪಟ್ಟುಕೊಳ್ಳುವ ಅಗತ್ಯವಿದ್ದಿಲ್ಲ, ಆದರೂ ನೋವಾಗಿಬಿಟ್ಟಿತು. ಆ ಒಂದು ತಿಂಗಳ ನನ್ನ ಒಳಗುದಿ ಹೇಳಿಕೊಳ್ಳಲು ಆಗದಂಥದ್ದು.  ಪತ್ರಕರ್ತ ಮಿತ್ರರು ಕೆಲವರು ಈ ಗಾಸಿಪ್ ಅನ್ನು ಮತ್ತಷ್ಟು ವ್ಯಾಪಕಗೊಳಿಸುವಲ್ಲಿ ಸಕ್ರಿಯರಾಗಿದ್ದ ಬಹಳ ಬೇಸರ ಮಾಡಿತ್ತು. ಕೆಲವರಂತೂ ಕಾಲ್ ಮಾಡಿ  ಆರೋಪವನ್ನು ನನ್ನ ಮೇಲೆ ಹೇರಿದರು. ಅಷ್ಟು ಶ್ರಮ ತೆಗೆದುಕೊಂಡರು.
ಈಗ, ಈಗ ಏನು? ಐದಾರು ತಿಂಗಳ ಹಿಂದಿನಿಂದಲೇ ಜೆಪಿ ಯ ಹೆಸರು ಬಹಿರಂಗಗೊಂಡು ಹರಿದಾಡುತ್ತಿದೆ. ಈಗಲಂತೂ ಅದು ಅಧಿಕೃತವಾಗಿ ಘೋಷಣೆಯಾಗಿದೆ. ಹೊರಗಿನವರ ಮಾತು ಬಿಡಿ, ಪತ್ರಿಕೋದ್ಯಮದ ಒಳಗಿನವರ ಬಗ್ಗೆ ರೇಜಿಗೆಯಾಗುತ್ತಿದೆ. ಅವತ್ತು ಕರೆ ಮಾಡಿ, mail ಮಾಡಿ ದೂಷಿಸುವ ಕಷ್ಟ ತೆಗೆದುಕೊಂಡ ಯಾರಿಗೂ ಇವತ್ತು sorry ಕೇಳಲು ನೆನಪಾಗುತ್ತಿಲ್ಲ. ಗಾಸಿಪ್ ಮಾಡುವವರ ಹಣೆಬರಹವೆ ಇಷ್ಟಲ್ಲ? ಟೊಳ್ಳು ಜನ. ಮರೆವು ಜಾಸ್ತಿ.
ಸಾಲದ್ದಕ್ಕೆ ಈಗ ಪ್ರಣತಿಯ ಭೂತ ಮೆಟ್ಟಿಕೊಂಡಿದೆ. ಅನವಶ್ಯಕವಾಗಿ ನಾನು ನಾನಲ್ಲ ಅನ್ನುವ ಸಮಜಾಯಿಷಿ ಕೊಟ್ಟುಕೊಳ್ಳಬೇಕಾಗಿದೆ. ಅದು ಕೂಡ ಸುಮ್ಮನೆ ಗಾಸಿಪ್ ಎಂದು ಗೊತ್ತಿದ್ದೇ ಸಾಂಕ್ರಾಮಿಕ ಹರಡುವಿಕೆಯ ವೈರಸ್ ಗಳಾಗುತ್ತಿದ್ದಾರೆ ಸಹಪತ್ರಕರ್ತರು. ಅದನ್ನು ಇಲ್ಲಿಗೇ ನಿಲ್ಲಿಸಿಬಿಟ್ಟರೆ ಒಳ್ಳೆಯದು. ಇಲ್ಲವಾದರೆ, ನನಗೆ ಕೆಟ್ಟದ್ದು.
ಇನ್ನೂ ಹೇಳಬೇಕನಿಸಿದ್ದು-ಬ್ಲಾಗ್ ಜಗತ್ತಿನ ತುಂಬ ಪತ್ರಿಕೋದ್ಯಮದ ವಾಚ್‌ಡಾಗ್‌ಗಳು ತುಂಬಿಕೊಳ್ಳುತ್ತಿದ್ದಾರೆ. ಕೆಲವರು ಹಿಂದೆಮುಂದೆ ನೋಡದೆ ಸ್ವಾರಸ್ಯಕರ ಗಾಸಿಪ್, ಅರೆಬರೆ ಮಾಹಿತಿ, ತಪ್ಪು ಅರ್ಥ ಕೊಡುವ ಸುದ್ದಿಗಳನ್ನೆಲ್ಲ ಪ್ರಕಟಿಸುತ್ತಿದ್ದಾರೆ. ಕೆಲವರು ಚೆನ್ನಾದ ವಿಶ್ಲೆಷಣೆ ನಡೆಸ್ತಿದ್ದರೂ ನಡುನಡುವೆ ಬಕೆಟ್ ಇಟ್ಟುಕೊಂಡು ಮುನ್ನಡೆಯುತ್ತಿದ್ದಾರೆ. (ಬಕೆಟ್ ಈಗ ಸಖತ್ ಚಾಲ್ತಿಯಲ್ಲಿರುವ ಪದ. ಅದಕ್ಕೆ ಪರ್ಯಾಯ ಸಿಗ್ತಿಲ್ಲ). ಯಾರಿಗೂ ಇದರ ಪರಿಣಾಮದ ಅರಿವು ಇದ್ದ ಹಾಗಿಲ್ಲ. ಪತ್ರಿಕೆ, ವೆಬ್ ಗಳಲ್ಲಿ ಬರುತ್ತಿರುವ ಸುದ್ದಿಗಳಿಂದಾಗಿ ಜರ್ನಲಿಸಮ್ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣುಮಕ್ಕಳು ಇತ್ತ ತಲೆ ಹಾಕಲು ಹೆದರುವಂಥ ಮಾಹೋಲ್ ನಿರ್ಮಾಣವಾಗ್ತಿದೆ. ಇಷ್ಟು ದಿನ ಜನ ರಾಜಕಾರಣ ಅಂದರೆ ಮೂಗು ಮುರೀತಿದ್ದರು, ಇನ್ನು ಖಚಡಾ ಕೆಲಸಕ್ಕೆಲ್ಲ ಇದೇನು ಜರ್ನಲಿಸಮ್ಮಾ ಅಂತ ಕೇಳುವ ಕಾಲವೂ ಬರಬಹುದು. ಹಾಗಂತ ನಾವು ಬೇರೆ ಬೇರೆ ಪತ್ರಿಕೆಯಲ್ಲಿದ್ದೂ ಗೆಳೆತನ ಇಟ್ಟುಕೊಂಡಿರುವ ಹೆಣ್ಣುಮಕ್ಕಳು ಆನ್‌ಲೈನ್ ಚಾಟ್‌ನಲ್ಲಿ ಹತಾಶರಾಗ್ತಿದೇವೆ.
ಎಲ್ಲಿಂದ ಎಲ್ಲಿಗೆ ಏನು ಲಿಂಕೋ? ತಮ್ಮಂದಿರಲ್ಲಿ ಒಬ್ಬ, ನನ್ನ ಕ್ಲಾರಿಫಿಕೇಶನ್ ಗಳ ನಂತರವೂ ನನ್ನ ಬಗ್ಗೆ ಅನುಮಾನ ಇರಿಸಿಕೊಂಡಿದ್ದ. ಈಗ ತಾನೆ ಯಾವುದೋ ಬ್ಲಾಗ್ ನೋಡಿ ‘ಸಿಂಧು ನೀವಲ್ಲ ಅಂತ ಖಾತ್ರಿ ಆಯ್ತು’ ಅಂತ ಸರ್ಟಿಫಿಕೇಟ್ ಕೊಟ್ಟ. ಹಾಗಾದರೆ ನಂಬಿಕೆ, ಅಧಿಕೃತತೆಯ ಮಾನದಂಡ ಏನು? ವೈಯಕ್ತಿಕ ವಿಶ್ವಾಸಕ್ಕಿಂತ ಕಂಡು ಕೇಳಿಲ್ಲದ ಮುಖಗಳ ಮಾತೇ ಪ್ರಮಾಣವಾಗುತ್ತದಲ್ಲ, ಯಾಕೆ? ಅವತ್ತು ಗಾಸಿಪ್ ನಂಬಿ ನೋವು ಕೊಟ್ಟವರು ನಂಬಿದ್ದೂ ಇಂಥವೇ ಸಾಕ್ಷಿಗಳನ್ನು. ವ್ಯಕ್ತಿಯನ್ನು ಸ್ವಂತ ಅನ್ನಿಸಿಕೆ, ಅಳತೆಯಿಂದ ತೂಗಿ ನೋಡಲು ಸಾಧ್ಯವೇ ಇಲ್ಲವಾ? ಯಾರನ್ನ ಕೇಳುವುದು?
ಇಷ್ಟಕ್ಕೂ ಇಲ್ಲಿ ಆ ಹುಡುಗ, ಅಗ್ಗದ ಸಾಕ್ಷಿಗಳನ್ನು ನಂಬುವ ಮನಸ್ಥಿತಿಗಳ ಪ್ರತಿನಿಧಿ ಮಾತ್ರ...

Wednesday, March 30, 2011

ಹಿಂದೆ ಅಂಕಣಗಳು ಹೇಗಿದ್ದವು? ಆನಂದ್ ಪಾಟೀಲ್ ನೆನಪುಗಳು


 ಜಾಡು ತಪ್ಪಿರುವ ಅಂಕಣಗಳ ಕುರಿತು ಬಿ.ಕೆ.ಸುಮತಿ ಮಾರ್ಮಿಕವಾಗಿ ಬರೆದಿದ್ದರು. ಈ ಚರ್ಚೆಯನ್ನು ಆನಂದ್ ಪಾಟೀಲ್ ಅವರ ಮೂಲಕ ವಿಸ್ತರಿಸುತ್ತಿದ್ದೇವೆ. ಆನಂದ್ ಪಾಟೀಲರು ಕನ್ನಡ ಪತ್ರಿಕೆಗಳ ಅಂಕಣಗಳ ಪುಟ್ಟ ಚರಿತ್ರೆಯನ್ನೇ ಇಲ್ಲಿ ಒದಗಿಸಿದ್ದಾರೆ. ಚರ್ಚೆ ಮುಂದುವರೆಯಲಿ.-ಸಂ.

ಬಿ.ಕೆ. ಸುಮತಿ ಅವರ ಅಂಕಣಗಳನ್ನು ಕುರಿತ ಬರಹ ತುಂಬ ಕುತೂಹಲ ಹುಟ್ಟಿಸಿತು. ಏಕೆಂದರೆ, ನಾನು ಮಾಧ್ಯಮ ವ್ಯಾಸಂಗದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬ್ಯಾಂಕ್‌ನಲ್ಲಿ ಅಧಿಕಾರಿಯಾಗಿದ್ದರೂ ಮಾಧ್ಯಮದಲ್ಲಿ ಸಂಶೋಧನೆ ಮುಂದುವರೆಸಲು ಅಂಕಣ ಸಾಹಿತ್ಯ ವನ್ನೇ ಆರಿಸಿಕೊಂಡಿರುವ ಕಾರಣಕ್ಕೆ.

ಕನ್ನಡದಲ್ಲಿ ಅಂಕಣಗಳ ಇತಿಹಾಸ ರೋಚಕವಾಗಿದೆ. ಸುಮತಿ ಅವರು ಹೇಳಿರುವುದಕ್ಕೆ ಪೂರಕವಾಗಿ ಹೇಳಲು ಇನ್ನೂ ಅನೇಕ ವಿಷಯಗಳಿವೆ. ಉದಾಹರಣೆಗೆ ಇಲ್ಲಿ ಕೆಲವನ್ನು ಮಾತ್ರ ನೋಡಬಹುದು. (ಎಲ್ಲವನ್ನೂ ನೋಡಹೊರಟರೆ ಸಂಶೋಧನಾ ಸಂಪ್ರಬಂಧ ಇಲ್ಲೇ ಬರೆಯಬೇಕಾದೀತು !)

* ಕರ್ನಾಟಕದ ಏಕೀಕರಣದ ಬಗ್ಗೆ ಜನತೆಯನ್ನು ಎಚ್ಚರಿಸಿದ್ದು ಅಂದಿನ ಖ್ಯಾತ ಸಾಹಿತಿಗಳು- ತಮ್ಮ ಪತ್ರಿಕಾ ಅಂಕಣಗಳ ಮೂಲಕ.

* ಅಂದಂದಿನ ಸಂಗತಿಗಳನ್ನು ವಿಮರ್ಶಿಸುವ, ವಿಡಂಬಿಸುವ ಉದ್ದೇಶದ ಟಿಯೆಸ್ಸಾರ್ ಅವರ ಛೂಬಾಣ ಅಂಕಣ ಪತ್ರಿಕೋದ್ಯಮದಲ್ಲೇ ವಿಶಿಷ್ಟ. ರಾಜಕಾರಣಿಗಳಿಗೆ ಚಾಟಿಯೇಟು ಕೊಡುತ್ತಿದ್ದ ಅದರ ಮೂಲಕ ಸರ್ಕಾರದ ಅನೇಕ ಕೆಟ್ಟ ನಿರ್ಧಾರಗಳು ಕೂಡಲೇ ಸರಿಯಾಗುತ್ತಿದ್ದವು.

* ಸುಧಾ ವಾರಪತ್ರಿಕೆಗೆ ಜಿ.ಪಿ. ರಾಜರತ್ನಂ ಅವರಂತಹ ದೊಡ್ಡಸಾಹಿತಿಗಳೇ ಹತ್ತಾರು ವರ್ಷ ಅಂಕಣ ಬರೆದು, ಬೌದ್ಧ, ಜೈನ ಸಾಹಿತ್ಯಗಳ ಕಥೆಗಳನ್ನು, ಇತರ ಧರ್ಮಗಳ ಬೋಧಪ್ರದ ಕಥೆಗಳನ್ನು ಓದುಗರಿಗೆ ಪರಿಚಯಿಸಿದರು. ಅವರ ಅಂಕಣಗಳಿಗೆ ಓದುಗರು ಚಡಪಡಿಸಿ ಕಾಯುತ್ತಿದ್ದರು. ಅವರ ವಿಚಾರರಶ್ಮಿ ಅಂಕಣ ಬುದ್ಧಿಗೆ ಚುರುಕು, ಮನಸ್ಸಿಗೆ ತಂಪು ಕೊಡುತ್ತಿತ್ತು. ವ್ಯಕ್ತಿತ್ವ ವಿಕಸನ ಪದವೇ ಗೊತ್ತಿಲ್ಲದಿದ್ದ ಕಾಲದಲ್ಲಿ ಅದನ್ನೇ ಮಾಡುತ್ತಿತ್ತು !

* ಖ್ಯಾತ ಸಾಹಿತಿ ನಿರಂಜನ ಅವರು ಪ್ರಜಾವಾಣಿ ಸೇರಿ ವಿವಿಧ ಪತ್ರಿಕೆಗಳಲ್ಲಿ ಬರೆದ ಅಂಕಣಗಳು ಆ ಕಾಲದ ಅಮೂಲ್ಯ ದಾಖಲೆಗಳಾಗಿವೆ. ತಮ್ಮ ಪ್ರಿಯತಮೆ ಅನುಪಮಾಗೆ ಪತ್ರ ಬರೆದಂತೆ ಅವರು ಅಂಕಣ ಬರೆಯುತ್ತಿದ್ದರು.

* ಇನ್ನು ಅಂಕಣಗಳ ಚಕ್ರವರ್ತಿ ಎಂದು ಕರೆಯಬಹುದಾದ  ಎಚ್ಚೆಸ್ಕೆ  ಅವರು ಸ್ಮರಣೀಯರು. ಸುಧಾ ಪತ್ರಿಕೆ ಆರಂಭವಾದ ದಿನದಿಂದ ಅವರ ಎರಡು ಅಂಕಣಗಳು ಸತತ ಜನಪ್ರಿಯವಾಗಿದ್ದವು. ಇಂಟರ್‌ನೆಟ್ ಇಲ್ಲದಿದ್ದ ಕಾಲದಲ್ಲಿ ಎಚ್ಚೆಸ್ಕೆ ಅವರು ಅದು ಹೇಗೆ ವಿಷಯಗಳನ್ನು ಅಷ್ಟು ಖಚಿತವಾಗಿ ಸಂಗ್ರಹಿಸುತ್ತಿದ್ದರೋ ದೇವರಿಗೇ ಗೊತ್ತು !!

* ಇವೆಲ್ಲಕ್ಕಿಂತ ಮುಖ್ಯವಾಗಿ ಅಂಕಣಗಳ ಆಚಾರ್ಯ ಪಾ.ವೆಂ. ಆಚಾರ್ಯ ಅವರನ್ನು ಮರೆಯುವಂತೆಯೇ ಇಲ್ಲ. ಸಂಯುಕ್ತ ಕರ್ನಾಟಕ, ಕಸ್ತೂರಿ ಬಳಗದಲ್ಲಿ ಅವರು ನಿರಂತರವಾಗಿ ಬರೆದ ಪದಪದಾರ್ಥ ಮತ್ತು ಇತರ ಅಂಕಣಗಳು ಪತ್ರಿಕಾ ಸಾಹಿತ್ಯದ ಅಮೂಲ್ಯ ದಾಖಲೆಗಳಾಗಿವೆ.

* ಸುರೇಂದ್ರ ದಾನಿ ಮತ್ತಿತರ ಅಂಕಣಕಾರರು ಬಹಳ ವರ್ಷ ಸಂಯುಕ್ತ ಕರ್ನಾಟಕದಲ್ಲಿ ಬರೆದಿದ್ದಾರೆ. ಮಂಗಳೂರಿನ ನವಭಾರತ ಪತ್ರಿಕೆಯಲ್ಲಿ ವಾರದ ಅಂಕಣಗಳು ಆಕರ್ಷಕವಾಗಿದ್ದವು.

* ಕಾಮಧೇನು ಅನ್ನುವುದು ಸುಮತಿ ಹೇಳಿದಂತೆ ಸುಧಾ ಪತ್ರಿಕೆಯ ಅಂಕಣದ ಹೆಸರಲ್ಲ- ಅದರ ಮಹಿಳಾ ಲೇಖನಗಳ ವಿಭಾಗದ ಹೆಸರು. ಯಾರು ಬೇಕಾದರೂ ಅದಕ್ಕೆ ಲೇಖನ ಬರೆಯಬಹುದಿತ್ತು.

