Wednesday, January 5, 2011

ಬ್ಲಾಗರ್‌ಗಳೆಂಬ ಜರ್ನಲಿಸ್ಟುಗಳಿಗೆ ಜಯವಾಗಲಿ

ಇವರು ಪತ್ರಕರ್ತರಲ್ಲ, ಆದರೂ ಪತ್ರಕರ್ತರು. ಇವರು ಪತ್ರಿಕೋದ್ಯಮಿಗಳಲ್ಲ, ಆದರೂ ಪತ್ರಿಕೋದ್ಯಮಿಗಳು. ಇವರು ಬ್ಲಾಗರ್‌ಗಳು. ಪರ್ಯಾಯ ಮಾಧ್ಯಮವನ್ನು ಕಟ್ಟಿಕೊಂಡವರು.

ಇವರು ತಮ್ಮ ಪಾಡಿಗೆ ತಾವು ಬರೆಯುತ್ತಾರೆ. ಪಿಕ್ನಿಕ್ಕಿಗೆ ಹೋಗಿ ಬಂದ ಖುಷಿ, ಮನೆಯಲ್ಲಿ ಮಗು ಹುಟ್ಟಿದ ಸಡಗರ, ಕಸದ ತೊಟ್ಟಿಯಲ್ಲಿ ಎಸೆಯಲ್ಪಟ್ಟು ಸತ್ತ ಮಗುವಿನ ಕುರಿತ ಮರುಕ, ಹೊಸದಾಗಿ ಓದಿದ ಕವಿತೆಯ ಕನವರಿಕೆ, ಮನೆಯಲ್ಲಿ ಘಟಿಸಿದ ಸಾವಿನ ವಿಷಾದ, ರಸ್ತೆ ಅಪಘಾತದಲ್ಲಿ ಸತ್ತೋದವರ ಕುರಿತು ನೋವು, ಹಬ್ಬಗಳ-ವಿವಿಧ ಡೇ ಗಳ ಸಂಭ್ರಮ, ಹೊಸದಾಗಿ ಶಾಪಿಂಗ್ ಮಾಡಿದ ವಸ್ತುಗಳ ವಿವರ, ರಾತ್ರಿಯಷ್ಟೇ ಕಂಡ ದುಸ್ವಪ್ನದ ಕಿರಿಕಿರಿ... ಹೀಗೆ ಎಲ್ಲವನ್ನೂ ಹಂಚಿಕೊಳ್ಳುತ್ತಾರೆ.

ಇವರ ಬ್ಲಾಗುಗಳಿಗೆ ಇವರೇ ಮಾಲೀಕರು, ಇವರೇ ಸಂಪಾದಕರು, ಇವರೇ ಉಪಸಂಪಾದಕರು, ಇವರೇ ವರದಿಗಾರರು, ಇವರೇ ಡಿಟಿಪಿ ಆಪರೇಟರ್‌ಗಳು. ಯಾರ ಅಂಕೆಯಲ್ಲಿ ಇವರಿಲ್ಲವಾದರೂ ತಮ್ಮ ತಮ್ಮ ಅಂಕೆಯಲ್ಲಿ ಇದ್ದು ಬರೆಯುವವರು.
ಇಲ್ಲಿನ ಬರವಣಿಗೆಯೂ ಅಷ್ಟೆ. ಅದಕ್ಕೆ ಯಾವುದರ ಹಂಗೂ ಇಲ್ಲ. ಎದೆ ಬಿಚ್ಚಿ ಹೇಳಲು ಕವಿತೆ, ದೊಡ್ಡದೇನನ್ನೋ ಹೇಳಲು ಸಣ್ಣ ಕತೆ, ಆತ್ಮಕಥನದ ಧಾಟಿಯ ಹರಟೆಗಳು, ಸೀರಿಯಸ್ಸಾದ ಪ್ರಬಂಧಗಳು... ಹೇಳುವುದಕ್ಕೆ ಸಾವಿರ ವಿಧಾನ, ಓದುವವರಿಗೆ ವ್ಯವಧಾನವಿರಬೇಕು ಅಷ್ಟೆ.

