Tuesday, January 11, 2011

ಸುವರ್ಣದ ರಂಗಣ್ಣ, ಸಮಯದ ಭಟ್ಟರು...

ಶಶಿಧರ ಭಟ್ಟರು ಸಮಯದಲ್ಲಿ ನಿಧಾನವಾಗಿ ಸೆಟ್ಲ್ ಆಗುತ್ತಿದ್ದಾರೆ. ಭಟ್ಟರು ಒಂದು ಲೆಕ್ಕದಲ್ಲಿ ಮಾಲೀಕ ಸತೀಶ್ ಜಾರಕಿಹೊಳಿಯವರ ಅಭಿರುಚಿಗಳಿಗೆ ಹೊಂದಿಕೊಳ್ಳುವಂಥವರು. ಚಾನೆಲ್ ಶುರುವಾಗುವ ಹೊತ್ತಿನಲ್ಲೇ ಜಾರಕಿಹೊಳಿ ಮಾಟ, ಮಂತ್ರ, ಬುರುಡೆ ಜೋತಿಷ್ಯ ಇತ್ಯಾದಿಗಳು ತಮ್ಮ ಕಾರ್ಯಕ್ರಮಗಳಲ್ಲಿ ಇರಬಾರದು ಎಂದು ನಿರ್ಧರಿಸಿ ಅದನ್ನು ಚಲಾವಣೆಗೂ ತಂದಿದ್ದಾರೆ. ಜಾರಕಿಹೊಳಿ ಸಾಮಾಜಿಕ ನ್ಯಾಯದ ಕುರಿತಾಗಿ ಕಾಳಜಿ ಇರುವ ಮನುಷ್ಯ. ನೋಡುವುದಕ್ಕೂ ಸಿಂಪಲ್ ಆಗಿ ಕಾಣುತ್ತಾರೆ. ಪತ್ರಕರ್ತರಿಗೆ ಇಂಥ ಕ್ಯಾರೆಕ್ಟರುಗಳು ಇಷ್ಟವಾಗುವುದು ಸಹಜ.

ಶಶಿಧರ ಭಟ್ಟರು ಬರುವುದಕ್ಕೆ ಮುನ್ನ ಚಾನೆಲ್ ಮಾರಿಬಿಡುವ ಒಂದು ಪ್ರಸ್ತಾಪವೂ ಜಾರಕಿಹೊಳಿ ಮುಂದೆ ಇತ್ತು. ರೇಟು ಕುದುರಲಿಲ್ಲ, ಹೀಗಾಗಿ ಮಾರಲಿಲ್ಲ ಎಂಬುದು ನಂಬಲರ್ಹವಾದ ಮಾಹಿತಿ. ಸಮಯದಲ್ಲಿ ಎಲ್ಲವೂ ಇದೆ, ಆದರೆ ಏನೋ ಒಂದು ಕೊರತೆ ಕಾಡುತ್ತಲೇ ಇತ್ತು. ಬಹುಶಃ ಸಮರ್ಥ ಟೀಮ್ ಲೀಡರ್ ಬೇಕಿತ್ತೇನೋ? ಈಗ ಭಟ್ಟರು ಬಂದಿದ್ದಾರೆ. ಚಾನೆಲ್ ಸುಧಾರಿಸುತ್ತಾ? ಕಾದು ನೋಡಬೇಕು.

ಭಟ್ಟರು ಹಿಂದೆಲ್ಲ ತಾವು ನಂಬಿದವರಿಂದಲೇ ಏಟು ತಿಂದಿದ್ದಾರೆ, ಈ ಬಾರಿಯೂ ತಿನ್ನದಿರಲಿ ಎಂಬುದು ಎಲ್ಲರ ಆಶಯ. ಜೊತೆಯಲ್ಲಿದ್ದವರೇ ಕೈಕೊಟ್ಟರು ಎಂದು ಭಟ್ಟರು ಆಗಾಗ ಹಳಹಳಿಸುವುದುಂಟು. ಆದರೆ ಇವತ್ತಿನ ಮಾರುಕಟ್ಟೆ ಯುಗದಲ್ಲಿ ಇಂಥ ಹಳಹಳಿಕೆಗೆ ಬೆಲೆ ಇಲ್ಲ ಎಂಬುದು ಅವರಿಗೂ ಗೊತ್ತುಂಟು.

