Monday, January 17, 2011

ಜೋಗಿ ಬರೆದಿದ್ದಾರೆ: ಪತ್ರಕರ್ತರೆಲ್ಲ ತಪ್ಪದೆ ಓದಿ...

ಪತ್ರಕರ್ತ ಜೋಗಿ ಅಪ್ಪಣೆ ಕೊಡಿಸಿದ್ದಾರೆ.

ಯಾವುದು ಮೂಢನಂಬಿಕೆ, ಯಾವುದು ಅನುಮಾನ ಎಂಬುದನ್ನು ಮೀಡಿಯಾಗಳು ನಿರ್ಧಾರ ಮಾಡೋಹಂಗಿಲ್ಲ. ಮೀಡಿಯಾಗಳಿಗೆ ಆ ಹಕ್ಕನ್ನು ಯಾರೂ ಕೊಟ್ಟಿಲ್ಲ. ಯಾವುದು ಮೌಢ್ಯ ಎಂಬುದನ್ನು ನಿರ್ಧಾರ ಮಾಡಬಹುದಾದ ತಜ್ಞರು ಮೀಡಿಯಾಗಳಲ್ಲಿ ಇಲ್ಲವೇ ಇಲ್ಲ. ಹೀಗಾಗಿ ಯಾವುದನ್ನೂ ಅವರು ಮೌಢ್ಯ ಅನ್ನುವ ಹಾಗೆ ಇಲ್ಲ.

ಮಡೆಸ್ನಾನದ ಕುರಿತು ಅವಧಿ ಆರಂಭಿಸಿರುವ ಚರ್ಚೆಯಲ್ಲಿ ಜೋಗಿ ತಮ್ಮದಲ್ಲದ ಶೈಲಿಯಲ್ಲಿ ಬರೆದಿದ್ದಾರೆ. ಜೋಗಿ ಅವರ ಅಭಿರುಚಿಗಳು, ಪುಸ್ತಕಗಳ ಬಗ್ಗೆ ಗೊತ್ತಿರುವವರಿಗೆ ಇದು ಇನ್ನೊಂದು ವರಸೆಯ ದರ್ಶನ.

ಒಂದು ಆಚರಣೆಯಿಂದ ಯಾರಿಗೆ ಏನೇನು ಅನುಕೂಲವಾಗಿದೆ ಎನ್ನುವುದರ ಕುರಿತು ಎಲ್ಲ ಮನೋವಿಜ್ಞಾನಿಗಳೂ, ಸಮಾಜಶಾಸ್ತ್ರಜ್ಞರೂ ಸೇರಿ ಅಧ್ಯಯನ ನಡೆಸಬೇಕು ಎಂದು ಜೋಗಿ ಅಬ್ಬರಿಸಿದ್ದಾರೆ.

ಉತ್ತರ ಕರ್ನಾಟಕದ ಕೆಲಭಾಗಗಳಲ್ಲಿ ಮಗುವನ್ನು ಎಸೆಯುವ ಸಂಪ್ರದಾಯದ ಬಗ್ಗೆಯೂ ಜೋಗಿ ಬರೆದಿದ್ದಾರೆ. ಹೀಗೆ ಎಸೆದ ಮಗುವಿಗೆ ಏನೇನಾಯಿತು ಎನ್ನುವುದರ ಕುರಿತು ಪತ್ರಕರ್ತರು ಫಾಲೋ ಅಪ್ ಮಾಡಬೇಕಿತ್ತು ಎನ್ನುವುದು ಜೋಗಿ ಅಭಿಮತ. ಅದೇನೋ ಸರಿ, ಈ ಮಾತಿಗೆ ಅವರು ಇನ್ನೊಂದು ವಾಕ್ಯವನ್ನೂ ಪೋಣಿಸಿದ್ದಾರೆ. ಆ ಕ್ಷಣದ ತೆವಲಿಗೆ ಆಚರಣೆಗಳು ಮತ್ತು ಸಂಪ್ರದಾಯಗಳು ಬಲಿಯಾಗುತ್ತವೆ ಎಂದು ಅವರು ಸ್ಟೇಟ್‌ಮೆಂಟ್ ಹೊರಡಿಸಿದ್ದಾರೆ. ಏನಿದರ ಅರ್ಥ? ಯಾರ ತೆವಲಿಗೆ ಯಾವ ಸಂಪ್ರದಾಯ ಬಲಿಯಾಗಿದೆ?

