Monday, May 23, 2011

ಜಗತ್ತು ಜೀವಂತವಾಗಿದೆ, ಪ್ರಳಯ ಸಿದ್ಧಾಂತಿಗಳು ಬೆತ್ತಲಾಗಿದ್ದಾರೆ


ಅನಾಹುತಕಾರಿ ಪ್ರಳಯ ಸಿದ್ಧಾಂತಿಗಳು ಮತ್ತೆ ಬೆತ್ತಲಾಗಿದ್ದಾರೆ. ಮೇ.೨೧ಕ್ಕೆ ಜಗತ್ತು ಸರ್ವನಾಶವಾಗಲಿದೆ, ಹಾಗಂತ ಬೈಬಲ್‌ನಲ್ಲಿ ಬರೆಯಲಾಗಿದೆ ಎಂದು ದೊಡ್ಡಮಟ್ಟದಲ್ಲಿ ಪ್ರಚಾರ ನಡೆಸಿದ್ದವರಿಗೆ ಈಗ ಮುಖವಿಲ್ಲ. ಇಂಥವರನ್ನು ನಂಬುವ ಅಮಾಯಕ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ ಮುಂದೆಯಾದರೂ ಇಂಥವರ ಮಾತನ್ನು ನಂಬುವುದನ್ನು ಈ ಜನರು ಬಿಡುತ್ತಾರಾ? ಖಂಡಿತಾ ಇಲ್ಲ.


ಕ್ಯಾಲಿಫೋರ್ನಿಯಾದ ಫ್ಯಾಮಿಲಿ ರೇಡಿಯೋ ನೆಟ್‌ವರ್ಕ್ ಮೂಲಕ ೮೯ ವರ್ಷದ ನಿವೃತ್ತ ಸಿವಿಲ್ ಇಂಜಿನಿಯರ್ ಕ್ಯಾಂಪಿಂಗ್ ಈ ಪ್ರಳಯದ ವಾದವನ್ನು ಮಂಡಿಸಿದ್ದ.  ಈ ರೇಡಿಯೋ ನೆಟ್‌ವರ್ಕ್ ಅಮೆರಿಕದಾದ್ಯಂತ ಸುಮಾರು ೧೫೦ ರೇಡಿಯೋ ಸ್ಟೇಷನ್‌ಗಳನ್ನು ಹೊಂದಿದೆಯಲ್ಲದೆ, ಯೂರೋಪ್‌ನ ಹಲವು ದೇಶಗಳಲ್ಲೂ ತನ್ನ ಜಾಲವನ್ನು ಹೊಂದಿತ್ತು.


ಮೇ.೨೧ರ ಸಂಜೆ ೬ ಗಂಟೆಗೆ ಜಗತ್ತು ಅಂತ್ಯಗೊಳ್ಳಲಿದೆ ಎಂದು ಈ ರೇಡಿಯೋ ಒಂದು ವರ್ಷದಿಂದ ಪ್ರಚಾರ ನಡೆಸಿತ್ತು. ಇದನ್ನು ನಂಬಿಕೊಂಡೇ ೨೦೧೨ಕ್ಕೆ ಜಗತ್ತು ಕೊನೆಗೊಳ್ಳಲಿದೆ ಎನ್ನುತ್ತಿದ್ದವರು ನಂತರ ಈ ವರ್ಷವೇ ಮೇ.೨೧ಕ್ಕೆ ಎಲ್ಲ ಮುಗಿಯುತ್ತದೆ ಎಂದು ಹೇಳಲಾರಂಭಿಸಿದ್ದರು. ವಿಚಿತ್ರವೆಂದರೆ ಇದನ್ನು ಕೋಟ್ಯಂತರ ಜನರು ಪ್ರಳಯ ಆಗೇ ತೀರುತ್ತದೆ ಎಂದುಕೊಂಡಿದ್ದರು.


ಕ್ಯಾಂಪಿಂಗ್ ಇದೇ ರೀತಿ ೧೯೯೪ರಲ್ಲಿ ಜಗತ್ತು ಕೊನೆಗೊಳ್ಳುತ್ತದೆ ಎಂದು ಹೇಳಿದ್ದ. ಆಗಲೂ ಸಹ ಬೈಬಲ್‌ನಲ್ಲಿ ಹಾಗೆ ಬರೆಯಲಾಗಿದೆ ಎಂದು ಸಮರ್ಥಿಸಿಕೊಂಡಿದ್ದ. ೧೯೯೪ರಲ್ಲಿ ಏನೂ ಆಗದೇ ಹೋದಾಗ, ನನ್ನ ಲೆಕ್ಕಾಚಾರದಲ್ಲಿ ತಪ್ಪಾಗಿದೆ. ಪ್ರಳಯ ಆಗೋದು ೨೦೧೧ರ ಮೇ.೨೧ರಂದು ಎಂದು ಪ್ರಳಯದ ದಿನಾಂಕವನ್ನು ಮುಂದಕ್ಕೆ ಹಾಕಿದ್ದ.