ಭಟ್ಟರ ಸಮಸ್ಯೆ ಇರುವುದೇ ಅವರು ಕಟ್ಟಿಕೊಳ್ಳುವ ಟೀಮಿನಲ್ಲಿ. ತಮ್ಮನ್ನೇ ಎಲ್ಲದಕ್ಕೂ ಅವಲಂಬಿಸುವವರನ್ನು ಕಟ್ಟಿಕೊಂಡು ಎಷ್ಟು ಕಾಲ ಏಗಲು ಸಾಧ್ಯ? ಸ್ಟುಡಿಯೋಗೆ ಬರುವ ಅತಿಥಿಗಳ ಫೋನ್ ನಂಬರುಗಳನ್ನೂ ತಾವೇ ಹುಡುಕಿಕೊಡಬೇಕಾದ ಅನಿವಾರ್ಯತೆ ಸೃಷ್ಟಿಸಿಕೊಂಡರೆ ದೊಡ್ಡ ಚಾನೆಲ್‌ಗಳ ಬೇರೆ ಕೆಲಸಗಳು ಹೇಗೆ ಮುಂದೆ ಸಾಗುತ್ತವೆ? ಬೇರೆ ಬೇರೆ ಕ್ಷೇತ್ರಗಳ ಬಗ್ಗೆ ವಿಶೇಷ ಜ್ಞಾನ, ಪರಿಣತಿ ಹೊಂದಿರುವವರನ್ನು ಗುರುತಿಸಿ, ಆಯಕಟ್ಟಿನ ಜಾಗದಲ್ಲಿ ನೇಮಿಸಿ ಅವರಿಂದ ಕೆಲಸ ತೆಗೆಸುವುದು ಸುಲಭದ ಮಾತಲ್ಲ. ಇದು ಭಟ್ಟರಿಗೆ ಅಸಾಧ್ಯದ ಮಾತೂ ಅಲ್ಲ. ಬೇಸರದ ವಿಷಯವೆಂದರೆ ಭಟ್ಟರಿಗೆ ಇದು ಈವರೆಗೆ ಸಾಧ್ಯವಾಗಿಲ್ಲ.

ಅತ್ತ ನೋಡಿ, ಕನ್ನಡಪ್ರಭದಿಂದ ರಂಗನಾಥ್ ಸುವರ್ಣಕ್ಕೆ ಹೊರಟು ನಿಂತಾಗ, ಅವರು ಎಲ್ಲದಕ್ಕೂ ತಮ್ಮನ್ನೇ ಅವಲಂಬಿಸುವವರನ್ನು ಕರೆದೊಯ್ಯಲಿಲ್ಲ. ಸಂಪಾದಕೀಯ ವಿಭಾಗದಲ್ಲಿ ಚುರುಕಾಗಿ, ಸಮರ್ಥವಾಗಿ ಕೆಲಸ ಮಾಡುವ ರವಿ ಹೆಗಡೆಯವರನ್ನು ಜತೆಗಿಟ್ಟುಕೊಂಡರು. ನಿರೂಪಣೆಯ ವಿಷಯದಲ್ಲಿ ಇವತ್ತಿನ ಮಟ್ಟಿಗೆ ನಂಬರ್ ೧ ಮತ್ತು ೨ ಆಗಿರುವ ಹಮೀದ್ ಪಾಳ್ಯ ಮತ್ತು ರಂಗನಾಥ್ ಭಾರದ್ವಾಜ್‌ರನ್ನು ಟಿವಿ೯ ನಿಂದ ಹೊತ್ತು ತಂದರು. ಇದಲ್ಲದೆ ಗೌರೀಶ್ ಅಕ್ಕಿ, ಜೋಗಿ, ಉದಯ ಮರಕಿಣಿ ತರಹದ ಪ್ರತಿಭಾವಂತರನ್ನೂ ಕರೆ ತಂದರು. ಇವರೆಲ್ಲ ಹೆಸರು ಮಾಡಿದವರು. ಆದರೆ ಲೋ ಪ್ರೊಫೈಲ್ ಆಗಿ ಉಳಿದಿರುವ, ಆದರೆ ಅತ್ಯಂತ ಸಮರ್ಥರಾದ ಕೆಲ ಹುಡುಗರನ್ನೂ ರಂಗನಾಥ್ ಕನ್ನಡಪ್ರಭದಿಂದ ಎಳೆತಂದರು. ಎಲ್ಲರೂ ಸೇರಿಯೇ ಸುವರ್ಣ ನ್ಯೂಸ್‌ಗೆ ಒಂದು ಕಳೆ ಬಂದಿದ್ದು.