ಜೋಗಿನ ಮಾತಿನ ಜಾಡು ಹಿಡಿದು ಹೊರಟರೆ, ಮಾಧ್ಯಮಗಳು ತಮಗೆ ಯಾವುದೇ ಸಂಪ್ರದಾಯ ಮೌಢ್ಯ, ಕಂದಾಚಾರದಿಂದ ಕೂಡಿದೆಯೆಂದು ಕಂಡರೆ ಅದನ್ನು ವಿರೋಧಿಸಿ ಬರೆಯುವಂತಿಲ್ಲ. ಒಂದು ವರ್ಷ ಕಾಲ ಸಮಾಜಶಾಸ್ತ್ರಜ್ಞರು, ಮನೋವಿಜ್ಞಾನಿಗಳಿಂದ ತನಿಖೆ ಮಾಡಿಸಿ, ನಂತರ ತೀರ್ಮಾನಕ್ಕೆ ಬರಬೇಕು.

ಮಗುವನ್ನು ಮೇಲಿಂದ ಎತ್ತಿ ಎಸೆದರೂ ಅಷ್ಟೆ, ಎಂಜಲೆಲೆ ಮೇಲೆ ಉರುಳಾಡಿದರೂ ಅಷ್ಟೆ. ಬರಿಗಣ್ಣಿಗೆ ಅದು ಅನಿಷ್ಟ, ರೋಗಿಷ್ಠ ಆಚರಣೆಯಂತೆ ಕಂಡರೂ ಅದನ್ನು ಪತ್ರಕರ್ತರು ಬರೆಯುವಂತಿಲ್ಲ, ಬರೀ ಕೂಡದು. ಒಂದು ವೇಳೆ ಬರೆದರೆ ಇಂಥ ಭವ್ಯವಾದ ಆಚರಣೆಗಳು ಅನ್ಯಾಯವಾಗಿ ಬಲಿಯಾಗಿಬಿಡುತ್ತವೆ!

ಯಾವುದು ಮೌಢ್ಯ ಎಂಬುದನ್ನು ಮಾಧ್ಯಮಗಳು ದಾಖಲೆ ಮಾಡದೆ ಇನ್ನ್ಯಾರು ಮಾಡಬೇಕು? ಕಡೆ ಪಕ್ಷ ಜೋಗಿಯವರು ಹೇಳುವ ಸಮಾಜವಿಜ್ಞಾನಿಗಳೂ ಸಹ ತಮ್ಮ ಅಭಿಪ್ರಾಯವನ್ನು ಮಾಧ್ಯಮಗಳ ಮೂಲಕವೇ ಪ್ರಚುರಪಡಿಸಬೇಕಲ್ಲವೇ? ಜೋಗಿ ಏನನ್ನು ಹೇಳಲು ಹೊರಟಿದ್ದಾರೆ?

ಮಾಧ್ಯಮಗಳು ಯಾರನ್ನು ತಿದ್ದುವುದೂ ಬೇಡ, ಬುದ್ಧಿವಂತರನ್ನಾಗಿ ಮಾಡುವುದೂ ಬೇಡ. ಕಣ್ಣಿಗೆ ರಾಚುವ ಅಂಧಶ್ರದ್ಧೆಯನ್ನು ಅದು ಇದ್ದಂತೆ ಹೇಳಿದರೆ ಸಾಕು. ಅದನ್ನೂ ಬೇಡ ಎನ್ನುವ ಜೋಗಿ ಏನನ್ನು ಸೂಚಿಸುತ್ತಿದ್ದಾರೆ?

ಸುವರ್ಣ ನ್ಯೂಸ್‌ನಲ್ಲಿ ಬಾಲ ಜ್ಞಾನಿ ಎಂಬ ಕಾರ್ಯಕ್ರಮ ಬರುತ್ತದೆ. ಆ ಕಾರ್ಯಕ್ರಮವನ್ನು ರೂಪಿಸಿದವರಲ್ಲಿ ಜೋಗಿ ಕೂಡ ಒಬ್ಬರು. ಎಳೇ ಹುಡುಗನೊಬ್ಬನನ್ನು ಎಳೆತಂದು ಜೋತಿಷ್ಯ ಹೇಳಿಸುವ ಕಾರ್ಯಕ್ರಮ ಅದು. ಇದು ಜೋಗಿಯವರ ಹೊಸ ಅಭಿರುಚಿ.

