Friday, March 4, 2011

ಕ್ಯಾಮೆರಾ ಪರ್ಸನ್ ಒಬ್ಬರ ನೆನಪುಗಳ ಶವಯಾತ್ರೆ....


ಅದ್ಯಾಕೋ ಗೊತ್ತಿಲ್ಲ, ಸುಮ್ಮನೆ ಕುಳಿತ ಇವನಿಗೆ ಯಾರ‍್ಯಾರೋ ನೆನಪಾಗುತ್ತಾರೆ. ನಾಲ್ಕಾರು ತಿಂಗಳು ಜಂಜಾಟದ ಬದುಕಲ್ಲಿ ಬೇಯುತ್ತಾ, ಕಾಯಕವನ್ನೇ ಕೈಲಾಸ ಅಂತೆಲ್ಲ ಅಂದುಕೊಂಡು ಬದುಕಿದ ಬದುಕು ನೆನಪಾಗುತ್ತದೆ. ಕಣ್ಣ ತುಂಬ ಕನಸುಗಳನ್ನು ಹೊತ್ತುಕೊಂಡು, ಹಳ್ಳಿಯ ಪ್ರಶಾಂತ ಬದುಕಿನ ಚೌಕಟ್ಟನ್ನು ಬಿಟ್ಟು ಬಂದ ಆತನಲ್ಲಿ ಮುಗ್ಧತೆ ಇತ್ತು. ಆದರೆ ಅದು ಬೆಂಗಳೂರೆಂಬ ಮಾಯಾನಗರದ ಭ್ರಮೆಯ ಬದುಕಲ್ಲಿ ಕಳೆದು ಹೋಗುವ ಆತಂಕವೂ ಇತ್ತು. ಬಯೋಡಾಟದಲ್ಲಿ ವೃತ್ತಿ ಜೀವನದ ಅನುಭವಗಳು ಅಂತ ಮುಕ್ತವಾಗಿ ಪಟ್ಟಿಮಾಡಲಾರದ ಕೆಲಸಗಳನ್ನು ಹೊಟ್ಟೆಪಾಡಿಗಾಗಿ ಮಾಡಿಕೊಂಡು ಬಂದವನ ಕೈಗೆ ಕ್ಯಾಮೆರಾ ಕೊಟ್ಟು, ಕ್ಯಾಮೆರಾ ಮ್ಯಾನ್ ಅನ್ನೋ ಲೇಬಲ್ ಹಚ್ಚಲಾಗಿತ್ತು. ವಾಹಿನಿಯೊಂದರ ಕ್ರೈಂ ಕಾರ್ಯಕ್ರಮಕ್ಕೆ ಕ್ಯಾಮೆರಾ ಪರ್ಸನ್. ಜೋಡಿಯಾಗಿ ಒಬ್ಬ ವರದಿಗಾರ. ಸುಮ್ಮನೆ ಕುಳಿತ ಇವನಿಗೆ ಏನೇನೋ ನೆನಪಾಗುತ್ತದೆ.

*

ಬಿಳಿ ಬಣ್ಣದ ಕಾಟನ್ ಸೀರೆ ಉಟ್ಟವಳ ಮುಖದಲ್ಲಿ ಅನುಭವದ ಗಾಂಭೀರ್ಯವನ್ನು ಮರೆಮಾಚಿದ ಆತಂಕದ ಛಾಯೆ. ಆಕೆ ಸರ್ಕಾರಿ ಆಸ್ಪತ್ರೆಯಲ್ಲಿ ನುರಿತ ವೈದ್ಯೆ. ಜೀವನದುದ್ದಕ್ಕೂ ತಿಂಗಳಿಗೊಮ್ಮೆ ಬರುವ ಪಗಾರದ ಹೊರತು ನಯಾಪೈಸೆ ಹೆಚ್ಚಿಗೆ ಮುಟ್ಟದ ಆಕೆ ಕೈಗಳು ಕಂಪಿಸುತ್ತಿದ್ದವು. ಹಿಂದಿನ ದಿನವಷ್ಟೆ ಸಂತಾನಹರಣ ಶಸ್ತ್ರಚಿಕಿತ್ಸೆಯೊಂದು ಕೈಕೊಟ್ಟು ಎರಡು ಮಕ್ಕಳ ತಾಯಿಯೊಬ್ಬಳು ಆಸ್ಪತ್ರೆಯಲ್ಲೇ ಅಸುನೀಗಿಬಿಟ್ಟಿದ್ದಳು. ವೈದ್ಯೆಯ ಪಾಲಿಗೆ ಅವತ್ತು ಕ್ರೈಂ ಕಾರ್ಯಕ್ರಮದ ಕ್ಯಾಮೆರಾ ಕೋರ್ಟ್‌ಮಾರ್ಷಲ್ ಆಗಿತ್ತು. ಆತಂಕ, ಪಾಪಪ್ರಜ್ಞೆ, ದುಃಖ, ವೇದನೆಗಳ ನಡುವೆಯೇ ಆಕೆ ಕ್ಯಾಮೆರಾ ಎದುರು ಕುಳಿತು ಸೆರಗು ಸರಿಪಡಿಸಿಕೊಂಡು, ಚಾನಲ್ ಲೋಗೋ ಹಿಡಿದು ಕುಳಿತಿದ್ದ ಇವನ ಮುಖ ನೋಡಿದರು. ಬಹುಶಃ ಕೊನೆಯ ಮಗನ ನೆನಪಾಗಿರಬೇಕು.

