Tuesday, March 15, 2011

ಮೌಢ್ಯ ಮತ್ತು ಜ್ಯೋತಿಷ್ಯಗಳ ಕುರಿತು ವಿವೇಕಾನಂದರು...


ಸತ್ಯವನ್ನು ಮಾತ್ರ ನಂಬುವುದು ನಮ್ಮ ಕರ್ತವ್ಯ. ಮೂಢನಂಬಿಕೆಗಳನ್ನು ಅಥವಾ ಹಿಂದಿನಿಂದ ಬಂದ ಕಂದಾಚಾರಗಳನ್ನು ವಿವೇಚನೆ ಇಲ್ಲದೆ ನಂಬುವುದು ನಮ್ಮಲ್ಲಿ ಎಷ್ಟು ಬಲವಾಗಿದೆ ಎಂದರೆ, ನಾವು ಮುಂದೆ ಹೋಗದಂತೆ ಇಲ್ಲಿಯೇ ನಮ್ಮ ಕೈಕಾಲುಗಳನ್ನು ಕಟ್ಟಿದಂತೆ ಆಗಿಹೋಗಿದೆ. ಏಸುಕ್ರಿಸ್ತ, ಮಹಮ್ಮದ್ ಮುಂತಾದ ಮಹಾಪುರುಷರೂ ಇಂತಹ ಹಲವು ಮೂಢನಂಬಿಕೆಗಳನ್ನು ನಂಬಿದ್ದರು. ಅವರೂ ಕೂಡ ಅವುಗಳಿಂದ ಪಾರಾಗಿಲ್ಲ. ನಿಮ್ಮ ದೃಷ್ಟಿ ಯಾವಾಗಲೂ ಸತ್ಯದ ಕಡೆಯೇ ಇರಬೇಕು, ಎಲ್ಲ ಬಗೆಯ ಮೂಢನಂಬಿಕೆಗಳನ್ನೂ ನಿರ್ಲಕ್ಷಿಸಬೇಕು.೧

ಅಧ್ಯಾತ್ಮಿಕ ಭಾವನೆಯಿಂದ ಪ್ರಪಂಚವನ್ನು ಗೆಲ್ಲುವುದೆಂದರೆ ಜೀವದಾನ ಮಾಡುವಂತಹ ಮಹಾಭಾವನೆಯನ್ನು ಹೊರಗೆ ಕಳುಹಿಸಬೇಕು. ಶತಮಾನಗಳಿಂದ ಆಲಂಗಿಸಿದ, ಕೆಲಸಕ್ಕೆ ಬಾರದ ಮೂಢನಂಬಿಕೆಗಳನ್ನು ಕಳುಹಿಸುವುದಲ್ಲ, ಇಂತಹ ಕಳೆಯನ್ನು ನಮ್ಮ ದೇಶದಿಂದಲೇ ಕಿತ್ತು ಆಚೆಗೆ ಒಗೆಯಬೇಕು. ಅವು ಎಂದಿಗೂ ನಾಶವಾಗಲಿ; ಅವೇ ಜನಾಂಗದ ಅಧೋಗತಿಗೆ ಕಾರಣ. ಅವು ನಮ್ಮನ್ನು ಹುಚ್ಚರನ್ನಾಗಿ ಮಾಡುವುದು. ಯಾವ ಮಿದುಳು ಉದಾತ್ತ ಉಚ್ಛಭಾವನೆ ಆಲೋಚಿಸಲಾರದೋ, ತನ್ನ ಸ್ವಾತಂತ್ರ್ಯವನ್ನೆಲ್ಲ ಕಳೆದುಕೊಂಡಿದೆಯೋ, ಧರ್ಮದ ಹೆಸರಿನಲ್ಲಿರುವ ಕೆಲಸಕ್ಕೆ ಬಾರದ ಮೂಢನಂಬಿಕೆಗಳನ್ನೆಲ್ಲಾ ಸ್ವೀಕರಿಸಿ ವಿಷರೂಪಕ್ಕೆ ಬರುತ್ತಿದೆಯೋ ಅಂತಹ ಮಿದುಳು ಉಳ್ಳವರ ಹತ್ತಿರ ಬಹಳ ಜಾಗರೂಕರಾಗಿರಬೇಕು.

