Saturday, May 21, 2011

ಹಾನಗಲ್ ಪ್ರಭಾಕರನ ಪೂರ್ತಿ ವಿವರ, ಶಾಂತವ್ವಳ ನೋವಿನ ಕಥೆ...

ಇದೆಲ್ಲವೂ ಶುರುವಾಗಿದ್ದು ರಾಘವ್ ಗೌಡ ಎಂಬುವವರು ಫೇಸ್‌ಬುಕ್‌ನಲ್ಲಿ ಒಂದು ಮೆಸೇಜ್ ಕಳುಹಿಸುವುದರೊಂದಿಗೆ. ಯೂ ಟೂಬ್‌ನ ಒಂದು ಲಿಂಕ್ ಕಳುಹಿಸಿದ್ದ ರಾಘವ್ ಅದನ್ನು ಶೇರ್ ಮಾಡಲು ವಿನಂತಿಸಿದ್ದರು. ವಿಡಿಯೋವನ್ನು ಶೇರ್ ಮಾಡಿದ್ದಲ್ಲದೆ ಅದನ್ನು ಬ್ಲಾಗ್‌ನಲ್ಲೂ ಪ್ರಕಟಿಸಿದೆವು. ಸೂಕ್ಷ್ಮ ಮನಸ್ಸಿನ ಗೆಳೆಯರನೇಕರು ಅತ್ಯಂತ ಕಾಳಜಿಯಿಂದ ಪ್ರತಿಕ್ರಿಯಿಸಿದ್ದರು. ಎಲ್ಲರಿಗೂ ಆ ಹುಡುಗನ ಭವಿಷ್ಯದ ಕುರಿತು ಆತಂಕವಿತ್ತು. ಎಲ್ಲರ ಮಾತು ಕೇಳಿದ ನಂತರ ವಿಡಿಯೋದಲ್ಲಿ ಕಾಣಿಸಿಕೊಂಡ ಆ ಹುಡುಗನನ್ನು ಒಮ್ಮೆ ಭೇಟಿ ಮಾಡಲೇಬೇಕು ಎಂದನ್ನಿಸತೊಡಗಿತ್ತು. ಅದಕ್ಕಾಗಿ ತಡ ಮಾಡುವುದು ಬೇಡವೆಂದು ಗುರುವಾರ ರಾತ್ರಿ ಹಾನಗಲ್ ಕಡೆಗೆ ಹೊರಟೇಬಿಟ್ಟೆವು.

ಪ್ರಭಾಕರನಿಗೆ ಸಂಪಾದಕೀಯದ ಸ್ವೀಟು
ಹುಡುಗನ ಭೇಟಿಯಾಗುತ್ತಿದ್ದಂತೆ ನಾವು ಏನೇನು ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸಿದ್ದೆವು. ಮೊದಲು ಆ ಹುಡುಗನ ಮತ್ತು ಆತನ ಕುಟುಂಬದ ಕುರಿತು ಪೂರ್ಣ ಮಾಹಿತಿ ಪಡೆಯಬೇಕು. ಹುಡುಗನಿಗೊಂದು ಸೈಕಲ್ ಕೊಡಿಸಬೇಕು. ಆತನ ತಾಯಿಯ ಹೆಸರಲ್ಲಿ ಒಂದು ಬ್ಯಾಂಕ್ ಅಕೌಂಟ್ ತೆರೆಯಬೇಕು. ತಹಸೀಲ್ದಾರ್ ಕಚೇರಿಗೆ ಹೋಗಿ ಜಾತಿ ಪ್ರಮಾಣ ಪತ್ರವನ್ನು ಮಾಡಿಸಬೇಕು. ಶಿಕ್ಷಣ ಇಲಾಖೆ ಅಧಿಕಾರಿಗಳು ಮತ್ತು ಶಾಲೆಯವರನ್ನು ಸಂಪರ್ಕಿಸಿ ಸೈಕಲ್ ಕೊಡದೇ ಇರಲು ಕಾರಣ ಏನು ಎಂಬುದನ್ನು ತಿಳಿದುಕೊಳ್ಳಬೇಕು, ಆತನ ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತಾಗಬೇಕು.. ಇತ್ಯಾದಿ ಯೋಚನೆಗಳಿದ್ದವು.

ಅದೆಲ್ಲ ಸರಿ, ಹೇಗೆ ಹುಡುಕುವುದು ಆತನನ್ನು? ಇದಕ್ಕಾಗಿ ನಾವು ಯು ಟೂಬ್ ನಲ್ಲಿ ಈ ವಿಡಿಯೋ ಅಪ್‌ಲೋಡ್ ಮಾಡಿದವರನ್ನೇ ಕೇಳಬೇಕಿತ್ತು, ಕೇಳಿದೆವು. ವಿಡಿಯೋ ಅಪ್ ಲೋಡ್ ಮಾಡಿದವರು ರಾಘವ್ ಅವರೇ ಆಗಿದ್ದರು. ಹೀಗಾಗಿ ಕೆಲಸ ಸಲೀಸಾಯಿತು. ಆದರೆ ರಾಘವ್ ಅವರಿಗೆ ಹುಡುಗನ ಕುರಿತು ಸಂಪೂರ್ಣ ಮಾಹಿತಿ ಇರಲಿಲ್ಲ. ಅವರ ಸ್ನೇಹಿತ ಟಿ.ಕೆ.ದಯಾನಂದ್ ಅವರು ತಮ್ಮ ಸ್ನೇಹಿತ ಚಂದ್ರು ಅವರೊಂದಿಗೆ ಈ ಕಿರುಚಿತ್ರ ಮಾಡಿದ್ದರು. ದಯಾನಂದ್ ಕೂಡ ಪತ್ರಕರ್ತರು. ದಿನಪತ್ರಿಕೆಯೊಂದರಲ್ಲಿ ಕೆಲಸ ಮಾಡಿ ನಂತರ ಟಿವಿ ವಾಹಿನಿಯಲ್ಲೂ ದುಡಿದು ಈಗ ಬಡಜನರ ಬದುಕಿನ ಕುರಿತು ಅಧ್ಯಯನ ನಡೆಸುತ್ತಿದ್ದಾರೆ. ಮಲ ಹೊರುವವರ ಕುರಿತು ಅಧ್ಯಯನ ನಡೆಸುವ ಸಂದರ್ಭದಲ್ಲಿ ಹಾನಗಲ್ ಬಸ್ ನಿಲ್ದಾಣದಲ್ಲಿ ಈ ಹುಡುಗ ಅವರ ಕಣ್ಣಿಗೆ ಬಿದ್ದಿದ್ದ. ನಂತರ ರಾಘವ್ ಅವರಿಂದ ವಿಷಯ ತಿಳಿದ ದಯಾನಂದ್ ಹುಡುಗನ ಕುರಿತು ಒಂದಷ್ಟು ಮಾಹಿತಿ ಒದಗಿಸಿದರು. ಸ್ಥಳೀಯರಿಬ್ಬರ ದೂರವಾಣಿ ಸಂಖ್ಯೆಗಳನ್ನೂ ನೀಡಿದ್ದರು. ಹೀಗಾಗಿ ನಾವು ಸುಲಭವಾಗಿ ಹುಡುಗನ ಸಂಬಂಧಿಗಳನ್ನು ಸಂಪರ್ಕಿಸಲು ಸಾಧ್ಯವಾಯಿತು.

ಶುಕ್ರವಾರ ಬೆಳಿಗ್ಗೆ ೯-೩೦ರ ಹೊತ್ತಿಗೆ ಹಾನಗಲ್ ತಲುಪಿದಾಗ ಆಗಲೇ ಬಿಸಿಲು ತಾರಕಕ್ಕೇರುತ್ತಿತ್ತು. ಹಳೆ ಬಸ್ ನಿಲ್ದಾಣದಲ್ಲಿ ಇಳಿದುಕೊಳ್ಳಲು ಆ ಹುಡುಗನ ಸಂಬಂಧಿ ಸೂಚಿಸಿದ್ದರು. ಅಲ್ಲೇ ಇಳಿದೆವು. ಭೇಟಿಯಾಯಿತು. ಹೊಟ್ಟೆ ವಿಪರೀತ ಹಸಿಯುತ್ತಿದೆ ಎಂದು ಅವರಿಗೆ ಹೇಳಿ ಪಕ್ಕದಲ್ಲೇ ಇದ್ದ ಹೊಟೇಲ್ ಹೊಕ್ಕು ಕುಳಿತೆವು. ನಮಗೆ ಅಲ್ಲೇ ಮೊದಲ ಶಾಕ್. ನಾವು ಯಾವ ಹುಡುಗನನ್ನು ಹುಡುಕಿಕೊಂಡು ಅಷ್ಟು ದೂರ ಬಂದಿದ್ದೆವೋ ಅದೇ ಹುಡುಗ ಸೊಂಟಕ್ಕೊಂದು ಹಸಿರು ಬಣ್ಣದ ಟವಲ್ ಕಟ್ಟಿಕೊಂಡು ಅದೇ ಹೋಟೆಲ್‌ನಲ್ಲಿ ಪ್ಲೇಟು, ಲೋಟ ತೆಗೆದು ಟೇಬಲ್ ಒರೆಸುತ್ತಿದ್ದುದನ್ನು ನೋಡಿದೆವು. ಅವನೇ ನಾವು ವಿಡಿಯೋದಲ್ಲಿ ನೋಡಿದ ಲೋಕೇಶ. ಅವನ ನಿಜ ಹೆಸರು ಪ್ರಭಾಕರ ಹರಿಜನ.

ಎಷ್ಟೇ ಹಠ ಮಾಡಿದರೂ ಪ್ರಭಾಕರನ ಸಂಬಂಧಿ ನಮ್ಮಿಂದ ತಿಂಡಿಯ ಹಣ ನೀಡಲು ಬಿಡಲಿಲ್ಲ. ಪ್ರಭಾಕರನನ್ನು ನಾವು ಅಲ್ಲಿಂದ ಕರೆದುಕೊಂಡು ಸೀದಾ ಕಲ್ಲಹಕ್ಕಲದ ಹರಿಜನಕೇರಿಗೆ ಹೊರಟೆವು. ಮೊದಲು ಆತನ ತಾಯಿಯೊಂದಿಗೆ ನಾವು ಮಾತನಾಡಬೇಕಿತ್ತು.

