Friday, March 4, 2011

ಸಂಸ್ಕೃತಿಯನ್ನು ವಾಣಿಜ್ಯೀಕರಿಸಿಕೊಳ್ಳುವುದು ರೋಗದ ಮಾರ್ಗ...


ಇನ್ಫೋಸಿಸ್ ಮುಖ್ಯಸ್ಥ ಎನ್.ಆರ್.ನಾರಾಯಣಮೂರ್ತಿ ಬೆಳಗಾವಿಯಲ್ಲಿ ನಡೆಯುವ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸುತ್ತಿದ್ದಾರೆ. ನಾರಾಯಣಮೂರ್ತಿಯವರಿಂದ ಸಮ್ಮೇಳನ ಉದ್ಘಾಟಿಸುವ ಸರ್ಕಾರದ ನಿಲುವು ಈಗ ಚರ್ಚೆಯ ವಿಷಯವಾಗಿದೆ. ಈ ಕುರಿತು ಪತ್ರಿಕೆಗಳಲ್ಲಿ, ಟಿವಿ ಚಾನಲ್‌ಗಳಲ್ಲಿ, ಇ-ಮ್ಯಾಗಜೀನ್‌ಗಳಲ್ಲಿ, ಬ್ಲಾಗ್‌ಗಳಲ್ಲಿ, ಸೋಷಿಯಲ್ ನೆಟ್‌ವರ್ಕ್‌ಗಳಲ್ಲಿ, ಎಸ್‌ಎಂಎಸ್‌ಗಳಲ್ಲಿ ಬಿರುಸಿನ ಚರ್ಚೆ ನಡೆದಿದೆ.

ಈ ಕುರಿತು ಸಂಪಾದಕೀಯವೂ ಒಂದು ಚರ್ಚೆ ನಡೆಸಬೇಕು ಎಂಬುದು ಹಲವರ ಬೇಡಿಕೆ. ಈ ಹಿನ್ನೆಲೆಯಲ್ಲಿ ಪ್ರಾರಂಭಿಕವಾಗಿ ಕುವೆಂಪು ವಿಶ್ವವಿದ್ಯಾಲಯದ ಡಾ. ಕಿರಣ್ ಎಂ.ಗಾಜನೂರು ಬರೆದ ಒಂದು ಟಿಪ್ಪಣಿಯನ್ನು ನಿಮ್ಮ ಮುಂದಿರಿಸಿದ್ದೇವೆ. ಎಲ್ಲರ ಅಭಿಪ್ರಾಯಗಳಿಗೂ ಸ್ವಾಗತ. ಆದರೆ, ವೈಯಕ್ತಿಕ ನಿಂದನೆ, ಕುಹಕದ ಪ್ರತಿಕ್ರಿಯೆಗಳು ಬೇಡ. ಇಂಥವನ್ನು ಪ್ರಕಟಿಸುವುದಿಲ್ಲ ಎಂದು ಮೊದಲೇ ಸ್ಪಷ್ಟಪಡಿಸುತ್ತೇವೆ. ನಿಮ್ಮ ಪ್ರತಿಕ್ರಿಯೆ ವಸ್ತುನಿಷ್ಠವಾಗಿರಲಿ, ಹೊಸ ಹೊಳಹುಗಳನ್ನು ನೀಡುವಂತಿರಲಿ, ಸಂದರ್ಭೋಚಿತವಾಗಿರಲಿ.

ಡಾ.ಕಿರಣ್ ಅವರ ಪ್ರತಿಕ್ರಿಯೆ ಇಲ್ಲಿದೆ.

ಕಿರಣ್ ಗಾಜನೂರ್
ಒಂದು ಅರ್ಥದಲ್ಲಿ ವಿಶ್ವ ಕನ್ನಡ ಸಮ್ಮೇಳನದ ಮೂಲ ಉದ್ದೇಶ ಕರ್ನಾಟಕವನ್ನು, ಕನ್ನಡ ಸಂಸ್ಕೃತಿಯನ್ನು ಬೌದ್ಧಿಕವಾಗಿ, ಆಕರ್ಷಕವಾಗಿ ಹೊರಜಗತ್ತಿನ ಮುಂದೆ ಮಂಡಿಸುವುದಾಗಿದೆ. ಆದರೆ ಮಂಡಿಸುವುದು ಹೇಗೆ ಎಂಬ ಪ್ರಶ್ನೆ ಇಲ್ಲಿ ಬಹಳ ಪ್ರಮುಖ. ಅದಕ್ಕೆ ಉತ್ತರವಾಗಿ ನಾರಾಯಣ ಮೂರ್ತಿಯವರಂತಹ ಒಬ್ಬ ಆಧುನಿಕ (ಬಂಡವಾಳ ಶಾಹಿ) ವ್ಯಾಪಾರಿ ಸಮ್ಮೆಳನವನ್ನು ಉದ್ಘಾಟಿಸಿದರೆ ಸಮ್ಮೇಳನದ ಉದ್ದೇಶ ಈಡೇರಬಹುದು ಎಂದು ಸರ್ಕಾರ ಚಿಂತಿಸಿದಂತೆ ಕಾಣುತ್ತದೆ. ಇದಕ್ಕೆ ಸಂಬಂಧಿಸಿದಂತೆ ಬರಗೂರು ಅವರು ಎತ್ತಿರುವ ತಾತ್ವಿಕ ಭಿನ್ನಾಭಿಪ್ರಾಯ ಒಂದು ನೆಲೆಯಿಂದ ಬಹಳ ಮಹತ್ವವಾದುದು. ಅಂದರೆ ಒಂದು ಭಾಷೆ, ಸಂಸ್ಕೃತಿ ತನ್ನನ್ನು ತಾನು ಹೊರಜಗತ್ತಿಗೆ ವಾಣಿಜ್ಯೀಕರಿಸಿಕೊಳ್ಳುವುದು ಸುಲಭ. ಆದರೆ ಅದು ರೋಗದ ಮಾರ್ಗ. ಒಂದು ನಾಡು ತನ್ನಲ್ಲಿರುವ ಕಲೆ, ಜೀವನಕ್ರಮದ ಉತ್ಸವಗಳನ್ನೂ ವಾಣಿಜ್ಯೀಕರಿಸಿ ಅದನ್ನು ರಫ್ತು ಮಾಡಲು ಪ್ರಯತ್ನಿಸುವುದು ಅಗ್ಗದ ದಾರಿ. ಮತ್ತು ಅಂತಹ ಒಂದು ಸಮಾರಂಭಕ್ಕೆ ಜಗತ್ತಿನ ವಾಣಿಜ್ಯೀಕರಣದ ರೂವಾರಿ ನಾರಾಯಣ ಮೂರ್ತಿಯಂತಹವರನ್ನು ಕರೆಸುವುದು ಇನ್ನು ಅಗ್ಗದ ದಾರಿ. ಇದನ್ನೆ ಬರಗೂರು ಅವರು ಇದು ಆತ್ಮಗೌರವದ ಪ್ರಶ್ನೆ ಎಂದು ಕರೆದಿದ್ದು ಎಂದು ನನಗೆ ಅನ್ನಿಸುತ್ತದೆ. ವಿಶ್ವಕನ್ನಡ ಸಮ್ಮೇಳನದ ಮುಖ್ಯ ಉದ್ದೇಶ ಜಾಗತೀಕರಣದ ಬಿರುಗಾಳಿಗೆ, ವ್ಯಾಪಾರಿ ಪ್ರಪಂಚದ ಏಕರೂಪದ ಸಂಸೃತಿಯ ನಿರ್ಮಾಣದ ಮೂಢತನಕ್ಕೆ ವೇದಿಕೆ (ಸಂಸ್ಕೃತಿಯನ್ನೆ ವ್ಯಾಪಾರಿ ಸರಕಾಗಿಸಿ) ಒದಗಿಸುವುದಲ್ಲ. ಬದಲಾಗಿ ಕನ್ನಡವನ್ನು, ಇಲ್ಲಿನ ವೈವಿಧ್ಯಮಯ ಸಂಸ್ಕೃತಿಯನ್ನು ಇಲ್ಲಿನ ಜನಜೀವನವನ್ನು ಜಗತ್ತಿಗೆ ತಲುಪಿಸಿ ಜಗತ್ತು ಇಲ್ಲಿಂದ ಈ ನೆಲದಿಂದ ಕಲಿಯುವುದು ಏನಿದೆ ಎಂಬುದನ್ನು ತೋರಿಸುವ ಉದ್ದೇಶ ಹೊಂದಬೇಕು. ಅದಕ್ಕೆ ಬರಗೂರು ಹೇಳಿದಂತೆ ಸಾಹಿತ್ಯದ ಹಿನ್ನೆಲೆಯ ವ್ಯಕ್ತಿ ಸಮ್ಮೇಳನ ಉದ್ಘಾಟಿಸಿದರೆ ಸೂಕ್ತ ಎಂಬುದು ನನ್ನ ಅಭಿಪ್ರಾಯ.

                                                                         -Dr. Kiran.M Gajanur, 
                                                                         R.T.A.In Political Science,
                                                                         Directorate of Distance Education
                                                                         Kuvempu university

26 comments:

 1. ಕಿರಣ್ ಸಾರ್ ಅಭಿಪ್ರಾಯಕ್ಕೆ ಸ್ವಾಗತ
  -ಕೆ.ಪಿ.