* ಹಾ.ಮಾ. ನಾಯಕರು ಪ್ರಜಾಮತಕ್ಕೆ ಮಾತ್ರವಲ್ಲ- ಪ್ರಜಾವಾಣಿ, ಸುಧಾ, ತರಂಗ ಪತ್ರಿಕೆಗಳಿಗೂ ನಿರಂತರ ಅಂಕಣಗಳನ್ನು ಬರೆದರು. ಅವರ ಎಲ್ಲ ಅಂಕಣಗಳ ಹೆಸರು ಸಂಗತ, ಸೂಲಂಗಿ ಇತ್ಯಾದಿ ಸಕಾರ ದಿಂದಲೇ ಆರಂಭವಾಗುತ್ತವೆ. ಮತ್ತೂ ವಿಶೇಷವೆಂದರೆ ಅವರು ತಮ್ಮ ಅಂಕಣಗಳ ಸಂಕಲನಕ್ಕೆ ಕೇಂದ್ರ ಸಾಹಿತ್ಯ ಅಕಾಡೆಮಿ ಬಹುಮಾನವನ್ನೂ ಪಡೆದು, ಪತ್ರಿಕಾ ಸಾಹಿತ್ಯಕ್ಕೆ ದೊಡ್ಡ ಮರ್ಯಾದೆ ತಂದುಕೊಟ್ಟರು. ಅಂದಿನಿಂದ ರಾಜ್ಯ ಸಾಹಿತ್ಯ ಅಕಾಡೆಮಿಯೂ ಅಂಕಣ ಸಾಹಿತ್ಯಕ್ಕೆ ಮಾನ್ಯತೆ ಕೊಡುತ್ತಿದೆ.

*ಉದಯವಾಣಿಯಲ್ಲಿ ಬಹಳಕಾಲ ಬಂದ ಕು.ಶಿ. ಹರಿದಾಸ ಭಟ್ಟರ ಕುಶಲೋಪರಿ ಅಂಕಣ, ವಿವೇಕ ರೈ ಅವರ ಗಿಳಿಸೂವೆ ಅಂಕಣ ಜನಪ್ರಿಯವಾಗಿತ್ತು. ತರಂಗದ ಸಂಪಾದಕರಾಗಿದ್ದ ಸಂತೋಷಕುಮಾರ ಗುಲ್ವಾಡಿ ಅವರ ಅಂತರಂಗ ಬಹಿರಂಗ ಆ ಕಾಲದ ಬಹಳ ಜನಪ್ರಿಯ ಸಂಪಾದಕೀಯ ಅಂಕಣವಾಗಿತ್ತು. ತುಷಾರದ ಸಂಪಾದಕರಾಗಿದ್ದ ಎ. ಈಶ್ವರಯ್ಯ ಅವರೂ ತುಂಬ ವರ್ಷ ಅಂಕಣ ಬರೆದರು.

* ವೈಯೆನ್ಕೆ ಅವರು ಕನ್ನಡಪ್ರಭದಲ್ಲಿ ಬರೆದ ವಂಡರ್ ಕಣ್ಣು ಒಂದು ವಿಶೇಷ ಅಂಕಣವಾಗಿತ್ತು.

* ಓದುಗರ ಜೊತೆ ಟಚ್ ಇಟ್ಟುಕೊಳ್ಳುವ ಪ್ರಶ್ನೋತ್ತರ ಅಂಕಣಗಳಲ್ಲಿ ಸುಧಾದ ನೀವು ಕೇಳಿದಿರಿ ಗೆ ಅಗ್ರಸ್ಥಾನ. ಅದರಲ್ಲಿ ಉತ್ತರ ಕೊಡುತ್ತಿದ್ದವರು ಅಂತಿಂತಹವರಲ್ಲ- ಸ್ವತಃ ಖ್ಯಾತ ಸಾಹಿತಿ ಬೀಚಿ ಅವರೇ! ದಶಕಗಳ ಕಾಲ ಅವರು ಓದುಗರನ್ನು ಇನ್ನಿಲ್ಲದಂತೆ ರಂಜಿಸಿದರು. ಅವರ ಮರಣಾನಂತರ ಅ.ರಾ. ಮಿತ್ರ, ಅ.ರಾ.ಸೇ., ಕೇಶವಮೂರ್ತಿ ಮೊದಲಾದವರು ಮುಂದುವರೆಸಿದರು. ಇಂದಿನ ಅನೇಕ ಲೇಖಕರ ಹೆಸರು ಮೊದಲು ಪತ್ರಿಕೆಯಲ್ಲಿ ಪ್ರಕಟವಾದದ್ದು ಈ ಅಂಕಣದಲ್ಲಿ- ಪ್ರಶ್ನೆ ಕೇಳಿದಾಗ!

* ಸುಧಾ ಪತ್ರಿಕೆಯ ಇಂತಹ ಅಪೂರ್ವ ಅಂಕಣಗಳನ್ನು ರೂಪಿಸಿದ ಅದರ ಪ್ರಥಮ ಸಂಪಾದಕ ಇ.ಆರ್. ಸೇತೂರಾಮ್ ಅವರು, ವಾರಪತ್ರಿಕೆಗಳಿಗೆ ಒಂದು ಒಳ್ಳೆಯ ಮಾದರಿಯನ್ನು ನಿರ್ಮಿಸಿದರು ಎಂಬ ಮಹತ್ವದ ಅಂಶವನ್ನು ನೆನಪಿಸಿಕೊಳ್ಳಬೇಕು.

* ಪಾಟೀಲ ಪುಟ್ಟಪ್ಪ ಅವರು ಲೇಖನಗಳಿಂದ ಮಾತ್ರವಲ್ಲದೆ ತಮ್ಮ ಅಂಕಣ ಬರಹಗಳಿಂದಲೂ ತುಂಬ ಖ್ಯಾತಿ ಪಡೆದರು ಎಂಬುದನ್ನು ಮರೆಯುವಂತಿಲ್ಲ.

* ಪ್ರಶ್ನೋತ್ತರ ಅಂಕಣಗಳಲ್ಲಿ ವೈಯೆನ್ಕೆ ಚಮತ್ಕಾರದ ಉತ್ತರ ಕೊಡುತ್ತಿದ್ದ ಘ್ನಾನಪೀಠ ಜನಪ್ರಿಯವಾಗಿತ್ತು. ಲಂಕೇಶ್ ಪತ್ರಿಕೆ, ಹಾಯ್ ಬೆಂಗಳೂರುಗಳ ಪ್ರಶ್ನೋತ್ತರ ಅಂಕಣಗಳು ರಂಜನೀಯ.

* ವಿವಿಧ ವಿಷಯಗಳನ್ನು ಕುರಿತು ಬರೆಸುವ ಅಂಕಣಗಳಲ್ಲಿ ಆರೋಗ್ಯಕ್ಕೆ ಮೊದಲ ಸ್ಥಾನ. ಅನುಪಮಾ ನಿರಂಜನ ಅವರೇ ಸ್ವಾಸ್ಥ್ಯ- ಸಲಹೆ ಪ್ರಶ್ನೋತ್ತರ ಅಂಕಣ ಬಹಳ ವರ್ಷ ಬರೆದು ಇನ್ನಿಲ್ಲದ ಜನಪ್ರಿಯತೆ ಗಳಿಸಿದರು. ನಂತರ ಅನೇಕ ವೈದ್ಯ ಬರಹಗಾರರು ಬಂದರು. ಅವರಲ್ಲಿ ಸಿ.ಆರ್. ಚಂದ್ರಶೇಖರ್ ತುಂಬ ಪತ್ರಿಕೆಗಳಲ್ಲಿ ಅಂಕಣಗಳನ್ನು ಬರೆದಿದ್ದಾರೆ.

* ಲೈಂಗಿಕ ಆರೋಗ್ಯ ಕುರಿತ ಪ್ರಶ್ನೋತ್ತರ ಅಂಕಣಗಳು ವಿಶಿಷ್ಟವಾಗಿವೆ. ವೈದ್ಯರಾದ ಗೋಪಾಲಕೃಷ್ಣರಾವ್ ಅವರ ಪತ್ರಿಕೆಯ ಅಂಕಣ ಬಹಳ ಜನಪ್ರಿಯವಾಗಿತ್ತು. ಪ್ರಜಾಮತದಲ್ಲಿ ಬರುತ್ತಿದ್ದ ಗುಪ್ತ ಸಮಾಲೋಚನೆ ಅದರ ಪ್ರಸಾರವನ್ನು ಲಕ್ಷ ದಾಟಿಸಿತ್ತು. ಅದರ ಸಂಪಾದಕರಾಗಿದ್ದ ಮ.ನ. ಮೂರ್ತಿ ಅವರೇ ಅದರಲ್ಲಿ ಉತ್ತರ ಕೊಡುತ್ತಿದ್ದರಂತೆ. ನಂತರ ಉದಯವಾಣಿಯ ಮಹಿಳಾ ಸಂಪದದಲ್ಲಿ ಪದ್ಮಿನಿ ಪ್ರಸಾದ್ ಅವರ ಪ್ರಶ್ನೋತ್ತರ ಅಂಕಣ ಅವರಿಗೆ ತುಂಬ ಜನಪ್ರಿಯತೆಯನ್ನು, ಟಿ.ವಿ. ವಾಹಿನಿಗಳಲ್ಲಿ ಅಂತಹ ಕಾರ್ಯಕ್ರಮಗಳ ಟ್ರೆಂಡ್ ಅನ್ನು ತಂದಿತು. ಸುಧಾದಲ್ಲಿ ವಿನೋದ ಛಬ್ಬಿ ಆ ರೀತಿಯ ಅಂಕಣ ಬರೆದರು.

* ಇನ್ನು ಜ್ಞಾನವಿಜ್ಞಾನ ಕುರಿತ ಅಂಕಣಗಳಲ್ಲಿ ಸುಧಾದಲ್ಲಿ ವಾಸುದೇವ್ ಅವರು ಮಕ್ಕಳಿಗಾಗಿ ಬರೆಯುತ್ತಿರುವ ವಿಶಿಷ್ಟ ಅಂಕಣ ತುಂಬಾ ಅಮೂಲ್ಯವಾದದ್ದು. ಸದ್ದಿಲ್ಲದೆ ಸತತ ಮೂರೂವರೆ ದಶಕಗಳ ಕಾಲದಿಂದ ಅಂಕಣ ಬರೆಯುತ್ತಿರುವ ಶಾಲಾಶಿಕ್ಷಕ ವಾಸುದೇವ್ ಅವರ ಅಮೂಲ್ಯ ಸೇವೆಗೆ ಯಾವ ಪ್ರಶಸ್ತಿ ಕೊಟ್ಟರೂ ಸಾಲದು.

* ಇನ್ನೊಂದು ನೆನಪಿಸಿಕೊಳ್ಳಬೇಕಾದ್ದು ನಾಗೇಶ ಹೆಗಡೆ ಪ್ರಜಾವಾಣಿಯಲ್ಲಿ ಇಪ್ಪತ್ತೈದು ವರ್ಷಗಳಿಂದ ಸತತ ದಾಖಲೆಯಾಗಿ ಬರೆಯುತ್ತಿರುವ ವಿಜ್ಞಾನ ವಿಶೇಷ ಅಂಕಣ.

* ಸಂಸ್ಕೃತಿ ಕುರಿತ ಅಂಕಣಗಳಲ್ಲಿ ರಂಗಭೂಮಿ ಮತ್ತು ಸಿನಿಮಾತು ಅಂಕಣಗಳನ್ನು ಬರೆದ ಬಿ.ವಿ. ವೈಕುಂಠರಾಜು ನೆನಪಾಗುತ್ತಾರೆ. ಅವು ಅಂದಿನ ಬೆಳವಣಿಗೆಗಳ ಅಮೂಲ್ಯ ದಾಖಲೆಗಳು. ಸಿನಿಮಾ ಕುರಿತು ಇಂದಿಗೂ ಹಲವು ಜನಪ್ರಿಯ ಅಂಕಣಗಳಿವೆ.

* ಕ್ರೀಡಾ ಅಂಕಣಗಳಲ್ಲಿ ಪ್ರಜಾವಾಣಿ, ಸುಧಾಗಳಲ್ಲಿ ಸೂರಿ ಬರೆದ ಅಂಕಣಗಳು ಖ್ಯಾತಿ ಪಡೆದಿದ್ದವು. ಗೋಪಾಲ ಹೆಗಡೆ ಮತ್ತೊಬ್ಬ ಹೆಸರಿಸಬಹುದಾದ ಅಂಕಣಕಾರ.

* ಕಸ್ತೂರಿಯ ವಿಶಿಷ್ಟ ನಿಮ್ಮ ಶಬ್ದಭಂಡಾರ ಬೆಳೆಯಲಿ ಅಂಕಣ ನಿಜಕ್ಕೂ ತಲೆಮಾರುಗಳ ಜನರ ಭಾಷೆಯನ್ನು ಬೆಳೆಸಿದೆ. ಪದಬಂಧ ದೈನಿಕ ಅಂಕಣಗಳ ಜನಪ್ರಿಯತೆ ಕುರಿತು ಎರಡು ಮಾತೇ ಇಲ್ಲ! ನಂತರ ಕ್ವಿಜ್‌ಗಳು, ಸುಡೊಕು ಅಂಕಣಗಳ ಕಾಲ ಬಂತು. ಚುಟುಕು ಮಾಹಿತಿಗಳ ದೈನಿಕ ಚಿಕ್ಕ ಅಂಕಣಗಳನ್ನು ಕನ್ನಡಪ್ರಭ ದಶಕಗಳ ಹಿಂದೆಯೇ ಆರಂಭಿಸಿ ಜನಪ್ರಿಯಗೊಳಿಸಿತು.

* ಕೃಷಿ ಕುರಿತ ಅಂಕಣಗಳಲ್ಲಿ ಪ್ರಜಾವಾಣಿಯ ಬದುಕಿನ ಬೆನ್ನೆಲುಬು ಬೇಸಾಯ ಅಂದಿನ ಕಾಲದಲ್ಲಿ ಜನಪ್ರಿಯವಾಗಿದ್ದ ಅಂಕಣ. ಶ್ರೀಪಡ್ರೆ, ಶಿವಾನಂದ ಕಳವೆ, ಅಡ್ಡೂರು ಕೃಷ್ಣರಾವ್, ಜಯಣ್ಣ ಮೊದಲಾದ ಹಲವು ಅಂಕಣಕಾರರು ಇಂದಿಗೂ ಬರೆಯುತ್ತಿದ್ದಾರೆ.

* ಗ್ರಾಹಕರ ಹಕ್ಕು ಕುರಿತು ಉದಯವಾಣಿಯಲ್ಲಿ ರವೀಂದ್ರನಾಥ ಶ್ಯಾನಭಾಗ, ಮಾಹಿತಿ ಹಕ್ಕು ಕುರಿತು ವೈ.ಜಿ. ಮುರಳೀಧರ, ಮಕ್ಕಳ ಹಕ್ಕು ಕುರಿತು ವಾಸುದೇವ ಶರ್ಮ ಅಂಕಣ ಬರೆದಿದ್ದಾರೆ. ಅಂತಹ ವಿಶೇಷ ಉಪಯುಕ್ತ ವಿಷಯಗಳ ಬಗ್ಗೆ ಉದಯವಾಣಿ ಅಂಕಣಗಳನ್ನು ಬರೆಸಿರುವುದು ಉಲ್ಲೇಖನೀಯ.

* ವಿಡಂಬನೆಯ ಅಂಕಣಗಳಲ್ಲಿ ಪಾ.ವೆಂ. ಹೆಸರು ನೆನಪಾಗುತ್ತದೆ. ಕು.ಗೋ. ಅವರೂ ಅಂತಹ ಅಂಕಣ ಬರೆದರು. ಆಮೇಲೆ ಸುಧಾದಲ್ಲಿ ಜಿ.ಎಸ್. ಸದಾಶಿವ ಮತ್ತು ಆನಂದ ಬರೆಯುತ್ತಿದ್ದ ಅಂಕಣದಲ್ಲಿ ಹಾಸ್ಯ, ವಿಡಂಬನೆ ತುಂಬಿರುತ್ತಿತ್ತು. ಡುಂಡಿರಾಜ್ ಅವರು ವಿಜಯ ಕರ್ನಾಟಕದಲ್ಲಿ ನಾಲ್ಕು ವರ್ಷ ಬರೆದ ವಿಡಂಬನೆ ಅಂಕಣ ತುಂಬ ಜನಪ್ರಿಯವಾಯಿತು. ನಂತರ ಅವರು ಕೆಲಕಾಲ ಪ್ರಜಾವಾಣಿಯಲ್ಲಿ  ಡುಂಡಿಮ ಅಂಕಣ ಬರೆದರು. ಉದಯವಾಣಿಯಲ್ಲಿ ಆರ್. ಪೂರ್ಣಿಮಾ ಸ್ವಲ್ಪಕಾಲ ಎಂಥದು ಮಾರಾಯ್ತಿ! ವಿಡಂಬನೆ ಅಂಕಣ ಬರೆದರು. ಇನ್ನೂ ಹಲವರು ಇಂತಹ ಅಂಕಣಗಳನ್ನು ಬರೆದಿದ್ದಾರೆ.

* ಕಾನೂನು ಅರಿವು ಪ್ರಸಾರ ಮಾಡುವ ಅಂಕಣಗಳು ಕನ್ನಡದಲ್ಲಿ ಬರುತ್ತಿವೆ. ಕನ್ನಡಪ್ರಭದಲ್ಲಿ ವಕೀಲ ಮೂರ್ತಿ ಅವರು ದಶಕಗಳ ಕಾಲ ನೀವು ಮತ್ತು ಕಾನೂನು ಅಂಕಣ ಬರೆದರು. ಈಗಲೂ ಆ ಅಂಕಣ ಜನಪ್ರಿಯವಾಗಿ, ಉಪಯುಕ್ತವಾಗಿದೆ. ಉದಯವಾಣಿಯಲ್ಲಿ ಮಹಿಳೆಯರಲ್ಲಿ ಕಾನೂನು ಅರಿವು ಮೂಡಿಸಲು ಹೇಮಲತಾ ಮಹಿಷಿ ಅವರು ಬರೆಯುವ ಸಬಲೆ-ಸಲಹೆ ಅಂಕಣ ಜನಪ್ರಿಯ. ಸುಧಾದಲ್ಲಿ ಗೀತಾ ಕೃಷ್ಣಮೂರ್ತಿ ಕಾನೂನು ಅಂಕಣವಿದೆ.

