Friday, May 6, 2011

ಅಕ್ಷಯ ತೃತೀಯದ ಚರ್ಚೆಗೆ ಚಿನ್ನದಂಗಡಿ ಮಾಲೀಕ, ಜತೆಗೊಬ್ಬ ಜ್ಯೋತಿಷಿ!


ಇವತ್ತು ಅಕ್ಷಯ ತೃತೀಯ. ಚಿನ್ನದ ಅಂಗಡಿಗಳ ಮುಂದೆ ಜನರ ಸಾಲುಸಾಲು. ಒಂದು ಗ್ರಾಮ್‌ದಾದರೂ ಸೈ, ಚಿನ್ನವನ್ನು ಕೊಳ್ಳಲೇಬೇಕೆಂಬ ತವಕ. ಚಿನ್ನದ ಬೆಲೆ ಗಗನ ಮುಟ್ಟಿದೆ. ಗ್ರಾಂ ಒಂದಕ್ಕೆ ೨೦೦೦ ರೂಪಾಯಿ ದಾಟಿದೆ. ಆದರೂ ಜನರು ಸುಮ್ಮನಿರಲಾರರು. ಚಿನ್ನದ ಅಂಗಡಿಗಳ ಮುಂದೆ ಕ್ಯೂ ಹಚ್ಚಿದ್ದಾರೆ. ಸಾಲ ಮಾಡಿಯಾದರೂ ಚಿನ್ನ ಕೊಳ್ಳುತ್ತಾರೆ.

ನಿನ್ನೆ ಸುವರ್ಣ ನ್ಯೂಸ್‌ನಲ್ಲೊಂದು ಕಾರ್ಯಕ್ರಮ. ಅಕ್ಷಯ ತೃತೀಯದ ಕುರಿತೇ ಒಂದು ಚರ್ಚೆ. ಭರ್ತಿ ಒಂದು ಗಂಟೆಯ ಕಾಲ ನಡೆದ ಈ ಕಾರ್ಯಕ್ರಮದ ಚರ್ಚೆಯಲ್ಲಿ ಪಾಲ್ಗೊಂಡವರು ಜ್ಯೋತಿಷಿ ದೈವಜ್ಞ ಸೋಮಯಾಜಿ ಹಾಗು ಸಾಯಿ ಗೋಲ್ಡ್ ಪ್ಯಾಲೇಸ್ ಎಂಬ ಚಿನ್ನದ ಅಂಗಡಿ ಮಾಲೀಕ ಸರವಣ್. (ಇವರು ಜೆಡಿಎಸ್ ಮುಖಂಡರೂ ಹೌದು.) ಹೇಗಿದೆ ನೋಡಿ ಜೋಡಿ? ಬಹುಶಃ ಒಂದು ಗಂಟೆಯ ಅವಧಿಯ ಈ ಕಾರ್ಯಕ್ರಮವನ್ನು ಸರವಣ್ ಅವರೇ ಪ್ರಾಯೋಜಿಸಿರಬಹುದು!

ಯಾವುದಾದರೂ ಚಲನಚಿತ್ರ ಬಿಡುಗಡೆಯಾದರೆ, ಆ ಚಿತ್ರದ ನಾಯಕ-ನಾಯಕಿ, ನಿರ್ದೇಶಕ, ನಿರ್ಮಾಪಕರು ಟಿವಿಗಳಲ್ಲಿ ಕಾಣಿಸಿಕೊಂಡು ಪ್ರಮೋಟ್ ಮಾಡುವುದನ್ನು ನಾವು ನೋಡಿದ್ದೇವೆ. ಈಗ ಚಿನ್ನ ಕೊಳ್ಳುವಿಕೆಯನ್ನು ಪ್ರಮೋಟ್ ಮಾಡಲು ಚಿನ್ನದಂಗಡಿ ಮಾಲೀಕರು ಜ್ಯೋತಿಷಿಗಳ ಜತೆ ಸುದ್ದಿ ಬಿತ್ತರಿಸುವ ಟಿವಿ ವಾಹಿನಿಗಳ ಸ್ಟುಡಿಯೋದಲ್ಲಿ ಕೂರುತ್ತಿದ್ದಾರೆ.