  ReplyDelete
 2. ಬರಗೂರರು ಹುಟ್ಟುಹಾಕಿರುವ ವಿಚಾರಧಾರೆ ಸರಿಯೋ ತಪ್ಪೋ ಎಂದೇಳುವಷ್ಟು ದೊಡ್ಡವನೇನಲ್ಲ ನಾನು. ಒಬ್ಬ ಸಾಮಾನ್ಯ ಕನ್ನಡಿಗನಾಗಿ ಹೇಳಬೇಕೆಂದರೆ ಕನ್ನಡಕ್ಕೆ ಬಾಚಿ ಬಾಚಿ ಕೊಡುಗೆ ಕೊಡುವಷ್ಟನ್ನು ಕನ್ನಡನಾಡಿನಲ್ಲೇ ಸಂಪಾದಿಸಿ ಕನ್ನಡಕ್ಕೆ ಕಿಂಚಿತ್ ಬೆಲೆಯನ್ನೂ ಕೊಡದ, ’ತೆರಿಗೆ ಕಡಿಮೆ ಮಾಡದಿದ್ದರೆ ಬೇರೆಡೆ ಹೋಗುವ’ ಬೆದರಿಕೆಯೊಡ್ಡಿ ತನ್ನ ಸ್ವಾರ್ಥದ ಬೇಳೆ ಬೇಯಿಸಿಕೊಳ್ಳುವ ಇನ್ಫಿ ಮೂರ್ತಿ ವಿಶ್ವ ಕನ್ನಡ ಸಮ್ಮೇಳನವನ್ನು ಉದ್ಘಾಟಿಸಲು ಆಯ್ಕೆಯಾಗಿರುವುದು ನನಗೆ ಸಮ್ಮತವಲ್ಲ

  ReplyDelete
 3. ಸಂಸ್ಕೃತಿಯನ್ನು ವಾಣಿಜ್ಯಕರಣ ಮಾಡವುದನ್ನು ಎಲ್ಲಾ ಸಾಮಾನ್ಯ ಜನಗಳು ವಿರೋಧಿಸುತ್ತಾರೆ ಮತ್ತು ಅ ರೀತಿ ಮಾಡಲು ಯಾರಿಗೂ ಮನಸು ಬರುವುದಿಲ್ಲ. ಹಣವೇ ಎಲ್ಲಾ ಅಲ್ಲಾ ಅಲ್ಲವಾ? ಕಿರಣರವರ ಅಬಿಪ್ರಾಯಗಳು ಸಕಾಲಿಕ ಧನ್ಯವಾದಗಳು ಸರ್!
  -thriputapriya

  ReplyDelete
 4. ಒಟ್ಟಿನಲ್ಲಿ "we get what we deserve."
  ಯಾರೋ ಒಬ್ಬರು "ಸನ್ಮಾನ್ಯ" ಮಂತ್ರಿವರ್ಯರ ಬದಲು ಇವರು!
  ದುಡ್ಡು ಮಾಡಿಕೊಂಡವರೆಲ್ಲ ಸಾಮಾಜಿಕ ನಾಯಕರಾಗುವುದಾದರೆ, ಅದು ಇನ್ನು ಕೆಲವೇ ದಿನಗಳಲ್ಲಿ ರಿಯಲ್ ಎಸ್ಟೇಟ್ ದಲ್ಲಾಳಿಗಳಿಗೆ, ವೇಶ್ಯಾವಾಟಿಕೆಗಳ ತಲೆಹಿಡುಕರಿಗೂ ಸುಗ್ಗಿಯ ಕಾಲ ಬರಲಿದೆ ಎಂಬ ಶುಭಶಕುನ. ಕರೆಯುವವರು ಯಾವುದೋ ಮುಲಾಜಿಗೆ ಕರೆದಿರಬಹುದು ಎಂದಿಟ್ಟುಕೊಳ್ಳೋಣ; ಆದರೆ ತಾನು ಬಂದು ಉದ್ಘಾಟಿಸಲು ಸಿದ್ಧ ಎಂಬ "ವಿನಯ" ಇದೆಯಲ್ಲ - ಇದು ಬರಲಿರುವ ದಿನಗಳಿಗೆ ಸೂಚನೆ!!! ಈ ವಿನಯವನ್ನು ಅವರು ಈ ತನಕ ಬಹಿರಂಗವಾಗಿ ವ್ಯಕ್ತಪಡಿಸಿದಂತಿಲ್ಲ. ಆದರೆ ಸರ್ಕಾರ ನಿರ್ಧಾರ ಪ್ರಕಟಿಸುವ ಮೊದಲು ಒಪ್ಪಿಗೆ ಪಡೆಯದಿರುಷ್ಟು "ಮೊದ್ದು" ಅಲ್ಲ ಎಂದು ನನ್ನ ನಂಬಿಕೆ. ಬುದ್ಧಿವಂತರದು ಮಾತು ಕಡಿಮೆ. ಇದು ಕನ್ನಡಿಗರಿಗೆ ಹೊಸ ಅನುಭವವೇನಲ್ಲ. ಕಳೆದ ರಾಷ್ಟ್ರಪತಿ ಚುನಾವಣೆಯನ್ನು ನೆನಪಿಸಿಕೊಳ್ಳಿ. ಇವರು ಎಲ್ಲೂ ಸಲ್ಲಬಲ್ಲವರು!

  ReplyDelete
 5. ನಾರಾಯಣಮೂರ್ಸಂತಿಯವರು ಮಾಡಿದ "ಸಂಸ್ಕೃತಿಯ ವಾಣಿಜ್ಯೀಕರಣಕ್ಕೆ" ಎರಡು ಉದಾಹರಣೆ ಕೊಡುತ್ತೀರಾ?

  ReplyDelete
 6. ನಾರಾಯಣ್ ಮೂರ್ತಿ ಹೆಸರಾಂತ್ ಕನ್ನಡ ದ ಉದ್ಯಮಿ ಸಾವಿರಾರು ಕನ್ನಡ ಜನಕೆ ಲುಕ್ಷುರಿಸ್ ಜೀವನ್ ನಡೆಸಲು ದಾರಿ ಮಾಡಿದ ವ್ಯಕ್ತಿ ಹಾಗು ಇವರ ಅರ್ಧಾಂಗಿ ಸುಧಾ ಮೂರ್ತಿ ಅನೇಕ್ ಪುಸ್ತಕ್ ಬರೆದ ಸಾಹಿತಿ ಇವರಿಂದ ಸಮಾವೇಶ್ ಮಾಡಿಸಿದರೆ ಕನ್ನಡ ಕ್ಕೆ ಕೀರ್ತಿ !!!!!
  ಮಹಾರಾಷ್ಟ್ರ ದ ಅನೇಕ್ ಸಮ್ಮೆಳ ಗಳನ್ನು ಅಲ್ಲಿನ ಉಧಮಿ ಕಿರ್ಲೋಸ್ಕರ್ ಮಾಡಿಲ್ಲವೇ..? ಯಾಕೆ ಹೀಗೆ ಎಲ್ಲದಕ್ಕೂ ಹೀಗೆ ಬುದ್ದಿವಂತರಿಂದ್ (!) ಅಪಸ್ವರ ?
  vithalrao kulkarni malkhed.

  ReplyDelete
 7. ಸರಕಾರ ಇಲ್ಲಿ ವಾಣಿಜ್ಯೀಕರಣದ ಬಗ್ಗೆ ಚಿಂತಿಸಿದೆ. ಅದರೂ ಇದು ಖಂಡಿತವಾಗಿಯೂ ಒಪ್ಪತಕ್ಕ ವಿಚಾರ. ಅದು ರೋಗದ ಮಾರ್ಗವೆನ್ನುವುದು ದಿಟವಲ್ಲ. ಸಾಹಿತ್ಯ ಎಲ್ಲರ ಮೆಚ್ಚುಗೆಯ ವಿಷಯವಲ್ಲ. ಎಸ್ಟೋ ಜನ ಕಿರುತೆರೆ, ಸಿನಿಮಾ, ವ್ಯವಹಾರ, ತಂತ್ರಾಂಶ ಉತ್ಪಾದನೆ.. ಇತ್ಯಾದಿ ಇಷ್ಟಪಟ್ಟವರಿದ್ದಾರೆ. ಇವರನ್ನು ಮುಖ್ಯ ವಾಹಿನಿಗೆ ತರುವುದು ಹೇಗೆ? ಸಾಹಿತ್ಯಿಕ ಅಭಿರುಚಿ ಉಳ್ಳವರಿಗೆ ಕನ್ನಡ ಸಾಹಿತ್ಯ ಸಮ್ಮೇಳನಗಳಿವೆ. ಉಳಿದ ಅಭಿರುಚಿಯವರಿಗೆ ಹೀಗೆ ಬೇರೆಯೇ ಸಮ್ಮೇಳನವಿಟ್ಟರೆ ಅರ್ಥಪೂರ್ಣವೆಂದು ನನ್ನ ಅನಿಸಿಕೆ. ಇದರಿಂದ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಅರ್ಥಪೂರ್ಣವಾಗುವ ಸಾಧ್ಯತೆಗಳಿವೆ. ಐಶ್ವರ್ಯ, ಮೂರ್ತಿ, ಮಲ್ಯ, ದೀಪಿಕಾ ಇವರೆಲ್ಲರಿಗೂ ನೀವು ಕನ್ನಡಿಗರು ಎಂದು ಕಾಲ ಕಾಲಕ್ಕೆ ನೆನಪು ಮಾಡಿಕೊಟ್ಟ ಹಾಗೂ ಆಗುತ್ತದೆ. ಕನ್ನಡ ಅಂತರರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯಲಿ ಇವರಿಂದ ಎನ್ನುವ ಬಯಕೆ ಎಲ್ಲರಿಗೂ ಇದೆಯಲ್ಲವೇ?

