Saturday, May 14, 2011

ನಾಳೆ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಚುನಾವಣೆ...


ಪತ್ರಕರ್ತರಿಗೆ ಇದು ಚುನಾವಣೆ ಕಾಲ. ಬೆಂಗಳೂರು ಪ್ರೆಸ್ ಕ್ಲಬ್ ಚುನಾವಣೆ ಮುಗಿದ ಬೆನ್ನಲ್ಲೇ ಈಗ ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆ ನಡೆಯುತ್ತಿದೆ. ನಾಳೆಯೇ ಚುನಾವಣೆ. ರಾಜ್ಯ ಹಾಗು ಜಿಲ್ಲಾ ಘಟಕಗಳಿಗೆ ಪದಾಧಿಕಾರಿಗಳ ಆಯ್ಕೆಗೆ ನಾಳೆ ಮತದಾನ ನಡೆಯಲಿದೆ. ಈ ಚುನಾವಣೆಗಳು ಮುಗಿದ ತರುವಾಯ ತಾಲ್ಲೂಕು ಘಟಕಗಳ ಪದಾಧಿಕಾರಿಗಳ ಆಯ್ಕೆಗೆ ಚುನಾವಣೆಗಳು ನಡೆಯುತ್ತವೆ.

ಕಾರ್ಯನಿರತ ಪತ್ರಕರ್ತರ ಸಂಘವೇ ಪತ್ರಕರ್ತರ ಪಾಲಿಗೆ ದೊಡ್ಡ ಸಂಘಟನೆ. ರಾಜ್ಯದ ಎಲ್ಲೆಡೆಯೂ ಇದು ಹರಡಿಕೊಂಡಿದೆ. ಹಲವು ಜಿಲ್ಲಾ ಘಟಕಗಳು ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ. ಆದರೆ ರಾಜ್ಯ ಘಟಕದಲ್ಲಿ ಮಾತ್ರ ಎಲ್ಲವೂ ಸರಿಯಿಲ್ಲ. ಗುಂಪುಗಾರಿಕೆ, ಜಾತೀಯತೆ, ಸ್ವಪ್ರತಿಷ್ಠೆ ಇತ್ಯಾದಿಗಳಿಗೆ ಸಿಕ್ಕು ಸಂಘಟನೆ ನಲುಗಿ ಹೋಗಿದೆ. ಸಂಘದ ಅಮೂಲ್ಯ ಆಸ್ತಿಯನ್ನು ಉಳಿಸಿಕೊಳ್ಳಲೂ ಸಹ ಸಾಧ್ಯವಾಗಲಿಲ್ಲ. ಈಗ ಬಾಡಿಗೆ ಕಟ್ಟಡದಲ್ಲಿ ಇರುವ ದುಸ್ಥಿತಿಗೆ ತಲುಪುವಂತಾಗಿದ್ದಕ್ಕೆ ಕಾರಣಗಳನ್ನು ಹುಡುಕಿಕೊಳ್ಳುವ ಗೋಜಿಗೆ ಯಾರೂ ಹೋದಂತಿಲ್ಲ. ಕೇಸು, ಕಟ್ಲೆ, ತಡೆಯಾಜ್ಞೆ ಇತ್ಯಾದಿಗಳಲ್ಲಿ ಮುಳುಗಿ ಹೋದ ಸಂಘ ಉದ್ಧಾರವಾಗುವುದಾದರೂ ಹೇಗೆ?

