Saturday, March 5, 2011

ಹೌದು ಕಣ್ರೀ, ಒಂದು ಲಕ್ಷ ಹಿಟ್ಸ್ ದಾಟಿ ಹೋಗಿದ್ದೇವೆ....


ನೀವೂ ಸಹ ಗಮನಿಸಿರಬಹುದು, ಸಂಪಾದಕೀಯದ ಹಿಟ್ಸ್ ಒಂದು ಲಕ್ಷ ದಾಟಿ ಹೋಗಿದೆ. ಇದು ಸಾಧ್ಯವಾಗಿರುವುದು ಕೇವಲ ಎರಡೂವರೆ ತಿಂಗಳಲ್ಲಿ. ಸ್ಪಷ್ಟವಾಗಿ ಹೇಳುವುದಾದರೆ ೭೪ ದಿನಗಳಲ್ಲಿ. ಸರಾಸರಿ ದಿನವೊಂದಕ್ಕೆ ೧೩೪೦ ಹಿಟ್ಸ್. ಒಟ್ಟು ಪ್ರಕಟವಾದ ಪೋಸ್ಟುಗಳು ೯೦. ಅವುಗಳನ್ನು ಬಂದು ಓದಿದವರು ೬೩ ದೇಶಗಳ ಓದುಗರು. ೮೦೦ಕ್ಕೂ ಹೆಚ್ಚು ಪ್ರಕಟಿತ ಕಮೆಂಟುಗಳು..

ಇದನ್ನು ಆರಂಭಿಸಿದಾಗ ಈ ಯಾವುದನ್ನೂ ತಲೆಯಲ್ಲಿ ಇಟ್ಟುಕೊಂಡವರಲ್ಲ ನಾವು. ಮೀಡಿಯಾಗಳ ಕುರಿತು ಒಂದಿಷ್ಟು ಬರೀಬೇಕು ಅಂತಂದುಕೊಂಡು ಬರೆಯಲಾರಂಭಿಸಿದೆವು. ನೀವು ಅತ್ಯುತ್ಸಾಹದಿಂದ ಪ್ರತಿಕ್ರಿಯಿಸಿದಿರಿ. ಈ ೭೪ ದಿನಗಳಲ್ಲಿ ನಮ್ಮನ್ನು ಹೊಗಳಿದವರು, ಪ್ರೋತ್ಸಾಹಿಸಿದವರು, ತಿದ್ದಿದವರು, ಟೀಕಿಸಿದವರು, ಬೈದವರು, ಕುಹಕವಾಡಿದವರು, ಜಗಳಕ್ಕೆ ನಿಂತವರು, ಒಂದು ಕೈ ನೋಡ್ಕೊಂಡೇ ಬಿಡ್ತೀವಿ ಎಂದು ಬೆದರಿಸಿದವರು, ದಾರಿ ತಪ್ಪಿಸಲು ಯತ್ನಿಸಿದವರು, ಗೊತ್ತಾಯ್ತು ಬಿಡ್ರೀ ನೀವು ಇಂಥವರ ಕಡೆಯವರು ಎಂದು ಮೂಗು ಮುರಿದವರು, ಕಮೆಂಟು ಪ್ರಕಟಿಸಲಿಲ್ಲವೆಂದು ಮುನಿಸಿಕೊಂಡವರು... ಇವರ ಸಂಖ್ಯೆ ಈಗ ಲೆಕ್ಕಕ್ಕೆ ಸಿಕ್ಕುತ್ತಿಲ್ಲ.