ಕೇಳಿದ ಪ್ರಶ್ನೆಗಳಿಗೆ, ಮೈಮೇಲೆ ಬಂದ ಆರೋಪಗಳಿಗೆ ಉತ್ತರ ಕೊಡಲು ಹೆಣಗಾಡಿ, ಕಣ್ಣು ತುಂಬಿ ಬಂದ ನೀರನ್ನು ತಡೆಹಿಡಿದು ನಾಲ್ಕಾರು ನಿಮಿಷದ ಕ್ಲಾರಿಫಿಕೇಶನ್ ಕೊಟ್ಟಿದ್ದಾಯಿತು. ಧುತ್ತೆಂದು ಎದುರಾಗುತ್ತಿದ್ದ ಪ್ರಶ್ನೆಗಳಿಗೆ ಉತ್ತರವಿಲ್ಲ ಅಂತ ನಿರ್ಧರಿಸಿಯಾದ ಮೇಲೆ, ಇನ್ನು ನಾನು ಜೀವನದಲ್ಲಿ ಸ್ಟೆತಸ್ಕೋಪ್ ಮುಟ್ಟಲ್ಲ. ಈವರೆಗೆ ಯಾವುದೋ ಹಳ್ಳಿಗಳಲ್ಲಿ, ತಾಂಡಗಳಲ್ಲಿ ಲಕ್ಷಾಂತರ ಸಂತಾನ ಹರಣ ಶಸ್ತ್ರಚಿಕಿತ್ಸೆಗಳನ್ನು ಮಾಡಿದ್ದೆ. ಈಗ ಎಲ್ಲವೂ ಮಣ್ಣುಪಾಲಾಗಿಹೋಯ್ತು ಅಂತ ಹೇಳಿ ಕಣ್ಣೀರು ಒರೆಸಿಕೊಂಡಿದ್ದರು ತಾಯಿ ಹೃದಯದ ಆ ಮಹಿಳಾ ವೈದ್ಯೆ. ಆಕೆ ತನ್ನ ಮೇಲಾಧಿಕಾರಿಗೆ ಯಾವತ್ತು ರೇಶ್ಮೆ ಸೀರೆ, ಬಂಗಾರ ಬಳೆಯನ್ನು ಕಪ್ಪ ಸಲ್ಲಿಸಿರಲಿಲ್ಲ. ತನ್ನ ವೃತ್ತಿ ಬದುಕಿನಲ್ಲಿ ಖಾಸಗಿ ಆಸ್ಪತ್ರೆಗೆ ವಿಸಿಟಿಂಗ್ ಡಾಕ್ಟರ್ ಆಗಿ ಹೋಗಿರಲಿಲ್ಲ.

ಇದೆಲ್ಲ ಕಳೆದು ಮೂರು ತಿಂಗಳ ನಂತರ ಒಂದು ಶುಕ್ರವಾರ ಇವನಿಗೆ ಅವರ ನೆನಪಾಗುತ್ತದೆ. ಅವರ ನಂಬರ್ ಹುಡುಕಿ, ಹೇಗಿದ್ದೀರಾ ಮೇಡಂ? ಅಂದ. ಅತ್ತ ಕಡೆಯಿಂದ ಅಣೆಕಟ್ಟು ಒಡೆದಂತಾಗಿ ಅಳು ಮಾತ್ರ ಕೇಳಿಸತೊಡಗಿತು. ಇವನ ಎದೆಯಲ್ಲಿ ಯಾಕೋ ಚಳುಕ್ಕೆಂದ ಭಾವ. ಆಕೆ ತೀರಿಕೊಂಡಿದ್ದು ಇಂತಹದೆ ಒಂದು ಶುಕ್ರವಾರ, ಹಾಗಾಗಿ ಅವತ್ತಿಂದ ಪ್ರತಿ ವಾರ ದೇವರ ಬಳಿ ಬಂದು ಅಳುವ ಕೆಲಸವಾಗುತ್ತಿದೆ. ಇದರಿಂದ ನನಗೆ ಹೊರಬರಲು ಆಗುತ್ತಿಲ್ಲ ಎಂದ ಅವರು ಮತ್ತೆ ಅಳುತ್ತಾರೆ.
ಅವತ್ತವಳು ಗಂಡನಿಗೆ ಗೊತ್ತಿಲ್ಲದೆ ತನ್ನ ಹೊಟ್ಟೆಯಲ್ಲಿ ಇನ್ನೊಂದು ಭ್ರೂಣ ಬೆಳೆಯುತ್ತಿದೆ ಎಂಬ ವಿಷಯವನ್ನು ಪ್ರಾಮಾಣಿಕವಾಗಿ ತಿಳಿಸಿದ್ದರೆ ಸಾಕಿತ್ತು. ಆಕೆಯ ಸಂಸಾರ-ಪ್ರಾಣ ಎರಡು ಉಳಿಯುತ್ತಿತ್ತು. ಏನ್ಮಾಡೋದು ಎಲ್ಲಾ ನನ್ನ ಗ್ರಹಚಾರ. ಅವಳ ಸಾವಿಗಾಗಿ ನಾನು ಇವತ್ತು ಕಣ್ಣೀರು ಹಾಕುತ್ತಿದ್ದೇನೆ ಎಂದವರು ಸುದೀರ್ಘ ನಿಟ್ಟುಸಿರು ತೆಗೆಯುತ್ತಾರೆ. ಮಳೆ ನಿಂತ ಹೋದ ಮೇಲೂ ಹನಿ ಉದುರುವಂತೆ ನಡುನಡುವೆ ಬಿಕ್ಕುತ್ತಾರೆ.