ಈಗ ಫ್ಯಾಮಿಲಿ ರೇಡಿಯೋ ಹೇಳಿದ್ದೆಲ್ಲ ಠುಸ್ ಆಗಿದೆ. ಆದರೆ ತಮಾಶೆಯೆಂದರೆ ಡೊನೇಷನ್ ಗಳ ಮೂಲಕ ಸಂಗ್ರಹಿಸಿದ ಹಣದಿಂದ ರೇಡಿಯೋ ಆಸ್ತಿಪಾಸ್ತಿ ಮಾತ್ರ ಗಗನಕ್ಕೇರಿದೆ. ಅದರ ಆಸ್ತಿ ಮೌಲ್ಯ ಈಗ ೧೦೪ ಮಿಲಿಯನ್ ಅಮೆರಿಕನ್ ಡಾಲರ್‌ಗೂ ಹೆಚ್ಚು.


ಈ ಪ್ರಳಯದ ಸಿದ್ಧಾಂತವನ್ನು ಹಿಡಿದು ಎಳೆದಾಡಿದ್ದು ನಮ್ಮ ಸುವರ್ಣ ನ್ಯೂಸ್ ಚಾನಲ್. ಕಳೆದ ಮೂರು ತಿಂಗಳಿನಿಂದಲೂ ಸುವರ್ಣ ನ್ಯೂಸ್‌ನಲ್ಲಿ ಈ ಸಂಬಂಧ ವಿಶೇಷ ಕಾರ್ಯಕ್ರಮಗಳು ನಡೆದವು. ಈತ ೯೪ರಲ್ಲಿ ಹೇಳಿದ್ದೆಲ್ಲ ಸುಳ್ಳಾಗಿದೆ ಎಂದು ಹೇಳುತ್ತಲೇ ಸುವರ್ಣದವರು ಪ್ರಳಯದ ಹೊಸ ಥಿಯರಿಯಿಂದ ಲಾಭ ಮಾಡಿಕೊಳ್ಳಲು ಯತ್ನಿಸಿದ್ದು ನಿಜ.


ಇದಕ್ಕಿಂತ ಮಹತ್ವದ ಮತ್ತೊಂದು ವಿಷಯವೆಂದರೆ ಜೀ ಟಿವಿಯ ಬ್ರಹ್ಮಾಂಡ ಪ್ರಭು ನರೇಂದ್ರ ಸ್ವಾಮಿ ತನ್ನ ಪ್ರಳಯದ ಸಿದ್ಧಾಂತವನ್ನು ಕಡ ತಂದಿದ್ದೂ ಸಹ ಇದೇ ಕ್ರಿಶ್ಚಿಯನ್ ಗುಂಪುಗಳ ಪ್ರಚಾರದಿಂದ. ಈತನೂ ಸಹ ಮೇ. ೪ನೇ ತಾರೀಖು ಜಗನ್ಮಾತೆ ಭೂಮಿಗೆ ಬರುತ್ತಾಳೆ, ಆಮೇಲೆ ನೋಡ್ತಾ ಇರಿ, ಆಗಬಾರದ್ದೆಲ್ಲ ಆಗುತ್ತದೆ ಎಂದು ವಟಗುಡುತ್ತಿದ್ದ. ಯಾವಾಗ ನಾವೆಲ್ಲರೂ ಒಂದೇ ಸಮನೆ ಈತನ ಕುಚೇಷ್ಟೆಗಳ ವಿರುದ್ಧ ತಿರುಗಿಬಿದ್ದವೋ ಇದ್ದಕ್ಕಿದ್ದಂತೆ ಜಗನ್ಮಾತೆಯ ಹೆಸರನ್ನು ಹೇಳುವುದನ್ನೇ ಬಿಟ್ಟ. ಪ್ರಳಯದ ಮಾತೂ ಸಹ ನಿಲ್ಲಿಸಿಬಿಟ್ಟ.


ಈಗ ಕ್ಯಾಂಪಿಂಗ್ ಮತ್ತು ಅವನ ಸಹಚರರು ಹೇಳಿದ್ದು ಸುಳ್ಳಾಗಿದೆ. ಕೋಟ್ಯಂತರ ಜನರನ್ನು ಭಯದಲ್ಲಿ ಮುಳುಗಿಸಿದ ಈ ಜನರನ್ನು ಜೀವನಪೂರ್ತಿ ಜೈಲಿನಲ್ಲಿ ಇಡಬೇಕಾಗಿದ್ದು ಅಮೆರಿಕದ ಕೆಲಸ. ಯಾವ ದೇಶದಲ್ಲೇ ಆಗಲಿ, ಇಂಥ ಬುರುಡೆ ಜ್ಯೋತಿಷಿಗಳು, ಜನರನ್ನು ದಿಕ್ಕುತಪ್ಪಿಸುವವರು ಹೀಗೆ ಸಿಕ್ಕಿಬಿದ್ದಾಗಲೆಲ್ಲ ಅವರನ್ನು ಜೈಲಿಗೆ ತಳ್ಳುವ ಕೆಲಸ ಆಗಬೇಕು. ಹಾಗಾದರೆ ಇಂಥವರ ಉಪಟಳ ಸ್ವಲ್ಪ ಮಟ್ಟಿಗೆ ತಗ್ಗಬಹುದೇನೋ?