ಕಲ್ಲಹಕ್ಕಲದ ಆ ಮನೆ ಸುಮಾರು ೧೦ ಅಡಿ ಅಗಲ, ೧೦ ಅಡಿ ಉದ್ದದ ಪುಟ್ಟ ಗೂಡು. ಒಳಗೆ ಕಾಲಿಡುತ್ತಿದ್ದಂತೆ ಪಕ್ಕದ ಮನೆಯಿಂದ ಪ್ರಭಾಕರನೇ ಹೋಗಿ ಕುರ್ಚಿಗಳನ್ನು ತಂದು ಹಾಕಿದ. ಮನೆಯಲ್ಲಿ ಪ್ರಭಾಕರನ ತಂಗಿ ಶಿಲ್ಪ, ತಮ್ಮ ಸಂದೇಶ, ಅಜ್ಜಿ ಭೀಮಮ್ಮ ಇದ್ದರು. ಶಿಲ್ಪ ೮ನೇ ತರಗತಿ ಪಾಸಾಗಿ ಈಗ ೯ಕ್ಕೆ ಕಾಲಿಟ್ಟಿದ್ದಾಳೆ. ಸಂದೇಶ ಐದನೇ ತರಗತಿಯಲ್ಲಿ ಓದುತ್ತಾನೆ. ಅಜ್ಜಿ ಭೀಮಮ್ಮಗೆ ಸುಮಾರು ೮೦ ವರ್ಷಗಳಾಗಿರಬಹುದು. ಆಕೆಗೆ ತಲೆ ಅಲ್ಲಾಡುವ ಖಾಯಿಲೆಯಿದೆ. (ಪಾರ್ಕಿನ್‌ಸನ್)

ನಾವು ಹೋಗಿ ಕುಳಿತ ಹತ್ತು ನಿಮಿಷಕ್ಕೆ ಪ್ರಭಾಕರನ ತಾಯಿ, ಮನೆಯೊಡತಿ ಶಾಂತವ್ವ ಬಂದರು. ಅವರು ಪುರಸಭೆಯಲ್ಲಿ ಗುತ್ತಿಗೆ ನೌಕರಳಾಗಿ ಕೆಲಸ ಮಾಡುತ್ತಾರೆ. ಗಟಾರಗಳನ್ನು ಬಾಚಿ ಶುದ್ಧ ಮಾಡುವುದು ಆಕೆಯ ಕಾಯಕ. ಈ ಪುಟ್ಟ ಮನೆಯನ್ನು ಶಾಂತವ್ವ ಮತ್ತು ಮಕ್ಕಳು ಚೊಕ್ಕಟವಾಗಿಟ್ಟುಕೊಂಡಿದ್ದಾರೆ.

ಮನೆಯ ಮೂಲೆಯಲ್ಲಿ ಒಂದು ಕೋಳಿ ಸಿಟ್ಟಿನಿಂದ ಕೂಗುತ್ತಿತ್ತು. ನಾವು ದಿಢೀರನೆ ಬಂದ ಕಾರಣಕ್ಕೆ ಶಿಲ್ಪ ಕೋಳಿ ಮತ್ತು ಅದರ ಮರಿಗಳನ್ನು ಒಂದು ಕುಕ್ಕೆಯಡಿಯಲ್ಲಿ ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಳು. ಆದರೆ ಕೋಳಿ ಒಲ್ಲೆಯೆನ್ನುತ್ತಿತ್ತು. ಯಾಕೆಂದರೆ ಅದರ ಒಂದು ಮರಿಯ ಕಾಲು ಮುರಿದುಹೋಗಿತ್ತು. ಆ ಮರಿಯನ್ನು ಮುಟ್ಟಲೂ ಸಹ ತಾಯಿ ಕೋಳಿ ಬಿಡುತ್ತಿರಲಿಲ್ಲ. ಹೋಗಲಿ ತಾಯಿಯನ್ನೇ ಮೊದಲು ಮುಚ್ಚಿ ಹಾಕೋಣವೆಂದರೆ ಅದು ಶಿಲ್ಪಳನ್ನು ಕುಕ್ಕಲು ಬರುತ್ತಿತ್ತು.

ಮಾಲತೇಶ ನಗರವಾಗಿ ಬದಲಾಗಿರುವ ಕಲ್ಲಹಕ್ಕಲ ಬಡಾವಣೆ
ನಮ್ಮ ಮಾತುಕತೆ ಶುರುವಾಯಿತು. ನಾವು ಬಂದ ಉದ್ದೇಶವನ್ನು ಮೊದಲು ನಿವೇದಿಸಿಕೊಂಡೆವು. ತಾಯಿ ಶಾಂತವ್ವ ತನ್ನ ಕಥೆ ಹೇಳುತ್ತಾ ಹೋದರು. ಮೊದಲ ಮಗನೇ ಪ್ರಭಾಕರ. ಸಿನಿಮಾ ನಟ ಟೈಗರ್ ಪ್ರಭಾಕರ್ ಅವರ ಅಭಿಮಾನಿಯಾಗಿದ್ದ ಹನುಮಂತಪ್ಪ ಅವರು ಮಗನಿಗೆ ಪ್ರಭಾಕರ್ ಹೆಸರನ್ನೇ ಇಟ್ಟಿದ್ದರು. ಸಂದೇಶ ಚಿಕ್ಕ ಮಗುವಿದ್ದಾಗಲೇ ಹನುಮಂತಪ್ಪ ತೀರಿಕೊಂಡಿದ್ದರು. ಶಾಂತವ್ವಳ ಪಾಲಿಗೆ ಅದು ಹೆಸರು ಗೊತ್ತಿಲ್ಲದ ಖಾಯಿಲೆ. ಹನುಮಂತಪ್ಪ ಪುರಸಭೆಯಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಮೂರು ಪುಟ್ಟಪುಟ್ಟ ಮಕ್ಕಳೊಂದಿಗೆ ಶಾಂತವ್ವ ವಿಧವೆ ಪಟ್ಟವನ್ನು ಹೊತ್ತಾದ ಮೇಲೆ ಆಕೆಯ ಮೈದುನನೇ ಮನೆಯಿಂದ ಆಚೆ ಕಳುಹಿಸುತ್ತಾನೆ. ಅಲ್ಲಿಂದ ಆಕೆಯ ಸಂಘರ್ಷದ ಬದುಕು ಆರಂಭವಾಗುತ್ತದೆ. ಹೇಗೋ ಹಠ ಹಿಡಿದು ಪುರಸಭೆಯಲ್ಲೇ ಗುತ್ತಿಗೆ ನೌಕರಿ ಹಿಡಿಯುತ್ತಾರೆ. ಸಾಲ ಮಾಡಿ, ಕಲ್ಲಹಕ್ಕಲ ಹರಿಜನಕೇರಿಯಲ್ಲೇ ಒಂದು ಸಣ್ಣ ಗೂಡು ಕಟ್ಟಿಕೊಳ್ಳುತ್ತಾರೆ. ಸಾಲಕ್ಕಾಗಿ ಅವರು ನೌಕರಿಯ ಪಗಾರ ಬಂದು ಬೀಳುವ ಬ್ಯಾಂಕಿನ ಪಾಸ್ ಬುಕ್ ಅನ್ನೇ ಅಡವಿಡುತ್ತಾರೆ. ಮನೆಯ ಸಾಲ-ಬಡ್ಡಿಯನ್ನು ಪ್ರತಿತಿಂಗಳೂ ತೀರಿಸುತ್ತ ಉಳಿದ ಹಣದಲ್ಲಿ  ಬದುಕು ಸಾಗಿಸುತ್ತಾರೆ.

ನಮಗೆ ಇದ್ದ ಕುತೂಹಲದ ಪ್ರಶ್ನೆಗಳನ್ನು ಒಂದೊಂದಾಗಿ ಕೇಳುತ್ತಾ ಹೋದೆವು. ಶಾಂತವ್ವಳ ಮನೆಯಲ್ಲಿ ಈಗ ಬೆಳಕು ಮೂಡಿದೆ. ಆಕೆಯ ಮನೆಗೆ ವಿದ್ಯುತ್ ಸಂಪರ್ಕವಿದೆ. ಒಂದು ಟ್ಯೂಬ್ ಲೈಟು ಇಡೀ ಮನೆಯನ್ನು ಬೆಳಗುತ್ತದೆ. ಮಿಕ್ಕಂತೆ ರೇಡಿಯೋ, ಟಿವಿ ಇತ್ಯಾದಿ ಯಾವುದೂ ಇದ್ದ ಹಾಗೆ ಕಾಣಲಿಲ್ಲ.

