Friday, February 18, 2011

ಮಾಂಸದ ಅಂಗಡಿಯಲ್ಲಿ ಚೆಂಡುಹೂವು ನೇತುಹಾಕ್ತಾರಾ ಚಿದಾನಂದಮೂರ್ತಿಗಳೇ?


ಸನ್ಮಾನ್ಯ ಡಾ. ಎಂ.ಚಿದಾನಂದಮೂರ್ತಿಯವರೇ,

ರಾಜ್ಯಪಾಲರು ಡಾಕ್ಟರೇಟು ತಡೆಹಿಡಿದದ್ದು, ಅನಂತಮೂರ್ತಿಯಂಥವರು ಪ್ರತಿಭಟಿಸಿದ್ದು, ಸಾಹಿತ್ಯ ಸಮ್ಮೇಳನದಲ್ಲಿ ಖಂಡನಾ ನಿರ್ಣಯ ಅಂಗೀಕಾರವಾಗಿದ್ದು, ರಾಜ್ಯಪಾಲರು ನಿಲುವು ಬದಲಿಸಿಕೊಂಡಿದ್ದು, ನೀವು ಡಾಕ್ಟರೇಟು ಸ್ವೀಕರಿಸಿದ್ದು, ಚಿದಾನಂದಮೂರ್ತಿಯವರೇನು ಕರ್ನಾಟಕಕ್ಕಿಂತ ದೊಡ್ಡವರಾ ಎಂದು ಪಾಪು ಪ್ರಶ್ನಿಸಿದ್ದು... ಇತ್ಯಾದಿ ಇತ್ಯಾದಿಗಳ ವಿಷಯ ದೇವರಾಣೆಗೂ ನಾವು ಚರ್ಚಿಸುವುದಿಲ್ಲ. ಅದೆಲ್ಲ ಈಗ ಹಳೆಯ ಸುದ್ದಿಯಾಯಿತು.

ವಾಚಕರ ವಾಣಿಗಳಿಗಾಗಿ ನೀವು ಬರೆದ ಪತ್ರವೊಂದನ್ನು ಹೊಸದಿಗಂತದಲ್ಲಿ ಮೊನ್ನೆ ಹಾಗು ಕನ್ನಡಪ್ರಭದಲ್ಲಿ ನಿನ್ನೆ ಓದಿದೆವು. ಆ ಪತ್ರಕ್ಕೆ ಇದು ಪ್ರತಿಪತ್ರ.  ದಯಮಾಡಿ ಪರಾಂಬರಿಸಬೇಕು. ನೀವು ಎಂ.ಪಿ.ಪ್ರಕಾಶರ ಅಂತಿಮ ದರ್ಶನಕ್ಕೆ ಹೋಗಿದ್ದು, ವಾಪಾಸು ಬರುತ್ತಾ ಭಿಕ್ಷುಕಿಗೂ ಆಕೆಯ ಮೂವರು ಮಕ್ಕಳಿಗೂ ಕಾಸು, ಚಾಕಲೇಟು ಕೊಟ್ಟಿದ್ದು, ಗಳಗಳನೆ ಅತ್ತಿದ್ದು.. ಇತ್ಯಾದಿ ಬರೆದಿದ್ದೀರಿ. ಅದು ನಿಮ್ಮ ಮಾನವೀಯತೆಯನ್ನು ತೋರಿಸುತ್ತದೆ, ಸಂತೋಷ.

ನಂತರ ನೀವೇನು ಬರೆಯುತ್ತಾ ಹೋದಿರಿ? ಏನಾಗಿದೆ ನಿಮಗೆ?

ನಿಮ್ಮ ಪತ್ರದ ಕೆಲವು ಸಾಲುಗಳು ಇವು:

ಮುಂದೆ ಆಟೋ ಹಂಪಿನಗರದ ಮನೆಗೆ ಗೋರಿಪಾಳ್ಯದ ಮೂಲಕ ಬಂದಿತು. ಅಲ್ಲಿನ ಪ್ರದೇಶದಲ್ಲಿ ನಿಧಾನಕ್ಕೆ ಹಿಂದೂಗಳ ಸಂಖ್ಯೆ ಕಡಿಮೆಯಾಗುತ್ತಿದೆ- ಮುಸ್ಲಿಮರೇ ಜಾಸ್ತಿಯಿರುವುದರಿಂದ ಅನೇಕರು ಹೆದರಿ ತಮ್ಮ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ. ಅಲ್ಲಿನ ಮುಖ್ಯ ರಸ್ತೆಯಲ್ಲಿ ಬಂದರೆ ಮಾಂಸದ ಕೆಟ್ಟ ವಾಸನೆ, ಹಲವು ಮಸೀದಿಗಳು ಅಲ್ಲಿವೆ-ಅಲ್ಲಿನ ಧ್ವನಿವರ್ಧಕಗಳಿಂದ ನನ್ನ ಮನೆಗೆ ಅಲ್ಲಿ ನಡೆಯುವ ಪ್ರಾರ್ಥನೆಗಳು ಕೇಳಿಸುತ್ತವೆ. 
ಆ ಮುಖ್ಯ ರಸ್ತೆಯಲ್ಲಿ ಬಲಗಡೆ ಒಂದು ಚರ್ಚು; ಅದರ ಎದುರಿಗೆ ಒಂದು ಮಾಂಸದ ಅಂಗಡಿಯಲ್ಲಿ ಮಾಂಸವನ್ನು ನೇತು ಹಾಕಿದ್ದರೆ ಅದರ ಮುಂದೆಯೇ ಒಂದು ಹಸು ನಿಂತಿತ್ತು. ಅದನ್ನು ದಾಟಿ ಬಂದರೆ ಅಲ್ಲೇ ಒಂದು ಹಿಂದೂ ದೇವಾಲಯ. ಅದರಿಂದ ಮುಂದೆ ಬಂದರೆ ಅಲ್ಲೇ ಎಡಗಡೆ ಮೂರು ನಾಲ್ಕು ಚಿಕ್ಕ ಮನೆಗಳ ಮೇಲೆ ಹಲವು ಹಸಿರು ಬಾವುಟಗಳು, ಮನಸ್ಸು ತೀರಾ ಖಿನ್ನವಾಯಿತು.

