Monday, May 16, 2011

ಮುನಿಯಪ್ಪ ಎಂಬ ಆದರ್ಶ, ಅಸಹಾಯಕ ತಂದೆಯ ಕಥೆ ಹುಟ್ಟಿಸಿದ ತಲ್ಲಣಗಳ ಸುತ್ತ...

ಬಡವರಿಗೆ ಬದುಕು ತುಟ್ಟಿ; ಸಾವು ಇನ್ನೂ ತುಟ್ಟಿ ಎಂಬ ನಿನ್ನೆಯ ಪ್ರಜಾವಾಣಿ ಸಾಪ್ತಾಹಿಕದ ಲೇಖನ ಓದಿದ ನಂತರ ಅದು ಎಬ್ಬಿಸಿದ ತಲ್ಲಣದಿಂದ ಹೊರಗೆ ಬರಲು ಸಾಧ್ಯವಾಗುತ್ತಿಲ್ಲ. ಅರಗಿಸಿಕೊಳ್ಳಲು ಸಾಕಷ್ಟು ದಿನಗಳೇಬೇಕು. ಬಹುಶಃ ಇಂಥದ್ದೊಂದು ಲೇಖನವನ್ನು ಓದಿ ಎಷ್ಟು ದಿನಗಳಾಗಿದ್ದವೋ ಎಂದು ನಿಮಗನ್ನಿಸಿದರೆ ಆಶ್ಚರ್ಯವಿಲ್ಲ. ಡಾ.ಆಶಾ ಬೆನಕಪ್ಪ ಈ ಲೇಖನ ಬರೆದಿದ್ದಾರೆ.

ಹೃದ್ರೋಗದಿಂದ ಬಳಲುತ್ತಿರುವ ತನ್ನ ಮಗ ಹನುಮಂತಪ್ಪ ಎಂಬ ಹುಡುಗನನ್ನು ಚಿಕಿತ್ಸೆಗಾಗಿ ಬೆಂಗಳೂರಿಗೆ ಕರೆತರುವ ಕೊಪ್ಪಳದ ಬಡರೈತ ಮುನಿಯಪ್ಪ ಅವರನ್ನು ಹತ್ತಿರದಿಂದ ಗಮನಿಸಿ, ಆತನ ಚಟುವಟಿಕೆಗಳನ್ನು ಲೇಖಕಿ ಇಲ್ಲಿ ವರದಿ ಮಾಡುತ್ತ ಹೋಗುತ್ತಾರೆ. ಮುನಿಯಪ್ಪ ತನ್ನ ಮಗನಿಗಾಗಿ ಏನೇನು ಮಾಡುತ್ತಾರೆ, ಮಗ ಸತ್ತ ನಂತರ ಏನು ಮಾಡುತ್ತಾರೆ ಎಂಬುದನ್ನು ಓದುತ್ತಾ ಹೋದರೆ, ನಿಮ್ಮ ಕಣ್ಣುಗಳು ಆರ್ದ್ರವಾಗದೇ ಇರವು. ಮನುಷ್ಯ ಸಂಬಂಧಗಳ ಬೇರುಗಳು ಸಡಿಲಗೊಳ್ಳುತ್ತಿರುವ ಈ ಹೊತ್ತಿನಲ್ಲಿ ಮುನಿಯಪ್ಪ ಮತ್ತು ಹನುಮಂತಪ್ಪ ಎಂಬ ಈ ಅಪ್ಪ ಮಕ್ಕಳು ನಾವು ತಲೆ ಎತ್ತಿ ನೋಡಿದಷ್ಟು ಎತ್ತರಕ್ಕೆ ಬೆಳೆದು ನಿಂತಂತೆ ಅನಿಸುತ್ತದೆ.