ಸಂಪಾದಕೀಯ ಎಂಬ ವಿಲಕ್ಷಣ ಹೆಸರಿನ ಈ ಬ್ಲಾಗ್ ಆರಂಭಿಸಿದ ಕಾಲದಲ್ಲಿ ಹೀಗೆ ಬರೆದುಕೊಂಡಿದ್ದೆವು:
ಪತ್ರಕರ್ತರು ಪ್ರಶ್ನಾತೀತರೆ? ಪ್ರಶ್ನಾತೀತರೆನಿಸಿಕೊಳ್ಳಲು ಅವರಿಗಿರುವ ವಿಶೇಷ ಅರ್ಹತೆಗಳಾದರೂ ಏನು? ರಾಜಕಾರಣಿಗಳಾಗಲಿ, ಮಠಾಧೀಶರಾಗಲಿ, ಅಧಿಕಾರಿಗಳಾಗಲಿ, ನ್ಯಾಯಾಧೀಶರಾಗಲಿ, ಪತ್ರಕರ್ತರಾಗಲಿ ಪ್ರಶ್ನಾತೀತರಾಗಿಹೋದರೆ ಆಗುವ ಸಮಸ್ಯೆಗಳೇನು? ಇನ್ನುಳಿದವರನ್ನೆಲ್ಲ ಪ್ರಶ್ನಿಸಲು ಪತ್ರಕರ್ತರಿದ್ದಾರೆ ನಿಜ, ಆದರೆ ಪತ್ರಕರ್ತರನ್ನು ಪ್ರಶ್ನಿಸುವವರು ಯಾರು? ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು? ನಾವು ಸಂಪಾದಕೀಯದ ಮೂಲಕ ಪತ್ರಕರ್ತರಿಗೇ ಪ್ರಶ್ನೆಗಳನ್ನು ಕೇಳುತ್ತಿದ್ದೇವೆ. ಒಂದು ಸಣ್ಣ ಪ್ರಯತ್ನವಷ್ಟೆ ನಮ್ಮದು. ಇವತ್ತು ಮಾಧ್ಯಮ ಕ್ಷೇತ್ರವನ್ನು ರಾಡಿಯೆಬ್ಬಿಸಿರುವುದು ಭ್ರಷ್ಟಾಚಾರ ಮಾತ್ರವಲ್ಲ. ಧರ್ಮಾಂಧತೆ ಮತ್ತು ಜಾತೀಯತೆಗಳು ಮೇರೆ ಮೀರಿವೆ. ರಾಜಕಾರಣಿಗಳಿಗಿಂತ ಹೆಚ್ಚು ಜಾತೀಯತೆಯನ್ನು ಪತ್ರಕರ್ತರೇ ಪ್ರದರ್ಶಿಸುತ್ತಿದ್ದಾರೆ. ರಾಜಕಾರಣಿಗಳಿಗಾದರೋ ಎಲ್ಲ ಜಾತಿಯವರ ಓಟು ಬೇಕು. ಪತ್ರಕರ್ತರಿಗೆ ಆ ಕಷ್ಟವೂ ಇಲ್ಲವಲ್ಲ! ಒಂದಂತೂ ಸ್ಪಷ್ಟಪಡಿಸುತ್ತೇವೆ. ನಮಗೆ ಯಾರ ಮೇಲೂ ದ್ವೇಷವಿಲ್ಲ, ಒಲವೂ ಇಲ್ಲ. ನಮಗೆ ಇಂಥದ್ದು ಅಂಥದ್ದು ಅನ್ನುವ ಇಸಂಗಳು ಇಲ್ಲ. ನಮಗೆ ಸರಿ ಅಲ್ಲ ಅನ್ನಿಸಿದ್ದನ್ನು ಹೇಳುತ್ತೇವೆ, ನಾವು ಹೇಳಿದ್ದು ಸರಿಯಿಲ್ಲ ಎಂಬ ಅಭಿಪ್ರಾಯವಿರುವವರೂ ಪ್ರತಿಕ್ರಿಯೆ ನೀಡಬಹುದು. ಎಲ್ಲ ಮೀಡಿಯಾ ಕಚೇರಿಗಳ ಟೇಬಲ್ಲುಗಳಲ್ಲೂ ನಾವಿದ್ದೇವೆ. ಸತ್ಯ ಹೇಳುತ್ತೇವೆ ಎಂಬ ವಿಶ್ವಾಸದಲ್ಲಿ ಸಾಕಷ್ಟು ಮಾಹಿತಿಗಳನ್ನು ಇ-ಮೇಲ್ ಮೂಲಕವೂ ಅಪರಿಚಿತ ಗೆಳೆಯರು ಕಳುಹಿಸುತ್ತಿದ್ದಾರೆ. ಇದು ಒಂದು ಸಣ್ಣ ಆಂದೋಲನ. ಮಾಧ್ಯಮರಂಗ ಪರಿಶುದ್ಧವಾಗಿರಬೇಕು ಎಂದು ಬಯಸುವವರೆಲ್ಲ ಇದರಲ್ಲಿ ಪಾಲ್ಗೊಳ್ಳಬಹುದು.

