Tuesday, January 4, 2011

ಎಲ್ಲ ಮೀಡಿಯಾ ಕಚೇರಿಗಳ ಟೇಬಲ್ಲುಗಳಲ್ಲೂ ನಾವಿದ್ದೇವೆ!

quo vadis Karnataka Journalism?

ಹೀಗೆ ಸಂಪಾದಕೀಯದ ಫೇಸ್‌ಬುಕ್ ವಾಲ್‌ನಲ್ಲಿ ಸ್ಕ್ರಾಪ್ ಎಸೆದವರು ಅಶೋಕ್ ಶೆಟ್ಟರ್. ನಾವೂ ಸಹ ಇದೇ ಪ್ರಶ್ನೆಯನ್ನು ಇಟ್ಟುಕೊಂಡು ಈ ಬ್ಲಾಗ್ ಶುರು ಮಾಡಿದ್ದೇವೆ. ಪ್ರಶ್ನೆಗಳು ಸಾವಿರಾರು ಇವೆ. ಕೇಳಿದ್ದಕ್ಕೆಲ್ಲ ಉತ್ತರ ಸಿಗುವ ಭರವಸೆಗಳೂ ಇಲ್ಲ. ಆದರೆ ಪ್ರಶ್ನೆಗಳು ಇರಲೇಬೇಕು. ಪ್ರಶ್ನಿಸುವವರೂ ಇರಬೇಕು.

ಪತ್ರಕರ್ತರು ಪ್ರಶ್ನಾತೀತರೆ? ಪ್ರಶ್ನಾತೀತರೆನಿಸಿಕೊಳ್ಳಲು ಅವರಿಗಿರುವ ವಿಶೇಷ ಅರ್ಹತೆಗಳಾದರೂ ಏನು? ರಾಜಕಾರಣಿಗಳಾಗಲಿ, ಮಠಾಧೀಶರಾಗಲಿ, ಅಧಿಕಾರಿಗಳಾಗಲಿ, ನ್ಯಾಯಾಧೀಶರಾಗಲಿ, ಪತ್ರಕರ್ತರಾಗಲಿ ಪ್ರಶ್ನಾತೀತರಾಗಿಹೋದರೆ ಆಗುವ ಸಮಸ್ಯೆಗಳೇನು? ಇನ್ನುಳಿದವರನ್ನೆಲ್ಲ ಪ್ರಶ್ನಿಸಲು ಪತ್ರಕರ್ತರಿದ್ದಾರೆ ನಿಜ, ಆದರೆ ಪತ್ರಕರ್ತರನ್ನು ಪ್ರಶ್ನಿಸುವವರು ಯಾರು? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು?

ನಾವು ಸಂಪಾದಕೀಯದ ಮೂಲಕ ಪತ್ರಕರ್ತರಿಗೇ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಒಂದು ಸಣ್ಣ ಪ್ರಯತ್ನವಷ್ಟೆ ನಮ್ಮದು.

ಕೇವಲ ಪತ್ರಕರ್ತರನ್ನು ದೂರಿ ಪ್ರಯೋಜನ ಇಲ್ಲ. ಯಾಕೆಂದರೆ ಕೆಟ್ಟು ಹೋಗಿರುವುದು ಕೇವಲ ಪತ್ರಕರ್ತರಲ್ಲ. ಎಲ್ಲ ಕ್ಷೇತ್ರಗಳ ಎಲ್ಲರೂ  ಕೆಟ್ಟಿದ್ದಾರೆ. ಒಟ್ಟು ಸಮಾಜದ ನೈತಿಕ ಮೌಲ್ಯಗಳ ಅಧಃಪತನಕ್ಕೆ ತಮ್ಮ ಕಾಣಿಕೆ ಸಲ್ಲಿಸುತ್ತಿದ್ದಾರೆ ಎಂದು ನಾಲ್ಕು ಗೋಡೆಗಳ ನಡುವೆ ಕುಳಿತು ಬರೆಯುವವರು ಸಹ ತಮ್ಮ ಎದುರೇ ವೃತ್ತಿ ಮೌಲ್ಯಗಳು ಸುಟ್ಟು ಉರಿದುಹೋಗುತ್ತಿದ್ದರೂ ಸುಮ್ಮನಿರುತ್ತಾರೆ. ಅವರು ವೈಯಕ್ತಿಕ ಮಟ್ಟದಲ್ಲಿ ನೀತಿ ಸಂಹಿತೆಗಳನ್ನು ಉಳಿಸಿಕೊಳ್ಳುತ್ತಾರೆ. ಸಮೂಹದ ಬಗ್ಗೆ ಅವರದು ಟೀಕೆ ಟಿಪ್ಪಣಿಗಳು ಮಾತ್ರ. ರಿಪೇರಿ ಕೆಲಸ ಅವರಿಂದಾಗುವುದಿಲ್ಲ. ಯಾಕೆಂದರೆ ಕೆಟ್ಟಿದೆ ಎಂದು ಹೇಳುವುದು ಮಾತ್ರ ಅವರ ಕೆಲಸ, ರಿಪೇರಿ ಮಾಡುವುದಲ್ಲ!