  ReplyDelete
 8. ಕನ್ನಡ-ಕನ್ನಡಿಗ-ಕರ್ನಾಟಕ ಕುರಿತಾಗಿ ಬರಗೂರು ಅವರು ಬರೆದಿರುವ 'ಕನ್ನದಾಭಿಮಾನ' ಗ್ರಂಥವನ್ನು (೨೦೦೨ರ ಅಂಕಿತ ಪ್ರಕಾಶನದ ಪುಸ್ತಕ) ಎಲ್ಲರೂ ಒಮ್ಮೆ ಓದಿ. ಅವರು ಏಕೆ ನಾರಾಯಣಮೂರ್ತಿಯನ್ನು ವಿರೋಧಿಸಿದರು ಎಂದು ತಿಳಿಯುತ್ತದೆ.

  ReplyDelete
 9. ಕನ್ನಡ ಬಾರದ ಕನ್ನಡಿಗರ ಸೃಷ್ಠಿ. ನಮ್ಮನ್ನು ನಾವು ಈ ರೀತಿ ಪರಿಚಯಿಸಿಕೊಳ್ಳಬಹುದು. "We are kannadigas, but we don't know how to talk or read Kannada". ಲಕ್ಷಗಟ್ಟಲೇ ಮಾಹಿತಿ ತಂತ್ರಜ್ಞಾನ ಬಲ್ಲ ಇಂಜಿನಿಯರುಗಳಿದ್ದರೂ ಕನ್ನಡದಲ್ಲಿ ಮಾಹಿತಿಯನ್ನು ಸಂಗ್ರಹಿಸುವ ಅಥವಾ ಒಗ್ಗೂಡಿಸುವ ಕುರಿತು ಅವರ ಕೊಡುಗೆ ತುಂಬಾ ಕಡಿಮೆಯೇ ಸರಿ. ಭಾರತೀಯರಿಗೆ ಸ್ವತಂತ್ರವಾಗಿ ವಿನ್ಯಾಸ ಮಾಡುವ ಸಾಮರ್ಥ್ಯದ ಕೊರತೆಯಿದೆಯೆಂಬ ಪಾಶ್ಚಾತ್ಯರ ದೂರಲ್ಲಿ ಸತ್ಯವಿಲ್ಲದೇ ಇಲ್ಲ. ಇಲ್ಲಿ ನಾರಾಯಣ ಮೂರ್ತಿಯವರೊಬ್ಬರನ್ನೇ ದೂರುವದರಲ್ಲಿ ಅರ್ಥವಿಲ್ಲ.

  ReplyDelete
 10. ಸ್ವಾಮಿ ಕಿರಣ್ ಗಾಜನೂರ ಅವರೆ, "ಕರ್ನಾಟಕವನ್ನು, ಕನ್ನಡ ಸಂಸ್ಕೃತಿಯನ್ನು ಬೌದ್ಧಿಕವಾಗಿ, ಆಕರ್ಶಕವಾಗಿ ಹೊರಜಗತ್ತಿನ ಮುಂದೆ ಮಂಡಿಸುವುದಾಗಿದೆ. ಆದರೆ ಮಂಡಿಸುವುದು ಹೇಗೆ ಎಂಬ ಪ್ರಶ್ನೆ ಇಲ್ಲಿ ಬಹಳ ಪ್ರಮುಖ", "ಅಂದರೆ ಒಂದು ಭಾಷೆ ತನ್ನನ್ನು ತಾನು ಹೊರ ಜಗತ್ತಿಗೆ ವಾಣಿಜ್ಯೀಕರಿಸಿಕೊಳ್ಳುವುದು ಸುಲಭ, ಆದರೆ ಅದು ರೋಗದ ಮಾರ್ಗ. ಒಂದು ನಾಡು ತನ್ನಲ್ಲಿರುವ ಕಲೆ, ಜೀವನ ಕ್ರಮದ ಉತ್ತಮಗಳನ್ನೂ ವಾಣಿಜ್ಯೀಕರಿಸಿ ಅದನ್ನು ರಪ್ತು ಮಾಡಲು ಪ್ರಯತ್ನಿಸುವುದು ಅಗ್ಗದ ದಾರಿ" ಈ ಎರಡೂ ವಾಕ್ಯಗಳನ್ನು ಬರೆದವರು ಡಾ.ಡಿ.ಆರ್.ನಾಗರಾಜ್, ಪ್ರಸ್ತುತ ದ್ವಿತೀಯ ಪಿಯುಸಿಯ ಕನ್ನಡ ಪುಸ್ತಕದ ’ಕನ್ನಡ ಸಂವರ್ಧನೆ’ ಲೇಖನದಲ್ಲಿದೆ. ಅದನ್ನೇ ನೇರವಾಗಿ ಇಲ್ಲಿ ಬಳಸಿಕೊಳ್ಳಲಾಗಿದೆ. ಹೋಗಲಿ ಕೊನೆಗೆ ಈ ಮಾತನ್ನು ಹೇಳಿದವರು ಡಾ.ಡಿ.ಆರ್.ನಾಗರಾಜ್ ಎಂದಾದರೂ ಹೇಳಬಹುದಾಗಿತ್ತು. ಹೇಳದೇ ಇರುವುದು ಅಪಚಾರವಲ್ಲವೇ? ಅಯ್ಯೋ ಬರಹಗಾರರ ದುಸ್ಥಿತಿಯೇ!

  ReplyDelete
 11. ಮಾನ್ಯರೆ, ಇಷ್ಟೆಲ್ಲ ವಾದ, ವಿವಾದಗಳಿಗಿಂತ, ಸಮಾಜದ ತೀರ ಕೆಳಸ್ತರದ ಒಬ್ಬ ಕನ್ನಡಿಗ ರೈತನಿರಲಿ, ಕೂಲಿಕಾರನಿರಲಿ, ಶ್ರಮಿಕನಿರಲಿ ಅವನಿಂದ ಉದ್ಘಾಟನೆ ಮಾಡಿಸುವುದು ಸೂಕ್ತವಲ್ಲವೇ? ಅದೇಕೆ ಯಾವಾಗಲೂ ರಾಜ್ಯದ, ದೇಶದ ಅತಿ ದೊಡ್ಡ ಶ್ರೀಮಂತರನ್ನೇ ಉದ್ಘಾಟನೆಗೆ ಕರೆಯುತ್ತಾರೋ ತಿಳಿಯುತ್ತಿಲ್ಲ. ನನ್ನ ದೃಷ್ಟಿಯಲ್ಲಿ ಒಬ್ಬ ಶ್ರೀಸಾಮಾನ್ಯನಿಗಿಂತ ಉದ್ಘಾಟನೆಗೆ ಮತ್ತೊಬ್ಬ ಸೂಕ್ತ ವ್ಯಕ್ತಿಯಿಲ್ಲ.

  ReplyDelete
 12. The government seems to have decided to get the meet inagurted by a popular Kannadiga who is know to even a common man and tumbled upon NRN's name. The question again comes up - why the work of literatuire is left to government? why can't the Kannada Sahitya Parishat be entrusted with this responsibility and let them decide?

  ReplyDelete
 13. Udaya Shankar PuranikMarch 6, 2011 at 1:19 PM

  ಪ್ರತಿಷ್ಟಿತ ಮತ್ತು ಬಹುರಾಷ್ಟ್ರೀಯ ಬ್ಯಾಂಕುಗಳ ಎಟಿಎಂಗಳಲ್ಲಿ, ಮೊಬೈಲ್ ದೂರವಾಣಿ ಸೇವಾ ಸಂಸ್ಥೆಗಳಲ್ಲಿ, ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕನ್ನಡ ಬಳಕೆಗೆ ಬಂದಿರುವುದು ಕನ್ನಡ ಪ್ರೇಮಿ ಮಾಹಿತಿ ತಂತ್ರಜ್ಞರ ನಿರಂತರ ಶ್ರಮದ ಫಲವಾಗಿ. ಕನ್ನಡ ನಿಘಂಟು, ಕನ್ನಡ ವಿಶ್ವಕೋಶ, ಪಂಪ ಭಾರತ, ಕುಮಾರ ವ್ಯಾಸ ಭಾರತ ಮೊದಲಾದವುಗಳು ಇಂದು ಕನ್ನಡ ಸಿ.ಡಿ, ಡಿ.ವಿ.ಡಿಗಳಲ್ಲಿ ಲಭ್ಯವಿರುವುದು ಇದೇ ಕಾರಣದಿಂದ.

  ಕನ್ನಡವನ್ನು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನೂ ವ್ಯಾಪಕವಾಗಿ ಬಳಸಬಹುದಾಗಿದೆ. ಶ್ರೀ ನಾರಾಯಣ ಮೂರ್ತಿಯಂಥಹವರು ಇಂತಹ ಯೋಜನೆಗೆ ಮಾರ್ಗದರ್ಶನ ನೀಡಬಲ್ಲರು. ವಿಶ್ವ ಕನ್ನಡ ಸಮ್ಮೇಳನದಲ್ಲಿ ಇಂತಹ ಪ್ರಯತ್ನ ನೆಡೆಯಬೇಕೆ ಹೊರತು, ವೈಯಕ್ತಿಕ ನಿಂದನೆಯಲ್ಲ.