ಅಕ್ಷಯ ತೃತೀಯ ಮೀಡಿಯಾಗಳಿಗೆ ಜಾಹೀರಾತಿನ ಅಕ್ಷಯ ಪಾತ್ರೆಯಿದ್ದಂತೆ. ಇವತ್ತಿನ ಪತ್ರಿಕೆಗಳಲ್ಲಿ ಕೆಲವು ತಮ್ಮ ಇಡೀ ಮುಖಪುಟವನ್ನೇ ಚಿನ್ನದಂಗಡಿಗಳ ಜಾಹೀರಾತಿಗೆ ಬಳಸಿಕೊಂಡು, ಮುಖಪುಟವನ್ನು ಮೂರನೇ ಪುಟಕ್ಕೆ ತಳ್ಳಿವೆ. ಹಣ ಒದ್ದುಕೊಂಡು ಬರುವ ಈ ಅವಕಾಶವನ್ನು ಯಾರು ತಾನೇ ಕಳೆದುಕೊಳ್ಳುತ್ತಾರೆ ಹೇಳಿ. ಹೀಗಾಗಿ ಅಕ್ಷಯ ತೃತೀಯ ಅಂದರೆ ಏನು ಎಂಬುದನ್ನೇ ನಮ್ಮ ಮೀಡಿಯಾಗಳು ಮುಚ್ಚಿಡುತ್ತಿವೆ.

ಅಕ್ಷಯ ತೃತೀಯ ಅಂದರೆ ವೈಶಾಖ ಮಾಸದ ಶುಕ್ಲಪಕ್ಷದ ಮೂರನೇ ದಿನ. ಹಿಂದೂಗಳಿಗೆ, ಜೈನರಿಗೆ ಈ ದಿನ ವಿಶೇಷವಾದದ್ದು. ಅಕ್ಷಯ ಎಂದು ಖಾಲಿಯಾಗದ್ದು ಎಂದರ್ಥ. ಈ ವಿಶೇಷ ದಿನದಲ್ಲಿ ಸೂರ್ಯ ಮತ್ತು ಚಂದ್ರ ವಿಶೇಷವಾಗಿ ಬೆಳಗುತ್ತಾರೆ.

ಹಿಂದೂ ಪುರಾಣಗಳ ಪ್ರಕಾರ ತ್ರೇತಾ ಯುಗ ಆರಂಭವಾಗಿದ್ದು ಇದೇ ದಿನ, ವಿಷ್ಣುವಿನ ಅವತಾರಗಳಲ್ಲಿ ಒಂದಾದ ಪರಶುರಾಮ ಇದೇ ದಿನ ಹುಟ್ಟಿದನೆಂಬ ನಂಬಿಕೆಯಿದೆ.  ಗಂಗಾ ನದಿ ಭೂಮಿಗೆ ಅವತರಿಸಿದ್ದು ಇದೇ ದಿನ. ಸುಧಾಮನಿಗೆ ಶ್ರೀಕೃಷ್ಣನು ಅಷ್ಟೈಶ್ವರ್ಯಗಳನ್ನು ಕಲ್ಪಿಸಿದ್ದೂ ಇದೇ ದಿನ. ವೇದವ್ಯಾಸರು ಗಣಪತಿಯನ್ನು ಬಳಸಿಕೊಂಡು ಮಹಾಭಾರತವನ್ನು ಬರೆಯಲು ಆರಂಭಿಸಿದ್ದು ಕೂಡ ಈ ದಿನ.