ಇವತ್ತು ಮಾಧ್ಯಮ ಕ್ಷೇತ್ರವನ್ನು ರಾಡಿಯೆಬ್ಬಿಸಿರುವುದು ಭ್ರಷ್ಟಾಚಾರ ಮಾತ್ರವಲ್ಲ. ಧರ್ಮಾಂಧತೆ ಮತ್ತು ಜಾತೀಯತೆಗಳು ಮೇರೆ ಮೀರಿವೆ. ರಾಜಕಾರಣಿಗಳಿಗಿಂತ ಹೆಚ್ಚು ಜಾತೀಯತೆಯನ್ನು ಪತ್ರಕರ್ತರೇ ಪ್ರದರ್ಶಿಸುತ್ತಿದ್ದಾರೆ. ರಾಜಕಾರಣಿಗಳಿಗಾದರೋ ಎಲ್ಲ ಜಾತಿಯವರ ಓಟು ಬೇಕು. ಪತ್ರಕರ್ತರಿಗೆ ಆ ಕಷ್ಟವೂ ಇಲ್ಲವಲ್ಲ!

ನಾವು ಪ್ರಶ್ನೆ ಮಾಡಲು ಆರಂಭಿಸಿದ್ದೇವೆ. ಇದು ಒಳ್ಳೆಯ ಆರಂಭ. ಹತ್ತು ದಿನಗಳಲ್ಲಿ ೫೦೦೦ ಹಿಟ್ಸ್, ದಿನವೊಂದಕ್ಕೆ ಸರಾಸರಿ ೫೦೦ ಹಿಟ್ಸ್! ಪ್ರಶ್ನಿಸುವವರು ಇನ್ನೂ ಬದುಕಿರುವುದಕ್ಕೆ ಇದು ಸಾಕ್ಷಿ. ಈಗಾಗಲೇ ಸಾಕಷ್ಟು ಮಂದಿ ಪ್ರತಿಕ್ರಿಯೆ ನೀಡಿದ್ದಾರೆ. ವೈಯಕ್ತಿಕ ನಿಂದನೆಯ ಕಮೆಂಟ್‌ಗಳನ್ನು ಹೊರತುಪಡಿಸಿ ಉಳಿದವನ್ನು ಪ್ರಕಟಿಸಿದ್ದೇವೆ. ಪ್ರಕಟವಾಗಿರುವುದರಲ್ಲಿ ಸಂಪಾದಕೀಯವನ್ನೂ ಪ್ರಶ್ನಿಸುವವರಿದ್ದಾರೆ ಎನ್ನುವುದು ಬಹಳ ಮುಖ್ಯ.