ಈಗ ನಿಧಾನವಾಗಿ ನಿಮ್ಮ ಮಾತುಗಳ ಕುರಿತು ಚರ್ಚಿಸೋಣ. ಹೌದು, ಗೋರಿಪಾಳ್ಯದಲ್ಲಿ ಮುಸ್ಲಿಮರೇ ಹೆಚ್ಚು. ಇರಬಾರದು ಎಂದು ಹೇಳಿದವರ‍್ಯಾರು? ಯಾಕಿರಬಾರದು? ಒಂದೊಂದು ಬಡಾವಣೆಗಳಲ್ಲಿ ಒಂದೊಂದು ಜಾತಿಯವರು, ಧರ್ಮದವರು ಹೆಚ್ಚು ಇರಬಹುದು, ಇರುತ್ತಾರೆ. ನಮ್ಮ ಹಳ್ಳಿಗಳಲ್ಲಿ ಜಾತಿಗೊಂದು ಕೇರಿ ಇರುವುದಿಲ್ಲವೇ? ಯಾಕೆ ಬೇಜಾರು ಮಾಡಿಕೊಳ್ತೀರಿ? ಮುಸ್ಲಿಮರಿಗೆ ಹೆದರಿ ಅನೇಕರು ತಮ್ಮ ಮನೆಗಳನ್ನು ಖಾಲಿ ಮಾಡುತ್ತಿದ್ದಾರೆ ಎಂದು ನಿಮಗೆ ಹೇಗೆ ಗೊತ್ತಾಯಿತು?  ಅಣ್ಣಿಗೇರಿಯಲ್ಲಿ ಪಂಪನ ವಂಶಸ್ಥರನ್ನು ಹುಡುಕಿದ ಹಾಗೆ ಗೋರಿಪಾಳ್ಯದಲ್ಲಿ ಭೀತಿಯಿಂದ ಆಗುತ್ತಿರುವ ವಲಸೆ ಕುರಿತು ಗಂಭೀರ ಸಂಶೋಧನೆಯನ್ನೇನಾದರೂ ಮಾಡಿದ್ದೀರೆ?

ಮುಖ್ಯರಸ್ತೆಯಲ್ಲಿ ಮಾಂಸದ ಕೆಟ್ಟ ವಾಸನೆ ಎನ್ನುತ್ತೀರಿ. ಬೇಯಿಸಿದ ಮಾಂಸದ ವಾಸನೆನಾ? ಹಸಿ ಮಾಂಸದ ವಾಸನೆನಾ? ನೀವು ಬಿಡಿಸಿ ಹೇಳಬೇಕಿತ್ತು. ಯಾಕಂದ್ರೆ ಬೇಯಿಸಿದ ಮಾಂಸದ ವಾಸನೆ ಮಾಂಸಪ್ರಿಯರಿಗೆ ಅಚ್ಚುಮೆಚ್ಚು; ಅದಕ್ಕೆ ಕೇಳಿದೆವು. ಹಲವು ಮಸೀದಿಗಳು ಅಲ್ಲಿವೆ ಅಂತೀರಾ, ಇರಲಿ ಬಿಡಿ. ಧ್ವನಿವರ್ಧಕಗಳಿಂದ ಪ್ರಾರ್ಥನೆಯ ಧ್ವನಿ ಕೇಳಿಬರುತ್ತೆ ಅಂತೀರಿ. ಬೆಳ್ಳಂಬೆಳಗ್ಗೆ ಪ್ರಾರ್ಥನೆಗಳ ಶಬ್ದ ಕೇಳಿಬರುವುದು ಮಸೀದಿಗಳಿಂದ ಮಾತ್ರವಲ್ಲ, ಮಂದಿರಗಳಿಂದಲೂ ಕೇಳಿಬರುತ್ತವೆ. ನಿಮಗೆ ಕೇಳುತ್ತಿಲ್ಲವಾದರೆ ನಿಮ್ಮ ಮನೆಯ ಪಕ್ಕದಲ್ಲಿ ಇರುವ ದೇವಸ್ಥಾನಗಳ ಮುಖ್ಯಸ್ಥರಿಗೆ ಹೇಳಿ, ಅವರು ಬೆಳಿಗ್ಗೆ ಸುಶ್ರಾವ್ಯ ಭಕ್ತಿಗೀತೆಗಳನ್ನು ಹಾಕುತ್ತಾರೆ.

ಮಾಂಸದ ಅಂಗಡಿಯಲ್ಲಿ ಮಾಂಸವನ್ನು ನೇತು ಹಾಕದೆ ಚೆಂಡುಹೂವಿನ ಮಾಲೆಯನ್ನು ನೇತುಹಾಕುತ್ತಾರಾ ಚಿದಾನಂದಮೂರ್ತಿಗಳೇ? ಅಥವಾ ಮಾಂಸದಂಗಡಿಗಳಲ್ಲಿ ಸ್ಯಾನಿಟರಿ ಪೈಪುಗಳನ್ನು ಜೋಡಿಸಿಡುತ್ತಾರಾ? ಅಥವಾ ಅಲ್ಲಿ ಬತ್ತಾಸು, ಖರ್ಜೂರ, ಜೀರಿಗೆ ಮಿಠಾಯಿ ಮಾರಲು ಸಾಧ್ಯವೇ?

