Tuesday, May 24, 2011

ಎರಡು ಘಟನೆಗಳು: ಉತ್ತರಿಸಲು ಸಾಧ್ಯವಾಗದ ಕೆಲವು ಪ್ರಶ್ನೆಗಳು...

ಮೇ.೧೯ರಂದು ನಡೆದ ಘಟನೆ: ಬೆಂಗಳೂರಿನ ವೆಸ್ಟ್ ಆಫ್ ಕಾರ್ಡ್ ರಸ್ತೆಯ ನ್ಯಾಷನಲ್ ಸ್ಕೂಲ್ ಜಂಕ್ಷನ್ ಬಳಿ ಟ್ರಾಫಿಕ್ ಸಿಗ್ನಲ್ ಉಲ್ಲಂಘಿಸಿದ ಮೈತ್ರೇಯಿ ಎಂಬ ಚಿತ್ರನಟಿಯ ಕಾರನ್ನು ಪೊಲೀಸ್ ಪೇದೆಯೊಬ್ಬರು ತಡೆಯುತ್ತಾರೆ. ಹಣವಿಲ್ಲ ಎಂಬ ಕಾರಣಕ್ಕೆ ತಕ್ಷಣ ದಂಡ ಕಟ್ಟಲು ಮೈತ್ರೇಯಿ ಮತ್ತು ಆಕೆಯ ಮೂವರು ಸಂಬಂಧಿಗಳು ನಿರಾಕರಿಸುತ್ತಾರೆ.

ಪೇದೆಗೂ ನಟಿಗೂ ಮಧ್ಯೆ ವಾಗ್ವಾದ ನಡೆಯುತ್ತದೆ. ನಟಿ ಮತ್ತು ಆಕೆಯ ಸಂಬಂಧಿಗಳನ್ನು ಪೊಲೀಸ್ ಠಾಣೆಗೆ ಕರೆದೊಯ್ಯಲಾಗುತ್ತದೆ. ನಂತರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ಜೈಲಿಗೂ ಕಳುಹಿಸಲಾಗುತ್ತದೆ. ಕರ್ತವ್ಯನಿರತ ಪೊಲೀಸ್ ಮೇಲೆ ಹಲ್ಲೆ ನಡೆಸಿದ ಆರೋಪ ನಟಿಯ ಮೇಲೆ.

ಮೇ.೨೦ರಂದು ನಡೆದ ಇನ್ನೊಂದು ಘಟನೆ: ಕರ್ನಾಟಕ ಸರ್ಕಾರದ ಗೃಹ ಸಚಿವ ಆರ್.ಅಶೋಕ್ ಅವರ ಪುತ್ರ ಅಜಯ್ ಎಂಬುವವರು ಸಂಜೆ ಏಳರ ಸುಮಾರಿಗೆ ಫ್ರೇಜರ್‌ಟೌನ್ ವ್ಯಾಪ್ತಿಯ ಹೇನ್ಸ್ ರಸ್ತೆ ಜಂಕ್ಷನ್ ಬಳಿ ಒಂದು ಅಪಘಾತ ಪ್ರಕರಣದಲ್ಲಿ ಪಾಲ್ಗೊಳ್ಳುತ್ತಾರೆ. ಅಜಯ್ ಅವರ ಕಾರು ಒಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ. ಬೈಕ್ ಸವಾರ ಕೆಳಗೆ ಬೀಳುತ್ತಾನೆ. ಅಜಯ್ ಮತ್ತು ಅವರ ನಾಲ್ವರು ಗೆಳೆಯರು ಕಾರಿನಿಂದಿಳಿದು ಬೈಕ್ ಸವಾರನನ್ನು ಥಳಿಸತೊಡಗುತ್ತಾರೆ.

ಸ್ಥಳಕ್ಕೆ ಬರುವ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಗೋಪಾಲಕೃಷ್ಣ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಗುಂಪುಗೂಡಿದ ಜನರು ಅಜಯ್ ಮತ್ತು ಅವರ ಗೆಳೆಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಾರೆ. ಗೋಪಾಲಕೃಷ್ಣ ಅವರು ಅಜಯ್ ಮತ್ತು ಸಹಚರರನ್ನು ಪೊಲೀಸ್ ಠಾಣೆಗೆ ಬರುವಂತೆ ಹೇಳುತ್ತಾರೆ.


