Tuesday, January 25, 2011

ನಾಳೆ ದಂಡಾವತಿ ಕೃತಿಗಳ ಬಿಡುಗಡೆ: ಅಭಿನಂದನೆಗಳು


ನಾಳೆ ಪ್ರಜಾವಾಣಿ ಸಹಸಂಪಾದಕ ಪದ್ಮರಾಜ ದಂಡಾವತಿಯವರ ನಾಲ್ಕನೇ ಆಯಾಮ ಅಂಕಣ ಬರಹಗಳ ಎರಡು ಸಂಪುಟ ಬಿಡುಗಡೆ, ನಯನ ಸಭಾಂಗಣದಲ್ಲಿ ಮಧ್ಯಾಹ್ನ ೪ಗಂಟೆಗೆ. ಸಾಹಿತಿ ಚಂದ್ರಶೇಖರ ಕಂಬಾರ, ಪ್ರಜಾವಾಣಿ ಸಂಪಾದಕ ಕೆ.ಎನ್.ಶಾಂತಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮನು ಬಳಿಗಾರ್ ಅತಿಥಿಗಳು. ಕೃತಿಗಳ ಪ್ರಕಾಶಕರು ಸಪ್ನ ಬುಕ್ ಹೌಸ್.

ದಂಡಾವತಿಯವರು ಮೂಲತಃ ಬಿಜಾಪುರದವರು, ಪ್ರತಿಭಾವಂತರು. ಪ್ರಜಾವಾಣಿ ಸೇರುವ ಮುನ್ನ ಶೂದ್ರ ಪತ್ರಿಕೆಯಲ್ಲಿ ಕೆಲಕಾಲ ದುಡಿದಿದ್ದರು. ದಿ ಪ್ರಿಂಟರ‍್ಸ್ ಮೈಸೂರು ಸಂಸ್ಥೆಗೆ ಸೇರಿದ ನಂತರ ಹಲವು ವಿಭಾಗಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕ ಮಾಧ್ಯಮ ಅಕಾಡಮಿ  ಪತ್ರಿಕೋದ್ಯಮ ಕುರಿತ ದಂಡಾವತಿಯವರ ಎರಡು ಕೃತಿಗಳನ್ನು ಪ್ರಕಟಿಸಿದೆ. ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಹಲವು ಪ್ರಶಸ್ತಿಗಳು ಇವರಿಗೆ ಸಂದಿದೆ.

ಇಂಥ ಹಿರಿಯ ಪತ್ರಕರ್ತರೂ ಒಮ್ಮೊಮ್ಮೆ ಎಡವಿಬಿಡುತ್ತಾರೆ. ಎಡವಿದ್ದು ಇವತ್ತಿನ ಆಧುನಿಕಯುಗದಲ್ಲಿ ನಿಚ್ಚಳವಾಗಿ ಎಲ್ಲರಿಗೂ ಕಾಣಸಿಗುತ್ತದೆ. ಇಲ್ಲಿ ಒಂದು ಉದಾಹರಣೆ ನಿಮ್ಮ ಮುಂದಿದೆ.

ಕಳೆದ ವರ್ಷ ನಡೆದ ಗುಲ್ಬರ್ಗ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ದಂಡಾವತಿಯವರು ತಮ್ಮ ನಾಲ್ಕನೇ ಆಯಾಮದಲ್ಲಿ ಉಪಚುನಾವಣೆಗಳ ಕುರಿತಾಗಿ ಬರೆದಿದ್ದರು. ನಿಷ್ಠುರವಾಗಿ ಹೇಳಬೇಕೆಂದರೆ ಅದು ಅವರ ಅಂಕಣಕ್ಕೆ ಒಗ್ಗುವ ವಿಷಯವೇ ಆಗಿರಲಿಲ್ಲ. ವರದಿಗಾರನೊಬ್ಬನ ಚುನಾವಣಾ ವಿಶ್ಲೇಷಣೆಯ ಧಾಟಿಯಲ್ಲಿ ಬರಹ ಸಾಗುತ್ತದೆ.

