Thursday, March 3, 2011

ಚಿದಾನಂದರಿಗೆ ಆಗಿದ್ದು ಅವಮಾನವಾದರೆ, ಚಂಪಾರಿಗೆ ಆಗಿದ್ದು ಅವಮಾನವಲ್ಲವೆ?


ಆದಿಕವಿ ಪಂಪ ಪ್ರಶಸ್ತಿ ಅಂತ್ಯ ಕವಿ ಚಂಪಾಗೆ ಏಕಿಲ್ಲ? ಎಂಬ ವಿಶೇಷ ಸುದ್ದಿ ನಿನ್ನೆ ಕನ್ನಡಪ್ರಭದಲ್ಲಿ ಪ್ರಕಟಗೊಂಡಿದೆ. ಕನ್ನಡಪ್ರಭದ ಸಹಾಯಕ ಸಂಪಾದಕ ಪಿ.ತ್ಯಾಗರಾಜ್ ಇದನ್ನು ಬರೆದಿದ್ದಾರೆ. ಕನ್ನಡಪ್ರಭ ಇವತ್ತಿನ ಸಂಚಿಕೆಯಲ್ಲಿ ಈ ವರದಿಯ ಕುರಿತು ಕೆಲವು ಪ್ರತಿಕ್ರಿಯೆಗಳನ್ನೂ ಪ್ರಕಟಿಸಲಾಗಿದೆ.

ಇತ್ತೀಚಿಗಷ್ಟೆ ಡಾ.ಎಂ.ಚಿದಾನಂದ ಮೂರ್ತಿಯವರಿಗೆ ಗೌರವ ಡಾಕ್ಟರೇಟ್ ತಡೆಹಿಡಿದ ರಾಜ್ಯಪಾಲರು ವಿವಾದಕ್ಕೆ ಗುರಿಯಾಗಿದ್ದರು. ಈ ಸಂಬಂಧ ದೊಡ್ಡ ಹಾಹಾಕಾರವೇ ಉಂಟಾಯಿತು. ಪ್ರಜಾವಾಣಿ ಪತ್ರಿಕೆ ಮೊದಲು ಈ ವಿವಾದದ ಕುರಿತು ಸ್ಪಂದಿಸಿ, ಹಲವು ಗಣ್ಯರನ್ನು ಮಾತನಾಡಿಸಿ ರಾಜ್ಯಪಾಲರ ನಡೆಯ ಕುರಿತು ಬೆಳಕು ಚೆಲ್ಲಿತು. ನಂತರ ಇತರ ಮೀಡಿಯಾಗಳು ಸಹ ಈ ಕುರಿತು ಹೆಚ್ಚು ಪ್ರಚಾರ ನೀಡಿದವು.

೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯಲ್ಲಿ ಸಾಹಿತಿ ಡಾ.ಯು.ಆರ್.ಅನಂತಮೂರ್ತಿ. ರಾಜ್ಯಪಾಲರ ನಡೆಯನ್ನು ಖಂಡಿಸಿದರು. ಅನಾರೋಗ್ಯವಿದ್ದರೂ ಕವಿಗೋಷ್ಠಿಗೆ ಬಂದಿದ್ದೇನೆ, ಇದನ್ನು ಹೇಳಲೇಬೇಕು ಎಂದು ಇಲ್ಲಿಗೆ ಬಂದೆ ಎಂದು ಅವರು ವಿಷಯದ ಗಂಭೀರತೆಯನ್ನು ಇನ್ನಷ್ಟು ಹೆಚ್ಚಿಸಿದ್ದರು. ಅದಾದ ನಂತರ ಒಂದಷ್ಟು ಪ್ರತಿಭಟನೆಗಳೂ ನಡೆದವು. ಸಾಹಿತ್ಯ ಸಮ್ಮೇಳನದ ಸಮಾರೋಪದ ಹೊತ್ತಿಗೆ ಒಂದಷ್ಟು ಜನ  ಭಿತ್ತಿಪತ್ರಗಳನ್ನು ಹಿಡಿದು ನಿಂತು ಸಮ್ಮೇಳನದಲ್ಲಿ ರಾಜ್ಯಪಾಲರ ತೀರ್ಮಾನದ ವಿರುದ್ಧ ಖಂಡನಾ ನಿರ್ಣಯ ಅಂಗೀಕಾರವಾಗಬೇಕು ಎಂದು ಪ್ರತಿಭಟಿಸಿದರು. ಸಮ್ಮೇಳನದ ವೇದಿಕೆಯಲ್ಲಿ ಈ ಕುರಿತು ನಿರ್ಣಯವೂ ಅಂಗೀಕಾರವಾಯಿತು.