ಮೊನ್ನೆ ಕೃಷ್ಣಾ ನ್ಯಾಯಾಧಿಕರಣದ ತೀರ್ಪಿನ ಸುದ್ದಿ ಹೊರಬಂದಾಗ ತೀರ್ಪಿನ ಸಂಪೂರ್ಣ ಮಾಹಿತಿಗಳನ್ನು ಇದೇ ತಂಡ ಹೇಗೆ ಒದಗಿಸಿತೆಂದರೆ ಉಳಿದೆಲ್ಲ ಚಾನೆಲ್‌ಗಳೂ ಸುವರ್ಣದ ಎದುರು ಸಪ್ಪೆಯಾಗಿಬಿಟ್ಟವು.

ಎಂಥವರನ್ನಾದರೂ ಕೊಡಿ, ನಾವು ಪಳಗಿಸಿ ಕೆಲಸ ತೆಗೆಸುತ್ತೇವೆ ಎಂದು ಹೇಳುವ ಟೀಮ್ ಲೀಡರ್‌ಗಳು ಒಂದೇ ಅತಿಯಾದ ಆತ್ಮವಿಶ್ವಾಸದಿಂದ ಕುಸಿದು ಬೀಳುತ್ತಾರೆ ಅಥವಾ ಗೊತ್ತಿದ್ದೇ ಸಂಸ್ಥೆಯನ್ನು ವಂಚಿಸುತ್ತಿರುತ್ತಾರೆ. ಆದರೆ ರಂಗನಾಥ್ ಹೀಗೆ ಮಾಡದೆ, ಸಂಸ್ಥೆಗೆ ನಿಜಕ್ಕೂ ಉಪಯೋಗವಾಗುವ ಕ್ಯಾಂಡಿಟೇಟುಗಳನ್ನು ತಂದು ಜತೆಗಿಟ್ಟುಕೊಂಡು ಕೆಲಸ ತೆಗೆಸಿದರು, ಸೋಮಾರಿ ಬಿದ್ದಿದ್ದ ಜಿಲ್ಲಾ ವರದಿಗಾರರ ಪೈಕಿ ಕೆಲವರನ್ನು ಬದಲಿಸಿದರು ಮತ್ತೆ ಕೆಲವರನ್ನು ತಮ್ಮ ದಾರಿಗೆ ತಂದುಕೊಂಡರು. ತಾವೇ ಕರೆದುಕೊಂಡು ಬಂದ ಪರಮೇಶ್ವರ ಭಟ್ಟರು ಜಿಲ್ಲಾ ವರದಿಗಾರರಿಗೆ ಕಿರುಕುಳ ನೀಡಲು ಶುರು ಮಾಡಿದಾಗ ಮನೆಯ ದಾರಿ ತೋರಿದರು. ಈ ಎಲ್ಲ ಕಾರ್ಯಾಚರಣೆಗಳಿಂದ ಒಂದು ಹಂತದವರೆಗೆ ಯಶಸ್ವಿಯೂ ಆದರು.