ಪುರಾಣಗಳ ಮಾತು ಹಾಗಿರಲಿ. ಅಕ್ಷಯ ತೃತೀಯ ಶುಭ ಕಾರ್ಯಗಳಿಗೆ ಪ್ರಶಸ್ತವಾದ ದಿನ ಎಂಬ ನಂಬಿಕೆಯಂತೂ ಮೊದಲಿನಿಂದ ಇದೆ. ಯಾವುದೇ ಹೊಸ ಕಾರ್ಯವನ್ನು ಆರಂಭಿಸಲು ಇದು ಒಳ್ಳೆಯ ದಿನ ಎಂದು ಬಹಳಷ್ಟು ಜನರು ನಂಬುತ್ತಾರೆ. ಏನನ್ನಾದರೂ ಕೊಂಡರೆ ಅದು ಅಕ್ಷಯವಾಗುತ್ತದೆ ಎಂಬ ಪ್ರತೀತಿಯೂ ಇದೆ. (ಬರಿಯ ಚಿನ್ನವಲ್ಲ.)

ಮೇಲಿನದನ್ನೆಲ್ಲ ಗಮನಿಸಿ ಈ ದಿನವನ್ನು ಚಿನ್ನದಂಥ ದಿನ ಎಂದು ಒಪ್ಪಿಕೊಳ್ಳೋಣ. ಆದರೆ ಅಕ್ಷಯ ತೃತೀಯದ ದಿನ ಚಿನ್ನವನ್ನೇ ಕೊಳ್ಳಬೇಕು ಎಂದು ಹೇಳಿದವರ‍್ಯಾರು? ಈ ಮಾತು ಚಲಾವಣೆಗೆ ಬಂದಿದ್ದು ಹೇಗೆ? ಸುಮಾರು ೧೫-೨೦ ವರ್ಷಗಳ ಹಿಂದೆ ಈ ರೀತಿಯಲ್ಲಿ ಅಕ್ಷಯ ತೃತೀಯವನ್ನು ಚಿನ್ನ ಕೊಳ್ಳುವ ಹಬ್ಬವನ್ನಾಗಿ ಯಾರೂ ಆಚರಿಸುತ್ತಿರಲಿಲ್ಲ. ಆ ನಂತರ ಹೊಸ ಮಿಥ್‌ಗಳು ಹುಟ್ಟಿಕೊಂಡಿದ್ದು ಹೇಗೆ?