ಕೆಲವು ಮನೆಗಳ ಮೇಲೆ ಹಸಿರು ಬಾವುಟಗಳು ಕಂಡರೆ ನಿಮ್ಮ ಮನಸ್ಸಿಗೇಕೆ ಖಿನ್ನತೆ ಆವರಿಸಬೇಕು? ಹಸಿರು ಬಾವುಟವನ್ನು ದೇಶದಲ್ಲಿ ನಿಷೇಧಿಸಲಾಗಿದೆಯೇ? ಮನೆಗಳ ಮೇಲೆ ಕೇಸರಿ ಬಾವುಟಗಳನ್ನು ಕಂಡರೂ ನೀವು ಖಿನ್ನರಾಗುತ್ತೀರೆ?

ಪೂಜ್ಯರಾದ ಡಾ.ಎಂ.ಚಿದಾನಂದಮೂರ್ತಿಯವರೇ, ನಿಮ್ಮ ಪತ್ರದ ತಲೆಬುಡ ಅರ್ಥವಾಗಲಿಲ್ಲ ನಮಗೆ. ಅದಕ್ಕಾಗಿ ಈ ಪತ್ರವನ್ನು ನಿಮಗೆ ನಿವೇದಿಸಿಕೊಂಡಿದ್ದೇವೆ. ಅನ್ಯಥಾ ಭಾವಿಸಬೇಡಿ. ನಾವು ಪಾಮರರು, ಏನದ್ರೂ ತಪ್ಪಾಗಿದ್ರೆ ಕ್ಷಮಿಸಿ.

ಆದರಪೂರ್ವಕವಾಗಿ
-ಸಂಪಾದಕೀಯ

ಡಾ.ಎಂ.ಚಿದಾನಂದಮೂರ್ತಿಯವರ ಪತ್ರ ಯಾವುದೇ ಸ್ವರೂಪದ ಪತ್ರಿಕೆಯಲ್ಲಿ ಪ್ರಕಟವಾಗಲು ಯೋಗ್ಯವಾಗಿದೆಯೇ? ನೀವು ಹೇಳಿ.

27 comments:

 1. ಚಿ.ಮು ಗೆ ಸಂಪಾದಕೀಯ ಕೆಲ ಆರೋಗ್ಯಕರ ಪ್ರಶ್ನೆಗಳನ್ನು ಕೇಳಿರುವುದಕ್ಕೆ ಅಭಿನಂದನೆಗಳು.
  ಒಂದು ಪ್ರಶ್ನೆ ಕಾಡುತ್ತೆ.
  ಯಾಕೆ ಚಿ.ಮು.ಗೊಂದಲಗಳನ್ನು ಸೃಷ್ಠಿಸಿಕೊಳ್ತಾರೋ ಅಂತ ಖೇದ ಉಂಟಾಗುತ್ತೆ.

  ReplyDelete
 2. HAOUDU. aAGA Avaru expose aguthare.
  letter odidaga nanagu haage anisittu..

  ReplyDelete
 3. ಇಲ್ಲ ಸಲ್ಲದ ವಿಚಾರಗಳನ್ನು ವಿವಾದಗಳನ್ನಾಗಿಸುವುದಕ್ಕೆಂದೇ ಕಾದುಕೊಂಡಿರುವವರ ನಡುವೆ ಪ್ರಾಚಾರ್ಯರೂ, ಪ್ರಚಾರಪ್ರಿಯರೂ ಗೊಂದಲಮೂಡಿಸುತ್ತಿರುತ್ತಾರೆ. ಚಿ.ಮೂ ರವರ ನಿಲುವುಗಳನ್ನು ಈ ಪತ್ರದಲ್ಲಿ ಓದಿದ ನಂತರ ಅನಿಸಿದ್ದು "ಇದನ್ನು ಯಾಕಾದರೂ ಮುದ್ರಿದ್ದಾರೆ?" ಎಂಬುದಾಗಿ.ಚಿ.ಮೂರವರು ಈ ಕೆಲವು ದಿನಗಳ ಹಿಂದೆ ಪತ್ರಿಕಾಗೋಷ್ಟಿಯೊಂದಕ್ಕೆ ಆಟೋದಲ್ಲಿ ಒಂಟಿಯಾಗೆ ಬಂದಿದ್ದರು. ಅಲ್ಲದೇ ಅಂದು ಮತಾಂತರದಂತಹ ಸೂಕ್ಷ್ಮ ವಿಚಾರವನ್ನು ಜೋರಾಗಿ ವಿರೋಧಿಸಿಬಿಟ್ಟಿದ್ದರು. ಅವರ ಸಾಮಾಜಿಕ ಕಾಳಜಿಯನ್ನು ಖಂಡಿತಾ ಪ್ರಶ್ನಿಸುವಂತಿಲ್ಲ. ಆದರೆ ಬದುಕಿನ ಈ ಹಂತದಲ್ಲಿ ಅವರು ಬದಲಾಗಿರುವ ರೀತಿ ಮಾತ್ರ ಚಿಂತಿಸುವಂತೆ ಮಾಡುತ್ತಿದೆ. ಒಬ್ಬ ಒಳ್ಳೆಯ ಅಧ್ಯಾಪಕ ಧರ್ಮಗುರುವಾಗುವುದು ನೋವುಂಟು ಮಾಡುವುದು ಸ್ವಾಭಾವಿಕ.

