Wednesday, May 11, 2011

ಬ್ರಹ್ಮಾಂಡವನ್ನು ಹೊತ್ತುಕೊಂಡಿರುವ ಜೀ ಮುಖ್ಯಸ್ಥರಿಗೆ ಇನ್ನೊಂದು ಪತ್ರ...


ನಿಮ್ಮ ಜೀ ಕನ್ನಡ ವಾಹಿನಿಗೆ ಐದು ವರ್ಷಗಳು ತುಂಬಿವೆ. ಒಂದು ಕನ್ನಡ ಚಾನಲ್ ಯಾವುದೇ ಅಡೆತಡೆಯಿಲ್ಲದೆ ಐದುವರ್ಷ ಪೂರೈಸೋದು ಸಣ್ಣ ಮಾತಲ್ಲ. ಈ ವಾಹಿನಿಯನ್ನು ಕಟ್ಟಿಬೆಳೆಸಿದ ಎಲ್ಲರಿಗೂ ಅಭಿನಂದನೆಗಳು. ವಿಶೇಷವಾಗಿ ಇದನ್ನು ಮುನ್ನಡೆಸಿದ ಮುಖ್ಯಸ್ಥರುಗಳಿಗೆ ಹಾರ್ದಿಕ ಶುಭಾಶಯಗಳು. ವಾಹಿನಿಯು ನಿಜವಾದ ಅರ್ಥದಲ್ಲಿ ಕನ್ನಡಿಗರ ಕಣ್ಮಣಿಯಾಗಿ ಬೆಳೆಯಲಿ ಎಂಬುದು ನಮ್ಮೆಲ್ಲರ ಹಾರೈಕೆ.

ನಿಮ್ಮ ಈ ಸಂತೋಷದ, ಸಡಗರದ ಸಮಯದಲ್ಲೂ ವಿಷಾದದ ಮಾತುಗಳನ್ನು ಹೇಳುವುದು, ಅದನ್ನು ನೀವು ಕೇಳುವುದು ಕಿರಿಕಿರಿ ಅನ್ನಿಸಬಹುದು. ಆದರೆ ಬೇರೆ ಆಯ್ಕೆಗಳಿಲ್ಲ, ಕೆಲವು ಮಾತುಗಳನ್ನು ಹೇಳಲೇಬೇಕು.

ನಾವು ಪ್ರಜ್ಞಾವಂತ ಕನ್ನಡಿಗರು ನಿಮಗೆ ಈ ಹಿಂದೆ ನೂರಾರು ಪತ್ರಗಳನ್ನು ಬರೆದಿದ್ದೆವು. ನಮ್ಮ ಆಕ್ಷೇಪಣೆ ಇದ್ದದ್ದು ನಿಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಕಾರ್ಯಕ್ರಮದ ಬಗ್ಗೆ. ನಿಮಗೆ ಪತ್ರಗಳನ್ನು ಬರೆದವರಲ್ಲಿ ಎಲ್ಲ ವಲಯದ, ವರ್ಗದ ಜನರಿದ್ದರು. ಈ ಪತ್ರಗಳಿಗೆ ಪ್ರತಿಯಾಗಿ ಮೊನ್ನೆ ಬದುಕು ಜಟಕಾ ಬಂಡಿ ಎಂಬ ರಿಯಾಲಿಟಿ ಶೋ ಒಂದರಲ್ಲಿ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ನಡೆಸುವ ನರೇಂದ್ರ ಶರ್ಮ ಎಂಬುವವರಿಂದ ಪ್ರತಿಕ್ರಿಯೆ, ಸ್ಪಷ್ಟನೆ ಕೊಡಿಸುವ ಪ್ರಯತ್ನ ನಡೆಯಿತು.

ಕಾರ್ಯಕ್ರಮದ ಕಡೆಯಲ್ಲಿ ಒಂದು ಸಾಲು ಹಿನ್ನೆಲೆಯಾಗಿ ಕೇಳುತ್ತದೆ. ಈ ಕಾರ್ಯಕ್ರಮಕ್ಕೆ ಅಂತರ್ಜಾಲದಲ್ಲಿ ಗುರೂಜಿ ನರೇಂದ್ರ ಬಾಬು ಶರ್ಮ ಅವರ ವಿರುದ್ಧ ಹಾಗು ಜೀ ಕನ್ನಡ ವಾಹಿನಿಯ ವಿರುದ್ಧ ನಕಾರಾತ್ಮಕ ಆಂದೋಲನ ನಡೆಸುತ್ತಿರುವವರನ್ನೂ ಆಹ್ವಾನಿಸಲಾಗಿತ್ತು. ಆದರೆ ಅವರು ಯಾರು ಬರಲಿಲ್ಲ. ಆದರೂ ಗುರೂಜಿಯವರು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ ಶ್ರೇಷ್ಠತೆ ಮೆರೆದರು...

ನಿಮಗೆ ಈ ಹಿಂದೆ ಬರೆದ ಪತ್ರವೂ ಯಾವುದೇ ನೈತಿಕ ಚೌಕಟ್ಟನ್ನು ಉಲ್ಲಂಘಿಸದ, ಸಭ್ಯ ಭಾಷೆಯ ವಿನಯಪೂರ್ವಕ ಪತ್ರವಾಗಿತ್ತು. ಅದನ್ನು ನಿಮಗೆ ಮತ್ತೊಮ್ಮೆ ನೆನಪಿಸಬಯಸುತ್ತೇವೆ. ನಮ್ಮ ವಿರೋಧ ಇರುವುದು ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಅಸಂವಿಧಾನಿಕ, ಅನೈತಿಕ, ಕೀಳು ಅಭಿರುಚಿಯ, ಅಸಹ್ಯ ಹುಟ್ಟಿಸುವ, ಮೌಢ್ಯವನ್ನು ಹೆಚ್ಚಿಸುವ, ಭೀತಿ ಹುಟ್ಟಿಸುವ ನರೇಂದ್ರ ಶರ್ಮ ಅವರ ಪ್ರವಚನಗಳಿಗೇ ಹೊರತು, ನಿಮ್ಮ ವಾಹಿನಿಯ ವಿರುದ್ಧವಲ್ಲ. ನೀವು ಸುಖಾಸುಮ್ಮನೆ ಈ ಆರೋಪವನ್ನು ಹೊರಿಸಿದ್ದೀರಿ. ಮಾತ್ರವಲ್ಲ, ನರೇಂದ್ರ ಶರ್ಮ ಅವರ ಅವಿವೇಕದ ಕ್ರಿಯೆಗಳನ್ನು ನಿಮ್ಮ ಬೆನ್ನ ಮೇಲೆ ಹೊತ್ತುಕೊಂಡಿದ್ದೀರಿ. ನೀವಾಗಿಯೇ ನೀವು ಆರೋಪಿಯ ಸ್ಥಾನವನ್ನು ಹೇರಿಕೊಳ್ಳುವ ಅಗತ್ಯವಾದರೂ ಏನಿತ್ತು, ನಮಗಂತೂ ಗೊತ್ತಾಗುತ್ತಿಲ್ಲ. ಜೀವಪರ, ವೈಜ್ಞಾನಿಕ ನಿಲುವುಗಳನ್ನು ಸಮರ್ಥಿಸುವವರಿಗೆ ನೀವು ಈಗ ಅನಾಮತ್ತಾಗಿ ಹೊತ್ತುಕೊಂಡಿರುವ ಬ್ರಹ್ಮಾಂಡದ ಹೊರೆ ದುಬಾರಿ ಅನ್ನಿಸುತ್ತದೆ.

ಇನ್ನು ನಮ್ಮ ಆಂದೋಲನವನ್ನು ನಕಾರಾತ್ಮಕ ಎಂದು ನೀವು ಕರೆದಿದ್ದೀರಿ. ಮುಗ್ಧ ಜನರನ್ನು ಪ್ರಳಯದ ಹೆಸರಿನಲ್ಲಿ ಸಾವಿನ ಭೀತಿಗೆ ನೂಕುತ್ತಿರುವ ಕಪಟ ಜ್ಯೋತಿಷಿಗಳ ವಿರುದ್ಧ ಧ್ವನಿಯೆತ್ತುವುದು ನಿಮಗೆ ನಕಾರಾತ್ಮಕ ಅನ್ನಿಸಿತೇ? ಇವತ್ತಿನಿಂದ ಜಗತ್ತಿನ ಸಮಸ್ತ ಜನರಲ್ಲೂ ರೋಗರುಜಿನಗಳು ಶುರುವಾಗುತ್ತದೆ (ಮಾರ್ಚ್೨೩, ಬೃಹತ್ ಬ್ರಹ್ಮಾಂಡ) ಎಂದು ಹೇಳುವ ರೋಗಿಷ್ಠ ವ್ಯಕ್ತಿಯ ವಿರುದ್ಧ ಮಾತನಾಡಿದರೆ ಅದು ನಕಾರಾತ್ಮಕವಾಗುತ್ತದೆಯೇ? ಟಿವಿಗಳಂಥ ಸಾರ್ವಜನಿಕ ಹೊಣೆಗಾರಿಕೆಯ ಮಾಧ್ಯಮಗಳಲ್ಲಿ ಬಳಸುವ ಭಾಷೆ ಎಲ್ಲೆ ಮೀರಬಾರದು ಎಂದು ವಿನಂತಿಸಿದರೆ ಅದು ನಕಾರಾತ್ಮಕ ಧೋರಣೆಯೇ? ಬೆಳಿಗ್ಗೆ ಎದ್ದ ಕೂಡಲೇ ಹಜಾಮರ ಮುಖ ನೋಡಬಾರದು ಎಂದು ಒಂದು ಜಾತಿಯ ಜನರನ್ನು ವಿನಾಕಾರಣ ನಿಂದಿಸಿ, ಅಪಮಾನಿಸಿದಾಗ ಅದನ್ನು ಪ್ರತಿಭಟಿಸುವುದು ನಕಾರಾತ್ಮಕ ಆಂದೋಲನವೇ?

ನರೇಂದ್ರ ಶರ್ಮ ಅವರಿಂದ ಸ್ಪಷ್ಟನೆ ಕೊಡಿಸುವ ನಿಮ್ಮ ಪ್ರಯತ್ನವೇ ಒಂದರ್ಥದಲ್ಲಿ ವಿಫಲಾಗಿದೆ. ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂದು ತನಗೆ ತಾನೇ ಹೇಳಿಕೊಂಡ ನರೇಂದ್ರ ಶರ್ಮ ಅವರು ತಾವು ಬಳಸುವ ಕೀಳು ಅಭಿರುಚಿಯ ಭಾಷೆಯನ್ನು ಬಿಡುವುದಿಲ್ಲ ಎಂದು ನಿಮ್ಮ ವೇದಿಕೆಯಲ್ಲೇ ಘಂಟಾಘೋಷವಾಗಿ ಹೇಳಿ, ನಿಮ್ಮ ವಾಹಿನಿಯ ಘನತೆಗೇ ಕುಂದುತಂದಿದ್ದಾರೆ.

ನಿಮ್ಮ ಕಚೇರಿಯಲ್ಲಿ ನೂರಾರು ಹೆಣ್ಣುಮಕ್ಕಳು ಕೆಲಸ ಮಾಡುತ್ತಾರೆ. ನಿಮ್ಮ-ನಮ್ಮ ಮನೆಗಳಲ್ಲೂ ಹೆಣ್ಣುಮಕ್ಕಳಿದ್ದಾರೆ. ಎಲ್ಲರೂ ಸೀರೆ ಉಡುವುದಿಲ್ಲ. ಬಹುತೇಕರು ಚೂಡಿದಾರ್‌ಗಳನ್ನು ಧರಿಸುತ್ತಾರೆ. ಮತ್ತೆ ಹಲವರು ಜೀನ್ಸ್ ಪ್ಯಾಂಟುಗಳನ್ನು ತೊಡುತ್ತಾರೆ. ಇವರೆಲ್ಲರಿಗೂ ಗರ್ಭಕೋಶದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿದ್ದಾರೆ ನರೇಂದ್ರ ಶರ್ಮ. ಇದನ್ನು ಕೇಳಿದ ಮೇಲೂ ನಿಮ್ಮ ಆತ್ಮಸಾಕ್ಷಿ ಕೆರಳಲಿಲ್ಲವೆಂದರೆ ಯಾರು ಏನನ್ನು ಮಾಡಲು ಸಾಧ್ಯ? ನಿದ್ದೆ ಹೋದವರನ್ನು ಎಬ್ಬಿಸಬಹುದು, ನಿದ್ದೆ ಮಾಡಿದಂತೆ ನಟಿಸುತ್ತಿರುವವರನ್ನು ಎಬ್ಬಿಸಬಹುದೇ?

ನರೇಂದ್ರ ಶರ್ಮ ನೀಡುತ್ತಿದ್ದ ಉತ್ತರಗಳಿಂದ ಘಾಸಿಗೊಂಡಂತೆ, ಆಘಾತಗೊಂಡಂತೆ, ಆಶ್ಚರ್ಯಗೊಂಡಂತೆ, ಹೇಸಿಗೆ ಪಟ್ಟುಕೊಂಡಂತೆ ಹಾವಭಾವ ತೋರುತ್ತಿದ್ದ, ಮಾತನಾಡುತ್ತಿದ್ದ ನಿರೂಪಕಿ ಮಾಳವಿಕಾ ಕಾರ್ಯಕ್ರಮದ ಕಡೆಯ ಭಾಗದಲ್ಲಿ ನರೇಂದ್ರ ಶರ್ಮ ಅವರನ್ನು ಅಭಿನಂದಿಸಿದ್ದು ಯಾವ ಪುರುಷಾರ್ಥಕ್ಕೆ? ಏನಿದರ ಮರ್ಮ? ಆಕೆಗೆ ಹಾಗೆ ಮಾಡಲು ನಿರ್ದೇಶನ ನೀಡಲಾಗಿತ್ತೆ?

ನಿಮ್ಮ ಬದುಕು ಜಟಕಾ ಬಂಡಿಯ ಸಂವಾದಕ್ಕೆ ಎರಡು ದಿನ ಮೊದಲೇ ನಿಮಗೆ ಪತ್ರ ಬರೆದವರಿಗೆ ಆಹ್ವಾನ ನೀಡಬಹುದಿತ್ತಲ್ಲ? ಯಾಕೆ ನೀಡಲಿಲ್ಲ? ಯಾಕೆ ಬೆರಳೆಣಿಕೆಯ ಕೆಲವರಿಗೆ ಚಿತ್ರೀಕರಣ ನಡೆಯುವ ದಿನವೇ ಕೇವಲ ಎರಡು ಗಂಟೆ ಮುಂಚಿತವಾಗಿ ತಿಳಿಸಲಾಯ್ತು? ಆದರೂ ಯಾರೂ ಬರಲಿಲ್ಲ ಎಂದು ಯಾಕೆ ನಿಮ್ಮನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ? ಇದೆಲ್ಲವೂ ಬಹಳ ಚೆನ್ನಾಗಿಯೇ ಅರ್ಥವಾಗುತ್ತದೆ.

ಬದುಕು ಜಟಕಾ ಬಂಡಿಯಲ್ಲಿ ಮಾಳವಿಕಾ ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ನರೇಂದ್ರ ಶರ್ಮ ನೀಡಿದ್ದು ದಿಟ್ಟ ಉತ್ತರ ಎಂದು ದಟ್ಸ್ ಕನ್ನಡದಲ್ಲಿ ವರದಿಯಾಗಿದೆ. ಅದು ದಿಟ್ಟ ಉತ್ತರವಲ್ಲ, ವಿತಂಡವಾದ. ಒಮ್ಮೆ ಇಡೀ ಕಾರ್ಯಕ್ರಮವನ್ನು ಮತ್ತೊಮ್ಮೆ ನೋಡಿ. ಈತ ಜ್ಯೋತಿಷಿಯೂ ಅಲ್ಲ, ಧರ್ಮದರ್ಶಿಯೂ ಅಲ್ಲ, ವಿಜ್ಞಾನಿಯೂ ಅಲ್ಲ.  ಜನರ ನಂಬುಗೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಯಕಶ್ಚಿತ್ ವಂಚಕ ಎಂಬುದು ಸಾಬೀತಾಗುತ್ತದೆ. ಸರಿಯಾಗಿ ದೋಷಗಳಿಲ್ಲದಂತೆ ಒಂದು ವಾಕ್ಯ ಕನ್ನಡವನ್ನೂ ಮಾತನಾಡಲು ಬಾರದ ವ್ಯಕ್ತಿ ಈತ.

ಕಡೆಯ ಬಾರಿ ನಿಮ್ಮಲ್ಲಿ ಅತ್ಯಂತ ವಿನಯದಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ: ದಯವಿಟ್ಟು ಈ ಮೂರನೇ ದರ್ಜೆ ಕಾರ್ಯಕ್ರಮವನ್ನು ನಿಲ್ಲಿಸಿ.

ಐದು ವರ್ಷ ಪೂರೈಸಿದ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇವೆ.

Tuesday, May 10, 2011

ಬದುಕು ಜಟಕಾ ಬಂಡಿಯಲ್ಲಿ ಧರ್ಮದರ್ಶಿ ನರೇಂದ್ರ ಬಾಬು ಶರ್ಮ ಅನಾವರಣ...

 ಸ್ವಲ್ಪ ದಿನ ರಜೆ ತಗೋತೀವಿ ಅಂದಿದ್ವಿ. ಆದರೆ ಈಗ ಬರೀಲೇಬೇಕು. ಬದುಕು ಜಟಕಾ ಬಂಡಿಯಲ್ಲಿ ನರೇಂದ್ರ ಶರ್ಮ ಅವರ ದರ್ಶನವಾಗಿದೆ. ಅದು ನಮಗಾಗಿ ನಡೆದ ಕಾರ್ಯಕ್ರಮ. ನೀವು, ನಾವೆಲ್ಲ ಬರೆದ ನೂರಾರು ಪತ್ರಗಳಿಗೆ ಉತ್ತರವಾಗಿ ನಡೆದ ಕಾರ್ಯಕ್ರಮ. ಹೀಗಾಗಿ ಆ ಕುರಿತು ಬರೆಯಲೇಬೇಕು.

ನಿನ್ನೆ ರಾತ್ರಿ ೯ ಗಂಟೆಗೆ ಪ್ರಸಾರವಾದ ಬದುಕು ಜಟಕಾ ಬಂಡಿಯಲ್ಲಿ ಮಾಳವಿಕಾ ಅವಿನಾಶ್ ಅವರು ನರೇಂದ್ರ ಶರ್ಮ ಜತೆ ಸಂವಾದ ನಡೆಸಿದರು, ಜತೆಗೊಂದಿಷ್ಟು ಮಂದಿ ವೀಕ್ಷಕರು. ಇದು ಅತ್ಯಂತ ವ್ಯವಸ್ಥಿತವಾಗಿ ನರೇಂದ್ರ ಶರ್ಮ ಅವರನ್ನು ಸಮರ್ಥಿಸಲು ನಡೆದ ಕಾರ್ಯಕ್ರಮ. ಆದರೆ, ಇಂಥ ಕಾರ್ಯಕ್ರಮವನ್ನೂ ಸಹ ಜಾಣತನದಿಂದ ಬಳಸಿಕೊಳ್ಳಲು ಶರ್ಮ ವಿಫಲರಾದರು. ಅವರ ಬಾಯಿಹರುಕುತನ ಅವರ ಇನ್ನಷ್ಟು ವಿಕೃತಿಗಳನ್ನು ಅನಾವರಣಗೊಳಿಸಿತು.

ಪ್ರಳಯ ತಪ್ಪಿಸಲು ಐದು ಎಣ್ಣೆಯ ದೀಪಗಳನ್ನು ಹಚ್ಚಲು ಶರ್ಮ ನೀಡಿದ ಕರೆ, ಅದಕ್ಕೆ ಕರ್ನಾಟಕದ ಮುಗ್ಧ ಹೆಣ್ಣುಮಕ್ಕಳು ಪ್ರತಿಸ್ಪಂದಿಸಿದ ರೀತಿಯನ್ನು ಗಮನಿಸಿ, ಗಾಬರಿಯಾಗಿ ನಾವು ಮೊದಲು ಈ ವ್ಯಕ್ತಿಯ ಕುರಿತು ಬರೆದಿದ್ದೆವು. ನಂತರದ ದಿನಗಳಲ್ಲಿ ನರೇಂದ್ರ ಶರ್ಮ ಅವರನ್ನು ನಾವೆಲ್ಲರೂ ಸೇರಿ ಬಯಲುಗೊಳಿಸುತ್ತಾ ಹೋದೆವು, ಕನ್ನಡದ ಬ್ಲಾಗರ್‌ಗಳು ಒಬ್ಬರಾದ ಮೇಲೊಬ್ಬರಂತೆ ಬೃಹತ್ ಬ್ರಹ್ಮಾಂಡದ ಠೊಳ್ಳುತನವನ್ನು ಬಹಿರಂಗಪಡಿಸುತ್ತ ಬಂದರು. ಫೇಸ್‌ಬುಕ್‌ನಲ್ಲೊಂದು ಗುಂಪನ್ನೂ ಸೃಷ್ಟಿಸಿದೆವು. ನೂರಾರು ಪತ್ರಗಳು ಜೀ ಟಿವಿಗೆ ಹೋದ ನಂತರ ಅವರು ಏನನ್ನಾದರೂ ಮಾಡಲೇಬೇಕಿತ್ತು. ಮಾಡಿದ್ದು ಬದುಕು ಜಟಕಾ ಬಂಡಿ. ನರೇಂದ್ರ ಶರ್ಮ ಅವರೇ ಅದರ ಸಾಹೇಬ.

ನಿಜ, ಇದು ಜೀ ಟಿವಿಯವರು ನರೇಂದ್ರ ಶರ್ಮ ವಿರುದ್ಧದ ಎದ್ದಿರುವ ಆಕ್ರೋಶವನ್ನು ತಣ್ಣಗಾಗಿಸಲು ನಡೆಸಿದ ಪ್ರಯತ್ನ. ನಮ್ಮ ಪ್ರಶ್ನೆಗಳಿಗೆ ನರೇಂದ್ರ ಶರ್ಮ ಅವರಿಂದಲೇ ಉತ್ತರ ಕೊಡಿಸಿ ತೇಪೆ ಹಚ್ಚುವ ಯತ್ನ. ಆದರೆ ಬದುಕು ಜಟಕಾ ಬಂಡಿ ನಡೆಸಿಕೊಡುವ ಮಾಳವಿಕಾ ಅವಿನಾಶ್ ನಾವು ಮಾಡಬೇಕು ಎಂದುಕೊಂಡಿದ್ದನ್ನು ತಾವೇ ಮಾಡಿದ್ದಾರೆ. ನರೇಂದ್ರ ಶರ್ಮ ಅವರನ್ನು ಇನ್ನಷ್ಟು ಎಕ್ಸ್‌ಪೋಸ್ ಮಾಡಿದ್ದಾರೆ. ನರೇಂದ್ರ ಶರ್ಮಾ ಮಾತುಗಳನ್ನು ಕೇಳಿ ಮಾಳವಿಕಾ ಎಷ್ಟೋ ಸಲ ಬೆಚ್ಚಿ ಬಿದ್ದರು, ಸಿಟ್ಟಿಗೆದ್ದರು, ಪರಮಾಶ್ಚರ್ಯದ ಉದ್ಘಾರ ಹೊರಡಿಸಿದರು, ಹತಾಶೆಯಿಂದ ಸುಮ್ಮನಾದರು. ಮಾಳವಿಕಾ ಕನ್ನಡದ ಒಬ್ಬ ಸಭ್ಯ, ಸುಸಂಸ್ಕೃತ ಹೆಣ್ಣುಮಗಳಾಗಿ ಪ್ರಶ್ನೆಗಳನ್ನು ಕೇಳಿದರು. ಕೆಲವು ಬಾರಿ ಅನುನಯದಿಂದ, ಮತ್ತೆ ಕೆಲವೊಮ್ಮೆ ಅನುಕಂಪದಿಂದ. ಉತ್ತರಗಳು ಮಾತ್ರ ದುರಹಂಕಾರದ್ದು, ಠೊಳ್ಳುತನದ್ದು, ವಿತಂಡವಾದದ್ದು...

ನಿನ್ನೆ ಈ ಸಂವಾದವನ್ನು ನೋಡಿದವರಿಗೆ ಈ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮವನ್ನು ಯಾಕೆ ವಿರೋಧಿಸಲಾಗುತ್ತಿದೆ ಎಂಬುದು ಬಹಳ ಸ್ಪಷ್ಟವಾಗಿ ಅರ್ಥವಾಗಿರುತ್ತದೆ. ಹೀಗೆ ಅರ್ಥ ಮಾಡಿಸುವ ಕೆಲಸವನ್ನು ಮಾಳವಿಕಾ ತಮಗೇ ಗೊತ್ತಿಲ್ಲದಂತೆ ಮಾಡಿದ್ದಾರೆ. ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ.