  ReplyDelete
 14. ಮಾನ್ಯರೆ ಯಾವುದೇ ಒಂದು ಸಂಶೋದನ ಲೇಖನ ಬರೆಯುವಾಗ ಅಲ್ಲಿ ಅಡಿಟಿಪ್ಪಣಿಯನ್ನು ಅವಶ್ಯಕವಾಗಿ ಬಳಸುತ್ತೇವೆ ಆದರೆ ಒಂದು ಪ್ರತಿಕ್ರಿಯೆಗೆ ಅದರ ಅವಶ್ಯಕತೆ ಇಲ್ಲ ಮೇಲಾಗಿ ನಾವು ಯಾವ ವಿಷಯವನ್ನು ಹೊಸದಾಗಿ ಯೋಚಿಸಲು ಒಂದು ಹಂತದವರೆಗೆ ಸಾದ್ಯವಿಲ್ಲ. ಲಬ್ಯವಿರುವ ಸಾಹಿತ್ಯದ ಮೊರೆ ಹೋಗಲೇಬೇಕಾಗುತ್ತದೆ. ಅಲ್ಲದೆ ಇಲ್ಲಿನ ನನ್ನ ಪ್ರತಿಕ್ರಿಯೆ ಒಂದು ಪೂರ್ಣ ಲೇಖನದ ಸಣ್ಣ ಭಾಗ ( ಪೂರ್ಣ ಲೇಖನ ಭಾವತಿರ ಪತ್ರಿಕೆಗೆ ಕಳುಹಿಸಲಾಗಿದೆ ಅದರಲ್ಲಿ ಇ ಮುಂದಿನ ಅಡಿಟಿಪ್ಪಣಿ ಸೇರಿದೆ ಈ ಹಿನ್ನೆಲೆಯಲ್ಲಿ ಕನ್ನಡದ ವಿಮಶರ್ಾ ಚಿಂತನೆಯಲ್ಲಿ ಡಿ.ಆರ್ ಭಿನ್ನವಾಗಿ ನಿಲ್ಲುತ್ತಾರೆ ಮತ್ತು ಆಸಕ್ತಿ ಕೆರಳಿಸುತ್ತಾರೆ. ಖಂಡಿತ ಕನ್ನಡದ ಕುರಿತಾದ ಸಂಶೋಧಾನಾ ಜಗತ್ತು ಡಿ.ಆರ್ ಅವರನ್ನು ತುಂಬ ಗಂಭಿರವಾಗಿ ಪರಿಗಣಿಸುವ ಅಗತ್ಯವಿದೆ. ) ಆದರು ಓದುಗರ ಮಾಹಿತಿಗಾಗಿ ಇದರಲ್ಲಿನ ಕೆಲವು ವಾದಗಳನ್ನು ನಾಗರಾಜ್ ಅವರ ಲೇಖನಗಳುಳ್ಳ ಅಗ್ರಹಾರ ಕೃಷ್ಣಮೂರ್ತಿ ಸಂಪಾದಿತ ಸಂಸ್ಕ್ರುತಿ ಕಥನ ಎಂಬ ಪುಸ್ತಕದಿಂದ ಪಡೆಯಲಾಗಿದೆ. ಪುಟ ಸಂಖ್ಯೆ ೬೨

  ReplyDelete
 15. kira avre nimma maatugu DR Nagaraj (vimarshaka) avaddagive. yaak saar avanna nimma mataagisutteera?/ (sourse;2nd pu text book)

  ReplyDelete
 16. ನಾರಾಯಣ ಮೂರ್ತಿಯವರ ಆಯ್ಕೆಗೆ ನನ್ನದೂ ವಿರೋಧವಿದೆ. ಹಾಗೆಂದ ಮಾತ್ರಕ್ಕೆ ಕಿರಣ್‌ ಹೇಳಿದಂತೆ, ಕೇವಲ ಸಾಹಿತ್ಯದ ಹಿನ್ನೆಲೆಯವರು ಮಾತ್ರ ಇಂಥ ಮಹತ್ವದ ಸಮ್ಮೆಳನದ ಉದ್ಘಾಟನೆಗೆ ಅರ್ಹರು ಎಂಬ ಮಾತು ನಮ್ಮ ಸಣ್ಣತನವಾದೀತು. ಕನ್ನಡ ಕೇವಲ ಸಾಹಿತಿಗಳ ಸ್ವತ್ತಲ್ಲ. ಕನ್ನಡದ ಕುರಿತು ಸೊ ಕಾಲ್ಡ್‌‌ ಸಾಹಿತಿಗಳಿಗೆ ಕಾಳಜಿ ಇರಬಹುದಾದರೂ, ಆ ಕಾಳಜಿ ಆಟೋ ಮೇಲೆ ಕನ್ನಡ ಧ್ವಜವನ್ನೇರಿಸಿಕೊಂಡು ಹೆಮ್ಮೆಯಿಂದ ಸಾಗುವ ಆಟೋಡ್ರೈವರ್‌ನ ಕನ್ನಡ ಕಾಳಜಿಗಿಂತ ಯಾವ ರೀತಿಯಿಂದಲೂ ಶ್ರೇಷ್ಠವಾದದ್ದಲ್ಲ. ಇಂತ ಮಹತ್ವದ ಸಮ್ಮೇಳನದ ಉದ್ಘಾಟನೆ ಮಾಡುವ ವ್ಯಕ್ತಿ ಸಾಹಿತ್ಯದ ಹಿನ್ನೆಲೆಯವರು ಆಗದೇ ಇದ್ದರೂ ಪರ್ವಾಗಿಲ್ಲ, ಕನ್ನಡ ಪ್ರೀತಿಯನ್ನಿಟ್ಟುಕೊಂಡವರಾಗಿರಬೇಕು. ಇನ್ಫೋಸಿಸ್‌ ಸಂಸ್ಥೆಯ ಸ್ಥಾಪನೆಯೊಂದೇ ನಾರಾಯಣ ಮೂರ್ತಿಯವರಿಗೆ ಪ್ರತಿಯೊಂದಕ್ಕೂ ಪರವಾನಗಿ ಕೊಟ್ಟಂತಾಗಿದೆ. ಇನ್ಫೋಸಿಸ್‌‌ ಕಛೇರಿಯ ಆವರಣದಲ್ಲಿ ಯಶಸ್ವಿಯಾದ ಮಾತ್ರಕ್ಕೆ ರಾಜ್ಯದ ಎಲ್ಲಾ ಆಯಾಮದಲ್ಲೂ ಅವರ ಉಪಸ್ಥಿತಿಯನ್ನು ಬಯಸುವುದು, ನಮ್ಮ ನಡುವೆ ಬೇರು ಬಿಡುತ್ತಿರುವ, ಹಣಕಾಸಿನ ವಿಚಾರದಲ್ಲಿ ಯಶಸ್ವಿಯಾದ ವ್ಯಕ್ತಿ ಎಲ್ಲಾ ರೀತಿಯಿಂದಲೂ ಶ್ರೇಷ್ಠ ಎಂಬ "ಎಂಬಿಎ" ಮನಸ್ಥಿತಿಯೇ ಕಾರಣ. ನಮ್ಮವರಾಗಿದ್ದೂ ಕನ್ನಡದ ಕುರಿತು ಕೊಂಚವೂ ಕಾಳಜಿ ಇಲ್ಲದ, "ಉಪಯೋಗವಾದಿ" ನಾರಾಯಣ ಮೂರ್ತಿಗಳಿಗಿಂತ ಹೊರರಾಜ್ಯದವರಾಗಿದ್ದೂ ಕ್ರಮೇಣ ಕನ್ನಡಿಗರಾದ ಪೊಲೀಸ್‌ ಅಧಿಕಾರಿ ಅಜಯ್‌ ಕುಮಾರ್‌ ಸಿಂಗ್‌, ಚಿರಂಜೀವಿ ಸಿಂಗ್‌ ಅಂಥ ನಿಷ್ಕಲ್ಮಷ ಪ್ರೀತಿಯ ವ್ಯಕ್ತಿಗಳೇ ಸಾವಿರ ಪಾಲು ಮೇಲು..ಇಂಥ ವ್ಯಕ್ತಿಗಳಿಂದ ಸಮ್ಮೇಳನ ಉದ್ಘಾಟನೆಯಾದರೆ ಆ ಸ್ಥಾನಕ್ಕೂ ನ್ಯಾಯ ಒದಗೀತು. ಎಲ್ಲರನ್ನೂ "ಇವ ನಮ್ಮವ, ಇವ ನಮ್ಮವ" ಎಂದಪ್ಪಿಕೊಳ್ಳುವ ಕನ್ನಡ ಸಂಸ್ಕೃತಿಯನ್ನು ಗೌರವಿಸಿದಂತಾದೀತು.
  ಅರುಣ್‌ ಕಾಸರಗುಪ್ಪೆ