ಈಗ ಚಂಪಾ ಸರದಿ. ಚಿದಾನಂದಮೂರ್ತಿಯವರಿಗೆ ಗೌರವ ಡಾಕ್ಟರೇಟ್ ತಡೆಹಿಡಿದ ರಾಜ್ಯಪಾಲರ ಕ್ರಮ ಇಡೀ ರಾಜ್ಯಕ್ಕಾದ ಅವಮಾನವಾದರೆ ಚಂಪಾ ಅವರಿಗೆ ಪಂಪ ಪ್ರಶಸ್ತಿ ಕೊಡಲು ಒಪ್ಪದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕ್ರಮ ರಾಜ್ಯಕ್ಕೆ ಮಾಡಿದ ಅಪಮಾನವಲ್ಲವೆ?

ಈ ಎರಡೂ ಘಟನೆಗಳಿಗೆ ಏನಾದರೂ ವ್ಯತ್ಯಾಸವಿದೆಯೇ? ಹಾಗೆ ನೋಡಿದರೆ, ಗೌರವ ಡಾಕ್ಟರೇಟ್‌ಗಿಂತ ಪಂಪ ಪ್ರಶಸ್ತಿಯೇ ದೊಡ್ಡದು. ಸಿಂಡಿಕೇಟ್ ನಿರ್ಧಾರವನ್ನು ತಳ್ಳಿಹಾಕುವ ಅಧಿಕಾರ ರಾಜ್ಯಪಾಲರಿಗಿರುತ್ತದೆ. ಆದರೆ ಗಣ್ಯರ ಸಮಿತಿ ಪಂಪ ಪ್ರಶಸ್ತಿಗೆ ಒಬ್ಬ ಹಿರಿಯ ಸಾಹಿತಿಯನ್ನು ಆಯ್ಕೆ ಮಾಡಿದ ನಂತರ ಅದನ್ನು ತಿರಸ್ಕರಿಸುವ ನೈತಿಕ ಅಧಿಕಾರ ಒಬ್ಬ ಮುಖ್ಯಮಂತ್ರಿಗೆ ಇರುವುದಿಲ್ಲ.

ಚಿದಾನಂದಮೂರ್ತಿಗಳ ಚಿಂತನೆಗಳ ಬಗ್ಗೆ ತೀವ್ರಸ್ವರೂಪದ ಭಿನ್ನಾಭಿಪ್ರಾಯ ಇಟ್ಟುಕೊಂಡವರೂ ಸಹ, ಅವರು ಸಂಶೋಧನಾ ಕ್ಷೇತ್ರದಲ್ಲಿ ಮಾಡಿರುವ ಸಾಧನೆಯ ಹಿನ್ನೆಲೆಯಲ್ಲಿ  ಡಾಕ್ಟರೇಟ್  ತಡೆಹಿಡಿದದ್ದು ತಪ್ಪು ಎಂದರು. ಇದೇ ಮಾನದಂಡವಿಟ್ಟುಕೊಂಡು ಚಂಪಾ ಕುರಿತು ಭಿನ್ನಾಭಿಪ್ರಾಯ ಇಟ್ಟುಕೊಂಡವರೂ ಮುಖ್ಯಮಂತ್ರಿಗಳ ನಿಲುವನ್ನು ಖಂಡಿಸಬೇಕಿತ್ತಲ್ಲವೇ? ಅಷ್ಟಕ್ಕೂ ಕನ್ನಡ ಸಾಹಿತ್ಯಕ್ಕೆ, ಚಳವಳಿಗೆ ಚಂಪಾ ಅವರ ಕೊಡುಗೆಯೇನು ಕಡಿಮೆಯೇ?

