Monday, July 4, 2011

ಹಾಡುಹುಟ್ಟಿದ ಸಮಯ: ಮಣಿಕಾಂತ್ ನೊಂದುಕೊಳ್ಳಬೇಕಿಲ್ಲ...


ಪ್ರಿಯರೆ, 
ಒಂದು ಸ್ಪಷ್ಟನೆ ನೀಡಬೇಕಾಗಿದೆ. ಅದು ನನ್ನ ಹಾಡು ಹುಟ್ಟಿದ ಸಮಯ ಅಂಕಣಕ್ಕೆ ಸಂಬಂಧಿಸಿದ್ದು...ಕಳೆದ ವಾರ ಅಂದರೆ ೩೦.೬.೨೦೧೧ ರಂದು ಪ್ರಕಟವಾದ ಅರಳುವ ಹೂಗಳೇ ಆಲಿಸಿರಿ...ಹಾಡನ್ನು ಕೆ.ಕಲ್ಯಾಣ್ ಅವರು ತಮಿಳಿನಿಂದ ಕನ್ನಡಕ್ಕೆ ಭಟ್ಟಿ ಇಳಿಸಿದ್ದಾರೆ ಎಂಬುದು ಹಲವು ಓದುಗ ಮಿತ್ರರ ದೂರು. ಈ ವಿಷಯವಾಗಿ ಸ್ಪಷ್ಟನೆ ಕೊಡುವುದು ನನ್ನ ಕರ್ತವ್ಯ. 
ಹಾಡು ಹುಟ್ಟಿದ ಸಮಯ ಅಂಕಣ ಬರೆವ ಸಂದರ್ಭದಲ್ಲಿ...ಯಾರೋ ಕೊಡುವ ಮಾಹಿತಿಯನ್ನು ಅವರು ಹೇಳಿದ ಹಾಗೆ ಖಂಡಿತ ಬರೆಯುತ್ತಿಲ್ಲ...ನನಗೆ ಸಿಕ್ಕ ಮಾಹಿತಿ ಸರಿ ಇದೆಯೋ ಹೇಗೆ,ಅದರಲ್ಲಿ ಸುಳ್ಳು ಇದೆಯೋ ಹೇಗೆ ಅಂತ ಕಡಿಮೆ ಅಂದರೂ ೧೦ ಬಾರಿ ಪರಿಶೀಲನೆ ಮಾಡಿ ನಂತರವೇ ಅದನ್ನು ಅಂಕಣ ರೂಪಕ್ಕೆ ತರಲಾಗುತ್ತದೆ. ಅಂಕಣದ ಹೆಸರಲ್ಲಿ ಓದುಗರನ್ನು ದಾರಿ ತಪ್ಪಿಸಬಾರದು ಹಾಗೂ ಅವರಿಗೆ ಸುಳ್ಳು ಮಾಹಿತಿ ಕೊಡಬಾರದು ಎಂಬುದೇ ಈ ಪರಿಶೀಲನೆಯ ಉದ್ದೇಶ. 
ಅರಳುವ ಹೂಗಳೇ ಆಲಿಸಿರಿ...ಹಾಡಿನ ಬಗ್ಗೆ ಬರೆಯಬೇಕೆಂದು ಹಲವು ಮಿತ್ರರು ೬ ತಿಂಗಳ ಹಿಂದಿನಿಂದ ಒತ್ತಾಯ ಮಾಡುತ್ತಲೇ ಇದ್ದರು.ಈ ಬಗ್ಗೆ ಕಲ್ಯಾಣ್ ಅವರನ್ನು ಸಂಪರ್ಕಿಸಿ ವಿವರಣೆ ಕೇಳಿದ್ದು ೨ ತಿಂಗಳ ಹಿಂದೆ.ಕಡೆಗೂ ಒಂದು ದಿನ ಕಲ್ಯಾಣ್ ಸಿಕ್ಕರು.ಹಾಡಿನ ಟ್ಯೂನ್ ರಿಮೇಕ್ .ಮ್ಯೂಸಿಕ್ ರಿಮೇಕ್. ಆದ್ರೆ ಹಾಡು ಸ್ವಮೇಕ್ ಅಂದರು. ದಿನಾಂಕ ೨೯.೬.೨೦೧೧ ರಂದು ಶಿವಮೊಗ್ಗದಲ್ಲಿ ನಡೆದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಹೋಗಬೇಕಾದ ಅನಿವಾರ್ಯತೆ ನನಗಿತ್ತು.ಹಾಗಾಗಿ ಅಂಕಣವನ್ನು ೨ ದಿನ ಮೊದಲೇ ಬರೆದು ಕೊಟ್ಟು ಹೋಗಲು ನಿರ್ಧರಿಸಿದೆ. 
೨ ಪ್ಯಾರ ಬರೆದಿದ್ದೆ. ಅಷ್ಟರಲ್ಲಿ ಬಳಿಬಂದ ಸಹೋದ್ಯೋಗಿ ರಮೇಶ್-ಈ ವಾರ ಯಾವ ಹಾಡು ಕೇಳಿಸ್ತೀರ ಸ್ವಾಮಿ ಅಂದರು. ಅರಳುವ ಹೂಗಳೇ ಆಲಿಸಿರಿ.ಅಂದೆ.ಸಾರ್, ಅದು ರಿಮೇಕ್ ಹಾಡು. ಆ ಬಗ್ಗೆ ಬರೆಯಬೇಡಿ. ಅಥವಾ ಮೊದಲೇ ಪಕ್ಕಾ ಮಾಡಿಕೊಂಡು ನಂತರ ಬರೆಯಿರಿ ಅಂದರು. ತಕ್ಷಣವೇ ಕಲ್ಯಾಣ್ ಅವರಿಗೆ ಫೋನ್ ಮಾಡಿ ವಿಷಯ ತಿಳಿಸಿದೆ. ಅಂಕಣ ಬರೆಯಲಿಕ್ಕಿದೆ. ನಿಜ ಸಂಗತಿ ಹೇಳಿ ಅಂದೆ. ಆಗ ಕೂಡ ಕಲ್ಯಾಣ್-ಹಾಡಿನ ಮ್ಯೂಸಿಕ್ ರಿಮೇಕ್, ಟ್ಯೂನ್ ರಿಮೇಕ್, ಆದ್ರೆ ಹಾಡು ಮಾತ್ರ ಸ್ವಮೇಕ್ ಅಂತಲೇ ಹೇಳಿದರು. ಹಾಡು ಬರೆದವರೇ ಮತ್ತೆ ಮತ್ತೆ ಖಚಿತಪಡಿಸಿದ ಮೇಲೆ ಅನುಮಾನ ಪಡುವುದು ಸರಿಯಲ್ಲ ಅಂದುಕೊಂಡು ಅಂಕಣ ಬರೆದೆ.
ಪರಿಣಾಮ ಮಾತ್ರ ಕೆಟ್ಟದಿತ್ತು. ಇಷ್ಟು ದಿನ ಅಂಕಣ ಕುರಿತು ಬೆಳೆಸಿಕೊಂಡಿದ್ದ ಒಂದು ಮುದ್ದಾದ ಇಮೇಜ್‌ಗೆ ಧಕ್ಕೆ ಬಂತು. ಇವತ್ತಿಗೂ ಕಲ್ಯಾಣ್ ನನ್ನ ಆತ್ಮೀಯ ಗೆಳೆಯರು, ಹಿತೈಷಿಗಳು. ಆದರೆ ಹಾಡಿನ ವಿಷಯವಾಗಿ ಅವರು ಯಾಕೆ ಹೀಗೆ ಹೇಳಿದರು? 
ನನಗೆ ಈ ವಿಷಯ ಇವತ್ತಿಗೂ ಅರ್ಥವಾಗಿಲ್ಲ. 
೨೯.೬.೨೦೧೧ ರಿಂದ ೩.೭.೨೦೧೧ ರ ತನಕ ಶಿವಮೊಗ್ಗ ಸೀಮೆಯ ಪ್ರವಾಸದಲ್ಲಿದ್ದೆ. ಅಲ್ಲಿ ಇಂಟರ್ನೆಟ್ ನ ಸೌಲಭ್ಯ ಇರಲಿಲ್ಲ.ಬೆಂಗಳೂರು ತಲುಪಿದ ತಕ್ಷಣ ನನ್ನ ಪ್ರಾಮಾಣಿಕ ಅನಿಸಿಕೆ ತಿಳಿಸಿದ್ದೇನೆ. ತಿಳಿಯದೆ ಓದುಗರಿಗೆ ತಪ್ಪು ಮಾಹಿತಿ ಕೊಟ್ಟ ಬಗ್ಗೆ ನನಗೆ ಬೇಸರವಿದೆ. ಸಂಕಟವೂ ಆಗಿದೆ. ಆಕಸ್ಮಿಕವಾಗಿ ಆದ ಈ ತಪ್ಪನ್ನು ದಯಮಾಡಿ ಕ್ಷಮಿಸಿ ಎಂಬ ವಿನಂತಿ ನನ್ನದು. 
-ಮಣಿಕಾಂತ್.ಎ.ಆರ್.