ಸುಮ್ಮನೆ ಕುಳಿತ ಇವನಿಗೆ ಆಗಾಗ ಆಕೆಯ ದೇವರ ಪಟದ ಎದುರು ಕಣ್ಣೀರಾಗುತ್ತಿರುವ ಅವರ ನೆನಪಾಗುತ್ತದೆ.

*

ಅದೊಂದು ಮನಕಲಕುವ ದೃಶ್ಯ. ಹೆತ್ತ ತಾಯಿಯ ಹೆಣದ ಮುಂದೆ ಮಾಂಸದ ಮುದ್ದೆಯಂತೆ ಕುಳಿತ ಆ ಯುವತಿಯ ಅಳು ಮುಗಿಲು ಮುಟ್ಟಿತ್ತು. ಶಾಮಿಯಾನ ಹಾಕಿ, ಅದರ ಮುಂದೆ ಸಾವನ್ನು ಸಾರಲೆಂದೇ ಹೊಗೆಯಾಡುವ ಕೊಳ್ಳಿ ಇರಿಸಿದ್ದರು. ಅಲ್ಲಿ ಐವತ್ತರ ಆಸುಪಾಸಿನ, ಬೆಳ್ಳಗಿನ ಹೆಂಗಸೊಬ್ಬಳ ಶವ ಇಡಲಾಗಿತ್ತು. ಶವದ ಸುತ್ತ ಹಾಕಿದ್ದ ಬಾಡಿಗೆ ಕುರ್ಚಿಗಳ ಕೊನೆಯ ಸಾಲಿನಲ್ಲಿ ಒಂದಷ್ಟು ಹೆಂಗಸರು ಮ್ಲಾನವಾದ ಮುಖಮಾಡಿಕೊಂಡು ಕುಳಿತಿದ್ದರು. ಅಲ್ಲಿಗೆ ಬಂದಿಳಿಯಿತು ಕ್ರೈಂ ಕಾರ್ಯಕ್ರಮದ ಕ್ಯಾಮೆರಾ. ಒಂದಷ್ಟು ಆತಂಕ, ಮತ್ತೊಂದಿಷ್ಟು ಕರ್ತವ್ಯ ಪ್ರಜ್ಞೆಯಿಂದ ಪೂರಕ ವಾತಾವರಣಕ್ಕಾಗಿ ಕಾದ ಇವನು ಆಕೆ ಮುಂದೆ ಮೈಕ್ ಹಿಡಿದ. ಮಾತನಾಡಲೇಬೇಕಾದ ಅನಿವಾರ್ಯತೆಯನ್ನು ಕ್ಯಾಮೆರಾ ಸೆರೆಹಿಡಿಯುತ್ತಿತ್ತು. ನಮ್ಮ ಅಪ್ಪನೆ ಅಮ್ಮನನ್ನ ಕೊಂದಿದ್ದು. ಅವನಿಗೆ ಮತ್ತೊಬ್ಬಳು ಹೆಂಡತಿ ಇದ್ದಾಳೆ ಅಂತೆಲ್ಲಾ ಹೇಳುತ್ತಾ ಕಣ್ಣಲ್ಲಿ ತುಂಬಿದ್ದ ನೀರನ್ನು ಹೊರಗೆಡವಿದಳು.