  ReplyDelete
 4. ಸತ್ಯ ಬರೆದಿದ್ದಾರೆ ಚಿ.ಮೂ ಅದಕ್ಕೆ ಉರಿಯತ್ತೆ ತಮ್ಮಂತ ಬುದ್ದಿಜೀವಿಗಳಿಗೆ

  ReplyDelete
 5. ಚಿದಾನಂದ ಮೂರ್ತಿಗಳು ಮುಸ್ಲಿಮರ ಮತ್ತು ಕ್ರೈಸ್ತರ ವಿರುದ್ಧ ಎಷ್ಟೊಂದು ಹೇಳಿಕೆ ಕೊಟ್ಟರೂ ಅವರಿಗೆ ಸಮಾಧಾನವೇ ಇಲ್ಲ.. ಮತ್ತೆ ಮತ್ತೆ ವಿಭಿನ್ನ ರೀತಿಯಲ್ಲಿ ಅವರ ವಿರುದ್ಧ ಹೇಳಿಕೆ ಕೊಡುತ್ತಾರೆ. ಚಿಮೂ ಮನಸ್ಥಿತಿ ಎಷ್ಟೊಂದು ಅಪಾಯಕಾರಿಯಾಗಿದೆ ಎಂದರೆ ಈ ವ್ಯಕ್ತಿ ಸಾಧ್ಯವಾಗಿದ್ದರೆ ಕರ್ನಾಟಕವನ್ನು ಧರ್ಮದ ಹೆಸರಿನಲ್ಲಿ ಹೊತ್ತಿ ಉರಿಸುತ್ತಿದ್ದರು. ಆದರೆ ಕರ್ನಾಟಕದ ಜನ ಮಾತ್ರ ಇವರ ಈ ಕೀಲ್ದರ್ಜೆಯ ಲೇಖನಗಳನ್ನು ಓದಿ ಈ ವಯ್ಯನದು ಯಾವುತ್ತೂ ಇದ್ದದ್ದೇ .. ಅಂತ ಪೇಪರ್ ಮೂಲೆಗೆ ಬಿಸಾಕುತ್ತಾರೆ. ಹಾಗಾಗಿ ಇವರ ಬೆಂಕಿ ಹಚ್ಚುವ ಲೇಖನಗಳು ಯಾವುದೇ ರೀತಿಯ ಬೆಂಕಿ ಹಚ್ಚುವಲ್ಲಿ ವಿಫಲವಾಗಿವೆ ಎಂದೇ ಹೇಳಬಹುದು. ಏನೇ ಹೇಳಿದರೂ ಇವರ ಮನಸ್ಥಿತಿ ಮತ್ತು ಧೋರಣೆ ಎಷ್ಟು ಹದಗೆಟ್ಟಿದೆ ಎಂದರೆ ಅವರಿಗೆ ಯಾವ ಪ್ರಶ್ನೆ ಕೇಳಿದರೂ ಅದನ್ನು ಸರಿಪಡಿಸಲಾಗದು.

  ReplyDelete
 6. ಸಂಪಾದಕೀಯವು ಡಾ. ಚಿ.ಮು ಅವರಿಗೆ ಅದೆಷ್ಟೇ ಗೌರವ ನೀಡುವ ಭಾಷೆ ಬಳಸಿದ್ದರೂ ಅದರ ಹಿಂದಿರುವ ವ್ಯಂಗ್ಯ ಅರ್ಥವಾಗುತ್ತದೆ.ಅವರು ತೆರೆದಿಟ್ಟಿರುವ ವಾಸ್ತವಗಳ ಬಗ್ಗೆ ನೀವು ಒಮ್ಮೆ ಅಂತಹ ಪ್ರದೇಶಗಳಿಗೆ ಭೇಟಿ ನೀಡಿ ನಿಮ್ಮ ಅನುಭವವನ್ನೂ ಹಂಚಿಕೊಳ್ಳಿ. ಅದು ಬಿಟ್ಟು ತಮಗಾದ ಅನುಭವವನ್ನು ಮುಕ್ತವಾಗಿ ಹಂಚಿ ಕೊಂಡಿದ್ದನ್ನೇ ಗೇಲಿ ಮಾಡುವ ರೀತಿ ಬರೆದಿರುವುದು ಸಂಪಾದಕೀಯಕ್ಕೆ ಶೋಭೆ ಅಲ್ಲ.ಚಿ.ಮು ಅವರು ಸಂಶೋಧನೆಯಲ್ಲಿ ಎಷ್ಟು ಸಾಧನೆ ಮಾಡಿದ್ದರೋ , ಅಷ್ಟೇ ಇತ್ತೀಚಿನ ವರ್ಷಗಳಲ್ಲಿ ವಾಸ್ತವವನ್ನು ನಿಷ್ಠುರವಾಗಿ ಹೇಳುತ್ತಾರೆ.ಎಲ್ಲರೂ ಮುಕ್ತವಾಗಿ ಮಾತನಾಡಲು ಹೆದರುತ್ತಾರೆ.ಚಿ.ಮು ಹಾಗಿಲ್ಲ.ಆದ್ರೆ ವಯಸ್ಸಾಗಿದೆ ಅನ್ನುವ ನಿಮ್ಮ ಪರೋಕ್ಷ ವ್ಯಂಗ್ಯ ಮತ್ತು ಅಂಥಹ ಟೀಕೆಗಳಿಗೆ ಆಸ್ಪದ ನೀಡುವ ನಿಮ್ಮ ಚೆಂಡು ಹೂವು ... ಟೀಕೆ ಅತಿಯಾಯಿತು ಅನ್ನಿಸುತ್ತೆ

  ReplyDelete
 7. ಸದ್ಯ ಹಂಸರಾಜ್ಯಪಾಲರಿಗೆ ಕನ್ನಡ ಬರಲ್ಲ. ಬಂದಿದ್ರೆ ಅವರು ಈ ಅನರ್ಥಗರ್ಭಿತ ಪತ್ರ ಓದಿ ಡಾಕ್ಟರೇಟ್ ವಾಪಸ್ ತೆಗೋತಿದ್ರು !
  ಪ್ರಕಾಶ್ ಶೆಟ್ಟಿ, ವ್ಯಂಗ್ಯಚಿತ್ರಖಾರರು.

  ReplyDelete
 8. kp nalli "kesarikarana" shuruvaagide..

  ReplyDelete
 9. chidananda murthigalige aaatanka tandiddu gowri palyadalli kanda `hasiru bavutagalu' mattu `hasuvina' hasi mamsa! Hasuvannu `devaru' endu poojisuva hindugala madhye hasuvannu raajaaroshavagi kattarisuva bharatada neladalli `pakistana'da bavuta haarisuvavarannu tamma `rakta sambandhigalu' endu gurutisikolluvavaru maatra inthana durvarthaneyannu samarthisikolluttare.