ನಮಗೆ ತುಂಬ ಪ್ರಮುಖವಾಗಿ ಕಾಡುತ್ತಿದ್ದ ಪ್ರಶ್ನೆ ಜಾತಿಪ್ರಮಾಣ ಪತ್ರದ್ದು. ಅದನ್ನೂ ಸಹ ಈಗ ಪಡೆಯಲಾಗಿದೆ. ಆದರೆ ಪ್ರಭಾಕರನಿಗೆ ಕಳೆದ ವರ್ಷ ಸ್ಕಾಲರ್‌ಶಿಪ್ ಕೊಟ್ಟಿಲ್ಲ. ಪ್ರಭಾಕರನಿಗಾಗಲೀ, ಶಿಲ್ಪಳಿಗಾಗಲಿ ಸರ್ಕಾರದ ಬೈಸಿಕಲ್ ಯೋಜನೆ ತಲುಪಿಲ್ಲ. ಇಬ್ಬರಿಗೂ ಒಂದೊಂದು ಸೈಕಲ್ ಸಿಗಬೇಕಿತ್ತು. ಆದರೆ ಅದು ದೊರಕಿಲ್ಲ. ನಮಗೆ ಗೊತ್ತಾದ ಮಾಹಿತಿ ಪ್ರಕಾರ ಜಾತಿಪ್ರಮಾಣ ಪತ್ರ ಸೈಕಲ್ ಪಡೆಯಲು ಬೇಕಾಗೇ ಇಲ್ಲ. ಇವರಿಬ್ಬರಿಗೂ ಸಹಜವಾಗಿಯೇ ಸೈಕಲ್ ಸಿಗಬೇಕಿತ್ತು. ಸೈಕಲ್‌ಗಳು ಸರಿಯಾದ ಪ್ರಮಾಣದಲ್ಲಿ ಬರುತ್ತಿಲ್ಲ. ಹೀಗಾಗಿ ಸಾಕಷ್ಟು ಮಕ್ಕಳು ವಂಚಿತರಾಗಿದ್ದಾರೆ ಎಂಬುದು ಸ್ಥಳೀಯರ ಮಾತು. ಪ್ರಭಾಕರನ ಶಾಲೆಗೆ ರಜೆ. ಶಾಲೆ ಆರಂಭವಾದ ಮೇಲೆ ಸಂಬಂಧಪಟ್ಟವರನ್ನು ಸಂಪರ್ಕಿಸಿದರೆ ಈ ಕುರಿತು ಪೂರ್ಣ ಮಾಹಿತಿ ದೊರೆಯಬಹುದು. ಶಿಲ್ಪ ಮತ್ತು ಸಂದೇಶರಿಗೆ ಕಳೆದ ಸರ್ತಿ ಸ್ಕಾಲರ್‌ಶಿಪ್ ಸಿಕ್ಕಿದೆ. ಆದರೆ ಪ್ರಭಾಕರನಿಗೆ ಸಿಕ್ಕಿಲ್ಲ. ತಂದೆಯ ಜಾತಿ ಸರ್ಟಿಫಿಕೇಟ್ ಕೊಟ್ಟಿಲ್ಲವೆಂಬ ಕಾರಣಕ್ಕೆ ಅದನ್ನು ತಡೆಹಿಡಿಯಲಾಗಿದೆ ಎಂಬುದು ಮನೆಯವರ ಮಾತು. ಯಾಕೆ ಹೀಗಾಯಿತು ಎಂಬುದನ್ನು ಶಾಲೆಯ ಮುಖ್ಯಸ್ಥರನ್ನು ಕೇಳಿದರೆ ಗೊತ್ತಾಗಬಹುದು.

ಪ್ರಭಾಕರನಿಗೆ ಓದುವ ಆಸಕ್ತಿಯಿದೆ. ಆದರೆ ತಾಯಿಯ ಕಷ್ಟಗಳನ್ನು ಅವನಿಂದ ನೋಡಲಾಗುತ್ತಿಲ್ಲ. ಅದಕ್ಕಾಗಿ ಈಗ ಹೊಟೇಲ್ ಒಂದರಲ್ಲಿ ಕ್ಲೀನರ್ ಕೆಲಸ ಮಾಡುತ್ತಾನೆ. ತಿಂಗಳಿಗೆ ನಾಲ್ಕು ನೂರು ರೂಪಾಯಿ ಪಗಾರ. ಬೆಳಿಗ್ಗೆ ೮ರಿಂದ ರಾತ್ರಿ ೮ರವರೆಗೆ ೧೨ ತಾಸಿನ ಬಿಡುವಿಲ್ಲದ ಕೆಲಸ. ೮ನೇ ತರಗತಿಯಲ್ಲಿ ಅವನು ಎರಡು ವಿಷಯಗಳಲ್ಲಿ ಫೇಲ್ ಆಗಿದ್ದಾನೆ. ಜೂನ್ ಆರಂಭದಲ್ಲೇ ಮತ್ತೆ ಪರೀಕ್ಷೆಗಳು. ಪಾಸಾದರೆ ೯ನೇ ತರಗತಿಯಲ್ಲಿ ಮುಂದುವರೆಯುತ್ತಾನೆ, ಇಲ್ಲವಾದಲ್ಲಿ ಹೊಟೇಲ್ ಕಾಯಕ ಮುಂದುವರೆಯುತ್ತದೆ.

ಶಾಂತವ್ವ, ಪ್ರಭಾಕರ ಎಲ್ಲ ವಿಷಯಗಳನ್ನು ಹೇಳಿಕೊಂಡರು. ನಾವು ಆತನಿಗೆ ಅವನದೇ ವಿಡಿಯೋ ತೋರಿಸಿದೆವು. ನೋಡನೋಡುತ್ತಿದ್ದಂತೆ ಕೇರಿಯ ಹುಡುಗರೆಲ್ಲ ಅಲ್ಲಿ ಮುತ್ತಿಕೊಂಡರು. ಭಂಗಿ ಸಮುದಾಯದವರ ಒಟ್ಟು ೧೫ ಕುಟುಂಬಗಳು ಅಲ್ಲಿವೆ. ಎಲ್ಲರೂ ಒಂದೇ ಕುಟುಂಬದಂತೆ ಅಲ್ಲಿ ವಾಸಿಸುತ್ತಾರೆ. ಶಾಂತವ್ವ ಏನೇ ಬಡತನವಿದ್ದರೂ ಮಕ್ಕಳ ಓದಿಗೆ, ಬಟ್ಟೆ ಬರೆಗೆ, ಹೊಟ್ಟೆಗೆ ಕೊರತೆ ಮಾಡಿಲ್ಲ. ಛಲಕ್ಕೆ ಬಿದ್ದವಳಂತೆ ಮಕ್ಕಳನ್ನು ಸಾಕುತ್ತಿದ್ದಾರೆ, ಕಾಪಾಡಿಕೊಳ್ಳುತ್ತಿದ್ದಾರೆ. ಆಕೆಗೆ ಒಂದೇ ಸಂಕಟ. ಮಗ ಇಷ್ಟು ಚಿಕ್ಕ ವಯಸ್ಸಿಗೆ ದುಡಿಯಬೇಕಾ? ಅವನ ಓದು ಹಾಳಾಗುತ್ತಿರುವುದೇ ನನ್ನ ಹಾಳು ಕಷ್ಟಗಳಿಂದ ಎಂಬುದು.

ಒಂದು ಪಾಸ್‌ಬುಕ್ ಅಡಕ್ಕೆ ಇಟ್ಟಾಗಿತ್ತು. ಯಾವುದಾದರೂ ಬ್ಯಾಂಕಿನಲ್ಲಿ ಇನ್ನೊಂದು ಅಕೌಂಟು ಇದೆಯಾ ಎಂದು ಪ್ರಶ್ನಿಸಿದಾಗ ಶಾಂತವ್ವಗೆ ನೆನಪಾಗಿದ್ದು ಕರ್ನಾಟಕ ಬ್ಯಾಂಕಿನ ಅಕೌಂಟು. ಅದರ ಪಾಸ್ ಬುಕ್ ತರಿಸಿದೆವು. ಅದು ಯಾವತ್ತೋ ಸತ್ತು ಹೋದಂತಿತ್ತು.

ಹೊಸ ಸೈಕಲ್ ಮೇಲೆ ಪ್ರಭಾಕರನ ಸವಾರಿ
ಪ್ರಭಾಕರ ಮತ್ತವನ ತಾಯಿಯನ್ನು ಕರೆದುಕೊಂಡು ಅಲ್ಲಿನ ಕರ್ನಾಟಕ ಬ್ಯಾಂಕ್‌ಗೆ ತೆರಳಿದೆವು. ಶಾಂತವ್ವಳ ಅಕೌಂಟಿಗೆ ಒಂದಷ್ಟು ಹಣ ತುಂಬಿ ಅದನ್ನು ಮತ್ತೆ ಜೀವಂತಗೊಳಿಸಲಾಯಿತು. ಹೊಸ ಪಾಸ್‌ಬುಕ್ ಕೂಡ ದೊರೆಯಿತು. ನೋಡವ್ವ, ನಮ್ಮ ಸ್ನೇಹಿತರು ಭಾಳ ಜನ ಇದ್ದಾರೆ. ಅವರಲ್ಲಿ ಕೆಲವರು ನಿಮಗೆ ಸಹಾಯ ಮಾಡಬಹುದು. ಅದಕ್ಕಾಗಿ ಈ ಅಕೌಂಟು ಎಂದಾಗ ಶಾಂತವ್ವಳ ಬಾಯಿಂದ ಮಾತೇ ಹೊರಡಲಿಲ್ಲ.

ಹೊರಗೆ ಬ್ಯಾಂಕಿನ ಬಾಗಿಲಿನಲ್ಲಿ ನಿಂತು ಮಾತನಾಡುತ್ತಿದ್ದಾಗ ಊರಿನ ಹಿರಿಯರೊಬ್ಬರು ಸಿಡುಕಿದರು. ಅಡ್ಡ ಯಾಕೆ ನಿಂತಿದ್ದೀ ಎಂಬುದು ಅವರ ತಕರಾರು, ಸಿಡುಕು. ಹೋಗು, ಆ ಮೂಲೆಲಿ ನಿಂತುಕೊ ಹೋಗ್ ಎಂದು ದಬಾಯಿಸಿ ಆ ಸಜ್ಜನರು ಹೊರಟುಹೋದರು. ಶಾಂತವ್ವಳಂಥವರ ಜಾಗ ಎಲ್ಲಿ ಎಂಬುದನ್ನು ಇಂಥವರು ನಿರ್ಧರಿಸುತ್ತಲೇ ಬಂದಿದ್ದಾರೆ, ಆ ವಿಷಯ ಬಿಡಿ.

ನಂತರ ನಾವು ಹೋಗಿದ್ದು ಸೈಕಲ್ ಅಂಗಡಿಗೆ. ಹಾನಗಲ್‌ಗೆ ಬಂದ ಕೂಡಲೇ ನಾವು ವಿಚಾರಿಸಿದ್ದು ಇಲ್ಲಿ ಸೈಕಲ್ ಅಂಗಡಿ ಇದೆಯೇ ಎಂದು. ಸೈಕಲ್ ಅಂಗಡಿಯಲ್ಲಿ ಇದ್ದಿದ್ದೇ ಎರಡು ವೆರೈಟಿ ಸೈಕಲ್‌ಗಳು. ಒಂದನ್ನು ಆಯ್ಕೆ ಮಾಡಿ ಟೈರುಗಳಿಗೆ ಬ್ಲೋ ಹೊಡೆಸಿ ಪ್ರಭಾಕರನ ಕೈಗೆ ಕೊಟ್ಟಾಗ ಅವನು ಸ್ಥಬ್ದನಾಗಿದ್ದ. ನಡುಗುವ ಕೈಗಳಿಂದ ಸೈಕಲ್ ಹಿಡಿಯಲು ಯತ್ನಿಸಿ ಸೋತ. ನಂತರ ಆತನ ಸೋದರ ಸಂಬಂಧಿಯ ಕೈಗೆ ಸೈಕಲ್ ಒಪ್ಪಿಸಿ ಹೊರಟೆವು. ಪ್ರಭಾಕರ ಮತ್ತೆ ಸೈಕಲ್ ಹಿಡಿದು ಓಡಿಸುವಂತಾಗಿದ್ದು ಒಂದು ಗಂಟೆ ಕಳೆದ ನಂತರವೇ.