 ಅದೇ ಹೊತ್ತಿಗೆ ಪಕ್ಕದ ಪೊಲೀಸ್ ಠಾಣೆಯಲ್ಲಿ, ಪೊಲೀಸರು ತಂದುಕೊಟ್ಟಿದ್ದ ಚಿತ್ರಾನ್ನ ತಿನ್ನುತ್ತಿದ್ದ ಆ ಮಹಾತಂದೆ. ಆತ ಕೊಲೆಗಾರ ಇರಲಿಕ್ಕಿಲ್ಲ ಅಂತ ಪ್ರಾಥಮಿಕ ತನಿಖೆಯಲ್ಲೇ ಪೊಲೀಸರಿಗೂ ಮನವರಿಕೆಯಾಗಿತ್ತು. ಕ್ರೈಂ ಕಾರ್ಯಕ್ರಮದ ಕ್ಯಾಮೆರಾ ಕಂಡಿದ್ದೇ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಕರೆದು ಎದುರಿಗೆ ಕೂರಿಸಿಕೊಂಡರು. ಕೂದಲೇ ಇಲ್ಲದ ತಮ್ಮ ತಲೆಯ ಮೇಲೆ ಪೊಲೀಸ್ ಹ್ಯಾಟು ಹಾಕಿಕೊಂಡು ಖಾಲಿ ತಲೆ ತೋರಿಸಬ್ಯಾಡ್ರಪ್ಪೋ.. ಅಂದರು. ಅಷ್ಟೊತ್ತಿಗೆ ಅವರು ಕುಳಿತಿದ್ದ ಕಚೇರಿಯ ಎಲ್ಲಾ ಕಿಟಕಿ, ಬಾಗಿಲುಗಳನ್ನ ತೆಗೆದು, ಅವರ ಮುಖಕ್ಕೆ ಬೆಳಕು ಬೀಳಿಸಿ, ಇದ್ದದರಲ್ಲೇ ಒಳ್ಳೆಯ ಫ್ರೇಮಿನ ನಡುವೆ ಅವರನ್ನ ಕೂರಿಸಲಾಯಿತು. ಅದಕ್ಕೂ ಮುನ್ನ ಎದ್ದು ಹೋದವರು ಮುಖ ತೊಳೆದು, ತೆಳುವಾದ ಪೌಡರ್ ಲೇಪಿಸಿಕೊಂಡಿದ್ದರಿಂದ ಚಂದದ ಸುವಾಸನೆ ಘಮ್ ಎನ್ನುತ್ತಾ ಅಲ್ಲಿದ್ದವರ ಮೂಗಿಗೆ ಬಡಿಯುತ್ತಿತ್ತು. ಕ್ಯಾಮೆರಾ ಚಾಲೂ ಆಗುತ್ತಿದ್ದಂತೆ ತಮ್ಮೆಲ್ಲಾ ಪಾಂಡಿತ್ಯವನ್ನು ಉಪಯೋಗಿಸಿ, ಅವರು ವರದಿ ನೀಡಿದರು. ಪೇದೆಯೊಬ್ಬ ತಂದಿಟ್ಟ ಟೀ ಕುಡಿದು, ಇನ್ನೇನು ಪ್ಯಾಕ್ ಅಪ್ ಅನ್ನಬೇಕು, ಹ್ಹಾ ಹ್ಹಾ ಹ್ಹಾ ಅಂತ ಜೋರಾದ ನಗೆ ನಗುತ್ತಾ ಸ್ವಲ್ಪ ರಿವೈಂಡ್ ಮಾಡಿ ತೋರಿಸ್ರಪ್ಪಾ..ಚಂದ ಕಾಣ್ತಿನಾ ಹೆಂಗೆ ಅಂದುಬಿಟ್ಟರು ಆ ಪ್ರಾಮಾಣಿಕ, ದಕ್ಷ ಅಧಿಕಾರಿ. ಇದೊಂದು ಅನಿವಾರ್ಯ ಕರ್ಮ ಅಂದುಕೊಂಡು ಅವರಿಗೆ ತೋರಿಸಿ ಹೊರಬರುವ ಹೊತ್ತಿಗೆ ಆಕೆಯ ಶವವನ್ನು ಮಾವಿನ ಕಟ್ಟಿಗೆ ಮೇಲಿಟ್ಟು ಬೆಂಕಿ ಹಚ್ಚಲಾಗಿತ್ತು.

ಸುಮ್ಮನೆ ಕುಳಿತ ಇವನಿಗೆ ಹೆಣದ ಮುಂದೆ ರೋಧಿಸುತ್ತಿದ್ದ ಯುವತಿ ಹಾಗೂ ಪೊಲೀಸ್ ಠಾಣೆಯಲ್ಲಿ ಚಿತ್ರಾನ್ನ ತಿನ್ನುತ್ತಿದ್ದ ತಂದೆಯ ನೆನಪಾಗುತ್ತದೆ.