ಚಿದಾನಂದ ಮೂರ್ತಿಗಳ ವಿಷಯದಲ್ಲಿ ಎದ್ದ ವಿವಾದ, ಹಾಹಾಕಾರ ಈಗೇಕೆ ಆಗುತ್ತಿಲ್ಲ? ಯಾಕೆ ಡಾ.ಯು.ಆರ್.ಅನಂತಮೂರ್ತಿ ಮೌನವಾಗಿದ್ದಾರೆ? ಯಾಕೆ ಬರಗೂರು ರಾಮಚಂದ್ರಪ್ಪನವರು ಮಾತನಾಡುತ್ತಿಲ್ಲ. ಸಮ್ಮೇಳನದ ವೇದಿಕೆಯಲ್ಲಿ ಭಿತ್ತಿ ಪತ್ರ ಹಿಡಿದು ತಂದವರು ಎಲ್ಲಿ ಹೋದರು? ಮೈಸೂರು ಚೌಕದಲ್ಲಿ ಪ್ರತಿಭಟನೆ ನಡೆಸಿದವರೇಕೆ ಬಾಯಿಬಿಡುತ್ತಿಲ್ಲ?

ಬೇರೆಯವರ ವಿಷಯ ಹಾಗಿರಲಿ, ಕನ್ನಡಪ್ರಭ ಹೊರತುಪಡಿಸಿ ಉಳಿದ ಮೀಡಿಯಾಗಳು ಯಾಕೆ ಸುಮ್ಮನಿವೆ? ಇದು ಕನ್ನಡಪ್ರಭ ಹೊರಗೆ ತೆಗೆದ ಸುದ್ದಿ ಎಂಬ ಕಾರಣಕ್ಕೆ ಈ ಮೌನವೇ? ಯಾರು ಬೆಳಕಿಗೆ ತಂದರೇನು ಸುದ್ದಿ ಸುದ್ದಿಯೇ ಅಲ್ಲವೇ? ಇದರಲ್ಲಿ ಎಂಥ ಇಗೋಯಿಸಂ?

ಒಂದು ವೇಳೆ ಇದೇ ಕಾರಣಕ್ಕೆ ಬೇರೆ ಮಾಧ್ಯಮಗಳು ಪಂಪ ಪ್ರಶಸ್ತಿ ಕುರಿತ ವಿವಾದವನ್ನು ನಿರ್ಲಕ್ಷಿಸುತ್ತಿದ್ದರೆ, ಈ ಹುಸಿಪ್ರತಿಷ್ಠೆಯನ್ನು ಈ ಮೀಡಿಯಾಗಳು ಬಿಡುವುದು ಯಾವಾಗ?

14 comments:

 1. ಪ್ರಚಾರ .... ಅಪಪ್ರಚಾರ.. ಮಾಡೋದನ್ನು ಬೇರೆಯವರು BJP ಪಕ್ಷದವರಿಂದ ಕಲಿಯಬೇಕು.....

  ReplyDelete
 2. Yes, that's right!!

  Chimu & Champa means Chi-Cha are equal & opposite, we need respect both.

  Champa deserve for Pampa Prashasti.

  Thanks to Sampadakeeya to raise this issue.