* ಉದಯವಾಣಿಯಲ್ಲಿ ನಮ್ಮ ಬೆಂಗಳೂರು ಪುರವಣಿಯಲ್ಲಿ ಸುರೇಶ ಮೂನ ಬೆಂಗಳೂರಿನ ಇತಿಹಾಸ ಕುರಿತು ಬರೆದ ಸಾವಿರದ ಐನೂರಕ್ಕೂ ಹೆಚ್ಚಿನ ಅಂಕಣ ಬರಹಗಳು ಪತ್ರಿಕೋದ್ಯಮದ ದಾಖಲೆಯಾಗಿದೆ.

* ಇನ್ನು ರಾಜಕೀಯ ಅಂಕಣಗಳದೇ ರೋಚಕ ಇತಿಹಾಸ. ಅದರಲ್ಲಿ ಸಿ.ವಿ. ರಾಜಗೋಪಾಲ, ವಡ್ಡರ್ಸೆ ರಘುರಾಮ ಶೆಟ್ಟಿ ಅವರ ಅಂಕಣಗಳನ್ನು ಜನ ಮರೆತಿಲ್ಲ. ಪತ್ರಿಕೋದ್ಯಮದ ಇತಿಹಾಸದಲ್ಲೇ ಕನ್ನಡಪ್ರಭದ ಕೆ. ಸತ್ಯನಾರಾಯಣ ಅವರ ರಾಜಕೀಯ ಅಂಕಣ ಒಂದು ವಿಶೇಷ ಅಂಕಣ. ಸುದೀರ್ಘಕಾಲದ ಪ್ರಕಟಣೆಯ ದಾಖಲೆ ಅವರ ಅಂಕಣಕ್ಕೆ ಇದೆ.

* ಸತ್ಯನಾರಾಯಣ ಅವರು ಆರ್ಥಿಕ ವಿಷಯದ ಬಗ್ಗೆಯೂ ಅಂಕಣ ಬರೆಯುತ್ತಾರೆ. ಶೈಲೇಶ ಚಂದ್ರ ಪ್ರಜಾವಾಣಿಯಲ್ಲಿ ಪೇಟೆಮಾತು ಅಂಕಣ ಬರೆಯುತ್ತಿದ್ದರು. ಈಗ ಷೇರು ಮಾರುಕಟ್ಟೆ ಕುರಿತ ಅನೇಕ ಅಂಕಣಗಳಿವೆ.

* ಟ್ಯಾಬ್ಲಾಯ್ಡ್ ಪಾಲಿಗೆ ಅಂಕಣಗಳು ಅಂದಿಗೂ ಇಂದಿಗೂ ವಿಶೇಷ ಆಕರ್ಷಣೆ. ಹಾಯ್ ಬೆಂಗಳೂರು ಪತ್ರಿಕೆಯಲ್ಲಿ ರವಿ ಬೆಳಗೆರೆ ಅಂಕಣಗಳು ಇದಕ್ಕೆ ಉದಾಹರಣೆ.

* ಕನ್ನಡದ ಖ್ಯಾತ ಸಾಹಿತಿಗಳು ಪತ್ರಿಕೆಗಳಿಗೆ ಅಂಕಣ ಬರೆದಿದ್ದಾರೆ. ಶಿವರಾಮ ಕಾರಂತರು, ಡಿವಿಜಿ, ಅನಕೃ, ರಾಜರತ್ನಂ, ನಿರಂಜನ, ವ್ಯಾಸರಾಯ ಬಲ್ಲಾಳ, ಯು.ಆರ್. ಅನಂತಮೂರ್ತಿ, ಪಿ. ಲಂಕೇಶ್, ಪೂರ್ಣಚಂದ್ರ ತೇಜಸ್ವಿ, ವೈದೇಹಿ, ಎಚ್.ಎಸ್. ವೆಂಕಟೇಶಮೂರ್ತಿ, ಜಯಂತ ಕಾಯ್ಕಿಣಿ ಮೊದಲಾದವರ ಹೆಸರುಗಳು ನೆನಪಾಗುತ್ತವೆ. ಸಾಹಿತ್ಯದ ಬಗ್ಗೆ ವಿಮರ್ಶಕರಾದ ಟಿ.ಪಿ. ಅಶೋಕ, ನರಹಳ್ಳಿ ಬಹಳ ಕಾಲ ಅಂಕಣಗಳನ್ನು ಬರೆದಿದ್ದಾರೆ. ತುಷಾರ, ಮಯೂರ ಮಾಸಪತ್ರಿಕೆಗಳ ಇಂತಹ ಅಂಕಣಗಳು ಗಮನಾರ್ಹವಾಗಿದ್ದವು.

* ಅಂದಿನ ಅಂಕಣಗಳು ಸಮಕಾಲೀನ ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಜೀವನದ ಅಮೂಲ್ಯ ದಾಖಲೆಗಳಾಗಿ ಸಾರ್ವಕಾಲಿಕ ಮೌಲ್ಯ ಪಡೆದಿವೆ. ಬೆಳಿಗ್ಗೆ ನಾನು ಎರಡು ಇಡ್ಲಿ ತಿಂದೆ, ಸಂಜೆ ಎರಡು ಬಿಯರ್ ಕುಡಿದೆ ಅಥವ ಇವರು ನನಗೆ ತಿಂಡಿಗೆ ಸಿಕ್ಕಿದ್ದರು, ಅವರು ನನ್ನ ಊಟಕ್ಕೆ ಕರೆದಿದ್ದರು ಅಥವ ನಾನು ಇದನ್ನು ಮಾಡಿದೆ, ನಾನು ಅದನ್ನು ಹೇಳಿದೆ ಅಥವ ನಾನು ಅಲ್ಲಿ ಭಾಷಣಕ್ಕೆ ಹೋದೆ, ನಾನು ಇಲ್ಲಿ ಅತಿಥಿಯಾಗಿ ಹೋದೆ ಮುಂತಾಗಿ ಅಂಕಣಗಳಲ್ಲಿ ಬರೆದು ನಾನು, ನಾನು ಮತ್ತು ನಾನು ಗಳನ್ನು ನಿರ್ಲಜ್ಜವಾಗಿ ಓದುಗರ ಮೇಲೆ ಹೇರುವ ಚಾಳಿ ಎಲ್ಲೂ ಕಾಣುವುದಿಲ್ಲ. ಅಂದಿನ ಅಂಕಣಗಳು ಪ್ರಕಟವಾಗುವ ಪತ್ರಿಕೆಯ ಇಮೇಜ್ ಬೆಳೆಸುತ್ತಿತ್ತೇ ಹೊರತು, ಪತ್ರಿಕೆಯ ಜಾಗವನ್ನು ಬಳಸಿ ಅಂಕಣಕಾರರು ತಮ್ಮ ಇಮೇಜ್ ಬೆಳೆಸಿಕೊಳ್ಳುತ್ತಿರಲಿಲ್ಲ.

* ಅಂಕಣಗಳ ಬಗ್ಗೆ ಬರೆಯುವುದು ಬಹಳವಿದೆ. ಇಲ್ಲಿ ಸ್ವಲ್ಪ ಮಾತ್ರ ಹೇಳಿದರೂ ದೀರ್ಘವಾಗಿದೆ. ಇದಕ್ಕೆ ಓದುಗರ ಕ್ಷಮೆಯಿರಲಿ.

Monday, March 28, 2011

ಆತ್ಮವೆಂದರೆ ಕೊಳೆತು ನಾರುವ ಲಂಗೋಟಿ ಎನ್ನುತ್ತೆ ನಮ್ಮ ನರೇಂದ್ರಸ್ವಾಮಿ...


ಪ್ರಳಯ ಸಂಭವಿಸಿ ಜಗತ್ತು ಸರ್ವನಾಶವಾಗುವ ದಿನವನ್ನು ಡಿಸೆಂಬರ್ ೧೨, ೨೦೧೨ ಎಂದು ಹೇಳಲಾಗುತ್ತಿತ್ತಲ್ಲವೇ? ಅದು ಈಗ ಪ್ರೀಪೋನ್ ಆಗಿದೆ. ಹೊಸ ದಿನಾಂಕವೂ ನಿಗದಿಯಾಗಿದೆ. ಪ್ರಳಯಕ್ಕೆ ನಿಕ್ಕಿಯಾಗಿರುವ ದಿನಾಂಕ ಮೇ ೨೧. ೨೦೧೧. ಅಂದು ಸಂಜೆ ೬ ಗಂಟೆಗೆ ಪ್ರಳಯದ ಮುಹೂರ್ತ ಫಿಕ್ಸ್ ಆಗಿದೆ.

ಇದನ್ನು ನರೇಂದ್ರ ಶರ್ಮ ಹೇಳಿರಬಹುದು ಅಂದುಕೊಳ್ಳುತ್ತಿದ್ದೀರೆ? ಖಂಡಿತಾ ಅಲ್ಲ. ಅವನದೇ ತಿಕ್ಕಲುಗಳನ್ನೆಲ್ಲ ಆವಾಹಿಸಿಕೊಂಡಿರುವ ಕ್ರಿಶ್ಚಿಯನ್ ಗುಂಪೊಂದು ಅಮೆರಿಕಾದಲ್ಲಿ ಈ ವದಂತಿಯನ್ನು ವೇಗವಾಗಿ ಹರಡುತ್ತಿದೆ. ಕ್ರಿಶ್ಚಿಯನ್ನರ ಪೈಕಿಯೂ ನರೇಂದ್ರ ಶರ್ಮನಂಥ ಅವಿವೇಕಿಗಳು, ಬೊಗಳೆದಾಸರು, ಬೆನ್ನಿಹಿನ್ ತರಹದ ಮಾಟಗಾರರು ದಂಡಿಯಾಗಿ ಇದ್ದಾರೆ. ಇವರು ಮುಖ್ಯ ಚರ್ಚ್‌ಗಳಿಂದ ಬೇರೆಯಾಗಿಯೇ ಗುರುತಿಸಿಕೊಂಡು ತಮ್ಮದೇ ಸ್ವತಂತ್ರ ಚರ್ಚ್‌ಗಳನ್ನು ಸ್ಥಾಪಿಸಿಕೊಂಡಿದ್ದಾರೆ. ಇಂಥವರದ್ದೇ ಪ್ರತ್ಯೇಕ ಗುಂಪುಗಳೂ ಇವೆ. ಇಂಥ ಗುಂಪುಗಳಲ್ಲಿ ಒಂದು ಗುಂಪು ರೇಡಿಯೋ ಮೂಲಕ, ಇಂಟರ್‌ನೆಟ್ ಮೂಲಕ ಪ್ರಳಯದ ಹೊಸ ಡೇಟನ್ನು ಘೋಷಿಸಿ ಪ್ರಚಾರ ನಡೆಸುತ್ತಿದೆ. ವಿಚಿತ್ರವೆಂದರೆ ಮೇ.೨೧ರಂದು ಪ್ರಳಯ ಸಂಭವಿಸುತ್ತದೆ ಎಂದು ಬೈಬಲ್‌ನಲ್ಲೇ ಬರೆಯಲಾಗಿದೆ ಎಂದು ಈ ಗುಂಪು ಸುಳ್ಳು ಸುಳ್ಳೇ ಹೇಳಿಕೊಂಡು ಕ್ಯಾಂಪೇನ್ ನಡೆಸುತ್ತಿವೆ. ಮೌಢ್ಯವನ್ನು ಪ್ರಜ್ಞಾಪೂರ್ವಕವಾಗಿ ಕಾಸಿಗಾಗೋ, ಪ್ರಚಾರಕ್ಕಾಗೋ ಹರಡುವವರು ಯಾವ ಧರ್ಮದವರಾದರೂ ಅವರು ಕೊಳಕು ಕ್ರಿಮಿಗಳು. ನಮ್ಮ ಧಿಕ್ಕಾರ ಇವರಿಗೂ ಇರಲಿ.

ಈ ಕೆಳಗಿನ ಲಿಂಕ್‌ಗಳನ್ನು ನಮ್ಮ ಓದುಗರೊಬ್ಬರು ಕಳುಹಿಸಿಕೊಟ್ಟಿದ್ದಾರೆ. ಆ ಕಡೆ ನೀವೂ ಒಮ್ಮೆ ಕಣ್ಣಾಡಿಸಿ.

http://www.coffetoday.com/the-doomsday-is-on-may-21-2011/907618/
http://www.ebiblefellowship.com/may21/
http://en.wikipedia.org/wiki/Harold_Camping
http://www.allvoices.com/contributed-news/8599025-worlds-doomsday-fixed-for-6-pm-on-21st-may-2011


ಇನ್ನು ನಮ್ಮ ಪ್ರಳಯಾಂತಕ ನರೇಂದ್ರ ಸ್ವಾಮಿಯ ವಿಷಯಕ್ಕೆ ಬರೋಣ. ಈತ ಮಾತು-ಕಥೆ ಎಂಬ ಸಾರ್ವಜನಿಕ ಕಾರ್ಯಕ್ರಮಗಳನ್ನು ಆರಂಭಿಸಿದ್ದಾನೆ. ಇತ್ತೀಚಿಗೆ ಬೆಂಗಳೂರಿನಲ್ಲಿ ನಡೆದ ಒಂದು ಕಾರ್ಯಕ್ರಮದ ಪ್ರಸಾರ ನಿನ್ನೆ ಮತ್ತು ಮೊನ್ನೆ ಜೀ ಟಿವಿಯಲ್ಲಿ ಪ್ರಸಾರವಾಯಿತು. ಅಲ್ಲಿ ಆತನ ಪ್ರಕಾಂಡ ಪಾಂಡಿತ್ಯವನ್ನು ಕೇಳದವರೇ ದುರ್ಭಾಗ್ಯವಂತರು. ಕೆಲವು ಸ್ಯಾಂಪಲ್ ಇಲ್ಲಿವೆ ನೋಡಿ.

ನೋಡಿ, ನನ್ನ ವಿರುದ್ಧ ಪತ್ರಿಕೆಗಳಲ್ಲಿ, ಅಲ್ಲಿ-ಇಲ್ಲಿ ಏನೇನೋ ಬರೆದುಕೊಳ್ತಾ ಇದ್ದಾರೆ. ಬರಕೊಳ್ಳಲಿ ನಾನು ಕೇರ್ ಮಾಡಲ್ಲ. ನಾನು ಆತ್ಮವನ್ನು ನಂಬಿದ್ದೇನೆ. ಆತ್ಮವನ್ನು ಯಾರೂ ನೋಡಲಾಗದು, ಮುಟ್ಟಲಾಗದು, ನಾಶಗೊಳಿಸಲಾಗದು.
ನನ್ನ ಪ್ರಕಾರ ಆತ್ಮ ಎಂದರೆ  ಎಷ್ಟೋ ದಿನ ಒಗೆಯದೆ ಕೊಳೆತು ನಾರುವ ಲಂಗೋಟಿ ಇದ್ದಂತೆ. ಈ ಲಂಗೋಟಿಯನ್ನು ಯಾರೂ ನೋಡಲಾಗದು, ಮುಟ್ಟಲಾಗದು, ನಾಶಪಡಿಸಲಾಗದು.  ಉಡುಪಿಯಲ್ಲಿ ಒಂದು ಕಾರ್ಯಕ್ರಮದಲ್ಲೂ ಇದನ್ನೇ ಹೇಳಿದೆ. ಅಲ್ಲಿದ್ದ ಸ್ವಾಮೀಜಿ ನನ್ನ ಮಾತನ್ನು ಒಪ್ಪಿದರು, ಒಳ್ಳೆ ಹೋಲಿಕೆ ಕೊಟ್ಟಿದ್ದೀರಿ ಅಂದರು.

ಇದು ನರೇಂದ್ರ ಸ್ವಾಮಿಯ ವಾದಸರಣಿ. ದ್ವೈತ, ಅದ್ವೈತ, ವಿಶಿಷ್ಟಾದ್ವೈತಗಳು ನಮಗೆ ಗೊತ್ತು. ನರೇಂದ್ರ ಸ್ವಾಮಿಯದು ಲಂಗೋಟಾದ್ವೈತ ಸಿದ್ಧಾಂತ. ಅದನ್ನು ಪ್ರಸಾರ ಮಾಡುವ ಜೀ ವಾಹಿನಿಯೇ ಧನ್ಯ.

ಬೆಳಗಾವಿಯ ಒಬ್ಬಾಕೆ ಧೈರ್ಯ ತಂದುಕೊಂಡು ನರೇಂದ್ರ ಸ್ವಾಮಿಯನ್ನು ಕೇಳಿಯೇ ಬಿಟ್ಟಳು: ಎಲ್ಲ ಸರಿ ಗುರೂಜಿ, ನಿಮಗೆ ನಮ್ಮ ನೈಟಿ ಮೇಲೆ ಯಾಕೆ ಕಣ್ಣು?

ನರೇಂದ್ರ ಸ್ವಾಮಿ ಒಮ್ಮೆ ಮೋಹಕವಾಗಿ ನಕ್ಕು.. ದರಿದ್ರ ಕಣ್ರೀ, ಕೊಳೆ ತುಂಬಿಕೊಂಡಿರುತ್ತೆ ನೈಟಿ. ರಾತ್ರಿ ಗಂಡನ ಜೊತೆನೋ.... ಮಲಗಿ ಎದ್ದು ಬೆಳಿಗ್ಗೆ ಹಾಗೇ ಅಡುಗೆ ಮನೆಗೆ ಬರ‍್ತೀರಿ. ಅಲ್ಲಿರೋದು ಏನು? ಒಲೆ ಬೆಂಕಿ. ಬೆಂಕಿ ಅಂದ್ರೆ ಆದಿಶಕ್ತಿ. ಈಚೆಗಾಗಿರ‍್ತೀರಿ (ಮುಟ್ಟು), ಹಂಗೇ ಅಡುಗೆ ಮನೆಗೆ ಬರ‍್ತೀರಿ. ದರಿದ್ರ ಮೆಟ್ಟಿಕೊಳ್ಳದೇ ಇರುತ್ತಾ. ನೈಟಿ ಚೆನ್ನಾಗಿರಲ್ಲ ಅಂತೀನಪ್ಪ, ನಿಮ್ಮ ನೈಟಿ ಕಟ್ಕೊಂಡು ನನಗೇನಾಗಬೇಕು.. ಎಂದು ನುಡಿಯಿತು.

ನರೇಂದ್ರ ಸ್ವಾಮಿ ಬಿಟ್ವೀನ್ ದ ಲೈನ್ಸ್ ಏನನ್ನು ಹೇಳಿದ ಅನ್ನೋದು ಎಲ್ಲ ಹೆಣ್ಣುಮಕ್ಕಳಿಗೂ ಚೆನ್ನಾಗಿಯೇ ಅರ್ಥವಾಗಿರಬೇಕು. ಆದರೂ ಅವು ಪೆಚ್ಚು ಮುಖ ಮಾಡಿಕೊಂಡು ಕುಳಿತಿದ್ದವೇ ವಿನಃ ಪ್ರತಿಭಟಿಸಲಿಲ್ಲ.