  ReplyDelete
 17. ಸಂಶೋದನಾ ಬರವಣಿಗೆಗೆಯಂತೆ ಅಡಿ ಟಿಪ್ಪಣಿ ಬೇಕಿರಲಿಲ್ಲ ಮತ್ತು ಅದು ಪ್ರತಿಕ್ರಿಯೆಗಳಲ್ಲಿ ಸಾಧ್ಯವೂ ಇಲ್ಲವೆಂಬುದೂ ಎಲ್ಲರಿಗೂ ಗೊತ್ತು. ಆದರೆ ಡಿ.ಆರ್.ನಾಗರಾಜರು ಹೀಗೆ ಹೇಳುತ್ತಾರೆ ಎಂಬಂತೆ ಉಲ್ಲೇಖಿಸಬಹುದಿತ್ತು. ಆದರೆ ಅವರದ್ದನ್ನು ತಮ್ಮದೇ ವಿಚಾರಧಾರೆ ಎಂಬಂತೆ ತೋರಿಸಿಕೊಂಡಿರಿ. ಈ ಕೃತಿಚೌರ್ಯವನ್ನು ಸಮರ್ಥಿಸಿಕೊಳ್ಳಲು ಅಡಿಟಿಪ್ಪಣಿಯ ನೆಪಹೇಳುತ್ತಿದ್ದೀರಿ. ನೀವು ಇದೇ ಮೊದಲಿಗೆ ಈ ರೀತಿ ಮಾಡಿಲ್ಲ ಹಿಂದೆಯೂ ಯಾರದ್ದೋ ಕಥೆಯನ್ನು ತಮ್ಮ ಕನಸಿನಲ್ಲಿ ಬಂತೆಂದು ನಿಮ್ಮ ಬ್ಲಾಗಿನಲ್ಲಿ ಕಥೆ ಕಟ್ಟಿ ನಂತರ ಓದುಗರೊಬ್ಬರು ಅದು ತಮ್ಮದಲ್ಲ ಎಂದು ತೋರಿಸಿದಾಗ ಸಲ್ಲದ ನೆಪ ಹೇಳಿದಿರಿ. ಯಾವುದನ್ನಾದರೋ ಓದಿ, ಆ ಬಗ್ಗೆ ಓದಿದ ನಂತರ ಸ್ವಂತವಾಗಿ ತಮ್ಮ ಚಿಂತನೆಯನ್ನು ಬರೆಯಿರಿ ವಿಚಾರ ಮತ್ತೊಬ್ಬರಾದರೆ ಅವರನ್ನು ಉಲ್ಲೇಖಿಸಿ, ತಮ್ಮ ಘನತೆಗೇನೂ ಕುಂದು ಬರದು. ತಮ್ಮ ಸಂಪಾದಿತ "ಯಾರು ಹಿಂದೂ..." ಕೃತಿಯಲ್ಲಿನ ತಮ್ಮ ಲೇಖನಗಳ ಕುರಿತೂ ಇದೇ ರೀತಿಯ ಅಪಾದನೆಗಳಿವೆ. ಸಂಪಾದಕೀಯವೂ ಇಂತವರ ಪ್ರತಿಕ್ರಿಯೆಗಳನ್ನು ಎಚ್ಚರದಿಂದ ಪ್ರಕಟಿಸಬೇಕೆಂದು ವಿನಂತಿ.
  ಸಂಪತ್ ಕುಮಾರ್ ಬೆಳಗಲಿ

  ReplyDelete
 18. "ಹಿಂದೆಯೂ ಯಾರದ್ದೋ ಕಥೆಯನ್ನು ತಮ್ಮ ಕನಸಿನಲ್ಲಿ ಬಂತೆಂದು ನಿಮ್ಮ ಬ್ಲಾಗಿನಲ್ಲಿ ಕಥೆ ಕಟ್ಟಿ ನಂತರ ಓದುಗರೊಬ್ಬರು ಅದು ತಮ್ಮದಲ್ಲ ಎಂದು ತೋರಿಸಿದಾಗ ಸಲ್ಲದ ನೆಪ ಹೇಳಿದಿರಿ.'
  ಅತ್ಮಿಯ ಸಂಪತ್ ಕುಮಾರ್ ಬೆಳಗಲಿ ಅವರೇ ಮೇಲಿನ ತಮ್ಮ ಆಪಾದನೆ ಸತ್ಯಕ್ಕೆ ದೊರ ತಾವು ದಯವಿಟ್ಟು ನಾನು ನನ್ನ ಬ್ಲಾಗಿನಲ್ಲಿ ಬರೆದ ಕಥೆ ಯಾವುದು ಎಂದು ತಿಳಿಸುವ ಒಳ್ಳೆಯತನ ತೋರಿಸಿ ಮಾತು ನನ್ನ ಮಹಾ ತಪ್ಪನ್ನು ತಿದ್ದಿದ ಮಹಾನುಭಾವ ಯಾರು ಎಂದು ಹೇಳಿದರೆ ಉಪಯೋಗವದಿತು ಕೆಳಗೆ ನನ್ನ ಬ್ಲಾಗಿನ ಲಿಂಕ್ ನೀಡಿದ್ದೇನೆ ಪ್ರಯತ್ನಿಸಿ.
  http://kiran-gajanur.blogspot.com/2009/02/blog-post_26.html

  ತಮ್ಮ ಸಂಪಾದಿತ "ಯಾರು ಹಿಂದೂ..." ಕೃತಿಯಲ್ಲಿನ ತಮ್ಮ ಲೇಖನಗಳ ಕುರಿತೂ ಇದೇ ರೀತಿಯ ಅಪಾದನೆಗಳಿವೆ.
  ಇದಕ್ಕೆ ಸಂಬಂದಿಸಿದಂತೆ ಕೈಲಿ ಆಗದವರು ಮೈ ಪರಚಿಕೊಂಡರು ಎಂಬಂತೆ ಕೆಲವರು ಮಾತನಾಡುತ್ತಾರೆ ಅದನ್ನು ಕೇಳಿ ಮಾತನಾಡುವುದಕ್ಕಿಂತ ಪುಸ್ತಕ ಓದಿ ನಂತರ ತಿಳಿಸಿ ಅಲ್ಲದೆ ಇ ಕ್ಷೇತ್ರದಲ್ಲಿ ನಾನು ಇನ್ನು ತುಂಬ ಸಣ್ಣವನು ಎಂಬುದು ನನಗೆ ಗೊತ್ತು. ಕೆಲವರ ಕುರಿತಾಗಿ ಕೆಲವೇ ಜನರು ಮಾತನಾಡಬೇಕು ಎಂಬ ಮನಸ್ತಿತಿಯ ಜನರು ನಮ್ಮ ನಡುವೆ ಇದ್ದಾರೆ ಅವರನ್ನು ನೋಡಿ so called ನಾವು ಅಧಮರು ನಗುವುದಲ್ಲದೆ ಬೇರೇನೂ ಮಾಡಲು ಸಾದ್ಯವಿಲ್ಲ.
  ಮುಂದುವರೆದು ಇಲ್ಲಿ ವಯಕ್ತಿಕ ಅಂಶಗಳನ್ನು ಎಳೆದು ತರುವುದು ಬೇಡ ಎಲ್ಲ ಮಾನವರು ಅವರ ಕಾಲಘಟ್ಟದ ಸರಿ ತಪ್ಪುಗಳ ಮಿಶ್ರಣವೇ ಆಗಿರುತ್ತಾರೆ ಕೆಲವರ ಸರಿ ತಪ್ಪುಗಳ ವಿಮರ್ಶೆ ಯಾರನ್ನು ಬೆಳೆಸುವುದಿಲ್ಲ ವಿಷಯಕ್ಕೆ ಸಂಬದಿಸಿದಂತೆ ಚರ್ಚೆ ಮಾಡಿದರೆ ಪ್ರತಿಕ್ರಿಯಿಸುತ್ತೇನೆ

  ಧನ್ಯವಾದಗಳು

  ReplyDelete
 19. ಕಿರಣ್

  ನಿಮ್ಮ ಬ್ಲಾಗ್ ನೋಡಿದೆ, ಕೆಲವಾರು ಉತ್ತಮ ಬರಹಗಳಿವೆ, ನೀವು ಕತೆಗಾರರೋ ಅಥವಾ ಸಮಾಜವಿಜ್ಞಾನಿಯೋ ನನಗೆ ತಿಳಿಯುತ್ತಿಲ್ಲ. ನೀವು ಎರಡನ್ನೂ ಮಿಶ್ರಣ ಮಾಡಿಕೊಂಡು ಅತ್ತ ಸಮಾಜವಿಜ್ಞಾನಿಗಳ ಹಾಗೆಯೂ ಮಾತನಾಡದೆ, ಇತ್ತ ಸರಿಯಾದ ಕಥೆಗಾರರಂತೆಯೂ ಬರೆಯದೆ ಇಕ್ಕಟ್ಟಿನಲ್ಲಿದ್ದೀರಿ ಎಂಬುದು ನನ್ನ ಅಭೀಪ್ರಾಯ. ಇದಕ್ಕೆ ಕಾರಣ ಒಂದು ಕಡೆ ಆಸಕ್ತಿಯನ್ನು ಕೇಂದ್ರೀಕರಿಸದೇ ಇರುವುದೇ ಆಗಿರಬಹುದು.

  ಕೃತಿಚೌಯð ಎಂಬುದು ನಿಮ್ಮ ಕಥೆಯ ಕುರಿತು ನಾನೂ ಕೇಳಿದ್ದೇ, ತದನಂತರ ತಮ್ಮ ಸ್ನೇಹಿತ ಯಾರೋ ಬರೆದದ್ದನ್ನೂ ತಾವೂ ಒಪ್ಪಿಕೊಂಡಿಉವ ನೆನಪು ಇದೆ.. ನೋಡಿ..