ಆದರೆ ರಂಗಣ್ಣ ಕೆಲವೊಮ್ಮೆ ಅತಿರೇಕಕ್ಕೆ ಹೋಗಿ ತಮ್ಮ ಸಹೋದ್ಯೋಗಿಗಳನ್ನು ಮನಸ್ಸಿಗೆ ಬಂದಂತೆ ನಿಂದಿಸಿದರು, ಕೊಂದು ಹಾಕಿಬಿಡ್ತೇನೆ ಎಂದು ಕೂಗಾಡಿದ್ದೂ ಉಂಟು. ಹಿಂದೆ ಕ್ರೈಂ ಬೀಟು ವರದಿಗಾರಿಕೆ ಮಾಡುತ್ತಿದ್ದುದರ ಪರಿಣಾಮ ಅದು. ಸಕ್ಸಸ್ಸಿನ ಫಾರ್ಮುಲಾದಲ್ಲಿ ಇಂಥ ಅತಿರೇಕಗಳು ಇರಬೇಕಿಲ್ಲ. ಈ ಕುರಿತು ಇನ್ನೊಮ್ಮೆ ಚರ್ಚಿಸೋಣ.

ಮತ್ತೆ ಶಶಿಧರ ಭಟ್ಟರ ವಿಷಯಕ್ಕೆ ಬರುವುದಾದರೆ, ಅವರು ಈಗ ಸಮಯದ ಚಾನೆಲ್ ಹೆಡ್ ಆಗಿದ್ದರೂ ಹೊಸ ತಂಡವನ್ನು ಕಟ್ಟಿಕೊಳ್ಳುವ ಅವಕಾಶಗಳು ಕಡಿಮೆ. ಒಂದಷ್ಟು ಬದಲಾವಣೆ ಮಾಡಿಕೊಳ್ಳಬಹುದಾದರೂ ತಮ್ಮ ಅಭಿರುಚಿಗೆ, ಅಗತ್ಯಕ್ಕೆ ತಕ್ಕಂತೆ ಪೂರ್ತಿ ತಂಡವನ್ನು ಪುನರ್ ರಚಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಇದು ಅವರಿಗೆ ದೊಡ್ಡ ಸವಾಲು ಕೂಡ ಹೌದು.

ಭಟ್ಟರು ಸೂಕ್ಷ್ಮ ಮನಸ್ಸಿನ ಅಂತರ್ಮುಖಿ, ಸಣ್ಣಪುಟ್ಟದ್ದಕ್ಕೂ ಬೇಸರ ಪಟ್ಟುಕೊಳ್ಳುತ್ತಾರೆ. ಇತರರಿಂದ ವಂಚನೆಯಾದಾಗ, ಅವರ ನಂಬಿಕೆಗಳು ಅಲುಗಿದಾಗ ಸಂಕಟಪಟ್ಟುಕೊಳ್ಳುತ್ತಾರೆ. ಆದರೆ ಟೀಮ್ ಲೀಡರ್ ಆದವನು ಇದನ್ನು ಮೀರದ ಹೊರತು ಕಿರುಕುಳ ಕೊಡುವವರ ಸಂಖ್ಯೆಯೇನು ಕಡಿಮೆ ಇರಲಾರದು.

ಭಟ್ಟರು ಜನಪರ ಕಾಳಜಿಯುಳ್ಳವರು. ಅಗ್ಗದ ಜನಪ್ರಿಯತೆ ತಂದುಕೊಡುವ ಮನುಷ್ಯವಿರೋಧಿ ಸಿದ್ಧಾಂತಗಳಿಗೆ ಎಂದೂ ಬಲಿಯಾದವರಲ್ಲ. ವೈಯಕ್ತಿಕವಾಗಿ ಪ್ರಾಮಾಣಿಕತೆಯನ್ನು ಉಳಿಸಿಕೊಂಡವರು, ತಾನು ನಂಬಿದ ಜೀವನಧರ್ಮಕ್ಕೆ ನಿಷ್ಠರಾಗಿ ಬದುಕುತ್ತಿರುವವರು.