ಇನ್ನು ಈ ಸಂವಾದದಲ್ಲಿ ನರೇಂದ್ರ ಶರ್ಮ ಹೇಳಿದ್ದೇನು? ಇಡೀ ಸಂವಾದದಲ್ಲಿ ನಾವು ಜೀ ಟಿವಿ ಮುಖ್ಯಸ್ಥರಿಗೆ ಬರೆದ ಬಹಿರಂಗ ಆಗ್ರಹ ಪತ್ರದ ಪ್ರಶ್ನೆಗಳನ್ನು ಯಥಾವತ್ತಾಗಿ ನರೇಂದ್ರ ಶರ್ಮ ಅವರಿಗೆ ಕೇಳಲಾಗುತ್ತಿತ್ತು. ಮಾಳವಿಕಾ ನಮ್ಮ ಪತ್ರದ ಒಂದು ಪ್ರತಿಯನ್ನು ಕೈಯಲ್ಲಿ ಇಟ್ಟುಕೊಂಡೇ ಕುಳಿತಿದ್ದರು. ನರೇಂದ್ರ ಶರ್ಮ ತನ್ನ ಮಾಮೂಲಿ ಉಡಾಫೆಯ ಶೈಲಿಯಲ್ಲೇ ಉತ್ತರಿಸುತ್ತಾ ಹೋದರು.

ಸಲ್ವಾರ್ ಕಮೀಜ್ ಧರಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎಂದು ನಾನು ಹೇಳಿದ್ದು ನಿಜ. ಹೆಣ್ಣುಮಕ್ಕಳು ಜೀನ್ಸ್ ಪ್ಯಾಂಟ್, ಚೂಡಿದಾರ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ಈ ಡ್ರೆಸ್‌ಗಳನ್ನು ಹಾಕಿಕೊಂಡರೆ ಗಾಳಿಯಾಡೋದಿಲ್ಲ. ಕುಜ ಪ್ರಭಾವ ಬೀರೋದು ಗರ್ಭದ ಮೇಲೆ. ಹೀಗಾಗಿ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎಂದು ನರೇಂದ್ರ ಶರ್ಮ ಯಾವುದೇ ಭಿಡೆ ಇಲ್ಲದೆ ಹೇಳಿದರು.

ಇದರಿಂದ ಗಾಬರಿಗೊಂಡ ಮಾಳವಿಕಾ ನಾನು ೩೦ ವರ್ಷದಿಂದ ಚೂಡಿದಾರ್ ಹಾಕುತ್ತಾ ಬಂದಿದ್ದೇನೆ, ನನಗೆ ಕ್ಯಾನ್ಸರ್ ಬಂದಿಲ್ಲವಲ್ಲ? ಎಂದು ಸಿಟ್ಟಿನಿಂದಲೇ ಪ್ರಶ್ನಿಸಿದರು.

ಯಾಕೆ ನೀವು ಮುಂಡೇವಾ ಇತ್ಯಾದಿಯಾಗಿ ಬೈಯುತ್ತೀರಾ, ಅಸಭ್ಯವಾಗಿ ಮಾತನಾಡುತ್ತೀರಾ ಎಂದು ಕೇಳಿದರೆ ನರೇಂದ್ರ ಶರ್ಮ ಅವರದು ಮಾಮೂಲಿ ಒರಟು ಉತ್ತರ. ಅದು ನನ್ನ ಶೈಲಿ, ನಾನು ಇರೋದೇ ಹೀಗೆ ಇತ್ಯಾದಿ. ನೀವು ಇದನ್ನೆಲ್ಲ ಮನೆಯಲ್ಲಿ ಇಟ್ಟುಕೊಳ್ಳಿ, ಸಾರ್ವಜನಿಕ ಟಿವಿ ಕಾರ್ಯಕ್ರಮಗಳಲ್ಲಿ ಹೀಗೆ ಮಾತನಾಡೋದು ಸರೀನಾ ಎನ್ನುತ್ತಾರೆ ಮಾಳವಿಕಾ. ಇಲ್ಲೂ ನಾನು ಹೀಗೇ ಮಾತಾಡೋದು ಎಂಬ ದುರಹಂಕಾರದ ಉತ್ತರ ಶರ್ಮಾ ಅವರದು. ನಿಮ್ಮ ಹತ್ರ ಬೈಸಿಕೊಳ್ಳೋಕೆ ನಮಗೇನು ಹಣೆಬರೆಹ ಎನ್ನುತ್ತಾರೆ ಮಾಳವಿಕಾ. ನೀವ್ಯಾಕೆ ಕುಂಬಳಕಾಯಿ ಕಳ್ಳ ಅಂದ್ರೆ ಹೆಗಲು ಮುಟ್ಟಿಕೊಂಡು ನೋಡ್ಕೋತೀರಾ ಎಂದು ಮಾಳವಿಕಾ ಅವರನ್ನೇ ಗದರಿದರು ಸನ್ಮಾನ್ಯ ಶರ್ಮ ಅವರು.

ಸಾರ್ವಜನಿಕ ಜೀವನದಲ್ಲಿ ಕೆಲವು ಶಿಷ್ಟಾಚಾರಗಳನ್ನು ಪಾಲಿಸಬೇಕು. ನಮ್ಮ ಭಾಷೆಯ ಮೇಲೆ ಹತೋಟಿ ಇರಬೇಕು. ಅದು ಸಂಸ್ಕಾರವಲ್ಲವೇ ಎಂದು ಮಾಳವಿಕಾ ಪ್ರಶ್ನಿಸಿದರೆ ನರೇಂದ್ರ ಶರ್ಮ ಏನನ್ನೋ ಮಾತನಾಡಲು ಹೋಗಿ ಗೊಂದಲವೆಬ್ಬಿಸುತ್ತಾರೆ. ಸಹನೆಯಿಂದಲೇ ಮಾತನಾಡುತ್ತಿದ್ದ ಮಾಳವಿಕಾ ತಾಳ್ಮೆ ಕಳೆದುಕೊಂಡಹಾಗೆ ಕಾಣುತ್ತದೆ.

ತಾನು ಮದುವೆಯಾಗಿಲ್ಲ, ಆಗೋದು ಇಲ್ಲ. ಆದರೆ ಬ್ರಹ್ಮಾಚಾರಿಯಲ್ಲ ಎಂದು ನರೇಂದ್ರ ಶರ್ಮ ಹೇಳಿಕೊಳ್ಳುತ್ತಾರೆ. ಯಾಕೆ ಹೀಗೆ ಎಂದರೆ, ಚಿನ್ನದ ಪಂಜರ, ಹಕ್ಕಿ... ಇತ್ಯಾದಿ ಏನನ್ನೋ ಹೇಳಲು ಹೊರಡುತ್ತಾರೆ. ಇತರ ಧರ್ಮಗುರುಗಳನ್ನು ನಿಂದಿಸಲು ಆರಂಭಿಸುತ್ತಾರೆ. ಮಾಳವಿಕಾ ಅದಕ್ಕೆ ಅವಕಾಶ ನೀಡುವುದಿಲ್ಲ. ನಿಮ್ಮ ವಿಷಯ ಮಾತ್ರ ಹೇಳಿ, ಬೇರೆಯವರ ವಿಷಯ ಬೇಡ ಎಂದು ತಾಕೀತು ಮಾಡುತ್ತಾರೆ.

ಪ್ರಳಯವೆಲ್ಲ ನಡೆದು, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿಯುತ್ತದೆ ಎಂದು ನಾನೆಲ್ಲೂ ಹೇಳಿಲ್ಲ. ಉತ್ತರ ಭಾಗವೆಲ್ಲ ಮುಳುಗಿ ದಕ್ಷಿಣ ಮಾತ್ರ ಉಳಿಯುತ್ತದೆ ಎಂದು ಮಾತ್ರ ಹೇಳಿದ್ದೇನೆ ಎನ್ನುತ್ತಾರೆ ನರೇಂದ್ರ ಶರ್ಮ. ಆದರೆ ಬೆಳಗಾವಿಯ ಒಂದು ಹಳ್ಳಿ ದೇಶದ ರಾಜಧಾನಿಯಾಗುತ್ತದೆ ಎನ್ನುತ್ತಾರೆ. ಪ್ರಳಯ ನಿಜವಾಗಲೂ ಆಗುತ್ತಾ ಎಂದರೆ ಈಗ ಆಗ್ತಾ ಇರೋದು ಏನು? ಜಪಾನ್‌ನಲ್ಲಿ ಸುನಾಮಿ ಆಗುತ್ತೆ ಎಂದು ನಾನು ಹೇಳಿರಲಿಲ್ಲವೇ ಎಂದು ಪ್ರಶ್ನಿಸುತ್ತಾರೆ. ಮಾಳವಿಕಾ ಸಾಕಷ್ಟು ಪ್ರತಿರೋಧದ ಪ್ರಶ್ನೆಗಳನ್ನು ಎಸೆಯುತ್ತಾರೆ. ಜಪಾನ್‌ನಲ್ಲಿ ಹಿಂದೆ ನೂರಾರು ಬಾರಿ ಭೂಕಂಪ ಆಗಿದೆ. ಸುನಾಮಿ ಕೂಡ ಆಗಿದೆ. ನೀವು ಹೇಳಿದ್ದಕ್ಕೆ ಆಗಬೇಕಿಲ್ಲ ಎಂದು ಹೇಳಿದರೂ ಶರ್ಮಾ ಒಪ್ಪುವುದಿಲ್ಲ.

ಸುನಾಮಿ ಅಂದ್ರೆ ಏನು, ಸ್ವಲ್ಪ ವೈಜ್ಞಾನಿಕವಾಗಿ ಹೇಳಿ ಎಂದರೆ ಮೊದಲು ಸುನಾಮಿಗೂ ಭೂಮಿಗೂ ಸಂಬಂಧವೇ ಇಲ್ಲ ಎನ್ನುತ್ತಾರೆ. ನಂತರ ಭೂಮಿ, ಪಾತಾಳ, ಪ್ಲೇಟು, ಸೂರ್ಯ ಕಿರಣ ಇತ್ಯಾದಿ ಏನನ್ನೋ ಹೇಳಿ ಮುಗಿಸುತ್ತಾರೆ. ಇದನ್ನು ಸೈನ್ಸ್ ಹೇಳುತ್ತಾ ಎಂದು ಮಾಳವಿಕಾ ಪ್ರಶ್ನಿಸಿದರೆ, ಸೈನ್ಸ್ ಯಾಕೆ, ನಾನು ಹೇಳ್ತೀನಿ ಎಂಬ ಉದ್ಧಟತನದ ಉತ್ತರ.

ನರೇಂದ್ರ ಶರ್ಮ ತನ್ನನ್ನು ತಾನು ಜ್ಯೋತಿಷಿ ಅಲ್ಲವೆಂದು ಈ ಕಾರ್ಯಕ್ರಮದಲ್ಲಿ ಘೋಷಿಸಿಕೊಂಡರು. ಬದಲಾಗಿ ಧರ್ಮದರ್ಶಿ ಎಂದು ಕರೆದುಕೊಂಡರು. ಅವರ ಪ್ರಕಾರ ಜ್ಯೋತಿಷ್ಯ ನಿಜ, ಜ್ಯೋತಿಷಿ ಸುಳ್ಳು. ಶಾಸ್ತ್ರ ನಿಜ, ಶಾಸ್ತ್ರಿ ಸುಳ್ಳು. ಅವರು ಆಲ್‌ರೌಂಡರ್ ಇದ್ದ ಹಾಗಂತೆ. ತನ್ನನ್ನು ತಾನು ಎಲ್ಲವನ್ನೂ ಬಲ್ಲವನು ಎಂದವರು ಘೋಷಿಸಿಕೊಂಡರು. ಎಂತೆಂಥ ದೊಡ್ಡ ದೊಡ್ಡ ಮಹಾತ್ಮರೂ ಸಹ ತಮ್ಮನ್ನು ತಾವು ಎಲ್ಲ ಬಲ್ಲವರು ಎಂದು ಹೇಳಿಕೊಳ್ಳಲಿಲ್ಲ, ಹಾಗೆ ಘೋಷಿಸಿಕೊಂಡ ಮೊದಲ ವ್ಯಕ್ತಿ ನೀವೇನೇ ಎಂದರು ಮಾಳವಿಕಾ. ನಾನು ದೇವರನ್ನು ನೋಡಿದ್ದೇನೆ ಎಂದು ಹೇಳಿಕೊಂಡರು ಶರ್ಮ. ಹೇಗಿದ್ದರು ದೇವರು ಎಂದರೆ ಮುದುಕಿ ರೂಪದಲ್ಲಿ, ಮಗುವಿನ ರೂಪದಲ್ಲಿ ಎಂಬ ಉತ್ತರ. ದೇವರ ಹಾಗೆ ಕಾಣಿಸೋದು ಬೇರೆ, ದೇವರನ್ನೇ ನೋಡೋದು ಬೇರೆ ಎಂದು ಮಾಳವಿಕಾ ಹೇಳಿದಾಗ, ನಾನು ದೇವರನ್ನೇ ಪ್ರತ್ಯಕ್ಷವಾಗಿ ನೋಡಿದ್ದೇನೆ ಎಂದು ಹೇಳಿಕೊಂಡರು ಅವರು.

ಕಾರ್ಯಕ್ರಮದ ಮಧ್ಯೆ ಮಧ್ಯೆ ನರೇಂದ್ರ ಶರ್ಮ ಅವರ ಅನುಯಾಯಿಗಳಿಂದ ಪ್ರತ್ಯೇಕ ಬೈಟ್‌ಗಳು. ಗುರೂಜಿಯಿಂದ ನಮಗೆ ಒಳ್ಳೆಯದಾಗಿದೆ, ಅವರು ನಮ್ಮ ಬಾಳು ಬೆಳಗಿದರು ಇತ್ಯಾದಿ ಪರಾಕುಗಳು. ಕಡೆಗೆ ಮಾಳವಿಕಾ ಸಹ ಶರ್ಮಾ ಅವರನ್ನು ಅಭಿನಂದಿಸಿ ಕಾರ್ಯಕ್ರಮ ಮುಗಿಸುತ್ತಾರೆ.

ಕಡೆಯದಾಗಿ ನರೇಂದ್ರ ಶರ್ಮ, ತನ್ನ ವಿರುದ್ಧ ಟೀಕೆ ಮಾಡುವವರಿಗೆ ಉತ್ತರ ಹೇಳಲು ಯತ್ನಿಸುತ್ತಾರೆ. ನನ್ನಿಂದಲೂ ತಪ್ಪಾಗಿದ್ದರೆ, ಅದನ್ನು ಸರಿಯಾಗಿ ತನ್ನ ಗಮನಕ್ಕೆ ತಂದರೆ ತಿದ್ದಿಕೊಳ್ಳುತ್ತೇನೆ ಎಂದು ಹೇಳುತ್ತಾರೆ.

ಹಿನ್ನೆಲೆ ಧ್ವನಿಯೊಂದು ಕೇಳಿಬರುತ್ತದೆ. ಅಂತರ್ಜಾಲದಲ್ಲಿ ಬೃಹತ್ ಬ್ರಹ್ಮಾಂಡ ಕುರಿತು ನಕಾರಾತ್ಮಾಕ ಆಂದೋಲನ ನಡೆಸುತ್ತಿರುವವರಿಗೆ ಈ ಕಾರ್ಯಕ್ರಮಕ್ಕೆ ಬರಲು ಆಹ್ವಾನ ನೀಡಲಾಗಿತ್ತು. ಯಾರೂ ಬರಲಿಲ್ಲ. ಆದರೂ ಗುರೂಜಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಕೊಟ್ಟರು... ಇತ್ಯಾದಿ ಹೇಳುವುದರೊಂದಿಗೆ ಕಾರ್ಯಕ್ರಮ ಮುಕ್ತಾಯವಾಗುತ್ತದೆ.

ಏ.೨೭ರಂದು ಈ ಕಾರ್ಯಕ್ರಮದ ಚಿತ್ರೀಕರಣದ ಶೂಟಿಂಗ್ ನಡೆದಿದೆ. ಅಂದು ಮಧ್ಯಾಹ್ನ ೧ ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದು ಬೆಳಿಗ್ಗೆ ೧೧ ಗಂಟೆಗೆ. ಅದೂ ತಮ್ಮ ಪತ್ರದಲ್ಲಿ ಮೊಬೈಲ್ ನಂಬರ್ ದಾಖಲಿಸಿದ ಕೆಲವರಿಗೆ ಮಾತ್ರ. ಕೆಂಗೇರಿ ಬಳಿಯ ಸ್ಟುಡಿಯೋದಲ್ಲಿ ನಡೆದ ಈ ಚಿತ್ರೀಕರಣಕ್ಕೆ ಕನಿಷ್ಠ ಒಂದು ದಿನ ಮೊದಲು ತಿಳಿಸಬಹುದಿತ್ತಲ್ಲವೇ? ಈ ಸತ್ಯ ಗೊತ್ತಿದ್ದೂ ಆಹ್ವಾನ ಕೊಟ್ಟರೂ ಯಾರೂ ಬರಲಿಲ್ಲ ಎಂದು ಹೇಳುವ ಆತ್ಮವಂಚನೆ ಯಾಕೆ? (ಇದನ್ನು ನಾವು ಅಂದೇ ಫೇಸ್‌ಬುಕ್‌ನ ಕಪಟ ಜ್ಯೋತಿಷಿಗಳ ವಿರುದ್ಧ ಕರ್ನಾಟಕ ಗುಂಪಿನಲ್ಲಿ ಬರೆದಿದ್ದೆವು.)

ಜೀ ಟಿವಿ ಮುಖ್ಯಸ್ಥರಿಗೆ ಈಗ ಕೇಳಬೇಕಾದ ಹಲವು ಹೊಸ ಪ್ರಶ್ನೆಗಳಿವೆ:
೧. ನಿನ್ನೆ ನಡೆದ ಬದುಕು ಜಟಕಾ ಬಂಡಿ ಕಾರ್ಯಕ್ರಮದ ಹಕೀಕತ್ತೇನು? ಇದರ ನಿಜವಾದ ಉದ್ದೇಶವೇನು?
೨. ನಿನ್ನೆಯ ಕಾರ್ಯಕ್ರಮ ನರೇಂದ್ರ ಶರ್ಮ ಅವರ ಠೊಳ್ಳುತನ, ಬಾಯಿಹರುಕತನ ಇನ್ನಷ್ಟು ಸ್ಪಷ್ಟವಾಗಿ ಬಹಿರಂಗಗೊಳಿಸುತ್ತದೆ. ಇನ್ನಾದರೂ ಈ ಕಾರ್ಯಕ್ರಮ ನಿಲ್ಲಿಸಬಹುದಲ್ಲವೆ?
೩. ನರೇಂದ್ರ ಶರ್ಮ ಅವರಿಂದ ಈ ಬಗೆಯ ಉದ್ಧಟತನದ ಸ್ಪಷ್ಟನೆಗಳನ್ನು ಕೊಡಿಸಿದ ಮಾತ್ರಕ್ಕೆ ಈ ಕಾರ್ಯಕ್ರಮದಿಂದ ಆಗಿರುವ ಅನಾಹುತಗಳನ್ನು ಮರೆಯಬಹುದೇ?
೪. ಇಷ್ಟೆಲ್ಲ ಆದರೂ ಆತ ಜೀನ್ಸ್ ಪ್ಯಾಂಟ್, ಚೂಡಿದಾರ್ ಧರಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎನ್ನುತ್ತಾರೆ. ಅದರರ್ಥ ಕರ್ನಾಟಕದ ಅರ್ಧಕ್ಕೂ ಹೆಚ್ಚು ಹೆಣ್ಣುಮಕ್ಕಳಿಗೆ ಅಂದರೆ ಎರಡು ಕೋಟಿಯಷ್ಟು ಹೆಂಗಸರಿಗೆ, ದೇಶದ ೨೦-೩೦ ಕೋಟಿ ಹೆಣ್ಣುಮಕ್ಕಳಿಗೆ ಆ ಖಾಯಿಲೆ ಬರಬೇಕು. ಹೀಗೆಲ್ಲ ಹೇಳುವ ಅನಾಹುತಕಾರಿ ಏಡ್ಸ್ ರೋಗವನ್ನು ನಿಮ್ಮ ಜತೆ ಇನ್ನೆಷ್ಟು ದಿನ ಇಟ್ಟುಕೊಳ್ಳುತ್ತೀರಿ?

ಜೀ ಟಿವಿ ಮುಖ್ಯಸ್ಥರು ಈ ಪ್ರಶ್ನೆಗಳಿಗೆ ಉತ್ತರ ಕೊಡಲಾರರು.

ಒಂದೇ ಒಂದು ಸವಾಲು. ನರೇಂದ್ರ ಶರ್ಮ ನಿನ್ನೆ ಹೇಳಿಕೊಂಡ ಅವರ ಶೈಕ್ಷಣಿಕ ಅರ್ಹತೆಗಳು ನಿಜವೇ. ಎಂಎಸ್‌ಸಿ, ಎಂಎ, ಎರಡು ಪಿಎಚ್‌ಡಿ. ಈ ಎಲ್ಲ ಅರ್ಹತೆಗಳನ್ನು ಆತ ಸಾಬೀತುಪಡಿಸಿದರೆ ನಾವು ಬ್ಲಾಗಿಂಗ್ ಮಾಡುವುದನ್ನೇ ಬಿಟ್ಟುಬಿಡುತ್ತೇವೆ. ಈ ಸವಾಲನ್ನು ನರೇಂದ್ರ ಶರ್ಮ ಸ್ವೀಕರಿಸುತ್ತಾರೆಯೇ?

ನಮ್ಮ ಹೋರಾಟ ಅರ್ಧಕ್ಕೆ ನಿಂತಿದೆ. ಸದ್ಯಕ್ಕಂತೂ ಮೂಗು ಹಿಡಿದು ಬಾಯಿ ಬಿಡಿಸುವಲ್ಲಿ ಯಶಸ್ವಿಯಾಗಿದ್ದೇವೆ. ನರೇಂದ್ರ ಶರ್ಮ ತನ್ನ ಕಾರ್ಯಕ್ರಮದಲ್ಲಿ ಈ ಮೊದಲಿನಂತೆ ಮಾತನಾಡುತ್ತಿಲ್ಲ. ಮೇ.೬ನೇ ತಾರೀಕು ಜಗನ್ಮಾತೆ ಬರುತ್ತಾಳೆ. ನಾನೇ ಸ್ವಾಗತಿಸುತ್ತಿದ್ದೇನೆ ಎನ್ನುತ್ತಿದ್ದ ಶರ್ಮ ಆ ಬಗ್ಗೆ ಬಾಯಿಬಿಡುತ್ತಿಲ್ಲ. ಜಗನ್ಮಾತೆಯ ಫ್ಲೈಟ್ ಏನಾದ್ರು ಮಿಸ್ ಆಯ್ತಾ, ಗೊತ್ತಿಲ್ಲ. ಇತ್ತೀಚಿಗೆ ಪ್ರಳಯದ ಪ್ರಸ್ತಾಪವೂ ನಿಂತಿದೆ. ಬಾಯಿಬಡುಕತನವನ್ನು ಕಡಿಮೆ ಮಾಡಿ ಎಂದು ಜೀ ಟಿವಿಯವರು ತಾಕೀತು ಮಾಡಿರಬಹುದು.

ಇಷ್ಟು ಬದಲಾವಣೆಗೆ ಕ್ರಿಯಾಶೀಲ ಅಂತರ್ಜಾಲಿಗರು ಕಾರಣವಾಗಿರುವುದು ಒಂದು ಹೆಮ್ಮೆ. ಇದರಲ್ಲಿ ಸಂಪಾದಕೀಯದ ಪಾಲು ತೀರಾ ಕಡಿಮೆ. ಜೀವಪರವಾಗಿ ಯೋಚಿಸುವ ಸಾವಿರಾರು ಮನಸ್ಸುಗಳಿಗೆ ಒಂದು ವೇದಿಕೆಯಾಗಿ ನಾವಿದ್ದೇವಷ್ಟೆ. ಈ ಎಲ್ಲ ಮನಸ್ಸುಗಳಿಗೂ ಅಭಿನಂದನೆಗಳು, ಕೃತಜ್ಞತೆಗಳು.