ಸೆಪ್ಟೆಂಬರ್, ಅಕ್ಟೋಬರ್, ನವೆಂಬರ್, ಡಿಸೆಂಬರ್ ತಿಂಗಳಿನಲ್ಲಿ ಕರೆಂಟೇ ಇರಲ್ಲ, ಬರ‍್ಕೊಂಡು ಬಿಡಿ. ಆಮೇಲೆ ಏನ್ ಮಾಡ್ತೀರಾ? ನಿಮ್ಮ ಲೈಟು, ಫ್ರಿಡ್ಜು, ಮಿಕ್ಸಿ ಯಾವುದೂ ವರ್ಕ್ ಆಗಲ್ಲ. ಎಲ್ಲಿ ಮೊಬೈಲ್ ಚಾರ್ಜ್ ಮಾಡಿಕೊಳ್ತೀರಾ?... 

ಹೀಗೆ ಹೇಳುತ್ತಲೇ ಹೋಯಿತು ನರೇಂದ್ರ ಸ್ವಾಮಿ. ಅದು ಹಾಗೆ ವಟಗುಟ್ಟುತ್ತಲೇ ಇರಲಿ. ಈತನೂ ಸೇರಿದಂತೆ ಎಲ್ಲ ಚಾನಲ್‌ಗಳ ಭಂಡ, ಮೂಢ ಜ್ಯೋತಿಷಿಗಳ ವಿರುದ್ಧ ಒಂದು ಸಣ್ಣ ಆಂದೋಲನ ಹುಟ್ಟಿಕೊಂಡಿದೆ. ಈ ಕೋಡಂಗಿ ಜ್ಯೋತಿಷಿಗಳ ಉಪಟಳ ನಿಯಂತ್ರಿಸುವುದು ಹೇಗೆ? ಎಂಬ ಪೋಸ್ಟ್‌ಗೆ ೪೭ ಮಂದಿ ಪ್ರತಿಕ್ರಿಯಿಸಿದ್ದಾರೆ. ಸಾಕಷ್ಟು ಮಂದಿ ಇ-ಮೇಲ್ ಮೂಲಕ ಸಲಹೆಗಳನ್ನು ನೀಡಿದ್ದಾರೆ. ಏನು ಮಾಡಬಹುದು ಎಂಬ ಕುರಿತು ಸಾಕಷ್ಟು ವಿಸ್ತ್ರತವಾಗಿ ಚರ್ಚೆ ಆಗಿದೆ. ಈ ಚರ್ಚೆ ವ್ಯರ್ಥವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯೂ ನಮ್ಮ ಮೇಲಿದೆ.

ನಾಳೆಯ ಹೊತ್ತಿಗೆ ಈ ಜ್ಯೋತಿಷಿಗಳ ವಿರುದ್ಧದದ ನಮ್ಮ ಪ್ರಜಾಸತ್ತಾತ್ಮಕ ಹೋರಾಟದ ವಿವಿಧ ಸಾಧ್ಯತೆಗಳನ್ನು ಪಟ್ಟಿ ಮಾಡಿ, ಆ ಪ್ರಕಾರವಾಗಿ ಮುಂದುವರೆಯೋಣ.

ಒಂದು ಹಳೆಯ ಜೋಕ್ ಕೇಳಿಸಿಕೊಳ್ಳಿ: ಚಾನಲ್ ಒಂದರ ಜ್ಯೋತಿಷ್ಯ ಕಾರ್ಯಕ್ರಮಕ್ಕೆ ಯುವತಿಯೊಬ್ಬಳು ಕರೆ ಮಾಡುತ್ತಾಳೆ. ಆಕೆಯ ಪ್ರಶ್ನೆ ತನ್ನ ಅಣ್ಣನನ್ನು ಕುರಿತಾಗಿತ್ತು. ಅಣ್ಣ ತುಂಬಾ ಕುಡಿಯುತ್ತಿದ್ದಾನೆ, ಹೇಗೆ ಬಿಡಿಸುವುದು ಅನ್ನೋದು ಆಕೆಯ ಪ್ರಶ್ನೆ.

ನೋಡಮ್ಮಾ, ರಮ್ ಇದೆಯಲ್ಲಾ ಅದು ರಾಹು, ವಿಸ್ಕಿ ಇದೆಯಲ್ಲ ಅದು ಕೇತು. ಒಂದು ಬಾಟಲಿ ರಮ್, ಒಂದು ಬಾಟಲಿ ವಿಸ್ಕಿ ತೆಗೆದುಕೊಂಡು ಹೋಗಿ ಹರಿಯುವ ನೀರಿನಲ್ಲಿ ಬಿಡು, ಅವನು ಕುಡಿಯುವುದನ್ನು ಬಿಟ್ಟುಬಿಡುತ್ತಾನೆ.

ಆಕೆ ಮತ್ತೆ ಪ್ರಶ್ನಿಸುತ್ತಾಳೆ. ಗುರೂಜಿ, ನೀರಲ್ಲಿ ಬಿಡಬೇಕಾ?

ಮತ್ತಿನ್ನೇನು ನೀರಿಗೆ ಬಿಡದೇ ನೀನೇ ಕುಡೀತೀಯಾ, ಕುಡಿ... ಗುರೂಜಿ ಸಿಡುಕುತ್ತಾರೆ.

ಆ ಗುರೂಜಿ ಯಾರು ಅಂತ ಹೇಳಬೇಕಾಗಿಲ್ಲ ಅಲ್ಲವೇ?

ಕೊನೇ ಮಾತು: ಇಡೀ ಜಗತ್ತಿಗೆ ಆತ್ಮದ ಪರಿಕಲ್ಪನೆಯನ್ನು ಕೊಟ್ಟಿದ್ದೇ ಭಾರತ. ವ್ಯಕ್ತಿ ಅಂದರೆ ನಮ್ಮ ಪಾಲಿಗೆ ಕೇವಲ ದೇಹವೂ ಅಲ್ಲ, ಜೀವವೂ ಅಲ್ಲ. ಇವರೆಡನ್ನೂ ಮೀರಿದ ಆತ್ಮವನ್ನು ಒಳಗೊಂಡವನು. ಪಾಶ್ಚಿಮಾತ್ಯರಿಗೆ ಆತ್ಮದ ಕಲ್ಪನೆಯೇ ಇಲ್ಲದ ಕಾಲದಲ್ಲಿ, ನಮ್ಮಲ್ಲಿ ಆತ್ಮದ ಕುರಿತಾಗಿಯೇ ಭಿನ್ನ ಭಿನ್ನ ಸಿದ್ಧಾಂತಗಳು ಹುಟ್ಟಿಕೊಂಡಿದ್ದವು. ಭಾರತೀಯ ಮನಸ್ಸಿಗೆ ಆತ್ಮವಿಲ್ಲದ ಅಸ್ತಿತ್ವವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಆದರೆ ಈತ ಆತ್ಮವನ್ನು ಕೊಳೆತು ನಾರುವ ಲಂಗೋಟಿಗೆ ಹೋಲಿಸುತ್ತಾನೆ. ಇದಕ್ಕಿಂತ ದೊಡ್ಡ ಧರ್ಮದ ಅವಹೇಳನವನ್ನು ಕಲ್ಪಿಸಿಕೊಳ್ಳಲು ಸಾಧ್ಯವೇ?

ಪತ್ರಕರ್ತ, ಜ್ಯೋತಿಷ್ಯ ಇತ್ಯಾದಿ ಕುರಿತು ರವಿ ಬೆಳಗೆರೆ ಬರೆದದ್ದು...


ಮಾಧ್ಯಮಗಳ ಜ್ಯೋತಿಷ್ಯ ಮೋಹ, ಅವುಗಳಿಂದಾಗುತ್ತಿರುವ ಪರಿಣಾಮಗಳ ಕುರಿತು ರವಿ ಬೆಳಗೆರೆ ಈ ವಾರದ ಹಾಯ್ ಬೆಂಗಳೂರ್ ಪತ್ರಿಕೆಯ ಸಂಪಾದಕೀಯದಲ್ಲಿ ಬರೆದಿದ್ದಾರೆ. ಜತೆಗೆ ಮಾಧ್ಯಮ ರಂಗ ಎದುರಿಸುತ್ತಿರುವ ಭ್ರಷ್ಟಾಚಾರದ ಆರೋಪಗಳು, ಪತ್ರಕರ್ತರ ನಡುವಿನ ಜಗಳಗಳು ಇತ್ಯಾದಿಗಳನ್ನೂ ಇಲ್ಲಿ ಪ್ರಸ್ತಾಪಿಸಿದ್ದಾರೆ. ಸಂಪಾದಕೀಯ ಬ್ಲಾಗ್‌ನ ಉಲ್ಲೇಖವೂ ಈ ಬರಹದಲ್ಲಿದೆ.

....ಸಂಪಾದಕೀಯ ಎಂಬ ಬ್ಲಾಗ್‌ನಲ್ಲಿ ಈ ಬಗ್ಗೆ ವಿಸ್ತ್ರತ ಚರ್ಚೆಯಾಗಿದೆ. ಇದೇ ಬ್ಲಾಗ್‌ನಲ್ಲಿ ರಿಯಾಲಿಟಿ ಶೋಗಳ ಬಗ್ಗೆಯೂ ಪ್ರತಿಭಟನೆ ವ್ಯಕ್ತವಾಗಿದೆ. ಬಹುಶಃ ಪತ್ರಿಕೋದ್ಯಮದ ಬಗ್ಗೆ ಇಷ್ಟು ವಿಸ್ತಾರವಾದ ಚರ್ಚೆ ಹಿಂದೆಂದೂ ಆಗಿರಲಿಲ್ಲ. ಓದುಗ ಎಚ್ಚೆತ್ತಿದ್ದಾನೆ. ಅಷ್ಟು ಸಾಕು ಎಂದು ರವಿ ಬರೆದಿದ್ದಾರೆ. ನೀವೂ ಒಮ್ಮೆ ಓದಿ.

Sunday, March 27, 2011

ರಾಜಕಾರಣದ ಭಿನ್ನಮತ ಕುರಿತ ಸುದ್ದಿಯಲ್ಲೂ ಭಿನ್ನಮತವೇ?


ವಿಶ್ವೇಶ್ವರ ಭಟ್ಟರು ಕನ್ನಡಪ್ರಭದಲ್ಲಿ ತಮ್ಮ ಅಂಕಣಗಳನ್ನು ಬರೆಯಲು ಆರಂಭಿಸಿದ್ದಾರೆ. ಭಾನುವಾರ ಅವರು ಬರೆಯುತ್ತಿರುವ ಅಂಕಣ ನಂಗೆ ಇಷ್ಟಾನೋ! ಓದಿದ್ದು, ಕೇಳಿದ್ದು, ಎಸ್‌ಎಂಎಸ್, ಟ್ವೀಟು ಇತ್ಯಾದಿಗಳಲ್ಲಿ ಇಂಟರೆಸ್ಟಿಂಗ್ ಆಗಿರುವುದನ್ನು ಹೆಕ್ಕಿ ಈ ಅಂಕಣದಲ್ಲಿ ಬರೆಯುತ್ತಿದ್ದಾರೆ. ಇಂಥದ್ದೇ ಅಂಕಣವನ್ನು ಅವರು ಹಿಂದೆ ವಿಜಯ ಕರ್ನಾಟಕದಲ್ಲೂ ಬರೆಯುತ್ತಿದ್ದರು.

ಇವತ್ತಿನ ಅಂಕಣದಲ್ಲಿ ಅವರು ಯಾವುದು ಸರಿ? ಎಂಬ ಶೀರ್ಷಿಕೆಯಲ್ಲಿ ಒಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅದು ಹೀಗಿದೆ: ನಮ್ಮ ಪತ್ರಿಕೆಯ ಓದುಗರಾದ ಹರ್ಷ ಪೆರ್ಲ ಎಂಬುವವರು ಒಂದು ಟ್ವೀಟ್ ಸಂದೇಶ ಕಳಿಸಿದ್ದಾರೆ. ಕಳೆದ ಎರಡು-ಮೂರು ದಿನಗಳ ರಾಜ್ಯ ರಾಜಕೀಯ ವಿದ್ಯಮಾನ ಪತ್ರಿಕೆಯಲ್ಲಿ ವರದಿಯಾಗುತ್ತಿರುವ ಬಗ್ಗೆ ಅವರ ತೀಕ್ಷ್ಣ ಪ್ರತಿಕ್ರಿಯೆ- ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು ರಾಜ್ಯ ನಾಯಕತ್ವ ಮುಂದುವರಿಸಲೋ? ಬದಲಿಸಲೋ? ಈ ಪ್ರಶ್ನೆಗೆ ಉತ್ತರ ನೀವು ಓದುವ ಪತ್ರಿಕೆಯ ಮೇಲೆ ನಿರ್ಧರಿತವಾಗುತ್ತದೆ!

ಭಟ್ಟರು ಜಾಣರು. ಈ ಸಂದೇಶವನ್ನು ಅವರು ತಮ್ಮ ಅನುದಿನದ ಇನ್ನೊಂದು ಅಂಕಣ ತಪ್ಪಾಯ್ತು, ತಿದ್ಕೋತೀವಿಯಲ್ಲಿ ಪ್ರಸ್ತಾಪಿಸಿ, ತಪ್ಪಾಯ್ತು ತಿದ್ಕೋತೀವಿ ಅನ್ನಬೇಕಿತ್ತು. ಆದರೆ ನಾಜೂಕಾಗಿ ಅದನ್ನು ನಂಗೂ ಇಷ್ಟಾನೋ ಅಂಕಣಕ್ಕೆ ಮತಾಂತರಗೊಳಿಸಿಬಿಟ್ಟಿದ್ದಾರೆ. ಆದರೂ ಅದನ್ನು ದಾಖಲಿಸಿರುವ ಅವರ ಕಾಳಜಿಯನ್ನು ಒಪ್ಪಲೇಬೇಕು.

ಯಾಕೆ ಹೀಗೆ ಹೇಳಿದ್ವಿ ಅಂತ ಗೊತ್ತಾಗಲು ಶನಿವಾರದ ಪ್ರಜಾವಾಣಿ ಹಾಗು ಕನ್ನಡಪ್ರಭ ಪತ್ರಿಕೆಗಳನ್ನು ಗಮನಿಸಿನೋಡಿ. ಪ್ರಜಾವಾಣಿಯ ಮುಖಪುಟದ ಲೀಡ್ ಸುದ್ದಿ ‘ಉಪಚುನಾವಣೆ ನೆಪ: ಭಿನ್ನರಿಗೆ ಬಾಗದ ಗಡ್ಕರಿ ' ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿದೆ. ಶೀರ್ಷಿಕೆಯೇ ಹೇಳುವಂತೆ ಬಿಜೆಪಿ ಹೈಕಮಾಂಡ್ ಭಿನ್ನರಿಗೆ ಮಣೆ ಹಾಕಿಲ್ಲ ಎಂಬುದು ಸುದ್ದಿಯ ಹೂರಣ.

ಕನ್ನಡಪ್ರಭದ ಮುಖಪುಟದ ಲೀಡ್ ಸುದ್ದಿ ‘ಭಿನ್ನಮತಕ್ಕೆ ಸಮ್ಮತ' ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿದ್ದು, ಭಿನ್ನರ ಹೋರಾಟ ಯಶಸ್ವಿಯಾಗಿದ್ದು, ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮುಂದಾಗಿದೆ ಎಂಬ ಅರ್ಥದ ಸುದ್ದಿ ಪ್ರಕಟಗೊಂಡಿದೆ.

ಈ ಎರಡು ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಓದುವವರು ಬಚಾವ್. ಎರಡನ್ನೂ ಓದುವವರ ಕಥೆ ಏನಾಗಬೇಡ? ಯಾವುದನ್ನು ನಂಬಬೇಕು? ಯಾವುದನ್ನು ಬಿಡಬೇಕು?

ಯಾಕೆ ಈ ರೀತಿ ಒಂದು ಸುದ್ದಿ ಪರಸ್ಪರ ವಿರುದ್ಧವಾಗಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತವೆ ಎಂಬುದು ಪತ್ರಕರ್ತರಿಗೆ ತುಂಬಾ ಚೆನ್ನಾಗೇ ಗೊತ್ತಿರುತ್ತದೆ. ಆದರೆ ಮಾಧ್ಯಮ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಸಣ್ಣ ವಿವರಣೆ ಕೊಡಲು ಯತ್ನಿಸುತ್ತಿದ್ದೇವೆ. (ನಮ್ಮ ಓದುಗರು ಇದನ್ನು ವಿಸ್ತರಿಸಬಹುದು.)

ಸಾಧಾರಣವಾಗಿ ರಾಜಕಾರಣಿಗಳು ಇಂಥ ಸಂದರ್ಭದಲ್ಲಿ ಬಹಿರಂಗವಾಗಿ ಏನನ್ನೂ ಹೇಳಲು ಬಯಸುವುದಿಲ್ಲ. ಹೇಳಿದರೂ ಎಲ್ಲಿಗೆ ಯಾವ ಸಂದೇಶ ತಲುಪಬೇಕೋ ಅಲ್ಲಿಗೆ ತಲುಪಿಸಲೆಂದೇ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡುತ್ತಾರೆ. ಹೀಗಾಗಿ ಭಿನ್ನಮತ ಶಮನವಾಯ್ತಾ ಇಲ್ವಾ? ವರಿಷ್ಠರ ಜತೆಗಿನ ಮಾತುಕತೆ ಸಂದರ್ಭದಲ್ಲಿ ನಡೆದದ್ದು ಏನು ಅನ್ನೋದು ಸುಲಭವಾಗಿ ಪತ್ರಕರ್ತರಿಗೆ ಗೊತ್ತಾಗುವುದಿಲ್ಲ.