ಈ ಸಂದರ್ಭದಲ್ಲಿ ಮತ್ತೆ ಜಟಾಪಟಿಯಾಗುತ್ತದೆ. ಡೆಕ್ಕನ್ ಹೆರಾಲ್ಡ್ ವರದಿ ಹೇಳುವ ಪ್ರಕಾರ, ಗೋಪಾಲಕೃಷ್ಣ ಅವರ ಎದೆಗೆ ಗುದ್ದಿ ಮೂಲೆಗೆ ತಳ್ಳಲಾಗುತ್ತದೆ. ಹೊಯ್ಸಳ ವಾಹನದ ಮೂಲಕ ಠಾಣೆಗೆ ಅಜಯ್ ಮತ್ತು ಇತರರನ್ನು ಕರೆದೊಯ್ಯಲಾಗುತ್ತದೆ. ಯಾವುದೇ ಪ್ರಕರಣ ದಾಖಲಿಸದೇ ಅವರುಗಳನ್ನು ಬಿಡುಗಡೆ ಮಾಡಲಾಗುತ್ತದೆ.

ಕಳೆದ ಎರಡು ಮೂರು ದಿನಗಳಿಂದ ಟಿವಿ ಚಾನಲ್‌ಗಳಲ್ಲಿ ಮೈತ್ರೇಯಿಯದ್ದೇ ಸುದ್ದಿ. ಆಕೆ ಅಳುತ್ತ ಟಿವಿ ಸ್ಟುಡಿಯೋಗಳಲ್ಲಿ ಕುಳಿತು ನಾನು ಪೇದೆಯನ್ನು ಥಳಿಸಿಯೇ ಇಲ್ಲ. ಗುಂಪಿನಲ್ಲಿದ್ದ ಯಾರೋ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಗುಂಪಿನಲ್ಲಿದ್ದವರು ನಮ್ಮೆಲ್ಲರ ಮೇಲೂ ಹೇಳಲು ಸಾಧ್ಯವಿಲ್ಲದಂತೆ ನಡೆದುಕೊಂಡಿದ್ದಾರೆ. ಯಾಕೆ ನಮ್ಮನ್ನು ಬಲಿಪಶು ಮಾಡಲಾಯಿತೋ ಗೊತ್ತಿಲ್ಲ ಎನ್ನುತ್ತಿದ್ದಾರೆ.

ಎರಡೂ ಘಟನೆಗಳ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮಕ್ಕೆ ಕೆಲವು ಪ್ರಶ್ನೆಗಳಿವೆ.

ಯಾವ ದೃಷ್ಟಿಯಿಂದ ನೋಡಿದರೂ ಫ್ರೇಜರ್ ಟೌನ್‌ನಲ್ಲಿ ನಡೆದ ಘಟನೆ ಹೆಚ್ಚು ಮಹತ್ವದ್ದು. ವೆಸ್ಟ್ ಆಫ್ ಕಾರ್ಡ್ ರಸ್ತೆಯಲ್ಲಿ ನಡೆದ ಘಟನೆ ಸಿಗ್ನಲ್ ಜಂಪ್‌ಗೆ ಸಂಬಂಧಿಸಿದರೆ, ಫ್ರೇಜರ್ ಟೌನ್ ಘಟನೆ ಅಪಘಾತಕ್ಕೆ ಸಂಬಂಧಿಸಿದ್ದು. ಮೊದಲ ಪ್ರಕರಣದ ಆರೋಪಿ ಸಿನಿಮಾ ನಟಿಯಾದರೆ, ಎರಡನೇ ಪ್ರಕರಣದ ಆರೋಪಿ ಈ ರಾಜ್ಯದ ಗೃಹ ಸಚಿವರ ಪುತ್ರ.