ಹಾಗಂತ ಈ ಅಭಿಯಾನವನ್ನು ತಾರ್ಕಿಕ ಅಂತ್ಯಕ್ಕೆ ಮುಟ್ಟಿಸುವ ಹೊಣೆಗಾರಿಕೆಯನ್ನು ನಾವು ಮರೆತಿಲ್ಲ. ಬಹುಶಃ ಇನ್ನಷ್ಟು ದೀರ್ಘವಾಗಬಹುದಾದ ಈ ಆಂದೋಲನದಲ್ಲಿ ನೀವು ಸದಾ ನಮ್ಮ ಜತೆಗಿರುತ್ತೀರಿ ಎಂಬ ನಂಬುಗೆ ಇದೆ.

ಇವತ್ತು ಮಧ್ಯಾಹ್ನ ೨-೩೦ಕ್ಕೆ ಬದುಕು ಜಟಕಾ ಬಂಡಿಯ ಮರುಪ್ರಸಾರ ಇದೆ. ನಿನ್ನೆ ನೋಡದೇ ಇರುವವರು ತಪ್ಪದೆ ನೋಡಿ, ನಿಮಗೇನನ್ನಿಸಿತು ಹೇಳಿ.

Sunday, May 8, 2011

ಮೀಡಿಯಾ ಮನೆಗಳಲ್ಲಿ ಮತ್ತೊಂದು ಸುತ್ತು.. ನಾವು ಸ್ವಲ್ಪ ಸುಸ್ತು!

ಬಹಳ ದಿನಗಳಾಯ್ತು, ಮೀಡಿಯಾ ಮನೆಗಳ ಅಪ್‌ಡೇಟ್ಸ್ ಹೇಳದೆ. ಸಾಕಷ್ಟು ವಿದ್ಯಮಾನಗಳು ನಡೆದಿವೆ. ಮೊದಲನೆಯದು ಪ್ರಜಾವಾಣಿಯಲ್ಲಿ ಆಗಿರುವ ಬದಲಾವಣೆ. ಗೋಪಾಲ ಹೆಗಡೆಯವರು ಮೇ.೧ರಂದು ಪ್ರಜಾವಾಣಿಯ ಸಹ ಸಂಪಾದಕ (ಅಸೋಸಿಯೇಟಿವ್ ಎಡಿಟರ್) ಸ್ಥಾನಕ್ಕೇರಿದ್ದಾರೆ. ಪ್ರಜಾವಾಣಿಯಲ್ಲಿ ಈ ಸ್ಥಾನವೇ ಮುಖ್ಯ. ಸಂಪಾದಕ ಕೆ.ಎನ್.ಶಾಂತಕುಮಾರ್ ಅವರ ನಂತರ ಪತ್ರಿಕೆಯ ನೀತಿ ನಿರೂಪಣೆಯ ಜವಾಬ್ದಾರಿ ಇರುವ ಹುದ್ದೆಯಿದು. ಇದುವರೆಗೆ ಆ ಸ್ಥಾನದಲ್ಲಿದ್ದವರು ಪದ್ಮರಾಜ ದಂಡಾವತಿ. ಈಗ ಅವರು ಕಾರ‍್ಯನಿರ್ವಾಹಕ ಸಂಪಾದಕರ ಸ್ಥಾನಕ್ಕೆ ಏರಿದ್ದಾರೆ. ಸಹ ಸಂಪಾದಕರಾದವರು ಬದಲಾದಾಗ ಅವರ ಸೇವಾವಧಿಯಿನ್ನೂ ಬಾಕಿ ಇದ್ದರೆ ಈ ಸ್ಥಾನ ನೀಡಲಾಗುತ್ತದೆ. ಅದು ಆಡಳಿತಕ್ಕೆ ಸಂಬಂಧಿಸಿದ ಹುದ್ದೆ.

ಗೋಪಾಲ ಹೆಗಡೆ
ಗೋಪಾಲ ಹೆಗಡೆಯವರು ಈ ಹುದ್ದೆಗೆ ಬರುವ ವಿಷಯವನ್ನು ಸೂಕ್ಷ್ಮವಾಗಿ ಹಿಂದೆಯೇ ನಾವು ಬರೆದಿದ್ದೆವು. ಗೋಪಾಲ ಹೆಗಡೆ ಕ್ರೀಡಾ ವರದಿಗಾರರಾಗಿ ಹೆಸರು ಮಾಡಿದವರು. ಟಿವಿಗಳು ಇಲ್ಲದ ಕಾಲದಲ್ಲಿ ಕ್ರಿಕೆಟ್ ಇತ್ಯಾದಿ ಕ್ರೀಡೆಗಳು ನಡೆಯುವ ಜಾಗಕ್ಕೆ ಹೋಗಿ ವರದಿ ಮಾಡಿದವರು. ಆ ಕಾಲಕ್ಕೆ ನಂ.೧ ಕ್ರೀಡಾ ವರದಿಗಾರೆಂದು ಹೆಸರಾದವರು ಹೆಗಡೆ. ಈಗ ಹೊಸ ಹುದ್ದೆ ಏರುವುದಕ್ಕೂ ಮುನ್ನ ಅವರು ಹುಬ್ಬಳ್ಳಿಯಲ್ಲಿದ್ದರು, ಸ್ಥಾನಿಕ ಸಂಪಾದಕರಾಗಿ.

ಗೋಪಾಲ ಹೆಗಡೆಯವರಿಗೆ ಇನ್ನು ಎರಡು ವರ್ಷ ಸೇವಾವಧಿ ಇರಬಹುದು. ಬಹುತೇಕ ಅಲ್ಲಿಯವರೆಗೆ ಅವರು ಪ್ರಜಾವಾಣಿಯ ಈ ಪ್ರತಿಷ್ಠಿತ ಹುದ್ದೆಯಲ್ಲಿರುತ್ತಾರೆ. ಪ್ರಜಾವಾಣಿಯ ವೈಚಾರಿಕ ಪರಂಪರೆಯನ್ನು, ಜನಪರ ಕಾಳಜಿಗಳನ್ನು, ನೊಂದವರ-ಬಡವರ ಪರವಾದ ನಿಲುವುಗಳನ್ನು ಗೋಪಾಲ ಹೆಗಡೆಯವರು ಕಾದಿಟ್ಟುಕೊಂಡು ಹೋಗಲಿ ಎಂದು ಹಾರೈಸೋಣ.

ಈಗ ಹುಬ್ಬಳ್ಳಿ ಬ್ಯೂರೋ ಮುಖ್ಯಸ್ಥರಾಗಿ ಎಂ.ನಾಗರಾಜು ನೇಮಕಗೊಂಡಿದ್ದಾರೆ. ನಾಗರಾಜು ಪ್ರಜಾವಾಣಿಯ ಮುಖ್ಯವರದಿಗಾರರಾಗಿಯೂ ಕೆಲಸ ಮಾಡಿದ್ದರು. ಹಲವು ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಿದ ಅನುಭವವೂ ಇದೆ. ಬೆಂಗಳೂರನ್ನು ಬಿಟ್ಟರೆ ಪ್ರಜಾವಾಣಿಗೆ ಹುಬ್ಬಳ್ಳಿ ಬಹುಮುಖ್ಯ ಕೇಂದ್ರ. ಹೊಸ ಸವಾಲನ್ನು ಅವರು ಸುಲಭವಾಗಿ ನಿರ್ವಹಿಸುವ ವಿಶ್ವಾಸ ಅವರನ್ನು ಬಲ್ಲವರಿಗೆ ಇದೆ.
ಕೆ.ವಿ.ಪ್ರಭಾಕರ್

ಕನ್ನಡಪ್ರಭದಲ್ಲಿ ಮತ್ತೊಂದು ಮಹತ್ವದ ಬದಲಾವಣೆಯಾಗಿದೆ. ಕೆಲದಿನಗಳ ಹಿಂದೆ ಮುಖ್ಯ ವರದಿಗಾರರಾಗಿ ಕೆ.ವಿ.ಪ್ರಭಾಕರ್ ನೇಮಕಗೊಂಡಿದ್ದಾರೆ. ಪ್ರಭಾಕರ್ ಪ್ರತಿಭಾವಂತರು. ರಾಜಕೀಯ ವರದಿಗಾರಿಕೆಯಲ್ಲಿ ಅನುಭವವುಳ್ಳವರು. ಈ ಹುದ್ದೆಗೆ ಸಮರ್ಥರು.

ಈ ಹುದ್ದೆಯಲ್ಲಿದ್ದ ರೇಣುಕಾ ಪ್ರಸಾದ್ ಹಾಡ್ಯ ಅವರನ್ನು ದಿಲ್ಲಿ ವರದಿಗಾರರನ್ನಾಗಿ ನೇಮಿಸುತ್ತಿರುವ ಕುರಿತು ಮಾಹಿತಿಯಿದೆ. ಪ್ರತಿ ಪತ್ರಕರ್ತನೂ ಪ್ರತಿಷ್ಠಿತ ಪತ್ರಿಕೆಗಳ ದಿಲ್ಲಿ ವರದಿಗಾರರಾಗಿ ಕೆಲಸ ಮಾಡಬೇಕು ಎಂದು ಕನಸು ಕಾಣುತ್ತಾರೆ. ಹಾಡ್ಯ ಅವರಿಗೆ ಇದು ಒದಗಿ ಬಂದಿದೆ. ಆ ಸಾಮರ್ಥ್ಯವೂ ಅವರಿಗಿದೆ. ಅವರ ಪತ್ನಿಯೂ ಪತ್ರಕರ್ತೆ. ಇಂಗ್ಲಿಷ್ ಪತ್ರಿಕೆಯೊಂದರಲ್ಲಿ ಕೆಲಸ ಮಾಡುತ್ತಾರೆ. ದಿಲ್ಲಿಗೆ ಹೋಗುತ್ತಾರೋ ಇಲ್ಲವೋ ಎಂಬ ಅನುಮಾನವಿದೆ.

ಹೊಸ ಹುದ್ದೆಗಳಿಗೆ ಹೋಗುತ್ತಿರುವ ಎಲ್ಲರಿಗೂ ಶುಭಾಶಯಗಳು. ಅವರಿಂತ ಕನ್ನಡ ಮಾಧ್ಯಮಲೋಕಕ್ಕೆ ಒಳ್ಳೆಯದಾಗಲಿ ಎಂಬ ಆಶಯ ಎಲ್ಲರದು.

ರವಿ ಬೆಳಗೆರೆ
ಜನಶ್ರೀ ಚಾನಲ್‌ನಲ್ಲಿ ಇತ್ತೀಚಿಗೆ ರವಿ ಬೆಳಗೆರೆ ಕಾಣಿಸಿಕೊಳ್ಳುತ್ತಿಲ್ಲ, ಕಾರಣ ನಿಗೂಢ. ಬದಲಾಗಿ ಮೊನ್ನೆ ಅವರು ಸುವರ್ಣ ನ್ಯೂಸ್‌ನಲ್ಲಿ ಬರೋಬ್ಬರಿ ಮೂರು ಗಂಟೆ ಲಾಡೆನ್ ಕುರಿತಾದ ಚರ್ಚೆಯಲ್ಲಿ ಪಾಲ್ಗೊಂಡಿದ್ದು ಹಲವರ ಹುಬ್ಬೇರಿಸಿದೆ. ಜನಶ್ರೀಗೆ ಸುವರ್ಣ ನ್ಯೂಸ್ ಎದುರಾಳಿ ಚಾನಲ್. ಹೀಗಿರುವಾಗ ಬೆಳಗೆರೆ ಸುವರ್ಣದಲ್ಲಿ ಕಾಣಿಸಿಕೊಂಡಿದ್ದು ಹೇಗೆ ಎಂಬ ಪ್ರಶ್ನೆ ಹಲವರದು. ಜನಶ್ರೀಗಾಗಿ ರವಿ ಬೆಳಗೆರೆ ವಿಶೇಷ ಕಾರ್ಯಕ್ರಮಗಳನ್ನು ಮಾಡಿಕೊಡುತ್ತಾರೆ ಎಂಬ ಮಾತಿತ್ತು. ಸ್ವತಃ ಬೆಳಗೆರೆಯವರೇ ಹಾಗೆ ಹೇಳಿಕೊಂಡಿದ್ದರು. ಆದರೆ ಅಂಥ ಕಾರ್ಯಕ್ರಮಗಳೇನು ಕಾಣಿಸುತ್ತಿಲ್ಲ. ಬದಲಾಗಿ ಈಟಿವಿಗಾಗಿ ಬೆಳ್ ಬೆಳಗ್ಗೆ ಬೆಳಗೆರೆ ಎಂಬ ಕಾರ್ಯಕ್ರಮವನ್ನು ಅವರು ತಯಾರು ಮಾಡಿಕೊಡುತ್ತಿರುವ ಮಾಹಿತಿ ಇದೆ.

ಎಚ್.ಆರ್.ರಂಗನಾಥ್ ತೆರೆಮರೆಗೆ ಸರಿದ ನಂತರ ಸುವರ್ಣ ನ್ಯೂಸ್ ಸಪ್ಪೆಯಾಗಿದೆ. ರಂಗನಾಥ್ ಅವರ ಬಾಡಿ ಲಾಂಗ್ವೇಜ್, ಜಗತ್ತೇ ತಲೆ ಮೇಲೆ ಬಿದ್ದಂತೆ ಮಾತನಾಡುವ ಶೈಲಿ, ಅತಿಥಿಗಳಿಗೆ ಮಾತನಾಡಲು ಅವಕಾಶ ನೀಡದ ಜಿಗುಟುತನ ಇತ್ಯಾದಿಗಳ ಬಗ್ಗೆ ಏನೇ ಟೀಕೆಗಳಿದ್ದರೂ ಅವರು ನ್ಯೂಸ್ ಚಾನಲ್‌ಗೆ ಹೇಳಿ ಮಾಡಿಸಿದ ಪತ್ರಕರ್ತ. ತನ್ನ ಅನುಭವ ಮತ್ತು ಜ್ಞಾನವನ್ನು ಬಳಸಿಕೊಂಡು ಅವರು ತಮ್ಮದೇ ಆದ ವೀಕ್ಷಕರನ್ನು ಸೃಷ್ಟಿಸಿಕೊಂಡಿದ್ದರು. ಜನಸಾಮಾನ್ಯರಿಗೂ ಅರ್ಥವಾಗುವಂತೆ ರಾಜಕೀಯವೂ ಸೇರಿದಂತೆ ಎಲ್ಲ ವಿದ್ಯಮಾನಗಳನ್ನು ಬಿಡಿಸಿ ಹೇಳುವ ಶೈಲಿ ಅವರಿಗೆ ಕರಗತ. ಸಾಯಿಬಾಬಾ ಸಾವು, ಲಾಡೆನ್ ಹತ್ಯೆ ಸಂದರ್ಭದಲ್ಲಂತೂ ರಂಗನಾಥ್ ಯಾವುದಾದರೂ ಚಾನಲ್‌ನಲ್ಲಿ ಇರಬೇಕಿತ್ತು ಎಂದು ಬಹಳಷ್ಟು ಜನರಿಗೆ ಅನ್ನಿಸಿದೆ. ರಂಗನಾಥ್ ನೇಪಥ್ಯಕ್ಕೆ ಸರಿದ ಮೇಲೆ ಸುವರ್ಣ ನ್ಯೂಸ್ ಟಿಆರ‍್ಪಿ ಸಹ ಜರ್ರನೆ ಇಳಿದುಹೋಗಿದೆ. ರಾಜೀವ್ ಚಂದ್ರಶೇಖರ್‌ಗೆ ಇದು ನಿಜಕ್ಕೂ ತಲೆನೋವಿನ ಸಂಗತಿ. ಸಮಯ ಟಿವಿ ಹೆಚ್ಚು ಕಡಿಮೆ ಸುವರ್ಣ ನ್ಯೂಸ್ ಹತ್ತಿರದಲ್ಲೇ ಇದೆ. ಜನಶ್ರೀ ಬಗ್ಗೆ ಹೇಳುವಂಥ ವಿಶೇಷವೇನೂ ಕಾಣುತ್ತಿಲ್ಲ. ಇನ್ನು ಟಿವಿ೯, ಟಿಆರ‍್ಪಿಯಲ್ಲಿ ಇತರ ಎಲ್ಲ ಚಾನಲ್‌ಗಳಿಗಿಂದ ಮೈಲು ದೂರ ಮುಂದೆ ಸಾಗಿದೆ. ಉಳಿದೆಲ್ಲ ಚಾನಲ್‌ಗಳ ಟಿಆರ್‌ಪಿಯನ್ನು ಒಟ್ಟುಗೂಡಿಸಿದರೂ ಟಿವಿ೯ಗೆ ಸಮವಾಗಲಾರದು. ಸದ್ಯದ ಮಟ್ಟಿಗೆ ಟಿವಿ೯ ಜತೆ ಫೈಟಿಂಗು ನಡೆಸಲು ಇತರ ಚಾನಲ್‌ಗಳು ಪವಾಡವನ್ನೇ ಮಾಡಬೇಕು, ಅಷ್ಟೆ.
ಎಚ್.ಆರ್.ರಂಗನಾಥ್

ಕೊನೆ ಮಾತು...
ಕಳೆದ ನಾಲ್ಕೂವರೆ ತಿಂಗಳಿನಿಂದ ಸತತವಾಗಿ ಈ ಬ್ಲಾಗ್‌ನಲ್ಲಿ ಬರೆದು ನಮಗೂ ಕೊಂಚ ಸುಸ್ತು, ಬಳಲಿಕೆ. ಈ ಬ್ಲಾಗ್ ಅನ್ನು ಕಮೆಂಟುಗಳ ಸಮೇತ ಪುಸ್ತಕರೂಪದಲ್ಲಿ ತಂದರೆ ಕನಿಷ್ಠ ೧೦೦೦ ಪುಟಗಳ ಪುಸ್ತಕವಾಗಿಬಿಡುತ್ತದೆ. ಹಿಂದಿರುಗಿ ನೋಡಿದಾಗ ಅಷ್ಟೊಂದು ಬರೆದೆವಾ ಅನ್ನಿಸುವುದುಂಟು. ಸ್ವಲ್ಪ ದಿನಗಳ ಬಿಡುವು ಬೇಕೆನ್ನಿಸಿದೆ. ಈ ಬ್ಲಾಗ್‌ನಿಂದಾಗಿಯೇ ತಗುಲಿಕೊಂಡ ಕೆಲವು ಅತ್ಯಂತ ಮಹತ್ವದ ಕೆಲಸಗಳು ತುಂಬಾ ಸಮಯವನ್ನು ಬೇಡುತ್ತಿವೆ. ಹೀಗಾಗಿ ಕೆಲ ದಿನಗಳ ವಿಶ್ರಾಂತಿ. ಮರೆತುಬಿಡಬೇಡಿ, ಹೀಗೆ ಹೋಗಿ ಹಾಗೆ ವಾಪಾಸು ಬಂದುಬಿಡುತ್ತೇವೆ. ಹಾಗಂತ ಬ್ಲಾಗ್ ಖಾಲಿ ಹೊಡೆಯುತ್ತದೆ ಎಂದುಕೊಳ್ಳಬೇಕಾಗಿಲ್ಲ, ಯಾರಾದೂ ಪ್ರಕಟಣೆಗೆ ಲೇಖನಗಳನ್ನು ಕಳುಹಿಸಿದರೆ, ಅದು ಈ ಬ್ಲಾಗ್ ಚೌಕಟ್ಟಿಗೆ ಒಗ್ಗುವಂತಿದ್ದರೆ ಪ್ರಕಟಿಸುತ್ತೇವೆ. ಪ್ರೀತಿ ಇರಲಿ.

Friday, May 6, 2011

ಪಾಕಿಸ್ತಾನದ ಪರದಾಟಗಳು ಮತ್ತು ಎಲ್ಲರೂ ಕಲಿಯಬೇಕಾದ ಪಾಠಗಳು....

“ನಮ್ಮ ಮಿಲಿಟರಿ, ವಾಯುಸೇನೆಗಳಲ್ಲಿ ಸಾಕಷ್ಟು ಯೋಧರಿದ್ದಾರೆ. ಇದು (ಲಾಡೆನ್ ವಿರುದ್ಧದ ಕಾರ್ಯಾಚರಣೆ) ಮರುಕಳಿಸಿದರೆ ಇಂತಹ ದುಸ್ಸಾಹಸ ಅಥವಾ ತಪ್ಪು ತಿಳಿವಳಿಕೆಯಿಂದ ದುರಂತ ಅಂತ್ಯ ಕಾಣಬೇಕಾಗುತ್ತದೆ. ತನ್ನ ರಕ್ಷಣಾ ಬಲವನ್ನು ಪ್ರದರ್ಶಿಸಲು ಪಾಕ್ ಸಮರ್ಥವಾಗಿದೆ ಎಂಬುದರಲ್ಲಿ ಯಾವುದೇ ಅನುಮಾನ ಬೇಕಿಲ್ಲ. ಯಾವುದೇ ದೇಶ ಇದೇ ರೀತಿ ಕಾರ್ಯಾಚರಣೆ ಕೈಗೊಳ್ಳಬಹುದು ಎಂದು ಭಾವಿಸಿದ್ದರೆ ಅದು ತಪ್ಪು ಲೆಕ್ಕಾಚಾರ ಎಂಬುದು ಬಳಿಕ ಅರಿವಾಗುತ್ತದೆ...''

ಪಾಕಿಸ್ತಾನದ ವಿದೇಶಾಂಗ ಕಾರ್ಯದರ್ಶಿ ಸಲ್ಮಾನ್ ಬಶೀರ್ ನೀಡಿರುವ ಹೇಳಿಕೆ ಇದು. ಜಟ್ಟಿ ಜಾರಿ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತಿದೆ ಈ ಸಮರ್ಥನೆ. ಪಾಕಿಸ್ತಾನದ ಸಾರ್ವಭೌಮತೆಯನ್ನು ಗೌರವಿಸಬೇಕು ಎಂದು ಬಶೀರ್ ಹೇಳುತ್ತಿದ್ದಾರೆ. ಹಾಗೆ ನೋಡಿದರೆ ತನ್ನ ಸಾರ್ವಭೌಮತೆಯನ್ನು ಆ ರಾಷ್ಟ್ರ ಅಮೆರಿಕಾಗೆ ಹಾಗು ಜಿಹಾದಿ ಹೆಸರಿನಲ್ಲಿ ಭಯೋತ್ಪಾದನೆ ನಡೆಸುವ ಶಕ್ತಿಗಳಿಗೆ ಒತ್ತೆ ಇಟ್ಟು ದಶಕವೇ ಕಳೆದುಹೋಗಿದೆ.

ಒಸಾಮಾ ಬಿನ್ ಲಾಡೆನ್ ಸತ್ತ ಮನೆ
ಪಾಕಿಸ್ತಾನ ಎರಡು ಅಲಗಿನ ಕತ್ತಿಯ ನಡುವೆ ಸಿಲುಕಿಕೊಂಡಿದೆ. ಅದರಿಂದ ಪಾರಾಗುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ. ಕಳೆದ ಒಂದು ದಶಕದಲ್ಲಿ ಭಯೋತ್ಪಾದಕರ ದಾಳಿಗೆ ಅತಿ ಹೆಚ್ಚು ನಲುಗಿದ ದೇಶ ಯಾವುದಾದರೂ ಇದ್ದರೆ ಅದು ಪಾಕಿಸ್ತಾನವೇ ಹೌದು. ಅಲ್ಲಿ ಪ್ರತಿನಿತ್ಯ ಸ್ಫೋಟ, ಅಮಾಯಕರ ಸಾವು ಮಾಮೂಲಿ ಸುದ್ದಿಯಾಗಿ ಹೋಗಿದೆ. ಸಾಯಿಸುವವರು, ಸಾಯುವವರು ಎಲ್ಲರೂ ಒಂದೇ ಧರ್ಮದವರು. ಭಯೋತ್ಪಾದನೆಗೆ ಧರ್ಮ ಕಾರಣ ಎಂದು ಹೇಳಿದವರ‍್ಯಾರು?