ಈ ಮಾತುಗಳಿಗೆ ಇವತ್ತಿಗೂ ನಾವು ಬದ್ಧವಾಗಿದ್ದೇವೆ. ಈ ಬ್ಲಾಗ್ ಮೂಲಕ ನಾವು ಮಾತ್ರ ಮಾತನಾಡುತ್ತಿಲ್ಲ. ಭಿನ್ನ ಭಿನ್ನ ಧ್ವನಿಗಳನ್ನೂ ಸಹ ಇಲ್ಲಿ ಕಾಣಿಸುತ್ತಿದ್ದೇವೆ. ನಾವು ಅಂದುಕೊಂಡಿದ್ದೇ ಸತ್ಯ ಎಂಬ ಬೌದ್ಧಿಕ ಅಹಂಕಾರವಾಗಲಿ, ಇನ್ನೊಬ್ಬರ ನಿಲುವುಗಳನ್ನು ಗೌರವಿಸಬಾರದು ಎಂಬ ಅಸಡ್ಡೆಯಾಗಲಿ ನಮಗಿಲ್ಲ. ಹೀಗಾಗಿ ನಮ್ಮನ್ನು ಕಟುವಾಗಿ ಟೀಕಿಸಿದ ಕಮೆಂಟುಗಳೂ ಇಲ್ಲಿ ಪ್ರಕಟಗೊಂಡಿವೆ.

ಸಂಪಾದಕೀಯದ ಕುರಿತು ಸುದ್ದಿಮನೆಗಳಲ್ಲಿ ಆಗುತ್ತಿರುವ ಚರ್ಚೆ, ಅದರ ಪರಿಣಾಮಗಳ ಕುರಿತು ನಾವೇನನ್ನೂ ಹೇಳಲು ಹೋಗುವುದಿಲ್ಲ. ಹಾಗೆ ಬೆನ್ನು ಚಪ್ಪರಿಸಿಕೊಳ್ಳುವ ಅಭ್ಯಾಸವೂ ನಮಗಿಲ್ಲ. ಸಂಪಾದಕೀಯ ಎಲ್ಲ ಕಡೆಯೂ ಬೇರೆ ಬೇರೆ ಸ್ವರೂಪಗಳಲ್ಲಿ ಇದೆ ಎಂದಷ್ಟೇ ಹೇಳಲು ಬಯಸುತ್ತೇವೆ.

ನಮ್ಮ ನಿಮ್ಮ ಅನುಬಂಧ ಹೀಗೆ ಮುಂದುವರೆಯಲಿ ಎಂಬ ಬಯಕೆ ನಮ್ಮದು. ಹೀಗೇ ಪ್ರತಿಕ್ರಿಯಿಸುತ್ತಿರಿ. ಇದರಿಂದೇನೋ ಕ್ರಾಂತಿಯಾದೀತು ಎಂಬ ಹುಚ್ಚುಭ್ರಮೆಯೇನು ನಮಗಿಲ್ಲ. ಸಾಗಬೇಕಾದ ಹಾದಿ ಇನ್ನೂ ದೂರವಿದೆ. ದಾರಿಗುಂಟ ನೀವಿರುತ್ತೀರೆಂಬ ವಿಶ್ವಾಸವಿದೆ.

ಕಡೆಯದಾಗಿ ನೀವು ಪದೇ ಪದೇ ಕೇಳುವ ಒಂದು ಪ್ರಶ್ನೆ. ಅದಕ್ಕೆ ಸದ್ಯಕ್ಕೆ ಉತ್ತರಿಸುವುದಿಲ್ಲ. ಈಗ ಉತ್ತರಿಸದೇ ಇರುವುದಕ್ಕೂ ಒಂದು ಬಲವಾದ ಕಾರಣವಿದೆ. ಮುಂದೆ ನಾವು ಈ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭ ಬರುತ್ತದಲ್ಲ, ಆ ಸಂದರ್ಭಕ್ಕೂ ಒಂದು ಮಹತ್ವವಿರುತ್ತದೆ. ಪ್ಲೀಸ್ ಆ ಪ್ರಶ್ನೆಯೊಂದನ್ನು ಈಗ ಕೇಳಬೇಡಿ.

ನಮಗೂ ಹೇಳೋದು ಸಾಕಷ್ಟಿದೆ, ಸದ್ಯಕ್ಕೆ ಇಷ್ಟು ಸಾಕು, ಮತ್ತೆ ಮತ್ತೆ ಸಿಕ್ತಾ ಇರೋಣ.