ಈ ಬ್ಲಾಗರ್‌ಗಳು ಸದಾ ಕ್ರಿಯಾಶೀಲರು. ಒಂದು ಪೋಸ್ಟಿನ ಹಿಂದೆ ಮತ್ತೊಂದು ಪೋಸ್ಟು ಒದ್ದುಕೊಂಡು ಬರುತ್ತಿದ್ದಂತೆ ಪುಳಕ. ಒಂದೊಂದು ಕಮೆಂಟಿಗೂ ಸಣ್ಣ ಖುಷಿ. ಗಿರ್ರನೆ ತಿರುಗುವ ಹಿಟ್ ಕೌಂಟರುಗಳನ್ನು ನೋಡಿದರೆ ಹೆಮ್ಮೆ. ಕ್ಲಸ್ಟರ್‌ಮ್ಯಾಪುಗಳಲ್ಲಿ ಇವತ್ತು ಅದ್ಯಾವುದೋ ಅನಾಮಿಕ ದೇಶವೊಂದರಲ್ಲಿ ಅಪರಿಚಿತ ಗೆಳೆಯ ತನ್ನ ಸೈಟನ್ನು ನೋಡಿದ್ದನ್ನು ಗಮನಿಸಿ ಸಂಭ್ರಮ.

ಇವರು ಸ್ನೇಹಜೀವಿಗಳು. ಒಬ್ಬರನ್ನು ಮತ್ತೊಬ್ಬರು ಕೈ ಹಿಡಿದು ಮೇಲಕ್ಕೆ ಎತ್ತುತ್ತಾರೆ. ಒಬ್ಬರ ಬ್ಲಾಗಿನಲ್ಲಿ ಮತ್ತೊಬ್ಬರ ಲಿಂಕು. ಅವಳಿಗೆ ಇವನು ಫಾಲೋಯರ್, ಇವನಿಗೆ ಅವಳು ಫಾಲೋಯರ್. ಒಬ್ಬರನ್ನು ಒಬ್ಬರು ಹಿಂಬಾಲಿಸುತ್ತ, ಪರಸ್ಪರ ಮೈದಡವುತ್ತ ಸಾಗುತ್ತಾರೆ. ಸಣ್ಣ ಗೇಲಿ, ಕಚಗುಳಿಯಿಡುವ ಕೀಟಲೆ, ಕಾಲೆಳೆಯುವ ತುಂಟಾಟ ಎಲ್ಲಕ್ಕೂ ಇಲ್ಲಿ ತೆರೆದ ಮನಸ್ಸು.

ಇಲ್ಲೂ ಧರ್ಮರಕ್ಷಣೆಯ ಮಣಭಾರ ಹೊತ್ತವರಿದ್ದಾರೆ, ಜಾತಿ ಕೂಟ ಕಟ್ಟಿಕೊಂಡವರಿದ್ದಾರೆ. ಆದರೆ ಮನುಷ್ಯತ್ವದ ವಿಷಯಕ್ಕೆ ಬಂದರೆ ಎಲ್ಲರೂ ಬಾಗುತ್ತಾರೆ. ಸಮೂಹಕ್ಕೆ ಇರುವಷ್ಟು ಕೆಡುವ, ಕೆಡಿಸುವ ಆಕ್ರಮಣಕಾರಿ ಗುಣ ವ್ಯಕ್ತಿಗಿರುವುದಿಲ್ಲವಲ್ಲ.

ಇಲ್ಲಿ ಎಲ್ಲವೂ ಖುಲ್ಲಂಖುಲ್ಲಾ. ಸರಿಯೆಂದು ತೋರಿದ್ದನ್ನು ಮೆಚ್ಚುಗೆಯಿರುತ್ತದೆ, ತಪ್ಪು ಕಂಡರೆ ಎಗ್ಗಿಲ್ಲದ ಟೀಕೆಯಿರುತ್ತದೆ. ಒಮ್ಮೆಮ್ಮೆ ತೀರಾ ಆಕ್ರೋಶ ಬಂದಾಗ ಇವರು ಅಮೀರ್‌ಖಾನನ ಚಿತ್ರದಲ್ಲಿ ಮೊಂಬತ್ತಿ ಹಿಡಿದು ಹೊರಟವರಂತೆ ಪ್ರತಿಭಟಿಸುತ್ತಾರೆ.