ಪಾಕಿಸ್ತಾನ ಭಯೋತ್ಪಾದಕರ ಸ್ವರ್ಗ ಎಂಬ ಮಾತು ಆಗಾಗ ಕೇಳಿಬರುತ್ತದೆ. ಅಲ್ಲಿ ತಾಲಿಬಾನಿಗಳಿದ್ದಾರೆ, ಅಲ್ ಖೈದಾ ಇದೆ. ಲಷ್ಕರ್-ಇ-ತೊಯಿಬಾ ಇದೆ. ಇನ್ನೂ ಹಲವಾರು ಭಯೋತ್ಪಾದಕ ಸಂಘಟನೆಗಳು ಇಲ್ಲಿವೆ. ಇವುಗಳನ್ನು ಬೆಳೆಸಿಕೊಂಡು ಬಂದಿದ್ದು, ಪೋಷಣೆ ನೀಡಿದ್ದು, ರಕ್ಷಣೆ ಒದಗಿಸಿದ್ದು ಅಲ್ಲಿನ ಗುಪ್ತಚರ ಸಂಸ್ಥೆ ಐಎಸ್‌ಐ. ಪಾಕಿಸ್ತಾನದ ಸೈನ್ಯ, ಐಎಸ್‌ಐ ಮತ್ತು ಸರ್ಕಾರದ ನಡುವೆಯೇ ಹೊಂದಾಣಿಕೆ ಇಲ್ಲ. ಒಂದೆಡೆ ಸರ್ಕಾರ ಭಯೋತ್ಪಾದನೆ ವಿರುದ್ಧ ನಮ್ಮ ಸಮರ ಎಂದು ಪಾಕಿಸ್ತಾನ ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ ಅದರ ಮೂಗಿನಡಿಯಲ್ಲೇ ಭಯೋತ್ಪಾದಕರ ತರಬೇತಿ ಶಿಬಿರಗಳು ನಡೆಯುತ್ತದೆ. ಈ ಶಿಬಿರಗಳಲ್ಲಿ ಪಾಕಿಸ್ತಾನದ ಸೈನ್ಯಾಧಿಕಾರಿಗಳೇ ತರಬೇತಿ ಕೊಡುತ್ತಾರೆ. ಒಂದೆಡೆ ನಮ್ಮಲ್ಲಿ ಯಾವ ಭಯೋತ್ಪಾದಕರಿಗೂ ಆಶ್ರಯ ನೀಡಲಾಗಿಲ್ಲ ಎಂದು ಸರ್ಕಾರ ಹೇಳುತ್ತದೆ. ಆದರೆ ಈ ಕೆಲಸವನ್ನು ಐಎಸ್‌ಐ ವರ್ಷಾನುವರ್ಷದಿಂದ ಮಾಡಿಕೊಂಡೇ ಬಂದಿದೆ. ಮುಂಬೈ ಮೇಲಿನ ದಾಳಿನ ನಡೆಸಿ ಭಯೋತ್ಪಾದಕರನ್ನು ಟ್ರೈನ್ ಅಪ್ ಮಾಡಿ ಕಳುಹಿಸಿಕೊಟ್ಟಿದ್ದು  ಇದೇ ಐಎಸ್‌ಐ. ಒಸಾಮಾ ಬಿನ್ ಲಾಡೆನ್‌ಗೂ ಆಶ್ರಯ ಕೊಟ್ಟಿದ್ದು ಐಎಸ್‌ಐ ಎಂಬುದರಲ್ಲಿ ಈಗ ಯಾವ ಸಂಶಯವೂ ಉಳಿದುಕೊಂಡಿಲ್ಲ. ಇದು ಗೊತ್ತಾದ ಬಳಿಕ ಅಮೆರಿಕದ ಸೆನೆಟರ್‌ಗಳು ಒಬ್ಬರಾದ ಮೇಲೊಬ್ಬರಂತೆ ಪಾಕಿಸ್ತಾನ ವಿರುದ್ಧ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ಪಾಕಿಸ್ತಾನ ವಿಶ್ವಾಸಕ್ಕೆ ಅರ್ಹವಾದ ದೇಶವಲ್ಲ ಎಂಬುದು ಸಾಬೀತಾಗಿ ಎಷ್ಟೋ ವರ್ಷಗಳಾಗಿ ಹೋದವು. ಮುಂಬೈ ದಾಳಿ ಘಟನೆಯ ತನಿಖೆ, ವಿಚಾರಣೆಯ ವಿಷಯದಲ್ಲಿ ಆ ದೇಶ ನಡೆದುಕೊಂಡ ರೀತಿಯನ್ನು ಗಮನಿಸಿದರೆ ಇದು ಗೊತ್ತಾಗಿ ಹೋಗುತ್ತದೆ. ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪದೇ ಪದೇ ಸಾಕ್ಷ್ಯ ಕೊಡಿ ಎಂದು ಪಾಕಿಸ್ತಾನವು ಭಾರತವನ್ನು ಇಕ್ಕಟ್ಟಿಗೆ ಸಿಲುಕಿಸಲು ಯತ್ನಿಸಿತು. ಸಾಕ್ಷ್ಯ ಕೊಟ್ಟ ನಂತರ ಸಾಲದು ಎಂದು ಹೇಳಿತು. ಇನ್ನಷ್ಟು ಕೊಟ್ಟ ನಂತರವಾದರೂ ಏನಾದರೂ ಆಯಿತೇ? ಮುಂಬೈ ದಾಳಿಕೋರರ ವಿರುದ್ಧ ಪಾಕಿಸ್ತಾನದಲ್ಲಿ ನಡೆಯುತ್ತಿರುವ ವಿಚಾರಣೆಯ ನಂತರ ಅಪರಾಧಿಗಳಿಗೆ ಶಿಕ್ಷೆ ಆದೀತು ಎಂದು ಯಾರಾದರೂ ನಂಬಲು ಸಾಧ್ಯವೇ?

ಪಾಕಿಸ್ತಾನವನ್ನು ಜರ್ದಾರಿ, ಗಿಲಾನಿಗಳು ಆಳುತ್ತಿಲ್ಲ. ಆಳುತ್ತಿರುವವರು ಅಲ್ಲಿನ ಧಾರ್ಮಿಕ ಮೂಲಭೂತವಾದಿ ಶಕ್ತಿಗಳು. ಅವುಗಳನ್ನು ಎದುರಿಸುವ ಶಕ್ತಿ ಈಗ ಆಳ್ವಿಕೆ ನಡೆಸುತ್ತಿರುವವರಿಗೂ ಇಲ್ಲ. ಹಿಂದೆ ಇದ್ದ ಮುಷರಫ್, ಭುಟ್ಟೋ, ನವಾಜ್ ಷರೀಫ್ ಇತ್ಯಾದಿಗಳಿಗೂ ಇರಲಿಲ್ಲ. ಲಾಡೆನ್ ಸತ್ತ ನಂತರ ಪಾಕಿಸ್ತಾನ ಸರ್ಕಾರ ಏಕಕಾಲಕ್ಕೆ ಅಮೆರಿಕವನ್ನೂ, ದೇಶದ ಒಳಗಿನ ಸೂಪರ್ ಪವರ್‌ಗಳಾದ ಮೂಲಭೂತವಾದಿಗಳನ್ನೂ ಎದುರು ಹಾಕಿಕೊಂಡಿದೆ. ಜಾಗತಿಕ ಸಮುದಾಯದಲ್ಲಿ ಪಾಕಿಸ್ತಾನ ಈಗ ಬಹಳ ಸ್ಪಷ್ಟವಾಗಿ ಖಳನಾಯಕನಾಗಿ ಕಾಣಿಸಿಕೊಂಡಿದೆ.

ಹಾಗೆ ನೋಡಿದರೆ ೯/೧೧ ಘಟನೆಯ ನಂತರ ಅಮೆರಿಕಾ ಸೈನ್ಯವನ್ನು ತನ್ನ ರಾಷ್ಟ್ರದೊಳಗೆ ಬಿಟ್ಟುಕೊಳ್ಳದೆ ಪಾಕಿಸ್ತಾನಕ್ಕೆ ಗತ್ಯಂತರವಿರಲಿಲ್ಲ. ತನ್ನ ಸೇನಾ ನೆಲೆಗಳನ್ನು ಸ್ಥಾಪಿಸಿಕೊಳ್ಳಲು ಪಾಕಿಸ್ತಾನಕ್ಕೆ ಭಾರಿ ಪ್ರಮಾಣದ ಹಣದ ಸಹಾಯದ ಆಮಿಷವನ್ನು  ಅಮೆರಿಕಾ ಒಡ್ಡಿತ್ತು. ಒಂದು ವೇಳೆ ಅಮೆರಿಕಾ ನೆರವನ್ನು ತಿರಸ್ಕರಿಸಿ, ತನ್ನ ಸಾರ್ವಭೌಮತೆಯನ್ನು ಉಳಿಸಿಕೊಳ್ಳುವ ತೀರ್ಮಾನವನ್ನೇನಾದರೂ ಪಾಕಿಸ್ತಾನ ಕೈಗೊಂಡಿದ್ದರೆ, ಅಫಘಾನಿಸ್ತಾನಕ್ಕೆ ಆದ ದುರ್ಗತಿಯೇ ಪಾಕಿಸ್ತಾನಕ್ಕೂ ಬಂದೊದಗುತ್ತಿತ್ತು. ಪಾಕಿಸ್ತಾನ ಅಮೆರಿಕಕ್ಕೆ ಶರಣಾಯಿತು. ಜಾಗತಿಕ ವಲಯದಲ್ಲಿ ತಾನೂ ಸಹ ಭಯೋತ್ಪಾದನೆಯ ವಿರೋಧಿ ಎಂದು ಫೋಜು ನೀಡಿತು. ಅಮೆರಿಕ ಕೊಟ್ಟ ಭಾರೀ ಪ್ರಮಾಣದ ನೆರವನ್ನು ಎರಡೂ ಕೈಗಳಿಂದ ಬಾಚಿಕೊಂಡಿತು. ಆದರೆ ಸತ್ಯವನ್ನು ಹೆಚ್ಚು ದಿನ ಮುಚ್ಚಿಡಲು ಸಾಧ್ಯವಿಲ್ಲ. ತನ್ನದೇ ರಾಷ್ಟ್ರದಲ್ಲೇ, ರಾಜಧಾನಿ ಇಸ್ಲಾಮಾಬಾದ್‌ಗೆ ಕೇವಲ ೪೫ ಕಿ.ಮೀ ದೂರದ ನಗರದಲ್ಲಿ ತನ್ನದೇ ಸೇನಾನೆಲೆಯ ಕೂಗಳತೆ ದೂರದಲ್ಲೇ ಮುಚ್ಚಿಟ್ಟುಕೊಂಡಿದ್ದ ಲಾಡೆನ್‌ನನ್ನು ಅಮೆರಿಕ ಸೈನ್ಯದಿಂದ ಉಳಿಸಿಕೊಳ್ಳಲೂ ಸಾಧ್ಯವಾಗಲಿಲ್ಲ.

ಸಲ್ಮಾನ್ ರಶ್ದಿ ಎಂಬ ಲೇಖಕ ಪಾಕಿಸ್ತಾನವನ್ನು ಭಯೋತ್ಪಾದಕ ರಾಷ್ಟ್ರವೆಂದು ಘೋಷಿಸಬೇಕೆಂದು ಹೇಳಿಕೆ ನೀಡಿದ್ದಾರೆ. ಹಾಗೆ ಘೋಷಿಸಲು ಉಳಿದಿರುವುದಾದರೂ ಏನು? ರಕ್ತಪಿಪಾಸುಗಳನ್ನು ಸಾಕಿಕೊಂಡ ರಾಷ್ಟ್ರ ಏನನ್ನು ಅನುಭವಿಸಬೇಕೋ ಅದನ್ನು ಅನುಭವಿಸುತ್ತಿದೆ. ಮೊನ್ನೆ ಲಾಡೆನ್ ಸತ್ತ ನಂತರವೂ ಉಗ್ರಗಾಮಿಗಳ ಪ್ರತೀಕಾರದ ದಾಳಿಗೆ ಬಲಿಯಾಗಿದ್ದೂ ಸಹ ಇದೇ ಪಾಕಿಸ್ತಾನದ ಅಮಾಯಕ ಜನರು.

ಪಾಕಿಸ್ತಾನದಲ್ಲಿ ಈಗ ಏನು ಉಳಿದಿದೆ? ಅಲ್ಲಿಗೆ ಜಾಗತಿಕ ಬಂಡವಾಳ ಹೂಡಿಕೆದಾರರ‍್ಯಾರೂ ಕಣ್ಣೆತ್ತಿಯೂ ನೋಡುತ್ತಿಲ್ಲ. ಬಂಡವಾಳ ಹೂಡುವವರು ಇರಲಿ, ಇತರ ದೇಶೀಯರು ಇಲ್ಲಿಗೆ ಪ್ರವಾಸಕ್ಕಾಗಿಯೂ ಬರಲಾರರು. ಪಾಕಿಸ್ತಾನದಲ್ಲಿ ಭಾರತದಂತೆಯೇ ಕ್ರಿಕೆಟ್ ಹುಚ್ಚು ಜನರಿಗೆ. ಬ್ಯಾಟು, ಬಾಲು ಹಿಡಿದು ಆಡಲು ಹೋಗುವ ಕ್ರಿಕೆಟಿಗರನ್ನು ಬಂದೂಕು ಹಿಡಿದು ಯುದ್ಧಕ್ಕೆ ಹೋಗುವ ಸೈನಿಕರೆಂಬಂತೆ ಕಾಣುವ ಹುಚ್ಚರು ಅಲ್ಲಿದ್ದಾರೆ. ತಮ್ಮ ಆಟಗಾರರು ವಿಕೆಟ್ ಕಿತ್ತರೆ, ಬೌಂಡರಿ ಹೊಡೆದರೆ ಬೀದಿಗೆ ಬಂದು ಗಾಳಿಯಲ್ಲಿ ಗುಂಡು ಹಾರಿಸಿ ಸಂಭ್ರಮಿಸುವ ವಿಚಿತ್ರ ಜನರಿರುವ ದೇಶ ಅದು. ಆದರೆ ಈಗ ಅಲ್ಲಿ ಕ್ರಿಕೆಟ್ ಸರಣಿಗಳೇ ನಡೆಯುತ್ತಿಲ್ಲ. ಯಾವ ದೇಶದ ತಂಡವೂ ಅಲ್ಲಿಗೆ ಪ್ರವಾಸ ಮಾಡಲು ಒಪ್ಪುತ್ತಿಲ್ಲ. ಈಚೆಗೆ ನಡೆದ ವಿಶ್ವಕಪ್ ಪಂದ್ಯಾವಳಿಯನ್ನು ಸಂಘಟಿಸಿದ್ದು ಭಾರತ, ಶ್ರೀಲಂಕ ಮತ್ತು ಬಾಂಗ್ಲಾದೇಶ ದೇಶಗಳು. ಪಾಕಿಸ್ತಾನ ಇದೇ ಭಯೋತ್ಪಾದನೆಯ ಕಾರಣಕ್ಕೆ ವಿಶ್ವಕಪ್ ಸಹ ಆತಿಥ್ಯದ ಅವಕಾಶವನ್ನು ಕಳೆದುಕೊಂಡಿತ್ತು.

ಪಾಕಿಸ್ತಾನದಲ್ಲಿ ಈಗ ಕಿತ್ತು ತಿನ್ನುವ ಬಡತನ. ಅಮೆರಿಕ ಕೊಡುವ ವಾರ್ಷಿಕ ನೆರವು ಸೈನ್ಯದ ಖರ್ಚಿಗೇ ಮುಡಿಪು. ಇನ್ನು ಅಭಿವೃದ್ಧಿಯ ಮಾತೆಲ್ಲಿ? ಆ ದೇಶದ ಅಧ್ಯಕ್ಷನ ಮಾನಸಿಕ ಸ್ಥಿತಿಯೇ ಸರಿಯಿಲ್ಲವೆಂಬ ಮಾತಿದೆ. ದೇಶದ ಸ್ಥಿತಿ ಇನ್ನು ಹೇಗೆ ಇರಲು ಸಾಧ್ಯ?

ಭಾರತ ಮತ್ತು ಪಾಕಿಸ್ತಾನ ಒಟ್ಟಿಗೆ ಉದಯಿಸಿದ ರಾಷ್ಟ್ರಗಳು. ಆದರೆ ಪಾಕಿಸ್ತಾನವು ಭಾರತಕ್ಕಿಂತ ಭಿನ್ನವಾದ ರಾಷ್ಟ್ರ. ಪ್ರಜಾಪ್ರಭುತ್ವಕ್ಕೆ ಪಾಕಿಸ್ತಾನದಲ್ಲಿ ಅರ್ಥವೇ ಇಲ್ಲ. ಒಂದೇ ಅಲ್ಲಿನ ಮಿಲಿಟರಿಯೇ ಕ್ಷಿಪ್ರ ಕ್ರಾಂತಿ ನಡೆಸಿ ಜನರಿಂದ ಆಯ್ಕೆಯಾದವರನ್ನು ಗಲ್ಲಿಗೇರಿಸಿ ಅಥವಾ ಗಡೀಪಾರು ಮಾಡಿ ನೇರವಾಗಿ ಅಧಿಕಾರ ಪಡೆಯುತ್ತದೆ, ಅಥವಾ ಆಳುವ ಸೋ ಕಾಲ್ಡ್ ಜನಪ್ರತಿನಿಧಿಗಳ ಸರ್ಕಾರವನ್ನು ನಿಯಂತ್ರಿಸುತ್ತದೆ. ಹೆಸರಿಗೆ ಇದು ಸ್ವತಂತ್ರ ದೇಶ. ಆದರೆ ಸ್ವತಂತ್ರ ರಾಷ್ಟ್ರದ ಮೂಲಭೂತ ಆವಶ್ಯಕತೆಯಾದ ಸಾರ್ವಭೌಮತೆಯನ್ನೂ ಸಹ ಪಾಕಿಸ್ತಾನ ಉಳಿಸಿಕೊಂಡಿಲ್ಲ. ಅಮೆರಿಕಾದ ಪಡೆಯನ್ನು ತನ್ನ ಮಡಿಲಲ್ಲೇ ಸುಡುವ ಕೆಂಡವಾಗಿ ಅದು ಉಳಿಸಿಕೊಂಡಿದೆ.

ಪಾಕಿಸ್ತಾನ ನಮಗೆ ನೂರಾರು ಪಾಠಗಳು ಹೇಳಿಕೊಡುತ್ತಿದೆ. ಧಾರ್ಮಿಕ ಮೂಲಭೂತವಾದಿಗಳ ಸುಪರ್ದಿಗೆ ಒಪ್ಪಿಸಿದರೆ ಯಾವುದೇ ದೇಶ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ ಎಂಬುದು ನಾವು ಕಲಿಯಬೇಕಾದ ಮೊದಲ ಪಾಠ. ಭಾರತದಲ್ಲೂ ಅಂಥ ಧಾರ್ಮಿಕ ಮೂಲಭೂತವಾದಿಗಳು ಮುನ್ನೆಲೆಗೆ ಬರಲು ಯತ್ನಿಸಿ ವಿಫಲಗೊಂಡಿರುವುದನ್ನು ನಾವು ಕಾಣುತ್ತೇವೆ. ನಮ್ಮಲ್ಲೂ ದೇಶಭಕ್ತ ಸ್ವದೇಶಿ ಉಗ್ರಗಾಮಿಗಳು ಹುಟ್ಟಿಕೊಂಡಿದ್ದಾರೆ, ಸಾಕಷ್ಟು ಭಯೋತ್ಪಾದನಾ ಕೃತ್ಯಗಳನ್ನೂ ನಡೆಸಿ ಸಿಕ್ಕಿಬಿದ್ದಿದ್ದಾರೆ. ವಿದೇಶಿಯಾಗಲಿ, ಸ್ವದೇಶಿಯಾಗಲಿ, ಯಾವುದೇ ಧರ್ಮದವರಾಗಲಿ ಭಯೋತ್ಪಾದಕರನ್ನು ಭಯೋತ್ಪಾದಕರಂತೆಯೇ ನೋಡುವ, ಅವರನ್ನು ಕಾನೂನಿನ ಅಡಿಯಲ್ಲಿ ಶಿಕ್ಷಿಸುವ ಮತ್ತವರ ಬೇರುಗಳನ್ನು ಕಿತ್ತೆಸೆಯುವ ಕೆಲಸ ಆಗಲೇಬೇಕು.

ಭಯೋತ್ಪಾದಕರು ಯಾವತ್ತಿಗೂ ಅಪಾಯಕಾರಿಯೇ ಆಗಿರುತ್ತಾರೆ. ಹಿಂದೆ ಎಲ್‌ಟಿಟಿಇಗಳನ್ನು ಮುದ್ದು ಮಾಡಿ, ತಮಿಳುನಾಡಿನಲ್ಲಿ ರಹಸ್ಯವಾಗಿ ತರಬೇತಿ ಕೊಟ್ಟ ಪರಿಣಾಮವನ್ನು ನಾವು ಅನುಭವಿಸಿದ್ದೇವೆ. ನಾವು ಅದಕ್ಕೆ ತೆತ್ತ ಬೆಲೆಯೂ ಕಡಿಮೆಯೇನಿರಲಿಲ್ಲ. ಈ ದೇಶದ ಮಾಜಿ ಪ್ರಧಾನಿಯನ್ನೇ ಕಳೆದುಕೊಳ್ಳಬೇಕಾಯಿತು.  ಲಾಡೆನ್‌ನನ್ನು ಬಳಸಿಕೊಂಡಿದ್ದ ಅಮೆರಿಕ ತಾನೇ ಲಾಡೆನ್‌ನ ಶಿಕಾರಿಯಾಯಿತು. ಭಾರತದ ಮೇಲೆ ಭಯೋತ್ಪಾದಕರನ್ನು ಛೂ ಬಿಟ್ಟ ಪಾಕಿಸ್ತಾನ ಈಗ ಅದೇ ಭಯೋತ್ಪಾದಕರ ದಾಳಿಗೆ ಸಿಲುಕಿದೆ. ಯಾವುದೇ ರಾಷ್ಟ್ರ ಇನ್ನೊಂದು ರಾಷ್ಟ್ರದ ಒಳಗೆ ಭಯೋತ್ಪಾದನೆ ನಡೆಸುವವರಿಗೆ ಸಹಕಾರ ಕೊಡುವುದು ಅನೈತಿಕ, ಅಪಮಾರ್ಗ. ಪಾಠಗಳನ್ನು ಎಲ್ಲರೂ ಕಲಿತಿದ್ದೇವೆ. ಇನ್ನಷ್ಟು ದುಸ್ಸಾಹಸಗಳನ್ನು ಮಾಡುವುದರಲ್ಲಿ ಯಾವ ಅರ್ಥವೂ ಇಲ್ಲ.

ಒಬಾಮಾರನ್ನು ನೋಡಿ ಕಲಿಯಿರಿ, ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಎಂದು ನಮ್ಮ ಮಾಧ್ಯಮಗಳ ಕೆಲವು ಪಂಡಿತರು ಟಿವಿ ಚಾನಲ್‌ಗಳಲ್ಲಿ ಉಪದೇಶ ನೀಡುತ್ತಿರುವುದನ್ನು ನೀವು ಗಮನಿಸಿರಬಹುದು. ಪಾಕಿಸ್ತಾನ ಸಹ ಒಂದು ಅಣ್ವಸ್ತ್ರ ರಾಷ್ಟ್ರ ಎಂಬುದನ್ನು ಇವರು ಮರೆತ ಹಾಗೆ ಕಾಣುತ್ತದೆ. ಯುದ್ಧಗಳಲ್ಲಿ ಸಾಯುವವರು ಅಮಾಯಕರು, ಬಡಪಾಯಿಗಳು. ಯುದ್ಧವೇ ಎಲ್ಲಕ್ಕೂ ಪರಿಹಾರ ಎನ್ನುವ ಯುದ್ಧೋನ್ಮಾದಿಗಳು ರಣರಂಗದಲ್ಲಿ ಕಾದುವ ಸಾಮರ್ಥ್ಯವಿಲ್ಲದ ಹೇಡಿಗಳು. ಇಂಥವರು ತಮ್ಮ ಮನೆಯ ಮುಂದೆ ನಾಯಿಯೊಂದು ಸತ್ತುಬಿದ್ದಿದ್ದರೆ, ಕಾರ್ಪರೇಷನ್‌ಗೊಂದು ದೂರವಾಣಿ ಕರೆ ಮಾಡಲೂ ಹಿಂಜರಿಯುವವರು. ಅವರು ಹೀಗೆ ಯುದ್ಧಪ್ರೀತಿಯ ಮಾತುಗಳನ್ನು ಹೇಳುತ್ತಲೇ ಇರುತ್ತಾರೆ, ಅದರಲ್ಲಿ ಆಶ್ಚರ್ಯವೇನಿಲ್ಲ. ಹಾಗೆ ನೋಡಿದರೆ ಪಾಕಿಸ್ತಾನ ಸರ್ಕಾರದ ಕಪಟ, ಪೊಳ್ಳುತನವನ್ನು ಮುಂಬೈ ದಾಳಿಯ ನಂತರದ ದಿನಗಳಲ್ಲಿ ಭಾರತ ಸಮರ್ಥವಾಗಿ ಬಯಲು ಮಾಡುತ್ತಲೇ ಬಂದಿದೆ. ಭಾರತ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇನ್ನಷ್ಟು ರಾಜತಾಂತ್ರಿಕ ಕ್ರಮಗಳನ್ನು ಮುಂದುವರೆಸಿ, ನಮಗೆ ಬೇಕಿರುವ ಉಗ್ರಗಾಮಿಗಳನ್ನು ಅಲ್ಲಿಂದ ಎಳೆತಂದು ಶಿಕ್ಷೆಗೆ ಒಳಪಡಿಸುವ ಕೆಲಸ ಮಾಡಬೇಕು.