ಅದಕ್ಕಾಗಿ ಪತ್ರಕರ್ತರು ಅವಲಂಬಿಸುವುದು ತಮ್ಮ ಸೋರ್ಸ್‌ಗಳನ್ನು. ಸೋರ್ಸ್ ಅಂದರೆ ಮಾಹಿತಿದಾರರು. ಕರ್ನಾಟಕದ ರಾಜಕಾರಣದಲ್ಲಿ ಪತ್ರಕರ್ತರಿಗೆ ಮಾಹಿತಿಗಳನ್ನು ಒದಗಿಸುವ ನಾಯಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂಥವರು ಹೇಳಿದ್ದನ್ನು ನಮ್ಮ ಪತ್ರಿಕೆಗಳು ತಿಳಿದುಬಂದಿದೆ, ಗೊತ್ತಾಗಿದೆ, ಅನಧಿಕೃತ ಮೂಲಗಳು ತಿಳಿಸಿವೆ, ಹೇಳಲಾಗಿದೆ, ನಂಬಲರ್ಹ ಮೂಲಗಳು ತಿಳಿಸಿವೆ ಎಂಬ ಅನಿಶ್ಚಿತ ಅರ್ಥ ಕೊಡುವ ಪದಗಳನ್ನು ಪೋಣಿಸಿ ಬರೆಯುತ್ತವೆ. (ಈ ರಾಜಕೀಯ ಮಾಹಿತಿದಾರರ ಕುರಿತು ಮುಂದೊಮ್ಮೆ ವಿವರವಾಗಿ ಚರ್ಚಿಸೋಣ.)

ಪತ್ರಕರ್ತರಿಗೆ ಅದರಲ್ಲೂ ರಾಜಕೀಯ ವರದಿಗಾರರಿಗೆ ಇಂಥ ಮಾಹಿತಿದಾರರು ಬೇಕೇಬೇಕು. ಹಾಗಂತ ಅವರನ್ನು ಪೂರ್ಣ ನಂಬುವಂತೆಯೂ ಇಲ್ಲ. ಯಾಕೆಂದರೆ ಅವರು ಈ ಮಾಹಿತಿ ಕೊಡುವ ಕಾಯಕವನ್ನೂ ಒಬ್ಬ ನಾಯಕನ, ಒಂದು ಗುಂಪಿನ ಪರವಾಗಿ ಮಾಡುತ್ತಿರುತ್ತಾನೆ. ಹೀಗಾಗಿ ಆತ ವರದಿಗಾರರನ್ನು ತಪ್ಪು ದಾರಿಗೆ ಎಳೆಯುವ ಸಾಧ್ಯತೆಗಳು ಇದ್ದೇ ಇರುತ್ತವೆ. ಹೀಗಿರುವಾಗ ವರದಿಗಾರ ಬೇರೆ ಮಾಹಿತಿಮೂಲಗಳನ್ನು ಹುಡುಕಿ ತಾನು ಕೇಳಿದ್ದು ಸರಿಯೇ ಎಂದು ಕ್ರಾಸ್ ಚೆಕ್ ಮಾಡಿಕೊಳ್ಳಬೇಕಾಗುತ್ತದೆ.

ಒಮ್ಮೊಮ್ಮೆ ಪತ್ರಕರ್ತ ತನ್ನ ಮಾಹಿತಿಮೂಲಗಳನ್ನು ಅತಿಯಾಗಿ ನಂಬಿಬಿಡುತ್ತಾನೆ; ಅದರ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿಬಿಡುತ್ತಾನೆ. ಬಹುಶಃ ಶನಿವಾರದ ಪತ್ರಿಕೆಗಳಲ್ಲಿ ಪರಸ್ಪರ ವಿರುದ್ಧ ವರದಿಗಳು ಪ್ರಕಟಗೊಂಡಿರುವುದಕ್ಕೆ ಇದೇ ಕಾರಣವಾಗಿರಬಹುದು.

ತೀರಾ ಅಪರೂಪಕ್ಕೆ ಕೆಲವು ಬಾರಿ ಪತ್ರಿಕೆಗಳು  ಬೇಕೆಂದೇ ಇಂಥ ಸುಳ್ಳು ಸುದ್ದಿಗಳನ್ನು ಬರೆಯುತ್ತವೆ. ಅದು ತೀರಾ ಅಪಾಯಕಾರಿ. ಒಂದು ಗುಂಪನ್ನು ಅಥವಾ ವ್ಯಕ್ತಿಯನ್ನು ಸಂಪ್ರೀತಗೊಳಿಸಲು ಹೀಗೆ ಮಾಡುವ ಸಾಧ್ಯತೆಗಳಿರುತ್ತವೆ. ಇದು ಆತ್ಮಘಾತಕತನ. ಯಾಕೆಂದರೆ ಓದುಗನ ಕಣ್ಣೆದುರೇ ಸತ್ಯವಿರುತ್ತದೆ, ಹಸಿಹಸಿಯಾದ ಸುಳ್ಳು ಪತ್ರಿಕೆಯ ವಿಶ್ವಾಸಾರ್ಹತೆ ಕಳೆದುಬಿಡುತ್ತದೆ.

ಬುದ್ಧನನ್ನು ಕುರಿತು ವಿವೇಕಾನಂದರ ಮಾತುಗಳು


ಜನಸಾಮಾನ್ಯರಿಗೆ ಯಾವ ಜ್ಞಾನಕ್ಕೂ ಹಕ್ಕಿರಲಿಲ್ಲ. ವೇದದ ಒಂದು ಪದ ಅವನ ಕಿವಿಗೆ ಬಿದ್ದರೆ ಘೋರ ದಂಡನೆ ಅವನಿಗೆ ಕಾದಿತ್ತು. ಪುರಾತನ ಹಿಂದೂಗಳು ಕಂಡುಹಿಡಿದ ಅಧ್ಯಾತ್ಮಿಕ ಸತ್ಯಗಳನ್ನೊಳಗೊಂಡ ವೇದವನ್ನು ಪುರೋಹಿತರು ರಹಸ್ಯವಾಗಿಟ್ಟರು. ಕೊನೆಗೆ ಇದನ್ನು ಸಹಿಸಲು ಆಗದ ಒಬ್ಬನು ಕಾಣಿಸಿಕೊಂಡ. ಅವನಿಗೆ ಬುದ್ಧಿ ಇತ್ತು. ಶಕ್ತಿ ಇತ್ತು. ಅವನ ಹೃದಯ ವಿಶಾಲವಾದ ಆಕಾಶದಷ್ಟು ಅಸೀಮವಾಗಿತ್ತು. ಜನರು ಪುರೋಹಿತರನ್ನು ಅನುಸರಿಸುತ್ತಿದ್ದುದನ್ನು ಅವನು ಕಂಡ. ಪುರೋಹಿತರು ಅಧಿಕಾರದ ಮದದಲ್ಲಿ ಮುಳುಗಿಹೋಗಿದ್ದರು. ಇದನ್ನು ಹೇಗಾದರೂ ನಿವಾರಿಸಬೇಕೆಂದು ಅವನು ಯತ್ನಿಸಿದ. ಯಾರ ಮೇಲೂ ಅವನಿಗೆ ಅಧಿಕಾರ ಬೇಕಿರಲಿಲ್ಲ. ಜನರ ಮಾನಸಿಕ ಮತ್ತು ಧಾರ‍್ಮಿಕ ಬಂಧನಗಳನ್ನು ಕಳಚಲು ಅವನು ಯತ್ನಿಸಿದ. ಅವನ ಹೃದಯ ವಿಶಾಲವಾಗಿತ್ತು. ನಮ್ಮಲ್ಲಿ ಸುತ್ತಲಿರುವ ಹಲವರಿಗೆ ಹೃದಯ ಇರಬಹುದು. ನಾವೂ ಇತರರಿಗೆ ಸಹಾಯ ಮಾಡಲು ಯತ್ನಿಸಬಹುದು. ಆದರೆ ಬುದ್ಧಿ ಇಲ್ಲ. ಇತರರಿಗೆ ಹೇಗೆ ಸಹಾಯ ಮಾಡಬಹುದೋ ಅಂತಹ ಮಾರ್ಗ ಗೊತ್ತಿಲ್ಲ. ಆದರೆ ಆತ ಜೀವಿಗಳ ಬಂಧನವನ್ನು ಹೇಗೆ ಖಂಡಿಸಬಹುದು ಎಂಬ ಮಾರ್ಗವನ್ನು ಕಂಡುಹಿಡಿದ. ಮನುಷ್ಯ ಏತಕ್ಕೆ ವ್ಯಥೆ ಪಡುವನು ಎಂಬುದನ್ನು ಕಂಡುಹಿಡಿದ. ಅವನು ಮಹಾಜ್ಞಾನಿ, ಅನುಭಾವಿ; ಎಲ್ಲವನ್ನೂ ಅವನು ಅನುಷ್ಠಾನಕ್ಕೆ ತಂದ. ಭೇದಭಾವವಿಲ್ಲದೆ ಅದನ್ನು ಎಲ್ಲರಿಗೂ ಬೋಧಿಸಿ ನಿರ್ವಾಣ ಸುಖವನ್ನು ಹೇಗೆ ಪಡೆಯಬೇಕೆಂಬುದನ್ನು ತೋರಿದ. ಅವನೇ ಬುದ್ಧ.೧

ಬುದ್ಧ ವೇದಕ್ಕಾಗಲಿ, ಜಾತಿಗಾಗಲೀ, ಪುರೋಹಿತರಿಗಾಗಲೀ ಆಚಾರಕ್ಕಾಗಲೀ ಬಾಗಲಿಲ್ಲ. ವಿಚಾರ ನಮ್ಮನ್ನು ಒಯ್ಯುವವರೆಗೆ ನಿರ್ಭಯವಾಗಿ ಅದನ್ನು ಅನುಸರಿಸಿ ಎಂದನು. ಸತ್ಯಾನ್ವೇಷಣೆಯಲ್ಲಿ ಇಂತಹ ದಿಟ್ಟತನ ಮತ್ತು ಪ್ರಪಂಚದಲ್ಲಿ ಸರ್ವರ ಮೇಲೆಯೂ ಪ್ರೇಮ ಇದ್ದಂತಹ ಮತ್ತೊಬ್ಬ ವ್ಯಕ್ತಿಯನ್ನು ಪ್ರಪಂಚ ಮತ್ತೆಂದೂ ಕಂಡಿಲ್ಲ. ಬುದ್ಧ ಧಾರ್ಮಿಕ ಪ್ರಪಂಚದಲ್ಲಿ ವಾಷಿಂಗ್‌ಟನ್ ಇದ್ದಂತೆ.೨

ಪ್ರಪಂಚಕ್ಕೆ ಒಂದು ಪರಿಪೂರ್ಣವಾದ ನೀತಿಯನ್ನು ಕೊಟ್ಟವರಲ್ಲಿ ಬುದ್ಧನೇ ಮಾನವಕೋಟಿಯಲ್ಲಿ ಮೊದಲಿಗನು. ಅವನು ಒಳ್ಳ್ಳೆಯದಕ್ಕಾಗಿ ಒಳ್ಳಯವನಾಗಿದ್ದನು. ಪ್ರೀತಿಗಾಗಿ ಪ್ರೀತಿಸುತ್ತಿದ್ದನು.೩

ಬೌದ್ಧಧರ್ಮ ಆಹುತಿಯನ್ನು ಸ್ವೀಕರಿಸುವ ದೇವತೆಗಳ ಸಿಂಹಾಸನವನ್ನು ಕದಲಿಸಿ ಅವರನ್ನು ಸ್ವರ್ಗಧಾಮದಿಂದ ಉರುಳಿಸಿತ್ತು. ದೇವತೆಗಳ, ಬ್ರಹ್ಮನ ಅಥವಾ ಇಂದ್ರನ ಪದವಿಗಿಂತ, ಬುದ್ಧನಾಗುವುದು ಉತ್ತಮ ಪದವಿ. ಬ್ರಹ್ಮ ಮತ್ತು ಇಂದ್ರ- ಇವರು ಮಾನವದೇವನಾದ ಬುದ್ಧನ ಪದತಲದಲ್ಲಿ ಪ್ರಾರ್ಥಿಸಲು ತಮ್ಮಲ್ಲಿ ಸ್ಪರ್ಧಿಸುವರು. ಪ್ರತಿಯೊಬ್ಬ ಮಾನವನಿಗೂ ಬುದ್ಧನ ಸ್ಥಿತಿಯನ್ನು  ಪಡೆಯುವುದಕ್ಕೆ ಅಧಿಕಾರವಿದೆ. ಈ ಜನ್ಮದಲ್ಲಿಯೇ ಎಲ್ಲರಿಗೂ ಇದಕ್ಕೆ ಅವಕಾಶವಿದೆ. ದೇವತೆಗಳ ಆಧಾರದ ಮೇಲೆ ನಿಂತ ಪುರೋಹಿತರ ಮೇಲ್ಮೆ ಮಾಯವಾಯಿತು.೪

ಬುದ್ಧ ಸಾಯುವಾಗಲೂ ತಾನು ಪ್ರತ್ಯೇಕ ಎಂದು ಒಪ್ಪಿಕೊಳ್ಳಲಿಲ್ಲ. ನಾನು ಅದಕ್ಕಾಗಿ ಅವನನ್ನು ಆರಾಧಿಸುವುದು. ನೀವು ಕರೆಯುತ್ತಿರುವ ಕ್ರಿಸ್ತ ಬುದ್ಧ ಎಂಬುವು ಸಾಕ್ಷಾತ್ಕಾರದ ಕೆಲವು ಅವಸ್ಥೆಗಳ ಹೆಸರುಗಳು ಮಾತ್ರವಾಗಿವೆ. ನಾವು ನಮ್ಮ ಸ್ವಂತ ಕಾಲಿನ ಮೇಲೆ ನಿಲ್ಲಬೇಕೆಂದು ಆತ ಪ್ರಪಂಚದ ಇತರ ಗುರುಗಳೆಲ್ಲರಿಗಿಂತ ಹೆಚ್ಚಾಗಿ ಬೋಧಿಸಿದನು. ಅವನು ನಮ್ಮನ್ನು ತೋರಿಕೆಯ ವ್ಯಕ್ತಿತ್ವದ ಬಂಧನದಿಂದ ಪಾರು ಮಾಡಿದುದು ಮಾತ್ರವಲ್ಲ, ದೇವರುಗಳೆಂಬ ಅಗೋಚರ ವ್ಯಕ್ತಿಗಳ ಹಿಡಿತದಿಂದ ನಮ್ಮನ್ನು ಸ್ವತಂತ್ರರನ್ನಾಗಿ ಮಾಡಿದ. ನಿರ್ವಾಣವೆಂಬ ಆ ಅವಸ್ಥೆಯನ್ನು ಪಡೆಯಲು ಎಲ್ಲರಿಗೂ ಆಹ್ವಾನವಿತ್ತ. ಎಲ್ಲರೂ ಒಂದು ದಿನ ಅದನ್ನು ಪಡೆಯಲೇಬೇಕು, ಅದೇ ಮಾನವನ ಪರಮ ಗುರಿ.೫

ಜಾತಿಯನ್ನು ಒಪ್ಪಿಕೊಳ್ಳದ, ಭರತಖಂಡದ ಶ್ರೇಷ್ಠ ತತ್ತ್ವಜ್ಞಾನಿಯಾಗಿದ್ದವನು ಬುದ್ಧನೊಬ್ಬನೇ. ಅವನ ಅನುಯಾಯಿಗಳಲ್ಲಿ ಒಬ್ಬನೂ ಕೂಡ ಈಗ ಭರತಖಂಡದಲ್ಲಿಲ್ಲ. ೬

೧. ವಿವೇಕಾನಂದರ ಕೃತಿಶ್ರೇಣಿ, ಸಂಪುಟ: ೨, ಪುಟ: ೩೨೪
೨. ಸಂಪುಟ: ೮, ಪುಟ: ೮೦
೩. ಸಂಪುಟ: ೮, ಪುಟ: ೫೬
೪. ಸಂಪುಟ: ೨, ಪುಟ: ೧೯೬
೫. ಸಂಪುಟ: ೨, ಪುಟ: ೩೩೪
೬. ಸಂಪುಟ: ೮, ಪುಟ: ೫೪

Saturday, March 26, 2011

ಪ್ರಚಲಿತ ಅಂಕಣಗಳು ಏನನ್ನು ಹೇಳುತ್ತವೆ? ಏನನ್ನು ಹೇಳುವುದಿಲ್ಲ?


ಅಂಕಣಗಳಿಂದಲೇ ಪತ್ರಿಕೆ ಎಂಬ ಸವಕಲು ನಾಣ್ಯವನ್ನೇ ಮರುಚಲಾವಣೆಗೆ ತರಲು ಹರಸಾಹಸಗಳು ನಡೆಯುತ್ತಿರುವ ಇವತ್ತಿನ ಈ ಸಂಧರ್ಭದಲ್ಲಿ ಅಂಕಣಗಳ ಕುರಿತು ಒಂದು ವಿಮರ್ಶೆ ಅಗತ್ಯ. ಅಂಥದೊಂದು ಚರ್ಚೆಯನ್ನು ಹುಟ್ಟು ಹಾಕುವ ದಿಸೆಯಲ್ಲಿ ಒಂದು ಸಣ್ಣ ಪ್ರಯತ್ನ ಈ ಲೇಖನ. ಇದನ್ನು ಸಂಪಾದಕೀಯಕ್ಕಾಗಿ ಬರೆದಿರುವವರು ಬಿ.ಕೆ.ಸುಮತಿ.

ಸುಮತಿಯವರು ಬೆಂಗಳೂರು ಆಕಾಶವಾಣಿಯಲ್ಲಿ ಕಳೆದ ೧೭ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ ಪತ್ರಿಕೋದ್ಯಮ, ಮಾಧ್ಯಮ, ಭಾಷೆ ಅವರ  ಆಸಕ್ತಿಯ ವಿಷಯಗಳು.  ನಿರೂಪಣೆಯ ಕುರಿತಾಗಿ ಪುಸ್ತಕ ಬರೆದು ಪ್ರಕಟಿಸಿದ್ದಾರೆ. ಪತ್ರಿಕೋದ್ಯಮದ ಆಗು-ಹೋಗುಗಳನ್ನು ಅತ್ಯಂತ ಕಾಳಜಿ ಇಂದ ಗಮನಿಸುತ್ತಿರುವ ಸುಮತಿಯವರ ಈ ಒಳನೋಟಗಳು ನಿಮಗೂ ಇಷ್ಟವಾಗಬಹುದು.


ಇದು ಅಂಕಣ ಕಾಣಾ.....