ಇವತ್ತು ಅತಿಹೆಚ್ಚು ಚಿನ್ನದ ಅಂಗಡಿಗಳನ್ನು ಇಟ್ಟುಕೊಂಡಿರುವವರು ಮಾರ್ವಾಡಿಗಳು. ಅವರು ಅನುಸರಿಸುವುದು ಜೈನಧರ್ಮವನ್ನು. ಜೈನರಿಗೂ ಸಹ ಇದು ಮಹತ್ವದ ದಿನ. ಜೈನರ ಮೊದಲನೇ ತೀರ್ಥಂಕರ ವೃಷಭದೇವ ಅಯೋಧ್ಯೆಯ ದೊರೆಯಾಗಿದ್ದ. ಆತ ಸರ್ವಸ್ವವನ್ನೂ ತ್ಯಾಗ ಮಾಡಿ ಜೈನಮುನಿಯಾಗುತ್ತಾನೆ. ಜೈನ ಮುನಿಗಳು ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುವುದಿಲ್ಲ. ಅವರು ಅದನ್ನು ಬೇರೆಯವರಿಂದ ಬೇಡಿ ಪಡೆಯುತ್ತಾರೆ. ವೃಷಭದೇವ ಸಹ ತನ್ನ ಜನರಿಂದಲೇ ಆಹಾರವನ್ನು ಬೇಡುತ್ತಾನೆ. ಆದರೆ ಜನರು ಭಿಕ್ಷೆ ನೀಡಲು ಒಲ್ಲೆಯೆನ್ನುತ್ತಾರೆ. ರಾಜನಿಗೆ ಯಾರಾದರೂ ಅನ್ನದ ಭಿಕ್ಷೆ ನೀಡಲು ಸಾಧ್ಯವೇ? ಜನರು ಚಿನ್ನ ಇತ್ಯಾದಿ ಒಡವೆಗಳು, ಆನೆಗಳು, ಕುದುರೆಗಳನ್ನು ಕೊಡುತ್ತಾರೆ. ಕಡೆಗೆ ತಮ್ಮ ಹೆಣ್ಣುಮಕ್ಕಳನ್ನೂ ಸಹ ಉಡುಗೊರೆಯಾಗಿ ನೀಡುತ್ತಾರೆ. ವೃಷಭದೇವನಿಗೆ ಇದ್ಯಾವುದೂ ಬೇಕಾಗಿರಲಿಲ್ಲ. ಆತನಿಗೆ ಬೇಕಾಗಿದ್ದು ಹಿಡಿ ಅನ್ನ. ಹೀಗಾಗಿ ಆತ ಜನರು ಕೊಟ್ಟಿದ್ದನ್ನೆಲ್ಲ ತಿರಸ್ಕರಿಸಿ ಉಪವಾಸ ಆರಂಭಿಸುತ್ತಾನೆ. ಕಡೆಗೊಂದು ದಿನ ಆತನ ಮೊಮ್ಮಗ ಶ್ರೇಯಾಂಶ ಕುಮಾರ ತನ್ನ ತಾತನ ಮನದ ಇಂಗಿತವನ್ನು ಅರಿತುಕೊಳ್ಳುತ್ತಾನೆ. ಆತನಿಗೆ ಕಬ್ಬಿನ ಹಾಲನ್ನು ಕುಡಿಸುವ ಮೂಲಕ ಉಪವಾಸವನ್ನು ಕೊನೆಗೊಳಿಸುವಂತೆ ಮಾಡುತ್ತಾನೆ. ಜೈನರ ಮೊದಲನೇ ತೀರ್ಥಂಕರ ವೃಷಭದೇವ ಉಪವಾಸ ಕೊನೆಗೊಳಿಸಿ ಕಬ್ಬಿನ ಹಾಲು ಕುಡಿದ ದಿನವೇ ಅಕ್ಷಯ ತೃತೀಯ ಎಂದು ಜೈನರು ನಂಬುತ್ತಾರೆ.

ಮೇಲಿನ ಕಥೆಯು ಹೇಳುವ ಆದರ್ಶವೇ ಬೇರೆ. ಜಗತ್ತಿನ ಎಲ್ಲ ಐಶ್ವರ್ಯವನ್ನು ತಿರಸ್ಕರಿಸಿ ತುತ್ತು ಅನ್ನ ಸಾಕು ಎನ್ನುವ ತೀರ್ಥಂಕರರೆಲ್ಲಿ, ಇದೇ ದಿನದ ಮಹತ್ವವನ್ನು ತಮ್ಮ ಲಾಭಕೋರ ಉದ್ದೇಶಗಳಿಗಾಗಿ ಬಳಸಿಕೊಂಡು, ಜನರಲ್ಲಿ ಕೊಳ್ಳುಬಾಕತನವನ್ನು ಪ್ರೋತ್ಸಾಹಿಸುವ, ಮೌಢ್ಯವನ್ನು ಬಿತ್ತುವ ವ್ಯಾಪಾರಿಗಳೆಲ್ಲಿ?

ಇದೇ ಚಿನ್ನದ ಅಂಗಡಿ ವ್ಯಾಪಾರಿಗಳು ಲಕ್ಕಿ ಸ್ಟೋನ್‌ಗಳ ಹೆಸರಿನಲ್ಲಿ ನಡೆಸುತ್ತಿರುವ ದಂಧೆ ಎಲ್ಲರಿಗೂ ಗೊತ್ತಿರುವಂಥದ್ದೆ. ನಿಮ್ಮ ಜಾತಕ ನೋಡಿ, ನಿಮಗೆ ಅನುಕೂಲವಾದ ಲಕ್ಕಿ ಸ್ಟೋನ್ ಗಳನ್ನು ನಿಮ್ಮ ಆಭರಣಗಳಿಗೆ ಹಾಕುತ್ತೇವೆ ಎಂದು ಜನರಿಂದ ಸುಲಿಗೆ ನಡೆಸುತ್ತಿದ್ದಾರೆ. ಇದಕ್ಕಾಗಿ ಅವರು ತಮ್ಮ ಅಂಗಡಿಗಳಲ್ಲೇ ಜ್ಯೋತಿಷಿಗಳನ್ನು ಇಟ್ಟುಕೊಂಡಿದ್ದಾರೆ.