ಪ್ರಶ್ನೆಗಳು ಇವು:
ಫ್ರೇಜರ್ ಟೌನ್ ಪ್ರಕರಣದ ಕುರಿತು ಡೆಕ್ಕನ್ ಹೆರಾಲ್ಡ್‌ನಲ್ಲಿ ಘಟನೆಯ ಪೂರ್ತಿ ವಿವರವಿದೆ. ಪ್ರಜಾವಾಣಿಯಲ್ಲೂ ವರದಿ ಇದೆಯಾದರೂ ಯಾವ ಸಚಿವ, ಏನು ಎಂಬುದಿಲ್ಲ. ಮಿಕ್ಕಂತೆ ಯಾವ ಪತ್ರಿಕೆಗಳಲ್ಲೂ ಈ ಕುರಿತು ವಿಸ್ತ್ರತ ವರದಿ ಬಂದಹಾಗೆ ಕಾಣಲಿಲ್ಲ. ಯಾಕೆ, ಹೇಗೆ ಈ ವರದಿ ಇತರ ಪತ್ರಿಕೆಗಳಲ್ಲಿ ಮಿಸ್ ಆಯಿತು? ಅಥವಾ ಪ್ರಾಧಾನ್ಯತೆ ಕಳೆದುಕೊಂಡಿತು?

ಮೈತ್ರೇಯಿ ಪ್ರಕರಣವನ್ನು ಎಳೆದಾಡುತ್ತಿರುವ ಟಿವಿ ಚಾನಲ್‌ಗಳು ಅಜಯ್ ಪ್ರಕರಣವನ್ನೇಕೆ ಚರ್ಚೆಗೆ ಕೈಗೆತ್ತಿಕೊಳ್ಳುತ್ತಿಲ್ಲ? ಕನಿಷ್ಠ ಮೈತ್ರೇಯಿ ಪ್ರಕರಣದ ಜತೆಯೇ ಈ ಘಟನೆಯನ್ನು ಚರ್ಚಿಸದೇ ಹೋದದ್ದು ಏಕೆ?

ನಿಜ, ಫ್ರೇಜರ್ ಟೌನ್ ಘಟನೆ ಸಂಬಂಧ ಪ್ರಕರಣ ದಾಖಲಾಗಿಲ್ಲ. ಠಾಣೆಯಲ್ಲಿ ದಾಖಲಾಗದ ಪ್ರಕರಣಗಳು ಸುದ್ದಿಯಾಗುವುದೇ ಇಲ್ಲವೇ? ಸುದ್ದಿಯಾಗಲೇಬಾರದೆ? ಘಟನೆಯಲ್ಲಿ ಗೃಹ ಮಂತ್ರಿಯ ಪುತ್ರ ಇದ್ದಿದ್ದನ್ನು ಬೆಂಗಳೂರು ಪೊಲೀಸ್ ಆಯುಕ್ತರೇ ಖಚಿತಪಡಿಸಿದ್ದಾರೆ. ಇಷ್ಟಾದ ಮೇಲೂ ಇದು ಸುದ್ದಿಯಲ್ಲವೇ?

ಮಹಿಳೆಯರು ಪೊಲೀಸ್ ಪೇದೆಯ ಮೇಲೆ ಹಲ್ಲೆ ಮಾಡಿದರು ಎಂಬುದನ್ನು ಸುದ್ದಿ ಮಾಡಿದ ವರದಿಗಾರರಿಗೆ ಈ ಸುದ್ದಿ ಏಕೆ ಕಾಣಲಿಲ್ಲ. ಕೆಲ ಚಾನೆಲ್ ಗಳು ಈ ಸುದ್ದಿಯನ್ನು ತೀರಾ ಸಣ್ಣ ಸುದ್ದಿಯಂತೆ ಟ್ರೀಟ್ ಮಾಡಿವೆ. ಯಾಕೆ ಹೀಗೆ? ಸುಂದರ ಹುಡುಗಿಯರು ಇವರಿಗೆ ಈಜಿ ಟಾರ್ಗೆಟ್ ಆದರಾ?

15 comments:

  1. ಈ ಪ್ರಕರಣವನ್ನು ನೋಡುವಾಗ ಕರ್ನಾಟಕದಲ್ಲಿ ಹಿಟ್ಲರ್ ಮಾದರಿಯ ಸರ್ವಾಧಿಕಾರ ಇರುವಂತೆ ಕಾಣುತ್ತದೆ. ಹೀಗಾಗಿ ಈ ವಿಷಯವನ್ನು ವರದಿ ಮಾಡಲು ಮಾಧ್ಯಮಗಳು ಹಿಂದೇಟು ಹಾಕುತ್ತಿವೆ ಅಥವಾ ಈ ವರದಿಯನ್ನು ಮಾಡದಂತೆ ಮಾಧ್ಯಮಗಳಿಗೆ ಆಮಿಷ ಒಡ್ಡಿರಬಹುದು. ಪ್ರಜಾಪ್ರಭುತ್ವದ ಮೌಲ್ಯಗಳ ಬಗ್ಗೆ ದೊಡ್ಡ ಬೊಬ್ಬೆ ಹೊಡೆಯುತ್ತಿರುವ ಆಡಳಿತ ಪಕ್ಷದವರು ಕರ್ನಾಟಕವನ್ನು ಹಿಟ್ಲರ ಮಾದರಿಯೆಡೆಗೆ ಕೊಂಡೊಯ್ಯುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ.