ಇವರು ಬ್ಲಾಗರ್‌ಗಳು. ಜರ್ನಲಿಸ್ಟುಗಳಲ್ಲದ ಜರ್ನಲಿಸ್ಟುಗಳು. ಇವರಿಗೆ ಖಾದ್ರಿ ಶಾಮಣ್ಣನವರ ಹೆಸರಿನಲ್ಲಿ, ಟಿಎಸ್‌ಆರ್ ಹೆಸರಿನಲ್ಲಿ, ನೆಟ್ಟಕಲ್ಲಪ್ಪನವರ ಹೆಸರಲ್ಲಿ ಯಾರೂ ಅವಾರ್ಡು ಕೊಡುವುದಿಲ್ಲ. ರಿಪೋರ್ಟರ‍್ಸ್ ಗಿಲ್ಡಿನಲ್ಲಿ, ಕೆಯುಡಬ್ಲ್ಯುಜೆಯಲ್ಲಿ, ಪ್ರೆಸ್ ಕ್ಲಬ್‌ನಲ್ಲಿ ಮೆಂಬರ್‌ಶಿಪ್ ಕೊಡುವುದಿಲ್ಲ. ಇವರಿಗೆ ಸಂಬಳವಿಲ್ಲ, ಸಾರಿಗೆ ವೆಚ್ಚ ಯಾರೂ ಕೊಡುವುದಿಲ್ಲ, ತಾವು ಬರೆದದ್ದನ್ನು ಓದಿದ್ದಕ್ಕೆ ಯಾರಿಂದಲೂ ಚಂದಾ ಪಡೆಯುವುದಿಲ್ಲ, ಇನ್ನು ಪಿಎಫ್ಫು, ಪಿಂಚಣಿ ಇಲ್ಲವೇ ಇಲ್ಲ.

ಕೆಲವರು ಬ್ಲಾಗರ್‌ಗಳನ್ನು ಸುಖಾಸುಮ್ಮನೆ ಬೈಯುತ್ತಾರೆ. ಕೋಣೆಯೊಳಗೆ ಬಾಗಿಲು ಮುಚ್ಚಿಕೊಂಡು ದುರ್ವಾಸನೆ ಬಿಟ್ಟು ಅದನ್ನು ಆಘ್ರಾಣಿಸುವವರು ಎಂದು ಇವರನ್ನು ಜರಿದವರೂ ಉಂಟು. ಆದರೆ ಪತ್ರಿಕೋದ್ಯಮದ ಹುಲಿ ಸವಾರಿಯನ್ನು ಬಿಟ್ಟ ನಂತರ ದೊಡ್ಡದೊಡ್ಡ ಪತ್ರಕರ್ತರಿಗೆ ಆಶ್ರಯ ಕೊಟ್ಟಿದ್ದು ಇದೇ ಅಂತರ್ಜಾಲ ತಾಣ. ಹುಲಿ ಸವಾರಿ ಮಾಡಿದವರಿಗೆ ಕುರಿಯನ್ನಾದರೂ ಕೊಡುವ ಶಕ್ತಿ ಈ ಜಾಲಕ್ಕಿದೆ.

ಪತ್ರಕರ್ತರಲ್ಲದಿದ್ದರೂ ಇವರು ಸೊ ಕಾಲ್ಡ್ ಮೇನ್‌ಸ್ಟ್ರೀಮಿನ ಪತ್ರಕರ್ತರಿಗೇ ಹೆಚ್ಚು ಅಚ್ಚುಮೆಚ್ಚು. ಸಂಪಾದಕೀಯದಂಥ ಬ್ಲಾಗುಗಳನ್ನು ಪತ್ರಕರ್ತರು ತಮ್ಮ ತಮ್ಮ ಕಚೇರಿಗಳಲ್ಲಿ ಕದ್ದುಮುಚ್ಚಿ ಬ್ಲೂಫಿಲಂ ನೋಡಿದಂತೆ ನೋಡುವುದುಂಟು.

ನಿಜ, ಇವರು ಕ್ರಾಂತಿಯನ್ನೇನು ಮಾಡಲಾರರು. ತಮ್ಮ ಇತಿಮಿತಿಯಲ್ಲಿ ಜನಾಭಿಪ್ರಾಯ ರೂಪಿಸಬಲ್ಲರು. ತಪ್ಪುಗಳನ್ನು ಎತ್ತಿತೋರಿಸಬಲ್ಲರು. ಹೊಸ ಕನಸುಗಳನ್ನು ಸೃಷ್ಟಿಸಬಲ್ಲರು.

ಬ್ಲಾಗರ್‌ಗಳೆಂಬ ಈ ಪತ್ರಕರ್ತರಿಗೆ ಜಯವಾಗಲಿ. ಬ್ಲಾಗ್ ಲೋಕ ಚಿರಾಯುವಾಗಲಿ.

(ಇಷ್ಟವಾದರೆ ಈ ಪೋಸ್ಟನ್ನು ಬ್ಲಾಗರ್‌ಗಳು ತಮ್ಮ ತಮ್ಮ ಬ್ಲಾಗ್‌ಗಳಲ್ಲಿ ಬಳಸಿಕೊಳ್ಳಲು ಅನುಮತಿಯುಂಟು!)

