Monday, January 24, 2011

ಗೊಂದಲದ ಕೆಸರಲ್ಲಿ ಹೂತುಹೋದ ಪ್ರಜಾವಾಣಿ!


ಮುಖ್ಯಮಂತ್ರಿ ಹಾಗು ಇತರ ಕೆಲವು ಮಂತ್ರಿಗಳ ವಿರುದ್ಧ ಕೇಳಿ ಬಂದಿರುವ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಭೂ ಡಿನೋಟಿಫೈ ಇತ್ಯಾದಿ ಆರೋಪಗಳ ಬಗ್ಗೆ ಲೋಕಾಯುಕ್ತರು ಮತ್ತು ನ್ಯಾಯಮೂರ್ತಿ ಪದ್ಮರಾಜ ಆಯೋಗ ವಿಚಾರಣೆ ನಡೆಸುತ್ತಿದೆ. ಮುಖ್ಯಮಂತ್ರಿ ವಿರುದ್ಧ ಬೆಂಗಳೂರಿನ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ಎಲ್ಲ ಆರೋಪಗಳ ಬಗ್ಗೆ ಮೂರು ನ್ಯಾಯ ವೇದಿಕೆಗಳಲ್ಲಿ ವಿಚಾರಣೆ ನಡೆಯುವುದು ಎಷ್ಟರಮಟ್ಟಿಗೆ ಸರಿಯಾದೀತು?- ಪ್ರಜಾವಾಣಿ ಸಂಪಾದಕೀಯ

ಈಗಾಗಲೇ ಎರಡು ಸಂಸ್ಥೆಗಳು ತನಿಖೆ ನಡೆಸುತ್ತಿರುವಾಗ ಮೂರನೆಯದು ಯಾಕೆ ಎನ್ನುವ ಪ್ರಶ್ನೆಯನ್ನೂ ಕೇಳಲಾಗುತ್ತಿದೆ. ಈ ಪರಂಪರೆಯನ್ನು ಪ್ರಾರಂಭಿಸಿದ್ದು ಬಿಜೆಪಿ ಸರ್ಕಾರವೇ ಅಲ್ಲವೇ? ಲೋಕಾಯುಕ್ತರು ತನಿಖೆ ಮಾಡುತ್ತಿದ್ದ ಪ್ರಕರಣಗಳನ್ನು ಅವರ ಗಮನಕ್ಕೂ ತರದೆ ತಾವೇ ನೇಮಿಸಿದ ತನಿಖಾ ಆಯೋಗಕ್ಕೆ ಒಪ್ಪಿಸಿದಾಗ ಎರಡೆರಡು ತನಿಖೆಗಳು ಸರಿ ಅಲ್ಲ ಎಂದು ಸರ್ಕಾರಕ್ಕೆ ಅನಿಸಲಿಲ್ಲವೇ?-ದಿನೇಶ್ ಅಮೀನ್ ಮಟ್ಟು.

ರಾಜ್ಯಪಾಲರನ್ನು ಕಾಂಗ್ರೆಸ್ ಪಕ್ಷದ ಏಜೆಂಟ್ ಹಾಗು ಯುಪಿಎ ಸರ್ಕಾರದ ವಕ್ತಾರ ಎಂದು ಬಿಜೆಪಿ ನಾಯಕರು ಟೀಕಿಸುವುದರಲ್ಲಿ ಅರ್ಥವಿದೆ ಎಂಬಂತೆ ನಡೆದುಕೊಂಡರು-ಪ್ರಜಾವಾಣಿ ಸಂಪಾದಕೀಯ