ಶಶಿಧರ ಭಟ್ಟರಿಗೆ ಒಳ್ಳೆಯದಾಗಲಿ.

9 comments:

  1. Good analysis. liked it. waiting for some more stories like this.

    ReplyDelete
  2. in this article some part is true and some part is very wrong

    ReplyDelete
  3. @anonymous,
    which part is true? which part is wrong? please tell. do not create confusion.

    ReplyDelete
  4. tumba olle lekhana.ella office gala suddi hege tegeeteera anta kutuhala. very good blog
    -katyayini

    ReplyDelete
  5. ಭಟ್ಟರು ಸೂಕ್ಷ್ಮ ಮನಸ್ಸಿನ ಅಂತರ್ಮುಖಿ, ಸಣ್ಣಪುಟ್ಟದ್ದಕ್ಕೂ ಬೇಸರ ಪಟ್ಟುಕೊಳ್ಳುತ್ತಾರೆ. ಇತರರಿಂದ ವಂಚನೆಯಾದಾಗ, ಅವರ ನಂಬಿಕೆಗಳು ಅಲುಗಿದಾಗ ಸಂಕಟಪಟ್ಟುಕೊಳ್ಳುತ್ತಾರೆ.. this entirely not true. He who took and gave lot of freedom to Sundara Kabaka, Parameshwara etc

    ReplyDelete
  6. @ಸಂಪಾದಕೀಯ,ರಂಗನಾಥ್ ಸುವರ್ಣಕ್ಕೆ ಬಂದ ಮೇಲೆ ಹೊಸತನ್ನು ನಿರೀಕ್ಷಿದ್ದೆ ಆದರೆ ಹಳೆಯದರಲ್ಲೆ ಸ್ವಲ್ಪ ಇಂಪ್ರೂವೈಸ್ ಮಾಡಿರುವ ರಂಗನಾಥ್ ನಿರಾಶೆ ಮೂಡಿಸಿದ್ದಾರೆ ಇದೆಲ್ಲಕ್ಕಿಂತ ತೀರಾ ಬೇಸರದ ಸಂಗತಿ ಅವರ ಮುಖ ಪ್ರದರ್ಶನದ ತೆವಲು, ಕ್ಯಾಪ್ಟನ್ ಆದವನು ತೆರೆಯ ಮೇಲೆ ಮುಖ ತೋರಿಸಬೇಕಾದ್ದಿಲ್ಲ ಅದಕ್ಕೆಂದೆ Anchorಗಳಿರುವಾಗ ಈ ರಂಗನಾಥ್ ಅತಿಯಾಗಿ ತೆರೆಯ ಮೇಲೆ ಕಾಣಿಸಿಕೊಳ್ಳೋದು, ಯಾರಿಗೂ ತಿಳಿಯದ್ದು ಇವರೊಬ್ಬರಿಗೆ ತಿಳಿದಿದೆ ಎಂದು ತೋರಿಸಲು ಪ್ರಯತ್ನಿಸುವುದು ಸರಿಯಲ್ಲ, ಪತ್ರಕರ್ತನಾದವನು ವಿಷಯವನ್ನು ಅನಾವರಣ ಮಾಡಬೇಕೆ ವಿನಹ ತೀರ್ಮಾನ ಕೊಡುವ ನ್ಯಾಯಾಧೀಶನಾಗಬಾರದು ಆದರೆ ಇಂತಹದ್ದನ್ನ ರಂಗನಾಥ್ ಮಾಡುತ್ತಿದ್ದಾರೆ ಈ ವಿಚಾರದಲ್ಲಿ ಅವರು ಬದಲಾಗಬೇಕು,ಇನ್ನೂ ಶಶಿಧರ ಭಟ್ಟರು ಯಾವುದೇ ವಿಚಾರಗಳನ್ನು ತೆರೆಯ ಮೇಲೆ ತರುವಾಗ ಅತಿ ರಂಜಿತವಾಗಿ ವೈಭವೀಕರಿಸುತ್ತಾರೆ 'ಅಸಹ್ಯ' ಹುಟ್ಟಿಸುವಷ್ಟು.ಇನ್ನು ಇವರ ಟೀಂ ಹೊಗಳು ಭಟರಿಂದ ಓಲೈಸುವವರಿಂದ ತುಂಬಿರುತ್ತದೆಂದು ಕೇಳಿದ್ದೇನೆ 'ಸಮಯ'ದಲ್ಲಿ ಅಂತ ಛಾಯೆ ಕಾಣುತ್ತಿದೆ ಭಟ್ಟರು ಎಚ್ಚೆತ್ತುಕೊಳ್ಳಲಿ. ರಂಗನಾಥ್ ಮತ್ತು ಶಶಿಧರ ಭಟ್ಟರು ಹಿರಿಯರು-ಅನುಭವಿಗಳು ಆದರೆ ಅತಿರೇಕಗಳನ್ನು ಇಬ್ಬರೂ ತೊರೆದರೆ ಅವರಿಗೆ ಕ್ಷೇಮ.