12 comments:

 1. ವಂಡರ್ ಫುಲ್. ಬ್ಲಾಗ್‌ಗಳಲ್ಲಿ ಬಳಸಿಕೊಳ್ಳಲು ಅನುಮತಿಯುಂಟು!ಎಂದು ಹೇಳಿದ್ದೀರಿ. ಸಂತೋಷ. ಆದರೆ, ಡಾಟ್ ಕಾಮಿಗೂ ಅಂದರೆ ಶಾಮಿಗೂ ಅನುಮತಿ ಉಂಟೋ?

  ಯಾವುದಕ್ಕೂ ಒಂದು ಸಾಲು ಉತ್ತರ ಬರೆಯಿರಿ.
  ಶಾಮ್, ದಟ್ಸ್ ಕನ್ನಡ ಡಾಟ್ ಕಾಂ.

  ReplyDelete
 2. ಬ್ಲಾಗರ್ ಗಳ ಬಗ್ಗೆ ಅ೦ತಃಕರಣಪೂರ್ವಕ ಮಾತುಗಳನ್ನು ಓದಿ ಖುಷಿಯಾಯಿತು. ಈ ಬ್ಲಾಗರ್ಸ್ ಲೋಕವೇ ಒ೦ದು ವಿಸ್ಮಯ! ವ೦ದನೆಗಳು. ಇಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ನೋವು, ನಲಿವು, ಕನಸು, ಕನವರಿಕೆಗಳಿವೆ, ಓದುವವರಿಗೂ, ಬ್ಲಾಗಿಸುವವರಿಗೂ ಅವರದ್ದೇ ಆದ ಭಾವನೆಗಳಿವೆ, ಅವೆಲ್ಲವೂ ಈ ಬ್ಲಾಗ್ ಲೋಕದಲ್ಲಿ ಜೀವ ತಳೆಯುತ್ತವೆ, ಮು೦ಗಾರಿನ ಮಳೆಯಲ್ಲಿ ನಲಿವ ನವಿಲಿನ೦ತೆ ಕುಣಿದಾಡುತ್ತವೆ.

  ReplyDelete
 3. ಹೌದು ಬ್ಲಾಗುಗಳು ಪತ್ರಕರ್ತರಲ್ಲದವರಿಗೆ, ಕಥೆಗಾರರಲ್ಲದವರಿಗೆ, ಲೇಖಕರಲ್ಲದವರಿಗೆ, ಹೀಗೇ ಇನ್ನೂ ಏನೇನೂ ಅಲ್ಲದವರಿಗೆ ತಮ್ಮಲ್ಲಿ ಅಂತರ್ಗತವಾಗಿರುವ ವಿಷಯ-ವಸ್ತುಗಳನ್ನು ವಿಭಿನ್ನ ನೆಲೆಗಟ್ಟಿನಲ್ಲಿ ಹೊರಹಾಕಲು ಅವಕಾಶ ನೀಡಿದೆ ಎಂಬುದೇನೋ ಸರಿ ಆದರೆ ಅಲ್ಲೊಂದು ಇಲ್ಲೊಂದು ಬ್ಲಾಗ್ ಗಳು ವೈಯುಕ್ತಿಕ ನೆಲೆಗಟ್ಟಿನಲ್ಲಿ ದುರ್ಬಳಕೆಯಾಗುತ್ತಿರುವುದು ವಿಷಾಧನೀಕರ ಸಂಗತಿ!