17 comments:

 1. ಕಡೆಯದಾಗಿ ನೀವು ಪದೇ ಪದೇ ಕೇಳುವ ಒಂದು ಪ್ರಶ್ನೆ. ಅದಕ್ಕೆ ಸದ್ಯಕ್ಕೆ ಉತ್ತರಿಸುವುದಿಲ್ಲ. ಈಗ ಉತ್ತರಿಸದೇ ಇರುವುದಕ್ಕೂ ಒಂದು ಬಲವಾದ ಕಾರಣವಿದೆ. ಮುಂದೆ ನಾವು ಈ ಪ್ರಶ್ನೆಗೆ ಉತ್ತರ ನೀಡುವ ಸಂದರ್ಭ ಬರುತ್ತದಲ್ಲ, ಆ ಸಂದರ್ಭಕ್ಕೂ ಒಂದು ಮಹತ್ವವಿರುತ್ತದೆ. ಪ್ಲೀಸ್ ಆ ಪ್ರಶ್ನೆಯೊಂದನ್ನು ಈಗ ಕೇಳಬೇಡಿ.


  Hahahah

  Which Question is that?

  ReplyDelete
 2. ಬಿರಾದರ್ ಅವರೇ,
  ನಂಬಿ, ಎಲ್ಲರಿಗಿಂತ ಮೊದಲು ನಿಮಗೆ ಆ ಪ್ರಶ್ನೆಗೆ ಉತ್ತರ ಕೊಡುತ್ತೇವೆ. ಸುದ್ದಿ ಮೊದಲು ಚೀನಾದಲ್ಲೇ ಬ್ರೆಕ್ ಆಗಲಿ

  ReplyDelete
 3. Hey. Hearty Congrats!

  I started reading Sampadakeeya couple of weeks back and now am completely hooked to it. Not because you guys dole-out any sleaze or over rated 'breaking news'. But I follow Sampadakeeya because it gives us the insight into the industry that is virtually inaccessible to a common man. How ironic that the same Media is suppose to be making life lot more easier for the same common man by guiding & standing for them.

  Anyway, it's just the beginning and we all have a long way to go. I say 'WE' because every Sampadakeeya reader should feel responsible towards 'dragging' Karnataka Media towards taking the responsible stand and making it lot more cleaner.

  Every one should come forward and share their views, concerns and shed light on the 'wrong' things happening in their so called media houses. Then only we can hope for any change.

  All the very best to all of us!

  For Gods sake... Be responsible jurnos...

  -BeeYes

  ReplyDelete
 4. ಅರ್ಥಪೂರ್ಣ ಚರ್ಚೆಗಳಿಂದ ಕೂಡಿದ ಸಂಪಾದಕೀಯ ತಂಡಕ್ಕೆ ಅಭಿನಂದನೆಗಳು

  ReplyDelete
 5. ಮಾನ್ಯ ಸಂಪಾದಕರೇ,
  ಸಂಪಾದಕೀಯ ಚೆನ್ನಾಗೆ ಬರುತ್ತಿದೆ. ಇಂದು ಟಿವಿ 9ನವರು ಸ್ಲಂಡಾಗ್ ಮಿಲಿಯನೇರ್ ಬಾಲನಟಿ ರುಬಿನಾಳನ್ನು ಸಾಯಿಸಿಬಿಟ್ಟಿದ್ದಾರೆ. ಬಂದ್ರಾದಲ್ಲಿ ನಡೆದ ಅಗ್ನಿದುರಂತದಲ್ಲಿ 2000 ಮಂದಿ ಮನೆ ಕಳೆದುಕೊಂಡಿದ್ದಾರೆ, 21 ಮಂದಿ ಗಾಯಗೊಂಡಿದ್ದರು. ಆದರೆ ಟಿವಿ9 ರಾತ್ರಿ ಒಂಬತ್ತು ಗಂಟೆಯ ನ್ಯೂಸ್ ನಲ್ಲಿ ಅವಳನ್ನು ಸಾಯಿಸಿಯೇ ಬಿಟ್ಟಿದ್ದಾರೆ! ದಯವಿಟ್ಟು ಇದನ್ನು ಅವರ ಗಮನಕ್ಕೆ ತರುವ ಉದ್ದೇಶದಿಂದ ಬರೆಯಿರಿ. ಈ ರೀತಿ ಅನಾಹುತಗಳನ್ನು ಟಿವಿ 9 ಮಾಡುತ್ತಿರುತ್ತದೆ

  ReplyDelete
 6. ’ಸಂಪಾದಕೀಯ’ ನಾನು ರೆಗ್ಯುಲರ್ ಭೇಟಿಕೊಡುವ ಬ್ಲಾಗ್ ಆಗಿಬಿಟ್ಟಿದೆ.