'ಕಣ' ಎಂದರೆ ಅತ್ಯಂತ ಸೂಕ್ಷ್ಮ ಪದಾರ್ಥ ಅಥವಾ ಅಣು ಅಂತೆ, 'ಅಂಕಣ' ಎಂದರೆ ಮನೆಯಲ್ಲಿನ ಎರಡು ಕಂಬಗಳ ನಡುವಣ ಪ್ರದೇಶ ಅಂತೆ, ಹೀಗಂತ ಕನ್ನಡ ನಿಘಂಟು ಹೇಳುತ್ತದೆ. ಇದನ್ನು ಪತ್ರಿಕೆಗಳಿಗೆ ಅನ್ವಯಿಸಿ ನೋಡುವುದಾದರೆ ಇತ್ತೀಚೆಗೆ ಪತ್ರಿಕೆಗಳ 'ಕಣವು' 'ಅಂಕಣಗಳಿಂದ' ತುಂಬಬೇಕು ಎಂಬ ಭಾವ ಎಲ್ಲೆಡೆ ಕಾಣುತ್ತಿದೆ. ಅಂಕಣಗಳಿಂದಲೇ ದಿನಪತ್ರಿಕೆಗಳ ಪ್ರಸಾರ ಸಂಖ್ಯೆ ನಿರ್ಧಾರವಾಗುತ್ತದೆ ಎಂಬ ಭಾವನೆ ಕೂಡ ಹುಟ್ಟುಹಾಕಲಾಗುತ್ತಿದೆ.  ನಿತ್ಯ ಅದೇ ಚಡ್ಡಿ, ಯಡ್ಡಿ, ಹೊಡಿ, ಬಡಿ, ರಾಡಿ, ಚಾಡಿ ಸುದ್ದಿಗಳನ್ನು ಓದಿ ಓದಿ ಅಥವಾ ಓದಲಾರದೆ ಓದುಗ ಅಂಕಣಗಳಿಗೆ ಶರಣಾಗುತ್ತಾನೆ ಎಂಬ ಅನಿಸಿಕೆ ಕೂಡ ಇದೆ. 

ಇಂದೇಕೆ ಅಂಕಣಗಳಿಗೆ ಇಷ್ಟು ಮಹತ್ವ? ಹಿಂದೆ ಅಂಕಣಗಳೇ  ಇರಲಿಲ್ಲವೇ? ಅಥವಾ ಅಂಕಣಗಳನ್ನು ಜನ ಗುರುತಿಸಿರಲಿಲ್ಲವೇ? 'ಅಂಕಣ ಸಾಹಿತ್ಯ' ಸಾಧಾರಣ ಪತ್ರಿಕಾ ಸಾಹಿತ್ಯಕ್ಕಿಂತ ಭಿನ್ನವಾಗಿ ಮೂಡಿ ಬರುತ್ತಿದೆಯೇ? ಪ್ರಚಲಿತ ಅಂಕಣಗಳು ಏನನ್ನು ಹೇಳುತ್ತವೆ? ಅನ್ನುವಂತಹ ಪ್ರಶ್ನೆಗಳನ್ನು ಹಾಗೆ ಸುಮ್ಮನೆ ಅವಲೋಕನಕ್ಕೆ ಎಂದು ಕೇಳಿಕೊಂಡರೆ ಅಷ್ಟೇನೂ ಸಮಾಧಾನಕರ ಉತ್ತರ ದೊರೆಯುವುದಿಲ್ಲ. ಅಂತೆಯೇ... ಹಾಗೇ... ಕೆದಕಿ ಬೆದಕಿ ನೋಡಿದರೆ... 

ದಶಕಗಳ ಹಿಂದೆ ಸಹ ಅಂಕಣಗಳು ಇದ್ದವು. ಹಾ.ಮಾ.ನಾಯಕರು ಪ್ರಜಾಮತಕ್ಕೆ ಬರೆಯುತ್ತಿದ್ದ ಅಂಕಣ, ಲಂಕೇಶರು ಪ್ರಜಾ ವಾಣಿ ಗೆ ಬರೆಯುತ್ತಿದ್ದ ಅಂಕಣ, ವೈ ಏನ್ ಕೆ, ಕಾರಂತರು, ವೈಕುಂಠರಾಜು, ಎಂ ವಿ ಕಾಮತ್, ರಾಮಚಂದ್ರ ರಾಯರು, ಸ ಕ್ರ ಪ್ರಕಾಶ್ ಇವರೆಲ್ಲರ ಅಂಕಣಗಳು ಮನಸ್ಸಿನಲ್ಲಿ ಸುಳಿದು ಹೋಗುತ್ತವೆ. 'ಸುಧಾ' ವಾರಪತ್ರಿಕೆಯಲ್ಲಿ ಬರುತ್ತಿದ್ದ 'ಕಾಮಧೇನು', 'ನೀವು ಕೇಳಿದಿರಿ' ಅಂಕಣಗಳು ಲಂಕೇಶ್ ಪತ್ರಿಕೆಗೆ ತೇಜಸ್ವಿ ಬರೆಯುತ್ತಿದ್ದ ಅಂಕಣ ಮರೆಯುವ ಹಾಗೆಯೇ ಇಲ್ಲ. 

ಅಂಕಣಗಳು ನಿರ್ದಿಷ್ಟತೆ, ಸ್ವರೂಪ, ವಿಸ್ತಾರ, ಗುರಿ ಮತ್ತು ಬದ್ಧತೆಯನ್ನು ಹೊಂದಿರುತ್ತಿದ್ದವು. ಕೆಲವು 'ರಾಜಕೀಯ'ಕ್ಕಾಗಿಯೇ ಮೀಸಲಾದವು. ಇನ್ನು ಕೆಲವು ಪಕ್ಕಾ ವಿಡಂಬನೆಗಳು. ಇನ್ನು ಕೆಲವು ಪ್ರಶ್ನೋತ್ತರ ರೂಪದವು. ಮತ್ತೂ ಕೆಲವು ಸಾಂಸ್ಕೃತಿಕ ಲೋಕ, ಚಿತ್ರ ಲೋಕಕ್ಕೆ ಸಂಬಂಧ ಪಟ್ಟ ಅಂಥವು. ಅಂದರೆ ಅಂಕಣಗಳಿಗೆ ಹೆಸರು, ರೂಪ, ವಿಷಯ, ಇರುತ್ತಿತ್ತು. 'ಬರೆದವರು ಯಾರು' ಎನ್ನುವುದಕ್ಕಿಂತ ವಸ್ತು ವಿಷಯಕ್ಕೆ ಹೆಚ್ಚು ಸೆಳೆತ ಇರುತ್ತಿತ್ತು. 'ವಿಷಯ ಕೇಂದ್ರಿತ' ಅಂಕಣಗಳು ಕೆಲವಾದರೆ, 'ವ್ಯಕ್ತಿ ಕೇಂದ್ರಿತ' ಅಂಕಣಗಳೂ ಕೆಲವು. ವ್ಯಕ್ತಿ ಕೇಂದ್ರಿತ ಅಂಕಣಗಳಲ್ಲಿ ಈ ಬಾರಿ ಈತ ಏನೆನ್ನುತ್ತಾನೆ ಎಂಬ ಕುತೂಹಲ ಇರುತ್ತಿತ್ತು. ವ್ಯಕ್ತಿ ಕೇಂದ್ರಿತ ಅಂಕಣಗಳೂ ಸಹ, ಯಾವುದಾದರೂ ಸಾಮಾನ್ಯ ಪ್ರಚಲಿತ ವಿಚಾರಗಳ ಬಗ್ಗೆ ಬೆಳಕು ಬೀರುವ, ಪ್ರಜ್ಞಾದೀಪ ಹೊತ್ತಿಸುವ, ಮಂಥನ ನಡೆಸುವ ಪ್ರಣಾಳಿಕೆ ಹೊತ್ತಿರುತ್ತಿದ್ದವು. 

ಕೆಲವು ಅಂಕಣಗಳು ಪತ್ರಕರ್ತರು ಖುದ್ದು ಬರೆಯುವುದು, ಮತ್ತೆ ಕೆಲವು ಇತರರಿಂದ ಬರೆಸುವುದು. ಪತ್ರಕರ್ತರು ಸದಾ ಅಖಾಡದಲ್ಲಿ ಇರುತ್ತಾರಾದ್ದರಿಂದ, ನಿರಂತರ ಸುದ್ದಿಮನೆಯ ಆಗು ಹೋಗುಗಳು ಅವರ ಗಮನಕ್ಕೆ ಬರುತ್ತದೆ ಆದ್ದರಿಂದ ಆಯಾ ವಾರದ ಸುದ್ದಿ ಹರಿವು ಆಸಕ್ತಿ, ಅರ್ಥ ಮಾಡಿಕೊಂಡು ಬರೆಯಬಲ್ಲರು. ಜನರ ನಾಡಿಯನ್ನು ಮಿಡಿಯಬಲ್ಲರು ಎನ್ನುವಂಥದ್ದು ಇತ್ತು. ಇತರರು ಅಂಕಣದ ಜವಾಬ್ದಾರಿ ಹೊತ್ತಾಗ ಅವರು ವಿಚಾರದ ಆಯ್ಕೆ ಮಾಡಿಕೊಂಡು, ಸಂಶೋಧನೆ ನಡೆಸಿ, ತಮ್ಮ ಅಭಿಪ್ರಾಯಗಳನ್ನು ಸೇರಿಸಿ, ಕ್ರೋಡೀಕರಿಸಿ ಬರೆಯುವಂಥದ್ದಾಗಿರುತ್ತಿತ್ತು. ಕೆಲವೊಮ್ಮೆ ಆ ವಿಚಾರ ಮಂಡನೆಯ ಶೈಲಿಗೆ ಅಥವಾ ಪ್ರಚಲಿತದ ವಿಮರ್ಶೆಗೆ, ಪ್ರಸಕ್ತದ ಅರ್ಥ ಮಾಡಿಕೊಳ್ಳುವಿಕೆಗೆ, ಅಂಕಣಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡವರಿದ್ದರು. 

ಪಂಚೆ ಧರಿಸುವವರು ಪ್ಯಾಂಟ್, ಜೀನ್ಸ್ ಪ್ಯಾಂಟ್ ತೊಡಲು ಆರಂಭಿಸಿದರು. ಸೀರೆ ಸಲ್ವಾರ್ ಕಮೀಜ್ ಆಯಿತು. ಸಲ್ವಾರ್ ಹೋಗಿ ಮಿನಿ skirt ಬಂತು...

ಕಾಲ ಬದಲಾದ ಹಾಗೆಲ್ಲ ಪತ್ರಿಕೆಗಳೂ ಬದಲಾದವು. ನಾವಿನ್ಯತೆ ಪಡೆದವು. ಮಾಧ್ಯಮ ಉದ್ಯಮ ಆಯಿತು. ಪತ್ರಿಕೆ ಸರಕಾಯಿತು. ಅಂಕಣ ಅಂಕೆ ಮೀರಿತು. ಸಿನಿಮಾ ನಲ್ಲಿನ item song ನ ರೀತಿ ಪತ್ರಿಕೆಗೊಂದು ಅಂಕಣ! ಅದು ವಿಷಯ, ವಾದ, ಪ್ರತಿವಾದ, ಪೂರ್ವ ನಿರ್ಧಾರಿತ ಅಂಶಗಳು, ಸೆಳೆತಗಳು, ಸುಳಿವುಗಳು, ಎಲ್ಲವನ್ನು ಒಳಗೊಂಡಿರುತ್ತದೆ!! ವಾರದ ಅಂಕಣಗಳು, ನಿತ್ಯದ ಅಂಕಣಗಳು, ಸಿನಿಮಾ, ಉದ್ಯೋಗಪುಟಗಳಲ್ಲೂ  ಅಂಕಣಗಳು, ವ್ಯಕ್ತಿತ್ವ ವಿಕಾಸನಕ್ಕಾಗಿಯೇ ಅಂಕಣಗಳು... ಅಂಕಣಗಳು ಹೊಸ ರೂಪ ಪಡೆದದ್ದು ನಿಜ. ಬಣ್ಣದ ಸೀರೆ ಉಟ್ಟು ತಂತ್ರಜ್ಞಾನದ ರವಿಕೆ ತೊಟ್ಟು ಅಂದ ಚಂದದ ಮೇಕ್-ಅಪ್ ಧರಿಸಿ ಅನುಭವದ ರಸ ಸಾರ ಕೊಡಲು ಬಂದ ಈ ಅಂಕಣಾoಗನೆಯನ್ನು  ಕಂಡು ಓದುಗರು thrill ಆದದ್ದು ನಿಜ. ಆದರೆ...

ಆದರೆ, ಯವ್ವನ ಕಳೆದು ಮುಪ್ಪು ಅಡರುವಂತೆ ಅಂಕಣಗಳು ಹೊಳಪು ಕಳೆದುಕೊಳ್ಳುತ್ತಿವೆಯೇ? ಅತಿಯಾದರೆ ಅಮೃತವೂ ವಿಷ ಎನ್ನುವ ಹಾಗೇ ಅಂಕಣಗಳು ಈಗೀಗ ಯಾರನ್ನು ಮುಟ್ಟುತ್ತಿವೆ? ಅಂಕಣಗಳು ನಿಜವಾಗಿ ಅಂಕಣಗಳಾಗಿವೆಯೇ? ತಾಜಾತನವನ್ನು ಉಳಿಸಿಕೊಳ್ಳುತ್ತಿವೆಯೇ?  ನಿಜವಾಗಿ ಓದುಗ ಅಂಕಣಕ್ಕಾಗಿ ಕಾಯುತ್ತಾನೆಯೇ? ತಾವು ಯಾರಿಗಾಗಿ ಬರೆಯುತ್ತಿದ್ದೇವೆ, ಏನು ಬರೆಯುತ್ತಿದ್ದೇವೆ, ಯಾಕಾಗಿ ಬರೆಯುತ್ತಿದ್ದೇವೆ ಎಂಬುದನ್ನು ಅಂಕಣಕಾರರು ಯೋಚಿಸುತ್ತಿದ್ದಾರೆಯೇ? 

ಒಬ್ಬ ಕ್ರಿಕೆಟ್ ಆಟಗಾರ ಸತತ ಐದಾರು ಮ್ಯಾಚ್ ನಲ್ಲಿ ರನ್ ಹೊಡೆಯದಿದ್ದರೆ ಪಾಪ! ಅವನನ್ನು ಮನಬಂದಂತೆ ಬೈಯುತ್ತೇವೆ. ಟೀಂ ನಿಂದ ಕಿತ್ತುಹಾಕಬೇಕು ಎನ್ನುತ್ತೇವೆ. ಹಾಡುಗಾರ ತನ್ನ ವಯೋಧರ್ಮಕ್ಕೆ ತಲೆಬಾಗುತ್ತಿದ್ದಾಗ ಶಕ್ತಿ ಕುಂದಿ ಶ್ರುತಿ ತಪ್ಪಿದರೆ, ಆತ ಸ್ವಯಂ ನಿವೃತ್ತಿ ಪಡೆಯಬೇಕು 'ಕೇಳನೋ ಹರಿ, ತಾಳನೋ' ಎಂದು ಸಂಗೀತ ವಿಮರ್ಶಕರು ಬರೆದುಬಿಡುತ್ತಾರೆ. ಲೋಕಾರ್ಪಣೆಗೊಳ್ಳುವ ಪುಸ್ತಕಗಳ ಬಗ್ಗೆ ಪುಟಗಟ್ಟಲೆ ವಿಮರ್ಶೆಗಳು ಬರುತ್ತವೆ. ಮಾಧ್ಯಮ ಸಾಗುತ್ತಿರುವ ಬಗೆ ವಿವರಿಸಲು ನೂರಾರು ಬ್ಲಾಗ್ ಗಳು, ಚರ್ಚೆಗಳು, ಲೇಖನಗಳು, ಮಂಥನಗಳು ನಡೆದಿವೆ. ಆದರೆ ಈ ಅಂಕಣ ಸಾಹಿತ್ಯ ಯಾರ ಕೈಗೂ ಸಿಗದೇ ನುಸುಳಿ ಹೋಗುತ್ತಿದೆ. 

ಸಾರವೇ ಇಲ್ಲದ ಅಂಕಣಗಳು ಹೆಚ್ಚಾಗುತ್ತಿವೆ. 'ನಾನು' ಕೇಂದ್ರಿತ ಅಂಕಣಗಳೇ  ಹೆಚ್ಚಾಗುತ್ತಿವೆ. ಸಾಮಾಜಿಕ ವಿಷಯಗಳನ್ನು ಹೊತ್ತ ಅಂಕಣಗಳು ಮಾಯವಾಗುತ್ತಿವೆ. ತಾನು ಓದಿದ ಪುಸ್ತಕ. ತಾನು ಹೋದ ಸಭೆ-ಸಮಾರಂಭ, ತನ್ನ ಸ್ನೇಹಿತರ ಮನೆಗೆ ಪಾರ್ಟಿಗೆ ಹೋಗಿದ್ದು, ಇಂತಹ ಸ್ವ-ಪುರಾಣಗಳು ಅಂಕಣಗಳಲ್ಲಿ ಕಾಣುತ್ತಿವೆ. ಇವು ಆತ್ಮಕಥನಗಳೂ ಅಲ್ಲ, ಗಟ್ಟಿತನವಿರುವ 'ನಾನೂ' ಅಲ್ಲ. ಸುದ್ದಿಯಲ್ಲಿರಬೇಕೆಂದು ಬಯಸಿ ವಿವಾದ ಮಾಡುವ ರಾಜಕಾರಣಿಯಂತೆ, ಪ್ರಚಾರದ ಆಸೆಗೆ gossip ಮಾಡುವ ನಟ ನಟಿಯರಂತೆ ವಾರಕ್ಕೊಮ್ಮೆ ತನ್ನ ಹೆಸರು ಪತ್ರಿಕೆಯಲ್ಲಿ ಬರಬೇಕು ಎನ್ನುವ ಮೋಹಕ್ಕೆ ಅಂಕಣಕಾರ ಬೀಳುತ್ತಿದ್ದಾನೆ. ಅಂಕಣ, ವಿಷಯವನ್ನು ಬಿಟ್ಟು ಅಡ್ಡದಾರಿ ಹಿಡಿಯುತ್ತದೆ. ಅಂಕಣ ಒಂದು ಮೋಹಕ್ಕೆ ತಿರುಗಿದಾಗ ಸಂಪಾದಕರೂ ಏನೂ ಮಾಡಲಾರರು. 