  ReplyDelete
 10. ರಾಜ್ಯಪಾಲರು ಚಿಮೂ ಅವರಿಗೆ ಡಾಕ್ಟರೇಟ್ ನಿರಾಕರಿಸಿದಾಗ ಅದನ್ನ ಪ್ರಶ್ನಿಸಿ ಬರೆದಿದ್ದೆ.ಈ ಪತ್ರದಲ್ಲಿ ಅವರ ಗೋರಿಪಾಳ್ಯದ ಬಗೆಗಿನ ಮಾತು ಸರಿಯೆನಿಸಲಿಲ್ಲ ನನಗೆ.ಆದರೆ ಮತಾಂತರ ನಿಷೇಧದ ಬಗ್ಗೆ ಅವರ ನಿಲುವು ಸರಿಯಾಗೆ ಇದೆ.ಮತಾಂತರದ ಅವಾಂತರವನ್ನ ಬೇಕಂತಲೇ ನಿರ್ಲಕ್ಷಿಸೋ ಬುದ್ದಿ ಜೀವಿಗಳ,ಸಿಕ್ಯುಲರ್ಗಳ ಬುದ್ದಿಗೆ ಯಾವ ರಾಹು ಬಡಿದೆಯೋ?

  ReplyDelete
 11. ರಾಜ್ಯಪಾಲರು ಡಾಕ್ಟರೇಟು ಕೊಡದೇ ಇದ್ದುದು ಸರಿ ಅನಿಸ್ತಾ ಇದೆಯಲ್ಲ.....
  ಇವರನ್ನು ಬೆಂಬಲಿಸಿದವರು ಮೂರ್ಖರಾದರು!

  ReplyDelete
 12. alla swamy sampadakeeya balagave....

  neevu iruvudu, illadu, ellavannu nimma istanusara bareyuttiri.... haageye bereyavaru avara istakke matte alochanegalige takka haage bareyuttare... adarinda nimagenu tondare..... avaru eeli bantu anta baredare neeru huliye bantu antha adannu kindal madi bareyuttiddira???? eedaralli yaradu ati hecchu tappu??????

  ReplyDelete
 13. ಈ ಚಿ.ಮೂ ಗೂ ಇಷ್ಟೂಂದು ಶನಿ ಸಂತಾನವಿದೆ ಅಂತ ಗೊತ್ತಿರಲಿಲ್ಲ.
  ಸಂಪಾದಕೀಯ ಎತ್ತಿರುವ ವಾಸ್ತವ ಪ್ರಶ್ನೆಗಳನ್ನು ಅರಗಿಸಿಕೊಳ್ಳದೆ ಚಿ.ಮೂ ಬೆಂಬಲಿಸುವವರಿಗೆ ದಿಕ್ಕಾರ.
  ಸತ್ಯ ಸಂಗತಿಗಳು ಎಂದಿಗೂ ಸತ್ಯವೇ.ಆದರೆ,
  (ಸಂಪಾದಕೀಯವು ಡಾ. ಚಿ.ಮು ಅವರಿಗೆ ಅದೆಷ್ಟೇ ಗೌರವ ನೀಡುವ ಭಾಷೆ ಬಳಸಿದ್ದರೂ ಅದರ ಹಿಂದಿರುವ ವ್ಯಂಗ್ಯ ಅರ್ಥವಾಗುತ್ತದೆ.)ಹೀಗನ್ನುವವರು ಚಿ.ಮೂ. ಯ ಅಭಿಪ್ರಾಯವನ್ನು ಹೇಗೆ ಭಾವಿಸುತ್ತಾರೆ?
  ವಾಸ್ತವ ಮರೆಮಾಚಿ ಇವರೆಲ್ಲ ಅದೇನು ಸಾದಿಸ ಹೊರಟಿದ್ದಾರೋ?
  ಇದಕ್ಕೆ ಚಿ.ಮೂ ಉತ್ತರಿಸುತ್ತಾರೋ..?

  ReplyDelete
 14. Chi.Mu. ge Vayassu aagide. adkke takkante irbeku. ee lekana prakatisabaradittu.

  ReplyDelete
 15. Hello...hello..Is this blog dedicated for fulltime gossiping?
  Seriously...or do you mind to grow beyond that level?