  ReplyDelete
 4. ಸಂಪಾದಕೀಯ..ಒಂದು ಹೊಸ ಪ್ರಯತ್ನದತ್ತ..ಮುನ್ನಡೆಯುವ ನಿಮಗೆ ಶುಭವಾಗಲಿ. ವೃತ್ತಿಯಲ್ಲಿ ವಿಜ್ಜಾನದ ಹಿಂದೆ ಬಿದ್ದು ಜಿದ್ದಾಜಿದ್ದು ಸಂಶೋಧನೆಗಳಿಗೆ ಕೈಹಾಕುವ ವಿಜ್ಜಾನಿ ವರ್ಗಕ್ಕೆ ಸೇರಿದವನಾದ್ರೂ ಸುಧೀಂದ್ರರ ತರಹ ಬರವಣಿಗೆಗೂ ಕೈಹಾಕಿದೆ...ಹಾಗೇ ಬ್ಲಾಗಿಗೂ ಬಂದಾಯ್ತು...ನಿಮ್ಮ ಮಾತು ನಿಜ ..ಇಲ್ಲಿ ತ,ಬೆ,ತಾ.ತ (ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುವ) ಗಳೇ ಹೆಚ್ಚು. ಇವರನ್ನು ಪ್ರೋತ್ಸಾಹಿಸುವ ಮಿತ್ರರೂ ತಮ್ಮದೇ ಬಳಗ ಮಾಡಿಕೊಳ್ಳುವುದೂ ಉಂಟು...ನಿಮ್ಮ ಈ ಮಾತೂ ಸತ್ಯ... ಒಟ್ಟಿನಲ್ಲಿ ಜರ್ನಲಿಸ್ಟ್ ಅಲ್ಲದ ಈ ಕರ್ನಲಿಸ್ಟುಗಳಿಗೆ ಶುಭಕೋರುವ ನಿಮ್ಮ ಈ ಲೇಖನ ಸ್ವಾಗತಾರ್ಹ...

  ReplyDelete
 5. ಬ್ಲಾಗರುಗಳನ್ನೆಲ್ಲಾ ಹೊಗಳಿ ಇಂಟರ್ ನೆಟ್ ನಲ್ಲಿ ಬೆಂಬಲ, ಜನಪ್ರಿಯತೆ ಗಳಿಸಿಕೊಳ್ಳುವ ಈ ಟೆಕ್ನಿಕ್ ಪತ್ರಿಕೋದ್ಯಮದಿಂದಲೇ ಕಲಿತದ್ದಲ್ಲವಾ ?

  ReplyDelete
 6. ಇದು ನಿಜಕ್ಕೂ ಎಲ್ಲರ ಕಣ್ಣು ತೆರೆಸುವ ಲೇಖನ. ಪತ್ರಿಕೆವಲಯಕ್ಕಿಂತ ಬ್ಲಾಗ್ ಲೋಕವೆ ಸದ್ಯಕ್ಕೆ ಹೆಚ್ಚು ಕ್ರಿಯಾಶೀಲವೆಂದು ನನ್ನ ಭಾವನೆ. ಮತ್ತೆ ಬ್ಲಾಗಿನಿಂದ ಕ್ರಾಂತಿಯಾಗಿಲ್ಲವೆಂದಿದ್ದೀರಿ. ಆಗಿದೆ ಅದಕ್ಕೆ ಉದಾಹರಣೆ ಈ ಲಿಂಕ್ ಓದಿ.
  ಬ್ಲಾಗ್ ಲೋಕದ ಮನಸ್ಸು ದೊಡ್ಡದು. http://chaayakannadi.blogspot.com/2010/04/blog-post.html

  ಮತ್ತೆ ಬ್ಲಾಗರುಗಳ ಪುಸ್ತಕಗಳು ಬಂದಿವೆ. ತಿಪ್ಪಗೊಂಡನಹಳ್ಳಿಯಲ್ಲಿ ಬ್ಲಾಗ್‍ವನ ಮಾಡಿದ್ದಾರೆ. ಅದಕ್ಕೆ ಅಭೂತಪೂರ್ವ ಪ್ರತಿಕ್ರಿಯೆ ಸಿಕ್ಕಿದೆ. ಇದರ ಹುರುಪಿನಿಂದ ಮತ್ತಷ್ಟು ಪುಸ್ತಕಗಳನ್ನು ತರಲು ಈ ವರ್ಷ ಸಿದ್ದರಾಗಿದ್ದಾರೆ. ಪತ್ರಿಕೆಯಿಂದ ರೆಜೆಕ್ಟ್ ಆದ ಲೇಖನಗಳು ಬ್ಲಾಗಿನಲ್ಲಿ ಮಿಂಚಿ ಮತ್ತೆ ಅದೇ ಲೇಖನ ಪತ್ರಿಕೆಯಲ್ಲಿ ಬಂದ ಉದಾಹರಣೆ ನನಗೇ ಆಗಿದೆ.

  ಒಟ್ಟಾರೆ ನಿಮ್ಮ ಲೇಖನ ಕಾಲು ನೆಲದ ಮೇಲೆ ನಿಲ್ಲದ ಪತ್ರಕರ್ತರು, ಸಂಪಾದಕರನ್ನು ಕಣ್ಣು ತೆರೆಸಲಿ...

  ಧನ್ಯವಾದಗಳು.