  ReplyDelete
 3. ದೆಲ್ಲ ಸರಿ, ಸಂಪಾದಕೀಯ ಬರೀ ಕನ್ನಡ ಪ್ರಭಾ ದ ಹೊಗಳಿಕೆಗೆ ಮೀಸಲಿಟ್ಟಂತೆ ತೋರುತ್ತದೆ.ಭಟ್ಟರ ಫ್ಯಾನ್ ಈ ಬ್ಲಾಗ್ ಓನೆರ್ ಅಂತ ನಮಗಿದ್ದ ಅನುಮಾನ ಈಗ ದೂರಾಗಿದೆ.ಬಡ್ಜೆಟ್ ಸುದ್ದಿಯಲ್ಲಿ ಕನ್ನದಪ್ರಭವೇ ಮುಂದೆ ಎಂದಿದ್ದ ಸಂಪಾದಕೀಯ ಬ್ಲಾಗ್ ಈಗ ಮತ್ತೆ ಅದೇ ಕನ್ನಡಪ್ರಭ ಹೊಗಳುತ್ತೆ . ಇತರ ಕನ್ನಡ ಪತ್ರಿಕೆಗಳನ್ನು ಲೆಕ್ಕಕ್ಕೇ ಇಟ್ಟಿಲ್ಲ ಅನ್ಸುತ್ತೆ.
  ಇರಲಿ, ಚಂಪಾ ಅವರಿಗೆ ಪಂಪ ಪ್ರಶಸ್ತಿ ವಿಳಂಬ ಆಗಿದ್ದಕ್ಕೆ ತ್ಯಾಗರಾಜ್ ಅವರ ಲೇಖನವು , ಮುಖ್ಯಮಂತ್ರಿ ಅವರನ್ನು ಮತ್ತೆ ಬ್ಯಾಟಿಂಗ್ ಆಡುವುದಕ್ಕೆ ಹಾಕಿರುವ ಪೀಠಿಕೆ ಅಂತ ತಿಳಿದರೆ ಏನೂ ತಪ್ಪಾಗದು.ವ್ಯಕ್ತಿಗತ ಟೀಕೆಗಿಂತ ವ್ಯವಸ್ಥೆ ಕಡೆ ಗಮನ ಹರಿದರೆ ಕ.ಪ್ರ. ಕೂಡ ನಂಬರ್ ೧ ಆಗಬಹುದು.

  ReplyDelete
 4. ಯಾಕೋ ಸಂಪಾದಕೀಯವೂ ಅನಗತ್ಯ ವಿಚಾರಗಳ ಮೊರೆ ಹೋಗುತ್ತಿದೆ ಏನೊ ಅನಿಸುತ್ತದೆ. ಡಾಕ್ಟರೇಟ್+ಪ್ರಶಸ್ತಿಗಳಿಗೆ ಲಾಭಿ ನೆಡೆಯುತ್ತವೆ. ಇವೆರಡು ಇದೀಗ ಮಹತ್ವ ಕಳೆದುಕೊಂಡಿವೆ.

  ಚಿದಾನಂದ ಮೂರ್ತಿಗಳ ವಿಷಯದಲ್ಲಿ ಎದ್ದ ವಿವಾದ, ಹಾಹಾಕಾರ ಈಗೇಕೆ ಆಗುತ್ತಿಲ್ಲ? ಯಾಕೆ ಡಾ.ಯು.ಆರ್.ಅನಂತಮೂರ್ತಿ ಮೌನವಾಗಿದ್ದಾರೆ? ಯಾಕೆ ಬರಗೂರು ರಾಮಚಂದ್ರಪ್ಪನವರು ಮಾತನಾಡುತ್ತಿಲ್ಲ. ಸಮ್ಮೇಳನದ ವೇದಿಕೆಯಲ್ಲಿ ಭಿತ್ತಿ ಪತ್ರ ಹಿಡಿದು ತಂದವರು ಎಲ್ಲಿ ಹೋದರು? ಮೈಸೂರು ಚೌಕದಲ್ಲಿ ಪ್ರತಿಭಟನೆ ನಡೆಸಿದವರೇಕೆ ಬಾಯಿಬಿಡುತ್ತಿಲ್ಲ? ಎನ್ನುವ ಸಂಪಾದಕೀಯ ಯಾಕೆ ವಿಶ್ವ ಕನ್ನಡ ಸಮ್ಮೇಳನ ಉದ್ಘಾಟನೆ ಸಂಬಂಧ ಎದ್ದಿರುವ ಪರ-ವಿರೋದದ ಬಗ್ಗೆ ಚಕಾರ ಎತ್ತುತ್ತಿಲ್ಲ? ಏನಿದರ ಓಳಗುಟ್ಟು?

  ReplyDelete
 5. ಚಿದಾನಂದರಿಗೆ ಆಗಿದ್ದು ಅವಮಾನವಾದರೆ, ಚಂಪಾರಿಗೆ ಆಗಿದ್ದು ಅವಮಾನವಲ್ಲವೆ?
  ಸಂಪಾದಕೀಯದ ವ್ಯಕ್ತಿ ನಿಷ್ಟೆ ಅತಿಯಾಯಿತು ಅನಿಸುತ್ತಿದೆ.