ಭರತ ಖಂಡದಲ್ಲಿ ನಮ್ಮ ಕಣ್ಣೆದುರು ಕಾಣುವಂತೆಯೇ ಹಲವು ಅಪಾಯಗಳಿವೆ. ಇತ್ತ ಬಂದರೆ ಹುಲಿ, ಅತ್ತ ಸರಿದರೆ ದರಿ ಎಂಬಂತೆ ಇರುವ ಎರಡು ದೋಷಗಳೇ ಶುದ್ಧ ಜಡವಾದ ಮತ್ತು ಅದಕ್ಕೆ ವಿರುದ್ಧವಾದ ಮೂಢನಂಬಿಕೆಗಳು. ಇವುಗಳಿಂದ ನಾವು ಪಾರಾಗಬೇಕು. ಪಾಶ್ಚಾತ್ಯ ಜ್ಞಾನ ಸುರೆಯನ್ನು ಹೀರಿ ತಾನು ಸರ್ವಜ್ಞ ಎಂದು ಮನುಷ್ಯ ಹೇಳಿಕೊಳ್ಳುವನು. ಹಿಂದಿನ ಋಷಿಗಳನ್ನು ಅಣಕಿಸುವನು. ಅವನ ಪಾಲಿಗೆ ಭಾರತೀಯ ಭಾವನೆಯೆಲ್ಲ ಕೆಲಸಕ್ಕೆ ಬಾರದುದು. ತತ್ವ ಕೇವಲ ಹಸುಳೆಗಳ ಹರಟೆ, ಧರ್ಮ ಮೂಢರ ನಂಬಿಕೆಯಾಗಿದೆ. ಮತ್ತೊಂದು ಅತಿರೇಕಕ್ಕೆ ಹೋಗುವ ಕೃತಕ ವಿದ್ಯಾವಂತನಿರುವನು. ಪ್ರತಿಯೊಂದು ಶಕುನವನ್ನು ಶಾಸ್ತ್ರೀಯವಾಗಿ ವಿವರಿಸಲು ಯತ್ನಿಸುವನು. ತನ್ನ ವಿಚಿತ್ರ ಜಾತಿಗೆ, ದೇವರಿಗೆ, ಹಳ್ಳಿಗೆ ಸೇರಿದ ಪ್ರತಿಯೊಂದು ಮೂಢನಂಬಿಕೆಗೂ ದಾರ್ಶನಿಕ, ತಾತ್ವಿಕ ಮತ್ತು ಇನ್ನೂ ಎಂತಹದೋ ವಿವರಣೆ ಕೊಡಲು ಯತ್ನಿಸುವನು. ಅವನಿಗೆ ಪ್ರತಿಯೊಂದು ಗ್ರಾಮದ ಆಚಾರವೂ ಒಂದು ವೇದವಾಕ್ಯ. ಅದನ್ನು ಜಾರಿಗೆ ತರುವುದರ ಮೇಲೆ ತಮ್ಮ ಜನಾಂಗದ ಜೀವನ ನಿಂತಿದೆ ಎಂದು ಭಾವಿಸುವನು. ನೀವು ಆಗ ತುಂಬಾ ಜೋಪಾನವಾಗಿರಬೇಕು.