  ReplyDelete
 7. ಈ ಬರಹವನ್ನು ನನ್ನ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದ್ದೇನೆ.
  ಪತ್ರಿಕೆಗಳಿಗೆ ಬರೆಯುತ್ತಲೇ, ಅವುಗಳ ಸಂಪಾದಕೀಯ ಪಾಲೀಸಿಗೆ ಒಗ್ಗದ ಲೇಖನಗಳನ್ನು ನನ್ನ ಬ್ಲಾಗಿನಲ್ಲಿ ಪ್ರಕಟಿಸುತ್ತಿದ್ದೆ. ನನ್ನ ನೋವಿಗೆ, ದುಗುಡಕ್ಕೆ, ಕಳವಳಕ್ಕೆ, ಚಿಂತನೆಗೆ ಇದೊಂದು ವೇದಿಕೆ. ಇದರಿಂದೇನಾದರೂ ಬದಲಾವಣೆಯಾದೀತೆಂಬುದು ದೂರದ ಮಾತು.ಆದರೆ ಸಮಾನ ಮನಸ್ಕರಲ್ಲಿ ಅದನ್ನು ಹಂಚಿಕೊಂಡೆನೆಂಬ ಸಮಾಧಾನ, ನಿರಾಳತೆ.
  ನನ್ನ ಬ್ಲಾಗ್ ಲಿಂಕ್;
  www.mounakanive.blogspot.com

  ಉಷಾಕಟ್ಟೆಮನೆ

  ReplyDelete
 8. ,ಬ್ಲಾಗಿನ ಮಿತ್ರರು ಯಾರ ಹಂಗಿಗೂ ಒಳಗಾಗ ಬೇಕಾಗಿಲ್ಲ ,ಅವರ ಆತ್ಮ ಸಂತೋಷಕ್ಕೆ ಬರೆಯುತ್ತಾರೆ. ಬೇರೆ ಮೀಡಿಯಾ ಬಗ್ಗೆ ಮಾತನಾಡಿ ಕೊಚ್ಚೆ ಹಾರಿಸಿ ಕೊಳ್ಳುವುದು ಬೇಡ . ನಮ್ಮದೇ ಲೋಕದಲ್ಲಿ ಒಳ್ಳೆಯ ಮಾಹಿತಿಗಳನ್ನು ಪರಸ್ಪರ ಪ್ರೀತಿಯಿಂದ ಹಂಚಿಕೊಂಡು ಮುಂದುವರೆಯೋಣ.ದಯವಿಟ್ಟು ಕೊಂಕು ನುಡಿಯದೆ ನಮ್ಮ ಪಾಡಿಗೆ ನಮ್ಮನ್ನು ಬಿಡಿ ಅಂತಾ ಟೀಕಾಕಾರರಿಗೆ ಹೇಳೋಣ , ಅವರಿಗೆ ಅರ್ಥವಾದರೆ ಸರಿ ಇಲ್ಲದಿದ್ದರೆ ದುರಹಂಕಾರಕ್ಕೆ ಉದಾಸೀನವೇ ಮದ್ದು !!! ಬ್ಲಾಗಿನಲ್ಲಿ ಪತ್ರಿಕೆ/ಟಿ.ವಿ.ಗಳಲ್ಲಿ ಬರದೆ ಇರುವ ಹಲವಷ್ಟು ಉತ್ತಮ ಮಾಹಿತಿ ಹರಿದುಬಂದಿದೆ. ಎಲ್ಲರೂ ಸೇರಿ ಹೇಳೋಣ ಬ್ಲಾಗರ್ಸ್ ಗೆ ಜೈ ಹೋ

  ReplyDelete
 9. ನಿಮ್ಮ ಬ್ಲಾಗ Sooper.
  ಸಂಪಾದಕೀಯಕ್ಕೆ ಜೈ ಹೋ...

  ReplyDelete
 10. ಚೆನ್ನಾಗಿದೆ, ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದೀರಿ...ಹಾಗಾಗಿ ನಮ್ಮ ಬ್ಲಾಗಲ್ಲೂ ಹಾಕಿದ್ದೇವೆ...ಒಮ್ಮೆ ನೋಡಿಬನ್ನಿ...
  http://yuvalahari.tk
  ಟೀಮ್ ಯುವಲಹರಿ

  ReplyDelete
 11. sampadakeeya nanaguuu sakhath esta ayeethu. pragathipara, janapara dhoranegalu nannannu aakarshisidavu. dusta, bhrasta jaathivadi pathrakartharige heege chaati bisi.

  ReplyDelete