Wednesday, May 11, 2011

ಬ್ರಹ್ಮಾಂಡವನ್ನು ಹೊತ್ತುಕೊಂಡಿರುವ ಜೀ ಮುಖ್ಯಸ್ಥರಿಗೆ ಇನ್ನೊಂದು ಪತ್ರ...


ನಿಮ್ಮ ಜೀ ಕನ್ನಡ ವಾಹಿನಿಗೆ ಐದು ವರ್ಷಗಳು ತುಂಬಿವೆ. ಒಂದು ಕನ್ನಡ ಚಾನಲ್ ಯಾವುದೇ ಅಡೆತಡೆಯಿಲ್ಲದೆ ಐದುವರ್ಷ ಪೂರೈಸೋದು ಸಣ್ಣ ಮಾತಲ್ಲ. ಈ ವಾಹಿನಿಯನ್ನು ಕಟ್ಟಿಬೆಳೆಸಿದ ಎಲ್ಲರಿಗೂ ಅಭಿನಂದನೆಗಳು. ವಿಶೇಷವಾಗಿ ಇದನ್ನು ಮುನ್ನಡೆಸಿದ ಮುಖ್ಯಸ್ಥರುಗಳಿಗೆ ಹಾರ್ದಿಕ ಶುಭಾಶಯಗಳು. ವಾಹಿನಿಯು ನಿಜವಾದ ಅರ್ಥದಲ್ಲಿ ಕನ್ನಡಿಗರ ಕಣ್ಮಣಿಯಾಗಿ ಬೆಳೆಯಲಿ ಎಂಬುದು ನಮ್ಮೆಲ್ಲರ ಹಾರೈಕೆ.

ನಿಮ್ಮ ಈ ಸಂತೋಷದ, ಸಡಗರದ ಸಮಯದಲ್ಲೂ ವಿಷಾದದ ಮಾತುಗಳನ್ನು ಹೇಳುವುದು, ಅದನ್ನು ನೀವು ಕೇಳುವುದು ಕಿರಿಕಿರಿ ಅನ್ನಿಸಬಹುದು. ಆದರೆ ಬೇರೆ ಆಯ್ಕೆಗಳಿಲ್ಲ, ಕೆಲವು ಮಾತುಗಳನ್ನು ಹೇಳಲೇಬೇಕು.

ನಾವು ಪ್ರಜ್ಞಾವಂತ ಕನ್ನಡಿಗರು ನಿಮಗೆ ಈ ಹಿಂದೆ ನೂರಾರು ಪತ್ರಗಳನ್ನು ಬರೆದಿದ್ದೆವು. ನಮ್ಮ ಆಕ್ಷೇಪಣೆ ಇದ್ದದ್ದು ನಿಮ್ಮ ವಾಹಿನಿಯಲ್ಲಿ ಪ್ರಸಾರವಾಗುವ ಬೃಹತ್ ಬ್ರಹ್ಮಾಂಡ ಎಂಬ ಕಾರ್ಯಕ್ರಮದ ಬಗ್ಗೆ. ನಿಮಗೆ ಪತ್ರಗಳನ್ನು ಬರೆದವರಲ್ಲಿ ಎಲ್ಲ ವಲಯದ, ವರ್ಗದ ಜನರಿದ್ದರು. ಈ ಪತ್ರಗಳಿಗೆ ಪ್ರತಿಯಾಗಿ ಮೊನ್ನೆ ಬದುಕು ಜಟಕಾ ಬಂಡಿ ಎಂಬ ರಿಯಾಲಿಟಿ ಶೋ ಒಂದರಲ್ಲಿ ಬೃಹತ್ ಬ್ರಹ್ಮಾಂಡ ಕಾರ್ಯಕ್ರಮ ನಡೆಸುವ ನರೇಂದ್ರ ಶರ್ಮ ಎಂಬುವವರಿಂದ ಪ್ರತಿಕ್ರಿಯೆ, ಸ್ಪಷ್ಟನೆ ಕೊಡಿಸುವ ಪ್ರಯತ್ನ ನಡೆಯಿತು.