5 comments:

 1. ಜನರನ್ನು ದಿಕ್ಕುತಪ್ಪಿಸುವವರು ಹೀಗೆ ಸಿಕ್ಕಿಬಿದ್ದಾಗಲೆಲ್ಲ ಅವರನ್ನು ಜೈಲಿಗೆ ತಳ್ಳುವ ಕೆಲಸಕ್ಕಿಂತ ಅಂತಹವರನ್ನು ಗುಂಡಿಕ್ಕಿ ಕೊಲ್ಲುವಂತಾದರೆ ಇನ್ನೂ ಚೆಂದ ಅಲ್ಲವೇ..?

  ReplyDelete
 2. ಜ್ಯೋತಿಷಿಗಳ ಛದ್ಮವೇಷ ಧರಿಸಿ ಬೆಳ್ ಬೆಳಿಗ್ಗೆಯೇ ಮಕ್ಕಳನ್ನು ಹೆದರಿಸಲು ಬರುವ ಈ ಮಾಂಸಪರ್ವತಗಳು ಪ್ರಳಯ ಆಗುತ್ತೆ ಅಂತ ಗೊತ್ತಿದ್ದರೂ (ಭ್ರಮಿಸಿದ್ದರೂ)ಟಿವಿ ಚಾನಲ್ ಗಳಿಂದ ಎಪಿಸೋಡ್ ಗೆ ಇಷ್ಟು ಅಂತ ಕಾಸು ಗುಂಜಿಕೊಂಡು ಹೋಗುತ್ತಾರಲ್ಲ.. ಒಂದುವೇಳೆ ಈ ಮಕ್ಕಳುಕಳ್ಳರ ಪ್ರಕಾರ ಪ್ರಳಯವೇ ಆಗುವುದಾದರೆ ನಾಶವಾಗಿ ಹೋಗೋ ಸಂಪತ್ತಿಗೆ ಕಾಸು ಏಕೆ ಕೂಡಿಡುತ್ತಿದ್ದಾರೆ ಈ ಖದೀಮರು. ನಮ್ಮ ಮನೆಯ ಮಕ್ಕಳು ಈ ಕಳ್ಳಬಡ್ಡೀಮಕ್ಕಳ ಕಾಸ್ಟ್ಯೂಮ್ ಅವತಾರ ನೋಡಿಯೇ " ಅಮ್ಮಾ ಟೀವೀಲಿ ಗುಮ್ಮ ಬಂತು" ಅಂತ ಕಿಟಾರ್ ಅಂತ ಕಿರುಚಿಕೊಂಡು ಓಡಿ ಹೋಗುತ್ತವೆ. ಟಿ.ಕೆ. ದಯಾನಂದ

  ReplyDelete
 3. ಸತ್ಯದ ಮಾತು.. ಇಂಥವರ ಮಾತು ಎಂದಿಗೂ ನಂಬಬಾರದು!

  ReplyDelete
 4. ಎಲ್ಲಿಲ್ಲಿಯೂ ಇವರದೇ ಹಾವಳಿ. ಬೆಳಗ್ಗೆ ಎದ್ದು ಯಾವ ಕನ್ನಡ ಚಾನಲ್‌ ತಿರುಗಿಸಿದರೂ ಇದೇ ಪೆಡಂಭೂತಗಳು. ಬೆಳ್ಳಂಬೆಳಗ್ಗೆ ಈ ದರಿದ್ರ ಮುಖಗಳನ್ನು ನೋಡುವ ಕರ್ಮ ನಮ್ಮ ಕನ್ನಡಿಗರದು. ಇನ್ನಾದರೂ ಚಾನಲ್‌ಗಳು ಈ ಕಳೆಗಳನ್ನು ತಮ್ಮ ಸ್ಟುಡಿಯೋದಿಂದ ಹೊರಗಟ್ಟಲಿ. ಅರುಣ್‌ ಕಾಸರಗುಪ್ಪೆ

  ReplyDelete
 5. To be frank even Bibbie, has not given exact time, when the World is coming to an end. It says to one and all that to be ready to reach out heaven so I think the people who say such think that today is last day, or tomorrow is last day thy should be punished for there poor understanding of some Holy people,and holy books.

  ReplyDelete