ಭಾರದ್ವಾಜ್ ಅವರು ಕಾಂಗ್ರೆಸ್ ಏಜೆಂಟ್ ಅನಿಸಿಕೊಳ್ಳಲು ರಾಜ್ಯಪಾಲರಾಗುವ ಮೊದಲು ಅವರು ಆ ಪಕ್ಷದ ಸದಸ್ಯರಾಗಿದ್ದದ್ದೇ ಕಾರಣ ಎಂದಾದರೆ ಆರು ವರ್ಷಗಳ ಕಾಲ ಎನ್‌ಡಿಎ ಅಧಿಕಾರಾವಧಿಯಲ್ಲಿ ರಾಜ್ಯಪಾಲರಾಗಿ ನೇಮಕಗೊಂಡಿದ್ದವರೆಲ್ಲ ಬಿಜೆಪಿ ಏಜೆಂಟ್‌ಗಳೇ?-ದಿನೇಶ್ ಅಮೀನ್ ಮಟ್ಟು

ಮುಖ್ಯಮಂತ್ರಿ ಅಥವಾ ಸರ್ಕಾರದ ಇತರ ಮಂತ್ರಿಗಳ ಮೇಲೆ ಯಾರೇ ಭ್ರಷ್ಟಾಚಾರದ ದೂರು ಸಲ್ಲಿಸಿದರೂ ದಾಖಲೆ ಹಾಗೂ ಪುರಾವೆಗಳನ್ನು ಪರಿಶೀಲಿಸಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಬೇಕೇ ಹೊರತು ಅದಕ್ಕೆ ಮೊದಲೇ ಸಂಘರ್ಷಕ್ಕೆ ಇಳಿದವರಂತೆ ಬಹಿರಂಗವಾಗಿ ಆರೋಪಗಳ ಬಗ್ಗೆ ವ್ಯಾಖ್ಯಾನ ಮಾಡುವುದು ಅಪೇಕ್ಷಣೀಯವಲ್ಲ.-ಪ್ರಜಾವಾಣಿ ಸಂಪಾದಕೀಯ

ಇಂತಹ ಸಂದರ್ಭದಲ್ಲಿ ತಮ್ಮ ಮುಂದಿರುವ ಸಾಕ್ಷ್ಯಾಧಾರಗಳ ಸತ್ಯಾಸತ್ಯತೆಯನ್ನು ತಮಗೆ ಇರುವ ಅಧಿಕಾರದ ವ್ಯಾಪ್ತಿಯಲ್ಲಿ ದೃಢೀಕರಿಸಿ ಮೇಲ್ನೋಟಕ್ಕೆ ಆರೋಪದಲ್ಲಿ ಹುರುಳಿದೆ ಎಂದು ರಾಜ್ಯಪಾಲರಿಗೆ ಮನವರಿಕೆಯಾದರೆ ಮುಖ್ಯಮಂತ್ರಿಗಳನ್ನು ಪ್ರಾಸಿಕ್ಯೂಟ್ ಮಾಡಲು ಅವಕಾಶ ನೀಡಬಹುದಾಗಿದೆ. ಇದು ರಾಜ್ಯಪಾಲರ ಸಂವಿಧಾನದತ್ತ ಅಧಿಕಾರ. ಅದನ್ನು ಭಾರದ್ವಾಜ ಚಲಾಯಿಸಿದ್ದಾರೆ. ಆದ್ದರಿಂದ ರಾಜ್ಯಪಾಲರು ತಮ್ಮ ಅಧಿಕಾರದ ದುರುಪಯೋಗ ಮಾಡಿದ್ದಾರೆ ಇಲ್ಲವೇ ಕಾನೂನಿನ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸುವ ಹಾಗಿಲ್ಲ.- ದಿನೇಶ್ ಅಮೀನ್ ಮಟ್ಟು.