ಮೊದಮೊದಲು ಪ್ರತಿ ಪದವನ್ನೂ ಓದುತಿದ್ದ ಓದುಗ, ನಂತರ, ವಾಕ್ಯಗಳ ಮೇಲೆ ಕಣ್ಣಾಡಿಸುತ್ತಾನೆ. ನಂತರ ಪ್ಯಾರ ಎಗರಿಸಿ ಓದುತ್ತಾನೆ. ಬರುಬರುತ್ತಾ ಶೀರ್ಷಿಕೆ ಓದಿಯೇ ಅಂಕಣಕಾರನನ್ನು ಗ್ರಹಿಸಿ ಬಿಡುತ್ತಾನೆ. ಓದುಗ ಶೀರ್ಷಿಕೆ ಕೂಡ ಓದಲಾರದ ಮಟ್ಟಕ್ಕೆ ಬರುವ ಮೊದಲು ಅಂಕಣಕಾರ ಎಚ್ಚೆತ್ತುಕೊಂಡರೆ ಒಳಿತು. 
ಸಂಪಾದಕರು ಅವರನ್ನು ತಮ್ಮ ಪತ್ರಿಕೆಗೆ ಬರೆಸಲು ಎಷ್ಟು ಶ್ರಮ ಪಡುತ್ತಾರೋ ಅವರನ್ನು ಪತ್ರಿಕೆಯಿಂದ ಬಿಡಿಸಲೂ ಕೂಡ ಅಷ್ಟೇ ಶ್ರಮ ಪಡಬೇಕಾಗುತ್ತದೆ. ಸರಸ ಸಲ್ಲಾಪ, ಪ್ರಲಾಪಕ್ಕೆ ತಿರುಗಿ ಬಿಡುತ್ತದೆ. ಅಂಕಣಕಾರ ಇನ್ನು ಹದಿನಾರು ಅಂಕಣ ಬರೆದರೆ 'ಐದನೇ ಪುಸ್ತಕ' ಸಿದ್ಧ ಎಂದು ಪ್ರಕಾಶಕರ ಮನೆ ಅಲೆಯುತ್ತಿರುತ್ತಾನೆ, ಸಂಪಾದಕ ಸುಸ್ತಾಗಿರುತ್ತಾನೆ, ಓದುಗ ಉಕ್ಕಿ ಬರುವ ನಗು ತಡೆಯುತ್ತಿರುತ್ತಾನೆ. 

ಕೆಲವೊಮ್ಮೆ ಸಂಪಾದಕರೂ ತಮ್ಮ ಸ್ವಹಿತಕ್ಕೆ, ಅಪೇಕ್ಷಿತ ಲಾಭಗಳಿಗೆ, ಸ್ನೇಹಿತರಿಗೆ ಪ್ರಚಾರ ಕೊಡುವುದಕ್ಕೆ, ಅಂಕಣಕಾರರಿಗೆ ಪ್ರೋತ್ಸಾಹಿಸುವುದು ಉಂಟು. ಅಂಕಣಗಳು ವಿಷಯ ಪ್ರಧಾನವಾದಾಗ ಮೂಡಿ ಬರುವ ರೀತಿಯೇ ಬೇರೆ. ಬೆಂಗಳೂರಿನ ಬಗ್ಗೆ ಪತ್ರಿಕೆಯೊಂದರಲ್ಲಿ ಅಂಕಣ ಮೂಡಿ ಬಂತು. ಸಂಗೀತದ ರಾಗಗಳ ಬಗ್ಗೆ, ಸುದ್ದಿ ಮನೆಯ ವಿಚಾರಗಳನ್ನು ತಿಳಿಸುವ ಬಗ್ಗೆ, ವಿಜ್ಞಾನಿಗಳ ಜೀವನ ಚರಿತ್ರೆ, ಮರೆಯಾದ ಲೇಖಕಿಯರು, ಸ್ವಾತಂತ್ರ್ಯ ಹೋರಾಟಗಾರರು, ಗಾಂಧೀ ವಿಚಾರಧಾರೆ, ಸಾಹಿತ್ಯ ನಡೆದು ಬಂದ ದಾರಿ, ಇಂತಹ ಅಂಕಣಗಳು ನಿರಂತರ ಕುತೂಹಲ ಉಳಿಸಿಕೊಳ್ಳುತ್ತವೆ. ಬರೆಯುವವ ಯಾರೇ ಇದ್ದರೂ ವಿಷಯದ ಸೆಳೆತ ಅಲ್ಲಿರುತ್ತದೆ. ರಾಜಕೀಯ ಅಂಕಣಗಳು ಪ್ರಸ್ತುತತೆ ಇಂದ ಜೀವಂತಿಕೆ, ಕಾಪಾಡಿಕೊಳ್ಳುತ್ತವೆ. ಆದರೆ ಕೆಲವು ಅಂಕಣಗಳು ಸ್ಟಾರ್-ಗಿರಿ ಇಂದಲೇ ಓಡಬೇಕು. ಕನ್ನಡ ಬಾರದ ನಟ-ನಟಿಯರನ್ನು ಆರಿಸಿ, ಕರೆಸಿ, dubbing ಕೊಟ್ಟು ಪಾತ್ರ ಮಾಡಿಸಿದ ಹಾಗೇ. ಅವರಿಗೆ ಅಕ್ಷರ ಗೊತ್ತೋ, ಬರೆಯಲು ಬರುತ್ತದೋ, ಇಲ್ಲವೋ, ಕೇಳುವ ಹಾಗೆಯೇ ಇಲ್ಲ. ಮತ್ತೆ ಕೆಲವರು ಬರೆಯುವ/ ಓದುವ ಗೋಜು ಬೇಡ ಎಂದು ನಿರೂಪಣೆಗೆ ಒಗ್ಗಿಕೊಳ್ಳುತ್ತಾರೆ. ಅವರು ಹೇಳುತ್ತಾರೆ, ಮತ್ತೊಬ್ಬರು ಬರೆಯುತ್ತಾರೆ. 

ಆದರೆ, ವಿಷಾದವೆಂದರೆ ಅಂಕಣಕಾರರು 'ಖಾಲಿ' ಆಗುವುದು. ಅದಕ್ಕಿಂತ ಇನ್ನೂ ದುಃಖದ ಸಂಗತಿ ಎಂದರೆ ತುಂಬಿಕೊಳ್ಳದಿರುವುದು. ಅಂಕಣಗಳು ಚನ್ನಾಗಿ ಮೂಡಿ ಬರಬೇಕಾದರೆ ಪತ್ರಿಕಾ ಸಂಪಾದಕರು ಒಬ್ಬ ಅಂಕಣಕಾರನಿಗೆ  'ನಿರ್ದಿಷ್ಟ ಅವಧಿಗೆ' ಮಾತ್ರ ಬರೆಯಲು ಹೇಳಬೇಕು. ವಿಷಯವನ್ನು ಸೂಚಿಸಬೇಕು. ಬಿಡುಗಡೆಯಾಗುವ ಪುಸ್ತಕಗಳ ವಿಮರ್ಶೆ, ಟಾಪ್ ಟೆನ್ ಬರುವ ಹಾಗೆ, TV ಗಳಲ್ಲಿ serial ಗಳಿಗೆ  TRP ಇದ್ದಹಾಗೆ, ಚಿತ್ರಗೀತೆಗಳಲ್ಲಿ ಸೂಪರ್ ಹಿಟ್ ಇದ್ದ ಹಾಗೆ, ಎಲ್ಲ ಪತ್ರಿಕೆಗಳ ಎಲ್ಲ ಅಂಕಣಗಳ ಮೌಲ್ಯ ಮಾಪನ ನಡೆಯಬೇಕು. ಟಾಪ್ ಟೆನ್ ಅಂಕಣಗಳು ಯಾವುವು ಎನ್ನುವಂಥ ಚರ್ಚೆಗಳು ನಡೆಯಬೇಕು. ಆಗ ಅಂಕಣಕಾರರು ಮತ್ತು ಸಂಪಾದಕರು ಎಚ್ಚೆತ್ತುಕೊಳ್ಳುತ್ತಾರೆ. ಓದುಗ ನಿರಾಳವಾಗಿ ಉಸಿರಾಡುತ್ತಾನೆ. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು? 

ಈಗ ಹೇಳಿ, ಪತ್ರಿಕೆಗಳ ಪ್ರಸಾರ, ಅಂಕಣಗಳಿಂದ ಹೆಚ್ಚಾಗುತ್ತವೆಯೇ? 

Friday, March 25, 2011

ಕೋಡಂಗಿ ಜ್ಯೋತಿಷಿಗಳ ಉಪಟಳವನ್ನು ನಿಯಂತ್ರಿಸುವುದು ಹೇಗೆ?


ಯಾಕೆ ನಿಮಗೆ ಈ ಜ್ಯೋತಿಷಿಗಳ ಮೇಲೆ ಆ ಪಾಟಿ ಸಿಟ್ಟು ಅಂತಾರೆ ಓದುಗರು. ಸಿಟ್ಟು ಬರದೆ ಇನ್ನೇನಾಗುತ್ತೆ ಹೇಳಿ. ಮೊನ್ನೆ ಜೀ ಟಿವಿಯ ಬ್ರಹ್ಮಾಂಡದ ನರೇಂದ್ರ ಶರ್ಮ ಹೇಳಿದ್ದನ್ನು ಕೇಳಿದರೆ ನಿಜಕ್ಕೂ ಆತಂಕವಾಗುತ್ತದೆ.

ಆತ ಹೇಳುತ್ತಾನೆ: ಇದೇ ವರ್ಷ ಮೇ.೬ನೇ ತಾರೀಖು ಕರೆಕ್ಟಾಗಿ ಜಗನ್ಮಾತೆ ಭೂಲೋಕಕ್ಕೆ ಕಾಲಿಡುತ್ತಾಳೆ. ೧೮ನೇ ತಾರೀಖಿನವರೆಗೆ ಅವಳು ಇಲ್ಲಿರುತ್ತಾಳೆ. ಮಹಿಷಾಸುರನನ್ನು ಸಾಯಿಸಿದ ಮೇಲೆ ಮೊದಲ ಬಾರಿ ಅವಳು ಬರ‍್ತಾ ಇದ್ದಾಳೆ. ನಿಮಗೆ ಯಾರಿಗಾದರೂ ಇದರ ಪರಿವೆ ಇದೆಯಾ? ಅವಳನ್ನು ಹೇಗೆ ರಿಸೀವ್ ಮಾಡಿಕೊಳ್ಳೋದು ಅನ್ನುವುದರ ಪರಿಜ್ಞಾನ ಇದೆಯಾ? ಹೋಗಲಿ, ಎಷ್ಟು ಜನರಿಗೆ ಅವಳು ಬರ‍್ತಾ ಇದ್ದಾಳೆ ಅಂತ ಗೊತ್ತಿದೆ ಹೇಳಿ?

ಪ್ರಳಯ ಆಗೋದು ಖಡಾಖಂಡಿತ. ನಾನು ಹೇಳಿಬಿಟ್ಟಿದ್ದೇನೆ, ಬರೆದಿಟ್ಟುಕೊಳ್ಳಿ. ಒಂದು ಪಕ್ಷ ಆಗಲ್ಲ ಅಂದ್ರೂನು ಜಗನ್ಮಾತೆ ಮಾಡುತ್ತಾಳೆ. ಅವಳ ಮಗ ನಾನು. ನನ್ನ ಮಾತು ನಿಜವಾಗಿಸಲಾದರೂ ಮಾಡೇ ಮಾಡುತ್ತಾಳೆ. ನೀವೇನು ಮಾಡಬೇಕು? ನೀವು ನನ್ನನ್ನು ಪೂಜೆ ಮಾಡಬೇಡಿ, ಅವಳನ್ನೇ ಮಾಡಿ. ನೀವು ಏನು ಮಾಡಬೇಕು ಅಂತ ಹೇಳ್ತೀನಿ, ಹೇಳಿದಷ್ಟನ್ನು ಮಾಡಿ.
ಹೀಗೆ ಹೇಳುತ್ತಾನೆ ನರೇಂದ್ರ ಶರ್ಮ. ಆತನ ಪ್ರಕಾರ ಮೇ.೬ನೇ ತಾರೀಖು ಜಗನ್ಮಾತೆ ಕಾಲಿಡೋದೇ ದುರಹಂಕಾರಿಗಳ ನಾಶಕ್ಕಾಗಿ. ಜಗತ್ತಿನ ೬೦೦ ಕೋಟಿಗೂ ಹೆಚ್ಚು ಜನರ ಪೈಕಿ ಎಲ್ಲರೂ ಸತ್ತು ಉಳಿಯೋದು ೩೩ ಕೋಟಿ ೧ ಲಕ್ಷ.

ತನ್ನ ಶಿಷ್ಯ ನರೇಂದ್ರ ಶರ್ಮ ಹೇಳಿದ್ದಾನೆ ಅನ್ನೋ ಕಾರಣಕ್ಕಾದರೂ ಜಗನ್ಮಾತೆ ಪ್ರಳಯ ಮಾಡುತ್ತಾಳಂತೆ. ೬೦೦ ಕೋಟಿ ಜನರ ಬಾಳನ್ನು ತನ್ನ ಒಬ್ಬ ಭಕ್ತನ ಮಾತು ಉಳಿಸಲು ನಾಶ ಮಾಡುತ್ತಾಳಂತೆ ಜಗನ್ಮಾತೆ! ಇಂಥ ಮಾತುಗಳನ್ನು ಆತ ಖಾಸಗಿಯಾಗಿ ತನ್ನ ಮನೆಯ ಕೋಣೆಯಲ್ಲಿ ಕುಳಿತು ಹೇಳುತ್ತಿಲ್ಲ. ಲಕ್ಷಾಂತರ ಜನರು ನೋಡುವ ಒಂದು ಚಾನಲ್‌ನ ನೇರಪ್ರಸಾರದಲ್ಲಿ ಹೇಳುತ್ತಾನೆ.

ಒಂದಂತೂ ಸ್ಪಷ್ಟ. ಈತ ಜಗನ್ಮಾತೆಯ ಹೆಸರಲ್ಲಿ ಒಂದು ದೊಡ್ಡ ಸ್ಕೀಮ್ ರೆಡಿ ಮಾಡಿಟ್ಟಿದ್ದಾನೆ. ಸಿಟ್ಟು ಮಾಡಿಕೊಂಡಿರುವ ಜಗನ್ಮಾತೆಯ ಮನವೊಲಿಸಲು ನಾನು ಎಂಥದೋ ಒಂದು ಯಾಗ ನಡೆಸುತ್ತೇನೆ ಎಂದು ಘೋಷಣೆ ಮಾಡುತ್ತಾನೆ. ಇದರಲ್ಲಿ ಪಾಲ್ಗೊಳ್ಳುವವರು ಇಷ್ಟು ಹಣ ಕೊಡಿ ಎಂದು ತಾಕೀತು ಮಾಡುತ್ತಾನೆ. ಕೋಟಿಗಟ್ಟಲೆ ಹಣ ಹರಿದು ಬರುತ್ತದೆ. ಜಗನ್ಮಾತೆಯನ್ನು ಒಲಿಸಿ ಪ್ರಳಯ ತಪ್ಪಿಸಿದ್ದೇನೆ ಎಂದು ಅಂತಿಮವಾಗಿ ಈತ ತಿಪ್ಪೆ ಸಾರಿಸುತ್ತಾನೆ.

ನರೇಂದ್ರ ಸ್ವಾಮಿಯ ಕುರಿತಾಗಿ ಇಷ್ಟೆಲ್ಲ ಚರ್ಚೆ ನಡೆಯುತ್ತಿದೆಯಲ್ಲ, ಏನಾದರೂ ಆತ ತಿದ್ದಿಕೊಳ್ಳಲು ಯತ್ನಿಸಿದ್ದಾನೆಯೇ? ಖಂಡಿತಾ ಇಲ್ಲ. ನೋಡ್ರೀ ಲಕ್ಷ್ಮಿ ವಾಸ ಮಾಡೋದೇ ಹೆಂಗಸರ ಜಡೆಯ ಕುಚ್ಚಿನಲ್ಲಿ. ಈಗಿನವು ಮುಂಡೇವು ಗಂಡಸರ ಹಾಗೆ ಬಾಫ್ ಕಟ್ ಮಾಡಿಸ್ಕೋತಾವೆ, ಜಡೆ ಇಲ್ಲದ ಮೇಲೆ ಲಕ್ಷ್ಮಿ ಎಲ್ಲಿರುತ್ತಾಳೆ ಅನ್ನುತ್ತಾನೆ. ದುರಹಂಕಾರ ಅಂದ್ರೆ ರಾಹು. ಹೆಣ್ಣುಮಕ್ಕಳ ಪೈಕಿ ಇದು ಇರೋದು ಹೊರಗೆ ಕೆಲಸಕ್ಕೆ ಹೋಗೋರಿಗೆ. ಅದರಲ್ಲೂ ಅದೇನೋ ಸಾಫ್ಟ್‌ವೇರು, ಕಾಲ್‌ಸೆಂಟರಿಗೆ ಹೋಗ್ತಾರಲ್ಲ ಅವರಿಗೆ ಅನ್ನುತ್ತಾನೆ.

ಯಾಕೆ ಇದನ್ನು ಪ್ರಜ್ಞಾವಂತರು ಸಹಿಸಿಕೊಳ್ಳಬೇಕು? ನಿಜ, ಆತ ಏನು ಬೇಕೋ ಹೇಳಿಕೊಳ್ಳಲಿ ಬಿಡಿ. ನಾವು ನೋಡದಿದ್ದರೆ ಆಯ್ತು ಎಂದು ಹೇಳಿಕೊಳ್ಳಬಹುದು. ಆದರೆ ಆತನ ಮಾತು ಕೇಳಿ ಜನ ದೀಪ ಹೊತ್ತುಕೊಂಡು ಬಂದಿದ್ದನ್ನು ಗಮನಿಸಿದರೆ, ಈತ ಮುಂದೇನೇನೇನು ಮಾಡಬಹುದು ಎಂಬ ಆತಂಕವೂ ಮೂಡುತ್ತದೆ. ಸೂಪರ್ ಮೂನ್ ಬಗ್ಗೆ ಈತನೂ ಸೇರಿದಂತೆ ಟಿವಿ ಚಾನಲ್‌ಗಳ ಜ್ಯೋತಿಷಿಗಳು ಎಷ್ಟು ಭೀತಿ ಮೂಡಿಸಿದ್ದರೆಂದರೆ ಕರಾವಳಿಯ ಜನರು ಮನೆ ಮಠ ಬಿಟ್ಟು ಹೊರಟುಬಿಟ್ಟಿದ್ದರು. ಅಲ್ಲೇ ಉಳಿದ ಜನರೂ ಆ ದಿನವನ್ನು ಭಯದಿಂದಲೇ ಕಳೆಯುವಂತಾಗಿತ್ತು.

ಯಾಕೆ ನಮ್ಮ ಟಿವಿ ಚಾನಲ್‌ಗಳು ಇದನ್ನೆಲ್ಲ ಅರ್ಥ ಮಾಡಿಕೊಳ್ಳುತ್ತಿಲ್ಲ?