ಕಾರ್ಯ ನಿರತ ಪತ್ರಕರ್ತರ ಸಂಘವನ್ನು ಕಾರ್ಯಮರೆತ ಪತ್ರಕರ್ತರ ಸಂಘ ಎಂದು ಕೆಲವರು ಛೇಡಿಸುವುದುಂಟು. ಹಿಂದೆ ಗೊತ್ತುಗುರಿಯಿಲ್ಲದಂತೆ ಪತ್ರಕರ್ತರಲ್ಲದವರಿಗೆ ಸದಸ್ಯತ್ವ ಕೊಟ್ಟಿದ್ದರ ಪರಿಣಾಮ ಇದು. ಸಾಕಷ್ಟು ಮಂದಿ ಚುನಾವಣೆಗಳಲ್ಲಿ ಗೆಲ್ಲುವ ಸಲುವಾಗಿ ಮನೆಯವರು, ನೆಂಟರು ಇತ್ಯಾದಿಗಳನ್ನೆಲ್ಲ ಸದಸ್ಯರನ್ನಾಗಿಸಿದ್ದರು. ನಂತರ ಪತ್ರಕರ್ತರಲ್ಲದವರನ್ನು ಕಿತ್ತುಹಾಕಲು ಒಂದು ಹರಸಾಹಸವನ್ನೂ ಮಾಡಲಾಯಿತು. ಆದರೂ ಯೂನಿಯನ್ ಇನ್ನೂ ಒಂದು ಹದಕ್ಕೆ ಬಂದ ಹಾಗಿಲ್ಲ.

ಯೂನಿಯನ್ ನಿಜವಾಗಲೂ ಮಾಡಬೇಕಾಗಿರುವ ಕೆಲಸ ಏನು ಎಂಬುದೇ ಪದಾಧಿಕಾರಿಗಳಿಗೆ ಗೊತ್ತಿದ್ದಂತಿಲ್ಲ. ಅದರ ಕುರಿತು ಕಾಳಜಿಯೂ ಯಾರಲ್ಲೂ ಇದ್ದ ಹಾಗಿಲ್ಲ. ಒಂದು ಉದಾಹರಣೆ: ಸರ್ಕಾರದ ವಾರ್ತಾ ಇಲಾಖೆ ಪತ್ರಕರ್ತರಿಗೆ ನೀಡುವ ಮಾನ್ಯತಾ ಪತ್ರ ಎಷ್ಟು ಜನ ನಿಜವಾದ ಪತ್ರಕರ್ತರಿಗೆ ಸಿಕ್ಕಿದೆ? ಇತ್ತೀಚಿಗೆ ಈ ಮಾನ್ಯತಾ ಪತ್ರ ಪಡೆಯಲು ಸರ್ಕಾರ ಹೊರಡಿಸಿರುವ ಆದೇಶದಲ್ಲಿರುವ ನಿಯಮಾವಳಿಗಳನ್ನು ಗಮನಿಸಿದರೆ ಹೊಸದಾಗಿ ಮಾನ್ಯತಾ ಪತ್ರವನ್ನು ಪಡೆಯುವುದು ದುಸ್ಸಾಧ್ಯವೆಂಬುದು ಗೊತ್ತಾಗುತ್ತದೆ. ಈ ಕುರಿತು ಯೂನಿಯನ್ ಧ್ವನಿ ಎತ್ತಿದೆಯೇ?

ಈಗೀಗ ಪತ್ರಿಕಾ ಸಂಸ್ಥೆಗಳು ಪತ್ರಕರ್ತರನ್ನು ಗುತ್ತಿಗೆ ಮೇಲೆ ನೇಮಕ ಮಾಡಿಕೊಳ್ಳುತ್ತಿವೆ. ಒಂದು ವರ್ಷದ ಅವಧಿಗೆ ಮಾತ್ರ ಈ ಗುತ್ತಿಗೆ, ನಂತರ ನವೀಕರಣಗೊಂಡರೆ ಇನ್ನೊಂದು ವರ್ಷ. ಬಾಡಿಗೆ ಮನೆಗಳ ಕರಾರು ಪತ್ರದಂತೆ ಪತ್ರಕರ್ತರ ನೇಮಕಾತಿಯ ಕರಾರು ಇರುತ್ತದೆ. ಬಾಂಡೆಡ್ ಲೇಬರ್‌ಗಳಂತೆ ಪತ್ರಿಕಾ ಸಂಸ್ಥೆಗಳನ್ನು ಪತ್ರಕರ್ತರನ್ನು ಬಳಸಿಕೊಳ್ಳುತ್ತಿವೆ. ಈ ಕುರಿತು ಯೂನಿಯನ್ ಧ್ವನಿಯೆತ್ತಬಹುದಿತ್ತಲ್ಲವೇ?