ನಾವು ಏನನ್ನು ಹೇಳಲು ಹೊರಟಿದ್ದೇವೆ ಎಂಬುದು ನಿಮಗೆ ಈಗಾಗಲೇ ಸ್ಪಷ್ಟವಾಗಿ ಅರ್ಥವಾಗಿರಬಹುದು. ಇವತ್ತಿನ ಪ್ರಜಾವಾಣಿಯ ಸಂಪಾದಕೀಯ ಪುಟದಲ್ಲಿ ಪ್ರಕಟಗೊಂಡಿರುವ ಎರಡು ಬರಹಗಳು ನಿಮ್ಮ ಕಣ್ಣ ಮುಂದಿವೆ. ಒಂದು ರಾಜ್ಯಪಾಲರ ರಾಜಕೀಯ ನಡೆ ಎಂಬ ಸಂಪಾದಕೀಯ ಲೇಖನ. ಮತ್ತೊಂದು ದಿನೇಶ್ ಅಮೀನ್ ಮಟ್ಟು ಅವರ ಸೋಮವಾರದ ಅನಾವರಣ ಅಂಕಣದಲ್ಲಿ ಪ್ರಕಟಗೊಂಡಿರುವ ಅಧಿಕಾರದ ಕೆಸರಲ್ಲಿ ಹೂತುಹೋದ ನೈತಿಕತೆಯ ಕಮಲ ಎಂಬ ಬರಹ. ಎರಡೂ ಪಕ್ಕಪಕ್ಕದಲ್ಲೇ ಇವೆ. ಒಂದಕ್ಕೊಂದು ಎಷ್ಟು ವಿರುದ್ಧದ ಧೋರಣೆಗಳನ್ನು ತಳೆದಿವೆ ಎಂಬುದಕ್ಕೆ ಮೇಲೆ ಉದಾಹರಿಸಿದ ಸಾಲುಗಳು ಸಾಕ್ಷಿ ಹೇಳುತ್ತಿವೆ.

ಪ್ರಜಾವಾಣಿಗೆ ಏನಾಗಿ ಹೋಗಿದೆ? ಯಾಕಿಷ್ಟು ಗೊಂದಲ? ಏನಿದರ ಹಕೀಕತ್ತು?

ನಿನ್ನೆ ಪದ್ಮರಾಜ ದಂಡಾವತಿ ಏನನ್ನು ಹೇಳಲು ಹೊರಟಿದ್ದಾರೋ ಅದನ್ನೆಲ್ಲ ಒಂದೇ ಏಟಿನಲ್ಲಿ ನೀವಳಿಸಿ ಎಸೆಯುವಂತಿದೆ ದಿನೇಶ್ ಅವರ ಅಂಕಣ. ಇದಕ್ಕೂ ರಾಶಿ ರಾಶಿ ಸಾಕ್ಷಿಗಳಿವೆ.

ದಂಡಾವತಿ ಥೇಟ್ ಬಿಜೆಪಿಯ ಸಿ.ಟಿ.ರವಿಯ ಶೈಲಿಯಲ್ಲಿ ರಾಜ್ಯಪಾಲರ ಪೂರ್ವಾಶ್ರಮವನ್ನು ಕೆದಕಿ ಮಾತನಾಡಿದ್ದಾರೆ. ಪೂರ್ವಾಶ್ರಮ ಏನೇ ಆಗಿದ್ದರೂ ಸಂವಿಧಾನದ ಚೌಕಟ್ಟಿನಲ್ಲಿ ಅವರು ಕೈಗೊಂಡ ನಿರ್ಧಾರಗಳೆಲ್ಲ ಅಬದ್ಧ ಎಂದು ಹೇಳಬಹುದೇ? ಎಂದು ನೇರನೇರ ಟಾಂಗು ಕೊಟ್ಟಿದ್ದಾರೆ ದಿನೇಶ್.

ರಾಜ್ಯಪಾಲರ ಕುರಿತ ಏಜೆಂಟರೆಂಬ ದಂಡಾವತಿಯವರ ವ್ಯಾಖ್ಯಾನಕ್ಕೂ ದಿನೇಶ್ ಸಮರ್ಥವಾಗಿ ಉತ್ತರಿಸಿದ್ದಾರೆ. ದಿನೇಶ್ ಅವರು ಬರೆದ ವಾಕ್ಯಗಳ ಪೈಕಿ ಕೆಲವು ಒಳಮರ್ಮಗಳಿಗೆ ತಾಕುತ್ತವೆ, ಕೆಲವು ನೇರವಾಗಿ ಕಪಾಲಕ್ಕೆ ಹೊಡೆಯುತ್ತವೆ. ದಂಡಾವತಿಯವರ ನಾಲ್ಕನೇ ಆಯಾಮವನ್ನು ಓದುವುದಕ್ಕೂ ಮುನ್ನವೇ ದಿನೇಶ್ ಇದನ್ನು ಬರೆದಿರುವ ಸಾಧ್ಯತೆಗಳೂ ಇಲ್ಲದಿಲ್ಲ. ಆದರೂ ಬಹುತೇಕ ಪ್ರಶ್ನೋತ್ತರಗಳ ಹಾಗಿವೆ ಎರಡೂ ಅಂಕಣಗಳು.