ಕಾರ್ಯಕ್ರಮದ ಕಡೆಯಲ್ಲಿ ಒಂದು ಸಾಲು ಹಿನ್ನೆಲೆಯಾಗಿ ಕೇಳುತ್ತದೆ. ಈ ಕಾರ್ಯಕ್ರಮಕ್ಕೆ ಅಂತರ್ಜಾಲದಲ್ಲಿ ಗುರೂಜಿ ನರೇಂದ್ರ ಬಾಬು ಶರ್ಮ ಅವರ ವಿರುದ್ಧ ಹಾಗು ಜೀ ಕನ್ನಡ ವಾಹಿನಿಯ ವಿರುದ್ಧ ನಕಾರಾತ್ಮಕ ಆಂದೋಲನ ನಡೆಸುತ್ತಿರುವವರನ್ನೂ ಆಹ್ವಾನಿಸಲಾಗಿತ್ತು. ಆದರೆ ಅವರು ಯಾರು ಬರಲಿಲ್ಲ. ಆದರೂ ಗುರೂಜಿಯವರು ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿ ಶ್ರೇಷ್ಠತೆ ಮೆರೆದರು...

ನಿಮಗೆ ಈ ಹಿಂದೆ ಬರೆದ ಪತ್ರವೂ ಯಾವುದೇ ನೈತಿಕ ಚೌಕಟ್ಟನ್ನು ಉಲ್ಲಂಘಿಸದ, ಸಭ್ಯ ಭಾಷೆಯ ವಿನಯಪೂರ್ವಕ ಪತ್ರವಾಗಿತ್ತು. ಅದನ್ನು ನಿಮಗೆ ಮತ್ತೊಮ್ಮೆ ನೆನಪಿಸಬಯಸುತ್ತೇವೆ. ನಮ್ಮ ವಿರೋಧ ಇರುವುದು ಬೃಹತ್ ಬ್ರಹ್ಮಾಂಡ ಕಾರ್ಯಕ್ರಮದಲ್ಲಿ ಪ್ರಸಾರವಾಗುವ ಅಸಂವಿಧಾನಿಕ, ಅನೈತಿಕ, ಕೀಳು ಅಭಿರುಚಿಯ, ಅಸಹ್ಯ ಹುಟ್ಟಿಸುವ, ಮೌಢ್ಯವನ್ನು ಹೆಚ್ಚಿಸುವ, ಭೀತಿ ಹುಟ್ಟಿಸುವ ನರೇಂದ್ರ ಶರ್ಮ ಅವರ ಪ್ರವಚನಗಳಿಗೇ ಹೊರತು, ನಿಮ್ಮ ವಾಹಿನಿಯ ವಿರುದ್ಧವಲ್ಲ. ನೀವು ಸುಖಾಸುಮ್ಮನೆ ಈ ಆರೋಪವನ್ನು ಹೊರಿಸಿದ್ದೀರಿ. ಮಾತ್ರವಲ್ಲ, ನರೇಂದ್ರ ಶರ್ಮ ಅವರ ಅವಿವೇಕದ ಕ್ರಿಯೆಗಳನ್ನು ನಿಮ್ಮ ಬೆನ್ನ ಮೇಲೆ ಹೊತ್ತುಕೊಂಡಿದ್ದೀರಿ. ನೀವಾಗಿಯೇ ನೀವು ಆರೋಪಿಯ ಸ್ಥಾನವನ್ನು ಹೇರಿಕೊಳ್ಳುವ ಅಗತ್ಯವಾದರೂ ಏನಿತ್ತು, ನಮಗಂತೂ ಗೊತ್ತಾಗುತ್ತಿಲ್ಲ. ಜೀವಪರ, ವೈಜ್ಞಾನಿಕ ನಿಲುವುಗಳನ್ನು ಸಮರ್ಥಿಸುವವರಿಗೆ ನೀವು ಈಗ ಅನಾಮತ್ತಾಗಿ ಹೊತ್ತುಕೊಂಡಿರುವ ಬ್ರಹ್ಮಾಂಡದ ಹೊರೆ ದುಬಾರಿ ಅನ್ನಿಸುತ್ತದೆ.