*

ಆಕೆ ಇನ್ನೂ ಅಪ್ರಾಪ್ತ ವಯಸ್ಸಿನ ಹುಡುಗಿ. ಆಕೆಯ ತಾಯಿ ಹಾಗೂ ಮಲತಂದೆ ಕೂಲಿ ಕೆಲಸ ಮಾಡುತ್ತಿದ್ದರು. ಕೊಳಗೇರಿ ಅಂತ ಕರೆಯಬಹುದಾದ ಪ್ರದೇಶದಲ್ಲಿತ್ತು ಅವರ ಮನೆ. ಮಹಾಪಾತಕವೊಂದು ಈ ಕುಟುಂಬದ ಪಾಲಿಗೆ ಜರುಗಿ ಹೋಗಿತ್ತು. ಅಪಾರ್ಟ್‌ಮೆಂಟ್ ಕೆಲಸಕ್ಕೆ ಹೋಗುತ್ತಿದ್ದ ಈ ಹದಿನಾಲ್ಕರ ಹುಡುಗಿಗೆ ಚಾಕಲೇಟ್ ಕೊಡಿಸುವ ಆಸೆ ತೋರಿಸಿ ಪಕ್ಕದ ಮನೆಯ ದುರುಳನೊಬ್ಬ ಹೊತ್ತೊಯ್ದು ಅತ್ಯಾಚಾರ ನಡೆಸಿದ್ದ. ಅಂದು ತಂದೆ ತಾಯಿ ಒಬ್ಬಳೇ ಮಗಳನ್ನು ಬಿಟ್ಟು ದೂರ ಊರಿಗೆ ಹೋಗಿದ್ದರು ಎಂಬುದು ಬೇಜವಾಬ್ದಾರಿ ಅನ್ನಿಸುತ್ತಿತ್ತಾದರೂ, ಅದು ಪುಟ್ಟ ವಯಸ್ಸಿನ ಹುಡುಗಿಯಿಂದ ಭಾರಿ ದಂಡವನ್ನೇ ಕಟ್ಟಿಸಿತ್ತು. ಆದರೆ ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಲು ಹಿಂದೆ ಮುಂದೆ ನೋಡುತ್ತಿದ್ದರು. ಪುಟ್ಟ ವಯಸ್ಸಿನ ಹುಡುಗಿ ಆತನೊಂದಿಗೆ ಮುಂಚಿನಿಂದಲೆ ಸಂಬಂಧ ಹೊಂದಿದ್ದಳು ಅಂತ ಷರಾ ಬರೆದು ಮುಗಿಸುವ ತವಕದಲ್ಲಿದ್ದರು. ಹಾಗಂತ ಬಂದ ಮಾಹಿತಿಯನ್ನು ಹಿಡಿದುಕೊಂಡು, ಶಿಥಿಲಾವಸ್ಥೆಯಲ್ಲಿದ್ದ ಅವರ ಮನೆಗೆ ಕ್ರೈಂ ಕಾರ್ಯಕ್ರಮದ ಕ್ಯಾಮೆರಾ ಬಂದಾಗ ತಾಯಿ ಮಗಳಿಬ್ಬರು ಒಬ್ಬರಿಗೊಬ್ಬರು ಆತುಕೊಂಡು ಭೀಕರವಾಗಿ ಅಳುತ್ತಿದ್ದರು.