ಹೀಗಿರುವಾಗ ಮಡೆಸ್ನಾನವನ್ನು ಸಮರ್ಥಿಸಿಕೊಂಡು ಬರೆದ ಅಕ್ಷರ ಅವರ ಲೇಖನ ಜೋಗಿಗೆ ಇಷ್ಟವಾಗದೇ ಇರುತ್ತದೆಯೇ?
ಚರಿತ್ರೆಯಲ್ಲಿ ದಾಖಲಾಗುವುದು ಕ್ರಿಯೆಯೇ ಹೊರತು, ಮಾತಲ್ಲ. ಮಹಾತ್ಮ ಗಾಂಧಿ ದಂಡಿ ಮಾರ್ಚ್ ಮಾಡಿದ್ದಷ್ಟೇ ಮುಖ್ಯ, ಯಾರು ಅದನ್ನು ವರದಿ ಮಾಡಿದರು ಅನ್ನುವುದಲ್ಲ ಎಂದು ಜೋಗಿ ಪತ್ರಕರ್ತರಿಗೆ ಕಿವಿಮಾತು ಹೇಳಿದ್ದಾರೆ.

ಚರಿತ್ರೆಯಲ್ಲಿ ಒಳ್ಳೆಯದು ಮಾತ್ರವಲ್ಲ, ಕೆಟ್ಟದ್ದೂ ದಾಖಲಾಗುತ್ತದೆ. ಮೌಢ್ಯದ ಅನಿಷ್ಠ ಪರಂಪರೆಯೂ ದಾಖಲಾಗುತ್ತದೆ. ಅದನ್ನು ಸಮರ್ಥಿಸಿಕೊಂಡ ಅವಿವೇಕಿಗಳೂ ದಾಖಲಾಗುತ್ತಾರೆ.

ಪೂರಕ ಓದಿಗಾಗಿ:

ಕೆ.ವಿ.ಅಕ್ಷರ ಅವರ ಬೆತ್ತಲೆ ಜಗತ್ತು...

15 comments:

  1. where is the original write up

    ReplyDelete
  2. ಅಕ್ಷರ ಮತ್ತು ಜೋಗಿ ಮಾತುಗಳನ್ನು ಒಪ್ಪುವುದಾದರೆ,
    ಬೆತ್ತಲೆ ಸೇವೆಗೆ ಬಲಿಯಾಗುವ ಮಹಿಳೆಯರು ತಮಗೆ ಆಗುತ್ತಿರುವುದು ಅವಮಾನ ಎನ್ನುವುದನ್ನು ಅರಿತುಕೊಳ್ಳುವ ತನಕ ಅದು ಅವಮಾನವಲ್ಲ. ಅಲ್ಲದೆ, ಕಳೆದ ಐವತ್ತು ವರ್ಷಗಳ ಹಿಂದೆ ಬೆತ್ತಲೆ ಸೇವೆ ಮಾಡಿದವರು ಇಂದು ಬಾಲಿವುಡ್ ಸ್ಟಾರ್ ಗೆ ಜನ್ಮ ನೀಡಿದ್ದಾರೇನೋ ಎಂಬುದನ್ನು ಮೊದಲು ಸಂಶೋಧನೆ ಮಾಡಬೇಕು. ಶತ ಶತಮಾನಗಳಿಂದ ಗಂಡನನ್ನು ಕಳೆದುಕೊಂಡವರು ತಲೆ ಬೋಳಿಸಿಕೊಂಡು, ಕುಂಕುಮ, ಹೂ ಮುಡಿಯದೆ ಬದುಕಿದ್ದರೆ ಅದು ಈ ಸಮಾಜಕ್ಕೆ ಆದ ಅವಮಾನವಲ್ಲ. ಕಾರಣ ಆ ಮಹಿಳೆ ಅದನ್ನು ಒಪ್ಪಿಯೇ ಅನುಸರಿಸಿದ್ದು. ಕಳೆದ ಐವತ್ತು ವರ್ಷಗಳ ಹಿಂದೆ, ಹೀಗೆ ಬದುಕಿದ ವಿಧವೆಯರ ಸ್ಥಿತಿ ಏನು ಎಂಬುದನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಬೇಕು. ಅಂತಹ ಅಧ್ಯಯನದಲ್ಲಿ ವಿಧವೆಗೆ ವಿಧಿಸಿದ ನಿರ್ಬಂಧಗಳಿಂದ ತಲೆಗೆ ಹಚ್ಚುವ ಎಣ್ಣೆ, ಹೂ ಖರ್ಚು, ಕುಂಕುಮ ವೆಚ್ಚ ಎಲ್ಲವೂ ಉಳಿಯುತ್ತೆ ಎಂದು ಯಾವುದಾದರು ತಲೆಕೆಟ್ಟ ಎಕಾನಮಿಸ್ಟ್ ತೀರ್ಪು ಕೊಟ್ಟರೆ, ಅಂತಹ ಅನಿಷ್ಟ ಪದ್ಧತಿ ಈ ಸಮಾಜಕ್ಕೆ ಆದ ಅವಮಾನವಲ್ಲ - ನಮ್ಮ ಪೂರ್ವಿಕರು ಪಾಲಿಸಿಕೊಂಡು ಬಂದ ಆರ್ಥಿಕ ಮಿತವ್ಯಯ ಕ್ರಮ ಎಂದು ಜೋಗಿ ತರಹದವರು ಘೋಷಿಸುತ್ತಾರೆ!
    ಅಕ್ಷರ, ಜೋಗಿ ಯಂತಹವರನ್ನು ಬುದ್ಧಿವಂತ ಬರಹಗಾರರು ಎಂದು ನಂಬಿಕೊಂಡು ಅವರನ್ನು ಓದುತ್ತಿರುವವರು ಇನ್ನಾದರೂ ಈ ಸೋಗಲಾಡಿಗಳ ಆಲೋಚನಾ ಕ್ರಮಗಳನ್ನು ಅರ್ಥ ಮಾಡಿಕೊಳ್ಳಬೇಕು.