ಜ್ಯೋತಿಷಿಗಳಿಗೆ, ಚಿನ್ನದಂಗಡಿ ಮಾಲೀಕರಿಗೆ ಬೆನ್ನೆಲುಬಾಗಿ ನಿಂತಿವೆ ನಮ್ಮ ಮಾಧ್ಯಮಗಳು!

13 comments:

  1. ಅಕ್ಷಯ ತೃತೀಯ ಬರೇ ಒಂದು ನೆಪ. ಜನಕ್ಕೆ ಕೊಳ್ಳುಬಾಕತನ ಹೆಚ್ಚಾಗಿದೆ. ಅಕ್ಷಯ ತೃತೀಯ ಇಲ್ಲದಿದ್ದರೆ ಇನ್ನೊಂದು ದಿನ ಆರಿಸಿಕೊಳ್ಳುತ್ತಾರೆ. ಎಲ್ಲಾ ಬರೇ ಮೋಸ.

    ReplyDelete
  2. ಬರ್ಕೊಡ್ತೀನ್ರಿ ,ಇನ್ ಹತ್ ವರ್ಷದಲ್ಲಿ ಈ ದಿನ ನ ನಮ್ಮ ಸರ್ಕಾರದೋರು ಸ್ಟೇಟ್ ಹಾಲಿಡೇ ಮಾಡ್ಲಿಲ್ಲ ಅಂದ್ರೆ ಕೇಳ್ರಿ

    ReplyDelete
  3. ಟಿವಿ ಚಾನೆಲ್ಗಳಲ್ಲಿ ಪ್ರಾಯೋಜಿತ ಕಾರ್ಯಕ್ರಮಗಳೇ ಹೆಚ್ಚು.. ಅರ್ಧ ಗಂಟೆಗೆ ಐದೋ ಆರೋ lakh ರೂಪಾಯಿ ಸಿಗೋದಾದರೆ ಯಾರಿಗೆ ಬೇಡ ಹೇಳಿ.. ಜಾಹೀರಾತಿಗೆ ರೆಸ್ಪಾನ್ಸ್ ಕಡಿಮೆ ಅನ್ನೋ ಕಾರಣಕ್ಕೆ ಇಂತಹ ಕಾರ್ಯಕ್ರಮಗಳು ರೂಪಿತವಾಗಿವೆ.... :)

    ReplyDelete
  4. ಮೀಡಿಯಾಗಳು ಹೀಗೆಯೇ ಜನರ ತಲೆ ಕೆಡಿಸತೊಡಗಿದರೆ
    ಕೊನೆಗೊಂದು ದಿನ ನಮ್ಮ ಯಡಿಯೂರಪ್ನೋರು ಕೂಡಾ
    ಹುಮ್ಮಸ್ಸಿನಿಂದ ಅಕ್ಷಯ ತೃತೀಯದಂದು ಚಿನ್ನ ಕೊಳ್ಳುವವರಿಗೆ
    ಅಂತ ಸಾಲದ ಯೋಜನೆ ಪ್ರಕಟಿಸಿದರೆ ಎಷ್ಟು ಚೆಂದವೋ..!
    ;-)