ಚುನಾವಣೆಯ ಕುರಿತು ಬರೆಯುತ್ತ ದಂಡಾವತಿಯವರು ಒಂದು ವಿಷಯವನ್ನು ತೇಲಿಬಿಟ್ಟರು. ಈ ಸಾಲುಗಳನ್ನು ಗಮನಿಸಿ: ಬಿಜೆಪಿ ಆಂತರಿಕವಾಗಿ ಕುದಿಯುತ್ತಿರುವಾಗಲೇ ಅತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಬೇರೆಯದೇ ಲೆಕ್ಕ ಹಾಕಿದಂತಿದೆ. ದೇವೇಗೌಡರಿಗೆ ನಿಕಟವಾಗಿರುವ ಧರ್ಮಸಿಂಗ್, ಗುಲಬರ್ಗಾ ದಕ್ಷಿಣ ಕ್ಷೇತ್ರವನ್ನು ನಮಗೆ ಬಿಟ್ಟುಕೊಡಿ, ಕಡೂರು ಕ್ಷೇತ್ರವನ್ನು ನಿಮಗೆ ಬಿಟ್ಟುಕೊಡುತ್ತೇವೆ ಎಂದು ಮಾತಾಡಿದ್ದಾರೆ ಎಂಬ ಗಾಳಿ ಸುದ್ದಿ ಹರಡಿದೆ.

ಈ ಅಂಕಣ ಪ್ರಕಟಗೊಂಡಿದ್ದು ಸೆ.೫ರಂದು. ಪ್ರಜಾವಾಣಿಯಲ್ಲಿ ಇಂಥದ್ದೊಂದು ಸುದ್ದಿ ಪ್ರಕಟಗೊಂಡರೆ ಅದರ ಪರಿಣಾಮ ತೀವ್ರವಾಗಿರುತ್ತದೆ. ಅದರಲ್ಲೂ ಪತ್ರಿಕೆಯ ನೇತೃತ್ವ ವಹಿಸಿರುವ ಸಹಸಂಪಾದಕರೇ ಬರೆದರೆ?

ಎಚ್.ಡಿ.ದೇವೇಗೌಡರು ಸುಮ್ಮನಿರಲಿಲ್ಲ. ಸೆ.೮ರ ವಿಜಯ ಕರ್ನಾಟಕದ ಮುಖಪುಟದಲ್ಲೇ ಗೌಡರ ವಿಶೇಷ ಸಂದರ್ಶನ ಪ್ರಕಟಗೊಂಡಿತು. ಒಳ ಒಪ್ಪಂದ: ಮಾಧ್ಯಮ ವರದಿಗೆ ಆಕ್ರೋಶ ಎಂಬ ತಲೆಬರಹದ ಈ ಸಂದರ್ಶನದಲ್ಲಿ ಗೌಡರು ಈ ಗಾಳಿಸುದ್ದಿಯನ್ನು ತಿರಸ್ಕರಿಸಿದರಲ್ಲದೆ, ಈ ರೀತಿ ಸುದ್ದಿ ಹಬ್ಬಿಸುವವರಿಗೆ ನಾಚಿಕೆ ಇಲ್ಲ ಎಂದು ಗುಡುಗಿದರು.

ನಂತರ ಚುನಾವಣೆ ನಡೆಯಿತು. ಗೆದ್ದಿದ್ದು ಜೆಡಿಎಸ್ ಅಭ್ಯರ್ಥಿ.

ವಿಷಯ ಏನು ಅಂದರೆ, ಇದರಲ್ಲಿ ದಂಡಾವತಿಯವರ ದುರುದ್ದೇಶಗಳೇನೂ ಇರಲಿಲ್ಲ. ಅವರಿಗೆ ಮಾಹಿತಿ ಒದಗಿಸಿದ ಗುಲ್ಬರ್ಗದ ಹಿರಿಯ ಸಿಬ್ಬಂದಿ ಬೇಕೆಂದೇ ದಾರಿ ತಪ್ಪಿಸಿದ್ದರು. ಈ ಉಪಚುನಾವಣೆಯಲ್ಲಿ ವಿಪರೀತ ಆಕ್ಟಿವ್ ಆಗಿದ್ದ ಆ ಮಹಾನುಭಾವ ತಮ್ಮ ಸಂಪಾದಕರಿಂದಲೇ ಇಂಥದ್ದನ್ನು ಬರೆಸುವ ಹಿಂದೆ ಯಾವ ಉದ್ದೇಶವಿತ್ತೋ ಯಾರು ಬಲ್ಲರು? ಇದೆಲ್ಲ ಗೊತ್ತಾದ ನಂತರ ದಂಡಾವತಿ ಆ ತಮ್ಮ ಶಿಷ್ಯನನ್ನು ತರಾಟೆಗೆ ತೆಗೆದುಕೊಂಡರಾ? ಗೊತ್ತಿಲ್ಲ.