ಪಾಕಿಸ್ತಾನದ ಮೇಲೆ ಯುದ್ಧಹೂಡುವ ಬದಲು ದೇಶದಲ್ಲಿ ಮಾಡಬೇಕಿರುವ ಕೆಲಸಗಳು ನೂರಾರಿವೆ. ಭಷ್ಟಾಚಾರಕ್ಕೆ ಹೊಸ ಭಾಷ್ಯವನ್ನೇ ಬರೆದ ೨ಜಿ ರಾಜಾ, ಕಲ್ಮಾಡಿ, ಯಡಿಯೂರಪ್ಪ ತರಹದ ಭ್ರಷ್ಟರು ಇಲ್ಲಿದ್ದಾರೆ. ಗುಜರಾತ್ ನರಮೇಧದ ಆರೋಪಿ ನರೇಂದ್ರ ಮೋದಿ ಮತ್ತೆ ಮತ್ತೆ ಗೆದ್ದು ಅಧಿಕಾರಕ್ಕೆ ಬರುತ್ತಿದ್ದಾರೆ. ಲಕ್ಷಾಂತರ ಕೋಟಿ ಕಪ್ಪುಹಣ ವಿದೇಶಿ ಬ್ಯಾಂಕುಗಳಲ್ಲಿ ಕೊಳೆಯುತ್ತಾ ಬಿದ್ದಿದೆ. ಪಾಕಿಸ್ತಾನದಂತೆಯೇ ಭಾರತದಲ್ಲೂ ಒಳ್ಳೆಯ ನಾಯಕರನ್ನು ಸೃಷ್ಟಿಸುವ ಕೆಲಸ ನಮ್ಮಿಂದಾಗುತ್ತಿಲ್ಲ. ಭ್ರಷ್ಟರನ್ನು ಜಾತಿಯ ಕಾರಣಕ್ಕೆ ಸಮರ್ಥಿಸಿಕೊಳ್ಳುವ, ಸಾವಿರಾರು ಜನರನ್ನು ಕೊಲ್ಲಿಸಿದ ಆರೋಪಿಗಳನ್ನು ಧರ್ಮದ ಕಾರಣಕ್ಕೆ ಅಭಿವೃದ್ಧಿಯ ಹೆಸರಿನಲ್ಲಿ ಸಮರ್ಥಿಸಿಕೊಂಡವರು ನಾವು. ದೇಶದ ರಾಜಕಾರಣಿಗಳು ಹಣ ಕೊಟ್ಟು ಮತವನ್ನು ಕೊಳ್ಳುವುದನ್ನು ಕಲಿತುಬಿಟ್ಟಿದ್ದಾರೆ. ನಮ್ಮನ್ನು ನಾವು ಮಾರಿಕೊಂಡು ರಾಜಕಾರಣಿಗಳ ಗುಲಾಮರಾಗಿದ್ದೇವೆ. ದೇಶದ ಬಹುಪಾಲು ಜನರು ಹಸಿವಿನಿಂದ ನರಳುತ್ತಿದ್ದಾರೆ. ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಜಾಗತೀಕರಣದ ಅಬ್ಬರದಲ್ಲಿ ನಮ್ಮ ಹಳ್ಳಿಗಳ ಜನರ ಬದುಕು ಮೂರಾಬಟ್ಟೆಯಾಗಿದೆ. ನಗರಗಳು ಉದ್ಯೋಗ ಅರಸಿ ಬರುವವರ ನಿರಾಶ್ರಿತರ ಶಿಬಿರಗಳಾಗಿವೆ. ಅಭಿವೃದ್ಧಿಯ ಹೆಸರಿನಲ್ಲಿ ರೈತರನ್ನು, ಆದಿವಾಸಿಗಳನ್ನು, ಗುಡ್ಡಗಾಡು ಜನರನ್ನು ಒಕ್ಕಲೆಬ್ಬಿಸಿ ಅವರ ಬದುಕನ್ನು ಭೀಕರಗೊಳಿಸಿದ್ದೇವೆ. ಜಾಗತೀಕರಣದ ನೆಪದಲ್ಲಿ ನವ ವಸಾಹತುಶಾಹಿಗಳನ್ನು ದೇಶದ ಒಳಗೆ ಬಿಟ್ಟುಕೊಂಡಿದ್ದೇವೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುವ, ಬಡವರು ನಿರ್ಗತಿಕರಾಗುವ ಇವತ್ತಿನ ಪರಿಸ್ಥಿತಿ ಭವಿಷ್ಯದ ಘೋರ ದಿನಗಳನ್ನು ಸೂಚಿಸುತ್ತಿದೆ. ಈಗಿರುವ ಮನಸ್ಥಿತಿಯ ರಾಜಕಾರಣಿಗಳು ಮುಂದುವರೆದರೆ ಪಾಕಿಸ್ತಾನ ಎದುರಿಸುತ್ತಿರುವ ಸಮಸ್ಯೆಗಳನ್ನೆಲ್ಲ ನಾವೂ ಎದುರಿಸಬೇಕಾದೀತು.

ಅದು ಹಾಗಿರಲಿ, ಪಾಕಿಸ್ತಾನ ಇನ್ನಾದರೂ ಬದಲಾಗಲಿ. ಆ ದೇಶವನ್ನು ಕತ್ತಲಕೂಪಕ್ಕೆ ನೂಕಿರುವ ಅಲ್ಲಿನ ಧಾರ್ಮಿಕ ಮೂಲಭೂತವಾದ ಕೊನೆಗೊಳ್ಳಲಿ. ನಿಜವಾದ ಅರ್ಥದ ಪ್ರಜಾಪ್ರಭುತ್ವ ಅಸ್ತಿತ್ವಕ್ಕೆ ಬರಲಿ. ಸ್ವಾತಂತ್ರ್ಯೋತ್ತರದಲ್ಲಿ ಇದುವರೆಗೆ ಕಾಣಿಸಿಕೊಳ್ಳದ ಒಳ್ಳೆಯ ಜನನಾಯಕರು ಇನ್ನಾದರೂ ರೂಪುಗೊಳ್ಳಲಿ. ಮಿಲಿಟರಿಗೆ ಕೊಡುವ ಹಣವನ್ನು ಅಲ್ಲಿನ ಆಡಳಿತಗಾರರು ಅಭಿವೃದ್ಧಿಗೆ ವ್ಯಯಿಸುವಂತಾಗಲಿ. ಜನರ ಜೀವನ ಮಟ್ಟ ಉತ್ತಮಗೊಳ್ಳಲಿ. ಧರ್ಮದ ಆಫೀಮನ್ನು ಕುಡಿದು ಭಯೋತ್ಪಾದಕರಾಗುತ್ತಿರುವ ನಿರುದ್ಯೋಗಿ ಯುವಕರಿಗೆ ಕೈ ತುಂಬ ಹಣ ಬರುವ ಉದ್ಯೋಗ ನೀಡುವ ಕೆಲಸವನ್ನು ಅಲ್ಲಿನ ಸರ್ಕಾರ ಮಾಡಲಿ. ಮಕ್ಕಳಿಗೆ ಆಧುನಿಕ ಕಾಲಮಾನಕ್ಕೆ ತಕ್ಕಂಥ ಶಿಕ್ಷಣವನ್ನು ಅಲ್ಲಿ ಕೊಡುವ ವ್ಯವಸ್ಥೆ ಜಾರಿಯಾಗಲಿ. ಆ ದೇಶದಲ್ಲೂ ಶಾಂತಿಯ ಪತಾಕೆ ಹಾರುವಂತಾಗಲಿ. ಜನರು ನೆಮ್ಮದಿಯಿಂದ ಬದುಕುವಂತಾಗಲಿ.

ಕೊನೆ ಮಾತು:
ದೇವರಾಜ ಅರಸು ಹುಣಸೂರು ತಾಲೂಕಿನ ತಮ್ಮ ಹಳ್ಳಿಯಲ್ಲಿ ತೋಟ ಮಾಡಿದರು. ಆ ಹಳ್ಳಿಯಲ್ಲಿ ತೋಟ ಮಾಡುವ ಕೆಲಸಕ್ಕೆ ಕೈ ಹಾಕಿದವರಲ್ಲಿ ಅವರೇ ಮೊದಲಿಗರು. ಅವರು ಸುಮ್ಮನಿರಲಿಲ್ಲ. ಅಕ್ಕ ಪಕ್ಕದ ರೈತರನ್ನೂ ತೋಟ ಮಾಡುವಂತೆ ಹುರಿದುಂಬಿಸಿದರು. ಸ್ನೇಹಿತರೊಬ್ಬರು ಅರಸು ಅವರನ್ನು ಒಮ್ಮೆ ಕೇಳಿದರು- ಅಲ್ಲಾರಿ, ನೀವೊಬ್ಬರು ತೋಟ ಮಾಡ್ಕೊಂಡು ಇರಿ. ಅಕ್ಕ ಪಕ್ಕದವರ ಉಸಾಬರಿ ನಿಮಗ್ಯಾಕೆ?. ಅರಸು ಹೇಳಿದರಂತೆ- ಅದು ಹಂಗಲ್ಲ, ನನ್ನ ಜೊತೆ ಪಕ್ಕದವರೂ ತೋಟ ಮಾಡಿದರೆ, ನನ್ನ ಸ್ವತ್ತು ಸುರಕ್ಷಿತವಾಗಿರುತ್ತೆ, ಮತ್ತು ಅವರಿಗೂ ಒಳ್ಳೆಯದಾಗುತ್ತೆ.

ಅಕ್ಕ ಪಕ್ಕದವರು ಸುಖ, ಸಂತೋಷ, ನೆಮ್ಮದಿಯಿಂದ ಇದ್ದರೆ ನಮಗೂ ನೆಮ್ಮದಿ ಅಲ್ಲವೆ?

ಅಕ್ಷಯ ತೃತೀಯದ ಚರ್ಚೆಗೆ ಚಿನ್ನದಂಗಡಿ ಮಾಲೀಕ, ಜತೆಗೊಬ್ಬ ಜ್ಯೋತಿಷಿ!


ಇವತ್ತು ಅಕ್ಷಯ ತೃತೀಯ. ಚಿನ್ನದ ಅಂಗಡಿಗಳ ಮುಂದೆ ಜನರ ಸಾಲುಸಾಲು. ಒಂದು ಗ್ರಾಮ್‌ದಾದರೂ ಸೈ, ಚಿನ್ನವನ್ನು ಕೊಳ್ಳಲೇಬೇಕೆಂಬ ತವಕ. ಚಿನ್ನದ ಬೆಲೆ ಗಗನ ಮುಟ್ಟಿದೆ. ಗ್ರಾಂ ಒಂದಕ್ಕೆ ೨೦೦೦ ರೂಪಾಯಿ ದಾಟಿದೆ. ಆದರೂ ಜನರು ಸುಮ್ಮನಿರಲಾರರು. ಚಿನ್ನದ ಅಂಗಡಿಗಳ ಮುಂದೆ ಕ್ಯೂ ಹಚ್ಚಿದ್ದಾರೆ. ಸಾಲ ಮಾಡಿಯಾದರೂ ಚಿನ್ನ ಕೊಳ್ಳುತ್ತಾರೆ.

ನಿನ್ನೆ ಸುವರ್ಣ ನ್ಯೂಸ್‌ನಲ್ಲೊಂದು ಕಾರ್ಯಕ್ರಮ. ಅಕ್ಷಯ ತೃತೀಯದ ಕುರಿತೇ ಒಂದು ಚರ್ಚೆ. ಭರ್ತಿ ಒಂದು ಗಂಟೆಯ ಕಾಲ ನಡೆದ ಈ ಕಾರ್ಯಕ್ರಮದ ಚರ್ಚೆಯಲ್ಲಿ ಪಾಲ್ಗೊಂಡವರು ಜ್ಯೋತಿಷಿ ದೈವಜ್ಞ ಸೋಮಯಾಜಿ ಹಾಗು ಸಾಯಿ ಗೋಲ್ಡ್ ಪ್ಯಾಲೇಸ್ ಎಂಬ ಚಿನ್ನದ ಅಂಗಡಿ ಮಾಲೀಕ ಸರವಣ್. (ಇವರು ಜೆಡಿಎಸ್ ಮುಖಂಡರೂ ಹೌದು.) ಹೇಗಿದೆ ನೋಡಿ ಜೋಡಿ? ಬಹುಶಃ ಒಂದು ಗಂಟೆಯ ಅವಧಿಯ ಈ ಕಾರ್ಯಕ್ರಮವನ್ನು ಸರವಣ್ ಅವರೇ ಪ್ರಾಯೋಜಿಸಿರಬಹುದು!

ಯಾವುದಾದರೂ ಚಲನಚಿತ್ರ ಬಿಡುಗಡೆಯಾದರೆ, ಆ ಚಿತ್ರದ ನಾಯಕ-ನಾಯಕಿ, ನಿರ್ದೇಶಕ, ನಿರ್ಮಾಪಕರು ಟಿವಿಗಳಲ್ಲಿ ಕಾಣಿಸಿಕೊಂಡು ಪ್ರಮೋಟ್ ಮಾಡುವುದನ್ನು ನಾವು ನೋಡಿದ್ದೇವೆ. ಈಗ ಚಿನ್ನ ಕೊಳ್ಳುವಿಕೆಯನ್ನು ಪ್ರಮೋಟ್ ಮಾಡಲು ಚಿನ್ನದಂಗಡಿ ಮಾಲೀಕರು ಜ್ಯೋತಿಷಿಗಳ ಜತೆ ಸುದ್ದಿ ಬಿತ್ತರಿಸುವ ಟಿವಿ ವಾಹಿನಿಗಳ ಸ್ಟುಡಿಯೋದಲ್ಲಿ ಕೂರುತ್ತಿದ್ದಾರೆ.

ಅಕ್ಷಯ ತೃತೀಯ ಮೀಡಿಯಾಗಳಿಗೆ ಜಾಹೀರಾತಿನ ಅಕ್ಷಯ ಪಾತ್ರೆಯಿದ್ದಂತೆ. ಇವತ್ತಿನ ಪತ್ರಿಕೆಗಳಲ್ಲಿ ಕೆಲವು ತಮ್ಮ ಇಡೀ ಮುಖಪುಟವನ್ನೇ ಚಿನ್ನದಂಗಡಿಗಳ ಜಾಹೀರಾತಿಗೆ ಬಳಸಿಕೊಂಡು, ಮುಖಪುಟವನ್ನು ಮೂರನೇ ಪುಟಕ್ಕೆ ತಳ್ಳಿವೆ. ಹಣ ಒದ್ದುಕೊಂಡು ಬರುವ ಈ ಅವಕಾಶವನ್ನು ಯಾರು ತಾನೇ ಕಳೆದುಕೊಳ್ಳುತ್ತಾರೆ ಹೇಳಿ. ಹೀಗಾಗಿ ಅಕ್ಷಯ ತೃತೀಯ ಅಂದರೆ ಏನು ಎಂಬುದನ್ನೇ ನಮ್ಮ ಮೀಡಿಯಾಗಳು ಮುಚ್ಚಿಡುತ್ತಿವೆ.

ಅಕ್ಷಯ ತೃತೀಯ ಅಂದರೆ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ದಿನ. ಹಿಂದೂಗಳಿಗೆ, ಜೈನರಿಗೆ ಈ ದಿನ ವಿಶೇಷವಾದದ್ದು. ಅಕ್ಷಯ ಎಂದು ಖಾಲಿಯಾಗದ್ದು ಎಂದರ್ಥ. ಈ ವಿಶೇಷ ದಿನದಲ್ಲಿ ಸೂರ್ಯ ಮತ್ತು ಚಂದ್ರ ವಿಶೇಷವಾಗಿ ಬೆಳಗುತ್ತಾರೆ.

ಹಿಂದೂ ಪುರಾಣಗಳ ಪ್ರಕಾರ ತ್ರೇತಾ ಯುಗ ಆರಂಭವಾಗಿದ್ದು ಇದೇ ದಿನ, ವಿಷ್ಣುವಿನ ಅವತಾರಗಳಲ್ಲಿ ಒಂದಾದ ಪರಶುರಾಮ ಇದೇ ದಿನ ಹುಟ್ಟಿದನೆಂಬ ನಂಬಿಕೆಯಿದೆ.  ಗಂಗಾ ನದಿ ಭೂಮಿಗೆ ಅವತರಿಸಿದ್ದು ಇದೇ ದಿನ. ಸುಧಾಮನಿಗೆ ಶ್ರೀಕೃಷ್ಣನು ಅಷ್ಟೈಶ್ವರ್ಯಗಳನ್ನು ಕಲ್ಪಿಸಿದ್ದೂ ಇದೇ ದಿನ. ವೇದವ್ಯಾಸರು ಗಣಪತಿಯನ್ನು ಬಳಸಿಕೊಂಡು ಮಹಾಭಾರತವನ್ನು ಬರೆಯಲು ಆರಂಭಿಸಿದ್ದು ಕೂಡ ಈ ದಿನ.

ಪುರಾಣಗಳ ಮಾತು ಹಾಗಿರಲಿ. ಅಕ್ಷಯ ತೃತೀಯ ಶುಭ ಕಾರ್ಯಗಳಿಗೆ ಪ್ರಶಸ್ತವಾದ ದಿನ ಎಂಬ ನಂಬಿಕೆಯಂತೂ ಮೊದಲಿನಿಂದ ಇದೆ. ಯಾವುದೇ ಹೊಸ ಕಾರ್ಯವನ್ನು ಆರಂಭಿಸಲು ಇದು ಒಳ್ಳೆಯ ದಿನ ಎಂದು ಬಹಳಷ್ಟು ಜನರು ನಂಬುತ್ತಾರೆ. ಏನನ್ನಾದರೂ ಕೊಂಡರೆ ಅದು ಅಕ್ಷಯವಾಗುತ್ತದೆ ಎಂಬ ಪ್ರತೀತಿಯೂ ಇದೆ. (ಬರಿಯ ಚಿನ್ನವಲ್ಲ.)

ಮೇಲಿನದನ್ನೆಲ್ಲ ಗಮನಿಸಿ ಈ ದಿನವನ್ನು ಚಿನ್ನದಂಥ ದಿನ ಎಂದು ಒಪ್ಪಿಕೊಳ್ಳೋಣ. ಆದರೆ ಅಕ್ಷಯ ತೃತೀಯದ ದಿನ ಚಿನ್ನವನ್ನೇ ಕೊಳ್ಳಬೇಕು ಎಂದು ಹೇಳಿದವರ‍್ಯಾರು? ಈ ಮಾತು ಚಲಾವಣೆಗೆ ಬಂದಿದ್ದು ಹೇಗೆ? ಸುಮಾರು ೧೫-೨೦ ವರ್ಷಗಳ ಹಿಂದೆ ಈ ರೀತಿಯಲ್ಲಿ ಅಕ್ಷಯ ತೃತೀಯವನ್ನು ಚಿನ್ನ ಕೊಳ್ಳುವ ಹಬ್ಬವನ್ನಾಗಿ ಯಾರೂ ಆಚರಿಸುತ್ತಿರಲಿಲ್ಲ. ಆ ನಂತರ ಹೊಸ ಮಿಥ್‌ಗಳು ಹುಟ್ಟಿಕೊಂಡಿದ್ದು ಹೇಗೆ?

ಇವತ್ತು ಅತಿಹೆಚ್ಚು ಚಿನ್ನದ ಅಂಗಡಿಗಳನ್ನು ಇಟ್ಟುಕೊಂಡಿರುವವರು ಮಾರ್ವಾಡಿಗಳು. ಅವರು ಅನುಸರಿಸುವುದು ಜೈನಧರ್ಮವನ್ನು. ಜೈನರಿಗೂ ಸಹ ಇದು ಮಹತ್ವದ ದಿನ. ಜೈನರ ಮೊದಲನೇ ತೀರ್ಥಂಕರ ವೃಷಭದೇವ ಅಯೋಧ್ಯೆಯ ದೊರೆಯಾಗಿದ್ದ. ಆತ ಸರ್ವಸ್ವವನ್ನೂ ತ್ಯಾಗ ಮಾಡಿ ಜೈನಮುನಿಯಾಗುತ್ತಾನೆ. ಜೈನ ಮುನಿಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವುದಿಲ್ಲ. ಅವರು ಅದನ್ನು ಬೇರೆಯವರಿಂದ ಬೇಡಿ ಪಡೆಯುತ್ತಾರೆ. ವೃಷಭದೇವ ಸಹ ತನ್ನ ಜನರಿಂದಲೇ ಆಹಾರವನ್ನು ಬೇಡುತ್ತಾನೆ. ಆದರೆ ಜನರು ಭಿಕ್ಷೆ ನೀಡಲು ಒಲ್ಲೆಯೆನ್ನುತ್ತಾರೆ. ರಾಜನಿಗೆ ಯಾರಾದರೂ ಅನ್ನದ ಭಿಕ್ಷೆ ನೀಡಲು ಸಾಧ್ಯವೇ? ಜನರು ಚಿನ್ನ ಇತ್ಯಾದಿ ಒಡವೆಗಳು, ಆನೆಗಳು, ಕುದುರೆಗಳನ್ನು ಕೊಡುತ್ತಾರೆ. ಕಡೆಗೆ ತಮ್ಮ ಹೆಣ್ಣುಮಕ್ಕಳನ್ನೂ ಸಹ ಉಡುಗೊರೆಯಾಗಿ ನೀಡುತ್ತಾರೆ. ವೃಷಭದೇವನಿಗೆ ಇದ್ಯಾವುದೂ ಬೇಕಾಗಿರಲಿಲ್ಲ. ಆತನಿಗೆ ಬೇಕಾಗಿದ್ದು ಹಿಡಿ ಅನ್ನ. ಹೀಗಾಗಿ ಆತ ಜನರು ಕೊಟ್ಟಿದ್ದನ್ನೆಲ್ಲ ತಿರಸ್ಕರಿಸಿ ಉಪವಾಸ ಆರಂಭಿಸುತ್ತಾನೆ. ಕಡೆಗೊಂದು ದಿನ ಆತನ ಮೊಮ್ಮಗ ಶ್ರೇಯಾಂಶ ಕುಮಾರ ತನ್ನ ತಾತನ ಮನದ ಇಂಗಿತವನ್ನು ಅರಿತುಕೊಳ್ಳುತ್ತಾನೆ. ಆತನಿಗೆ ಕಬ್ಬಿನ ಹಾಲನ್ನು ಕುಡಿಸುವ ಮೂಲಕ ಉಪವಾಸವನ್ನು ಕೊನೆಗೊಳಿಸುವಂತೆ ಮಾಡುತ್ತಾನೆ. ಜೈನರ ಮೊದಲನೇ ತೀರ್ಥಂಕರ ವೃಷಭದೇವ ಉಪವಾಸ ಕೊನೆಗೊಳಿಸಿ ಕಬ್ಬಿನ ಹಾಲು ಕುಡಿದ ದಿನವೇ ಅಕ್ಷಯ ತೃತೀಯ ಎಂದು ಜೈನರು ನಂಬುತ್ತಾರೆ.

ಮೇಲಿನ ಕಥೆಯು ಹೇಳುವ ಆದರ್ಶವೇ ಬೇರೆ. ಜಗತ್ತಿನ ಎಲ್ಲ ಐಶ್ವರ್ಯವನ್ನು ತಿರಸ್ಕರಿಸಿ ತುತ್ತು ಅನ್ನ ಸಾಕು ಎನ್ನುವ ತೀರ್ಥಂಕರರೆಲ್ಲಿ, ಇದೇ ದಿನದ ಮಹತ್ವವನ್ನು ತಮ್ಮ ಲಾಭಕೋರ ಉದ್ದೇಶಗಳಿಗಾಗಿ ಬಳಸಿಕೊಂಡು, ಜನರಲ್ಲಿ ಕೊಳ್ಳುಬಾಕತನವನ್ನು ಪ್ರೋತ್ಸಾಹಿಸುವ, ಮೌಢ್ಯವನ್ನು ಬಿತ್ತುವ ವ್ಯಾಪಾರಿಗಳೆಲ್ಲಿ?