  ReplyDelete
 20. ಕೆಲವರನ್ನ ಕುರಿತು ಕೆಲವರೇ ಮಾತನಾಡಬೇಕು ಎಂದು ಹೇಳುವುದು ಸರಿಯಲ್ಲ. ಆದರೆ ಬೇರೆಯವರ ವಾದಗಳನ್ನು ಬಳಸಿಕೊಳ್ಳುವಾಗ ಅವರನ್ನು ಸರಿಯಾಗಿ ಉಲ್ಲೇಖಿಸದೆ ತಮ್ಮದೇ ವಾದ ಎಂದು ಬಿಂಬಿಸುವುದು ಮಾತ್ರ ತಪ್ಪು. ಯಾರ ವಾದವನ್ನು ಯಾರು ಬೇಕಾದರೂ ಬಳಸಿಕೊಳ್ಳಬಹುದು, ಆದರೆ ಉಲ್ಲೇಖ ಸ್ಪಷ್ಟವಾಗಿದ್ದರೆ ಸಾಕು. ನಿಮ್ಮ ನಡುವೆ ಯಾರೋ ಅಂತಹ ಜನ ಇದ್ದಾರೆ ಎಂದು ಹೇಳಿದ್ದೀರಿ, ಸಾಧ್ಯವಾದರೆ ಅವರ ಹೆಸರುಗಳನ್ನು ಹೇಳಿದರೆ, ನಾವೂ ಎಂದಾದರೂ ಬರೆಯುವಾಗ ಅವರ ವಾದಗಳನ್ನು ಬದಿಗಿಡುವ ಪ್ರಯತ್ನವನ್ನು ಮಾಡುತ್ತೇವೆ.

  ಕದಿಯುವುದು ಸ್ವ ಧರ್ಮ, ಕದ್ದು ಕದಿಸುವುದು ಪರಧರ್ಮ
  ಕದಿಯುತಾ ಮೈಪರಚಿಕೊಂಡು ಬೇರೆಯವರು ಮೈಪರಚಿಕೊಂಡರೆಂಬುದು ಅತಿಶಯದ ಧರ್ಮ
  ಕದ್ದು ಕದಿಯುತಾ ಕದಿಸುತಾ ಎಲ್ಲವನ್ನೂ ನಿನ್ನದಾಗಿಸಿಕೊಳ್ಳೋ ಕಳ್ಳತಿಮ್ಮ
  (ಇದು ಡಿ.ವಿ.ಜಿ.ಯವರ ಕೃತಿಯಲ್ಲಿಲ್ಲ, ಅವರ ಧಾಟಿಯನ್ನ ಕದ್ದ ಧರ್ಮ)

  ReplyDelete
 21. ತಮ್ಮ ಬ್ಲಾಗಿನ ಕಥೆ ಸಂಪದದಲ್ಲೂ ಇದೆ.
  http://sampada.net/blog/kiranm/14/03/2009/17908

  ಅಲ್ಲಿ ಒಬ್ಬ ಓದುಗರು ತಮ್ಮ ಕಥೆ ಎ.ಆರ್ ಮಣಿಕಾಂತರೆದ್ದೆಂದು ಹೇಳಿದಾಗ ನೀವು ತಬ್ಬಿಬ್ಬಾಗಿ, ವಿರುದ್ದ ಅರ್ಥದ ಉತ್ತರ ನೀಡಿದ್ರಿ. ಅಸು ಹೆಗಡೆಯವರು ಅದನ್ನು ಹೀಗೆ ಉಲ್ಲೇಖಿಸುತ್ತಾರೆ
  "ಕತೆ ಚೆನ್ನಾಗಿದೆ.

  ಆದರೆ, ಈ ಎರಡು ಹೇಳಿಕೆಗಳಲ್ಲಿ ಯಾವುದು ನಿಜ?

  >>ಇಂದು ಹೆಣ್ಣು ಭ್ರೂಣ ಹತ್ಯ ಸಮಾಜದ ಪ್ರಮುಖ ಸಮಸ್ಯಗಳಲ್ಲಿ ಒಂದಾಗಿದೆ ಮೂನ್ನೆ email ನಲ್ಲಿ ನನ್ನ ಗೆಳತಿ ಕಳುಹಿಸಿದ ಒಂದು ಪುಟ್ಟ ಮಗುವಿನ ಸ್ವಗತದ ಕಥೆ ಇಡಿ ದಿನ ನನ್ನನ್ನು ಕಾಡಿದೆ.ಕೈ ಹಿಡಿದು ಜಗ್ಗಿದೆ. ಅದನ್ನೆ ಕನ್ನಡಕ್ಕೆ ಅನುವಾದಿಸಿ ತಮ್ಮ ಮುಂದಿಡುತ್ತಿದ್ದೆನೆ.<<

  >>ಇಲ್ಲ ಅರವಿ೦ದ ಅವರೇ ಇದು ನಾನೇ ಬರೆದದ್ದು ಒಂದು ವರ್ಷದ ಮುಂಚೆನೇ ಇದು ಹಾಯ್ ಬೆಂಗಳೂರ್ ವರದಿಗಾರರಾದ ಶೃ೦ಗೆಶ ಸ೦ಪಾದಕತ್ವದ ದಿನ ಪತ್ರಿಕೆ ಜನ ಹೋರಾಟದಲ್ಲಿ ಪ್ರಕಟಗೊಂಡಿದೆ <<"
  ನನ್ನ ಸ್ನೇಹಿತರೊಬ್ಬರೂ ಸಹ ಇದು ಮಣಿಕಾಂತರ ಕಥೆ ಎಂದೇ ಹೇಳಿದ್ದರು. ನಿಮ್ಮ ಪ್ರತಿಕ್ರಿಯೆ ನಂತರ ಈ ಕಥೆಯನ್ನು ಮಣಿಕಾಂತರ ಮಿಂಚೆಂಚೆ( ಇಮೇಲ್)ಗೆ ಕಳುಹಿಸಿದ್ದೇನೆ. ಅವರಿಂದ ಉತ್ತರ ಬಂದ ತಕ್ಷಣ ಇಲ್ಲಿ ಅದನ್ನು ಉಲ್ಲೇಖಿಸುತ್ತೇನೆ

  ReplyDelete
 22. ಕಿರಣ್ ಅವರೆ ಒಳ್ಳೆ ಚರ್ಚೆಯನ್ನು ಹುಟ್ಟುಹಾಕಿದ್ದೀರಿ,
  ತಾವು ಚಿಕ್ಕ ವಯಸ್ಸಿನಲ್ಲಿಯೇ ಸಂಪಾದಿತ ಪುಸ್ತಕವನ್ನು ಹೊರತರುತ್ತಿರುವುದನ್ನು ಕೇಳಿದ್ದೇನೆ. ಆದರೆ ಅದು "ಕೃತಿ ಚೌರ್ಯ ಗೊಂಡ ಕೃತಿ" ಎಂಬ ಆಪಾದನೆ ಮುಕ್ತವಾಗಿದ್ದರೆ ಇನ್ನೂ ಒಳ್ಳೆಯದಾಗಿತ್ತು. ಏಕೆಂದರೆ ನನ್ನ ಮಿತ್ರ ಬಳಗದ ಹಲವರು ಇದೆ ಅಭಿಪ್ರಾಯವನ್ನು ನನ್ನ ಬಳಿ ಹಂಚಿಕೊಂಡಿದ್ದಾರೆ.(ನಿಖರವಾಗಿ ತಿಳಿದರು ಇಲ್ಲಿ ಸೂಚಿಸುವ ಅಗತ್ಯವಿಲ್ಲ). ಇದು ವಯಕ್ತಿಕವಾಗಿ ದೂಷಿಸುವ ಕಾರ‍್ಯವಲ್ಲ ಬದಲಿಗೆ ಇಂದು ಸಮಾಜ ವಿಜ್ಞಾನಗಳಲ್ಲಿ ಶೀಘ್ರವಾಗಿ ಪಸರಿಸುತ್ತಿರುವ ಸಂಗತಿಗಳು. ಇದರ ಕುರಿತು ನಾವು ಹಾಗೂ ನಿಮ್ಮಂತ ಯುವ ಸಂಶೋಕರು ಗಂಭೀರವಾಗಿ ಆಲೋಚಿಸಬೇಕಾಗಿದೆ. ಏಕೆಂದರೆ, ಯಾರೋ ವರ್ಷಗಟ್ಟಲೇ ಮಾಡಿದ ಸಂಶೋಧನೆಯನ್ನು ಕ್ಷಣಮಾತ್ರದಲ್ಲಿ ತಮ್ಮದನ್ನಾಗಿಸಿಕೊಳ್ಳುವ ಪ್ರವೃತ್ತಿಯು ಹೀನ ಕೃತ್ಯ. ಚಿಕ್ಕ ವಯಸ್ಸಿನಲ್ಲಿಯೇ ಹೆಸರು ಪಡೆಯಬೇಕೆಂಬ ಮಹದಾಸೆ ಹೊಂದಿದವರು ಈ ರೀತಿಯ ಕಾರ‍್ಯಕ್ಕೆ ಮುಂದಾಗುತ್ತಾರೆ. ಇನ್ನೂ ನಿಮ್ಮ ಪ್ರತಿಕ್ರಿಯೆಯಲ್ಲಿ "ಕೈಲಿ ಆಗದವರು ಮೈ ಪರಿಚಿಕೊಂಡರು, ಕೆಲವರ ಕುರಿತಾಗಿ ಕೆಲವೇ ಜನರು ಮಾತನಾಡಬೇಕು ಎಂಬ ಮನಸ್ಥಿತಿಯ ಜನರು ನಮ್ಮ ನಡುವೆ ಇದ್ದಾರೆ . . . ನಾವು ಅಧಮರು ನಗುವುದಲ್ಲದೇ ಬೇರೆನೂ ಮಾಡಲು ಸಾಧ್ಯವಿಲ್ಲ" ಎಂಬುದಾಗಿ ಉಲ್ಲೇಖಿಸಿದ್ದೀರಿ, ಯಾರು ಎಂದು ಸೂಚನೆ ನೀಡಿದರೆ ಅನುಕೂಲವಾದಿತೂ. ಏಕೆಂದರೆ ಬೆಳೆಯುತ್ತಿರುವವರ ದಾರಿಗೆ ಅಡ್ಡಗಾಲು ಹಾಕಲು ಕೂಡ ಕೆಲವೊಬ್ಬರು ಈ ರೀತಿಯ ಕೆಲಸಗಳನ್ನು ಮಾಡುತ್ತಿರುತ್ತಾರೆ. ಸಮಾಜ ವಿಜ್ಞಾನಗಳಲ್ಲಿ ಇತ್ತೀಚಿಗೆ ಕೃತಿ ಚೌರ್ಯ ಎಷ್ಟು ಶೀಘ್ರದಲ್ಲಿ ಸಾಮಾನ್ಯ ಕೆಲಸ ಎನಿಸಿಕೊಳ್ಳುತ್ತಿದೆಯೋ ಹಾಗೆಯೇ ಇನ್ನೊಬ್ಬರ ಕುರಿತು ಲೇವಡಿ ಮಾಡುವುದು ಅಷ್ಟೆ ಸಾಮಾನ್ಯವಾಗುತ್ತಿದೆ. ಹಾಗಾಗಿ ಸಮಾಜ ವಿಜ್ಞಾನಗಳ ಕುರಿತು ಆಸಕ್ತಿ ಹೊಂದಿ, ಅದನ್ನು ಕಟ್ಟಬೇಕು ಎಂಬ ಮನಸ್ಥಿತಿ ಹೊಂದಿದ ತಾವು ಈ ರೀತಿಯಾಗಿ ನಿಮ್ಮ ಮೇಲೆ ಅಪಪ್ರಚಾರ್ ಮಾಡುತ್ತಿರುವವರು ಯಾರು ಎಂದು ಹೇಳಿದರೆ ಒಳಿತು. ಇದು ವಯಕ್ತಿಕ ಚರ್ಚೆಯಲ್ಲ ಬದಲಿಗೆ ಸಮಾಜ ವಿಜ್ಞಾನಗಳಲ್ಲಿ ನಡೆಯುತ್ತಿರುವ ಸಂಗತಿಗಳು ಅದನ್ನು ಇಂದು ಚರ್ಚಿಸುವ ಅನಿವಾರ‍್ಯತೆ ಬಂದೊದಗಿದೆ. ಹಾಗಾಗಿ ತಾವು ಮುಕ್ತವಾಗಿ ಚರ್ಚೆ ಪ್ರಾರಂಭಿಸಿದರೆ ಅನುಕೂಲವಾದಿತು.