ನೀವೆಲ್ಲಾ ಇಂತಹ ಮೂರ್ಖರಾಗುವುದಕ್ಕಿಂತ ಶುದ್ಧ ನಾಸ್ತಿಕರಾಗುವುದು ಮೇಲು. ನಾಸ್ತಿಕ ಜೀವಂತವಾಗಿರುವನು. ಅವನಿಂದ ಏನಾದರೂ ಉಪಯೋಗ ಪಡೆಯಬಹುದು. ಮೂಢನಂಬಿಕೆ ಪ್ರವೇಶಿಸಿದರೆ ತಲೆ ಕೆಡುವುದು, ಹುಚ್ಚನಾಗುವನು. ಅವನತಿ ಪ್ರಾರಂಭವಾಗುವುದು. ಇವೆರಡರಿಂದಲೂ ಪಾರಾದ ನಿರ್ಭೀತ ಸಾಹಸಿಗಳು ನಮಗೆ ಬೇಕಾಗಿರುವುದು. ನಮಗೆ ಇಂದು ಬೇಕಾಗಿರುವುದು ರಕ್ತದಲ್ಲಿ ಪುಷ್ಟಿ, ನರಗಳಲ್ಲಿ ಶಕ್ತಿ, ಕಬ್ಬಿಣದಂತಹ ಮಾಂಸಖಂಡಗಳು, ಉಕ್ಕಿನಂತಹ ನರಗಳು, ಕೆಲಸಕ್ಕೆ ಬಾರದ ಜೊಳ್ಳು ಭಾವನೆಗಳಲ್ಲ. ಇವುಗಳನ್ನು ನಿರಾಕರಿಸಿ, ಎಲ್ಲಾ ರಹಸ್ಯಗಳನ್ನು ನಿರಾಕರಿಸಿ. ರಹಸ್ಯಾಚರಣೆ ಮತ್ತು ಮೂಢನಂಬಿಕೆ ಯಾವಾಗಲೂ ದುರ್ಬಲತೆಯ ಚಿಹ್ನೆ; ಅವನತಿ ಮತ್ತು ಮೃತ್ಯು ಚಿಹ್ನೆ. ಜೋಪಾನವಾಗಿರಿ. ಧೀರರಾಗಿ, ನಿಮ್ಮ ಕಾಲ ಮೇಲೆ ನಿಲ್ಲಿ. ಎಷ್ಟೋ ಮಹದಾಲೋಚನೆಗಳಿವೆ, ಅದ್ಭುತ ಭಾವನೆಗಳಿವೆ. ನಮಗೆ ಈಗ ಪ್ರಪಂಚ ತಿಳಿದಿರುವ ಮಟ್ಟಿಗೆ ಅದನ್ನು ಅತೀಂದ್ರಿಯವೆನ್ನಬಹುದು. ಆದರೆ ಇದರಲ್ಲಿ ಯಾವುದೊಂದು ರಹಸ್ಯವಿಲ್ಲ. ಧಾರ್ಮಿಕ ಸತ್ಯ ರಹಸ್ಯವೆಂದಾಗಲೀ ಅಥವಾ ಹಿಮಾಲಯದ ಮೇಲೆ ಇರುವ ಕೆಲವು ಗುಪ್ತ ಸಂಸ್ಥೆಗಳಿಗೆ ಆ ಸತ್ಯ ಮೀಸಲು ಎಂದಾಗಲೀ ನಮ್ಮ ಧರ್ಮದಲ್ಲಿ ಎಂದೂ ಬೋಧಿಸಿಲ್ಲ. ನಾನು ಹಿಮಾಲಯದಲ್ಲಿದ್ದೆ. ನಾನು ಸಂನ್ಯಾಸಿ. ಕಳೆದ ಹದಿನಾಲ್ಕು ವರ್ಷಗಳಿಂದಲೂ ಸಂಚರಿಸುತ್ತಿರುವೆನು. ಈ ರಹಸ್ಯ ಎಲ್ಲಿಯೂ ಇಲ್ಲ. ಈ ಮೂಢನಂಬಿಕೆಯನ್ನು ಹಿಂಬಾಲಿಸಬೇಡಿ. ಅದಕ್ಕಿಂತ ನೀವು ಶುದ್ಧ ನಾಸ್ತಿಕರಾಗುವುದು ನಿಮಗೆ ಮತ್ತು ದೇಶಕ್ಕೆ ಒಳ್ಳೆಯದು.