ಆಶಾ ಅವರು ಈ ಲೇಖನ ಬರೆಯುವ ಮೂಲಕ ದೂರದೂರಗಳಿಂದ ತಮ್ಮ ಕರುಳ ಸಂಬಂಧಿಗಳ ಚಿಕಿತ್ಸೆಗಾಗಿ ಬೆಂಗಳೂರಿಗೆ ಬರುವ ಬಾಯಿಸತ್ತ ಬಡವರ ಬದುಕನ್ನೇ ತೆರೆದಿಟ್ಟಿದ್ದಾರೆ. ಪ್ರತಿನಿತ್ಯ ಇಂಥವರು ನೂರಾರು ಸಂಖ್ಯೆಯಲ್ಲಿ ಬರುತ್ತಾರೆ. ಹಾಗೆ ಬರುವ ಮುನ್ನ ತಮ್ಮ ಆಸ್ತಿ ಅಡವನ್ನು ಮಾರಿ ಬಂದಿರುತ್ತಾರೆ. ಕೈಗೆ ಸಿಕ್ಕ ಪುಡಿಗಾಸನ್ನು ಚಿನ್ನದ ಹಾಗೆ ಜೋಪಾನ ಮಾಡಿ, ಖರ್ಚು ಮಾಡುತ್ತಾರೆ. ಅರೆಹೊಟ್ಟೆಯಲ್ಲೇ ಎಲ್ಲೋ ಬಿದ್ದುಕೊಂಡು ಕಾಲ ದೂಡುತ್ತಾರೆ. ಅವರಿಗೆ ಯಾವ ರಾಜಕಾರಣಿಯ ಶಿಫಾರಸೂ ಇರುವುದಿಲ್ಲ. ಹೀಗಾಗಿ ಅವರ ಚಿಕಿತ್ಸಾ ವೆಚ್ಚದ ಬಿಲ್‌ಗಳು ಕಡಿತವಾಗುವುದಿಲ್ಲ. ಮುಖ್ಯಮಂತ್ರಿಯ ಫಂಡು ತಮ್ಮ ಕೆಲಸಕ್ಕೆ ಬರುತ್ತದೆ ಎಂಬುದೂ ಅವರಿಗೆ ಗೊತ್ತಿರುವುದಿಲ್ಲ. ಗೊತ್ತಿದ್ದರೂ ಅವರು ವಿಧಾನಸೌಧದ ಮೆಟ್ಟಿಲುಗಳನ್ನು ಹತ್ತಿ ತಮ್ಮ ಕೆಲಸ ಮಾಡಿಸಿಕೊಳ್ಳಲಾರರು.

ಚಿಕಿತ್ಸೆಗೆ ಹಣ ಹೊಂದಿಸಿಕೊಂಡು ಬರುವಷ್ಟರಲ್ಲೇ ರೋಗಿಯ ಅರ್ಧ ಪ್ರಾಣ ಹೋಗಿರುತ್ತದೆ. ಆಸ್ತಿ ಮಾರಿ ಬಂದ ಹಣ ಕರಗುವಷ್ಟರಲ್ಲಿ ಪೂರ್ಣ ಪ್ರಾಣವೂ ಹೋಗಿಬಿಡುತ್ತದೆ. ಇಂಥವು ದಿನವೂ ನಡೆಯುತ್ತದೆ. ಆದರೆ ಯಾವ ಮಾಧ್ಯಮಗಳಲ್ಲೂ ಇವೆಲ್ಲ ದಾಖಲಾಗುವುದಿಲ್ಲ. ಬಡವರ ಬದುಕು ಅತ್ಯಂತ ಸಸ್ತಾ. ಅವರು ಬದುಕಿದ್ದರೂ ಸುದ್ದಿಯಾಗುವುದಿಲ್ಲ, ಸತ್ತರೂ ಸುದ್ದಿಯಾಗುವುದಿಲ್ಲ. ವಿಧಾನಸೌಧಕ್ಕೆ, ಕಾರ್ಪರೇಷನ್‌ಗೆ, ಐಪಿಎಲ್‌ಗೆ, ಶೇರು ಮಾರುಕಟ್ಟೆಗೆ, ಫ್ಯಾಷನ್ ಶೋಗೆ, ದೊಡ್ಡದೊಡ್ಡ ಸಂಸ್ಥೆಗಳ ಹೊಸ ಪ್ರಾಡಕ್ಟು ಬಿಡುಗಡೆಗಾಗಿ ಪಂಚತಾರಾ ಹೋಟೆಲ್‌ಗಳಿಗೆ, ರಾಜಕೀಯ ಪಕ್ಷಗಳ ಕಚೇರಿಗಳಿಗೆ ವರದಿಗಾರರನ್ನು ನಿಯುಕ್ತಿ ಮಾಡುವ ಮಾಧ್ಯಮಗಳು ಸರ್ಕಾರಿ ಆಸ್ಪತ್ರೆಗಳಿಗೆ ವರದಿಗಾರರನ್ನು ಕಳುಹಿಸುವುದಿಲ್ಲ. ಅಪಘಾತ, ಕೊಲೆ ಇತ್ಯಾದಿಗಳು ನಡೆದು ಮೃತದೇಹಗಳು ಬಂದರೆ ಮಾತ್ರ ಇಲ್ಲಿ ಸುದ್ದಿ, ಮಿಕ್ಕಂತೆ ಇಲ್ಲಿ ನಮ್ಮ ಮೀಡಿಯಾಗಳಿಗೆ ಬೇಕಾದ ಸುದ್ದಿಗಳು ಹುಟ್ಟುವುದಿಲ್ಲ.