ಇನ್ನು ನಮ್ಮ ಆಂದೋಲನವನ್ನು ನಕಾರಾತ್ಮಕ ಎಂದು ನೀವು ಕರೆದಿದ್ದೀರಿ. ಮುಗ್ಧ ಜನರನ್ನು ಪ್ರಳಯದ ಹೆಸರಿನಲ್ಲಿ ಸಾವಿನ ಭೀತಿಗೆ ನೂಕುತ್ತಿರುವ ಕಪಟ ಜ್ಯೋತಿಷಿಗಳ ವಿರುದ್ಧ ಧ್ವನಿಯೆತ್ತುವುದು ನಿಮಗೆ ನಕಾರಾತ್ಮಕ ಅನ್ನಿಸಿತೇ? ಇವತ್ತಿನಿಂದ ಜಗತ್ತಿನ ಸಮಸ್ತ ಜನರಲ್ಲೂ ರೋಗರುಜಿನಗಳು ಶುರುವಾಗುತ್ತದೆ (ಮಾರ್ಚ್೨೩, ಬೃಹತ್ ಬ್ರಹ್ಮಾಂಡ) ಎಂದು ಹೇಳುವ ರೋಗಿಷ್ಠ ವ್ಯಕ್ತಿಯ ವಿರುದ್ಧ ಮಾತನಾಡಿದರೆ ಅದು ನಕಾರಾತ್ಮಕವಾಗುತ್ತದೆಯೇ? ಟಿವಿಗಳಂಥ ಸಾರ್ವಜನಿಕ ಹೊಣೆಗಾರಿಕೆಯ ಮಾಧ್ಯಮಗಳಲ್ಲಿ ಬಳಸುವ ಭಾಷೆ ಎಲ್ಲೆ ಮೀರಬಾರದು ಎಂದು ವಿನಂತಿಸಿದರೆ ಅದು ನಕಾರಾತ್ಮಕ ಧೋರಣೆಯೇ? ಬೆಳಿಗ್ಗೆ ಎದ್ದ ಕೂಡಲೇ ಹಜಾಮರ ಮುಖ ನೋಡಬಾರದು ಎಂದು ಒಂದು ಜಾತಿಯ ಜನರನ್ನು ವಿನಾಕಾರಣ ನಿಂದಿಸಿ, ಅಪಮಾನಿಸಿದಾಗ ಅದನ್ನು ಪ್ರತಿಭಟಿಸುವುದು ನಕಾರಾತ್ಮಕ ಆಂದೋಲನವೇ?

ನರೇಂದ್ರ ಶರ್ಮ ಅವರಿಂದ ಸ್ಪಷ್ಟನೆ ಕೊಡಿಸುವ ನಿಮ್ಮ ಪ್ರಯತ್ನವೇ ಒಂದರ್ಥದಲ್ಲಿ ವಿಫಲಾಗಿದೆ. ಹುಟ್ಟು ಗುಣ ಸುಟ್ಟರೂ ಹೋಗುವುದಿಲ್ಲ ಎಂದು ತನಗೆ ತಾನೇ ಹೇಳಿಕೊಂಡ ನರೇಂದ್ರ ಶರ್ಮ ಅವರು ತಾವು ಬಳಸುವ ಕೀಳು ಅಭಿರುಚಿಯ ಭಾಷೆಯನ್ನು ಬಿಡುವುದಿಲ್ಲ ಎಂದು ನಿಮ್ಮ ವೇದಿಕೆಯಲ್ಲೇ ಘಂಟಾಘೋಷವಾಗಿ ಹೇಳಿ, ನಿಮ್ಮ ವಾಹಿನಿಯ ಘನತೆಗೇ ಕುಂದುತಂದಿದ್ದಾರೆ.

ನಿಮ್ಮ ಕಚೇರಿಯಲ್ಲಿ ನೂರಾರು ಹೆಣ್ಣುಮಕ್ಕಳು ಕೆಲಸ ಮಾಡುತ್ತಾರೆ. ನಿಮ್ಮ-ನಮ್ಮ ಮನೆಗಳಲ್ಲೂ ಹೆಣ್ಣುಮಕ್ಕಳಿದ್ದಾರೆ. ಎಲ್ಲರೂ ಸೀರೆ ಉಡುವುದಿಲ್ಲ. ಬಹುತೇಕರು ಚೂಡಿದಾರ್‌ಗಳನ್ನು ಧರಿಸುತ್ತಾರೆ. ಮತ್ತೆ ಹಲವರು ಜೀನ್ಸ್ ಪ್ಯಾಂಟುಗಳನ್ನು ತೊಡುತ್ತಾರೆ. ಇವರೆಲ್ಲರಿಗೂ ಗರ್ಭಕೋಶದ ಕ್ಯಾನ್ಸರ್ ಬರುತ್ತದೆ ಎಂದು ಹೇಳಿದ್ದಾರೆ ನರೇಂದ್ರ ಶರ್ಮ. ಇದನ್ನು ಕೇಳಿದ ಮೇಲೂ ನಿಮ್ಮ ಆತ್ಮಸಾಕ್ಷಿ ಕೆರಳಲಿಲ್ಲವೆಂದರೆ ಯಾರು ಏನನ್ನು ಮಾಡಲು ಸಾಧ್ಯ? ನಿದ್ದೆ ಹೋದವರನ್ನು ಎಬ್ಬಿಸಬಹುದು, ನಿದ್ದೆ ಮಾಡಿದಂತೆ ನಟಿಸುತ್ತಿರುವವರನ್ನು ಎಬ್ಬಿಸಬಹುದೇ?

