Thursday, March 24, 2011

ನಿಮ್ಮ ದೈನೇಸಿ ಬದುಕೇ ನಮಗೆ ರಿಯಾಲಿಟಿ ಶೋಗಳು


ನಾವು ಆಧುನಿಕ ಸ್ಮೃತಿಕಾರರು
ಬರೆದದ್ದೆಲ್ಲ ಬ್ರಹ್ಮಲಿಪಿ
ಪ್ರಶ್ನೆ ಮಾಡಬೇಡಿ;
ಸಾಕ್ಷಾತ್ ಗಣಪತಿಯ ಕೈಗಳು ನಮ್ಮವು
ನಾವು ಬರೆಯೋದೆಲ್ಲ ಸತ್ಯ
ಒಪ್ಪಿಕೊಳ್ಳದವರೇ ಇಲ್ಲಿ ಮಿಥ್ಯ

ನಾವು ಬರೆಯುತ್ತೇವೆ
ನಮ್ಮದೇ ಸಂವಿಧಾನ, ಅದಕ್ಕೆ ನಮ್ಮದೇ ಭಾಷ್ಯ
ಓದುವುದಿದ್ದರೆ ಓದಿ, ಇಲ್ಲವೇ ಬಿಡಿ
ನಾವು ನಿಮ್ಮ ಆಕೃತಿಗಳ ಮೇಲೆ ಕಾದ ಸೀಸ ಸುರಿಯುತ್ತೇವೆ

ನಾವು, ಆಸೆಬುರುಕರು
ಧನಕನಕಗಳು ಬೇಕು, ಯಾರು ಕೊಟ್ಟರೂ ನಡೆದೀತು
ಕೊಟ್ಟವನು ಈರಭದ್ರ, ಕೊಡದವನು ಕೋಡಂಗಿ

ನಾವು ನಿಮ್ಮ ಎದೆಯ ಮೇಲೆ ಅಕ್ಷರ ಕಟ್ಟಿ
ಅಲ್ಲೇ ಸೈಟು ಗಿಟ್ಟಿಸುತ್ತೇವೆ, ಮನೆ ಕಟ್ಟಿಕೊಳ್ಳುತ್ತೇವೆ
ನಮ್ಮ ಮಹಲುಗಳ ಬಳಪದ ಕಲ್ಲುಗಳಲ್ಲಿ
ನಿಮ್ಮ ದೈನ್ಯ ಮುಖವೇ ಪ್ರತಿಫಲಿಸುತ್ತದೆ

ನಿಮ್ಮ ದೈನೇಸಿ ಬದುಕೇ ನಮಗೆ ರಿಯಾಲಿಟಿ ಶೋಗಳು
ನಿಮ್ಮ ಆಸೆ, ಸಂಕಟ, ಕಣ್ಣೀರು, ಕೊರಗನ್ನೆಲ್ಲ ನಾವು ಮಾರುತ್ತೇವೆ
ಒಮ್ಮೊಮ್ಮೆ ನಿಮ್ಮ ಸಾವೂ ನಮಗೆ ಮಾರಾಟದ ವಸ್ತು

ನಾವು ಜಗಳ ಹಚ್ಚುತ್ತೇವೆ, ಗಲಭೆ ಎಬ್ಬಿಸುತ್ತೇವೆ
ಆಧುನಿಕ ನಾರದ ಸಂತತಿಗಳು ನಾವು
ನಿಮ್ಮನಿಮ್ಮಲ್ಲೇ ಚಪ್ ಚಪ್ಪಲೀಲಿ ಹೊಡೆದಾಡಿಸುತ್ತೇವೆ
ಚಪ್ಪಲಿಗೆ ಪಾಯಿಂಟ್ ಐದು ಟಿಆರ್‌ಪಿ ಇದೆ, ನಿಮಗೆ ಗೊತ್ತೆ?

ನಾವು ನಿಮ್ಮ ಭೂತ, ಭವಿಷ್ಯ, ವರ್ತಮಾನ
ಎಲ್ಲವನ್ನೂ ಹೇಳುತ್ತೇವೆ ಅಥವಾ ಹೇಳಿಸುತ್ತೇವೆ
ನಾವು ಒಮ್ಮೆ ಕರೆಕೊಟ್ಟರೆ ನೀವು
ಐದೆಣ್ಣೆಯ ದೀಪ ಇಟ್ಟುಕೊಂಡು ಕೋಡಂಗಿ ವೇಷ ತೊಟ್ಟು ಬೀದಿಗೆ ಬರುತ್ತೀರಿ
ನಿಮ್ಮ ಭವಿಷ್ಯವನ್ನು ನಾವು ನಮ್ಮ ಟಿಆರ್‌ಪಿಗಾಗಿ ಹರಾಜಿಗಿಟ್ಟಿದ್ದೇವೆ

ನಾವು ಮಂತ್ರಿ ಮಹೋದಯರನ್ನು ಸೃಷ್ಟಿಸುವವರು
ಸರ್ಕಾರಗಳನ್ನು ಕೆಡಹುವವರು
ಭವ್ಯಾತಿಭವ್ಯ ಡೀಲುಗಳನ್ನು ಕುದುರಿಸುವವರು
ನಾವು ಕಾರ್ಪರೇಟ್ ದಳ್ಳಾಳಿಗಳು
ಹಿಡಿಯಲು ಕೈಯಾದರೇನು, ಕಾಲಾದರೇನು, ತಲೆಯಾದರೇನು?
ನಮಗೆ ಸಾಕ್ಷಿಗಳಷ್ಟೇ ಬೇಕು, ಅಂತಃಸಾಕ್ಷಿ ಬೇಕಿಲ್ಲ

ನಾವು ಹೊಸವೇಷದ ಪರಂಗಿಗಳ ಕೂಲಿಗಳು
ಅವರ ಬೂಟುಗಳಲ್ಲಿ ಜಾಗ ಮಾಡಿಕೊಂಡು ಬೆಚ್ಚಗೆ ಮಲಗಿದವರು

11 comments:

 1. Indeed this is reality... namage saakshigalu mattu akshigalu iddarayitu.. Antah saakshiya agatyavenide?Sariyage kapaalmokshavagabekide ee TRPgaagi hoydaduva bejavabdaari channelgalige.