ಆರ್ಥಿಕ ಉದಾರೀಕರಣದ ನಂತರದ ದಿನಗಳಲ್ಲಿ ನಮ್ಮ ಮೀಡಿಯಾಗಳು ಜಾಹೀರಾತು ಮಾಫಿಯಾದ ಕೈಗೆ ಸಿಕ್ಕವು. ಮೀಡಿಯಾಗಳ ಆದ್ಯತೆಗಳು ಬದಲಾದವು. ಮಧ್ಯಮ ವರ್ಗ ಮತ್ತು ಶ್ರೀಮಂತ ವರ್ಗದ ಬದುಕಷ್ಟೇ ಮೀಡಿಯಾಗಳಿಗೆ ಮುಖ್ಯವಾಯಿತು. ಯಾಕೆಂದರೆ ಈ ವರ್ಗದವರೇ ಜಾಹೀರಾತುದಾರರ ಗ್ರಾಹಕರು. ಮೀಡಿಯಾಗಳಲ್ಲಿ ಕೆಲಸ ಮಾಡುವವರೂ ಸಹ ಈ ವರ್ಗಗಳಿಂದ ಬಂದವರೇ ಆಗಿದ್ದರಿಂದ ಸಹಜವಾಗಿ ಅವರು ಈ ಜನರ ಒಲವು-ನಿಲುವುಗಳನ್ನೇ ಪ್ರತಿನಿಧಿಸತೊಡಗಿದರು. ಮೀಡಿಯಾಗಳು ಹೆಚ್ಚು ಹೆಚ್ಚು ನಗರಕೇಂದ್ರಿತವಾದವು. ಹಳ್ಳಿಗಳ ಜನರ ಬದುಕು, ಬವಣೆಗಳಿಗೆ ಅಲ್ಲಿ ಜಾಗವಿಲ್ಲದಂತಾಯಿತು.

ಹಾಗಿದ್ದರೆ ಬಡವರ ಕಥೆಗಳನ್ನು ಹೇಳುವವರು ಯಾರು? ಬಡವರ ಜೋಪಡಿಗಳಲ್ಲಿ ಹುಟ್ಟುವ ಸುದ್ದಿಗಳನ್ನು ಬರೆಯುವವರು ಯಾರು? ನಿಜ ಹೇಳಿ, ನಮ್ಮ ಮೀಡಿಯಾಗಳು ಇವತ್ತಿನ ಪ್ರಜಾಪ್ರಭುತ್ವದ ಕಾಲದಲ್ಲಿ ಸಮಸ್ತ ಜನರ ಪ್ರತಿನಿಧಿಗಳಂತೆ ಕೆಲಸ ಮಾಡುತ್ತಿವೆಯೇ?