    ReplyDelete
  3. This comment has been removed by a blog administrator.

    ReplyDelete
  4. ಜೋಗಿ ತುಂಬ ಗೊಂದಲಕ್ಕೆ ಒಳಗಾಗಿ ಬರೆದ ಹಾಗಿದೆ. ಎಲ್ಲಾ ಆಚರಣೆಗಳು, ಸಂಪ್ರದಾಯಗಳು ಮೌಢ್ಯವಲ್ಲ. ಅದನ್ನು ಹೇಳುವ ಭರದಲ್ಲಿ ಮಡೆಸ್ನಾನದಂಥ ಅಂಧಶ್ರದ್ಧೆಯನ್ನು ಸಮರ್ಥಿಸಿಕೊಂಡಿದ್ದಾರೆ ಅಷ್ಟೆ.

    ReplyDelete
  5. ondu santoshada vishya enu andre ellaru bettalagta iddare. akshara, hsv, jogi...
    ee vivaada huttikondidde olledaytu

    ReplyDelete
  6. Thanks to sampadakiya.
    ಈ ಬ್ಲಾಗ್ ಇಲ್ಲದೇ ಹೋಗಿದ್ದರೆ, ಅಕ್ಷರ-ಜೋಗಿ ತರಹದವರ ಹೇಳಿಕೆಗಳನ್ನು ಪ್ರೊಟೆಸ್ಟ್ ಮಾಡಲು ಒಂದು ವೇದಿಕೆಯೇ ಇಲ್ಲದಂತಾಗುತ್ತಿತ್ತು.