ನಮಗೆ ತಹಸೀಲ್ದಾರ್ ಕಚೇರಿಯಲ್ಲಿ ಕೆಲಸವೇನೂ ಉಳಿದಿರಲಿಲ್ಲ. ಕೆಇಬಿಯಲ್ಲೂ ಕೆಲಸವಿರಲಿಲ್ಲ. ಎಲ್ಲವನ್ನೂ ಶಾಂತವ್ವಳೇ ಅಚ್ಚುಕಟ್ಟಾಗಿ ಮಾಡಿದ್ದಾರೆ. ಮತ್ತೆ ಮನೆಗೆ ಹೊರಟೆವು. ಒಂದಷ್ಟು ಸಿಹಿ ತಂದು ಅಲ್ಲಿದ್ದವರಿಗೆಲ್ಲ ಕೊಡಿಸಿದೆವು. ಪ್ರಭಾಕರ ತನ್ನ ಹೊಸ ಸೈಕಲ್ ಏರಿ ಒಂದು ರೌಂಡು ಬಂದ. ನಮ್ಮ ಖುಷಿಗಾಗಿ ಒಂದೆರಡು ಫೋಟೋಗಳನ್ನು ತೆಗೆದಿದ್ದಾಯಿತು.

ಮನೆಯೊಳಗೆ ಬಂದು ಕುಳಿತು, ಅಲ್ಲಿನ ಕತ್ತಲಿಗೆ ನಮ್ಮ ಕಣ್ಣುಗಳು ಹೊಂದಿಕೊಳ್ಳುವಷ್ಟರಲ್ಲಿ ೮೦ರ ವೃದ್ಧೆ ಭೀಮವ್ವ ಕಾಲಿಗೆ ಬಿದ್ದುಬಿಡೋದೆ? ಆಕೆಯ ಆ ಪ್ರತಿಕ್ರಿಯಿಂದ ಘಾಸಿಗೊಂಡು, ಆಕೆಯನ್ನು ಹಿಡಿದೆತ್ತಿ, ಆಕೆಯ ಕಾಲಿಗೆರಗಿ ಪ್ರತಿಯಾಗಿ ನಮಸ್ಕರಿಸಿ, ನೀವು ಹಿರಿಯರು ಹೀಗೆಲ್ಲ ಮಾಡಬಾರದು ಎಂದಾಗ ಭೀಮವ್ವ ದೇವರಂತೆ ಬಂದಿರಿ ಎಂದಷ್ಟೇ ಹೇಳಿತು.

ನಿಜ, ಒಬ್ಬ ಪ್ರಭಾಕರನ ಕುಟುಂಬಕ್ಕೆ ಹೀಗೆ ಸಹಾಯ ಮಾಡುವುದರಿಂದ ಇಡೀ ಸಮಾಜ ಉದ್ಧಾರವಾಗುವುದಿಲ್ಲ. ಇಂಥ ಕೋಟ್ಯಂತರ ಪ್ರಭಾಕರಗಳು ನಮ್ಮ ನಡುವೆ ಇದ್ದಾರೆ. ಸಹಾಯಕ್ಕಿಂತ ಅಗತ್ಯವಾಗಿ ಬೇಕಿರುವುದು ಸುಧಾರಣೆ. ವ್ಯವಸ್ಥೆಯಲ್ಲಿ ಇರುವ ಲೋಪಗಳನ್ನು ಹುಡುಕಿ ನಾವು ಚಿಕಿತ್ಸೆ ಕೊಡಬೇಕು. ಹೀಗಂದುಕೊಂಡು ಅವರೆಲ್ಲರಿಂದ ಬೀಳ್ಕೊಂಡು ಹೊರಡಲು ಅಣಿಯಾದೆವು.

ಇವರಿಗೆ ತಿನ್ನಲು, ಕುಡಿಯಲು ಏನಾದ್ರೂ ಕೊಡಬಹುದೇ, ಬೇಡವೇ? ಕೊಟ್ಟರೆ ತಗೋತಾರಾ ಇಲ್ವಾ? ಎಂಬ ಅನುಮಾನ ಅವರಿಗೆ. ಅದನ್ನು ಗಮನಿಸಿ ನಾವೇ ಒಂದು ಲೋಟ ನೀರು ಪಡೆದು ಕುಡಿದಾಗ ಅವರಿಗೆ ಅತಿಥಿಗಳನ್ನು ಸತ್ಕರಿಸಿದ ಸಣ್ಣ ಸಮಾಧಾನ. ಮುಂದಿನ ಬಾರಿ ಬಂದಾಗ ಊಟ ಮಾಡೇ ಹೋಗಬೇಕು ಎಂದು ಮನೆಯವರೆಲ್ಲರೂ ಹೇಳಿದಾಗ, ಮುಂದಿನ ಸರ್ತಿ ಊಟಕ್ಕಾಗಿಯೇ ಬರುತ್ತೇವೆ ಎಂದು ಹೇಳಿ ಹೊರಟೆವು.

ಶಾಂತವ್ವ, ಶಿಲ್ಪ, ಭೀಮವ್ವ, ಸಂದೇಶ ಹಾಗು ಪ್ರಭಾಕರ್
ಹಾನಗಲ್‌ನ ಈ ಕುಟುಂಬಕ್ಕೆ ದೊಡ್ಡದಾಗಿ ಎದುರಾಗಿರುವ ಸಂಕಟ ಮನೆಯದ್ದು. ಈಗಿರುವ ಈ ೧೫ ಕುಟುಂಬಗಳಿರುವ ಜಾಗವನ್ನು ರಸ್ತೆಗಾಗಿ ಮೀಸಲಾಗಿಸಲಾಗಿದೆ. ಹೀಗಾಗಿ ಈ ಕುಟುಂಬಗಳನ್ನು  ಇಲ್ಲಿಂದ ಮೂರ‍್ನಾಲ್ಕು ಕಿ.ಮೀ ದೂರದ ನವನಗರಕ್ಕೆ ಸ್ಥಳಾಂತರಿಸುವ ಕಾರ್ಯ ನಡೆಯಲಿದೆ. ಅಲ್ಲಿ ಇವರಿಗೆ ಇದೇ ರೀತಿ ಒಂದಷ್ಟು ಜಾಗವನ್ನು ನೀಡಬಹುದು. ಆಶ್ರಯ ಯೋಜನೆಯಡಿ ಈ ಕುಟುಂಬಗಳಿಗೆ ಸರ್ಕಾರವೇ ಮನೆ ಕಟ್ಟಿಕೊಡಬಹುದು. ಆದರೆ ಬರಿಯ ಜಾಗ ಕೊಟ್ಟರೆ ಮತ್ತೆ ಮನೆ ಕಟ್ಟಿಕೊಳ್ಳಲು ಹೇಗೆ ಹಣ ಹೊಂದಿಸುವುದು ಎಂಬುದು ಇವರೆಲ್ಲರ ಚಿಂತೆ.

ನಾವೆಲ್ಲರೂ ಸೇರಿ ಒಂದಷ್ಟು ಸಹಾಯ ಮಾಡಿದರೆ ಕನಿಷ್ಠ ಪ್ರಭಾಕರನ ಕುಟುಂಬವಾದರೂ ಸಮಸ್ಯೆಗಳಿಂದ ಮುಕ್ತವಾಗಬಹುದು. ಶ್ರೀಮತಿ ಶಾಂತವ್ವ ಹನುಮಂತಪ್ಪ ಕಲ್ಲಕಲ್ ಅವರ ಹಾನಗಲ್ ಶಾಖೆ ಕರ್ನಾಟಕ ಬ್ಯಾಂಕ್‌ನ ಅಕೌಂಟ್ ಸಂಖ್ಯೆ ೩೦೨೨೫೦೦೧೦೦೭೬೩೨೦೧. ನಿಮ್ಮ ಕೈಲಾದಷ್ಟು ಸಹಾಯ ಮಾಡಿ ಎಂದು ಎಲ್ಲರನ್ನೂ ವಿನಂತಿಸಿಕೊಳ್ಳುತ್ತೇವೆ. ಸಹಾಯ ಮಾಡಲು ಸಾಧ್ಯವಾಗದವರು ಈ ಕುಟುಂಬವನ್ನು ತುಂಬು ಮನಸ್ಸಿನಿಂದ ಹಾರೈಸಿದರೂ ಸಾಕು.

ನಾವು ಮಾಡಬೇಕಿರುವ ಕೆಲಸಗಳು ಇನ್ನೂ ಇವೆ. ಸರ್ಕಾರದ ಒಳ್ಳೆಯ ಯೋಜನೆಗಳಲ್ಲಿ ಒಂದಾದ ಸೈಕಲ್ ಕೊಡುವ ಯೋಜನೆ ಯಾಕಿನ್ನೂ ಫಲಾನುಭವಿಗಳನ್ನು ತಲುಪುತ್ತಿಲ್ಲ ಎನ್ನುವುದರ ಕುರಿತು ಬೆಳಕು ಚೆಲ್ಲಬೇಕು. ಜಾತಿ ಪ್ರಮಾಣಪತ್ರಕ್ಕಾಗಿ ಅಧಿಕಾರಿಗಳು ನೀಡುವ ಕಿರುಕುಳಗಳು ನಿಲ್ಲಬೇಕು. ಇಂಥ ನಿರ್ಗತಿಕ ಜನರನ್ನು ಒಕ್ಕಲೆಬ್ಬಿಸುವಾಗ ಸರಿಯಾದ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸುವ ಹಾಗೆ ನಾವು ನೋಡಿಕೊಳ್ಳಬೇಕು. ಇದು ಕೇವಲ ಹಾನಗಲ್‌ನಲ್ಲಿ ಮಾತ್ರ ಆಗಬೇಕಿರುವ ಕೆಲಸವಲ್ಲ. ಎಲ್ಲೆಡೆ, ಮನುಷ್ಯತ್ವದಲ್ಲಿ ನಂಬಿಕೆ ಉಳ್ಳವರೆಲ್ಲರೂ ಮಾಡಬಹುದಾದ ಕೆಲಸವಿದು. ಆ ಕಡೆ ನಮ್ಮ ಗಮನ ಹರಿಸೋಣ. ಹಾಗೆಯೇ ಈ ಶಾಂತವ್ವಳ ಕುಟುಂಬವನ್ನು ಕನಿಷ್ಠ ೬ ತಿಂಗಳಿಗೊಮ್ಮೆಯಾದರೂ ಭೇಟಿ ಮಾಡಿ, ಅವರ ಪರಿಸ್ಥಿತಿ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ.

