Sunday, March 27, 2011

ರಾಜಕಾರಣದ ಭಿನ್ನಮತ ಕುರಿತ ಸುದ್ದಿಯಲ್ಲೂ ಭಿನ್ನಮತವೇ?


ವಿಶ್ವೇಶ್ವರ ಭಟ್ಟರು ಕನ್ನಡಪ್ರಭದಲ್ಲಿ ತಮ್ಮ ಅಂಕಣಗಳನ್ನು ಬರೆಯಲು ಆರಂಭಿಸಿದ್ದಾರೆ. ಭಾನುವಾರ ಅವರು ಬರೆಯುತ್ತಿರುವ ಅಂಕಣ ನಂಗೆ ಇಷ್ಟಾನೋ! ಓದಿದ್ದು, ಕೇಳಿದ್ದು, ಎಸ್‌ಎಂಎಸ್, ಟ್ವೀಟು ಇತ್ಯಾದಿಗಳಲ್ಲಿ ಇಂಟರೆಸ್ಟಿಂಗ್ ಆಗಿರುವುದನ್ನು ಹೆಕ್ಕಿ ಈ ಅಂಕಣದಲ್ಲಿ ಬರೆಯುತ್ತಿದ್ದಾರೆ. ಇಂಥದ್ದೇ ಅಂಕಣವನ್ನು ಅವರು ಹಿಂದೆ ವಿಜಯ ಕರ್ನಾಟಕದಲ್ಲೂ ಬರೆಯುತ್ತಿದ್ದರು.

ಇವತ್ತಿನ ಅಂಕಣದಲ್ಲಿ ಅವರು ಯಾವುದು ಸರಿ? ಎಂಬ ಶೀರ್ಷಿಕೆಯಲ್ಲಿ ಒಂದು ಗಂಭೀರ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಅದು ಹೀಗಿದೆ: ನಮ್ಮ ಪತ್ರಿಕೆಯ ಓದುಗರಾದ ಹರ್ಷ ಪೆರ್ಲ ಎಂಬುವವರು ಒಂದು ಟ್ವೀಟ್ ಸಂದೇಶ ಕಳಿಸಿದ್ದಾರೆ. ಕಳೆದ ಎರಡು-ಮೂರು ದಿನಗಳ ರಾಜ್ಯ ರಾಜಕೀಯ ವಿದ್ಯಮಾನ ಪತ್ರಿಕೆಯಲ್ಲಿ ವರದಿಯಾಗುತ್ತಿರುವ ಬಗ್ಗೆ ಅವರ ತೀಕ್ಷ್ಣ ಪ್ರತಿಕ್ರಿಯೆ- ಬಿಜೆಪಿ ಹೈಕಮಾಂಡ್ ನಿರ್ಧರಿಸಿದ್ದು ರಾಜ್ಯ ನಾಯಕತ್ವ ಮುಂದುವರಿಸಲೋ? ಬದಲಿಸಲೋ? ಈ ಪ್ರಶ್ನೆಗೆ ಉತ್ತರ ನೀವು ಓದುವ ಪತ್ರಿಕೆಯ ಮೇಲೆ ನಿರ್ಧರಿತವಾಗುತ್ತದೆ!

ಭಟ್ಟರು ಜಾಣರು. ಈ ಸಂದೇಶವನ್ನು ಅವರು ತಮ್ಮ ಅನುದಿನದ ಇನ್ನೊಂದು ಅಂಕಣ ತಪ್ಪಾಯ್ತು, ತಿದ್ಕೋತೀವಿಯಲ್ಲಿ ಪ್ರಸ್ತಾಪಿಸಿ, ತಪ್ಪಾಯ್ತು ತಿದ್ಕೋತೀವಿ ಅನ್ನಬೇಕಿತ್ತು. ಆದರೆ ನಾಜೂಕಾಗಿ ಅದನ್ನು ನಂಗೂ ಇಷ್ಟಾನೋ ಅಂಕಣಕ್ಕೆ ಮತಾಂತರಗೊಳಿಸಿಬಿಟ್ಟಿದ್ದಾರೆ. ಆದರೂ ಅದನ್ನು ದಾಖಲಿಸಿರುವ ಅವರ ಕಾಳಜಿಯನ್ನು ಒಪ್ಪಲೇಬೇಕು.