  ReplyDelete
 6. ಯಾರು ಏನೇ ಹೇಳಲಿ,ನೀವು ಈ ವಿಷಯ ಎತ್ತಿರುವುದು ಸರಿಯಾಗಿಯೇ ಇದೆ. ಚಂಪಾರಿಗೆ ಮುಖ್ಯಮಂತ್ರಿ ಅವಮಾನ ಮಾಡುತ್ತಿದ್ದಾರೆ ಎಂದು ಸಂಘಪರಿವಾರದ ಓರ್ವ ಬುದ್ಧಿಜೀವಿಯಾದರೂ ಬಾಯಿಬಿಟ್ಟರಾ ನೋಡಿ? ರಾಜ್ಯಪಾಲರ ಕ್ರಮದ ವಿರುದ್ಧ ಬಾಯಿಗೆ ಬಂದಹಾಗೆ ಮಾತನಾಡಿದವರೆಲ್ಲಾ ಈಗ ಎಲ್ಲಿ ಹೋದರು ಸ್ವಾಮಿ?

  ReplyDelete
 7. ಕನ್ನಡಪ್ರಭ ಹೊರತುಪಡಿಸಿ ಉಳಿದ ಮೀಡಿಯಾಗಳು ಯಾಕೆ ಸುಮ್ಮನಿವೆ? ಇದು ಕನ್ನಡಪ್ರಭ ಹೊರಗೆ ತೆಗೆದ ಸುದ್ದಿ ಎಂಬ ಕಾರಣಕ್ಕೆ ಈ ಮೌನವೇ? ಯಾರು ಬೆಳಕಿಗೆ ತಂದರೇನು ಸುದ್ದಿ ಸುದ್ದಿಯೇ ಅಲ್ಲವೇ? ಇದರಲ್ಲಿ ಎಂಥ ಇಗೋಯಿಸಂ?.. i endorse this observation which is 100% fact.. thanks for raising the issue.

  ReplyDelete
 8. ಚಿಮೂ ಪ್ರಕರಣದಲ್ಲಿ ರಾಜ್ಯಪಾಲರ ನಿರ್ಧಾರದ ವಿರುದ್ಧ ಮಾತನಾಡುವ ಅನಂತಮೂರ್ತಿ ಮತ್ತು ಅವರ ಧೋರಣೆಯವರಿಗೆ ಇದ್ದ ಧೈರ್ಯ ಬಹುಶಃ ಈಗ ಯುಡಿಯೂರಪ್ಪನವರ ತೀರ್ಮಾನದ ವಿರುದ್ಧ ಮಾತನಾಡಲು ಇಲ್ಲ ಅಂತ ಕಾಣುತ್ತದೆ. ಚಿದಾನಂದ ಮೂರ್ತಿಗಳ ವಿಷಯದಲ್ಲಿ ಎದ್ದ ವಿವಾದ, ಹಾಹಾಕಾರ ಈಗೇಕೆ ಆಗುತ್ತಿಲ್ಲ? ಯಾಕೆ ಡಾ.ಯು.ಆರ್.ಅನಂತಮೂರ್ತಿ ಮೌನವಾಗಿದ್ದಾರೆ? ಯಾಕೆ ಬರಗೂರು ರಾಮಚಂದ್ರಪ್ಪನವರು ಮಾತನಾಡುತ್ತಿಲ್ಲ. ಸಮ್ಮೇಳನದ ವೇದಿಕೆಯಲ್ಲಿ ಭಿತ್ತಿ ಪತ್ರ ಹಿಡಿದು ತಂದವರು ಎಲ್ಲಿ ಹೋದರು? ಮೈಸೂರು ಚೌಕದಲ್ಲಿ ಪ್ರತಿಭಟನೆ ನಡೆಸಿದವರೇಕೆ ಬಾಯಿಬಿಡುತ್ತಿಲ್ಲ? ಎಂಬ ಸಂಪಾದಕೀಯದ ಪ್ರಶ್ನೆ ಸಂಧರ್ಭಯೋಚಿತವಾಗಿದೆ. ಈ ಕುರಿತ ವಿಷಯವನ್ನು ಎತ್ತಿದ ಕನ್ನಡ ಪ್ರಭದ ಪಿ. ತ್ಯಾಗರಾಜ್ ಅವರ ಪ್ರಯತ್ನ ಅಭಿನಂದನಾರ್ಹ ...