ಇದೇ ಚಿನ್ನದ ಅಂಗಡಿ ವ್ಯಾಪಾರಿಗಳು ಲಕ್ಕಿ ಸ್ಟೋನ್‌ಗಳ ಹೆಸರಿನಲ್ಲಿ ನಡೆಸುತ್ತಿರುವ ದಂಧೆ ಎಲ್ಲರಿಗೂ ಗೊತ್ತಿರುವಂಥದ್ದೆ. ನಿಮ್ಮ ಜಾತಕ ನೋಡಿ, ನಿಮಗೆ ಅನುಕೂಲವಾದ ಲಕ್ಕಿ ಸ್ಟೋನ್ ಗಳನ್ನು ನಿಮ್ಮ ಆಭರಣಗಳಿಗೆ ಹಾಕುತ್ತೇವೆ ಎಂದು ಜನರಿಂದ ಸುಲಿಗೆ ನಡೆಸುತ್ತಿದ್ದಾರೆ. ಇದಕ್ಕಾಗಿ ಅವರು ತಮ್ಮ ಅಂಗಡಿಗಳಲ್ಲೇ ಜ್ಯೋತಿಷಿಗಳನ್ನು ಇಟ್ಟುಕೊಂಡಿದ್ದಾರೆ.

ಜ್ಯೋತಿಷಿಗಳಿಗೆ, ಚಿನ್ನದಂಗಡಿ ಮಾಲೀಕರಿಗೆ ಬೆನ್ನೆಲುಬಾಗಿ ನಿಂತಿವೆ ನಮ್ಮ ಮಾಧ್ಯಮಗಳು!

Wednesday, May 4, 2011

ಸಾಯಿಬಾಬಾ ಆತ್ಮ ಸಮಯ ಟಿವಿಯೊಂದಿಗೆ ಮಾತನಾಡಿತಂತೆ....!


 ನಾಡಿದ್ದು ತಾರೀಖು ಮೇ ೬. ಜಗನ್ಮಾತೆ ಭೂಮಿಗೆ ಬರುತ್ತಾಳೆ ಎಂದು ಬ್ರಹ್ಮಾಂಡ ಗುರು ನರೇಂದ್ರ ಶರ್ಮ ಭವಿಷ್ಯ ನುಡಿದ ದಿನ. ಆಕೆ ಬಂದ ನಂತರ ಪ್ರಳಯದ ಪ್ರಕ್ರಿಯೆಗಳು ಆರಂಭವಾಗುತ್ತವೆ ಎಂದಿದ್ದರು ನರೇಂದ್ರ ಶರ್ಮ. ಯಾಕೋ, ಏನೋ ಈಗೀಗ ನರೇಂದ್ರ ಶರ್ಮ ಪ್ರಳಯದ ವಿಷಯ ಮಾತನಾಡುತ್ತಲೇ ಇಲ್ಲ. ಜಗನ್ಮಾತೆ ಬರುವ ವಿಷಯವನ್ನು ಸಹ ಹೇಳುತ್ತಲೇ ಇಲ್ಲ. ನೋಡ್ತಾ ಇರಿ, ನವೆಂಬರ್ ಒಳಗೆ ಇಡೀ ಪ್ರಪಂಚದಲ್ಲಿ ಕರೆಂಟ್ (ಪವರ್) ಅನ್ನೋದೇ ಇರೋದಿಲ್ಲ ಎನ್ನುತ್ತಿದ್ದ ಶರ್ಮ ಅವರು ಸುಮ್ಮನಾಗಿಬಿಟ್ಟಿದ್ದಾರೆ. ಈಗ ಅವರು ಡಾ.ಶಿವಕುಮಾರ ಸ್ವಾಮಿಗಳ ಕುರಿತು ವಿಶೇಷ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ. ಈ ದಿಢೀರ್ ಬದಲಾವಣೆಗೆ ಏನು ಕಾರಣ ಎಂದು ನೀವು-ನಾವು ಸುಲಭವಾಗಿ ಊಹಿಸಬಹುದು.

ಈ ನಡುವೆ ಕಪಟ ಬಾಬಾ-ಜ್ಯೋತಿಷಿಗಳ ವಿರುದ್ಧ ಟಿವಿ೯ ಹಾಗು ಸುವರ್ಣ ವಾಹಿನಿಗಳಲ್ಲಿ ಅಭಿಯಾನಗಳು ನಡೆದದ್ದನ್ನು ನೀವು ಗಮನಿಸಿರುತ್ತೀರಿ. ಇದ್ದಕ್ಕಿದ್ದಂತೆ ಈ ಎರಡೂ ಚಾನಲ್‌ಗಳಿಗೆ ಇದ್ದಕ್ಕಿದ್ದಂತೆ ವೈಚಾರಿಕ ಪ್ರಜ್ಞೆ ಜಾಗೃತವಾಗಿರುವುದು ಆಶ್ಚರ್ಯ ಹಾಗು ಸಂತೋಷ. ಆದರೆ ಇದೇ ಚಾನಲ್‌ಗಳಲ್ಲಿ ಇನ್ನೂ ಜ್ಯೋತಿಷ್ಯದ ವಿಜೃಂಭಣೆ ನಿಂತಿಲ್ಲ. ನಿಲ್ಲುವ ಯಾವ ಸೂಚನೆಗಳೂ ಕಾಣಿಸುತ್ತಿಲ್ಲ.

ಆ ವಿಷಯ ಹಾಗಿರಲಿ, ಸಮಯ ಟಿವಿಯಲ್ಲಿ ಪ್ರಸಾರವಾದ ಒಂದು ವಿಚಿತ್ರ ಕಾರ್ಯಕ್ರಮದ ಕುರಿತು ಪ್ರಸ್ತಾಪಿಸಲೇಬೇಕು. ಈಗಾಗಲೇ ಕೆಲವರು ಈ ಕುರಿತು ಫೇಸ್‌ಬುಕ್‌ನಲ್ಲಿ ಚರ್ಚಿಸಿದ್ದಾರೆ. ಈ ಕಾರ್ಯಕ್ರಮವನ್ನು ನಾವು ನೋಡಲು ಸಾಧ್ಯವಾಗಲಿಲ್ಲ.

ಫೇಸ್‌ಬುಕ್‌ನಲ್ಲಿ ಮಾನು ಹೆಗ್ಗೋಡು ಬರೆದಿರುವ ಪ್ರಕಾರ ಜನ್ಮಾಂತರ ಎಂಬ ಕಾರ್ಯಕ್ರಮವನ್ನು ನಡೆಸುತ್ತಿದ್ದ ರಾಮಚಂದ್ರ ಗುರೂಜಿ ಎಂಬುವವರು ಸಮಯ ಟಿವಿಯ ವಿಶೇಷ ಕಾರ್ಯಕ್ರಮದಲ್ಲಿ ಸಾಯಿಬಾಬಾ ಆತ್ಮದೊಂದಿಗೆ ಮಾತನಾಡಿದರಂತೆ. ಇದಕ್ಕಾಗಿ ಅವರು ಸಾಯಿಬಾಬಾ ಸಂಬಂಧಿಯೊಬ್ಬರನ್ನು ಬಳಸಿಕೊಂಡು, ಅವರ ಮೂಲಕ ಬಾಬಾ ಆತ್ಮದೊಂದಿಗೆ ಸಂವಾದ ನಡೆಸಿದರಂತೆ. ಈ ಸಂದರ್ಭದಲ್ಲಿ ಕೆಲವು ಪ್ರಶ್ನೆಗಳಿಗೂ ಸಾಯಿಬಾಬಾ ಅವರ ಆತ್ಮ ಪ್ರತಿಕ್ರಿಯಿಸಿತಂತೆ. ಸಾಯಿಬಾಬಾ ಅವರು ತಮ್ಮ ಸಾವನ್ನು ಸಹಜಸಾವು ಎಂದು ಕರೆದುಕೊಂಡರಂತೆ. ಹಾಗೆಯೇ ತಮ್ಮ ಉತ್ತರಾಧಿಕಾರಿಯಾಗಿ ವಿದೇಶಿಯೊಬ್ಬರು ನೇಮಕವಾಗುತ್ತಾರೆ ಎಂದು ಹೇಳಿದರಂತೆ. ಅವರು ಸತ್ತಿದ್ದು ೧೭ರ ಮುಂಜಾನೆಯಂತೆ.

ಮಾನು ಅವರು ಕೊಟ್ಟಿರುವ ಮಾಹಿತಿಗಳು ಇಷ್ಟು. ಸಾಯಿಬಾಬಾ ಅವರ ಆತ್ಮ ಇನ್ನೂ ಏನೇನು ಹೇಳಿತೋ ಗೊತ್ತಿಲ್ಲ. ಈ ಕಾರ್ಯಕ್ರಮ ನೋಡಿರಬಹುದಾದ ಓದುಗರು ಇನ್ನಷ್ಟು ಬೆಳಕು ಚೆಲ್ಲಿದರೆ ಅನುಕೂಲವಾಗುತ್ತದೆ. ಮಾಧ್ಯಮಗಳು ಇಷ್ಟು ನೀಚ ಸ್ಥಿತಿಗೆ ಇಳಿಯಬೇಕಾ? ಮಾತನಾಡಿದ್ದು ಸಾಯಿಬಾಬಾ ಅವರ ಆತ್ಮದೊಂದಿಗೇ ಎಂದು ಹೇಳಲು ರಾಮಚಂದ್ರ ಗುರೂಜಿಯವರ ಬಳಿಯಾಗಲಿ, ಸಮಯ ಟಿವಿಯವರ ಬಳಿಯಾಗಲಿ ಯಾವ ಪುರಾವೆಯಿದೆ?

ಹೀಗೆ ಆತ್ಮಗಳ ಜತೆ ಸಂವಾದ ನಡೆಸಿ, ಎಲ್ಲವನ್ನೂ ತಿಳಿದುಕೊಳ್ಳಬಹುದಾದರೆ ಪ್ರತಿ ಪೊಲೀಸ್ ಠಾಣೆಗಳಲ್ಲೂ ಒಬ್ಬೊಬ್ಬ ರಾಮಚಂದ್ರ ಗುರೂಜಿಯ ಶಿಷ್ಯರನ್ನು ನಿಯೋಜಿಸುವುದು ಒಳ್ಳೆಯದು. ಹಾಗಾದಲ್ಲಿ ಎಲ್ಲ ಕೊಲೆ ಕೇಸುಗಳು ಕ್ಷಣ ಮಾತ್ರದಲ್ಲಿ ಬಗೆಹರಿಯುತ್ತವೆ. ನ್ಯಾಯಾಲಯಗಳಲ್ಲಿ ವಕೀಲರ ಬದಲಾಗಿ, ಅಲ್ಲೂ ಗುರೂಜಿಯ ಶಿಷ್ಯರನ್ನು ನೇಮಿಸಿದರೆ ನ್ಯಾಯಾಧೀಶರ ಕೆಲಸವೂ ಹಗುರವಾಗುತ್ತದೆ.

ಈ ಆತ್ಮಗಳ ಜತೆ ಮಾತನಾಡುವ ಕಾರ್ಯಕ್ರಮಗಳನ್ನು ಹಲವಾರು ಕನ್ನಡ ಚಾನೆಲ್‌ಗಳು ಇತ್ತೀಚಿಗೆ ನಡೆಸಿಕೊಂಡು ಬಂದಿವೆ. ಆ ಕಾರ್ಯಕ್ರಮಗಳ ಸಿಬ್ಬಂದಿ ಅತಿಥಿಗಳನ್ನು ಆಹ್ವಾನಿಸುವಾಗಲೇ ಅವರಿಗೆ ಪೂರ್ವಜನ್ಮದಲ್ಲಿ ದೊಡ್ಡದೊಡ್ಡ ವ್ಯಕ್ತಿಯಾಗುವ ಆಮಿಷಗಳನ್ನು ಒಡ್ಡಿರುವುದನ್ನು ನಾವು ಬಲ್ಲೆವು. ಸಂಪೂರ್ಣ ಸ್ಕ್ರಿಪ್ಟೆಡ್ ಕಾರ್ಯಕ್ರಮಗಳಿವು. ರಾಜಕಾರಣಿಯೊಬ್ಬರನ್ನು ಕಾರ್ಯಕ್ರಮದಲ್ಲಿ ಭಾಗವಹಿಸಲು ಪುಸಲಾಯಿಸಲು ಯತ್ನಿಸಿದ ವ್ಯಕ್ತಿಯೊಬ್ಬರು, ನಿಮ್ಮನ್ನು ಮಯೂರ ವರ್ಮನನ್ನಾಗಿ ಮಾಡುತ್ತೇವೆ, ನಿಮ್ಮ ರೆಪ್ಯುಟೇಷನ್ ಹೆಚ್ಚುತ್ತದೆ ಎಂದು ಹೇಳಿದ್ದರಂತೆ. ಆ ರಾಜಕಾರಣಿ ಹಚ್ಯಾ ಎಂದು ಓಡಿಸಿದ್ದಾರೆ. ಈ ಆತ್ಮಗಳ ಜತೆ ಸಂವಾದದ ಕಾರ್ಯಕ್ರಮಗಳು ಕಪಟ ನಾಟಕ ಎಂದು ಗೊತ್ತಿರುವ ಚಾನಲ್‌ಗಳು ಕಾರ್ಯಕ್ರಮಗಳಿಗೆ ಟಿಆರ್‌ಪಿ ಹೆಸರಲ್ಲಿ ಅವಕಾಶ ಕಲ್ಪಿಸುತ್ತ ಬಂದಿವೆ.

ಇದೀಗ ಸಾಯಿಬಾಬಾ ಅವರು ಸತ್ತ ಕೆಲವೇ ದಿನಗಳಲ್ಲಿ ಅವರ ಆತ್ಮದ ಜತೆ ಮಾತನಾಡಿಸುವ ನಾಟಕವನ್ನು ಸೃಷ್ಟಿಸಿ, ನ್ಯೂಸ್ ಚಾನಲ್‌ನಲ್ಲೇ ಜನರನ್ನು ದಿಕ್ಕುತಪ್ಪಿಸುವ ಯತ್ನ ನಡೆದದ್ದು ಮಾತ್ರ ಅಕ್ಷಮ್ಯ.

ಶಶಿಧರ ಭಟ್ಟರು ಹಿಂದೆ ಭಾನಾಮತಿ ಕಾರ್ಯಕ್ರಮ ನಡೆಸುತ್ತಿದ್ದಾಗಲೂ ಅದನ್ನು ವೈಜ್ಞಾನಿಕ ದೃಷ್ಟಿಕೋನದಲ್ಲಿ ರೂಪಿಸುವ ಪ್ರಯತ್ನ ನಡೆಸುತ್ತಿದ್ದರು. ಈಗ ಅವರೇ ಮುಖ್ಯಸ್ಥರಾಗಿರುವ ಸಮಯ ಟಿವಿಯಲ್ಲಿ ಇಂಥದ್ದನ್ನು ನಿರೀಕ್ಷಿಸಿರಲಿಲ್ಲ. ಭಟ್ಟರೇ, ದಯವಿಟ್ಟು ಇಂಥದ್ದನ್ನು ನಿಲ್ಲಿಸಿ. ಇದು ಕರ್ನಾಟಕದ ವೈಚಾರಿಕ ಪರಂಪರೆಗೆ ನಾವು ಮಾಡುವ ಅಪಚಾರ.

ಇದಕ್ಕಿಂತ ಇನ್ನೇನೂ ಹೇಳಲು ಮನಸ್ಸು ಬರುತ್ತಿಲ್ಲ.

ಲಾಡೆನ್ ಹತ್ಯೆ: ಪರಶುರಾಮ್ ಕಲಾಲ್ ಅವರ ಪ್ರಶ್ನೆಗಳು...

ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್ ಹತ್ಯೆ ಕುರಿತು ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ಹತ್ಯೆಯ ಚರ್ಚೆಯ ನಡುವೆಯೇ ಮರೆತುಹೋಗಬಹುದಾದ ವಿಷಯಗಳ ಕುರಿತು ಪತ್ರಕರ್ತ ಪರಶುರಾಮ್ ಕಲಾಲ್ ಈ ಲೇಖನ ಬರೆದಿದ್ದಾರೆ. ಹೊಸಪೇಟೆಯವರಾದ ಕಲಾಲ್ ಸಾಮಾಜಿಕ ಅಸಮಾನತೆಗಳ ವಿರುದ್ಧ ನಿರಂತರ ಹೋರಾಡಿಕೊಂಡರು ಬಂದವರು.-ಸಂ

ಪರಶುರಾಮ್ ಕಲಾಲ್
ಬಿನ್ ಲಾಡೆನ್ ಹತ್ಯೆಯ ಸುದ್ದಿಯನ್ನು ಎಲ್ಲಾ ಪತ್ರಿಕೆಗಳು ತನಿಖಾ ವರದಿ ರೀತಿ ಲಂಬಿಸಿ ಬರೆದಿವೆ. ಟಿ.ವಿ. ಸುದ್ದಿ ಮಾಧ್ಯಮಗಳಂತೂ ಪತ್ತೆದಾರಿ ಕಥೆಯನ್ನಾಗಿ ಲಂಬಿಸಿ ಎಳೆದು ಹಾಕಿವೆ. ಭಯೋತ್ಪಾದಕನ ಅಂತ್ಯ ಹೇಗಾಯಿತು ಎನ್ನುವದರಿಂದ ಹಿಡಿದು ಪಾಕಿಸ್ತಾನದ ಪಾತ್ರದವರೆಗೆ, ಅಮೆರಿಕಾದ ಸಿಐಎ ಯೋಜಿತ ತನಿಖೆಯ ಕುರಿತು ಸಿಐಡಿ ಧಾರವಾಹಿಯನ್ನಾಗಿಸಿ ಬಿಟ್ಟಿವೆ. ಈ ಸಂದರ್ಭದಲ್ಲಿ ನಾವು ಕೇಳಿಕೊಳ್ಳಬೇಕಾದ ಪ್ರಶ್ನೆಗಳು ಮರೆಯಾಗಿವೆ ಅಥವಾ ಮಸುಕಾಗಿ ಬಿಟ್ಟಿವೆ.

ಯಾರು ಭಯೋತ್ಪಾದಕರು? ಅಮೆರಿಕಾ ಹೇಳಿದ ಮೇಲೆಯೇ ನಾವು ಅವರನ್ನು ಭಯೋತ್ಪಾದಕ ಅನ್ನಬೇಕಾ? ಅಸಲಿ ಈ ಬಿನ್ ಲಾಡೆನ್ ಒಬ್ಬ ಭಯೋತ್ಪಾದಕನಾಗಿ ರೂಪಗೊಂಡಿದ್ದು ಹೇಗೆ? ಹೀಗೆ ರೂಪಿಸಿದವರು ಯಾರು? ಇದನ್ನು ಒಂದಿಷ್ಟು ಪರಿಶೀಲನೆ ಮಾಡುವುದು ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಮಾಧ್ಯಮಗಳ ಕರ್ತವ್ಯವಾಗಿತ್ತು. ಅದನ್ನು ಅವುಗಳು ಅಷ್ಟು ಸರಿಯಾಗಿ ಪಾಲಿಸಿಲ್ಲ ಎನ್ನುವುದೇ ಈ ಬರಹದ ಹಿಂದಿರುವ ವಿಷಾದವಾಗಿದೆ.

ಸೋವಿಯತ್ ಒಕ್ಕೂಟ ಅಖಂಡವಾಗಿದ್ದಾಗ ಅಲ್ಲಿಯ ಚೆಚೆನ್ಯ ಪ್ರಾಂತದಲ್ಲಿ ಭಯೋತ್ಪಾದನೆ ನಡೆಸಲು ಅಮೆರಿಕಾ ರೂಪಿಸಿದ ವ್ಯಕ್ತಿಯೇ ಈ ಬಿನ್ ಲಾಡೆನ್ ಆಗಿದ್ದ. ಅಪಘಾನಿಸ್ತಾನದಲ್ಲಿ ಸೊವಿಯತ್ ದೇಶದ ಸೈನ್ಯವನ್ನು ಹಿಂದಕ್ಕೆ ಕಳಿಸಲು ತಾಲಿಬಾನಿಗಳಿಗೆ ಆಪಾರ ಪ್ರಮಾಣದ ಶಸ್ತ್ರಾಗಳನ್ನು ಹಾಗೂ ಹಣವನ್ನು ಸಹಾಯ ಮಾಡಿದ ಅಮೆರಿಕಾ ಇದೇ ಬಿನ್‌ಲಾಡೆನ್ ಹಾಗೂ ತಾಲಿಬಾನಿಗಳನ್ನು ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರು ಎಂದು ಕರೆದಿತ್ತು. ಬಹಿರಂಗವಾಗಿಯೇ ಇವರನ್ನು ಬೆಂಬಲಿಸಿತ್ತು. ಇರಾನ್-ಇರಾಕ್ ನಡುವಿನ ೧೩ ವರ್ಷಗಳ ಯುದ್ಧದಲ್ಲಿ ಸದ್ದಾಂ ಹುಸೇನ್ ಅವರನ್ನು ಸಹ ಸ್ವಾತಂತ್ರ್ಯ ಹೋರಾಟಗಾರ ಎಂದು ಹೇಳಿತ್ತು. ಯಾವಾಗ ಸದ್ದಾಂ ಹುಸೇನ್ ಅಮೆರಿಕಾದ ವಿರುದ್ಧ ಸೆಣೆಸುತ್ತಾ ಯುರೋ ಕರೆನ್ಸಿ ಮೂಲಕ ತೈಲ ಮಾರಾಟಕ್ಕೆ ಮನಸ್ಸು ಮಾಡಿದೊಡನೆ ಭಯೋತ್ಪಾದಕನಾಗಿ ಬಿಟ್ಟ. ಆತನ ರಾಷ್ಟ್ರದಲ್ಲಿ ಪರಮಾಣು ಬಾಂಬ್‌ಗಳಿವೆ ಎಂದು ಅಲ್ಲಿ ಯುದ್ಧ ನಡೆಸಿದ ಅಮೆರಿಕಕ್ಕೆ ಇರಾಕ್‌ನಲ್ಲಿ ಯಾವ ಬಾಂಬ್ ಕಾಣಿಸಲಿಲ್ಲ. ಅದರ ಬದಲು ತೈಲ ಗಣಿಗಳೆಲ್ಲಾ ಅಮೆರಿಕಾ ತೈಲ ಕಂಪನಿಗಳು ವಶ ಪಡೆಸಿಕೊಳ್ಳಲು ಸಾಧ್ಯವಾಯಿತು. ಇವತ್ತಿಗೂ ಇರಾಕ್ ಬಿಟ್ಟು ಅಮೆರಿಕಾ ಸೈನ್ಯ ಹೊರಗೆ ಹೋಗಿಲ್ಲ. ಈ ಯುದ್ಧದಲ್ಲಿ ೧೫ ಲಕ್ಷ ಜನರು ಹತರಾಗಿದ್ದಾರೆ. ಈ ಭಯೋತ್ಪಾದನೆಗೆ ಏನನ್ನಬೇಕು?

ಜಗತ್ತಿನ ಸಾರ್ವಭೌಮನೆಂದು ಭಾವಿಸಿಕೊಂಡಿರುವ ಅಮೆರಿಕಾದ ಮುಖ್ಯ ಗುರಿ ಲಾಭಬಡುಕತನ. ಯುದ್ಧ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡುವ ಕಂಪನಿಗಳು ಹಾಗೂ ತೈಲ ಕಂಪನಿಗಳ ಲಾಭಕೋರತನಕ್ಕೆ ಪೂರಕವಾಗಿಯೇ ಅಮೆರಿಕದ ನೀತಿಗಳು ರೂಪುಗೊಂಡಿವೆ. ಪಾಕಿಸ್ತಾನ ಹಾಗೂ ಭಾರತಗಳ ನಡುವೆ ವೈರತ್ವ ಕಡಿಮೆಯಾಗದಂತೆ ನೋಡಿಕೊಂಡ ದೇಶ ಅಮೆರಿಕ. ಅಮೇರಿಕಾದವರೇ ಆದ ನೋಮ್ ಚೋಮಸ್ಕಿ ಹೇಳುವ ಪ್ರಕಾರವೇ ಅಮೆರಿಕಾ ದೇಶವು ಜಗತ್ತಿನ ದೊಡ್ಡ ಭಯೋತ್ಪಾದಕ ರಾಷ್ಟ್ರ. ಭಯೋತ್ಪಾದನೆಯ ಬಗ್ಗೆ ಮಾತನಾಡುವಾಗ ಇದನ್ನು ನಾವು ಮರೆಯಬಾರದು. ದಕ್ಷಿಣ ಆಫ್ರಿಕಾದಲ್ಲಿ ಸ್ವಾತಂತ್ರ್ಯ ಹೋರಾಟ ನಡೆಸಿದ ನೆಲ್ಸನ್ ಮಾಂಡೆಲ್ ಅವರನ್ನು ಭಯೋತ್ಪಾದಕ ಎಂದು ಕರೆದಿದ್ದು ಇದೇ ಅಮೆರಿಕಾ. ನಂತರ ರಾಗ ಬದಲಿಸಿತು.