ನಿಜ, ಇದು ಪ್ರಭಾಕರ್ ಒಬ್ಬನ, ಒಂದು ಕುಟುಂಬ ಸಮಸ್ಯೆಯಲ್ಲ. ಇಂಥ ಕಡುಕಷ್ಟದಲ್ಲೂ ಮಕ್ಕಳನ್ನು ಓದಿಸಲು ಶಾಂತಮ್ಮ ಬದ್ಧರಾಗಿದ್ದಾರೆ. ಇಂಥವರಿಗೆ ಎಲ್ಲ ಊರುಗಳಲ್ಲೂ ಗುರುತಿಸಿ ಅವರಿಗೆ ಸಹಾಯ ಮಾಡುವಂತಾಗಬೇಕು. ಆ ಕೆಲಸ ಪ್ರಭಾಕರನ ಮೂಲಕವೇ ಆರಂಭವಾಗಲಿ ಎಂದು ನಮ್ಮ ಬಯಕೆ.

ಪ್ರಭಾಕರ ತಂದೆ ಮತ್ತು ಅಜ್ಜಿಯ ಫೋಟೋಗಳು
ಹಾನಗಲ್‌ನಿಂದ ವಾಪಾಸು ಹಾವೇರಿಗೆ ಬಂದು ಹೊಟೆಲ್ ಒಂದರಲ್ಲಿ ಊಟಕ್ಕೆ ಕುಳಿತಾಗ ಸಪ್ಲೈ ಮಾಡಲು ಬಂದಿದ್ದು ಪ್ರಭಾಕರನ ವಯಸ್ಸಿನ ಒಬ್ಬ ಹುಡುಗ. ಸುಮ್ಮನಿರಲಾರದೆ ಅವನ ಪೂರ್ವಾಪರ ವಿಚಾರಿಸಿದೆವು. ಅವನಿಗೂ ತಂದೆಯಿಲ್ಲ. ತಾಯಿಗೆ ಖಾಯಿಲೆ, ದುಡಿಯುವ ಚೈತನ್ಯವಿಲ್ಲ. ೯ನೇ ತರಗತಿ ಪಾಸಾದೆ, ಆದರೆ ತಾಯಿಯನ್ನು ಸಾಕಬೇಕು, ಅದಕ್ಕಾಗಿ ಇಲ್ಲಿ ಕೆಲಸ ಮಾಡುತ್ತೇನೆ. ಕೆಲಸದ ಜತೆಗೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಕಟ್ಟಿ ಪಾಸು ಮಾಡ್ತೀನಿ ಎಂದ ಆ ಹುಡುಗ. ಪಟಪಟನೆ ಮಾತನಾಡಿ, ಈಗ ನಿಮಗೇನು ಕೊಡ್ಲಿ ಸರ್ರಾ, ಖಡಕ್ ರೊಟ್ಟಿ ಐತಿ, ಮೆದು ರೊಟ್ಟಿ ಐತಿ, ಏನು ಕೊಡ್ಲಿ? ಎಂದು ನಿರ್ಭಾವುಕನಾಗಿ ಪ್ರಶ್ನೆ ಹಾಕಿ, ತನಗೆ ಇನ್ನಷ್ಟು ಮಾತನಾಡಲು ಸಮಯವಿಲ್ಲವೆಂದು ಪರೋಕ್ಷವಾಗಿ ಸೂಚಿಸಿದ.

ಕಣ್ಣಲ್ಲಿ ಇನ್ನೊಬ್ಬ ಪ್ರಭಾಕರನ ಚಿತ್ರ ಕುಣಿಯತೊಡಗಿತ್ತು.

ಕಾಲುಮುರಿದ ಮರಿಯ ರಕ್ಷಣೆಗಾಗಿ ಸಿಟ್ಟಿಗೆದ್ದಿದ್ದ ತಾಯಿ ಕೋಳಿ, ದಿಢೀರನೆ ಕಾಲಿಗೆರಗುವ ಮೂಲಕ ಪ್ರತಿಕ್ರಿಯೆ ತೋರಿದ ಭೀಮವ್ವ, ಬ್ಯಾಂಕಿನ ಮುಂಭಾಗ ನಾಯಿಗೆ ಗದರುವಂತೆ ಗದರಿ ಗೊಣಗುತ್ತಾ ಹೋದ ಆ ಮರ್ಯಾದಸ್ಥ, ತಾಯಿನಾ ನಾನೇ ಸಾಕ್ತಿನಿ ಸರ್ರಾ ಎಂದಾ ಹೊಟೇಲ್ ಹುಡುಗ... ಇವರೆಲ್ಲರೂ ಕದಲದ ಚಿತ್ರಗಳಂತೆ ನಮ್ಮ ಕಣ್ಣುಗಳಲ್ಲಿ ಉಳಿದುಕೊಳ್ಳಲಿದ್ದಾರೆ ಅನ್ನಿಸುತ್ತಿದ್ದಂತೆ ರೈಲ್ವೈ ಸ್ಟೇಷನ್ ಹಾದಿ ಹಿಡಿದೆವು.

27 comments:

 1. ಅದ್ಭುತ ಕೆಲಸ ಮಾಡಿದ್ದೀರಿ ನೀವು. ನನ್ನ ಓದಿನ ದಿನಗಳು, ಬೆಳೆದು ಬಂದ ದಿನಗಳು ನೆನಪಾದವು. ಇಂಥದೇ ಪರಿಸರ ಹೊಂದಿರುವ ನೂರಾರು ಊರುಗಳ ನೆನಪಾಯ್ತು. ಪ್ರತಿಯೊಂದು ಊರಿನಲ್ಲಿಯೂ ಮತ್ತೆ ನೂರಾರು ಪ್ರಭಾಕರರು ಇದ್ದಾರೆ. ದುರಂತದ ಸಂಗತಿಯೆಂದರೆ, ಇರುವುದು ಒಂದೇ ಸಂಪಾದಕೀಯ ಬ್ಲಾಗ್‌.

  ಹಾಗಂತ ನಿರಾಶನಾಗಬೇಕಿಲ್ಲ ಅಂತ ಸಮಾಧಾನ ಹೇಳಿಕೊಳ್ಳುತ್ತೇನೆ. ಒಂದಾದರೂ ಇದೆಯಲ್ಲ, ದೀಪದಂತೆ. ಅಷ್ಟು ಸಾಕು.

  ಪ್ರಭಾಕರ ಹಾಗೂ ಅವನಂಥವರ ನೆರವಿಗೆ ಹಿಂದೆಯೂ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ಮುಂದೆಯೂ ಮಾಡುತ್ತೇನೆ. ಅಂಥ ಮತ್ತೊಂದು ಅವಕಾಶವನ್ನು ಈಗ ನೀವು ಒದಗಿಸಿದ್ದೀರಿ.

  ತುಂಬ ಧನ್ಯವಾದಗಳು. ನಿಮ್ಮ ಜನಪರ ಕಾಳಜಿ ಹೀಗೇ ಇರಲಿ.

  ReplyDelete
 2. ಆ ಹುಡುಗನ ಖುಷಿಯನ್ನು ನೇರವಾಗಿ ಕಂಡಂತೆ ಆಯ್ತು, ಭಾವುಕನಾದೆ, ನಿಮ್ಮ ಈ ಪ್ರಯತ್ನಕ್ಕೆ ನನ್ನ ತುಂಬು ಹೃದಯದ ಧನ್ಯವಾದಗಳು. ಇದು ನಾವು ನೀರಿಕ್ಷಿಸದ ಸ್ಪಂದನೆ.

  ನಾನು ಮತ್ತು ನನ್ನ ಗೆಳೆಯ ದಯಾ ಸೇರಿ ಚಿತ್ರಿಕರಣ ಮಾಡುವಾಗ ಸಾಕಷ್ಟು ಸಮಸ್ಯೆಗಳನ್ನ ಜನರು ನಮ್ಮೊಂದಿಗೆ ಹಂಚಿಕೊಂಡರು. ಗುತ್ತಿಗೆ ಕಾರ್ಮಿಕರಾಗಿರುವುದಕ್ಕೆ ನಿಮಗೆ ಬಿಪಿಯಲ್ ಕಾರ್ಡ ಕೊಡುವುದಕ್ಕೆ ಆಗಲ್ಲ ಎಂದ ಅಧಿಕಾರಿಗಳು. ಆ ಊರಿನ "ಮರ್ಯಾದಸ್ಥ" ನಡೆಸತ್ತಿರುವ ಜಾತಿವಾರು ಶೋಷಣೆಗಳು, ತಹಶೀಲ್ದಾರು ಈ ಹಾನಗಲ್ ನಲ್ಲಿ ಯಾವುದೇ ಭಂಗಿ ಕುಟುಂಬ ಇಲ್ಲ ಎಂದು ನೀಡಿದ ಉತ್ತರ .....ಇದೇ ಮುಂದುವರೆಯುತ್ತದೆ.