ಇದು ಬರೀ ಜೀ ಟಿವಿಯ ಕಥೆ ಅಲ್ಲ. ಮೊನ್ನೆ ಸುವರ್ಣ ನ್ಯೂಸ್‌ನಲ್ಲಿ ರಮ್ಯಾ-ಗಣೇಶ್ ನಡುವಿನ ಜಗಳ ಕುರಿತೂ ಇಬ್ಬರು ಜ್ಯೋತಿಷಿಗಳನ್ನು ಕರೆದು ಕಾರ್ಯಕ್ರಮ ನಡೆಸಲಾಯಿತು. ಈ ಕಾರ್ಯಕ್ರಮದ ಜಾಹೀರಾತು ಬೇರೆ ಕನ್ನಡಪ್ರಭದ ಮುಖಪುಟದಲ್ಲಿ ಪ್ರಕಟಗೊಂಡಿತ್ತು. ರಮ್ಯಾ ಹಾಗು ಗಣೇಶ್ ಅವರ ಜಾತಕ, ಗ್ರಹಗತಿಗಳನ್ನು ಹೊಂದಿಸಿ ಒಬ್ಬ ಜ್ಯೋತಿಷಿ ಹೇಳಿದ್ದೇನು ಗೊತ್ತೆ? ಈ ಜಗಳ ಸದ್ಯಕ್ಕೆ ಬಗೆಹರಿಯುವುದಿಲ್ಲ! ಮತ್ತೊಬ್ಬ ಇಬ್ಬರ ಜಗಳದ ನಡುವೆ ಪರ್ವತ ಅಡ್ಡ ಬಂದಿದೆ. ಆ ಪರ್ವತವೇ ಅಂಬರೀಷ್. ಹೀಗಾಗಿ ಇದು ಇತ್ಯರ್ಥವಾಗುವುದಿಲ್ಲ ಎಂದು ಅಪ್ಪಣೆ ಕೊಡಿಸಿದ.
ಹೀಗಾದರೆ ಹೇಗೆ?

ಇವುಗಳ ವಿರುದ್ಧ ಒಂದು ಆಂದೋಲನವೇ ನಡೆಯಬೇಕೆನಿಸುವುದಿಲ್ಲವೇ? ಈ ಜ್ಯೋತಿಷಿಗಳ ಆಟಾಟೋಪಗಳ ನಿಯಂತ್ರಣಕ್ಕೆ ಏನು ಮಾಡಬಹುದು? ನಾವು ಪ್ರಜ್ಞಾವಂತ ನಾಗರಿಕರಾಗಿ ಏನು ಮಾಡಲು ಸಾಧ್ಯ? ಎಲ್ಲರೂ ಸೇರಿ ನಮ್ಮ ಟಿವಿ ಚಾನಲ್‌ಗಳ ಮೇಲೆ ಒತ್ತಡ ಹೇರಿದರೆ ಇಂಥ ಕಾರ್ಯಕ್ರಮಗಳನ್ನು ನಿಲ್ಲಿಸಬಹುದಲ್ಲವೇ?

ಈ ಒತ್ತಡವನ್ನು ನಿರ್ಮಿಸುವುದು ಹೇಗೆ?

ದಯವಿಟ್ಟು ನಿಮ್ಮ ಅನಿಸಿಕೆಗಳನ್ನು ಹೇಳಿ. ಈ ಕುರಿತು ನಾವೂ ಯೋಚಿಸಿದ್ದೇವೆ. ನಿಮ್ಮ ಸಲಹೆಗಳನ್ನೂ ಸೇರಿಸಿ ಸಾಧ್ಯವಿರುವ ಒಂದಷ್ಟು ಮಾರ್ಗೋಪಾಯಗಳನ್ನು ಪಟ್ಟಿ ಮಾಡೋಣ. ನಂತರ ಅವುಗಳ ಕುರಿತು ಗಂಭೀರ ಪ್ರಯತ್ನ ಆರಂಭಿಸೋಣ. ನಿಮ್ಮ ಪಾಲ್ಗೊಳ್ಳುವಿಕೆಯನ್ನು ನಿರೀಕ್ಷಿಸುತ್ತೇವೆ.

Thursday, March 24, 2011

ನಿಮ್ಮ ದೈನೇಸಿ ಬದುಕೇ ನಮಗೆ ರಿಯಾಲಿಟಿ ಶೋಗಳು


ನಾವು ಆಧುನಿಕ ಸ್ಮೃತಿಕಾರರು
ಬರೆದದ್ದೆಲ್ಲ ಬ್ರಹ್ಮಲಿಪಿ
ಪ್ರಶ್ನೆ ಮಾಡಬೇಡಿ;
ಸಾಕ್ಷಾತ್ ಗಣಪತಿಯ ಕೈಗಳು ನಮ್ಮವು
ನಾವು ಬರೆಯೋದೆಲ್ಲ ಸತ್ಯ
ಒಪ್ಪಿಕೊಳ್ಳದವರೇ ಇಲ್ಲಿ ಮಿಥ್ಯ

ನಾವು ಬರೆಯುತ್ತೇವೆ
ನಮ್ಮದೇ ಸಂವಿಧಾನ, ಅದಕ್ಕೆ ನಮ್ಮದೇ ಭಾಷ್ಯ
ಓದುವುದಿದ್ದರೆ ಓದಿ, ಇಲ್ಲವೇ ಬಿಡಿ
ನಾವು ನಿಮ್ಮ ಆಕೃತಿಗಳ ಮೇಲೆ ಕಾದ ಸೀಸ ಸುರಿಯುತ್ತೇವೆ

ನಾವು, ಆಸೆಬುರುಕರು
ಧನಕನಕಗಳು ಬೇಕು, ಯಾರು ಕೊಟ್ಟರೂ ನಡೆದೀತು
ಕೊಟ್ಟವನು ಈರಭದ್ರ, ಕೊಡದವನು ಕೋಡಂಗಿ

ನಾವು ನಿಮ್ಮ ಎದೆಯ ಮೇಲೆ ಅಕ್ಷರ ಕಟ್ಟಿ
ಅಲ್ಲೇ ಸೈಟು ಗಿಟ್ಟಿಸುತ್ತೇವೆ, ಮನೆ ಕಟ್ಟಿಕೊಳ್ಳುತ್ತೇವೆ
ನಮ್ಮ ಮಹಲುಗಳ ಬಳಪದ ಕಲ್ಲುಗಳಲ್ಲಿ
ನಿಮ್ಮ ದೈನ್ಯ ಮುಖವೇ ಪ್ರತಿಫಲಿಸುತ್ತದೆ

ನಿಮ್ಮ ದೈನೇಸಿ ಬದುಕೇ ನಮಗೆ ರಿಯಾಲಿಟಿ ಶೋಗಳು
ನಿಮ್ಮ ಆಸೆ, ಸಂಕಟ, ಕಣ್ಣೀರು, ಕೊರಗನ್ನೆಲ್ಲ ನಾವು ಮಾರುತ್ತೇವೆ
ಒಮ್ಮೊಮ್ಮೆ ನಿಮ್ಮ ಸಾವೂ ನಮಗೆ ಮಾರಾಟದ ವಸ್ತು

ನಾವು ಜಗಳ ಹಚ್ಚುತ್ತೇವೆ, ಗಲಭೆ ಎಬ್ಬಿಸುತ್ತೇವೆ
ಆಧುನಿಕ ನಾರದ ಸಂತತಿಗಳು ನಾವು
ನಿಮ್ಮನಿಮ್ಮಲ್ಲೇ ಚಪ್ ಚಪ್ಪಲೀಲಿ ಹೊಡೆದಾಡಿಸುತ್ತೇವೆ
ಚಪ್ಪಲಿಗೆ ಪಾಯಿಂಟ್ ಐದು ಟಿಆರ್‌ಪಿ ಇದೆ, ನಿಮಗೆ ಗೊತ್ತೆ?

ನಾವು ನಿಮ್ಮ ಭೂತ, ಭವಿಷ್ಯ, ವರ್ತಮಾನ
ಎಲ್ಲವನ್ನೂ ಹೇಳುತ್ತೇವೆ ಅಥವಾ ಹೇಳಿಸುತ್ತೇವೆ
ನಾವು ಒಮ್ಮೆ ಕರೆಕೊಟ್ಟರೆ ನೀವು
ಐದೆಣ್ಣೆಯ ದೀಪ ಇಟ್ಟುಕೊಂಡು ಕೋಡಂಗಿ ವೇಷ ತೊಟ್ಟು ಬೀದಿಗೆ ಬರುತ್ತೀರಿ
ನಿಮ್ಮ ಭವಿಷ್ಯವನ್ನು ನಾವು ನಮ್ಮ ಟಿಆರ್‌ಪಿಗಾಗಿ ಹರಾಜಿಗಿಟ್ಟಿದ್ದೇವೆ

ನಾವು ಮಂತ್ರಿ ಮಹೋದಯರನ್ನು ಸೃಷ್ಟಿಸುವವರು
ಸರ್ಕಾರಗಳನ್ನು ಕೆಡಹುವವರು
ಭವ್ಯಾತಿಭವ್ಯ ಡೀಲುಗಳನ್ನು ಕುದುರಿಸುವವರು
ನಾವು ಕಾರ್ಪರೇಟ್ ದಳ್ಳಾಳಿಗಳು
ಹಿಡಿಯಲು ಕೈಯಾದರೇನು, ಕಾಲಾದರೇನು, ತಲೆಯಾದರೇನು?
ನಮಗೆ ಸಾಕ್ಷಿಗಳಷ್ಟೇ ಬೇಕು, ಅಂತಃಸಾಕ್ಷಿ ಬೇಕಿಲ್ಲ

ನಾವು ಹೊಸವೇಷದ ಪರಂಗಿಗಳ ಕೂಲಿಗಳು
ಅವರ ಬೂಟುಗಳಲ್ಲಿ ಜಾಗ ಮಾಡಿಕೊಂಡು ಬೆಚ್ಚಗೆ ಮಲಗಿದವರು

Wednesday, March 23, 2011

ಮಕ್ಕಳ ಆಯೋಗದಿಂದ ಎಲ್ಲ ಚಾನಲ್‌ಗೂ ಕಟ್ಟುನಿಟ್ಟಾದ ಮಾರ್ಗಸೂಚಿ

ಡಾ.ವಿ.ಪಿ.ನಿರಂಜನಾರಾಧ್ಯ
ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ಕಾರ್ಯಕ್ರಮದಲ್ಲಿ ಅಮಾಯಕ ಬಾಲಕನನ್ನು ಹಿಂಸಿಸಿದ ಪ್ರಕರಣ ಈಗ ಒಂದು ತಾರ್ಕಿಕ ಅಂತ್ಯದತ್ತ ಸಾಗುತ್ತಿದೆ. ಈ ಕಾರ್ಯಕ್ರಮದ ಕುರಿತು ಮೌನೇಶ್ ವಿಶ್ವಕರ್ಮ ಬರೆದ ಲೇಖನ ಸಾಕಷ್ಟು ಚರ್ಚೆಗೆ ಒಳಗಾಗಿದ್ದನ್ನು ನೀವು ಬಲ್ಲಿರಿ. ಈ ಸಂಬಂಧ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ವಾಸುದೇವ ಶರ್ಮ ಅವರ ಪ್ರತಿಕ್ರಿಯೆಯನ್ನೂ ನೀವು ಗಮನಿಸಿರುತ್ತೀರಿ.

ಈ ಸಂಬಂಧ ಆಯೋಗದ ಮತ್ತೊಬ್ಬ ಸದಸ್ಯರಾದ ಡಾ. ವಿ.ಪಿ.ನಿರಂಜನಾರಾಧ್ಯ ಅವರ ಪ್ರತಿಕ್ರಿಯೆಯನ್ನು ಕೋರಿ ಸಂಪಾದಕೀಯ ಪತ್ರ ಬರೆದಿತ್ತು. ನಿರಂಜನಾರಾಧ್ಯರು ತಮ್ಮ ತೀಕ್ಷ್ಣವಾದ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಪ್ರತಿಕ್ರಿಯೆಯ ಪೂರ್ಣಪಾಠ ಇಲ್ಲಿದೆ.


Dear friends,
I thank Mounesh for bringing this inhuman act in the name of reality show into limelight. It is gross violation of child’s right to dignified life and nothing but a heinous crime and assault on the very life and dignity of the child.  The Karnataka State Commission for Protection Child Rights takes this as suo-moto complaint based on this report and certainly we initiate enquiry on this matter and ensure justice to child.  We will also explore the possibility of issuing strict guidelines to media particularly visual media to maintain procedures and protocols while involving children in any programme including the reality shows. Thanks for bringing for the commission notice.
Niranjanaradhya.V.P
Member-KSCPCR


(ಡಾ.ವಿ.ಪಿ.ನಿರಂಜನಾರಾಧ್ಯ ಕರ್ನಾಟಕದ ಮಹತ್ವದ ಶಿಕ್ಷಣ ತಜ್ಞರಲ್ಲಿ ಒಬ್ಬರು. ಸಮಾನ ಶಿಕ್ಷಣ ವ್ಯವಸ್ಥೆ ಜಾರಿಗಾಗಿ ತಮ್ಮ ಬದುಕನ್ನೇ ಮೀಸಲಾಗಿಟ್ಟವರು. ಭಾರತೀಯ ವಿಶ್ವವಿದ್ಯಾಲಯದ ರಾಷ್ಟ್ರೀಯ ಕಾನೂನು ಶಾಲೆಯ ಮಗು ಮತ್ತು ಕಾನೂನು ಕೇಂದ್ರದಲ್ಲಿ ಹಿರಿಯ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳ ಹಕ್ಕುಗಳ ಕುರಿತು ಅನೇಕ ಅಂತಾರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಮಾತನಾಡಿದ್ದಾರೆ, ಲೇಖನಗಳನ್ನು ಬರೆದಿದ್ದಾರೆ.)

ನಿರಂಜನಾರಾಧ್ಯರು ತಮ್ಮ ಪ್ರತಿಕ್ರಿಯೆಯಲ್ಲಿ ಬಹಳ ಮಹತ್ವದ ಮತ್ತೊಂದು ವಿಷಯವನ್ನೂ ಪ್ರಸ್ತಾಪಿಸಿದ್ದಾರೆ. ಎಲ್ಲ ಮಾಧ್ಯಮಗಳಿಗೂ ವಿಶೇಷವಾಗಿ ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಒಂದು ಕಟ್ಟುನಿಟ್ಟಾದ ಮಾರ್ಗಸೂಚಿಯೊಂದನ್ನು ನೀಡಲು ಅವರು ನಿರ್ಧರಿಸಿದ್ದಾರೆ. ರಿಯಾಲಿಟಿ ಶೋಗಳೂ ಸೇರಿದಂತೆ ಮಕ್ಕಳನ್ನು ಬಳಸಿಕೊಂಡು ನಡೆಸುವ ಎಲ್ಲ ಕಾರ್ಯಕ್ರಮಗಳಲ್ಲಿ ಅನುಸರಿಸಬೇಕಾದ ಕ್ರಮಗಳು ಹಾಗು ಕಟ್ಟಳೆಗಳನ್ನು ಈ ಮಾರ್ಗಸೂಚಿ ಒಳಗೊಂಡಿರುತ್ತದೆ.

ಸಂಗೀತ, ನೃತ್ಯ ಸ್ಪರ್ಧೆಗಳ ರಿಯಾಲಿಟಿ ಶೋಗಳಲ್ಲೂ ಸಹ ಮಕ್ಕಳ ಮನಸಿಗೆ ಘಾಸಿಯಾಗುವಂತೆ ನಡೆದುಕೊಳ್ಳಲಾಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಇದು ಸಹ ನಿಲ್ಲದೇ ಹೋದರೆ, ರಿಯಾಲಿಟಿ ಶೋಗಳಲ್ಲಿ ಸೋತ ಮಕ್ಕಳು ಖಿನ್ನತೆಗೆ ಒಳಗಾಗುವ, ಆತ್ಮಹತ್ಯೆಯಂಥ ಅತಿರೇಕಕ್ಕೆ ಕೈ ಹಾಕುವ ಸಾಧ್ಯತೆಗಳೂ ಇಲ್ಲದಿಲ್ಲ. ಹೀಗಾಗಿ ಆಯೋಗದ ಈ ನಿರ್ಧಾರ ಸ್ವಾಗತಾರ್ಹವಾದುದು.

ಮತ್ತೊಮ್ಮೆ ಇಂಥ ಒಂದು ಸಣ್ಣ ಸಂಚಲನಕ್ಕೆ ಕಾರಣರಾದ ಮೌನೇಶ್ ಸೇರಿದಂತೆ ಎಲ್ಲ ಬ್ಲಾಗರ್‌ಗಳನ್ನು ಅಭಿನಂದಿಸುತ್ತೇವೆ. ಸಂಪಾದಕೀಯದಲ್ಲಿ ಈ ಕುರಿತು ತೀವ್ರವಾಗಿ ಸ್ಪಂದಿಸಿದ ಉಮಾಪತಿ,  ಉಷಾ ಕಟ್ಟೆಮನೆ, ಟೀನಾ ಶಶಿಕಾಂತ್, ಮಧುಭಟ್. ಪದ್ಯಾನ ರಾಮಚಂದ್ರ, ಸುಘೋಷ್ ನಿಗಳೆ, ಹಂಸಾನದಿ, ಕವಿತಾ, ಗಿರಿ, ಅಮಿತಾ, ಅರಕಲಗೂಡು ಜಯಕುಮಾರ್, ಮಣಿ ಮತ್ತಿತರ ಎಲ್ಲರಿಗೂ ಕೃತಜ್ಞತೆಗಳು. ಕನ್ನಡ ಅಂತರ್ಜಾಲವೂ ಒಂದು ಗಂಭೀರ ಮಾಧ್ಯಮ ಅನ್ನೋದನ್ನು ಈ ಪ್ರಕರಣ ಮತ್ತೊಮ್ಮೆ ಸಾಬೀತು ಮಾಡಿದೆ.

ಅಂದಹಾಗೆ ಜನರಲ್ಲಿ ಪ್ರಳಯದ ಭೀತಿ ಸೃಷ್ಟಿಸಿ ಕಾಸು ಮಾಡಿಕೊಳ್ಳುತ್ತಿರುವ ಆ ವಿಕೃತ ಜ್ಯೋತಿಷಿಯ ಕುರಿತೂ ನಾವು ಒಂದು ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಬೇಕಿದೆ. ಆ ಕುರಿತು ಮುಂದೆ ಬರೆಯುತ್ತೇವೆ.