ಮನೆಯ ಬಡತನ, ಅವರ ದೌರ್ಭಾಗ್ಯವನ್ನು ಕ್ಯಾಮೆರಾ ಕಣ್ಣು ನಿಧಾನವಾಗಿ ಚಿತ್ರೀಕರಿಸಿಕೊಂಡಿತು. ಆದರೂ ಹರಿದುಹೋಗಿದ್ದ ಗೋಡೆಗಳನ್ನು ಮರೆಮಾಚಿ, ಮನೆಯಲ್ಲಿ ಇಲ್ಲದ ಬೆಳಕನ್ನು ಕೃತಕವಾಗಿ ಸೃಷ್ಟಿಸಿ ತಾಯಿ ಮಗಳಿಬ್ಬರನ್ನ ಕೂರಿಸಿ ಮಾತನಾಡಿಸಲಾಯಿತು. ಟೇಪು ಸುತ್ತಿಯಾಗುವ ಹೊತ್ತಿಗೆ ಮಧ್ಯಾಹ್ನವಾಗಿತ್ತು. ಆ ತಾಯಿಯ ಕಂಕುಳಲ್ಲಿದ್ದ ಒಂದು ವರ್ಷದ ಕಂದಮ್ಮ ಹಸಿವೆಯಿಂದ ಅಳಲಾರಂಭಿಸಿತು. ಮೊದಲೆ ಹಂಚಿಕಡ್ಡಿಯಂತಾಗಿದ್ದ ತಾಯಿ ಮೊಲೆಹಾಲು ಇಲ್ಲದ ಕಾರಣಕ್ಕೇನೋ, ಬಿಸಿ ನೀರನ್ನು ಆರಿಸಿ ಕಂದಮ್ಮನ ಬಾಯಿಗೆ ಬಿಡಲಾರಂಭಿಸಿದಳು. ಇದನ್ನು ನೋಡುತ್ತಿದ್ದ ಅವರಿಬ್ಬರ ಹೊಟ್ಟೆತೊಳೆಸಿದಂತಾಗಿ, ಸಮಸ್ಥ ದೌರ್ಭಾಗ್ಯಗಳೂ ಕಣ್ಣೆದುರು ವಿಕಟವಾಗಿ ನಕ್ಕಂತಾಗಿ ಮನೆಯಿಂದ ಹೊರಬಂದರು. ಮಧ್ಯಾಹ್ನದ ಊಟಕ್ಕೆಂದು ಬೆಳಗ್ಗೆ ಮಾಡಿದ ನೂರು ರೂಪಾಯಿ ಸಾಲದಲ್ಲಿ ಉಳಿದ ತೊಂಭತ್ತು ರೂಪಾಯಿಯನ್ನು ತಾಯಿಯ ಮುಂದಿಟ್ಟು ಹೊರಬಂದವರಿಗೆ ಹಗಲೇ ಕಂಡ ದುಸ್ವಪ್ನದಿಂದ ಚೇತರಿಸಿಕೊಳ್ಳುವುದಕ್ಕೆ ಸಮಯ ಬೇಕಾಯಿತು. ಇದಾದ ವಾರದ ನಂತರ ಆ ತಾಯಿಮಗಳ ಟೇಪು ಆಫೀಸಿನ ಮೂಲೆಯಲ್ಲಿ ಬಿದ್ದಿದ್ದು ಕಂಡುಬಂತು.

ಸುಮ್ಮನೆ ಕುಳಿತ ಇವನಿಗೆ ಮಾನಭಂಗಕ್ಕೀಡಾದ ಆ ಹುಡುಗಿ, ಕಂಕುಳಲ್ಲಿದ್ದ ಕಂದಮ್ಮನ ಬಾಯಿಗೆ ಬಿಸಿನೀರು ಬಿಡುತ್ತಿದ್ದ ಆ ತಾಯಿಯ ನೆನಪಾಗುತ್ತದೆ.

*

ಜನಜಂಗುಳಿಯ ಟ್ರಾಫಿಕ್ ದಾಟಿಕೊಂಡು ಪಾತಕ ಕಾರ್ಯಕ್ರಮದ ಕ್ಯಾಮೆರಾ ಆ ಏರಿಯಾ ತಲುಪುವ ಹೊತ್ತಿಗೆ ಪೊಲೀಸರು ಹೆಣವನ್ನು ಶವಪರೀಕ್ಷೆಗೆಂದು ಆಸ್ಪತ್ರ್ರೆಗೆ ಸಾಗಿಸಿದ್ದರು. ಜನನಿಬಿಡ ರಸ್ತೆಯಲ್ಲಿ ರಕ್ತದ ಕಲೆಗಳು ಹಾಗೆಯೇ ಇದ್ದವು. ರಸ್ತೆಯ ಇಕ್ಕೆಲಗಳಲ್ಲಿ, ಅವರವರ ಮನೆಯ ಬಾಲ್ಕನಿಗಳಲ್ಲಿ ನಿಂತಿದ್ದ ಜನ ತಮ್ಮೆದುರೇ ಆದ ಘಟನೆಯನ್ನು ಕಣ್ಣೆವೆ ಮುಚ್ಚದೆ ನೋಡಿದ್ದರು. ಅಲ್ಲಿ ನಡೆದದ್ದು ಏನು ಎಂದರೆ ಯಾವನೋ ಒಬ್ಬನನ್ನು, ಯಾರೋ, ಯಾವುದೋ ಕಾರಣಕ್ಕೆ ನಡುಬೀದಿಯಲ್ಲಿ ಕತ್ತರಿಸಿ ಹಾಕಿದ್ದರು. ಆ ಹೊತ್ತಿಗೆ ಶಾಲೆಗೆ ಮಕ್ಕಳನ್ನು ಬಿಡಲು ಹೊರಟವರು, ಮುಂಜಾನೆ ಗಡಿಬಿಡಿಯಲ್ಲಿ ಕೆಲಸಕ್ಕೆ ಹೊರಟವರು, ಮನೆಯ ಮುಂದೆ ಹಿಂದಿನ ದಿನ ತೊಳೆದ ಹಸಿ ಬಟ್ಟೆಯನ್ನು ಹರಡುತ್ತಿದ್ದ ಗೃಹಿಣಿಯರು, ಹೀಗೆ ಅಲ್ಲಿದ್ದ ಪ್ರತಿಯೊಬ್ಬರು ಘಟನೆಗೆ ಪ್ರತ್ಯಕ್ಷಸಾಕ್ಷಿಗಳಾಗಿದ್ದರು.