  ನೀವೆ ಹೇಳಿದಂತೆ ಪ್ರಭಾಕರ್ ನಂತವರು ಪ್ರತಿಯೊಂದು ಊರಿನಲ್ಲಿ ನೂರಾರು ಮಂದಿ ಸಿಗುತ್ತಾರೆ, ಇವರಿಗೆ ಸಿಗಬೇಕ್ಕಾದ ಜೀವನಮೌಲ್ಯಗಳನೊಳಗೊಂಡ ಪುನರ್ವಸತಿಗೆ ಸದಾ ನಿಮ್ಮೊಂದಿಗೆ ಹೆಜ್ಜೆ ಹಿಡುತ್ತೇವೆ. ಅದು ಶಾಸ್ವತ ಪರಿಹಾರವಾಗಬೇಕು. ಅದು ಸರ್ಕಾರದಿಂದ ಮಾಡಿಸಬೇಕು. ಅದು ನಮ್ಮ ಕರ್ತವ್ಯ ಎಂದು ನಾನು ಭಾವಿಸುತ್ತೇನೆ.

  ReplyDelete
 3. "ಹೊರಗೆ ಬ್ಯಾಂಕಿನ ಬಾಗಿಲಿನಲ್ಲಿ ನಿಂತು ಮಾತನಾಡುತ್ತಿದ್ದಾಗ ಊರಿನ ಹಿರಿಯರೊಬ್ಬರು ಸಿಡುಕಿದರು. ಅಡ್ಡ ಯಾಕೆ ನಿಂತಿದ್ದೀ ಎಂಬುದು ಅವರ ತಕರಾರು, ಸಿಡುಕು. ಹೋಗು, ಆ ಮೂಲೆಲಿ ನಿಂತುಕೊ ಹೋಗ್ ಎಂದು ದಬಾಯಿಸಿ ಆ ಸಜ್ಜನರು ಹೊರಟುಹೋದರು. ಶಾಂತವ್ವಳಂಥವರ ಜಾಗ ಎಲ್ಲಿ ಎಂಬುದನ್ನು ಇಂಥವರು ನಿರ್ಧರಿಸುತ್ತಲೇ ಬಂದಿದ್ದಾರೆ, ಆ ವಿಷಯ ಬಿಡಿ"

  ಎಲ್ಲಾ ಓ.ಕೆ. ನಿಮ್ಮ ಸಹಾಯ ಮೆಚ್ಚುವಂತದ್ದೇ. ಆದರೆ ನಡುವೆ ಇಂತಹ ಮಾತುಗಳ ಅಗತ್ಯತೆ ಇಲ್ಲ ಎನ್ನಿಸುತ್ತದೆ. ಬ್ಯಾಂಕಿನ ಬಾಗಿಲಿಗೆ ಅಡ್ಡ ನಿಂತುಕೊಳ್ಳುವುದು ತಪ್ಪು. ಶಾಂತವ್ವನ ಜೊತೆ ನೀವೂ ಇದ್ರಿ . ಅವರು ಗದರಿದ್ದಲ್ಲಿ ತಪ್ಪೆನೂ ಇಲ್ಲ. ಅದನ್ನು ಸಾಮಾಜಿಕ ನೋಟಕ್ಕೆ ತಿರುಗಿಸುವುದು ಬೇಕಾಗಿಲ್ಲ ಅಲ್ವಾ.?

  ReplyDelete
 4. ರೀಸೈಕಲ್ ಅಂದ್ರೆ ಇದೇ ಏನೋಪ್ಪ.. ಸಮಾಜದ ಮೇಲ್ಮುಖಿ ಚಿಂತನೆಗಳನ್ನು ತಳಸ್ಥರದತ್ತ ನೋಡುವುಂತೆ ಮಾಡುವ ಹೊಸ ಬಗೆಯ ಕೆಲಸಕ್ಕೆ ಕೈ ಹಚ್ಚಿದ್ದೀರಿ.. ನುಗ್ತಾ ಇರಿ.. ನಾವೂ ಇದ್ದೇವೆ ನಿಮ್ಮ ಜೊತೆ.. ಟಿ.ಕೆ. ದಯಾನಂದ

  ReplyDelete
 5. Sampadakeeya has widened the possibilities of a blog. This blog is undoubtedly remarkable in its approach and commitment. Like me, many people are with this blog in their efforts of this kind.
  This write-up is too good and touches heart. Kudos to your efforts.

  ReplyDelete
 6. adeno sari swami..nivu madiro kelsasa mechuvanthadde..adre ondu doubt..obba prabhakana baduku hasanagabahudu..adre anthaha kotyantara prabhakara kathe enu? andahaage idu nimage matra kelo prashne alla antha gothu..
  mukhyavaagi, prabhakarana baalu hasanagiddu santhosha..adre education minister kaanunu meeriddu elli hoythu..nivyaake anavashyakavaagi issue divert madthidira? yochsi, ollethanada hesralli anahuthakke karna agbedi.
  -chintu!

  ReplyDelete
 7. ಉತ್ತಮ ಕಾರ್ಯಕ್ಕಾಗಿ ಅಭಿನಂದನೆಗಳು. ಇದು ಹೀಗೆ ಮುಂದುವರಿದು ಎಲ್ಲ ಅಗತ್ಯವಿರುವವರಿಗೂ ಸಕಾಲದಲ್ಲಿ ನೆರವು ದೊರೆಯುವಂತಾಗಲಿ. ನಿಮ್ಮಿಂದ ಪ್ರಾರಂಭವಾದ ಈ ಕಾರ್ಯ ಎಲ್ಲರನ್ನೂ ಒಳಗೊಂಡು ಮುನ್ನಡೆಯಲಿ.....ಶುಭ ಹಾರೈಕೆಗಳು...

  ReplyDelete
 8. ಬ್ಯಾಂಕಿನ ಬಾಗಿಲಲ್ಲಿ ಎದುರಾದ "ಮರ್ಯಾದಸ್ಥ ಸಜ್ಜನನ" ಪ್ರತಿಕ್ರಿಯೆಯ ಹಿಂದಿನ ಮನಸ್ಥಿತಿಯ ಹಿಂದಿನ ವ್ಯವಸ್ಥಿತ ಸಂಚನ್ನು ಅರ್ಥ ಮಾಡಿಕೊಂಡ ಸಂಪಾದಕೀಯದ ಗೆಳೆಯರ ಸೂಕ್ಷ್ಮತೆ ಬಗ್ಗೆ ನನಗೆ ಹೆಮ್ಮೆ ಇದೆ. ಹೀಗೆ ವ್ಯಾಪಕವಾಗಿ ಹರಡಿರುವ ಇಂತಹ ವ್ಯವಸ್ಥಿತ ಸಂಚನ್ನು ಬೇಧಿಸಲು "ಮರ್ಯಾದಸ್ತರ ಸಿಟ್ಟನ ಮಧ್ಯೆಯೂ" ಪ್ರಯತ್ನಗಳು ಆದಾಗ ಮಾತ್ರ ಪ್ರಬಾಕರನಂತಹ ಸಾವಿರಾರು ಮಕ್ಕಳಿಗೆ ಬೆಳೆದುಕೊಳ್ಳಲು ಅವಕಾಶವಾಗುತ್ತದೆ. ತಮ್ಮ ಹೆಸರನ್ನೂ ಬಳಸದಂತೆ, ಮಾಡಿದ ಕೆಲಸವನ್ನಷ್ಟೇ ವರದಿಮಾಡಿರುವ ಸಂಪಾದಕೀಯ ಗೆಳೆಯರ ಬಳಗದ ಬಗ್ಗೆ ಹೆಮ್ಮೆಯ ಭಾವ ಮೂಡುತ್ತಿದೆ. ಮುಂದೆ ಸಾಗಿ. ವೈ.ಜೆ. ರಾಜೇಂದ್ರ. ಸಮಾಜ ಶಾಸ್ತ್ರ ಅಧ್ಯಾಪಕ (ಸೇಂಟ್ ಜೋಸೆಫ್ ಕಾಲೇಜ್ ಬೆಂಗಳೂರು)

  ReplyDelete
 9. @ಸಂಪಾದಕೀಯ, ಲೋಕೇಶ ಅಲಿಯಾಸ್ ಪ್ರಭಾಕರನ ವಿಡಿಯೋ ನೋಡಿದಾಗಿನಿಂದ ತುಂಬಾ ಡಿಸ್ಟರ್ಬ್ ಆಗಿದೀನಿ.. ಇಂತಹ ನೂರಾರು ಲೋಕೇಶ ಮತ್ತು ಅವನ ಕುಟುಂಬದಂತಹವರು ನಮ್ಮ ಸುತ್ತಲಲ್ಲಿದ್ದಾರೆ ಆದರೆ ಅವರನ್ನು ತಲುಪಿಕೊಳ್ಳುವ, ಸಮಾಜದ ಮುಖ್ಯ ವಾಹಿನಿಯಲ್ಲಿ ತರುವ ಪ್ರಯತ್ನಗಳು ಆಗುತ್ತಿಲ್ಲವಷ್ಟೇ.ಬಾಹ್ಯ ನೋಟಕ್ಕೆ ಕಾಣುವ ವ್ಯವಸ್ಥೆಗೂ ಅಂತರ್ಗತವಾಗಿರುವ ಸುಪ್ತಮನಸ್ಸಿನ ಧೋರಣೆಗಳಿಗೂ ಅಜಗಜಾಂತರ ವ್ಯತ್ಯಾಸವಿದೆ.ನೀವಂತೂ ಬರಿ ಪತ್ರಕರ್ತರಾಗಿ ಯೋಚಿಸದೇ ಅದನ್ನು ಮೀರಿದ ಆಯಾಮವನ್ನು ಧಾಟಿ ಸ್ಪಂದಿಸಿದ್ದೀರಿ... ವರದಿ ಓದಿ ಕಣ್ಣೀರಾಗಿದ್ದೇನೆ.. ಸಧ್ಯಕ್ಕೆ ಏನೂ ಹೇಳಲಾರೆ.. ನಾನು ಸ್ಪಂದಿಸುತ್ತೇನೆ.

  ReplyDelete
 10. shlaganiya kelsa maadidiri..nimma karyadalli munde yavade ade thadegalu (politics ) barade mundevariyali endu harisuttene...