ಮಾಧ್ಯಮ ವಿದ್ಯಾರ್ಥಿಗಳಿಗೆ ಪಠ್ಯವಾಗುವಂಥ ಪುಸ್ತಕಗಳನ್ನು ಬರೆದ ದಂಡಾವತಿಯಂಥವರೇ ಹೀಗೆ ಎಡವಿದರೆ ಹೇಗೆ? ಪತ್ರಕರ್ತರು ಬರೆಯುವಾಗ ಎಷ್ಟು ಎಚ್ಚರಿಕೆಯಿಂದಿರಬೇಕು ಎಂಬುದನ್ನು ಹೇಳಲು ಈ ಉದಾಹರಣೆಯನ್ನು ನೀಡಿದೆವಷ್ಟೆ.

ನಾಳೆ ದಂಡಾವತಿಯವರ ಪುಸ್ತಕಗಳ ಬಿಡುಗಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲಿ, ಇಂಥ ಇನ್ನೂ ಹಲವು ಸಂಪುಟಗಳನ್ನು ಅವರು ಹೊರತರುವಂತಾಗಲಿ ಎಂದು ಆಶಿಸುತ್ತೇವೆ. ದಂಡಾವತಿಯವರಿಗೆ ಅಭಿನಂದನೆಗಳು.

ಮರೆತಿದ್ದ ಮಾತು: ಇಲ್ಲಿ ಬಳಸಿರುವ ಪದ್ಮರಾಜ ದಂಡಾವತಿಯವರ ಫೋಟೋ ಶ್ರೀವತ್ಸ ಜೋಷಿಯವರ ಕ್ಯಾಮರಾದಿಂದ ತೆಗೆದದ್ದು. ಮೀಡಿಯಾ ಮಿರ್ಚಿಯಲ್ಲಿ ಪ್ರಕಟಗೊಂಡಿದ್ದನ್ನು ಕದ್ದಿದ್ದೇವೆ. ಕೇಳದೇ ಬಳಸಿದ್ದಕ್ಕೆ ಕ್ಷಮೆಯಿರಲಿ.

3 comments:

  1. ಕರ್ನಾಟಕ ಮಾಧ್ಯಮ ಅಕಾಡಮಿ ದಂಡಾವತಿಯವರ ಪತ್ರಿಕೋದ್ಯಮ ಕುರಿತ ಎರಡು ಕೃತಿಗಳನ್ನು ಪ್ರಕಟಿಸಿದೆ Adarallu mistakes nusilive...

    ReplyDelete
  2. Mr.H.D.Devegowda is far more alert,sensitive than any good journalist. When Ramakrishna Upadhya wrote piece In VIJAY TIMES accusing HDD of not holding protests rallies etc...HDD fought back and VT published half page rejoinder and Devegowda gave all details of protests in his life time.
    Think twice while writing against Mr.Gowda.
    Upadhya is now holds top post in DH.

    ReplyDelete
  3. ಪದ್ಮರಾಜ ದಂಡಾವತಿಯವರಿಗೆ ಅಭಿನಂದನೆಗಳು. ಇನ್ನಾದರೂ ಅವರು ಕೇಸರಿ ಕಪಿಮುಷ್ಠಿಯಿಂದ ಬಿಡುಗಡೆಯಾಗಿ ಜನಪರವಾಗಿ ಬರೆಯುವಂತಾಗಲಿ

    ReplyDelete