ಇತ್ತೀಚಿಗೆ ವಿಧಾನಸೌಧ ಪ್ರವೇಶಕ್ಕೆ ಕಟ್ಟುನಿಟ್ಟಿನ ನಿಯಮಾವಳಿ ತಂದಾಗ ಸಂಘಟನೆ ಪ್ರತಿಭಟಿಸಿ, ಸಂಘದ ಗುರುತಿನ ಚೀಟಿ ಇದ್ದವರಿಗೂ ಪ್ರವೇಶ ನೀಡುವ ಕುರಿತು ಆದೇಶ ಹೊರಡಿಸುವಲ್ಲಿ ಯಶಸ್ವಿಯಾಯಿತು. ಇಂಥದಕ್ಕೆ ತೋರುವ ಉತ್ಸಾಹವನ್ನು ಇತರ ಚಟುವಟಿಕೆಗಳಿಗೂ ಯಾಕೆ ಕೊಡುವುದಿಲ್ಲ ಎಂಬುದು ಹಲವರ ಪ್ರಶ್ನೆ. ಪತ್ರಕರ್ತರ ಮೇಲೆ ದಾಳಿಯಾದಾಗ ಒಂದು ಪತ್ರಿಕಾ ಹೇಳಿಕೆ ಕೊಡುವುದು ಮಾತ್ರ ಯೂನಿಯನ್ ಕೆಲಸವೇ?

ಇಂಥ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ನಾಳೆ ಚುನಾವಣೆ. ವಿಶೇಷವೆಂದರೆ ಮೇನ್ ಸ್ಟ್ರೀಮ್ ಎಂದು ಕರೆಯಲ್ಪಡುವ ಪ್ರಮುಖ ದಿನಪತ್ರಿಕೆಗಳ ಪತ್ರಕರ್ತರು ಈ ಕುರಿತು ತಲೆಯೇ ಕೆಡಿಸಿಕೊಂಡಿಲ್ಲ. ಅವರುಗಳಲ್ಲಿ ಬಹುತೇಕರು ಚುನಾವಣೆಯಲ್ಲಿ ಮತ ಚಲಾಯಿಸುವುದೂ ಅನುಮಾನ.

ಪತ್ರಕರ್ತರ ಸಂಘಟನೆಗಳ ಚುನಾವಣೆಗಳಲ್ಲೂ ಜಾತಿ-ಹಣದ ಬಳಕೆ ಹೇರಳವಾಗಿದೆ. ಮೊನ್ನೆ ನಡೆದ ಪ್ರೆಸ್ ಕ್ಲಬ್ ಚುನಾವಣೆಯಲ್ಲಿ ಜಾತಿಯ ವಿಕೃತ ಸ್ವರೂಪವನ್ನು ಕಂಡವರು ಹೇಸಿಗೆ ಪಟ್ಟುಕೊಂಡಿದ್ದಾಗಿದೆ. ಪ್ರೆಸ್ ಕ್ಲಬ್ ಚುನಾವಣೆಗೂ ಮುನ್ನ ನಡೆದ ಜಾತಿಕೂಟಗಳ ಸಭೆಗಳು, ಅದಕ್ಕೆ ಸ್ಪಾನ್ಸರ್ ಮಾಡಿದ ಆಯಾ ಜಾತಿಯ ರಾಜಕಾರಣಿಗಳು ಮತ್ತವರ ಛೇಲಾಗಳು ಮುಂಬರುವ ದಿನಗಳಲ್ಲಿ ಇನ್ನೇನನ್ನು ಮಾಡುತ್ತಾರೋ ಎಂಬ ಆತಂಕ ಮೂಡಿಸಿದ್ದಾರೆ.