    ReplyDelete
  7. ಹಿಂದಿನಿಂದ ನಡೆದು ಬಂದಿರುವ ಎಲ್ಲಾ ಆಚರಣೆಗಳು ಖಂಡಿತವಾಗಿಯೂ ಮೌಢ್ಯವಲ್ಲ. ಕಾಲಕ್ಕೆ ತಕ್ಕಂತೆ ಅವುಗಳು ಬದಲಾಗುತ್ತಿದೆ ಹಾಗು ಬದಲಾಗಬೇಕು. ಮಗುವನ್ನು ಮೇಲಿಂದ ಎಸೆದು ಕೆಳಗೆ ಹಿಡಿಯುವುದರಿಂದ ಮಗುವಿಗೆ ಸಣ್ಣ ಪುಟ್ಟ ಮೂಳೆ ಜರುಗಿರುವುದು, ಮಗುವಿಗೆ ಹಿಡಿದಿರುವ ಮೈಕೈ ನೋವು ಕಡಿಮೆಯಾಗುವುದು ಮುಂತಾದ ತೊಂದರೆಗಳಿಂದ ಮುಕ್ತಿ ಸಿಗುತ್ತದೆ. ಇದು ವೈಜ್ಞಾನಿಕವಾಗಿ ಸತ್ಯ (ನಾನು ಕಣ್ಣಾರೆ ಕಂಡಿದ್ದೇನೆ) ಅದೇ ರೀತಿ ಮಡೆಸ್ನಾನವೂ ವೈಜ್ಞಾನಿಕವಾಗಿ ಸರಿ ಇರಬಹುದೇನೋ?! ಸುವರ್ಣದ ಬಾಲಜ್ಞಾನಿ ಕಾರ್ಯಕ್ರಮದ ಬಗ್ಗೆ ನನಗೂ ಅಸಮಾಧಾನವಿದ್ದರೂ, ಒಂದು ಆಚರಣೆಯಿಂದ ಯಾರಿಗೆ ಏನೇನು ಅನುಕೂಲ ಹಾಗೂ ಅನನುಕೂಲವಾಗಿದೆ ಎನ್ನುವುದರ ಕುರಿತು ಎಲ್ಲ ಮನೋವಿಜ್ಞಾನಿಗಳೂ, ಸಮಾಜಶಾಸ್ತ್ರಜ್ಞರೂ ಸೇರಿ ಅಧ್ಯಯನ ನಡೆಸಬೇಕು ಎಂದು ಜೋಗಿ ಹೇಳಿರುವುದಕ್ಕೆ ನನ್ನ ಸಹಮತವಿದೆ....

    ReplyDelete
  8. Akshara and Jogi need to understand the difference between a 'belief' and a 'blind belief'. If a person prefers to take blessings of his father by touching his feet before venturing into a journey in his life, it is his belief. If the father insists the son to take blessings of a priest or a brahmin in the neighborhood also, it is his 'blind belief'. A son never feels insulted to take blessings of his father. But he is insulted when he is asked to bend before a stranger in a priest.
    It is disheratening to know that Akshara, son of a socialist K V Subbanna, who played a role in popularising Lohia in Karnataka, argues as a conformist. Karnataka has a great tradition of writers who pressed upon scientific outlook in creative writing. Interestingly, most of the commentators who stand by Akshara represent a particular sect in society responsible for continuing untouchability.

    ReplyDelete
  9. ಜೋಗಿ ಅಭಿಪ್ರಾಯದಲ್ಲಿ ತಪ್ಪೇನೂ ಕಾಣುತ್ತಿಲ್ಲ. ಸ್ವಲ್ಪ ಗೊಂದಲವಾಗಬಹುದು ಆದರೆ ಒಟ್ಟಾರೆ ಸಾರಾಂಶ ಇಂದಿನ ಪರಿಸ್ಥಿತಿಗೆ ಸರಿಯಾಗಿದೆ.

    ReplyDelete
  10. akshara avara nija roopa nichhalavagide.jogiya himmeladalli vishesavenoo illa.e buddijeevigala suptha manassinalli yenenu ide yennuvudu kadegoo balaayitu.samaadakeeyakke dhnyavaadagalu.

    ReplyDelete
  11. ಚರಿತ್ರೆಯಲ್ಲಿ ಒಳ್ಳೆಯದು ಮಾತ್ರವಲ್ಲ, ಕೆಟ್ಟದ್ದೂ ದಾಖಲಾಗುತ್ತದೆ. ಮೌಢ್ಯದ ಅನಿಷ್ಠ ಪರಂಪರೆಯೂ ದಾಖಲಾಗುತ್ತದೆ. ಅದನ್ನು ಸಮರ್ಥಿಸಿಕೊಂಡ ಅವಿವೇಕಿಗಳೂ ದಾಖಲಾಗುತ್ತಾರೆ.
    Well said

    ReplyDelete
  12. ಅಷ್ಟಕ್ಕೂ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುವ ವಿಚಾರವನ್ನು ಕಂಡಾರೆ ಕಂಡು ಬರೆದವರು , ಚರ್ಚಿಸಿದವರು ಯಾರಿದ್ದಾರೆ. ಯಾರೋ ಅವರು , ಇವರು ಹೇಳಿದ್ದನ್ನು ಕೇಳಿ ಇಲ್ಲಿ ಬರೆದರೆ ಪ್ರಯೋಜನವಿಲ್ಲ.
    - ಮಹೇಶ್ , ಕುಕ್ಕೆ ಸುಬ್ರಹ್ಮಣ್ಯ

    ReplyDelete
  13. antu aarogya purna charchege sampadakiya uttama veedike aaguttade...