    ReplyDelete
  2. ಕರ್ನಾಟಕದಲ್ಲಿ ಮಾಧ್ಯಮಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿದ್ದರೆ ಈ ಸುದ್ದಿ ಮಾಧ್ಯಮಗಳಲ್ಲಿ ಬಹಳ ದೊಡ್ಡ ಗದ್ದಲ ಎಬ್ಬಿಸಬೇಕಾಗಿತ್ತು ಏಕೆಂದರೆ ಇಲ್ಲಿ ನಡೆದಿರುವುದು ಅಧಿಕಾರದ ದುರುಪಯೋಗ. ಮಂತ್ರಿಯ ಮಗನಿಗೆ ಒಂದು ಕಾನೂನು, ಜನಸಾಮಾನ್ಯನಿಗೆ ಒಂದು ಕಾನೂನು ಎಂಬ ಘೋರ ಅನ್ಯಾಯ ಇಲ್ಲಿ ನಡೆದಿದೆ. ಆದರೂ ನಮ್ಮ ಮಾಧ್ಯಮಗಳು ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತಿವೆ ಎಂದರೆ ಮಾಧ್ಯಮಗಳು (ಕೆಲವನ್ನು ಹೊರತುಪಡಿಸಿ) ಕರ್ನಾಟಕದಲ್ಲಿ ಕೋಮಾ ಸ್ಥಿತಿಯಲ್ಲಿವೆಯೇನೋ ಎಂಬ ಸಂಶಯ ಬರುತ್ತದೆ.

    ReplyDelete
  3. ravansuraru sir ivaaru modern ravansuraru and karnataka sita adanu kidnap madidare .

    ReplyDelete
  4. You please publish "Governor’s Dog", a story written by Chekhov. One can understand the brutality of the State Power and the slavery of the Police officers.

    ReplyDelete
  5. ಅಯ್ಯೋ ಇದು ಪತ್ರ ಕರ್ತ ರ , ಮಾಧ್ಯಮ ದವರ ಹಳೇ ರೋಗ ರೀ. ನಿಮಗೆ ಗೊತ್ತಿರಲಿಲ್ವ? ಹೇಳ್ತೀನಿ ಕೇಳಿ. ಪತ್ರ ಕರ್ತ ರು ಏನು ಮಹಾ ಗ್ರೇಟ್ species ಅಲ್ಲ. actually ಅವರು ಏನು ಹೇಳುತ್ತಾರೋ ಅದೇ ಸುದ್ದಿ. ಅವರು ಮುಚ್ಚಿಟದ್ದು, ಪ್ರಧಾನ್ಯತೆ ಕೊಡದೆ ಇದ್ದದ್ದು ಸುದ್ದಿಯೇ ಅಲ್ಲ. ಸಾಮಾನ್ಯವಾಗಿ ಇದಕ್ಕೆ ಕಾರಣಗಳು ಹಲವು ಇರುತ್ತವೆ. ಹಣ , ಆಮಿಷ, ತಂತ್ರಗಾರಿಕೆ, ಅಧಿಕಾರದ ದುರುಪಯೋಗ ಎಲ್ಲವೂ ಇರುತ್ತವೆ. an intelligent criminal is more dangerous than an average or illiterate .

    ReplyDelete
  6. Too Bad. Only money & political power is ruling.