ಯಾಕೆ ಹೀಗೆ ಹೇಳಿದ್ವಿ ಅಂತ ಗೊತ್ತಾಗಲು ಶನಿವಾರದ ಪ್ರಜಾವಾಣಿ ಹಾಗು ಕನ್ನಡಪ್ರಭ ಪತ್ರಿಕೆಗಳನ್ನು ಗಮನಿಸಿನೋಡಿ. ಪ್ರಜಾವಾಣಿಯ ಮುಖಪುಟದ ಲೀಡ್ ಸುದ್ದಿ ‘ಉಪಚುನಾವಣೆ ನೆಪ: ಭಿನ್ನರಿಗೆ ಬಾಗದ ಗಡ್ಕರಿ ' ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿದೆ. ಶೀರ್ಷಿಕೆಯೇ ಹೇಳುವಂತೆ ಬಿಜೆಪಿ ಹೈಕಮಾಂಡ್ ಭಿನ್ನರಿಗೆ ಮಣೆ ಹಾಕಿಲ್ಲ ಎಂಬುದು ಸುದ್ದಿಯ ಹೂರಣ.

ಕನ್ನಡಪ್ರಭದ ಮುಖಪುಟದ ಲೀಡ್ ಸುದ್ದಿ ‘ಭಿನ್ನಮತಕ್ಕೆ ಸಮ್ಮತ' ಎಂಬ ಶೀರ್ಷಿಕೆಯಲ್ಲಿ ಪ್ರಕಟಗೊಂಡಿದ್ದು, ಭಿನ್ನರ ಹೋರಾಟ ಯಶಸ್ವಿಯಾಗಿದ್ದು, ನಾಯಕತ್ವ ಬದಲಾವಣೆಗೆ ಹೈಕಮಾಂಡ್ ಮುಂದಾಗಿದೆ ಎಂಬ ಅರ್ಥದ ಸುದ್ದಿ ಪ್ರಕಟಗೊಂಡಿದೆ.

ಈ ಎರಡು ಪತ್ರಿಕೆಗಳಲ್ಲಿ ಯಾವುದಾದರೂ ಒಂದನ್ನು ಓದುವವರು ಬಚಾವ್. ಎರಡನ್ನೂ ಓದುವವರ ಕಥೆ ಏನಾಗಬೇಡ? ಯಾವುದನ್ನು ನಂಬಬೇಕು? ಯಾವುದನ್ನು ಬಿಡಬೇಕು?

ಯಾಕೆ ಈ ರೀತಿ ಒಂದು ಸುದ್ದಿ ಪರಸ್ಪರ ವಿರುದ್ಧವಾಗಿ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತವೆ ಎಂಬುದು ಪತ್ರಕರ್ತರಿಗೆ ತುಂಬಾ ಚೆನ್ನಾಗೇ ಗೊತ್ತಿರುತ್ತದೆ. ಆದರೆ ಮಾಧ್ಯಮ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಒಂದು ಸಣ್ಣ ವಿವರಣೆ ಕೊಡಲು ಯತ್ನಿಸುತ್ತಿದ್ದೇವೆ. (ನಮ್ಮ ಓದುಗರು ಇದನ್ನು ವಿಸ್ತರಿಸಬಹುದು.)

ಸಾಧಾರಣವಾಗಿ ರಾಜಕಾರಣಿಗಳು ಇಂಥ ಸಂದರ್ಭದಲ್ಲಿ ಬಹಿರಂಗವಾಗಿ ಏನನ್ನೂ ಹೇಳಲು ಬಯಸುವುದಿಲ್ಲ. ಹೇಳಿದರೂ ಎಲ್ಲಿಗೆ ಯಾವ ಸಂದೇಶ ತಲುಪಬೇಕೋ ಅಲ್ಲಿಗೆ ತಲುಪಿಸಲೆಂದೇ ಎಚ್ಚರಿಕೆಯಿಂದ ಪ್ರತಿಕ್ರಿಯೆ ನೀಡುತ್ತಾರೆ. ಹೀಗಾಗಿ ಭಿನ್ನಮತ ಶಮನವಾಯ್ತಾ ಇಲ್ವಾ? ವರಿಷ್ಠರ ಜತೆಗಿನ ಮಾತುಕತೆ ಸಂದರ್ಭದಲ್ಲಿ ನಡೆದದ್ದು ಏನು ಅನ್ನೋದು ಸುಲಭವಾಗಿ ಪತ್ರಕರ್ತರಿಗೆ ಗೊತ್ತಾಗುವುದಿಲ್ಲ.