  ReplyDelete
 9. In Karnataka.......All things from conducting of competitive exams like PDO,KAS.. to awarding the persons to their work all going to controversial. it may be lack of administration or favorisum ....certainly all kannadigas under confusion who is right or wrong...

  Another one thing in now a days the DAILY news papers also acting like political parties (earlier only few tabloids doing this things)....totally common man get confused..

  What??????
  How????????
  How will right???????
  What is wrong???????
  CONFUSIONNNNNNNNNNNNNNNNNNNNNNNNNNnnnnnnnn

  ReplyDelete
 10. ಇಲ್ಲಿ ಚಂಪಾ ಹಾಗೂ ಚಿದಾನಂದರು ಒಂದು ಪ್ರತೀಕ ಮಾತ್ರ ಅನ್ನಿಸುತ್ತೆ ನನಗೆ.ಯಾವುದೇ ಪ್ರಶಸ್ತಿಗೆ ಆಯ್ಕೆ ಮಾಡಲು ಒಂದು ತಜ್ಞರ ಸಮಿತಿ ಇರುತ್ತದೆ ಮತ್ತು ಅದರ ತೀರ್ಮಾನವೇ ಅಂತಿಮ ಆಗಬೇಕು ಅನ್ನುವುದು ಸಾಮಾನ್ಯವಾದ ನಂಬಿಕೆ.ಇಲ್ಲಿ ಯಡ್ಡಿ ತಮ್ಮ ವೈಯಕ್ತಿಕ ದ್ವೇಷಕ್ಕೆ ಈ ರೀತಿಯ ಪ್ರಶಸ್ತಿಗಳನ್ನು ಬಳಸಿಕೊಂಡಿರುವುದಕ್ಕೆ ವಿರೋಧ ಇದೆ.
  ಚಂಪಾ ಯಾವುದೇ ರೀತಿಯಲ್ಲಿ ನೋಡಿದರೂ ಪಂಪ ಪ್ರಶಸ್ತಿಗೆ ಅರ್ಹರು.
  ಈ ನಡುವೆ ರಾಜಕೀಯ ಎಲ್ಲ ಕ್ಷೇತ್ರಗಳಿಗೂ ಕಾಲಿಟ್ಟಿದೆ.ಪ್ರಜ್ಞಾವಂತ ನಾಗರೀಕರು,ಕನ್ನಡ ಸಂಘಟನೆಗಳು ಪ್ರತಿಭಟಿಸಲೇ ಬೇಕಾಗಿದೆ.
  ರಾಜಕೀಯ ದೂರವಿರಲಿ,ಅರ್ಹರಿಗೆ ಗೌರವ ಸಲ್ಲಲಿ.
  -ಪದ್ಮರಾಜ್ ಸಪ್ತಸಾಗರ್

  ReplyDelete
 11. 1>point is chidanda murthy was OVERQUALIFIED for doctarate and no one could have stopped him and hence if murthy was not given doctarate , the secular writers brigade image OF being impartial(?)would have been badly hurt had they not issued support for chi.murthy. and right wing brigade would have scored a big point with the masses.
  2>ask is champa "qualified enough to be stopped by any body" ?