ಮೇಲಿನವು ಮಣಿಕಾಂತ್ ಅವರು ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡ ಮಾತು. ಭಾವಜೀವಿಯಾದ ಮಣಿಕಾಂತ್ ತುಂಬಾ ನೊಂದುಕೊಂಡು ಬರೆದಂತಿದೆ. ಅವರು ನೊಂದುಕೊಳ್ಳಬೇಕಾಗಿಲ್ಲ. ಬೇರೆಯವರ ವಿಷಯ ಗೊತ್ತಿಲ್ಲ, ನಾವಂತೂ ಮಣಿಕಾಂತ್ ಅವರ ಮೇಲಿನ ಪ್ರೀತಿಯಿಂದಲೇ ಲೇಖನ ಬರೆದಿದ್ದೆವು. ಮಣಿಕಾಂತ್ ಅವರದು ಪ್ರಾಮಾಣಿಕ ಬರವಣಿಗೆ. ಬೇರೆ ಇನ್ಯಾವ ಇಸಂಗಳನ್ನೂ ಮೈ ಮೇಲೆ ಹೇರಿಕೊಳ್ಳದೆ ಪ್ರಾಂಜಲ ಮನಸ್ಸಿನಿಂದ ನವಿರಾದ ಬರೆಹಗಳನ್ನೇ ಬರೆದು, ಅಭಿಮಾನಿಗಳನ್ನು ಗಳಿಸಿದವರು ಅವರು.