ನಾಸ್ತಿಕತೆಯಲ್ಲಾದರೂ ಸ್ವಲ್ಪ ಶಕ್ತಿ ಇದೆ. ಆದರೆ ಮೂಢನಂಬಿಕೆಯಲ್ಲಿರುವುದು ಅವನತಿ ಮತ್ತು ಮರಣ ಮಾತ್ರ. ಬಲಾಢ್ಯರು ಇಂತಹ ಮೂಢನಂಬಿಕೆ ಮೇಲೆ ಕಾಲಕಳೆಯುವುದು, ಕೆಲಸಕ್ಕೆ ಬಾರದ ಕುಲಗೆಟ್ಟ ಆಚಾರಗಳನ್ನೆಲ್ಲಾ ವಿವರಿಸುವುದಕ್ಕೆ ಉಪಕಥೆಗಳನ್ನು ಕಲ್ಪಿಸುವುದು ಮಾನವಕೋಟಿಗೆ ನಾಚಿಗೆಗೇಡು. ನಿಜವಾಗಿ ನಮ್ಮಲ್ಲಿ ಹಲವು ಮೂಢನಂಬಿಕೆಗಳಿವೆ. ದೇಹದಲ್ಲಿ ಎಷ್ಟೋ ವ್ರಣಗಳಿವೆ; ಅವನ್ನು ಕತ್ತರಿಸಬೇಕು; ನಾಶಮಾಡಬೇಕು. ಅವುಗಳಿಂದ ನಮ್ಮ ಸಂಸ್ಕೃತಿ, ಧರ್ಮ, ಅಧ್ಯಾತ್ಮ ನಾಶವಾಗುವುದಿಲ್ಲ. ಧರ್ಮದ ಮುಖ್ಯ ತತ್ವಗಳೆಲ್ಲಾ ಸುರಕ್ಷಿತವಾಗಿರುವುವು. ಕೆಲಸಕ್ಕೆ ಬಾರದ ಈ ವ್ರಣಗಳನ್ನು ಎಷ್ಟು ಬೇಗ ತೊಡೆದುಹಾಕಿದರೆ ಅಷ್ಟು ಒಳ್ಳೆಯದು, ಅಷ್ಟು ಆಧ್ಯಾತ್ಮಿಕ ನಿಯಮಗಳು ಪ್ರಕಾಶಿಸುವುವು.೨

ಜ್ಯೋತಿಷ್ಯ ಮುಂತಾದುವನ್ನು ಹೇಳಿ ಉದರಪೋಷಣೆ ಮಾಡಿಕೊಳ್ಳುವವರ ಹತ್ತಿರ ಸಂಬಂಧವನ್ನು ಇಟ್ಟುಕೊಳ್ಳಕೂಡದು ಎನ್ನುವನು ಬುದ್ಧ. ಅವನಿಗೆ ಇದರ ರಹಸ್ಯ ಚೆನ್ನಾಗಿ ಗೊತ್ತಾಗಿರಬೇಕು. ತಾರೆಯೊಂದು ನನ್ನ ಜೀವನದ ಮೇಲೆ ತನ್ನ ಪ್ರಭಾವವನ್ನು ಬೀರಿ ವ್ಯಥೆಯನ್ನು ತಂದರೆ ನನ್ನ ಜೀವನ ಕುರುಡು ಕಾಸಿಗೂ ಯೋಗ್ಯವಲ್ಲ. ಜ್ಯೋತಿಷ್ಯ ಮುಂತಾದ ರಹಸ್ಯಗಳನ್ನೆಲ್ಲಾ ನೆಚ್ಚುವುದು ದೌರ್ಬಲ್ಯದ ಚಿಹ್ನೆ. ಈ ಸ್ವಭಾವ ನಿಮ್ಮ ಮನಸ್ಸಿನಲ್ಲಿ ಬಲವಾಗುತ್ತಿದ್ದರೆ ನೀವು ಒಬ್ಬ ವೈದ್ಯನನ್ನು ನೋಡಿ; ಒಳ್ಳೆಯ ಆಹಾರ ಮತ್ತು ವಿಶ್ರಾಂತಿಯನ್ನು ತೆಗೆದುಕೊಳ್ಳಿ..... ಜ್ಯೋತಿಷ್ಯ ಮುಂತಾದವುಗಳಲ್ಲೆಲ್ಲಾ ಸ್ವಲ್ಪ ಸತ್ಯಾಂಶವಿದ್ದರೂ ಅದನ್ನು ನಾವು ನಿರ್ಲಕ್ಷ್ಯದಿಂದ ನೋಡಬೇಕು..... ಮೂಢಭಾವನೆಗಳು ನಾಯಿಕೊಡೆಯಂತೆ ನಮ್ಮ ದೇಶದಲ್ಲಿ ಹಬ್ಬುತ್ತಿವೆ. ವಿಚಾರ ಮಾಡದ ಸ್ತ್ರೀಯರು ಇನ್ನೂ ಸ್ವಾತಂತ್ರ್ಯಕ್ಕೆ ಹೋರಾಡುತ್ತಿರುವರು. ಒಬ್ಬ ಹಣಕ್ಕಾಗಿ ಮತ್ತೊಬ್ಬರನ್ನು ಮೋಸ ಮಾಡಿದರೆ ಅವನನ್ನು ಮೋಸಗಾರ ಎನ್ನುವಿರಿ. ಇತರರನ್ನು ಅಧ್ಯಾತ್ಮಿಕ ದೃಷ್ಟಿಯಿಂದ ಪಾಪಿಗಳು ಎಂದು ಮೋಸಗೊಳಿಸುವವರು ಎಂತಹ ಪಾಪಿಗಳಿರಬೇಕು? ಇದು ಪರಮಪಾತಕ. ಸತ್ಯ ನಿಮ್ಮನ್ನು ಧೀರರನ್ನಾಗಿ ಮಾಡಬೇಕು; ಮೌಢ್ಯತೆಯಿಂದ ಪಾರಾಗುವಂತೆ ಮಾಡಬೇಕು. ಇದೇ ಸತ್ಯದ ಪರೀಕ್ಷೆ.... ಬೇಕಾದರೆ ತಾರೆಗಳನ್ನು ನಿಮ್ಮ ಬೊಗಸೆಯಿಂದ ಎತ್ತಿ ನುಂಗಿಹಾಕಬಹುದು. ನಿಮ್ಮ ನೈಜಸ್ವಭಾವ ಅಂತಹುದು. ಧೀರರಾಗಿ, ಎಲ್ಲಾ ವಿಧದ ಮೂಢನಂಬಿಕೆಗಳಿಂದ ಪಾರಾಗಿ, ಮುಕ್ತರಾಗಿ.೩