ಒಂದಂತೂ ಸ್ಪಷ್ಟಪಡಿಸುತ್ತೇವೆ. ನಾವು ಯಾರ ಮೇಲೂ ದ್ವೇಷವಿಲ್ಲ, ಒಲವೂ ಇಲ್ಲ. ನಮಗೆ ಇಂಥದ್ದು ಅಂಥದ್ದು ಅನ್ನುವ ಇಸಂಗಳು ಇಲ್ಲ. ನಮಗೆ ಸರಿ ಅಲ್ಲ ಅನ್ನಿಸಿದ್ದನ್ನು ಹೇಳುತ್ತೇವೆ, ನಾವು ಹೇಳಿದ್ದು ಸರಿಯಿಲ್ಲ ಎಂಬ ಅಭಿಪ್ರಾಯವಿರುವವರೂ ಪ್ರತಿಕ್ರಿಯೆ ನೀಡಬಹುದು.

ಎಲ್ಲ ಮೀಡಿಯಾ ಕಚೇರಿಗಳ ಟೇಬಲ್ಲುಗಳಲ್ಲೂ ನಾವಿದ್ದೇವೆ. ಸತ್ಯ ಹೇಳುತ್ತೇವೆ ಎಂಬ ವಿಶ್ವಾಸದಲ್ಲಿ ಸಾಕಷ್ಟು ಮಾಹಿತಿಗಳನ್ನು ಇ-ಮೇಲ್ ಮೂಲಕವೂ ಅಪರಿಚಿತ ಗೆಳೆಯರು ಕಳುಹಿಸುತ್ತಿದ್ದಾರೆ. ಇದು ಒಂದು ಸಣ್ಣ ಆಂದೋಲನ. ಮಾಧ್ಯಮರಂಗ ಪರಿಶುದ್ಧವಾಗಿರಬೇಕು ಎಂದು ಬಯಸುವವರೆಲ್ಲ ಇದರಲ್ಲಿ ಪಾಲ್ಗೊಳ್ಳಬಹುದು.

ಕಡೆಯದಾಗಿ ಚರ್ಚೆಯಾಗುತ್ತಿರುವ ಒಂದು ವಿಷಯದ ಕುರಿತೂ ಪ್ರಸ್ತಾಪ ಮಾಡಿಬಿಡುತ್ತೇವೆ. ಯಾರು ಸಂಪಾದಕೀಯವನ್ನು ನಡೆಸುತ್ತಾರೆ ಎಂಬ ಗುಸುಗುಸು ಶುರುವಾಗಿದೆ. ಅನಾಮಧೇಯರಾಗಿದ್ದರೆ ವಿಶ್ವಾಸಾರ್ಹತೆ ಉಳಿಯುವುದಿಲ್ಲ ಎಂದು ಓದುಗರೊಬ್ಬರು ಮೊದಲ ಪೋಸ್ಟ್‌ಗೇ ಪ್ರತಿಕ್ರಿಯಿಸಿದ್ದರು. ಅವರ ಅಭಿಪ್ರಾಯವನ್ನು ಗೌರವಿಸುತ್ತೇವೆ.

ಇವತ್ತಿನ ಆಧುನಿಕ ಯುಗದಲ್ಲಿ ನಾವು ಯಾರು ಎಂಬುದನ್ನು ಕಂಡುಹಿಡಿಯುವುದು ಅಷ್ಟು ಕಷ್ಟದ ಕೆಲಸವೇನೂ ಅಲ್ಲ. ಹೇಳುವ ಸಂದರ್ಭ ಬಂದಾಗ ನಾವೇ ಹೇಳುತ್ತೇವೆ. ಅಲ್ಲಿಯವರೆಗೆ ಕುತೂಹಲ ಹಾಗೇ ಉಳಿಯಲಿ.

ಕೊನೆ ಕುಟುಕು: ಇದು ಸೀರಿಯಸ್ ವಿಷಯಗಳ ಕುರಿತು ಚರ್ಚಿಸುವ ಬ್ಲಾಗ್ ಆದರೂ ಮಧ್ಯೆ ಮಧ್ಯೆ ಹಾಸ್ಯ, ಗೇಲಿ ಇದ್ದೇ ಇರುತ್ತದೆ. ಸಣ್ಣಪುಟ್ಟ ಗೇಲಿಯನ್ನು ಸಹಿಸಿಕೊಳ್ಳುವ ಉದಾರತೆ ಎಲ್ಲರದೂ ಆಗಬೇಕು.