ಪ್ರಜಾವಾಣಿ ಸಾಪ್ತಾಹಿಕದ ಲೇಖನ ನಮ್ಮಲ್ಲಿ ತಲ್ಲಣ ಹುಟ್ಟಿಸುತ್ತದೆ.  ಮನುಷ್ಯ ಸಂಬಂಧಗಳ ಗಾಢತೆಯನ್ನು ಅದು ಪ್ರಭಾವಶಾಲಿಯಾಗಿ ಹೇಳುವುದರಿಂದ ನಮ್ಮ ಒಳಗನ್ನು ನೋಡಿಕೊಳ್ಳಲು ಅವಕಾಶ ಕಲ್ಪಿಸುತ್ತದೆ. ಮುನಿಯಪ್ಪ ಒಂದು ಮಾನವೀಯ ಆದರ್ಶದ ಸಂಕೇತವಾಗಿ ನಮ್ಮ ಕಣ್ಣೆದುರು ಕಾಣುತ್ತಾರೆ. ಇಂಥ ನಿಜಮನುಷ್ಯರ ಸಂಖ್ಯೆ ಹೆಚ್ಚಲಿ. ಮೀಡಿಯಾಗಳ ಕಣ್ಣಿಗೆ ಇಂಥವರು ಆಗಾಗ ಕಾಣಿಸಿಕೊಳ್ಳುವಂತಾಗಲಿ. ಇನ್ನೊಂದು ಅರ್ಥದಲ್ಲಿ ಹೇಳುವುದಾದರೆ ಮೀಡಿಯಾಗಳು ದಟ್ಟದರಿದ್ರನ, ಕಟ್ಟ ಕಡೆಯ ಮನುಷ್ಯನನ್ನೂ ತಲುಪುವಂತಾಗಲಿ, ಅವರುಗಳ ನಿಷ್ಕಳಂಕ ಬದುಕನ್ನು ಪ್ರತಿಬಿಂಬಿಸುವಂತಾಗಲಿ, ಅವರಿಗೆ ಆಗುತ್ತಿರುವ ಎಲ್ಲ ಅನ್ಯಾಯಗಳ ವಿರುದ್ಧವೂ ಪ್ರತಿಭಟಿಸುವಂತಾಗಲಿ.

ಲೇಖನ ಓದಿದ ನಂತರ ಕಣ್ಣುಗಳು ಮಂಜುಮಂಜು. ಮುನಿಯಪ್ಪ ಒಂದು ಪ್ರತಿಮೆಯಂತೆ, ಆದರ್ಶದಂತೆ, ಕನಸಿನಂತೆ ಎದೆಯೊಳಗೆ ಕದಲದೆ ನಿಂತುಬಿಟ್ಟಿದ್ದಾರೆ. ಪ್ರಜಾವಾಣಿಗೆ, ಡಾ.ಆಶಾ ಬೆನಕಪ್ಪ ಅವರಿಗೆ ಕೃತಜ್ಞತೆಗಳು. ನೀವು ಈ ಲೇಖನವನ್ನೂ ಓದಿಲ್ಲವಾದರೆ ದಯವಿಟ್ಟು ಕೆಳಗಿನ ಲಿಂಕ್ ಬಳಸಿ, ಓದಿ.
http://www.prajavani.net/web/include/story.php?news=2151&section=54&menuid=13

9 comments:

  1. kandita kannu oddeyagisuva baraha. inta ondu barhada link kottidakke tx..antimavaagi annisiddu namma desha iste...
    -kodsara