    ReplyDelete
  5. ಥೂ ನಮ್ಮ ರಂಗಣ್ಣ ಸುವರ್ಣ ನ್ಯೂಸ್ ಬಿಟ್ಟ ಮೇಲೆ ಅಲ್ಲಿ ಬರೀ ಇಂತಹದ್ದೇ ಕಾರ್ಯಕ್ರಮಗಳು ನಡೀತಾ ಇದೆ.ನಾನು ಆ ಚಾನಲ್ ನೋಡುವುದನ್ನೇ ಬಿಟ್ಟಿದ್ದೇನೆ....ಹಣ ಇರುವವರು ಈ ದಿನವನ್ನು ಸುಮ್ಮನೆ ಚಿನ್ನದ ಮೇಲೆ ಸುರಿಯುವುದಕ್ಕಿಂತ ಅನ್ನ ತಿನ್ನಲು ಕಾಸು ಇಲ್ಲದ ಬಡವರಿಗೆ ಕೊಟ್ಟರೆ ಈ ದಿನವೂ ಸಾರ್ಥಕ...

    ReplyDelete
  6. ಈ ಹಿಂದೆ ಅದೇ ಚಾನೆಲ್ ನ ಒಂದು ಕಾರ್ಯಕ್ರಮದಲ್ಲಿ ನಾನು ಚಿನ್ನದುಂಗರ ಹಾಕಿಲ್ಲವೆಂದು ಪೈಟ್ ಮಾಡಿದವರು, ನಿನ್ನೆ ಕೈತುಂಬಾ ಉಂಗುರ ತೊಟ್ಟು ಬಂದಿದ್ದರು

    ReplyDelete
  7. ಸಾಲದ ಯೋಜನೆ ಮಾತ್ರ ವಾದರೆ ಪರವಾಗಿಲ್ಲ. ಬೇಕಿದ್ದವರು ಸಾಲ ಮಾಡುತಾರೆ. ಕಡ್ಡಾಯ ವಾಗಿ ಬಾಂಡ್ ಗಳ ಮೂಲಕ ಹೇರಿದರೆ ಎಲ್ಲಿಗೆ ಹೋಗಬೇಕು ನಮ್ಮ ಸರ್ಕಾರಿ ನೌಕರರು !?

    ReplyDelete
  8. its an auspicious day.no doubt. but such rush to purchase gold is unbelievable. the deceae of BANGALORE fast sprading to cities like HUBBALLI

    ReplyDelete
  9. ಸಂಪಾದಕೀಯ, ಒಳ್ಳೆಯ ಲೇಖನ, ತುಂಬಾ ವಿಚಾರ ತಿಳಿಸಿದ್ದೀರಿ. ಇದು ಎಲ್ಲ ಹಬ್ಬಗಳಿಗೂ ಅನ್ವಯ. ಅಕ್ಷಯ ತೃತೀಯ, ದೀಪಾವಳಿ, ಕ್ರಿಸ್ಮಸ್, ಪವಿತ್ರ ರಮ್ಜಾನ್ ತಿಂಗಳು, ಗಣೇಶ ಹಬ್ಬ, ಸಂಕ್ರಾಂತಿ, ಯುಗಾದಿ ಇವೆಲ್ಲ ಲಾಭ ತರುವ ಹಬ್ಬಗಳು. ನಮಗೆ ಹಬ್ಬಗಳ ಮಹತ್ವವೇ ಗೊತ್ತಿಲ್ಲದೇ, ಏನನ್ನು ಆಚರಿಸುತ್ತಿದ್ದೇವೆ ಎಂಬುದರ ಅರಿವಿಲ್ಲದೆ ನಾವೆಲ್ಲ ಆಚರಿಸುತ್ತಿದ್ದೇವೆ. ಅರ್ಥಾತ್, ಜಾಹಿರಾತು ಪ್ರಪಂಚ ನಾವು ಆಚರಿಸುವಂತೆ ಮಾಡುತ್ತಿದೆ. ಇಲ್ಲಿ ಆಚರಣೆ, ಕೊಳ್ಳುವಿಕೆಗೆ ಮಾತ್ರ ಸೀಮಿತ. ತನ್ನ ಸಾಮ್ರಾಜ್ಯ ನೋಡಲು ಬರುವ ಬಲಿ ಚಕ್ರವರ್ತಿ ಪಟಾಕಿ ಹಾವಳಿಯಿಂದ ಭೂಮಿ ಮೇಲೆ ಕಾಲಿಡಲು ಜಾಗವಿಲ್ಲದೆ ಈಚೆಗೆ ಬರೋದೆ ಇಲ್ವಂತೆ. ಅದರೂ ನಮ್ಮ ಜಾಹಿರಾತು ಪ್ರಪಂಚ, ಚಕ್ರವರ್ತಿಗೆ 2 days-3 nights ಭೂಲೋಕ holidays package ದೀಪಾವಳಿ ಟೂರ್ offer ಮಾಡಿದ್ಯಂತೆ.. :)