    ReplyDelete
  7. ಸುವರ್ಣದ ರಂಗಣ್ಣನ ಮಾತುಗಳು ಒಂದು ರೀತಿಯಲ್ಲಿ ಜನ ಸಾಮಾನ್ಯನ ಮಾತುಗಳೇ ಅನ್ನೂ ರೀತಿ ಅನಿಸುತ್ತೆ. ಜನ ಸಾಮಾನ್ಯ ಏನು ಬಯಸುತ್ತಾನೋ ಅದನ್ನು ನೇರವಾಗಿ ರಂಗಣ್ಣ ಕೇಳುತ್ತಾರೆ. ಆದರೆ ಸುವರ್ಣ ಟಿವಿಯಲ್ಲಿ ಸ್ವಲ್ಪ ಮಟ್ಟಿಗಿನ ಮೂಢನಂಬಿಕೆಗಳ ಕಾರ್ಯಕ್ರಮಗಳಿಗೆ ಬ್ರೇಕ್ ನೀಡಬೇಕಿದೆ. ಭಟ್ಟರೂ ಸಮಯ ಸೇರಿರುವುದರಿಂದ ಇಬ್ಬರ ನಡುವಿನ ಚಾನೆಲ್ ಜುಗಲ್ ಬಂದಿ ಜೋರಾಗಿಯೇ ನಡೆಯಲಿದೆ.

    ReplyDelete
  8. ಆಶ್ರಫ್ ಅವರೇ ರಂಗಣ್ಣನ ಮಾತುಗಳು ಸಾಮಾನ್ಯನ ಮಾತುಗಳು ಅನಿಸುವುದೇ? ಅದು ಸಾಮಾನ್ಯನ ಮಾತಲ್ಲ, 'ಒಸಾಮಾನ್ಯ'ನ ಮಾತುಗಳು ಕಣ್ರೀ. ನೀವು ತಪ್ಪಾಗಿ ಅರ್ತೈಸಿದ್ದೀರಿ!

    ಜುಗಲಬಂಧಿ ಸಾರ್ವಜನಿಕರಿಗಾಗಿ ಅಂತ ರಂಗನಾಥ್ ಬರ್ತಾರೆ. ಆದರೆ, ಅಲ್ಲಿ ಸಾರ್ವಜನಿಕರ ಯಾವ ದನಿಯೂ ಪ್ರತಿಧ್ವನಿಸುವುದಿಲ್ಲ. ಯಾವುದೋ ಒಂದು ಪಕ್ಷದ ದಾಳವಾಗಿ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆನೋ ಅನಿಸಿಬಿಡುತ್ತೆ. ರಂಗನಾಥ್ ಈ ಬಗ್ಗೆ ಯೋಚಿಸಿದರೆ ಜನರು ಅವರನ್ನು ಹೆಚ್ಚು ದಿನ ಒಪ್ಪಲು ಸಾಧ್ಯ.

    ReplyDelete
  9. ರಂಗನಾಥ್ mathu ಭಟ್ಟ sir ತಂಡgalige shubhavagali

    ReplyDelete