ಆದರೆ ದಿನೇಶ್ ಅಂಕಣವನ್ನು ಮಸುಕು ಮಾಡಲೆಂದು ರಾಜ್ಯಪಾಲರನ್ನು ವಾಪಾಸು ಕರೆಸಿಕೊಳ್ಳಬೇಕು ಎಂಬ ಅಭಿಪ್ರಾಯ ಸೂಚಿಸುವ ಸಂಪಾದಕೀಯ ಏಕೆ ಸಿದ್ಧವಾಯಿತು? ಇದು ಉದ್ದೇಶಪೂರ್ವಕವಾಗಿ ಸೃಷ್ಟಿಯಾದ ಪ್ರತಿಕ್ರಿಯೆಯಾಗಿದ್ದರೆ ಇದರ ಅನಿವಾರ್ಯತೆ ಏನಿತ್ತು? ಪ್ರಜಾವಾಣಿಯ ಓದುಗ ಯಾವುದನ್ನು ನಂಬಬೇಕು? ದಂಡಾವತಿ? ದಿನೇಶ್? ಸಂಪಾದಕೀಯ? ತಾನೇ ಗೊಂದಲದ ಕೆಸರಲ್ಲಿ ಮುಳುಗಿಹೋಗಿರುವ ಪ್ರಜಾವಾಣಿಯನ್ನು ಮೇಲಕ್ಕೆ ಎತ್ತುವವರು ಯಾರು?

ನಿವೃತ್ತರಾಗುವವರೆಗೂ ಡಿ.ವಿ.ರಾಜಶೇಖರ ಪ್ರಜಾವಾಣಿಯ ಸಂಪಾದಕೀಯಗಳನ್ನು ಬರೆಯುತ್ತಿದ್ದರು. ಪ್ರಜಾವಾಣಿಯ ಸಂಪಾದಕೀಯಗಳಿಗೆ ನಿಜಕ್ಕೂ ಒಂದು ಘನತೆ ಇದೆ. ಡಿವಿಆರ್ ಆ ಪರಂಪರೆಯನ್ನು ಸಮೃದ್ಧಗೊಳಿಸಿದವರು. ಆದರೆ ಇವತ್ತು ತನ್ನ ಅಂಕಣಕಾರನ ಬರಹದ ಮೌಲ್ಯವನ್ನು ತಗ್ಗಿಸಲೆಂದೇ ಹೆಣೆಯಲಾದ ಸಂಪಾದಕೀಯಕ್ಕೆ ಯಾವ ಮೌಲ್ಯವಿದೆ? ಯಾರನ್ನು ಮೆಚ್ಚಿಸಲು ಈ ಸರ್ಕಸ್ಸು? ಯಾರ ಕುಣಿಕೆಯಲ್ಲಿ ಸಿಕ್ಕಿ ಬಿದ್ದಿದೆ ಪ್ರಜಾವಾಣಿ?