    ReplyDelete
  10. ಸುವರ್ಣ ನ್ಯೂಸ್ ಚಾನೆಲ್ ಕಳೆದ ವಾರ ಕಳ್ಳ ಜ್ಯೋತಿಷಿಗಳ ವಿರುದ್ದ ಅಭಿಯಾನ ನಡೆಸಿ ಈ ವಾರ ಈ ತರಹ ದ ಕಾರ್ಯಕ್ರಮ ನಡೆಸುತ್ತಿರುವುದು ವಿಪರ್ಯಾಸ.
    ಗೌರೀಶ್ ಮತ್ತು ಹಮೀದ್ ಅವರೇ... ಎಲ್ಲಿ ಹೋಯಿತು ನಿಮ್ಮ ಪತ್ರಕರ್ತರ ಜವಾಬ್ದಾರಿ? ರಂಗಣ್ಣ ಬಿಟ್ಟ ಮೇಲೆ ಸುವರ್ಣ ನ್ಯೂಸ್ ತುಂಬಾ ಕಳಪೆ ಆಗಿ ಬಿಟ್ಟಿದೆ. ಗೌರೀಶ್ ಗೆ ಬರಿ ಸಿನೆಮಾ ಹುಚ್ಚು ಜಾಸ್ತಿ ಆದ ಹಾಗಿದೆ. ಹಮೀದ್ ಪರದೆಯ ಮೇಲೆ ಕಾಣಿಸಿ ಕೊಳ್ತಾನೆ ಇಲ್ಲ. ಜುಗಲ್ ಬಂದಿ ನಿಂತೇ ಹೋಗಿದೆ. ಎಂತಹ ವಿಪರ್ಯಾಸ?

    ReplyDelete
  11. very much true. Hameed is stable now. as he is reached his goal!

    ReplyDelete
  12. ನಿಮ್ಗೊತ್ತಾ? ಮೊನ್ನೆ ಅಕ್ಷಯ ತದಿಗೆಯ ಅದೇ ದಿನ ಯಡ್ಯೂರಪ್ನೋರು ಭಾಳ ಗುಟ್ಟಾಗಿ ಒಬ್ಬನೇ ಒಬ್ಬ ಅನರ್ಹ ಶಾಸಕನನ್ನು ಪರ್ಚೇಸ್ ಮಾಡಿದ್ರಂತೆ! ನೋಡ್ರೀ..... ಅದೀಗ ಅಕ್ಷಯವಾಗಿದೆ.!!!!
    - ದಿನೇಶ್ ಕುಕ್ಕುಜಡ್ಕ

    ReplyDelete
  13. nanu freelancer and student nanu akshaya tadige advt idea bari udupi and mangalore nalli 3.5 lakhs revenue tanthu and net prt 1.5 banthu nau madidadu kelsa 6 dina matra. and nanu 20 savira business agbhudu anta tile didde but akshaya tadige nanige hosa business idea and tumba contacts siktu.


    thanks akshaya tadege fools
    thanks to akshaya tadege fever starts

    ReplyDelete