ಅದಕ್ಕಾಗಿ ಪತ್ರಕರ್ತರು ಅವಲಂಬಿಸುವುದು ತಮ್ಮ ಸೋರ್ಸ್‌ಗಳನ್ನು. ಸೋರ್ಸ್ ಅಂದರೆ ಮಾಹಿತಿದಾರರು. ಕರ್ನಾಟಕದ ರಾಜಕಾರಣದಲ್ಲಿ ಪತ್ರಕರ್ತರಿಗೆ ಮಾಹಿತಿಗಳನ್ನು ಒದಗಿಸುವ ನಾಯಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇಂಥವರು ಹೇಳಿದ್ದನ್ನು ನಮ್ಮ ಪತ್ರಿಕೆಗಳು ತಿಳಿದುಬಂದಿದೆ, ಗೊತ್ತಾಗಿದೆ, ಅನಧಿಕೃತ ಮೂಲಗಳು ತಿಳಿಸಿವೆ, ಹೇಳಲಾಗಿದೆ, ನಂಬಲರ್ಹ ಮೂಲಗಳು ತಿಳಿಸಿವೆ ಎಂಬ ಅನಿಶ್ಚಿತ ಅರ್ಥ ಕೊಡುವ ಪದಗಳನ್ನು ಪೋಣಿಸಿ ಬರೆಯುತ್ತವೆ. (ಈ ರಾಜಕೀಯ ಮಾಹಿತಿದಾರರ ಕುರಿತು ಮುಂದೊಮ್ಮೆ ವಿವರವಾಗಿ ಚರ್ಚಿಸೋಣ.)

ಪತ್ರಕರ್ತರಿಗೆ ಅದರಲ್ಲೂ ರಾಜಕೀಯ ವರದಿಗಾರರಿಗೆ ಇಂಥ ಮಾಹಿತಿದಾರರು ಬೇಕೇಬೇಕು. ಹಾಗಂತ ಅವರನ್ನು ಪೂರ್ಣ ನಂಬುವಂತೆಯೂ ಇಲ್ಲ. ಯಾಕೆಂದರೆ ಅವರು ಈ ಮಾಹಿತಿ ಕೊಡುವ ಕಾಯಕವನ್ನೂ ಒಬ್ಬ ನಾಯಕನ, ಒಂದು ಗುಂಪಿನ ಪರವಾಗಿ ಮಾಡುತ್ತಿರುತ್ತಾನೆ. ಹೀಗಾಗಿ ಆತ ವರದಿಗಾರರನ್ನು ತಪ್ಪು ದಾರಿಗೆ ಎಳೆಯುವ ಸಾಧ್ಯತೆಗಳು ಇದ್ದೇ ಇರುತ್ತವೆ. ಹೀಗಿರುವಾಗ ವರದಿಗಾರ ಬೇರೆ ಮಾಹಿತಿಮೂಲಗಳನ್ನು ಹುಡುಕಿ ತಾನು ಕೇಳಿದ್ದು ಸರಿಯೇ ಎಂದು ಕ್ರಾಸ್ ಚೆಕ್ ಮಾಡಿಕೊಳ್ಳಬೇಕಾಗುತ್ತದೆ.

ಒಮ್ಮೊಮ್ಮೆ ಪತ್ರಕರ್ತ ತನ್ನ ಮಾಹಿತಿಮೂಲಗಳನ್ನು ಅತಿಯಾಗಿ ನಂಬಿಬಿಡುತ್ತಾನೆ; ಅದರ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿಬಿಡುತ್ತಾನೆ. ಬಹುಶಃ ಶನಿವಾರದ ಪತ್ರಿಕೆಗಳಲ್ಲಿ ಪರಸ್ಪರ ವಿರುದ್ಧ ವರದಿಗಳು ಪ್ರಕಟಗೊಂಡಿರುವುದಕ್ಕೆ ಇದೇ ಕಾರಣವಾಗಿರಬಹುದು.

ತೀರಾ ಅಪರೂಪಕ್ಕೆ ಕೆಲವು ಬಾರಿ ಪತ್ರಿಕೆಗಳು  ಬೇಕೆಂದೇ ಇಂಥ ಸುಳ್ಳು ಸುದ್ದಿಗಳನ್ನು ಬರೆಯುತ್ತವೆ. ಅದು ತೀರಾ ಅಪಾಯಕಾರಿ. ಒಂದು ಗುಂಪನ್ನು ಅಥವಾ ವ್ಯಕ್ತಿಯನ್ನು ಸಂಪ್ರೀತಗೊಳಿಸಲು ಹೀಗೆ ಮಾಡುವ ಸಾಧ್ಯತೆಗಳಿರುತ್ತವೆ. ಇದು ಆತ್ಮಘಾತಕತನ. ಯಾಕೆಂದರೆ ಓದುಗನ ಕಣ್ಣೆದುರೇ ಸತ್ಯವಿರುತ್ತದೆ, ಹಸಿಹಸಿಯಾದ ಸುಳ್ಳು ಪತ್ರಿಕೆಯ ವಿಶ್ವಾಸಾರ್ಹತೆ ಕಳೆದುಬಿಡುತ್ತದೆ.