  ReplyDelete
 23. ಸತ್ಯಾ ಎಸ್March 7, 2011 at 8:50 PM

  ಅರುಣ್ ಕಾಸರಗುಪ್ಪೆ ಅವರ ಬರಹ ನೋಡಿ ಇದು ನೆನಪಾಯಿತು. ಇತ್ತೀಚಿಗೆ ನನ್ನ ಸ್ನೇಹಿತರೊಬ್ಬರು ಬೆಂಗಳೂರಿನ ದೂರದರ್ಶನ ಕೇಂದ್ರದ ಬಳಿ ಒಂದು ಅಟೋ ನಿಲ್ಲಿಸಿದಾಗ, ಅಟೋ ಚಾಲಕ 'ಎಲ್ಲಿಗೆ ಮಹಾಶಯರೆ' ಅಂದರಂತೆ. ರವೀದ್ರ ಕಲಾಕ್ಷೇತ್ರ ಕ್ಕೆ ಎಂದು ಗೆಳೆಯರು ಹೇಳಿದಾಗ, ಅಟೋ ಚಾಲಕ ಬನ್ನಿ ಮಹಾಶಯರೇ ಎಂದರಂತೆ. ಮತ್ತೆ ದಾರಿಯಲ್ಲಿ ಸಂಪೂರ್ಣ ಕನ್ನಡದಲ್ಲೇ ಇವರ ಸಂಭಾಷಣೆ!

  ReplyDelete
 24. ನಾಣಿಗೆ ಸದಾ ಡಾಲರ್ ಚಿಂತೆ: ಬೇಕು ನೂಟುಗಳು ಕಂತೆ, ಕಂತೆ: ಕನ್ನಡ ಅವರಿಗೆ ಬರೀ ಹಾಳು ಕೊಂಪೆ!

  ಬೆಂಗಳೂರ ಜಗತ್ತಿನ ಭೂಪಟದಲ್ಲಿ ಕಾಣಿಸಿಕೊಳ್ಳಲು ಇನ್ಫೋಸಿಸ್ ನಾರಾಯಣ ಮೂರ್ತಿ ಕಾರಣ ಎನ್ನುವ ಮಾತು ಕೇಳಿ ಎಲ್ಲಿಂದ ನಗಬೇಕು ತಿಳಿಯುತ್ತಿಲ್ಲ. ಸುಳ್ಳನ್ನು ಸತ್ಯದ ತಲೆ ಮೇಲೆ ಹೊಡದಂತೆ ಹೇಳುವುದು ಅಂದರೆ ಇದೇ ತಾನೆ? ಸುಮ್ಮನೆ ಕನ್ನಡಿಗರಿಗೆ ಕೆಲಸ ಕೊಟ್ರೂ,ಜೀವನ ಕೊಟ್ರೂ ಅಂತ ಅಬ್ಬರಿಸಿದರಾಯಿತೆ.ಕನ್ನಡಿಗರಿಗೆ ಕೆಲಸ ಕೊಟ್ರೂ ಕೊಟ್ರೂ ಅನ್ನೋವ್ರು ಒಮ್ಮೆ ಹೋಗಿ ಮೂರ್ತಿಯವರ ಕಂಪೆನಿಯಲ್ಲಿ ಎಷ್ಟು ಪ್ರತಿಶತ ಜನ ಕನ್ನಡಿಗರಿದ್ದಾರೆ?ಅಲ್ಲಿರುವ ಕನ್ನಡಿಗರಾದರು ಯಾವ ಡೆಸಿಗ್ನೇಷನ್ ಹೊಂದಿದ್ದಾರೆ? ಅಸಲಿಗೆ ಅಲ್ಲಿನ ಕನ್ನಡಿಗ ಉದ್ಯೋಗಿಗಳ ಪಾಡೇನಿದೆ ಅನ್ನುವುದಾದ್ರು ಕೇಳಿ ನೋಡಿ.ಅಲ್ಲಿ ಯಾರ ಕಾರು-ಬಾರು ನಡೆಯುತ್ತಿದೆ ಅನ್ನುವುದು ತಿಳಿಯಬಹುದು. ಇವೆಲ್ಲದರ ಸತ್ಯ ದರ್ಶನವಾದರೆ ಕನ್ನಡ ನಾಡಿನಲ್ಲಿ ಕನ್ನಡಿಗರಿಗೆ ಬದುಕು ಕಟ್ಟಿಕೊಟ್ಟರು ಅನ್ನುವಂತೆ ಮಾತಾಡಿರುವುದು ಸುಳ್ಳೇ ಸುಳ್ಳು ಅನ್ನುವುದು ಗೊತ್ತಾಗುತ್ತದೆ.
  ಸರಕಾರಕ್ಕೆ ಬ್ಲಾಕ್ಮೇಲ್ ಮಾಡಿದ ಮೂರ್ತಿ ಬೇರೆ ರಾಜ್ಯಗಳಿಗೆ ಒಲಸೆ ಹೋಗುವುದಾಗಿ ಧಮಕಿ ಹಾಕಿದ್ದರು ನೆನಪಿರಬೇಕಿಲ್ಲ. ಅವರು ಕನ್ನಡಿಗರ ಬದುಕು ಕಟ್ಟಿಕೊಟ್ಟಿಲ್ಲ. ತಮ್ಮ ಸಾಮ್ರಾಜ್ಯ ಕಟ್ಟಿಕೊಂಡಿದ್ದಾರೆ.