  ReplyDelete
 16. ಹಿರಿಯ ಸಂಶೋಧಕ ಚಿ.ಮೂ. ಅವರು ಅತ್ಯಂತ ಅಪಾಯಕಾರಿ ಮನಸ್ಥಿತಿಯಲ್ಲಿದ್ದಾರೆ. ಅವರು ಏನೇ ಹೇಳಿದರು, ಪತ್ರಿಕೆಗಳಿಗೆ ಪತ್ರ ಬರೆದರೂ, ಸಂಶೋಧನೆ! ಮಾಡಿದರೂ ಅದು ಮುಸ್ಲಿಂ ಮತ್ತು ಕ್ರಿಸ್ತರ ವಿರುದ್ಧವಾಗಿಯೇ ಇರುತ್ತದೆ. ಸಂಘ ಪರಿವಾರದ ತುತ್ತೂರಿಯಂತೆ ಇರುತ್ತದೆ ಎಂದು ಬೇರೇ ಹೇಳಬೇಕಾಗಿಲ್ಲ. ಸದಾ ಸಂಘ ಪರಿವಾರದವರಿಗೆ ಪ್ರಿಯವಾದ ವಿವಾದಿತ ವಿಷಯಗಳನ್ನು ಚಚೆರ್ಖಗೆ ಒಳಪಡಿಸುತ್ತಿರುವ ವಿಷಯ ಎಲ್ಲರಿಗೂ ಗೊತ್ತಿರುವ ವಿಷಯವೇ. ಅವರು ಹೇಳುತ್ತಾರೆ ಅಂತ ನಾವು ಒಪ್ಪಲೇಬೇಕು ಎಂಬ ನಿಯಮವೇನೂ ಇಲ್ಲವಲ್ಲ. ಅವರ ಸಂಶೋಧನೆಗಳು, ಅನಿಸಿಕೆಗಳು ವಸ್ತುನಿಷ್ಠ ಮತ್ತು ಪ್ರಾಮಾಣಿಕವಾಗಿದ್ದರೆ ಮುಕ್ತ ಮನಸ್ಸಿನಿಂದ ಒಪ್ಪೋಣ. ಹಾಗಂತ ಚಿ.ಮೂ ಅವರು ಹೇಳಿದ್ದನ್ನೆಲ್ಲ ಗೋಮೂತ್ರದಂತೆ ಸೇವಿಸಬೇಕು ಎಂದೆನಿಲ್ಲ. ಅವರ ವಿಚಾರದಿಂದ ಖುಷಿ ಪಡುವ ಶನಿ ಸಂತತಿ ಇದೆ. ಅದಕ್ಕೆ ನನ್ನ ಅಭ್ಯಂತರ ಇಲ್ಲ. ನಾವು ಬದುಕುತ್ತಿರುವುದು ಪ್ರಜಾತಂತ್ರದಲ್ಲಿ. ಹೀಗಾಗಿ ಅವರ ವಿಚಾರ, ಸಿದ್ಧಾಂತವನ್ನು ವಿರೋಧಿಸುವ ಹಕ್ಕು ಇದೆ ಎಂದು ಭಾವಿಸುವೆ. ಅಂದಹಾಗೆ, ಚಿಮೂ ಅವರ ವಿಕಾರ ಮನಸ್ಥಿತಿಗೆ ಹಿಡಿದ ಕನ್ನಡಿಯಂತಿರುವ ಅವರು ಪತ್ರಿಕೆಗಳಿಗೆ ಬರೆಯುವ ಪತ್ರಗಳನ್ನು ಪ್ರಕಟಿಸಲು ಈಗ ಮತ್ತೊಂದು ಪತ್ರಿಕೆಯ ವೇದಿಕೆ ಅವರಿಗೆ ದೊರೆತಿದೆ. ಯಾವುದಂತೀರಾ ಕನ್ನಡಪ್ರಭ!ಪಾಪ, ವಿಜಯಕನಾರ್ಖಟಕದಿಂದ ಸಂಪಾದಕರೊಬ್ಬರು ಹೊರಬಿದ್ದ ಮೇಲೆ ಚಿಮೂ ಪತ್ರಗಳಿಗೆ ಅಲ್ಲಿ ಬೆಲೆ ಇರಲಿಲ್ಲ. ಎಲ್ಲವೂ 'ಕಬು' ಪಾಲಾಗಿದ್ದವು. ಈಗ ಚಿಮೂ ಮನಸ್ಥಿತಿಗೆ, ಅವರ ಸಿದ್ಧಾಂತಗಳಿಗೆ ತಾಳೆಯಾಗುವ ನಿಲುವು ಹೊಂದಿರುವ ಸಂಪಾದಕರು 'ಕಪ್ರ'ಪೀಠಾರೋಹಣ ಮಾಡಿರುವ ಕಾರಣ ಇನ್ನು ಚಿಮೂ ಪತ್ರಗಳ ಒಂದಕ್ಷರ ಎಡಿಟ್ ಆಗದೆ ಪ್ರಕಟವಾಗುವುದರಲ್ಲಿ ಸಂಶಯವಿಲ್ಲ. ಹೊಂದೊಮ್ಮೆ ವಿಕ ಓದುಗರ ಪತ್ರಗಳ ಕಾಲಂ ಕೇಸರಿಮಯವಾದಂತೆ ಇನ್ನು 'ಕಪ್ರ'ಓದುಗರ ಪತ್ರಗಳಿಗೂ ಕೇಸರಿ ಕೊಳೆ ಅಂಟುವ ಚಾಳಿ ಆರಂಭವಾಗಿರುವುದರಲ್ಲಿ ಯಾವುದೇ ಆಶ್ಚರ್ಯ ಕಾಣದು.

  ReplyDelete
 17. "ಧ್ವನಿವರ್ಧಕಗಳಿಂದ ಪ್ರಾರ್ಥನೆಯ ಧ್ವನಿ ಕೇಳಿಬರುತ್ತೆ ಅಂತೀರಿ. ಬೆಳ್ಳಂಬೆಳಗ್ಗೆ ಪ್ರಾರ್ಥನೆಗಳ ಶಬ್ದ ಕೇಳಿಬರುವುದು ಮಸೀದಿಗಳಿಂದ ಮಾತ್ರವಲ್ಲ, ಮಂದಿರಗಳಿಂದಲೂ ಕೇಳಿಬರುತ್ತವೆ"

  ಆ ಪ್ರಾರ್ಥನೆಗಳಿಗೂ ಈ ಪ್ರಾರ್ಥನೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ. ದೇವರ ದಯೆಯಿಂದ ಆ ಪ್ರಾರ್ಥನೆಯ ಕನ್ನಡಾನುವಾದ ಹೆಚ್ಚಿನ ಜನರಿಗೆ ಗೊತ್ತಿಲ್ಲವಷ್ಟೇ!!!

  ReplyDelete
 18. saudi arabia ಯಕ್ಕೆ ಹೋಗಿದ್ದು ಬಂದು ಇದೆ ರೀತಿ ಚಿಮೂರವರನ್ನ ಕೇಳಿದರೆ ನಿಮಗೂ ಅವರ ದುಗುಡ ಅರ್ಥವಾಗುತ್ತದೆ ಅಂದು ಕೊಂಡಿದ್ದೇನೆ.

  santhosh mandya

  ReplyDelete
 19. ಅಶ್ರಫ಼್ :
  "ಚಿಮೂ ಮನಸ್ಥಿತಿ ಎಷ್ಟೊಂದು ಅಪಾಯಕಾರಿಯಾಗಿದೆ ಎಂದರೆ ಈ ವ್ಯಕ್ತಿ ಸಾಧ್ಯವಾಗಿದ್ದರೆ ಕರ್ನಾಟಕವನ್ನು ಧರ್ಮದ ಹೆಸರಿನಲ್ಲಿ ಹೊತ್ತಿ ಉರಿಸುತ್ತಿದ್ದರು."