ಕ್ಯಾಮೆರಾ ಕೊಲೆಯಾದ ಜಾಗವನ್ನು ಚಿತ್ರೀಕರಿಸಿಕೊಂಡು, ನಡೆದ ಘಟನೆಯನ್ನು ಪ್ರಾಮಾಣಿಕವಾಗಿ ವಿವರಿಸುವ ದನಿಗಾಗಿ ಹುಡುಕಾಡುತ್ತಿತ್ತು. ಅಷ್ಟೊತ್ತಿಗಾಗಲೇ ಇಂತಹ ಹಲವಾರು ಕ್ಯಾಮೆರಾಗಳಿಗೆ ನಡೆದ ಘಟನೆಯನ್ನು ಕಣ್ಣಿಗೆ ಕಟ್ಟಿದಂತೆ ವಿವರಿಸುತ್ತಿದ್ದ ಗೃಹಿಣಿಯ ಮುಂದೆ ಮೈಕ್ ಇಟ್ಟು ಪ್ರಶ್ನೆಯೊಂದನ್ನ ಹಾಕಲಾಯಿತು. ಆಕೆ ಹೇಳಿದ್ದಿಷ್ಟು...

ನಾನು ಮನೆಯ ಮುಂದೆ ಬಟ್ಟೆ ಹರಡುತ್ತಿದ್ದೆ. ಜನ ಕೂಗಿಕೊಂಡರು. ತಿರುಗಿ ನೋಡಿದರೆ, ಅದೇ ಆ ದೇವಸ್ಥಾನವಿದೆಯಲ್ಲ, ಅದರ ಎದುರಿಗೆ ಒಬ್ಬ ಓಡಿಕೊಂಡು ಬಂದು ಬಿದ್ದು ಬಿಟ್ಟ. ಅವನ ಹಿಂದೆ ಮಚ್ಚು ಲಾಂಗುಗಳನ್ನು ಹಿಡಿದುಕೊಂಡು ನಾಲ್ಕಾರು ಜನ ಅಟ್ಟಿಸಿಕೊಂಡು ಬರುತ್ತಿದ್ದರು. ಅವನು ಕೆಳಗೆ ಬೀಳುತ್ತಿದ್ದಂತೆ ಅವರೆಲ್ಲಾ ಅವನ ಮೇಲೆ ಲಾಂಗು ಬೀಸಿ ಓಡಿಹೋದರು. ಸ್ವಲ್ಪ ಹೊತ್ತು ಒದ್ದಾಡಿದ ಅವನು ನಂತರ ಸುಮ್ಮನಾದ. ಯಾರೋ ಪೊಲೀಸರಿಗೆ ಫೋನ್ ಮಾಡಿದರು. ಅವರು ಬಂದು ಹೆಣ ತೆಗೆದುಕೊಂಡು ಹೋದರು. ಎಲ್ಲಾ ಟೀವಿಲಿ ನೋಡಿದಂಗೆ ಆಯ್ತು.

ಸುಮ್ಮನೆ ಕುಳಿತ ಇವನಿಗೆ ಟೀವಿಯ ನೆನಪಾಗುತ್ತದೆ.

(ಇದು ಪತ್ರಕರ್ತರೊಬ್ಬರು ಕಳಿಸಿದ ಬರಹ. ಈ ಅನುಭವ ಯಾರದ್ದಾದರೂ ಆಗಿರಬಹುದಾದ್ದರಿಂದ ಹೆಸರು ಹಾಕುವ ಅವಶ್ಯಕತೆಯಿಲ್ಲ ಎಂದಿದ್ದಾರೆ ಅವರು.)

12 comments:

  1. After long time someone realised the true potential of Sampadakeeya. This blog gives a perfect platform for the jurnos to showcase their true talents which otherwise gets overshadowed by their 'daily' official 'writing' at the desk.

    I hope this trend continues and our jurnos do utilise this platform which has a huge readership.

    A well written article and kudos to Sampadakeeya for publishing it.