ಕೊನೆಕುಟುಕು: ಮೂರು ನ್ಯಾಯಸಂಸ್ಥೆಗಳ ಎದುರು ಮುಖ್ಯಮಂತ್ರಿ ವಿರುದ್ಧದ ಪ್ರಕರಣಗಳ ತನಿಖೆ ನಡೆಯುತ್ತಿವೆ ಎಂದು ನಿನ್ನೆ ದಂಡಾವತಿಯವರು ಬರೆದಿದ್ದರು. ಇವತ್ತಿನ ಸಂಪಾದಕೀಯ ಹಾಗು ದಿನೇಶ್ ಅಂಕಣದಲ್ಲೂ ಇದು ಪುನರಾವರ್ತನೆಗೊಂಡಿವೆ. ಸ್ವತಃ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆಯವರೇ ಪದೇ ಪದೇ ತಾವು ಮುಖ್ಯಮಂತ್ರಿ ವಿರುದ್ಧದ ಪ್ರಕರಣಗಳ ತನಿಖೆ ನಡೆಸುತ್ತಿಲ್ಲ ಎಂದು ಹೇಳಿದರೂ ಯಾಕೆ ಹೀಗೆ ಹಸಿಹಸಿ ಸುಳ್ಳುಗಳನ್ನು ಬಿತ್ತರಿಸಲಾಗುತ್ತಿದೆ? ಬೇರೆಯವರು ಹಾಗಿರಲಿ, ದಿನೇಶ್ ಅವರಾದರೂ ಸತ್ಯ ಬರೆಯಬಹುದಿತ್ತಲ್ಲವೇ? ಇದನ್ನು ಸಹವಾಸದೋಷ ಅನ್ನೋಣವೇ?

13 comments:

 1. ನಿಮ್ಮ ಮಾತು ನಿಜ! ಸಹವಾಸದಿ೦ದ ಸನ್ಯಾಸಿ ಕೆಟ್ಟ ಎ೦ಬ೦ತಾಗಿದೆ ಪ್ರಜಾವಾಣಿಯ ಪರಿಸ್ಥಿತಿ. ಆದರೆ ಅದು ಯಾರ ಸಹವಾಸದಿ೦ದ ಎನ್ನುವುದೇ ಯಕ್ಷಪ್ರಶ್ನೆ????

  ReplyDelete
 2. Padyana Ramachandra ಪ್ರಜಾವಾಣಿಯ 'ಭಾನುವಾರದ ಅಂಕಣ' ಅನಾವರಣದ ಸೋಮವಾರದ " ನಾಲ್ಕನೇ ಆಯಾಮ".!

  -ಪ.ರಾಮಚಂದ್ರ,
  ರಾಸ್ ಲಫಾನ್, ಕತಾರ್.

  ReplyDelete
 3. ನಿಮ್ಮ ಬ್ಲಾಗ್ ಕೇವಲ ಬ್ಲಾಗ್ ಅಲ್ಲ, ಒಂದು ಆಂದೋಲನ. ಹೊರಜಗತ್ತಿಗೆ ಗೊತ್ತಿಲ್ಲದ ಮಾಧ್ಯಮರಂಗದ ಸತ್ಯಗಳನ್ನು ಅನಾವರಣಗೊಳಿಸುತ್ತಿದ್ದೀರಿ. ಶ್ಲಾಘನೀಯ ಯತ್ನ.

  ReplyDelete
 4. ಪ್ರಜಾವಾಣಿ ಸಂಪಾದಕೀಯ ಹಾಗು ಅಂಕಣ ಎರಡನ್ನೂ ಓದಿದೆ. ಅಂಕಣವನ್ನು ಡಿಸ್ ಓನ್ ಮಾಡಿಕೊಳ್ಳಲೆಂದೇ ಸಂಪಾದಕೀಯ ಬರೆಯಲಾಗಿದೆ ಎಂಬುದು ಸ್ಪಷ್ಟ. ಪ್ರಜಾವಾಣಿಯ ಆತ್ಮಸಾಕ್ಷಿಯಂತೆ ಬರೆಯುತ್ತಿರುವವರು ದಿನೇಶ್ ಅಮೀನ್ ಮಟ್ಟು. ಈ ಅಂಕಣಕಾರರನ್ನು ಡಿಸ್ ಓನ್ ಮಾಡಿಕೊಳ್ಳುವ ಮೂಲಕ ಪ್ರಜಾವಾಣಿ ತನ್ನ ಘನತೆ ಕಳೆದುಕೊಂಡಿದೆ.