  ಯಪ್ಪಾ! ಅವ್ರಿಗಿಂತ ನಿಮ್ಮ ಹೇಳಿಕೆಯ ಜಾಸ್ತಿ ಆಯ್ತು ಅನ್ನಿಸುತ್ತೆ.ನಿಮಗನ್ನಿಸಲ್ವಾ? ಯಾರೊಬ್ಬರ ಹೇಳಿಕೆಯಿಂದ/ಬರಹಗಳಿಂದ ಯಾರು ಹೊತ್ತಿ ಉರಿಯುತ್ತಾರೆ,ಉರಿಸುತ್ತಾರೆ ಅನ್ನೋದು ನಮ್ಮ ರಾಜ್ಯದ ಜನ ನೋಡಿದ್ದಾರೆ.

  ತೀರಾ ಈ ರೀತಿ ಎಲ್ಲ ಕಮೆಂಟ್ ಮಾಡೋದು ಎಷ್ಟು ಸರಿ?

  ಕಡೆ ಮಾತು:ಅವರು ಹೇಳಿರೋ ಈ ಮಾತುಗಳು ಸರಿಯಿಲ್ಲದಿರಬಹುದು ಅದನ್ನ ನಾನು ಒಪ್ಪುವುದಿಲ್ಲ.ಆದರೆ,ಅವ್ರು ಹೇಳೋ ಮಾತೆಲ್ಲ ಸರಿಯಿಲ್ಲ ಅನ್ನಿಸುವುದಿಲ್ಲ.ಅಷ್ಟಕ್ಕೊ ’ಸತ್ಯ ಯಾವಗಲೂ ಕಹಿ’ ಬಿಡಿ

  ReplyDelete
 20. ಚಿ.ಮೂ. ಅವರಿಗೆ ಕೋಮುವಾದದ ಕಾಯಿಲೆ ಬಡಿದಿದೆ. ಅವರಿಗೆ ಬೇಕಾಗಿರೋದು ಡಾಕ್ಟರ್ ಪದವಿಯಲ್ಲ. ಒಳ್ಳೆ ಡಾಕ್ಟರ್ ನಿಂದ ಚಿಕಿತ್ಸೆ. -ರಘು

  ReplyDelete
 21. @ ಸುಬ್ರಹ್ಮಣ್ಯ ಮಾಚಿಕೊಪ್ಪ,
  ಪ್ರಾರ್ಥನೆಗಳು ಯಾವ ಭಾಷೆಯಲ್ಲಿದ್ದರೂ ಪ್ರಾರ್ಥನೆಗಳೇ ಅಲ್ಲವೇ? ಅದರಲ್ಲೂ ಏನು ಕೊಂಕು ಹುಡುಕಿದ್ರಿ? ಸಂಸ್ಕೃತ ಶ್ಲೋಕಗಳ ಅರ್ಥ ಎಲ್ಲಾ ಕನ್ನಡಿಗರಿಗೆ ಗೊತ್ತೆ?

  ReplyDelete
 22. you have made out only some part of his letter. let it be published completely and then we shall debate on that.

  ReplyDelete
 23. ಚಿ.ಮೂ.ಪತ್ರಕ್ಕೆ ನೇರಧಾಟಿಯಲ್ಲಿ ಉತ್ತರಿಸುತ್ತಾ ಚರ್ಚೆಗೆ ಒಡ್ಡಿದ ಸಂಪಾದಕೀಯಕ್ಕೆ ಧನ್ಯವಾದ! ಚಿ.ಮೂ. ಕನ್ನಡ ಸಾರಸ್ವತ ಲೋಕದ ಆಸ್ತಿ ಎಂದು ಭಾವಿಸಿದ್ದೆ, ಭ್ರಮನಿರಸನವಾಗಿದೆ. ಅವರ ಪತ್ರವನ್ನು ಪತ್ರಿಕಗಳಲ್ಲಿ ನೋಡಿ ಬೇಸರವಾಗಿತ್ತು, ಅದು ಅವರ ವೈಯುಕ್ತಿಕ ನಿಲುವಾಗಿದ್ದಿರ ಬಹುದಾದರೂ ಸಾರ್ವಜನಿಕ ವಲಯದಲ್ಲಿ ಅದು ವ್ಯಕ್ತವಾಗಬಾರದಿತ್ತು, ಆ ಮೂಲಕ ಎಂಥಾ ಅಪಾಯಕಾರಿ ಮನುಷ್ಯ ಎಂಬುದನ್ನು ಸಾಬೀತು ಮಾಡಿದ್ದಾರೆ. ಚಿ.ಮೂ. ವಿಷಯದಲ್ಲಿ ಬೆಂಬಲಕ್ಕೆ ನಿಂತವರನ್ನ-ರಾಜ್ಯದ ಜನತೆಯನ್ನ-ಮಾದ್ಯಮಗಳನ್ನ ಚಿ.ಮೂ. ಮೂರ್ಖರನ್ನಾಗಿಸಿದ್ದಾರೆ.

  ReplyDelete
 24. the article is not complete, you should have put the full context before writing this article.