    ReplyDelete
  7. ಮೈತ್ರಿಯಂತವರ ಬಗ್ಗೆ ಗಂಟೆಗಟ್ಟಲೆ ಸುದ್ದಿಮಾಡುವ ಮಾಧ್ಯಮಗಳು... ಅಧಿಕಾರದ ಅಮಲಿನಲ್ಲಿ ಜನಸಾಮಾನ್ಯರ ಮೇಲೆ ದೌರ್ಜನ್ಯ ಮಾಡುವವರ ಬಗ್ಗೆ ವರದಿ ಮಾಡಲಿ.....ಅದು ಬಿಟ್ಟು ಸಣ್ಣ ಘಟನೆಗೆ ಸುಮ್ಮನೆ ಸುಣ್ಣ ಬಣ್ಣ ಕಟ್ಟಿ.........ಪ್ರಸ್ತುತ ಪಡಿಸುವುದು ಯಾರ ಉದ್ಧಾರಕೋಸ್ಕರ....
    yashodhara.v.bangera

    ReplyDelete
  8. ತಮ್ಮನ್ನ ತಾವು ಮಾರಿಕೊಂಡ ಪತ್ರಿಕೆಗಳಿಂದ ಇಂತದ್ದನ್ನ ನಿರೀಕ್ಷಿಸುವುದು ಸಾಧ್ಯವೇ? ಕೆಲ ತಿಂಗಳ ಹಿಂದೆ ಸಚಿವನೊಬ್ಬ ತನ್ನ ಕಾರಿಗೆ ಅಡ್ಡ ಬಂದವರನ್ನ ಬಡಿದ,ಈಗ ಇನ್ನೊಬ್ಬ ಸಚಿವನ ಮಗ...! ಇದೆಂಥಾ ರಾಜ್ಯ ಸ್ವಾಮಿ?

    ReplyDelete
  9. ಮೌಲ್ಯಧಾರಿತ ರಾಜಕಾರಣದ ಬಗ್ಗೆ ಬೊಬ್ಬೆ ಹೊಡೆಯುವ ಪಕ್ಷದ ಮಂತ್ರಿಯೊಬ್ಬರ ಮಗನ ವಿಷಯದಲ್ಲಿ ನಡೆದುಕೊಂಡಿರುವ ರೀತಿ ನೋಡಿದರೆ ಕರ್ನಾಟಕದಲ್ಲಿ ಎಲೆಕ್ಟ್ರೋನಿಕ್ ಮಾಧ್ಯಮಗಳಿಗೆ ಲಕ್ವಾ ಹೊಡೆದಿರುವುದು ಗ್ಯಾರಂಟಿ. ಪ್ರಜಾಪ್ರಭುತ್ವದ ಕಾವಲುಗಾರನಾಗಿ ಕೆಲಸಮಾಡಬೇಕಾಗಿರುವ ಮಾಧ್ಯಮಗಳು ಈ ರೀತಿ ವರ್ತಿಸುವುದು ಮಾಧ್ಯಮ ಕ್ಷೇತ್ರ ತಲುಪಿದ ಅಧ:ಪತನವನ್ನು ತೋರಿಸುತ್ತದೆ. ಲಾಲ್ ಬಹಾದುರ್ ಶಾಸ್ತ್ರಿಯವರು ಇಂಥ ಪರಿಸ್ಥಿತಿಯಲ್ಲಿದ್ದಿದ್ದರೆ ತಮ್ಮ ಮಗನೆಂದು ನೋಡದೆ ಕಾನೂನಿನ ಕ್ರಮ ಕೈಗೊಳ್ಳಲು ಅವಕಾಶ ಕೊಡುತ್ತಿದ್ದರು. ಈ ಬಗ್ಗೆ ಮಾಧ್ಯಮಗಳು ಅತ್ಮಾವಲೋಕನ ಮಾಡಬೇಕಾಗಿದೆ.

    ReplyDelete
  10. ಕುಮಾರ ಸ್ವಾಮಿ ಮುಖ್ಯ ಮಂತ್ರಿ ಯಾಗಿದ್ದಾಗ ಅವರ ಮಗ ಸ್ನೇಹಿತರ ಜೊತೆ ಕುಡಿದು ೫-ಸ್ಟಾರ್ ಹೋಟೆಲ್ ನಲ್ಲಿ ಮಾಡಿದ ಜಟಾಪಟಿಯನ್ನು ಸಹ ಹೀಗೆ ಮಾಡಲಾಯಿತು.. ಯಾವುದೇ ಚಾನಲ್ ಅಥವಾ ವೃತ್ತಪತ್ರಿಕೆಗಳೂ ಸಹ ಸುದ್ದಿಯನ್ನು ಪ್ರಕಟಿಸಲಿಲ್ಲ..