ನರೇಂದ್ರ ಶರ್ಮ ನೀಡುತ್ತಿದ್ದ ಉತ್ತರಗಳಿಂದ ಘಾಸಿಗೊಂಡಂತೆ, ಆಘಾತಗೊಂಡಂತೆ, ಆಶ್ಚರ್ಯಗೊಂಡಂತೆ, ಹೇಸಿಗೆ ಪಟ್ಟುಕೊಂಡಂತೆ ಹಾವಭಾವ ತೋರುತ್ತಿದ್ದ, ಮಾತನಾಡುತ್ತಿದ್ದ ನಿರೂಪಕಿ ಮಾಳವಿಕಾ ಕಾರ್ಯಕ್ರಮದ ಕಡೆಯ ಭಾಗದಲ್ಲಿ ನರೇಂದ್ರ ಶರ್ಮ ಅವರನ್ನು ಅಭಿನಂದಿಸಿದ್ದು ಯಾವ ಪುರುಷಾರ್ಥಕ್ಕೆ? ಏನಿದರ ಮರ್ಮ? ಆಕೆಗೆ ಹಾಗೆ ಮಾಡಲು ನಿರ್ದೇಶನ ನೀಡಲಾಗಿತ್ತೆ?

ನಿಮ್ಮ ಬದುಕು ಜಟಕಾ ಬಂಡಿಯ ಸಂವಾದಕ್ಕೆ ಎರಡು ದಿನ ಮೊದಲೇ ನಿಮಗೆ ಪತ್ರ ಬರೆದವರಿಗೆ ಆಹ್ವಾನ ನೀಡಬಹುದಿತ್ತಲ್ಲ? ಯಾಕೆ ನೀಡಲಿಲ್ಲ? ಯಾಕೆ ಬೆರಳೆಣಿಕೆಯ ಕೆಲವರಿಗೆ ಚಿತ್ರೀಕರಣ ನಡೆಯುವ ದಿನವೇ ಕೇವಲ ಎರಡು ಗಂಟೆ ಮುಂಚಿತವಾಗಿ ತಿಳಿಸಲಾಯ್ತು? ಆದರೂ ಯಾರೂ ಬರಲಿಲ್ಲ ಎಂದು ಯಾಕೆ ನಿಮ್ಮನ್ನು ಸಮರ್ಥಿಸಿಕೊಳ್ಳುತ್ತಿದ್ದೀರಿ? ಇದೆಲ್ಲವೂ ಬಹಳ ಚೆನ್ನಾಗಿಯೇ ಅರ್ಥವಾಗುತ್ತದೆ.

ಬದುಕು ಜಟಕಾ ಬಂಡಿಯಲ್ಲಿ ಮಾಳವಿಕಾ ಅವರು ಕೇಳುತ್ತಿದ್ದ ಪ್ರಶ್ನೆಗಳಿಗೆ ನರೇಂದ್ರ ಶರ್ಮ ನೀಡಿದ್ದು ದಿಟ್ಟ ಉತ್ತರ ಎಂದು ದಟ್ಸ್ ಕನ್ನಡದಲ್ಲಿ ವರದಿಯಾಗಿದೆ. ಅದು ದಿಟ್ಟ ಉತ್ತರವಲ್ಲ, ವಿತಂಡವಾದ. ಒಮ್ಮೆ ಇಡೀ ಕಾರ್ಯಕ್ರಮವನ್ನು ಮತ್ತೊಮ್ಮೆ ನೋಡಿ. ಈತ ಜ್ಯೋತಿಷಿಯೂ ಅಲ್ಲ, ಧರ್ಮದರ್ಶಿಯೂ ಅಲ್ಲ, ವಿಜ್ಞಾನಿಯೂ ಅಲ್ಲ.  ಜನರ ನಂಬುಗೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಯಕಶ್ಚಿತ್ ವಂಚಕ ಎಂಬುದು ಸಾಬೀತಾಗುತ್ತದೆ. ಸರಿಯಾಗಿ ದೋಷಗಳಿಲ್ಲದಂತೆ ಒಂದು ವಾಕ್ಯ ಕನ್ನಡವನ್ನೂ ಮಾತನಾಡಲು ಬಾರದ ವ್ಯಕ್ತಿ ಈತ.