ಜಗತ್ತಿನ ೧೩೫ ರಾಷ್ಟ್ರಗಳಲ್ಲಿ ೧೭೫ಕ್ಕೂ ಅಧಿಕ ಸೈನಿಕ ನೆಲೆಗಳನ್ನು ಅಮೆರಿಕಾ ಹೊಂದಿದೆ. ಮಧ್ಯ ಏಷಿಯಾದಲ್ಲಿ ಚೀನಾ, ಭಾರತ, ಪಾಕಿಸ್ತಾನ, ಬರ್ಮಾ ಇತರೆ ರಾಷ್ಟ್ರಗಳನ್ನು ನಿಯಂತ್ರಣದಲ್ಲಿಡಲು ಈ ಭಾಗದಲ್ಲಿ ಸೈನಿಕ ನೆಲೆಯನ್ನು ಹೊಂದಲು ಅದು ನಡೆಸಿರುವ ಪ್ರಯತ್ನಕ್ಕೂ ದೊಡ್ಡ ಇತಿಹಾಸವೇ ಇದೆ. ಅದರ ಭಾಗವಾಗಿಯೇ ಇಂತಹ ಬೆಳವಣಿಗೆಗಳನ್ನು ಗಮನಿಸಬೇಕು. ಎಲ್ಲಾ ದೇಶಗಳ ಆಂತರಿಕ ವ್ಯವಸ್ಥೆಯಲ್ಲಿ ಕೈಯಾಡಿಸಿ, ತನ್ನ ಕೈ ಬೊಂಬೆ ಸರ್ಕಾರಗಳನ್ನು ಕುಳ್ಳ್ಳಿರಿಸುವ ಅದರ ಪ್ರಯತ್ನ, ಸಿಐಎ ಮೂಲಕ ನಡೆಸುವ ಕುತಂತ್ರ ಜಗಜ್ಜಾಹೀರವಾಗಿವೆ. ಭಾರತದಲ್ಲೂ ಬ್ರಹ್ಮಪುತ್ರ ಪ್ರಾಜೆಕ್ಟ್ ಅನ್ನು ಸಿಐಎ ರೂಪಿಸಿತ್ತು. ಈಶಾನ್ಯ ರಾಜ್ಯಗಳು ಸ್ವತಂತ್ರ್ಯ ರಾಷ್ಟ್ರಗಳೆಂದು ಘೋಷಿಸಿಕೊಳ್ಳಲು ಭಯೋತ್ಪಾದಕ ಚಟುವಟಿಕೆಗಳಿಗೆ ಹಣ, ಶಸ್ತ್ರಾಸ್ತ್ರಗಳನ್ನು ನೀಡಿತ್ತು. ಜಮ್ಮು ಕಾಶ್ಮೀರದಲ್ಲೂ ಇದೇ ಕೆಲಸ ಮಾಡಿತ್ತು ಈ ಬಗ್ಗೆ ಕೂಡಾ ನಾವು ಪರಿಶೀಲನೆ ನಡೆಸುವುದು ಇವತ್ತಿನ ಅಗತ್ಯವಾಗಿದೆ.

ಭಾರತ ದೇಶದಲ್ಲಿ ಏನೇ ಭೃಷ್ಟಾಚಾರ, ಸ್ವಜನಪಕ್ಷಪಾತ ನಡೆಯುತ್ತಿದ್ದರೂ ಇಲ್ಲಿ ಇನ್ನೂ ಪ್ರಜಾಪ್ರಭುತ್ವ ಉಸಿರಾಡುತ್ತಿದೆ. ಸ್ವಲ್ಪ ಉಬ್ಬಸರೋಗಕ್ಕೆ ತುತ್ತಾಗಿರಬಹುದು. ಆದರೆ ತನ್ನ ಕೈಗೊಂಬೆ ಸರ್ಕಾರಗಳನ್ನು ಸ್ಥಾಪಿಸಿಕೊಂಡು, ಪ್ರಜಾಪ್ರಭುತ್ವವನ್ನು ಸ್ಪಾನ್ಸರ್ ಮಾಡುತ್ತಿರುವ ಅಮೆರಿಕಾ ಭಯೋತ್ಪಾದನೆಯ ಬಗ್ಗೆ ದೊಡ್ಡ ಗಂಟಲಿನಿಂದ ಮಾತನಾಡದಿದ್ದರೆ ಅದರ ಬಾಯಿ ನಾವು ಆಗುವ ಅಪಾಯವಿದೆ.

ಅಮೆರಿಕಾದಲ್ಲಿ ಸ್ವಾತಂತ್ರ್ಯ ದೇವಿಯ ಪ್ರತಿಮೆ ಇದೆ. ಅದು ಕಲ್ಲಾಗಿದೆ. ಪ್ರತಿಮೆಯಾಗಿದೆ. ತೋರಿಸಲಷ್ಟೇ ಇದೆ. ಭಾರತದಲ್ಲೂ ಇಂಥ ಸ್ಥಿತಿ ಬರಬಾರದಲ್ಲವೆ?
- ಪರಶುರಾಮ ಕಲಾಲ್ 

Tuesday, May 3, 2011

ಕನ್ನಡಪ್ರಭ ಓದುಗರಿಗೆ ಈ ಹಳಸಲು ಅಡುಗೆ ಬೇಕಾಗಿತ್ತಾ?

ವಿಶ್ವೇಶ್ವರ ಭಟ್ಟರು ಕನ್ನಡಪ್ರಭಕ್ಕೆ ಬಂದಾಗಿನಿಂದ ಸ್ವಲ್ಪ ಸಮಯ ಕೊಡಿ, ಹೊಸ ವ್ಯವಸ್ಥೆಗೆ ನಾನು ಹೊಂದಿಕೊಳ್ಳಬೇಕು. ಆಮೇಲೆ ಒಂದಿಷ್ಟು ಪ್ರಯೋಗ ಮಾಡ್ತೀನಿ ಎನ್ನುತ್ತಿದ್ದರು. ನಿಧಾನವಾಗಿ ಅವರು ಈಗ ಫಾರ‍್ಮ್‌ಗೆ ಬಂದ ಹಾಗೆ ಕಾಣುತ್ತದೆ. ನೋಡ್ತಾ ಇರಿ, ಏನೇನು ಮಾಡ್ತೀವಿ ಎಂಬ ಘೋಷವಾಕ್ಯದಡಿ ಭಟ್ಟರು ಹೊಸ ಅಂಕಣಗಳನ್ನು ಶುರು ಮಾಡಿದರು. ಮೊದಲ ಬಾರಿ ಕಾದಂಬರಿಕಾರ ಎಸ್.ಎಲ್.ಭೈರಪ್ಪ ಅಂಕಣಕಾರರನ್ನಾಗಿಸಿದರು. ವಿಜಯ ಕರ್ನಾಟಕದಲ್ಲಿ ಬರೆಯುತ್ತಿದ್ದ ತಮ್ಮ ಅಂಕಣಗಳನ್ನೆಲ್ಲ ಇಲ್ಲೂ ಆರಂಭಿಸಿದರು. ತಪ್ಪಾಯ್ತು, ತಿದ್ಕೋತೀವಿ ಅಂಕಣದ ಮೂಲಕ ಓದುಗರ ಜತೆ ನಿತ್ಯ ಸಂವಾದ ಆರಂಭಿಸಿದರು. ಇನ್ನು ಅವರ ಬಳಗದ ಪಿ.ತ್ಯಾಗರಾಜ್, ರಾಧಾಕೃಷ್ಣ ಬಡ್ತಿ, ಪ್ರತಾಪ ಸಿಂಹ, ಕೆ.ವಿ.ಪ್ರಭಾಕರ್, ಚೈತನ್ಯ ಹೆಗಡೆ ಮತ್ತಿತರರ ಅಂಕಣಗಳೂ ಶುರುವಾದವು.

ಭಟ್ಟರು ಕ್ರಿಯಾಶೀಲ ಸಂಪಾದಕರು. ಹೊಸತನ್ನು ಕೊಡಬೇಕು ಎಂದು ಹವಣಿಸುವವರು. ಹೀಗಾಗಿ ಕನ್ನಡಪ್ರಭದಲ್ಲಿ ಭಟ್ಟರ ಛಾಪು ಕಾಣಿಸುತ್ತಿದೆ. ಆದರೆ ಇವತ್ತಿನ ಕನ್ನಡಪ್ರಭ ನೋಡಿದಾಗ ನಿಜಕ್ಕೂ ನಿರಾಶೆಯಾಯಿತು. ಹೊಸತನ್ನು ಕೊಡುವ ಶಕ್ತಿಯಿರುವ ಭಟ್ಟರು ಹಳಸಲನ್ನು ಬಡಿಸಲು ಹೊರಟಿರುವುದು ಆಶ್ಚರ್ಯ ತರಿಸಿತು.

ದೇಶದ ಮಹತ್ವದ ರಾಜಕಾರಣಿಯೊಬ್ಬರಿಂದ ಕಾಲಂ ಬರೆಸುತ್ತೇವೆ ಎಂದು ಭಟ್ಟರು ಕನ್ನಡಪ್ರಭದಲ್ಲಿ ಅನೌನ್ಸ್‌ಮೆಂಟ್ ಕೊಟ್ಟಿದ್ದರು. ಅದೇ ಪ್ರಕಾರ ಇಂದು ಎಲ್.ಕೆ.ಅಡ್ವಾಣಿಯವರ ಅಂಕಣ ೯ನೇ ಪುಟದಲ್ಲಿ ಪ್ರಕಟವಾಗಿದೆ. ನನ್ನ ದೇಶ, ನನ್ನ ಜನ ಎಂಬ ಶೀರ್ಷಿಕೆಯ ಅಂಕಣದಡಿಯಲ್ಲಿ ಇಂದು ಪ್ರಕಟವಾಗಿರುವ ಲೇಖನ: ಹಾಗಾದರೆ ರಾಜಕಾರಣಿಗಳೆಲ್ಲರೂ ಭ್ರಷ್ಟರೇ?

ಇದನ್ನು ಓದಿದ ತಕ್ಷಣವೇ ಔಟ್‌ಡೇಟೆಟ್ ಲೇಖನ ಎಂದು ನಿಮಗೆ ಅನ್ನಿಸಿರಬಹುದು, ಅನ್ನಿಸಲೇಬೇಕು. ಯಾಕೆಂದರೆ ಇದು ಅಡ್ವಾಣಿಯವರ ಹಳೆಯ ಲೇಖನ. ಅದನ್ನು ಬರೆದಿರುವುದು ಕನ್ನಡಪ್ರಭಕ್ಕಾಗಿಯೂ ಅಲ್ಲ. ಅಡ್ವಾಣಿಯವರ ಬ್ಲಾಗ್‌ನಲ್ಲಿ ಇದೇ ಲೇಖನ ಏಪ್ರಿಲ್ ೧೨ರಂದು ಪ್ರಕಟವಾಗಿದೆ. ಮೂರು ವಾರಗಳ ಹಿಂದೆಯೇ ಪ್ರಕಟಗೊಂಡಿದ್ದ ಲೇಖನದ ಯಥಾವತ್ತು ತರ್ಜುಮೆ ಇವತ್ತು ಕನ್ನಡಪ್ರಭದಲ್ಲಿ ಪ್ರಕಟವಾಗಿದೆ.

ಎರಡು ಸಿಂಪಲ್ ಆದ ಪ್ರಶ್ನೆಗಳು.
ಇಂಟರ್‌ನೆಟ್ ನೋಡುವವರ ಸಂಖ್ಯೆ ದಿನೇದಿನೇ ಹೆಚ್ಚುತ್ತಿದೆ. ಹೀಗಿರುವಾಗ ಅಡ್ವಾಣಿಯವರ ಬ್ಲಾಗ್‌ನಲ್ಲಿ ಎಂದೋ ಪ್ರಕಟಗೊಂಡ ಹಳಸಲು ಲೇಖನವನ್ನು ಹೊಸ ಅಂಕಣದ ರೂಪದಲ್ಲಿ ಕನ್ನಡ ಓದುಗರಿಗೆ ಪ್ರಸ್ತುತ ಪಡಿಸುವ ಅಗತ್ಯ ಇತ್ತೆ?

ಒಂದು ವೇಳೆ, ಅಡ್ವಾಣಿಯವರ ಬ್ಲಾಗ್‌ನಿಂದ ಅವರ ಅನುಮತಿ ಪಡೆದು ತರ್ಜುಮೆ ಮಾಡಿ, ಅಂಕಣ ರೂಪದಲ್ಲಿ ಪ್ರಕಟಿಸುವುದಾದರೆ ಅದನ್ನು ಓದುಗರಿಗೆ ಹೇಳಬಹುದಿತ್ತಲ್ಲವೇ?

ಇವರೆಡೂ ಪ್ರಶ್ನೆಗಳನ್ನು ಹೊರತುಪಡಿಸಿಯೂ ರಾಜಕಾರಣಿಗಳಿಂದ ಅಂಕಣಗಳನ್ನು ಬರೆಸುವ ಕುರಿತೇ ತಕರಾರುಗಳು ಇವೆ. ರಾಜಕಾರಣಿಗಳು ಸಹಜವಾಗಿಯೇ ತಮ್ಮ ಹಾಗು ತಮ್ಮ ಪಕ್ಷದ ಇಮೇಜುಗಳನ್ನು ಬೆಳೆಸಿಕೊಳ್ಳಲು ಅಂಕಣಗಳನ್ನು ಬಳಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಇಂಥವು ಕನ್ನಡ ಓದುಗರಿಗೆ ಬೇಕೆ? ಪತ್ರಿಕೆಗಳು ಪಕ್ಷಾತೀತ ನಿಲುವುಗಳನ್ನು ಮಂಡಿಸಬೇಕು ಎಂಬ ನೈತಿಕ ಚೌಕಟ್ಟಿಗೆ ಇವು ಅಡಚಣೆಯಲ್ಲವೇ? ಒಂದು ವೇಳೆ ಅಡ್ವಾಣಿಯವರಿಂದ ಅಂಕಣ ಬರೆಸಲೇಬೇಕೆಂದಿದ್ದರೆ ಕನ್ನಡಪ್ರಭಕ್ಕಾಗಿ ಪ್ರತ್ಯೇಕ ಲೇಖನಗಳನ್ನು ಬರೆಸಬಹುದಿತ್ತಲ್ಲವೇ? ಕನ್ನಡ ಓದುಗರೇಕೆ ತಂಗಳು ಅಡುಗೆ ಸ್ವೀಕರಿಸಬೇಕು?

ತಪ್ಪಾಗಿದೆ, ತಿದ್ಕೋತಾರಾ? ಕಾದು ನೋಡೋಣ.

ಅಡ್ವಾಣಿಯವರ ಬ್ಲಾಗ್ ನಲ್ಲಿ ಏ.12ರಂದು ಪ್ರಕಟವಾಗಿರುವ ಮೂಲ ಲೇಖನದ ಲಿಂಕ್:
http://blog.lkadvani.in/blog-in-english/the-anna-hazare-episode
ಇವತ್ತಿನ (ಮೇ.3) ಕನ್ನಡಪ್ರಭದಲ್ಲಿ ಪ್ರಕಟವಾಗಿರುವ ತರ್ಜುಮೆಗೊಂಡ ಲೇಖನದ ಲಿಂಕ್:
http://www.kannadaprabha.com/NewsItems.asp?ID=KPH20110502210408&Title=Headlines&lTitle=%AE%DA%C3%A8%DB%AB%DA+%D1%DA%DF%A6%A7&Topic=0&ndate=5/3/2011&Dist=0

Monday, May 2, 2011

ಒಸಾಮಾ ಹತ್ಯೆಯ ಕುರಿತು ಒಬಾಮಾ ಭಾಷಣದ ಪೂರ್ಣಪಾಠ..


Good evening. Tonight, I can report to the American people and to the world that the United States has conducted an operation that killed Osama bin Laden, the leader of al Qaeda, and a terrorist who’s responsible for the murder of thousands of innocent men, women, and children.
It was nearly 10 years ago that a bright September day was darkened by the worst attack on the American people in our history. The images of 9/11 are seared into our national memory -- hijacked planes cutting through a cloudless September sky; the Twin Towers collapsing to the ground; black smoke billowing up from the Pentagon; the wreckage of Flight 93 in Shanksville, Pennsylvania, where the actions of heroic citizens saved even more heartbreak and destruction.
And yet we know that the worst images are those that were unseen to the world. The empty seat at the dinner table. Children who were forced to grow up without their mother or their father. Parents who would never know the feeling of their child’s embrace. Nearly 3,000 citizens taken from us, leaving a gaping hole in our hearts.
On September 11, 2001, in our time of grief, the American people came together. We offered our neighbors a hand, and we offered the wounded our blood. We reaffirmed our ties to each other, and our love of community and country. On that day, no matter where we came from, what God we prayed to, or what race or ethnicity we were, we were united as one American family.
We were also united in our resolve to protect our nation and to bring those who committed this vicious attack to justice. We quickly learned that the 9/11 attacks were carried out by al Qaeda -- an organization headed by Osama bin Laden, which had openly declared war on the United States and was committed to killing innocents in our country and around the globe. And so we went to war against al Qaeda to protect our citizens, our friends, and our allies.
Over the last 10 years, thanks to the tireless and heroic work of our military and our counterterrorism professionals, we’ve made great strides in that effort. We’ve disrupted terrorist attacks and strengthened our homeland defense. In Afghanistan, we removed the Taliban government, which had given bin Laden and al Qaeda safe haven and support. And around the globe, we worked with our friends and allies to capture or kill scores of al Qaeda terrorists, including several who were a part of the 9/11 plot.
Yet Osama bin Laden avoided capture and escaped across the Afghan border into Pakistan. Meanwhile, al Qaeda continued to operate from along that border and operate through its affiliates across the world.
And so shortly after taking office, I directed Leon Panetta, the director of the CIA, to make the killing or capture of bin Laden the top priority of our war against al Qaeda, even as we continued our broader efforts to disrupt, dismantle, and defeat his network.
Then, last August, after years of painstaking work by our intelligence community, I was briefed on a possible lead to bin Laden. It was far from certain, and it took many months to run this thread to ground. I met repeatedly with my national security team as we developed more information about the possibility that we had located bin Laden hiding within a compound deep inside of Pakistan. And finally, last week, I determined that we had enough intelligence to take action, and authorized an operation to get Osama bin Laden and bring him to justice.
Today, at my direction, the United States launched a targeted operation against that compound in Abbottabad, Pakistan. A small team of Americans carried out the operation with extraordinary courage and capability. No Americans were harmed. They took care to avoid civilian casualties. After a firefight, they killed Osama bin Laden and took custody of his body.
For over two decades, bin Laden has been al Qaeda’s leader and symbol, and has continued to plot attacks against our country and our friends and allies. The death of bin Laden marks the most significant achievement to date in our nation’s effort to defeat al Qaeda.
Yet his death does not mark the end of our effort. There’s no doubt that al Qaeda will continue to pursue attacks against us. We must –- and we will -- remain vigilant at home and abroad.
As we do, we must also reaffirm that the United States is not –- and never will be -– at war with Islam. I’ve made clear, just as President Bush did shortly after 9/11, that our war is not against Islam. Bin Laden was not a Muslim leader; he was a mass murderer of Muslims. Indeed, al Qaeda has slaughtered scores of Muslims in many countries, including our own. So his demise should be welcomed by all who believe in peace and human dignity.
Over the years, I’ve repeatedly made clear that we would take action within Pakistan if we knew where bin Laden was. That is what we’ve done. But it’s important to note that our counterterrorism cooperation with Pakistan helped lead us to bin Laden and the compound where he was hiding. Indeed, bin Laden had declared war against Pakistan as well, and ordered attacks against the Pakistani people.
Tonight, I called President Zardari, and my team has also spoken with their Pakistani counterparts. They agree that this is a good and historic day for both of our nations. And going forward, it is essential that Pakistan continue to join us in the fight against al Qaeda and its affiliates.
The American people did not choose this fight. It came to our shores, and started with the senseless slaughter of our citizens. After nearly 10 years of service, struggle, and sacrifice, we know well the costs of war. These efforts weigh on me every time I, as Commander-in-Chief, have to sign a letter to a family that has lost a loved one, or look into the eyes of a service member who’s been gravely wounded.
So Americans understand the costs of war. Yet as a country, we will never tolerate our security being threatened, nor stand idly by when our people have been killed. We will be relentless in defense of our citizens and our friends and allies. We will be true to the values that make us who we are. And on nights like this one, we can say to those families who have lost loved ones to al Qaeda’s terror: Justice has been done.
Tonight, we give thanks to the countless intelligence and counterterrorism professionals who’ve worked tirelessly to achieve this outcome. The American people do not see their work, nor know their names. But tonight, they feel the satisfaction of their work and the result of their pursuit of justice.
We give thanks for the men who carried out this operation, for they exemplify the professionalism, patriotism, and unparalleled courage of those who serve our country. And they are part of a generation that has borne the heaviest share of the burden since that September day.
Finally, let me say to the families who lost loved ones on 9/11 that we have never forgotten your loss, nor wavered in our commitment to see that we do whatever it takes to prevent another attack on our shores.
And tonight, let us think back to the sense of unity that prevailed on 9/11. I know that it has, at times, frayed. Yet today’s achievement is a testament to the greatness of our country and the determination of the American people.
The cause of securing our country is not complete. But tonight, we are once again reminded that America can do whatever we set our mind to. That is the story of our history, whether it’s the pursuit of prosperity for our people, or the struggle for equality for all our citizens; our commitment to stand up for our values abroad, and our sacrifices to make the world a safer place.
Let us remember that we can do these things not just because of wealth or power, but because of who we are: one nation, under God, indivisible, with liberty and justice for all.
Thank you. May God bless you. And may God bless the United States of America.

Sunday, May 1, 2011

ನಾಗರಿಕ ಪತ್ರಿಕೋದ್ಯಮ: ಹೊಸ ಭರವಸೆಗಳನ್ನು ನಿರೀಕ್ಷಿಸಬಹುದೇ?


ಪತ್ರಕರ್ತ ಶಂಶೀರ್ ಬುಡೋಳಿ ನಾಗರಿಕ ಪತ್ರಿಕೋದ್ಯಮ ಕುರಿತ ಲೇಖನವೊಂದನ್ನು ಕಳುಹಿಸಿದ್ದಾರೆ. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ((M.C.J) ಮಂಗಳೂರು ವಿ.ವಿ.ಯಲ್ಲಿ ಅಧ್ಯಯನ.(B.A.-Journalism, D.I.J) ನಡೆಸಿರುವ ಶಂಶೀರ್ ಜೋಳಿಗೆ ಎಂಬ ಬ್ಲಾಗ್ ನಡೆಸುತ್ತಾರೆ. ನಾಗರಿಕ ಪತ್ರಿಕೋದ್ಯಮ ಆಧುನಿಕ ಕಾಲದಲ್ಲಿ ಪಡೆಯುತ್ತಿರುವ ಹೊಸ ರೂಪ ಹಾಗು ಅದರ ಪರಿಣಾಮಗಳ ಬಗ್ಗೆ ಈ ಲೇಖನ ಚರ್ಚಿಸುತ್ತದೆ. -ಸಂಪಾದಕೀಯ

ನಾಗರಿಕ ಪತ್ರಿಕೋದ್ಯಮ ಎಂಬುವುದು ಪತ್ರಿಕೋದ್ಯಮದ ಹೊಸ ಉಗಮವಾಗಿದೆ. ನಿಜಾರ್ಥದಲ್ಲಿ ಅಧಿಕಾರವನ್ನು ಜನರ ಕೈಗೆ ನೀಡಿರುವುದು ನಾಗರಿಕ ಪತ್ರಿಕೋದ್ಯಮವಾಗಿದೆ. ಇವತ್ತು ಸುದ್ದಿವಾಹಿನಿಗಳು ಮಾತ್ರ ನಾಗರಿಕ ಪತ್ರಿಕೋದ್ಯಮದ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಜೊತೆಗೆ ಅಂತರ್ಜಾಲವು ಎಲ್ಲೆಡೆ ಲಭ್ಯವಾಗುವುದರಿಂದ್ದ ಪ್ರಮುಖ ಸುದ್ದಿಗಳೆಲ್ಲಾ ಆನ್‌ಲೈನ್‌ನಲ್ಲಿಯೇ ಪ್ರಥಮ ಬಾರಿಗೆ ಬಿತ್ತರಗೊಳ್ಳುತ್ತಿದೆ. ಇದು ಸಾಧ್ಯವಾಗಿರುವುದು ಭಾರತದಾದ್ಯಂತ ಇರುವ ನಾಗರಿಕ ಪತ್ರಕರ್ತರಿಂದ. ಈ ಮೂಲಕ ನಾಗರಿಕ ಪತ್ರಿಕೋದ್ಯಮವೆಂಬುದು ಪ್ರಬಲ ಮಟ್ಟದಲ್ಲಿ ಬೆಳೆಯುತ್ತಿದೆ ಎಂದು ಹೇಳಬಹುದು. ಸ್ಥಳೀಯ ಸುದ್ದಿಗಳನ್ನು ವಿಶ್ವಮಟ್ಟದಲ್ಲಿ ಪ್ರಚುರಪಡಿಸುವ ಸಾಧ್ಯತೆ ನಾಗರಿಕ ಪತ್ರಿಕೋದ್ಯಮಕ್ಕಿರುವುದರಿಂದ್ದ ಇದರ ಪ್ರಾಮುಖ್ಯತೆ ದಿನಕಳೆದಂತೆ ಹೆಚ್ಚಾಗುತ್ತಿದೆ.