  ReplyDelete
 7. ಅಭಿನಂದನೆಗಳು.
  ಮುಂದಿನೆಲ್ಲ ಹೆಜ್ಜೆಗಳೂ
  ಇದೇ ರೀತಿ ಸಮಚಿತ್ತದೊಂದಿಗೆ ಸಾಗಲಿ.

  ReplyDelete
 8. ಸಂಪಾದಕೀಯದ ಹಿಟ್ಸ್ ಒಂದು ಲಕ್ಷ ದಾಟಿ ಹೋದಾಗ ಗಮನಿಸಿದ ಒಂದು ಅಂಶ

  (ಪ್ರಾಯಶಃ ) ಕರ್ನಾಟಕ ರಾಜ್ಯದ ರಾಜಧಾನಿ ನಗರ ಬೆಂಗಳೂರು ನಗರದಲ್ಲಿ ಕನ್ನಡದ ಬಗ್ಗೆ ಆಸಕ್ತಿ ಕಡಿಮೆ ಯಾಕೆಂದರೆ ನಾಡಿನ ಆಸಕ್ತ ಕನ್ನಡಿಗರು ವಿಶ್ವದ 62 ದೇಶಗಳಲ್ಲಿ ಹರಡಿದ್ದಾರೆ.!

  -ಪ.ರಾಮಚಂದ್ರ,
  ರಾಸ್ ಲಫ್ಫಾನ್, ಕತಾರ್.

  ReplyDelete
 9. ಅವಿನಶ್ ಕನ್ನಮ್ಮನವರ್March 6, 2011 at 2:53 PM

  ಚೀನಾದಲ್ಲಾ....???!! ಒಹೋ ನಿಮ್ಮ IP adress ಅಲ್ಲಿಯದಾ ಅಥವಾ ನಿಮ್ಮ ವೆಬ್ ನ server ಅಲ್ಲಿದೆಯಾ!!???

  ReplyDelete
 10. ಧನ್ಯವಾದಗಳು ಪ.ರಾಮಚಂದ್ರ, ಟಿ.ಗುರುರಾಜ್, ಅವಿನಾಶ್, ಕೃಷ್ಣಪ್ರಕಾಶ, ಇಂಗಿತ, ಮಹೇಶ್ ಭಟ್

  ReplyDelete
 11. @ ಸಂಪಾದಕೀಯ  ಒಂದು ಲಕ್ಷ ಹಿಟ್ಸ್ ದಾಟಿದ್ದರಲ್ಲಿ ಅಂತಹ ಆಶ್ಚರ್ಯವೇನೂ ಇಲ್ಲ. ಆದರೆ ಓದುಗರ ಮನಸ್ಸು ಗೆದ್ದಿದೆಯಲ್ಲಾ ಅದು ನೋಡಿ ಸಂಭ್ರಮಿಸುವ ವಿಷಯ. ಮಾಧ್ಯಮ ರಂಗದ ಕುರಿತ ಹೊಸ ಹೊಸ ಮಾಹಿತಿ , ಚರ್ಚೆ, ಲೇಖನಗಳ ಮೂಲಕ ಜನಮನ ಗೆದ್ದಿರುವ ಸಂಪಾದಕೀಯ ಬ್ಲಾಗ್ ಮಾಧ್ಯಮ ರಂಗದ ಆಸಕ್ತಿಯುಳ್ಳವರಿಗೆ ಒಂದು ಅತ್ಯಂತ ಉಪಯುಕ್ತ ತಾಣವಾಗಿ ಮೂಡಿ ಬರುತ್ತಿದೆ. ಹೀಗೆ ಮುಂದುವರಿದರೆ ಹಿಟ್ಸ್ ಗಳು ಲಕ್ಷದಿಂದ ಅತೀ ಶೀಘ್ರದಲ್ಲಿ ಕೋಟಿಗಳಿಗೆ ತಲುಪುವುದರಲ್ಲಿ ಸಂಶಯವಿಲ್ಲ

  ReplyDelete
 12. Sampadakeeya is my favorite blog - Harsha Kugwe

  ReplyDelete
 13. congrats... E khushi heart nalli irli plzzz.. dayavittu talege erskobedi..:)

  ReplyDelete