  ReplyDelete
 11. ಎಲ್ಲಾ ಓ.ಕೆ. ನಿಮ್ಮ ಸಹಾಯ ಮೆಚ್ಚುವಂತದ್ದೇ..ಎಂದ ವಿಜಯ್ ರವರೇ.. ಪಕ್ಕ ಹೋಗಮ್ಮ ಎನ್ನುವುದಕ್ಕೂ, ಅಲ್ಲಿ ಮೂಲೇಲಿ ನಿಂತ್ಕೋ ಹೋಗ್.. ಎನ್ನುವುದಕ್ಕೂ ವ್ಯತ್ಯಾಸಗಳಿವೆ ಅಲ್ವಾ. ಸೌಜನ್ಯಕ್ಕೂ.. ದರ್ಪಗಾರಿಕೆಗೂ ವ್ಯತ್ಯಾಸ ತಿಳಿಯದೆ ಮಾತಾಡಬಾರದು. ಹಾಗೆ ಮಾತಾಡುವರನ್ನೇ ಸಂಪಾದಕೀಯದ ಗೆಳೆಯರು "ಮರ್ಯಾದಸ್ತರು" ಅಂತ ಕರೆದಿದ್ದು. ಮಾತಿನ ದರ್ಪಕ್ಕೂ ಸಾಮಾಜಿಕ ಏಣಿಶ್ರೇಣಿಗೂ ನೇರವಾದ ಸಂಬಂಧಗಳಿರುತ್ತವೆ. ಅರ್ಥ ಮಾಡಿಕೊಂಡರೆ ಸಮಾಜಕ್ಕೆ ಒಳ್ಳೆಯದು. ಕೀರ್ತನಾ ಹನಗೋಡು

  ReplyDelete
 12. ಇಂದಿನ ಇಂಟರ್‌ನೆಟ್ ಜಗತ್ತಿನಿಂದಾಗಿ ಸೃಷ್ಟಿಯಾಗಿರುವ ಪ್ಯಾರೆಲಲ್ ಮೀಡಿಯಾ 'ಸಂಪಾದಕೀಯ'ದ ಜನಪರ ಕಾಳಜಿಯ ಜೀವನಮೌಲ್ಯಗಳನೊಳಗೊಂಡ ಉತ್ತಮ ಕಾರ್ಯ ಹೀಗೆ ನಿರಂತರವಾಗಿ ಮುಂದುವರಿಯಲಿ.

  -ಪ.ರಾಮಚಂದ್ರ,
  ರಾಸ್ ಲಫ್ಫಾನ್, ಕತಾರ್.

  ReplyDelete
 13. ಇಲ್ಲಿಂದ ಹಾನಗಲ್‌ ತುದಿಯವರೆಗೆ ಹೋಗಿರುವ ನಿಮ್ಮ ಉತ್ಸಾಹ ಒಬ್ಬ ಪ್ರಭಾಕರನಿಗೆ ಸೀಮಿತವಾಗದಿರಲಿ. ಹಾಗೂ ಇದು ಅನೇಕರಿಗೆ ಸ್ಪೂರ್ತಿಯಾಗಿರಲಿ. ಎಷ್ಟೋ ಸಲ ಒಂದೆರಡು ಅನುಭವಗಳಿಗೆ ನಮ್ಮ ಉತ್ಸಾಹ ಕುಗ್ಗಿ ಹೋಗುತ್ತದೆ. ನಿರಂತರವಾಗಿ ಒಂದೊಂದು ವಿಚಾರವನ್ನು ಕೈಗೆತ್ತಿಕೊಂಡು ಸಂಪಾದಕೀಯ ಮಾಡುತ್ತಿರುವ ಕಾರ್ಯ ಅಭಿನಂದನೀಯ. ಹಿಂದೆಲ್ಲ ಸಂಪಾದಕೀಯದಲ್ಲಿ ಕಮ್ಮೆಂಟಿಸಲು ವಿಶೇಷವಾಗಿ ನಮ್ಮಂಥ ಮಾಧ್ಯಮದ ಮಂದಿ ೩ ಸಲ ಯೋಚಿಸಬೇಕಿತ್ತು. ಇದು ಯಾರ ಬಣವನ್ನು ಹಣೆಯುವ ತಂತ್ರವೋ ಅನ್ನಿಸುತಿತ್ತು. ಈಗೀಗ ಧೈರ್ಯವಾಗಿ ಪ್ರತಿಕ್ರಿಯಿಸಬಹುದಾದ ಕಾರ್ಯ ನಿಮ್ಮಿಂದ ನಡೆಯುತ್ತಿದೆ. ಇದು ಹೀಗೆ ಮುಂದುವರಿಯಲಿ...

  ReplyDelete
 14. True that a few individuals or organisations can not take care of all such people in need. That is the reason we elect a government, to serve the people!!! And when the system (government) fails in its duties, it is the primary duty of opposition parties and the media to put it in place.
  But, when they too fail, concerned citizens take up that role. It should be a matter of shame for the entire system - government, opposition parties and the media to see their failure all around.

  Alternate media has always worked to keep the conscience of the people. KUDOS TO SAMPAADAKEEYA.
  I particularly appreciate the insight you have shown to the issue rather that to an individual case.

  Right to Education Act 2009 sets the responsibility of educating children upto the age of 14, on the State. Every child in that age group is entitled for total FREE education. RtE makes it a Right of the children to get Text books, uniforms, mid day meal, school bags, travel facilities etc.free of cost, to complete the elementary education. The Act removes administrative hurdles by exempting any kind of documents, including birth certificate. The fact that this right is justifiable, gives strength to the community to ensure its implementation in totality.
  The Act has come into effect from April 2010. Karnataka is yet to notify the rules of the Act.

  ReplyDelete
 15. ಸಂಪಾದಕೀಯದ ಗೆಳೆಯರಿಗೆ ಧನ್ಯವಾದಗಳು,
  ಇಂಥದ್ದೊಂದು ಸುದ್ಧಿಯನ್ನು ಓದಿ ಭಾವುಕರಾಗಿ ಮತ್ತೆ ನಮ್ಮ ನಮ್ಮ ಬದುಕಿನ ಜಾಡು ಹಿಡಿದು ಮುಂದುವರಿಯುವ ಇಂದಿನ ಮನಸ್ಥಿತಿಯಲ್ಲಿ ಇದೊಂದು ನಿಜಕ್ಕೂ ಶ್ಲಾಘನಾರ್ಹ ಪ್ರಯತ್ನ. ಸುತ್ತಲಿನ ಕೋಟ್ಯಾಂತರ ಪ್ರಭಾಕರರ ಜೀವನವನ್ನು ಸುಧಾರಿಸುವ ಶಕ್ತಿ ನಮ್ಮ-ನಿಮ್ಮಗಳಿಗೆ ಇಲ್ಲದಿದ್ದರೂ ಒಬ್ಬ ಪ್ರಭಾಕರನ ಬದುಕು ನಮ್ಮ ಈ ಪ್ರಯತ್ನದಿಂದ ಹಸನಾದರೆ ಮಾನವೀಯತೆ, ಸಾಂಘಿಕ ಬದುಕು ಎಂಬೆಲ್ಲಾ ಮಾತುಗಳಿಗೆ ಕೊಂಚ ಮಟ್ಟಿಗಾದರೂ ನ್ಯಾಯ ಒದಗಿಸುವಂತಾಗುತ್ತದೆ. ಈ ಬಗೆಯ ನಿಮ್ಮ ಎಲ್ಲಾ ಸಾಮಾಜಿಕ ಹಾಗೂ ಮಾನವೀಯ ಕಾಳಜಿಗಳ ಜೊತೆ ನಾವೆಲ್ಲಾ ಇದ್ದೇವೆ. "ಬ್ರಹ್ಮಾಂಡ" ಜ್ಯೋತಿಷಿ ನರೇಂದ್ರ ಸ್ವಾಮಿಯಂಥ ಕಳೆಯನ್ನು ಬುಡಸಮೇತ ಕೀಳುವುದರ ಜೊತೆ ಜೊತೆಯೇ ಮನುಷ್ಯತ್ವದ ಬೇರುಗಳು ಆಳಕ್ಕಿಳಿಯುವಂತೆ ಮಾಡುವ ಈ ಬಗೆಯ ಅಳಿಲುಸೇವೆಗಳಿಗೆ ಸಂಪಾದಕೀಯ ವೇದಿಕೆಯಾಗಲಿ. ಮತ್ತೊಮ್ಮೆ ಧನ್ಯವಾದಗಳು
  ಅರುಣ್‌ ಕಾಸರಗುಪ್ಪೆ

  ReplyDelete
 16. ಆತ್ಮೀಯ
  ಮೊದಲಿಗೆ ನಿಮಗೆ ಧನ್ಯವಾದಗಳು
  ಅದ್ಭುತವಾದ ಕೆಲಸ ನಾವೂ ನಿಮ್ಮೊ೦ದಿಗೆ ಕೈ ಜೋಡಿಸುತ್ತೇವೆ. ಇ೦ಥ ಅನೇಕ ವಿದ್ಯಾರ್ಥಿಗಳಿದ್ದಾರೆ. ಸಾಧ್ಯವಾದಷ್ಟು ಅವರ ವಿವರಗಳನ್ನು ಸ೦ಗ್ರಹಿಸಿ ಕೈಲಾದ ಸಹಾಯವನ್ನು ಮಾಡೋಣ.
  ಹರಿ

  ReplyDelete
 17. YeY YeY ha hahaha - am a happy man, gr8 work... very happy, super job :) congrats !!