    ReplyDelete
  11. media doesnt want to take risk and if news comes in english papers manypeople(like me ) will never even know.this state going to dogs...!!

    ReplyDelete
  12. ಕರ್ನಾಟಕದ ಇಂದಿನ ಪತ್ರಿಕೋದ್ಯಮ ಹಾಗು ಎಲೆಕ್ಟೊನಿಕ್ ಮಾಧ್ಯಮಗಳ ಗುಣಮಟ್ಟವನ್ನು ನೋಡುವಾಗ ಪತ್ರಕತ್ರರು ಹಾಗು ಮಧ್ಯಮ ಪರಿಣತರನ್ನು ತಯಾರು ಮಾಡುವ ಮಾಧ್ಯಮ ಶಿಕ್ಷಣ ಸಂಸ್ಥೆಗಳನ್ನು ಹಾಗು ಕೋರ್ಸುಗಳನ್ನು ಬಂದ್ ಮಾಡುವುದು ಒಳ್ಳೆಯದು ಎಂದು ಕಾಣುತ್ತದೆ. ಮಾಧ್ಯಮ ಕ್ಷೇತ್ರದ ಮೌಲ್ಯಗಳನ್ನು ಎತ್ತಿ ಹಿಡಿಯುವ ಜೀವಂತಿಕೆಯುಳ್ಳ ಪತ್ರಕರ್ತರು ಹಾಗು ವರದಿಗಾರರನ್ನು ತಯಾರು ಮಾಡುವಲ್ಲಿ ಅವು ಸಂಪೂರ್ಣ ವಿಫಲವಾಗಿವೆ. ಈ ರೀತಿಯ ಸಂಸ್ಥೆಗಳಿಲ್ಲದ ಕಾಲದಲ್ಲಿ ಪತ್ರಿಕೋದ್ಯಮದ ಘನತೆಯನ್ನು ಯಾವುದೇ ಪತ್ರಿಕೋದ್ಯಮ ಶಿಕ್ಷಣ ಪಡೆಯದ ವ್ಯಕ್ತಿಗಳು ಎತ್ತಿ ಹಿಡಿಯುತ್ತಿದ್ದರು. ಆದರೆ ಇಂದು ಅಂಥ ಶಿಕ್ಷಣ ಸಂಸ್ಥೆಗಳಿದ್ದರೂ ಜೀವಂತಿಕೆಯುಳ್ಳ ಪತ್ರಕರ್ತರು ಹಾಗೂ ವರದಿಗಾರರು ಬರುತ್ತಿಲ್ಲ ಎಂದರೆ ಅಂಥ ಸಂಸ್ಥೆಗಳು ಯಾವ ಪುರುಷಾರ್ಥ ಸಾಧನೆಗಾಗಿ ಇವೆ? ಇದು ಪ್ರಜ್ಞಾವಂತರು ಯೋಚಿಸಬೇಕಾದ ವಿಚಾರ.

    ReplyDelete
  13. Most of the time, most of the reporters behave like the slaves of the paper owner. That is not their mistake. Most of the paper owners making them to behave like that. There is no freedom of the press. There is only freedom of the purse. So many owners are judging the quality of their paper according to the profit margin. It should be always fat. The owners are judging their Paper Value according to the Market Value i.e. increase in Circulation and more profit in Advertisement.
    To achieve their goal, most of the owners are becoming the Editors of their own Paper. The most "faithful" slave will become an Associate Editor. That fellow will dance according to the tune of the Owner cum Editor. This slave will become a type of dictator to the subordinates and get the things done from the staff according to the interest of the owner. Some Paper owners are so shameless. They started grabbing the awards of the working journalists. The journalists of the self-respect should unite irrespective of their position in different papers and fight this Media Slavery.