ಕಾರ್ಯನಿರತ ಪತ್ರಕರ್ತರ ಸಂಘದ ಚುನಾವಣೆಯಲ್ಲಿ ಸಭ್ಯರು ಆಯ್ಕೆಯಾಗಲಿ. ಪತ್ರಕರ್ತರ ನಿಜವಾದ ಸಮಸ್ಯೆಗಳನ್ನು ಬಿಡಿಸುವ ಪ್ರಾಮಾಣಿಕ ಪ್ರಯತ್ನಗಳನ್ನು ನಡೆಸಲಿ ಎಂದು ಆಶಿಸೋಣ.

1 comment:

  1. @ ಸಂಪಾದಕೀಯ ಕಾರ್ಯ ನಿರತ ಪತ್ರಕರ್ತರ ಸಂಘದಲ್ಲಿ ಅಸಲಿಗಿಂತ ನಕಲಿಗಳದ್ದೇ ಹಾವಳಿ ಜಾಸ್ತಿ ಅದರಲ್ಲೂ ಪೀತ ಪತ್ರಕರ್ತರುಗಳೇ ವಿಜೃಂಭಿಸಿರುತ್ತಾರೆ. ಸೀರಿಯಸ್ ಆಗಿ ವೃತ್ತಿಯಲ್ಲಿ ತೊಡಗಿಕೊಂಡವರು ಇಂತಹದ್ದಕ್ಕೆಲ್ಲ ತಲೆ ಕೆಡಿಸಿಕೊಳ್ಳಲ್ಲ ಆದರೂ ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಸಮರ್ಥರನ್ನ ಆಯ್ಕೆ ಮಾಡಬೇಕಾಗಿದೆ. ನಿಮ್ಮ ಗಮನಕ್ಕೆ ಬಂದಿದೆಯೋ ಇಲ್ಲವೋ ಗೊತ್ತಿಲ್ಲ ಒಮ್ಮೆ ರಾಜ್ಯ ಸಂಘದ ನಡಾವಳಿಯನ್ನು ಓದಿಕೊಳ್ಳಿ ಇದರಲ್ಲಿ ಕಾರ್ಯಕಾರಿ ಸಮಿತಿಯಲ್ಲಿ ಸದಸ್ಯರಲ್ಲದವರು ಚುನಾವಣೆಯಲ್ಲಿ ಸ್ಪರ್ಧಿಸುವಂತಿಲ್ಲ ಎಂಬ ಹೊಸ ತಿದ್ದುಪಡಿಯನ್ನು ಕಾನೂನು ಬಾಹಿರವಾಗಿ ಮಾಡಿದ್ದಾರೆ. ಅಂದರೆ ರಾಜಕೀಯ,ವಸೂಲಿ ಬಾಜಿ ಮಾಡಿಕೊಂಡವರು ಮಾತ್ರವೇ ಚುನಾವಣೆಗಳಿಗೆ ಸ್ಪರ್ಧಿಸ ಬೇಕು ಇಷ್ಟರವರೆಗೂ ಅರ್ಹತೆಯಿದ್ದರೂ ಸುಮ್ಮನಿದ್ದವರಿಗೆ ಇನ್ನು ಮುಂದೆ ಅವಕಾಶವಿಲ್ಲ ಎಂದು ನಿರ್ಧರಿಸಿದಂತಿದೆ ಈ ನಿರ್ಣಯಕ್ಕೆ ಸಂಘ ಸಂಸ್ಥೆಗಳ ನಿಬಂಧಕರು ಪತ್ರಕರ್ತರ ಸಂಘವೆಂಬ ಕಾರಣಕ್ಕೋ ಏನೋ ಕಣ್ಣು ಮುಚ್ಚಿ ಠಸ್ಸೆ ಒತ್ತಿದ್ದಾರೆ.ಇದೊಂದು ಸಂವಿಧಾನ ವಿರೋಧಿ ನಡಾವಳಿಯಾಗಿದೆ ಒಮ್ಮೆ ಗಮನಿಸಬಹುದೇ???

    ReplyDelete