    -BeeYes

    ReplyDelete
  2. ಸುದ್ದಿ ಬರೆಯುವವರು ಸಂವೇದನಾ ಶೂನ್ಯರಾಗುತ್ತಿರುವ ಇವತ್ತಿನ ಪತ್ರಿಕೋದ್ಯಮದಲ್ಲಿ ಹೀಗೂ ಯೋಚಿಸುವವರು ಇರುವುದು ಅಚ್ಚರಿ ಹುಟ್ಟಿಸುತ್ತದೆ. ಒಂದು ಕಾಲದಲ್ಲಿ ರಾಜಕಾರಣಿಗಳು, ನಂತರ ಸಂಘ ಸಂಸ್ಥೆಗಳು 'ಎತ್ತುವಳಿ' ಪಟ್ಟ ಕಟ್ಟಿಕೊಂಡಿದ್ದನ್ನು ಪೈಪೋಟಿ ನಡೆಸಿ ಕಿತ್ತುಕೊಂಡ ಪತ್ರಕರ್ತರಿರುವಾಗ ಮಧ್ಯಾಹ್ನ ಊಟಕ್ಕೆ ಕಾಸು ಕೊಟ್ಟು ಜೇಬು ಕಾಲಿ ಮಾಡಿಕೊಳ್ಳುವ ಪತ್ರಕರ್ತರು ಹೊಸ ಭರವಸೆಗಳನ್ನು ಮೂಡಿಸುತ್ತಾರೆ.
    ಮುಖ್ಯವಾಗಿ ಸೆಲೆಬ್ರಿಟಿ ರೇಂಜ್ಗೇರಿದ, ಏರುವ ತವಕದಲ್ಲಿರುವ ಸುದ್ದಿ ಮಿತ್ರರಿಗೆ ಕಣ್ಣು ತೆರೆಸಲಿ...ಗುಡ್ ಲಕ್ ಸಂಪಾದಕೀಯ..ಒಳ್ಳೆಯ ಬರಹ ಮತ್ತು ಬರವಣಿಗೆ..

    ReplyDelete
  3. ನಿಜಕ್ಕೂ ಆಸಕ್ತಿಕರ ಹಾಗೆಯೇ ಹೃದಯ ಕಲಕುವ ಸನ್ನಿವೇಶಗಳ ಚಿತ್ರಣ.

    ReplyDelete
  4. This is very very raw life sketch.even without any picture the minute details have been held intact in words. Hats off to this pen. Idu kateya hindina kate, paradeya hindina naataka. Real life is really horrible!!

    ReplyDelete
  5. ಅವಿನಾಶ್ ಕನ್ನಮ್ಮನವರ್March 4, 2011 at 8:24 PM

    ಲೇಖನ ಓದುತ್ತಿದ್ದರೆ ಕಣ್ಣೆಲ್ಲಾ ಮ೦ಜು ಮ೦ಜು, ಲೇಖನ ಬರೆದ ಹೃದಯಕ್ಕೆ ನನ್ನ ನಮನಗಳು.
    ಅ೦ದಹಾಗೆ, ಇ೦ತಹ ಲೇಖನಗಳಿಗೆ ವೇದಿಕೆ ಒದಗಿಸಿ ಕೊಟ್ಟ ಸ೦ಪಾದಕೀಯ ಬಳಗಕ್ಕೆ ಧನ್ಯವಾದಗಳು.

    ಅವಿನಾಶ್ ಕನ್ನಮ್ಮನವರ್

    ReplyDelete
  6. ತುಂಬಾ ಒಳ್ಳೆಯ ಬರವಣಿಗೆ... ನಿಜವಾಗಿಯೂ ಪ್ರತಿದಿನ ಇಂತಹದೇ ಸುಮಾರು ಘಟನೆಗಳು ನಡೆಯುತ್ತವೆ.... ಇಂತಹ ಘಟನೆಗಳನ್ನು ಬರಹವಾಗಿಸಿದರೆ ಎಂತಹವರು ಓದುತ್ತಾರೆ... ಮತ್ತೆ ಇದರಲ್ಲಿ ಸ್ವಂತಿಕೆ, ಓದಿಸುವ ಅಟ್ರಾಕ್ಷನ್ ಇರುತ್ತದೆ. ಇಂತಹ ಬರಹಗಳಿಗೆ ಹೆಚ್ಚಿನ ಒತ್ತು ನೀಡಿ.

    ಹರೀಶ್

    ReplyDelete
  7. ಸತ್ಯಾ ಎಸ್March 7, 2011 at 8:23 PM

    ಮನಸ್ಸು ಭಾರವಾಯಿತು. ಅಪರಾಧ ಸುದ್ಧಿಗಳನ್ನು ವರದಿ ಮಾಡುವವರಿಗೆ ಇದೊಂದು ಕೈ ದೀವಿಗೆಯಾಗಲಿ.

    ReplyDelete
  8. ವಾವ್, ನಿಜಕ್ಕೂ ಮನಸ್ಸು ಕ್ಷಣ ಹೊತ್ತು ನಿಂತು ಯೋಚಿಸುವಂತೆ ಮಾಡಿದ ಬರಹ ಇದು. ಇವತ್ತಿನ ಮೀಡಿಯಾ ಲೋಕದ ಅನಾವರಣದಂತಿದೆ. ಹ್ಯಾಟ್ಸ್ ಆಫ್ ಟು ರೈಟರ್........
    -ಲಕ್ಷಣ್, ಮಂಡ್ಯ

    ReplyDelete
  9. a very much sensible write up. "it happens only in stories".its really a good story but unfortunately we wont see this kind of journalist's.

    ReplyDelete