    ReplyDelete
  14. ಪತ್ರಿಕೆ ಹಾಗೂ ಎಲೆಕ್ಟ್ರೋನಿಕ್ ಮಾಧ್ಯಮ ಇಂದು ಉದ್ಯಮ ಸ್ವರೂಪ ಪಡೆದುಕೊಂಡಿರುವುದರಿಂದ ಇದು ಬಂಡವಾಳಶಾಹಿಗಳು ತಮ್ಮ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳಲು ಒಂದು ಸಾಧನವಾಗಿ ಪರಿಣಮಿಸಿದೆ. ಹೀಗಾಗಿ ಜನಪರ ಹಾಗೂ ದೇಶದ ಸರ್ವತೋಮುಖ ಅಭಿವೃದ್ದಿ ಚಿಂತನೆ ಕಾಣೆಯಾಗಿದೆ. ಬಂಡವಾಳಶಾಹಿಗಳು ಎಲ್ಲಿಯವರೆಗೆ ಮಾಧ್ಯಮಗಳನ್ನು ನಡೆಸುತ್ತಿರುತ್ತಾರೋ ಅಲ್ಲಿಯವರೆಗೆ ಇದನ್ನು ಬದಲಾಯಿಸಲು ಸಾಧ್ಯವಿಲ್ಲ. ಇದಕ್ಕೆ ಪರಿಹಾರವೆಂದರೆ ಜನರಿಂದಲೇ ಶೇರು ಬಂಡವಾಳವನ್ನು ಎತ್ತಿ ಸಹಕಾರಿ ನೆಲೆಯಲ್ಲಿ ಮಾಧ್ಯಮ ಸಂಸ್ಥೆಯನ್ನು ಸ್ಥಾಪಿಸಿ ಮಾಧ್ಯಮ ಕ್ಷೇತ್ರದ ಮೌಲ್ಯಗಳನ್ನು ಎತ್ತಿ ಹಿಡಿಯುವ ಸಾಮಾನ್ಯ ಸಂವಿಧಾನವೊಂದನ್ನು ರೂಪಿಸಿ ಅದರ ಪ್ರಕಾರ ಕಾರ್ಯನಿರ್ವಹಿಸುವ ಪತ್ರಿಕೆ ಹಾಗು ಟಿವಿ ಚಾನೆಲ್ ಅನ್ನು ಸ್ಥಾಪಿಸಿ ನಡೆಸುವುದು. ಇದಕ್ಕಾಗಿ ಸ್ವಾಭಿಮಾನ, ದೇಶದ ಬಗ್ಗೆ ಹಾಗೂ ಜನಪರ ಕಾಳಜಿ ಉಳ್ಳ ಎಲ್ಲ ಪತ್ರಕರ್ತರು ದೇಶಾದ್ಯಂತ ಹಾಗೂ ರಾಜ್ಯಾದ್ಯಂತ ಒಂದಾಗಿ ಚರ್ಚಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ಮುಂದೆ ಬಂದರೆ ಪ್ರಯೋಜನ ಆಗಬಹುದು. ಇಲ್ಲದಿದ್ದರೆ ಇದೇ ಪರಿಸ್ಥಿತಿ ಯಾವತ್ತೂ ಮುಂದುವರಿಯುತ್ತಿರುತ್ತದೆ.

    ReplyDelete
  15. ನಟಿಯ ಕೈಯಲ್ಲಿ, ರಾಜಕಾರಣಿಯರ ಮಕ್ಕಳ ಕೈಯಲ್ಲಿ ಹೊಡೆತ ತಿನ್ನುವ ಇಂತಹ ಪೋಲಿಸ್ ಸಿಬ್ಬಂದಿಗಳಿಗೆ ಎನನ್ನಬೇಕೋ ಗೊತ್ತಿಲ್ಲ. ಆದರೆ ಈ ಕೆಳಗಿನ ಸುದ್ದಿ ಓದಿ. we are missing officers like ashok kamte.

    Solapur, Maharashtra, Aug 16 (UNI) Karnataka MLA Ravi Patil and eleven others were arrested in the early hours today for disturbing peace and causing nuisance, and released on bail later in the afternoon.

    Police said that Ravi Patil, who resides in Solapur, was celebrating his birthday along with his supporters, including his nephew Uday Patil late last night.

    The revellers burst crackers and indulged in noisy celebrations.

    The Police objected to the noise and heated arguments broke out between the two sides. Thereafter, Patil and the others were arrested.

    Patil has alleged that Solapur Police Commissioner Ashok Kamthe had roughed him up and beaten him. The Commissioner, however, denied the charge. Mr Kamthe said the MLA had violated Supreme Court orders, banning use of loudspeakers and noisy celebrations after 2200 hrs.

    Immediately after his arrest, Patil had complained of chest pain following which he was removed to the Solapur Civil Hospital.

    Later, in the afternoon, the court granted him bail on a surety of Rs 10,000.

    ReplyDelete