ಕಡೆಯ ಬಾರಿ ನಿಮ್ಮಲ್ಲಿ ಅತ್ಯಂತ ವಿನಯದಿಂದ ಮನವಿ ಮಾಡಿಕೊಳ್ಳುತ್ತಿದ್ದೇವೆ: ದಯವಿಟ್ಟು ಈ ಮೂರನೇ ದರ್ಜೆ ಕಾರ್ಯಕ್ರಮವನ್ನು ನಿಲ್ಲಿಸಿ.

ಐದು ವರ್ಷ ಪೂರೈಸಿದ ಶುಭ ಸಂದರ್ಭದಲ್ಲಿ ಮತ್ತೊಮ್ಮೆ ನಿಮ್ಮೆಲ್ಲರಿಗೂ ಹೃತ್ಪೂರ್ವಕ ಶುಭಾಶಯಗಳನ್ನು ಕೋರುತ್ತೇವೆ.

10 comments:

 1. Thats right . We have to make these channels to understand things in the right perspective,. We always support such causes in the interest of the public.

  ReplyDelete
 2. @ಸಂಪಾದಕೀಯ,
  ದುಡ್ಡು ಮಾಡುವ ಹಪಾಹಪಿಗೆ ಬಿದ್ದವರಿಗೆ ಯಾವುದೇ ಸಿದ್ದಾಂತ, ಸಾಮಾಜಿಕ ಕಳಕಳಿ ಇರಲು ಸಾಧ್ಯವಿಲ್ಲ.. ಇವರು ಬಡಪೆಟ್ಟಿಗೆ ಮಣಿಯುವವರಲ್ಲ ಆದ್ದರಿಂದ ಪ್ರಸಾರ ಭಾರತಿಗೆ ಸದರಿ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಲು ಪತ್ರ ಹಾಕುವುದರಿಂದ ಒಂದು ಸೂಕ್ತ ಅಂತ್ಯ ಕಾಣಿಸಲು ಸಾಧ್ಯವಾಗಬಹುದೇನೋ ಆದ್ದರಿಂದ ಎಲ್ಲರಿಗೂ ಸಿಗುವಂತೆ ಈ ಲಿಂಕನ್ನು http://reporterjay.blogspot.com/2011/04/how-to-file-complaint-against-tv-and.html ಹಾಕಿದರೆ ಚೆನ್ನಾಗಿರ್ತಿತ್ತು ಅನಿಸುತ್ತೆ .

  ReplyDelete
 3. ಇದು ಟಿ ಅರ್ ಪಿ ಪ್ರಭಾವ.

  ReplyDelete
 4. Please can some one Initiate filing case.. on the public interest basis. Court will summons the Zee tv to produce those videos if necessary..

  I support for this cause openly..
  I belive some of NGO can take the lead

  ReplyDelete
 5. ಸಮರ್ಥ ವಾದ ಮಂಡಿಸಿದ್ದೀರಿ. ಧನ್ಯವಾದಗಳು. ಝೀ ಕನ್ನಡ ಟಿವಿ ಯವರಿಗೆ ಕಿಂಚಿತ್ತಾದರೂ ಸಂವೇದನಶೀಲತೆ ಎಂಬುದು ಇದ್ದರೆ ಹಾಗು ದೇಹದ ಬಗ್ಗೆ ಕಾಳಜಿ ಇದ್ದರೆ ಇಂಥ ಹೊಲಸು ಕಾರ್ಯಕ್ರಮವನ್ನು ನಿಲ್ಲಿಸಬೇಕು.

  ReplyDelete
 6. ನಮ್ಮ ಮನೆ ಕಳ್ಳನಿಗೆ ನಾವೇ ಪೋಲಿಸ್, ನಮ್ಮದೇ ಕೋರ್ಟ್, ನಮ್ಮದೇ ತೀರ್ಪು, ನಮ್ಮದೇ ಮಾಫಿ. ! ಅಂದ ಹಾಗಿದೆ ಜೀ ಕನ್ನಡ ಚಾನೆಲ್ ನವರ ನರೇಂದ್ರ ಸ್ವಾಮಿ ಶರ್ಮ ಕುರಿತ , ಬದುಕು ಜಟಕಾ ಬಂಡಿ ಕಾರ್ಯಕ್ರಮ ದ ಈ ಆವೃತ್ತಿ.