    ReplyDelete
  2. ತುಂಬಾ ಸಂತೋಷ ಈ ಲೇಖನದ ಬಗ್ಗೆ ಪ್ರಕಟಿಸಿದಕ್ಕೆ. ನಿಜ ಜನ ಸಾಮಾನ್ಯರಾದಂಥ ನನ್ನಂತವರ ಮನ, ಇಂಥ ಲೇಖನಗಳನ್ನು ಓದಿ ಒಂದು ನಿಮಿಷ ಎದೆಯಲ್ಲಿ ಕಳವಳ ಮೂಡಿಸಿ ಅರ್ಧ ಗಂಟೆಯಲ್ಲಿ ಮಾಯವಾಗುತ್ತೆ. ಇದರಿಂದ ನೊಂದ ಇಂಥ ಸಾವಿರಾರು ಜೀವಕ್ಕೆ ಏನು ಕೊಂಚಿತ್ತು ಸಹಾಯವಾಗಲ್ತು. ಅದಕ್ಕಾಗಿ ಒಂದು ಹೊಸ ಅಭಿಯಾನ ಸುರುಮಾಡುವ ಸಲಹೆ ನನ್ನದು, ಯೋಚಿಸಿ ನೋಡಿ. ಇಂಥ ಲೇಖನಗಳನ್ನ ಸಂಪಾದಕೀಯ ಮುಖ್ಯವಾಹಿನಿಯ ಮೂಲಕ ಜನಪ್ರತಿನಿಧಿಗಳ (ಮುಖ್ಯಮಂತ್ರಿ, ಸಮಾಜಕಲ್ಯಾಣ ಸಚಿವರು...ಇತ್ಯಾದಿ, ಇತ್ಯಾದಿ) "ಇ-ಮೇಲ್"ಗೆ ಕಳಿಸುವ ಒಂದು ಪ್ರಾಮಾಣಿಕ ಪ್ರಯತ್ನ ಸುರು ಮಾಡಬಹುದಲ್ಲವೇ. ಬರೇ ಸ್ವಾರ್ಥಿಗಳು ಎಂದು ಹಣೆಪಟ್ಟಿ ಹೊತ್ತಿದ್ದರೂ, ನಮ್ಮದೇ ತರಹದ ಭಾವನೆ ಹೊಂದಿರುವಂಥವರಲ್ಲವೇ ಅವರು ಕೂಡ. ಇಂಥ ಮನಕಲುಕುವ ಲೇಖನ ಮಾಲೆ ಅಗ್ಗಾಗೆ ಅವ್ರ inbox ನಲ್ಲಿ ಕೂರುತಿದ್ದರೆ ಒಂದು ದಿನವಾದ್ರೂ ಅವ್ರ ಮನ ಮಂಜಿನಂತೆ ಕರಗಿ ಬಡವರ ಪಾಲಿಗೆ ವರಧಾನವಾಗಬಹುದೇ ಎಂಬ ಆಶಾಭಾವನೆ ನನ್ನದು.

    ReplyDelete
  3. ಇದೇ ಲೇಖನವನ್ನು ಕೆಲವು ದಿನಗಳ ಹಿಂದೆ ಡೆಕ್ಕನ್ ಹೆರಾಲ್ಡ್ ನಲ್ಲಿ ಓದಿದ್ದೆನು. ಓದಿದ ಮೇಲೆ ಮನಸ್ಸು ಭಾರವಾಗಿತ್ತು. ಕಣ್ಣುಗಳು ತೇವವಾಗಿದ್ದವು. ಮನುಷ್ಯ ಸಂಬಂಧಗಳು ಏನು ಎಂದು ಅರಿವು ಮಾಡಿ ಕೊಡುವ ಮನಮಿಡಿಯುವ ಲೇಖನ.

    ಇಂದುಶೇಖರ ಅಂಗಡಿ

    ReplyDelete
  4. Istondu badatana tandavavadutiddaroo Hyderabad nalli NTR magana maduve addooriyage nadeyutte!Bekiddare yaradaroo cinemamandi idara chitra tegedu kotigattale sampaadisabuhudu.