  ಹಿಂದೊಮ್ಮೆ ಕನ್ನಡಿಗರಿಗೆ ಕೆಲಸದಲ್ಲಿ ಆದ್ಯತೆ ಕೊಡಿ ಅಂದಾಗ ನಮಗೊಂದು ಮಾನದಂಡವಿದೆ,ಪ್ರತಿಭಾವಂತರೇ (?) ಬೇಕು ಅಂದಿದ್ರು ಮೂರ್ತಿಯವರು,ಅದಿಕ್ಕೆ ದೇಶದ ಮೂಲೆ ಮೂಲೆಯಿಂದ ಜನ ಬೇಕು ಅಂದಿದ್ರು.
  ಬೆಂಗಳೂರಲ್ಲಿ ಅದು ಸರಿ ಇಲ್ಲ ಇದು ಸರಿ ಇಲ್ಲ ಬೆಂಗಳೂರಿಂದ ಗಂಟು ಮೂಟೆ ಕಟ್ತೀನಿ ಅನ್ನುವಂತೆ ಯಾರು ಮಾತಾಡಿದ್ದರು ಅನ್ನುವುದು ಮರೆತು ಹೋಗಿದೆಯೇ? ಹಾಗೆ ನೋಡ ಹೋದರೆ ಅವರು ಸಂಸ್ಥೆ ಕಟ್ಟಿದ್ದು ವ್ಯಾವಹಾರಿಕ ಉದ್ದೇಶಕ್ಕಾಗಿಯಲ್ಲದೇ? ಅದನ್ನ ಕನ್ನಡೀಗರ ಉದ್ದಾರಕ್ಕೆ ಅನ್ನುವ ಮಾತುಗಳೆಲ್ಲ ಕ್ಲೀಷೆಯಲ್ಲದೆ ಮತ್ತಿನ್ನೆನು? ಬೆಂಗಳೂರನ್ನ ಕೇಂದ್ರಾಡಳಿತ ಪ್ರದೇಶ ಮಾಡಿ ಅಂದವ್ರಲ್ಲಿ ತಮ್ಗೆ ಡಾಲರ ಲೆಕ್ಕ ಕಾಣುತ್ತೋ? ಇಲ್ಲ ಕನ್ನಡ ಪ್ರೇಮವೋ?
  ಐ.ಟಿ ದಿಗ್ಗಜರ ಕಂಪೆನಿಯಿಂದ ಕನ್ನಡ ತಂತ್ರಾಂಶ ಕ್ಷೇತ್ರಕ್ಕೆನಾದರು ಕೊಡುಗೆ ಸಿಕ್ಕಿದೆಯಾ? ಸಾಹಿತ್ಯ ಕೃಷಿ ಬೇಡ ಸರ್, ಒಂದು ಫಾಂಟು,ಅಥವ ಒಂದು ಉಪಯುಕ್ತ ತಂತ್ರಾಂಶ ಕೇಳೋದು ತಪ್ಪಾ?ಸಮಾಜ ಮುಖಿಯಾದ ಕೆಲಸವಾಗುತ್ತಿದೆ ಮಾಡುತಿದ್ದಾರೆ ಆ ಕಾರಣಕ್ಕೆ ಅವರೇ ಇರಲಿ ಅನ್ನುವವರಿಗೆ ತಿಳಿದಿರಲಿ.ಅದನ್ನ ಇಂದು ಎಲ್ಲ ಕಂಪೆನಿಗಳು ಮಾಡುತ್ತಿವೆ. ಹಾಗೆ ನೋಡಿದ್ರೆ ಇನ್ಫೋಸಿಸ್ ನಾರಾಯಣ ಮೂರ್ತಿಯವರಿಗಿಂತ ಈ ವಿಷಯದಲ್ಲಿ ವಿಪ್ರೋ ಅಜೀಂ ಪ್ರೇಂಜಿ ಅವರ ಬಳಗವೇ ಹೆಚ್ಚು ಕೆಲಸ ಮಾಡಿದೆ.
  ಬೆಂಗಳೂರಿನ ಭಾಗ್ಯದ ಬಾಗಿಲು ತೆಗೆಯಲು, ಒಬಾಮ ಬಾಯಿಯಲ್ಲಿ ಬೆಂಗಳೂರ್ಡ್ ಅನ್ನುವ ಮಾತು ಬರಲು, ಎಲ್ಲರೂ ಬೆಂಗಳೂರಿಗೆ ಬರಲು ಕೇವಲ ಅವರೇ ಕಾರಣ ಅನ್ನುವು ಅತಿರಂಜಿತ ಮಾತುಗಳು.

  ಅಸಲಿಗೆ ಬರಗೂರ ಆಕ್ಷೇಪಣೆಯಲ್ಲಿ ತಪ್ಪೇನಿದೆ?ತೆರಿಗೆ ವಂಚನೆ,ಸಾಹಿತ್ಯ ಕ್ಷೇತ್ರ ಎಲ್ಲ ಪಕ್ಕಕ್ಕಿಟ್ಟು ನೋಡಿದರು ಕನ್ನಡ ಭಾಷೆಗೆ,ಕರ್ನಾಟಕಕ್ಕೆ ನಾರಾಯಣ ಮೂರ್ತಿಯವರ ಕೊಡುಗೆಯೇನು? ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಕನ್ನಡ ಮಾತಡುವುದಿಲ್ಲ ಅನ್ನುವವರಿಂದ ಯಾವ ಕನ್ನಡ ಪ್ರೇಮದ ನಿರೀಕ್ಷೆಯಿಟ್ಟುಕೊಳ್ಳೋಣ?
  ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಲಿ ಎಂಬ ವಿಷಯದಲ್ಲಿ ನಾಣಿ ಅವ್ರ ನಿಲುವು ಗೊತ್ತಿದೆ ಅಲ್ವಾ?

  ಮಂಜುನಾಥ ಭಟ್,

  ReplyDelete
 25. ಇಲ್ಲ ಅರವಿ೦ದ ಅವರೇ ಇದು ನಾನೇ ಬರೆದದ್ದು ಒಂದು ವರ್ಷದ ಮುಂಚೆನೇ ಇದು ಹಾಯ್ ಬೆಂಗಳೂರ್ ವರದಿಗಾರರಾದ ಶೃ೦ಗೆಶ ಸ೦ಪಾದಕತ್ವದ ದಿನ ಪತ್ರಿಕೆ ಜನ ಹೋರಾಟದಲ್ಲಿ ಪ್ರಕಟಗೊಂಡಿದೆ

  ಗೌರವಾನ್ವಿತ ಆಸು ಹೆಗ್ಡೆ ಅವರೇ ನಾನು ಇ ಲೇಖನ ಬರೆದು ಅ೦ದ್ರೆ ನನ್ನ ಗೆಳತಿ ಇಮೇಲ್ ಮಾಡಿದ ಇಂಗ್ಲಿಷ್ ಅವತರಿಣಿಕೆಯ ಕನ್ನಡ ಅನುವಾದ ಮಾಡಿ ೧ ವರ್ಷವಾಗಿದೆ ಎಂಬುದು ನಿಜ. ನಿಮ್ಮ ಪ್ರೀತಿ ಇರಲಿ

  ReplyDelete
 26. ಕಿರಣ್‌ರವರೇ,
  ಯಾರೇ ಆಗಲಿ ಒಂದು ವಾದವನ್ನು ಮಾಡುತ್ತಿದ್ದಾರಾದರೆ ಅಂತಹ ವಾದವನ್ನು ಸಮರ್ಥಿಸಿಕೊಳ್ಳಬೇಕು (ವಾದವನ್ನು ಮಂಡಿಸಿಯಾಗಿದ್ದರೆ). ಆದರೆ ಈ ಮೇಲಿನ ಸಾಲುಗಳನ್ನು ನೋಡಿದರೆ, ನೀವೇನು ಹೇಳುತ್ತಿದ್ದೀರೋ ಅದನ್ನೇ ಇನ್ನೊಂದು ಸಾಲಿನಲ್ಲಿ ಡಿಸ್‌ಪ್ರೂ ಮಾಡುತ್ತಿದ್ದೀರಿ. ಉದಾಹರಣೆಗೆ, ಮೊದಲು ತಾವು ನಾನೇ ಬರೆದದ್ದು ಎಂದು ಹೇಳುತ್ತಿದ್ದೀರಿ ಅದೇ ಪ್ರಕ್ರಿಯೆಯ ಇನ್ನೊಂದು ಸಾಲಿನಲ್ಲಿ ಇದು ನನ್ನ ಗೆಳತಿ ಇಮೇಲ್ ಮಾಡಿದ ಇಂಗ್ಲೀಷ್ ಅವತರಿಣಿಕೆಯ ಕನ್ನಡ ಅನುವಾದ ಮಾಡಿ ೧ ವರ್ಷವಾಗಿದೆ ಎಂಬುದು ನಿಜ" ಎಂಬುದಾಗಿ ಹೇಳುತ್ತಿದ್ದೀರಿ.ಇದರಲ್ಲಿ ಯಾವುದು ನಿಜ ಯಾವುದು ಸುಳ್ಳು?

  ಮೇಲೊಬ್ಬೊ ಅನಾಮಧೇಯರು ನಿಮ್ಮ ಕುರಿತು ಹೀಗೆ ಹೇಳುತ್ತಾರೆ: "ನೀವು ಕತೆಗಾರರೋ ಅಥವಾ ಸಮಾಜವಿಜ್ಞಾನಿಯೋ ನನಗೆ ತಿಳಿಯುತ್ತಿಲ್ಲ. ನೀವು ಎರಡನ್ನೂ ಮಿಶ್ರಣ ಮಾಡಿಕೊಂಡು ಅತ್ತ ಸಮಾಜವಿಜ್ಞಾನಿಗಳ ಹಾಗೆಯೂ ಮಾತನಾಡದೆ, ಇತ್ತ ಸರಿಯಾದ ಕಥೆಗಾರರಂತೆಯೂ ಬರೆಯದೆ ಇಕ್ಕಟ್ಟಿನಲ್ಲಿದ್ದೀರಿ ಎಂಬುದು ನನ್ನ ಅಭೀಪ್ರಾಯ". ಇವರ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಕಾರಣ, ನೀವೇನು ಹೇಳುತ್ತಿದ್ದೀರೋ ಅದರ ಕುರಿತೇ ನಿಮಗೆ ಸ್ಪಷ್ಟತೆಯಿಲ್ಲ ಹೀಗಿರುವಾಗ ಏನು ಬರೆದರೆ ಏನು ಬಂತು ಭಾಗ್ಯ!!!!! ಇನ್ನಾದರೂ ಈ ಎಲ್ಲದರ ಕುರಿತು ಯೋಚಿಸಿ.

  ReplyDelete