9 comments:

 1. ಧರ್ಮಾಂಧತೆ ಮತ್ತು ಜಾತೀಯತೆ Vijay Karnataka and Prajavani good example. VK and PV full of Sirasi people. But, see who are the owners. They are all belongs to smaller OBC communities, Non Hindus,GSBs, Majority Lingayath and not belongs to sirasi people. But,who are the editors & editorial staff belongs to again one small group..Why ?

  ReplyDelete
 2. ಕೇವಲ ಪತ್ರಕರ್ತರನ್ನು ದೂರಿ ಪ್ರಯೋಜನ ಇಲ್ಲ. ಯಾಕೆಂದರೆ ಕೆಟ್ಟು ಹೋಗಿರುವುದು ಕೇವಲ ಪತ್ರಕರ್ತರಲ್ಲ. ಎಲ್ಲ ಕ್ಷೇತ್ರಗಳ ಎಲ್ಲರೂ ಕೆಟ್ಟಿದ್ದಾರೆ.
  ಹೀಗೆ ಬರೆದವರು ಪ್ರಜಾವಾಣಿಯ ದಿನೇಶ್ ಅಮೀನ್ ಮಟ್ಟು

  ReplyDelete
 3. ಒಳ್ಳೆಯ ಉದ್ದೇಶ ಇಟ್ಟುಕೊಂಡು ಹೊರಟಿದ್ದೀರಿ. ಒಳ್ಳೆಯದಾಗಲಿ
  -ಸಹನಾ

  ReplyDelete
 4. Very good, Go ahead

  ReplyDelete
 5. quo vadis Karnataka Journalism?
  Bharavegalu kanuttilla.

  ReplyDelete
 6. ನಮಸ್ಕಾರ ಸಂಪಾದಕೀಯ ತಂಡಕ್ಕೆ,
  ’ಸಂಪಾದಕೀಯ’ವನ್ನು ಬ್ಲಾಗ್ ಪ್ರಪಂಚದಲ್ಲಿ ಮಾಧ್ಯಮದ ಸುತ್ತ ಶುರುವಾಗಿರುವ ಹೊಸ ಸಂಚಲನವೆಂದೇ ವ್ಯಾಖ್ಯಾನಿಸಬಹುದು. ಅಭಿನಂದನೆಗಳು.
  -Vasanth

  ReplyDelete
 7. good try. all the best. we encourage such movement.

  ReplyDelete
 8. few days back I received a sms on my mobile ph. it is like this..
  Survey says,People who are at high risk of getting HIV are truckers. and
  People who are at high risk of getting corruptible
  are journalists !

  ReplyDelete
 9. ಸಂಪಾದಕೀಯ ಬ್ಲಾಗ್‍ ನ ಅಷ್ಟೂ ಬರಹಗಳನ್ನು ಒಂದು ಸುತ್ತು ಓದಿದೆ. ನಿಜಕ್ಕೂ ತುಂಬಾ ತಣ್ಣನೆಯ ಬ್ಲಾಗ್‍ ಲೋಕವನ್ನು ಚೂರು ಬೆಚ್ಚಗೆ ಮಾಡುತ್ತಿದ್ದೀರಿ. ಈ ಹೊತ್ತಿನ ಎಲ್ಲರೂ ಪ್ರಶ್ನಿಸಿಕೊಳ್ಳಬೇಕ ಬಹಳ ಮುಖ್ಯವಾದ ಪ್ರಶ್ನೆಗಳನ್ನು ನೀವು ಎತ್ತುತ್ತಿದ್ದೀರಿ. ಆ ಕಾರಣಕ್ಕಾಗಿ ನಿಮ್ಮ ಬ್ಲಾಗ್‍ನ ವಿಸ್ತಾರ ಹೆಚ್ಚಾಗಲಿ, ಅದು ಕಿಂಚಿತ್ತಾದರೂ ಪತ್ರಕರ್ತ ಲೋಕದ ಕೊಳಕನ್ನು ತೊಳೆಯಲಿ ಎಂದು ಆಶಿಸುವೆ.

  ReplyDelete