    ReplyDelete
  5. ಕೆಂಪು ಪಟ್ಟಿಯ, ಅರ್ಥವಿಲ್ಲದ ಕಾನೂನುಗಳಿಗೆ ಜೋತು ಬಿದ್ದಿರುವ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಜನಪರವಾಗಿ ಬದಲಿಸುವ ಸಾಮರ್ಥ್ಯ ನಾವು ಆರಿಸಿದ ಜನಪ್ರತಿನಿಧಿಗಳಿಗೆ ಸಂವಿಧಾನ ನೀಡಿದೆ. ಆದರೆ ಅದನ್ನು ನಮ್ಮ ಜನಪ್ರತಿನಿಧಿಗಳು ಬಳಸುತ್ತಲೇ ಇಲ್ಲ. ಹೀಗಿರುವಾಗ ಜನಪ್ರತಿನಿಧಿಗಳ ಅಗತ್ಯವಾದರೂ ಇದೆಯೇ ಎಂಬ ಬಗ್ಗೆ ಆಲೋಚಿಸಬೇಕಾಗುತ್ತದೆ. ೧೨೦ ಕೋಟಿ ಜನಸಂಖ್ಯೆಯ ಭಾರತದಲ್ಲಿ ಇಂದು ಒಬ್ಬನೇ ಒಬ್ಬ ಧೀಮಂತ ಜನನಾಯಕ ಕಾಣಿಸುತ್ತಿಲ್ಲ ಎಂದರೆ ಇದಕ್ಕೆ ಏನು ಕಾರಣ ಎಂಬ ಬಗ್ಗೆ ನಾವು ಆಲೋಚಿಸಬೇಕಾಗಿದೆ.

    ReplyDelete
  6. ಮನತಟ್ಟುವ ಲೇಖನ. ಚೆನ್ನಾಗಿ ಬಂದಿದೆ. ಬಡತನ ಎಂದರೆ ಏನು ಎಂದೇ ಅರಿಯದವರಿಗೆ ಇಂತಹವರ ಎದೆಯ ಉರಿ ಅರ್ಥವಾಗದು. ಎಲ್ಲಾ ಕ್ಷೇತ್ರಗಳೂ ಈಗ ಮಧ್ಯಮ ಹಾಗೂ ಶ್ರೀಮಂತ ವರ್ಗದವರಿಗೆ ಮಾತ್ರ ಸೀಮಿತವಾಗುತ್ತಿವೆ. ಕೊಟ್ಟವನು ಕೋಡಂಗಿ ಇಸಕೊಂಡವನು ಈರಭದ್ರ ಅನ್ನೋ ಈ ಕಾಲದಲ್ಲಿ ಧನಸಹಾಯ ಮಾಡಿದರೂ ಅದು ಅಪಾತ್ರರಿಗೇ ಹೆಚ್ಚಾಗಿ ದಾನವಾಗಿ ಹೋಗುತ್ತಿದೆ. ಹೀಗಿರುವಾಗ ನಿಜವಾಗಿಯೂ ಅವಶ್ಯಕತೆ ಇದ್ದವರಿಗೂ ಸಹಾಯ ಮಾಡಲು ಮನಸು ಹಿಂದೇಟು ಹಾಕಿ ಬಿಡುತ್ತದೆ ಒಮ್ಮೊಮ್ಮೆ.