ಪುರೋಹಿತರು ಮಾಮೂಲಿನಂತೆ ಏನನ್ನೋ ಹೇಳಿ ಏನನ್ನೋ ನಿರೀಕ್ಷಿಸುವರು. ಜನರು ಆಕಾಶವನ್ನೇ ನೋಡುತ್ತ ಪ್ರಾರ್ಥಿಸುವರು. ಪುರೋಹಿತರಿಗೆ ದಕ್ಷಿಣೆ ಕೊಡುವರು. ಮಾಸಗಳು ಕಳೆದಂತೆ ಅವರು ಇನ್ನೂ ಆಕಾಶವನ್ನು ನೋಡುತ್ತಿರುವರು, ದಕ್ಷಿಣೆ ಕೊಡುವರು, ಪ್ರಾರ್ಥಿಸುವರು. ಇದನ್ನು ಕುರಿತು ಯೋಚಿಸಿ ನೋಡಿ! ಇದೊಂದು ಹುಚ್ಚಲ್ಲವೇ? ಮತ್ತೇನು? ಇದಕ್ಕೆ ಕಾರಣರು ಯಾರು? ನೀವು ಮತ್ತೊಬ್ಬನಿಗೆ ಕೊಟ್ಟ ಪ್ರತಿಯೊಂದು ದುರ್ಬಲ ಆಲೋಚನೆಗೂ ಬಡ್ಡಿ ಸಹಿತ ಅನುಭವಿಸಬೇಕಾಗಿದೆ.೪

ಮಂತ್ರವಾದಿಗಳ ಮತ್ತು ಮೋಸಗಾರರ ಕೈಗೆ ಬೀಳುವುದಕ್ಕಿಂತ ಯಾವುದರಲ್ಲಿಯೂ ನಂಬದೇ ಸಾಯುವುದೇ ಮೇಲು.೫

೧. ವಿವೇಕಾನಂದರ ಕೃತಿ ಶ್ರೇಣಿ, ಸಂಪುಟ-೨, ಪುಟ-೨೮೪
೨. ಸಂಪುಟ-೫, ಪುಟ-೧೭೩-೧೭೫
೩. ಸಂಪುಟ-೮, ಪುಟ-೨೪೩-೨೪೪
೪. ಸಂಪುಟ-೪, ಪುಟ-೨೯೯
೫. ಸಂಪುಟ-೫, ಪುಟ-೪೩೯