    ReplyDelete
  14. ...ಮಢ್ಯ-ಅನಿಷ್ಟಗಳ ಉಗಮಕ್ಕೆ ಅನೇಕ ತಲೆಮರು ಇತಿಹಾಸವಿದೆ. ಇಂದು ಹೆಚ್ಚು ಬೆಳಕಿಗೆ ಬಂದು ಚರ್ಚೆ ಆಗುತ್ತಿದೆ. ಇದೊಂದು ಆರೋಗ್ಯಕರ ಬೆಳವಣಿಗೆ. ಇದಕ್ಕಾಗಿ ಮಧ್ಯಮ ಹಾಗು ಬರೆಯುವವರನ್ನು ಅಬಿsನಂದಿಸಲೇ ಬೇಕು. ನಿರ್ಧಾರವನ್ನು ವಿಜ್ಞಾನಿಗಳು, ಬುದ್ಧಿಜೀವಿಗಳು ಹೀಗೆ..... ಬಿಡುತ್ತಾ ಹೋದರೆ ಸತ್ಯ ಸಾಯುವ ಅಪಾಯವೂ ಇಲ್ಲದಿಲ್ಲ. ಕಂಡದ್ದನ್ನು ತಕ್ಷಣ ಅಕ್ಷರ ರೂಪದಲ್ಲಿ ಇಳಿಸುವುದು ಒಳ್ಳೆಯದು. ಚರ್ಚೆಯೂ ನಡೆಯಲಿ. ನಾಳೆಗೆ ಕಟ್ಟಿ ಇಡುವುದು ಸೂಕ್ತವಲ್ಲ
    - ದಿನೇಶ ಪಟವರ್ಧನ್.

    ReplyDelete
  15. ಕೆಲವು ಅನಿವಾರ್ಯಗಳನ್ನು ಮೆಟ್ಟಿ ನಿಂತಾಗ ಮಾತ್ರ ಆತ ಪ್ರಾಮಾಣಿಕ ಪತ್ರಕರ್ತ-ಲೇಖಕನಾಗಬಲ್ಲ. ಒಂದಷ್ಟು ಕಾಲ ಯಾವ್ಯಾವುದೋ ’ಇಸಂ’ಗಳಿಗೆ ಜೋತು ಬಿದ್ದು ಗೊಂದಲದ ಗುಂಡಿಯಲ್ಲಿ ರಮಿಸುತ್ತಿರುವಾಗ ಮೇಲಿನ ’ಸಂಗತಿ’ಗಳು ಅಸಂಗತವಾಗುತ್ತವೆ. ನಂತರದ ದಿನಗಳಲ್ಲಿ ಹತ್ತಿರದಲ್ಲಿದ್ದ ’ಸುಖ’ಗಳು ಜೋತು ಬೀಳುವುದೇನೋ ಅನಿಸುವಾಗ ’ತತ್ವ’ಗಳು ’ಸ್ವತ್ವ’ಗಳಾಗುತ್ತವೆ.ಭೀಷ್ಮ ಗೊತ್ತಿದ್ದೂ ಗೊತ್ತಿದ್ದೂ ಇಚ್ಛಾಮರಣಿಯಾಗಿದ್ದಿಲ್ಲವೇ? ಹಾಗೆ. ಅದು ಆ ಘಳಿಗೆಯ ಬರಹ. ಅನಿಸಿದ್ದನ್ನು ಹೇಳುವಾಗ ಆನಿಸಿದ್ದನ್ನು ಹೇಳುವಂತಾದ್ದದ್ದು. ತಪ್ಪು ಯಾರದ್ದೂ ಅಲ್ಲ. ಕೇವಲ ಬದುಕಿನದ್ದು.

    ReplyDelete