  ReplyDelete
 12. ಸಂಪಾದಕೀಯದ ಬರಹದಂತೆ ಇಲ್ಲಿ ಯಾವ ಪತ್ರಿಕೆ ಯಾರ ವಿಷಯವನ್ನು ಹೈಲೈಟ್ ಮಾಡಿತು ಎಂಬುದು ಮುಖ್ಯವಲ್ಲ. ವಿಷಯ ಏನು? ಎಂಬುದು ಮುಖ್ಯ. ಆದರೆ ಸಂಪಾದಕೀಯವು ಕನ್ನಡಪ್ರಭವನ್ನು ಮಾತ್ರ ನಂ.೧ ಎಂದು, ಪ್ರಜಾವಾಣಿಯ ಮೇಲೆ ಯಾವಾಗಲೂ ಟೀಕಾ ಪ್ರಹಾರವನ್ನು ಮಾಡುತ್ತಲೇ ಬಂದಿದೆ. ಇದು ಪೂರ್ವಾಗ್ರಪೀಡಿತವಾದ ಬರಹ ಎನಿಸುತ್ತಿದೆ. ಉಳಿದ ಮಾಧ್ಯಮಗಳು ಚಂಪಾ ವಿಷಯಕ್ಕೆ ಪ್ರಾಮುಖ್ಯತೆ ನೀಡದಿದ್ದರೆ ಅದಕ್ಕೆ ಪ್ರಜಾವಾಣಿ ಹೇಗೆ ಜವಾಬ್ದಾರಿಯೋ ಅರ್ಥವಾಗುತ್ತಿಲ್ಲ. ಎಲ್ಲರಿಗೂ ಗೊತ್ತಿರುವ ವಿಷಯವೇನೆಂದರೆ ಚಿಮೂ ವಯೋವೄದ್ಧ, ನಾಡಿನ ಹಿರಿಯ ಸಂಶೋಧಕರೆಂದು ಎಲ್ಲರೂ ಒಪ್ಪುವ ಮಾತು. ಆದರೆ ಚಂಪಾ ಅವರಿಗೆ ಇನ್ನೂ ಕಾಲಾವಕಾಶವಿದೆ. ಅಲ್ಲದೆ ಚಂಪಾ ಒಂದು ಕಾಲಕ್ಕೆ ಅಧಿಕಾರದ ಹಿಂದೆ ಬೆನ್ನುಹತ್ತಿದವರು. ಹೀಗಾಗಿ ಅವರಿಗೆ ಸಾಹಿತ್ಯ ಲೋಕದಲ್ಲಿ ವಿರೋಧಿಗಳ ಗುಂಪೂ ಇದೆ. ಅದಕ್ಕಾಗಿಯೇ ಉಳಿದವರೂ ಈ ವಿಷಯದಲ್ಲಿ ಮೌನವಾಗಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ರಹಸ್ಯವೇ. ಇದು ಚರ್ಚಾಸ್ಪದ ವಿಷಯವೇ ಅಲ್ಲ.

  ReplyDelete
 13. 1>is champa qualified "enough to be NOT stopped by any body" to get pampa prashasti?
  2>doctarate is not a "rank 1 gets the award" type of award.many can get it..not just "one" of the best among all.

  2>left of the centre governments do not give awards to right wing scholars as far as possible ...check the no of right wing scholars to be awareded ..not many ..if at all awarded, then they were overqualified and hence more scholars are left of the centre (as they cant get the money,sites if they go right wing)....and even if underqualified they were given awards by the secular govt as it serves thier cause.
  3> even a right wing govt does not give award to right wing scholarss with same enthu as '"secular "govt give it to leftist scholars.
  its suplly and demand situation..

  ReplyDelete
 14. ಚಂಪಾರವರು ಪ್ರಶಸ್ತಿಗೆ ಎಲ್ಲಾ ರೀತಿಯಲ್ಲೂ ಅರ್ಹರಿದ್ದರೂ, ಅದನ್ನು ನಿರಾಕರಿಸಿರುವುದು ರಾಜಕೀಯ ಪ್ರಭಾವದಿಂದಲೇ ಎಂಬುದು ಸಮಸ್ತ ಕನ್ನಡಾಭಿಮಾನಿಗಳಿಗೆ ತಿಳಿದಿರುವ ವಿಷಯ. ಡಾ.ಚಿದಾನಂದ ಮೂರ್ತಿಯವರಿಗೆ ದಾಕ್ಟರೇಟ್ ನೀಡುವಲ್ಲಿ ಆದ ವಿಳಂಬಕ್ಕೆ ವ್ಯಕ್ತವಾದ ಪ್ರತಿಭಟನೆಯಂತೆ ಚಂಪಾರವರ ಪರವಾಗಿಯೂ ಎತ್ತರದ ದನಿಯಲ್ಲಿ ಮೊಳಗಬೇಕು. ನಿದ್ರಿಸುತ್ತಿರುವ ಖ್ಯಾತ ಸಾಹಿತಿಗಳು ಎಚ್ಚೆತ್ತುಕೊಳ್ಳಬೇಕು, ತಮ್ಮ ಮೌನ ಮುರಿದು ಮಾತಾಡಬೇಕು.

  ReplyDelete