  ReplyDelete
 25. ಚಿಮೂ ಮನಸ್ಥಿತಿ, ಧೋರಣೆ ಹದಗೆಟ್ಟಿದೆ. ಚಿಮೂ ಎಷ್ಟು ಅಪಾಯಕಾರಿ ಎಂದು ಇದರಲ್ಲೇ ಗೊತ್ತಾಗುತ್ತದೆ. ಇವರು ರಾಜ್ಯವನ್ನು ಧರ್ಮದ ಹೆಸರಿನಲ್ಲಿ ಹೊತ್ತಿ ಉರಿಸಲು ಯತ್ನಿಸುತ್ತಿದ್ದಾರೆ. ಎಂದೆಲ್ಲ ಬರದು ನಾಲಗೆ ಚಟ ತೀರಿಸ್ಕೊಂಡ್ರಿ. ಕೇರಳದಲ್ಲಿ ಪ್ರಾಧ್ಯಾಪಕರೋರ್ವರ ಕೈ ಕಡಿದಾಗಳೂ ನಿಮ್ಮ ಕೀಬೋರ್ಡ್ ಇದೆ ರೀತಿ ಕುಟ್ಟಿತ್ತೆ? ಬಾಬಾ ರಾಮದೇವ್ ಬಗ್ಗೆ ಕಾಂಗ್ರೆಸ್ ಎಂಪಿಯೋರ್ವ ದರಿದ್ರ ಭಾರತೀಯ ನಾಯಿ ಎಂದಾಗ ನಿಮ್ಮ ನಾಲಗೆ ಏನಾದ್ರೂ ಮಾತಾಡಿದೆಯೇ? ಚಿಮೂ ಹೇಳಿಕೆ ಯಾರದಾದರೂ ಕೈ ಕಡಿಯಿತೆ? ಇಲ್ಲ ರೈಲಿನ ಭೋಗಿಗೆ ಬೆಂಕಿ ಹಚ್ಚಿತೆ? ಸಂಸತ್ತಿಗೆ ಬಾಂಬ್ ಹಾಕಿತೆ? ಇಲ್ಲ ಮುಂಬೈ ನಗರ ಸುಟ್ಟಿತೆ? ನಿಮ್ಮ ನಾಲಗೆ ಸರಿಯಾದ ಜಾಗಕ್ಕೆ ಸಾಣೆಗೆ ಕೊಡಿ. ಯಾವುದನ್ನು ಖಂಡಿಸಬೇಕೋ ಅದನ್ನು ಖಂಡಿಸಿ.
  ಢೋಂಗಿ, ಪುಕ್ಕಲು ಜಾತ್ಯಾತೀತವಾದ ಬಿಡಿ. ನಿಜವಾದ ಜಾತ್ಯತೀತತೆ ಮೆರೆಯಿರಿ.

  ReplyDelete
 26. ಅಶುಚಿತ್ವದತ್ತ ಬೊಟ್ಟು ಮಾಡಿದ ಮೂರ್ತಿಯವರು ನಿಮ್ಮ ಕಣ್ಣಲ್ಲಿ ತಪ್ಪಿತಸ್ಥರೆ ? ಗಣಪತಿ ಹಬ್ಬದಲ್ಲಿ ಗಣಪತಿ ಕುರಿಸುವವರಿಗೆ ದ್ವನಿ ವರ್ದಹಕದ ಬಗ್ಗೆ ಪಾಠ ಮಾಡುವವರು ವರ್ಷವಿಡೀ ದ್ವನಿ ವರ್ದಕದಲ್ಲಿ ಅಬ್ಬರಿಸುವವರಿಗೆ ಏನು ಹೇಳುವುದಿಲ್ಲ ಇದಕ್ಕೆ ನಿಮ್ಮ ಸಂಪಾದಕಿಯವೇನು ಹೇಳುತ್ತದೆ?

  ReplyDelete
 27. ಸಂಪಾದಕೀಯ, ನಿಮ್ಮ ಈ ವೇದಿಕೆ ನಮ್ಮ ಸುತ್ತ ಮುತ್ತ ನಡೆಯುತ್ತಿರುವ ಅನ್ಯಾಯ, ಅನಾಚಾರಗಳನ್ನು ಹೊಡೆದೋಡಿಸಿ ಹೊಸ ಚಿಂತನೆಗಳಿಗೆ ದಾರಿ ಮಾಡಿಕೊಡುವ ವೇದಿಕೆಯಾಗಬೇಕೆ ಹೊರತು ವ್ಯಂಗ ಅಭಿಪ್ರಾಯಗಳಿಗೆ ಮೀಸಲಾಗಬಾರದು. ಗೋರಿಪಾಳ್ಯದ ಬಗ್ಗೆ ಅವರು ಬರಿದಿರುವ ಪತ್ರ ನನಗೂ ಇಷ್ಟ ಆಗಲಿಲ್ಲ, ಆದರೆ ಕೇವಲ ಒಂದು ಪತ್ರದಿಂದ ಅವರನ್ನು narrow minded ಥರ ನೋಡೊದು ಎಷ್ಟು ಸರಿ. ಚಿ. ಮೂ ಅವರು ಸಾರಸ್ವತ ಲೋಕದ ಮಹಾನ್ ಚೇತನ. ಅಲ್ಪಸಂಖ್ಯಾತರ ಬಗ್ಗೆ ಅವರ ನಿಲುವು ಸರಿಯಿಲ್ಲದೆನಿಸಬಹುದು, ಆದರೆ ಅದರ ಹಿಂದಿರುವ ಕಹಿ ಸತ್ಯವನ್ನು ತಿಳಿದುಕೊಳ್ಳಲು ಪ್ರಯತ್ನ ಪಡಿ. ಮತಾಂತರದ ಬಗ್ಗೆ ಅವರಿಗಿರುವ ಗಟ್ಟಿ ನಿಲುವನ್ನು ಒಬ್ಬ ಭಾರತೀಯನಾಗಿ ಬೆಂಬಲಿಸುತ್ತೇನೆ.
  ಬ್ಲಾಗನಲ್ಲಿ ವ್ಯಂಗವಾಗಿ ಬರಿಯೋದು ಸುಲಭ ಸರ್, ಹೊರಜಗತ್ತಿನಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಪ್ರತಿಭಟಿಸುವುದು ಭಾಳ ಕಷ್ಟ.
  ಚಿ. ಮೂ ಮಾಡ್ತಿರುವುದು ಅದನ್ನೇ..

  ReplyDelete