  ReplyDelete
 18. ಎಷ್ಟು ಬೇಗ ಭಾವುಕತೆ ಕಾಡುತ್ತೆ ನೋಡಿ. ನಿಮ್ಮ ಒಟ್ಟಾರೆ ಬರಹಕ್ಕೆ ಅಂತಹ
  ತಾಕತ್ತು ಇದೆ. ಸುಮಾರು ಬಾರಿ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ನಾನು ಈಗ
  ಪ್ರತಿಕ್ರಿಯಿಸಲೇಬೇಕು. ಆ ಮೂಲಕವಾದರೂ ಕೃತಜ್ಞತೆ ಹೇಳಬಹುದೆಂಬ ಬಯಕೆ
  ನನ್ನದು. ಅಂತಹ ಅನಿವಾರ್ಯತೆ ಸೃಷ್ಟಿಸಿದ ಸಂಪಾದಕೀಯ ಬಳಗಕ್ಕೆ ತುಂಬಾ
  ತುಂಬಾ ಅಭಾರಿಯಾಗಿದ್ದೇನೆ. ನಿಮ್ಮ ಹಿಂದೆ ಹಿಂದೆ ಯಾವತ್ತು ನಾನು
  ಹಿಂಬಾಲಿಸುತ್ತಲೇ ಬಂದಿದ್ದೇನೆ. ಅಸಹಾಯಕ ಮೂಕವೇದನೆಗಳಿಗೆ ಮೂರ್ತರೂಪ
  ಕೊಟ್ಟ ನೀವು ಅನೇಕ ಸಲ ಮನಸ ಬೇಸರ ಹರಿಸಿದ್ದೀರಿ. ಈಗ ನಮ್ಮ
  ಮಗುವಿಗೊಂದು ಬದುಕಿನ ಆಸೆಯ ಸೆಲೆಯನ್ನು ಮೂಡಿಸಿದ್ದೀರಿ ಮತ್ತೊಮ್ಮೆ
  ನಿಮಗೆ ಧನ್ಯವಾದಗಳು. ಸಾದ್ಯವಾದಷ್ಟು ನಿಮ್ಮ ಆಶಯಗಳ ಹಿಂದೆ ಇರಬಲ್ಲೆ
  ಎಂದು ನನ್ನ ಅಂತರಾಳ ಹೇಳುತ್ತಿದೆ. ಮತ್ತೆ ಇನ್ಯಾವತ್ತಾದರೂ ಸಿಗುತ್ತೇನೆ.

  ReplyDelete
 19. ಪ್ರಭಾಕರನ ವಿಷಯದಲ್ಲಿ ಸಂಪಾದಕೀಯ ತಂಡದ ಕೆಲಸ ಶ್ಲಾಘನೀಯ. ಆದರೆ, ಗೆಳೆಯ ದಯಾ ಮತ್ತು ನಾನು ಈ ವಿಡಿಯೋ ಅಪ್ ಲೋಡ್ ಮಾಡುವ ಮೊದಲು ಏನು ಅಂದುಕೊಂಡಿದ್ದೆವೋ ಅದು ಮರೆತಂತೆ ಆಗಿದೆ. ಅಂದರೆ, ನಮ್ಮ ಸಮಾಜದ ಅನುಕೂಲಸ್ಥರ ಸಾಮಾಜಿಕ ಮೌಲ್ಯಗಳು ಈ ರೀತಿ ಇಲ್ಲದಿರುವುದನ್ನು 'ಕೊಟ್ಟು' ಸುಮ್ಮನಾಗಿಸಿಬಿಡುವ ಹಂತಕ್ಕೆ ತಲುಪಿದರೆ, ಇಂತಹ ಇನ್ನೆಷ್ಟು ಪ್ರಭಾಕರರನ್ನು ಸಂಪಾದಕೀಯ ಹುಡುಕಿಕೊಂಡು ಹೊರಡಬೇಕೋ.. ಮಾ|| ಕಿಶನ್ ಗೆ ಎಸ್ಎಸ್ಎಲ್ಸಿ ನಂತರ ನೇರವಾಗಿ ಎಂಎ ಮಾಡಲು ಕಾನೂನು ಬದಲಿಸುವ ಸರಕಾರಕ್ಕೆ ಈ ವಿಡಿಯೋ ಮೂಲಕ ನಾವು ಏನೂ ಅರ್ಥ ಮಾಡಿಸಲಾಗಲಿಲ್ಲವೇ..? ಬಡವರ ಬದುಕು ಇಷ್ಟೇನೇ..? ನಾವೂ ಅದ್ಯಾರೋ ಕಾಮೆಂಟ್ ಮಾಡಿದಂತೆ 'ಗೇಮ್ ಓವರ್' ಎಂದು ಕುಳಿತುಕೊಂಡುಬಿಡಬೇಕೇ..? ಈ ವಿಡಿಯೋ ತಯಾರಿಸಿ ಅಪ್ಲೋಡ್ ಮಾಡಿದ ಗೆಳೆಯರಿಗೆ ಸಂಪಾದಕೀಯ ಮಾಡಿದ ಕೆಲಸವನ್ನು ಮೊದಲೇ ಮಾಡಲು ಸಾಧ್ಯವಾಗಿರಲಿಲ್ಲ ಎಂದು ಇದರ ಅರ್ಥವೇ..? ನಮ್ಮನ್ನು ಆಳುವವರ ಆದ್ಯತೆಗಳು ಬ್ಯಾಂಕಿನ ಬಾಗಿಲಲ್ಲಿ ನಿಂತ ಶಾಂತಮ್ಮರನ್ನು ಗದರಿಸಿದ 'ಮರ್ಯಾದಸ್ಥ'ರ ರೀತಿಯದ್ದು ಎಂದು ನಮಗ್ಯಾರಿಗೂ ಅನ್ನಿಸುವುದಿಲ್ಲವೇ..?

  ReplyDelete
 20. ........ಶಾಂತವ್ವಳಂಥವರ ಜಾಗ ಎಲ್ಲಿ ಎಂಬುದನ್ನು ಇಂಥವರು ನಿರ್ಧರಿಸುತ್ತಲೇ ಬಂದಿದ್ದಾರೆ, ಆ ವಿಷಯ ಬಿಡಿ............. ನಾನು ಎರಡನೇ ಕ್ಲಾಸಿನಲ್ಲಿ ಇದ್ದಾಗ ಒಬ್ಬ ಗುರುಗಳ ಮನೆಗೆ ಮನೆ ಪಾಠಕ್ಕೆ ಹೋಗುತ್ತಿದ್ದಾಗ ಒಂದು ದಿನ ನನ್ನ ಸಹಪಾಠಿ ರಾಮು ಮೆಣಸಿನಕಾಯಿ ಅನ್ನುವ ಹರಿಜನ ಮಿತ್ರನನ್ನು ಕರೆದುಕೊಂಡು ಹೋಗಿದ್ದಾಗ ಆ ಗುರುಗಳು ನಮ್ಮನ್ನು ಮನೆಯ ಒಳಗಡೆ ಬಿಟ್ಟುಕೊಳ್ಳದೇ " ಈ ದಿನ ಪಾಠ ಹೇಳುವದಿಲ್ಲಾ" ಅಂಥಾ ಮರಳಿ ಕಳಿಸಿದ್ದು ಇನ್ನೂ ನೆನಪಿದೆ. ಅಂದ ಹಾಗೆ, ಈ ಹಾನಗಲ್ ನಮ್ಮ ಲೋಕೋಪಯೋಗಿ ಮಂತ್ರಿ ಉದಾಸಿಯವರ ಊರು. ಹಾವೇರಿಯ ಸಂಸದರೂ ( ಉದಾಸಿಯವರ ಮಗ )ಸಹ ಇದೇ ಊರಿನವರು.

  ReplyDelete
 21. ಮೂರ್ತಿಯವರ ಅಭಿಪ್ರಾಯ ಸರಿಯಾಗಿದೆ. ಇಲ್ಲದವರಿಗೆ ನಮ್ಮಲ್ಲಿ ಹೆಚ್ಚಾಗಿರುವುದನ್ನು ಕೊಟ್ಟು ನಾವು ಸಮಾಧಾನ ಪಡುವುದು ನಮ್ಮ ಆತ್ಮತೃಪ್ತಿಗೆ. ಇದರಾಚೆಗೆ ಮಾಡಬೇಕಾಗಿರುವುದು ಏನನ್ನು ಎಂಬುದನ್ನು ನಾವು ಯೋಚಿಸಬೇಕಿದೆ. ಮೂರ್ತಿಯವರು ಹೇಳಿದಂತೆ, ಸರಕಾರವನ್ನು ಈ ಮೂಲಕ ಎಚ್ಚರಿಸಲು ಸಾಧ್ಯವಾಗಲೇ ಇಲ್ಲ. ಬಾಲ ನಟ ಕಿಶನ್ ಬಿಡಿಎ ಸೈಟ್ ಗಿಟ್ಟಿಸುತ್ತಾನೆ. ಕಾನೂನು, ಕಟ್ಟಳೆಗಳನ್ನು ಸಡಿಲಗೊಳಿಸುವುದು ಅವನಂಥ 'ಸಾಧಕ'ರಿಗೆ ಸುಲಭ. ಆದರೆ ಪ್ರಭಾಕರನಿಗೆ ಅದು ಸಾಧ್ಯವಿಲ್ಲ. ಮುಖ್ಯವಾಗಿ ಸಂಪಾದಕೀಯ ಬಳಗ ತನ್ನ ಇತಿ-ಮಿತಿಯಲ್ಲಿ ಪ್ರಭಾಕರನ ಕಷ್ಟಕ್ಕೆ ಸ್ಪಂದಿಸುವ ಕೆಲಸ ಮಾಡಿದೆ. ಆ ಮೂಲಕ ಒಂದು ಬ್ಲಾಗ್ ಸಮಾಜಮುಖಿಯಾಗಿ ಹೇಗೆ ಕರ್ತವ್ಯ ನಿರ್ವಹಿಸಬಹುದು ಎಂಬುದನ್ನು ತೋರಿಸಿದೆ. ಇನ್ನು ಮುಂದೆ ಈ ಬ್ಲಾಗ್ ಮತ್ತಷ್ಟು ಪರಿಣಾಮಕಾರಿಯಾಗಿ ಬೆಳೆದು, ಸರಕಾರವನ್ನು ಎಚ್ಚರಿಸುವಂತಾಗಲಿ ಎಂದು ಆಶಿಸುತ್ತೇನೆ.

  ReplyDelete
 22. It was a calm evening after the storms on the shores of sea...

  thousands of star fishes have been thown to the shore..by a storm.. a very old man who could hardly walk.. with all his efforts, bent down and picked up a star fish and threw it back to Sea... A passer by youngman giggled at him - What difference did you make "See there are thousands lying & dying there.."
  The Old Man smiled and said - " I made a difference for that one star fish " ..

  Thanks sampadkeeya for making that one difference :)

  ReplyDelete
 23. kiran comment supper

  ReplyDelete
 24. Great Job....!

  ReplyDelete