  ReplyDelete
 5. ದಿನೇಶ್ ಅಮೀನ್ ಮಟ್ಟು ತಮ್ಮ ಅಂಕಣದಲ್ಲಿ ಬರೆದಿರುವುದು ಅವರ ಖಾಸಗಿ ಅಭಿಪ್ರಾಯ. ಪ್ರಜಾವಾಣಿಯ ನಿಲುವು ಅದಲ್ಲ ಎಂಬುದು ತಾತ್ಪರ್ಯ. ಎಷ್ಟು ಜಾಣತನ, ಹಾವು ಸಾಯಬಾರದು-ಕೋಲು ಮುರಿಯಬಾರದು

  ReplyDelete
 6. hello, anyone from printers mysore can defend this? please come out.

  ReplyDelete
 7. according to you Mr.Yedyurappa has done the greatest crime, which no other chief ministers of karnataka have ever committed. and above all, you like to defend the governor, who was a corrupt minister in the earlier congress government at the centre. my dear sir, he is not a saint either, nor your (pro left) journos, intellectuals or for that matter the lawers who have filed the case. the great gowda and his clans are pumping huge money for this high drama. and you people make a great hoax out of this in the pretext of secularism.
  (I AM SURE YOU ARE NOT GOING TO PUBLISH THIS, BUT CAN NOT RESIST MY IRE READING YOUR LOUSY COMMENTS. I CAN CLEARLY CONCLUDE THAT YOU TOO MUST BE IN RECEIPT OF `SOMETHING' FROM THE TORCH BEARERS OF SECULARISM).

  - AR Ramanayya, Katriguppe, Bangalore

  ReplyDelete
 8. ಮಾನ್ಯರೇ,ಯಾವುದೇ ಅಂಕಣ ಆಯಾ ಲೇಖಕನ ಅಭಿಪ್ರಾಯ ವಾಗುತ್ತದೆಯೇ ಹೊರತು ಪತ್ರಿಕೆಯ ಅಭಿಪ್ರಾಯವಾಗಲಾರದು. ಪತ್ರಿಕೆಯ ಧೋರಣೆಯನ್ನು ಆ ಪತ್ರಿಕೆಯ ಸಂಪಾದಕೀಯ ಹೇಳುತ್ತದೆ. ಮಟ್ಟು ಅಂಕಣ ಲೇಖಕರ ವೈಯಕ್ತಿಕ ನಿಲುವನ್ನು ಹೇಳುತ್ತದೆ. ಸಂಪಾದಕೀಯ ಪ್ರಜಾವಾಣಿಯ ನಿಲುವನ್ನು ಹೇಳುತ್ತದೆ. ಇದನ್ನು ಅರ್ಥಮಾಡಿಕೊಂಡರೆ ಗೊಂದಲವಿಲ್ಲ. ಮಟ್ಟು ವೈಯಕ್ತಿಕವಾಗಿ ಜಾತ್ಯತೀತ ನಿಲುವಿನ ಲೇಖಕ. ಆದರೆ ಪ್ರಜಾವಾಣಿಯನ್ನು ಜಾತ್ಯತೀತ ಎಂದು ಹೇಳಲು ಬರೋದಿಲ್ಲ. ಅದರೊಳಗಿರುವ ಕೆಲ ಶಕ್ತಿಗಳು ಅದನ್ನು ಜಾತ್ಯತೀತವಾಗಲು ಬಿಡುತ್ತಿಲ್ಲ.

  ReplyDelete
 9. ದಿನೇಶ್ ಅಮೀನ್ ಮಟ್ಟು ಅವರ ಲೇಖನದ ಇಂಗ್ಲಿಷ್ ಅನುವಾದ ಚುರುಮುರಿಯಲ್ಲಿ ಪ್ರಕಟಗೊಂಡಿದೆ. ಒಮ್ಮೆ ನೋಡಿ:
  http://churumuri.wordpress.com/2011/01/24/the-stunning-moral-collapse-of-bjp-in-karnataka/

  ReplyDelete
 10. @ ARR, It is not left leaning journalists criticizing Yaddy. Most them are in his pay list. It is pro-Hinduthva, pro RSS, pro brahmin and pro-truth are writing truth against Yaddy. there is no doubt that Yaddy is most corrupt & not at all a leader...