7 comments:

 1. ಸುದ್ಧಿ ಪತ್ರಿಕೆಗಳು ಹೇಳೊದೆಲ್ಲಾ ಸತ್ಯ ಎಂಬುದು ಬಹಳಷ್ಟು ಜನರ ನಂಬಿಕೆ,ಇಂತಹ ಊಹಾತ್ಮಕ ವರದಿಗಳು ಮಾಡುವ ಪಜೀತಿ ಅಷ್ಟಿಷ್ಟಲ್ಲ.

  ReplyDelete
 2. thumba jana onde patrike yanu anusarisuthare andhare (oduthare)

  idharindagi, thumba janake idu gothe Aaguhudila.

  ReplyDelete
 3. Patrikeya vodeyaragali, sampaadaka varga
  davaragali Raajakeeya volavu ullavare. Aadare Patrikeya vachakara hitasaktiyembudoo ondide annodanna mareyabaaradu. Intippa sandarbhadalli heegella gondalapoorita, parspara vairuddhya vicharavannolagonda suddigala sristi aaguvudu sahaja. Vaachaka yavudannu kannumuchchi nambuvudu sariyalla... tanna vivechaneyante vartegallalli adakavaada hooranavenendu - between the lines- gamanisi artha maadi kollabeku. Raadiya tape bichchikonda balika yava patrakartanannu nambuva haagilla emba paristiti untagide.

  ReplyDelete
 4. ನೀವು ಹೇಳುವ ರಾಜಕೀಯ ಮಾಹಿತಿಯನ್ನು ಇನ್ನಷ್ಟು ಸ್ಪಷ್ಟವಾಗಿ ಹೇಳಬೇಕೆಂದರೆ, ವಿಶ್ವೇಶ್ವರ ಭಟ್ಟರು ಮೊದಲಿಂದಲೂ ಅನಂತಕುಮಾರ್‌ ಅವರ ಆಪ್ತರು. ಈ ಬಾರಿ ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ಧ ನಡೆದ ಭಿನ್ನಮತದ ಚುಕ್ಕಾಣಿ ಹಿಡಿದಿದ್ದೂ ಇದೇ ಅನಂತಕುಮಾರ್‌ ಹಾಗೂ ಈಶ್ವರಪ್ಪನವರು. ಬಹುಶಃ ಭಟ್ಟರಿಗೆ ಮಾಹಿತಿ ಅನಂತಕುಮಾರ್‌ ಪಾಳಯದಿಂದಲೇ ಬಂದಿರಬೇಕು. ಅದರ ಪರಿಣಾಮ ಈ ಹೆಡ್ಡಿಂಗ್‌...ಅಷ್ಟೇ.

  ReplyDelete
 5. ನೀವು ಹೆಚ್ಚಾಗಿ ಕನ್ನಡ ಪ್ರಭ , ವಿಶ್ವೇಶ್ವರ ಭಟ್ಟ ರನ್ನೇ ಉದ್ದೇಶಿಸಿ ಬರಿತಿರಲ್ವಾ? ಬೇರೆ ಪತ್ರಿಕೆ, ಬೇರೆ ಸಂಪಾದಕರ ಪರಿಚಯ ಇಲ್ವೆ ನಿಮಗೆ?

  ReplyDelete
 6. ನೀವು ತಪ್ಪು ತಿಳಿದಿದ್ದೀರಿ.ಅನಂತ ಅವಕಾಶ ಅಂತ ಬರೆದಾಗಲೇ ಸುದ್ದಿಯ ಮೂಲ ಯಾವುದು ಅಂತ ಗೊತ್ತಾಗತ್ತೆ.ಇವತ್ತು ವಿಶ್ವಾಸಾರ್ಹ ಮೂಲಗಳೇ ಆಗಬೇಕಿಲ್ಲ.ನಾವು ನೀವು ಕೂಡಾ ಮೂಲಗಳಾಗಬಹುದು.ಸಂಪಾದಕರ ಜೊತೆ ನಿಮ್ಮ ಸಂಬಂಧ ಹೇಗಿದೆ ಅನ್ನುವುದನ್ನು ಅದು ಅವಲಂಬಿಸಿರುತ್ತೆ.

  ReplyDelete