ನಾಗರಿಕ ಪತ್ರಿಕೋದ್ಯಮವನ್ನು ಹೀಗೆ ವ್ಯಾಖ್ಯಾನಿಸಬಹುದು. ಸುದ್ದಿ, ಲೇಖನ, ವಿಡಿಯೋ ಹಾಗೂ ಆಡಿಯೋಗಳ ಮೂಲಕ ಸುದ್ದಿ ಮೌಲ್ಯ ಅರಿತ ನಾಗರಿಕನೊರ್ವ ತಾನು ಕಂಡ ಅಥವಾ ದಾಖಲಿಸಿಕೊಂಡ ವಿಷಯಗಳನ್ನು ಮಾಧ್ಯಮಗಳಿಗೆ ವರದಿ ಮಾಡುವುದಾಗಿದೆ. ಮುಖ್ಯವಾಗಿ ಇಲ್ಲಿ ನಾಗರಿಕನೆ ವರದಿಗಾರನಾಗಿರುತ್ತಾನೆ. ನಾಗರಿಕ ಪತ್ರಿಕೋದ್ಯಮವು ಪತ್ರಿಕೆಗಳಿಗಿಂತ ಹೆಚ್ಚಾಗಿ ಟಿವಿ ವಾಹಿನಿ ಅಥವಾ ಯೂಟೂಬ್‌ನಂತಹ ಸಾಮಾಜಿಕ ಮಾಧ್ಯಮ ಸೈಟುಗಳಲ್ಲಿ ಹೆಚ್ಚು ಪ್ರಚಲಿತದಲ್ಲಿದೆ. ಈಗಾಗಲೇ ನಾಗರಿಕ ವರದಿ ಪ್ರಕಟಿಸುವ ಐವತ್ತಕ್ಕೂ ಹೆಚ್ಚಿನ ವೆಬ್‌ಸೈಟ್‌ಗಳಿವೆ. ಭಾರತದಲ್ಲಿಂದು ಅಸಂಖ್ಯ ವಾರ್ತಾ ವಾಹಿನಿಗಳು ಕಾರ್ಯಾಚರಿಸುತ್ತಿವೆ. ಆದರೆ ಅವುಗಳಲ್ಲಿ ಕೆಲವೇ ವಾಹಿನಿಗಳು ಮಾತ್ರ ಪತ್ರಕರ್ತರನ್ನು ನೇಮಿಸುವ ಹಾಗೂ ತರಬೇತಿಗೊಳಿಸುವ ಕಾರ್ಯವನ್ನು ನಡೆಸುತ್ತಿದೆ. ಸಾಮಾನ್ಯವಾಗಿ ಒಬ್ಬ ಪತ್ರಕರ್ತ ರಾಜ್ಯದ ರಾಜಧಾನಿಯಲ್ಲಿ ಕಾರ್ಯನಿಮಿತ್ತ ನಿಯುಕ್ತಿಗೊಂಡಿರುತ್ತಾನೆ. ಆದರೆ ಭಾರತದ ಕೆಲವು ರಾಜ್ಯಗಳು ಪ್ರಪಂಚದ ಹಲವು ರಾಷ್ಟ್ರಗಳಿಗಿಂತ ವಿಸ್ತೀರ್ಣದಲ್ಲಿ ದೊಡ್ಡದಾಗಿದೆ. ಆದುದರಿಂದ ರಾಜಧಾನಿಯಲ್ಲಿ ಕಾರ್ಯನಿರತರಾಗಿರುವ ಪತ್ರಕರ್ತನಿಂದ ಕೇವಲ ನಗರದಲ್ಲಿ ನಡೆಯುವ ಪ್ರಮುಖ ಘಟನೆಗಳನ್ನು ಮೇಲೆ ಮಾತ್ರ ಬೆಳಕು ಚೆಲ್ಲಲು ಸಾಧ್ಯ. ಆದರೆ ನಾಗರಿಕ ಮಾಧ್ಯಮವು ಈ ಚಿತ್ರಣವನ್ನು ಬದಲಿಸಲಿದೆ. ಇತ್ತೀಚಿನ ದಿನಗಳಲ್ಲಿ ದೇಶದ ದುರ್ಗಮ ಪ್ರದೇಶಗಳಲ್ಲಿ , ಗ್ರಾಮಾಂತರ ಪ್ರದೇಶಗಳಲ್ಲಿ ನಡೆಯುವ, ಘಟಿಸುವ, ಸಂಭವಿಸುವ ಘಟನಾವಳಿಗಳು ಕೂಡ ವಾರ್ತಾವಾಹಿನಿಗಳಲ್ಲಿ ಬಿತ್ತರಗೊಳ್ಳಲು ಆರಂಭವಾಗಿದೆ. ಇದು ಸರಕಾರದ ಕಣ್ತೆರೆಸಿದ್ದು, ಆಡಳಿತ ವರ್ಗದ ಮೇಲೆ ಅತ್ಯಂತ ಪರಿಣಾಮ ಬೀರಿದೆ. ಘಟನೆಯ ಸತ್ಯಾಸತ್ಯತೆಯನ್ನು ತಿಳಿದು ತತ್‌ಕ್ಷಣವೇ ಸರಕಾರವು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲು ಇದು ಸಹಕಾರಿಯಾಗಿದೆ. ಮಾತ್ರವಲ್ಲ, ಇವತ್ತು ಕನ್ನಡ ಟಿವಿ ವಾಹಿನಿಗಳು ವರದಿ, ಸುದ್ದಿಗಳೇನಾದರೂ ಇದ್ದಲ್ಲಿ ನಮ್ಮ ವರದಿಗಾರರನ್ನು ಸಂಪರ್ಕಿಸಿ ಎಂದು ತಮ್ಮ ವರದಿಗಾರರನ್ನು ಸಂಪರ್ಕ ಮಾಡಲು ದೂರವಾಣಿ ಸಂಖ್ಯೆಯನ್ನು ನೀಡುತ್ತಿದೆ. ವೆಬ್ ಮಾಧ್ಯಮಗಳಲ್ಲಿ ನಾಗರಿಕ ಪತ್ರಕರ್ತನಿಗಾಗಿ ಜಾಗ ಮೀಸಲಿರಿಸಲಾಗಿದೆ. ಇದು ನಾಗರಿಕ ಪತ್ರಿಕೋದ್ಯಮದ ಬದಲಾವಣೆಯ ಗುರುತುಗಳಾಗಿವೆ.

ಯಾವ ವಾಹಿನಿಯು ಇಂತಹ ಘಟನಾವಳಿಗಳನ್ನು, ವಾರ್ತೆಗಳನ್ನು ಮೊದಲಾಗಿ ತತ್‌ಕ್ಷಣವೇ ಪ್ರಸಾರ ಮಾಡುತ್ತದೆಯೋ ಆ ವಾಹಿನಿಯು ಬಹಳ ದೊಡ್ಡ ವೀಕ್ಷಕ ವರ್ಗವನ್ನು ಬಹಳ ಕಡಿಮೆ ಅವಧಿಯಲ್ಲಿಯೇ ತನ್ನದಾಗಿಸಲು ಯಶಸ್ವಿಯಾಗಿದೆ. ಹೆಚ್ಚಿನ ವೀಕ್ಷಕ ವರ್ಗವನ್ನು ಹೊಂದಿರುವ ವಾಹಿನಿಯತ್ತ ಜಾಹೀರಾತುದಾರರು ಸಾಮಾನ್ಯವಾಗಿ ಕ್ಷಿಪ್ರಗತಿಯಲ್ಲಿ ಆಕರ್ಷಿತರಾಗುತ್ತಾರೆ. ತಮ್ಮ ಬ್ರಾಂಡ್‌ನ ಉತ್ಫನ್ನಗಳ ಪ್ರಚಾರಕ್ಕೆ ಜಾಹೀರಾತು ಕಂಪನಿಗಳು ಮುಗಿಬೀಳುತ್ತದೆ. ಇದನ್ನೇ ಸುಸಂದರ್ಭ ಎಂದು ಉಪಯೋಗಿಸಿಕೊಳ್ಳುವ ವಾರ್ತಾವಾಹಿನಿಗಳು ಸಂಪರ್ಕಜಾಲವನ್ನು ವಿಸ್ತರಿಸಿಕೊಳ್ಳುವತ್ತಾ ತಮ್ಮ ಚಿತ್ತವನ್ನು ಹರಿಸುತ್ತದೆ. ಇವೆಲ್ಲವೂ ಸಾಧ್ಯವಾಗಿರುವುದು ನಾಗರಿಕ ಪತ್ರಿಕೋದ್ಯಮದಿಂದ.

ಮಾಹಿತಿ ಹಕ್ಕು ಕಾಯ್ದೆ ಮತ್ತು ನಾಗರಿಕ ಪತ್ರಿಕೋದ್ಯಮ ನಿಜವಾದ ಅರ್ಥದಲ್ಲಿ ಅಧಿಕಾರವನ್ನು ಜನರ ಕೈಗೆ ನೀಡಿದೆ. ದುರ್ಗಮ ಪ್ರದೇಶಗಳಲ್ಲಿ, ಗ್ರಾಮಾಂತರ ಪ್ರದೇಶಗಳಲ್ಲಿನ ಪ್ರಮುಖ ಘಟನಾವಳಿಗಳನ್ನು ಗಮನಕ್ಕೆ ತರಲು ನಾಗರಿಕ ವರದಿಗಾರ ತನ್ನ ಲೇಖನದಿಂದ, ವರದಿಯಿಂದ ನೆರವಾಗುತ್ತಾನೆ. ಇದು ಸಾಮಾನ್ಯ ಜನರ ಹಿತದೃಷ್ಟಿಯಿಂದ ಅತ್ಯಾವಶ್ಯಕ ಕಾರ್ಯವಾಗಿದೆ.

ನಾಗರಿಕ ಪತ್ರಿಕೋದ್ಯಮದ ಮಹತ್ವನ್ನು ಅರಿಯಲು ಕೆಲವೊಂದು ಘಟನೆಗಳನ್ನು ಮೆಲುಕು ಹಾಕೋಣ. ಭಾಗಲ್‌ಪುರ ಎನ್ನುವುದು ಬಿಹಾರ ರಾಜ್ಯದಲ್ಲಿರುವ ಒಂದು ಸಣ್ಣ ಪಟ್ಟಣ. ಇಲ್ಲಿ ಸರಗಳ್ಳನೋರ್ವನನ್ನು ಹಿಡಿದ ಗುಂಪೊಂದು ಆತನನ್ನು ಚೆನ್ನಾಗಿ ಥಳಿಸಿತು. ಆ ನಂತರ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಹ ಆತನನ್ನು ಮನಸ್ಸೊ ಇಚ್ಛೆ ಥಳಿಸಿದರು. ಓರ್ವ ಪೊಲೀಸ್ ಸರಗಳ್ಳನನ್ನು ತನ್ನ ಬೈಕ್‌ಗೆ ಕಟ್ಟಿಹಾಕಿ ಕೆಲ ದೂರದವರೆಗೂ ಬೈಕ್ ಚಲಾಯಿಸುತ್ತಾ ಆತನನ್ನು ಎಳೆದು ರಸ್ತೆಯಲ್ಲಿಯೇ ಎಳೆದುಕೊಂಡು ಹೋದ. ಈ ಅಮಾನವೀಯ ಘಟನೆಯ ದೃಶ್ಯವನ್ನು ನಾಗರಿಕ ಪತ್ರಕರ್ತನೋರ್ವ ತನ್ನ ಕ್ಯಾಮೆರಾದಲ್ಲಿ ಸೆರೆಹಿಡಿದ. ಈ ಛಾಯಾಚಿತ್ರಗಳು ರಾಷ್ಟ್ರದ ಗಮನ ಸೆಳೆದವು. ಮಾಧ್ಯಮಗಳಲ್ಲಿ ಈ ಕುರಿತ ವಿಸ್ತಾರವಾದ ವರದಿಗಳು ನಂತರವಷ್ಟೇ ಪ್ರಸಾರವಾದವು. ಈ ಘಟನೆಗೆ ರಾಷ್ಟ್ರವ್ಯಾಪಿ ಖಂಡನೆ ವ್ಯಕ್ತವಾಯಿತು. ಕಾನೂನು ಪಾಲಕರೇ ಕಾನೂನನ್ನೇ ಕೈಗೆತ್ತಿಕೊಂಡ ಪ್ರಕರಣವು ಬಿಹಾರ ಸರಕಾರವನ್ನೇ ಇಕ್ಕಟ್ಟಿಗೆ ಸಿಲುಕಿಸಿತು. ಮಾನವ ಹಕ್ಕುಗಳ ಸ್ಪಷ್ಟ ಉಲ್ಲಂಘನೆಯು ಪ್ರಕರಣದಲ್ಲಿ ಎದ್ದು ಕಾಣುತ್ತಿತ್ತು. ಹೀಗಾಗಿ ಪ್ರಕರಣದಲ್ಲಿ ನೇರವಾಗಿ ಭಾಗಿಯಾದ ಪೊಲೀಸ್ ಪೇದೆ ವಿರುದ್ಧ ಸರಕಾರ ಕ್ರಮ ತೆಗೆದುಕೊಂಡಿತು. ಬೆಂಗಳೂರಿನ ಕಾರ್ಲ್‌ಟನ್ ಕಟ್ಟಡಕ್ಕೆ ಬೆಂಕಿ ಬಿದ್ದಾಗ ಮಾಧ್ಯಮಗಳಿಗೆ ಈ ಸುದ್ದಿ ದೊರಕಿದ್ದು ನಾಗರಿಕನಿಂದ.

ಶಂಶೀರ್ ಬುಡೋಳಿ
ನಾಗರಿಕ ಪತ್ರಿಕೋದ್ಯಮವು ಬಯಲಿಗೆ ತಂದ ಇನ್ನೊಂದು ಪ್ರಕರಣವು ಇಡೀ ಮಾಧ್ಯಮದ ಮುಖ್ಯಾಂಶವಾಗಿ ಗುರುತಿಸಲ್ಪಟ್ಟಿತು. ೩೫ ವರ್ಷದ ಮಹಿಳೆಯೋರ್ವರ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಯನ್ನು ಪತ್ತೆ ಹಚ್ಚಲು ಸ್ಥಳೀಯವಾಗಿ ಆರಿಸಲ್ಪಟ್ಟ ಸದಸ್ಯರನ್ನೊಳಗೊಂಡ ಅಜ್ಮೀರ್ ಬಳಿಯ ಬೋರಜ್ ಗ್ರಾಮ ಪಂಚಾಯತ್‌ನ ಆಡಳಿತ ಮಂಡಳಿ, ಗ್ರಾಮದ ಸಾವಿರ ಯುವಕರನ್ನು ಬೆತ್ತಲುಗೊಳಿಸಿ, ಆ ಗುಂಪಿನಲ್ಲಿರುವ ಯಾರಾದರೂ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆಯೇ ಎಂದು ಪರೀಕ್ಷಿಸಿತ್ತು. ಇದು ರಾಷ್ಟ್ರದಲ್ಲಿ ಚರ್ಚೆಯನ್ನುಂಟು ಮಾಡಿತು. ಪಂಜಾಬ್ ಮೂಲದ ನಾಗರಿಕ ಪತ್ರಕರ್ತನೋರ್ವ ಬಯಲುಗೊಳಿಸಿದ ಇನ್ನೊಂದು ಪ್ರಕರಣವು ತಪ್ಪಿತಸ್ಥ ಉನ್ನತ ಅಧಿಕಾರಿಯ ಕೆಲಸಕ್ಕೆ ಮುಳುವಾಯಿತು. ಅದೇನೆಂದರೆ, ಕಚ್ಚಾ ತೈಲ ತುಂಬಿದ್ದ ಟ್ಯಾಂಕರ್‌ಗಳನ್ನೊಳಗೊಂಡ ಟ್ರೈನ್ ಬಂದರಿನಿಂದ ತೈಲವು ಸೋರಿಕೆಯಾಗುತ್ತಿತ್ತು. ಇದೇ ಸಂದರ್ಭವನ್ನು ಉಪಯೋಗಿಸಿಕೊಂಡು ಮಕ್ಕಳು, ಮಹಿಳೆಯರು ಸೇರಿದಂತೆ ಸ್ಥಳೀಯರು ಬಕೆಟ್‌ಗಳಲ್ಲಿ, ಕೊಡಪಾನಗಳಲ್ಲಿ ಇಂಧನವನ್ನು ತುಂಬಿಸಿ ತಮ್ಮ ತಮ್ಮ ಮನೆಗಳಿಗೆ ಕೊಂಡೊಯ್ಯುತ್ತಿದ್ದರು. ಇದಕ್ಕೆ ಕಾರಣ ಅಲ್ಲಿನ ಅಧಿಕಾರಿಗಳ ನಿರ್ಲಕ್ಶ. ಇದು ಕಳ್ಳತನಕ್ಕೆ ಪರೋಕ್ಷ ಬೆಂಬಲ ಕೊಡುವಂತಿತ್ತು. ರೈಲ್ವೆ ಅಧಿಕಾರಿಗಳ ಈ ನಿರ್ಲಕ್ಷವನ್ನು ನಾಗರಿಕ ಪತ್ರಕರ್ತನೋರ್ವ ಬಯಲು ಮಾಡಿದ. ಇದರಿಂದ ಎಚ್ಚೆತ್ತ ರೈಲ್ವೆ ಇಲಾಖೆ ಬೇಜವಾಬ್ದಾರಿ ಅಧಿಕಾರಿಗಳನ್ನು ಅಮಾನತು ಮಾಡಿತು.

ಹವ್ಯಾಸಿ ಪತ್ರಿಕೋದ್ಯಮ ಹಾಗೂ ನಾಗರಿಕ ಪತ್ರಿಕೋದ್ಯಮವೆಂಬುದು ಒಂದೇ ಅಂತ ಹೇಳಬಹುದು. ಈ ಹಿಂದೆ ಹವ್ಯಾಸಿ ಪತ್ರಕರ್ತರು ಏನು ಮಾಡುತ್ತಿದ್ದರೋ ಅದನ್ನೇ ಇವತ್ತು ನಾಗರಿಕ ಪತ್ರಕರ್ತ ಹೊಸ ಹೆಸರಿನಲ್ಲಿ ಸುದ್ದಿ, ಲೇಖನ ಬರೆಯುತ್ತಿದ್ದಾರಷ್ಟೇ. ಅಂದಿನ ಫ್ರಿಲಾನ್ಸ್ ಇವತ್ತು ಸಿಟಿಝನ್ ಜರ್ನಲಿಸಂ ಆಗಿದೆ. ಮಾಧ್ಯಮ ಜಗತ್ತಿನ ಆಧುನಿಕ ಬಿಸಿಗಾಳಿಯಾಗಿರುವ ನಾಗರಿಕ ಪತ್ರಿಕೋದ್ಯಮವೆಂಬುದು ನಾಗರಿಕರಿಂದ ನಾಗರಿಕೋಸ್ಕರ ರೂಪಿತವಾಗಿರುವ ಪತ್ರಿಕೋದ್ಯಮವಾಗಿದೆ. ಅಂದರೆ ಯಾವ ಪದವಿ ಇಲ್ಲದೆಯೂ ನಾಗರಿಕನೋರ್ವ ಪತ್ರಕರ್ತರಾಗುವ ಪರಿಕಲ್ಪನೆಯಾಗಿದೆ. ಮೊಬೈಲ್, ಅಂತರ್ಜಾಲಗಳ ಮೂಲಕ ನಾಗರಿಕ ಪತ್ರಕರ್ತನೋರ್ವ ಯಾವ ರೀತಿ ಗಮನ ಸೆಳೆಯುತ್ತಾನೆ ಎಂಬುದಕ್ಕೆ ಸುನಾಮಿಯಂತಹ ಸುದ್ದಿಗಳೇ ಸಾಕ್ಷಿ. ಸುನಾಮಿಯಂತಹ ದುರಂತ ಮೊದಲು ಬಿತ್ತರಗೊಂಡದ್ದು ಟ್ವಿಟ್ಟರ್ ಮೂಲಕ. ಬ್ಲಾಗ್, ಟ್ವಿಟ್ಟರ್, ಫೇಸ್‌ಬುಕ್ ಹೀಗೆ ಅಂತರ್ಜಾಲದಲ್ಲಿ ಕೈಯಾಡಿಸುತ್ತಿರುವ ನಾಗರಿಕ ಪತ್ರಕರ್ತ ಸುದ್ದಿಯ ನಾಡಿ ಹಿಡಿಯಬಲ್ಲ ಎರಡನೆ ಪತ್ರಕರ್ತ. ಇಂದಿನ ಕೆಲವು ಸುದ್ದಿ ಮಾಧ್ಯಮಗಳು ಕೇಂದ್ರಿಕೃತವಾಗಿರುವುದೇ ನಾಗರಿಕ ಪತ್ರಕರ್ತರಿಂದ.

ಎರಡು ದಶಕಗಳ ಹಿಂದೆ ಅಡಿಕೆ ಪತ್ರಿಕೆಯು ಕೃಷಿಕರ ಕೈಗೆ ಲೇಖನಿ ಕೊಡುವ ಮೂಲಕ ಅಂದಿನ ನಾಗರಿಕ ಪತ್ರಿಕೋದ್ಯಮಕ್ಕೆ ಹೊಸ ಆಯಾಮ ನೀಡಿದ್ದನ್ನು ಮರೆಯಬಾರದು. ಹೊಸ ಪತ್ರಿಕೋದ್ಯಮದ ರೂಪವಾಗಿರುವ ನಾಗರಿಕ ಪತ್ರಿಕೋದ್ಯಮದಿಂದ ಧ್ವನಿ ಕಳೆದುಕೊಂಡಿದ್ದ ನಾಗರಿಕರು ಮತ್ತೆ ಧ್ವನಿ ಪಡೆಯುತ್ತಿದ್ದಾರೆ. ಪತ್ರಿಕೋದ್ಯಮಕ್ಕೆ ಮಹತ್ವದ ತಿರುವು ನೀಡಿ ನಿಮಿಷಾರ್ಧದಲ್ಲಿ ಸುದ್ದಿ ಬಿತ್ತರಗೊಳ್ಳಲು ಕಾರಣ ನಾಗರಿಕ ಪತ್ರಕರ್ತ. ಮುಖ್ಯವಾಹಿನಿಯ ಪತ್ರಿಕೋದ್ಯಮಕ್ಕೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿರುವ ನಾಗರಿಕ ಪತ್ರಿಕೋದ್ಯಮ ದೇಶದಲ್ಲಿ ಉತ್ತಮ ಮಟ್ಟದಲ್ಲಿ ಬೆಳೆಯುತ್ತಿದೆ. ಮುಂದೊಂದು ದಿನ ಮುಖ್ಯವಾಹಿನಿಯ ಪತ್ರಕರ್ತರ ಮತ್ತು ನಾಗರಿಕ ಪತ್ರಕರ್ತರ ನಡುವೆ ಪ್ರಬಲ ಸ್ಪರ್ಧೆ ಏರ್ಪಟ್ಟರೆ ಅಚ್ಚರಿಯೇನಲ್ಲ.

-ಶಂಶೀರ್ ಬುಡೋಳಿ