  ReplyDelete
 7. Nodugaralli hechchina sankhyeyalli samarthakare iruvaaga badapettige maniyuvare Sharma athava channel?

  Shubha

  ReplyDelete
 8. Our opinions are intentionality snubbed, and ridiculously zee TV has again promoted him that he is rite ..

  like i said earlier

  ಕೊನೆಯ ಕ್ಲಿಪ್ ನೋಡಿದೆ... ಮನಸ್ಸಿಗೆ ತುಂಬಾ ಖೇದವಾಯ್ತು.. ವ್ಯವಸಿತ್ವಾಗಿ ನಕಾರತ್ಮಕ ಅಭಿಪ್ರಾಯಗಳು ಬಿತ್ತುತಿದ್ದಾರೆ ಅಂತರ್ಜಾಲದಲ್ಲಿ...ಅಂತ ಕೊನೆಯಲ್ಲಿ ಹೇಳಿದರು..

  "ಕೊಚ್ಚೆಯೊಳಗಣ....." ಎನ್ನುವ ದಾಸರ ಪದ ಸುಳಿದು ಹೋಯಿತು...ಮನದಲ್ಲಿ... Innu Zee TV avarige E dasara padana poorti helo avashaykate illa ankontini..

  ReplyDelete
 9. ಇ‍‍ಷ್ಟೆಲ್ಲಾ ನಡುವೆಯೂ ನಮ್ಮ ಹಲವಾರು ಪ್ರಶ್ನೆಗಳಿಗೆ ಶರ್ಮ ಅವರು ಉತ್ತರ ನೀಡಬೇಕಾಗಿದೆ.
  ೧. ೫ ರೀತಿಯ ಎಣ್ಣೆ ದೀಪಗಳನ್ನು ಹಚ್ಚುವುದರಿಂದ ನಾವು ಯಾವ ರೀತಿ ಪ್ರಳಯವನ್ನು ತಡೆಯಬಹುದು.
  ೨. ೫ ರೀತಿಯ ಎಣ್ಣೆ ದೀಪಗಳನ್ನು ಹಚ್ಚುವುದರಿಂದ ಪ್ರಳಯವನ್ನು ತಡೆಯಬಹುದು, ಎಂದಾದರೆ ಜಪಾನ್ ಸರ್ಕಾರಕ್ಕೆ ಇದನ್ನು ಮೊದಲೇ ತಿಳಿಸಿ ಸಾವಿರಾರು ಜನರ ಪ್ರಾಣವನ್ನು ಉಳಿಸಬಹುದಿತ್ತು.( ಗೊತ್ತಿದ್ದು ಸುಮ್ಮನಿದ್ದ ಶರ್ಮ ಅವರು ಅ‍‍ಷ್ಟು ಜನರ ಸಾವಿಗೆ ಕಾರಣರಾಗಿದ್ದು ಅದರ ಪಾಪವನ್ನು ಹೊರಬೇಕಾಗುತ್ತದೆ.)
  ೩. ಜಪಾನ್ ನಲ್ಲಿ ಭೂಕಂಪ ಆಗುತ್ತೆ ಅಂತ ಮೊದಲೇ ಹೇಳಿದ್ದೆ ಎನ್ನುವ ಶರ್ಮ ಅವರು ಅದರ ಬಗ್ಗೆ ಯಾವ ರೀತಿ ತಿಳಿದುಕೊಂಡರು ಎಂದು ತಿಳಿದರೆ ಮುಂದಿನ ದಿನಗಳಲ್ಲಿ ಮಾನ್ಯ ಸರ್ಕಾರವು ಆ ವಿಧಾನಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸಬಹುದು.