    ಆದರೆ ಪ್ರಸ್ತುತ ಪ್ರಸಂಗದಲ್ಲಿ ಲೇಖಕಿ ಅವರ ಕಷ್ಟವನ್ನು ಕಣ್ಣಾರೆ ಕಂಡವರು.. ಅವರ ನೋವಿನ ಅನುಭೂತಿಯನ್ನು ಹೊಂದಿದವರು. ಹೀಗಿರುವಾಗ ಶವವನ್ನು ಟ್ರಂಕ್ ಒಳಗೆ ಒಯ್ಯುವಾಗಲಾದರೂ ಕನಿಷ್ಟ ಊರಿಗೆ ಸಾಗಿಸುವಷ್ಟಾದರೂ ಹಣದ ವ್ಯವಸ್ಥೆಯನ್ನೋ ಇಲ್ಲಾ ಅಂಬ್ಯುಲೆನ್ಸ್ ವ್ಯವಸ್ಥೆಯನ್ನೋ ಮಾಡಬಹುದಿತ್ತೇನೋ... ಸ್ವತಃ ಅಷ್ಟೊಂದು ಭರಿಸಲಾಗದಿದ್ದರೂ ಸಹೋದ್ಯೋಗಿಗಳನ್ನು ಸೇರಿಸಿಕೊಂಡಾದರೂ ಅಲ್ಪ ಸಹಾಯ ಮಾಡಬಹುದಿತ್ತೇನೋ ಎಂದು ಒಂದು ಕ್ಷಣ ನನಗನಿಸಿತು.

    ReplyDelete
  7. ವೃತ್ತಿನಿರತ ಪತ್ರ ಕರ್ತ ಈ ಬಗೆಯ (ಪ್ರ. ಮೂಲ ಲೇಖನ ) ಲೇಖನ ಬರಯಲು ಸಾಧ್ಯವೇ? ಯಾಕೆ ಅವರಿಂದ ಈ ಬಗೆಯ ಗ್ರಹಿಕೆ, ಸಂವೇದನಶೀಲತೆ ಸಾಧ್ಯವಾಗುವುದಿಲ್ಲ? ಇವುಗಳು ಅವರ ಗ್ರಹಿಕೆ ಗೆ, ಗಮನಕ್ಕೆ ಬರುವುದೇ ಇಲ್ಲವೇ? ಇಲ್ಲ ಎಂದು ಖಡಾ ಖಂಡಿತ ವಾಗಿ ಹೇಳಬಹುದು. ಆಸ್ಪತ್ರೆ, ಖಾಯಿಲೆ, ಸಾವು , ಸಾಮಾನ್ಯ ಜನರ ಬದುಕು,ಇವೆಲ್ಲ ಇಂದಿನ ಪತ್ರ ಕರ್ತ ರ ಗ್ರಹಿಕೆ ಯನ್ನು ಮೀರಿದ ಅಂಗಳಗಳು. curfew ಟೈಮ್ ನಲ್ಲಿ ಆಸ್ಪತ್ರೆ , ಒಳರೋಗಿಗಳ ಸ್ಥಿತಿ , ಅವರನ್ನು ನೋಡಿಕೊಳ್ಳುವವರ ಸ್ಥಿತಿ, ಅವರ ಪರದಾಟ, ಇವುಗಳನ್ನೆಲ್ಲ ಎಂದಾದರು , ನಮ್ಮ ವೃತ್ತಿ ನಿರತ ಪತ್ರಕರ್ತ ರು, ಎಲೆಕ್ಟ್ರೋನಿಕ್ ಮಾಧ್ಯಮದವರು high light ಮಾಡಿದ್ದಾರ? ಅಥವಾ ಸಾಮಾನ್ಯ ವಾಗಿ curfew ಟೈಮ್ ನಲ್ಲಿ, ಆಸ್ಪತ್ರೆ ಗಳು ಹೇಗೆ ನಡೆಯುತ್ತವೆ, ಎಂಥಹ ಪರಿಸ್ಥಿತಿ ಇರುತ್ತದೆ, doctors ಸಿಗುತ್ತಾರ? ಅವಶ್ಯಕ ವಸ್ತು ಗಳು , ಹೋಟೆಲ್ ಗಳಿಂದ ಹಿಡಿದು, ರಕ್ತ , ರಕ್ತ ದಾನಿ ಗಳಿಗಾಗಿ ಎಲ್ಲಕ್ಕೂ ಪರದಾಟ ಪಡುವ ಆ ಪರಿಸರದ ಬಗ್ಗೆ ಎಲ್ಲಾದರೂ ಪ್ರಸ್ತಾಪ ಮಾಡುತ್ತಾರ ನಮ್ಮ ಈ ಟಿವಿ channels ಮಾಧ್ಯಮದವರು? ಇವರು ತೋರಿಸುವುದು ಸಾಮಾನ್ಯವಾಗಿ ಹೀಗೆ ಇರುತ್ತದೆ. "ಬಿಕೋ ಎನ್ನುವ ರಸ್ತೆಗಳು, Tyre ಗೆ ಬೆಂಕಿ ಹಚ್ಚಿದ ಪ್ರತಿಭಟನ ಕಾರರು, ಬಸ್ ಸ್ಟ್ಯಾಂಡ್ ಗಳಲ್ಲಿ ಪರದಾಡುವ ಪ್ರಯಾಣಿಕರು". ಅಷ್ಟೇ.
    ಗಮ್ಯ ವನ್ನರಸಿ ಹೊರಟವರ ಪಾಡು ಹೀಗೆ ಏನೋ. ನಡುವಿನ ಪ್ರಯಾಣದಲ್ಲಿ ಸಿಗುವ , ನಡೆಯುವ ಸೂಕ್ಷ್ಮ , ಸಂಗತಿಗಳನ್ನು ಗ್ರಹಿಸದೆ ಕಿವುಡಾಗಿ , ಕುರುಡಾಗಿ ಸಂವೇದನಾ ಹೀನ ರಾಗಿ ಗಮ್ಯ ದತ್ತ ಚಲಿಸುತ್ತಾರೆ. ನಮ್ಮ ಇಂದಿನ ಪತ್ರಕರ್ತ ರಲ್ಲಿ ಸಂವೇದನಾಶೀಲತೆಯ ಕೊರತೆ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ನಡೆಯುವ ಎಸ್ಟೋ ಸೆಮಿನಾರ್ ಗಳಿಗೆ ಕೂಡ, ಪತ್ರಕರ್ತ ರ ಈ ವಿಶಿಷ್ಟ ಜಡತ್ವ ವನ್ನು ಅಳಿಸಲು ಸಾಧ್ಯವಾಗಿಲ್ಲ.
    - ವರ್ಷಾ ಭಟ್ಟ್