  ReplyDelete
 2. ಸಾಂದರ್ಭಿಕ ಸ್ಪಂದನವು ಪದ್ಯರೂಪದಲ್ಲಿ ಅದ್ಭುತವಾಗಿ ನಮ್ಮನ್ನು ತಟ್ಟಿದೆ..

  "ಸದ್ದು ಮಾಡುವ ಪತ್ರಕರ್ತರೇ ಸುದ್ದಿಗಳಾಗುತ್ತಾರೆ ಕನ್ನಡದಲ್ಲಿ,
  ಬೆಳಬೆಳಗ್ಗೆಯೇ ಕನ್ನಡದ ವಾಹಿನಿಗಳಲ್ಲಿ ಬೃಹತ್ ಬ್ರಹ್ಮಾಂಡ,
  ಟಿ.ಆರ್.ಪಿ-ಗೆ ವೈಜ್ಞಾನಿಕ ಪ್ರಜ್ಞೆಗಳೆಲ್ಲ ಪಿಂಡಾಂಡವೋ ಪಿಂಡಾಂಡ,
  ಸತ್ಯವೇ ಕಾಣದೆ ನರಳುತ್ತಿವೆ ಅಣ್ಣಿಗೇರಿಯ ರುಂಡ ಮುಂಡ...

  ReplyDelete
 3. ನಿಮ್ಮ ಬಗ್ಗೆ ನೀವೆ ಎಷ್ಟು ಚೆನ್ನಾಗಿ ಬರೆದಿದ್ದೀರ? ಒಂದು ಬ್ಲಾಗ್ ಶುರು ಮಾಡಿ ನೀವು ಮಾಡ್ತಿರೋದು ಅದನ್ನೇ... ನಿಮ್ಮ ಟಿಆರ್ಪಿ ಜಾಸ್ತಿ ಮಾಡ್ಕೊತಿದ್ದೀರ.

  ReplyDelete
 4. one should have guts to tell this.. & you have that.. good going.. keep it up..

  ReplyDelete
 5. At last, you have found a way to express ur anguish towards Reality Shows. Peotry is the best medium to express the utmost displeasure in the way we wish to..where as its rarely possible as we may put it in decent manner in an essay..but You Can even write Pimp (Tale Hiduka)too..but if u write it in an essay it sounds unfair. good doing...

  ReplyDelete
 6. ನಾವು ಹಿರಿಯರು, ನಾವು ಕಿರಿಯರು
  ನಾವೆಲ್ಲವೂ ಒಂದೇ ಜಾತಿ, ಒಂದೇ ಕುಲ
  ಟಿಆರ್ಪಿಗಾಗಿ ಚಿಕ್ಕಮಕ್ಕಳ ಚಡ್ಡಿ ಬಿಚ್ಚಲು ಹೇಸದವರು
  ದುಡ್ಡಿಗಾಗಿ ಸ್ಟಿಂಗ್ ಆಪರೇಷನ್ ನಡೆಸುವವರು
  ಪತ್ರಿಕೆ ಹೆಸರಲ್ಲಿ ರೋಲ್ ಕಾಲ್ ದಂಧೆ ನಡೆಸುವವರು
  ನಾವೆಲ್ಲರೂ ಒಂದೇ ಜಾತಿ, ಒಂದೇ ಕುಲ

  ReplyDelete
 7. ತುಂಬಾ ಚೆನ್ನಾಗಿದೆ ಕವಿತೆ. ಪ್ರತೀ ಟಿವಿ ಚಾನೆಲ್ ಮತ್ತು ಪತ್ರಿಕಾ ಕಛೇರಿಗಳ ಗೋಡೆಗಳ ಮೇಲೆ ದಪ್ಪಕ್ಷರದಲ್ಲಿ ಬರೆದು ಹಾಕಬೇಕು...ಸೂಪರ್ ಕವಿತೆ.
  -ಉಲ್ಲಾಸ

  ReplyDelete
 8. so ultimately who you are? it seems you have many faces. which is your real face? in other words where is your real face? are you a human being ? are you eligible for any reliable relationship? or an instrument which makes encash every human emotions?

  ReplyDelete
 9. ಆಡಿದ್ದೇ ಆಟ ಮಾಡಿದ್ದೇ ಮಾಟ ಎಂಬಂತೆ ಬೀಗುವ ಲಂಗು ಲಗಾಮಿಲ್ಲದ ಮಾದ್ಯಮ ಮಂದಿಗೆ ಈ ಕವಿತೆ ರಾಷ್ಟ್ರಗೀತೆಯಂತಿದೆ. ದಾಟಿ ಸೊಗಸಾಗಿದೆ.

  ReplyDelete
 10. ತುಂಬಾ ಚೆನ್ನಾಗಿದೆ

  ReplyDelete