  ReplyDelete
 11. ಮಾನ್ಯರೇ, ತಾವು ಸಂಪಾದಕೀಯವನ್ನು ಪೂರ್ತಿ ಓದಲಿಲ್ಲವೆಂದು ಕಾಣಿಸುತ್ತದೆ. ಏಕೆಂದರೆ ಅದೇ ಸಂಪಾದಕೀಯದ ಕೊನೆಯ ಪಠ್ಯಭಾಗವನ್ನು ಗಮನಿಸಿದರೆ ಸಂಪಾದಕೀಯದಲ್ಲಿಯೇ ಎರಡೂ ಅಭಿಪ್ರಾಯಗಳಲ್ಲಿ ಸಮತೋಲನ ಸಾಧಿಸಲು ಯತ್ನಿಸಿರುವುದು ಸ್ಪಷ್ಟವಾಗಿಯೇ ಕಾಣಿಸುತ್ತದೆ. ಇದು ಈಗಿನ ವ್ಯವಹಾರಮುಖಿ ಬದುಕಿನಲ್ಲಿ ಸರ್ವೇಸಾಮಾನ್ಯ.

  ReplyDelete
 12. ಸತ್ಯಾ ಎಸ್January 28, 2011 at 1:31 PM

  ಪ್ರಜಾವಾಣಿಯಲ್ಲಿ ಇಂದು ಪ್ರಕಟವಾಗಿರುವ ಹಂಪಿ ಉತ್ಸವ ಕುರಿತ ಒಂದು ವರದಿಯ ತುಣುಕು ನೋಡಿ-
  'ನಿಗದಿಗಿಂತ ಎರಡೂವರೆ ಗಂಟೆ ತಡವಾಗಿ ಉತ್ಸವಕ್ಕೆ ಚಾಲನೆ ನೀಡಿದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರಿಗೆ ಸಚಿವ ಶ್ರೀರಾಮುಲು ಹಂಪಿಯ ಪೇಟ ತೊಡಿಸಿ, ವಿಜಯ ಖದ್ಗವನ್ನು ನೀಡುತ್ತಿದ್ದಂತೆಯೇ, ಒಂದು ಕ್ಷಣ ಯಡಿಯೂರಪ್ಪ ಅವರೂ, 'ವೀರಯೋಧ'ನೂ ಆಗಿ, 'ಗಂಡರ ಗಂಡ', 'ವೀರರಮಣ' ಎಂದೇ ಕರೆಯಿಸಿಕೊಂಡಿದ್ದ ಕೃಷ್ಣದೇವರಾಯನಂತೆ ಕಂಗೊಳಿಸಿದರು.'
  ಇದೆಂತಹ ವರದಿಗಾರಿಕೆ? ಸಂಪಾದಯಕೀಯಕ್ಕೂ, ಅಂಕಣ ಬರಹಗಳಿಗೂ ಹಾಗೂ ವರದಿಗಳಿಗೂ ಒಂದು ತಾತ್ವಿಕ ಸಂಬಂಧವೇ ಇಲ್ಲ! ಪತ್ರಿಕೆಯ ಇಂತಹ ನಿಲುವು ಭಾಷಾ ಪತ್ರಿಕೋದ್ಯಮಕ್ಕೆ ಗಂಡಾಂತರಕಾರಿ. ಇದು ಪತ್ರಿಕೊದ್ಯಮಕ್ಕಾಗಲಿ, ಸಮಾಜಕ್ಕಾಗಲಿ ಏನೂ ಒಳಿತನ್ನು ಮಾಡುವುದಿಲ್ಲ.

  ReplyDelete
 13. @ ಸತ್ಯಾ ಎಸ್ , thats for circulation. Now PV is competing with Hosadiganth (far more better)and Sanyuktha Karnataka..
  We are after circulation. That means money. See what Yaddy & co doing ?

  ReplyDelete