    ReplyDelete
  8. ಹೌದು. ಅದೊಂದು ಉತ್ತಮ ಲೇಖನ.

    ReplyDelete
  9. ಕಥೆಯಾಗಿದ್ದರೆ ಅತ್ತು ಹಗುರಾಗಬಹುದಿತ್ತು, ಬಡವರಿಗೆ ಬದುಕು ತುಟ್ಟಿ, ಸಾವು ತುಟ್ಟಿಯಲ್ಲ ಅನ್ನೋದನ್ನ ಲೇಖಕರು ನಿರೂಪಿಸಬಹುದಿತ್ತು ಹಾಗಾಗಿಲ್ಲ, ಎಲ್ಲವನ್ನೂ ಇಂಚಿಂಚು ದಾಖಲಿಸುವ ಲೇಖಕರಿಗೆ ಹನುಮಂತಪ್ಪನನ್ನು ಅವನೂರಿಗೆ ಕಳುಹಿಸಲು ಒಂದು ವಾಹನದ ವ್ಯವಸ್ಥೆ ಮಾಡಲು ಲೇಖಕರಿಗೂ ಅವರ ಸಹೋದ್ಯೋಗಿಗಳಿಗೂ ಕಷ್ಟವೆನಿರಲಿಲ್ಲ, ಮುನಿಯಪ್ಪ - ಹನುಮಂತಪ್ಪನಿಗೆ ಕೊನೆಯದಾಗಿ ಕೊಡಬಹುದಾದ ಒಂದು ಸಣ್ಣ ಕಂಪರ್ಟ್ ಕೊಡಲಾಗಲಿಲ್ಲ ನಮ್ಮ ವಾಣಿ ವಿಲಾಸ ಅಷ್ಪತ್ರೆಯ ಸಿಬ್ಬಂದಿಗೆ.

    ReplyDelete