  ೪.ಜಪಾನಿಯರು ಹಾವು ತಿನ್ನುವುದರಿಂದ ಸುನಾಮಿ ಸಂಭವಿಸಿತು ಎನ್ನುವುದಾದರೇ, ೨೦೦೪ರಂದು ಭಾರತದಲ್ಲಿ ಸಂಭವಿಸಿದಾಗ ತಮಿಳುನಾಡಿನವರು ಯಾವ ರೀತಿಯ ಹಾವುಗಳನ್ನು ತಿನ್ನುತ್ತಿದ್ದರು.
  ೫. ಸಲ್ವಾರ್ ಕಮೀಜ್ ಧರಿಸಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ ಎನ್ನುವುದಾದರೆ, ಇದುವರೆಗೂ ಗರ್ಭಕೋಶಕ್ಕೆ ತುತ್ತಾದವರೆಲ್ಲಾ ಸಲ್ವಾರ್ ಕಮೀಜ್ ಧರಿಸುತ್ತಿದ್ದರಾ ?
  ೬.ಹೆಣ್ಣುಮಕ್ಕಳು ಜೀನ್ಸ್ ಪ್ಯಾಂಟ್, ಚೂಡಿದಾರ್ ಹಾಕಿದರೆ ಗರ್ಭಕೋಶದ ಕ್ಯಾನ್ಸರ್ ಬರುತ್ತೆ. ಈ ಡ್ರೆಸ್‌ಗಳನ್ನು ಹಾಕಿಕೊಂಡರೆ ಗಾಳಿಯಾಡೋದಿಲ್ಲ. ಎನ್ನುವುದಾದರೆ "ಗಂಡುಮಕ್ಕಳು ಪ್ಯಾಂಟ್ ಧರಿಸುತ್ತಿದ್ದು ಗಾಳಿ ಆಡೊಲ್ಲ ಎನ್ನುವುದಾದಾರೇ ಪ್ರಸ್ತುತ ೧೦೦ಕ್ಕೆ ೯೫% ಗಂಡುಮಕ್ಕಳು ಪ್ಯಾಂಟ್ ಧರಿಸುತ್ತಿದ್ದು ಇವರಿಗೆ ಯಾವ ರೀತಿಯ ಕ್ಯಾನ್ಸರ್ ಬರುತ್ತೆ ಸ್ವಾಮಿ ?
  ೭. ಪ್ರಳಯವೆಲ್ಲ ನಡೆದು, ಬೆಳಗಾವಿಯ ಒಂದು ಹಳ್ಳಿ ಮಾತ್ರ ಉಳಿಯುತ್ತದೆ ಎನ್ನುವುದಾದರೆ ಬೆಳಗಾವಿ ಮಾತ್ರ ಉಳಿಯಲು ಕಾರಣವೇನು ? ಮತ್ತು ಹೇಗೆ ?
  ಹಾಗೂ
  ಝೀ ವಾಹಿನಿಯವರಲ್ಲಿ ಒಂದು ವಿನಂತಿ :
  ೧. ಬ್ಲಾಗ್ ಗಳಲ್ಲಿ ಅನಿಸಿಕೆಯನ್ನು ವ್ಯಕ್ತಪಡಿಸುತ್ತಿರುವ ನಾವುಗಳೆಲ್ಲಾ ಬೆಂಗಳೂರಿನಲ್ಲೇ ಇದ್ದೀವಿ ಎಂದು ಭಾವಿಸಿ ಮಧ್ಯಾಹ್ನ ೧ ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದು ಬೆಳಿಗ್ಗೆ ೧೧ ಗಂಟೆಗೆ ನೀಡಿರುವರು. ಅದೂ ತಮ್ಮ ಪತ್ರದಲ್ಲಿ ಮೊಬೈಲ್ ನಂಬರ್ ದಾಖಲಿಸಿದ ಕೆಲವರಿಗೆ ಮಾತ್ರ. ಈ ಚಿತ್ರೀಕರಣಕ್ಕೆ ತಮ್ಮ ವಾಹಿನಿಯಲ್ಲೇ ಯಾಕೆ ಒಂದು ವಾರದ ಮುಂಚೆ ಪ್ರಕಟಿಸಿ, ಆಹ್ವಾನಿಸಬಹುದಿತ್ತಲ್ಲವೇ ?
  ೨.ಟೀಕಿಸಿದವರಿಗೆ ೨ ಗಂಟೆ ಮುಂಚೆ ತಿಳಿಸಿದ ಹಾಗೇ ಪಾಲ್ಗೊಂಡಿದ್ದ ವ್ಯಕ್ತಿಗಳಿಗೂ ಕೇವಲ ೨ ಗಂಟೆ ಮುಂಚೆ ತಿಳಿಸಲಾಗಿತ್ತೇ ?

  ReplyDelete