ಹಾಡುಹುಟ್ಟಿದ ಸಮಯದ ಮುದ್ದಾದ ಇಮೇಜ್‌ಗೆ ಏನೇನೂ ಧಕ್ಕೆಯಾಗಿಲ್ಲ. ಅವರು ನೊಂದುಕೊಳ್ಳಬೇಕಾಗಿಲ್ಲ ಎಂದು ಮತ್ತೊಮ್ಮೆ ಹೇಳಬಯಸುತ್ತೇವೆ.

-ಸಂಪಾದಕೀಯ

5 comments:

  1. ಮಣಿಕಾಂತ ಎಂಥವರೆನ್ನುವದು ಎಲ್ಲರಿಗೂ ಗೊತ್ತು...

    ಸಂಪಾದಕೀಯವರಿಗೂ ಗೊತ್ತು..

    ಮಣಿಕಾಂತ್ ಹೂವಿನಂಥಹ ಮನಸ್ಸಿನವರು...

    ReplyDelete
  2. ಮಣಿಕಾಂತ್ ಖಂಡಿತಾ ಮನಸಿಗೆ ನೋವು ಮಾಡಿಕೊಳ್ಳಬಾರದು, ಬರೆಯುವ ಮೊದಲು ಸಾಕಷ್ಟು ಪರಿಶೀಲನೆ ನಡೆಸಿದ್ದು , ಪರಿಣಾಮ ಕೆಟ್ಟದಾಗಿದ್ದು ಮಣಿಕಾಂತ್ ತಪ್ಪಲ್ಲ . ಮಣಿಕಾಂತ್ ಬಗ್ಗೆ ಹಾಗು ಅವರ ಬರವಣಿಗೆ ಬಗ್ಗೆ ಇನ್ನೂ ಗೌರವ ಇರುತ್ತದೆ . ಮಣಿಕಾಂತ್ ನಿಮ್ಮೊಂದಿಗೆ ಎಲ್ಲರೂ ಇದ್ದೇವೆ ಹಾಡು ಹುಟ್ಟುವ ಸಮಯ ಮುಂದುವರೆಯಲಿ. ನಿಮ್ಮ ಹೂವಿನಂತಹ ಮನಸ್ಸಿಗೆ ನೋವಾಗದಿರಲಿ.
    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  3. ಮಣಿಕಾಂತರೇ, ಹಿಂದೊಮ್ಮೆ ತಾವು ಕವಿರತ್ನಕಾಲಿದಾಸ ಸಿನಿಮಾದ, ಮಾಣಿಕ್ಯವೀಣಾಂ.... ಸ್ತೋತ್ರವನ್ನು ಕಾಲಿದಾಸನ ರಚನೆ ಎಂದು ಬರೆದಿದ್ದಿರಿ.
    ಲೋಕವೇ ಬಲ್ಲಂತೆ ಅದು ಶ್ರೀ ಶಂಕರಾಚಾರ್ಯರ ಶ್ಯಾಮಲಾದಂಡಕ. ತಾವು ಒಂದು ತಿದ್ದುಪಡಿಯನ್ನೂ ಹಾಕಿಲ್ಲ, ಇದನ್ನು ಮೇಲ್ ಮೂಲಕ ತಿಳಿಸಿದ ನನಗೂ ನಿರುತ್ತರಿ.

    ReplyDelete
  4. Manikant nimma bagge namage yavude doorilla.

    ReplyDelete
  5. ಅಂಕಣದ ಬರಹಕ್ಕೆ ಬರುವ ಪ್ರತಿಕ್ರಿಯೆಗೆ ನೊಂದುಕೊಳ್ಳುವ ಮನ ನಮ್ಮ ಮಣಿಯದಲ್ಲ, ಹಾಗೇನಾದರು ನೊಂದುಕೊಂಡರೆ ಅವರು ಮಣಿಯಲ್ಲ, ನಮ್ಮ ಮಣಿಕಾಂತ್ ಅಂತೂ ಅಲ್ಲವೇ ಅಲ್ಲ.

    ReplyDelete